ಆಗಮ ಮೋಹಿನಿ

Date: 10-12-2022

Location: ಬೆಂಗಳೂರು


“ಆಗಮ ಮೋಹಿನಿ ತ್ರಿಪುರಾಂತಕ ಕೆರೆಯ ಕಾರ್ಯದಲ್ಲಿ ನಿರತಳಾಗಿದ್ದಳೆಂಬ ಸಂಗತಿ ತಿಳಿದುಬರುತ್ತದೆ. ಹೀಗಾಗಿ ತ್ರಿಪುರಾಂತಕ ಕೆರೆಗೂ ಆಗಮ ಮೋಹಿನಿಗೂ ಸಂಬಂಧವಿದೆ. ಆಗಮ ಮೋಹಿನಿಯು ವಚನ ರಚಿಸಿದ್ದು ಆಕೆಯ ಹೆಸರೇ ಆಕೆಯ ವಚನಾಂಕಿತವಾಗಿದೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಆಗಮ ಮೋಹಿನಿ’ ಬಗ್ಗೆ ಬರೆದಿದ್ದಾರೆ.

ಆಗಮ ಮೋಹಿನಿ ರೇವಣಸಿದ್ಧರ ಧರ್ಮಪತ್ನಿಯಾಗಿದ್ದಾಳೆ. ರೇವಣಸಿದ್ಧನು ಬಸವಣ್ಣನವರ ಹಿರಿಯ ಸಮಕಾಲೀನನಾಗಿದ್ದನೆಂಬುದು ಕವಿಚರತೆಯಿಂದ ತಿಳಿದುಬರುತ್ತದೆ. ಹೀಗಾಗಿ ಈಕೆಯ ಕಾಲವನ್ನು ಕವಿಚರಿತೆಕಾರರು ಕ್ರಿ.ಶ.1160 ಎಂದು ಗುರುತಿಸಿದ್ದಾರೆ. ರೇವಣಸಿದ್ಧ ಮತ್ತು ಆಗಮಮೋಹಿನಿಯ ವಿವಾಹ ಪ್ರಸಂಗವನ್ನು ಹರಿಹರ ಕವಿ ವರ್ಣಿಸಿದ್ದಾನೆ.

"ಚೋಳ ಕುಮಾರಿಯಂ ವಿವಾಹವಾಗಿ ಚೋಳನಿಂ ಪೊಡಮಿಡಿಸಿಕೊಳುತ್ತಂ
ಶಿವಭಕ್ತರಿಂ ಮನ್ನಿಸಿಕೊಳ್ಳುತ್ತಮಾ ದೇಶದ ಶೈವಪುರಂಗಳಂ ನೋಡುತ್ತಂ ತಿರುಗಿ ಪೊರಮಟ್ಟು ಚೋಳಂ ಕೊಟ್ಟ ಬಳುವಳಿಯ ಚತುರಂಗಬಲಂ...." ಹೀಗೆ ರೇವಣಸಿದ್ಧನು ಅನೇಕ ಪತ್ನಿಯರನ್ನು ಹೊಂದಿದ್ದನೆಂಬುದು ಹರಿಹರ ಕವಿಯ ರಗಳೆಗಳಿಂದ ತಿಳಿದುಬರುತ್ತದೆ. ಬೊಮ್ಮರಸನು ತನ್ನ "ರೇವಣಸಿದ್ಧ ಪುರಾಣ"ದಲ್ಲಿ ರೇವಣಸಿದ್ಧ ಅನೇಕ ಕನ್ಯೆಯರನ್ನು ಮದುವೆಯಾಗಿದ್ದನೆಂಬ ಉಲ್ಲೇಖವಿದೆ. ಆದರೆ ಚೆನ್ನಮಲ್ಲಿಕಾರ್ಜುನ ಕವಿಯ ಪ್ರಕಾರ ರೇವಣಸಿದ್ಧನ ಏಳು ಪತ್ನಿಯರ ಹೆಸರುಗಳು ಉಲ್ಲೇಖಗೊಂಡಿವೆ. ಅವರ ಪೈಕಿ ಆಗಮಮೋಹಿನಿಯೂ ಒಬ್ಬಳಾಗಿದ್ದಾಳೆ. ಬಸವಾದಿ ಶರಣರ ಹಿರಿಯ ಸಮಕಾಲೀನನಾಗಿದ್ದ ರೇವಣಸಿದ್ಧನೂ ವಚನಗಳನ್ನು ರಚಿಸಿದ್ದಾನೆ. ರೇವಣಸಿದ್ಧನ ಇತರ ಪತ್ನಿಯರಲ್ಲಿ ಸುಲಕ್ಷಣೆ, ಸೌಂದರಿ, ಪುಣ್ಯವತಿ, ವೇದಕಂಚುಕಿ, ಶಾಂಭವಿ, ಸೋಮಲೆಯರೂ ಸೇರಿದ್ದಾರೆ. ವೇದಕಂಚುಕಿ ಕೂಡಾ ವಚನ ರಚಿಸಿದ್ದಾಳೆ.

ವೀರರಾಜೇಂದ್ರ ಚೋಳನೆಂಬ ಅರಸ 1060-1070ರ ಅವಧಿಯಲ್ಲಿ ರಾಜ್ಯಭಾರ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಅವನ ಮಗಳೇ ಆಗಮಮೋಹಿನಿಯಾಗಿದ್ದಾಳೆ. ರೇವಣಸಿದ್ಧರಲ್ಲಿ ಮೂವರು ರೇವಣಸಿದ್ಧರಿದ್ದಾರೆ. ಕ್ರಿಸ್ತಪೂರ್ವದಲ್ಲಿದ್ದ ರೇವಣಸಿದ್ಧನೊಬ್ಬ, ಬಸವಾದಿ ಶರಣರ ಸಮಕಾಲೀನನಾಗಿದ್ದ ರೇವಣಸಿದ್ಧನೊಬ್ಬ, ಬಸವಾದಿಶರಣರ ನಂತರ ಬರುವ ಬಸವೋತ್ತರ ಯುಗದ ರೇವಣಸಿದ್ಧನೊಬ್ಬ. ಹೀಗೆ ಈ ಮೂವರು ರೇವಣಸಿದ್ಧರಲ್ಲಿ ಆಗಮಮೋಹಿನಿಯ ಪತಿ,

ಬಸವಾದಿ ಶರಣರ ಸಮಕಾಲೀನ ವ್ಯಕ್ತಿಯಾಗಿದ್ದಾನೆ. 1958ರಲ್ಲಿ ಪ್ರಕಟವಾಗಿರುವ "ಶ್ರೀ ರೇವಣಸಿದ್ಧರು" ಕೃತಿಯಲ್ಲಿ ಇದರ ವಿವರಗಳು ದೊರೆಯುತ್ತವೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ (ಸಂಪುಟ-4, ಭಾಗ-1) ಈಕೆಯ ಬಗೆಗೆ ಡಾ.ಕೆ.ಜಿ.ನಾರಾಯಣಪ್ರಸಾದ ಅವರು ಲೇಖನ ಬರೆದಿದ್ದಾರೆ.

ಚೆನ್ನಬಸವಣ್ಣ ತನ್ನ ಭಕ್ತಿಯ ತೀವ್ರತೆಯಲ್ಲಿ ಪ್ರಾಣಲಿಂಗ ಸಂಧಾನವನ್ನು ಪ್ರಕಟಪಡಿಸಿದ ಅಪೂರ್ವ ಸಂದರ್ಭವೊಂದು ಇದೆ. ಚೆನ್ನಬಸವಣ್ಣ ಈ ಸಂದರ್ಭದಲ್ಲಿ ಅಲ್ಲಮಪ್ರಭುಗಳ ಪಾದಕ್ಕೆರಗಿ ಅಸುನೀಗಿದಾಗ ಬಸವಾದಿ ಶರಣರು ದು:ಖಿಸುತ್ತಾರೆ. ಅವರಲ್ಲಿ ಅಕ್ಕನಾಗಮ್ಮ, ಗಂಗಾಂಬಿಕೆ, ವೇದಕಂಚುಕಿ ಮತ್ತು ಆಗಮ ಮೋಹಿನಿಯರೂ ಸೇರಿದ್ದಾರೆ. ಇವರೆಲ್ಲರೂ ದು:ಖದಿಂದ ಪ್ರಲಾಪಿಸುವ ವಚನಗಳು "ಮುಕ್ತಿಕಂಠಾಭರಣ"ದಲ್ಲಿವೆ. ಅವುಗಳಲ್ಲಿ ಆಗಮ ಮೋಹಿನಿಯ ವಚನವೂ ಇದೆ. ತನ್ನ ಸವತಿಯರೊಂದಿಗೆ ಆಗಮ ಮೋಹಿನಿ ಇಲ್ಲಿ ಶೋಕವನ್ನು ವ್ಯಕ್ತಪಡಿಸಿದ ಪ್ರಸಂಗ ಬರುತ್ತದೆ. "ಮುಕ್ತಿಕಂಠಾಭರಣ" ಕೃತಿಯು ಆಧ್ಯಾತ್ಮದ ವಿಷಯಗಳನ್ನು ಚರ್ಚಿಸುವ ಕೃತಿಯಾಗಿದೆ.

ಶೂನ್ಯ ಸಂಪಾದನೆಯ ಹಾಗೆ ಇದೂ ಕೂಡ ಸಂಭಾಷಣೆಗಳನ್ನೊಳಗೊಂಡಿದ್ದು ನಾಟಕೀಯ ಶೈಲಿಯಲ್ಲಿದೆ. ಶರಣರ ವಚನಗಳ ಮಂಥನ ಇಲ್ಲಿ ನಡೆದಿದೆಯಾದರೂ, ಈ ಕೃತಿ ಅಪೂರ್ಣವಾಗಿದೆ. ಅನೇಕ ವಚನಕಾರರ ವಚನಗಳು ಇಲ್ಲಿ ದೊರೆಯುತ್ತವೆ. ತೋಂಟದ ಸಿದ್ಧಲಿಂಗೇಶ್ವರ ಅಂಕಿತದ ವಚನಗಳೂ ಇದರಲ್ಲಿರುವುದರಿಂದ ಇದು 16ನೇ ಶತಮಾನದಲ್ಲಿ ರಚಿತವಾದ ಕೃತಿಯಾಗಿದೆ.

ಆಗಮ ಮೋಹಿನಿ ತ್ರಿಪುರಾಂತಕ ಕೆರೆಯ ಕಾರ್ಯದಲ್ಲಿ ನಿರತಳಾಗಿದ್ದಳೆಂಬ ಸಂಗತಿ ತಿಳಿದುಬರುತ್ತದೆ. ಹೀಗಾಗಿ ತ್ರಿಪುರಾಂತಕ ಕೆರೆಗೂ ಆಗಮ ಮೋಹಿನಿಗೂ ಸಂಬಂಧವಿದೆ. ಆಗಮ ಮೋಹಿನಿಯು ವಚನ ರಚಿಸಿದ್ದು ಆಕೆಯ ಹೆಸರೇ ಆಕೆಯ ವಚನಾಂಕಿತವಾಗಿದೆ. ಆಕೆಯ ಈ ವಚನವನ್ನು "ಮುಕ್ತಿಕಂಠಾಭರಣ" ಕೃತಿಯಿಂದ ಆಯ್ದುಕೊಳ್ಳಲಾಗಿದೆ.

"ಬಯಲ ಲಿಂಗ ಬಯಲಾದಡೆ ತಪ್ಪಿಲ್ಲ
ಬಯಲ ಲಿಂಗವಾಕಾರವಿಡಿದು ಬಂದಡೆ ತಪ್ಪಿಲ್ಲ ಇಂತಪ್ಪಲಿಂಗ ತರಲು ಅಸಮರ್ಥನೆ ಎನ್ನಾಗಮಮೋಹಿನಿ ಅಣ್ಣ ಮಡಿವಾಳಯ್ಯಾ?"

- ಮುಕ್ತಿಕಂಠಾಭರಣ, ವ.ಸಂ.214, 1971

ಈ ವಚನದಲ್ಲಿ ಪ್ರಾಸವಿದೆ, ಲಯವಿನ್ಯಾಸವಿದೆ. ಆಗಮ ಮೋಹಿನಿ ಮಡಿವಾಳ ಮಾಚಿದೇವನನ್ನು ಅಣ್ಣನೆಂದು ಈ ವಚನದಲ್ಲಿ ಸಂಬೋಧಿಸಿದ್ದಾಳೆ. ಆಗಮ ಮೋಹಿನಿಯ ವ್ಯಕ್ತಿತ್ವವು ಮೊದಲ ಬಾರಿಗೆ ಮುಕ್ತಿಕಂಠಾಭರಣದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಚೆನ್ನಬಸವಣ್ಣನ ಸಾವನ್ನು ಕುರಿತು ಶೋಕಿಸಲಾಗಿದೆ. "ಬಯಲು ಲಿಂಗ ಬಯಲಾದಡೆ" ಎಂಬ ಮಾತು ತುಂಬ ಮಹತ್ವದ್ದಾಗಿದೆ. "ಇಂತಪ್ಪ ಲಿಂಗ ತರಲು ಅಸಮರ್ಥನೆ ಎನ್ನಣ್ಣ ಮಡಿವಾಳಯ್ಯನು?" ಎಂಬ ಸಾಲನ್ನು ಗಮನಿಸಿದಾಗ, ಮಡಿವಾಳಯ್ಯನ ಸಾಮಥ್ರ್ಯದಿಂದ ಮತ್ತೆ ಚೆನ್ನಬಸವಣ್ಣನಿಗೆ ಜೀವಬಂತೆಂದು ಪವಾಡಕತೆಯಲ್ಲಿ ವ್ಯಕ್ತವಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...