ಸಾಮಾನ್ಯ ಹೆಣ್ಣಿನ ಅಸಾಮಾನ್ಯ ಕಥನ ‘ಹರಿವ ನದಿ’


ಮೀನಾಕ್ಷಮ್ಮನವರ ಈ ಆತ್ಮಕಥೆ 'ಹರಿವನದಿ' ನಮ್ಮ ನಾಡಿನ ಹೆಸರಾಂತ ನದಿಗಳಂತೆ ಜನಮನದಲ್ಲಿ ನೆಲೆನಿಂತ ಯಾವ ಪ್ರಸಿದ್ಧಿ ಪಡೆದ ವ್ಯಕ್ತಿಯ ಕಥನವಲ್ಲ. ಚಿಕ್ಕ ತೊರೆಯಾಗಿ ಹರಿಯುತ್ತ, ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಬತ್ತದ ಜೀವವಾಹಿನಿಯಾಗಿರುವ 'ಸಾಮಾನ್ಯ' ಹೆಣ್ಣಿನ 'ಅಸಾಮಾನ್ಯ' ಕಥನ. ಮೀನಾಕ್ಷಿ ಎಂಬ ಮುಗ್ಧ ಹುಡುಗಿ,ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲೂ ಧೃತಿಗೆಡದೇ 'ದೃಢಚಿತ್ತದ ಮೀನಾಕ್ಷಮ್ಮನಾಗಿ' ತನ್ನೆರಡು ಮಕ್ಕಳನ್ನು ದಡಮುಟ್ಟಿಸುವಲ್ಲಿ ಯಶಸ್ವಿಯಾದ ಕಥೆಯಿದು ಎನ್ನುತ್ತಾರೆ ಬರಹಗಾರ್ತಿ ಪ್ರಭಾವತಿ ಹೆಗಡೆ. ಅವರು ಲೇಖಕಿ ಭಾರತಿ ಹೆಗಡೆ ಅವರ 'ಹರಿವ ನದಿ’ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ…

ಪುಸ್ತಕ: 'ಹರಿವ ನದಿ'
ಲೇಖಕಿ: ಭಾರತಿ ಹೆಗಡೆ
ಪುಟ ಸಂಖ್ಯೆ: 236
ಬೆಲೆ: 200
ಪ್ರಕಾಶಕರು: ವಿಕಾಸ ಪ್ರಕಾಶನ

'ಮೊದಲ ಪತ್ನಿಯ ದುಗುಡ' , 'ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’, 'ಮಣ್ಣಿನ ಗೆಳತಿ' ಅಂತಹ ಉತ್ತಮ, ಸೊಗಸಾದ ಪುಸ್ತಕಗಳನ್ನು ಸಾಹಿತ್ಯಲೋಕಕ್ಕೆ ನೀಡಿರುವ ಭಾರತಿ ಹೆಗಡೆ ನನ್ನ ಮೆಚ್ಚಿನ ಲೇಖಕಿಯರಲ್ಲೊಬ್ಬರು. ಈಗ ನಾನು ಪರಿಚಯಿಸಹೊರಟಿರುವ ಪುಸ್ತಕ ಅವರ ಅಮ್ಮನ ಆತ್ಮಕಥೆ. ಇದರ ನಿರೂಪಣೆ ಭಾರತಿಯವರದಾದರೂ ಅವರ ಉಳಿದ ಕೃತಿಗಳಿಗಿಂತ ಇದು ಭಿನ್ನವಾದದ್ದು.

ಸಾಮಾನ್ಯವಾಗಿ ಮಹಾತ್ಮರೆನಿಸಿಕೊಂಡವರು ಅಥವಾ ಸಮಾಜದ ಗಣ್ಯವ್ಯಕ್ತಿಗಳು ಇಲ್ಲವೆ ಜ್ಞಾನ, ವಿಜ್ಞಾನ, ಕಲಾಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜೀವನಚರಿತ್ರೆ ಅಥವಾ ಆತ್ಮಕಥೆಗಳು ಮಾತ್ರ ಪುಸ್ತಕರೂಪದಲ್ಲಿ ಪ್ರಕಟವಾಗುತ್ತವೆ. ಆದರೆ ಪುಸ್ತಕ ಪ್ರಪಂಚದ ಇಂತಹ ಒಪ್ಪಿತ ಮಾದರಿಗೆ ಹೊರತಾಗಿ ಒಬ್ಬ ಸಾಮಾನ್ಯ ಹೆಣ್ಣಿನ ಒಳತೋಟಿಗಳನ್ನು ಅನಾವರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಭಾರತಿ ಹೆಗಡೆ. ಅದುವೇ ಪುಸ್ತಕ ರೂಪದಲ್ಲಿ ಹೊರಬಂದ ಕೃತಿ 'ಹರಿವ ನದಿ'. ಇದರಲ್ಲಿ 'ಮೀನಾಕ್ಷಿ ಭಟ್ಟ' ಅವರ ಅಂತರಂಗದ ಮಾತುಗಳನ್ನು ಅಕ್ಷರಕ್ಕಿಳಿಸಿ, ಓದುಗರ ಹೃದಯಸ್ಪರ್ಶಿಸುವಂತೆ ಮಾಡಿದ್ದಾರೆ ಮಗಳು ಭಾರತಿ.

'ಮೀನಾಕ್ಷಿ ಭಟ್ಟ' ಅವರ ಆತ್ಮಕಥೆ 'ಹರಿವನದಿ' -- ಹೆಸರೇ ಹೇಳುವಂತೆ ನದಿಯಂತೆ ಸದಾ ಹರಿಯುತ್ತಲೇ ಇರುವ ಜೀವನಗಾಥೆ. ಇದರ ನಿರೂಪಣೆಗೂ ಮುನ್ನ ಭಾರತಿಯವರು ತಮ್ಮ ಅರಿಕೆಯಲ್ಲಿ 'ಪಿ.ಲಂಕೇಶ್' ಅವರ 'ಅವ್ವ' ಕವಿತೆಯನ್ನು ಈ ಅಮ್ಮನ ಕಥೆಗೆ ಸಮೀಕರಿಸಿದ್ದಾರೆ. ಆ ಕವಿತೆಯನ್ನು ಓದಿಕೊಂಡೇ ಈ ಪುಸ್ತಕವನ್ನು ಓದುವುದರಿಂದ ಈ 'ಆತ್ಮಕಥೆಯ' ಬಗೆಗೆ ನಮ್ಮಲ್ಲೊಂದು ಆಪ್ತಭಾವ ಉಂಟಾಗುತ್ತದೆ. ಹಾಗಾಗಿ ಆ ಕವಿತೆಯನ್ನೂ ನಾನೂ ಇಲ್ಲಿ ಉಲ್ಲೇಖಿಸುತ್ತೇನೆ--

ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು !
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ, ಹೆಸರುಗದ್ದೆಯ ನೋಡಿಕೊಂಡು !
ಯೌವ್ವನದ ಕಳೆದಳು ಚಿಂದಿಸೀರೆ ಉಟ್ಟುಕೊಂಡು !
ಸತಿ ಸಾವಿತ್ರಿ" ಜಾನಕಿ' ಊರ್ಮಿಳೆಯಲ್ಲ!
ಚರಿತ್ರೆ ಪುಸ್ತಕದ ಶಾಂತ, ಶ್ವೇತ ಗಂಭೀರೆಯಲ್ಲ !
ದೇವರ ಪೂಜಿಸಲಿಲ್ಲ, ಹರಿಕಥೆ ಕೇಳಲಿಲ್ಲ !
ಮುತ್ತೈದೆಯಾಗಿ ಕಂಕುಮ ಕೂಡ ಇಡಲಿಲ್ಲ !
ನನ್ನವ್ವ ಬದುಕಿದ್ದು ಕಾಳುಕಡ್ಠಿಗೆ, ದುಡಿತಕ್ಕೆ, ಮಕ್ಕಳಿಗೆ !!

ನಿಜ, ಮೀನಾಕ್ಷಮ್ಮನವರ ಈ ಆತ್ಮಕಥೆ ಈ 'ಹರಿವನದಿ' ನಮ್ಮ ನಾಡಿನ ಹೆಸರಾಂತ ನದಿಗಳಂತೆ ಜನಮನದಲ್ಲಿ ನೆಲೆನಿಂತ ಯಾವ ಪ್ರಸಿದ್ಧಿ ಪಡೆದ ವ್ಯಕ್ತಿಯ ಕಥನವಲ್ಲ. ಚಿಕ್ಕ ತೊರೆಯಾಗಿ ಹರಿಯುತ್ತ, ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಬತ್ತದ ಜೀವವಾಹಿನಿಯಾಗಿರುವ 'ಸಾಮಾನ್ಯ' ಹೆಣ್ಣಿನ 'ಅಸಾಮಾನ್ಯ' ಕಥನ. ಒಬ್ಬ ಸಾಮಾನ್ಯ ಗೃಹಿಣಿಯಾದ 'ಮೀನಾಕ್ಷಿ ಭಟ್ಟ' ಅವರು ಶರಾವತಿ, ಅಘನಾಶಿನಿ ನದಿಗಳ ‌ಸುತ್ತಲಿನ ಊರುಗಳಲ್ಲಿ ಸುತ್ತಿ ತಿರುಗಿ, ಬದುಕು ಎಳೆದತ್ತ ಬೀಳುತ್ತ ಏಳುತ್ತ ಹರಿದು(ನಡೆದು)ಬಂದ ದಾರಿಯಿದು. ಮೀನಾಕ್ಷಿ ಎಂಬ ಮುಗ್ಧ ಹುಡುಗಿ,ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲೂ ಧೃತಿಗೆಡದೇ 'ದೃಢಚಿತ್ತದ ಮೀನಾಕ್ಷಮ್ಮನಾಗಿ' ತನ್ನೆರಡು ಮಕ್ಕಳನ್ನು ದಡಮುಟ್ಟಿಸುವಲ್ಲಿ ಯಶಸ್ವಿಯಾದ ಕಥೆಯಿದು. ಇದನ್ನೊಮ್ಮೆ ಆಸ್ಥೆಯಿಂದ ಅವಲೋಕಿಸಿದರೆ 'ಮೀನಾಕ್ಷಿ ಭಟ್ಟ' ಖಂಡಿತ ನಮ್ಮ ಮನದಲ್ಲಿ ಅತ್ಯಂತ ಗೌರವ ಸ್ಥಾನ ಪಡೆಯುವ 'ಮಹಾತಾಯಿ ಮೀನಾಕ್ಷಮ್ಮ' ನಾಗಿ ಸ್ಫೂರ್ತಿಯ ಚೇತನವೆನಿಸುತ್ತಾರೆ.

ಮೀನಾಕ್ಷಮ್ಮನವರ ಕಥನ ಶುರುವಾಗುವುದು ಮಲೆನಾಡಿನ ಪುಟ್ಟ ಊರು ಕೊಳಚಗಾರು ಎಂಬಲ್ಲಿ. ಇದು ಇರುವುದು ವಿಶ್ಶವಿಖ್ಯಾತ ಜೋಗ ಜಲಪಾತದ ತಪ್ಪಲಲ್ಲಿ. ಲಿಂಗನಮಕ್ಕಿ ಡ್ಯಾಂ ಕಟ್ಟುವಾಗ ಇಡೀ ನಾಡಿಗೆ ಬೆಳಕು ಕೊಡಲು ತಮ್ಮ ಬದುಕನ್ನು ಕತ್ತಲಾಗಿಸಿಕೊಂಡ, ಶರಾವತಿನದಿ ತೀರದ ಅದೆಷ್ಟೋ ಕುಟುಂಬಗಳಲ್ಲಿ ಮೀನಾಕ್ಷಮ್ಮನವರ ಕುಟುಂಬವೂ ಒಂದು.ಆಗಿನ್ನೂ ಮೀನಾಕ್ಷಿ ಪುಟ್ಟ ಬಾಲಕಿ. ನೀರಿನಿಂದ ವಿದ್ಯುತ್ ತಯಾರಿಸುತ್ತಾರೆ‌. ನಾಡಿಗೆಲ್ಲ ಸಾಕಾಗುವಷ್ಟು ದೊಡ್ಡ ಬೆಳಕು ಬರುತ್ತದೆಂಬ ಸುದ್ದಿ ಊರಲೆಲ್ಲ ಹರಿದಾಡುವಾಗ ಮುಗ್ಧ ಮೀನಾಕ್ಷಿಗೊಂದು ಸೋಜಿಗ 'ಆ ಬೆಳಕು ಅದೆಷ್ಟು ದೊಡ್ಡದಿರುತ್ತದೆ...ನಮ್ಮನೆಯಲ್ಲಿ ನಿತ್ಯ ಹಚ್ಚುವ ಚಿಮಣಿ ಗುಡ್ನಕಿಂತ ಅದೆಷ್ಟು ಪಟ್ಟು ದೊಡ್ಡದು! ನೂರಾರು ಗುಡ್ನದ ಬೆಳಕು ಸೇರಿಸಿದಷ್ಟು ದೊಡ್ಡದಿರುತ್ತದಾ!....' ಹೀಗೆಲ್ಲ ಯೋಚಿಸುವ ಹುಡುಗಿ, ಕೊಳಚಗಾರು ಊರನ್ನೇ ತನ್ನ ಸರ್ವಸ್ವವೆಂದುಕೊಳ್ಳುತ್ತ, ಸುತ್ತಮುತ್ತಲಿನ ಹೊಲಗದ್ದೆ, ತೋಟ, ಗುಡ್ಡ ಬೆಟ್ಟಗಳನ್ನು ಅಗಾಧವಾಗಿ ಪ್ರೀತಿಸಿದವಳು. ಅಪಾರವಾಗಿ ಪ್ರೀತಿಸುವ ಇಂಥ ಊರನ್ನು(ಮುಳುಗಡೆಯ ಸಲುವಾಗಿ) ಬಿಟ್ಟು ವಲಸೆಹೊರಡುವ ಸಂದರ್ಭ ಮೀನಾಕ್ಷಿ ಬದುಕಲ್ಲಿ ಬಾಲ್ಯದಲ್ಲಿ ಶುರುವಾದದ್ದು ಮುಂದೆ (ಅನೇಕ ಕಾರಣಗಳಿಂದ) ಬದುಕಿನುದ್ದಕ್ಕೂ ಮುಂದುವರಿದಿದೆ.

ಹಾಗಾಗಿ ಈ ಕಥೆಯನ್ನು ನಿರೂಪಿಸಿದ ಭಾರತಿಯವರು ತಮ್ಮ ಅನಿಸಿಕೆಯಲ್ಲಿ ಹೇಳಿದಂತೆ ಇದು ಕಾಲಿಗೆ ಚಕ್ರ ಕಟ್ಟಿಕೊಂಡವಳ ಕಥೆ.

ಒಬ್ಬ ಕರ್ಮಠ ಬ್ರಾಹ್ಮಣ ಕುಟುಂಬ ಹೆಣ್ಣು ಮಗಳಾಗಿ, ತಂದೆಯ ಅತಿಯಾದ ಅಂಕೆ, ಅಧೀನದಲ್ಲಿ ಬೆಳೆದ ಮೀನಾಕ್ಷಿ - ಹೆಣ್ಣು ಮಕ್ಕಳಿಗೆತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಈಗಿನಷ್ಟು ಸ್ವಾತಂತ್ರ್ಯವಿಲ್ಲದ ಅರವತ್ತರ ದಶಕದ ಕಾಲದಲ್ಲೇ ಪ್ರೇಮಿಸಿ ಮದುವೆಯಾದವರು.

ಐನಕೈ ಗಜಾನನ ಶಾಸ್ತ್ರಿಗಳು ಮತ್ತು ಮೀನಾಕ್ಷಿಯವರ ದಾಂಪತ್ಯದ ಕಥೆ ಹರಿವನದಿಯಾಗಿ, ಎಲ್ಲ ಎಡರುತೋಡರುಗಳನ್ನು ದಾಟುತ್ತ, ಊರೂರು ತಿರುಗುತ್ತಾ ಸಾಗಿದ ಪರಿ ರೋಚಕವಾಗಿದೆ. ಮುಂದೆ ಅಕಾಲದಲ್ಲಿ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾದಾಗಲೂ ಧೃತಿಗೆಡದೇ ಮಕ್ಕಳನ್ನು ಸಂಸ್ಕಾರವಂತ, ವಿದ್ಯಾವಂತರನ್ನಾಗಿ ಮಾಡಿ ದಡಮುಟ್ಟಿಸಿ ಈಗ ಇಳಿಸಂಜೆಯಲ್ಲಿ ನೆಮ್ಮದಿ ಕಾಣುತ್ತಿರುವ ಮೀನಾಕ್ಷಮ್ಮನವರ ಜೀವನಯಾನ- ಒಂದು ಕಾದಂಬರಿಯಂತೆಯೇ ಬಹಳ ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ.

ಕೊಳಚಗಾರಿನಲ್ಲಿ ಶುರುವಾಗುವ ಈ ಕಥೆ ಸಾಗರ, ಸಿದ್ದಾಪುರ ತಾಲೂಕುಗಳ ಬೇಡರಕೊಪ್ಪ, ಐನಕೈ, ಇಟಗಿ, ಬಂಜಗಾರು, ತಾರಗೋಡು, ಸಿದ್ದಾಪುರ..ಹೀಗೆ ಅನೇಕ ಊರುಗಳಲ್ಲಿ ಹರಿದಾಡಿ ದಾವಣಗೆರೆ, ಮೈಸೂರು ನಗರಗಳನ್ನೂ ಸುತ್ತಾಡಿ ಬೆಂಗಳೂರಿನಲ್ಲಿ ನೆಲೆನಿಂತ ಶಾಂತ ಸರೋವರದಂತೆ ಭಾಸವಾಗುತ್ತದೆ.

ಮೀನಾಕ್ಷಮ್ಮನವರ ಹೋರಾಟದ, ಯಾತನಾಮಯ ಈ ಕಥೆಯಲ್ಲಿ ಎಲ್ಲೂ ಇದು ಕ್ರೌರ್ಯ.... ಇದು ಹಿಂಸೆಯ ಪರಮಾವಧಿ...ಎಂದು ಬೊಟ್ಟುಮಾಡಿ ಹೇಳುವಂತಹ ಯಾವುದೇ ಘಟನೆಗಳಿಲ್ಲ.ಈ ಪುಸ್ತಕ ಅನಾವರಣ ಸಮಾರಂಭದಲ್ಲಿ ಖ್ಯಾತ ವಿಮರ್ಶಕಿ ಶ್ರೀಮತಿ ವಿನಯಾ ವಕ್ಕುಂದ ಅವರು ಹೇಳಿದಂತೆ-- 'ಇದು ಹೀಗಿದೆ ನೋಡು' ಎಂದು ಹೇಳಬಹುದಾದ ಯಾವುದೇ ಹಿಂಸೆ, ನೋವುಗಳು ಜನರ ಮನವನ್ನು ಬೇಗ ತಟ್ಟುತ್ತವೆ..ಅನುಕಂಪ ಪಡೆಯುತ್ತವೆ. ಆದರಿಲ್ಲಿ ಮೀನಾಕ್ಷಮ್ಮನವರ ಕಥೆಯಲ್ಲಿ ಆ ತರ ತಾನೇತಾನಾಗಿ ಗೋಚರಿಸುವ ನೋವು, ಹಿಂಸೆಗಳು(ಅವರು ಗಂಡನನ್ನು ಕಳೆದುಕೊಂಡ ಪರಿಸ್ಥಿತಿಯನ್ನು ಹೊರತುಪಡಿಸಿ)ಇಲ್ಲ. ಆದರೆ ಗುಪ್ತಗಾಮಿನಿ ಆಗಿರುವ ತಮ್ಮ ನೋವನ್ನು ಈ ಕಥೆಯಲ್ಲಿ ಸಹ ಅವರು ಬಹಿರಂಗವಾಗಿ ತೆರೆದಿಡುವುದಿಲ್ಲ. ತಮ್ಮ ಹೀನಪರಿಸ್ಥಿತಿಗೆ ಯಾರನ್ನೂ... ವಿಧಿಯನ್ನೂಸಹ... ದೂಷಿಸುವುದಿಲ್ಲ.ಇದು ಈ ಕಥೆಯ ವೈಶಿಷ್ಟ್ಯವೆನ್ನಬಹುದು. ಉದಾಹರಣೆಗೆ ಮೀನಾಕ್ಷಿ ಮದುವೆಯಾಗಿ ಗಂಡನಮನೆಗೆ ಬಂದ ಹೊಸತರಲ್ಲಿ ಮನೆಯವರು ಅವರನ್ನು ನಡೆಸಿಕೊಂಡ ರೀತಿಯ ಒಂದು ತುಣುಕು ಮನೆಯವರ್ಯಾರಿಗೂ ಇಷ್ಟವಿಲ್ಲದ ಮದುವೆಯಾದ್ದರಿಂದ ಯಾರೂ ಮೀನಾಕ್ಷಿಯವರನ್ನು ಆದರಿಸುವುದಿಲ್ಲ. ಸ್ವಂತ ಅತ್ತೆ ಇಲ್ಲದಿದ್ದರೂ ಮಾವ, ಮಾವನ ತಮ್ಮ ಮತ್ತವರ ಕುಟುಂಬವೆಲ್ಲ ಒಟ್ಟಿಗೆ ಇದ್ದ ಸಂಸಾರವದು. ಅಲ್ಲಿನ ಅವರ ಕಟಕಟೆಯ ಬದುಕಿನ ಪರಿಸ್ಥಿತಿಯನ್ನು ಮೀನಾಕ್ಷಮ್ಮ ತೆರೆದಿಡುವುದು ಹೀಗೆ..

ಮಾವ ಯಾವಾಗಲೋ ಒಮ್ಮೊಮ್ಮೆ ಮಾತ್ರ ನನ್ನನ್ನು ಮಾತಾಡಿಸುವುದು ಬಿಟ್ಟರೆ, ಈ ಮದುವೆ ಇಷ್ಟ ವಿರಲಿಲ್ಲವೆಂಬುದನ್ನು ಹೆಜ್ಜೆ ಹೆಜ್ಜೆಗೂ ತೋರಿಸಿಕೊಡುತ್ತಿದ್ದರು. ಅಡಿಗೆ ತಿಂಡಿ ಎಲ್ಲ ನಾನೇ ಮಾಡುತ್ತಿದ್ದೆ. ನನ್ನಿಷ್ಟದಂತೆ ಮಾಡಿದರೆ ಏನೆಂದುಕೊಳ್ಳುವರೋ ಎಂದು ಭಯ. ಹಾಗಾಗಿ ಪ್ರತಿಯೊಂದಕ್ಕೂ ಸಣ್ಣತ್ತೆಯನ್ನು ಕೇಳುತ್ತಿದ್ದೆ. ಆದರೆ ಅವರು ನಂಗೆ ಮುಖಕೊಟ್ಟು ಮಾತೇ ಆಡುತ್ತಿರಲಿಲ್ಲ. ಅವರೆಲ್ಲಿದ್ದರೆ ಅಲ್ಲಿಗೇ ಹೋಗಿ ಏನು ಅಡುಗೆ ಮಾಡಲಿ ಎಂದು ಕೇಳುತ್ತಿದ್ದೆ. ಅವರು ಹಿತ್ಲಕಡೆ ಇದ್ದರೆ ಹೋಗಿ ಕೇಳಿದರೆ ಜಗಲಿಗೆ ಬರುತ್ತಿದ್ದರು, ಜಗಲಿಗೆ ಹೋಗಿ ಕೇಳಿದರೆ ನಡುಮನೆಗೆ ಹೋಗುತ್ತಿದ್ದರು ಹೊರತು ನನ್ನ ಯಾವಮಾತಿಗೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕೊನೆಗೆ ನನಗೆ ತಿಳಿದದ್ದು ಮಾಡಿದರೆ ಆಕ್ಷೇಪಣೆಯನ್ನೂ ಮಾಡುತ್ತಿರಲಿಲ್ಲ. ಇದು ನನಗೆ ಸಿಕ್ಕ ಸ್ವಾತಂತ್ರ್ಯ ಎಂದುಕೊಳ್ಳಬೇಕೋ, ದಿವ್ಯನಿರ್ಲಕ್ಷ ಎಂದುಕೊಳ್ಳಬೇಕೋ ಅರ್ಥವಾಗುತ್ತಿರಲಿಲ್ಲ....

ನೋಡಿ ಈ ಮಾತುಗಳಲ್ಲಿ ಮೀನಾಕ್ಷಮ್ಮನವರು ತಮ್ಮ ಅಳಲನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ. ಆದರೆ ಯಾರನ್ನೂ ನೇರವಾಗಿ ದೂಷಿಸುವುದಿಲ್ಲ. ಮತ್ತೊಂದು ಸಂದರ್ಭ...ತಮ್ಮ ಪತಿಗೆ ಮೊದಲಸಲ ಹೃದಯಾಘಾತವಾದಾಗಲೇ ಆಪರೇಷನ್ ಮಾಡಿಸಿದರೆ ಬದುಕುವ ಸಾಧ್ಯತೆ ಇತ್ತು. ಆದರೆ ಹಣಕಾಸಿನ ತೊಂದರೆಯಿಂದಾಗಿ ಆಪರೇಶನ್ ಮಾಡಿಸಲಾಗದೆ ಮುಂದೆ ಹೃದಯದ ಸಮಸ್ಯೆ ಬಿಗಡಾಯಿಸಿದಾಗ ಆಪರೇಶನ್ ಮಾಡಿಸುವ ಅವಕಾಶವೇ ಸಿಗದೇ ಪತಿ ಗಜಾನನ ಶಾಸ್ತ್ರಿಗಳನ್ನು ಕಳೆದುಕೊಂಡ ನೋವನ್ನು ಹೀಗೆ ಹೊರಹಾಕಿದ್ದಾರೆ. ಹತ್ತುವರ್ಷಗಳ ಹಿಂದೆ ನನ್ನಪ್ಪ ಸ್ವಲ್ಪ ಮನಸ್ಸು ಮಾಡಿದ್ದರೆ, ನನ್ನ ಮಾವ ಸಹಾಯ ಮಾಡಿದ್ದರೆ ಇವರು ಬದುಕುಳಿಯುತ್ತಿದ್ದರೇನೋ.....

ನೋಡಿ ಇಲ್ಲಿ ಸಹ ಅಪ್ಪ ಮತ್ತು ಮಾವನ ಮೇಲೆ ಸಿಟ್ಟು, ಆಕ್ರೋಶ ತೋರಿಸುವುದಿಲ್ಲ.ಎಷ್ಟು ಶಾಂತವಾಗಿ ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ.

ಹೀಗೆ ಈ ಕಥನ ಯಾರಮೇಲೂ ಯಾವ ಸಿಟ್ಟು, ಆರೋಪಣೆಗಳನ್ನೂ (ಅಂತಹ ಸಂದರ್ಭಗಳಿದ್ದಾಗ್ಯೂ) ಮಾಡದೆ ಹೋರಾಟದ ಬದುಕನ್ನಷ್ಟೇ ತೆರೆದಿಡುತ್ತ, ಮೀನಾಕ್ಷಮ್ಮ ಅದನ್ನು ಧೈರ್ಯದಿಂದ ಎದುರಿಸಿದ ಪರಿಯನ್ನು ಹೇಳುತ್ತದೆ.

ಇಲ್ಲಿ ಒಂದು ಸಂದರ್ಭ ನನ್ನ ಮನವನ್ನು ಬಹಳ ಗಾಢವಾಗಿ ತಟ್ಟಿದೆ.

"ಯೌವ್ವನವಿನ್ನೂ ಮಾಸಿರದ ಮೂವ್ವತ್ತೈದರ ಪ್ರಾಯದಲ್ಲೆ ಗಂಡನನ್ನು ಕಳೆದುಕೊಂಡ ಮೀನಾಕ್ಷಮ್ಮ ಸಿದ್ದಾಪುರದ ಒಂಟಿಮನೆಯಲ್ಲಿದ್ದಾಗ ನಡೆದ ಘಟನೆ. ಆಗ ಮಗ ಕಾಲೇಜು ಶಿಕ್ಷಣಕ್ಕಾಗಿ ಬೇರೆ ಊರಲಿದ್ದ. ಮನೆಯಲ್ಲಿ ಪ್ರಾಯದ ತಾಯಿ ಮತ್ತು ಯೌವ್ವನಕ್ಕೆ ಅಡಿ ಇರಿಸಿರುವ ಮಗಳು. ಒಂದುದಿನ ರಾತ್ರಿ ಕಳ್ಳನಂತೆ ಯಾರೋ ಬಂದು ಮನೆಯ ಅಟ್ಟದ ಮೇಲೆಲ್ಲ ಓಡಾಡಿದಂತೆ ಭಾಸವಾಗುವುದು. ಹೆದರಿಕೆ, ಆತಂಕಗಳಿಂದ ರಾತ್ರಿ ಕಳೆಯುತ್ತಾರೆ. ಮರುದಿನ ತಮ್ಮ ಕುಟುಂಬದ ಹಿತೈಷಿಗಳಾದ ಊರಿನ ಗಣ್ಯವ್ಯಕ್ತಿಗಳು ಮನೆಗೆ ಬಂದಾಗ ಕಳ್ಳಬಂದಿರುವ ವಿಷಯ ಹೇಳಿದಾಗ ಆ ಗಣ್ಯವ್ಯಕ್ತಿಗಳು 'ಕಳ್ಳ ಬಂದು ತೆಗೆದುಕೊಂಡು ಹೋಗುವಂಥದ್ದು ನಿಮ್ಮನೆಯಲ್ಲಿ ಏನಿದೆ' ...ಎಂದು ನಕ್ಕು ಬಿಡುತ್ತಾರೆ. ನಿಜ, ಬಡತನವೆ ಹಾಸಿಹೊದೆಯುವಷ್ಟು ಇರುವ ಅವರ ಮನೆಯಲ್ಲಿ ಕಳ್ಳರಿಗೆ ಒಡವೆ, ದುಡ್ಡು ಸಿಗಲಿಕ್ಕಿಲ್ಲ, ಆದರೆ ಅದಕ್ಕಿಂತಲೂ ಅಮೂಲ್ಯವಾದ ಆ ಎರಡು ಹೆಣ್ಣು ಜೀವಗಳ ಶೀಲವಿಲ್ಲವೇ?.... ಯಾವಕಳ್ಳ ಏತಕ್ಕೆ ಬಂದಿದ್ದನೆಂದು ಹೇಗೆ ತಿಳಿಯೋದು?....."

ಇದು ಯೋಚಿಸಬೇಕಾದ ವಿಷಯವಲ್ಲವೇ...ಇದು ಏಕೆ ಆ ಮಹನೀಯರಿಗೆ ಅರ್ಥವಾಗಲಿಲ್ಲವೋ..‌.

ಹೆಣ್ಣಿಗೆ ಅಥವಾ ಹೆಣ್ಣಿನ ಮನಸ್ಥಿತಿಯನ್ನು ಅರಿಯಬಲ್ಲಂತಹ ಗಂಡಿಗೆ ಮಾತ್ರ ಅರ್ಥವಾಗುವ ಇಂತಹ ಅನೇಕ ಸೂಕ್ಷ್ಮ ವಿಚಾರಗಳು ಈ ಆತ್ಮಕಥೆಯಲ್ಲಿದೆ.

ಕಡುಬಡತನದ ಹೋರಾಟದ ಬದುಕಿನಲ್ಲಿಯೂ, ತನ್ನಿಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿದರು ಮೀನಾಕ್ಷಮ್ಮ.

ಕಷ್ಟ ಸಹಿಷ್ಣುಗಳಾಗಿ, ಉತ್ತಮ ಸಂಸ್ಕಾರ ಪಡೆದ ಆ ಮಕ್ಕಳು ಇಂದು ಅಮ್ಮ ಹೆಮ್ಮೆ ಪಡುವಂತೆ ಬೆಳೆದು, ಸಾಹಿತ್ಯ, ಪತ್ರಿಕಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅನೇಕಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯುತ್ತಾ, ಚಂದವಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಗ ರವೀಂದ್ರ ಭಟ್ ಪ್ರಜಾವಾಣಿಯ ಸಂಪಾದಕ ಬಳಗದಲ್ಲಿದ್ದಾರೆ. ಮಗಳು ಭಾರತಿ ಹೆಗಡೆ ಸಹ ಉದಯವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ ಕೆಲಸಮಾಡಿದವರು. ಸಾಹಿತ್ಯ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಆ ತಾಯಿ ಈಗ ಮಕ್ಕಳ ಅಭ್ಯುದಯವನ್ನು ಕಂಡು ಖುಷಿಪಡುತ್ತಾ, ಬೆಂಗಳೂರಿನಲ್ಲಿ ಮಗನಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಕೊನೆಯದಾಗಿ ಒಂದು ಮಾತು: 'ಹರಿವ ನದಿ' ಎಂಬ ಅಮ್ಮನ ಆತ್ಮಕಥೆಯನ್ನು ನಿರೂಪಣೆ ಮಾಡುವಾಗ ಭಾರತಿ ಹೆಗಡೆ ಎಲ್ಲಿಯೂ ತಮ್ಮ ವಿಚಾರಗಳನ್ನಾಗಲಿ, ಅಮ್ಮನ ಮುಗ್ಧಮಾತುಗಳಿಗೆ ಶಿಷ್ಟಬರವಣಿಗೆಯ ರೂಪಕೊಡುವ ಪ್ರಯತ್ನವನ್ನಾಗಲೀ ಮಾಡಿಲ್ಲ. ಅಮ್ಮನ ಮಾತುಗಳನ್ನು ನೇರವಾಗಿ ಅಕ್ಷರಕ್ಕಿಳಿಸಿದ್ದಾರೆ. ಇದು ಬಹಳ ಕಷ್ಟವೆಂದು ನನಗನಿಸುವುದು. ಏಕೆಂದರೆ, 'ಕಥೆಯಲ್ಲಿ ನಮ್ಮ ಪಾತ್ರವಿಲ್ಲದ ಬೇರೆಯವರ ಕಥೆಯನ್ನು ಅವರು ಹೇಳಿದಂತೆ ಯಥಾವತ್ತಾಗಿ ನಿರೂಪಿಸಬಹುದು.' ಆದರೆ ಭಾರತಿಯವರು ಈ ಕಥೆಯಲ್ಲಿ ಹಾಸುಹೊಕ್ಕಾಗಿರುವವರು. ಆದ್ದರಿಂದ ಇದು ಕಷ್ಟವೆಂದು ನನ್ನ ಭಾವನೆ. ಇದಕ್ಕಾಗಿ ಭಾರತಿಯವರ ಬಗೆಗೆ ಮೆಚ್ಚುಗೆ ಮೂಡುತ್ತದೆ. ಕಥೆಯೂ ಮತ್ತಷ್ಟು ಆಪ್ತವೆನಿಸುತ್ತದೆ. ಅಲ್ಲದೆ ಸಾಮಾನ್ಯ ಗೃಹಿಣಿಯರೂ ಇದರಿಂದ ಸ್ಫೂರ್ತಿ ಪಡೆಯುವಂತೆ ಪ್ರೇರೇಪಿಸುತ್ತದೆ ಈ ಕಥನಶೈಲಿ. ಹಾಗೆಯೆ ಈ ಕಥೆ ಓದಿದಾಗ ಒಂದು ಒಳ್ಳೆಯ ಕಾದಂಬರಿಯನ್ನು ಓದಿದ ಅನುಭೂತಿಯನ್ನೂ ನೀಡುತ್ತದೆ.

'ಅಮ್ಮನ ಕಥನವನ್ನು' ಸಾಮಾನ್ಯ ಹೆಣ್ಣಿನ ಕಷ್ಟ ಸರಮಾಲೆಗಳ ಮಾಮೂಲಿಕಥೆಯೆಂದು ತಳ್ಳಿಹಾಕದೆ, ಪುಸ್ತಕ ರೂಪದಲ್ಲಿ ಪ್ರಸ್ತುತಪಡಿಸಿ ಅಮ್ಮನಿಗೆ ಗೌರವಸಲ್ಲಿಸಿರುವ ರವೀಂದ್ರ ಭಟ್ಟ ಹಾಗೂ ಭಾರತಿ ಹೆಗಡೆ ಇಬ್ಬರೂ ಅಭಿನಂದನಾರ್ಹರು.

ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ , ಬತ್ತದ ಉತ್ಸಾಹದಿಂದ ನದಿಯಂತೆ ಹರಿದುಬಂದ ಮೀನಾಕ್ಷಮ್ಮ ಈಗ - ಜೀವನಸಂಧ್ಯೆಯಲ್ಲಿ ಒಂದಿಷ್ಟು ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಇವರ ಮುಂದಿನ ಜೀವನನದಿ ಆಯುರಾರೋಗ್ಯದಿಂದ ಪ್ರಶಾಂತವಾಗಿ ಹರಿಯುತ್ತಿರಲಿ - ಎಂದು ಹಾರೈಸುತ್ತೇನೆ.

ಭಾರತಿ ಹೆಗಡೆ ಅವರ ಲೇಖಕ ಪರಿಚಯ ನಿಮ್ಮ ಓದಿಗಾಗಿ...
ಹರಿವ ನದಿ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...