ಐವತ್ತು ಕಲ್ಲು ಒಗೆದು ಮಹಾದೇವರಾಯನ ಸಾವಿನ ಶಬ್ದ ಹಿಡಿದು…

Date: 07-08-2020

Location: ಬೆಂಗಳೂರು


ಕೇಳುಗನಿಗೆ ಕೇಳಿಸುವ ಮೂಲಕವೇ ಹೊಸ ಲೋಕ ಸೃಷ್ಟಿಸುವ ಮಾಧ್ಯಮ ರೇಡಿಯೋ. ’ಆಕಾಶವಾಣಿ’ ಎಂದು ಕರೆಯಲಾಗುವ ಈ ಮಾಧ್ಯಮವು ಭಾರತೀಯ ಸಂಗೀತ-ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಆಲ್‌ ಇಂಡಿಯಾ ರೇಡಿಯೋದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿರುವ ಡಾ. ಬಸವರಾಜ ಸಾದರ ’ಧ್ವನಿ’ ಜಗತ್ತು, ಅಲ್ಲಿ ಸೃಷ್ಟಿಸುವ-ಸೃಷ್ಟಿಯಾಗುವ ವಿಶಿಷ್ಟ ಸಂಗತಿಗಳನ್ನು ಕಟ್ಟಿಕೊಟ್ಟಿದ್ದಾರೆ.

1983, ಅಕ್ಟೋಬರ 3ನೆಯ ದಿನಾಂಕವದು, ದಿಲ್ಲಿಯ ಶಹಾಜಾನ್‌ ರಸ್ತೆಯ, ಡೋಲಪುರಹೌಸ್‌ನ ಯು.ಪಿ.ಎಸ್.ಸಿ. (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮೀಶನ್‌) ಕಛೇರಿಯ ಸಂದರ್ಶನದ ಕೋಣೆಯ ಹಾಟ್‌ಸೀಟ್‌ನಲ್ಲಿ ಕುಳಿತು, ಕಾರ್ಯಕ್ರಮ ನಿರ್ವಾಹಕ ಹುದ್ದೆಯ ಸಂದರ್ಶನದ ಎದುರಿಸುತ್ತಿದ್ದೆ. ಅಜಮಾಸು ಐವತ್ತೈದು ನಿಮಿಷಗಳ ಆ ಸಂದರ್ಶನದ ಅರ್ಧಭಾಗ ಮುಗಿಯುವ ಹೊತ್ತಲ್ಲಿ, ನಡುವೆಯೇ ಬಾನುಲಿ ತಜ್ಞರೊಬ್ಬರು ಇಂಗ್ಲೀಷ್‌ನಲ್ಲಿ ಒಂದು ಮಜಬೂತಾದ ಪ್ರಶ್ನೆ ಎಸೆದಿದ್ದರು. “Mr. Sadar, think that you are selected for the post of Programme Executive. Then you have to produce Radio plays for broadcast. Tell me how you will produce the scene in a Radio play, which begins with paper reading by a person, along with drinking tea?” (ಮಿ.ಸಾದರ ನೀವು ಈ ಕಾರ್ಯಕ್ರಮ ನಿರ್ವಾಹಕ ಹುದ್ದೆಗೆ ಆಯ್ಕೆಯಾಗಿದ್ದೀರಿ ಎಂದು ಭಾವಿಸಿಕೊಳ್ಳಿ. ಆಗ ನೀವು ಆಕಾಶವಾಣಿಯಲ್ಲಿ ಪ್ರಸಾರ ಮಾಡಲು ರೇಡಿಯೋ ನಾಟಕಗಳನ್ನು ನಿರ್ಮಿಸಬೇಕಾಗುತ್ತದೆ. ನೀವು ಹಾಗೆ ರೇಡಿಯೋ ನಾಟಕ ನಿರ್ಮಿಸುವಾಗ, ಒಬ್ಬ ವ್ಯಕ್ತಿ ಪೇಪರ್‌ ಓದುತ್ತ ಚಹಾ ಕುಡಿಯುವ ಸನ್ನಿವೇಶವನ್ನು ಹೇಗೆ ನಿರ್ಮಿಸುತ್ತೀರಿ?).
ಪ್ರಶ್ನೆ ಕಿವಿಗೆ ಬಿದ್ದ ಕೂಡಲೇ ನಾನು ಸಂಪೂರ್ಣ ಮಂಕಾಗಿ ಹೋಗಿದ್ದೆ. ʻಮುಗಿಯಿತು ನನ್ನ ಈ ಹುದ್ದೆಯ ಆಸೆʼ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತ, ಮಂಗನಂತೆ ಮುಖ ಮಾಡಿಕೊಂಡು ಕುಳಿತಿರುವಾಗ ಆ ತಜ್ಞರು, ಬಿಡದೆ, ನನ್ನಿಂದ ಉತ್ತರ ಹೊರಡಿಸುವ ಪ್ರಯತ್ನವೆಂಬಂತೆ, (ಯಾಕೆಂದರೆ, ಅದಕ್ಕೂ ಮೊದಲು ನಾನು ಎಲ್ಲರ ಪ್ರಶ್ನೆಗಳಿಗೂ ಅರಳು ಹುರಿದಂತೆ ಪಟ ಪಟ ಉತ್ತರಗಳನ್ನು ಕೊಟ್ಟದ್ದರಿಂದ ಅವರು ತುಂಬ ಪ್ರಭಾವಿತರಾಗಿದ್ದರು) “ಸ್ವಲ್ಪ ಹೊತ್ತು ಯೋಚಿಸಿ, ಆಮೇಲೆಯೂ ಉತ್ತರ ಕೊಡಬಹುದು, ನಿಮಗೆ ಆ ಅವಕಾಶವಿದೆ” ಎಂದು ನನ್ನ ಆಸೆಯನ್ನು ಓಂದಿಷ್ಟು ಜೀವಂತವಾಗಿಯೂ ಇಟ್ಟಿದ್ದರು.
ಈ ನಡುವೆ ಸಂದರ್ಶನ ಸಮಿತಿಯ ಅಧ್ಯಕ್ಷರಿಂದ ಕನ್ನಡ ಭಾಷಾಪರಿಣತರು ಪ್ರಶ್ನೆ ಕೇಳುವಂತೆ ಆದೇಶ ಬರಲಾಗಿ. ಅವರು ಮೊದಲು ಕೇಳಿದ್ದು ʻಶಬ್ದಮಣಿದರ್ಪಣʼದ ಸಂಜ್ಞಾಪ್ರಕರಣಕ್ಕೆ ಸಂಬಂಧಿಸಿದ, “ಕೇಶಿರಾಜ ಹೇಳುವಂತೆ ಅಕ್ಷರಗಳನ್ನು ಎಷ್ಟು ಬಗೆಯಲ್ಲಿ ಅಭಿವ್ಯಕ್ತಪಡಿಸಬಹುದು?” ಎಂಬ ಪ್ರಶ್ನೆಯನ್ನು. ನನಗೆ ಒಳಗೊಳಗೆ ಖುಷಿಯೋ ಖುಷಿ! ʻಶಬ್ದಮಣಿದರ್ಪಣʼದ ಎಲ್ಲ ವ್ಯಾಕರಣ ಸೂತ್ರಗಳನ್ನೂ ಉದಾಹರಣೆ ಸಹಿತ ಸಂಪೂರ್ಣ ಬಾಯಿಪಾಠ ಮಾಡಿದ್ದ ನಾನು ತಕ್ಷಣ ಅವರ ಪ್ರಶ್ನೆಗೆ ಕೇಶಿರಾಜನ ಸೂತ್ರವನ್ನೇ ಉದಾಹರಿಸಿ, ಹುರುಪಿನಿಂದ “ ವ್ಯವಹರಿಪುವೆರಡು ರೂಪಿಂದವಕ್ಕರಂ ಶ್ರಾವಣಂ ಸ್ವನೈಕಾಕಾರಂ, ವಿವಿಧಾಕಾರಂ ಲಿಪಿ ಭೇದವೃತ್ತಿಯಿಂ ಚಾಕ್ಷುಷಂ ಪುರಾತನ ಮತದಿಂʼ ಎನ್ನುತ್ತ, ಅಕ್ಷರಗಳನ್ನು ʻಶ್ರಾವಣʼ ಮತ್ತು ʻಚಾಕ್ಷುಷʼ ವೆಂದು ಎರಡು ಬಗೆಯಲ್ಲಿ ಅಭಿವ್ಯಕ್ತಪಡಿಸಬಹುದು” - ಎಂದು ಉತ್ತರ ಕೊಟ್ಟೆ. ಅದಕ್ಕೆ ಅವರು ಅಷ್ಟೇ ತೀವ್ರವಾಗಿ “ಹಾಗಾದರೆ ಶ್ರಾವಣ ಎಂದರೇನು?” ಎಂದು ಮರುಪ್ರಶ್ನೆ ಹಾಕಿದಾಗ, “ಕಿವಿಯಿಂದ ಕೇಳಬಹುದಾದ ಅಕ್ಷರ ಶ್ರಾವಣ” ಎಂದಿದ್ದೆ. ಈ ಚಕಮಕಿ ನಡೆದಿರುವಾಗಲೇ ರೇಡಿಯೋ ನಾಟಕದ ಬಗ್ಗೆ ಪ್ರಶ್ನೆ ಕೇಳಿದ್ದ ಆ ಮೊದಲಿನ ತಜ್ಞರು, ಅದೇ ಜಾಡು ಹಿಡಿದು, ನಡುವೆಯೇ ಬಾಯಿ ಹಾಕಿ, (ಇಂಗ್ಲೀಷಿನಲ್ಲಿ) “ಹಾಗಾದರೆ, ರೇಡಿಯೋ ಎಂಥ ಮಾಧ್ಯಮ?” ಎಂದು ಮತ್ತೊಂದು ಪೂರಕ ಪ್ರಶ್ನೆಯನ್ನು ಕೇಳಿದಾಗ ನನಗೆ ಛಕ್ಕನೆ ಹೊಳೆದದ್ದು, ʻಅದು ಶ್ರವಣ ಮಾಧ್ಯಮʼ ಎಂದು. ಇದು ಹೊಳೆದಾಗ ಅವರ ಮೊದಲಿನ ಪ್ರಶ್ನೆಯ ಉತ್ತರ ತಾನಾಗೇ ಗುದ್ದಿಕೊಂಡು ಹೊರಬಂದಿತ್ತು-“ ಸರ್‌, ರೇಡಿಯೋ ನಾಟಕ ನಿರ್ಮಿಸುವಾಗ ಕಪ್ಪು-ಬಸಿಗಳನ್ನುತಾಗಿಸಿದ ಹಾಗೂ ಪೇಪರ್‌ ತಿರುವಿ ಹಾಕುವ ಸದ್ದು ಅಥವಾ ಸಪ್ಪಳಗಳನ್ನು ಉಪಯೋಗಿಸಿ ಆ ದೃಶ್ಯವನ್ನು ನಿರ್ಮಿಸಬಹುದು” ಎಂಬ ಉತ್ತರ. ಆ ವ್ಯಕ್ತಿ ನಿಜವಾಗಿಯೂ ಖುಷಿಯಾಗಿದ್ದರು. ತಕ್ಷಣ “ವೆರಿ ಗುಡ್‌, ವೆರೀ ಗುಡ್, ವಿಶ್‌ ಯೂ ಆಲ್‌ ದಿ ಬೆಸ್ಟ್‌” ಎಂದು ಶುಭಾಶಯ ಸೂಚಿಸಿದ್ದರು. ನನಗೆ ಆಗಲೇ ಹೊಳೆದ ಒಂದು ಗಟ್ಟಿಯಾದ ರಹಸ್ಯವೆಂದರೆ, ʻಆಕಾಶವಾಣಿ ಅಂದರೆ ಅದು ಕೇವಲ ಸದ್ದಿನ ಅಥವಾ ಸಪ್ಪಳದ ಮಾಧ್ಯಮʼ ಎಂದು.
ಅನಂತರ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕನಾಗಿ ಆಯ್ಕೆಯಾಗಿ, ಸಹಾಯಕ ನಿರ್ದೇಶಕ, ಕೇಂದ್ರ ನಿರ್ದೇಶಕ, ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕ-ಹೀಗೆ ಬಡತಿ ಹೊಂದಿ ಮೂವತ್ತೊಂದು ವರ್ಷ ಆ ʻಸಪ್ಪಳʼ ದ ಮಾಧ್ಯಮದಲ್ಲಿ, ಅದೇ ʻಸಪ್ಪಳʼದೊಂದಿಗೇ ಕೆಲಸ ಮಾಡಿ, ನಿವೃತ್ತನಾದಾಗಲೂ, ನನಗೆ ಸಂದರ್ಶನದ ಆ ದೃಶ್ಯ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ಅದು ನನ್ನ ವೃತ್ತಿಜೀವನದಲ್ಲಿ ಆಕಾಶವಾಣಿಯ ಬಹುಮುಖ್ಯ ಸಂಪರ್ಕ ಸಾಧನದ ಮಹತ್ವವನ್ನು, ಅದರ ಒಳಗೆ ಪ್ರವೇಶಿಸುವ ಪೂರ್ವದಲ್ಲೇ ತಿಳಿಸಿಕೊಟ್ಟ ಹಾಗೂ ದನಿಮಾಧ್ಯಮದ ಬೀಜ ಬಿತ್ತಿದ ಘಟನೆಯಾಗಿಯೂ ಸದಾ ನೆನಪಿನಲ್ಲಿದೆ.
ನಿಜ, ಆಕಾಶವಾಣಿ ಒಂದು ಸಪ್ಪಳದ ಮಾಧ್ಯಮ. ಅಂದರೆ ಶಬ್ದಮಾಧ್ಯಮ. ಅದನ್ನು ವೃತ್ತಿಪರ ಹಾಗೂ ಸಾಹಿತ್ಯಕ ಪರಿಭಾಷೆಯಲ್ಲಿ ಹೇಳುವುದಾದರೆ, ಅದು “ದನಿ” ಮಾಧ್ಯಮ. ಅದು ಬರೀ ದನಿಮಾಧ್ಯಮವೊಂದೇ ಅಲ್ಲ, ಕೇವಲ ದನಿಯೊಂದೇ ಸಂಪರ್ಕ ಸಾಧನವಾಗಿರುವ ಏಕೈಕ ಮಾಧ್ಯಮ ಕೂಡ. ಬಾನುಲಿಯ ಆತ್ಮವೆಂದರೇನೇ ʻದನಿʼ. ಈ ದನಿ ಆಕಾಶವಾಣಿಯ ಆತ್ಮ ಮಾತ್ರವಲ್ಲ, ಅದರ ಶರೀರ, ಕೈ, ಕಾಲು, ನಡಿಗೆ, ನಾಚು, ಹಾವ, ಭಾವ, ಹಾಡು, ಹರವು, ಮೌನ, ಮಾತು-ಏನೆಲ್ಲವೂ ಅದೆ, ಮತ್ತು ಅದೊಂದೇ. ಇಲ್ಲಿ ನಗುವುದನ್ನೂ ದನಿಯಲ್ಲೇ ಕೇಳಿಸಬೇಕು, ಅಳುವುದನ್ನೂ ದನಿಯಲ್ಲೇ ಸಂವಹನ ಮಾಡಬೇಕು. ಕಂಸಿನಲ್ಲಿ ಮೀಸೆ ತಿರುವುವವುದನ್ನೂ ಅದರಲ್ಲೇ ವ್ಯಕ್ತಪಡಿಸಬೇಕು. ಸಂಗೀತ, ಸಾಹಿತ್ಯ, ಸಂದರ್ಶನ, ನಾಟಕ, ರೂಪಕ, ಚರ್ಚೆ, ಸಂವಾದ, ನೇರಪ್ರಸಾರ, ಕಾಮೆಂಟ್ರಿ-ಹೀಗೆ ಇಲ್ಲಿಂದ ಬಿತ್ತರವಾಗುವ ಮಾಹಿತಿ, ಮನರಂಜನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಏನೆಲ್ಲ ಕಾರ್ಯಕ್ರಮಗಳೂ ಕೇವಲ ʻದನಿʼಯ ಮೂಲಕವೇ ಸಂವಹನಗೊಳ್ಳಬೇಕು. ಭಾರತೀಯ ಕಾವ್ಯಮೀಮಾಂಸಕರು ಸಾಹಿತ್ಯವನ್ನು ಕುರಿತು ಚರ್ಚಿಸುವಾಗ ಅನಂದವರ್ಧನನ ʻಕಾವ್ಯಾಸ್ಯಾತ್ಮಾ ಧ್ವನಿʼ ಎಂಬ ವ್ಯಾಖ್ಯೆಯನ್ನು ಉದಾಹರಿಸುವಂತೆ, ಬಾನುಲಿಯನ್ನು ಕುರಿತು ಮಾತಾಡುವಾಗ, ʻಆಕಾಶವಾಣ್ಯಾತ್ಮಾ ದನಿʼ ಎಂದು ಖಂಡಿತವಾಗಿ ಹೇಳಬಹುದು. ನಿಜ, ಆಕಾಶವಾಣಿಗೆ ʻದನಿಯೆಂಬುದೇ ಮಹದಲಂಕಾರʼ.
ನಮ್ಮಲ್ಲಿ ಪ್ರಚಲಿತವಿರುವ ಯಾವುದೇ ಪರಂಪರಾಗತ ಅಥವಾ ಆಧುನಿಕ ಸಮೂಹ ಮಾಧ್ಯಮಗಳಿದ್ದರೂ, ಪ್ರತಿಯೊಂದೂ ಮಾಧ್ಯಮಕ್ಕೂ ಅದರದೇ ಆದ ವಿಶಿಷ್ಟ ಮತ್ತು ಸೂಕ್ತ ಸಂವಹನದ ಭಾಷೆಯೊಂದು ಇರುತ್ತದೆ. ಇಲ್ಲಿ ಭಾಷೆಯೆಂದರೆ ಬರೀ ಲಾಂಗ್ವೇಜ್‌ ಎಂಬ ಅರ್ಥದ್ದಲ್ಲ, ಅದು ಆಯಾ ಮಾಧ್ಯಮದ ಮಾಹಿತಿಯನ್ನು ರವಾನಿಸುವ ಅಥವಾ ತಲುಪಿಸುವ ಒಂದು ಮಹತ್ವದ ಸಂವಹನದ ರೂಪ ಮತ್ತು ಕೊಂಡಿ. ಅದು ಸಂವಹನದ ಮೂಲ ಸಾಧನ (means of communication). ವಿವಿಧ ಮಾಧ್ಯಮಗಳಿಗೆ ಅವುಗಳದೇ ಆದ ಸಂವಹನ ಸಾಧ್ಯತೆಯಿದ್ದು, ಅವು ಮುಖ್ಯವಾಗಿ ಅಕ್ಷರ, ದೃಶ್ಯ, ದೃಶ್ಯಶ್ರವ್ಯ, ಚಿತ್ರ, ಸಂಜ್ಞೆ, ಚಿನ್ಹೆ– ಹೀಗೆ ಬೇರೆ ಬೇರೆ ಸಂಪರ್ಕ ಸಾಧನಗಳ ಮೂಲಕ ತಮ್ಮ ಮಾಹಿತಿಯನ್ನು ರವಾನಿಸುತ್ತವೆ. ಇದರಲ್ಲಿ ಆಕಾಶವಾಣಿಗೇ ವಿಶಿಷ್ಟವಾಗಿರುವ ಸಂವಹನ ಅಥವಾ ಸಂಪರ್ಕ ಸಾಧನ ದನಿ.
ಭಾಷೆಯ ಶ್ರವಣ ರೂಪದ ಅಭಿವ್ಯಕ್ತಿಯಾಗಿರುವ ದನಿ ಒಂದು ಅನನ್ಯ ಸಂವಹನ ಸಾಧನ. ಇದನ್ನು ಬಳಸಿಕೊಂಡೇ ಆಕಾಶವಾಣಿಯು ತನ್ನೆಲ್ಲಾ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ ; ಬಿತ್ತರಿಸಬೇಕು ಕೂಡ. ಇಲ್ಲೊಂದು ಬಹುದೊಡ್ಡ ಸಮಸ್ಯೆಯಿದೆ- ಭಾಷೆಗೆ ಇರುವ ಚಾಕ್ಷುಷ ರೂಪವನ್ನು ದನಿರೂಪವನ್ನಾಗಿ ಪರಿವರ್ತಿಸಿ ಅಭಿವ್ಯಕ್ತ ಮಾಡಬಹುದೇ ಹೊರತು, ಕಣ್ಣಿಗೆ ಕಾಣಿಸದ ಮತ್ತು ಕೇಳಿಸದ ಅಸಂಖ್ಯ ವಿದ್ಯಮಾನಗಳನ್ನು ಬಾನುಲಿಯಲ್ಲಿ ಬಿತ್ತರಿಸುವುದು ಹೇಗೆ ಎಂದು. ಮಾತಿನ ಅಥವಾ ಭಾಷೆಯ ಮೂಲಕ ಹೇಳಲಾಗದ ಕಾಲ, ಪರಿಸರ ಮತ್ತು ಬದುಕಿನ ವಿವಿಧ ಪರಿಕರಗಳ ಕ್ರಿಯೆ ಹಾಗೂ ಸಾಹಚರ್ಯೆಗಳನ್ನು ದನಿಯೊಂದೇ ಸಂವಹನದ ಸಾಧನವಾಗಿರುವ ಈ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸುವುದು ಹೇಗೆ? ಉದಾಹರಣೆಗೆ, ಹರಿಯುವ ನದಿಯ ಸದ್ದು, ಸಮುದ್ರದ ಅಲೆಗಳು, ಮುಂಜಾನೆ, ಸಂಜೆ, ರಾತ್ರಿ, ಬೆಳದಿಂಗಳು, ಕತ್ತಲೆ, ಮೋಡದ ಘರ್ಜನೆ, ಅಳು, ನಗು, ಪ್ರಾಣಿಗಳ ದನಿ, ಕಾರ್ಖಾನೆ, ಆಸ್ಪತ್ರೆ, ಹೊಲ-ಹೀಗೆ ದೊಡ್ಡ ಯಾದಿಯನ್ನೇ ಕೊಡಬಹುದಾದ ಎಲ್ಲ ವಿದ್ಯಮಾನಗಳನ್ನು ಮತ್ತು ಇತರ ಸಾಹಚರ್ಯಗಳನ್ನು ಬಾನುಲಿಯ ಮೂಲಕ ಹೇಗೆ ಅಭಿವ್ಯಕ್ತಿಸಲು ಸಾಧ್ಯ ಎಂದು ಕೇಳಿದರೆ, ಇನ್ನಿತರ ಮಾಧ್ಯಮಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪ್ರಭಾವಿಯಾಗಿ ಇವುಗಳನ್ನೆಲ್ಲ ಪ್ರಸ್ತುತ ಪಡಿಸಲು ಸಾಧ್ಯವಿದೆ ಎಂದು ಖಂಡಿತವಾಗಿ ಹೇಳಬಹುದು. ಅದು ಸಾಧ್ಯವಾಗುವುದು “ದನಿಪರಿಣಾಮ” (Sound effects) ಗಳ ಮೂಲಕ. ದನಿಸಂಕೇತಗಳು ಎಂದೂ ಕರೆಯಬಹುದಾದ ಇಂಥ ದನಿಪರಿಣಾಮಗಳನ್ನು ಬಳಸುವ ಮೂಲಕ, ಕಾಣದ ಹಾಗೂ ಕೇಳದ ಎಲ್ಲ ಜಗತ್ತನ್ನೂ ಬಾನುಲಿಯ ಮೂಲಕ ʻತೋರಿಸಲುʼ ಸಾಧ್ಯವಿದೆ. ಇಂಥ ದನಿಪರಿಣಾಮಗಳೇ (Sound effects) ಆಕಾಶವಾಣಿಯ ಬಹುದೊಡ್ಡ ಮೂಲ ಸಂಪತ್ತು.
ದನಿಪರಿಣಾಮಗಳೆಂದರೆ, ಲಿಖಿತ ಭಾಷೆಗೆ, ಅಂದರೆ ಚಾಕ್ಷುಷ ಭಾಷೆಗೆ ಪರ್ಯಾಯವಾಗಿ, ಒಂದು ಸನ್ನಿವೇಶದ ಪರಿಕಲ್ಪನೆಯನ್ನು ಮನಸ್ಸಿನ ರಂಗಮಂಚದ ಮೇಲೆ ತಂದು ನಿಲ್ಲಿಸುವ ಸಪ್ಪಳಗಳು, ಸದ್ದುಗಳು ಅಥವಾ ದನಿಗಳು. ಇವು, ಹೇಳಹೊರಟ ವಿದ್ಯಮಾನದ ಮೂಲ ದನಿಗಳೂ ಆಗಿರಬಹುದು (ಉದಾ: ನೀರು ಹರಿಯುವುದು, ಪ್ರಾಣಿಗಳು ಕೂಗುವುದು, ಇತ್ಯಾದಿ) ಅಥವಾ ಮೂಲ ದನಿಗಳನ್ನು ಅನುಕರಿಸುವ ನಿರ್ಮಿತ ದನಿಗಳೂ ಆಗಬಹುದು. (ಅದೇ ನೀರು ಹರಿಯುವುದನ್ನು ಬಕೆಟ್‌ ಒಂದರಲ್ಲಿ ನೀರು ಹಾಕಿ ಸದ್ದು ಮಾಡುವ ಮೂಲಕ ಪಡೆಯಬಹುದಾದ ದನಿ, ಮತ್ತು ಅದೇ ರೀತಿ ಕೃತಕವಾಗಿ ನಿರ್ಮಿಸಿಕೊಳ್ಳಬಹುದಾದ ಯಾವುದೇ ದನಿಗಳು) ಈ ಎರಡೂ ಮಾದರಿಗಳಿಗಿಂತ ಭಿನ್ನವಾದ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರ್ಮಿಸಿಕೊಳ್ಳಬಹುದಾದ ದನಿಪರಿಣಾಮಗಳು ಸಾವಿರ ಸಾವಿರ. ಅವು ಹೀಗೇ ಇರಬೇಕೆಂದಾಗಲಿ, ಇಷ್ಟೇ ಸಂಖ್ಯೆಯವೆಂದಾಗಲಿ ನಿಗದಿ ಪಡಿಸುವುದು ಸಾಧ್ಯವಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ, ಆಯಾ ಸಂದರ್ಭಗಳ ಪರಿಕಲ್ಪನೆಗಳನ್ನು ಕಟ್ಟಿಕೊಡುವ ಅಸಂಖ್ಯಾತ ದನಿಪರಿಣಾಮಗಳನ್ನು ನಿರ್ಮಿಸಿಕೊಳ್ಳಬಹುದು. ಈ ದನಿಪರಿಣಾಮಗಳು ಎಷ್ಟು ಸಶಕ್ತವಾಗಿರುತ್ತವೆಯೆಂದರೆ, ಒಂದೇ ಒಂದು ಮಾತಿಲ್ಲದೇ, ಆ ಇಡೀ ಸನ್ನಿವೇಶದ ಅರ್ಥವನ್ನು ನಮ್ಮ ಮನಸ್ಸಿನ ಪಟಲದ ಮೇಲೆ ಚಿತ್ರಗೊಳಿಸಿಬಿಡಬಹುದು. ಸಿತಾರ್‌ ವಾದ್ಯದ ಮೂಲಕ ಭೈರವಿ ರಾಗದಲ್ಲಿ ಹೊರಡಿಸುವ ಒಂದು ಸೂಕ್ಷ್ಮ ಆಲಾಪದ ದನಿಪರಿಣಾಮವು ಕಣ್ಣೀರು ತರಿಸಬಹುದಾದ ದುಃಖದ ಒಂದು ಸನ್ನಿವೇಶವನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುವ ಸಾಧ್ಯತೆ ಇದೆ. ಬಾನುಲಿ ನಾಟಕದ ದೃಶ್ಯವೊಂದರ ಆರಂಭದಲ್ಲಿ ಆಕಾಶವಾಣಿಯ ಸಿಗ್ನೀಚರ್‌ ಟ್ಯೂನನ್ನು ಅಳವಡಿಸಿಬಿಟ್ಟರೆ, ಖಂಡಿತವಾಗಿ ಅದು ಮುಂಜಾನೆ ಆರು ಗಂಟೆ ಆಗಿದೆ ಎಂಬ ಅರ್ಥವನ್ನು ಹೊರಡಿಸಿಬಿಡುತ್ತದೆ. ಹೀಗೆ ಮೂಲದಲ್ಲಿ ಸಿದ್ಧವಿರುವ ದನಿಪರಿಣಾಮಗಳೇ ಆಗಲಿ, ಅಥವಾ ನಿರ್ಮಿತ ದನಿಪರಿಣಾಮಗಳೇ ಆಗಲಿ, ಒಟ್ಟಾರೆ ಮಾತಿನ ಭಾಷೆಗೆ ಪರ್ಯಾಯವಾಗಿ ಬಳಕೆಯಾಗುವ ಯಾವುದೇ ದನಿಪರಿಣಾಮಗಳು ಭಾಷೆಯಿಲ್ಲದೇ ಅದ್ಭುತವಾದ ದೃಶ್ಯವನ್ನು ಕೇಳುಗರ ಸ್ಮೃತಿಪಟಲದ ಮೇಲೆ ನಿರ್ಮಿಸಿಬಿಡುತ್ತವೆ. ಹೀಗಾಗಿಯೇ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಮಾತು ಅಥವಾ ಭಾಷೆಗಿಂತಲೂ ಹೆಚ್ಚಿನ ಮಹತ್ವ ಈ ಬಗೆಯ ದನಿಪರಿಣಾಮಗಳಿಗೆ ಇದೆ. ಬಾನುಲಿಯ ಕಾರ್ಯಕ್ರಮಗಳು ಕೇಳುಗನ ಮನೋರಂಗಭೂಮಿಯ ಮೇಲೆ ಪರಿಣಾಮ ಬೀರಲು ಇಂಥ ಅಸಂಖ್ಯ ದನಿಪರಿಣಾಮಗಳೇ ಕಾರಣ.
ಮೊದಲೇ ಹೇಳಿರುವಂತೆ, ದನಿಪರಿಣಾಮಗಳು ಇಷ್ಟೇ ಎಂದಾಗಲಿ, ಹೀಗೇ ಇರಬೇಕೆಂದಾಗಲಿ ನಿಗದಿ ಮಾಡಿ ಹೇಳಲು ಸಾಧ್ಯವಿಲ್ಲ. ಆದರೆ ಒಂದು ಮಾತನ್ನು ಹೇಳಲೇಬೇಕು, ಕಾರ್ಯಕ್ರಮ ನಿರ್ಮಿಸುವ ನಿರ್ಮಾಪಕನ ಸೃಜನಶೀಲತೆಯನ್ನಾಧರಿಸಿ ಎಷ್ಟು ಬೇಕಾದರೂ, ಎಂಥವಾದರೂ ದನಿಪರಿಣಾಮಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಬಾನುಲಿ ಮಾಧ್ಯಮವು ಕೇವಲ ಭಾಷೆಯ ದನಿರೂಪವೆಂದ ಮಾತ್ರಕ್ಕೆ, ಇದರಲ್ಲಿ ಕಂಸಿನಲ್ಲಿ ಮೀಸೆ ತಿರುವಿ ಎಂದಿರುವುದನ್ನು, ಮುಖ ಕೆಂಪಾಗುವುದನ್ನು, ನಡುಗುವುದನ್ನು, ಅಪ್ಪಿಕೊಳ್ಳುವುದನ್ನು, ಹೊಡೆಯುವುದನ್ನು, ರಾತ್ರಿಯನ್ನು, ಪ್ರೀತಿಸುವುದನ್ನು, ವಿರಹವನ್ನು, ಮಧ್ಯಾಹ್ನವನ್ನು, ಸಂಜೆಯನ್ನು, ಸಮುದ್ರವನ್ನು, ಪರ್ವತವನ್ನು, ಕಾಡನ್ನು, ರೈಲು ಓಡುವುದನ್ನು, ವಿಮಾನ ಹಾರುವುದನ್ನು - ಹೀಗೆ ಯಾವುದೇ ಸನ್ನಿವೇಶ ಅಥವಾ ವಿದ್ಯಮಾನವನ್ನು ಇಲ್ಲಿ ಹೇಳಲಾಗದು ಎನ್ನುವಂತಿಲ್ಲ. ಈ ಎಲ್ಲ ವಿದ್ಯಮಾನಗಳು ಕಣ್ಮುಂದೆಯೇ ಕಟ್ಟುವ ಹಾಗೆಯೇ ಹೇಳಬಹುದು-ಅದು ಸಾಧ್ಯವಾಗುವುದು ಕೇವಲ ದನಿ ಮತ್ತು ದನಿಪರಿಣಾಮಗಳ ಸಮರ್ಥ ಬಳಕೆಯ ಮೂಲಕ.

ಲಂಕೇಶ್‌ ಅವರ ʻಮೃಗ ಮತ್ತು ಸುಂದರಿʼ ಕಥೆಯನ್ನು ಬಾನುಲಿಗೆ ಅಳವಡಿಸಿ, ನಾಟಕವನ್ನು ನಿರ್ಮಿಸುತ್ತಿದ್ದೆ. ಅದರಲ್ಲಿ ಮೃಗದ ಪಾತ್ರ ಬರುತ್ತದೆ. ಮನಷ್ಯನೇ ಆ ಪಾತ್ರ ಮಾಡುವಾಗ ನಾಟಕದಲ್ಲಿ ಮೃಗದ ದನಿಯನ್ನು ಹೇಗೆ ತರುವುದು? ಮೃಗದ ದನಿ ಇರದಿದ್ದರೆ ನಾಟಕ ಸಪ್ಪೆಯಾಗುತ್ತದೆ ಮತ್ತು ಅದಕ್ಕೆ ಅರ್ಥವೇ ಬರಲಾರದು. ಹಾಗಾದರೆ ಏನು ಮಾಡುವುದು? ಎಲ್ಲರಿಗೂ ಕುತೂಹಲ. ನನ್ನ ಸ್ನೇಹಿತ ಉದಯಾದ್ರಿಯನ್ನು ಕರೆದು, ʻಈ ಪಾತ್ರದ ದನಿಯನ್ನು ನೀನು ಕೇವಲ ಗಂಟಲಿನಿಂದ ಹೊರಡಿಸಿ, ಆ ಗೊಗ್ಗರಿನ ಜೊತೆಗೆ ಮಾತುಗಳನ್ನು ಸೇರಿಸಬೇಕುʼ ಎಂದು ಸೂಚಿಸಿದಾಗ ಆ ಕಲಾವಿದ, ಮೃಗವೇ ಹೆದರುವ ಹಾಗೆ ಕರ್ಕಶ ದನಿ ಹೊರಡಿಸಿ ಆ ಇಡೀ ನಾಟಕಕ್ಕೆ ಅದ್ಭುತ ಪರಿಣಾಮವನ್ನು ತಂದುಕೊಟ್ಟದ್ದು ಉಲ್ಲೇಖಾರ್ಹ. ಮತ್ತೊಂದು, ʻಮುಟ್ಟಿಸಿಕೊಂಡವನುʼ ನಾಟಕ ನಿರ್ಮಿಸುವಾಗ, ಕಂಪ್ಯೂಟರ್‌ ಮೂಲಕ ಹೊರಡಿಸಿದ ದನಿಯನ್ನು ಧ್ವನಿಮುದ್ರಿಸಿ ಆಸ್ಪತ್ರೆಯಲ್ಲಿ ಆಪರೇಶನ್‌ ಮಾಡುವ ದೃಶ್ಯವನ್ನು ಕಣ್ಮುಂದೆ ನಿಲ್ಲುವ ಹಾಗೆ ಮಾಡಿದ್ದನ್ನು ಮರೆಯುವಂತಿಲ್ಲ. ಈ ನಾಟಕದಲ್ಲಿ ನಾನೇ ಬಸಲಿಂಗಪ್ಪನ ಮುಖ್ಯ ಪಾತ್ರ ಮಾಡಿದ್ದೆ. ಅಲ್ಲಿನ ದುಃಖದ ಪ್ರಸಂಗಗಳಲ್ಲಿ ನಾನು ಅತ್ತದ್ದನ್ನು ಕೇಳಿದ ಲಂಕೇಶ್‌ ಅವರು ʻಏ ಹುಡಗಾ, ನನ್ನ ಬಸಲಿಂಗಪ್ಪನನ್ನು ಆ ಪರಿ ಅಳಿಸೋದಾ?ʼ ಎಂದು ಅಚ್ಚರಿಯ ಮೆಚ್ಚಿಗೆ ಸೂಚಿಸಿದ್ದು ಮರೆಯಲಾರದ ಸಂದರ್ಭ.
ನನಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ʻಕೆರೆಗೆ ಹಾರʼ ರೂಪಕವನ್ನು ನಿರ್ಮಿಸುವಾಗ, ಮಹಾದೇವರಾಯನು ಕೆರೆಗೆ ಹಾರಿ ಪ್ರಾಣ ಬಿಡುವ ದೃಶ್ಯವನ್ನು ಸಪ್ಪಳದಲ್ಲಿ ತರುವುದು ನನಗೆ ನಿಜವಾಗಿಯೂ ಚಾಲೇಂಜ್‌ ಆಗಿತ್ತು. ಆತ ಕೆರೆಗ ಹಾರಿದಾಗ ನೀರು ಮೊದಲು ಮೇಲೆದ್ದು, ಅನಂತರ ಮತ್ತೆ ಬರ್‌ರ್‌ರ್‌ ಎಂದು ವಾಪಸಾಗಿ ಬೀಳುವ ಸಪ್ಪಳ ನಿರ್ಮಿಸಬೇಕಿತ್ತು. ಸಾಕಷ್ಟು ಯೋಚಿಸಿದರೂ ಮೊದಲು ಅದನ್ನು ನಿರ್ಮಿಸುವ ತಂತ್ರ ಹೊಳೆಯಲೇ ಇಲ್ಲ. ಯಾವುದೋ ಒಂದು ಕ್ಷಣದಲ್ಲಿ ಒಂದು ವಿಚಿತ್ರ ಯೋಚನೆ ಬಂತು. ತಕ್ಷಣ, ನನ್ನ ಇಂಜನೀಯರ್‌ ಸ್ನೇಹಿತ ಗುರ್ಜಾರ್‌ ಮತ್ತು ಸಹಾಯಕಿ ಮಂಜುಳಾ ಪಂಡಿತ ಅವರನ್ನು ಕರೆದುಕೊಂಡು ಗುಲ್ಬರ್ಗಾ ಆಕಾಶವಾಣಿಯ ಎದುರಿನ ಪಬ್ಲಿಕ್‌ ಗಾರ್ಡನ್ನಿನಲ್ಲಿರುವ ಒಂದು ಹಳೆಯ ಭಾವಿಯ ಹತ್ತಿರ ಹೋದೆ. ಮೈಕ್ರೋಫೋನನ್ನು ಕೇಬಲ್ಲಿಗೇ ಜೋಡಿಸಿ, ಭಾವಿಯಲ್ಲಿ ಇಳಿಬಿಡಲು ಗುರ್ಜಾರ್‌ ಅವರಿಗೆ ಹೇಳಿದೆ, ಮಂಜುಳಾ ಅವರನ್ನು ಧ್ವನಿಮುದ್ರಣ ಮಾಡಲು ಹಚ್ಚಿದೆ. ನಾನು ಆ ಭಾವಿಯ ಸುತ್ತ-ಮುತ್ತ ಬಿದ್ದಿದ್ದ ಬೇರೆ ಬೇರೆ ಸೈಜಿನ ಕಲ್ಲುಗಳನ್ನು ಎತ್ತಿ ಎತ್ತಿ ತಂದು, ಒಂದೊಂದಾಗಿ ಭಾವಿಯಲ್ಲಿ ಎಸೆಯತೊಡಗಿದೆ. ನೋಡಿದವರು, “ಏನ್ರೋ ತಮ್ಮಾಗೋಳಾ ಭಾಂವಿ ಹುಗ್ಯಾಕ್ಹತ್ತೀರೆನು ಮತ್ತ?” ಎಂದು ನಗುತ್ತ, ಕೇಳುತ್ತ ಹೋಗುತ್ತಿದ್ದರು. ನಾನು ಕಲ್ಲುಗಳನ್ನು ಎತ್ತಿ ಹಾಕಿದ್ದೇ ಹಾಕಿದ್ದು. ಒದೊಂದೂ ಕಲ್ಲು ಹಾಕಿದ ನಂತರ ಅದರ ದನಿಪರಿಣಾಮ ನನಗೆ ಸೂಕ್ತವಾಗುತ್ತದೆಯೇ ಎಂದು ಮತ್ತೆ ಮತ್ತೆ ಕೇಳಿ ಪರೀಕ್ಷಿಸುತ್ತಿದ್ದೆ. ನಲವತ್ತು-ನಲವತ್ತೈದು ಕಲ್ಲುಗಳನ್ನು ಎತ್ತಿ ಹಾಕಿದಾಗಲೂ ಊಹೂಂ, ಸಪ್ಪಳ ಸರಿ ಹೊಂದುತ್ತಲೇ ಇಲ್ಲ, ನನಗೆ ಬೇಕಾದ ದನಿಪರಿಣಾಮ ಸಿಗುತ್ತಲೇ ಇಲ್ಲ. ಇನ್ನೇನು ಮಾಡುವುದು? ಎಂದು ಚಿಂತಿಸುತ್ತಿರುವಾಗ ದೂರದಲ್ಲಿ ಬಿದ್ದಿದ್ದ ಒಂದು ಹೆಣಭಾರದ ದೊಡ್ಡ ಕಲ್ಲು ಕಾಣಿಸಿತು. ಕಷ್ಟಪಟ್ಟು ಅದನ್ನೇ ಎತ್ತಿ ತಂದು ಭಾವಿಯಲ್ಲಿ ಒಗೆದೆ. ಅದರ ರಭಸಕ್ಕೆ ಮೇಲೆ ಎದ್ದ ನೀರು, ಮತ್ತೆ ವಾಪಸ್ಸಾಗಿ ಬೀಳುವ ಅದ್ಭುತ ಹಾಗೂ ಅರ್ಥಪೂರ್ಣ ಸಪ್ಪಳ ರೆಕಾರ್ಡ್‌ ಆದಾಗ ನನಗೆ ಬೇಕಾದ ದನಿಪರಿಣಾಮ ಸಿಕ್ಕು, ಹಿಮಾಲಯವನ್ನು ಏರಿದಷ್ಟು ಖುಷಿಯಾಗಿತ್ತು. ಹೀಗೆ ಐವತ್ತು ಕಲ್ಲು ಒಗೆದು ಮಹಾದೇವರಾಯನ ಸಾವಿನ ಶಬ್ದ ಹಿಡಿದು ಅದನ್ನು ಉಪಯೋಗಿಸಿ ರೂಪಕವನ್ನು ನಿರ್ಮಿಸಿದೆ. ದಿಲ್ಲಿಯ ಸೀರಿಪೋರ್ಟ್ ಆಡಿಟೋರಿಯಂನಲ್ಲಿ ಆ ರೂಪಕಕ್ಕೆ ನ್ಯಾಶನಲ್‌ ಅವಾರ್ಡ್‌ ಕೊಡುವ ಮುನ್ನ ನನ್ನನ್ನು ಸಂದರ್ಶಿಸಿದ ವ್ಯಕ್ತಿ ಕೇಳಿದ್ದು, ʻಮಹಾದೇವರಾಯ ಬಿದ್ದದ್ದನ್ನು ನೀವು ಹೇಗೆ ಧ್ವನಿಮುದ್ರಿಸಿದರಿ?ʼ ಎಂದು. ಅಂದರೆ, ಆತ ಸಾಯುವ ದೃಶ್ಯವನ್ನೇ ನೀವು ಅದ್ಹೇಗೆ ಧ್ವನಿಮುದ್ರಿಸಿದಿರಿ? ಎಂಬ ಅರ್ಥದ ಪ್ರಶ್ನೆ ಅದಾಗಿತ್ತು. ಇದು ದನಿಪರಿಣಾಮಗಳ ಅರ್ಥ, ಶಕ್ತಿ, ಮತ್ತು ಪರಿಣಾಮ.
ಆಕಾಶವಾಣಿಯ ದನಿಪರಿಣಾಮಗಳ ಬಗ್ಗೆ ಬರೆದಷ್ಟೂ ಕಡಿಮೆ ಅನಿಸುತ್ತದೆ. ಈ ದನಿಪರಿಣಾಮಗಳಿಗೆ ಅನನ್ಯ ಮತ್ತು ಅದ್ಭುತ ಅರ್ಥವಿದೆಯೆಂದರೆ ಅದು ಬರೀ ಥೇರಿ ಹೇಳಿದಂತೆ. ಅದು ಪ್ರಾಯೋಗಿಕವಾಗಿ ತಿಳಿಯುವುದು ಒಂದು ಅರ್ಥವತ್ತಾದ ಕಾರ್ಯಕ್ರಮವನ್ನು ನಿರ್ಮಿಸಿದಾಗ ಮತ್ತು ಅದು ಕೇಳುಗರ ಮೇಲೆ ಪರಿಣಾಮ ಮಾಡಿದಾಗ ಮಾತ್ರ . ಇಂಥ ದನಿಪರಿಣಾಮಗಳನ್ನು ನಿರ್ಮಿಸುವ ಮತ್ತು ಬಳಸುವ ನಿರ್ಮಾಪಕನ ಸೃಜನಶೀಲತೆಯ ಆಧಾರದಲ್ಲಿ ಅವುಗಳ ನಿಜ ಅರ್ಥ ಹೊರಹೊಮ್ಮುತ್ತದೆ.
ದನಿಗಳಿಗೆ ಮಾತಿಗಿಂತಲೂ ಆಳ ಮತ್ತು ಪರಿಣಾಮಕಾರಿ ಅರ್ಥ ಹೊರಡಿಸುವ ಅದ್ಭುತ ಸಾಧ್ಯತೆ ಮತ್ತು ಸಾಮರ್ಥ್ಯವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರೊಂದಿಗೆ ಒಮ್ಮೆ ಸಂದರ್ಶನ ಮಾಡುವಾಗ, ನನ್ನ ಪ್ರಶ್ನೆಯೊಂದಕ್ಕೆ ಅವರು ಹೇಳಿದ ಉತ್ತರ ಈ ಸಂದರ್ಭದಲ್ಲಿ ಉಲ್ಲೇಖಾರ್ಹವಾಗಿದೆ. “ರೇಡಿಯೋ ನಾಟಕಗಳ ಒಂದು ದೊಡ್ಡ ಕೊಡುಗೆ ಅಂದ್ರೆ ಶಬ್ದವನ್ನು ಹೇಗೆ ಉಪಯೋಗ ಮಾಡಬೇಕು ಅನ್ನೋದು. ದುರದೃಷ್ಟ ಅಂದ್ರೆ, ಆ ಕೊಡುಗೇನ ಬೇರೆ ಮಾಧ್ಯಮಗಳು ಸ್ವೀಕರಿಸಲಿಲ್ಲ. ಶಬ್ದ ಅಂದಾಗ ನಾನು ಬರೀ ಸಂವಾದ ಅನ್ನೋದಿಲ್ಲ. ಅದರ ಜೊತೆಗೆ effectsನ್ನೂ ಹೇಗೆ ಬಳಸಬೇಕು ಅನ್ನೋದು. ಅಮೇರಿಕಾದ ಹಾಲಿವುಡ್‌ನಲ್ಲಿ ಬಹಳ ಸರಳ, ಶ್ರೇಷ್ಠ ಚಿತ್ರಪಟ ʻCitizen careʼ. ಅದನ್ನ ಮಾಡಿರುವ ವ್ಯಕ್ತಿ ಆರ್ಸನ್‌ ವೇಲ್ಸ್‌. ಆತನ 22ನೆಯ ವಯಸ್ಸಲ್ಲಿ ಅದನ್ನ ಮಾಡಿದ. ಅದರ ಮೊದಲು ಅವನು ರೇಡಿಯೋದಲ್ಲಿ ಇದ್ದ. ಈ ಚಿತ್ರಪಟ ಮಾಡುವಾಗ ಅವನ ಹತ್ರ ರೊಕ್ಕ ಇರಲಿಲ್ಲ. ಆದ್ರೆ, ಆತ ಸೌಂಡ್‌ ಬಳಸಿ ದೃಶ್ಯಗಳನ್ನ creat ಮಾಡೋದು ನೋಡಿದ್ರೆ ಅದ್ಭುತ ಅನ್ನಿಸ್ತದೆ. ಆ ಒಂದು ಪ್ರಜ್ಞೇ ನಮ್ಮಲ್ಲಿ ಬಂದಿಲ್ಲ. ನಮ್ಮ ಚಿತ್ರಗಳಲ್ಲಂತೂ sound ಬಹಳ ಕೆಟ್ಟದಾಗಿ ಇರ್ತದೆ. ನನಗನ್ನಿಸ್ತದೆ ಈ ರೇಡಿಯೋ ಮಾಧ್ಯಮವನ್ನ ನಾವು ಅರ್ಥ ಮಾಡಿಕೊಳ್ಳಬೇಕು.
ಜಾನ್‌ಫೋರ್ಡ್‌ ಅವರ ಚಿತ್ರದಲ್ಲಿ ಬಹಳ ಸುಪ್ರಸಿದ್ಧವಾದ ಒಂದು ದೃಶ್ಯ ಬರ್ತದೆ. ಇಬ್ಬರು ಬೆಟ್ಟದ ಮೇಲೆ ಅದರ ತುದೀಲಿ ನಿಂತಿರ್ತಾರೆ. ಮಾತಾಡ್ತಾ ಅಲ್ಲಿ ಬಿದ್ದಿರೋ ಬಾಟ್ಲಿಯನ್ನ ಒಬ್ಬ ಬೆಟ್ಟದ ತುದಿಯಿಂದ ಒದೀತಾನೆ. ಸುಮಾರು ಹೊತ್ತಾದ ಮೇಲೆ, ಅವರು ಮಾತಾಡ್ತಾ ಇದ್ದಾಗ ದೂರದಲ್ಲಿ “ಠಣ್”‌ ಅಂತ ಬಾಟ್ಲಿ ಒಡೆದ ಸಪ್ಪಳ ಬರ್ತದೆ. ಇದರಿಂದ ಆ ಬೆಟ್ಟ ಎಷ್ಟು ಎತ್ತರ ಇತ್ತು ಅನ್ನೋದು ಕಲ್ಪನೆ ಬರ್ತದೆ. ಬರೇ ಒಂದು ಶಬ್ದವನ್ನ ಉಪಯೋಗ ಮಾಡಿ ಇಂಥ ಒಂದು ಆಯಾಮವನ್ನ ಉಂಟು ಮಾಡೋ ಸಾಧ್ಯತೆ ಇಲ್ಲಿರ್ತದೆ. ನಮ್ಮ ದುರದೃಷ್ಟ ಅಂದ್ರೆ, ಕೆಲವೊಂದು ಚಿತ್ರ ನಿರ್ದೇಶಕರೂ ಇದನ್ನ ಅರ್ಥ ಮಾಡಿಕೊಂಡಿಲ್ಲ. ನನಗನ್ನಿಸ್ತದ, ರೇಡಿಯೋ ನಾಟಕಗಳಿಂದ ಇದನ್ನ ನಾವು ಕಲತ್ಕೋಬಹುದಾಗಿತ್ತು. ನಮ್ಮಲ್ಲಿ ಫೋಟೋಗ್ರಾಫಿ ಒಳ್ಳೇದಾಗಿ ಇದ್ದರೂ ಶಬ್ದ ಇನ್ನೂ ಸುಧಾರಣೆ ಆಗಿಲ್ಲ” – ಈ ಮಾತು ರೇಡಿಯೋದಲ್ಲಿ ಬಳಕೆಯಾಗುವ ದನಿಪರಿಣಾಮಗಳ ಮಹತ್ವಕ್ಕೆ ಸಾಕ್ಷಿ.
ಮಾತುಗಳಲ್ಲಿ ಹೇಳಲಾಗದ ಮೌನವನ್ನೂ ಸೈಲೆನ್ಸ್‌ ಎಂಬ ದನಿಪರಿಣಾಮದ ಮೂಲಕ ಕಟ್ಟಿಕೊಡಬಹುದು ಬಾನುಲಿಯಲ್ಲಿ. ಹೀಗೆ ಮಾತಿನಿಂದ ಹಿಡಿದು ಮೌನದ ವರೆಗೂ ದನಿಪರಿಣಾಮಗಳ ವಿಸ್ತಾರವಿದೆ. ನನ್ನ ವೃತ್ತಿಜೀವನದಲ್ಲಿ ನಾನು ನಿರ್ಮಿಸಿದ ನಾಟಕಗಳು, ರೂಪಕಗಳು, ಶಬ್ದಚಿತ್ರಗಳು ಕೊನೆಗೆ ಕೆಲವೊಮ್ಮೆ ನೇರ ಭಾಷಣಗಳ ಮತ್ತು ಸಂದರ್ಶನಗಳ ನಡುವೆಯೂ ಸೂಕ್ತ ದನಿಪರಿಣಾಮಗಳನ್ನು ಬಳಸಿ ಅವುಗಳಿಗೆ ಹೊಸ ಅರ್ಥ, ಧ್ವನಿ ತರಲು ಪ್ರಯತ್ನ ಮಾಡಿದ ಸಾರ್ಥಕತೆ ನನಗಿದೆ. ದನಿಪರಿಣಾಮಗಳದು ಒಂದು ಅದ್ಭುತ ಜಗತ್ತು. ಅದನ್ನು ಸಂಪೂರ್ಣವಾಗಿ ಅರಿತಿದ್ದೇವೆಂದು ಹೇಳುವುದು ಅಸಾಧ್ಯ. ನವರಸಗಳೆಲ್ಲವನ್ನೂ, ಹಾಗೆಯೇ ಜಗತ್ತಿನ ಎಲ್ಲ ವಿದ್ಯಮಾನಗಳನ್ನೂ ದನಿಯಲ್ಲೇ ಅಭಿವ್ಯಕ್ತಪಡಿಸುವ ಸಾಮರ್ಥ್ಯ ಮತ್ತು ಪರಿಣತಿ ಇರುವ ನಿರ್ಮಾಪಕರು ಮಾತ್ರ ಆಕಾಶವಾಣಿಯ ನಿಜವಾದ ಶಕ್ತಿ- ಸಾಮರ್ಥ್ಯವನ್ನು ಕೇಳುಗರಿಗೆ ತಲುಪಿಸಲು ಸಾಧ್ಯ. ಹೀಗಾಗಿಯೇ ಅಲ್ಲಿ ಕೆಲಸ ಮಾಡುವುದೆಂದರೆ, ಅದು ನೌಕರಿ ಮಾತ್ರ ಅಲ್ಲ; ಸೃಜನಶೀಲ ವ್ಯಕ್ತಿತ್ವದ ನಿತ್ಯ ವಿಕಾಸದ ಪ್ರವೃತ್ತಿ.
ಮಾತುಗಳಿಗೆ ದನಿಯಾಗುವುದರ ಜೊತೆಗೆ, ಮಾತಿಲ್ಲದ ಪ್ರಪಂಚಕ್ಕೂ ದನಿಯೊದಗಿಸಿ, ಒಂದು ಅದ್ಭುತ ಲೋಕವನ್ನೇ ಸೃಷ್ಟಿಸುವ “ದನಿಮನೆ” ಆಕಾಶವಾಣಿ. ಇಂಥ ದನಿಮಾಧ್ಯಮದ ಜೊತೆಗಿನ ನನ್ನ ಮೂವತ್ತೊಂದು ವರ್ಷಗಳ ಬದುಕಿನಲ್ಲಿ ನಾನು ಅದೆಷ್ಟು ಮಾತುಗಳಿಗೆ ದನಿಯಾದದ್ದು, ಎಷ್ಟು ಪಾತ್ರಗಳಿಗೆ ದನಿಯೊದಗಿಸಿದ್ದು; ಎಷ್ಟೊಂದು ದನಿಪರಿಣಾಮಗಳನ್ನು ನಿರ್ಮಿಸಿದ್ದು, ಏನೆಂಥ ದನಿದನಿಗಳನ್ನು ಹೊಸೆದದ್ದು- ನೆನಪಿಸಿಕೊಂಡರೆ ಅದೊಂದು ಅನನ್ಯ ಮತ್ತು ಅದ್ಭುತ ಅನುಭವ. ದನಿಚಿತ್ತಾರದಂಗಳದ ಆ ವಿಸ್ತಾರವನ್ನೊಮ್ಮೆ ಹಿಂದೆ ಹೊರಳಿ ಕೇಳಿಸಿಕೊಂಡಾಗ ಬಾನಲ್ಲಿ ಲೀನವಾದ ಆ ಉಲಿಗಳಲ್ಲೇ ಕಾಣುವ ಬಣ್ಣಗಳು, ಕೇಳುವ ಭಾವಗಳು, ಹೊರಡುವ ರಸಗಳು ಎಣಿಕೆಗೆ ಸಿಗದಷ್ಟು ಸಂಖ್ಯೆಯವು. ಇಷ್ಟಾದರೂ, ಇನ್ನೂ ಹೊರಡದೇ ಇರುವ ದನಿಗಳೆಷ್ಟೋ? ದನಿಪರಿಣಾಮಗಳೆಷ್ಟೋ!!

**

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...