ಆಪ್ತರ ಚರ್ಚೆ ಮತ್ತು ಅನುಸಂಧಾನ

Date: 21-10-2021

Location: ಬೆಂಗಳೂರು


ನಾಡಿನ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ವಲಯದ ಹಲವು ಮಹತ್ವದ ವಿಚಾರಗಳನ್ನು ತಮ್ಮ ಪತ್ರಗಳ ಮೂಲಕ ನಮ್ಮಮುಂದಿಡಲಿದ್ದಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರ ಅಂಕಣ ‘ಪತ್ರತಂತು ಮಾಲಾ’ದಲ್ಲಿ ಹಿರಿಯ ಕತೆಗಾರ, ನಾಟಕಕಾರ, ವಿಮರ್ಶಕ ರಾಮಚಂದ್ರದೇವ ಅವರೊಂದಿಗಿನ ಪತ್ರಸಂವಾದದ ಕುರಿತು ವಿಶ್ಲೇಷಿಸಿದ್ದಾರೆ.

ಹೊಸದಾಗಿ ಬರವಣಿಗೆ ಶುರುಮಾಡುವವರಿಗೆ ತಮ್ಮ ಬರವಣಿಗೆ ಬಗ್ಗೆ ಸಹಲೇಖಕರ/ಸಹೋದ್ಯೋಗಿಗಳ ಪ್ರತಿಕ್ರಿಯೆ ಏನಿರಬಹುದೆಂದು ತಿಳಿಯುವ ಕುತೂಹಲ ಇರುವುದು ಸಹಜವಾದದ್ದು. ಈ ಮಾತು ಸಾಹಿತಿಗಳಿಗಷ್ಟೇ ಅಲ್ಲ ಪತ್ರಕರ್ತರ ಮಟ್ಟಿಗೂ ಸತ್ಯವಾದದ್ದು. ನಾನು ನನ್ನ ಮೊದಲ ಕಾದಂಬರಿ ‘ಬಂಗಾರದ ಕನಸು' ಪ್ರಕಟವಾದಾಗ ಎ.ಎಸ್.ಮೂರ್ತಿ, ದಾಶರಥೀ ದೀಕ್ಷಿತ್, ನವರತ್ನ ರಾಂ, ಎನ್.ಎಸ್.ವೆಂಕಟರಾಮ್ ಮೊದಲದವರಿಗೆ ಕೊಟ್ಟು, ಅವರ ಅಭಿಪ್ರಾಯ ತಿಳಿಯಲು ಅವರನ್ನು ಭೇಟಿಯಾದಾಗಲೆಲ್ಲ ನಿರೀಕ್ಷೆಯಲ್ಲಿ ನಿಂತಿರುತ್ತಿದ್ದೆ. ಕೊನೆಗೊಂದು ದಿನ ಅವರು ತಮ್ಮ ಅಭಿಪ್ರಾಯಗಳನ್ನು, ತಪ್ಪುಒಪ್ಪುಗಳನ್ನು ತಿಳಿಸಿದಾಗ ನನಗೆ ಆದ ಸಮಾಧಾನ ಅಷ್ಟಿಷ್ಟಲ್ಲ. ನನ್ನ ಎರಡನೆಯ ಕಾದಂಬರಿಯನ್ನು-ನಂಬಿ ಕೆಟ್ಟವರು-ದಾಶರಥೀ ದೀಕ್ಷಿತ್ ಅವರು ಹಸ್ತಪ್ರತಿಯಲ್ಲೇ ಓದಿ ಬೆನ್ನುತಟ್ಟಿ, ಬೆನ್ನುಡಿ ಬರೆದುಕೊಟ್ಟಾಗ ನನಗೆ ಸಾಹಿತ್ಯಲೋಕಕ್ಕೆ ಪಾಸ್ಪೋರ್ಟ್ ಸಿಕ್ಕಷ್ಟು ಸಂತೋಷವಾಗಿತ್ತು.

ಪತ್ರಿಕೆಗಳಿಗೆ ಹೊಸದಾಗಿ ಸೇರಿದ ವರದಿಗಾರರು/ಉಪಸಂಪಾದಕರು ತಮ್ಮ ಲೇಖನವೋ ವಿಶೇಷ ವರದಿಯೋ ಪ್ರಕಟವಾದಾಗ ಹಿರಿಯ ಸಹೋದ್ಯೋಗಿಗಳ ಪ್ರತಕ್ರಿಯೆ ತಿಳಿಯಲು ಆಸಕ್ತರಾಗಿರುತ್ತಿದ್ದರು..ಆದರೆ ಪ್ರತಿಕ್ರಿಯೆ ಬರುತ್ತಿದ್ದು ವಿರಳ. ನಮ್ಮ ಲೇಖನ/ವಿಶೇಷ ವರದಿ ಪ್ರಕಟವಾದಾಗಲೇ ನಾವು ಪಾಸ್ ಎಂದರ್ಥ. ಹಿರಿಯರಿಂದ ಮೆಚ್ಚುಗೆ ಮಾತು ಬಂದರೆ, ಅದನ್ನ ಬೋನಸ್ ಪಾಯಿಂಟ್ ಎಂದು ತಿಳಿದುಕೊಳ್ಳುತ್ತಿದ್ದೆವು.

ನಾನು ಪ್ರಜಾವಾಣಿ ಸೇರುವ ಸಮಯಕ್ಕೆ ‘ಸಾಕ್ಷಿ', ‘ಸಂಕ್ರಮಣ'ಗಳಲ್ಲಿ ನನ್ನ ಸಾಹಿತ್ಯ ವಿಮರ್ಶೆಯ ಕೆಲವು ಲೇಖನಗಳು ಪ್ರಕಟವಾಗಿದವು. ಪ್ರಜಾವಾಣಿಗೆ ಬಂದ ಮೇಲೆ ಸಾಪ್ತಾಹಿಕ ಪುರವಣಿ, ದೀಪಾವಳಿ ವಿಶೇಷಾಂಕ, ಸುಧಾಗಳಲ್ಲಿ ನನ್ನ ಲೇಖನಗಳು ಪ್ರಕಟವಾಗುತ್ತಿದ್ದವು. ಸಾಹಿತ್ಯ ವಿಮರ್ಶೆ, ರಂಗಭೂಮಿ, ಸಿನಿಮಾ ಕುರಿತ ಲೇಖನಗಳ ಮೊದಲ ಓದುಗರಾಗಿದ್ದರು ಗೆಳೆಯ ಸದಾಶಿವ. ಮದುವೆಯ ನಂತರ ಕನ್ನಡದಲ್ಲಿ ಎಂ.ಎ.ಮಾಡಿ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಬಾಳಸಂಗಾತಿ ಶ್ರೀಮತಿ ಸರಳಾ ನನ್ನ ವಿಮರ್ಶಾ ಲೇಖನಗಳು ಹಾಗೂ ನಾಟಕ, ಅನುವಾದ ಮೊದಲಾದ ಕೃತಿಗಳ ಮೊದಲ ಓದುಗಳಾಗಿ ವಿಮರ್ಶೆ ಮಾಡುತ್ತಿದ್ದಳು. ತೊಡಕಾದ ವಾಕ್ಯರಚನೆ, ವ್ಯಾಕರಣದೋಷಗಳನ್ನು ಗಮನಕ್ಕೆ ತರುತ್ತಿದ್ದಳು. ಗತಿಸುವುದಕ್ಕೆ ಒಂದುವರ್ಷ ಮೊದಲು "ಮಹಾಭಾರತ"ದ ನಾಲ್ಕು ಸಂಪುಟಗಳನ್ನೂ ಹಸ್ತಪ್ರತಿಯಲ್ಲೇ ಓದಿ ಮೆಚ್ಚಿಕೊಂಡಿದ್ದಳು. ಆಪ್ತರ ಅಭಿಪ್ರಾಯ ಎಷ್ಟೇ ಪ್ರಿಯವಾದರೂ ಸಹಲೇಖಕರ ಅಭಿಪ್ರಾಯ ತಿಳಿಯುವ ಆಸಕ್ತಿ-ಅಪೇಕ್ಷೆಗಳು ನನ್ನಲ್ಲಿ ಉಂಟಾಗುತ್ತಿತ್ತು. ಅಪ್ತರ ‘ಮೋಹದ' ಕಣ್ಣಿಗೆ ಬೀಳದ ಅವಗುಣಗಳು, ದೋಷಗಳು ಗೊತ್ತಾದೀತು ಎನ್ನುವ ದೃಷ್ಟ. ಆದರೆ ಪತ್ರಕರ್ತನಾಗಿದ್ದು ಈ ನಿಟ್ಟಿನಲ್ಲಿ ದೊಡ್ಡ ತೊಡಕಾಗಿತ್ತು. ಸಾಮಾನ್ಯವಾಗಿ ರಾಜಕಾರಣಿಗಳಷ್ಟೇ ಅಲ್ಲ ಲೇಖಕರು ಪತ್ರಕರ್ತರ ವಿರೋಧ ಕಟ್ಟಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ನನ್ನ ‘ಹೊಸತಿರುವು', ಒಳನೋಟ, ಹಾವುಹೊಕ್ಕ ಮನಗಳು ಬಂದಾಗ, ಪ್ರಜಾವಾಣಿಯಲ್ಲಿ ಪುಸ್ತಕ ವಿಮರ್ಶೆ ಪ್ರಕಟವಾದಾಗ ಹೆಚ್ಚಾಗಿ ಸಾಹಿತ್ಯ ವಲಯದಿಂದ ವಿಮರ್ಶಾತ್ಮಕ ಪ್ರತಕ್ರಿಯೆ ಬರುತ್ತಿರಲಿಲ್ಲ. ಕೆಲವರು ಮುಗುಮ್ಮಾಗಿ ತಿಳಿಸುತ್ತಿದ್ದರು. ಆದರೂ ನಾನು ನವ್ಯ ಪಕ್ಷಪಾತಿ ಎಂಬ ಅಭಿಪ್ರಾಯ ಕೆಲವು ವಲಯಗಳಲ್ಲಿ ಇದ್ದು, ನನ್ನ ಕಿವಿ ಮುಟ್ಟಿತ್ತು. ಅಂಥ ಸಂದರ್ಭದಲ್ಲಿ ನನ್ನ ಸಾಹಿತ್ಯ ವಿಮರ್ಶೇ ಬಗ್ಗೆ ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ನನ್ನನ್ನು ಚಕಿತಗೊಳಿಸಿದವರಲ್ಲಿ ಜಿ.ಎಚ್.ನಾಯಕ್, ರಾಮಚಂದ್ರದೇವ, ಮಾಧವ ಕುಲಕರ್ಣಿ, ಗಿರಡ್ಡಿಗೋವಿಂದರಾಜ ಪ್ರಮುಖರು. ರಾಮಚಂದ್ರ ದೇವ ಅವರು ಬರದಿರುವ ಒಂದು ಪತ್ರ ಇಲ್ಲಿದೆ. ಆ ದಿನಗಳಲ್ಲಿ, ಅಡಿಗರ ಭೂಮಿಗೀತ, ವರ್ಧಮಾನ, ಶ್ರೀರಾಮನವಮಿಯ ದಿವಸ ಕವಿತೆಗಳ ಬಗ್ಗೆ, ಅನಂತ ಮೂರ್ತಿಯವರ 'ಸಂಸ್ಕಾರ', 'ಭಾರತೀಪುರ'.`ಅವಸ್ಥೆ', ಗಿರಿಯವರ `ಗತಿಸ್ಥಿತಿ'. ಲಂಕೇಶರ `ಬಿರುಕು' ಕೃತಿಗಳ ಬಗ್ಗೆ `ಸಾಕ್ಷಿ' ಮತ್ತು 'ಸಂಕ್ರಮಣ'ಗಳಲ್ಲಿ ಪುಂಖಾನುಪುಂಖವಾಗಿ ವಿಮರ್ಶಾ ಲೇಖನಗಳು ಪ್ರಕಟವಾದವು. ಚರ್ಚೆ, ಅನುಸಂಧಾನಗಳು ನಡೆದವು.

ಅನಂತಮೂರ್ತಿಯವರ ಕಾದಂಬರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಚಂದ್ರ ದೇವ ಬರೆದ ಲೇಖನಕ್ಕೆ ಪ್ರತಿಯಾಗಿ ನಾನೊಂದು ಲೇಖನ ಬರೆದೆ. ಅದು `ಸಾಕ್ಷಿ'ಯಲ್ಲಿ ಪ್ರಕಟವಾಯಿತು. ಆಗ ದೇವ ದೆಹಲಿಯಲ್ಲಿದ್ದರು. ನನ್ನ ಲೇಖನಕ್ಕೆ ಪ್ರತಿಕ್ರಿಯೆಯಯಾಗಿ ಬರೆದ ಪತ್ರ ಹೀಗಿದೆ.

ಪ್ರಿಯ ರಂಗನಾಥ ರಾವ್,

ನಿಮ್ಮ ಪತ್ರ ತಲುಪಿತು. ಇವತ್ತು ಸಾಕ್ಷಿಯೂ ಬಂದಿದೆ. ನಿಮ್ಮ ಲೇಖನವನ್ನು ಓದಿದೆ. ನೀವು ಎತ್ತಿರುವ ಕೆಲವು ಆಕ್ಷೇಪಗಳಿಗೆ ನನ್ನ ಮೊದಲಿನ ಲೇಖನದಲ್ಲಿಯೇ ಉತ್ತರಗಳಿರುವುದರಿಂದ ಅದನ್ನು ನಿಮ್ಮ ಗಮನಕ್ಕೆ ತರುತ್ತೇನೆ.

1.ಸೋಲಾ ಮತ್ತು ಟಾಲ್ ಸ್ಟಾಯ್ ಉದಾಹರಣೆ ಕೊಟ್ಟಿರೋದು ಯರ್ಥಾರ್ಥವಾದ ಮತ್ತು ವಾಸ್ತವವಾದದ ಕಾದಂಬರಿಗಳಲ್ಲಿರುವ ವ್ಯತ್ಯಾಸವನ್ನು ತೋರಿಸುವುದಕ್ಕಾಗಿ. ಅಲ್ಲಿ ಟಾಲ್ ಸ್ಟಾಯ್ ಕುದುರೆ ಪಂದ್ಯವೊಂದನ್ನು ಸಂಕೇತವಾಗಿ ಬಳಸಿಕೊಳ್ಳುತ್ತಾನೆ. ಆದರೆ ನಾನು ಸಂಸ್ಕಾರದ ಬಗ್ಗೆ ಎತ್ತಿದ ಪ್ರಶ್ನೆ ಅದರ ಬರವಣಿಗೆಯ ರೀತಿ ಕುರಿತದ್ದು. ಇದನ್ನು ಸ್ಪಷ್ಟಪಡಿಸುವುದಕ್ಕಾಗಿ ಹೀಗೆ ಹೇಳಬಹುದು. ಸಂಸ್ಕಾರದ ಮೊದಲ ಪುಟಗಳ ಬರವಣಿಗೆ ನಮ್ಮಲ್ಲಿ ಕೆಲವು ಅಪೇಕ್ಷೆಗಳನ್ನು ಕುದುರಿಸುತ್ತದೆ, ಬ್ರಾಹ್ಮಣರ ಸಮಸ್ಯೆಗಳ ಕುರಿತಾಗಿರುವ ವಾಸ್ತವ ದೃಷ್ಟಿಕೋನದ ಕಾರಣವಾಗಿ. ಇದೇ ದೃಷ್ಟಿಕೋನವನ್ನ ಅವರು ಕಾದಂಬರಿಯೊಳಗೆ ತಂದಿರುವ ಬೇರೆ ವರ್ಗಗಳ ಬಗ್ಗೆಯೂ ಹೊಂದಿರಬೇಕೆಂದು ಓದುಗ ಸಹಜವಾಗಿಯೇ ಲೇಖಕರು ಹುಟ್ಟಿಸಿದ ಅಪೇಕ್ಷೆಯ ಕಾರಣಕ್ಕಾಗಿಯೇ ಅಪೇಕ್ಷಿಸುತ್ತಾನೆ. ಅದು ಆಗದಿದ್ದಾಗ ನಾನು ಹೇಳಿದ ಸಮಸ್ಯೆಗಳು ಬರುತ್ತವೆ. ಅಂದರೆ ಸಂಸ್ಕಾರದ ಬ್ರಾಹ್ಮಣರ ಕುರಿತ ಭಾಗಗಳು ವಾಸ್ತವಿಕವಾಗಿದ್ದು, ಶೂದ್ರರ ಕುರಿತ ಭಾಗಗಳು ಸಾಂಕೇತಿಕವಾಗಿವೆ. ಈ ಶೈಲಿಯಲ್ಲಿರುವ ಕಾಂಟ್ರಾಡಿಕ್ಷನ್‍ಗಳಿಂದಾಗಿ ನಾನು ಲೇಖನದಲ್ಲಿರುವ ಪ್ರಶ್ನೆಗಳನ್ನು ಕೇಳಿದನೇ ಹೊರತು ಸಂಸ್ಕಾರವನ್ನು ಬೇರೆ ಯಾವುದೇ ರೀತಿಯಾಗಿರಬೇಕಿತ್ತು ಎಂದು ಅಪೇಕ್ಷಿಸಿದ್ದರಿಂದಲ್ಲ. ಸಾಹಿತ್ಯ ಒಂದು ಆರ್ಟ್ ಫಾರಮ್ ಆದ್ದರಿಂದಲೇ ಮತ್ತು ಸಂಸ್ಕಾರಕ್ಕೊಂದು ನಿಶ್ಚಿತ ಫಾರಮ್ ಇಲ್ಲದ್ದರಿಂದಲೇ ನನಗೆ ಆ ಅನುಮಾನಗಳು ಹುಟ್ಟಿದವು.

ಇದನ್ನೇ ನನ್ನ ಲೇಖನ ಪ್ರಕಟವಾದ ಸಾಕ್ಷಿಯ ಪುಟ 116ರ ಎರಡನೇ ಪ್ಯಾರಾದಲ್ಲಿ ಬರೆದೆ. ನೀವು ನಿಮ್ಮ ಲೇಖನದ 27ನೇ ಪುಟದಲ್ಲಿ ಹೇಳಿದ ಮಾತುಗಳನ್ನು ಒಪ್ಪಿದರೆ ಸಾಹಿತ್ಯ ವಿಮರ್ಶೆಯಲ್ಲಿ ಮೌಲ್ಯಮಾಪನಕ್ಕೆ ಜಾಗವಿಲ್ಲದಂತಾಗುತ್ತದೆ. ಆದರೆ ನೀವಿದನ್ನು ಒಪ್ಪುತ್ತೀರಾ? ನಿಮ್ಮ ಉಳಿದ ಕೃತಿಗಳಲ್ಲಿಯೇ ಮೌಲ್ಯ ಮಾಪನದ ಪ್ರಯತ್ನವಿದೆಯಲ್ಲ? ಮೌಲ್ಯಮಾಪನ ಬೇಕು ಎನ್ನುವುದಾದರೆ, ಸಂಸ್ಕಾರದ ಬಗ್ಗೆ ನೀವು ಆಖೈರಾಗಿ ಹೇಳಿದಲ್ಲಿಂದ ನಿಮ್ಮ ಯೋಚನೆ ಹೊರ ಬರಬೇಕಾಗುತ್ತದೆ;ಪ್ರಾರಂಭವಾಗಬೇಕಾಗುತ್ತದೆ.

ಆದರೆ ಅದು ಬರಿಯ ಒಂದು ವರ್ಗದ ಬಗ್ಗೆ ಮಾತ್ರ ಆಗಿದ್ದರೆ ಸದಾಶಿವ, ವೈಕುಂಠರಾಜು ಮೊದಲಾದವರ ಕೃತಿಗಳನ್ನು ಅದರ ಮಿತಿಯೊಳಗೇ ಒಪ್ಪಿಕೊಳ್ಳುವುದು ಸಾಧ್ಯವಾದ ಹಾಗೆ ಸಂಸ್ಕಾರವನ್ನೂ ಒಪ್ಪಿಕೊಳ್ಳುವುದು ಸಾಧ್ಯವಾಗುತ್ತಿತ್ತು. ಆದರೆ ಸಂಸ್ಕಾರ ಬೇರಬೇರೆ ವರ್ಗಗಳನ್ನು, ಅವುಗಳ ಸಮಸ್ಯೆಗಳನ್ನು ತನ್ನ ಹಂದರದೊಳಕ್ಕೆ ತರುತ್ತದೆ. ಆದ್ದರಿಂದಲೇ ಬೇರ ವರ್ಗಗಳ ಬಗ್ಗೆ ಲೇಖಕರಿಗಿರುವ ದೃಷ್ಟಿಕೋನದ ವಿಮರ್ಶೆ ಅಗತ್ಯವಾಗುತ್ತದೆ. ವೈಕುಂಠರಾಜು ಮತ್ತು ಸದಾಶಿವ ತಮ್ಮ ಕೃತಿಗಳ ಮೂಲಕವಾಗಿಯೇ ಈ ಸಮಸ್ಯೆಗಳನ್ನು ಎತ್ತುವುದಿಲ್ಲ. ಅಂದರೆ ಸಂಸ್ಕಾರದಲ್ಲಿರುವ ಹಾಗೆ ಶೈಲಿಯ ಕಾಂಟ್ರಾಡಿಕ್ಷವ್ ಅವರಿಬ್ಬರ ಕೃತಿಗಳಲ್ಲಿ ಇಲ್ಲ. ಸಂಸ್ಕಾರದ ಶೈಲಿಯ ಕಾಂಟ್ರಾಡಿಕ್ಷನ್ ನಿಂದಾಗಿ ಈ ಎಲ್ಲ ಸಮಸ್ಯೆಗಳೂ ಬಂದಿವೆ.

ಈ ಶೈಲಿಯ ಕಾಂಟ್ರಾಡಿಕ್ಷನ್ ಭಾರತೀಪುರದಲ್ಲೂ ಇದೆ. ಚಕ್ರವ್ಯೂಹದಂಥ ಬೀದಿಗಳು....ಎಂಬಿತ್ಯಾದಿಯಾಗಿ ಪ್ರಾರಂಭವಾಗುವ ಪ್ಯಾರ ನೋಡಿ. ಇವು ಸಾಂಕೇತಿಕ ವಾಕ್ಯಗಳು. ನಾಲ್ಕೇ ವಾಕ್ಯಗಳ ನಂತರ "ಭಾರತೀಪುರದಿಂದ ಹತ್ತು ಮೈಲಿ ದೂರದಲ್ಲಿ ಕಲ್ಲುಮರಿಗೆ ಮಾಡುವವರಿದ್ದಾರೆ..."ಎಂಬಿತ್ಯಾದಿಯಾಗಿ ಶೈಲಿ ವಾಸ್ತವಿಕವಾಗುತ್ತದೆ.

ಈ ಶೈಲಿಯ ಕಾಂಟ್ರಡಿಕ್ಷನ್ ಅವರ ಜೀವನದೃಷ್ಟಿಯಲ್ಲೂ ಇದೆ. ಇದ್ದಕ್ಕಿದ್ದಂತೆ ಜೀವನ ಬದಲಾಗುತ್ತದೆಂದೂ ಅವರು ನಂಬುತ್ತಾರೆ;ಹಾಗೆಯೇ ನಿಧಾನವಾದ, ಮನವೊಲಿಕೆಯ ಮೂಲಕ ಜೀವನ ಬದಲಾಗುತ್ತದೆಂದೂ ನಂಬುತ್ತಾರೆ. ಮೊದಲನೆಯದು ಸಾಂಕೇತಿಕ ಶೈಲಿಗೆ, ಎರಡನೆಯದು ವಾಸ್ತವಿಕ ಶೈಲಿಗೆ ಎಡೆಕೊಡುತ್ತದೆ. ಈ ಕಾಂಟ್ರಡಿಕ್ಷನ್ ಇರುವವರೆಗೆ ಶೈಲಿಯಲ್ಲೂ ಕಾಂಟ್ರಡಿಕ್ಷನ್ ಇರುತ್ತದೆ. ಅದಿನ್ನೂ ಸೃಷ್ಟ್ಯಾತ್ಮಕವಾಗಿ ಬಗೆಹರಿದಂತಿಲ್ಲ.

ಇನ್ನು ಭಾಷೆ ಬಗ್ಗೆ. ಈ ಕುರಿತು ಸಾಕ್ಷಿ-30ರ ಪುಟ 122, ಪ್ಯಾರಾ ಒಂದಕ್ಕೆ ನಿಮ್ಮ ಗಮನ ಸೆಳೆಯಲಿಚ್ಛಿಸುತ್ತೇನೆ. ಕಚ್ಚಾ ಭಾಷೆ ಅಂದರೆ ರಾ ಭಾಷೆ. ಆಸ್ ಇಟೀಸ್ ಸ್ಪೋಕನ್ ಬೈ ದಿ ಪೀಪಲ್. ಬೆಳ್ಯದ ನಮೂನೆ ಭಾಷೆ.

ಆ ನನ್ನ ಪ್ಯಾರಾ ಹೀಗೆ:"ಅಂದರೆ ನಾನು ಗ್ರಾಂಥಿಕ ಭಾಷೆಯನ್ನು ಬಳಸಬೇಕೆಂದು ಹೇಳುತ್ತಿಲ್ಲ. ಜಾನಪದ ಭಾಷೆಯ ಸತ್ತ್ವ ಕೃತಿಗೆ ಅಗತ್ಯ. ಆದರೆ ಸತ್ತ್ವವನ್ನು ಪಡೆಯುವುದು, ಅಥವಾ ವ್ಯಂಗ್ಯದ ಮೂಲಕ ಉಪಯೋಗಿಸುವುದು ಬೇರೆ, ಕಚ್ಚಾ ಆಗಿಯೇ ಬಳಸುವುದು ಬೇರೆ.." ಇದನ್ನು ನೀವೇ ನಿಮ್ಮ ಯೋಚನೆಗಳ ಜೊತೆಗೆ ಹೋಲಿಸಿಕೊಳ್ಳಿ.

ಇನ್ನೇನು?ನೀವು ಹೇಗಿದ್ದೀರಿ?ವೈಕುಂಠರಾಜು, ಸದಾಶಿವ ಹೇಗಿದ್ದಾರೆ?ವೈಕುಂಠರಾಜು ಏನಾದರೂ ಬರೆದಿರಾ? ಡೆಲ್ಲಿ ಸಾಕೆನಿಸಿಬಿಟ್ಟಿದೆ. ಬೆಂಗಳೂರಿನಲ್ಲಿ ನಿರಂತರವಾಗಿ ಕೆಲಸಕ್ಕೆ ಪ್ರಯತ್ನಿಸುತ್ತಲೇ ನಿರಾಶನಾಗುತ್ತಲೇ ಇದ್ದೇನೆ.

ನಿಮ್ಮ,
ರಾಮಚಂದ್ರದೇವ
31-5-76

ಈ ಅಂಕಣದ ಹಿಂದಿನ ಬರಹಗಳು:

ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...