ವ್ಯಕ್ತಿತ್ವದ ಗುಣ-ದೋಷಗಳ ಸಮಗ್ರ ದರ್ಶನ ಕೃತಿ ‘ದಿವಾನ್ ಪೂರ್ಣಯ್ಯ’  


ದಿವಾನ್ ಪೂರ್ಣಯ್ಯನವರ ಆಡಳಿತ ಸೇರಿದಂತೆ ವ್ಯಕ್ತಿತ್ವದ ಸಮಗ್ರತೆಯನ್ನು ಕಟ್ಟಿಕೊಡುವ ಲೇಖಕ ಎಂ.ಎನ್. ಸುಂದರರಾಜ್ ಅವರ ‘ದಿವಾನ್ ಪೂರ್ಣಯ್ಯ’ ಕೃತಿಯ ಕುರಿತು ಕೇವಲ ಇತಿಹಾಸದ ಅಧ್ಯಯನಕ್ಕೆ ಮಾತ್ರವಲ್ಲ; ಪೂರ್ಣಯ್ಯನವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಮನೋವೈಜ್ಞಾನಿಕ ವಾಗಿ ಅಧ್ಯಯನ ಮಾಡಲು ಸಹ ಸಾಕಷ್ಟು ಸಾಮಗ್ರಿ ಒದಗಿಸುತ್ತದೆ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿರುವ ಬರಹವಿದು.

ಮೈಸೂರು ರಾಜ್ಯದ ಮೊದಲ ದಿವಾನ್ ಎಂದೇ ಖ್ಯಾತಿಯ ಪೂರ್ಣಯ್ಯನವರು, ಅದಕ್ಕೂ ಪೂರ್ವ ಹೈದರಾಲಿ ಹಾಗೂ ಟಿಪ್ಪು ಸಲ್ತಾನ್, ತಂದೆ-ಮಕ್ಕಳ-ಈ ಇಬ್ಬರ ಆಡಳಿತದಲ್ಲೂ ದಿವಾನರಾಗಿದ್ದರು. ಮುಮ್ಮಡಿ ಕೃಷ್ಣರಾಜ್ ಒಡೆಯರು ಸೇರಿದಂತೆ ಈ ಇಬ್ಬರು ಅರಸರ ಆಡಳಿತದ ಬಹುಪಾಲು ಹೊಣೆಗಾರಿಕೆಯನ್ನು ಇವರು ನಿರ್ವಹಿಸಿದ್ದರು.

ಪೊನ್ನಾನಿ ಯುದ್ಧಕ್ಕೆಂದು ಟಿಪ್ಪು ತೆರಳಿದ್ದ ಸಂದರ್ಭವದು. ಇತ್ತ ಅರಮನೆಯಲ್ಲಿ, ಬೆನ್ನುನೋವಿನ ಕಾಯಿಲೆಗೆ ಹೈದರಾಲಿ ಹಠಾತ್ ಮರಣ ಹೊಂದಿದ್ದು, ಟಿಪ್ಪು ಇಲ್ಲದ ವೇಳೆಯಲ್ಲಿ ಅರಾಜಕತೆ ಸೃಷ್ಟಿಯಾಗಬಾರದು. ಇಲ್ಲಸಲ್ಲದ ಸಂಶಯಗಳಿಗೆ ಕಾರಣವಾಗಬಾರದು ಎಂದು ಹೈದರಾಲಿ ಸತ್ತ ಸುದ್ದಿಯನ್ನು ನಾಲ್ಕು ದಿನಗಳ ಕಾಲ ರಹಸ್ಯವಾಗಿಟ್ಟಿದ್ದು ಅವರ ದೂರದೃಷ್ಟಿ ಹಾಗೂ ಆಡಳಿತ ಜಾಣ್ಮೆಗೆ ಕನ್ನಡಿ ಹಿಡಿಯುತ್ತದೆ. ಟಿಪ್ಪುವನ್ನು ಕರೆಯಿಸಿಕೊಂಡು, ತಂದೆಯ ಸಾವಿನ ಕಾರಣ ತಿಳಿಸಿ, ಆಡಳಿತದ ಸೂತ್ರ ಹಿಡಿಯುವ ಎಲ್ಲ ಪ್ರಕ್ರಿಯೆಗಳನ್ನು ಪೂರೈಸುತ್ತಾರೆ. ತಂದೆಯ ಸಾವಿನ ಕುರಿತು ಪೂರ್ಣಯ್ಯನವರು ಹೇಳಿದ್ದನ್ನೇ ಟಿಪ್ಪು ಸಹ ನಂಬಬೇಕಾದರೆ, ಪೂರ್ಣಯ್ಯನವರ ವ್ಯಕ್ತಿತ್ವ ಹಾಗೂ ಆಡಳಿತದಲ್ಲಿ ಕಾಯ್ದುಕೊಂಡು ಬಂದ ವಿಶ್ವಾಸಕ್ಕೆ ಪ್ರತೀಕವಾಗಿದೆ.

ಜನಪರ ಯೋಜನೆಗಳ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಮೈಸೂರು ಒಡೆಯರ್ ಸಂಸ್ಥಾನದ ಖ್ಯಾತಿ ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ಹೆಸರಿನಿಂದಷ್ಟೇ ‘ಪೂರ್ಣಯ್ಯ’ನವರಲ್ಲ; ‘ದಿವಾನರಾಗಿಯೂ ಪೂರ್ಣಯ್ಯ’ನವರು. ಆಡಳಿತ ಕೌಶಲ ಎಂಬುದು ಅವರ ಅಂತರಂಗದ ಸಾಮರ್ಥ್ಯವೇ ಆಗಿತ್ತು ಎಂಬುದರ ಸೂಚಕವಿದು. ಇಂತಹ, ಉತ್ತಮ ಆಡಳಿತಗಾರನ ಕುರಿತು ವಿಷಯಗಳು ಅಲ್ಲಲ್ಲಿ ಚದುರಿದಂತಿದ್ದವು. ಲೇಖಕ ಎಂ.ಎನ್. ಸುಂದರರಾಜ್ ಅವರ ‘ದಿವಾನ್ ಪೂರ್ಣಯ್ಯ’ ಕೃತಿಯು ಅವರ ಬಗೆಗಿನ ಸಮಗ್ರ ಸಾಹಿತ್ಯದ ಕೊರತೆ ನೀಗಿಸಿದೆ. ಆಸಕ್ತಿಕರ ಸಂಗತಿ ಎಂದರೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ದಿವಾನ್ ಪೂರ್ಣಯ್ಯನವರ ಮೇಲೂ ಪಕ್ಷಪಾತ, ಭ್ರಷ್ಟತೆಯಂತಹ ಆರೋಪಗಳೂ ಕೇಳಿಬರುವುದು. ಅವರ ಗುಣ-ದೋಷಗಳೆರಡರ ನಿಷ್ಪಕ್ಷಪಾತ ವಿವರಣೆಗಳಿದ್ದು, ಮನೋವೈಜ್ಞಾನಿಕವಾಗಿ ವ್ಯಕ್ತಿತ್ವವೊಂದರ ಅಧ್ಯಯನಕ್ಕೂ ಈ ಕೃತಿ ಸಾಕಷ್ಟು ಸಾಮಗ್ರಿ ಪೂರೈಸುತ್ತದೆ.

ಧನಾತ್ಮಕ ಆಯಾಮ: ರಾಜಬೊಕ್ಕಸವನ್ನು ತುಂಬುವುದೂ ಹಾಗೂ ಅದನ್ನು ಜನಪರ ಯೋಜನೆಗಳಿಗೆ ಬಳಸುವುದು ಆಡಳಿತ ಕೌಶಲವೇ! ಆದರೆ, ರಾಜಸ್ವ ಸಂಗ್ರಹಿಸುವ ವಿಧಾನವು ಆಡಳಿತ ಕೌಶಲದ ಮಾನದಂಡವೂ ಆಗಿದೆ. ಈ ಹಂತದಲ್ಲಿ, ದಿವಾನ್ ಪೂರ್ಣಯ್ಯನವರ ಕಾರ್ಯಸ್ವರೂಪದ ವಿವಿಧ ಆಯಾಮಗಳನ್ನು ವಿವರಿಸಿದ್ದು, ಕೃತಿಯ ಪ್ರಾಮಾಣಿಕತೆ.

ಫರ್ಷಿಯನ್ ಸಂಸ್ಕೃತ ಸೇರಿದಂತೆ ಬಹುಭಾಷಾ ಪಂಡಿತರಾಗಿದ್ದರು. ಉತ್ತಮ ರಾಜತಾಂತ್ರಿಕರು. ಪಾಳೇಗಾರರ ಉಪಟಳ ಹತ್ತಿಕ್ಕುವ, ರಕ್ಷಣೆ-ಶಾಂತಿ ಸ್ಥಾಪನೆಗೆ ಪೊಲೀಸ್ ಪಡೆಯ ರಚನೆ, ನ್ಯಾಯಾಂಗ, ನೀರಾವರಿ ಹಾಗೂ ಸಾರಿಗೆಯಂತಹ ಜನಪರ ಸೇವೆಗೆ ಚಾಲನೆ, ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ, ಮೈಸೂರು ಕೋಟೆ ಹಾಗೂ ನಗರೀಕರಣದ ನೀಲನಕ್ಕ್ಷೆ, ಸಾಂಕ್ರಾಮಿಕ ರೋಗ ತಡೆಗಟ್ಟಿದ ಕ್ರಮಗಳು, ದಂಗೆಗಳನ್ನು ಹತ್ತಿಕ್ಕಿದ ರಣನೀತಿ, ವ್ಯಾಪಾರ -ವಾಣಿಜ್ಯ ವಹಿವಾಟಿನ ಸ್ವರೂಪ, ಧಾರ್ಮಿಕ ಕೇಂದ್ರಗಳೊಂದಿಗಿನ ಒಡನಾಟ..ಹೀಗೆ ಧನಾತ್ಮಕ ಅಂಶಗಳ ಸುದೀರ್ಘ ವಿವರಣೆ ಇದೆ.. ಕನ್ನಡ, ಸಂಸ್ಕೃತಿ ‘ವ್ಯವಹಾರದಲ್ಲಿ ಪೂರ್ಣಯ್ಯ ಪಳಗಿದ್ದರು. ಸರಿ-ತಪ್ಪುಗಳನ್ನು ನಿಖರವಾಗಿ ನಿರ್ಣಯಿಸುವ ಜಾಣ್ಮೆ ಇತ್ತು. ಇವರು ಬೇರೆ ಬ್ರಾಹ್ಮಣರಿಗಿಂತ ಹೆಚ್ಚು ಚುರುಕಾಗಿದ್ದರು (ಇತಿಹಾಸಕಾರ ಫ್ರಾನ್ಸಿಸ್ ಬುಕಾನಿನ್), ’ಪೂರ್ಣಯ್ಯನವರ ಬಗ್ಗೆ ಕೇಳಿ ಬರುವ ದೂರುಗಳು ಕ್ಷುಲ್ಲಕವಾದುವು. ಆತ ಅಸಾಧಾರಣ ವ್ಯಕ್ತಿ ( ಮೇಜರ್ ವಿಲ್ಕಸ್ ಎಂಬ ಅಧಿಕಾರಿ ಕಂಪನಿ ಆಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿ), ಎದೆಯ ಮೇಲೆ ಹಾಕಿದ್ದ ಲಿಂಗ ಕಳೆದುಕೊಂಡ ವ್ಯಕ್ತಿಯ ಜೀವವನ್ನು ಉಳಿಸಿದ ಹಾಸ್ಯಭರಿತ ಪ್ರಸಂಗಗಳ ಸೇರಿದಂತೆ ಇತರೆ ಪ್ರಸಂಗಳು ದಾಖಲಿಸಿದ್ದು, ಪೂರ್ಣಯ್ಯನವರ ಹಾಸ್ಯಭರಿತ ಮನೋಧರ್ಮದ ಮುಖವನ್ನೂ ಪರಿಚಯಿಸುತ್ತವೆ.

ಋಣಾತ್ಮಕ ಆಯಾಮ: ಮುಮ್ಮಡಿ ಕೃಷ್ಣರಾಜ ಒಡೆಯರ್, ಪೂರ್ಣಯ್ಯರ ಮಧ್ಯೆ ಆಡಳಿತಾತ್ಮಕ ವಿಷಯದಲ್ಲಿ ವೈಷಮ್ಯಗಳು ತಲೆದೋರುತ್ತಿದ್ದಂತೆ ಕಂಪನಿ ಅಧಿಕಾರಿ ಎಂ.ಎಚ್. ಕೋಲ್ ಮಧ್ಯಸ್ಥಿಕೆ ವಹಿಸಿ, ಅಲ್ಲಿ ನಡೆದ ವಿದ್ಯಮಾನಗಳು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆಯುತ್ತವೆ. ತಮ್ಮ ಪ್ರಾಮಾಣಿಕ ಬದುಕಿನೆಡೆಗೆ ಭ್ರಷ್ಟತೆಯ ಆರೋಪದ ಬಣ್ಣ ಎರಚುವ ಪ್ರಸಂಗಗಳು ಹೆಚ್ಚಿದಂತೆ ಪೂರ್ಣಯ್ಯನವರು ತೀವ್ರವಾಗಿ ನೊಂದಿದ್ದರು. ‘ಪೂರ್ಣಯ್ಯನವರು ಮೊದಲು ಪ್ರಾಮಾಣಿಕರಾಗಿದ್ದರು. ಆದರೆ, 19ನೇ ಶತಮಾನದ ಆರಂಭದಲ್ಲಿ ಅದು ಕಾಣೆಯಾಗಿತ್ತು’ (ಇತಿಹಾಸಕಾರ ಎಂ.ಎಚ್. ಗೋಪಾಲ್), ರಾಜಸ್ವ ಸಂಗ್ರಹಿಸುವ ವಿಧಾನವು ಸೂಕ್ತವಾಗಿರಲಿಲ್ಲ ಎಂಬ ಅಸಮಾಧಾನದ ಅಂಶಗಳನ್ನೂ ಉಲ್ಲೇಖಿಸಿದ್ದಾರೆ. 1815ರಲ್ಲಿ ಮುಮ್ಮಡಿ ಕೃಷ್ಣರಾಜ್ ಒಡೆಯರ್ ಅವರು ಗವರ್ನರ್ ರಿಗೆ ಬರೆದ ಪತ್ರದಲ್ಲಿ ‘ಪೂರ್ಣಯ್ಯನವರು ಆಡಳಿತದಲ್ಲಿ ಪ್ರತ್ತೇಕ ಧನಮೂಲವನ್ನೇ ಸೃಷ್ಟಿಸಿದ್ದರು. ಆದರೆ, ಜನಹಿತದೆಡೆಗೆ ಅವರು ಹೆಚ್ಚು ಒತ್ತು ನೀಡಲಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ. ಮೈಸೂರಿನ ಕಮೀಷನರ್ ಮಾರ್ಕ್ ಕಬ್ಬನ್ ‘ಪೂರ್ಣಯ್ಯನವರ ಆಡಳಿತ ಪರಿಪೂರ್ಣ ಆದರೆ ಅವರು ದೌರ್ಜನ್ಯದಿಂದ ಹಣ ಸಂಗ್ರಹಿಸಿದರು’ ಎಂದಿದ್ದಾರೆ. ಪ್ರಸಿದ್ಧ ಸಾಹಿತಿ ತಿ.ತಾ. ಶರ್ಮ ಅವರು ‘ಪೂರ್ಣಯ್ಯನವರ ಆರ್ಥಿಕ ನೀತಿ ಸಾಮಾನ್ಯ ಜನರಿಗೆ ಹೊರೆಯಾಗಿತ್ತು. ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿತು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಜನರ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸಿದರೂ ಅವುಗಳ ವಿಚಾರಣೆಯ ಗೋಜಿಗೆ ಹೋಗಲಿಲ್ಲ ಎಂಬ ಆರೋಪವೂ ಸಾಮಾನ್ಯವಾಗಿದೆ.

ಮನೋವೈಜ್ಞಾನಿಕ ಅಧ್ಯಯನಕ್ಕೆ ಆಕರ: ಇತಿಹಾಸಕಾರರು ಸಹ ಪೂರ್ಣಯ್ಯನವರ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಿಲ್ಲ ಎಂಬ ವಿಷಾದ ಲೇಖಕರಲ್ಲಿದೆ. ಇತಿಹಾಸದ ಘಟನೆಗಳನ್ನು ಆಧರಿಸಿ ‘ಪೂರ್ಣಯ್ಯನವರು ಟಿಪ್ಪುವಿಗೆ ದ್ರೋಹ ಬಗೆಯ ಬೇಕೆಂದು ಮನಸ್ಸು ಮಾಡಿದ್ದರೆ ಅದಕ್ಕೆ ವಿಫುಲ ಅವಕಾಶಗಳಿದ್ದವು’ ಎಂದು ಪುರಾವೆಗಳ ಮೂಲಕವೇ ಲೇಖಕರು ಸಮರ್ಥಿಸಿಕೊಳ್ಳುವ ಅಧ್ಯಾಯವೂ ಪೂರ್ಣಯ್ಯನವರ ವ್ಯಕ್ತಿತ್ವದ ಗುಣ ಸ್ವರೂಪಗಳ ಅಧ್ಯಯನಕ್ಕೆ ಹಲವು ರೀತಿಯಲ್ಲಿ ಸಾಮಗ್ರಿ ಪೂರೈಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ತೋಷಿಖಾನೆ ಕೃಷ್ಣರಾವ್ ಅವರ ವಿಚಾರದಲ್ಲಿ ಪೂರ್ಣಯ್ಯನವರ ಮೌನ, ಅಂಚೆ ಶಾಮಯ್ಯನ ದಬ್ಬಾಳೆಕೆಯೆಡೆಗೆ ಪೂರ್ಣಯ್ಯನವರ ತಟಸ್ಥ ನೀತಿ, ಆಯಾಜ್ ಖಾನ್ ನೊಡನೆ ಮನಸ್ತಾಪ, ಮುಮ್ಮಡಿ ಕೃಷ್ಣರಾಜ್ ಒಡೆಯರ್ ವಿರುದ್ಧದ ಮನಃಸ್ಥಿತಿ, ‘ಅರಸರು ಇನ್ನೂ ಬಾಲಕರು’ ಎಂದು ಹೇಳುತ್ತಲೇ ಪೂರ್ಣಯ್ಯನವರ ಉದ್ದಟತನದ (ಎಂ.ಎಚ್. ಕೋಲ್ ಹೇಳಿದಂತೆ) ವರ್ತನೆ, ಯಳಂದೂರು ಬಂಗ್ಲೆಯಲ್ಲಿ ದೊರೆತ ಅಪಾರ ಪ್ರಮಾಣದ ಸಂಪತ್ತಿನ ಹಿನ್ನೆಲೆಯಲ್ಲಿ ಪೂರ್ಣಯ್ಯನವರು, ಬ್ರಾಹ್ಮಣರಿಗೆ ಹಾಲು ನೀಡುವಲ್ಲಿ ಸಂಶಯಕ್ಕೀಡುವ ಮಾಡುವ ಪೂರ್ಣಯ್ಯನವರ ಲೆಕ್ಕಪತ್ರಗಳು, ಬ್ರಿಟಿಷ್ ಕಂಪನಿ ವಿರುದ್ಧ ಚಕಾರವೆತ್ತದ ಪೂರ್ಣಯ್ಯನವರ ಮೌನ, ತಮ್ಮ ಸಂಬಂಧಿಕರನ್ನೇ ಹೆಚ್ಚಾಗಿ ನೇಮಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅವರ ಆಡಳಿತದ ಸ್ವಾರ್ಥದ ಸೂಕ್ಷ್ಮ ಸ್ವರೂಪ, ಹಣಕಾಸು ವ್ಯವಹಾರದಲ್ಲಿ ಅತಿ ಹೆಚ್ಚಿನ ಹಣವನ್ನು ಇವರು ಪೂರ್ಣಯ್ಯನವರು ತಮಗಾಗಿ ಕ್ರೋಢಿಕರಿಸಿಕೊಂಡಿದ್ದರು ಎಂಬ ಆರೋಪ ಇತ್ಯಾದಿ ಸನ್ನಿವೇಶಗಳು ಮನೋವೈಜ್ಞಾನಿಕವಾಗಿ ಅವರ ವ್ಯಕ್ತಿತ್ವವನ್ನು ತಿಳಿಯಲು ಸಾಮಗ್ರಿ ಒದಗಿಸುತ್ತವೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಮಹತ್ವದ ಅಂಶಗಳ ಪಟ್ಟಿ, ಪೂರ್ಣಯ್ಯನವರ ವಂಶವೃಕ್ಷ, ಅವರ ಹಸ್ತಾಕ್ಷರದ ಮಾದರಿ ಇತ್ಯಾದಿ ಅಧ್ಯಾಯಗಳ ವೈಶಿಷ್ಟ್ಯಗಳಿಂದ ಈ ಕೃತಿಯು ಇತಿಹಾಸ ಅಧ್ಯಯನಕ್ಕೆ ಮಹತ್ವದ ಆಕರಗಳನ್ನು ಹಾಗೂ ಜೀವನ ಚರಿತ್ರೆಯ ಪ್ರಾಮಾಣಿಕ ದಾಖಲೆಯ ಸಾಹಿತ್ಯಕ ಕೃತಿಯಾಗಿಯೂ ಗಮನ ಸೆಳೆಯುತ್ತದೆ. ಮಾತ್ರವಲ್ಲ: ಪೂರ್ಣಯ್ಯನವರು ಆಡಳಿತಾತ್ಮಕ ವಿಷಯದಲ್ಲಿ ಹಂತಹಂತವಾಗಿ ಬೆಳೆದು ಬಂದ ಬಗೆ, ಕಠಿಣ ಸನ್ನಿವೇಶಗಳನ್ನು ಎದುರಿಸಿದ ಅವರ ಮನೋಧರ್ಮ, ದೂರದೃಷ್ಟಿ, ಅವರ ಅಂತಿಮ ದಿನಗಳ ದಾರುಣ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಲೇಖಕರ ಶ್ರಮದ ದ್ಯೋತಕವಾಗಿ ಈ ಕೃತಿ ಇದೆ.

(ಪುಟ: 192, ಬೆಲೆ: 195, ಅಂಕಿತ ಪುಸ್ತಕ-2021)

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...