ಅಧಿಕಾರ ಮತ್ತು ಅನುಭೂತಿ 

Date: 03-10-2022

Location: ಬೆಂಗಳೂರು


“ಕಣ್ಣ ಒಳಗೆ ಒಳಗಣ್ಣ ತೆರೆಯುವಾ ದಿವ್ಯಮಾಯೆ”ಯಾಗಿ ಕವಿಗೆ ಒಲಿದ ಈ ಕಾವ್ಯಗಾಯತ್ರಿಯ ಸ್ತುತಿ ಬೇಂದ್ರೆಯವರ ಅನುಭಾವಿಕ ಹೃದಯದ ಅಭಿವ್ಯಕ್ತಿ. ಬೇಂದ್ರೆಯವರ ಕಾವ್ಯದ ನೆಲೆಯನ್ನು ಕಟ್ಟುವಲ್ಲಿ ಇಂಥ ಕವಿತೆಗಳ ಪಾತ್ರ ಹಿರಿದು ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಬೇಂದ್ರೆಯವರ ‘ಗಾಯತ್ರೀ ಸೂಕ್ತ’ ಕವಿತೆ ಬಗ್ಗೆ ಬರೆದಿದ್ದಾರೆ.

ಅಧಿಕಾರಯುತ ಜ್ಞಾನವೆಲ್ಲ ಪುರುಷ ರೂಪಿಯಾದರೆ, ಅನುಭೂತಿಯ ಸ್ಪಂದನವು ಸ್ತ್ರೀರೂಪಿಯಾದುದು. ಜ್ಞಾನಮೀಮಾಂಸೆಯನ್ನು ಕಟ್ಟಿದ ಆಚಾರ್ಯ ಪರಂಪರೆಗಳೆಲ್ಲ ಪುರುಷ ಮಾರ್ಗವಾದರೆ, ಅನುಭಾವದ ಕಾಲುದಾರಿಗಳೆಲ್ಲ ಸ್ತ್ರೀಹೃದಯವಾಗಿ ತೋರುತ್ತದೆ. ಎಂದೂ ‘ಮಾರ್ಗ’ವಾಗಲೆಳಸದ ತಾರ್ಕಿಕ ಕಟ್ಟುಗಳನ್ನು ಮೀರುವ ಈ ದಾರಿಯು ಅಪಾರ ಸೃಜನಶೀಲತೆಯ ಗರ್ಭ. ಎಲ್ಲವನ್ನೂ ಸಿದ್ದ ಸೂತ್ರಗಳಲ್ಲಿ ಹಿಡಿದಿಟ್ಟು ಜ್ಞಾನದ ಅಹಂಕಾರದಲ್ಲಿ ಬೀಗುವ ಪುರುಷ ಪ್ರಯತ್ನಗಳನ್ನು ಸದಾ ಎಣೆಯಿಲ್ಲದಂತೆ ವಿಸ್ತರಿಸುತ್ತಲೇ ಇರುವ ಪ್ರಕೃತಿಯ ಚೈತನ್ಯವು ಲೆಕ್ಕಿಸುವುದೇ ಇಲ್ಲ. ಉದ್ದೇಶ ರಹಿತವಾದ ಈ ಚೈತನ್ಯವನ್ನೇ ಲೀಲೆಯೆನ್ನುವುದು. ಉದ್ದೇಶಗಳನ್ನು ಮೀರಿ ಹರಿಯುವ, ಸದಾ ರೂಪಾಂತರಗೊಳ್ಳುವ, ಮೂಡುವ ಅಡಗುವ ಈ ದೃಶ್ಯಾದೃಶ್ಯಗಳ ಬೆಡಗಿನಲ್ಲಿ ತಾಯಿಯ ರೂಪವನ್ನು ಕಲ್ಪಿಸಿಕೊಳ್ಳುವ ದರ್ಶನ ಪರಂಪರೆಗಳು ನಮ್ಮಲ್ಲಿವೆ. ಈ ಅನುಭೂತಿಯ ಉನ್ಮನಿಯಲ್ಲಿ ಕರಗುವ ಅವಧೂತ ಪರಂಪರೆಯ ಯೋಗಮಾರ್ಗ ಹಾಗೂ ಆರಾಧಿಸುವ ಭಕ್ತಿಮಾರ್ಗಗಳೂ ನಮ್ಮ ಜನಮಾನಸದಲ್ಲಿವೆ. ಇಂಥ ಸ್ತ್ರೀರೂಪಿ ಸೃಷ್ಟಿಯ ಲಯಕ್ಕೆ ಸ್ಪಂದಿಸಿದವರು ಬೇಂದ್ರೆ. ಅವರ ‘ಗಾಯತ್ರೀಸೂಕ್ತ’, ‘ಸರಸ್ವತೀಸೂಕ್ತ’ , ದೇವಿ ಲಲಿತೆಯ ಕುರಿತಾದ ‘ಯಾವ ಬಾನುಲಿ ಕೇಂದ್ರದಲ್ಲಿ’ ಮುಂತಾದ ಕವಿತೆಗಳು ವೇದೋಕ್ತ ಮಾತೃಶಕ್ತಿಗಳ ಆರಾಧನೆಯಾದರೆ, ‘ಯಾವೂರಾಕಿ ನೀ ಮಾಯಕಾರ್ತಿ’ ‘ಮಾಯಾ ಕಿನ್ನರಿ’ ರೀತಿಯ ಪದ್ಯಗಳು ಜನಪದ ಸಂವೇದನೆಯಲ್ಲಿ ಅವಳ ಬೆಡಗನ್ನು ಕಾಣುವ ರಚನೆಗಳು.

ಸೃಷ್ಟಿಯ ಅಗಾಧತೆಯನ್ನು, ಅದರ ವಿರಾಟ್ ಸ್ವರೂಪವನ್ನು ಬೇಂದ್ರೆಯವರ ‘ಗಾಯತ್ರೀ ಸೂಕ್ತ’ ಕವಿತೆ ಕಟ್ಟಿಕೊಟ್ಟ ಪರಿ ಅದ್ಭುತವಾಗಿದೆ. ಭವ್ಯ ಪ್ರತಿಮೆಗಳು, ಗುಂಗು ಹಿಡಿಸುವ ನಾದಮಯತೆ, ಅಪೂರ್ವವಾದ ಅನುಭವವನ್ನು ನಿರ್ಮಿಸುತ್ತವೆ. ಸೃಷ್ಟಿಯ ಲಯಗಳು ಮನುಷ್ಯನ ಬುದ್ದಿಯಾಚೆ ಇರುವುದರಿಂದ ಅದೊಂದು ಲೀಲೆಯಾಗಿ ಕಾಣುತ್ತದೆ. ಅನೂಭೂತಿಯ ಉನ್ಮನಿಯಲ್ಲಿ ಅದರೊಂದಿಗೆ ಮಿಡಿಯುವ ಕವಿ ತನ್ನನ್ನು ಮೀರಿದ ಆ ಚೈತನ್ಯಕ್ಕೆ ಶಿಶುವಾಗುತ್ತಾನೆ. ಮನುಷ್ಯರ ಸೀಮಿತ ತಿಳುವಳಿಕೆಗಿಂತ ಘನವಾದುದು ಸೃಷ್ಟಿಯಲ್ಲಿದೆ ಎಂಬ ಅರಿವೇ ಅದನ್ನು ಆರಾಧಿಸುವಂತೆ ಮಾಡುತ್ತದೆ. ಒಳಗಣ್ಣಿಗೆ ಕಾಣುವ ಈ ಕಾವ್ಯ ತನ್ನ ನಾದಶಕ್ತಿ ಚಿತ್ರಕ ಶಕ್ತಿಯಿಂದಲೂ ಬೆರಗುಮೂಡಿಸುತ್ತದೆ.

ಲಯದ ಬಸಿರ ಬಯಲಲ್ಲಿ ದೇವ-ಭವ ಬೀಜಬಿತ್ತಿದಾಕೆ
ಮೂಕುಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ, ತಾನಾರಿದಾತನಿಗೆ ಹೇಗೊ ರುಚಿಸಿದಾಕೆ
ಸಾಕ್ಷಿ ಪುರುಷನಾ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ

ಸೃಷ್ಟಿ-ಲಯಗಳ ಬೃಹತ್ ಜಾಲವನ್ನೇ ತನ್ನ ಬಸಿರಲ್ಲಿ ಜೋಪಾನ ಮಾಡುವ ಮಹಾಮಾತೆ ಆಕೆ.ಭವದ ನೆಲದಲ್ಲಿ ದೇವಬೀಜವನ್ನು ಬಿತ್ತುವ, ಪ್ರಳಯದ ಗರ್ಭವನ್ನೇ ಸೃಷ್ಟಿಯ ಹೊಲವಾಗಿಸುವ ಮಾಂತ್ರಿಕಳು ಆಕೆ.ಆಕೆಯ ಫಲವಂತಿಕೆಗೆ ಸಾಟಿಯಿಲ್ಲ.ಹೂವಿನ ಮೊಗ್ಗಿನಲ್ಲಿ ಜೇನಾಗಿ ತಲೆಯೆತ್ತುವ ಆಕೆ ಆಕಾರ ಪ್ರಪಂಚದೊಳಗೆ ರಸ-ರುಚಿಗಳನ್ನು ಇತ್ತವಳು. ಆ ಮೂಲಕ ಪ್ರಪಂಚವನ್ನು ಸೃಜಿಸಿದವಳು. ನೋಡುವ, ಮೂಸುವ, ಮುಟ್ಟುವ, ಆಸ್ವಾದಿಸುವ ಬಯಕೆಗಳನ್ನೂ ಅವಳೇ ಕೊಟ್ಟವಳು. ಇಂದ್ರಿಯಗಳೆಲ್ಲ ಅವಳ ಸೃಜನೆಯನ್ನು ಅನುಭೂತಿಯಾಗಿ ಪಡೆವ ಲೌಕಿಕ ಉಪಕರಣಗಳು.ಸಾಕ್ಷಿಪ್ರಜ್ಞೆಯಂತೆ ಇರುವ ಪರಮಪುರುಷನ ಶೂನ್ಯವನ್ನು, ಮೌನವನ್ನು, ಬಣ್ಣ ಆಕಾರಗಳಿಂದಲೂ ರಸ ರುಚಿಗಳಿಂದಲೂ ಪೂರ್ಣಗೊಳಿಸುವ ಚೇತನವೇ ಅವಳು. ಆದ್ದರಿಂದಲೇ ಸಕಲ ಕಲೆಗಳ ಮೂಲ ಸ್ರೋತವೇ ಅವಳು.

ಜಡದ ಪ್ರಾನಗತಿ ಜಡಿದು ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು ಮಣ ಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾಕೆ

ಅವಳು ಸ್ಪರ್ಷಿಸಿದಲ್ಲೆಲ್ಲ ಜಡದ ಮಾತೇ ಇಲ್ಲ!. ಅವಳು ಎಲ್ಲ ಜೀವಂತಿಕೆಯ ಮೂಲಧಾತು. ಇಡೀ ಸೃಷ್ಟಿಯನ್ನೇ ಸ್ವರಮೇಳವಾಗಿ ಪರಿವರ್ತಿಸುವ ಕೌಶಲ ಆಕೆಯದು. ಆಟಿಲ ಹೆಣಿಗೆಯಂತೆ ತೋರುವ ಬ್ರಹ್ಮಾಂಡಕ್ಕೂ ಒಂದು ಆಂತರಿಕ ಲಯವಿದೆ. ಅದು ಬ್ರಹ್ಮಾಂಡವನ್ನು ಚದುರಿಹೋಗದಂತೆ, ನಾಶವಾಗದಂತೆ ಹಿಡಿದಿಟ್ಟಿದೆ. ಈ ಜೀವಲಯದ ಒಡತಿ ಅವಳು. ಬಯಲ ಹೊತ್ತಿಗೆಯಲ್ಲಿ ಕೋಟ್ಯಾಂತರ ನಕ್ಷತ್ರ ನೀಹಾರಿಕೆಗಳನ್ನೇ ಅಕ್ಷರಗಳನ್ನಾಗಿಸಿ ಲೀಲೆಯಲಿ ಓದಬಲ್ಲ ಚತುರಳು ಅವಳು. ಪಿಂಡ ಬ್ರಹ್ಮಾಂಡಗಳನ್ನೇಲ್ಲ ಏಕಸೂತ್ರದಲ್ಲಿ ಪೋಣಿಸಿ ಕೊರಳ ಮಾಲೆಯಾಗಿಸಿಕೊಂಡ ಸೌಂದರ್ಯಾನುಭೂತಿ ಅವಳು.ಸೃಷ್ಟಿಯ ಚಲನೆಯನ್ನೇ ತಾಳವಾಗಿಸಿ ಹಾಡಬಲ್ಲ ಜೀವಲಹರಿ ಅವಳು.ಸಕಲ ಕಲೆಗಳ ಹೃದಯವೇ ಆದ ಆಕೆ ಯೋಗ ಭೋಗಗಳೆರಡರಲ್ಲೂ ಇರುವವಳು. ಜಗತ್ತಿನ ಸ್ಥೂಲ ರೂಪವನ್ನು ನಾವು ಭೋಗಿಗಳಾಗಿ ಅನುಭವಿಸಿದರೆ, ಸೂಕ್ಷ್ಮರೂಪವನ್ನು ಅನುಭವಿಸಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಯೋಗವು ದೇಹದ ಮೂಲಕವೇ ಪ್ರಜ್ಞೆಯ ಪ್ರವಾಹವನ್ನು ಸೇರಿಹೋಗುವ ಸಾಧನೆ. ಆದ್ದರಿಂದ ಕಲಾವಿದರಿಗೂ ಸಾಧಕರಿಗೂ ಏಕಕಾಲದಲ್ಲಿ ಪ್ರಿಯವಾಗುವವಳು ಈ ಸ್ತ್ರೀರೂಪಿ ಶಕ್ತಿ.ವೇದೋಕ್ತ ಸಾಂಕೇತಿಕ ಸಂಜ್ಞೆಗಳು, ಪುರಾಣದ ರಮ್ಯ ಭವ್ಯ ಕಲ್ಪನೆಗಳು ಇದನ್ನು ಬಗೆಬಗೆಯಲ್ಲಿ ಪ್ರತಿಮಿಸಿವೆ. ಸಾಂಖ್ಯ ಹಾಗೂ ಶಾಕ್ತ ಪರಂಪರೆಗಳ ದರ್ಶನವೂ ಅವಳ ಶಕ್ತಿ ಸ್ವರೂಪವನ್ನು ಕಾಣಲೆತ್ನಿಸಿವೆ.

ಸಾಂಖ್ಯದರ್ಶನವು ಭಾರತೀಯ ದರ್ಶನಗಳಲ್ಲಿ ಅತ್ಯಂತ ಪ್ರಾಚೀನವೂ ಮಹತ್ವಪೂರ್ಣವೂ ಆಗಿದೆ. ಛಾಂದೋಗ್ಯ, ಕಠ, ಪ್ರಶ್ನ, ಶ್ವೇತಾಶ್ವತರ ಮುಂತಾದ ಉಪನಿಷತ್ತುಗಳಲ್ಲಿ ಗೀತೆಯಲ್ಲಿ, ಮಹಾಭಾರತದಲ್ಲಿ, ಸ್ಮøತಿ ಪುರಾಣಗಳಲ್ಲಿ, ವೇದಾಂತ ಸೂತ್ರಗಳಲ್ಲಿ ಸಾಂಖ್ಯದ ಉಲ್ಲೇಖವಿದೆ. ವಿಶ್ವದ ಉತ್ಪತ್ತಿ ಹಾಗೂ ವಿಕಾಸ ಕ್ರಮವನ್ನು ಸಾಂಖ್ಯರು ವಿವರಿಸುವುದು ಪ್ರಕೃತಿ ಪುರುಷ ತತ್ವಗಳ ಮೂಲಕ. ಪ್ರಕೃತಿಯು ವಸ್ತು ಪ್ರಪಂಚಕ್ಕೆ ಮೂಲವಾದ ಕಾರಣ ವ್ಯಕ್ತ ಪ್ರಪಂಚವೆಲ್ಲವೂ ಪ್ರಕೃತಿಯಲ್ಲೇ ಅಡಗಿದೆ. ಪ್ರಕೃತಿ ತತ್ವವು ಪ್ರಪಂಚದ ಮೊದಲ ಹಾಗೂ ಮುಖ್ಯ ತತ್ವವಾದುದರಿಂದ ಪ್ರಧಾನ ತತ್ವವಾಗಿದೆ. ಸದಾ ಕಾಲವೂ ಕ್ರಿಯಾಶೀಲವಾಗಿದ್ದು ಅಪಾರ ಶಕ್ತಿಯ ಭಂಡಾರವಾದ್ದರಿಂದ ‘ಶಕ್ತಿ’ ಎನಿಸಿಕೊಂಡಿದೆ. ಪ್ರಕೃತಿಯು ಅಕಾರಣ, ಏಕ, ಸ್ವತಂತ್ರ ಹಾಗೂ ಶಾಶ್ವತ. ಅದಕ್ಕೆ ಉತ್ಪತ್ತಿ ನಾಶಗಳಿಲ್ಲ. ಪುರುಷ ಸಂಯೋಗವು ಸೃಷ್ಟಿಯ ಪ್ರಕಟ ಈಕರಣಕ್ಕೆ ಕಾರಣವಾಗುತ್ತದೆ ಎಂಬುದು ಸಾಂಖ್ಯದ ನಿಲುವು. ಗಾಯತ್ರೀಸೂಕ್ತವು ಇದನ್ನೆಲ್ಲ ಕಾವ್ಯದ ಹೃದಯದಲ್ಲಿ ಅಚ್ಚೊತ್ತಿದ ಬಗೆ ಅನನ್ಯ.

ಚತುರ್ಮುಖನ ನಾಲಗೆಯ ಹಾಸಿ, ತುಟಿ ದಿಂಬು ಮಾಡಿದಾಕೆ
ವತ್ಸ ಲಾಂಛನದ ಹೃದಯ ಕಮಲದಲಿ ಮನೆಯ ಹೂಡಿದಾಕೆ
ಹರನಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ
ಹೀಗೆ ಕುಣ ಯೆ ಆನಂದ ಲಹರಿ ಈ ಜೀವ ಸೇರಿದಾಕೆ

ಬ್ರಹ್ಮನ ನಾಲಗೆಯಲ್ಲಿ ಪವಡಿಸಿದ ವಾಣಿಯಾಗಿ, ವಿಷ್ಣುವಿನ ಹೃದಯದಲ್ಲಿ ಸ್ಥಿತಳಾದ ಲಕ್ಷ್ಮಿಯಾಗಿ, ಶಿವನ ಅರ್ಧದೇಃವೇ ಆದ ಶಿವೆಯಾಗಿ, ತಲೆಯನೇರಿದ ಗಂಗೆಯೆಂಬ ಪ್ರಜ್ಞಾಪ್ರವಾಹವಾಗಿ ಶಕ್ತಿಯಿದ್ದಾಳೆ. ಎಲ್ಲ ಕ್ರಿಯೆಗಳ ಚಾಲಕ ಶಕ್ತಿಯಾದ ಸ್ತ್ರೀತ್ವದ ಆರಾಧನೆಯಿಲ್ಲಿ ಕಾಣುತ್ತದೆ. ಈ ಕ್ರಿಯಾಶಕ್ತಿಯ ಲಯ ಲಾಸ್ಯಗಳನ್ನು, ಅವಳಲ್ಲಿ ಅಡಗಿರುವ ಆನಂದಾನುಭೂತಿಯ ಉನ್ಮನಿಯನ್ನು ಕವಿ ಬೆರಗಿನಿಂದ ಎದುರುಗೊಳ್ಳುತ್ತಾರೆ. ಈ ಆನಂದಾನುಭೂತಿಯನ್ನೇ ಯೋಗಿಗಳು ಹಂಬಲಿಸಿದ್ದು. ತಪದಲ್ಲಿ ಸಾಕ್ಷಾತ್ಕರಿಸಿಕೊಂಡದ್ದು. ಸೃಷ್ಟಿಯ ಫಲವಂತಿಕೆ ಹಾಗೂ ಸಲಹುವ ಅದಮ್ಯ ವಾತ್ಸಲ್ಯಬಾವದಲ್ಲೂ ಅವಳೇ ನೆಲೆಯಾಗಿರುವುದು. ಆದ್ದರಿಂದಲೇ ಕೀಟಗಳಲ್ಲೂ, ಪ್ರಾಣಿಗಳಲ್ಲೂ, ಸಕಲ ಚರಾಚರದ ಹೃದಯದಲ್ಲೂ ಅವಳಿದ್ದಾಳೆ. ಸೃಷ್ಟಿ ಕಾಮವಾಗಿ, ಪೊರೆವ ಒಲವಾಗಿ, ವಿಕಾಸವಾಗುವ ಜೀವಮಿಡಿತವಾಗಿ ಲೌಕಿಕ ಬದುಕಿಗೆ ಆಧಾರವಾಗಿದ್ದಾಳೆ. ಅಲೌಕಿಕ ಉನ್ಮನಿಗೂ ನೆಲೆಯಾಗಿದ್ದಾಳೆ. ಈಕೆಯೇ ಆತ್ಮಾನುಭೂತಿಯ ತಿರುಳು. ಶಿವತ್ವದ ಶಿಖರ ಪ್ರಜ್ಞೆ. ಅಭಯವೀವ ತಾಯಿ. “ಕಣ್ಣ ಒಳಗೆ ಒಳಗಣ್ಣ ತೆರೆಯುವಾ ದಿವ್ಯಮಾಯೆ”ಯಾಗಿ ಕವಿಗೆ ಒಲಿದ ಈ ಕಾವ್ಯಗಾಯತ್ರಿಯ ಸ್ತುತಿ ಬೇಂದ್ರೆಯವರ ಅನುಭಾವಿಕ ಹೃದಯದ ಅಭಿವ್ಯಕ್ತಿ. ಬೇಂದ್ರೆಯವರ ಕಾವ್ಯದ ನೆಲೆಯನ್ನು ಕಟ್ಟುವಲ್ಲಿ ಇಂಥ ಕವಿತೆಗಳ ಪಾತ್ರ ಹಿರಿದು. ಬೇಂದ್ರೆಯವರು 1943ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಗಾಯತ್ರೀಸೂಕ್ತದಿಂದಲೇ ಆರಂಭಿಸಿದರು. ಅವರ ಮಾತೃಪ್ರಜ್ಞೆಯ ಹಿಂದಿರುವ ನೆಲೆಗಳ ಅನನ್ಯ ಭಂಡಾರವನ್ನು ಹುಡುಕುತ್ತಹೋದಂತೆ ತೆರೆದುಕೊಳ್ಳುತ್ತ ಹೋಗುವ ಸೋಜಿಗಗಳಲ್ಲಿ ಈ ಕವಿತೆಯೂ ಒಂದು.

-ಡಾ. ಗೀತಾ ವಸಂತ

ಈ ಅಂಕಣದ ಹಿಂದಿನ ಬರೆಹಗಳು:
ಹಾಲಿನ ಬಟ್ಟಲುಗಳಲ್ಲ; ಮಾಂಸದ ಒಟ್ಟಿಲುಗಳಲ್ಲ
ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ’
ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ’

ಆಳವಾಗಿ ಕದಲಿಸುವ ‘ಬೀಜ’ಪ್ರಶ್ನೆಗಳು
ಸ್ತ್ರೀಲೋಕ
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...