ಯುದ್ಧಪೀಡಿತ ಜನರ ನೆರವಿಗೆ ನಿಂತ ಕವಿಗೆ ಶಾಂತಿ ಪ್ರಶಸ್ತಿ


“ಒಬ್ಬ ವ್ಯಕ್ತಿ ಬದುಕಲು ಬೇಕಿರುವುದು ಯುದ್ಧವಲ್ಲ; ಬದಲಿಗೆ ಎಲ್ಲರೊಡನೆ ಕೂಡಿ ಹಾಡಲು, ನಿಶ್ಚಿತ ಭಾವವೊಂದನ್ನು ವ್ಯಕ್ತಪಡಿಸಲು ಒಂದು ಪದವನ್ನು ಕೇಳಬಯಸುತ್ತಾನೆ ಆತ.” ಎನ್ನುವ ಉಕ್ರೇನಿಯನ್ ಕವಿ ಸೆರ್ಹಿ ಝಡಾನ್, ಎಲ್ಲೋ ಕೂತು ಬರೆಯುವವನಾಗಿರದೆ, ನೊಂದವರ ನೆರವಿಗೆ ನಿಂತು ಹೋರಾಡುತ್ತಿರುವವನು.

ರಷ್ಯಾ ಆಕ್ರಮಣದಿಂದಾಗಿ ತತ್ತರಿಸಿರುವ, ಯುದ್ಧದ ಭೀಕರತೆಯಲ್ಲಿ ನಲುಗಿರುವ ಉಕ್ರೇನ್‌ನ ಚಿತ್ರ ಕಾಡುವಾಗಲೂ ಕಣ್ಮುಂದೆ ಗಾಢವಾಗುವುದು ಕ್ರೂರ ಸಾಮ್ರಾಜ್ಯಶಾಹಿಯ ದುರಾಕ್ರಮಣವನ್ನು ಪ್ರತಿರೋಧಿಸುವಲ್ಲಿ ಉಕ್ರೇನಿಯನ್ ಜನರು ತೋರಿಸುತ್ತಿರುವ ಎದೆಗಾರಿಕೆ.

ಉಕ್ರೇನ್‌ನ ಕಾದಂಬರಿಕಾರ, ಕವಿ ಮತ್ತು ಸಂಗೀತಗಾರ ಸೆರ್ಹಿ ಝಡಾನ್ ಕೂಡ ಎಲ್ಲೋ ಕೂತು ಬರೆದುಕೊಂಡಿರುವವನಾಗಿರದೆ, ಜನರೊಡನೆಯೇ ನಿಂತು ಅವರ ಕಡು ಕಷ್ಟದ ಘಳಿಗೆಗಳಲ್ಲಿ ಸ್ಪಂದಿಸುತ್ತಿರುವವನು. ಆತನಿಗೆ ಈಗ ಜರ್ಮನ್ ಶಾಂತಿ ಪ್ರಶಸ್ತಿ ನೀಡಲಾಗಿದೆ.

ಝಡಾನ್‌ನ ಮಾನವೀಯ ನಿಲುವು, ಯುದ್ಧಪೀಡಿತ ಜನರಿಗೆ ಸಹಾಯ ಮಾಡಲು ತನ್ನ ಜೀವವನ್ನೂ ಪಣಕ್ಕಿಡಲು ಹಿಂಜರಿಯದ ಆತನ ದಿಟ್ಟತನ ಇಲ್ಲಿ ಪರಿಗಣಿತವಾಗಿದೆ.

ಜರ್ಮನ್ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಸಂಘ ವಾರ್ಷಿಕವಾಗಿ ನೀಡುವ ಈ ಪ್ರಶಸ್ತಿ ಝಡಾನ್‌ಗೆ ಲಭಿಸಿರುವುದು ವಿಶೇಷವಾಗಿ ಗಮನ ಸೆಳೆಯುವ ಸಂಗತಿಯಾಗಿದ್ದು, ಅದು ರಷ್ಯಾದ ವಿರುದ್ಧದ ಸ್ಪಷ್ಟ ನಿಲುವೂ ಆಗಿದೆ.

ಝಡಾನ್ ಬರವಣಿಗೆ ಮುಖ್ಯವಾಗಿ ಹೇಳುವುದೇ, ಉಕ್ರೇನ್ ಜನರು ತಮ್ಮ ಸುತ್ತಲಿನ ಹಿಂಸಾಚಾರವನ್ನು ಹೇಗೆ ವಿರೋಧಿಸುತ್ತಾರೆ ಮತ್ತು ಶಾಂತಿ, ಸ್ವಾತಂತ್ರ್ಯದ ಜೀವನವನ್ನು ನಡೆಸಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು.

ಯುದ್ಧಪೀಡಿತ ಜನರಲ್ಲಿ ಧೈರ್ಯ ತುಂಬಲು ತನ್ನ ನೆಲ ಖಾರ್ಕಿವ್‌ನ ಬಾಂಬ್ ಶೆಲ್ಟರ್‌ನಲ್ಲಿ ಕವನ ವಾಚನ ಮಾಡುವ ಝಡಾನ್ ಮಾತು: “ಒಬ್ಬ ವ್ಯಕ್ತಿ ಬದುಕಲು ಬೇಕಿರುವುದು ಯುದ್ಧವಲ್ಲ; ಬದಲಿಗೆ ಎಲ್ಲರೊಡನೆ ಕೂಡಿ ಹಾಡಲು, ನಿಶ್ಚಿತ ಭಾವವೊಂದನ್ನು ವ್ಯಕ್ತಪಡಿಸಲು ಒಂದು ಪದವನ್ನು ಕೇಳಬಯಸುತ್ತಾನೆ ಆತ.”

ಝಡಾನ್‌ನ ಈ ಮಾತು ಬಹಳ ಮುಖ್ಯವಾದುದು. ಯಾಕೆಂದರೆ ಆತ ಉಕ್ರೇನ್‌ನ್ನು 2014ರಿಂದಲೂ ಕರಾಳತೆಯಲ್ಲಿ ಮುಳುಗಿಸಿರುವ ರಷ್ಯಾದ ಆಕ್ರಮಣಶೀಲತೆಗೆ ಬಲಿಯಾದವರ ಲೆಕ್ಕವನ್ನಷ್ಟೇ ತನ್ನ ಕಾವ್ಯ ಮತ್ತು ಕತೆಗಳಲ್ಲಿ ಕಟ್ಟಿಕೊಡದೆ, ಖಾರ್ಕಿವ್‌ನಲ್ಲಿ ನೊಂದವರ ಪಾಲಿಗೆ ಮಾನವೀಯ ನೆರವನ್ನು ಒದಗಿಸುವ ಕೆಲಸದಲ್ಲಿ ತೊಡಗಿದ್ದಾನೆ.

ಭೀಕರ ಯುದ್ಧದ ನಡುವೆ ನಿರಂತರ ಅನಿಶ್ಚಿತತೆಯಲ್ಲಿ ಬೇಯುತ್ತಿರುವ ತನ್ನ ಸಮುದಾಯವನ್ನು ನೋಡಲು ಏನೇನು ಮಾಡುವುದಕ್ಕೆ ಸಾಧ್ಯವೊ ಅದೆಲ್ಲವನ್ನೂ ಮಾಡುತ್ತಿರುವ ಝಡಾನ್ ಮಾತುಗಳು ಬರೀ ಮಾತುಗಳಾಗಿರದೆ, ಆತನೊಳಗಿನ ನೆತ್ತರ ಚಲನೆಯೇ ಆಗಿದೆ.

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...