ಆಧುನಿಕ ಭಾರತೀಯ ಸಾಹಿತ್ಯದ ಪ್ರಖ್ಯಾತ ಲೇಖಕ ಶಂಖ ಘೋಷ್ ಇನ್ನಿಲ್ಲ

Date: 21-04-2021

Location: ಬೆಂಗಳೂರು


ಕೋಲ್ಕತ್ತಾ: ಬೆಂಗಾಲಿ ಭಾಷೆಯ ಪ್ರಖ್ಯಾತ ಕವಿ, ವಿಮರ್ಶಕ, ಸಾಹಿತಿ ಶಂಖ ಘೋಷ್(89) ಕೋವಿಡ್ ನಿಂದಾಗಿ 21 ಏಪ್ರಿಲ್ 2021ರಂದು ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಆಧುನಿಕ ಭಾರತೀಯ ಸಾಹಿತ್ಯದ ಪ್ರಖ್ಯಾತ ಬರಹಗಾರರಲ್ಲಿ ಒಬ್ಬರಾಗಿದ್ದ ಶಂಖ ಘೋಷ್ ನಿಧನ ಭಾರತೀಯ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸಂತಾಪ ವ್ಯಕ್ತಪಡಿಸಿದೆ.

ಐದು ದಶಕಗಳ ಕಾಲ ಬಂಗಾಳಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಂಖ ಘೋಷ್ ಅವರು 1932 ಫೆಬ್ರವರಿ 5ರಂದು ತ್ರಿಪುರದ (ಈಗಿನ ಬಾಂಗ್ಲಾದೇಶದ) ಚಾಂದಾಪುರದಲ್ಲಿ ಜನಿಸಿದರು. 1951ರಲ್ಲಿ ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಿಂದ ಬಂಗಾಳಿ ಭಾಷೆಯಲ್ಲಿ ಕಲಾ ಪದವಿಯನ್ನು ಪೂರ್ಣಗೊಳಿಸಿದ ಅವರು 1954ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಆನಂತರ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಂಡ ಘೋಷ್ ಬಂಗಾಬಸಿ ಕಾಲೇಜು, ಸಿಟಿ ಕಾಲೇಜು (ಎಲ್ಲಾ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ) ಮತ್ತು ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಜಾದವ್‌ಪುರ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು 1992 ರಲ್ಲಿ ನಿವೃತ್ತರಾದರು. ಆನಂತರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಅವರು ಹಲವು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾವ್ಯ, ವಿಮರ್ಶೆ ಸೇರಿದಂತೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು 2016 ರಲ್ಲಿ ಜ್ಞಾನಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಅವರ ಸಾಹಿತ್ಯ ಸೇವೆಗಾಗಿ 1977ರಲ್ಲಿ ನರಸಿಂಗ್ ದಾಸ್ ಪುರಸ್ಕಾರ, 1977ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1989ರಲ್ಲಿ ರವೀಂದ್ರ ಪುರಸ್ಕಾರ, ಸರಸ್ವತಿ ಸನ್ಮಾನ ಸೇರಿದಂತೆ ಹಲವು ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಂಖ ಘೋಷ್ ಅವರ ನಿಧನಕ್ಕೆ ಭಾರತೀಯ ಸಾಹಿತ್ಯ ಲೋಕದ ಗಣ್ಯರು ಸಂತಾಪ ಸೂಚಿಸಿದ್ದಾರೆ.

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...