ಶಾಮ್ಸ್ಉರ್ ರಹಮಾನ ಫಾರೂಕಿ


ಸಾಂಸ್ಕೃತಿಕ ಹಿನ್ನೆಲೆ ಇಲ್ಲದ ಕಾವ್ಯ ಮೀಮಾಂಸೆ ಅರ್ಥಹೀನ ಎನ್ನುವ ಸಿದ್ದಾಂತದೊಂದಿಗೆ ಬದುಕಿದವರು ಶಾಮ್ಸ್ಉರ್ ರಹಮಾನ ಫಾರೂಕಿ. ಕೋವಿಡ್-19 ನಿಂದ ಇತ್ತಿಚೆಗೆ ನಿಧನರಾಗಿದ್ದು, ಅವರ ಘನ ವ್ಯಕ್ತಿತ್ವ, ಬರವಣಿಗೆ-ಸಿದ್ದಾಂತ ಹಾಗೂ ಅವರ ಬೆನ್ನಿಗೆ ಬಿದ್ದ ಟೀಕೆಗಳ ಕುರಿತು ಪತ್ರಕರ್ತ ಹಾಗೂ ಚಿಂತಕ ಹೃಷಿಕೇಶ ಬಹದ್ದೂರ ದೇಸಾಯಿ ಅವರು ತಮ್ಮ ಋಷ್ಯಶೃಂಗ ಅಂಕಣದಲ್ಲಿ ವಿವರಿಸಿದ ಆಪ್ತ ಬರಹವಿದು;

"ನೀನು ಲೈಬ್ರರಿಯಲ್ಲಿ ಯಾವ ಪುಸ್ತಕ ತೊಗೊಂಡೆ? - `ಹಿಂದೂ ಲಾ' ಬೈ ಡಿ. ಎಫ್. ಮುಲ್ಲಾ ಹಾಗೂ `ಮುಸ್ಲಿಂ ಲಾ' ಬೈ ಎ. ಎಂ. ಭಟ್ಟಾಚಾರ್ಯ ಪುಸ್ತಕ ತೊಗೊಂಡೆ '’ ಇದು ಕಾನೂನು ಕಾಲೇಜು ಕ್ಯಾಂಪಸ್‌ನ ಹಳೇ ಜೋಕು.
ಬರುಬರುತ್ತಾ ಇಂತಹವೆಲ್ಲಾ ಜೋಕು ಆಗಿ ಉಳಿಯಲಿಲ್ಲ. ಅವು ಅಘಟಿತ ಘಟನೆಗಳು ಎಂತಲೋ, ಆಗ ಬಾರದ್ದು ಆಗಿ ಹೋಯಿತು ಅಂದಾಗ ಮಾತಾಡುವ ಮಾತು ಅಂತನೋ, ನಾವೆಲ್ಲ ಕಣ್ಣು - ಬಾಯಿ ತೆಗೆದು ನೋಡುವ ಕ್ಷಣ ಅಂತನೋ ಆಗಿ ಹೋದವು. ಜನರಲ್ಲಿ ದ್ವೇಷ - ಆಶ್ಚರ್ಯ ಹುಟ್ಟಿಸುವ, ನಮ್ಮೆಲ್ಲರ ಒಳಗೆ ತುಂಬಿರುವ ಮೇಲು ಕೀಳುಗಳ ಪ್ರಜ್ಞೆಯನ್ನು ಜಾಗೃತಗೊಳಿಸುವ ಹಾವಾಡಿಗನ ಹಾಡು ಆಗಿ ಹೋದವು. ಹಿಂದಿನ ತಲೆಮಾರಿನವರಿಗೆ ಯಾವ ಮಾತು - ಕೃತಿ ಸಹಜ , ಸಾಮಾನ್ಯವಾಗಿದ್ದವೋ, ಅವು ಮುಂದಿನವರಿಗೆ ಅಪರೂಪ ಆಗಿ ಹೋದವು.

ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವರ್ಷ ಹಿಂದೆ ಜನಪ್ರಿಯವಾಗಿತ್ತು. ಅದು ಮುಸ್ಲಿಂ ಧರ್ಮಕ್ಕೆ ಸೇರಿದ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಉರ್ದು- ಅರೇಬಿಕ್ - ಫಾರಸಿ ಭಾಷೆಯ ಸಾಹಿತ್ಯದ ಸಂದರ್ಭದಲ್ಲಿ ವಿವರಿಸಿದ್ದು.

ಅದು ಅಂಚೆ ಇಲಾಖೆ ಮುಖ್ಯಸ್ಥರಾಗಿ ನಿವೃತ್ತಿಯಾದ ಭಾರತೀಯ ನಾಗರಿಕ ಸೇವೆ ಅಧಿಕಾರಿ ಶಾಮ್ಸ್ಉರ್ ರಹಮಾನ ಫಾರೂಕಿ ಅವರು ಅಭಿವೃದ್ಧಿಶೀಲ ಸಾಮಾಜಿಕ ಅಧ್ಯಯನ ಸಂಸ್ಥೆಯಲ್ಲಿ ಮಾಡಿದ ಭಾಷಣ. ಅವರು ಮೊನ್ನೆಯಷ್ಟೇ ತಮ್ಮ 85ನೇ ವಯಸ್ಸಿನಲ್ಲಿ ತೀರಿಹೋದರು.

ಸುಮಾರು ಒಂದು ತಾಸೀನ ಭಾಷಣದಲ್ಲಿ ಅವರು ಭವಭೂತಿ, ಬಾಣ ಭಟ್ಟ , ಮುಮ್ಮಟ, ದಂಡಿ, ಅಭಿನವ ಗುಪ್ತ, ಆನಂದ ವರ್ಧನ, ಅಷ್ಟಾವಕ್ರ, ಅಶ್ವಘೋಷ, ಭರತ ಮುನಿ,

ಭತೃಹರಿ, ಭಾಸ, ಬಿಲ್ಲಣ, ದಂಡಿನ, ಕಲ್ಲಣ, ಕಾಳಿದಾಸ, ಕುಂತಕ ಪದ್ಮ ಗುಪ್ತ, ರಾಜಶೇಖರ, ಶೂದ್ರಕ, ವಾಲ್ಮೀಕಿ, ವಿಶಾಖ ದತ್ತ, ವ್ಯಾಸ ಹಾಗೂ ಇನ್ನೂ ಅನೇಕ ಕಾವ್ಯ ಮೀಮಾಂಸಕರ ಬಗ್ಗೆ ವಿವರಿಸುತ್ತಾರೆ. ಈ ಪೂರ್ವಕಾಲದ ಪಂಡಿತರ ವ್ಯಾಖ್ಯಾನಗಳನ್ನೂ ಕ್ಲಿಷ್ಟ ಸಿದ್ಧಾಂತಗಳನ್ನು ಅತ್ಯಂತ ಸರಳ ಭಾಷೆಯಲ್ಲಿ, ಆಧುನಿಕ ಸಂದರ್ಭದಲ್ಲಿ ಅವು ಬಳಕೆಯಾಗುವ ವಿಧಾನಗಳನ್ನೂ ತಿಳಿ ಹೇಳುತ್ತಾರೆ.

ಎಲ್ಲಕ್ಕಿಂತ ಮಜಾ ಎಂದರೆ ಕಾವ್ಯ ಮೀಮಾಂಸೆಯಲ್ಲಿ ರಾಷ್ಟ್ರೀಯವಾದವನ್ನು ಬೆರೆಸಿ ಮಾತಾಡುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆ ಎನ್ನುವುದು ಸ್ಥಳೀಯ ಪರಿಕರಗಳ, ದೇಸೀ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಮ್ಮ ಜನರ ನುಡಿಗಟ್ಟುಗಳಿಂದ ರೂಪುಗೊಳ್ಳಬೇಕು. ಡೆಫೋಡಿಲ್ನ ಜಾಗದಲ್ಲಿ ಮಲ್ಲಿಗೆ- ಸಂಪಿಗೆ ಸೇವಂತಿಗೆ ಯಾಕೆ ಇರಬಾರದು?’’ ಅಂತ ವಾದಿಸುತ್ತಾರೆ.

ಸಂಸ್ಕೃತ- ಅರೇಬಿಕ್ ಪಂಡಿತರು 14-15 ನೇ ಶತಮಾನ ಗಳಲ್ಲಿ ಮಂಡಿಸಿದ ಸಿದ್ಧಾಂತಗಳನ್ನು ನಾವು ಅರಿತು ಕೊಳ್ಳದೇ, 19 - 20ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಗಳು, ಯುರೋಪಿನ ಪ್ರಾಧ್ಯಾಪಕರು ಮುಂದಿಟ್ಟ ವಿಚಾರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇವೆ. ಇಂಡೋ - ಯುರೋಪಿಯನ್ ಹಾಗೂ ದ್ರಾವಿಡ ಭಾಷೆಗಳ ವ್ಯತ್ಯಾಸಗಳನ್ನು ಅವುಗಳ ವರ್ಗೀಕರಣವನ್ನೂ ತಿಳಿ ಹೇಳಿದ ಭಾರತೀಯ, ಮಧ್ಯ ಏಷಿಯಾದ ತಜ್ಞರ ಕೊಡುಗೆಗಳನ್ನು ಮರೆತು, ವಿಲಿಯಮ್ ಜೋನ್ಸ್ ನಂತಹ ಯುರೋಪಿಯನ್ ರ ಮಾತುಗಳಿಗೆ ಮಾತ್ರ ಬೆಲೆ ಕಟ್ಟುತ್ತೇವೆ ಎಂದು ಹೇಳುತ್ತಾರೆ. ಜಾಗತಿಕ ಮಟ್ಟದ ಅಕಾಡೆಮಿಕ್ ಹಾಗೂ ಸಾಹಿತ್ಯ ಅಧ್ಯಯನಕಾರರ ನಡುವೆ ಮುಮ್ಮಟ- ಭವಭೂತಿಯಂತವರ ವಿಚಾರಗಳ ಅಧ್ಯಯನ ಸಾಕಷ್ಟು ಆಗಿಲ್ಲ. ಅವರಿಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ಚಡಪಡಿಸುತ್ತಾರೆ.

ಉತ್ತರ ಪ್ರದೇಶದ ಆಜಂಗಡ್ ನಲ್ಲಿ ಹುಟ್ಟಿ - ಅಲಹಾಬಾದು- ದೆಹಲಿಗಳಲ್ಲಿ ಶಿಕ್ಷಣ ಪಡೆದ ಡಾ. ಫಾರೂಕಿ ಅವರು ಭಾರತೀಯ ಭಾಷೆಗಳ ಕಾವ್ಯ ಮೀಮಾಂಸೆಯನ್ನು ಅಧ್ಯಯನ ಮಾಡಿದರು. ಅದರ ಮೇಲೆ ಪಾಂಡಿತ್ಯಗಳಿಸಿ ಪಿ. ಎಚ್.ಡಿ ಪಡೆದರು. ನಂತರ ಭಾರತೀಯ ನಾಗರಿಕ ಸೇವಾ ಪರೀಕ್ಷೆ ಪಾಸಾಗಿ ಅಂಚೆ ಇಲಾಖೆ ಯಲ್ಲಿ ಸೇವೆ ಸಲ್ಲಿಸಿದರು. ನಂತರ ಭಾರತದ ಅಂಚೆ ಇಲಾಖೆಯ ಆಡಳಿತ ಮಂಡಳಿ ಸದಸ್ಯರಾಗಿ ನಿವೃತ್ತಿ ಹೊಂದಿದರು.

ಶಾಮ್ಸ್ಉರ್ ರಹಮಾನ ಫಾರೂಕಿ ಅವರು ಉರ್ದು- ಫಾರಸಿ- ಅರೇಬಿಕ್ ಜೊತೆಗೆ- ಹಿಂದಿ- ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದಲ್ಲಿಯೂ ಸಹಿತ ಪಾಂಡಿತ್ಯ ಪಡೆದರು. ಜೀವನದ ಬಹು ಕಾಲ ಕಾವ್ಯ ಮೀಮಾಂಸೆಯ ಅಧ್ಯಯನ, ಬರಹ - ಭಾಷಣಗಳಲ್ಲಿ ಕಳೆದ ಇವರು ತಮ್ಮ 70 ನೇ ವರ್ಷಕ್ಕೆ ತಮ್ಮ ಮೊದಲ ಕಾದಂಬರಿ ಬರೆದರು. ಅವರ ‘ಕಯಿ ಚಂದ್ ಥೆ ಸಾರೆ ಆಸಮಾನ’ ಎನ್ನುವ ಈ ಕಾದಂಬರಿ ಆಧುನಿಕ ಕಾಲದ ಭಾರತೀಯ ಭಾಷೆ ಗಳಲ್ಲಿಯೇ ಅತ್ಯಂತ ಪ್ರಮುಖ ಕಾದಂಬರಿಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆಯಿತು. ಅದರ ಹಿಂದಿ ಅವತರಣಿಕೆ ಅಪಾರ ಜನಪ್ರಿಯತೆ ಪಡೆಯಿತು. ಹಿಂದಿ ಸಾಹಿತ್ಯದ ವಿದ್ಯಾರ್ಥಿಗಳು ಫಾರೂಕಿ ಅವರ ಕಾದಂಬರಿ ಓದದೇ ಇದ್ದರೆ ಅವರ ಅಧ್ಯಯನ ಅಪೂರ್ಣ ಎನ್ನುವ ನಂಬಿಕೆ ಇಂದಿಗೂ ಇದೆ.

ತನ್ನನ್ನು ತಾನು ತಂಕೀದ ವಿದ (ಮೀಮಾಂಸಕ ) ಎಂದು ಕರೆದು ಕೊಂಡ ಫಾರೂಕಿ ಭಾರತೀಯ ಮೀಮಾಂಸೆಯ ಅತ್ಯಂತ ಪ್ರಮುಖ ಪ್ರವರ್ತಕರಲ್ಲಿ ಒಬ್ಬರು. ತಂಕಿದ ಎನ್ನುವ ಪದ ಉರ್ದು ಆದರೆ, ವಿದ ಎನ್ನುವುದು ಸಂಸ್ಕೃತ. ಬಹು ಭಾಷಿ- ಬಹು ಕೌಶಲ್ಯದ ಫಾರೂಕಿ ಅವರನ್ನು ಉರ್ದು ವಿಮರ್ಶಕ ಖಾಲಿದ್ ಅಲ್ವಿ ವರ್ಣಿಸುವುದು ಹೀಗೆ.

"ಅವರ ಕಚೇರಿಯಲ್ಲಿ ಅವರನ್ನು ಭೇಟಿಯಾದವರಿಗೆ ಅವರು ಅಧಿಕಾರಿ, ಭಾಷಣ ಕೇಳಿದವರಿಗೆ ಅವರು ಮಹಾನ್ ಭಾಷಣಕಾರ, ಅವರು ಶಬಖೂನ ಸಾಹಿತ್ಯ ಪತ್ರಿಕೆಯನ್ನು 40 ವರ್ಷ ನಡೆಸಿದರು ಎಂದು ಗೊತ್ತಿದ್ದವರಿಗೆ ಅವರು ಸಾಹಿತ್ಯ ಪರಿಚಾರಕ, ಅವರ ಆಕೆಡೆಮಿಕ ಪುಸ್ತಕ ಓದಿದವರಿಗೆ ಅವರು ಸಾಹಿತ್ಯ ವಿಮರ್ಶಕ ಹಾಗೂ ಮೀಮಾಂಸಕ, ಅವರ ಕತೆ, ಕಾದಂಬರಿ ಮೂಲಕ ಅವರನ್ನು ಕಂಡವರಿಗೆ ಅವರು ಸಾಹಿತಿ ಹಾಗೂ ಅವರ ಕಾಲಂಗಳನ್ನು ಓದಿ ಬೆಳೆದವರಿಗೆ ಅವರು ಪತ್ರಿಕೋದ್ಯಮಿ'’.

ಸುಮಾರು 600ವರ್ಷಗಳ ಸಾಹಿತ್ಯಿಕ ಇತಿಹಾಸ ಇರುವ ಉರ್ದು ಭಾಷೆಯಲ್ಲಿ ಫಾರೂಕಿ ಅವರ ಕೆಲಸ ವನ್ನು ಹೋಮರ ಹಾಗೂ ಪಂಪನಿಗೆ ಹೋಲಿಸಿದವರು ಇದ್ದಾರೆ. ಫಾರೂಕಿ ಅವರು ಉರ್ದು ಮೀಮಾಂಸೆಯ ಮೂಲ ತತ್ವಗಳನ್ನು ಗುರುತಿಸಿದರು. ಅವರು ಸಣ್ಣ ಕತೆ- ಕಾದಂಬರಿ- ಪ್ರಬಂಧ ಮುಂತಾದ ಪ್ರಕಾರಗಳು ಹೇಗೆ ಉರ್ದು ಹಾಗೂ ಇತರ ಭಾರತೀಯ ಭಾಷೆಗಳಿಗೆ ಸಾಮಾನ್ಯವಾಗಿವೆ ಎನ್ನುವುದರ ಬಗ್ಗೆ, ಅಲ್ಲಿನ ಭಾವ ಸಾಮ್ಯತೆ-ವೈವಿಧ್ಯ ಎನ್ನುವುದರ ಬಗ್ಗೆ ತಿಳಿ ಹೇಳಿದರು.

ಅಲ್ಲದೇ ಉರ್ದುವಿಗೆ ಮಾತ್ರ ವಿಶಿಷ್ಟವಾಗಿರುವ ಶಾಯರಿ- ಗಜಲ್- ದಾಸ್ತಾನಗಿ, ಮುಂತಾದ ಪ್ರಕಾರ ಗಳ ಬಗ್ಗೆ ಸಹಿತ ಕೂಲಂಕಷ ಅಧ್ಯಯನ ಮಾಡಿದರು, ಅವುಗಳ ವಿಶೇಷತೆಯನ್ನು ಕೇವಲ ಭಾರತೀಯರು ಅಷ್ಟೇ ಅಲ್ಲ, ಜಗತ್ತಿನ ಇತರ ಸಾಹಿತ್ಯ ಆಸಕ್ತರು ಸಹಿತ ಸುಲಭವಾಗಿ ತಿಳಿದುಕೊಳ್ಳುವಂತೆ ಪ್ರಯತ್ನ ಮಾಡಿದರು.

ಭಾಷೆ ಎನ್ನುವುದು ಸಂಸ್ಕೃತಿಯ ನಾಲಿಗೆ. ಅದನ್ನು ಬಿಟ್ಟು ಸಂಸ್ಕೃತಿ ಇಲ್ಲ. ಅದು ಅಷ್ಟೇ ಅಲ್ಲ. ಭಾಷೆ ಸಂಸ್ಕೃತಿಯ ದಿಕ್ಕನ್ನು ಗುರುತಿಸುತ್ತದೆ, ಬದಲಿಸುತ್ತದೆ. ಆದ್ದರಿಂದಲೇ ಭಾರತೀಯ ಭಾಷೆಯ ಕೆಲವು ಸಾಹಿತ್ಯ ಕೃತಿಗಳನ್ನು ಯುರೋಪಿನ - ಅಮೆರಿಕದ ಭಾಷೆಗಳಿಗೆ ಭಾಷಾಂತರ ಮಾಡಲು ಸಾಧ್ಯವೇ ಇಲ್ಲ. ಇದು ಶಬ್ದ ದಾರಿದ್ರ್ಯದ ಸಮಸ್ಯೆ ಅಲ್ಲ. ಐಡಿಯಾಗಳ - ವಿಚಾರಗಳ ಕೊರತೆ. ಯಾಕೆ ಅಂದರೆ ವಿಚಾರ ಎನ್ನುವುದು ಸಂಸ್ಕೃತಿಯ ಕುಲುಮೆಯಲ್ಲಿ ಮೂಡುವುದು. ಅವು ಕೇವಲ ಮಾನವನ ಮನಸ್ಸಿನಿಂದ ಹುಟ್ಟುವ ವಿಷಯಗಳು ಅಲ್ಲ ಎಂದು ವಾದಿಸಿದರು .

ಕಾವ್ಯದ ಸಂಸ್ಕೃತಿಕ ಪರಿಧಿಯ ಬಗ್ಗೆ ಮಾತಾಡುವಾಗ ಅವರು ಉತ್ತರ ಪ್ರದೇಶದ ಸಂಸ್ಕೃತ- ಫಾರಸಿ ಕವಿ ಪಂಡಿತ ದಯಾ ಶಂಕರ್ ನಸಿಮ್ ಲಖನವಿ ಅವರ ಶಾಯರಿಯ ಉದಾಹರಣೆ ನೀಡುತ್ತಾರೆ.
"ಲಾಯೇ ಥೆ ಉಸ್ ಬುತ ಕೋ ಇಳತಿಜಾ ಕರಕೆ, ಕೂಫ್ರ ಟೂಟಾ ಖುದಾ ಖುದಾ ಕರಕೆ'’
(ಆ ಮೂರ್ತಿಯ ಕಾಡಿ -ಬೇಡಿ ತಂದೆ, ನನ್ನ ನಾಸ್ತಿಕತೆ ಮುರಿಯಿತು `ಹೇ ದೇವಾ ಹೇ ದೇವಾ' ಎಂದೇ )
ಲಖನವಿ ಅವರು 1850 ರ ಸುಮಾರಿಗೆ ಬರೆದ ಈ ಶಾಯರಿ ಆಸ್ತಿಕ - ನಾಸ್ತಿಕರ ಸ್ನೇಹದ ಬಗ್ಗೆ ಮಾತಾಡುತ್ತದೆ.
ಈ ಸಾಲುಗಳನ್ನು ಭಾರತೀಯ ಭಾಷೆ ಬಿಟ್ಟು ಬೇರೆ ಭಾಷೆಗಳಲ್ಲಿ ಸಮರ್ಪಕವಾಗಿ ಭಾಷಾಂತರ ಮಾಡಲು ಸಾಧ್ಯ ಇಲ್ಲ. ಮಾಡಿದರೂ ನಾವು ಅದರ `ಲುಫ್ತ' (ರಸಾಸ್ವಾದ, ಮಜಾ) ಉಡಾಯಿಸಿದಷ್ಟೂ ಇತರರು ಮಾಡಲಿಕ್ಕೆ ಸಾಧ್ಯ ಇಲ್ಲ ಎಂದು ನಕ್ಕು ಬಿಡುತ್ತಾರೆ. ‘ ಧ್ವನಿ ಸಿದ್ಧಾಂತದ `ರಸ' ಎನ್ನುವ ಪದವನ್ನು ಜಗತ್ತಿನ ಯಾವ ಭಾಷೆ ಯಲ್ಲಿಯೂ ಸರಿಯಾಗಿ ಭಾಷಾಂತರ ಮಾಡಲು ಆಗುವುದಿಲ್ಲ. ಅದರ ಅರ್ಥ ವಿವರಿಸಬಹುದು ಅಷ್ಟೇ' ಎನ್ನುತ್ತಾರೆ.

"ಗಜಲ್ ಅನ್ನುವುದು ಭಾರತೀಯ ಕೃತಿ ರೂಪ. ಅರೇಬಿಕ್- ಪರ್ಷಿಯನ್ ಗಜಲ್ ಕೇವಲ ಲೌಕಿಕ ವಿಷಯಗಳ ಬಗ್ಗೆ ವರ್ಣಿಸುತ್ತದೆ. ಆದರೆ ಭಾರತೀಯ ಗಜಲ್ ಆಧ್ಯಾತ್ಮಿಕ ವಿಷಯಗಳ ಬಗ್ಗೆ, ಒಳಗಿನ ಜಗತ್ತಿನ ಬಗ್ಗೆ ಹಾಡುತ್ತದೆ. ಅದು ಅರೇಬಿಕ್- ಫಾರಸಿ ಭಾಷೆಗಳಲ್ಲಿ ಮೊದಲಿಗೆ ಬಳಕೆ ಆಗಿದ್ದರೂ ಅದಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ಭಾರತೀಯ ಮನಸ್ಸುಗಳಿಂದ'’ ಎಂದು ನಂಬಿದ್ದರು. "ಇಲ್ಲಿನ ನೆಲದ ವಿಚಾರ, ಮಾತು, ನಡೆ -ನುಡಿ, ಸಾಮಾಜಿಕ ಆರ್ಥಿಕ ಸಮಸ್ಯೆಗಳು, ಕುಟುಂಬದ ವ್ಯವಸ್ಥೆ, ರಾಜಕಾರಣ, ಗಂಡು ಹೆಣ್ಣುಗಳ ಸಂಬಂಧ, ಬಾಲ್ಯದ ನೆನಪುಗಳು, ಹಳ್ಳಿಯ ಜೀವನ, ರೈತರ ಬವಣೆ, ನೆರೆ ಹೊರೆ ಯವರ ಒಡನಾಟ ಇವೆಲ್ಲ ಇಲ್ಲಿನ ಕಾವ್ಯ- ಗಜಲ್ ಗಳನ್ನು ರೂಪಿಸಿವೆ. ಆದ್ದರಿಂದಲೇ ಏಕ ಬ್ರಾಹ್ಮಣನೆ ಕಹಾ ಹೈ ಅನ್ನುವ ಮಾತು ಉರ್ದುಗಜಲ್ ನಲ್ಲಿ ಬರಲು ಸಾಧ್ಯವಿದೆ '’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಫಾರೂಕಿ ಅವರ ಅತ್ಯಂತ ಪ್ರಮುಖ ಸಿದ್ಧಾಂತಗಳು ಇವು- ಸಾಂಸ್ಕೃತಿಕ ಹಿನ್ನೆಲೆ ಇಲ್ಲದ ಕಾವ್ಯ ಮೀಮಾಂಸೆ ಅರ್ಥಹೀನ. ಹೀಗಾಗಿಯೇ ವಿವಿಧ ಸಂಸ್ಕೃತಿಗಳಲ್ಲಿ ಹುಟ್ಟಿದ ಮೀಮಾಂಸೆ ವಿಭಿನ್ನವಾಗಿರುತ್ತದೆ. ಇದಕ್ಕೆ ದೇಶಗಳ ಗಡಿ ಮುಖ್ಯವಲ್ಲ. ಸಾಂಸ್ಕೃತಿಕ ಹಿನ್ನೆಲೆ ಮುಖ್ಯ. ಭಾಷೆ ಹೇಗೆ ಗಡಿಗಳನ್ನು ಮೀರಿ ಬೆಳೆಯುತ್ತದೋ, ಹಾಗೆಯೇ ಮೀಮಾಂಸೆ ಸಹಿತ ವಿಶ್ವಾವ್ಯಾಪಿ ಯಾಗಿ ಬೆಳೆಯುತ್ತದೆ. ಅದಕ್ಕೆ ಭಾಷೆ ಹಾಗೂ ಅದರ ಬಳಕೆ ಮುಖ್ಯ ವಷ್ಟೆ ಹೊರತು, ರಾಜಕೀಯ ಕಾರಣಗಳು, ಕೃತ್ರಿಮ ಗಡಿಗಳು ಮುಖ್ಯವಲ್ಲ, ಎನ್ನುವುದು.

ಇನ್ನೊಂದು ಹಾಗೂ ಯಾವ ಕಾಲಕ್ಕೂ ಸಲ್ಲಿಕೆ ಯಾಗುವ ಸಿದ್ಧಾಂತ ಎಂದರೆ ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಭಾಷೆ- ರಾಜ್ಯ- ಧರ್ಮ - ಜಾತಿ - ಸಿದ್ಧಾಂತಗಳ ವ್ಯತ್ಯಾಸಗಳು ಮಾನವ ನಿರ್ಮಿತ ಹಾಗೂ ತಾತ್ಕಾಲಿಕ ಎನ್ನುವುದು. ಸರ್ಕಾರಿ ಅಧಿಕಾರಿಯಾಗಿದ್ದ ಅವರು ತಮ್ಮ ಬರಹ - ಭಾಷಣಗಳಲ್ಲಿ ಕೆಲವು ವಿಷಯಗಳನ್ನು ಮುಕ್ತವಾಗಿ ಹೇಳಲು ಸಾಧ್ಯವಾಗದೇ ಹೋಗಿರಬಹುದು. ಆದರೆ ಅವರ ಮಾತು- ಬರವಣಿಗೆ ಯ ಹಿಂದಿನ ಸಂದೇಶ ಇದೇ ಆಗಿತ್ತು. ಭಾರತೀಯ ಕಾವ್ಯಕ್ಕೆ ಭಾಷೆಯ ಕಂಬಳಿ ಹೊದಿಸಬಹುದು ಆದರೆ ಅದನ್ನು ಧರ್ಮದ ಪಂಜರದೊಳಗೆ ಇರಿಸಲು ಸಾಧ್ಯ ಇಲ್ಲ ಎನ್ನುವ ಅವರ ಮಾತು ಅಮರ. ಈ ಮಾತು ಹೇಳುವಾಗ ಅವರು ಸಂಸ್ಕೃತಿ ಎನ್ನುವುದು ಧರ್ಮಕ್ಕಿಂತ ದೊಡ್ಡದು ಎನ್ನುವ ಅರಿವನ್ನು ಪಸರಿಸಲು ಪ್ರಯತ್ನ ಮಾಡುತ್ತಾರೆ.

ಭಾಷಾ ಅಧ್ಯಯನ- ಸಾಹಿತ್ಯ- ಕಾವ್ಯ - ಮೀಮಾಂಸೆ ಯಂತಹ ವಿಷಯಗಳು ವಿಶ್ವವಿದ್ಯಾಲಯಗಳೆಂಬೋ ದಂತ ಗೋಪುರಗಳ ಅರಾಮು ಕುರ್ಚಿಗಳಿಗೆ ಸೀಮಿತವಾಗಿವೆ ಎಂಬ ನಂಬಿಕೆ ಬಲವಾಗಿರುವಾಗ ಆ ಚೌಕಟ್ಟಿನಿಂದ ಹೊರಗೆ ಬಂದು ನೆನಪು ಉಳಿಯುವಂಥ ಕೆಲಸ ಮಾಡಿದ ಫಾರೂಕಿಯಂತವರು ವಿಶೇಷ ವಾಗುತ್ತಾರೆ. ಅವರನ್ನು ಉರ್ದು ಸಾಹಿತ್ಯದ ಸೂರ್ಯ ಎನ್ನುವವರು ಎಷ್ಟು ಸಂಖ್ಯೆಯಲ್ಲಿ ಇದ್ದರೋ, ಅಷ್ಟೇ ಸಂಖ್ಯೆಯಲ್ಲಿ ಅವರನ್ನು ಟೀಕಿಸಿದವರು ಇದ್ದಾರೆ.

ಜರ್ಮನಿ ವಿಶ್ವವಿದ್ಯಾಲಯದ ಮಾನವ ಶಾಸ್ತ್ರೀಯ ಅಧ್ಯಯನದ ಶಿಕ್ಷಕ ಹಾಗೂ ಸಂಶೋಧಕ ಇರ್ಫಾನ್ ಅಹ್ಮದ್ ಅವರು ಫಾರೂಕಿ ಅವರು ಬೇಡವಾದ್ದನ್ನು ಎಲ್ಲ ಮೈ ಮೇಲೆ ಎಳೆದುಕೊಂಡರು ಎಂದು ಹುಸಿ ಕೋಪದಿಂದ ವರ್ಣಿಸುತ್ತಾರೆ.

ಅವರು ಕಾವ್ಯದಲ್ಲಿ ಅನಗತ್ಯ ರಾಷ್ಟ್ರವಾದ ತುಂಬಿದರು. ಅದಕ್ಕಾಗಿ ಹಿಂದುತ್ವದವರ ಡಾರಲಿಂಗ್ ಆದರು. ಉರ್ದುದವರು ಎಂದರೆ ನೂರು ಗಜ ದೂರ ಸರಿಯುವ ದೂರದರ್ಶನದವರು ಫಾರೂಕಿ ಸಾಹೇಬರನ್ನು ಸಂಸ್ಕೃತ ಕಾರ್ಯಕ್ರಮಕ್ಕಾಗಿ ಸಂದರ್ಶನ ಮಾಡಿದರು, ಎಂದು ಅಹ್ಮದ್ ಅಣಕಿಸುತ್ತಾರೆ. ಅನೇಕ ಭಾರತೀಯ ಭಾಷೆಗಳ ಆಧುನಿಕ ಇತಿಹಾಸದ ದಿಕ್ಕು ಬದಲಿಸಿದ ಪಾಶ್ಚಿಮಾತ್ಯ ವಿಮರ್ಶೆಯನ್ನು ಫಾರೂಕಿ ಅವರು `ವಿಷ' ಎಂದು ಪರಿಗಣಿಸಿದರು. ಇದು ಅನಗತ್ಯವಾಗಿತ್ತು.
ಇನ್ನು ತಮ್ಮ ಕಣ್ಣೆದುರಿಗೆ ಥರಾವರಿ ಬರಹ ಪ್ರಕಾರಗಳು ಇದ್ದರೂ ಸಹಿತ ಕೇವಲ ಸೃಜನಶೀಲ ಕೃತಿಗಳು ಮಾತ್ರ ಶ್ರೇಷ್ಟ. ಉಳಿದ ಎಲ್ಲವೂ ಅವಜ್ಞೆಗೆ ಸೂಕ್ತವಾದವು ಎಂದುಕೊಂಡರು. ಇದೂ ಬೇಕಾಗಿರಲಿಲ್ಲ. ಭಾಷೆಯೊಂದರ ಸಾಹಿತ್ಯ ಕೇವಲ ಸೃಜನಶೀಲ ಕೃತಿಗಳಿಂದ ಬೆಳೆಯುವುದಿಲ್ಲ. ಅದು ಅರಣ್ಯ ಇದ್ದಂತೆ. ಅಲ್ಲಿ ಪಾದದ ಕೆಳಗೆ ಬೆಳೆಯುವ ಪಾಚಿಯೂ ಇದೆ, ಮೋಡವನ್ನು ತೂರಿ ಹೋಗುವ ಎತ್ತರದ ಗಿಡ ಮರಗಳೂ ಇವೆ. ಇವು ಯಾವನ್ನೂ ನಾವು ಮರೆಯಲಾಗದು, ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ 2020ನೇ ವರ್ಷದಲ್ಲಿ ನಾವು ಕಳೆದುಕೊಂಡ ಅನೇಕ ಅಪರೂಪದ ವ್ಯಕ್ತಿಗಳಲ್ಲಿ ಡಾ.ಫಾರೂಕಿ ಒಬ್ಬರು. ಫಾರೂಕ್ ಎಂದರೆ ಫಾರಸಿ ಭಾಷೆಯಲ್ಲಿ ಸರಿ- ತಪ್ಪುಗಳನ್ನು ಗುರುತಿಸುವವನು ಎಂದು ಅರ್ಥ. ಕಾವ್ಯ ಮೀಮಾಂಸೆಯ ಮಟ್ಟಿಗಾದರೂ ಫಾರೂಕಿ ಅವರು ಹೆಸರಿಗೆ ತಕ್ಕಂತೆ ನಡೆದುಕೊಂಡವರು.

ಫಾರೂಕಿ ಅವರ ಭಾಷಣದ ವಿಡಿಯೋ

 

ಸಂದರ್ಶನ


ಇದನ್ನೂ ಓದಿ

ಉರ್ದು ಜನಮಾನಸದ ಕವಿ ’ರಾಹತ್’ ಎಂಬ ದುರಿತ ಕಾಲದ ನೆಮ್ಮದಿ

’ರತ್ನಗಿರಿ ರಹಸ್ಯ’ ಎಂದಾದ ಉರ್ದುವಿನ ಮೊದಲ ಕಥನ ಕಾವ್ಯ ’ಕದಂರಾವ್-ಪದಂರಾವ್’

ಅಸಾಮಾನ್ಯ ನಾಳೆಗಳನ್ನು ತೋರಿದ ಆಸೀಮೋವ

ಡಾ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು

ಡಾ. ಅಂಬೇಡ್ಕರ್ ಹಾಗೂ ಪುಸ್ತಕ ಪ್ರೀತಿ

MORE FEATURES

ಅರಿವಿನ ಹೊಸಬೆಳಕು ಮೂಡಿಸುವ ಬರವಣಿಗ...

09-03-2021 ಬೆಂಗಳೂರು

ಹಿರಿಯ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರ ಯಡ್ರಾಮಿ ಸೀಮೆ ಕಥನಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2...

ಸ್ಥಳೀಯತೆಯ ಸುಂದರ ಬರಹಕ್ಕೊಂದು ಮಾದ...

09-03-2021 ಬೆಂಗಳೂರು

‘ಸ್ಥಳೀಯತೆ’ಯ ಸಮಗ್ರ ಆಯಾಮಗಳನ್ನುಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿ, ಉತ್ಕೃಷ್ಟ ಸಾಹಿತ್ಯ ರೂಪು ನೀಡಿದ ...

ಲೌಕಿಕ ವ್ಯವಹಾರ ನಂತರದ ವಿರಾಮದಲ್ಲೇ...

08-03-2021 ಬೆಂಗಳೂರು

ಲೇಖಕಿ ಉಷಾ ನರಸಿಂಹನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು. ಹಾಸನದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನಂತರದ ವಿ...

Comments