ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

Date: 27-09-2020

Location: ಬೆಂಗಳೂರು


ಕತೆಗಾರ ಲಕ್ಷ್ಮಣ ಬಾದಾಮಿ ಅವರು ದೃಶ್ಯ ಕಲೆಯ ಬರವಣಿಗೆಯಲ್ಲಿಯೂ ನಿಷ್ಣಾತರು. ಅವರು ಬರೆವ ಅಂಕಣ ವರ್ಣಯಾತ್ರೆ. ಈ ಬಾರಿಯ ಅಂಕಣದಲ್ಲಿ ಲಿಯೋನಾರ್ಡ್‌ ಡ ವಿಂಚಿಯ ’ಮಡೋನಾ ಲಿಟ್ಟ’ ಕಲಾಕೃತಿಯ ಬಗ್ಗೆ ಬರೆದಿದ್ದಾರೆ.

ಕಲಾಕೃತಿ: ‘ಮಡೋನಾ ಲಿಟ್ಟ
ಕಲಾವಿದ: ಲಿಯೋನಾರ್ಡೋ ಡಿ ಸೆರ್ ಪಿಯರೋ ಡ ವಿಂಚಿ
ಕಾಲ: ೧೫ ಏಪ್ರೀಲ್, ೧೪೫೨
ಸ್ಥಳ: ಇಟಲಿಯ ವಿಂಚಿ
ಕಲಾಪಂಥ: ಪುನರುಜ್ಜೀವನ ಕಾಲ

ಲಿಯೋನಾರ್ಡೋ ಡ ವಿಂಚಿ ಅಂದಾಕ್ಷಣಕ್ಕೆ ನಮಗೆ ನೆನಪಾಗುವುದು ವಿಶ್ವವಿಖ್ಯಾತ ‘ಮೊನಾಲಿಸಾ ಕೃತಿ. ಅದರಾಚೆಯೂ ಅವನ ಇನ್ನೂ ಎಷ್ಟೋ ಕೃತಿಗಳ ಕುರಿತು ನಮ್ಮಗಳ ಗಮನ ಹರಿಯುವುದು ಕಡಿಮೆ. ಅವನ ‘ಲಾಸ್ಟ್ ಸಪ್ಪರ್ ಮತ್ತು ‘ಮಡೋನಾ ಸರಣಿಯ ಹಲವು ಕೃತಿಗಳು ಬಹುಮುಖ್ಯವಾಗಿವೆ. ಅದರಲ್ಲಿ ‘ಮಡೋನಾ ಲಿಟ್ಟ ಒಂದು ಚಂದದ ಕಲಾಕೃತಿ. ಇಲ್ಲಿ ವರ್ಜಿನ್ ಮೇರಿ ತನ್ನ ಮಗು ಏಸುವಿಗೆ ಹಾಲೂಡಿಸುತ್ತಿದ್ದಾಳೆ. ಯಾವುದೇ ಮಾತೆಯೊಬ್ಬಳ ಮಹತ್ವದ ಧರ್ಮವೆಂದರೆ ತನ್ನ ಮಗುವಿಗೆ ಹಾಲೂಡಿಸುವುದೇ ಆಗಿದೆ. ಈ ಕಾರ್ಯ ಅದೆಷ್ಟು ಸಂತೃಪ್ತಿಕರವಾದುದು ಎನ್ನುವುದನ್ನು ಮೇರಿಯ ಮುಖಚರ್ಯೆಯಲ್ಲಿ ಗಮನಿಸಬಹುದಾಗಿದೆ. ಮಗುವನ್ನೇ ತದೇಕಿಸುತ್ತಿರುವ ಮೇರಿ, ಹಾಲು ಹೀರುತ್ತಿರುವ ಮಗು ಇಬ್ಬರಲ್ಲೂ ಒಂದೇ ಧಾರೆ ಹರಿದು ಏಕೀಭವವಾದಂತೆ ಕಾಣಿಸುತ್ತದೆ.

ಮಗುವಿನಷ್ಟೇ ಮುಗ್ಧ ಮುದ್ದುಮುಖ ಮೇರಿಯದು ಆಗಿದೆ. ಮಗುವಿನ ಮುಖದ ಬಲಪಾರ್ಶ್ವ ನೋಡುಗನಿಗೆ ಕಂಡರೆ ಮೇರಿಯದು ಎಡ ಪಾರ್ಶ್ವ ಕಾಣುತ್ತದೆ. ಹಾಗೆ ನೋಡಿದರೆ ಇಲ್ಲಿ ಮೇರಿಯ ಚೆಲುವು ಅಸಾದೃಶ್ಯವಾದುದು. ಅದು ಮೋನಾಲಿಸಳನ್ನು ಮೀರಿಸುತ್ತದೆ. ಒಂದು ಗೌನನ್ನು ಧರಿಸಿ ಮೇಲೊಂದು ಉತ್ತರೀಯ ಹೊದೆದು ತಲೆಗೆ ಮಫ್ಲರ್‌ನಂಥದ್ದನ್ನು ಸುತ್ತಿರುವ ಮೇರಿಗೆ ತಾನು ಹಾಲೂಡಿಸುತ್ತಿರುವುದು ದೇವದೂತನಾದ ಏಸುವಿಗೆ ಎಂಬ ಭಾವ ಪರವಶತೆಯೂ ಇಲ್ಲಿ ಎದ್ದು ಕಾಣುತ್ತದೆ. ಮಗುವು ಒಂದು ಕೈಯಲ್ಲಿ ತಾಯ ಮೊಲೆ ಹಿಡಿದು ನೋಡುಗರೆಡೆಗೆ ಬಿಡುಗಣ್ಣಿನಿಂದ ದೃಷ್ಟಿ ನೆಟ್ಟಿದೆ. ಆ ನೋಟದಲ್ಲಿ ಅಗಾಧವೊಂದನ್ನು ಧ್ಯಾನಿಸುತ್ತಿರುವಂತೆ ಕಾಣುತ್ತಿದೆ. ಸಂಪೂರ್ಣ ಬರೀ ಮೈಯಲ್ಲಿರುವ ಮಗುವಿನ ಆಕರ್ಷಣೆಯೆಂದರೆ ಅದರ ಕೆಂಚು ತಲೆಗೂದಲು. ಅವು ನವಿರಾದ ರೇಶ್ಮೆ ಎಳೆಯಂತೆ ಗುಂಗುರು ಗುಂಗುರಾಗಿ ಹರಡಿನಿಂತಿವೆ. ಇದು ಕೇವಲ ತಾಯಿ ಮಗುವಿನ ಚಿತ್ರವಾಗಿರದೆ ನಿರ್ಮಮವಾದ ಪ್ರೇಮವು ಮೂರ್ತವಾಗುತ್ತಿರುವ ಕ್ಷಣದ ಚಿತ್ರಣದಂತೆ ಗೋಚರವಾಗುತ್ತಿದೆ.

ಈ ಚಿತ್ರ ನೋಡುತ್ತಿದ್ದಂತೆ ನಮಗೆ ಒಂದೊಮ್ಮೆ ನಮ್ಮ ‘ಯಶೋಧೆ-ಕೃಷ್ಣನ ಎತ್ತಿಕೊಂಡಿರುವ ಇಂಥದೇ ಅನೇಕ ಚಿತ್ರಗಳು ಕಣ್ಮುಂದೆ ಸುಳಿದು ಹೋಗುತ್ತವೆ. ವೇಷ-ದೇಶವಷ್ಟೇ ಬೇರೆ. ಬಾಕಿಯೆಲ್ಲ ತಾಯಿಯೊಡಲು, ಮಡಿಲು, ಮಮತೆ, ಭಾವ ಎಲ್ಲಾ ಸರ್ವದೇಶಿಕ ಮತ್ತು ಸರ್ವಕಾಲಿಕವಾಗಿ ಒಂದೆಯಲ್ಲವೇ..?!

ತಾಯಿ-ಮಗುವಿನ ಈ ಚಿತ್ರವನ್ನು ತದೇಕಿಸುವಾಗ ಹಿನ್ನೆಲೆಯಲ್ಲಿರುವ ಎರಡು ಕಿಟಕಿಗಳು ನೋಡುಗನ ದೃಷ್ಟಿಯನ್ನು ಕದಲಿಸುತ್ತವೆ. ಗಾಢ ಹಿನ್ನೆಲೆಯಲ್ಲಿ ಕಮಾನಿನಾಕಾರದಲ್ಲಿ ತರೆದುಕೊಂಡಿರುವ ಈ ಕಿಟಕಿಗಳಿಂದ ತಿಳಿಯಾದ ಮುಗಿಲು, ಮೋಡಗಳನ್ನು ಕಾಣಿಸಿರುವುದರಿಂದ ಮುಖ್ಯ ಆಕೃತಿಯಲ್ಲೂ ಅಷ್ಟೇ ತಿಳಿಯಾದ ಬಣ್ಣಗಳು ಬಳಕೆಯಾಗಿರುವುದರಿಂದ ನೋಡುವವನಿಗೆ ಮುಖ್ಯ ಆಕೃತಿಯತ್ತಲೇ ಒಂದಿಷ್ಟು ಸ್ಥಿರ ದೃಷ್ಟಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಿಟಕಿಯ ಬೆಳಕು ಪದೇ ಪದೇ ಕಾಡುತ್ತದೆ (ಇದೇ ರೀತಿಯ ಕಿಟಕಿಯ ಅಡಚಣೆ ಇವನ ಇನ್ನೊಂದು ಪ್ರಸಿದ್ಧ ಚಿತ್ರ ‘ದಿ ಲಾಸ್ಟ್ ಸಪ್ಪರ್ನಲ್ಲೂ ಇದೆ). ಇದರಾಚೆ ಇನ್ನೊಂದು ದೃಷ್ಟಿಕೋನದಲ್ಲೂ ಈ ಕಿಟಕಿಗಳನ್ನು ನೋಡುವುದು ಸಾಧ್ಯವಿದೆ. ಚಿತ್ರದೊಳಗಡೆಯೇ ಪ್ರತ್ಯೇಕವಾಗಿ ಮೈದಾಳಿರುವ ಇವು ಇನ್ನೆರಡು ಚಿತ್ರಗಳಂತೆ ಕಾಣುತ್ತವೆ. ಈ ಎರಡೂ ಕಿಟಕಿಗಳಲ್ಲಿ ಕಾಣುವ ನೋಟ ಹೆಚ್ಚು ಕಡಿಮೆ ಒಂದೇಯಾಗಿದೆ. ಂeಡಿiಚಿಟನ ಅನಂತ ನೋಟ ಒಂದು ಕಿಡಕಿಯ ಬಿಂಬ ಇನ್ನೊಂದರಲ್ಲಿ ಪ್ರತಿಬಿಂಬದಂತೆ ಕಾಣುತ್ತದೆ. ಹಾಗೆಯೇ ಮಾತೆಯ ಪರಿಶುದ್ಧ ವಾತ್ಸಲ್ಯವು ಅನಂತವಾದುದು. ಇದರ ಬಿಂಬ-ಪ್ರತಿಬಿಂಬಗಳನ್ನು ತಾಯಿ ಮಗು ಇಬ್ಬರಲ್ಲೂ ಕಾಣಬಹುದು.

ಪುನರುಜ್ಜೀವನ ಕಾಲದಲ್ಲಿ ತೈಲವರ್ಣ ಚಿತ್ರಕಲೆಯ ಆರಂಭವಾಯಿತು. ಈ ಹಂತದಲ್ಲಿ ಚಿತ್ರಕಲೆಯು ಬಹುತೇಕವಾಗಿ ದೈವಭಕ್ತಿಗೆ ಪೂರಕವಾಗಿ ಬಳಕೆಯಾಗುತ್ತಿತ್ತು. ಏಸುಕ್ರಿಸ್ತನ ಜನನವಾದ ಮೇಲೆ ಪಾಶ್ಚಿಮಾತ್ಯ ಚಿತ್ರಕಲೆಯಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಭಾವವೂ ಹೆಚ್ಚಾಯಿತು. ಮಧ್ಯಕಾಲೀನ ಸಂದರ್ಭದಲ್ಲಿ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿಲ್ಲ. ಆನಂತರ 13ನೇ ಶತಮಾನದ ನಂತರ ಮುನ್ನೆಲೆಗೆ ಬರತೊಡಗಿತು. 14ನೇ ಶತಮಾನದ ಹೊತ್ತಿಗೆ ಪುನರುಜ್ಜೀವನ ಕಾಲ ಶುರುವಾಯಿತು. ಇದೇ ಅವಧಿಯಲ್ಲಿ ಲಿಯೋನಾರ್ಡೋ ಡ ವಿಂಚಿ, ಮೈಕೆಲ್ಯಾಂಜಿಲ್ಲೋ, ರಾಫೆಲ್ ಮುಂತಾದ ಕಲಾವಿದರು ತಮ್ಮ ಕೃತಿಗಳ ಮೂಲಕ ಜಗತ್ತಿಗೆ ಪರಿಚಯವಾಗತೊಡಗಿದರು. ಒಂದು ಹಂತದಲ್ಲಿ ಮೂವರ ನಡುವೆ ಒಂದಿಷ್ಟು ಪೈಪೋಟಿಯು ನಡೆದಿತ್ತು.

ಡ ವಿಂಚಿಯು ಕೇವಲ ಕಲೆಯಲ್ಲಿ ಅಷ್ಟೇಯಲ್ಲದೆ ವಿಜ್ಞಾನ, ತಂತ್ರಜ್ಞಾನಗಳಲ್ಲಿ ಅಪಾರ ಪರಿಣತಿಯನ್ನು ಪಡೆದಿದ್ದನು. ಜೀವಶಾಸ್ತ್ರ, ಖಗೋಳಶಾಸ್ತ್ರ, ಎಂಜಿನಿಯರಿಂಗ್ ಇವುಗಳಲ್ಲಿ ಆಸಕ್ತಿ ತೋರಿದ್ದಷ್ಟೇ ಅಲ್ಲ, ಹಲವು ಆವಿಷ್ಕಾರಗಳನ್ನು ಮಾಡಿದ್ದುಂಟು. ಮಿಲಿಟರಿಯಲ್ಲಿ ಎಂಜಿನಿಯರ್ ಆಗಿ ಅಲ್ಲಿ ಕೋಟೆಗಳ ವಿನ್ಯಾಸ, ಮಿಲಿಟರಿ ವಾಹನಗಳ ವಿನ್ಯಾಸ, ವಿಮಾನದ ವಿನ್ಯಾಸಗಳನ್ನು ಮಾಡಿದ್ದನು. ಮೃತ ಶರೀರಗಳ ಛೇದನ ಮಾಡಿ ಅಂಗಾಗಳ ರೇಖಾಚಿತ್ರ ಬರೆದು ಆ ಕಾಲದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಹದುಪಕಾರ ಮಾಡಿದ್ದಾನೆ. ಸಾಹಿತ್ಯಕ ಪ್ರತಿಭೆಯನ್ನು ಹೊಂದಿದ್ದ ಡ ವಿಂಚಿ ಅನೇಕ ಸಂಶೋಧನಾ ಟಿಪ್ಪಣೆಗಳು, ವೈಜ್ಞಾನಿಕವಾಗಿ ವಸ್ತುವಿನ ಒಳಮೂಲವನ್ನು ಶೋಧಿಸಿ ಬರೆದ ಬರೆವಣಿಗೆಗಳು ಇದ್ದವು. ಇವುಗಳನ್ನೆಲ್ಲಾ ಅವನು ಬರೆದದ್ದು ತಿರುವು-ಮುರುವು ಆಗಿ. ಇವುಗಳನ್ನು ಕನ್ನಡಿಯಲ್ಲಿ ನೋಡಿದರೆ ಸರಿಯಾಗಿ ಕಾಣುತಿದ್ದವು. ಇದು ಅವನದೊಂದು ವಿಶಿಷ್ಟತೆ ಎನ್ನಬಹುದು. ಈ ಬರೆವಣಿಗೆಗಳು ಅವನ ಮರಣಾನಂತರ ಅವನ ಉತ್ತರಾಧಿಕಾರಿಯಾದ ಫ್ರಾನ್ಸೆಸ್ಕೊ ಮೆಲ್ಜಿ ಚಿತ್ರಕಲೆಯ ಆಯ್ದಭಾಗಗಳನ್ನು ಒಳಗೊಂಡ ‘ಟ್ರೇಟೈಸ್ ಆನ್ ಪೇಂಟಿಗ್ನ್ನು 1651ರಲ್ಲಿ ಪ್ರಕಟಿಸಿದನು.

ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ವಿಂಚಿಯು ಇತರ ಕಲಾವಿದರಿಗೆ ಹೋಲಿಸಿದರೆ ಇವನು ರಚಿಸಿದ ಕಲಾಕೃತಿಗಳ ಸಂಖ್ಯೆ ಕಡಿಮೆಯೇ. ಸಂಖ್ಯೆ ಕಡಿಮೆಯಾದರೂ ಸತ್ವದ ದೃಷ್ಟಿಯಿಂದ ಇವೆಲ್ಲ ಬಹು ಶ್ರೇಷ್ಠ ಕೃತಿಗಳಾಗಿವೆ. ಪ್ರತಿ ಕೃತಿಯಲ್ಲೂ ಆತ ಹೊಂದಿದ್ದ ಅನ್ಯ ಕ್ಷೇತ್ರಗಳ ತಜ್ಞತೆಯ ಛಾಪು ಕಾಣುತ್ತದೆ. ಉದಾಹರಣೆಗೆ `The Annuciation’ ಕೃತಿಯಲ್ಲಿ ವಾಸ್ತುವಿನ್ಯಾಸಕಾರನ ಆಕರ್ಷಕ ಸೃಷ್ಟಿ, ಶಿಲ್ಪಿಯ ನೈಪುಣ್ಯತೆ, ಸಸ್ಯಶಾಸ್ತ್ರಜ್ಞನ ಅರಿವು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

‘ಮಗುವಿನೊಂದಿಗೆ ತಾಯಿ ಚಿತ್ರಗಳ ಒಂದು ಸರಣಿಯಂತೆ ಡ ವಿಂಚಿ ರಚಿಸಿದ್ದಾನೆ.1) Vergin with rocks 2) The Madonna of the Yarnwiner 3) The Vergin and child with St. Anne 4) Behois Madonna 5) Madonna of Cornation ಈ ಕೃತಿಗಳಲ್ಲೆಲ್ಲಾ ಮುಗ್ಧಮಕ್ಕಳ-ತಾಯಿಯ ವಾತ್ಸಲ್ಯ ಲಹರಿಯನ್ನು ಕಾಣುತ್ತೇವೆ. ಈ ತೆರನಾದ ತಾಯ ಪ್ರೀತಿಯನ್ನು ತನ್ನ ಕೃತಿಗಳಲ್ಲಿ ಹಿಡಿದಿಡಲು ಕಾರಣ ಅವನು ತನ್ನ ತಾಯಿಯಿಂದ ಅಗಲಿರಬೇಕಾದ ಸ್ಥಿತಿಯೇ ಎಂದನ್ನಿಸುತ್ತದೆ. ಇವನ ತಾಯಿ ಕ್ಯಾಥರಿನಾ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದಳು. ಡ ವಿಂಚಿ ಹುಟ್ಟಿದ ನಂತರ ಇವಳನ್ನು ಬಿಟ್ಟು ತಂದೆ ಇನ್ನೋರ್ವ ಶ್ರೀಮಂತ ಹೆಂಗಸನ್ನು ವರಿಸಿದನು. ಅವಳಿಗೆ ಮಕ್ಕಳಾಗಲಿಲ್ಲವೆಂದು ತಂದೆ ಕ್ಯಾಥರಿನಾಳನ್ನು ಬಿಟ್ಟು ಡ ವಿಂಚಿಯನ್ನು ಮಾತ್ರ ತನ್ನ ಬಳಿ ಇಟ್ಟುಕೊಂಡನು. ಮಲತಾಯಿ ತೀರಿದ ನಂತರ ತಂದೆ ಮತ್ತೊಂದು ಮದುವೆಯಾದನು. ಹೀಗೆ ಸ್ವಂತ ತಾಯಿಯಿಂದ ದೂರ ಉಳಿದು ಮಲತಾಯಿಯರನ್ನು ತನ್ನ ಜೀವನದಲ್ಲಿ ಕಾಣಬೇಕಾಯಿತು. ಈ ವೈರುಧ್ಯಗಳು ಡ ವಿಂಚಿಗೆ ತಾಯ ಮಮತೆಯ ಮೌಲ್ಯವನ್ನು, ಅಗಾಧತೆಯನ್ನು ಹೆಚ್ಚಿಸಿವೆ. ಈ ಕಾರಣಕ್ಕೇನೆ ಈ ಸರಣಿಯ ಚಿತ್ರಗಳ ಮಾಧ್ಯಮ ತೈಲವರ್ಣವಾಗಿರುಂತೆಯೇ ‘ಮಮತೆಯೂ ಇಲ್ಲಿ ಇನ್ನೊಂದು ಬಹುಮುಖ್ಯ ಮಾಧ್ಯಮವಾದಂತಿದೆ.

ಡ ವಿಂಚಿ ತನ್ನ ಚಿತ್ರಣಗಳಲ್ಲಿ ತೀವೃವಾಗಿ ಭಾವನೆಗಳನ್ನು ಒಡಮೂಡಿಸುವುದಕ್ಕೆ ಅವನ ಅಧ್ಯಯನ ವಿಶಿಷ್ಟವಾಗಿತ್ತು. ಜನನಿಬಿಡ ಸ್ಥಳಗಳಿಗೆ ಹೋಗಿ ಮನುಷ್ಯ ಚಟುವಟಿಕೆಗಳನ್ನು ಗಮನಿಸುವುದೊಂದು ಅಭ್ಯಾಸ. ತನ್ನ ಸ್ನೇಹಿತರನ್ನು ಮನಗೆ ಊಟಕ್ಕೆ ಕರೆದು ತಮಾಷೆ ಮಾಡುತ್ತ ಅವರು ನಗುತ್ತಿರುವಾಗ ಮುಖದಲ್ಲಿನ ಅಂಗಾಗಳ ಚಲನೆ, ಸ್ನಾಯುಗಳ ಹಿಗ್ಗುವಿಕೆ-ಕುಗ್ಗುವಿಕೆಯನ್ನು ತದೇಕಿಸುತ್ತಿದ್ದನು. ಅಪರಾಧಿಗಳನ್ನು ಮರಣದಂಡನೆಗೆ ಗುರಿಪಡಿಸುವ ಸ್ಥಳಕ್ಕೆ ಹೋಗಿ ಅಲ್ಲಿನ ಕ್ರೌರ್ಯ-ನೋವನ್ನು ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದ. ಅವನ ಈ ಭಾವನಿಷ್ಠ ಕೃತಿರಚನೆಗಳು ಮುಂದಿನ ಶತಮಾನದಲ್ಲಿ ಕಂಡುಬಂದ Romantistismಗೆ ಪೂರ್ವಪೀಠಿಕೆಯನ್ನು ಒದಗಿಸಿದಂತಿದ್ದವು. ವಿಸ್ಮಯ ಭಾವ ಹೊಂದಿರುವ La belle ferronnierePortrait ರೋಮ್ಯಾಂಟಿಸ್ಟಿಸಂನ ಮೊದಲ ಕೃತಿ ಅನ್ನಿಸುವಷ್ಟು ತೀಕ್ಷ್ಣನೋಟ ಇಲ್ಲಿದೆ.

ಕ್ರಿ. ಶ.14ನೇ ಶತಮಾನದಲ್ಲಿ ಆರಂಭಗೊಂಡು 15 ಮತ್ತು 16ನೇ ಶತಮಾನದಲ್ಲಿ ಪುನರುಜ್ಜೀವನ ಕಾಲವು ಗರಿಷ್ಠ ವಿಕಾಸದ ಸ್ಥಿತಿಯನ್ನು ತಲುಪಿತು. ಈ ಹಂತದಲ್ಲಿ ಹೊಸ ಹೊಸ ವಿಚಾರಗಳು ಮುನ್ನೆಲೆಗೆ ಬಂದವು. ಹೊಸ ಶೋಧಗಳು ಆದವು. ವಿದ್ಯಾಭ್ಯಾಸವು ಅನಿವಾರ್ಯ ಅಂಗವಾಯಿತು. ಯುರೋಪಿನಲ್ಲಿ ಈ ಆಧುನಿಕ ಯುಗದ ಕೇಂದ್ರ ಸ್ಥಾನವು ಇಟಲಿಯಾಗಿ ಎಲ್ಲ ಚಟುವಟಿಕೆಗಳ ತವರಾಗಿತ್ತು. ಸಾಹಿತ್ಯ ಕ್ಷೇತ್ರದ ಸ್ಫೂರ್ತಿಯನ್ನು ಅನೇಕ ಕಲಾವಿದರು ತಮ್ತಮ್ಮ ಕ್ಷೇತ್ರಕ್ಕೆ ಪಡೆದುಕೊಂಡು ಹೊಸ ಪರಿಣತಿಯನ್ನು ಸಾಧಿಸಿದರು. ಡ ವಿಂಚಿ ಸೇರಿದಂತೆ ಮೈಕೆಲ್ಯಾಂಜಿಲ್ಲೋ, ರಾಫೆಲ್ ಮೊದಲಾದವರ ಕಲಾಕೃತಿಗಳು ಈ ಕಾಲದಲ್ಲಿ ಅರಳಿದವು.

ಆಧುನಿಕ ಕಲಾವಿಮರ್ಶೆ ಗುರುತಿಸುವಂತೆ ಕಲಾಪಂಥ(Isms)ಗಳು ಒಂದಕ್ಕೆ ವಿರುದ್ಧವಾಗಿ ಇನ್ನೊಂದು ಅಥವಾ ಪರ್ಯಾಯವೆಂಬಂತೆ ಹುಟ್ಟಿಕೊಂಡಿವೆ. ಆದರೆ ಈ ಪೂರ್ವಸೂರಿಗಳಿಗೆ ಯಾವ ಪಂಥಗಳ ಪರಿಕಲ್ಪನೆಯೂ ಇರಲಿಲ್ಲವೆನಿಸುತ್ತದೆ. ಸೃಷ್ಟಿಶೀಲತೆಯೊಂದೇ ಅವರ ಮುಖ್ಯ ಧ್ಯೇಯವಾಗಿತ್ತು ಅನಿಸುತ್ತದೆ. ಹಾಗಾಗಿ ಏಸು, ಮೇರಿಯನ್ನೊಳಗೊಂಡ ಡ ವಿಂಚಿಯ ಕೃತಿಗಳು ಅಭಿಜಾತವಾದ (Classism)ದ ಕೃತಿಗಳಂತೆ ಕಂಡರೆ ‘ಮೊನಾಲಿಸಾ, ‘ಲೇಡಿ ವಿತ್ ಏರ್ಮಿನ್ ಇವು ವಾಸ್ತವವಾದಿ ಕೃತಿಗಳಾಗಿ ಕಾಣಿಸುತ್ತವೆ. ಅದ್ವಿತೀಯ ಕೃತಿಗಳನ್ನು ಸೃಷ್ಟಿಸಿದ ಡ ವಿಂಚಿ ನಂತರದಲ್ಲಿ ಸಂಪೂರ್ಣವಾಗಿ ಭೌತಿಕ ನೆಲೆಯ ಅಂಗರಚನಾಶಾಸ್ತ್ರಕ್ಕೆ ಸಂಬಂಧಿಸಿದ ನಿಖರ ವಾಸ್ತವವಾದಿ ರೇಖಾಚಿತ್ರಗಳನ್ನು
ರಚಿಸಿದ್ದಾನೆ.

ಈ ಅಂಕಣದ ಹಿಂದಿನ ಬರೆಹ

ನಿಸ್ತೇಜ ಮನುಷ್ಯನಿಗೆ ಜೀವ ತುಂಬುವ ಕಾತುರ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...