ಶ್ವಾನಾವಲಂಭನಕರಿ: ಮನುಷ್ಯ ಮತ್ತು ಶುನಕಗಳ ಜಗತ್ತಿನ ಕಥನ


ಶ್ವಾನಾವಲಂಭನಕರಿ’ ‘ನ್ಯಾಚುಲರಿಸ್ಟಿಕ್’ ಕಾದಂಬರಿ ಎಂದು ಗುರುತಿಸಲು ಯಾವುದೇ ಅಡ್ಡಿಯಿಲ್ಲ. ಲೇಖಕರು ಕಾದಂಬರಿಯಲ್ಲಿ ದೃಶ್ಯ, ಸನ್ನಿವೇಶ ಮತ್ತು ಪಾತ್ರಗಳನ್ನು ಓದುಗರ ಕಣ್ಣ ಮುಂದೆ ಕಟ್ಟುವಂತೆ, ವಿವರ ಸಮೃದ್ಧಿಯೊಡನೆ ಸೃಷ್ಟಿಸಿದ್ದಾರೆ. ಇಲ್ಲಿ ಸ್ವಭಾವ ವೈವಿಧ್ಯದ ನಿರೂಪಣೆ ಸೊಗಸಾಗಿದೆ; ಶುನಕಗಳು ಸದ್ದಿಲ್ಲದೆ ಅನುಭವಿಸುವ ದುರಂತಗಳು ನೈಜವಾಗಿ ಚಿತ್ರಿತವಾಗಿವೆ. ಈ ಕಾದಂಬರಿಯ ವಿಷಯದಲ್ಲಿ ಓದುಗರಲ್ಲಿ ಸಣ್ಣ ಭಿನ್ನಾಭಿಪ್ರಾಯವಿರಬಹುದು. ಅದಕ್ಕೆ ಮುಖ್ಯ ಕಾರಣವೆಂದರೆ, ಇದರ ಶೈಲಿಯಿಂದ ಇದನ್ನು ಓದುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಲೇಖಕ ಸಿ.ಎಸ್.ಭೀಮರಾಯ. ಅವರು ಲೇಖಕ ಕುಂ. ವೀರಭದ್ರಪ್ಪ ಅವರ ಶ್ವಾನಾವಲಂಭನಕರಿ ಕೃತಿಯ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಶ್ವಾನಾವಲಂಭನಕರಿ
ಲೇ: ಕುಂ. ವೀರಭದ್ರಪ್ಪ
ಪುಟ: 226, ಬೆಲೆ:150
ಪ್ರಕಾಶನ: ಸಪ್ನ ಪ್ರಕಾಶನ ಬೆಂಗಳೂರು

ಡಾ. ಕುಂ. ವೀರಭದ್ರಪ್ಪನವರು ಸಮಕಾಲೀನ ಕನ್ನಡ ಸಾಹಿತ್ಯದ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಅವರು ಕಳೆದ ಎಪ್ಪತ್ತರ ದಶಕದಿಂದ ಕಥೆ, ಕಾವ್ಯ, ಕಾದಂಬರಿ, ಅನುವಾದ, ಅಂಕಣ ಬರಹಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕುಂವೀಯವರ ಹೊಸ ಕಾದಂಬರಿ ‘ಶ್ವಾನಾವಲಂಭನಕರಿ’ ಹೊರಬಂದಿದೆ. ಅವರ ಒಂದೊಂದು ಕಾದಂಬರಿಯ ಹಿಂದೆಯೂ ಬಹಳಷ್ಟು ಸಿದ್ಧತೆ ಇರುತ್ತದೆ. ಅವರಷ್ಟು ತಳಸ್ಪರ್ಶಿ ಅಧ್ಯಯನ ಮಾಡುವ ಕನ್ನಡ ಕಾದಂಬರಿಕಾರರು ಬಹು ವಿರಳ. ಅವರ ವಸ್ತುವಿನ ಆಯ್ಕೆಯೂ ವಿಶಿಷ್ಟವೇ. ಒಂದೊಂದು ವಸ್ತುವೂ ವಿಭಿನ್ನ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ ಕಾದಂಬರಿಯ ರಚನೆಗೆ ಕೈಹಾಕಿದರೂ ಅವರ ಪಾಲಿಗೆ ಅದೊಂದು ತಪಸ್ಸು. ನಾಡಿನಲ್ಲಿ ಒಂದು ಪರಂಪರೆಯನ್ನು ಸೃಷ್ಟಿಸುವಷ್ಟು ಪ್ರಭಾವವನ್ನು ಬೀರಿದವರು ಕುಂವೀ. ಅವರು ದಲಿತ ಬಂಡಾಯ ಚಳವಳಿಯ ಪ್ರಮುಖ ನಾಯಕರಾಗಿ ವಿಪುಲವಾಗಿ ಬರೆದವರು, ಅಷ್ಟೇ ಖಡಕ್ ಆಗಿ ಮಾತನಾಡಿದವರು. ಅವರು ಸಾಮಾಜಿಕ ಸಮಾನತೆಗಾಗಿ ಹಲವು ವಾದವಿವಾದಗಳ ಕೇಂದ್ರವಾಗಿ ಉತ್ಸಾಹದಿಂದ ಸೆಣಸಾಡಿದವರು. ಕನ್ನಡ ಕಾದಂಬರಿಯ ಹರಹನ್ನು ಸಮರ್ಥವಾಗಿ ವಿಸ್ತರಿಸಿದವರು. ಕುಂವೀಯವರು ಸಮೃದ್ಧ ಪ್ರತಿಭೆ ಮಾಡಿದ ನಿರ್ಮಾಣ ಕಾರ್ಯ ಆಶ್ಚರ್ಯವನ್ನುಂಟು ಮಾಡುತ್ತದೆ. ಅವರ ಕೃತಿಗಳಲ್ಲಿ ಅವರ ದೃಷ್ಟಿಗಳು ಮಾಗಿದ ಬಗೆಯನ್ನು ಓದುಗರು ಗಮನಿಸಬಹುದು. ಸಮಾಜದ ಕೊಳೆಯನ್ನು ಬಯಲಿಗೆಳೆದಂತೆ ಅದರ ಒಳಿತನ್ನೂ ಅವರು ಸಮರ್ಥವಾಗಿ ಚಿತ್ರಿಸಿದ್ದಾರೆ.

ಪ್ರಸ್ತುತ ‘ಶ್ವಾನಾವಲಂಭನಕರಿ’ ಕುಂವೀಯವರ ಹದಿನೆಂಟನೆಯ ಕಾದಂಬರಿ. ಇದರ ಕಥಾವಸ್ತುವನ್ನು ಹಿಡಿಯುವುದು ತುಸು ಕಷ್ಟದ ಕೆಲಸ. ಈ ಕಾದಂಬರಿ ಒಟ್ಟು ನಾಲ್ಕು ಬೃಹತ್ ಅಧ್ಯಾಯಗಳನ್ನು ಒಳಗೊಂಡಿದೆ. ಕರ್ನಾಟಕ, ತಮಿಳ್ನಾಡು, ಕೇರಳ, ಮಹಾರಾಷ್ಟ್ರ ಮತ್ತು ಅಮೇರಿಕದವರೆಗೂ ಈ ಕಾದಂಬರಿಯ ಕಥನ ವ್ಯಾಪ್ತಿ ಹರಡಿಕೊಂಡಿದೆ. ಬಡತನ, ಬರಗಾಲ, ಅನಕ್ಷರತೆ, ವಲಸೆ, ಕೌಟುಂಬಿಕ ಸಂಘರ್ಷ, ಮತಾಂತರ, ಜಾತೀಯತೆ, ಮೂಢನಂಬಿಕೆ, ಆಧ್ಯಾತ್ಮಿಕತೆ, ಧಾರ್ಮಿಕತೆ, ಹಾದರ, ಕೊಲೆ, ಭ್ರಷ್ಟ ರಾಜಕಾರಣ, ಶುನಕಗಳ ದುರಂತ ಬದುಕು-ಮುಂತಾದವುಗಳನ್ನು ಈ ಕಾದಂಬರಿಯ ಪರಿಧಿಯಲ್ಲಿ ತರಲು ಕುಂವೀಯವರು ಪ್ರಯತ್ನಿಸಿದ್ದಾರೆ. ಅವರು ಮಡಿ-ಮೈಲಿಗೆ, ಶೀಲ-ಅಶ್ಲೀಲಗಳ ಸಂಕೋಚವಿಲ್ಲದೆ ಎಲ್ಲ ಅನುಭವವನ್ನು ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಮನುಷ್ಯ-ಶುನಕಗಳ ಜೀವನ ಸಂಬಂಧದ ವಸ್ತು ಈ ಕಾದಂಬರಿಯ ವರ್ಣನೆಗಳಲ್ಲಿ, ವಾಕ್ಯಗಳಲ್ಲಿ ಮತ್ತು ಸಂಭಾಷಣೆಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎನ್ನುವುದಕ್ಕೆ ಪೂರ್ಣವಾಗಿ ವಿವರಿಸಲು ಇಲ್ಲಿ ಸಾಧ್ಯವಿಲ್ಲ. ಕಾದಂಬರಿಕಾರರ ದರ್ಶನವು ಇಡೀ ಕಾದಂಬರಿಯ ಬರಹವನ್ನು ಹೊಕ್ಕಿದೆ. ಪ್ರಾಣಿ ಮತ್ತು ಮನುಷ್ಯ ಸಂಬಂಧಗಳನ್ನು ಬರವಣಿಗೆಯಲ್ಲಿ ಹಿಡಿದಿರುವ ಕ್ರಮ ಅನನ್ಯವಾಗಿದೆ.

ಕುಂವೀಯವರ ಕಾದಂಬರಿ ‘ಶ್ವಾನಾವಲಂಭನಕರಿ’ಯೇ ಅದರ ಪರಿಚಯವನ್ನು ಮಾಡುತ್ತದೆ. ತಮ್ಮ ಮೊದಲ ಮಾತಿನಲ್ಲಿ ಕುಂವೀಯವರು ‘ನನ್ನ ಹಿಂದಿನ ಕಾದಂಬರಿಗಳಿಗಿAತ ತೀರ ಭಿನ್ನವೆನ್ನಿಸಬಹುದಾದ ಈ ಪ್ರಯೋಗಾತ್ಮಕ ಕಾದಂಬರಿ’ ಎಂದಿದ್ದಾರೆ. ಇದೊಂದು ಮನುಷ್ಯ-ಶುನಕಗಳ ಜೀವನದ ಅದ್ಭುತ ಕಥೆ. ಸಣ್ಣ ಕಥೆಯ ಗಾತ್ರವನ್ನು ಮೀರಿ, ಪೂರ್ಣ ಪ್ರಮಾಣದ ಕಾದಂಬರಿಯ ಗಾತ್ರವನ್ನು ಪಡೆದಿರುವ ಕೃತಿ ‘ಶ್ವಾನಾವಲಂಭನಕರಿ’. ಈ ಹೊಸ ಪ್ರಕಾರವನ್ನು ಪ್ರಾರಂಭಿಸಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ಕುಂವೀ. ವಿಶ್ವವಾಣಿ ದಿನಪತ್ರಿಕೆಯ ವಿರಾಮ ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯತೆ ಗಳಿಸಿ, ಅನಂತರ ಪುಸ್ತಕರೂಪದಲ್ಲಿ ಪ್ರಕಟವಾದ ‘ಶ್ವಾನಾವಲಂಭನಕರಿ’ ಮುಖ್ಯವಾಗಿ ಮನುಷ್ಯ-ಶುನಕಗಳ ಜಗತ್ತಿನ ಕಥೆ. ಮನುಷ್ಯ ಮತ್ತು ಶುನಕಗಳ ಜಗತ್ತಿನ ಸುತ್ತ ಸುತ್ತುವ ‘ಶ್ವಾನಾವಲಂಭನಕರಿ’ ಅಲ್ಲಿರುವ ಎಲ್ಲ ವ್ಯಕ್ತಿ ಮತ್ತು ಶುನಕಗಳ ಮನೋವ್ಯಾಪಾರವನ್ನು ಸೂಕ್ಷö್ಮವಾಗಿ ವಿಶ್ಲೇಷಿಸಿದೆ. ಇಲ್ಲಿ ಕಾದಂಬರಿಕಾರರು ತಾವೇ ನಾಯಿ ಎಂಬಂತೆ ಬರೆಯುತ್ತಾ ಹೋಗುವ ಶೈಲಿ ಇದೆಯೆಲ್ಲಾ ಅದು ಪಾತ್ರದೊಳಗೆ ಪರಕಾಯ ಪ್ರವೇಶ ಕುತೂಹಲ ಮೂಡಿಸುತ್ತದೆ. ಕುಂವೀ ಕುರಿಗಾರರ, ರಾಜಕಾರಣಿಗಳ ಮತ್ತು ಶ್ವಾನಗಳ ಸಂಭಾಷಣೆಗಳನ್ನು ತಮ್ಮ ಈ ಕಾದಂಬರಿಯ ಬಿಂದುಗಳಾಗಿ ಬಳಸಿಕೊಂಡಿದ್ದಾರೆ. ಅವರಿಗೆ ಇಲ್ಲಿ ಮುಖ್ಯವಾಗಿದ್ದು ಹಲವು ದೃಷ್ಟಿಕೋನಗಳು. ತಮ್ಮ ಆಸಕ್ತಿಯನ್ನು ಪ್ರಚೋದಿಸುವ ಹಲವು ದೃಷ್ಟಿಕೋನಗಳು ದೊರೆಯುತ್ತಲೇ ಅವುಗಳನ್ನು ಆಧಾರ ಮಾಡಿಕೊಂಡು ಈ ಕಾದಂಬರಿಯನ್ನು ಬರೆದಿದ್ದಾರೆ.

ಕಾದಂಬರಿಯ ರಚನೆಯ ದೃಷ್ಟಿಯಿಂದ ಗಮನಿಸಿದಾಗ ಅದರ ಮೊದಲ ಭಾಗದಲ್ಲಿ ಚಿಗ್ಯಾಟಿಯ ಚಿತ್ರಣ ತುಂಬ ಸಾಂದ್ರವಾದ ರೀತಿಯಲ್ಲಿ ಚಿತ್ರಿತವಾಗಿದ್ದು, ಅದಕ್ಕೊಂದು ಗಟ್ಟಿ ಸ್ವರೂಪ ಕೂಡ ಪ್ರಾಪ್ತವಾಗಿದೆ. ಇಂಥಾ ಬದುಕನ್ನು ಯಥಾವತ್ತಾಗಿ ಚಿತ್ರಿಸುವಾಗ ಕುಂವೀಯವರ ಲೇಖನಿಗೆ ಎಲ್ಲಿಲ್ಲದ ವೇಗ ಪ್ರಾಪ್ತವಾಗುತ್ತದೆ. ಆದರೆ ಇದೇ ಬಗೆಯ ಸಾಂದ್ರತೆ ಎರಡನೆಯ ಭಾಗವಾದ ‘ಶ್ವಾನಾವಲಂಭನಕರಿ’ಯಲ್ಲಿ ಕಾಣುವುದಿಲ್ಲ. ಮುಂದಿನ ಭಾಗಗಳಲ್ಲಿ ಭೀಮ ಮತ್ತು ಚೆನ್ನಿಯರು ಬಡೆಲಡಕ ನಗರದ ಜೀವನವನ್ನು ಎದುರಿಸಿ ವಿಕಸನ ಹೊಂದುವ ಕಥೆ. ಇಡೀ ಕಾದಂಬರಿ ಓದುಗರಿಗೆ ಪಯಣದ ಅನುಭವವನ್ನು ತಂದುಕೊಡುತ್ತದೆ. ಇಲ್ಲಿನ ನೂರಾರು ಪಾತ್ರಗಳೆಲ್ಲ ಪಯಣಿಗರೇ.

‘ರೂಪ ಮತ್ತು ಶೈಲಿಗಳ’ ವಿಷಯದಲ್ಲಿ ಕುಂವೀಯ ನಿಷ್ಠೆಯು ಪ್ರಕಟವಾಗುತ್ತದೆ. ಅವರು ಕನ್ನಡದ ಕಾದಂಬರಿಯ ಮಟ್ಟವನ್ನು ಏರಿಸಿದವರು. ‘ಕವಿಗಳಲ್ಲಿ ಬೇಂದ್ರೆ ಇದ್ದಂತೆ ಕಾದಂಬರಿಕಾರರಲ್ಲಿ ಕುಂವೀ’. ಶೈಲಿ ಕ್ಲಿಷ್ಟ. ಅವರು ತಮ್ಮ ಭಾಷೆಯನ್ನು ಸರಳಗೊಳಿಸಲು ಪ್ರಯತ್ನಿಸುವುದಿಲ್ಲ. ಅವರದು ‘ನಾವೆಲ್ ಆಫ್ ಐಡಿಯಾಸ್’. ಕುಂವೀಯವರದು ಬಹು ಎಚ್ಚರಿಕೆಯಿಂದ ಕಟ್ಟುವ ಕಥಾವಸ್ತು; ಅವರು ಪ್ರತಿಯೊಂದು ವಿವರಕ್ಕೂ ಹೆಚ್ಚು ಗಮನಕೊಟ್ಟು ಕಥೆಯ ಓಟವನ್ನು ನಿರ್ವಹಿಸುತ್ತಾರೆ. ಆದರೆ ಪಾತ್ರಸೃಷ್ಟಿಯಲ್ಲಿ ವಿಶೇಷ ಶಕ್ತಿ ಇವರದು. ಕಥೆಯನ್ನು ಪಾತ್ರಗಳೇ ಹೇಳುತ್ತವೆ. ಇದರಿಂದ ಘಟನೆಗಳನ್ನು ಬೇರೆ ಬೇರೆ ದೃಷ್ಟಿಗಳಿಂದ ಓದುಗರು ಸಹಜವಾಗಿ ಕಾಣಲು ಸಾಧ್ಯವಾಗುತ್ತದೆ.

ಈ ಕಾದಂಬರಿಯಲ್ಲಿ ಲೇಖಕರಿಗಿರುವ ಬೀದಿನಾಯಿಗಳ ಕುರಿತ ಕಾಳಜಿ ಎದ್ದು ಕಾಣುತ್ತದೆ. ಅದರಿಂದಾಗಿ ಕುಂವೀಯವರ ಸೃಜನಶೀಲ ಚೇತನ ಹೊಸ ಅನುಭವ ಕ್ಷೇತ್ರ ಮತ್ತು ಹೊಸ ಅಭಿವ್ಯಕ್ತಿ ಸಾಧ್ಯತೆಗಳತ್ತ ತಿರುಗಿರುವಂತೆ ಕಾಣುತ್ತದೆ. ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಗಿಂತ ತೀರ ಭಿನ್ನವಾಗಿರಲು, ‘ಮನುಷ್ಯ- ಶುನಕ’ಗಳೆನ್ನುವ ಜೀವಿಗಳ ಸಂಬಂಧ ನಿಜಕ್ಕೂ ಅದೆಂಥ ಸೃಷ್ಟಿ? ಅವುಗಳ ನಿಜವಾದ ಸಾಧ್ಯತೆಗಳಾದರೂ ಏನು? ಎಂದು ಅರಿಯುವ ಬಗೆಗೆ ಲೇಖಕರಿಗಿರುವ ಎಂದಿನ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ,ವಿಶ್ವಾಸಗಳು ಇಲ್ಲಿ ಕೆಲಸ ಮಾಡಿವೆ. ನನ್ನ ದೃಷ್ಟಿಯಲ್ಲಿ ಹೇಳುವುದಾದರೆ, ಬೇರೆ ಎಲ್ಲ ಪ್ರಾಣಿಗಳ ಜನ್ಮಕ್ಕಿಂತ ಶ್ವಾನ ಜನ್ಮವೇ ಶ್ರೇಷ್ಠ. ಮಾನವ ನಾಗರಿಕತೆಯಲ್ಲಿ, ನಾಗರಿಕತೆ ವಿಕಾಸದಲ್ಲಿ ನಾಯಿಗಳ ಪಾತ್ರ ಶ್ಲಾಘನೀಯವಾದದ್ದು. ಅವು ತಮಗೆಷ್ಟೇ ಕಷ್ಟವಿದ್ದರೂ ತಮ್ಮನ್ನು ಸಾಕಿಸಲುಹಿದ ಯಜಮಾನರಿಗೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸ್ಪಂದಿಸುತ್ತವೆ. ಶುನಕಗಳ ಮನಸ್ಸಿನಲ್ಲಿ ಮೋಸ, ವಂಚನೆ, ದ್ವೇಷ, ಅಸೂಯೆಗಳು ಕಂಡುಬರುವುದಿಲ್ಲ. ಅವುಗಳ ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ನಾಯಕನಿಷ್ಠೆಗಳು ಮೆಚ್ಚುವಂಥವು. ಅನ್ನ, ನೀರು ಹಾಕಿದ ಯಜಮಾನನ ಆಸ್ತಿ, ಜೀವನ ಕಾಪಾಡುವುದು ಅವುಗಳ ಮುಖ್ಯ ಧ್ಯೇಯವಗಿರುತ್ತದೆ. ಆದರೆ ಮನುಷ್ಯ ಜೀವಕ್ಕೆ ಶುನಕಗಳಲ್ಲಿರುವಷ್ಟು ನಿಯತ್ತು ಕಣ್ಮರೆಯಾಗುತ್ತಿರುವುದು ವಿಚಿತ್ರ ಸಂಗತಿ.

The dogs are extraordinary attentive and have an uncanny ability to predict what their owners will do, whether getting the dog a meal or preparing to on a walk.

ಶ್ವಾನಾವಲಂಭನಕರಿ’ ‘ನ್ಯಾಚುಲರಿಸ್ಟಿಕ್’ ಕಾದಂಬರಿ ಎಂದು ಗುರುತಿಸಲು ಯಾವುದೇ ಅಡ್ಡಿಯಿಲ್ಲ. ಲೇಖಕರು ಕಾದಂಬರಿಯಲ್ಲಿ ದೃಶ್ಯ, ಸನ್ನಿವೇಶ ಮತ್ತು ಪಾತ್ರಗಳನ್ನು ಓದುಗರ ಕಣ್ಣ ಮುಂದೆ ಕಟ್ಟುವಂತೆ, ವಿವರ ಸಮೃದ್ಧಿಯೊಡನೆ ಸೃಷ್ಟಿಸಿದ್ದಾರೆ. ಇಲ್ಲಿ ಸ್ವಭಾವ ವೈವಿಧ್ಯದ ನಿರೂಪಣೆ ಸೊಗಸಾಗಿದೆ; ಶುನಕಗಳು ಸದ್ದಿಲ್ಲದೆ ಅನುಭವಿಸುವ ದುರಂತಗಳು ನೈಜವಾಗಿ ಚಿತ್ರಿತವಾಗಿವೆ. ಈ ಕಾದಂಬರಿಯ ವಿಷಯದಲ್ಲಿ ಓದುಗರಲ್ಲಿ ಸಣ್ಣ ಭಿನ್ನಾಭಿಪ್ರಾಯವಿರಬಹುದು. ಅದಕ್ಕೆ ಮುಖ್ಯ ಕಾರಣವೆಂದರೆ, ಇದರ ಶೈಲಿಯಿಂದ ಇದನ್ನು ಓದುವುದು ಕಷ್ಟವಾಗುತ್ತದೆ.

‘ಶ್ವಾನಾವಲಂಭನಕರಿ ಕಾದಂಬರಿ ಓದುಗರಿಗೆ ಪ್ರಸ್ತುತ ಪಡಿಸುವ ಮತ್ತೊಂದು ಬಹು ಮುಖ್ಯ ಸಮಸ್ಯೆ ಎಂದರೆ ‘ವಲಸೆ’ ವಸ್ತುವನ್ನು ಲೇಖಕರು ನಿರ್ವಹಿಸುವ ವಿಧಾನ. ಹಾಗೆಯೇ ಸಮಕಾಲೀನ ಭಾರತೀಯ ರಾಜಕಾರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆಗಳನ್ನು ಅವರು ಕಂಡರಿಸುವ ರೀತಿ. ದೇಶದ ರಾಜಕಾರಣ ಈಗ ಹಲವು ಮುಖವಾಡಗಳನ್ನು ಧರಿಸಿದೆ. ಜನೋದ್ಧಾರ, ದೇಶೋದ್ಧಾರವೆಂದು ಹೇಳ ಹೊರಟ ರಾಜಕಾರಣಿಗಳು ಮಹಾನ್ ಮೋಸಗಾರರು ಮತ್ತು ವೇಷಗಾರರು ಎಂಬುದಕ್ಕೆ ಈ ಕಾದಂಬರಿಯೇ ಸಾಕ್ಷಿ.

ಪಕ್ಕೀರಪ್ಪನಿಗೆ ಮೂವರು ಹೆಂಡತಿಯರು. ಮಾಳವ್ವ, ಕಂದಾರೆವ್ವ ಮತ್ತು ಸುಂಕಲವ್ವ. ಪಕ್ಕೀರಪ್ಪ ಚಿಗ್ಯಾಟಿಯಲ್ಲಿ ಸಾವಿರಾರು ಕುರಿಗಳೊಂದಿಗೆ ಒಡನಾಡಿಯಾಗಿದ್ದವನು. ಚಿಗ್ಯಾಟಿ ಸರ್ವರಂಗದಲ್ಲಿಯೂ ಶೋಷಣೆಯ ಜೀವಂತ ರೂಪಕ ಗ್ರಾಮ. ಆಧುನೀಕರಣದ ಯಾವ ಸವಲತ್ತುಗಳನ್ನು ಪಡೆಯದ ಕುಗ್ರಾಮ. ಇಂತಹ ಗ್ರಾಮ ಈ ದೇಶದ ಅನೇಕ ಭಾಗಗಳಲ್ಲಿ ಇಂದಿಗೂ ನಮಗೆ ನೋಡಲು ಸಿಗುತ್ತವೆ. ಚಿಗ್ಯಾಟಿಯಲ್ಲಿ ಬಿದ್ದ ಭೀಕರ ಬರಗಾಲದಿಂದ ಪಕ್ಕೀರಪ್ಪನ ವಂಶಸ್ಥರು ಚಿಗ್ಯಾಟಿಯಲ್ಲಿದ್ದಂತಹ ಸ್ಥಿರ ಚಿರಾಸ್ತಿಯನ್ನು ಮಾರಿಕೊಂಡು ನಗರ ಸೇರುತ್ತಾರೆ.

ಈ ಕಾದಂಬರಿಯಲ್ಲಿ ತಲೆಮಾರುಗಳ ಸಂಘರ್ಷವಿದೆ. ನಗರದ ಸಂಪರ್ಕದಿAದ ದಿಕ್ಕು ತಪ್ಪುತ್ತಿರುವ ಗ್ರಾಮಗಳ ಅವನತಿ ಇದೆ. ಮನುಷ್ಯನ ದುರಾಸೆ ಮತ್ತು ಸಣ್ಣತನಗಳ ಚಿತ್ರಣವಿದೆ. ಬರಗಾಲದ ಪರಿಣಾಮದಿಂದ ಬಡ ಕುಟುಂಬಗಳು ಒಡೆದು ಚೂರಾಗುತ್ತಿರುವುದು, ಈ ಕುಟುಂಬಗಳಲ್ಲಿ ದುಡಿಯುವ ಶಕ್ತಿ ಇರುವ ಕುಟುಂಬದ ಸದಸ್ಯರು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿಹೋಗಿ ತಮ್ಮ ಹಿತವನ್ನು ತಾವು ನೋಡಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದ ಬಡ ಕುಟುಂಬಗಳ ದುರ್ಬಲ ಸದಸ್ಯರು ಮತ್ತಷ್ಟು ನಿಕೃಷ್ಟ ಸ್ಥಿತಿಗೆ ಇಳಿಯುತ್ತಾರೆ. ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಪಕ್ಕೀರಪ್ಪ ಮತ್ತು ಭ್ರಮಜ್ಜರ ಕುಟುಂಬದ ಸ್ಥಿತಿ ಓದುಗರ ಹೃದಯವನ್ನು ಕಲಕುವಂತಿದೆ.

ಅರ್ಜುನ ಭೀಮನ ತಂದೆ. ಕಕ್ಕುಪಿ ಅರ್ಜುನನ ಯಜಮಾನ. ಕಕ್ಕುಪಿ ಅತೀ ಹೆಚ್ಚು ಹೆಣ್ಣು ನಾಯಿಗಳನ್ನು ಸಾಕುತ್ತಾನೆ. ಭೀಮನ ತಾಯಿಯ ಆಶ್ರಯದಾತ ಕಗ್ಗಲ್ಲಿನ ಡೋಮ. ಅರ್ಜುನನಿಂದ ಚೌಡಿ ಬಸುರಿಯಾಗುತ್ತಾಳೆ. ಭೀಮ ಕಗ್ಗಲ್ಲಿನಲ್ಲಿ ಜನಿಸಿ, ಚಿಗ್ಯಾಟಿಯ ಪಕ್ಕೀರಪ್ಪನು ಸಾಂಬಯ್ಯ ಮಠಪತಿಯಿಂದ ಇದನ್ನು ಖರೀದಿಸುತ್ತಾನೆ. ಅವನು ಇದಕ್ಕೆ ಭೀಮನೆಂದು ನಾಮಕರಣ ಮಾಡುತ್ತಾನೆ. ಭೀಮ ಉಳಿದೆಲ್ಲ ಶುನಕಗಳಿಗಿಂತ ಪಂಚೇಂದ್ರಿಯಗಳು ಬಹಳ ಚುರುಕಾಗಿದ್ದವು. ಅಲ್ಲದೆ ಅದು ಶ್ವಾನತನಕ್ಕೆ ಕಳಸವಿರಿಸಿದಂತೆ ಅದು ಬಟ್ಲರ್ ರೀತಿಯಲ್ಲಿ ಮನುಷ್ಯಾರಾಡುವ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಪ್ರತಿಭೆ ಅದಕ್ಕಿದೆ. ದಾರುಣವಾದ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ತನ್ನ ಸಾಹಸ ಮತ್ತು ಬುದ್ಧಿಗೆ ಆಕಸ್ಮಿಕವಾಗಿ ಒದಗಿ ಬಂದ ಅವಕಾಶಗಳ ಮೂಲಕ ಭೀಮ ಪಡೆದ ಯಶಸ್ಸು ಹೆಚ್ಚಾಗಿದೆ. ಭೀಮ ಪಕ್ಕೀರಪ್ಪನ ಜೀವ ರಕ್ಷಿಸುವುದು, ಕಳಿಂಗೋದ್ಯಾನ ಶುನಕ ಸಂಘದ ಅನಭಿಷಕ್ತ ಸಾಮ್ರಾಟನಾಗುವುದು, ಕಚಾರೆ ಪಕ್ಷದ ಧುರೀಣರಾದ ಪರಮೇಶಪ್ಪ ದುಂದುವೆಚ್‌ರ ಅಂಗರಕ್ಷಕನಾಗುವುದು,ದುಂದುವೆಚ್‌ರ ಮನೆ ಸೇರಿ ಟೈಗರ್ ಎಂದು ನಾಮಕರಣ ಪಡೆಯುವುದು, ಪಚಾರೆ ಪಕ್ಷದ ನಾಯಕ,ಮುಖ್ಯಮಂತ್ರಿಯಾದ ಚಿದಾನಂದ ಚರಕಲಿಯವರ ಬಲಗಾಲ ಮೀನಖಂಡವನ್ನು ಬಲವಾಗಿ ಕಚ್ಚುವುದು, ತನ್ನ ಒಡೆಯ ದುಂದುವೆಚ್‌ನ ಪ್ರಾಣ ಕಾಪಾಡುವುದು, ಭೀಮ ತನ್ನ ಪ್ರಾಮಾಣಿಕತೆ, ಬುದ್ಧಿವಂತಿಕೆ ಮತ್ತು ಸಾಹಸಗಳಿಂದ ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಸಮರ್ಥವಾಗಿ ಉತ್ತರಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ನಗರ ಪ್ರದೇಶದ ಶ್ರೀಮಂತರ ಮನೆಯಲ್ಲಿ ಮೆರೆದಾಡುವ ಭೀಮ ಓದುಗರ ಮೆಚ್ಚುಗೆಗೆ ಅರ್ಹವಾಗುತ್ತದೆ.

ಚೆನ್ನಿ ಭೀಮನೆಂಬ ಶುನಕನನ್ನು ಪ್ರೀತಿಸುತ್ತದೆ. ಆದರೆ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳುವ ಧೈರ್ಯ ಅದರಲ್ಲಿರಲಿಲ್ಲ. ತುಂಬಾ ಚೈತನ್ಯಶೀಲವಾದ, ಹೊರ ಆಕರ್ಷಣೆಯ, ಲವಲವಿಕೆಯ, ನಯ, ನಾಜೂಕ ಗುಣದವಳು ಚೆನ್ನಿ. ಅದು ಸೂಕ್ಷ್ಮ ಸಂವೇದನಾಶೀಲೆ ಮತ್ತು ಅಂತಃಕರಣೆವುಳ್ಳದ್ದು. ಅದು ಭ್ರಮಜ್ಜನ ಆರೈಕೆ ಮಾಡುತ್ತದೆ. ಚೆನ್ನಿ ಭೀಮನ ನೆರಳಲ್ಲಿ ನೆರಳಾಗಿ ಅವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬರುತ್ತದೆ. ಅದು ತನ್ನ ಪ್ರಿಯತಮ ಭೀಮನ ಏಳ್ಗೆಯನ್ನು ಕಂಡು ಖುಷಿಪಡುತ್ತದೆ.

ಗಂಡು ಶುನಕ ಮತ್ತು ಹೆಣ್ಣು ಶುನಕಗಳ ನಡುವಿನ ಪ್ರೇಮ, ಕಾಮದ ದಟ್ಟ ಸನ್ನಿವೇಶಗಳು ಈ ಕಾದಂಬರಿಯಲ್ಲಿ ಹಸಿ ಹಸಿಯಾಗಿ ಮೂಡಿಬಂದಿವೆ. ಬೀದಿನಾಯಿಗಳಾದ ಭೀಮ ಮತ್ತು ಚೆನ್ನಿಯರಿಗೆ ಬಡೆಲಡಕ ನಗರದಲ್ಲಿ ಏನೆಲ್ಲ ರಾಜೋಪಚಾರ ದೊರಕುತ್ತದೆ. ಶುನಕಗಳು ಯಾವುದೇ ಸುಶಿಕ್ಷಿತ ಮನುಷ್ಯರಿಗಿಂತ ಕಡಿಮೆ ಇಲ್ಲ. ಮನುಷ್ಯ ತನ್ನ ಬದುಕಿನಲ್ಲಿ ಅವುಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಇಡೀ ಕಾದಂಬರಿ ಓದಿದ ನಂತರ ಮನುಷ್ಯನಿಗಿಂತ ನಾಯಿಗಳೆಷ್ಟೋ ವಾಸಿ ಎಂಬ ಭಾವನೆ ಓದುಗರಲ್ಲಿ ಮೂಡುತ್ತದೆ.

ಪರಮೇಶಪ್ಪ ದುಂದುವೆಚ್ ‘ಪಚಾರೆ’ ಪಕ್ಷದ ಪ್ರಮುಖ ರಾಜಕಾರಣಿ. ದುಂದುವೆಚ್ ತಮ್ಮ ಮಗನಿಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೆ ಮಂತ್ರಿಸ್ಥಾನಕ್ಕೂ ಮತ್ತು ಆಡಳಿತಾರೂಢ ಪಚಾರೆ ಪಕ್ಷಕ್ಕೂ ರಾಜಿನಾಮೆ ನೀಡಿ ‘ಕಚಾರೆ’ ಪಕ್ಷಕ್ಕೆ ಸೇರಿ ವಿರೋಧ ಪಕ್ಷದ ನಾಯಕರಾಗುತ್ತಾರೆ. ತಮಗೆ ಹೈಕಮಾಂಡ್ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾರೆ. ದುಂದುವೆಚ್ ವಿರೋಧ ಪಕ್ಷದ ನಾಯಕರಾಗಿ ತಮ್ಮ ಹರಿತ ಟೀಕೆಗಳಿಂದ ಮುಖ್ಯಮಂತ್ರಿಗಳ ಹಾಗೂ ಅವರ ಸಹದ್ಯೋಗಿಗಳ ಮುಖದ ಮೇಲೆ ಬೆವರಿಳಿಸುತ್ತಿದ್ದರು. ಇವರ ಸಾಮರ್ಥ್ಯವನ್ನು ಗಮನಿಸಿದ ಪಕ್ಷದ ಹೈಕಮಾಂಡ್ ದುಂದುವೆಚ್‌ರವರೆ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿರುತ್ತಾರೆ. ಅತಿಯಾದ ರಾಜಕೀಯ ಚಟುವಟಿಕೆಗಳಿಂದ ದುಂದುವೆಚ್‌ರಿಗೆ ತಮ್ಮ ಕುಟುಂಬದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಸದಾ ರಾಜಕಾರಣದಲ್ಲಿಯೇ ಕಾರ್ಯನಿರತರಾಗಿರುತ್ತಾರೆ.

ಪರಮೇಶಪ್ಪ ದುಂದುವೆಚ್‌ರ ನಿವಾಸ ಬಡೆಲಡಕ ನಗರದಲ್ಲಿನ ದುಗ್ಗಾಣಿ ಬಡಾವಣೆಯಲ್ಲಿತ್ತು. ನೋಡುಗರಿಗೆ ಆ ಮನೆ ಜಯಪುರದ ಅರಮನೆಯಂತೆ ಕಾಣುವುದು. ಆ ಮನೆಗೆ ಯಾವಾಗಲೂ ಬಿಗಿ ಭದ್ರತೆ ಇತ್ತು. ಉತ್ತರ ಭಾರತದಿಂದ ಬಂದಿದ್ದ ಕಟ್ಟುಮಸ್ತಾದ ಯುವಕರು ಪಾಳೆ ಪ್ರಕಾರ ಆ ಮನೆಯನ್ನು ಕಾವಲಿ ಮಾಡುತ್ತಿದ್ದರು. ದುಗ್ಗಾಣಿ ರಾಜ್ಯದ ರಾಜಕಾರಣದ ಚಟುವಟಿಕೆಗಳ ಕೇಂದ್ರವಾಗುತ್ತದೆ. ಇದೆಲ್ಲವನ್ನು ಬಹು ಸೂಕ್ಷ್ಮವಾಗಿ ಗಮನಿಸಿದರೆ ರಾಜಕಾರಣ ತನ್ನ ಮೈ ಮನಸ್ಸುಗಳಲ್ಲಿ ‘ಅಸೂಯೆ’ಯನ್ನು ತುಂಬಿಕೊಂಡಿರುವುದು ಕಂಡುಬರುತ್ತದೆ.

ಡಾ. ಕಲ್ಯಾಣರಾಮನ್ ದುಂದುವೆಚ್‌ರ ಏಕಮಾತ್ರ ಮಗ. ಕಲ್ಯಾಣರಾಮ್ ತನ್ನ ತಂದೆಯ ಆಸೆಯಂತೆ ‘ಪಚಾರೆ’ ಪಕ್ಷದ ಧುರೀಣರು ಹಾಗೂ ಮುಖ್ಯಮಂತ್ರಿಯಾದ ಚಿದಾನಂದ ಚರಕಲಿಯವರ ಐದನೆಯ ಮಗಳಾದ ಶಾಂಭವಿಯನ್ನು ಮದುವೆ ಮಾಡಿಕೊಳ್ಳುತ್ತಾನೆ. ಆದರೆ ಅವಳು ಎರಡು ಮಕ್ಕಳ ತಾಯಿಯಾದ ನಂತರ ಹೇಳದೆ ಕೇಳದೆ ತಿರುಚಾನಪಳ್ಳಿಯಲ್ಲಿನ ಜುಮ್ಮಾ ಮಸೀದಿಯಲ್ಲಿ ಮುಸ್ಲಿಮ್ ಧರ್ಮವಾಲಂಭಿಯಾಗಿ ‘ನೂರುಜಹಾನ್’ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು, ಆಮೇಲೆ ಹಬೀಬುಲ್ಲಾ ಎಂಬ ತರುಣನನ್ನು ‘ನಿಖಾ’ ಮಾಡಿಕೊಂಡು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನೆಲೆಸುತ್ತಾಳೆ. ಆದರೆ ಈ ಅವಮಾನವನ್ನು ಅರಗಿಸಿಕೊಳ್ಳಲಾಗದೆ ಡಾ. ಕಲ್ಯಾಣರಾಮನ್ ತನ್ನಿಬ್ಬರು ಮಕ್ಕಳನ್ನು ತಂದೆಯ ಹತ್ತಿರ ಬಿಟ್ಟು ಅಮೇರಿಕಾದ ಕ್ಯಾಲಿಫೋರ್ನಿಯಾಕ್ಕೆ ಹೋಗಿ ನೆಲೆಸುತ್ತಾನೆ.

ಬಡೆಲಡಕು ನಗರ ಈ ದೇಶದ ಮಹಾನ್ ನಗರಗಳನ್ನು ಹೋಲುತ್ತದೆ. ಅದು ತಳಕು ಬಳಕಿನ ನಗರ. ಅಲ್ಲಿನ ಫೇರ್ ಆಂಡ ಲವ್ಲಿ ಏರಿಯಾ , ಚಿತ್ರಮಂದಿರ, ಹೊಟೆಲ್ ಮತ್ತು ಕಳಿಂಗ ಉದ್ಯಾನಗಳು ಈ ದೇಶದ ಮಹಾನ್ ನಗರಗಳನ್ನು ನೆನಪಿಸುತ್ತವೆ. ‘ಕಚಾರೆ’ ಪಕ್ಷದ ನಾಯಕ ಮತ್ತು ‘ಪಚಾರೆ’ ಪಕ್ಷದ ನಾಯಕರ ನಡುವಿನ ಜಿದ್ದಜಿದ್ದಿನಿಂದಾಗಿ ರಾಜ್ಯದ ರಾಜಕೀಯ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುತ್ತದೆ. ‘ಕಚಾರೆ’ ಪಕ್ಷ ಮತ್ತು ‘ಪಚಾರೆ’ ಪಕ್ಷಗಳ ನಡುವೆ ದೊಡ್ಡ ಹೊಡದಾಟವೇ ನಡೆಯುತ್ತದೆ. ಮುಖ್ಯಮಂತ್ರಿ ಚಿದಾನಂದ ಚರಕಲಿ ಆಡಳಿತ ಶಕ್ತಿಯ ಪ್ರತೀಕವಾಗಿ ಹಿಂಸೆ, ಅನೈತಿಕ ಮಾರ್ಗಗಳ ಪ್ರತೀಕವಾಗಿ, ದರ್ಪಿಷ್ಟರಾಗಿ ಈ ಕಾದಂಬರಿಯಲ್ಲಿ ಮೂಡಿಬಂದಿದ್ದಾರೆ.

ಹುಲಿಕುಂಟಾಚಾರ್ಯ, ರುಕ್ಮಿಣಿ, ಸಾಹಿರಾಭಾನು, ಕೋದಂಡರಾಮ, ರಾಧಾಬಾಯಿ, ಬೋರಯ್ಯ, ಮಂಜಣ್ಣ, ಮಾಳವ್ವ, ಕಂದಾರೆವ್ವ, ಸುಂಕಲವ್ವ, ಭಕ್ತವತ್ಸಲಂ, ಚಂದ್ರಕಲಾ,ಮುಂಗಾರು, ಹಿಂಗಾರು –ಮುಂತಾದ ಪಾತ್ರಗಳನ್ನು ಸೃಷ್ಟಿಸಿದ ಕಾದಂಬರಿಕಾರರು ಮನುಷ್ಯ ಸ್ವಭಾವದಲ್ಲಿ, ಅದರ ವೈವಿಧ್ಯ-ವೈಚಿತ್ಯ್ರಗಳಲ್ಲಿ ಹೆಚ್ಚು ಆಸಕ್ತಿ ಇಟ್ಟಂತೆ ಕಂಡುಬರುತ್ತದೆ. ಕುಂವೀಯವರು ಕ್ರಿಯೆ ನಡೆಯುವ ಆವರಣವನ್ನು ಜೀವಂತವಾಗಿ ಸೃಷ್ಟಿಸಿಬಿಡುತ್ತಾರೆ ಎನ್ನುವುದಕ್ಕೆ ಈ ಕಾದಂಬರಿಯಲ್ಲಿ ಅನೇಕ ನಿದರ್ಶನಗಳು ಸ್ಪಷ್ಟವಾಗಿ ಕಾಣಸಿಗುತ್ತವೆ. ಮನುಷ್ಯ ಪಾತ್ರಗಳೊಡನೆ ಅನೇಕ ಪಾತ್ರಗಳಾಗಿ ಕಾದಂಬರಿಯಲ್ಲಿ ಅರ್ಜುನ, ಚುಚೀಲ, ಮಾರೀಚ, ಸುಂಕಲಿ, ಭದ್ರ, ರಾಮ, ವೃಕೋದರ, ಝಂಝಾನಿಲ, ದೇವದಾಸ, ಕುಂಭಕರ್ಣ, ಕೊಂಗಾರಿ, ಜೇಮ್ಸ್ಬಾಂಡ್, ಲ್ಯಾಬ್ರಡಾರ್, ಅಮೆಜಾನ್, ಸರೋಜ, ಗೋಪಿ, ಮಲ್ಲಿ, ಕಚ್ಚ- ಮೊದಲಾದ ಶುನಕಗಳು ಕಂಡುಬರುತ್ತವೆ.

ಗ್ರಾಮೀಣ ಭಾಷೆಯ ಬಳಕೆ, ಆ ಭಾಷೆಯಲ್ಲಿಯೇ ನಡೆಯುವ ಸಂಭಾಷಣೆ ಈ ಕಾದಂಬರಿಗೆ ವಿಶೇಷ ಮೆರಗು ತಂದಿದೆ. ಆದರೆ ಕಾದಂಬರಿಯ ಬಂಧದಲ್ಲಿ ಬಿಗುವಿಲ್ಲ. ಸರಳವಾಗಿ ಓದಿಸಿಕೊಂಡು ಹೋಗುವ ವಸ್ತುವಿರುವ ಕಾರಣಕ್ಕಾಗಿ ಅದು ನಿರಂತರ ಕುತೂಹಲ ಮೂಡಿಸುತ್ತದೆ. ಕಾದಂಬರಿಯ ಭಾಷೆ ವಸ್ತುವಿಗೆ ಪೂರಕವಾಗಿ ಬಂದಿದ್ದು ಮನುಷ್ಯ-ಶುನಕಗಳ ಜೀವನ ವಿಧಾನಕ್ಕೆ ಅದು ಸಹಜವಾದ ಅಭಿವ್ಯಕ್ತಿಯೊದಗಿಸಿದೆ. ಈ ಕಾದಂಬರಿಯ ಶೈಲಿ ಕೂಡ ಪ್ರಮುಖವಾಗಿದೆ. ಕುಂವೀ ನೇರ ಕಥನದ ಮಾರ್ಗವನ್ನು ಬಿಟ್ಟು ಪಾತ್ರಗಳ ಒಳಗನ್ನು ಪಾರದರ್ಶಕಗೊಳಿಸಿ, ಆಂಗಿಕ ಚಲನಗಳಿಂದ ವ್ಯಾಖ್ಯಾನಿಸುತ್ತಾ ನಿರೂಪಿಸುವ ವಿಧಾನವನ್ನು ಬಳಸಿದ್ದು ಗಮನಾರ್ಹವಾಗಿದೆ.

ಕುಂವೀಯವರ ‘ಶ್ವಾನಾವಲಂಭನಕರಿ’ ತನ್ನ ಹೊಸ ತಂತ್ರ, ಸಹಜ ಭಾಷೆ, ಲವಲವಿಕೆಯ ನಿರೂಪಣೆ , ಸ್ವಾರಸ್ಯಕರ ಸಂಭಾಷಣೆ, ಅಲ್ಲಲ್ಲಿ ಕಾಣುವ ವ್ಯಂಗ್ಯ ಮತ್ತು ವಿಡಂಬನೆಗಳಿಂದ ಉತ್ತಮ ಕಾದಂಬರಿ ಎನ್ನಿಸುತ್ತದೆ. ಆದರೆ ಕೆಲವು ಕಡೆ ಅನವಶ್ಯಕ ವರ್ಣನೆ, ಅತಿಯಾದ ಪುನರುಕ್ತಿಗಳು ಕಾದಂಬರಿಯಲ್ಲಿ ಕೃತಕ ವಾತಾವರಣವನ್ನು ನಿರ್ಮಿಸಿವೆ. ಕಾದಂಬರಿಯ ಮೊದಲನೆಯ ಅಧ್ಯಾಯ, ಎರಡನೆಯ ಅಧ್ಯಾಯ ಮತ್ತು ನಾಲ್ಕನೆಯ ಆಧ್ಯಾಯಗಳು ಗಂಭೀರವಾದ ಹಾಗೂ ಮನಮುಟ್ಟುವ ಪ್ರಸಂಗಗಳಿಂದ ಓದುಗರ ಮನಸ್ಸನ್ನು ಆಕರ್ಷಿಸುತ್ತವೆ. ಆದರೆ ಕಾದಂಬರಿಯ ಮೂರನೆಯ ಅಧ್ಯಾಯ ಮಾತ್ರ ಓದುಗರಿಗೆ ನಿರಾಸೆ ಹುಟ್ಟಿಸುತ್ತದೆ. ಕಥನವೇಗದ ಮೂಲಕ ಆಗಾಗ ಸುಂದರ ಸನ್ನಿವೇಶಗಳು ಹರಹಿಕೊಂಡು ಅರಳುವುದಿಲ್ಲ. ಹಲವು ವ್ಯಕ್ತಿಗಳ ಮನೋಭಾವದ ಸೂಕ್ಷ್ಮ ಪರಿಗಳು, ತಾಕಲಾಟ, ತೂಗಾಟಗಳು ಕಾವುಗೊಂಡು ಬಿಡಿಬಿಡಿಯಾಗಿ ತೋರುವುದಿಲ್ಲ. ಮೂರನೆಯ ಅಧ್ಯಾಯದವರೆಗೂ ಅದು ತೆವಳುತ್ತಲೇ ಸಾಗಿದೆ. ಗಂಭೀರವಾಗಿ ಚಿತ್ರಿತವಾಗಬೇಕಿದ್ದ ಪ್ರಸಂಗಗಳು ಕೆಲವು ಕಡೆ ತೀರ ಸಪ್ಪೆಯಾಗಿವೆ. ಪರಿಸರ, ವಸ್ತು, ಶೈಲಿ,ತಂತ್ರ, ಭಾಷೆ,ವ್ಯಂಗ್ಯ, ವಿಡಂಬನೆ ಮತ್ತು ಪಾತ್ರಗಳ ಹೊಚ್ಚ ಹೊಸತನದ ವಿಧಾನಗಳಿಂದ ‘ಶ್ವಾನಾವಲಂಭನಕರಿ’ ಕಾದಂಬರಿ ಕೆಲವು ದೋಷಗಳ ನಡುವೆಯೂ ಸಹೃದಯ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

- ಸಿ.ಎಸ್.ಭೀಮರಾಯ(ಸಿಎಸ್ಬಿ)
ಸಿ.ಎಸ್.ಭೀಮರಾಯ (ಸಿಎಸ್ಬಿ) ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...