ಸ್ತ್ರೀ ಅಸ್ಮಿತೆಯ ಹುಡುಕಾಟವಿರುವ ‘ಒಲವ ಹಾಯಿದೋಣಿ’


ಗಜಲುಗಳ ಉದ್ದಕ್ಕೂ ಬಳಕೆಯಾದ ಸಹಜ ಸರಳ ಛಂದೋಲಯ,ಪ್ರತಿಮೆ,ರೂಪಕ,ನೆಲದ ಭಾಷೆಯ ಬನಿ,ಕಲೆಗಾರಿಕೆಯ ವಿಷಯಗಳಲ್ಲಿ ಕವಿ ನಿರಾಶೆಯನ್ನು ಮೂಡಿಸುವುದಿಲ್ಲ ಎನ್ನುತ್ತಾರೆ ಲೇಖಕ ದಸ್ತಗೀರ್ ದಿನ್ನಿ. ಅವರು ಪ್ರಭಾವತಿ ಎಸ್. ದೇಸಾಯಿಯವರ ಒಲವ ಹಾಯಿದೋಣಿ ಸಂಕಲನದ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...

ಒಲವ ಹಾಯಿ ದೋಣಿ ' ಪ್ರಭಾವತಿ ದೇಸಾಯಿಯವರ ಐದನೆಯ ಗಜಲ್ ಸಂಕಲನ. ಇಲ್ಲಿನ ಎಪ್ಪತ್ನಾಲ್ಕು ಗಜಲುಗಳು ಪ್ರಧಾನವಾಗಿ ವಿರಹ ,ಯಾತನೆ ,ವಿಪ್ರಲಂಭ, ತುಟಿಯ ಬಿಸುಪು, ಪ್ರೀತಿ, ಖುಷಿ, ಲಜ್ಜೆ,ಕನಸು, ಶೃಂಗಾರದ ವಿವಿಧ ವಿನ್ಯಾಸಗಳನ್ನೊಳಗೊಂಡಿವೆ.ಹಳೆಯ ನೆನಪುಗಳ ಮಾಧುರ್ಯ, ಮೆರವಣಿಗೆ, ಭಗ್ನ ಹೃದಯದ ಚಡಪಡಿಕೆಗಳಿವೆ. ಇವುಗಳೊಂದಿಗೆ ನಿತ್ಯದ ಬಾಳಿನ ದರ್ಶನ, ಅಂತರಂಗದ ಹೊಯ್ದಾಟ, ಸಾಮಾಜಿಕ ವೈರುಧ್ಯಗಳಿವೆ. ಸ್ತ್ರೀ ಅಸ್ಮಿತೆಯ ಹುಡುಕಾಟವಿದೆ. ಸುತ್ತಲಿನ ಆಗು ಹೋಗುಗಳಿಗೂ ತಣ್ಣಗೆ ಮಿಡಿವ ದೇಸಾಯಿಯವರು ಗಜಲುಗಳ ಮೂಲಕ ಮನುಷ್ಯ ಪ್ರೇಮವನ್ನು ಎತ್ತಿ ಹಿಡಿದಿದ್ದಾರೆ.
    
ಹೃದಯ ಕಮಲವು ಬಾಡಿದೆ ಇಬ್ಬನಿ ಕಳಿಸು.    
ಮನ ಕಳವಳಗೊಂಡಿದೆ ಮಧುರ ದನಿ ಕಳಿಸು 
ಅವನ ಸಂಗವಿಲ್ಲದೆ ಬೆಳದಿಂಗಳು ಬಿಸಿಯಾಗುತಿದೆ.
ಎಲ್ಲಿಯೋ ಮಳೆಯಾಗಿ ಇಳೆಯ ಉಸಿರ ಕಂಪು ಬರುತಿದೆ 
ಬದುಕು ಕಣ್ಣೀರಲಿ ಕರಗುತಿದೆ ಒಲವನ್ನಾದರೂ ನೀಡು.
ತನುವು ಬಳಲಿ ಕಸುವು ಕುಸಿಯುತಿದೆ ಬಲವನ್ನಾದರೂ ನೀಡು 

ಎನ್ನುವಂತಹ ಧ್ವನಿಪೂರ್ಣವಾದ ಕೆಲವು ಶೇರ್ ಗಳು ತಾಕುವಂತಿವೆ.ಅಕ್ಕಮಹಾದೇವಿ, ಗಾಂಧೀಜಿ ಹಾಗು ಸಾಮಾಜಿಕನಿಷ್ಟ ಈ ಬಗೆಯ ಗಜಲುಗಳಲ್ಲಿ ವಾಚ್ಯತೆ  ಇಣುಕಿದೆ.ದೇಸಾಯಿಯವರು ಸ್ವಗತದ  ದನಿಯೊಂದಿಗೆ  ಲೋಕದ ಜತೆ ಸಂವಾದ ನಡೆಸಲು ಯತ್ನಿಸಿದ ಗಜಲುಗಳು ಹೊಸ ಆಯಾಮವನ್ನು ಪಡೆದುಕೊಂಡಿವೆ.ಏಕತಾನತೆ,ಸಂಕೀರ್ಣತೆಯಿಂದ ಮೈ ಮುರಿದು ತಪ್ಪಿಸಿಕೊಂಡ ಇಲ್ಲಿನ ರಚನೆಗಳ ಕಲ್ಪನೆ,ಕವಿಯ ಮನೋಧರ್ಮ ,ಆಳದ ವಿಷಾದ,ನಿಟ್ಟುಸಿರು ,ಮಾನವೀಯ ಆರ್ದ್ರತೆಯ ಗಜಲುಗಳ ಈ  ಓದು ನನಗೆ ನಿಜಕ್ಕು ಸಂತಸಕ್ಕೆ ಈಡು ಮಾಡಿದೆ.

ಗಜಲುಗಳ ಉದ್ದಕ್ಕೂ ಬಳಕೆಯಾದ ಸಹಜ ಸರಳ ಛಂದೋಲಯ,ಪ್ರತಿಮೆ,ರೂಪಕ,ನೆಲದ ಭಾಷೆಯ ಬನಿ,ಕಲೆಗಾರಿಕೆಯ ವಿಷಯಗಳಲ್ಲಿ ಕವಿ ನಿರಾಶೆಯನ್ನು ಮೂಡಿಸುವುದಿಲ್ಲ.ಪ್ರಭಾವತಿ ದೇಸಾಯಿಯವರು ಈ ಇಳಿ ವಯಸ್ಸಿನಲ್ಲೂ ಕ್ರಿಯಾಶೀಲವಾಗಿ ಬರೆವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಗಿರುವುದು ಅಭಿಮಾನದ ಸಂಗತಿ.ಅವರ ಉತ್ಸಾಹದ ಲೇಖನಿಯಿಂದ  ಇನ್ನಷ್ಟು  ಸುಮಧುರ,ಹೊಳಪಿನ, ಹೊಸ ರುಚಿಯ,ಮನಸ್ಸನ್ನು ತುಂಬುವ,ಉತ್ಕಟವಾಗಿ ಕಾಡುವ,ಜೀವಂತವಾಗಿ ಮಿಡಿಯುವ  ಗಜಲ್ ಸಂಕಲನಗಳು ಪ್ರಕಟವಾಗಲಿ ಎಂದು ಪ್ರೀತಿಯಿಂದ ಆಶಿಸುವೆ.

- ದಸ್ತಗೀರ್ ದಿನ್ನಿ

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...