ಎ. ಎನ್. ಮೂರ್ತಿರಾಯರ - ದೇವರು; ವಾದ –ವಾಗ್ವಾದದ ನೆಲೆ

Date: 29-06-2022

Location: ಬೆಂಗಳೂರು


“ಚಿಕ್ಕಂದಿನಲ್ಲಿಯೇ ಮೊಳೆತ ದೇವರ ಅಸ್ತಿತ್ವದ ಕುರಿತಾದ ಅಪನಂಬಿಕೆ ಮೂರ್ತಿರಾಯರಲ್ಲಿ ಬಲಿತು ಬಲವಾಗುತ್ತದೆ. 90ನೇ ವಯೋಮಾನದ ಹೊತ್ತಿಗೆ ಅದು ಗಟ್ಟಿಯಾಗಿ ದೃಢ ನಿಲುವು ತಳೆಯುತ್ತದೆ” ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಎ. ಎನ್. ಮೂರ್ತಿರಾಯರ ’ದೇವರು’ ಕೃತಿಯ ಅಂತರಂಗ ಮತ್ತು ಆಶಯವನ್ನು ವಿಶ್ಲೇಷಿಸಿದ್ದಾರೆ.

“ದೇವರನ್ನು ನಂಬುವುದಿಲ್ಲ ಎಂದು ನಾನೇನೂ ಪಣತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು ಅಷ್ಟೇ!

“ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವಭಕ್ತಿ ಸತತವಾಗಿ ಇರಲಿ ಎಂದು ಹಾರೈಸಲು ನಾನು ಸಿದ್ಧ. ನನಗೆ ನಂಬಿಕೆ ಬರಲೊಲ್ಲದು ಅದು ನನ್ನ ತಪ್ಪಲ್ಲ!” ಎಂದು ನಿರ್ಭಿಡೆಯಿಂದ ತಮ್ಮ ನಾಸ್ತಿಕ ನಿಲುವನ್ನು ಘೋಷಿಸಿದ್ದವರು ಕನ್ನಡದ ಶತಾಯುಷಿ ಸಾಹಿತಿ ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್ ಅಂದರೆ ಎ.ಎನ್. ಮೂರ್ತಿರಾಯರು. ಅವರು ಕನ್ನಡದ ಪ್ರಬಂಧ ಸಾಹಿತ್ಯ ಪ್ರಕಾರಕ್ಕೆ ಘನತೆಯನ್ನು ತಂದಿತ್ತವರು. ಲಲಿತ ಪ್ರಬಂಧ ಕ್ಷೇತ್ರದಲ್ಲಿ ಔನ್ನತ್ಯವನ್ನು ಸಾಧಿಸಿದವರು. ಹಳ್ಳಿಯ ವಾತಾವರಣದಲ್ಲಿ ಹುಟ್ಟಿ, ಪಟ್ಟಣದ ಪರಿಸರದಲ್ಲಿ ಬೆಳೆದು, ದೇಶ-ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಪ್ರಪಂಚಮುಖಿಯಾದ ಮೂರ್ತಿರಾಯರ ವ್ಯಕ್ತಿತ್ವ ಅನ್ಯಾದೃಶವಾದುದು.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಾಸ್ತಿಕತೆಯನ್ನು ಪ್ರತಿಪಾದಿಸುವ ಅನೇಕ ಲೇಖಕರು ಆಗಿ ಹೋಗಿದ್ದಾರೆ. ಶಿವರಾಮ ಕಾರಂತರು, ಗೌರೀಶ ಕಾಯ್ಕಿಣಿ, ಸೇವ ನಮಿರಾಜಮಲ್ಲ ಮುಂತಾದವರನ್ನು ತಕ್ಷಣಕ್ಕೆ ಹೆಸರಿಸಬಹುದು. ಇವರೆಲ್ಲರಿಗಿಂತ ತಮ್ಮ ನಂಬಿಕೆಯನ್ನು, ನಿರೀಶ್ವರವಾದಿ ನಿಲುವನ್ನು ಪ್ರಖರವಾಗಿ ಪ್ರತಿಪಾದಿಸಿರುವವರು ಎ.ಎನ್. ಮೂರ್ತಿರಾಯರು. ಪ್ರಧಾನವಾಗಿ ಲಲಿತ ಪ್ರಬಂಧ ರಾಯರ ಬರವಣಿಗೆಯ ಕ್ಷೇತ್ರವಾಗಿತ್ತು. ಇಲ್ಲೆಲ್ಲ ಅಲ್ಪ ಪ್ರಮಾಣದಲ್ಲಿ ಅಭಿವ್ಯಕ್ತವಾಗುವ ಅವರ ನಾಸ್ತಿಕ ಮನೋವೃತ್ತಿ ದೊಡ್ಡ ಪ್ರಮಾಣದಲ್ಲಿ ಅನಾವರಣವಾದದ್ದು ರಾಯರ ‘ದೇವರು’ ಎಂಬ ವೈಚಾರಿಕ ಕೃತಿಯಲ್ಲಿ ಮತ್ತು ಅವರ ಆತ್ಮಕಥನ ‘ಸಂಜೆಗಣ್ಣಿನ ಹಿನ್ನೋಟ’ (1990)ದಲ್ಲಿ. 1991ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕೃತಿ ಇದುವರೆಗೆ ಇಪ್ಪತ್ತೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಹಲವೆಡೆ ಪಠ್ಯಪುಸ್ತಕವಾಗಿಯೂ ನಿಯುಕ್ತವಾಗಿದೆ. ನಿರೀಶ್ವರವಾದಿಗಳು ಪ್ರೀತಿಯಿಂದ ಪುಸ್ತಕವನ್ನು ಆದರಿಸಿದ್ದಾರೆ. ದೇವರನ್ನು ನಂಬುವವರೂ ಪುಸ್ತಕ ಏನು ಹೇಳುತ್ತದೆ ಎಂಬ ಕುತೂಹಲಕ್ಕಾಗಿ ಓದಿ, ಹಲವು ವಾದ-ವಾಗ್ವಾದಗಳನ್ನು ನಡೆಸಿದ್ದಾರೆ.

ಸಾಂಪ್ರದಾಯಿಕ ಬ್ರಾಹ್ಮಣ ಮನೆತನದ ಪ್ರತಿನಿಧಿಯಾಗಿದ್ದ ಮೂರ್ತಿರಾಯರು ಮೊದ ಮೊದಲು ತಮ್ಮ ಮತಧರ್ಮದ ಬಗ್ಗೆ ಆದರವಿದ್ದರೂ ಶ್ರದ್ಧೆಯಿನ್ನಿಟ್ಟವರಲ್ಲ. ಚಿಕ್ಕಂದಿನಲ್ಲಿಯೇ ಅವರು ನಾಸ್ತಿಕತೆಯತ್ತ ವಾಲುತ್ತಿದ್ದರೂ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಎಲ್ಲರಂತೆ ವರ್ತಿಸುತ್ತಾರೆ. ಅವರ ಆಚರಣೆಯಲ್ಲಿ ಕಲೋಪಾಸನೆ ಇತ್ತೇ ಹೊರತು ಧರ್ಮ ಶ್ರದ್ಧೆಯಾಗಲಿ, ಪೂಜನೀಯ ಭಾವನೆಯಾಗಲಿ ಇರಲಿಲ್ಲ. ಇದಕ್ಕಾಗಿಯೇ ಅವರು, ಸಹಪಾಠಿಗಳು ಗಣಪತಿಯ ಮುಂದೆ ಪರೀಕ್ಷೆ ಪಾಸಾಗಲೆಂದು ಇಡಿಗಾಯಿ ಒಡೆಯುತ್ತಿದ್ದರೆ ತಾವು ಸೇರಿರಲಿಲ್ಲ.

ಮೂರ್ತಿರಾಯರೇ ಹೇಳುವಂತೆ ಈ ಸಂದರ್ಭ ಹೀಗಿತ್ತು. “...ಪಿಯುಸಿಯಲ್ಲಿ ಓದುತ್ತಿದ್ದಾಗ ‘ಪೂಜ್ಯಬುದ್ಧಿ’ ಇರಲಿಲ್ಲ. ಯಾವಾಗ ಹೊರಟು ಹೋಯಿತೋ ಹೇಳಲಾರೆ. ಹೋದದ್ದಕ್ಕೆ ಕಾರಣವನ್ನು ಹೇಳಬಲ್ಲೆ. ಅದು ನಿಜವಾದರೆ ಅವನು ನನ್ನ ತಂದೆಗೆ ನಡುವಯಸ್ಸಿನಲ್ಲಿ ಹನ್ನೆರಡು ವರ್ಷ ನರಳಿ ಸಾಯುವ ಕಷ್ಟವನ್ನೇಕೆ ಕೊಟ್ಟ? ನನ್ನ ಅಜ್ಜಿಗೆ ಮಗ ಹಾಗೆ ಸಾಯುವುದನ್ನು ನೋಡುವ ಸಂಕಟವನ್ನೇಕೆ ಕೊಟ್ಟ? ಹಸುಗೂಸು ಮೈಥಿಲಿಗೆ ಮದುವೆಯಾಗಿ ಆರು ತಿಂಗಳೊಳಗೆ ವಿಧವೆಯಾಗುವ ಸಂಕಟವನ್ನೇಕೆ ಕೊಟ್ಟ? ಮುದ್ದೆಭಟ್ಟರ ಸಂಸಾರ ಒಬ್ಬರೂ ಉಳಿಯದಂತೆ ಎರಡು ದಿನಗಳಲ್ಲಿ ತೊಡೆದು ಹೋಯಿತಲ್ಲ, ಅದನ್ನೇಕೆ ತಪ್ಪಿಸಲಿಲ್ಲ? ದೇವರಿದ್ದರೆ ಈ ಸಂಕಟ ಇರಬಾರದು; ಈ ಸಂಕಟವಿದ್ದರೆ ದೇವರು, ಕರುಣಾಮಯನಾದ ದೇವರು, ಇರುವುದು ಸಾಧ್ಯವಿಲ್ಲ” ಹೀಗೆ ಸಣ್ಣ ವಯಸ್ಸಿನಲ್ಲೇ ಅವರು ಕಂಡ ನೋವು, ದುಃಖ-ದುಮ್ಮಾನಗಳ ಪರಂಪರೆ ಅವರಿಗೆ ದೇವರ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಇದು ಸರಳವಾದ ತರ್ಕವೆನಿಸಿದರೂ ಅಷ್ಟೇ ಸಹಜವಾದದೂ ಹೌದು.

ಬದುಕಿನಲ್ಲಿ ಕಾಣಸಿಗುವ ಕ್ರೌರ್ಯ, ಹೃದಯಶೂನ್ಯ ವ್ಯವಸ್ಥೆ ಇದನ್ನೆಲ್ಲವನ್ನೂ ಕಂಡ ಮೂರ್ತಿರಾಯರ ಮನಸ್ಸು ಪ್ರಶ್ನಿಸಿದ್ದು; ಸರ್ವಜ್ಞ, ಸರ್ವಶಕ್ತ ಎನಿಸಿಕೊಂಡಿರುವ ದೇವರಿಗೆ ಇದಕ್ಕಿಂತ ಉತ್ತಮ ವ್ಯವಸ್ಥೆ ಕಾಣಲಿಲ್ಲವೇಕೆ?” ಕೇಡು, ಹಿಂಸೆ, ಸಂಕಟ-ಇವೆಲ್ಲ ದನಿಯೆತ್ತಿ ಸಾರುತ್ತವೆ; ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ ಎಂದು” ಈ ವಾಸ್ತವಕ್ಕೆ ಮುಖಾಮುಖಿಯಾದ ಮೂರ್ತಿರಾಯರು ಕ್ರಮೇಣ ನಿರೀಶ್ವರವಾದಿಯಾಗಿರುತ್ತಾರೆ. ದೇವರಿದ್ದಾನೆ ಎನ್ನುವುದಕ್ಕೆ ಆಧಾರವಿಲ್ಲ. ಧರ್ಮ ಸ್ಥಾಪನೆಗಾಗಿ ಅವನೆಷ್ಟು ಸಾರಿ ಅವತರಿಸಿದರೂ ದುಷ್ಟತನ ನಾಶವಾಗಿಲ್ಲ. ಸೇಡು ಕಟ್ಟುವ ದೇವರು ದೇವರೇ ಅಲ್ಲ, ಎಂಬ ಸಹಜ ತರ್ಕದ ನೆಲೆಯಲ್ಲಿ ಮೂರ್ತಿರಾಯರು ತಮ್ಮ ಗ್ರಹಿಕೆಯನ್ನು ಬೆಳೆಸಿಕೊಳ್ಳುತ್ತಾ ಸಾಗುತ್ತಾರೆ.

ಇದೇ ಗ್ರಹಿಕೆಯ ಮುಂದುವರಿದ ಭಾಗವಾಗಿ ಮೂರ್ತಿರಾಯರು ಸ್ವರ್ಗ ನರಕಗಳನ್ನೂ ನಂಬುವುದಿಲ್ಲ. ನರಕದ ಕಲ್ಪನೆಯ ವಿಚಾರದಲ್ಲಿಯೇ ಅವರಿಗೆ ತಿರಸ್ಕಾರವಿದೆ. “ದೇವನೊಬ್ಬ ಇದ್ದರೆ, ಕರುಣಾಮಯ ಎನ್ನುವುದು ನಿಜವಾದರೆ, ಆತ ನರಕವನ್ನು ಸೃಷ್ಟಿಸಿದ್ದಾನೆಂದು ನಂಬುವುದು ಹೇಗೆ? ದೇವರು ಸ್ಯಾಡಿಸ್ಟ್ ಅಲ್ಲವಲ್ಲ! ದೇವರಿದ್ದರೆ ನರಕವಿಲ್ಲ” ಹೀಗೆ ದೇವರ ಅಸ್ತಿತ್ವದ ನಿರಾಕರಣೆಯನ್ನ ಮಾಡುತ್ತಾ ಸಾಗುವ ಮೂರ್ತಿರಾಯರು ಸಾಂಪ್ರದಾಯಿಕವಾಗಿ ನಂಬಿರುವ ದೇವರ ಶಕ್ತಿಯಲ್ಲಿರುವ ವೈರುಧ್ಯವನ್ನು ಬಯಲಿಗೆಳೆಯುತ್ತಾರೆ. “ದೇವರು ಸರ್ವಜ್ಞ, ಸರ್ವಂತರ್ಯಾಮಿ, ಸರ್ವಶಕ್ತ ಎಂಬ ಹೇಳಿಕೆಯಲ್ಲೇ ವಿರೋಧಾಭಾಸವಿದೆ”ಯೆನ್ನುತ್ತಾರೆ. ಸರ್ವಜ್ಞನಾದವನು ಸರ್ವಶಕ್ತನಾಗುವದು ತಾರ್ಕಿಕವಾಗಿ ಅಸಾಧ್ಯ. ಯಾಕೆಂದರೆ ಮುಂದೆ ಹೀಗಾಗಲಿಕ್ಕಿದೆ ಎಂದು ಸರ್ವಜ್ಞನಿಗೆ ಮೊದಲೇ ತಿಳಿದಿರುತ್ತದೆ. ಮುಂದಾಗುವುದನ್ನು ತಡೆಯುವುದು ಸಾಧ್ಯವಿಲ್ಲವಾದರೆ ಆತ ಸರ್ವಶಕ್ತನಾಗಲಾರ. ಒಂದೊಮ್ಮೆ ತಡೆದನಾದರೆ ಈ ಮೊದಲು, ಮುಂದಾಗುವದನ್ನು ಸರ್ವಜ್ಞನಾಗಿ ಆತ ತಿಳಿದಿದ್ದು ತಪ್ಪಾಗುತ್ತದೆ!

ಚಿಕ್ಕಂದಿನಲ್ಲಿಯೇ ಮೊಳೆತ ದೇವರ ಅಸ್ತಿತ್ವದ ಕುರಿತಾದ ಅಪನಂಬಿಕೆ ಮೂರ್ತಿರಾಯರಲ್ಲಿ ಬಲಿತು ಬಲವಾಗುತ್ತದೆ. 90ನೇ ವಯೋಮಾನದ ಹೊತ್ತಿಗೆ ಅದು ಗಟ್ಟಿಯಾಗಿ ದೃಢ ನಿಲುವು ತಳೆಯುತ್ತದೆ. ನಾಸ್ತಿಕರೆಂಬ ಅಭಿದಾನಕ್ಕೂ ಪಾತ್ರರಾಗುತ್ತಾರೆ. ಇದೇ ಸಂದರ್ಭದಲ್ಲಿ ‘ದೇವರು’ ಎಂಬ ಪುಸಕ್ತ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ. ಇದರಲ್ಲಿ ಮಾನವನ ಮನಸ್ಸಿನಲ್ಲಿ ಮೊದ ಮೊದಲು ಮೂಡಿದ ಕಲ್ಪನೆಗಳನ್ನು ವಿವರಿಸುತ್ತಾರೆ. ಪ್ರಾಕೃತಿಕ ಶಕ್ತಿಗಳನ್ನು ಕುರಿತಾದ ಭಯದಿಂದ ಹುಟ್ಟುವ ಸರ್ವಚೇತನವಾದ ಹಾಗೂ ವೇದಕಾಲದಲ್ಲಿ ಉದ್ಭವಿಸಿದ ಪ್ರಕೃತಿ ಶಕ್ತಿಗಳ ರೂಪಾಂತರವಾದ ದೇವತೆಗಳ ಉಗಮದ ಹಿಂದಿನ ಮಾನವ ದೌರ್ಬಲ್ಯಗಳನ್ನು ಸಾಧಾರವಾಗಿ ಮೂರ್ತಿರಾಯರು ಪ್ರತಿಪಾದಿಸುತ್ತಾರೆ.

ದೇವತೆಗಳ ರೂಪದ ಜಿಜ್ಞಾಸೆ ಮೂರ್ತಿರಾಯರ ಮುಂದಿನ ಗಮ್ಯ. ದೇವರು ಆಕಾರದಲ್ಲಿ ಮನುಷ್ಯನಂತೆಯೇ ಇದ್ದರೆ ಏನು ಹೆಚ್ಚುಗಾರಿಕೆ? ಆನೆಯ ಮುಖ, ಮೂರು ಕಣ್ಣು, ನಾಲ್ಕು ಕೈಗಳು, ಅರ್ಧನಾರೀಶ್ವರತ್ವ ಹೀಗೆ ಮನುಷ್ಯ ದೇವರಿಗೆ ಅನೇಕ ರೂಪಗಳನ್ನು ಕರುಣಿಸಿದ್ದಾನೆ. ಇಂತಹ ವಿಚಿತ್ರ ರೂಪಗಳಿಗೆ ಸಾಂಕೇತಿಕ ಹಾಗೂ ಪ್ರತಿಮಾತ್ಮಕ ಅರ್ಥ ಕಲ್ಪಿಸುತ್ತಾನೆ. ಅಷ್ಟೇ ಅಲ್ಲ ತನ್ನ ಭ್ರಾಂತಿಗಳಿಗೆ ದೇವರನ್ನೂ ಬಲಿಪಶುವನ್ನಾಗಿಸುತ್ತಾನೆ. ಈ ಸಂದರ್ಭದಲ್ಲಿ ಮೂರ್ತಿರಾಯರು ಗಣಪತಿ ಮತ್ತು ತ್ರಿಮೂರ್ತಿಗಳ ಸ್ವರೂಪವನ್ನು ಚರ್ಚಿಸುತ್ತಾರೆ. ಗಣಪತಿಯ ಅಸಂಖ್ಯ ರೂಪಾಂತರಗಳನ್ನು ಗಮನಿಸಿದಾಗ, ಅವನಂಥ ಜನಪ್ರಿಯ ಪುಣ್ಯವಂತ ದೇವರು ಇನ್ನೊಬ್ಬನಿಲ್ಲ. ಗಣಪನ ಬಗ್ಗೆ ಹುಟ್ಟಿಕೊಂಡಿರುವ ಕಥೆಗಳಂತೂ ಮನುಷ್ಯನ ಕಲ್ಪನಾಶಕ್ತಿಗೆ ಅಪೂರ್ವ ಸಾಕ್ಷಿ. ಇನ್ನು ತ್ರಿಮೂರ್ತಿಗಳ ಗುಣಲಕ್ಷಣ ಅವರ ಕಾರ್ಯ ವಿಧಾನಗಳು ಹಾಗೂ ಅವರ ಭಕ್ತರ ಮಧ್ಯದ ಜಗಳಗಳು ಲೆಕ್ಕಕ್ಕೇ ಸಿಗದಷ್ಟಿವೆ. ಈ ಎಲ್ಲ ಪ್ರವರಗಳನ್ನು ಪರಿಶೀಲಿಸಿದ ಮೂರ್ತಿರಾಯರು ಉದ್ಗರಿಸುವುದು ಹೀಗೆ; “ವಾಸ್ತವವಾಗಿ ನಾವು ಮಾಡಿದ್ದೇನು? ದೇವರನ್ನು ಉನ್ನತ ಮಟ್ಟದಿಂದ ಇಳಿಸಿ ಅವನನ್ನೂ ಮಾನವನನ್ನಾಗಿ ಮಾಡಿದೆವು! ನಾವು ದೇವರ ಮಟ್ಟಕ್ಕೆ ಏರುವುದು ಕಷ್ಟ; ಅವನನ್ನು ನಮ್ಮ ಮಟ್ಟಕ್ಕೆ ಇಳಿಸಿದೆವು. ನಾವು ದೊಡ್ಡವನೆಂದು ಭಾವಿಸಿದ್ದವನಿಗೂ ನಮ್ಮ ಕೊರತೆಗಳು ತಪ್ಪಿದ್ದಲ್ಲ ಎಂದುಕೊಳ್ಳುವುದರಿಂದ ಬರುವ ಸಂತೋಷ ಕ್ಷುಲ್ಲಕವಾದದ್ದು.”

ಅನೇಕ ಗೊಂದಲ, ಜಗಳಗಳಿಗೆ ಕಾರಣವಾಗಿರುವ ತ್ರಿಮೂರ್ತಿ ಕಲ್ಪನೆಯನ್ನು ಮರೆತು ಏಕದೇವತೋಪಾಸನೆಯನ್ನು ಸ್ವೀಕರಿಸಿದರೆ (ಆಸ್ತಿಕರು), ವಿಷ್ಣು-ಶಿವ ಎಂಬ ಹಣೆಪಟ್ಟಿಗಳಿಲ್ಲದೆ ಲಜ್ಜೆಗೇಡಿನ ಎಲ್ಲ ಕತೆಗಳೂ ನಿಧಾನವಾಗಿ ವಿಸ್ಮೃತಿಯ ಗರ್ಭದಲ್ಲಿ ಮರೆಯಾಗುತ್ತವೆ. ಇದರಿಂದ ಎಲ್ಲರಿಗೂ ಕ್ಷೇಮ ಎಂಬ ವಾದವನ್ನೂ ಮೂರ್ತಿರಾಯರು ಮಂಡಿಸುತ್ತಾರೆ. ಅಂತಿಮವಾಗಿ, ದೇವರು ಇದ್ದಾನೆ ಅಥವಾ ಇಲ್ಲ ಇಲ್ಲ ಚರ್ಚೆಗಿಂತ ಮುಖ್ಯವಾಗಿ; ದೇವರಿಲ್ಲದಿದ್ದರೇನಂತೆ, ನಾವು ಮಾಡಬಹುದಾದದ್ದು, ಮಾಡಬೇಕಾದದ್ದು ಬೇಕಾದಷ್ಟಿದೆ ಎಂಬುದನ್ನು ಜೀವನ ಮೌಲ್ಯಗಳ ಬಗೆಗಿನ ಚರ್ಚೆಯಲ್ಲಿ ಮೂರ್ತಿರಾಯರು ಅನಾವರಣ ಮಾಡಿದ್ದಾರೆ. ವ್ಯಕ್ತಿಯೊಬ್ಬ ಅತ್ಯುನ್ನತ ಹಂತವನ್ನು ಸಾಮಾಜಿಕವಾಗಿ ತಲುಪುವುದು ಹೇಗೆ ಸಾಧ್ಯ ಎಂದು ಅವರು ಹೇಳುತ್ತಾರೆ. ದೇವರನ್ನು ನಂಬಿದವರು ಕ್ರೂರಿಗಳಾಗಬಹುದು. ನಂಬದವರು ಮೌಲಿಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಅಥವಾ ಅವುಗಳ ಪರ್ಯಾಯವೂ ಸಾಧ್ಯ. ಆದರೆ ಪ್ರಮುಖ ವಿಚಾರವೆಂದರೆ; ದೇವರು ಮತ್ತು ಮೌಲ್ಯ ಪರಸ್ಪರ ಸಂಬಂಧಿತ ಅಂಶಗಳೇನೂ ಅಲ್ಲ ಎಂಬುದು.

ದೇವರಿಗೆ ಸಲ್ಲಿಸುವ ಏನೆಲ್ಲಾ ಉಪಚಾರಗಳು ದೀನದಲಿತರಿಗೆ ಸಲ್ಲುವಂತಾಗಬೇಕು. ಇದು ಕೇವಲ ದಾನಧರ್ಮದ ಮಾತಲ್ಲ. ದಾನ ಮಾಡುವವನಲ್ಲಿಯ ‘ದಾನಿ ನಾನು’ ಎಂಬ ಭಾವ ಹಾಗೂ ದಾನ ಪದೆಯವವನ ‘ದೀನ ನಾನು’ ಎಂಬ ಭಾವಗಳೆರಡೂ ಮನುಷ್ಯನ ಮಟ್ಟವನ್ನು ಕಡಿಮೆಗೊಳಿಸುತ್ತವೆ. ಯಾವನೂ ಆಳುದ್ದದ ದೇಹವನ್ನು ಗೇಣುದ್ದ ಮಾಡಿಕೊಂಡು ಇನ್ನೊಬ್ಬನೆದುರಿಗೆ ಪ್ರಸಾದಕ್ಕಾಗಿ ಕೈಯೊಡ್ಡುವಂತಾಗಬಾರದು. ಇದು ಸಾಧ್ಯವಾಗುವಂಥ ಸಾಮಾಜಿಕ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವುದೇ ನಮ್ಮ ಸೇವೆಯ ಗುರಿ ಎಂಬುದು ಮೂರ್ತಿರಾಯರ ಸ್ಪಷ್ಟ ಅಭಿಮತ. ಶೈವಮತ, ವೈಷ್ಣವಮತ ಇತ್ಯಾದಿಗಳ ಬದಲಿಗೆ ನಾವು ಅಪೇಕ್ಷಿಸುವ ಮತವನ್ನು ಮಾನವಮತ, ಮಾನವ ಧರ್ಮವೆಂದು ಕರೆಯಬೇಕು. ಈ ಮತದಲ್ಲಿ ಸರ್ವಸಮತಾ ಭಾವ, ನ್ಯಾಯ, ನೀತಿ, ಒಟ್ಟಿನಲ್ಲಿ ಪ್ರೇಮ ಗುಣಗಳೇ ಮೌಲ್ಯಗಳೇ ಅಡಕವಾಗಿರುವುದು ಎಂಬುದೂ ಅವರ ವಿಚಾರವಾಗಿದೆ.

‘ದೇವರು’ ಕೃತಿಯಲ್ಲಿ ಮೂರ್ತಿರಾವ್ ಅವರು ಪ್ರಸ್ತಾಪಿಸಿರುವ ಉದಾತ್ತ ಗುಣಗಳನ್ನು, ಮೌಲ್ಯಗಳನ್ನು ಶ್ರೀಸಾಮಾನ್ಯರು ಮೈಗೂಡಿಸಿಕೊಳ್ಳುವುದು ಹೇಗೆ? ಜನಸಾಮಾನ್ಯರಲ್ಲಿ ವ್ಯಾಪಕವಾಗಿ ಬಿತ್ತಲಾಗಿರುವ ದೇವರ ಭಯ, ದೈವವಾದವನ್ನು ಹೋಗಲಾಡಿಸುವುದು ಹೇಗೆ? ಅವರ ಬದುಕಿನ ಬಗ್ಗೆ ಭರವಸೆ ಮೂಡಿಸುವ ಭೌತಿಕವಾದದ ಕುರಿತು ವಿಶ್ವಾಸ ಕುದುರಿಸುವುದು ಹೇಗೆ? ಸಮಾಜದಲ್ಲಿರುವ ವಿವಿಧ ವೈರುಧ್ಯಗಳನ್ನು ಹಾಗೂ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಕಿತ್ತೊಗೆಯುವುದು ಹೇಗೆ? ಅದರ ಬದಲಿಗೆ ಸಮಾನತೆಯ ಹಾಗೂ ಸುಖ ಸಮೃದ್ಧಿಯ ಹೊಸ ಸಮಾಜವನ್ನು ನಿರ್ಮಿಸುವುದು ಹೇಗೆ? ಈ ಎಲ್ಲಾ ವಿಷಯಗಳೂ ಮಾರ್ಕ್ಸ್ ವಾದ, ವೈಜ್ಞಾನಿಕ ಸಮಾಜವಾದ, ವೈಜ್ಞಾನಿಕ ಮಾನವತಾವಾದಕ್ಕೆ ಸಂಬಂಧಿಸಿದ ಸಂಗತಿಗಳಾಗಿವೆ.

ಇಂದಿನ ದಿನಮಾನಗಳಲ್ಲಿ ಮತಧರ್ಮದ ಶ್ರದ್ಧಾಳುಗಳೆನಿಸಿಕೊಂಡ ಅನೇಕರು ಗೊಡ್ಡು ಆಚರಣೆಗಳಲ್ಲಿ ಪೂರ್ತಿ ಮುಳುಗಿದ್ದಾರೆ. ಅದು ಮಿತಿಮೀರಿ ಆವರಿಸಿಕೊಂಡಾಗ ಎಂತಹ ಕೃತ್ಯಗಳಿಗೂ ಕಾರಣವಾಗಬಹುದು. ದೈವಶ್ರದ್ಧೆಯ ವೈಪರೀತ್ಯಗಳಲ್ಲಿ ಇದು ಅತ್ಯಂತ ಕರಾಳವಾದುದು ಎನ್ನುವ ಮೂರ್ತಿರಾಯರು; ಇತಿಹಾಸದ ಪುಟಗಳ ಅನೇಕ ರಕ್ತಸಿಕ್ತ ಅಧ್ಯಾಯಗಳನ್ನು ತೆರೆದಿಡುತ್ತಾರೆ. ಸಂಕಟ, ಕೊಲೆ, ಹಿಂಸೆ ಇವೆಲ್ಲಾ ಮತಧರ್ಮಗಳ ಮೂಸೆಯಿಂದ ಹೊರಬಂದಿವೆ.. ಹೀಗಿದ್ದೂ ಅವುಗಳನ್ನು ದೇವ ಸಾಕ್ಷಾತ್ಕಾರ ಸೋಪಾನಗಳೆಂದು ಪರಿಗಣಿಸಲಾಗುತ್ತಿದೆ. ದೇವರಿಗೆ ಹತ್ತಿಕೊಂಡಿರುವ ಅನೇಕ ದುರ್ಗುಣಗಳು ಅಂತಿಮವಾಗಿ ಮನುಷ್ಯನವೇ ಆಗಿವೆ.

ಆತ್ಯಂತಿಕವಾಗಿ ಮೂರ್ತಿರಾಯರು ಪ್ರತಿಪಾದಿಸುವುದು ಮಾನವ ಮತವನ್ನು, ಸಾಮರಸ್ಯವನ್ನು, ಹಿತಕರವಾದ ಸಾಮಾಜಿಕ ಪ್ರಜ್ಞೆ ಗೌರವಯುತ. ಆದರೆ ಅದನ್ನು ಮೀರಿ ನಿಲ್ಲುವ ಪರಮ ಪ್ರಜ್ಞೆಯ ಆವಿಷ್ಕಾರ ಇನ್ನೂ ಹೆಚ್ಚು ಮಂಗಳಕರ. ತಿಳಿಯಾದ ಮನಸ್ಸು, ಸಚ್ಚಾರಿತ್ರ್ಯ ಇವು ಕನಸಲ್ಲ. ಗಳಿಸಿಕೊಳ್ಳಬಹುದಾದ ನೈಜ ಸಾಧ್ಯತೆಗಳು ಎಂದು ನಂಬಿದ್ದ ಮೂರ್ತಿರಾಯರು ಕೊನೆಯವರೆಗೂ ಆಶಾವಾದಿಗಳಾಗಿಯೇ ಬದುಕಿದವರು.

ಈ ಅಂಕಣದ ಹಿಂದಿನ ಬರೆಹಗಳು:
ಕಾರಂತರ ಬೆಟ್ಟದ ಜೀವ: ಕೃತಿ ಮತ್ತು ಪ್ರಕೃತಿ
ಗೋಕಾಕರ ‘ಭಾರತ ಸಿಂಧುರಶ್ಮಿ’: ಜನಮನ ಅಭೀಪ್ಸೆಗಳ ಸಂಕೇತ
ನಿಸರ್ಗ: ಪ್ರಾದೇಶಿಕ ಪರಿಸರದ ದಟ್ಟ ಚಿತ್ರಣ
ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ
ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...