ಟ್ವೆಂಟಿ ಟ್ವೆಂಟಿ ಯುಗಕ್ಕೆ ಈ ವ್ಯಾಖ್ಯಾನ ಸಂಕಲನ ಹೆಚ್ಚು ಸೂಕ್ತ!


ಥಟ್ಟನೆ ಓದಿ ಹೆಚ್ಚಿನದನ್ನು ತಿಳಿದುಕೊಳ್ಳ ಬೇಕೆನ್ನುವವರ ಸಂಖ್ಯೆಯೂ ತುಂಬಾ ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿದೆ. ಏಕೆಂದರೆ ಇದು ಏನಿದ್ದರೂ ಟ್ವೆಂಟಿ ಟ್ವೆಂಟಿ ಯುಗವಲ್ಲವೇ..? ಇವೆಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಚಿಗಳ್ಳಿ ಅವರು " ವ್ಯಾಖ್ಯಾನಗಳ " ಮೂಲಕ ನಮ್ಮೆಲ್ಲರ ಗಮನ ಸೆಳೆದದ್ದು ಸಾಂದರ್ಭಿಕ ವಾಗಿದೆ. ಎನ್ನುತ್ತಾರೆ ಸಾಹಿತಿ ಗುರುನಾಥ ಶಿ. ಸುತಾರ. ಅವರು ಲೇಖಕ ಶರೀಫ ಗಂ ಚಿಗಳ್ಳಿ ಅವರು ಬರೆದ 'ಚಿಗಳ್ಳಿಯವರ ಕ್ರಾಂತಿ ಕಿಡಿ ನುಡಿಗಳು' ವ್ಯಾಖ್ಯಾನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ....

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ
ವೆಲ್ಲರಿಗಿಲ್ಲ ಸರ್ವಜ್ಞ.

ಸರ್ವಜ್ಞ ಎಂಬುವವ ಗರ್ವದಿಂದ ಆದವನಲ್ಲ. ಎಲ್ಲರಿಂದ ಒಂದೊಂದು ನುಡಿ ಅರಸುತ್ತಾ , ಆಲಿಸುತ್ತಾ, ಜ್ಞಾನದ ಮೇರು ಪರ್ವತ ಆದವರು. ಮನುಷ್ಯ ತನ್ನ ಬದುಕಿನಲ್ಲಿ ಆಸ್ತಿ , ಅಂತಸ್ತು , ಅಧಿಕಾರ ಏನೇ ಪಡೆಯಬಹುದು. ಆದರೆ ಸಾಹಿತ್ಯ ಎಂಬುದು ಹಾಗಲ್ಲ. ಅದು ಕೆಲವರನ್ನು ಮಾತ್ರ ಅರಸಿ ಬರುತ್ತದೆ ಎಂಬುದು ಸರ್ವಜ್ಞ ಕವಿಯ ಮನದಾಳದ ಮಾತು. ಹಾಗೇ ನಾನು ಇಲ್ಲಿ ಚರ್ಚಿಸಲು ಹೊರಟಿದ್ದು ಲೇಖಕ ಶರೀಫ ಗಂಗಪ್ಪ ಚಿಗಳ್ಳಿ ಅವರ ಕುರಿತು. ವಿಶೇಷವಾಗಿ ಸಾಹಿತ್ಯವು ಅನುಭವದ ಮೂಸೆಯಿಂದ ಅಭಿವ್ಯಕ್ತಗೊಳ್ಳುತ್ತದೆ. ಓದಿನಲ್ಲಿ ಆಸಕ್ತಿ , ಬರೆಯಬೇಕೆಂಬ ತುಡಿತ ಮನಸ್ಸಿನಲ್ಲಿ ಹೊಳೆದಾಗ ಸಾಹಿತ್ಯ ಸೃಷ್ಟಿಯಾಗಬಲ್ಲದು ಎಂಬುದಕ್ಕೆ ಶರೀಫ ಅವರು ಇಲ್ಲಿ ಮಾದರಿಯಾಗಿ ಗಮನ ಸೆಳೆಯುತ್ತಾರೆ. ಉನ್ನತ ಶಿಕ್ಷಣ ಸಾಧನೆಯೊಂದಿಗೆ ಅವರು ಕಾಲೇಜು ಉಪನ್ಯಾಸಕ ವೃತ್ತಿ ಜೀವನ ಆರಂಭಿಸಬಹುದಿತ್ತು. ಅಥವಾ ಯಾವುದಾದರೂ ಉನ್ನತ ಹುದ್ದೆ ಪಡೆದುಕೊಂಡು ಬದುಕನ್ನು ತುಂಬಾ ಸಿರಿವಂತಿಕೆಯ ಪಥದಲ್ಲಿ ಸಾಗಿಸಬಹುದಿತ್ತು , ಎಂದು ನಾವು ಏನೇನೋ ಕಥೆ ಕಟ್ಟಬಹುದು. ಆದರೆ ಆ ಎಲ್ಲ ಅರ್ಹತೆಗಳಿದ್ದರೂ ಅಂಥ ಉನ್ನತ ಹುದ್ದೆ ಸಿಕ್ಕಿಲ್ಲ ಎಂಬ ನೋವು ಅವರಲ್ಲಿಲ್ಲ. ಇದ್ದುದರಲ್ಲಿಯೇ ಖುಷಿಯಾಗಿ ಬದುಕಬಹುದು ಎಂಬ ದೃಢ ನಿಲುವು, ಅವರನ್ನು ಒಬ್ಬ ಕ್ರಿಯಾಶೀಲ ಹಾಗೂ ಪ್ರತಿಭಾನ್ವಿತ ಕ್ರಾಂತಿ ಸಾಹಿತಿಯನ್ನಾಗಿ ರೂಪಿಸುವಲ್ಲಿ ಕಾರಣವಾಗಿದೆ ಎನ್ನಬಹುದು.

ಎಂ ಎ . ಬಿ.ಇಡಿ ಪದವಿಧರರಾಗಿರುವ ಚಿಗಳ್ಳಿ ಅವರು ಪ್ರಸ್ತುತ ಈಗ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಗ್ರಾಮ ಪಂಚಾಯತದಲ್ಲಿ ಒಬ್ಬ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರೊಂದಿಗೆ ಬಹುಮುಖ ವ್ಯಕ್ತಿತ್ವದ ಮೂಲಕ ಸೃಜನಶೀಲ ವ್ಯಕ್ತಿಗಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಗೈ ಯುತ್ತಿರುವುದು ಮೆಚ್ಚುವ ವಿಷಯವಾಗಿದೆ. ಸಮಾಜ ಸೇವೆ, ಸಾಹಿತ್ಯ ಸಂಶೋಧನೆ, ಮೂಲಕ ವಿಚಾರ ದೀಪ್ತಿ, ಅನ್ನದ ಬಟ್ಟಲು, ಮಣ್ಣಿಗಾಗಿ ಮಡಿದವರು, ಅರಳುವ ಹೂವುಗಳು, ಐತಿಹಾಸಿಕ ದೇವಾಲಯಗಳ ತೊಟ್ಟಿಲು. ಮೊದಲಾದ ಐದಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದು ಶ್ಲಾಘನೀಯ. 2021 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗು ವಿವಿಧ ಸಂಘ ಸಂಸ್ಥೆಗಳು, ಸರಕಾರ ನೀಡುವ ಪ್ರಶಸ್ತಿಗಳಿಗೆ ಭಾಜನರಾದದ್ದು ಇವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ಶರೀಫ ಅವರು ಬಹುಮುಖ ಬರಹಗಾರರು. ಹಾಗೆಂದೇ ಇವರ ವಿವಿಧ ಪ್ರಕಾರದ ಲೇಖನಗಳು, ಕತೆ , ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಾನು ಆಗಾಗ ಇವರ ಲೇಖನಗಳನ್ನು ಓದಿದ ನೆನಪು. ಆ ಕಾರಣಕ್ಕಾಗಿ ಇವರ ಹೆಸರು ನನಗೆ ಪರಿಚಿತ. ಮುಖತ : ಇವರ ಭೇಟ್ಟಿಯಾಗಿಲ್ಲ .ಕಣ್ಣರಿಯದಿದ್ರು ಕರುಳು ಅರಿಯುತ್ತೆ ಎಂಬಂತೆ. ಇವರ ಬರಹದಿಂದ ಇವರ ಪರಿಚಯ ನನಗಿದೆ. ಆದರೆ ಮಾತನಾಡುವ ಸಂಧರ್ಭ ಬಂದಿರಲಿಲ್ಲ.

ನನ್ನ ಆತ್ಮೀಯ ಸಾಹಿತಿ ಮಿತ್ರರು ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಕ್ಕಳ ಸಾಹಿತಿ ಕಲಘಟಗಿಯ ವೈ. ಜಿ. ಭಗವತಿ ಅವರು , ಶರೀಫ ಅವರ ವ್ಯಾಖ್ಯಾನಗಳ ಸಂಕಲನಕ್ಕೆ ಮುನ್ನುಡಿ ಬರೆಯಲು ಕೇಳಿಕೊಂಡರು. ಅವರ ಸಾಹಿತ್ಯ ಹಾಗೂ ಬದುಕಿನ ಕುರಿತ ಕೆಲ ವಿಷಯಗಳ ಪರಿಚಯ ಮಾಡಿಕೊಟ್ಟರು. ನಂತರದಲ್ಲಿ ನಾನು ಚಿಗಳ್ಳಿ ಅವರೊಂದಿಗೆ ಮಾತನಾಡಿದೆ. ನಿಜಕ್ಕೂ ಇವರೊಬ್ಬ ಸೃಜನಶೀಲ ಬರಹಗಾರರು ಎಂದು ಅರ್ಥೈಸಿಕೊಂಡೆ. ಇವರ ವ್ಯಾಖ್ಯಾನಗಳ ಬಗ್ಗೆ ಎರಡು ಮಾತುಗಳ ಮೂಲಕ ಮುನ್ನುಡಿ ಬರೆಯಲು ತುಂಬಾ ಸಂತಸ ತಂದಿದೆ.

ಆಧುನಿಕ ಕಾಲದ ಮೋಬೈಲ್, ವಾಟ್ಸಾಪ್ , ಫೇಸ್ಬುಕ್ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಜನಾಂಗ ಸೋಂಕು ತಗಲಿಸಿ ಕೊಂಡಿದ್ದರಿಂದ ಓದುಗರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ ಎಂದರೂ ಕೂಡ , ಸಾಮಾಜಿಕ ಜಾಲತಾಣಗಳ ಓದು ಹಾಗೂ ಪುಸ್ತಕದ ಓದಿಗೂ ತುಂಬಾ ಅಂತರವಿದೆ. ಪುಸ್ತಕ ಓದುವಾಗಿನ ಸಂತಸ ಇನ್ನಾವುದರಿಂದಲೂ ಸಾಧ್ಯವಿಲ್ಲ ಎಂಬುದು ಬಹುತೇಕರ ಅನಿಸಿಕೆ , ಅಭಿಪ್ರಾಯವಾಗಿದೆ.

ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳಿದ್ದು , ಕೆಲವರಿಗೆ ಕತೆ ಎಂದರೆ ಇಷ್ಟ. ಮಕ್ಕಳಂತೂ ಇಲ್ಲಿ ತುಂಬಾ ಆಸಕ್ತಿ ತಾಳುತ್ತಾರೆ. ಇನ್ನು ಕೆಲವರಿಗೆ ಕಾದಂಬರಿ , ಮತ್ತೆ ಕೆಲವರಿಗೆ ಕವನಗಳು , ಹಾಗೇ ಕೆಲವರಿಗೆ ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ಪುಸ್ತಕಗಳು ಎಂದರೆ ತುಂಬಾ ಇಷ್ಟ. ಕೆಲವರು ದೀರ್ಘ ಓದುಗರು. ಮತ್ತೆ ಕೆಲವರು ಮೇಲ್ ಮೇಲಿಂದ ಓದಿ ಖುಷಿ ಪಡುವವರು. ಕೆಲವರಿಗೆ ಹನಿಗತೆಗಳು , ಚುಟುಕುಗಳು , ಇಷ್ಟವಾದರೆ ಮತ್ತೆ ಕೆಲವರಿಗೆ ಒಂದು ಪೇಜ್ ಅಥವಾ ಯಾವುದಾದರೂ ಮೂರ್ನಾಲ್ಕು ಸಾಲುಗಳ ಓದು , ಒಟ್ಟಿನಲ್ಲಿ ಥಟ್ಟನೆ ಓದಿ ಹೆಚ್ಚಿನದನ್ನು ತಿಳಿದುಕೊಳ್ಳ ಬೇಕೆನ್ನುವವರ ಸಂಖ್ಯೆಯೂ ತುಂಬಾ ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿದೆ. ಏಕೆಂದರೆ ಇದು ಏನಿದ್ದರೂ ಟ್ವೆಂಟಿ ಟ್ವೆಂಟಿ ಯುಗವಲ್ಲವೇ..? ಇವೆಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಚಿಗಳ್ಳಿ ಅವರು " ವ್ಯಾಖ್ಯಾನಗಳ " ಮೂಲಕ ನಮ್ಮೆಲ್ಲರ ಗಮನ ಸೆಳೆದದ್ದು ಸಾಂದರ್ಭಿಕ ವಾಗಿದೆ.

ಓದಿನಾನುಭವ, ಹಾಗೂ ಬರಹ ತುಡಿತ ಇಲ್ಲಿಯ ವ್ಯಾಖ್ಯಾನಗಳಲ್ಲಿ ಕಂಡು ಬರುತ್ತದೆ. ಒಂದು ಹೊಸ ಅಥವಾ ಅಪರಿಚಿತ ಪದವನ್ನು ಸರಳವಾಗಿ ಹಾಗೂ ಅಮೂಲಾಗ್ರವಾಗಿ ಪರಿಚಯಿಸುವ ರೀತಿ ಇಲ್ಲಿ ಅರ್ಥಕಂಡುಕೊಳ್ಳುತ್ತದೆ. ಬಹಳಷ್ಟು ವ್ಯಾಖ್ಯಾನಕಾರರ ಓದಿನ ಹರವು ಚಿಗಳ್ಳಿ ಅವರ ಬರಹದಲ್ಲಿ ಕಂಡುಬರುತ್ತದೆ.

ಆರೋಗ್ಯ :
ಮೃತ್ಯು ಮತ್ತು ನಮ್ಮ ಅನಾರೋಗ್ಯ ನಮ್ಮ ಮುಂದೆ ಬಂದು ನಿಂತಾಗ ಆರೋಗ್ಯದ ಮಹತ್ವ ಅರ್ಥವಾಗುತ್ತದೆ. ಎಲ್ಲಾ ಸಿರಿ ಸಂಪತ್ತಿಗಿಂತಲೂ ಆರೋಗ್ಯ ದೊಡ್ಡದಾಗಿದೆ. ಆರೋಗ್ಯವಿದ್ದರೆ ಜಗತ್ತಿನ ಎಲ್ಲ ಭಾಗ್ಯಗಳು ನಮಗೆ ಇರುತ್ತವೆ.

ಹೀಗೆ " ಆರೋಗ್ಯ " ಪದದ ಅರ್ಥ ನಮಗೆ ಸಂಪೂರ್ಣ ವೇದ್ಯವಾಗಬೇಕಾದರೆ ಅಲ್ಲಿ ಅನಾರೋಗ್ಯ ಪದವನ್ನೂ ಕೂಡ ಬಳಸಿಕೊಳ್ಳುವ ಮೂಲಕ ಆರೋಗ್ಯ ಪದದ ಅರ್ಥವನ್ನು ನೇರವಾಗಿ ತಿಳಿಸದೆ ಈ ರೀತಿಯಲ್ಲಿ ತಿಳಿಸುವುದೂ ಕೂಡ ಒಂದು ಬಗೆಯ ಚತುರತೆ ಎನ್ನಿಸುತ್ತದೆ.

ನಿಸರ್ಗದ ಆಗು ಹೋಗುಗಳ ನಡೆ ನಿಸರ್ಗವನ್ನೇ ಅವಲಂಬಿಸಿರುತ್ತದೆ. ಯಾವಕಾಲಕ್ಕೆ ಏನಾಗಬೇಕು , ಏರಿಳಿತಗಳನ್ನು ಹೇಗೆ ಸಮದೂಗಿಸುವುದು , ಯಾವುದೇ ಸ್ಫೋಟವಾಗಲಿ ಅದನ್ನು ಸಮನ್ವಯ ಗೊಳಿಸುವ ರೀತಿ ಅದೆಲ್ಲವೂ ನಿಸರ್ಗದ ಮಡಿಲಲ್ಲಿ ಗೌನವಾಗಿರುತ್ತದೆ. ಆದರೆ ನಾವು ಪರಿಸರವನ್ನು ಸರಿ ಮಾಡುತ್ತೇವೆ ಎಂದಾಗಲೀ , ಅದರ ಏರಿಳಿತಗಳನ್ನು ಸಮನ್ವಯಗೊಳಿಸುತ್ತೇವೆ ಎಂಬುವುದಾಗಲಿ ಮನುಜರಿಂದಲ್ಲಾ ಎಂಬುದನ್ನು " ವೈರಾಣು " ವ್ಯಾಖ್ಯಾನದ ಮೂಲಕ ತಿಳಿಸುತ್ತಾರೆ.

ನಿಸರ್ಗದತ್ತವಾಗಿ ಹುಟ್ಟಿದ ವೈರಾಣುವಿಗೆ ನಿಸರ್ಗವೇ ಪರಿಹಾರ ನೀಡುತ್ತದೆ. ಮಾನವನ ಧ್ವೇಷ ಮತ್ತು ದುರಹಂಕಾರದಿಂದ ಕೃತಕವಾಗಿ ಹುಟ್ಟಿಸಿದ ವೈರಾಣು ಮಾನವನನ್ನೇ ಸರ್ವವಿನಾಶ ಮಾಡುತ್ತದೆ. ಇದಕ್ಕೆ ಪರಿಹಾರವೇ ಇಲ್ಲ ಎನ್ನುವ ಮೂಲಕ ವೈರಾಣು ವ್ಯಾಖ್ಯಾನವನ್ನು ಸಮರ್ಪಕವಾಗಿ ತಿಳಿಸುತ್ತಾರೆ. ಅಧರ್ಮವನ್ನು ಅಧರ್ಮ ದಿಂದಲೇ ನಾಶ ಮಾಡಬೇಕು. ಧರ್ಮದಿಂದ ಮಾಡಲು ಹೊರಟರೆ ಬಹಳಷ್ಟು ಸಮಯ ಹಿಡಿಯುತ್ತೆ. ಆಗ ಅಧರ್ಮ ರಾಜ್ಯಭಾರವನ್ನು ಮಾಡುತ್ತಿರುತ್ತದೆ. ಎಂಬುದನ್ನು ರಾಜ್ಯಭಾರ ವ್ಯಾಖ್ಯಾನದ ಮೂಲಕ ತಮ್ಮ ಅನುಭವ ಹಂಚಿಕೊಂಡದ್ದು ಒಂದು ರೀತಿ ಸೂಕ್ತ ಎನ್ನಿಸುತ್ತದೆ. ಇಲ್ಲಿ ರಾಜ್ಯಭಾರ ನಡೆ ಅಥವಾ ಆಡಳಿತವು ಹೇಗೆ ಇರಬೇಕು ಎಂಬುದನ್ನು ಸ್ವಲ್ಪದರಲ್ಲೇ ಚೆನ್ನಾಗಿ ವಿಶ್ಲೇಷಿಸಿದ್ದಾರೆ.

ಈ ರೀತಿಯ ವ್ಯಾಖ್ಯಾನ ಒಂದು ರೀತಿಯಲ್ಲಿ ಸರಿ ಎನ್ನಿಸಬಹುದಾದರೂ , ಪೂರ್ತಿ ಸರಿಯಾದದ್ದು ಎನ್ನಲಿಕ್ಕೆ ಬಾರದು. ಸಾಹಿತಿಗಳು ಸಕಾರಾತ್ಮಕ ವಿವರಣೆಗಳನ್ನು ಕೊಡುವುದು ಸರಿಯಾದ ಕ್ರಮ. ನನ್ನನ್ನು ಹೊಡೆದವನಿಗೆ ಒಮ್ಮೆಲೇ ಆತನಿಗೆ ಏಟುಕೊಟ್ಟೇ ಹೇಳಬೇಕಿಂದಿಲ್ಲ. ಹಲವಾರು ಸೂಕ್ಷ್ಮ ಮಾರ್ಗಗಳೂ ಇವೆ ಎಂಬುದನ್ನು ಅಲ್ಲಗಳಿಯುವಂತಿಲ್ಲ. ಅವೆಲ್ಲಾ ಸೂಕ್ಷ್ಮ ಒಳದನಿಗಳು ಕೂಡ ಪ್ರಸ್ತುತ ಕಾಲಘಟ್ಟದ ಲೇಖಕರಲ್ಲಿ ಇರಬೇಕಾದ ಅವಶ್ಯಕತೆಯಿದೆ.

" ಅಕ್ಷರ ಕ್ರಾಂತಿ " ವ್ಯಾಖ್ಯಾನ ಮಾಡುವಲ್ಲಿ ಚಿಗಳ್ಳಿ ಅವರು ಪ್ರತಿ ಗ್ರಾಮದಲ್ಲಿ ಗ್ರಂಥಾಲಯದ ಅವಶ್ಯಕತೆಯನ್ನು ತುಂಬಾ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಓದುವ ಸಂಸ್ಕೃತಿಯನ್ನು ಜನ ಮರೆಯುತ್ತಿರುವ ಈ ಸಂದರ್ಭದಲ್ಲಿ , ಓದುವ ಹವ್ಯಾಸ ಬೆಳೆಸಬೇಕೆನ್ನುವ ವಿವರಣೆ ಮಾರ್ಮಿಕವಾಗಿದೆ. ಓದುವ ಸಂಸ್ಕೃತಿಯಿಂದ ನಾವು ವಿಮುಖರಾದರೆ ಅಂತಹ ಜಾಗೆ ಅಜ್ಞಾನದ ಕೂಪವಾಗುತ್ತದೆ. ಒಂದು ಗ್ರಾಮ ಅಥವಾ ಪಟ್ಟಣದಲ್ಲಿ ಗ್ರಂಥಾಲಯ ಮುಚ್ಚಿದೆ ಎಂದಾದಲ್ಲಿ ಅಲ್ಲಿ ಅಜ್ಞಾನದ ಕತ್ತಲು ಅಥವಾ ಅಜ್ಞಾನಿಗಳ ಆಳ್ವಿಕೆ ಆರಂಭವಾಗುತ್ತದೆ ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತಾರೆ.

ಸುಮಾರು 265 ವ್ಯಾಖ್ಯಾನಗಳನ್ನು ಇಲ್ಲಿ ಲೇಖಕರು ಗುರುತಿಸಿ ಕೊಂಡಿದ್ದು , ಪ್ರತಿ ಶಬ್ದಗಳಿಗೆ ಅಥವಾ ಪದಗಳಿಗೆ ವಿಶ್ಲೇಷಣೆ ಮೂಲಕ ವ್ಯಾಖ್ಯಾನ ಮಾಡುವಲ್ಲಿ ಅವರ ಕ್ರಿಯಾಶೀಲತೆ ಹಾಗೂ ಜನಸಾಮಾನ್ಯರಿಗೆ ಸಾಹಿತ್ಯದ ಅರಿವು ಮೂಡಿಸುವ ಉದ್ದೇಶ ತುಂಬಾ ಆಪ್ತವೆನ್ನಿಸುತ್ತದೆ. ಒಬ್ಬ ಕವಿ ಅಥವಾ ಸಾಹಿತಿ ಸಮಾಜಕ್ಕೆ ಸಲ್ಲಿಸಬಹುದಾದ ಕಾಳಜಿ ಲೇಖಕರ ವ್ಯಾಖ್ಯಾನದಲ್ಲಿ ಕಂಡು ಬರುತ್ತದೆ.

ತಮ್ಮ ವೃತ್ತಿ ಬದುಕಿನೊಂದಿಗೆ ಜನಸಾಮಾನ್ಯರಲ್ಲಿ ಸಾಹಿತ್ಯಕ ಅರಿವು ಮೂಡಿಸಬೇಕು ಎಂಬ ಲೇಖಕರ ಕಾರ್ಯ ಮಾದರಿಯಾದದ್ದು. ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಬಹುಮುಖವಾಗಿ ಸಾಹಿತ್ಯದ ಅರಿವು ಮೂಡಿಸುವಲ್ಲಿ ಲೇಖಕರ ಕಾರ್ಯ ಅನನ್ಯವಾದದ್ದು.

ಒಟ್ಟಿನಲ್ಲಿ ಶರೀಫ ಅವರು ಪ್ರಸ್ತುತ ತಮ್ಮ ವೃತ್ತಿಯೊಂದಿಗೆ ಸಮಾಜದ ಬಹುವಿಧ ವ್ಯಕ್ತಿಗಳಲ್ಲಿ ಆಪ್ತ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರೆಲ್ಲರ ಭಾವನೆಗಳು , ಅವರ ಜೀವನ ಶೈಲಿ , ಬದುಕಿನ ನಡೆ ನುಡಿಗಳು ಹಾಗೂ ಅವರು ಕಂಡುಂಡ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಾಹಿತ್ಯ ಕೃಷಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಎಲ್ಲ ಸದಭ್ಯಾಸಗಳೊಂದಿಗೆ ಚಿಗಳ್ಳಿ ಅವರು ವಿವಿಧ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಮುಂದಾಗಲಿ ಎಂದು ಆಶಿಸುತ್ತೇನೆ. ಸಹೃದಯ ಓದುಗರು , ಅಭಿಮಾನಿಗಳು , ಹಾಗೂ ಸಾಹಿತಿಗಳ ಒಡನಾಟದಲ್ಲಿ ಇರುವ ಇವರಿಗೆ ಪರೋಕ್ಷ ಬೆಂಬಲ ಇದೆ ಅಂತ ಅರ್ಥೈಸಬಹುದು. ನಾನು ಬರೆದದ್ದೆಲ್ಲ ಅದು ಪರಿಪೂರ್ಣ ಸಾಹಿತ್ಯ ಎಂಬ ಭಾವ ನಮ್ಮದಾಗಬಾರದು. ಅದು ಸರಿ ತಪ್ಪು ಎಂದು ಅರ್ಥೈ ಸುವವರು ಸಹೃದಯ ಓದುಗರು ವಿನಃ ಲೇಖಕರು ಅಥವಾ ಬರಹಗಾರರಲ್ಲಾ . ನಾವು ಒಮ್ಮೆ ಬರೆದದ್ದನ್ನು ಮತ್ತೆ ಮತ್ತೆ ಓದಬೇಕು. ಸಹೃದರಿಗೆ ಓದಲು ಕೊಡಬೇಕು. ಹಲವು ಬಾರಿ ವಿಮರ್ಶೆಗೆ ಒಳಪಟ್ಟ ನಂತರ ಅದನ್ನು ಗಂಭೀರವಾಗಿ ಅವಲೋಕಿಸುವ ಮೂಲಕ ಸದೃಢತೆ ಗೊಳಿಸಬೇಕು.

ಅಂತಹ ಎಲ್ಲ ಸಾಹಿತ್ಯಕ ಗುಣಗಳನ್ನು ರೂಢಿಸಿಕೊಂಡಿರುವ ಚಿಗಳ್ಳಿ ಅವರು ವಿಸ್ತೃತ ಗದ್ಯ ಸಾಹಿತ್ಯದ ಬಹುವಿಧ ಸಾಹಿತ್ಯಕ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಂತಹ ವಿವಿಧ ಸಾಹಿತ್ಯಕ ಕೃತಿಗಳು ಚಿಗಳ್ಳಿ ಅವರಿಂದ ಮೂಡಿ ಬರಲಿ ಎಂದು ಹಾರೈಸುವೆ. "ಚಿಗಳ್ಳಿಯವರ ಕ್ರಾಂತಿ ಕಿಡಿ ನುಡಿಗಳು" ವ್ಯಾಖ್ಯಾನ ಸಂಕಲನ ಬಹಳ ಸೊಗಸಾಗಿ ಮೂಡಿ ಬಂದಿದೆ. ಇದೊಂದು ಭರವಸೆ ಕೃತಿಯಾಗಲಿ ಅಂತಾ ಹಾರೈಸುತ್ತೇವೆ.

ಕೃತಿಯ ಹೆಸರು:- ಚಿಗಳ್ಳಿಯವರ ಕ್ರಾಂತಿ ಕಿಡಿ ನುಡಿಗಳು
ಸಾಹಿತ್ಯದ ವಿಭಾಗ:- ವ್ಯಾಖ್ಯಾನ ಸಂಕಲನ
ಲೇಖಕರು:- ಶರೀಫ ಗಂ ಚಿಗಳ್ಳಿ
ಪ್ರಕಾಶನ:- ಅಕ್ಷರ ಪ್ರಕಾಶನ ಬೆಳಗಲಿ ಹುಬ್ಬಳ್ಳಿ
ಮುದ್ರಣ ವರ್ಷ:- 2025
ಪುಟಗಳು:- 84
ಬೆಲೆ:- 100 ರೂ
ಪುಸ್ತಕಕ್ಕಾಗಿ ಸಂಪರ್ಕ:- 9902065126

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...