ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು  

Date: 08-11-2020

Location: .


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಲಂಡನ್‌ ಡೈರಿ-ಅನಿವಾಸಿಯ ಪುಟಗಳು’ ಬಿಡಿಬರಹಗಳ ಸಂಕಲನ ಪ್ರಕಟಿಸಿರುವ ಅವರು ವಿಮಾನಲೋಕದ ಬೆರಗು ಅನುಭವಗಳನ್ನು ಹಾಗೂ ಅದರ ಶಬ್ದ ಗುಣ ವಿಶೇಷವನ್ನು ಇಂದಿನ ‘ಏರೋ ಪುರಾಣ’ ಅಂಕಣದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಮ್ಮ ತಲೆಯ ಮೇಲೆ ಹಾಸಿಕೊಂಡಿರುವ ತುಂಡು ಆಕಾಶದಲ್ಲಿ ಒಂದು ಅದ್ಭುತ ಅಜ್ಞಾತ ಲೋಕವಿದೆ, ಮತ್ತೆ ಅದು ನಾವು ನಿತ್ಯ ಕಾಣುವ ಕೇಳುವ ಆಸುಪಾಸಿನ ಜಗತ್ತಿಗಿಂತ ತೀರಾ ಭಿನ್ನವಾದದ್ದು ಮತ್ತು ರಹಸ್ಯವಾದ ವಿವರಗಳನ್ನು ಹುದುಗಿಸಿಕೊಂಡದ್ದು ಎಂದು ಅದರ ಬಗ್ಗೆ ಅಭ್ಯಸಿಸುವರು ಅಧ್ಯಯನ ಮಾಡಿದವರು ಹೇಳುತ್ತಾರೆ. ನಮಗೆ ನೇರವಾಗಿ ಯಾರ ಯಾವುದರ ಸಹಾಯ ಇಲ್ಲದೆ ಹಾರಾಡುವುದು ಅಸಾಧ್ಯ ಆದರೂ "ಮಾನ ವನಿರ್ಮಿತ" ಎಂದು ಕರೆಸಿಕೊಳ್ಳುವ ವಿಮಾನಗಳು ಇದೇ ಅನಾಮಿಕ ನಿಗೂಢ ಅವಕಾಶದಲ್ಲಿ ಸುಲಲಿತವಾಗಿ ಸುತ್ತಾಡಿ ಬರುತ್ತವೆ. ನೆಲದ ಮೇಲೆ ವೇಗವಾಗಿ ಓಡೋಡುತ್ತ ತರಾತುರಿಯಲ್ಲಿ ನೆಗೆದು ಹಂತ ಹಂತವಾಗಿ ಮೇಲೇರಿ ಮತ್ತೆ ಎತ್ತರದಲ್ಲಿ ಒಂದು ನಿಟ್ಟುಸಿರು ಬಿಟ್ಟು ಸಮಾಧಾನದ ಪ್ರಯಾಣ ಮುಂದುವರಿಸಿ ಮತ್ತೆ ನಿಲ್ದಾಣದ ಹತ್ತಿರವಾದಾಗ ಆಕಾಶದ ಮೆಟ್ಟಿಲುಗಳನ್ನು ಸರಸರನೆ ಇಳಿದು ಕೊನೆಗೆ ನೆಲವನ್ನು ಮುಟ್ಟಿ ಇನ್ನೊಂದಿಷ್ಟು ಓಡಿ ತಮ್ಮ ಯಾನ ನಿಲ್ಲಿಸುತ್ತವೆ, ಅಂದಿನ ದಿನಚರಿಯನ್ನೋ ರಾತ್ರಿ ಪಾಳಿಯನ್ನೋ ಮುಗಿಸುತ್ತವೆ. ಹೀಗೆ ವಿಮಾನಗಳು ತಮ್ಮ ನಿತ್ಯಯಾತ್ರೆಯ ಬಹುಪಾಲು ಸಮಯವನ್ನು ಆಕಾಶದಲ್ಲಿಯೇ ಕಳೆಯುತ್ತವಾದರೂ ನಾವು ನಾವು ನಿಂತ ನೆಲದಿಂದ ನಮ್ಮ ನಮ್ಮ ಮೇಲಿನ ಚೂರು ಆಕಾಶದಲ್ಲಿ ಈ ಹಾರಾಟ ಕಣ್ಣಿಗೆ ಕಾಣಸಿಗುವುದು ಕೆಲಕ್ಷಣಗಳ ಮಟ್ಟಿಗೆ ಮಾತ್ರ. ಇನ್ನು ವಿಮಾನ ನಿಲ್ದಾಣದ ಹತ್ತಿರವೇ ವಸತಿ ಮಾಡಿಕೊಂಡವರಿಗೆ ಕಿರಿಕಿರಿಯಾಗುವಷ್ಟು ವಿಮಾನಗಳ ಸಂಕುಲದ ಬಗ್ಗೆಯೇ ಅಸಹ್ಯ ಹುಟ್ಟಿಸುವಷ್ಟು ದರ್ಶನ ಆಗುತ್ತಿರುತ್ತದೆ ಬಿಡಿ. ಆಕಾಶದಲ್ಲಿ ವಿಮಾನಗಳ ಇರುವಿಕೆ ತಿಳಿಯುವುದು ಅವು ಕಣ್ಣಿಗೆ ಕಂಡಾಗ ಮಾತ್ರ ಅಲ್ಲ, ಅವುಗಳಿಂದ ಹುಟ್ಟುವ ಶಬ್ದವೂ ನಮ್ಮ ಕಿವಿಯನ್ನು ತಲುಪಿ ಪ್ರಜ್ಞೆಯನ್ನು ಮುಟ್ಟುತ್ತವೆ. ವಿಮಾನಗಳ ಹಾರಾಟದಿಂದ ಹುಟ್ಟುವ ಸದ್ದಿಗೆ ಕೆಲವು ಕಾರಣಗಳಿವೆ. ಒಂದು, ಅದು ತನ್ನ ದೇಹ ರೆಕ್ಕೆಗಳಿಂದ ಗಾಳಿಯನ್ನು ಸೀಳುತ್ತ ಸವರುತ್ತ ವೇಗವಾಗಿ ಹಾರುವುದು ಮತ್ತೆ ಎಂಜಿನ್ ವಿಮಾನವನ್ನು ಮುಂದೆ ದೂಡಲು ಎಡೆಬಿಡದೆ ಕೆಲಸ ಮಾಡುವುದು. ಇನ್ನು ವಿಮಾನಗಳ ಸದ್ದು ನಮಗೆ ಕೇಳಿಸುವಲ್ಲಿ ನಮ್ಮ ಸುತ್ತಮುತ್ತ ಬೇರೆ ಯಾವ ಶಬ್ದ ಇದೆ, ಆ ವಿಮಾನ ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಅದು ಯಾವ ಬಗೆಯ ವಿಮಾನ ಇತ್ಯಾದಿಗಳೂ ಪಾತ್ರ ವಹಿಸುತ್ತವೆ. ಕೆಲವು ಸಲ ವಿಮಾನಗಳು ಸ್ಪಷ್ಟವಾಗಿ ಕಣ್ಣಿಗೆ ಕಾಣಿಸದಿದ್ದರೂ ಅವುಗಳ ಸದ್ದಿನಲ್ಲಿಯೇ ತಮ್ಮ ಇರವನ್ನು ಸೂಚಿಸುತ್ತವೆ. ವಿಮಾನದ್ದು ಎಂದರೇನು ಆಕಾಶದಿಂದ ಯಾವ ಸದ್ದೇ ಬಂದರೂ ಅದಕ್ಕೆ ವಿಶೇಷ ಗಮನಿಸುವಿಕೆ ದೊರೆಯುತ್ತದೆ. ಯಾಕೆಂದರೆ ಆಕಾಶದಿಂದ ಸದ್ದುಗಳು ಹೊರಟು ಕಿವಿ ತಲುಪುವುದು ದಿನನಿತ್ಯದ ಸಾಮಾನ್ಯ ವಿಷಯ ಅಲ್ಲ. ಹಾಗಂತ ವಿಮಾನವೊಂದರ ಪರಿಚಯ ಮಾಡಿಕೊಳ್ಳುವಲ್ಲಿ ಗುರುತು ಹಿಡಿಯುವಲ್ಲಿ ಅದರ ಆಕಾರ ಸ್ವರೂಪದಷ್ಟೇ ಅದು ಮಾಡುವ ಸದ್ದಿಗೂ ಮಹತ್ವದ ಸ್ಥಾನ ಇದೆ. ಈ ಹಾರುವ ವಾಹನಗಳೆಲ್ಲ ಒಂದೇ ಸಂತತಿಯಂತೆ ಕಂಡರೂ, ಕೆಲವೊಮ್ಮೆ ಹತ್ತಿರದ ಬಂಧುಗಳಂತೆಯೂ ಮತ್ತೆ ಕೆಲವೊಮ್ಮೆ ದೂರದ ಸಂಬಂಧಿಗಳಂತೆಯೂ ತೋರುವ ಬಗೆಬಗೆಯ ವಿಮಾನಗಳನ್ನು ಗ್ರಹಿಸುವಾಗ ಅವುಗಳ ರೂಪ ಶಬ್ದ ಗುಣ ವಿಶೇಷಗಳ ಕಿರು ಮಾಹಿತಿ ಸಹಕಾರಿ ಆಗುತ್ತದೆ.

ಇದೇ ವರ್ಷದ ಮೇ ತಿಂಗಳಿನ ಮಧ್ಯಾಹ್ನ ಬೆಂಗಳೂರಿನ ವಾಸಿಗಳಿಗೆ ಕೇಳಿದ ಸ್ಪೋಟಕ ಸದ್ದು ಕೆಲಕಾಲ ವಿಪರೀತ ಊಹಾಪೋಹಗಳನ್ನು ಚರ್ಚೆಯನ್ನು ಹುಟ್ಟಿಸಿತ್ತು. ನಂತರ ರಕ್ಷಣಾ ಇಲಾಖೆಯವರು ಆ ಭಯಂಕರ ಸದ್ದು ಯುದ್ಧ ವಿಮಾನವೊಂದರ ಪರೀಕ್ಷಾ ಹಾರಾಟದ ಕಾರಣ ಉದ್ಭವಿಸದ್ದು ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಶಬ್ದಕ್ಕಿಂತ ವೇಗವಾಗಿ ಗಾಳಿಯಲ್ಲಿ ಸಂಚರಿಸುವ ವಿಮಾನಗಳು ಕಿವಿಗಡಚಿಕ್ಕುವ ಭೀಕರ ಸದ್ದು ಮಾಡುವುದಿದೆ. ಇದನ್ನು "ಸೋನಿಕ್ ಬೂಮ್" ಎಂದು ಕರೆಯುತ್ತಾರೆ. ಸಿಡಿಮದ್ದಿನ ಸ್ಫೋಟದಂತೆ ಕೇಳುವ ಇಂತಹ ಸದ್ದುಗಳು, ಗಾಳಿಯ ಒತ್ತಡದ ಸಣ್ಣ ಸಣ್ಣ ಅಲೆಗಳು ಕಿರು ಅವಧಿಯಲ್ಲಿ ಒಂದಕ್ಕೊಂದು ಸೇರಿ ಅವುಗಳಲ್ಲಿ ಹುಟ್ಟುವ ಅಗಾಧ ಶಕ್ತಿಯಿಂದ ಉಂಟಾಗುತ್ತವೆ. ಇಂತಹ ಶಬ್ದಾತೀತ ವೇಗದ (ಸೂಪರ್ ಸೋನಿಕ್) ವಿಮಾನಗಳು ಹುಟ್ಟಿಸುವ ಇಂತಹ ಸದ್ದುಗಳು ಮನುಷ್ಯರ ಕಿವಿಗೆ, ಪ್ರಾಣಿಗಳಿಗೆ, ಕಟ್ಟಡಗಳಿಗೆ ಆಘಾತವನ್ನು ಉಂಟು ಮಾಡಿದ ಕತೆಗಳು ಇವೆ. 2003ರಲ್ಲಿ ತನ್ನ ಸೇವೆಯನ್ನು ನಿಲ್ಲಿಸಿದ ನಾಗರಿಕ ವಿಮಾನ "ಕಾಂಕರ್ಡ್" ಕೂಡ ಇಂತಹ ಸ್ಪೋಟಕ ಸದ್ದು ಮಾಡುವ ಖ್ಯಾತಿ ಆಪಾದನೆಗಳನ್ನು ಹೊಂದಿತ್ತು. ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದ ಕಾಂಕರ್ಡ್‌‌ನಿಂದ ಹುಟ್ಟಿದ ಸೋನಿಕ್ ಬೂಮ್ ಪರಿಸರಕ್ಕೂ ಪ್ರಾಣಿಗಳಿಗೂ ಹಾನಿಕಾರಕ ಎಂದು ಅದರ ಸೇವೆಯ ಅವಧಿಯುದ್ದಕ್ಕೂ ಪ್ರತಿಭಟನೆಯೂ ನಡೆಯುತ್ತಿತ್ತು. ಸದ್ಯಕ್ಕೆ ಶಬ್ದಾತೀತ ವೇಗದಲ್ಲಿ ಹಾರುವ ಯಾವ ನಾಗರಿಕ ವಿಮಾನವೂ ಬಳಕೆಯಲ್ಲಿಲ್ಲವಾದ್ದರಿಂದ ವಿಮಾನದಿಂದ ದೊಡ್ಡ ಸದ್ದು ಕೇಳಿಸಿದರೆ ಅದು ಮಿಲಿಟರಿ ವಿಮಾನದ ಹಾರಾಟದಿಂದಲೇ ಎನ್ನುವುದು ಖಾತ್ರಿ. ಕಳೆದ ಹದಿನೈದು ವರ್ಷಗಳಿಂದ ಸೇವೆಯಲ್ಲಿರುವ, ಆಕಾಶದ ರಾಣಿ ಎಂದು ಕರೆಸಿಕೊಳ್ಳುವ ಡಬಲ್ ಡೆಕ್ಕರ್ ವಿಮಾನ ಎ380ಯನ್ನು "ನಿಶ್ಯಬ್ದ ದೈತ್ಯ" ಎಂದೂ ಕರೆದದ್ದಿದೆ. ನಾಲ್ಕು ಬೃಹತ್ ಆಧುನಿಕ "ಜೆಟ್ ಎಂಜಿನ್ "ಗಳನ್ನು ಹೊಂದಿದ್ದರೂ ಈ ವಿಮಾನ ಹತ್ತಿರ ಬಂದಾಗಲೂ ದೊಡ್ಡ ಶಬ್ದ ಕೇಳಿಸುವುದಿಲ್ಲ. ಅದಕ್ಕೆ ಕಾರಣ ಈ ವಿಮಾನದಲ್ಲಿ ಬಳಕೆಯಾದ ಆಧುನಿಕ ಎಂಜಿನ್ ಗಳ ಹಾಗು ವಿಮಾನದ ಹೊರಮೈಯ ಶಬ್ದನಿರೋಧಕ ವಿನ್ಯಾಸ.

ವಿಮಾನಗಳನ್ನು ಗುರುತು ಹಿಡಿಯುವುದನ್ನೇ ಹವ್ಯಾಸ ಮಾಡಿಕೊಂಡ ಕೆಲವರು ವಿಮಾನ ತುಸು ದೂರದಲ್ಲಿರುವಾಗಲೇ ಅದರ ಆಯ ಆಕಾರ ಮೈಕಟ್ಟು ಬಣ್ಣ ನೋಡಿ ಶಬ್ದ ಕೇಳಿ ಇಂತಹದೇ ವಿಮಾನ ಎಂದು ಗುರುತಿಸಿ ಹೇಳುವುದಿದೆ. ಅದು ಗಾತ್ರದಲ್ಲಿ ದೊಡ್ಡದೋ ಚಿಕ್ಕದೋ, ಜನರನ್ನು ಸಾಗಿಸುವ ಅಂದರೆ ನಾಗರಿಕ ವಿಮಾನವೋ ಅಥವಾ ಯುದ್ಧದ ಹಪಾಹಪಿಯಲ್ಲಿರುವ ಸೇನಾ ವಿಮಾನವೊ, ರೆಕ್ಕೆ ದೊಡ್ಡದೊ ಚಿಕ್ಕದೊ, ರೆಕ್ಕೆಯ ತುದಿ ನೇರ ಇದೆಯೊ ಸ್ವಲ್ಪ ಮುರಿದು ಮಡಚಿದಂತಿಯೊ, ಒಬ್ಬರಿಬ್ಬರನ್ನು ಮಾತ್ರ ಕೂರಿಸಿಕೊಂಡು ಸ್ವಲ್ಪ ತಗ್ಗಿನಲ್ಲಿ ಹಾರುವ ಖಾಸಗಿ ತಿರುಗಾಟದ್ದೋ ಹಲವು ಗಂಟೆಗಳ ಕಾಲ ನೂರಾರು ಜನರನ್ನು ತುಂಬಿಸಿಕೊಂಡು ಸಮುದ್ರ ಪರ್ವತ ಕಂದರ ಮರುಭೂಮಿಗಳನ್ನು ದಾಟುತ್ತ ಲಂಘಿಸಬಲ್ಲದ್ದೋ, ಅದಕ್ಕೆ ಫ್ಯಾನಿನ ತೆರೆದ ರೆಕ್ಕೆಯಂತಿರುವ ಪ್ರೊಪೆಲ್ಲರ್ ಎಂಜಿನ್ ಇದೆಯೋ ಅಥವಾ ಲೋಹದ ಕವಚದೊಳಗೆ ಕೂತು ತಿರುಗುತ್ತ ಆಕಾಶದಲ್ಲಿ ಬಿಳಿ ಹೊಗೆ ಉಗುಳುತ್ತ ಸಾಗುವ ಜೆಟ್ ಎಂಜಿನ್ ಇದೆಯೋ ಇತ್ಯಾದಿ ವಿಷಯ ವಿಚಾರಗಳ ಆಧಾರದಲ್ಲಿ ಯಾವ ಕಂಪೆನಿಯ ಯಾವ ಮಾಡೆಲ್ ವಿಮಾನ ಎಂದು ನಿರ್ಧರಿಸಬಹುದು. ಬೆಂಗಳೂರಿನಿಂದ ಮುಂಬೈಯಿಗೆ ಅಥವಾ ಇನ್ಯಾವುದೂ ಎರಡು ಊರುಗಳ ನಡುವೆ ವಿಮಾನದಲ್ಲಿ ಖಾಯಂ ತಿರುಗಾಡುವವರಿಗೆ ಎರಡು ಬೇರೆಬೇರೆ ದಿನದ ಪ್ರಯಾಣಗಳು ಬೇರೆಬೇರೆ ಸಮಯ ತಗೆದುಕೊಂಡ ಅನುಭವ ಆಗಿರಬಹುದು. ವಿಮಾನ ರೆಕ್ಕೆಗಳ ಕೆಳಗೆ ಯಾವುದೇ ಆವರಣ ಕವಚ ಇಲ್ಲದ ಫ್ಯಾನ್ ನಂತೆ ತೋರುವ ಎಂಜಿನ್ ಇರುವ ವಿಮಾನ ತುಸು ತಡವಾಗಿ ತಲುಪಿಸೀತು ಮತ್ತೆ ಜೆಟ್ ಎಂಜಿನ್ ಹೊಂದಿದ ವಿಮಾನವಾಗಿದ್ದರೆ ಸ್ವಲ್ಪ ಬೇಗ ಮುಟ್ಟಿಸೀತು. ಸಣ್ಣ ಪ್ರಯಾಣದಲ್ಲಿ ಬಳೆಕೆಯಾಗುವ ಪ್ರೊಪೆಲ್ಲರ್ ಎಂಜಿನ್ ವಿಮಾನಗಳು ನಿಧಾನವಾಗಿ ಸಾಗುತ್ತ ಮಾಲಿಕರಿಗೆ ಇಂಧನ ಉಳಿಸಿದರೆ ಬಹಳ ಎತ್ತರದಲ್ಲಿ ವೇಗವಾಗಿ ಸಾಗಬಲ್ಲ ಶಕ್ತಿಶಾಲಿ ಜೆಟ್ ಎಂಜಿನ್ ಇರುವ ವಿಮಾನಗಳು ನಿರ್ವಹಣೆಯಲ್ಲಿ ದುಬಾರಿ ಎನಿಸಿದರೂ ದೂರದ ಅಂತರಾಷ್ಟ್ರೀಯ ಮಾರ್ಗಗಳಿಗೆ ಸೂಕ್ತ ಎನಿಸುತ್ತವೆ.

ವಿಮಾನಗಳ ಪರಿಚಯ ಮಾಡಿಕೊಳ್ಳುವ ಆಸಕ್ತಿ ಇರುವವರು ಸುಲಭದಲ್ಲಿ ಗುರುತಿಸಬಹುದಾದದ್ದು ವಿಮಾನಗಳ ಗಾತ್ರ ಹಾಗು ಅದಕ್ಕಿರುವ ಎಂಜಿನ್ ಗಳ ಸಂಖ್ಯೆಗಳನ್ನು. ದೂರ ಸಂಚಾರಿ ದೊಡ್ಡ ಗಾತ್ರದ ವಿಮಾನಗಳಿಗೆ ಎಡ ಬಲದ ಒಂದೊಂದು ರೆಕ್ಕೆಯ ಕೆಳಗೆ ಎರಡೆರಡರಂತೆ ಒಟ್ಟು ನಾಲ್ಕು ಎಂಜಿನ್ ಗಳು ಇರಬಹುದು. ಇಂತಹ ವಿಮಾನಗಳಿಗೆ ಉದಾಹರಣೆಗೆ ಬೋಯಿಂಗ್ ಕಂಪೆನಿಯ ನ747, ಏರ್‌ಬಸ್ ಕಂಪೆನಿಯ ಎ380 ಹಾಗು ಎ340ಗಳು. ಎಂಟರಿಂದ ಹನ್ನೆರಡು ಗಂಟೆಗಳ ಪ್ರಯಾಣದಲ್ಲಿ ಒಮ್ಮೆಗೆ ಮುನ್ನೂರರಿಂದ ಐದುನೂರು ಜನರನ್ನು ಸಾಗಿಸುವ ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಈ ವಿಮಾನಗಳು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಾಣ ಸಿಗುವುದಿಲ್ಲ. ಎರಡರಿಂದ ಮೂರು ಗಂಟೆಗಳೊಳಗಿನ ಹತ್ತಿರದ ಪ್ರಯಾಣದಲ್ಲಿ ಬಳಕೆಯಾಗುವ ವಿಮಾನಗಳಲ್ಲಿ ಅನೇಕ ಬಗೆಯ ವಿಮಾನಗಳಿವೆ. ಅವುಗಳಲ್ಲಿ ಇಪ್ಪತ್ತೈದು ಜನರನ್ನು ಕೂರಿಸಿಕೊಂಡು ಹೋಗುವ ಪ್ರೊಪೆಲ್ಲರ್ ಎಂಜಿನ್ ಹೊಂದಿರುವ ಅತಿಚಿಕ್ಕ ನಾಗರಿಕ ವಿಮಾನಗಳಿಂದ ಹಿಡಿದು ನೂರೈವತ್ತು ಇನ್ನೂರು ಜನರನ್ನು ಸಾಗಿಸಬಲ್ಲ ಜೆಟ್ ಎಂಜಿನ್ ವಿಮಾನಗಳಿವೆ. ಸಣ್ಣ ಪ್ರಯಾಣದ ಮಧ್ಯಮ ಗಾತ್ರದ ವಿಮಾನಗಳಲ್ಲಿ ಬೋಯಿಂಗ್ ನ 737 ಹಾಗು ಏರ್ಬಸ್ ನ ಎ 320 ತರಹದ ವಿಮಾನಗಳು ಜಗತ್ತಿನ ಮೂಲೆ ಮೂಲೆಯಲ್ಲಿ ಹಾರಾಡುತ್ತವೆ. ಬಹುತೇಕ ನಿಲ್ದಾಣಗಳಲ್ಲಿ ಕಂಡು ಬರುವ ಈ ಎರಡು ವಿಮಾನಗಳು, ನಾಗರಿಕ ವಿಮಾನಯಾನದ ತೀವ್ರ ಸ್ಪರ್ಧಿಗಳಾದ ಬೋಯಿಂಗ್ ಹಾಗು ಏರ್ಬಸ್ ಗಳು ಅತಿ ಹೆಚ್ಚು ತಯಾರಿಸಿದ ಮತ್ತೆ ಆ ಎರಡು ಕಂಪೆನಿಗಳ ಆರ್ಥಿಕ ಬೆನ್ನೆಲುಬಾಗಿ ನಿಂತ ವಿಮಾನ ಮಾದರಿಗಳು. ಇನ್ನು ಕೆಲವು ಹಳೆಯ ಕಾಲದ ವಿಮಾನಗಳಿಗೆ ಮೂರು ಎಂಜಿನ್ ಇರುವುದೂ ಇದೆ.ಒಂದೊಂದು ರೆಕ್ಕೆಯ ಕೆಳಗೆ ಒಂದೊಂದು ಹಾಗು ಹಿಂದೆ ಬಾಲದಲ್ಲಿ ಮೂರನೆಯ ಎಂಜಿನ್ ಇರುವ ಅಮೆರಿಕದ ಮ್ಯಾಕ್ಡಗ್ಲಸ್ ಕಂಪೆನಿಯ ಡಿ ಸಿ 11 ವಿಮಾನಗಳು ಈ ಕಾಲಕ್ಕೆ ಅಷ್ಟೇನೂ ಸಾಮಾನ್ಯ ಅಲ್ಲ. ಹೊಸ ತಂತ್ರಜ್ಞಾನದ ಹೊಸ ವಸ್ತುಗಳ ಬಳಕೆಯಿಂದ ವಿನ್ಯಾಸಗೊಂಡಿರುವ ಬೋಯಿಂಗ್ ನ 787 ಹಾಗು ಏರ್ಬಸ್ ನ ಎ 50ಗಳಿಗೆ ಆಧುನಿಕ ಆಕರ್ಷಕ ತಿರುವು ಬಾಗುವಿಕೆಯ ರೆಕ್ಕೆಗಳು ಹಾಗು ದೇಹ ವಿನ್ಯಾಸ ಇದೆ. ಒಂದು ನೆಗೆತದಲ್ಲಿ ಹದಿನೈದು ಸಾವಿರ ಕಿಲೋಮೀಟರು ಪ್ರಯಾಣ ಮಾಡಬಲ್ಲ ಕ್ಷಮತೆ ಇರುವ ಈ ಎರಡು ವಿಮಾನಗಳು ನಾಗರಿಕ ವಿಮಾನಲೋಕದ ಹೊಸ ಆವಿಷ್ಕಾರಗಳು ಮತ್ತು ಒಂದಕ್ಕೊಂದು ಬದ್ಧ ಸ್ಪರ್ಧಿಗಳು. ಇನ್ನು ವಿಮಾನಗಳ ಮೂಗಿನ ಆಕಾರ, ಬಾಗಿಲುಗಳ ಸಂಖ್ಯೆ, ಬಾಲದ ವಿನ್ಯಾಸ, ರೆಕ್ಕೆಯ ಆಕಾರ, ವಿಮಾನಗಳು ಇಳಿಯುವಾಗ ನಿಂತಾಗ ಅವುಗಳ ಕಾಲಿನಂತೆ ತೋರುವ "ಲ್ಯಾಂಡಿಂಗ್ ಗೇರ್" ಗಳನ್ನೂ ಗಮನಿಸಿ ವಿಮಾನಗಳನ್ನು ಹೆಸರಿಸಬಹುದು.

ವಿಮಾನಗಳ ಜೊತೆ ತುರ್ತು ಪರಿಚಯ ಆಗಲು "ಏರ್ ಶೋ" ಅಥವಾ ವಿಮಾನ ಮೇಳಗಳು ಅನುಕೂಲಕರ. ವಿಮಾನ ಮೇಳಗಳ ಉದ್ದೇಶ ವಿಮಾನಗಳಿಗೆ ಸಂಬಂಧಿಸಿದ ವ್ಯಾಪಾರ, ವಿಮಾನ ತಯಾರಕರನ್ನು ಮತ್ತು ಕೊಳ್ಳುವವರನ್ನು ಸೇರಿಸುವುದೇ ಆದರೂ ಟಿಕೇಟು ತೆಗೆದುಕೊಂಡು ಒಳಬರುವ ಎಲ್ಲ ಬಗೆಯ ಆಸಕ್ತರಿಗೂ ಅಲ್ಲಿ ನಾಗರಿಕ ಹಾಗು ಸೇನಾ ವಿಮಾನಗಳನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯುತ್ತದೆ.ಮತ್ತೆ ಹಾರಾಟದ ಪ್ರದರ್ಶನ ನಡೆಯುವಾಗ ವಿಮಾನಗಳ ಲಕ್ಷಣ ಸಾಧ್ಯತೆ ಸಾಮರ್ಥ ಅವುಗಳು ಮಾಡುವ ಸದ್ದುಗಳ ಬಗ್ಗೆ ತಿಳಿಯುತ್ತದೆ. ವಿಮಾನದ ಮೂಗಿನಿಂದ ಬಾಲದವರೆಗೆ ರೆಕ್ಕೆಗಳಿಂದ ದೇಹರಚನೆಯ ತನಕದ ವ್ಯತ್ಯಾಸಗಳು ಸಾಮ್ಯತೆಗಳು ಸುಲಭದಲ್ಲಿ ಕಣ್ಣೆದುರು ಒಂದೇ ಜಾಗದಲ್ಲಿ ಇರುತ್ತವೆ. ಇನ್ನು ವಿಮಾನಗಳ ತಂಗುದಾಣವಾದ ಏರ್ಪೋರ್ಟ್ ಅಲ್ಲಿಯೂ ಹಲವು ನಾಗರಿಕ ವಿಮಾನಗಳ ಯಥೇಚ್ಛ ನೋಟ ಸಿಗುತ್ತದೆ. ಯಾವ ದೇಶದ ಯಾವ ಏರ್ಲೈನರ್ ಯಾವ ಬಣ್ಣಗಳಿಂದ ತಮ್ಮ ವಿಮಾನಗಳನ್ನು ಅಲಂಕಾರ ಮಾಡುತ್ತಾರೆ, ಮೈಯ ಮೇಲೆ ಯಾವ ಚಿತ್ರ, ಬಾಲದ ಮೇಲೆ ಯಾವ ಚಿಹ್ನೆ ಬಿಡಿಸುತ್ತಾರೆ ಎನ್ನುವ ವಿವರಗಳೂ ಕಾಣಿಸುತ್ತವೆ. ವಿಮಾನ ಸಂತತಿಯೊಳಗಿನ ಬಗೆ ಬಗೆಯ ಶಬ್ದ ಬಣ್ಣ ಚಿತ್ರಗಳು ಮುಖಾಮುಖಿ ಆಗುತ್ತವೆ, ಆಸಕ್ತಿ ತೋರಿದರೆ ಪರಿಚಯ ಬೆಳೆಸಿಕೊಳ್ಳುತ್ತವೆ.

ವಿಮಾನಗಳ ಗುರುತು ಮಾಡಿಕೊಂಡರೂ ಮಾಡಿಕೊಳ್ಳದಿದ್ದರೂ ಅವುಗಳನ್ನು ಸಾರಿಗೆಯ ಇನ್ನೊಂದು ಮಾಧ್ಯಮವಾಗಿ ವಾಹನವಾಗಿ ಮಾತ್ರ ಪರಿಗಣಿಸಿದರೂ ಮುಟ್ಟಬೇಕಾದಲ್ಲಿಗೆ ಮುಟ್ಟಬಹುದು, ಯಾತ್ರೆಯನ್ನು ಮುಗಿಸಬಹುದು. ಹಾಗಂತ ನಾವು ನೋಡುವ ಕೇಳುವ ಕುಳಿತುಕೊಂಡು ಪ್ರಯಾಣಿಸುವ ವಿಮಾನಗಳ ಬಗೆಗಿನ ಕಿರು ಮಾಹಿತಿ ಪುಟ್ಟ ಪರಿಚಯ ವಿಮಾನಗಳ ಜೊತೆಗಿನ ಕೆಲಗಂಟೆಗಳ ಒಡನಾಟವನ್ನು ಹೆಚ್ಚು ಆಪ್ತವಾಗಿಸಿಬಹುದು, ಇಂದಿನ ಮುಂದಿನ ಪ್ರಯಾಣಕ್ಕೆ ವಿಶಿಷ್ಟ ಅಪೂರ್ವ ಆಯಾಮವನ್ನು ನೀಡಬಹುದು.

 

(ಚಿತ್ರಗಳು - ವಿವಿಧ ಅಂತರ್ಜಾಲ ಪುಟಗಳಿಂದ)

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...