ಆಡಾಡತಾ ಆಯುಷ್ಯ’ ಆತ್ಮಚರಿತ್ರೆ ವಾಚಿಸಿ ಕಾರ್ನಾಡರಿಗೆ ‘ಅಭಿನಯ ಭಾರತಿ’ ನುಡಿನಮನ

Date: 10-06-2021

Location: ಧಾರವಾಡ


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ ಅವರಿಗೆ ನುಡಿನಮನ ಸಲ್ಲಿಸಲು ಧಾರವಾಡದ ಅಭಿನಯ ಭಾರತಿ ಸಂಸ್ಥೆಯು ಗುರುವಾರ ಬೆಳಿಗ್ಗೆಯಿಂದ ಅಂತರ್ಜಾಲದಲ್ಲಿ ಅಂತಾರಾಷ್ಟ್ರೀಯವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ನಾಡರ ಆತ್ಮಚರಿತ್ರೆಯ ನೆನಪುಗಳಿಗೆ ಚಾಲನೆ ನೀಡಲಾಯಿತು.

ಗಿರೀಶ್ ಕಾರ್ನಾಡ ಇಲ್ಲವಾಗಿ ಇಂದಿಗೆ (10 ಜೂನ್, 2021) ಎರಡು ವರ್ಷವಾಯಿತು. ಭಾರತ ರಂಗಭೂಮಿ ವಿಶೇಷವಾಗಿ ಕರ್ನಾಟಕ ರಂಗಭೂಮಿಯನ್ನು ಸದಾ ಕ್ರಿಯಾಶೀಲವಾಗಿರುವಂತೆ ಚೇತನಾ ಶಕ್ತಿಯಾಗಿದ್ದ ಅವರು ತುಘಲಕ್, ಹಯವದನ ಮುಂತಾದ ನಾಟಕಗಳನ್ನು ಬರೆಯುವ ಮೂಲಕ ಮಾತ್ರವಲ್ಲ; ಸ್ವತಃ ಅಭಿನಯಿಸಿ, ರಂಗಭೂಮಿಯತ್ತ ಪ್ರೇಕ್ಷಕರ ಆಸಕ್ತಿಯನ್ನು ಹೆಚ್ಚಿಸಿದ್ದರು.

ಕಾರ್ನಾಡರ ಆತ್ಮಚರಿತ್ರೆ ‘ಆಡಾಡತಾ ಆಯುಷ್ಯ’ ಕೃತಿಯ ಮೊದಲ ಆರು ಪುಟಗಳವರೆಗೆ ಅಭಿನಯ ಭಾರತಿ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಅವರು ಓದುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ನಂತರ, ಈ ಮೊದಲೇ ನಿಗದಿಪಡಿಸಿದಂತೆ, ಕಾರ್ನಾಡರ ಒಡನಾಡಿಗಳು, ಅಭಿಮಾನಿಗಳು ‘ಆಡಾಡತಾ ಆಯುಷ್ಯ’ ಕೃತಿಯ ಮುಂದುವರಿದ ಪುಟಗಳನ್ನು ಓದುವ ಮೂಲಕ ಕಾರ್ನಾಡರ ಆತ್ಮ ಚರಿತ್ರೆಗೆ ಆಪ್ತತೆಯ ಸ್ಪಂದನೆ ನೀಡಿದರು.

ಗುರುವಾರ ಬೆಳಿಗ್ಗೆ 6 ಗಂಟಗೆ ಜಗತ್ತಿನಾದ್ಯಂತ ಹಬ್ಬಿದ ಬೆಸುಗೆಯ ಜಾಲದಲ್ಲಿ ಸುಮಾರು 52 ಸಾಹಿತಿ ಮಿತ್ರರು ‘ಆಡಾಡ್ತ ಆಯುಷ್ಯ’ ಕೃತಿಯನ್ನು ಓದುವ ಮೂಲಕ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು ಮಾತ್ರವಲ್ಲ; ಕೇಳುಗರಿಗೂ ಕಾರ್ನಾಡರ ನೆನಪನ್ನು ತಂದುಕೊಟ್ಟರು.

ಧಾರವಾಡದಿಂದ ಅರವಿಂದ ಕುಲಕರ್ಣಿ, ವಿನಾಯಕ ನಾಯಕ, ಬೆಳಗಾವಿಯಿಂದ ಪದ್ಮಾ ಕುಲಕರ್ಣಿ, ಕ್ಯಾಲಿಫೋರ್ನಿಯಾದಿಂದ ಅಶೋಕ ಹಂದಿಗೋಳ ಹಾಗೂ ಶ್ರೀನಿವಾಸ, ಧಾರವಾಡದ ಜ್ಯೋತಿ ಪುರಾಣಿಕ ದೀಕ್ಷಿತ್, ಬಾಸ್ಟನ್ ನಿಂದ ವೈಶಾಲಿ ಹೆಗಡೆ, ರಾಜೇಶ್ವರಿ ಹನುಮಂತರಾವ್, ಮೈಸೂರಿನಿಂದ ಉಷಾ ನರಸಿಂಹನ್, ಲಾಸ್ ಎಂಜಿಲಸ್ ನಿಂದ ವಲ್ಲಿಷಾ ಶಾಸ್ತ್ರೀ, ಪ್ರಜ್ಞಾ ಮತ್ತೀಹಳ್ಳಿ, ವಾಸಿಂಗ್ಟನ್ ನಿಂದ ರವಿ ಹರಪನಹಳ್ಳಿ, ಶಿರಸಿಯಿಂದ ಶೈಲಜಾ ಗೊಡ್ಮನೆ, ಡಾ. ಕೆ.ವಿ. ಶಿವರಾಮ, ಹರ್ಷ ಡಂಬಳ ಸೇರಿದಂತೆ ಸುಮಾರು 52 ಜನ ಸಾಹಿತಿ-ಅಭಿಮಾನಿ ಮಿತ್ರರು ‘ಆಡಾಡತಾ ಆಯುಷ್ಯ’ ಆತ್ಮಚರಿತ್ರೆಯನ್ನು ವಾಚಿಸಿದರು.

ಗುರುವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ವಾಚಿಸುವ ಅಭಿರುಚಿಯು 19 ಗಂಟೆಕಾಲ ಮುಂದುವರಿದ್ದು, ಐತಿಹಾಸಿಕ ಘಟನೆಯಾಗಿ ಮೆರೆಯಿತು. ಚಲನಚಿತ್ರ ನಿದೇರ್ಶಕ ಟಿ.ಎಸ್.ನಾಗಾಭರಣ, ಡಾ. ರಮಾಕಾಂತ ಜೋಶಿ ಸೇರಿದಂತೆ ಅಭಿನಯ ಭಾರತಿಯ ಸದಸ್ಯರು ಪಾಲ್ಗೊಂಡಿದ್ದರು.

ಆತ್ಮಚರಿತ್ರೆ ವಾಚಿಸಿ ನುಡಿನಮನ : ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ಸಂಯೋಜಕ ಹಾಗೂ ಅಭಿನಯ ಭಾರತಿ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ, ವ್ಯಕ್ತಿಗತವಾಗಿ ಎಲ್ಲರೊಂದಿಗೆ ತುಂಬಾ ಆತ್ಮೀಯರಾಗಿದ್ದ ಗಿರೀಶ ಕಾರ್ನಾಡರು, ರಂಗಭೂಮಿ, ಸಾಹಿತ್ಯ, ಐತಿಹಾಸಿಕ ವಾಸ್ತುಶಿಲ್ಪ, ತಾಣಗಳ ಪರಿಚಯ ಹೀಗೆ ವೈವಿಧ್ಯಮಯವಾಗಿ ಕನ್ನಡ ಸಾಹಿತ್ಯ ಆಸಕ್ತರನ್ನು ಸೆಳೆದಿದ್ದರು. ಅವರು ಇನ್ನಿಲ್ಲವಾಗಿ ಇಂದಿಗೆ ಎರಡು ವರ್ಷವಾಗಿ, ಅವರ ‘ಆಡಾಡತಾ ಆಯುಷ್ಯ’ ಆತ್ಮಕಥನ ಅಥವಾ ಆತ್ಮ ಚರಿತ್ರೆಯನ್ನು, ಜಗತ್ತಿನಾದ್ಯಂತ ಇರುವ ಕನ್ನಡಾಭಿಮಾನಿಗಳು ವಾಚಿಸುವ ವಿನೂತನ ಕಾರ್ಯಕ್ರಮವನ್ನು ‘ಅಭಿನಯ ಭಾರತಿ’ ಆಯೋಜಿಸಿದ್ದು, 19 ಗಂಟೆಗಳ ಕಾಲ ನಡೆಯಲಿದೆ. ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಸೇರಿದಂತೆ ವಿವಿಧೆಡೆಗಳಿಂದ ಫೇಸ್ ಬುಕ್ ಲೈವ್ ನಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಮತ್ತು ಸಾಹಿತಿಗಳು, ಕಾರ್ನಾಡರ ಆತ್ಮಚರಿತೆ ಓದುವ ಮೂಲಕ ನುಡಿನಮನ ಸಲ್ಲಿಸಿದರು ಎಂದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...