ಆಧುನಿಕ ಲೋಕದ ಆತ್ಮಾವಲೋಕನ Made In Heaven (Indian Romantic Drama)

Date: 20-11-2021

Location: ಬೆಂಗಳೂರು


‘ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ರಾಜಮನೆತನದವರಿಗೆ ಮದುವೆಯೆನ್ನುವುದು ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುವ ಸಮಾರಂಭವಾದರೆ, ಶ್ರಮಿಕ ವರ್ಗದವರಿಗೆ ವಿಜೃಂಭಣೆಯ ಮದುವೆಯೆನ್ನುವುದು ಬದುಕಿನ ಅತಿದೊಡ್ಡ ಕನಸು’ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ‘ಬೆಳ್ಳಕ್ಕಿ ಸಾಲು’ ಅಂಕಣದಲ್ಲಿ Made In Heaven ಎಂಬ ಹಿಂದಿ ವೆಬ್ ಸರಣಿಯ ಕುರಿತು ವಿಶ್ಲೇಷಿಸಿದ್ದಾರೆ.

ಸ್ವರ್ಗ ಎನ್ನುವ ಕಲ್ಪನೆಯಲ್ಲಿಯೇ ಒಂದು ತೆರನಾದ ಆಹ್ಲಾದವಿದೆ; ಅದೊಂದು ಪರಮಾನಂದದ ಸ್ಥಿತಿ. ಕಣ್ಣಿಗೆ ಕಾಣದೆಯೂ, ಸ್ಪರ್ಶಕ್ಕೆ ಸಿಕ್ಕದೆಯೂ ಆನಂದದ ಅನುಭವವನ್ನು ನೀಡುವ ಕೆಲವೇ ಕೆಲವು ಅಪರೂಪದ ಸಂಗತಿಗಳಲ್ಲಿ ಸ್ವರ್ಗವೂ ಒಂದು. ಬದುಕು ಮುಗಿದುಹೋದಮೇಲೆ ಸ್ವರ್ಗವನ್ನೇ ಸೇರುತ್ತೇವೆ ಎನ್ನುವುದು ಖಾತ್ರಿಯಿಲ್ಲವೆನ್ನುವ ಕಾರಣಕ್ಕೇ ಇರಬೇಕು, ಬದುಕನ್ನೇ ಸ್ವರ್ಗವನ್ನಾಗಿಸಿಕೊಳ್ಳುವ ಹಂಬಲ ಎಲ್ಲರದ್ದೂ. ಆಸ್ತಿ, ಅಂತಸ್ತು, ಸ್ವಾತಂತ್ರ್ಯ, ಸಾಂಗತ್ಯ, ಸಂಬಂಧಗಳೆಲ್ಲವೂ ಆ ಹಂಬಲಕ್ಕೊಂದು ವಾಸ್ತವರೂಪ ಒದಗಿಸುವ ಸಾಧನಗಳು. ಒಂದು ಪರಿಕಲ್ಪಿತ ಪರಿಧಿಯೊಳಗಿದ್ದೂ ಬದುಕುಗಳನ್ನು ನಿಗ್ರಹಿಸುವ ಈ ಸ್ವರ್ಗದ ಪರಿಕಲ್ಪನೆ ಸುಲಭದಲ್ಲಿ ಅಂದಾಜಿಗೆ ಸಿಗುವಂಥದ್ದಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳಲೆಂದು ಸುಖ-ಸವಲತ್ತುಗಳನ್ನು ತ್ಯಾಗ ಮಾಡುವವರು, ನೆಮ್ಮದಿಯ ಬದುಕಿಗಾಗಿ ಸಂಬಂಧಗಳನ್ನು ಬಿಟ್ಟುಕೊಡುವವರು, ಸ್ವಾತಂತ್ರ್ಯಕ್ಕಾಗಿ ಹಂಬಲಿಸುವವರು, ಬಂಧನದಲ್ಲಿಯೇ ಸುಖ ಕಾಣುವವರು ಎಲ್ಲರನ್ನೂ ಒಟ್ಟಿಗೇ ತಿರುಗಿಸುವ ನೆಲದ ದೃಷ್ಟಿ ಮಾತ್ರ ಸದಾ ಸ್ವರ್ಗದೆಡೆಗೆ! ಹಾಗೆ ಸಂಬಂಧಗಳ ಮುಖಾಂತರ ಸ್ವರ್ಗವನ್ನು ಹುಡುಕಹೊರಟವರ ಕಥಾಸರಣಿಯೇ Made In Heaven.      

ಅವರವರ ಜೀವನದೃಷ್ಟಿಗೆ ಅನುಗುಣವಾಗಿ, ಅನುಕೂಲಕ್ಕೆ ತಕ್ಕಂತೆ ಹುಟ್ಟಿಕೊಳ್ಳುವ ಸಂಬಂಧಗಳು ಪರಿಪೂರ್ಣತೆಯನ್ನು ಪಡೆದುಕೊಳ್ಳುವುದು ಮದುವೆಯ ಮೂಲಕ. ಮದುವೆ ಎನ್ನುವುದು ಮನುಷ್ಯಜೀವನದ ಮಹತ್ತರವಾದ ಘಟ್ಟ. ಎಂತಹ ಪರಿಸ್ಥಿತಿಯಲ್ಲಿಯೂ ಜೀವನಸಂಗಾತಿಯ ಹುಡುಕಾಟ, ಎಷ್ಟೇ ಏಳುಬೀಳುಗಳಿದ್ದರೂ ಮದುವೆಯನ್ನು ಉಳಿಸಿಕೊಳ್ಳಬೇಕೆನ್ನುವ ಆಶಯವೇ ಮನುಷ್ಯರನ್ನು ಆರೋಗ್ಯಕರವಾದ ಸಾಮಾಜಿಕ ಚೌಕಟ್ಟಿನಲ್ಲಿ ಬಂಧಿಸಿಡುತ್ತದೆ. ಆ ಬಂಧನದಿಂದ ಹೊರಗುಳಿದು ತನ್ನನ್ನು ತಾನು ಕಂಡುಕೊಳ್ಳುವ ಹಂಬಲ ಕೆಲವರದ್ದಾದರೆ, ಬಂಧನಗಳಿಲ್ಲದೇ ಬದುಕು ಸುಂದರವಾಗಲಾರದು ಎನ್ನುವ ನಂಬಿಕೆ ಹಲವಾರು ಜನರದು. ತಪ್ಪು-ಸರಿಗಳ ಲೆಕ್ಕಾಚಾರದಲ್ಲಿ ಪ್ರಪಂಚದ ಆಗುಹೋಗುಗಳನ್ನು ನಿರ್ಧರಿಸುವ, ನೀತಿ-ನಿಯಮಗಳ ಚೌಕಟ್ಟಿನಲ್ಲಿ ಸಂಬಂಧಗಳನ್ನು ಹಿಡಿದಿಡುವ ಕಾಲಘಟ್ಟವನ್ನು ದಾಟಿ ಬಂದಿರುವುದು ನಿಜವೇ ಆದರೂ ಮದುವೆಗಳ ಮಹತ್ವ ಕಡಿಮೆಯಾಗಿಲ್ಲ; ಮದುವೆಯ ಹಿಂದೊಂದು ದೈವಿಕ ಶಕ್ತಿಯ ಪಾತ್ರವಿದೆ ಎನ್ನುವ ನಂಬಿಕೆಗೆ ಚ್ಯುತಿ ಬಂದಿಲ್ಲ. ಜಾತಿ, ಧರ್ಮ, ಅಂತಸ್ತು, ವಯಸ್ಸು ಎಲ್ಲವನ್ನೂ ಮೀರಿ ಮದುವೆಯಲ್ಲಿ ತಮ್ಮ ಪ್ರೀತಿಯ ಸಾರ್ಥಕತೆಯನ್ನು ಕಂಡುಕೊಳ್ಳುವ ಪ್ರೇಮಿಗಳ ಆತ್ಮವಿಶ್ವಾಸವೆಂದೂ ಜಗತ್ತಿನಿಂದ ಮರೆಯಾಗಿಲ್ಲ.      

Made In Heaven ಎನ್ನುವುದೊಂದು ಮದುವೆಗಳನ್ನು ಆಯೋಜಿಸುವ ಸಂಸ್ಥೆ. ಮದುವೆ ಮಂಟಪಕ್ಕೆ ಉಪಯೋಗಿಸುವ ಹೂವಿನ ಬಣ್ಣದಿಂದ ಹಿಡಿದು ಅತಿಥಿಗಳಿಗೆ ಕೊಡುವ ಉಡುಗೊರೆಯವರೆಗೆ ಎಲ್ಲ ಕಾರ್ಯಭಾರವನ್ನು ಹೊರುವ ಈ ಸಂಸ್ಥೆಯ ಸಂಸ್ಥಾಪಕರ, ಕೆಲಸಗಾರರ ಬದುಕುಗಳು ಚಲ್ಲಾಪಿಲ್ಲಿಯಾಗಿವೆ; ಬಡತನ, ಸಾಲ, ವಿಚ್ಛೇದನ, ಸಲಿಂಗಕಾಮ, ವಿವಾಹೇತರ ಸಂಬಂಧ ಇತ್ಯಾದಿ ವೈಯಕ್ತಿಕ ತೊಡಕುಗಳ ನಡುವೆಯೇ ಬೇರೆಯವರ ಮದುವೆಗಳನ್ನು ಸುರಳಿತವಾಗಿ ನೆರವೇರಿಸುವ ಜವಾಬ್ದಾರಿ ಅವರ ಹೆಗಲ ಮೇಲಿದೆ. ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತ, ಆಗಾಗ ಎದುರಾಗುವ ನೈತಿಕ ಸವಾಲುಗಳನ್ನು ಸ್ವೀಕರಿಸುತ್ತ, ನಿಗದಿಯಾದ ಮದುವೆಗಳ ಜವಾಬ್ದಾರಿಯನ್ನು ನಾಜೂಕಾಗಿ ನಿಭಾಯಿಸುತ್ತ ಹಂತಹಂತವಾಗಿ ಬೆಳೆಯುತ್ತಿರುವ ಈ ಸಂಸ್ಥೆ ಎಲ್ಲ ಆಡಂಬರ-ಅದ್ಧೂರಿತನಗಳ ಜತೆಯಲ್ಲಿಯೇ ಮದುವೆಯೊಂದರ ಸೂಕ್ಷ್ಮತೆಯನ್ನು ಸಂಭಾಳಿಸಲು ಹೆಣಗಾಡುತ್ತಿದೆ; ಹೆಜ್ಜೆಹೆಜ್ಜೆಗೂ ಎದುರಾಗುವ ಸವಾಲುಗಳ ಬೆನ್ನಲ್ಲಿಯೇ ಕೇವಲ ವ್ಯಾವಹಾರಿಕ ಹೊಂದಾಣಿಕೆಗಳಾಗಿ ಅಸ್ತಿತ್ವ ಕಂಡುಕೊಳ್ಳಲು ಹೊರಟಿರುವ ಮದುವೆಗಳೊಂದಿಗೆ ಮುಖಾಮುಖಿಯಾಗುತ್ತ, ತಲ್ಲಣಗಳನ್ನೆಲ್ಲ ಅಲಂಕಾರದ ಅಡಿಯಲ್ಲಿ ಬಚ್ಚಿಟ್ಟು ಅಸಹಜ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡ ಆಧುನಿಕತೆಯೊಂದರ ಆವಿರ್ಭಾವದಂತಿದೆ.

‘Made In Heaven’ ಸರಣಿಯ ಹಾಡು:

ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ರಾಜಮನೆತನದವರಿಗೆ ಮದುವೆಯೆನ್ನುವುದು ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುವ ಸಮಾರಂಭವಾದರೆ, ಶ್ರಮಿಕ ವರ್ಗದವರಿಗೆ ವಿಜೃಂಭಣೆಯ ಮದುವೆಯೆನ್ನುವುದು ಬದುಕಿನ ಅತಿದೊಡ್ಡ ಕನಸು. ಜೀವನಮಟ್ಟ ಅಥವಾ ಜೀವನದ ಗುಣಮಟ್ಟ ಯಾವುದೇ ಇರಲಿ, ಆಡಂಬರದ ವಿವಾಹವನ್ನು ಅಲ್ಲಗಳೆಯುವವರ ಸಂಖ್ಯೆ ಕಡಿಮೆ. ಪಾರಂಪರ‍್ಯ ವಿಧಿ-ವಿಧಾನಗಳನ್ನು ಅಲ್ಲಗಳೆಯುವವರಿಗೂ, ಸಾಂಪ್ರದಾಯಿಕ ವಿವಾಹ ಪದ್ಧತಿಗಳನ್ನು ಇಷ್ಟಪಡದವರಿಗೂ ಅದ್ಧೂರಿಯಾದ ಸತ್ಕಾರಕೂಟದ ಆಕರ್ಷಣೆಯಿಂದ ಬಿಡುಗಡೆ ಸಿಕ್ಕಿಲ್ಲ. ಮದುವೆಯೆನ್ನುವುದು ತನ್ನ ಘನತೆಯ ಗುರುತು ಎನ್ನುವ ಮನಸ್ಥಿತಿ ಅತಿರೇಕಕ್ಕೆ ಹೋದಂತೆಲ್ಲ ಮದುವೆಗಳ ನೈಜಸ್ವರೂಪವೇ ಬದಲಾಗುತ್ತ ಹೋಗುವುದು ಸಹಜಕ್ರಿಯೆ. ವಿವಾಹವೆನ್ನುವುದು ಸ್ವರ್ಗದಲ್ಲೇ ನಿಶ್ಚಯಿಸಲ್ಪಡುವ ಎರಡು ಆತ್ಮಗಳ ಪವಿತ್ರ ಬಂಧನ ಎನ್ನುವ ನಂಬಿಕೆಗೆ ಜಗತ್ತು ಬದ್ಧವಾಗಿದೆಯಾದರೂ, ಆಧುನಿಕ ಮದುವೆಗಳ ನಿಜಸ್ಥಿತಿ ಕೊಂಚ ಬೇರೆಯೇ ಆಗಿದೆ. ಸಮಾಜದಲ್ಲಿ ವಧು-ವರರ ಸ್ಥಾನಮಾನಗಳೇನು ಎನ್ನುವ ಆಧಾರದ ಮೇಲೆ ನಿಶ್ಚಯಿಸಲ್ಪಡುವ ಮದುವೆಗಳಲ್ಲಿ ಆಂತರಿಕ ಮಿಲನವೆನ್ನುವುದು ಸಾಧ್ಯವಾದೀತೇ! ಮದುವೆಯೆನ್ನುವ ಬಂಧನದೊಳಗಿದ್ದೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಆಧುನಿಕ ಮನಸ್ಸುಗಳಿಗೆ ಸಾಧ್ಯವಾಗಿದೆಯೇ ಅಥವಾ ಹೊರಗಿನವರಾಗಿಯೇ ಉಳಿದುಹೋಗಿದ್ದೇವೆಯೇ ಎನ್ನುವಂತಹ ಅತಿಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಇಲ್ಲಿ ಭಿನ್ನವಾದ ರೀತಿಯಲ್ಲಿ ಮಾಡಲಾಗಿದೆ.

ಇದೊಂದು ಆಧುನಿಕವೆನ್ನಬಹುದಾದ ಪ್ರಪಂಚದ ಸ್ಥಿತಿಗತಿಗಳ ಚಿತ್ರಣ. ಇಲ್ಲಿನ ಬಹುತೇಕ ಪಾತ್ರಗಳಲ್ಲಿ ಕಾಣಸಿಗುವುದು ಮಹತ್ವಾಕಾಂಕ್ಷೆಯ ಮನಸ್ಥಿತಿ. ಆದರ್ಶ, ಸಿದ್ಧಾಂತಗಳ ಪರಿಕಲ್ಪನೆಗಳು ಹಿನ್ನೆಲೆಗೆ ಸರಿಯಲ್ಪಟ್ಟು, ತಮ್ಮನ್ನು ತಾವು ಕಂಡುಕೊಳ್ಳಲು ಹವಣಿಸುವ ಪಾತ್ರಗಳ ಚಿತ್ರಣ ದಿಗಿಲು ಹುಟ್ಟಿಸುತ್ತದೆ. ಭಾರತೀಯ ಸಂಸ್ಕೃತಿ-ಸಂಪ್ರದಾಯಗಳನ್ನು, ದೇಶದ ರಾಜಕೀಯ ವ್ಯವಸ್ಥೆಯನ್ನು ಹೀಗಳೆಯುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಇಲ್ಲಿನ ಪಾತ್ರಗಳೆಲ್ಲವೂ ಕೊನೆಯಲ್ಲಿ ಅಂಟಿಕೊಳ್ಳುವುದು ಪ್ರೀತಿಗೆ, ಸ್ನೇಹಕ್ಕೆ, ಮನೆತನಕ್ಕೆ ಹಾಗೂ ವ್ಯವಸ್ಥೆಗೆ. ಸಲಿಂಗಕಾಮದಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗುವ ಯುವಕನೊಬ್ಬ ದೇಶ ಬಿಟ್ಟುಹೋಗಲು ಅವಕಾಶವಿದ್ದಾಗಲೂ "ಇದು ನನ್ನ ಮನೆ" ಎಂದು ಸಮಸ್ಯೆಗಳನ್ನು ಎದುರಿಸಲು ಸಿದ್ಧನಾಗುವ ಸನ್ನಿವೇಶದಲ್ಲಿ ಸಮಾಧಾನದ ಭಾವವೊಂದು ಅರಿವಿಲ್ಲದೆಯೇ ಆವರಿಸಿಕೊಳ್ಳುತ್ತದೆ. ಸಮಾಜಕ್ಕೆ ಹೆದರಿ ಬಾಲ್ಯದಲ್ಲಿ ದೂರಮಾಡಿಕೊಂಡಿದ್ದ ಪ್ರೇಮಿಯನ್ನು ಬಹಳ ವರ್ಷಗಳ ನಂತರ ಭೇಟಿಯಾದಾಗ ನಡೆಯುವ ಎರಡೇ ಸಾಲುಗಳ ಸಂಭಾಷಣೆಯೊಂದು ಅನುಭವಕ್ಕೆ ಮಾತ್ರವೇ ದಕ್ಕಬಹುದಾದ ಪ್ರೀತಿಯ ಪುಟ್ಟದೊಂದು ಪ್ರಪಂಚವನ್ನು ಪರಿಚಯಿಸುತ್ತದೆ. ಹೃದಯದಲ್ಲಿ ಸದಾ ಜೀವಂತವಾಗಿರುವ ಪ್ರೀತಿಯ ಭಾವನೆಯನ್ನು ಕೊನೆಗಾಣಿಸುವ ಶಕ್ತಿ ಆ ಕ್ಷಣದ ಆಕರ್ಷಣೆಗೆ ಅಥವಾ ಅಗತ್ಯಕ್ಕೆ ಹುಟ್ಟಿಕೊಳ್ಳುವ ದೈಹಿಕ ಸಂಬಂಧಗಳಿಗಿಲ್ಲ ಎನ್ನುವಂತಹ ಸೂಕ್ಷ್ಮವಾದ ಸತ್ಯಗಳು ಅಲ್ಲಲ್ಲಿ ಎದುರಾಗುತ್ತ ಸಂಬಂಧಗಳೆಡೆಗಿನ ನಂಬಿಕೆಯನ್ನು ಖಾಯಂಗೊಳಿಸುತ್ತವೆ.      

ಮನುಷ್ಯ ತನ್ನ ಅಗತ್ಯ ಹಾಗೂ ಅನುಕೂಲತೆಗೆ ಅನುಗುಣವಾಗಿ ಸೃಷ್ಟಿಸಿಕೊಂಡ ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ಭಯ, ಸ್ವಾರ್ಥ, ವಂಚನೆ, ಅನಾಗರಿಕತೆಗಳು ವ್ಯವಸ್ಥೆಯನ್ನು ಅಲ್ಲಾಡಿಸಲು ಪ್ರಯತ್ನಿಸುವುದು ಹಾಗೂ ಬದಲಾವಣೆಯ ಗಾಳಿ ಬೀಸಿ ಹೊಸತೇನನ್ನೋ ತಂದು ರಾಶಿಹಾಕುವುದು ನಿತ್ಯಕ್ರಮದಂತೆ ಜರುಗುತ್ತಲೇ ಇರುತ್ತದೆ. ಯಾವುದು ಬೇಕೋ ಅದನ್ನು ಮಾತ್ರ ಆರಿಸಿಕೊಳ್ಳುವ ಬುದ್ಧಿವಂತಿಕೆಯ ಕೆಲಸವನ್ನು ಮಾಡಬೇಕಾಗಿರುವುದು ಆಧುನಿಕ ಜಗತ್ತಿನ ಅಗತ್ಯಗಳಲ್ಲಿ ಒಂದು. ಇಲ್ಲಿನ ಒಂದೊಂದು ವಿವಾಹದಲ್ಲೂ ಅಂತಹ ಒಂದು ಜಾಣತನದ ನಡೆಯಿದೆ; ಹೊಂದಾಣಿಕೆಯನ್ನುಳಿದು ಬೇರೆ ದಾರಿಯಿಲ್ಲ ಎನ್ನುವಂತಹ ಅಸಹಾಯಕ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಹೆಣ್ಣುಮಕ್ಕಳ ದಿಟ್ಟತನವಿದೆ. ಇದೊಂದು ಮಹಿಳಾ ಕೇಂದ್ರಿತ ಕಥಾವಸ್ತುವೇ ಆಗಿದ್ದರೂ ಸರಿ-ತಪ್ಪುಗಳನ್ನು ಬೇರ್ಪಡಿಸಿ ತೂಗಲಾಗದ, ಇದು ಹೀಗೆಯೇ ಎನ್ನುವ ನಿರ್ಧಾರಕ್ಕೆ ಬರಲಾಗದ ಚತುರತೆ ಇಲ್ಲಿದೆ. ಇದೇ ವಿಷಯವಸ್ತುವನ್ನು ಕೊಂಚ ಸಭ್ಯವಾದ ಧಾಟಿಯಲ್ಲಿ ಚಿತ್ರಿಸಬಹುದಿತ್ತೇನೋ ಎನ್ನುವ ಅಭಿಪ್ರಾಯವೊಂದು ತಲೆಯೊಳಗೆ ಹಾದುಹೋದರೂ, ಆ ಪ್ರಯತ್ನ ಇಷ್ಟೊಂದು ಪರಿಣಾಮಕಾರಿಯಾಗಿ ಇರುತ್ತಿತ್ತೇ ಎನ್ನುವ ಸಂದೇಹವೂ ತಕ್ಷಣವೇ ಹುಟ್ಟಿಕೊಳ್ಳುವುದು ಸುಳ್ಳಲ್ಲ.      

ಇಲ್ಲಿ ಕಾಣಸಿಗುವ ಸಂಬಂಧಗಳು, ಮದುವೆಗಳು ಕೇವಲ ಒಂದು ಪಟ್ಟಣಕ್ಕೋ, ನಗರಕ್ಕೋ ಸೀಮಿತವಾಗಿಹೋಗುವ ಕಥೆಗಳಲ್ಲ; ಇದೊಂದು ಆಧುನಿಕ ಜಗತ್ತಿನ ವ್ಯಥೆ. ಜನರು ಶಿಕ್ಷಿತರಾಗುತ್ತ ಹೋದಂತೆ ಸಂಬಂಧಗಳು ಸಂಕೀರ್ಣಗೊಳ್ಳುತ್ತ ಹೋಗುವುದನ್ನು ಅಲ್ಲಗಳೆಯುವಂತಿಲ್ಲ. ಶಿಕ್ಷಣ ದೊರಕಿದ ಮಾತ್ರಕ್ಕೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಸುಲಭ ಎನ್ನುವುದು ವ್ಯಾಪಕವಾಗಿ ನಂಬಲಾಗಿರುವ ಸುಳ್ಳುಕಲ್ಪನೆ. ಭಯವೇ ಜಗತ್ತನ್ನು ಆಳುತ್ತಿರುವ ಈ ಕಾಲಘಟ್ಟದಲ್ಲಿ ನಂಬಿಕೆ-ಭರವಸೆಗಳು ಮಾತ್ರವೇ ಬದುಕುಗಳನ್ನು ನಿರಾತಂಕವಾಗಿ ಮುನ್ನಡೆಸಬಲ್ಲವು. ಒಳ್ಳೆಯದೇ ಘಟಿಸಲಿದೆ ಎನ್ನುವ ಭರವಸೆ, ನೆಮ್ಮದಿಯೇ ಎದುರಾಗಲಿದೆ ಎನ್ನುವ ನಂಬಿಕೆ, ಪವಿತ್ರವಾದ ಸಂಬಂಧಗಳೊಂದಿಗೇ ಜತೆಯಾಗಲಿದ್ದೇವೆ ಎನ್ನುವ ಆಶಾಭಾವನೆಗಳಲ್ಲಿ ಮಾತ್ರವೇ ಪ್ರೀತಿ-ಪ್ರೇಮ, ಸ್ನೇಹ, ವಿವಾಹಗಳಲ್ಲೊಂದು ಹೊಳಹು ಕಾಣಿಸಲು ಸಾಧ್ಯ. ತಾರುಣ್ಯ, ವೃದ್ಧಾಪ್ಯ, ಶ್ರೀಮಂತಿಕೆ, ಬಡತನ, ಆಧುನಿಕ, ಸಾಂಪ್ರದಾಯಿಕ ಇತ್ಯಾದಿ ಎಲ್ಲ ಪರಿಸ್ಥಿತಿ, ಮನಸ್ಥಿತಿಗಳನ್ನೂ ಹತೋಟಿಯಲ್ಲಿಟ್ಟುಕೊಂಡಿರುವ ಸ್ವರ್ಗ ಈಗಾಗಲೇ ತಯಾರುಮಾಡಿರುವ ನೀಲನಕ್ಷೆಗೆ ಅನುಗುಣವಾಗಿ ಎಲ್ಲವೂ ಘಟಿಸಲಿದೆ ಎನ್ನುವ ನಂಬಿಕೆಯಲ್ಲಿಯೇ ನೆಮ್ಮದಿಯೂ ಅಡಗಿದೆ.
ಈ ಅಂಕಣದ ಹಿಂದಿನ ಬರಹಗಳು:
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...