ವೈಚಾರಿಕ ಬರಹಗಳ ಅರ್ಥಪೂರ್ಣ ಕೃತಿ - ನೀರ ಮೇಲೆ ಅಲೆಯ ಉಂಗುರ


'ನಾವೇನೂ ಅಸಾಧ್ಯ ಅನಿಸಬಹುದಾದಂಥ ಕನಸು ಕಂಡಿರಲಿಲ್ಲ. ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ, ಒಂದು ಅತಿ ಸಾದಾ ಅನಿಸುವ ಪುಟ್ಟ ಕನಸು...ಬದುಕಿನಲ್ಲಿ ಅನೇಕ ಕಷ್ಟಗಳನ್ನೇ ಕಂಡ ಜೀವವೊಂದು ಕಂಡ ಪುಟ್ಟ ಕನಸು.. ' ಅವರ ಈ ಸಾಲುಗಳು ನೇರವಾಗಿ ನಮ್ಮ ನಿಮ್ಮೆಲ್ಲರ ಎದೆಯನ್ನೂ ತಾಕಬಹದು. ಇದು ಹಾಗೆಯೇ...ಇಂಥವೇ ಪುಟ್ಟ , ನಿರಪರಾಧೀ ಕನಸುಗಳನ್ನು ನಾವೂ ಕಂಡಿರುತ್ತೇವೆ ಎಂಬ ಭಾವದಲ್ಲಿ ನಾವು ಈ ಲೇಖನದೊಂದಿಗೆ ರಿಲೇಟ್ ಆಗ್ತೀವಿ ಎನ್ನುತ್ತಾರೆ ಲೇಖಕಿ ಜಯಶ್ರೀ ದೇಶಪಾಂಡೆ. ಅವರು ಲೇಖಕಿ ಕೃಷ್ಣಾ ಕೌಲಗಿ ಅವರ ‘ನೀರ ಮೇಲೆ ಅಲೆಯ ಉಂಗುರ’ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಒದಿಗಾಗಿ..

ಕೃತಿ: ನೀರ ಮೇಲೆ ಅಲೆಯ ಉಂಗುರ (ಚಿಂತನಗಳು)
ಲೇಖಕಿ: ಕೃಷ್ಣಾ ಕೌಲಗಿ
ಪುಟ ಸಂಖ್ಯೆ: 202
ಬೆಲೆ: 150 
ಮುದ್ರಣ: 2020
ಪ್ರಕಾಶನ: ಸ್ನೇಹಾ ಪ್ರಕಾಶನ, ಧಾರವಾಡ.

ವೈಚಾರಿಕತೆ ಮತ್ತು ಸೃಜನಶೀಲತೆಗಳೇ ಮನುಷ್ಯರನ್ನು ಪ್ರಕೃತಿಯ ಇನ್ನಿತರ ಜೀವರಾಶಿಯಿಂದ ಭಿನ್ನವಾಗಿಸಿದೆ ಎಂಬುದು ನಿಜ. ತಾವು ನಡೆದು ಬಂದ ಬದುಕಿನ ದಾರಿಯನ್ನು ಸಹಸ್ರಾಕ್ಷಿಯಾಗಿ ದಿಟ್ಟಿಸಿ ನೋಡಿಗ್ರಹಿಸಿದ, ಸ್ವಾನುಭವದ ಮತ್ತು ಪರಿವರ್ತಿಸಲಾಗಬಲ್ಲಂಥ ಬೇರೆ ಹಲವರದ್ದೂ ಸೇರಿದಂತೆ ಒಟ್ಟು ಎಪ್ಪತ್ತೈದು ಜ್ಞಾನದಾಯೀ ಲೇಖನಗಳನ್ನು ತಮ್ಮ

"ನೀರ ಮೇಲೆ ಅಲೆಯ ಉಂಗುರ" ಎಂಬ ಪುಸ್ತಕದಲ್ಲಿ ದಾಖಲಿಸಿರುವ ಶ್ರೀಮತಿ ಕೃಷ್ಣಾ ಕೌಲಗಿ ಈ ಅಲೋಚನಾ ಲಹರಿಗಳಿಗೆ ಓದುಗರನ್ನು ಬಹಳ ಸಲೀಸಾಗಿ ಕರೆದೊಯ್ಯುತ್ತಾರೆ.

'ಕಾಲಾಯ ತಸ್ಮೈ ನಮ:' ಎನ್ನುತ್ತ ತಮ್ಮ ಏಳು ದಶಕಕ್ಕೂ ಮೀರಿದ ಜೀವಿತಾವಧಿಯ ಕಾಲಘಟ್ಟದ ಬದಲಾವಣೆಗಳಿಗೆ ಕನ್ನಡಿ ಹಿಡಿಯುತ್ತಾರೆ. ಇಲ್ಲಿ ಅವರ ನೆನಪುಗಳು, ಕಂಡುಂಡ ಅನುಭವಗಳು ಇನ್ನೂ ಕೆಲವರ ಸಮಕಾಲೀನ ಬರಹಗಳನ್ನೂ ಅಳವಡಿಸಿಕೊಂಡು ಸಮೃದ್ಧವಾಗಿವೆ. 'ಕಿ(ಇ)ತನಾ ಬದಲ್ ಗಯಾ ಇನ್ ಸಾನ್' 'Think before you act' 'ಭವರೋಗಕ್ಕೆ ಮದ್ದಿಲ್ಲ' ಗಳಂಥ ಲೇಖನಗಳಲ್ಲಿ ಮನುಷ್ಯ ಸ್ವಭಾವದ ಹಲವು ಆಯಾಮಗಳ ದರ್ಶನವಿದ್ದರೆ 'we want space' ನಲ್ಲಿ ಬೆಳೆಯುವಿಕೆಯ ಸ್ವಾತಂತ್ರ್ಯದ ಕುರಿತ ಜಿಜ್ಞಾಸೆಯಿದೆ.... 'ಸಂಕ್ರಾಂತಿ'ಯಲ್ಲಿ ಸಹಬಾಳ್ವೆಯ ಸೊಗಸಿದೆ. 'ಆರು ಹಿತವರು ಈ ಮೂವರೊಳಗೆ' ಎನ್ನುತ್ತಲೇ ಹೊಳೆಯುವುದೆಲ್ಲ ಚಿನ್ನವಲ್ಲ 'All that glittters is not Gold' ಎಂಬ ಭಾಷ್ಯ ಬರೆದು ತಮ್ಮ ಅನುಭವಗಳ ದರ್ಶನ ಮಾಡಿಸುತ್ತಾರೆ.

ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸಬೇಕು ಎನ್ನುತ್ತಾರೆ ಕೃಷ್ಣಾ. ಹೌದು, ನಿಜ. 
'ಆ ನೋ ಭದ್ರಾ ಕೃತವೋ ಯಂತು ವಿಶ್ವತ:' ಅಲ್ಲವೇ? 
ಇಲ್ಲಿರುವ ಲೇಖನಗಳು ಸುಂದರ, ಗಹನ ಹಾಗೂ ಸ್ವೀಕಾರಾರ್ಹ.
ಇದನ್ನು ಕೃತಿ ಪರಿಚಯ ಅನ್ನುವುದಕ್ಕಿಂತ ಈ ಪುಸ್ತಕದ ಒಳಗಿರುವ ಅನೇಕ ಅಪರೂಪದ ಸಂಗತಿಗಳಲ್ಲಿ ಹುದುಗಿರುವ ಜ್ಞಾನವನ್ನು ತಿಳಿಯುವ ಅಥವಾ ಕೆಲವು ವಿಷಯಗಳ ಬಗ್ಗೆ ಇಣುಕಿ ನೋಡುವ ಒಂದು ಪ್ರಯತ್ನ ಅಷ್ಟೇ...

ಯಾಕೆಂದರೆ ಈ ಎಪ್ಪತ್ತೈದು ಬರಹಗಳಲ್ಲಿ ಒಂದು ಸಮುದ್ರದಷ್ಟು ಬದುಕು ತುಂಬಿಕೊಂಡಿದೆ. ಆ ಬದುಕನ್ನು ಎಷ್ಟೆಷ್ಟು ಕೋನಗಳಿಂದ ದಿಟ್ಟಿಸಿ ನೋಡಿ ಕೃಷ್ಣಾ ಅವರು ಅದರ ಆಯಾಮಗಳನ್ನು ಮುಷ್ಠಿಯಲ್ಲಿ ಹಿಡಿದು ತಂದಿದ್ದಾರೆ ಎನ್ನುವುದನ್ನು ಕಾಣುವ ಅವಕಾಶ ಒಂದು ಇಲ್ಲಿದೆ. 

ತಮ್ಮ ಪುಸ್ತಕದ ಆರಂಭದಲ್ಲಿ ಕೃಷ್ಣಾ ಅವರು 'ಕೆ ಈ ಬೋರ್ಡ್ ನಿಂದ ಕೀಬೋರ್ಡಿಗೆ' ಎನ್ನುವ ಮಾತನ್ನು ಹೇಳುತ್ತ ತಮ್ಮ ಸಾಹಿತ್ಯಿಕ ಹನುಮನ ನೆಗೆತವನ್ನು ಸರಳೀಕರಿಸಿಬಿಟ್ಟಿದ್ದಾರೆ. ಹಾಂ...ಇದು ಖಂಡಿತವಾಗಿಯೂ ಹನುಮನ ನೆಗೆತವೇ...ಏಕೆಂದರೆ ಈ ಲೇಖನಗಳಲ್ಲಿ ಇವರು ಅರ್ಥಪೂರ್ಣ ವಾಕ್ಯಗಳ ಮೂಲಕ ತಮ್ಮ ವಿಶ್ವವನ್ನೇ ನಮ್ಮ ಎದುರಿಗೆ ತಂದು ಹರವಿದ್ದಾರೆ.

"ದಿಲ್ ಹೈ ಛೋಟಾಸಾ ಛೋಟೀಸಿ ಆಶಾ..."
ಲೇಖನದಲ್ಲಿ ತಮ್ಮ ಇಡೀ ವೈಯಕ್ತಿಕ ಜೀವನದ ಆಸೆ ಆಕಾಂಕ್ಷೆಗಳನ್ನು ಒಂದೇ ಗುಕ್ಕಿನಲ್ಲಿ‌ ಸೇರಿಸಿ ನಮ್ಮನ್ನು ತಟ್ಟುತ್ತಾರೆ. ಹೌದು, ಒಂದು ಮುಷ್ಠಿ ಯಷ್ಟು ಇರುವ ನಮ್ಮ ದಿಲ್ ಎಂಬ ಹೃದಯದ ಆಸೆಗಳು ಎಷ್ಟು ಪುಟ್ಟದೋ ಅಷ್ಟೇ ಸುಂದರ. ಸರಳ...ಸಹಜ.

'ನಾವೇನೂ ಅಸಾಧ್ಯ ಅನಿಸಬಹುದಾದಂಥ ಕನಸು ಕಂಡಿರಲಿಲ್ಲ. ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ, ಒಂದು ಅತಿ ಸಾದಾ ಅನಿಸುವ ಪುಟ್ಟ ಕನಸು...ಬದುಕಿನಲ್ಲಿ ಅನೇಕ ಕಷ್ಟಗಳನ್ನೇ ಕಂಡ ಜೀವವೊಂದು ಕಂಡ ಪುಟ್ಟ ಕನಸು.. ' ಅವರ ಈ ಸಾಲುಗಳು ನೇರವಾಗಿ ನಮ್ಮ ನಿಮ್ಮೆಲ್ಲರ ಎದೆಯನ್ನೂ ತಾಕಬಹದು. ಇದು ಹಾಗೆಯೇ...ಇಂಥವೇ ಪುಟ್ಟ , ನಿರಪರಾಧೀ ಕನಸುಗಳನ್ನು ನಾವೂ ಕಂಡಿರುತ್ತೇವೆ ಎಂಬ ಭಾವದಲ್ಲಿ ನಾವು ಈ ಲೇಖನದೊಂದಿಗೆ ರಿಲೇಟ್ ಆಗ್ತೀವಿ.

ಮೌಲ್ಯಮಾಪನ ಬಗೆಹರಿಯದ ಜಿಜ್ಞಾಸೆ...

ಈ ಲೇಖನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವ ಹಂತದ ತಲ್ಲಣಗಳನ್ನು‌ತುಂಬ ವಿಸ್ತಾರವಾಗಿ ಚರ್ಚಿಸಿದ್ದಾರೆ. ಪರೀಕ್ಷೆ ಮತ್ತು ಮೌಲ್ಯ ಮಾಪನ ಇವೆರಡೂ ವಿದ್ಯಾರ್ಥಿಗಳಿಗೆ ಎಷ್ಟು ಮಹತ್ವದ ವಿಷಯವೋ ಅಷ್ಟೇ ಪ್ರಮಾಣದಲ್ಲಿ ಶಿಕ್ಷಕರಿಗೂ ಅವರ ಜವಾಬ್ದಾರಿಯನ್ನು ಒರೆಗೆ ಹಚ್ಚುವಂಥ ವಿಷಯವೇ ಅಂದಿದ್ದಾರೆ. ನಿರಂತರ ಸುಧಾರಣೆಗಳನ್ನು ಬಯಸುವ ಶಿಕ್ಷಣ ಕ್ಷೇತ್ರದಲ್ಲಿ ಏನೇನು ಬದಲಾವಣೆ ಬೇಕು ಎನ್ನುವ ಬಗ್ಗೆ ಒಬ್ಬ ಶಿಕ್ಷಕಿಯಾಗಿ ತುಂಬ ಗಹನವಾದ ಅಭಿಪ್ರಾಯಗಳನ್ನು ಕೃಷ್ಣಾ ಹೇಳಿದ್ದಾರೆ.

'ಆರು ಹಿತವರು ನಿನಗೆ' ಎನ್ನುವ ಬರಹದಲ್ಲಿ ಸಮಾಜ ಜೀವಿ ಆಗಿರುವ ನಾವು ನೀವೆಲ್ಲ ಬದುಕನ್ನು ಸಹ್ಯ ಮಾಡಿಕೊಳ್ಳುವ ಸರಳ ಸೂತ್ರಗಳನ್ನು ಪೋಣಿಸಿ ಇಟ್ಟಿದ್ದಾರೆ...

ಕೃಷ್ಣಾ ಅವರದು ಒಂದು ಬಗೆಯ ವಿಶಿಷ್ಟ ಹಾಸ್ಯಪ್ರಜ್ಞೆ, ಇರಿಟೆಬಲ್ ಬೊವೆಲ್ ಸಿಂಡ್ರೋಮ್ ಅಂತ ಒಂದು ಆರೋಗ್ಯದ ಕಿರಿಕಿರಿ ಇದೆಯಂತೆ, ಜೀರ್ಣಾಂಗ, ಪಚನಕ್ಕೆ ಸಂಬಂದಿಸಿದ್ದು, ಅದನ್ನು ಇರಿಟೆಬಲ್ ಬ್ರೇನ್ ಸಿಂಡ್ರೋಮ್ ಅಂತ ತಿರುಚಿ. ಮೆದುಳನ್ನೇ ಕೆಣಕಿದ್ದಾರೆ.. ತಮ್ಮ ಓದು ಬರಹಗಳನ್ನು ತನ್ನ ಇಷ್ಟದಂತೆ ಎಫೆಕ್ಟ್ ಮಾಡುವ ಇರಿಟೇಬಲ್ ಬ್ರೇನ್ ಸಿಂಡ್ರೋಮ್ ಗೆ ಸೊಪ್ಪು ಹಾಕದೆ ಇದಕ್ಕೆ ಜಗ್ಗಲ್ಲ ಬಗ್ಗಲ್ಲ ಹೆದರಲ್ಲ ಅಂದು ಅದಕ್ಕೆ ರಾಬರ್ಟ್ ಸೌತೆ ಕವಿಯ ಈ ಸಾಲುಗಳನ್ನು ಪೂರಕ ಸಾಲುಗಳಾಗಿ ಬಳಸಿದ್ದಾರೆ.
'My never failing friends are they... With whom I converse day by day.'

ಹೀಗಂತ ಹೇಳುವ ರಾಬರ್ಟ್ ಸೌತೆಯ ಕವನದ ಸಾಲುಗಳನ್ನು ಕೃಷ್ಣಾ ಒಂದು ವಿಭಿನ್ನ ಪ್ರಕಾರದ ಅನಾರೋಗ್ಯದ ವಿಡಂಬನೆ, ಅಣುಕು ಮಾಡಲು ಬಳಸಿದ್ದಾರೆ. ಇದೂ ಒಂದು ಬಗೆಯ ಕ್ರಿಯೇಟಿವಿಟಿಯ ನಮೂನೆಯೇ ಅನ್ನುವೆ ನಾನು.

'We want space',
'ತೋರಾ ಮನ ದರಪನ್ ಕೆಹೆಲಾಯೆ.'
'ರೋನೇಕೋ ಏಕ್ ಕಂಧಾ ಚಾಹಿಯೇ...'
'ಬಾಲ್ಯವೇ ಮತ್ತೊಮ್ಮೆ ಮರಳಿ ಬಾ'
ಈ ಶೀರ್ಷಿಕೆಗಳೂ ಒಂದಕ್ಕಿಂತ ಒಂದು ಚಂದ.
ಹೀಗೆ ಸುಂದರ ಸರಳ, ಅರ್ಥಪೂರ್ಣ ಸಂವಾದಗಳನ್ನು ಇವರು ಈ ಬರಹಗಳ ಮೂಲಕ ನಮ್ಮ ಜೊತೆಗೆ ನಡೆಸುತ್ತಾರೆ.

ನಿಜ ಹೇಳಬೇಕು ಅಂದರೆ ವೈಚಾರಿಕ ಬರಹಗಳನ್ನ ಯಾರಾದರೂ ವಿವರಿಸೋದಕ್ಕಿಂತ ಅವನ್ನು ಓದಿ ತಮ್ಮ ತಮ್ಮ ಅಲೋಚನೆಗಳಿಗೆ ಒಂದು ಪೂರಕ ಆಗುವ ಸಪೋರ್ಟ್ ಒದಗಿಸ್ತವೆ.

ಈ ಪುಸ್ತಕಗಳು ಓದಿ ನಿಮ್ಮೆಲ್ಲ ಅಲೋಚನಾ ಶಕ್ತಿಯನ್ನು ಇನ್ನಷ್ಟು ಪ್ರಖರವಾಗಿಸುತ್ತವೆ. ವೈಚಾರಿಕ ಓದಿನ ಒಂದು ಸಮಾಧಾನ ಸುಖ ನಿಮಗೆಲ್ಲ ಖಂಡಿತ ಲಭಿಸುತ್ತದೆ!

ಜಯಶ್ರೀ ದೇಶಪಾಂಡೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಕೃಷ್ಣಾ ಕೌಲಗಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ನೀರ ಮೇಲೆ ಅಲೆಯ ಉಂಗುರ ಕೃತಿ ಪರಿಚಯ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...