"ಲಕ್ಷ್ಮಣರಾವ್ ಬರವಣಿಗೆಗೊಂದು ಮಾಂತ್ರಕತೆ ಇರುತ್ತದೆ ಎಂಬುದು ಮತ್ತೊಮ್ಮೆ ಇಲ್ಲಿ ನಿಜವಾಗುತ್ತದೆ. ಆಧುನಿಕ ಜಾನಪದದಂತೆ, ಪಂತುಲು ಸಿನಿಮಾದಂತೆ, ಚಂದಮಾಮದ ಫ್ಯಾಂಟಸಿಯ ಕಥೆಯೊಂದರಂತೆ ಅದ್ಭುತ ರಮ್ಯಗಳ ಸಂಗಮವಾಗಿ ಸಾಗುವ ಕಥೆಯ ಓದುವಿಕೆಯೇ ಒಂದು ಮೋಜಿನ ಕುದುರೆಯ ಸವಾರಿಯ ಸಂತೋಷ-ರೋಚಕತೆಯನ್ನು ಒದಗಿಸುತ್ತದೆ," ಎನ್ನುತ್ತಾರೆ ವಿಜಯೇಂದ್ರ ಪಾಟೀಲ. ಅವರು ಬಿ.ಆರ್.ಲಕ್ಷ್ಮಣರಾವ್ ಅವರ ‘ಎಂಥಾ ಮೋಜಿನ ಕುದುರಿ!’ ಕುರಿತು ಬರೆದ ವಿಮರ್ಶೆ.
ಎಂಥಾ ಮೋಜಿನ ಕುದುರಿ!(ಕಿರು ಕಾದಂಬರಿ)
ಲೇ: ಬಿ.ಆರ್.ಲಕ್ಷ್ಮಣರಾವ್
ಪ್ರಕಾಶಕರು: ಸಪ್ನಾ ಬುಕ್ ಹೌಸ್,ಬೆಂಗಳೂರು
ಪುಟ 88.
ಬೆಲೆ: 60 ರೂ.
ಕಾಲಯಂತ್ರದ ಕಲ್ಪನೆಯ ಹಿನ್ನೆಲೆಯಲ್ಲಿ ಬರೆಯಲ್ಪಟ್ಟ ಈ ಕಿರು ಕಾದಂಬರಿಯ ಓದು ಒಂದು ಅದ್ಭುತ ಮೋಜಿನ ಕುದುರಿಯೇ ಸರಿ.. ಹನ್ನೆರಡಲ್ಲದಿದ್ದರು ಏಳು ಕೇರಿ ತಿರುಗಿಸಿ, ಏಳು ಕೆರೆಯ ನೀರು ಕುಡಿಸಿ ನಮ್ಮ ಕೈ ಬಿಟ್ಟಂತೆ ಮಾಡುತ್ತದೆ. ಆದರೆ ಪೂರ್ತಿ ಕೈ ಬಿಡದೆ ತೀವ್ರ ಅನುಭವದಂತೆ ಕಾಡುತ್ತ ಕೆಲ ದಿನಗಳವರೆಗಾದರು ನಮ್ಮ ಮನದಲ್ಲಿ ಉಳಿದೇ ಬಿಡುತ್ತದೆ...
ಲಕ್ಷ್ಮಣರಾವ್ ಬರವಣಿಗೆಗೊಂದು ಮಾಂತ್ರಕತೆ ಇರುತ್ತದೆ ಎಂಬುದು ಮತ್ತೊಮ್ಮೆ ಇಲ್ಲಿ ನಿಜವಾಗುತ್ತದೆ. ಆಧುನಿಕ ಜಾನಪದದಂತೆ, ಪಂತುಲು ಸಿನಿಮಾದಂತೆ, ಚಂದಮಾಮದ ಫ್ಯಾಂಟಸಿಯ ಕಥೆಯೊಂದರಂತೆ ಅದ್ಭುತ ರಮ್ಯಗಳ ಸಂಗಮವಾಗಿ ಸಾಗುವ ಕಥೆಯ ಓದುವಿಕೆಯೇ ಒಂದು ಮೋಜಿನ ಕುದುರೆಯ ಸವಾರಿಯ ಸಂತೋಷ-ರೋಚಕತೆಯನ್ನು ಒದಗಿಸುತ್ತದೆ. ಜೊತೆಗೆ ಹಲವು ಅಮೂರ್ತ ಸಂತೃಪ್ತಭಾವವನ್ನೂ ನೀಡುತ್ತದೆ.
ಕಾಲ ಹಾಗು ಕಾಮಗಳನ್ನು ಹಿಡಿಯಲಾಗುವುದಿಲ್ಲ. ನಿಲ್ಲಿಸಲೂ ಆಗುವುದಿಲ್ಲ. ಇವೆರಡೂ ಅನಾದಿ ಮತ್ತು ಅನಂತ ಕಾಲದವಾಗಿ, ಬಿಟ್ಟಿರಲಾಗದ ಜೊತೆಯವುಗಳಾಗಿಯೇ ಬಾಳುತ್ತವೆ. ಯಾವ ಕಾಲಕ್ಕೆ ಹೋದರೂ ಅವುಗಳ ಆಟ, ಸೆಳೆತಗಳು ಮತ್ತು ಅವುಗಳನ್ನು ಬೆಂಬತ್ತಿ ಬರುವ ಸಾವು ಅಥವಾ ಅದರ ಭಯ ಇದ್ದೇ ಇರುತ್ತದೆ. ಈ ಕಾಮದ ಸುಪ್ತ ಪ್ರಬಾವ ನಮ್ಮನ್ನು ಅಹಲ್ಯೆಯತ್ತ ಕೂಡ ಸೆಳೆಯುವ ಪರಿ ಮತ್ತು ಅಹಲ್ಯೆಯ ನಿಜವೆಂಬುದು ಕೂಡ ಹೀಗಿದ್ದಿತೇ? ಎಂದು ಚಿಂತಿಸುವಾಗ ಗಾಬರಿಯಾಗುತ್ತದೆ.
ಇರುವ ವರ್ತಮಾನ ಕಾಲದ ಅರ್ಥವೇ ಸರಿಯಾಗಿ ಆಗಿರದಿದ್ದರೂ ಮನುಷ್ಯನಿಗೆ ಭೂತ ಮತ್ತು ಭವಿಷ್ಯತ್ ಕಾಲಗಳ ಬಗೆಗೆ ಅದಮ್ಯ ಕುತೂಹಲ. ಇದು ರಾಮಾಯಣದ ಅಗಸನ ಭೆಟ್ಟಿಯನ್ನು ಮಾಡಿಸುತ್ತದಲ್ಲದೆ ಆ ಅಗಸನಿಗೆ ಹೆಂಡತಿಯ ಮೇಲಿನ ಸಂದೇಹವನ್ನು ಯಾರೂ ಧೇನಿಸದ ರೀತಿಯಲ್ಲಿ "ದೃಢವಾಗಿಸುತ್ತದೆ!" ಭೂತಕಾಲದ ಪಯಣದಲ್ಲಿ ಪ್ರಮೀಳೆ, ಹಿಡಿಂಬೆಯರ ಭೆಟ್ಟಿಯಾದರೆ ಭವಿಷ್ಯದ ನೆಗೆತದಲ್ಲಿ ಹೊಸ ಸಹಸ್ರಮಾನದ ಉದಯ ಕಾಲದಲ್ಲಿ ನ್ಯೂಯಾರ್ಕಿನಲ್ಲಿ ಜಪಾನಿನ ಸೂಸಿಯ ಸಾಂಗತ್ಯ ಸಿಗುತ್ತದೆ!
ಈ ಭೂತ-ಭವಿಷ್ಯಗಳ ಪಯಣದ ಫಲಶ್ರುತಿಯಲ್ಲಿ ಅಂದು ಕೂಡ ಈ ಜಗತ್ತು ಕಾಮದಾಟದಲ್ಲಿ ಮುಳುಗಿತ್ತು, ಮತ್ತು ಮುಂದೆ ಕೂಡ ಅದರಲ್ಲಿಯೇ ಮುಳುಗಿರುತ್ತದೆ; ಎಂಬ ಸಂದೇಶವನ್ನೇನಾದರು ಲೇಖಕರು ಕೊಡಲು ಬಯಸುತ್ತಾರೆಯೇ ಎಂಬ ಸಂದೇಹ ಓದುಗನಿಗೆ ಬಂದರೆ ಆಶ್ಚರ್ಯವಿಲ್ಲ. ಜೊತೆಗೆ, ಈ ಕಾಲದಾಚೆಯ ಕುತೂಹಲ ಕಾಮದ ಮಟ್ಟಿಗೆ ಮಾತ್ರ ಈ ಕಾದಂಬರಿಯಲ್ಲಿ ಪರಿಶೀಲಿಸಲ್ಪಟ್ಟಿದೆಯಲ್ಲವೇ ಎಂಬ ಯೋಚನೆಯೂ ಓದುಗನಲ್ಲಿ ಹುಟ್ಟುತ್ತದೆ... ಆದರೆ ಪ್ರೀತಿಯಲ್ಲಿ ಗಂಡು-ಹೆಣ್ಣುಗಳ ನಿಷ್ಠೆಗೆ ಜೀವ ಉಳಿಸುವ ತಾಕತ್ತಿದೆ ಎಂಬ ಸ್ಪಷ್ಟ ಸೂಚನೆಯನ್ನಂತೂ ಈ ಕಾದಂಬರಿ ಖಂಡಿತ ಒದಗಿಸುತ್ತದೆ.
ಮನುಷ್ಯನಿಗಿರುವ ಕಾಲ ಮೀರುವ ಅದಮ್ಯ ಕುತೂಹಲವನ್ನು ಲಕ್ಷ್ಮಣರಾಯರು ಅವರದೇ ಆದ ವಿಧಾನದಲ್ಲಿ ರಚಿಸಿದ್ದಾರೆ. ಅಂತೆಯೇ ಸಾಕಷ್ಟು ಬಿಸಿ ಬಿಸಿ ವರ್ಣನೆಗಳಿರುವ ಸಂದರ್ಭಗಳ ಸೃಷ್ಟಿಯಾಗಿ ಓದಿಗೆ ರೋಚಕತೆಯ ಬೆಂಬಲ ದೊರಕಿದಂತಾಗಿದೆ..
ಲಕ್ಷ್ಮಣರಾಯರು 'ಇದು ಕೇವಲ ಮನರಂಜನೆಗಾಗಿ ಬರೆದದ್ದು, ಓದುಗರು ಅದರಾಚೆಯದೇನನ್ನೂ ನಿರೀಕ್ಷಿಸಬಾರದು' ಎಂದು ತಮ್ಮ ಮಾತುಗಳಲ್ಲಿ ಬಿನ್ನವಿಸಿಕೊಳ್ಳುತ್ತಾರಾದರೂ ಓದುಗರು ಅವರ ಮಾತನ್ನು ಮೀರಿ ಅದರಾಚೆಯದೂ ಇದೆ ಎಂಬ ನಿರ್ಧಾರಕ್ಕೆ ಬರುವಷ್ಟು ವಸ್ತು,ನಿರೂಪಣೆ ಇದರಲ್ಲಿ ತುಂಬಿ ತುಳುಕಿದೆ..
"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...
"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...
"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...
©2025 Book Brahma Private Limited.