ಅಭಿವ್ಯಕ್ತಿಗೆ ಇಡೀ  ಬದುಕಿದೆ: ಟಿ.ಪಿ.ಅಶೋಕ


‘ಶಾಂತಾ ಅವರ ಕವಿತೆಗಳಲ್ಲಿ ಹದಿಹರೆಯದ ಕವಿಯ ರಭಸ ಇಲ್ಲ. ಜೀವನಾನುಭವದಿಂದ  ಮಾಗಿದ ಗೃಹಿಣಿ ಯೊಬ್ಬಳ ಆತ್ಮಾವಲೋಕನವಿದೆ. ತನ್ನ ಇದುವರೆಗಿನ ಬದುಕನ್ನು ಕುರಿತ ಧ್ಯಾನವಿದೆ.  ಹಾಗೆಯೇ ಕಾವ್ಯವೆಂದರೆ ಏನು ಎನ್ನುವ ಹುಡುಕಾಟವೂ ಇದೆ. ಸನ್ಮಾನ, ಕೀರ್ತಿಪತಾಕೆ,  ಹಾರತುರಾಯಿಗಳಿಂದ ಯಾರೂ ಕವಿಗಳಾಗಿಬಿಡುವುದಿಲ್ಲ ಎಂಬ ಎಚ್ಚರ ಇದೆ’.. ಶಾಂತಾ ಜಯಾನಂದ್ ಅವರ ‘ಹುದುಗಿಟ್ಟ ಭಾವನಗಳ ಮತ್ತೆ ನುಡಿಸಿ’ ಕವನ ಸಂಕಲನದಲ್ಲಿ ಟಿ.ಪಿ.ಅಶೋಕ ಅವರು ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ..

ಎಲ್ಲ ವಿಷಯಗಳನ್ನೂ ಎಲ್ಲರೊಂದಿಗೂ ಯಾವಾಗಲೂ ಹೇಳಿಕೊಳ್ಳಲಾಗುವುದಿಲ್ಲ. ಇದಕ್ಕೆ ವೈಯಕ್ತಿಕ  ಸಂಕೋಚಗಳು ಕಾರಣವಾಗಿರಬಹುದಾದಂತೆ, ಕೌಟುಂಬಿಕ, ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳೂ  ಕಾರಣವಾಗಿರುತ್ತವೆ. ಹೇಳಿಕೊಂಡರೂ ಹೇಳಿದ್ದು ಒಂದು ಕೇಳಿಸಿಕೊಂಡದ್ದು ಮತ್ತೊಂದಾಗಿ ನಿರೀಕ್ಷಿತ  ಸಂವಹನ ಸಾಧ್ಯವಾಗದೇ ಹೋಗಬಹುದು. ಆದರೂ ಅಭಿವ್ಯಕ್ತಿಯ ತುರ್ತನ್ನು ಸದಾಕಾಲವೂ  ನಿಯಂತ್ರಣದಲ್ಲಿ ಇಡಲು ಬರುವುದಿಲ್ಲ ಎಂಬುದೂ ನಿಜ. ನೇರ ಸಂವಾದ, ಸಂಭಾಷಣೆ, ನಿರೂಪಣೆ  ಸಾಧ್ಯವಾಗುವುದಿಲ್ಲ ಎಂದಾಗ ಅದನ್ನು ಒಂದಲ್ಲ ಒಂದು ಕಲೆಯಲ್ಲಿ ಸೂಚ್ಯವಾಗಿ, ಪರೋಕ್ಷವಾಗಿ  ಹೇಳಿಕೊಳ್ಳಲು ಪ್ರಯತ್ನಿಸುವುದು ಮನುಷ್ಯ ಸ್ವಭಾವಕ್ಕೆ ತೀರ ಸಹಜ. ಅದುಮಿಟ್ಟ ಭಾವನೆಗಳು,  ಅನಿಸಿಕೆಗಳು ಹೊರದಾರಿಯೊಂದನ್ನು ಹೇಗೋ ಕಂಡುಕೊಳ್ಳುತ್ತವೆ. ಕಾವ್ಯ ಹುಟ್ಟುವುದು ಹೀಗೆ.  ಅನುಭವದ ತೀವ್ರತೆಯು ಅಭಿವ್ಯಕ್ತಿಯ ಅನಿವಾರ್ಯತೆಯನ್ನು ಹುಟ್ಟುಹಾಕುತ್ತದೆ. ಕಲೆಯಲ್ಲಿ ಅಭಿವ್ಯಕ್ತಿ  ಪಡೆದೊಡನೆ ಅದು ಕೇವಲ ಕಲಾವಿದನ ವೈಯಕ್ತಿಕ ಅನುಭವವಾಗಿ ಉಳಿಯುವುದಿಲ್ಲ. ಅದು ಒಂದು  ಮಟ್ಟದ ಸಾಧಾರನೀಕರಣವನ್ನು ತಾನಾಗಿ ಪಡೆದುಕೊಂಡು ಬಿಡುತ್ತದೆ. ‘ಹುದುಗಿಟ್ಟ ಭಾವಗಳ ಮತ್ತೆ  ನುಡಿಸಿ’ ಶಾಂತಾ ಜಯಾನಂದರ ಮೊದಲ ಕವನ ಸಂಕಲನ ಇರಬಹುದು. ಆದರೆ ಅದಕ್ಕೆ ಸಹಜ  ಕಾವ್ಯಕ್ಕೆ ಇರುವ ಎಲ್ಲ ಲಕ್ಷಣಗಳೂ ಇವೆ. ಎಲ್ಲ ಕವಿತೆಗಳ ಗುಣಮಟ್ಟ ಒಂದೇ ಇರದಿದ್ದರೂ ಅವುಗಳ  ಹಿಂದಿನ ಸೃಜನಶೀಲ ಚಡಪಡಿಕೆ ಮನಸ್ಸಿಗೆ ತಟ್ಟುವ ಹಾಗಿದೆ.  

ಶಾಂತಾ ಅವರ ಕವಿತೆಗಳಲ್ಲಿ ಹದಿಹರೆಯದ ಕವಿಯ ರಭಸ ಇಲ್ಲ. ಜೀವನಾನುಭವದಿಂದ  ಮಾಗಿದ ಗೃಹಿಣಿ ಯೊಬ್ಬಳ ಆತ್ಮಾವಲೋಕನವಿದೆ. ತನ್ನ ಇದುವರೆಗಿನ ಬದುಕನ್ನು ಕುರಿತ ಧ್ಯಾನವಿದೆ.  ಹಾಗೆಯೇ ಕಾವ್ಯವೆಂದರೆ ಏನು ಎನ್ನುವ ಹುಡುಕಾಟವೂ ಇದೆ. ಸನ್ಮಾನ, ಕೀರ್ತಿಪತಾಕೆ,  ಹಾರತುರಾಯಿಗಳಿಂದ ಯಾರೂ ಕವಿಗಳಾಗಿಬಿಡುವುದಿಲ್ಲ ಎಂಬ ಎಚ್ಚರ ಇದೆ. ‘ಅಭಿವ್ಯಕ್ತಿಗೆ ಇಡೀ  ಬದುಕಿದೆ’ ಎಂಬ ಆತ್ಮವಿಶ್ವಾಸವಿದೆ. ಎಲ್ಲರಿಂದ, ಎಲ್ಲದರಿಂದ ಕಲಿಯುವ ವಿನಯವೂ ಇದೆ.  

ಅಮ್ಮ  
ದೊಡ್ಡ ಸೌರವ್ಯೂಹ  
ಅದರಲ್ಲಿ ಪುಟ್ಟ ಭೂಮಿ  
ಆ ಭೂಮಿಯಲ್ಲಿ  
ಎಷ್ಟೊಂದು ಜನ ಜೀವಗಳು  
ಅದರಲ್ಲೊಂದು ಚಿಕ್ಕಚಿಕ್ಕ ಚುಕ್ಕೆ ನಾವು  
ಅದರಲ್ಲಿ ಭ್ರಮೆಯ ಹಂಗೇಕೆ 
ಎಂಬ ಮಗಳು ಪ್ರಶ್ನೆಗೆ 
ಹೌದು ಮಗಳೇ  
ಒಂದು ಗಡಿಯಿಲ್ಲ  
ಯಾವೊಂದು ಸೀಮೆಯಿಲ್ಲ  
ಪೊರೆವ ಭೂಮಿಗೆ ಇಲ್ಲ ಯಾವ ಹೆಸರು  

ಎಂದು ಒಂದು ಕವಿತೆಯಲ್ಲಿ ಕವಿಯಾಗಲು ಪ್ರಯತ್ನಿಸುತ್ತಿರುವ ತಾಯಿ ಹೇಳುತ್ತಾಳೆ. ಪರ್ಯಾಯವಾಗಿ  ಇದು ಶಾಂತಾ ಅವರ ಜೀವನದೃಷ್ಟಿ-ದರ್ಶನಗಳನ್ನೇ ಸೂಚಿಸುವ ಸಾಲುಗಳು ಎಂದು ಊಹಿಸಬಹುದು.  ಈ ಊಹೆಯನ್ನು ಸ್ಥಿರೀಕರಿಸುವ ಹಲವು ಸಾಲುಗಳು ಇಲ್ಲಿನ ಅನೇಕ ಕವಿತೆಗಳಲ್ಲಿ ಬೇರೆಬೇರೆ  ಬಗೆಗಳಲ್ಲಿ ಕಾಣಸಿಕೊಳ್ಳುತ್ತವೆ. ಹುಟ್ಟು-ಸಾವಿನ ನಡುವೆ, ಮಾತು-ಮೌನಗಳ ನಡುವೆ ಇರುವ ಹಲವು ವರ್ಣಗಳನ್ನು ಗುರುತಿಸಿ ಧ್ಯಾನಿಸುವುದು ಕವಿಯ ಮುಖ್ಯ ಬಯಕೆ-ಆಶಯ ಎನಿಸುತ್ತದೆ. 

‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಎಂಬ ಶೀರ್ಷಿಕೆಯೇ ಶಾಂತಾ ಅವರ ದೃಷ್ಟಿಯಲ್ಲಿ ಕವಿತೆ  ಎಂದರೆ ಏನು ಎಂಬುದನ್ನು ಸೂಚಿಸುತ್ತದೆ. ಶಿವನ ಡಮರುಗ, ಗಂಗೆಯ ಹರಿವು, ಅಗ್ನಿಪರ್ವತದ  ಸ್ಫೋಟ, ಹಿಮಾಲಯದ ಮೌನ ಇವುಗಳಲ್ಲಿ ಅವರು ಕಾವ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಸ್ವತಃ ಅವರ  ಕೆಲವು ಕವಿತೆಗಳಲ್ಲಿ ಈ ಛಾಯೆ ಸುಳಿಯುವುದು ಕಾಕತಾಳೀಯವಲ್ಲ. ಕವಿತೆಯೆಂದರೆ ಕೇವಲ  ಪ್ರತಿಕ್ರಿಯಿಸುವುದಲ್ಲ ಎಂದು ಈ ಕವಿಗೆ ಗೊತ್ತಿದೆ. ಕವಿ ಮಾತಾಡಬಾರದು, ಕವಿತೆಯೇ ಮಾತಾಡಬೇಕು  ಎಂಬ ಹಂಬಲವಿದೆ. ಮೋಡಗಳು ಮಳೆಸುರಿಸಿದಂತೆ, ಗಿಡಗಳಲ್ಲಿ ಹೂಗಳು ಅರಳುವಂತೆ  ಸಹಜವಾಗಿರಬೇಕು ಎಂಬುದು ಕವಿಯ ಆಶಯ. ‘ನನಗಾಗಿ ಕವಿತೆ ಬರೆಯುತ್ತಿದ್ದೇನೆ’ ಎಂದು  ವಿನಯಪೂರ್ವಕ ನಿವೇದಿಸಿಕೊಂಡರೂ ಇಲ್ಲಿನ ಹಲವು ರಚನೆಗಳು ಕೇವಲ ಒಬ್ಬ ನಿರ್ದಿಷ್ಟ ವ್ಯಕ್ತಿಯ  ಮಾತುಗಳಾಗಿ ಉಳಿಯದೆ, ಒಂದು ಮನಸ್ಥಿತಿಯ- ಮುಖ್ಯವಾಗಿ ಹೆಣ್ಣಿನ ದುಗುಡಗಳ, ಪ್ರಶ್ನೆಗಳ,  ಅವಲೋಕನಗಳ-ಅಭಿವ್ಯಕ್ತಿಯಾಗಿ ಇನ್ನೂ ಹೆಚ್ಚಿನ ವ್ಯಾಪ್ತಿಯನ್ನು ಗಳಿಸಿಕೊಂಡಿರುವುದರಲ್ಲಿ ಶಾಂತಾ  ಅವರ ಕಾವ್ಯಸಾಫಲ್ಯವಿದೆ ಎಂದು ಹೇಳಬಹುದು. ಇದುವರೆಗೆ ತನ್ನ ಕವಿತೆಗಳು ಸಂಸಾರದ  ಜವಾಬುದಾರಿಗಳಲ್ಲಿ, ಮುಖ್ಯವಾಗಿ ರುಚಿರುಚಿಯಾದ ಅಡುಗೆಗಳ ರೂಪದಲ್ಲಿ ಹೊರಹೊಮ್ಮಿದ್ದವು  ಮತ್ತು ಮನೆಮಂದಿಯನ್ನೆಲ್ಲ ತಣಿಸಿದ್ದವು. ‘ಅಮ್ಮ ನೀನೇ ಒಂದು ಕವಿತೆ/ಮತ್ತೇಕೆ ನಿನಗೆ ಕವಿತೆ?’ ಎಂದು ಮಕ್ಕಳು ಛೇಡಿಸಿದರೂ, ‘ನಿಮ್ಮಮ್ಮ ನಿಜಕ್ಕೂ ಕಷ್ಟದ ಕವಿತೆ’ ಎಂದು ಪತಿ ಸರ್ಟಿಫಿಕೇಟು  ಕೊಟ್ಟರೂ ಕವಿನಿರೂಪಕಿಗೆ ತನ್ನ ಸಾಕಷ್ಟು ದೀರ್ಘವೇ ಆದ ಬದುಕಿನ ಒಂದು ಘಟ್ಟದಲ್ಲಿ ತನ್ನ  ಅಸ್ಮಿತೆಯ ಪ್ರಶ್ನೆ ಎದುರಾಗಿದೆ. ಇದುವರೆಗಿನ ತನ್ನ ಬಾಳಿನಲ್ಲಿ ತಾನು ಕಂಡದ್ದೇನು, ಅನುಭವಿಸಿದ್ದೇನು  ಎಂದು ತಾನೇ ಶೋಧಿಸಿಕೊಳ್ಳುವ ತುರ್ತು ಎದುರಾಗಿದೆ. ಅದಕ್ಕಿಂತ ಮುಖ್ಯವಾಗಿ ಓರ್ವ ವ್ಯಕ್ತಿಯಾಗಿ, ಸ್ತ್ರೀ  ಆಗಿ ತಾನು ನಿಜಕ್ಕೂ ಏನು? ಎಂಬ ಪ್ರಶ್ನೆ ಒಳಗಿನಿಂದ ಮೂಡಿಬರುತ್ತಿದೆ. ಈ ಎಲ್ಲ ಭಾರವನ್ನು, ಒತ್ತಡವನ್ನು ಕಳೆದುಕೊಂಡು ಹಗುರಾಗಬೇಕಾಗಿದೆ. ಸ್ಪಷ್ಟವಾಗಬೇಕಾಗಿದೆ. ಈ ಸಂಕಲನದ ಕವಿತೆಗಳು ಹುಟ್ಟಿರುವುದು ಹೀಗೆ. ಇವು, ಜೀವನವೆಂದರೆ ಇದು ಎಂಬ ಖಚಿತತೆಯಲ್ಲಿ, ಸ್ಪಷ್ಟ ಅಭಿಪ್ರಾಯಗಳಲ್ಲಿ  ಘೋಷಿತವಾಗುತ್ತಿರುವ ನೀತಿನಿರೂಪಣೆಗಳಲ್ಲ. ಸ್ಪಷ್ಟವಾಗಬೇಕೆಂಬ ವಿನಯದಲ್ಲಿ, ಆ ಪ್ರಕ್ರಿಯೆಗೆ  ಕೊಟ್ಟುಕೊಂಡಿರುವ ರಚನೆಗಳು. ಹಾಗೆಂದೇ ಇವು ಸರಳ ನೀತಿಪಾಠಗಳಲ್ಲ. ನಮ್ಮೆದುರೇ ಅರಳುತ್ತಿರುವ  ಕವಿತೆಗಳು.  

ಈ ದೃಷ್ಟಿಯಿಂದ ‘ಬಾಳ ಸಂಜೆಯ ಪ್ರಶ್ನೆಗಳು’ ಎಂಬ ಕವಿತೆಯು ಶಾಂತಾ ಅವರ ಪ್ರಾತಿನಿಧಿಕ  ರಚನೆ ಎಂದು ಹೇಳಬಹುದು. ಇಲ್ಲಿಯ ಕವಿನಿರೂಪಕಿಯು ತನ್ನ ಅಸ್ತಿತ್ವದ ಪ್ರಶ್ನೆಗೆ ದಿಟ್ಟವಾಗಿ  ಎದುರಾಗಿದ್ದಾಳೆ. ತಾನು ನಡೆದುಬಂದ ದಾರಿಯಲ್ಲಿ ಹೆಜ್ಜೆಗುರುತುಗಳೇ ಇಲ್ಲವಲ್ಲಾ ಎಂದು ಅವಳಿಗೆ  ಕಸಿವಿಸಿಯಾಗುತ್ತದೆ. ಓರ್ವ ಗೃಹಿಣಿಯಾಗಿ ತಾನು ಸಂಸಾರವನ್ನು ಪೊರೆದರೂ, ಅದರ ಭಾರವನ್ನು ಹೊತ್ತರೂ, ಹಣ ಸಂಪಾದನೆ, ಉದ್ಯೋಗ, ಆಸ್ತಿಖರೀದಿ ಮಾಡಿಲ್ಲ. ಹಾಗಾಗಿ ತನ್ನ ಸಾಧನೆಗಳಿಗೆ  ದಾಖಲೆಗಳೇ ಇಲ್ಲ. ‘ಅಸ್ತಿತ್ವ ಹುಡುಕಿ/ಅಳಿಸಿದ ಹೆಜ್ಜೆ ಗುರುತುಗಳ ಹುಡುಕಿ/ನೀ ಮಾಡಿದ್ದೇನು?’ ಎಂಬ ಪ್ರಶ್ನೆ ಎದುರಾದಾಗ ಹೆಣ್ಣಿನ ಅಸ್ಮಿತೆಯ ಪ್ರಶ್ನೆಗೆ ಈ ಆರ್ಥಿಕ ಇಲ್ಲವೇ ಅಧಿಕಾರದ ಲೆಕ್ಕಾಚಾರದ  ಆಚೆಗೇ ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಕವಿ ಸೂಚಿಸುತ್ತಿದ್ದಾರೆ. ಶಾಂತಾ ಅವರ  ರಚನೆಗಳಲ್ಲಿ ಸ್ತ್ರೀ ಪ್ರಜ್ಞೆ ಎಂಬುದು ಸಹಜವಾಗಿ ಅರಳುವುದು ಹೀಗೆ. ಮೌನದಲ್ಲೇ,  ಅಂತರ್ಮುಖತೆಲ್ಲೇ, ಮೃದುತ್ವದಲ್ಲೇ ಇರುವ ಹೆಣ್ಣಿನ ಮನಸ್ಸಿನೊಳಗಣ ಪ್ರಶ್ನೆಗಳನ್ನು ಅವರು  ದಿಟ್ಟವಾಗಿ ಸ್ಪರ್ಶಿಸಿದ್ದಾರೆ. ಸ್ವಂತದ ಪ್ರಶ್ನೆಗಳಿಂದ ಪ್ರಾರಂಭಿಸಿ ಸ್ತ್ರೀಲೋಕ ಹುದುಗಿಸಿಟ್ಟುಕೊಂಡಿರುವ  ಪ್ರಶ್ನೆಗಳಿಗೆ ದನಿಯಾಗಿದ್ದಾರೆ.  

ಅಪ್ಪ-ಅಮ್ಮ, ಪತಿ- ಮಕ್ಕಳು, ಬಂಧು-ಮಿತ್ರರು ಇವರುಗಳೊಂದಿಗಿನ ಸಂಬಂಧಗಳ  ಸ್ವರೂಪವನ್ನು ಪುನರ್ ಶೋಧಿಸಿಕೊಳ್ಳುವ ಬಯಕೆಯಂತೆ ಒಟ್ಟಾರೆ ಲಿಂಗವಿಶಿಷ್ಟ ಅನುಭವದ  ಸ್ವರೂಪವನ್ನೂ ಪರಿಶೀಲಿಸಿಕೊಳ್ಳುವ ಆಶಯವೂ ಈ ಸಂಕಲನದ ಹಲವು ರಚನೆಗಳಲ್ಲಿ  ಕಂಡುಬರುತ್ತದೆ. ‘ಹೆಣ್ತನ’ ಎಂಬುದು ಒಂದು ಕವಿತೆಯ ಶೀರ್ಷಿಕೆಯೇ ಆಗಿದೆ. ಹೆಣ್ತನವು ಕೇವಲ  ಜೈವಿಕ ವಿವರಗಳಿಂದ, ಹೊರಗಣ ವಸ್ತ್ರ ಆಭರಣ, ಅಲಂಕರಣಗಳಿಂದ ನಿರ್ಧರಿತವಾಗುವಂಥದ್ದೆ?  ಎಂಬ ಪ್ರಶ್ನೆಯನ್ನು ಕವಿತೆ ಎತ್ತಿಕೊಂಡಿದೆ. ಇತರ ಅನೇಕ ಕವಿತೆಗಳಲ್ಲಿ ಜೋಗತಿ, ಪಾಂಚಾಲಿ, ಯಶೋಧರೆಯರ ನಿದರ್ಶನಗಳನ್ನೂ ತಂದು ಕವಿ ವೈಯಕ್ತಿಕವಾದದ್ದರ ಆಚೆಗೂ ತಮ್ಮ ದೃಷ್ಟಿಯನ್ನು ಹಾಯಿಸಿದ್ದಾರೆ. ‘ಇಂಥವರು ಇನ್ನೂ ಇರುವರು’ ಎಂಬ ಕವಿತೆಯಲ್ಲಿ ಹೆಣ್ಣಿನ ಸ್ಥಿತಿಯ ಹಲವು  ವೈವಿಧ್ಯಮಯ ಉಲ್ಲೇಖಗಳಿವೆ. ‘ಬುದ್ಧ ಮತ್ತು ತಾಯಿ’ ಕವಿತೆಯಲ್ಲಿ ಯಶೋಧರೆಯು ಬುದ್ಧನನ್ನು  ಕೇಳುವ ಪ್ರಶ್ನೆಗಳಲ್ಲಿ ಸ್ತ್ರೀ ಅಸ್ಮಿತೆಯ ಪ್ರಶ್ನೆಯನ್ನು ಉನ್ನತೀಕರಿಸುವ ಮಹತ್ವಾಕಾಂಕ್ಷೆ ಇದೆ. ಬದುಕು  ಬೇಸರವಾದಾಗ ‘ನಾನು ನಿನ್ನಂತೆ ಮನೆಯ ಬಿಟ್ಟು ತೆರಳಬಹುದೇ’ ಮುಂತಾದ ಪ್ರಶ್ನೆಗಳನ್ನು ಕೇಳಿ  ಕೊನೆಯಲ್ಲಿ ‘ನೀನು ಬುದ್ಧ ಲೋಕ ಮಾನ್ಯ/ ನಾನೊಬ್ಬಳು ತಾಯಿಯಷ್ಟೇ’ ಎಂದು ಹೇಳುವಾಗ ಅವಳ ಧ್ವನಿಯಲ್ಲಿ ಕೀಳರಿಮೆ ಇಲ್ಲ. ತಾಯ್ತನದ ಸ್ಥಿರೀಕರಣವೇ ಇದೆ. ಬುದ್ಧನ ಬಗ್ಗೆ  ವಿಮರ್ಶಾತ್ಮಕವಾಗಿದ್ದರೂ ತನ್ನ ಅಸ್ಮಿತೆಯ ನಿರಾಕರಣೆ ಇಲ್ಲ. ‘ಅರಮನೆಯೆಂಬ ಸೆರೆಮನೆಯಲ್ಲಿ  ಬಂಧಿ’ ಎಂದು ಯಶೋಧರೆ ಹೇಳುವಾಗ ಅವಳು ತನ್ನೊಬ್ಬಳ ಬಗ್ಗೆ ಮಾತ್ರ ಮಾತಾಡುತ್ತಿದ್ದಾಳೆ  ಎನಿಸುವುದಿಲ್ಲ. ಒಂದು ಬಗೆಯ ಜೀವನಕ್ರಮದಲ್ಲಿ ಸಿಕ್ಕಿಕೊಂಡ ಎಲ್ಲ ಹೆಣ್ಣುಮಕ್ಕಳ ಧ್ವನಿ ಇಲ್ಲಿ  ಕೇಳಿಸುವಂತಿದೆ. ತಾಯ್ತನದ ಸ್ಥಿರೀಕರಣ ಇದ್ದರೂ ಹೆಣ್ಣಿನ ಸ್ಥಿತಿಯನ್ನು ಸಮಸ್ಯಾತ್ಮಕವಾಗಿ ನಿರೂಪಿಸಿ  ಕವಿತೆಯು ಸಂಕೀರ್ಣತೆಯನ್ನು ಕಾಯ್ದುಕೊಂಡಿದೆ.  

ಬದಲಾಗುತ್ತಿರುವ ಜೀವನಕ್ರಮಗಳು, ಬದಲಾಗುತ್ತಿರುವ ಆದ್ಯತೆ-ಅಭಿರುಚಿಗಳೂ ಕವಿಯ ಕಣ್ಣನ್ನು  ತಪ್ಪಿಸಿಕೊಂಡಿಲ್ಲ. ಆದರೆ ಕೇವಲ ಸಾಮಾಜಿಕ ಸಮಸ್ಯೆಗಳಿಗೆ ಲೋಕಾಭಿರಾಮವಾಗಿ ಪ್ರತಿಕ್ರಿಯಿಸುವ  ಸರಳ ದಾರಿಯನ್ನು ಕೈಬಿಟ್ಟು ಕವಿ ತನಗೆ ಪರಿಚಿತವಾದ ಕೌಟುಂಬಿಕ ಆವರಣದಲ್ಲೇ ಬದುಕಿನ ಅನೇಕ  ಮುಖ್ಯ ಪ್ರಶ್ನೆಗಳನ್ನು ಅನುಸಂಧಾನ ಮಾಡಲು ಪ್ರಯತ್ನಿಸಿದ್ದಾರೆ. ವಸ್ತುಗಳನ್ನು ಬಹಿರಂಗದಲ್ಲಿ  ಹುಡುಕಿಕೊಂಡು ಹೋಗಿಲ್ಲ. ‘ಗೆರೆ’ ಎಂಬ ಕವಿತೆಯ ಈ ಸಾಲುಗಳನ್ನು ಗಮನಿಸಿ: ‘ನಿನ್ನ  ಮುಖಾರವಿಂದದಲಿ/ಮೂಡಿರುವ ಒಂದೊಂದು/ಗೆರೆಯು ನೀ ಬದುಕಿದ ಬದುಕಿನ ರುಜುವು’. ಅಂದರೆ ಅಂತರಂಗದಲ್ಲಿ ಹುದುಗಿದ್ದ ಭಾವಗಳೇ ಇಲ್ಲಿ ಕವಿತೆಗಳಾಗಿ ಮರುಹುಟ್ಟು ಪಡೆದಿವೆ. ಈ ಕವಿತೆಗಳು  ಬಾಲ್ಯಸ್ಮೃತಿಲಂಪಟತ್ವದಲ್ಲಿ ಮುಳುಗಿಹೋಗಿಲ್ಲ. ಇಲ್ಲಿ ವೈವಿಧ್ಯಮಯ ನೆನಪುಗಳಿವೆ. ಆ ನೆನಪುಗಳಲ್ಲಿ  ಹಲವುಬಗೆಯ ಭಾವಗಳು- ಅನುಭವಗಳು ಹೆಪ್ಪುಗಟ್ಟಿವೆ. ಕವಿಯ ಮನಸ್ಸು ಶರಧಿಯಂತಿದೆ: 

 ಒಳಗೊಳಗೆ ಆಳದಿ ಮುಚ್ಚಿಟ್ಟ  
 ನಲಿವಿನಾ ಮುತ್ತುಗಳು..  
 ಆನಂದದ ಹವಳದ ಗಿಡಗಳು  
 ದುಃಖ ದುಮ್ಮಾನದ  
 ಗಿಡಗಂಟೆಗಳು ನಡುನಡುವೆ  
 ತೇಲುವ ಪಾಚಿ.  
 ಮತ್ತೆ ಬೆಳ್ನೊರೆಗಳ ಹೊತ್ತು  
 ತರುವ ಅಲೆಯಲೆಗಳು  
 ನ್ಯಾಯ ಕೇಳುವಂದದಲಿ,  
 ದಡವನಪ್ಪಳಿಸಿ  
 ಏಕೋ ಮೌನವಾಗಿ  
 ಹಿಂದೆ ಸರಿಯುತ್ತಿವೆ.. 

ಈ ಸಂಕೋಚವೇ ಶಾಂತಾ ಅವರ ಹೆಚ್ಚಿನ ರಚನೆಗಳ ಸ್ಥಾಯಿಭಾವವಾಗಿದೆ. ಅವರ ಕವಿತೆಗಳಲ್ಲಿ  ಘೋಷಣೆಗಳ, ಚೀತ್ಕಾರಗಳ ಅಬ್ಬರವಿಲ್ಲ. ಹೆಚ್ಚಿನ ಸಾಲುಗಳು ಕವಿ ತನಗೇ ಹೇಳಿಕೊಂಡಂತಿವೆ. ಮೌನ  ಬಿರಿದು ಮೆಲ್ನುಡಿಯಾಗಿ ಕಾವ್ಯಪಂಕ್ತಿಗಳಾಗಿ ಹರಿದಿವೆ.  

ಶಾಂತಾ ಜಯಾನಂದ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಕವನ ಸಂಕಲನದ ಮಾಹಿತಿಗಾಗಿ...

ಟಿ.ಪಿ.ಅಶೋಕ ಅವರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ..
 

 


 

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...