ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

Date: 04-08-2020

Location: ಬೆಂಗಳೂರು


ಭಾರತೀಯ ಸಂಗೀತದಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಬಹು ದೊಡ್ಡ ಪರಂಪರೆಯಿದೆ. ಲಿಂಗತಾರತಮ್ಯ, ಜಾತಿ ಮತ್ತು ಧರ್ಮದ ಭೇಧವಿಲ್ಲದೆ ಎಲ್ಲರನ್ನೂ ಒಳಗೊಂಡಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಇಸ್ಲಾಂ ಸಮುದಾಯದ ಕಲಾವಿದರ ಕೊಡುಗೆ ಅಪರಿಮಿತವಾದುದು. ಹಿಂದೂ ಧರ್ಮದ ಕಲಾವಿದರಲ್ಲದೆ, ಅನೇಕ ಕಲಾವಿದೆಯರು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮುಂಚೂಣಿಯಲ್ಲಿದ್ದರು. ಕರ್ನಾಟಕ ಸಂಗೀತಕ್ಕಿಂತ ಮುಂಚಿತವಾಗಿ ಮಡಿ, ಮೈಲಿಗೆ, ಲಿಂಗತಾರತಮ್ಯ, ಜಾತಿ ಭೇದವನ್ನು ತೊಡೆದು ಹಾಕಿದ ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಮಹನೀಯರು ಮಹಿಳೆಯರಿಗೆ ಸಂಗೀತವನ್ನು ಧಾರೆಯೆರೆದ ಇತಿಹಾಸವಿದೆ. ಇಂತಹ ಮಹನೀಯರ ಕುರಿತ ಸರಣಿ “ಗಾನಲೋಕದ ಗಂಧರ್ವರು”. ಹಿರಿಯ ಪತ್ರಕರ್ತ-ಲೇಖಕ ಜಗದೀಶ ಕೊಪ್ಪ ಅವರು ಬರೆಯುವ ಸರಣಿ ಬರಹಗಳ ಪೈಕಿ ಮೊದಲ ಬರಹ ವಿಷ್ಣು ನಾರಾಯಣ ಭಾತಖಂಡೆ ಅವರನ್ನು ಕುರಿತದ್ದು-

ಭಾರತದ ಸಂಗೀತ ಕ್ಷೇತ್ರದಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಅಂದರೆ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತವೆಂಬ ಪ್ರಕಾರಗಳಲ್ಲಿ ಚಾಲ್ತಿಯಲ್ಲಿದ್ದರೂ ಸಹ ಇವೆರೆಡರ ರಾಗ, ತಾಳ ಮತ್ತು ಸ್ವರಗಳಲ್ಲಿ ಅನೇಕ ಸಾಮ್ಯತೆಗಳಿವೆ. ಹಿಂದೂಸ್ತಾನಿ ಸಂಗೀತಕ್ಕಿಂತ ಕರ್ನಾಟಕ ಸಂಗೀತಕ್ಕೆ ಧೀರ್ಘವಾದ ಇತಿಹಾಸವಿದೆ. ಉತ್ತರ ಭಾರತದಲ್ಲಿ ಹಿಂದೂಸ್ಥಾನಿ ಸಂಗೀತಕ್ಕೆ ಭದ್ರವಾದ ತಳಪಾಯ ಹಾಕಿದವರಲ್ಲಿ ಕನ್ನಡಿಗನಾದ ಗೋಪಾಲ ನಾಯಕ ಮತ್ತು ಅಮೀರ್ ಖುಸ್ರು. ಮುಖ್ಯರು. ಇವರ ನಂತರ ಮತ್ತೊಬ್ಬ ಕನ್ನಡಿಗನಾದ ಪುಂಡರೀಕ ವಿಠಲ ಎಂಬಾತ ಸದ್ರಾಗ ಚಂದ್ರೋದಯ, ರಾಗಮಾಲ, ರಾಗಮಂಜರಿ ಮುಂತಾದ ಸಂಗೀತ ಶಾಸ್ತ್ರ ಗ್ರಂಥಗಳನ್ನು ರಚಿಸಿದನು. ಉತ್ತರ ಭಾರತವನ್ನಾಳಿದ ಬಹುತೇಕ ಮುಸ್ಲಿಂ ದೊರೆಗಳು ಸಂಗೀತ ಮತ್ತು ನೃತ್ಯ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಫಲವಾಗಿ, ನೆರೆಯ ಪರ್ಷಿಯ ದೇಶದಿಂದ ಬಂದ ಕೆಲವು ಸಂಗೀತದ ರಾಗಗಳು ಹಿಂದೂಸ್ತಾನಿ ಸಂಗೀತದಲ್ಲಿ ಮಿಳಿತಗೊಂಡವು.

ರಾಗಗಳ ವರ್ಗೀಕರಣ ಪದ್ಧತಿಯು ಕರ್ನಾಟಕ ಮತ್ತು ಹಿಂದೂಸ್ತಾನಿ ಈ ಎರಡೂ ಸಂಗೀತ ಪ್ರಕಾರಗಳಲ್ಲಿ ಅತ್ಯಂತ ಪ್ರಾಚೀನವಾದ ಪದ್ಧತಿಯಾಗಿದೆ. ಮತಂಗಮುನಿಗಿಂತ ಮುಂಚಿತವಾಗಿ ಹಿಂದಿನ ಕೆಲವು ಪಂಡಿತರು ರಾಗಗಳನ್ನು ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎಂದು ವಿಂಗಡಿಸಿದ್ದರು. ಇದರಿಂದಾಗಿ ಉತ್ತರ ಭಾರತದಲ್ಲಿ ರಾಗರಾಗಿಣಿ ಪದ್ಧತಿಯು ಹದಿನಾರನೆಯ ಶತಮಾನದಿಂದ ಅಸ್ತಿತ್ವಕ್ಕೆ ಬಂದಿತು. ಇದರ ಜೊತೆಗೆ ರಾಗವೇಳಾ ಎಂಬ ನಿಯಮವು ಪ್ರಾಚೀನ ಕಾಲದಿಂದ ರೂಢಿಯಲ್ಲಿತ್ತು. ಯಾವ ಕಾಲದಲ್ಲಿ ಮತ್ತು ಯಾವ ಋತುವಿನಲ್ಲಿ ಯಾವ ರಾಗವನ್ನು ಹಾಡಬೇಕು ಎಂಬುದರ ಕುರಿತು ನಿಯವಿತ್ತು. ಹದಿಮೂರನೇ ಶತಮಾನದಲ್ಲಿ ಶಾರ್ಙ್ಗದೇವನಿಂದ ಆರಂಭವಾಯಿತು ಎಂದು ಹೇಳಲಾಗುವ ಈ ಪದ್ಧತಿಯನ್ನು ಪುಂಡರೀಕವಿಠಲ ಎಂಬಾತ ಹಿಂದೂಸ್ತಾನಿ ಸಂಗೀತದಲ್ಲಿ ಮೊದಲ ಬಾರಿಗೆ ಅಳವಡಿಸಿದನು. ಇಂತಹ ರಾಗವೇಳಾಪಟ್ಟಿಯನ್ನು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ತಿದ್ದುಪಡಿ ಮಾಡುವುದರ ಜೊತೆಗೆ ಹಿಂದೂಸ್ತಾನಿ ಸಂಗೀತದ ರಾಗಗಳನ್ನು ನಿರ್ಧಿಷ್ಟವಾಗಿ ಗುರುತಿಸಿ, ಕೆಲವು ಶಾಸ್ತ್ರಗಳನ್ನು ಬರೆದ ಮಹನೀಯರಲ್ಲಿ ವಿಷ್ಣು ನಾರಾಯಣ ಭಾತಖಾಂಡೆಯವರು ಅಗ್ರಗಣ್ಯರು. ಜೀವನ ಪೂರ್ತಿ ಸಂಗೀತದ ಅಧ್ಯಯನದಲ್ಲಿ ತೊಡಗಿಕೊಂಡು, ಹಿಂದೂಸ್ತಾನಿ ಸಂಗೀತದ ಪ್ರಕಾರಗಳು, ರಾಗಗಳ ವೈಶಿಷ್ಟ್ಯ ಮತ್ತು ಅವುಗಳ ಲಕ್ಷಣ ಕುರಿತು ಅಕ್ಷರ ರೂಪದಲ್ಲಿ ದಾಖಲಿಸಿದರು. ಇದಕ್ಕೂ ಮುನ್ನ ಅನೇಕ ರಾಗಗಳು ಮತ್ತು ಹಿಂದೂಸ್ಥಾನಿ ಸಂಗೀತ ಪದ್ಧತಿಗಳು ತಮ್ಮದೇ ಆದ ಪ್ರತ್ಯೇಕ ಶೈಲಿಯಲ್ಲಿ (ಘರಾಣೆ ಹೆಸರಿನಲ್ಲಿ) ಮೌಖಿಕ ಪಠ್ಯವಾಗಿ ಬಾಯಿಂದ ಬಾಯಿಗೆ ಮತ್ತು ಎದೆಯಿಂದ ಎದೆಗೆ ಹರಿದು ಬರುತ್ತಿದ್ದವು.

1860ರಲ್ಲಿ ಇಂದಿನ ಮುಂಬೈ ನಗರದ ಗಿರ್‌ಗಾಂವ್ ನಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾತಖಾಂಡೆಯವರು ತನ್ನ ತಂದೆಯವರ ಮೂಲಕ ಗೋರಾ ರಾಮ ಮಂದಿರದಲ್ಲಿ ಜರುಗುತ್ತಿದ್ದ ಸಂಗೀತವನ್ನು ಕೇಳುತ್ತಾ ಪ್ರಭಾವಗೊಂಡವರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಶ್ರೀ ವಲ್ಲಭದಾಸ್ ಗೋಪಾಲಗಿರಿ ಎಂಬುವರಿಂದ ಸೀತಾರ್ ಕಲಿಯಲು ಆರಂಭಿಸಿದರು. ಈ ವೇಳೆಯಲ್ಲಿ ಅವರಿಗೆ ಸಂಗೀತಶಾಸ್ತ್ರ ಮತ್ತು ರಾಗಗಳ ಲಕ್ಷಣ ಕುರಿತು ಆಸಕ್ತಿ ಮೂಡಿತು. ಈ ಕುರಿತಂತೆ ಅವರು ಹಿಂದೂಸ್ತಾನಿ ಸಂಗೀತ ಕುರಿತು ಆಳವಾದ ಅಧ್ಯಯನ ಮಾಡಲು ನಿರ್ಧರಿಸಿದರು. ಆ ಕಾಲಕ್ಕೆ ಪ್ರಖ್ಯಾತ ಸೀತಾರ್ ವಾದಕರಾಗಿದ್ದ ಪಂಡಿತ್ ಪನ್ನಾಲಾಲ್ ಘೋಷ್ ಅವರು ರಚಿಸಿದ್ದ “ನಾದ್-ವಿನೋದ್” ಎಂಬ ಕೃತಿಯನ್ನು ಓದಿ ಗಂಭೀರವಾದ ಅಧ್ಯಯನದಲ್ಲಿ ತೊಡಗಿಕೊಂಡರು.

1884ರಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿ, ಸಂಗೀತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಾಪೂರ್ ಸ್ಪೆನ್ಸರ್ ಎಂಬ ಸಂಸ್ಥೆ ಹಾಗೂ ಕೆಲವು ಪಾರ್ಸಿ ಕುಟುಂಬಗಳು ಆರಂಭಿಸಿದ “ ಪಾರ್ಸಿ ಗಾಯನೋತ್ತೇಜಕ್ ಮಂಡಳಿ” ಗೆ ಭಾತಖಾಂಡೆಯವರು ಸೇರ್ಪಡೆಯಾದರು. ಈ ಮಂಡಳಿಯಲ್ಲಿ ಪ್ರಸಿದ್ಧ ವಿದ್ವಾಂಸರಾದ ಪಂಡಿತ್ ರಾಜೀವ್ ಬುವಾ, ಉಸ್ತಾದ್‌ಅಲಿಖಾನ್, ವಿಲಾಯತ್ ಹುಸೇನ್, ಮುಂತಾದವರು ಆಸಕ್ತ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸಿಕೊಡುತ್ತಿದ್ದರು.

ಬಾತಖಂಡೆಯವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪಂಡಿತ್ ರಾಜೀವ್ ಬುವಾ ಅವರಿಂದ 300 ದ್ರುಪದ್ ಗಾಯನಗಳನ್ನು ಮತ್ತು ಉಸ್ತಾದ್ ಅಲಿಖಾನ್ ಮತ್ತು ವಿಲಾಯತ್ ಹುಸೇನ್ ರಿಂದ 150 ಖ್ಯಾಲ್ ಗಾಯನಗಳನ್ನು ಕಲಿತರು. ಇವುಗಳ ಜೊತೆಗೆ ಭಾತ ಖಂಡೆಯವರು ಜೈಪುರ್ ಘರಾಣೆಯ ಮುನ್ನೂರಕ್ಕೂ ಹೆಚ್ಚು ಸಾಂಪ್ರದಾಯಿಕ ರಚನೆಗಳನ್ನು ಜೈಪುರದ ಅಸ್ಕರ್ ಆಲಿ ಖಾನ್ ರವರಿಂದ ದಾಖಲಿಸಿಕೊಂಡರು. ಭಾತಖಂಡೆಯವರ ದಣಿವರಿಯದ ಉತ್ಸಾಹವನ್ನು ನೋಡಿದ ಅನೇಕ ಹಿಂದೂಸ್ತಾನಿ ಗಾಯನದ ಪಂಡಿತರು ತಮ್ಮ ಬಳಿ ಇದ್ದ ಸಂಗೀತ ಸಾಹಿತ್ಯ ರಚನೆಗಳು (ಬಂದಿಷ್) ಇವುಗಳನ್ನು ಅವರಿಗೆ ನೀಡಿದರು. ಇವರಲ್ಲಿ ಗ್ವಾಲಿಯರ್ ಘರಾಣೆಯ ಏಕನಾಥ ಪಂಡಿತ್, ರಾಂಪುರ್ ಘರಾಣೆಯ ನವಾಬ್ ಹಮೀದ್ ಆಲಿಖಾನ್, ಗಿದ್ದೋರ್ ಘರಾಣೆಯ ಉಸ್ತಾದ್ ವಜೀಖಾನ್ ಮತ್ತು ಮಹಮ್ಮದ್ ಆಲಿಖಾನ್ ಮುಂತಾದವರು ತಮ್ಮ ಸಂಗೀತ ಶೈಲಿಯಿಂದ ಹಿಡಿದು, ತಮ್ಮಲ್ಲಿದ್ದ ಸಂಗೀತ ಕೃತಿಗಳನ್ನು ನೀಡಿ ಸಹಕರಿಸಿದರು. ಇಂತಹ ಹಿರಿಯ ಸಂಗೀತ ದಿಗ್ಗಜರ ಸಹಾಕಾರ ಪ್ರೇರಣೆಯಿಂದ ಹಿಂದೂಸ್ತಾನಿ ಸಂಗೀತದ ಶಾಸ್ತ್ರ ಗ್ರಂಥವನ್ನು ವಿಶೇಷವಾಗಿ ರಾಗಲಕ್ಷಣಗಳನ್ನು ಗುರುತಿಸುವ, ಸಂಗೀತದ ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳ ರಚನೆಗೆ ಮುಂದಾದರು.

ಕೃತಿ ರಚನೆಗೆ ಮುನ್ನ, ಅವರು ದೆಹಲಿ, ಗ್ವಾಲಿಯರ್, ಜೈಪುರ, ಆಗ್ರಾ, ಪಟಿಯಾಲ, ಬರೋಡ, ಹೈದರಾಬಾದ್ ನಗರಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ವಿವಿಧ ಶೈಲಿಯ ಹಿಂದೂಸ್ತಾನಿ ಸಂಗೀತಕ್ಕೆ ಸಾಕ್ಷಿಯಾದರು ಜೊತೆಗೆ ಗಾಯಕರ ಜೊತೆ ಚರ್ಚೆ ನಡೆಸಿದರು. ಇದು ಸಾಲದೆಂಬಂತೆ, ಕರ್ನಾಟಕ ಸಂಗೀತದ ರಾಗಗಳ ಲಕ್ಷಣಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ 1904ರಲ್ಲಿ ದಕ್ಷಿಣ ಭಾರತದ ಮದ್ರಾಸ್, ಮೈಸೂರು, ತಂಜಾವೂರು, ತಿರುವಾಂಕೂರ್ ಮಧುರೈ, ಬೆಂಗಳೂರು, ರಾಮನಾಥಪುರಂ ಮುಂತಾದ ನಗರಗಳಲ್ಲಿ ಸುತ್ತಾಡಿ, ಸಂಗೀತದ ವಿದ್ವಾಂಸರ ಜೊತೆ ಒಡನಾಡುತ್ತಾ, ಕರ್ನಾಟಕ ಸಂಗೀತದ ಕೃತಿಗಳ ಅಧ್ಯಯನ ನಡೆಸಿದರು. ಭಾತಖಂಡೆಯವರಿಗೆ ವೆಂಕಟಮುಖಿಯ ಮೇಳಕರ್ತ ರಾಗ ಎಂಬ ಕರ್ನಾಟಕ ಸಂಗೀತದ 72 ರಾಗಗಳ ಲಕ್ಷಣ ಕೃತಿಯು ಹೆಚ್ಚು ಪ್ರಭಾವ ಬೀರಿತು. ಇದೂ ಸಾಲದಂಬಂತೆ, 1906 ರಿಂದ 1908ರ ವರೆಗೆ ಕೊಲ್ಕತ್ತ, ವಾರಾಣಾಸಿ, ಪುರಿ, ಅಲಹಾಬಾದ್, ಲಕ್ನೋ, ಉದಯಪುರ್ ಹೀಗೆ ಇಡೀ ದೇಶದ ಹಲವು ನಗರಳಲ್ಲಿ ಅಸ್ತಿತ್ವದಲ್ಲಿ ಸಂಗೀತವನ್ನು ಅಧ್ಯಯನ ಮಾಡಿ, ವೆಂಕಟಮುಖಿಯ ಕೃತಿಯನ್ನು ಮಾದರಿಯನ್ನಾಗಿಟ್ಟುಕೊಂಡು, 1910 ರಲ್ಲಿ “ ಶ್ರೀ ಮಲ್ಲಕ್ಷ್ಯ ಸಂಗೀತ” ಎಂಬ ಲಕ್ಷಣ ಗ್ರಂಥವನ್ನು ರಚನೆ ಮಾಡಿದರು.

ಜೀವನೋಪಾಯಕ್ಕಾಗಿ ಕೆಲವು ಶ್ರೀಮಂತ ಕುಟುಂಬಗಳ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಕಾನೂನು ಸಲಹೆಗಾರರಾಗಿ ಮತ್ತು ಎಸ್ಟೇಟ್ ಮೇನೆಜರ್ ಆಗಿ ಕಾರ್ಯನಿರ್ವಸುತ್ತಿದ್ದ ಅವರು ತಮ್ಮ ಹುದ್ದೆಗೆ ವಿದಾಯ ಹೇಳಿ, ಶಾರದ ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯೊಂದನ್ನು ತೆರೆದು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಳ್ಳುವ ಕ್ರಿಯೆಯಲ್ಲಿ ತೊಡಗಿಸಿಕೊಂಡರು. ಕೆಲವು ಸಂಸ್ಥಾನಗಳ ರಾಜಮಹಾರಾಜರ ನೆರವಿನಿಂದ ಮುಂಬೈ ನಗರದಲ್ಲಿ ಸಂಗೀತ ಕಚೇರಿಯನ್ನು ಏರ್ಪಡಿಸುವುದರ ಮೂಲಕ ದೇಶದ ಭಾಗಗಳಿಂದ ಕಲಾವಿದರನ್ನು ಕರೆಸಿ, ಅವರ ಗಾಯನ ಶೈಲಿ ಮತ್ತು ಸಂಗೀತದ ಪ್ರಕಾರಗಳನ್ನು ಮುಂಬೈನ ಕಲಾರಸಿಕರಿಗೆ ಪರಿಚಯಮಾಡಿಕೊಟ್ಟರು. ಇದರ ನಡುವೆ ಹದಿನೆಂಟಕ್ಕೂ ಹೆಚ್ಚು ಸಂಗೀತ ಲಕ್ಷಣ ಕುರಿತಾದ ಕೃತಿಗಳನ್ನು ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ರಚನೆ ಮಾಡಿದರು. ಇವುಗಳಲ್ಲಿ ನಾಟ್ಯಶಾಸ್ತ್ರ, ಸಂಗೀತ್ ರತ್ನಾಕರ, ಸಂಗೀತ್ ದರ್ಪಣ, ರಾಗವಿಬೋಧ, ಸಂಗೀತ್ ಪಾರಿಜಾತ್ ಮುಖ್ಯವಾದ ಕೃತಿಗಳಾಗಿವೆ. ಅವರ ಮಹತ್ವದ ಕೃತಿಯೆಂದರೆ, “ಕ್ರಮಿಕ್ ಪುಸ್ತಕ್ ಮಾಲಿಕಾ” ಎಂಬ ಆರು ಸಂಪುಟಗಳ ಈ ಕೃತಿಯಲ್ಲಿ 1800 ಸಂಗೀತದ ಸಾಹಿತ್ಯ ರಚನೆಗಳನ್ನು ಹತ್ತು ಥಾಟ್ ಗಳಾಗಿ ವಿಂಗಡನೆ ಮಾಡಿದ್ದಾರೆ. ( ಸ್ವರಗಳ ಆಧಾರದ ಮೇಲೆ ರಾಗಗಳನ್ನು ವಿಂಗಡಿಸುವ ಅಥವಾ ಗುರುತಿಸುವ ವಿಧಾನ) ಥಾಟ್ ಪದ್ಧತಿಯನ್ನು ಬಳಕೆಗೆ ತಂದವರಲ್ಲಿ ಭಾತಖಾಂಡೆ ಮೊದಲಿಗರು. ಅವರ ಗ್ರಂಥದಲ್ಲಿ ಬಿಲಾವಲ್ ಥಾಟ್ ಅನ್ನು ಶುದ್ಧ ಸ್ವರ ಸಪ್ತಕ ಎಂದು ಕರೆದರು. ಕರ್ನಾಟಕ ಸಂಗೀತದಲ್ಲಿ ಶುದ್ಧರಿಷಭ, ಶುದ್ಧ ದೈವತ, ಸಾಧಾರಣಾ ಗಾಂಧಾರ, ಕೈಷಿಕಿ ನಿಷಾಧಗಳು ಹಿಂದೂಸ್ಥಾನಿ ಸಂಗೀತದಲ್ಲಿ ಕೋಮಲ, ರಿಷಭ, ದೈವತ,ಗಾಂಧಾರ, ನಿಷಾದಗಳಾಗಿವೆ. ಎರಡು ಸಂಗೀತ ಪ್ರಕಾರಗಳು ಸ್ವರ ಮತ್ತು ಲಯ ಗಳನ್ನು ಆಧರಿಸಿದ್ದರೂ ಸಹ ಹಿಂದೂಸ್ಥಾನಿ ಸಂಗೀತದಲ್ಲಿ ತಾಳಕ್ಕೆ ಮಹತ್ವ ಇರುವಂತೆ, ಕರ್ನಾಟಕ ಸಂಗೀತದಲ್ಲಿ ಶ್ರುತಿಗೆ ಮಹತ್ವ ನೀಡಲಾಗಿದೆ. ಇಂದಿನ ಹಿಂದೂಸ್ಥಾನಿ ಸಂಗೀತದ ವಿವಿಧ ಪ್ರಕಾರಗಳಾದ ಸರ್ ಗಮ್, ದ್ರಪದ್, ಖ್ಯಾಲ್, ಠುಮ್ರಿ, ಧಮಾರ್, ಹೋರಿ ಈ ಗಾಯನಗಳಲ್ಲಿ ವಿವಿಧ ಘರಾಣೆಯ ಪ್ರಭಾವವಿದ್ದರೂ ಸಹ ಇವುಗಳ ಸಂಗೀತ ಕೃತಿ ಮತ್ತು ಬಳಸಲಾಗುವ ರಾಗಗಳಲ್ಲಿ ವಿಷ್ಣ ನಾರಾಯಣ್ ಭಾತಖಾಂಡೆಯವರ ಶ್ರಮವನ್ನು ಈಗಲೂ ನಾವು ಕಾಣಬಹುದು. ಹಾಗಾಗಿ ಅವರು ಆಧುನಿಕ ಹಿಂದೂಸ್ಥಾನಿ ಸಂಗೀತ ಪಿತಾಮಹರಲ್ಲಿ ಒಬ್ಬರಾಗಿದ್ದಾರೆ. 1937ರಲ್ಲಿ ನಿಧನರಾದ ಭಾತಖಾಂಡೆಯವರು ಇಂದಿಗೂ ಸಹ ಹಿಂದುಸ್ತಾನಿ ಸಂಗೀತದಲ್ಲಿ ಅವಿಸ್ಮರಣೀಯರಾಗಿ ಉಳಿದಿದ್ದಾರೆ.

*

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...