ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

Date: 08-12-2020

Location: .


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಲಂಡನ್‌ ಡೈರಿ-ಅನಿವಾಸಿಯ ಪುಟಗಳು’ ಬಿಡಿಬರಹಗಳ ಸಂಕಲನ ಪ್ರಕಟಿಸಿರುವ ಅವರು ವಿಮಾನಲೋಕದ ವಿಶೇಷ ಅನುಭವಗಳನ್ನು, ವಿಮಾನದೊಳಗಿನ ಅಂಗರಚನೆ-ಕಾರ್ಯನಿರ್ವಹಣೆಯ ಬೆರಗಿನ ಬಗ್ಗೆ ಇಂದಿನ ‘ಏರೋ ಪುರಾಣ’ ಅಂಕಣದಲ್ಲಿ ಕಟ್ಟಿಕೊಟ್ಟಿದ್ದಾರೆ.

ವಿಮಾನಗಳ ಚಲನೆಯ ಕ್ಷಣಗಳನ್ನು ಚಿತ್ರದಲ್ಲಿ ಸೆರೆ ಹಿಡಿಯುವ ಆಸಕ್ತಿ ಕೆಲವರಲ್ಲಿ ಇರುತ್ತದೆ. ಮತ್ತೆ ಆ ಉದ್ದೇಶದಿಂದಲೇ ನಿಲ್ದಾಣದ ಆವರಣದ ಬಳಿ ಗಂಟೆಗಟ್ಟಲೆ ಕಾದು ನಿಲ್ಲುವವರು ಅಥವಾ ಯಾವುದೊ ಊರಿನಲ್ಲಿ ನಡೆಯುವ ವಿಮಾನ ಮೇಳಗಳಿಗೆ ದೂರದೂರದಿಂದ ಬಂದು ವಿವಿಧ ವಿಮಾನಗಳ ಬಗೆಬಗೆಯ ಭಂಗಿಗಳನ್ನು ಕ್ಯಾಮೆರಾ ಮೂಲಕ ಬಂಧಿಸಿ ಕೊಂಡು ಹೋಗುವವರು ಇರುತ್ತಾರೆ. ಅವರು ವೃತ್ತಿನಿರತ ಛಾಯಾಗ್ರಾಹಕರು, ಹವ್ಯಾಸಿಗಳು, ವಿಮಾನ ಆಸಕ್ತರು, ಪ್ರಯಾಣಿಕರು ಯಾರೇ ಆಗಿದ್ದರೂ ವಿಮಾನವೊಂದು ಪ್ರಯಾಣದ ಆರಂಭದಲ್ಲಿ ನೆಲವನ್ನು ಆಗಷ್ಟೇ ಬಿಡುತ್ತಿರುವ ದೃಶ್ಯ ಮತ್ತೆ ಯಾನವನ್ನು ಮುಗಿಸಿ ನೆಲವನ್ನು ಸ್ಪರ್ಶಿಸುವ ಕ್ಷಣಗಳು ಎಲ್ಲ ಬಗೆಯ ಚಿತ್ರಗ್ರಾಹಕರಿಗೂ ಆಕರ್ಷಣೆಯ ಘಳಿಗೆ. ನಿಲ್ದಾಣದ ಹಾರುವ ಪಥದಲ್ಲಿ ಕೆಲಹೊತ್ತು ಓಡಿ ಸೂಕ್ತ ವೇಗವನ್ನು ಮುಟ್ಟಿದ ಕೂಡಲೇ ನಿರಾಯಾಸವಾಗಿ ಮೂತಿಯನ್ನು ಎತ್ತಿ ಬಾಲವನ್ನು ತಗ್ಗಿಸಿ ಆಕಾಶಕ್ಕೆ ಏರುವುದು ವಿಮಾನ ಕುತೂಹಲಿಗಳು ಕಾತರದಿಂದ ನೋಡುವ ನೆಚ್ಚಿನ ಸನ್ನಿವೇಶ. ವಿಮಾನಗಳ ಮಟ್ಟಿಗೆ ನೆಲದಿಂದ ಬಿಡುಗಡೆಗೊಂಡು ಗಾಳಿಯಲ್ಲಿ ತೇಲುತ್ತ ಆಕಾಶವನ್ನು ಸೇರುವ ಪಲ್ಲಟದ ಕ್ಷಣವೂ ಹೌದು. ದೂರದಿಂದ ನೋಡುವವರಿಗೂ ಅಚ್ಚರಿ ರೋಚಕತೆ ನೀಡುವ ಸಾಮರ್ಥ್ಯ ಇರುವ ಆ ಘಳಿಗೆ ವಿಮಾನದ ಮಟ್ಟಿಗೂ ಅದನ್ನು ಚಲಾಯಿಸುವವರಿಗೂ ಪ್ರಯಾಣಿಕರಿಗೂ ಎಲ್ಲರಿಗೂ ವಿಶೇಷ ಅನುಭವ ಮತ್ತೆ ಕೆಲವೊಮ್ಮೆ ಉದ್ವೇಗದ ಕ್ಷಣ ಕೂಡ. ವಿಮಾನಯಾನದ ಈ ಸನ್ನಿವೇಶದ ಹಿಂದಿನ ಸಿದ್ಧಾಂತವನ್ನು ತಿಳಿಯಬೇಕಿದ್ದರೆ ವಿಮಾನ ವಿಜ್ಞಾನದ ಪುಸ್ತಕಗಳನ್ನು ತಿರುವಬೇಕು. ಕೆಳಮುಖವಾಗಿ ವರ್ತಿಸುತ್ತಿರುವ ವಿಮಾನದ ತೂಕಕ್ಕಿಂತ ಅದನ್ನು ಎತ್ತಿ ಹಿಡಿಯಬಲ್ಲ ಗಾಳಿಯ ಮೇಲ್ಮುಖ ಶಕ್ತಿ ಹೆಚ್ಚಾದಾಗ ವಿಮಾನ ನೆಲ ಬಿಡುವುದು, ಆಕಾಶದಲ್ಲಿ ಏರುವುದು ಸಾಧ್ಯ ಆಗುತ್ತದೆ. ಇರಲಿ, ವಿಮಾನವೊಂದು ಹೀಗೆ ಚಿತ್ರ ಸದೃಶವಾಗಿ ನೆಲ ಬಿಟ್ಟು ನೆಗೆದ ಕ್ಷಣದಿಂದ ಅದರ ಆಕಾಶಯಾನ ಶುರು ಆಯಿತು ಎನ್ನಬಹುದು. ಹಾರುವ ಘಳಿಗೆಯಿಂದ ತುಸು ಮೊದಲು ಸುಮಾರು ಸಿದ್ಧತೆಗಳು ಪರೀಕ್ಷೆಗಳು ಹಾರುವಿಕೆಯ ಭಾಗವಾಗಿ ನಡೆಯುತ್ತವಾದರೂ ಅವೆಲ್ಲವೂ ವಿಮಾನ ನೆಲದ ಮೇಲೆ ನಿಂತಾಗ, ಹಾರುವ ಪಥದ (ರನ್ ವೆ) ಮೇಲೆ ಇರುವಾಗ ಆಗುವಂತಹವು. ಆಕಾಶಯಾನವನ್ನು ‘ಫ್ಲೈಟ್’ ಅಥವಾ ಹಾರಾಟ ಎಂದು ಕರೆಯುವುದು ರೂಡಿ; ಈ ಹಾರಾಟದಲ್ಲಿ ಅಂದರೆ ವಿಮಾನ ಒಂದು ನಿಲ್ದಾಣದಿಂದ ಹಾರಿ ಇನ್ನೊಂದು ನಿಲ್ದಾಣದಲ್ಲಿ ನೆಲ ಮುಟ್ಟುವ ತನಕವೂ ಮಾಡುವ ಪ್ರಯಾಣದಲ್ಲಿ ಎರಡು ಕೆಲಸಗಳನ್ನು ಜೊತೆಜೊತೆಗೆ ನಡೆಸುತ್ತಿರುತ್ತದೆ. ಒಂದು ತೇಲುವುದು, ಇನ್ನೊಂದು ಮುಂದೆ ಹೋಗುವುದು. ಹಾಗಾಗಿ ವಿಮಾನಗಳ ಮಟ್ಟಿಗೆ ಹಾರಾಟ ಎಂದರೆ ಈ ಎರಡೂ ಕೆಲಸಗಳೂ ಒಟ್ಟೊಟ್ಟಿಗೆ ಜರುಗುವಂತಹದ್ದು. ಒಂದು ವೇಳೆ ವಿಮಾನಗಳ ಹಾರಾಟಕ್ಕೆ ಇವೆರಡರಲ್ಲಿ ಬರೇ ಒಂದೇ ಕೆಲಸ ಮಾತ್ರ ಸಾಕಾಗುತ್ತಿದ್ದಿದ್ದರೆ ವಿಮಾನಗಳ ವಿನ್ಯಾಸ ರಚನೆ ಆಕಾರ ಈಗ ನಾವು ನೋಡುವ ವಿಮಾನಗಳಲ್ಲಿ ಇರುವಂತೆ ಇರುತ್ತಿರಲಿಲ್ಲ. ಒಂದು ವೇಳೆ ಬರೇ ತೇಲುವುದಷ್ಟೇ ವಿಮಾನಗಳ ಕೆಲಸವಾಗಿದ್ದಿದ್ದರೆ ಬಿಸಿಗಾಳಿಯ ಬಲೂನುಗಳಂತೆಯೋ ಅಥವಾ ಆಕಾಶದಲ್ಲಿ ತೇಲುವ ಇನ್ಯಾವುದೋ ಕಾಯದಂತೆಯೋ ಇರಬಹುದಾಗಿತ್ತು. ಅಥವಾ ಮುಂದೆ, ಮೇಲೆ ಹೋಗುವುದೇ ವಿಮಾನಗಳ ಉದ್ದೇಶವಾಗಿದ್ದಿದ್ದರೆ ದೂರದ ಲಕ್ಷವನ್ನು ಅತಿ ವೇಗದಲ್ಲಿ ತಲುಪುವ ರಾಕೆಟ್ ನಂತೆಯೋ ಕ್ಷಿಪಣಿಯಂತೆಯೋ ವಿಮಾನಗಳ ಆಯ ಆಕಾರ ಕಾಣಿಸುತ್ತಿತ್ತು. ವಿಮಾನಗಳ ದೇಹ ಮೂತಿ ಮೂಗು ರೆಕ್ಕೆ ಬಾಲ ಇತ್ಯಾದಿಗಳು ಈಗ ಹೇಗೆ ಹೇಗೆ ಇವೆಯೋ ಅದಕ್ಕೆ ಕಾರಣ ಆಯಾ ಭಾಗಗಳಿಗಿರುವ ಕೆಲಸ ಹಾಗು ಜವಾಬ್ದಾರಿ. ವಿಮಾನಗಳ ಚಲನೆ ಹಾರಾಟ ಎಲ್ಲವೂ ನಾಜೂಕಿನ ಹತೋಟಿಯಲ್ಲಿ ಹದದಲ್ಲಿ ನಡೆಯಬೇಕಾದದ್ದು. ವಿಮಾನಗಳ ಹಾರಾಟದ ಸರಿಯಾದ ವ್ಯಾಖ್ಯಾನ ‘ನಿಯಂತ್ರಿತ ಹಾರಾಟ’ ಎನ್ನುವುದೇ ಆಗಿದೆ. ಇನ್ನು ನಾವೆಲ್ಲಾ ಹತ್ತಿ ಹಾರಾಡುವ ನಾಗರಿಕ ವಿಮಾನಗಳು ಆಕಾಶದಲ್ಲಿ ತೇಲುವ ತೂಗುವ ಇತರ ಬಗಯೆಯ ಮಾನವ ನಿರ್ಮಿತ ಆಕಾಶಕಾಯಗಳಿಂದ ಭಿನ್ನ ಎನಿಸುವುದೂ ಈ ಹಾರಾಟದ ಮೇಲಿರುವ ಅಸೀಮ ನಿಯಂತ್ರಣದ ಕಾರಣಕ್ಕೆ. ವಿಮಾನಗಳು ಜನಪ್ರಿಯ ವಿಶ್ವಾಸಾರ್ಹ ಸಾಗಾಟ ವ್ಯವಸ್ಥೆ ಎಂದು ಕರೆಯಲ್ಪಡುವುದೂ ಅದರ ಹಾರಾಟದಲ್ಲಿರುವ ನಿಯಂತ್ರಣ ಮತ್ತೆ ಇತರ ವ್ಯವಸ್ಥೆಗಳು ಖಾತ್ರಿಗೊಳಿಸುವ ಸುರಕ್ಷತೆಯ ಕಾರಣಗಳಿಗೆ. ಇನ್ನು ವಿಮಾನಗಳ ಮೇಲೆ ಕರಾರುವಕ್ಕಾದ ನಿಯಂತ್ರಣ ಸಾಧ್ಯ ಆಗುವುದು ಅವು ನಿಶ್ಚಿತ ಬಗೆಯಲ್ಲಿ ತೇಲುವುದು ಹಾಗು ನಿಖರ ರೀತಿಯಲ್ಲಿ ಮುಂದೆ ಸಾಗುವುದರಿಂದ.

ವಿಮಾನವೊಂದರ ರಚನೆಯಲ್ಲಿ ಯಾವ ಯಾವ ಭಾಗಗಳಿವೆ ಎಂದು ತಿಳಿಯಲು ವಿಮಾನವು ಮಾಡಬೇಕಾಗಿರುವ ಮೂಲಭೂತ ಕೆಲಸಗಳ ಹಿನ್ನೆಲೆ ಸಹಕಾರಿ ಆಗುತ್ತವೆ. ವಿಮಾನಗಳು "ರನ್ ವೇ"ಯ ಮೇಲೆ ಓಡುತ್ತವೆ, ಮತ್ತೆ ನೆಗೆಯುತ್ತವೆ, ಆಮೇಲೆ ಆಕಾಶದಲ್ಲಿ ಎತ್ತರವನ್ನು ತಲುಪಿ ಮುಂದುವರಿಯುತ್ತವೆ ಮತ್ತೆ ನಿಲ್ದಾಣ ಹತ್ತಿರ ಬರುವಾಗ ಹಂತ ಹಂತವಾಗಿ ಎತ್ತರದಿಂದ ಇಳಿದು ರನ್‌ವೆ ಯನ್ನು ಸ್ಪರ್ಶಿಸಿ ಓಡಿ ನಿಲ್ಲುತ್ತವೆ. ಹಾರುವಿಕೆಯ ಎಲ್ಲ ಹಂತಗಳೂ ಮಹತ್ವದ್ದಾದರೂ ವಿಮಾನವೊಂದರ ದುಡಿಮೆ ಶ್ರಮ ಆರಂಭ ಆಗುವುದು ಅದು ರನ್ವೆ ಮೇಲೆ ಓಡಲು ಶುರು ಮಾಡುವಾಗಿನಿಂದ. ಹೀಗೆ ಹಾರಲು ಸಿದ್ಧವಾಗುತ್ತಿರುವ ವಿಮಾನದ ಇರುವಿಕೆ ದೂರದಲ್ಲಿರುವವರಿಗೂ ಅದರ ಎಂಜಿನ್ ನ ಶಬ್ದದ ಮೂಲಕ ಕೇಳಿಸುತ್ತಿರುತ್ತದೆ. ಅಂದರೆ ಎಂಜಿನ್‌ಗಳು ಮಾತ್ರ ವಿಮಾನದ ಹಾರುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದಲ್ಲ. ಎಂಜಿನ್‌ಗಳು ವಿಮಾನಗಳು ಮುಂದೆ ಹೋಗುವುದನ್ನು ಸಾಧ್ಯ ಆಗಿಸುತ್ತವೆ. ಎಂಜಿನ್‌ಗಳು ಮುಂಭಾಗದಲ್ಲಿರುವ ತಿರುಗುವ ಫ್ಯಾನ್ಗಳ ಮೂಲಕ ಗಾಳಿಯನ್ನು ಒಳಗೆ ಎಳೆದುಕೊಂಡು ಕುಗ್ಗಿಸಿ ಹಿಗ್ಗಿಸಿ ಇಂಧನವನ್ನೂ ಗಾಳಿಯನ್ನೂ ಜೊತೆ ಮಾಡಿ ಅಲ್ಲೊಂದು ದಹನ ಕ್ರಿಯೆ ನಡೆಸಿ ಅನಿಲಕ್ಕೆ ಅಸಾಧಾರಣ ಹಿಗ್ಗುವಿಕೆಯನ್ನೂ ಒದಗಿಸಿ ಮತ್ತೆ ಆ ಅನಿಲ ಸಣ್ಣ ಅವಕಾಶದ ಮೂಲಕ ಅತಿ ವೇಗದಲ್ಲಿ ಎಂಜಿನ್ ನ ಹಿಂಬಾಗಿಲಿನಿಂದ ಹೊರ ಹೋಗುವಾಗ ವಿಮಾನಗಳಿಗೆ ಮುಂದೆ ಸಾಗುವುದು ಸಾಧ್ಯ ಆಗುತ್ತದೆ. ಇದು ಜೆಟ್ ಎಂಜಿನ್ ಎನ್ನುವ ಬಹು ಜನಪ್ರಿಯ ಎಂಜಿನ್ ಮಾದರಿಯ ಕಾರ್ಯ ವೈಖರಿ. ಎಂಜಿನ್ಗಳ ಇತಿಹಾಸದಲ್ಲಿ ಹಲವು ಬಗೆಗಳು ಇವೆಯಾದರೂ ಸುದೀರ್ಘ ತ್ವರಿತ ವಿಮಾನ ಪ್ರಯಾಣಗಳನ್ನು ಸಾಧ್ಯವಾಗಿಸಿದ ಕೀರ್ತಿ ಜೆಟ್ ಎಂಜಿನ್ ನಮೂನೆಗಳಿಗಿದೆ.

ವಿಮಾನಗಳು ದೂಡಲ್ಪಡುವುದು ಅಥವಾ ಮುಂದೆ ಹೋಗುವಂತೆ ಆಗುವುದು ವಿಮಾನ ಹಾರಾಟದಲ್ಲಿ ಆಗಬೇಕಾದ ಮೊಟ್ಟಮೊದಲು ಕೆಲಸ. ಇದು ಎಂಜಿನ್ಗಳ ಕಾರ್ಯಭಾರದಲ್ಲಿ ನಡೆಯುವಂತಹದ್ದು. "ರನ್ ವೇ"ಯ ಮೇಲೆ ದೂಡುವಿಕೆ ಹೆಚ್ಚು ಹೆಚ್ಚಾಗಿ ವಿಮಾನಗಳು ವೇಗವನ್ನು ವೃದ್ಧಿಸಿಕೊಂಡು ವೇಗದ ಒಂದು ನಿರ್ಣಾಯಕ ಹಂತವನ್ನು ತಲುಪಿದಾಗ, ವಿಮಾನದ ಎಡ ಬಲಗಳಿಗೂ ಅಗಲವಾಗಿ ಚಾಚಿರುವ ರೆಕ್ಕೆಗಳ ಮೇಲ್ಮೈಗಿಂತ ಅಡಿಯಲ್ಲಿ ಗಾಳಿಯ ಒತ್ತಡ ಹೆಚ್ಚಾಗುತ್ತದೆ. ಆಗ ವಿಮಾನ ಮೇಲೆ ಎತ್ತಲ್ಪಡುತ್ತದೆ. ಹೀಗೆ ವಿಮಾನಗಳನ್ನು ತೇಲಿಸುವ ಕೆಲಸ ರೆಕ್ಕೆಗಳಿಂದ ಆಗುತ್ತದೆ. ಒಂದೇ ತಯಾರಿಕೆಯ ಒಂದೇ ಮಾದರಿಯ ವಿಮಾನವಾದರೂ ಆಯಾ ದಿನ ಅದು ಹೊತ್ತಿರುವ ಪ್ರಯಾಣಿಕರ, ಅವರ ಲಗ್ಗೇಜ್‌ಗಳ, ಇಂಧನ ಇತ್ಯಾದಿಗಳ ಒಟ್ಟು ಭಾರದ ಆಧಾರದ ಮೇಲೆ ಒಂದು "ರನ್ ವೇ"ಯ ಮೇಲೆ ಅದನ್ನು ಆಕಾಶಕ್ಕೆ ಏರಿಸಲು ಎಂಜಿನ್ಗೆ ಎಷ್ಟು ನೂಕುವ ಶಕ್ತಿ ಬೇಕಾಗುತ್ತದೆ ಅದಕ್ಕೆ ಯಾವ ವೇಗ ಬಳಸಬೇಕು ಇತ್ಯಾದಿಗಳ ಲೆಕ್ಕಾಚಾರ ಇರುತ್ತದೆ. ಮತ್ತೆ ಈ ಲೆಕ್ಕಾಚಾರವನ್ನು ವಿಮಾನ ಪ್ರಯಾಣದ ಮೊದಲು ಪೈಲಟ್ಗಳು ಮಾಡಿರುತ್ತಾರೆ.

ಹೀಗೆ ವಿಮಾನಕ್ಕೆ ಮುನ್ನುಗ್ಗುವ ಶಕ್ತಿ ಎಂಜಿನ್ಗಳಿಂದ ಹಾಗು ತೇಲುವ ಸಾಮರ್ಥ್ಯ, ಗಾಳಿಯ ಒತ್ತಡಗಳ ವ್ಯತ್ಯಾಸದಿಂದ ಮೇಲೆ ಎತ್ತಲ್ಪಡಲು ಅನುಕೂಲವಾಗುವ ಆಕಾರ ವಿಸ್ತಾರ ಹೊಂದಿದ ರೆಕ್ಕೆಗಳಿಂದ ದೊರೆಯುತ್ತದೆ. ಆ ಕಾರಣಕ್ಕೆ ರೆಕ್ಕೆ ಹಾಗು ಎಂಜಿನ್ಗಳು ವಿಮಾನವೊಂದರ ಮಹತ್ವದ ನಿರ್ಣಾಯಕ ಅಂಗಗಳು. ಇನ್ನು ಹಾರಾಟಕ್ಕೆ ಅತಿ ಮೂಲಭೂತವಾದ ಕೆಲಸಗಳಲ್ಲದೆ ಎಂಜಿನ್ ಹಾಗು ರೆಕ್ಕೆಗಳಿಗೆ ಬೇರೆ ಹೊಣೆಗಾರಿಕೆಗಳೂ ಇವೆ. ವಿಮಾನಗಳ ಒಳಗೆ ಬಳಸಲ್ಪಡುವ ವಿದ್ಯುಚ್ಛಕ್ತಿ ಯನ್ನು ಎಂಜಿನ್ ಮೂಲಕ ಪಡೆಯಲಾಗುತ್ತದೆ. ಇದು ವಿದ್ಯುಚ್ಛಕ್ತಿಯ ಪ್ರಮುಖ ಮೂಲವಾದರೂ ಅಕಸ್ಮಾತ್ ಆಗಿ ಎಂಜಿನ್ ಕೈಕೊಡುವ ಸಂದರ್ಭವನ್ನು ಎದುರಿಸಲು ಪರ್ಯಾಯ ವಿದ್ಯುತ್ ಉತ್ಪಾದಕಗಳೂ ವಿಮಾನಗಳಲ್ಲಿ ಇರುತ್ತವೆ. ಇನ್ನು ರೆಕ್ಕೆಗಳು, ವಿಮಾನವನ್ನು ತೇಲಿಸುವುದರ ಜೊತೆಗೆ ಎಂಜಿನ್ ಗಳನ್ನು ತಮ್ಮ ಕೆಳಮೈಗೆ ಜೋಡಿಸಿಕೊಂಡು ಆಧರಿಸಿರುತ್ತವೆ, ಎಂಜಿನ್ ಗಳಿಗೆ ಪೂರೈಕೆ ಆಗುವ ಇಂಧನದ ಟ್ಯಾಂಕ್ ಇರುವುದೂ ರೆಕ್ಕೆಯ ಒಳಗೆ, ಹೀಗಾಗಿ ಇಡೀ ವಿಮಾನದ ವಿನ್ಯಾಸ ಅಸ್ತಿತ್ವ ಯಶಸ್ಸಿನಲ್ಲಿ ರೆಕ್ಕೆಗಳು ವಿಶಿಷ್ಟ ಪಾತ್ರ ವಹಿಸುತ್ತವೆ.

ಮುಂದೆ ಸಾಗುವುದು ಹಾಗು ತೇಲುವುದು ಇವೆರಡು ವಿಮಾನಗಳ ಮೂಲಭೂತ ಕೆಲಸವಾದರೂ ಪ್ರಯಾಣದುದ್ದಕ್ಕೂ ನಡೆಯುವ ಇತರ ಬೇರೆ ಬೇರೆ ಕೆಲಸಗಳೂ ಇವೆ ಮತ್ತೆ ಅದಕ್ಕಾಗಿಯೇ ಆಯಾ ಕೆಲಸಗಳಿಗೆ ಒದಗಿ ಬರುವ ವಿಮಾನದ ಬೇರೆ ಬೇರೆ ಅಂಗಗಳಿವೆ. ವಿಮಾನದ ಅವಯವಗಳನ್ನು ನಡುದೇಹ, ರೆಕ್ಕೆ, ಎಂಜಿನ್, ಬಾಲ, ಇಳಿಯುವ ಚಕ್ರ ಎಂದು ಸರಳ ಭಾಷೆಯಲ್ಲಿ ಹೆಸರಿಸಬಹುದು. ಯಾತ್ರಿಗಳು ಕುಳಿತುಕೊಳ್ಳುವ ಭಾಗವನ್ನು ‘ಫ್ಯೂಸ್ ಲಾಜ್’ (‘ನಡುದೇಹ’ ಎನ್ನಬಹುದೇನೋ ) ಎನ್ನುತ್ತಾರೆ. ಲ್ಯಾಟಿನ್ ಮೂಲದಿಂದ ಹುಟ್ಟಿದ ಈ ಶಬ್ದ ಅರ್ಥ ಉದ್ದ ಕೊಳವೆಯಂತಹ ಅಥವಾ ಸಿಲಿಂಡರಿನಂತಹ ಭಾಗ ಎಂದು. "ಫ್ಯೂಸ್ ಲಾಜ್" ಅಲ್ಲಿ ಆಸನಗಳು, ಸಣ್ಣ ಅಡಿಗೆಮನೆ , ಶೌಚಾಲಯ ಇನ್ನು ಮುಂದುಗಡೆಯಲ್ಲಿ ಪೈಲಟ್ಗಳು ಕೂಡುವ "ಕಾಕ್ ಪಿಟ್" ಅಥವಾ ನಿಯಂತ್ರಣ ಕೊಠಡಿ ಇರುತ್ತವೆ. ಯಾತ್ರಿಗಳು ಕಾಲಿಡುವ ಹಾಸಿನ ಕೆಳಗೆ ಯಾತ್ರಿಗಳು "ಚೆಕ್ ಇನ್" ಮಾಡಿದ ಬಂದ ಬ್ಯಾಗ್ಗಳನ್ನು ಇಡಲು ನೆಲಮಾಳಿಗೆಯಂತಹ ಜಾಗ ಇರುತ್ತದೆ. ವಿಮಾನದ ಅತ್ಯಂತ ಹಿಂಭಾಗವನ್ನು ಬಾಲ ಎನ್ನಬಹುದು. ವಿಮಾನ "ರನ್ ವೇ"ಯಿಂದ ಆಕಾಶಕ್ಕೆ ಏರಿದ ಕ್ಷಣದಿಂದ ಹಿಡಿದು, ಮೇಲೆ ಏರಿದ ಮೇಲೆ ಅದು ಯಾವ ದಿಕ್ಕಿಗೆ ಹೋಗಬೇಕು ಹೊರಳಬೇಕು ಎನ್ನುವುದರ ನಿಯಂತ್ರಣ ಬಾಲದ ಭಾಗಗಳನ್ನು ಚಲಿಸುವುದರಿಂದ ಮಾಡಬಹುದು. ತಾಂತ್ರಿಕ ಭಾಷೆಯಲ್ಲಿ "ಎಂಪೆನಾಜ್" ಎಂದು ಕರೆಯಲ್ಪಡುವ ಈ ಭಾಗದಲ್ಲಿ ಲಂಬವಾಗಿ ಮತ್ತೆ ಅಡ್ಡವಾಗಿ ಇರುವ ಎರಡು ಮಿನಿ ರೆಕ್ಕೆಗಳಂತಹ ಆಕಾರಗಳು, ಚಲಿಸುವ ನಿಯಂತ್ರಕ ಮೇಲ್ಮೈಗಳು ಇರುತ್ತವೆ. ಇವು ಯಾವ ಕಡೆ ತಿರುಗುತ್ತವೆ ಎನ್ನುವುದರ ಮೇಲೆ ವಿಮಾನ ಮೇಲೆ ಹೋಗುವುದು ಕೆಳ ಬರುವುದು ಎಡ ಬಲಗಳ ಹೊರಳುವಿಕೆ ಆಗುತ್ತದೆ. ಇನ್ನು ವಿಮಾನದ ರೆಕ್ಕೆ, ಉದ್ದಕ್ಕೆ ಚಾಚಿದ ಒಂದು ಹಾಸಿನಂತೆ ಕಂಡರೂ ಅದರ ಹಿಂದೂ ಮುಂದಿನ ಅಂಚುಗಳಲ್ಲಿ ತುದಿಯಲ್ಲಿ ಹಾರಾಟಕ್ಕೆ ಅನುಕೂಲಕರವಾದ ನಿಯಂತ್ರಕ ಮೇಲ್ಮೈಗಳಿವೆ (Control Surface ). ರೆಕ್ಕೆಯ ಮುಂದಿನ ಅಂಚು ಹಾಗು ಹಿಂದಿನ ಅಂಚುಗಳಲ್ಲಿ ಕ್ರಮವಾಗಿ "ಸ್ಲಾಟ್" ಹಾಗು "ಪ್ಲಾಪ್" ಗಳು ಇವೆ. ಸಾಮಾನ್ಯವಾಗಿ ರೆಕ್ಕೆಯ ಒಳಗೆ ಸರಿದುಕೊಂಡಿರುವ ಇವು ವಿಸ್ತರಿಸಿಕೊಂಡು ಹಾರುವ ಇಳಿಯುವ ಸಮಯದಲ್ಲಿ ರೆಕ್ಕೆಯ ಮೇಲ್ಮೈ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಗಾಳಿಯ ಅವಲಂಬನೆಯಲ್ಲಿ ಹತ್ತುವ ಇಳಿಯುವ ಕ್ರಿಯೆಯಲ್ಲಿ ಹೀಗೆ ರೆಕ್ಕೆಯ ವಿಸ್ತಾರ ವಿಸ್ತೀರ್ಣ ಹೆಚ್ಚಾದರೆ ಆಧರಿಸುವಿಕೆ ನಿಯಂತ್ರಣ ಹೆಚ್ಚಾಗುತ್ತದೆ. ಇನ್ನು ರೆಕ್ಕೆಯ ತುದಿಯ ಹತ್ತಿರದ ಹಿಂದಿನ ಅಂಚಿನಲ್ಲಿರುವ "ಎಲಿರೋನ್"ಗಳು ಒಂದು ಬದಿಯ ರೆಕ್ಕೆಯಲ್ಲಿ ಮೇಲೆ ಹೋದರೆ ಇನ್ನೊಂದು ಬದಿಯಲ್ಲಿ ಕೆಳಗೆ ಹೋಗಿ ವಿಮಾನದ ಹೊರಳುವಿಕೆಗೆ ಸಹಾಯ ಮಾಡುತ್ತವೆ. ವಿಮಾನಗಳ ರೆಕ್ಕೆಗಳ ಒಳಗೆ ಇಣುಕಿದರೆ ಅಲ್ಲಿ ಹೊರ ಜಗತ್ತಿಗೆ ಕಾಣದ ನಿಗೂಢ ವಿಸ್ಮಯ ಲೋಕ ಇದೆ. ರೆಕ್ಕೆಗೆ ಸ್ಥಿರತೆ ಬಲ ಆಯುಷ್ಯವನ್ನು ನೀಡುವ ಸಂರಚನೆಗಳು, ಬಗೆಬಗೆಯ ನಿಯಂತ್ರಕಗಳ ಜಾಲಗಳು, ಇಂಧನ ಶೇಖರಣಾ ಕೊಠಡಿ ಇತ್ಯಾದಿಗಳು ರೆಕ್ಕೆಯೊಳಗೆ ಹುದುಗಿವೆ. ಇಳಿಯುವ ಚಕ್ರಗಳು ಎಂದು ಕರೆಯಬಹುದಾದ "ಲ್ಯಾಂಡಿಂಗ್ ಗೇರ್ "ಗಳು ವಿಮಾನಗಳು ಪಥದ ಮೇಲೆ ಏರುವ ಮೊದಲು, ಇಳಿದ ನಂತರ ಓಡಲು, ಸಹಕಾರಿ ಆಗುತ್ತವೆ. ತೀವ್ರ ವೇಗದಲ್ಲಿ ವಿಮಾನ ಬಂದು ಇಳಿದಾಗ ನಿಶ್ಚಿತ ದೂರದಲ್ಲಿ ಅದನ್ನು ನಿಲ್ಲಿಸಲು ರೆಕ್ಕೆಯ ಹಿಂದಿನ ಅಂಚಿನಲ್ಲಿರುವ ಇನ್ನೊಂದು ನಿಯಂತ್ರಕ, "ಸ್ಪೋಯ್ಲ್ಯರ್" ಸಹಾಯ ಮಾಡುತ್ತದೆ. ವಿಮಾನ ಭೂಸ್ಪರ್ಶ ಆದೊಡನೆ "ಸ್ಪೋಯ್ಲ್ಯರ್"ಗಳನ್ನು ಗಾಳಿಗೆ ಪ್ರತಿರೋಧ ಹುಟ್ಟುವಂತೆ ನಿಲ್ಲಿಸುವುದರಿಂದ ವಿಮಾನಗಳ ವೇಗವನ್ನು ತಗ್ಗಿಸಿ ನಿಲ್ಲಿಸುವುದು ಸ್ವಲ್ಪ ಸುಲಭ ಆಗುತ್ತದೆ. ಇದನ್ನು ಗಾಳಿತಡೆ (ಏರ್ ಬ್ರೆಕ್) ಎಂದೂ ಕರೆಯುತ್ತಾರೆ. ನೆಲದ ಮೇಲೆ ಸಂಚರಿಸುವ ವಾಹನಗಳಲ್ಲಿ ಇರುವಂತಹ ಯಾಂತ್ರಿಕ ತಡೆಗಳೂ (ಮೆಕ್ಯಾನಿಕಲ್ ಬ್ರೆಕ್) ವಿಮಾನದಲ್ಲಿ ಇರುತ್ತವೆ. ಆದರೆ ನೆಲವನ್ನು ಮುಟ್ಟಿ ವೇಗದಲ್ಲಿ ಓಡುವ ವಿಮಾನವನ್ನು ನಿಯಮಿತ ದೂರದಲ್ಲಿ ಸಂಪೂರ್ಣವಾಗಿ ನಿಲ್ಲಿಸಬಲ್ಲ ಮೆಕ್ಯಾನಿಕಲ್ ಬ್ರೆಕಿಂಗ್ ವ್ಯವಸ್ಥೆಯ ಭಾರ ತೀರಾ ಹೆಚ್ಚಾದ್ದರಿಂದ, ವಿಮಾನ ಹೊತ್ತೊಯ್ಯುವ ಭಾರವನ್ನು ಆದಷ್ಟು ಕಡಿಮೆ ಮಾಡಬೇಕಾಗಿರುವ ಅನಿವಾರ್ಯತೆ ಇರುವುದರಿಂದ ಅರೆ ಅಥವಾ ಅಲ್ಪ ಕ್ಷಮತೆಯ ಮೆಕ್ಯಾನಿಕಲ್ ಬ್ರೆಕ್ ವ್ಯವಸ್ಥೆಯನ್ನು ಅಳವಡಿಸಿರುತ್ತಾರೆ ಮತ್ತೆ "ಸ್ಪೋಯ್ಲ್ಯರ್" ಒದಗಿಸುವ ಸಹಜ ಗಾಳಿ ತಡೆಯನ್ನು ಅವಲಂಬಿಸಿರುತ್ತಾರೆ. ಇನ್ನು ರೆಕ್ಕೆಗಳ ತುದಿ ತುಸು ಮಡಚಿದಂತಿರುವ ಇತ್ತೀಚಿನ ಮಾದರಿಗಳು ರೆಕ್ಕೆಯ ತುದಿಯಲ್ಲಿ ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಿ ವಿಮಾನವನ್ನು ಹಾರಾಟದಲ್ಲಿ ಸ್ವಲ್ಪ ಕಡಿಮೆ ಇಂಧನ ಬಳಕೆ ಆಗುವಂತೆ ಮಾಡುತ್ತವೆ. ವಿಮಾನಗಳಲ್ಲಿ ಅಳವಡಿಸಿರುವ ಬೆಳಕುಗಳು ರಾತ್ರಿಯಲ್ಲಿ ಆಯಾ ವಿಮಾನಗಳಿಗೆ ದಾರಿ ತೋರಿಸುವ ಕೆಲಸಕ್ಕೆ ಅಲ್ಲದಿದ್ದರೂ ದೂರದ ವಿಮಾನಗಳ ಇರುವಿಕೆಯನ್ನು ತೋರಿಸುವ ಕೆಲಸ ಮಾಡುತ್ತವೆ. ಆಕಾಶದಲ್ಲಿ ಹಲವು ವಿಮಾನಗಳು ಏಕಕಾಲಕ್ಕೆ ಸಂಚರಿಸುತ್ತಿರುವಾಗ, ದಟ್ಟ ಕತ್ತಲಿನಲ್ಲಿ ವಿಮಾನ ತನ್ನತ್ತ ಬರುತ್ತಿದೆಯೋ ದೂರ ಸರಿಯುತ್ತಿದೆಯೋ ಎನ್ನುವುದನ್ನು ವಿಮಾನದ ಎಡ ಬಲ ರೆಕ್ಕೆಗಳ ತುದಿಯಲ್ಲಿ ಮಿನುಗುವ ಬೇರೆ ಬೇರೆ ಬಣ್ಣದ ಬೆಳಕುಗಳಿಂದ ಪೈಲಟ್ ಗಳು ತಿಳಿಯುತ್ತಾರೆ. ತಮ್ಮ ಪ್ರಯಣದುದ್ದಕ್ಕೋ ತಾವು ಹಾದುಹೋಗುತ್ತಿರುವ ಯಾವುದೊ ನಿಲ್ದಾಣದೊಟ್ಟಿಗೆ ಸಂಪರ್ಕ ಇಟ್ಟುಕೊಂಡು ನಿರ್ದೇಶನ ಪಡೆಯುತ್ತ ಸಾಗುವ ವಿಮಾನಗಳು ಒಮ್ಮೊಮ್ಮೆ ಆಕಸ್ಮಿಕವಾಗಿ ಹತ್ತಿರ ಹತ್ತಿರದಲ್ಲಿ ಹಾದುಹೋಗುವುದಿದೆ. ಅಂತಹ ಸಂದರ್ಭದಲ್ಲಿ ವಿಮಾನಗಳ ಬೆಳಕುಗಳು ಎಚ್ಚರಿಸುವಿಕೆಗೆ ಸಹಾಯ ಮಾಡುತ್ತವೆ. ವಿಮಾನಗಳ ಅಂಗ ರಚೆನೆಯ ವಿವರಗಳು ಹೀಗೆ ಮುಂದುವರಿಯುತ್ತವೆ, ಆದರೆ ಕಿರು ಪರಿಚಯದ ಮಟ್ಟಿಗೆ ಇಷ್ಟು ಸಾಕೇನೊ.

ವಿಮಾನಗಳನ್ನು ಯಂತ್ರ ಎಂದು ತಿಳಿದರೂ ಜೀವ ದೇಹ ಎಂದು ಕಲ್ಪಿಸಿದರೂ ಅದರ ಒಳ ಹೊರಗೆ ಉದ್ದಗಲಕ್ಕೆ ಸಣ್ಣ ದೊಡ್ಡ ಕೆಲಸಗಳಲ್ಲಿ ಪಾಲ್ಗೊಳ್ಳುವ ಹಲವು ನೂರು ಭಾಗಗಳು ಇವೆ. ಒಂದೊಂದು ಭಾಗದ ಪರಿಚಯವೂ ವಿಶಾಲ ಪ್ರಪಂಚವನ್ನು ಬಯಲುಗೊಳಿಸುತ್ತದೆ. ಮೂಕ್ಕಾಲು ತಾಸಿನ ಕಿರು ಪ್ರಯಾಣವಿರಲಿ ಹದಿನೆಂಟು ತಾಸಿನ ದೀರ್ಘ ಯಾತ್ರೆಯಿರಲಿ ವಿಮಾನವೊಂದು ಆಕಾಶವನ್ನು ಹತ್ತಿ ಇಳಿಯುವಾಗ ಅದರ ಎಲ್ಲ ಅಂಗಗಳೂ ತಮ್ಮ ತಮ್ಮ ಕೆಲಸದಲ್ಲಿ ನಿರತವಾಗುತ್ತವೆ. ವಿಮಾನಯಾನವನ್ನು ಯಶಸ್ವಿಯಾಗಿಸಲು ಅಪೂರ್ವ ಜೊತೆಗಾರಿಕೆಯಲ್ಲಿ ದುಡಿಯುತ್ತವೆ.

ಈ ಅಂಕಣದ ಹಿಂದಿನ ಬರಹಗಳು

ಒಂದು ಆಕಾಶ ಹಲವು ಏಣಿಗಳು

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...