ಅಭಿನಯದ ಜೊತೆಗೆ ಸಾಹಿತ್ಯದಲ್ಲೂ ರಂಗಕರ್ಮಿಗಳು ಪರಿಣಿತರಾಗಬೇಕು: ಮೂಡ್ನಾಕೂಡು ಚಿನ್ನಸ್ವಾಮಿ

Date: 20-09-2021

Location: ನಟನ ರಂಗಶಾಲೆ, ರಾಮಕೃಷ್ಣ ನಗರ, ಮೈಸೂರು


ಸಾಹಿತ್ಯ ಎನ್ನುವುದು ಬರೀ ಸಾಹಿತಿಗಳಿಗೆ ಶಾಲಾ ಕಾಲೇಜಿನ ಅಧ್ಯಾಪಕರಿಗೆ ಮಾತ್ರ ಸಂಬಂಧಪಟ್ಟ ವಿಚಾರವಾಗಿರದೆ ಎಲ್ಲರಿಗೂ ಅತ್ಯವಶ್ಯಕವಾಗಿದೆ. ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳದ್ದರೆ, ದೈನಂದಿನ ದಿನದಲ್ಲಿ ಯಾವ ಸಂದರ್ಭದಲ್ಲಿ ಯಾವ ಪದಬಳಕೆ ಮಾಡಬೇಕು ಎಂಬುದು ಗೊಂದಲದ ವಿಷಯವಾಗಿಬಿಡುತ್ತದೆ ಎಂಬುದಾಗಿ ಹಿರಿಯ ಕವಿ ಹಾಗೂ ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಭಿಪ್ರಾಯ ಪಟ್ಟರು.

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್, ಆತ್ಮೀಯ ಪ್ರಕಾಶನ ಚಾಮರಾಜನಗರ ಮತ್ತು ನಟನ ಮೈಸೂರು ಸಹಯೋಗದಲ್ಲಿ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆದ ಯುವ ರಂಗಕರ್ಮಿ ಕಿರಣ್ ಗಿರ್ಗಿ ಅವರ ‘ನ್ಯಾಣ’ ಕವಿತೆಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ರಂಗಕರ್ಮಿಗಳು ಅಭಿನಯ ಮತ್ತಿತರ ಕಲಾ ಪ್ರಕಾರಗಳತ್ತ ಮುಖಮಾಡಿದ್ದಾರೆ. ಇದರ ಜೊತೆಗೆ ಸಾಹಿತ್ಯದತ್ತಲೂ ಹೆಚ್ಚಿನ ಗಮನಹರಿಸಿದರೆ ಮಾತ್ರ ರಂಗಭೂಮಿಯ ಅಭಿವೃದ್ಧಿ ಸಾಧ್ಯ. ರಂಗಭೂಮಿಯ ಜೊತೆಗೆ ಸಂಗೀತ, ಸಾಹಿತ್ಯವೂ ಕಿರಣ್ ಗಿರ್ಗಿಗೆ ಒಲಿದಿರುವುದು ಉಜ್ವಲ ಭವಿಷ್ಯವನ್ನು ರೂಪಿಸಲಿದೆ. ಸಣ್ಣ ಹಳ್ಳಿಗಳಲ್ಲೂ ಮರೆಯಾಗುತ್ತಿರುವ ನ್ಯಾಣ ಅಂದರೆ ಜೋಲಿ ಚಿತ್ರಣ ಇಲ್ಲಿನ ಕವಿತೆಗಳಿಂದ ತಿಳಿದುಕೊಳ್ಳಲು ಸಾಧ್ಯ ಎಂದರು.

ವಿಮರ್ಶಕ ಬಿ. ಮಹೇಶ್ ಹರವೆ ಮಾತನಾಡಿ, ಕಿರಣ್ ಗಿರ್ಗಿ ಅವರ ಕವಿತೆಗಳನ್ನು ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಕವಿತೆಗಳಂತೆ ಪ್ರೇಮಕಥೆಯಾಗಿಯೂ ಮಾಡಬಹುದು. ಕವಿಯ ಮೊದಲ ಕೃತಿ ಇದಾದರೂ ಭಾಷಾ ಪ್ರೌಢಿಮೆಯನ್ನು ನ್ಯಾಣ ಸಂಕಲನದ ಪದ್ಯಗಳಲ್ಲಿ ಕಾಣಬಹುದು. ಸಂಕಲನದ ಮೊದಲ ಕವಿತೆ ‘ಅನಿಸಿದಾಗ’ ಕಿರಣ್ ಗಿರ್ಗಿ ಅವರ ಪದ್ಯಗಳ ನೀಲನಕ್ಷೆಯಂತಿದೆ. ಕವಿ ಸರಳ ಭಾಷೆಯ ನಿರೂಪಣೆಯೊಂದಿಗೆ ಪ್ರಕೃತಿ, ಸಮಾಜದ ಪ್ರಸ್ತುತತೆ, ಸ್ನೇಹ, ಪ್ರೀತಿ, ಅಮ್ಮ, ಅಪ್ಪನ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಅಲೆಮಾರಿ ಜನರ ವಸ್ತುವನ್ನೊಳಗೊಂಡ ಕವಿತೆ ‘ನ್ಯಾಣ’ ರೂಪಕವಾಗಿ ಚಿತ್ರಣಗೊಂಡಿದೆ ಎಂದರು.

ಕಾಯ್ರಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಜಂಟಿ ನಿರ್ದೇಶಕರಾದ ಮಂಜುನಾಥ ಅವರು ಮಾತನಾಡಿ, ಯುವ ಕವಿ ಕಿರಣ್ ಗಿರ್ಗಿ ಅವರ ಸಾಹಿತ್ಯ ಚಾಮರಾಜನಗರ ಗ್ರಾಮೀಣ ಭಾಷೆಯಲ್ಲಿಯೇ ಕವಿತೆಗಳಾಗಿ ಹೊರಹೊಮ್ಮಿರುವುದು ಕವಿಯು ನೆಲಮೂಲ ಸಂಸ್ಕೃತಿಯ ಆಶಯವನ್ನು ಹೊಂದಿರುವುದು ತಿಳಿಯುತ್ತದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್ ಮಾತನಾಡಿ, ಕವಿ ಕಿರಣ್ ಗಿರ್ಗಿ ಸಂಯಮವು ಕವಿತೆಗಳಲ್ಲೂ ಕಂಡಿವೆ. ಮುಂದಿನ ಸಾಧನೆಯ ಹಾದಿ ಹಂತ ಹಂತವಾಗಿಯೇ ಸಾಗಲಿ ಎಂದು ಆಶಿಸಿದರು.

ನಟನ ಸಂಸ್ಥೆಯ ಮಂಡ್ಯ ರಮೇಶ್ ಅವರು ಗಣ್ಯರನ್ನು ಸ್ವಾಗತಿಸಿ ಮಾತನಾಡಿ, ರಂಗನಿರ್ದೇಶಕನಿಗೆ ಸಂಗೀತ, ಸಾಹಿತ್ಯದ ಹಾದಿ ತಿಳಿಯುವುದರಿಂದ ಅವರ ಸಾಂಸ್ಕೃತಿಕ ಸಾಧನೆ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಕವಿಗೆ ಶುಭಾಶಯ ತಿಳಿಸಿದರು.

ಸುಗಮ ಸಂಗೀತ ಗಾಯಕರಾದ ಎಸ್.ಜಿ. ಮಹಾಲಿಂಗ ಗಿರ್ಗಿ ಅವರು ಭಾವಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ಪುಸ್ತಕದ ಕರ್ತೃ ಕಿರಣ್ ಗಿರ್ಗಿ, ಆತ್ಮೀಯ ಪ್ರಕಾಶನದ ಶಿವಶಂಕರ್ ಚಟ್ಟು, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ನ ಕಾರ್ಯದರ್ಶಿ ಶಿವು ಜೆನ್ನೂರ ಹೊಸೂರು ಉಪಸ್ಥಿತರಿದ್ದರು.

 

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...