ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು

Date: 16-09-2021

Location: ಬೆಂಗಳೂರು


'ನಿಸರ್ಗಕ್ಕೆ ತನ್ನದೇ ಆದ ಒಂದು ವಿಶ್ವ ನಿಯಮವಿದೆ. ಅದು ಸನಾತನವೂ, ಸಾರ್ವಕಾಲಿಕವೂ ಆದದ್ದು. ಉಳಿದ ಜೀವರಾಶಿಗಳಿಗಿಂತ ಮನುಷ್ಯ ಭಿನ್ನವಾಗಿರುವುದು ಅವನಲ್ಲಿರುವ ಚಿಂತನಾ ಶಕ್ತಿಯಿಂದ' ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ಅನಂತಯಾನ ಅಂಕಣದಲ್ಲಿ ಆಧುನಿಕತೆ ಮತ್ತು ಮನುಷ್ಯ ಸಂಬಂಧಗಳ ಕುರಿತು ವಿಶ್ಲೇಷಿಸಿದ್ದಾರೆ.

ನಿಜ ಹೇಳಬೇಕೆಂದರೆ ನಮಗ್ಯಾರಿಗೂ ಮಾಡಲಾಗದ ಬದಲಾವಣೆಯನ್ನು ಕೆಲವೇ ಕೆಲವು ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನವು ಮಾಡಿ ಬಿಟ್ಟಿದೆ. ಶ್ರೀಮಂತರ ಅಟ್ಟದ ಮೇಲೆ ನಲಿಯುತ್ತಿದ್ದ ಅದೆಷ್ಟೋ ಸೌಲಭ್ಯಗಳು ಇದೀಗ ಬಡವರ ಮನೆಯ ಕದ ತಟ್ಟುವಂತೆ ಮಾಡಿದ್ದು ಕೂಡ ಇದೇ ಮಾಹಿತಿ ತಂತ್ರಜ್ಞಾನ. ಮೊಬೈಲ್, ಟಿವಿ ಸಹಿತ ಬದುಕನ್ನು ಸುಧಾರಿಸಲಿರುವ ಹತ್ತು ಹಲವು ಆಪ್ ಗಳು ಇಡೀ ವಿಶ್ವದ ಅಭಿವೃದ್ಧಿಯ ನಾಗಾಲೋಟವನ್ನು ನಿಯಂತ್ರಿಸುತ್ತಿವೆ ಎಂದರೆ ನೀವೊಮ್ಮೆ ಊಹೆ ಮಾಡಿಕೊಳ್ಳಿ ಐ.ಟಿಯ ತಾಕತ್ತನ್ನು. ಮೂರೂ ಹೊತ್ತಿನ ಕೂಳಿನಂತೆ ಇಂಟರ್ನೆಟ್ ಇಂದು ನಮಗೊದಗಿ ಬಂದಿದೆ. ಏನೆಲ್ಲಾ ಬದಲಾವಣೆಗಳನ್ನು ಮಾಹಿತಿ ತಂತ್ರಜ್ಞಾನವು ಜಗತ್ತಿನಲ್ಲಿ ಮಾಡಿವೆ ಎಂದು ಪಟ್ಟಿ ಮಾಡ ಹೊರಟರೆ ಅಚ್ಚರಿಯ ಮೇಲೆ ಅಚ್ಚರಿ ಮೂಡುತ್ತದೆ. ನಿತ್ಯದ ಬದುಕು ಉಸಿರಾಡುವಲ್ಲಿ ಇಂಟರ್ನೆಟ್ ನ ಪಾತ್ರ ಮಹತ್ತದಾದ್ದು. ಅತ್ಯಂತ ಮೂಲಭೂತ ಸೌಲಭ್ಯವಾಗಿ ನಮ್ಮೊಂದಿಗೆ ಇಂಟರ್ನೆಟ್ ಇದೆ. ಎಷ್ಟರವರೆಗೆ ಅಂದ್ರೆ ಇಂಟರ್ನೆಟ್ ಇಲ್ಲದ ಬದುಕನ್ನು ಕಲ್ಪಿಸಲೂ ಕಷ್ಟವೆನಿಸುವಂತಹ ಸ್ಥಿತಿಯ ನಿರ್ಮಾಣವಾಗಿದೆ.

ಖಾಸಗೀಕರಣವು ತಂದು ಕೊಟ್ಟ ಲಾಭ ಮತ್ತು ಉಂಟುಮಾಡಿದ ಬದಲಾವಣೆಯಿಂದಾಗಿ ಇಡೀ ವಿಶ್ವವೇ ಇಂದು ಖಾಸಗೀಕರಣದ ಜಪವನ್ನು ಮಾಡುತ್ತಿದೆ. ದೇಶದ ಸಕಲ ಸಮಸ್ಯೆಗಳಿಗೂ ಇದೊಂದೇ ತಂತ್ರ-ಮಂತ್ರ ಎನ್ನುವ ಪರಿಸ್ಥಿತಿ. ಆಧುನೀಕರಣ, ಖಾಸಗೀಕರಣಗಳು ಸ್ಪರ್ಧೆಗಳನ್ನು ಏರ್ಪಡಿಸುತ್ತಿವೆ ನಿಜ. ಹಾಗಿರಲು ಬಹಳಷ್ಟು ಬಂಧ-ಕುಟುಂಬಗಳಲ್ಲಿ ಬಿರುಕನ್ನೂ ಮೂಡಿಸಿವೆ ಅನ್ನುವುದು ಕೂಡಾ ಅಷ್ಟೇ ಸತ್ಯ. ಅವಿಭಕ್ತ ಕುಟುಂಬಗಳು ಬೇರ್ಪಟ್ಟು ನ್ಯೂಕ್ಲಿಯರ್ ಕುಟುಂಬಗಳಾಗಿ ಮಾರ್ಪಟ್ಟ ಮನೆಯೊಂದರ ಬಾಗಿಲು ಮೂರು ಮತ್ತೊಂದು ಎನ್ನುವ ಗತಿಯಲ್ಲಿ ದಿನ ಕಳೆಯಬೇಕಾಗಿದೆ.

ಒಂದೊಮ್ಮೆ ವಿಸ್ತಾರವಾದ ಗದ್ದೆ, ತೋಟ, ಬಯಲುಗಳಲ್ಲಿ ಮಾಡುತ್ತಿದ್ದ ಕೃಷಿಯು ಬದಲಾದ ಕಾಲದಲ್ಲಿ ಪಾಟ್, ಟೆರೇಸ್, ಬಾಲ್ಕನಿ ಕೃಷಿಯಾಗಿ ಪರಿವರ್ತನೆಗೊಂಡಿದೆ. ಆಧುನಿಕತೆಯ ಒಟ್ಟಿಗೆ ತಂತ್ರಜಾನವನ್ನೂ ಅಳವಡಿಸಿಕೊಂಡ ಬದುಕು- ಒಂದನ್ನು ಪಡೆಯುವಾಗ ಮತ್ತೊಂದನ್ನು ಬಿಟ್ಟುಕೊಡಬೇಕು ಎಂಬ ಪಾಠವನ್ನು ಕಲಿಸಿ ಕೊಟ್ಟಿದೆ. ಹಣ ಕೊಟ್ಟು ಸಂಬಂಧಗಳನ್ನು ಹಾರಿಸಿಬಿಟ್ಟ ಆಧುನಿಕ ತಂತ್ರಜ್ಞಾನವು ಬದುಕನ್ನು ತುರ್ತಿನ ಹಳಿಯ ಮೇಲೆ ತಂದು ನಿಲ್ಲಿಸಿದೆ. ಇಂದು ನಾವು ಬಾಳುವ ಬದುಕಲ್ಲಿ ಯಂತ್ರ ಮತ್ತು ಮನುಷ್ಯನ ಮಧ್ಯದಲ್ಲಿ ಕಾಣುವ ಏಕೈಕ ವ್ಯತ್ಯಾಸವೆಂದರೆ ಅದು ಭಾವನೆಗಳ ಅಭಿವ್ಯಕ್ತಿಯಲ್ಲಿ. ಈ ಒಂದು ಅಂಶವು ಬಾಳಿಗೆ ಅರ್ಥವನ್ನು ಬರೆಯುವುದರ ಜೊತೆಗೆ ಅನರ್ಥವನ್ನೂ ಹುಟ್ಟು ಹಾಕುವುದಿದೆ.

ಗೋರಿಗಳ ಮೇಲೆ ಸುಖವನ್ನು ಕಟ್ಟಿಕೊಳ್ಳುತ್ತಿರುವ ನಮಗೆ; ಸುಖ ಏನೆಂಬುದನ್ನು ಪ್ರಶ್ನಿಸಿಕೊಳ್ಳದಿರುವುದೇ ಸುಖ ಎನ್ನುವುದರ ಅರಿವಿರುವುದಿಲ್ಲ. ಪ್ರಕೃತಿಯ ಜೊತೆಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಬೆಳೆದು ಬಂದ ನಾವು ಏಕಾಏಕಿ ಕಾಂಕ್ರೀಟ್ ಜಂಗಲಿನಲ್ಲಿ, ಸಿಮೆಂಟಿನ ಮುಖವಾಡ ತೊಟ್ಟು ವ್ಯವಹರಿಸುವ ರೀತಿ ಇದೆ ನೋಡಿ ಅದರಷ್ಟು ಪರಕೀಯವೂ, ನಾಟಕೀಯವೂ ಆದದ್ದು ಮತ್ತೊಂದಿಲ್ಲ. ಎಲ್ಲಿಯವರೆಗೆ ಎಂದರೆ ರಕ್ತ ಸಂಬಂಧಗಳನ್ನೂ ಅಳಿಸಿ ಹಾಕುವಷ್ಟು ಘೋರತೆ ಕಾಂಕ್ರೀಟ್ ಜಂಗಲಿಗಿದೆ. ಬದುಕಲ್ಲಿ ಹೇಗೆ ಸಮತೋಲನವನ್ನು ತರುವುದೆನ್ನುವುದೊಂದು ಗಂಭೀರವಾದ ಪ್ರಶ್ನೆ. ಹಾಗಿರಲು ಮನುಷ್ಯರೂ ಕ್ರಮೇಣ ಭಾವನೆಯಿಲ್ಲದ ಯಂತ್ರವಾಗುತ್ತಿದ್ದಾರೆ. ಇಷ್ಟರಲ್ಲೇ ಭಾವನೆಯನ್ನು ಹರಿಸಲಿರುವ ತಂತ್ರಜ್ಞಾನವೂ ಬರಲೂ ಬಹುದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅದೆಂತಹ ಕ್ರಾಂತಿಯನ್ನು ತರುತ್ತಲಿದೆ ಎನ್ನುವುದರ ಅನುಭವ ಈಗಾಗಲೇ ನಮಗಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡ ಬದುಕಲ್ಲಿ ಮುಂದಕ್ಕೆ ಘಟಿಸಲಿರುವ ಘಟನೆಗಳನ್ನೊಮ್ಮೆ ನೆನೆಯಿರಿ- ಮೈ ಜುಂ ಗುಟ್ಟದಿರದು ಎನ್ನುವ ವಿಶ್ವಾಸವಿದೆಯೇ ? ಹಾಗಂತ ಆಧುನಿಕತೆ, ತಂತ್ರಜ್ಞಾನ ಬೇಡವೆಂದಲ್ಲ. ಅವುಗಳ ಬಳಕೆ ಎಷ್ಟರಮಟ್ಟಿನದ್ದು? ಹೇಗಿರಬೇಕು ? ಎಂಬುದೇ ಪ್ರಶ್ನೆ.

ಹಿಂದೆ ಹಳ್ಳಿ ಮನೆಗಳಲ್ಲಿ ಕಾಣುತ್ತಿದ್ದ ಸಂಬಂಧಗಳು, ಅವಿನಾಭಾವ ಬಂಧಗಳು ಎಷ್ಟು ಮುಕ್ತ ಹಾಗೂ ಮಧುರವಾಗಿದ್ದವು. ಸಂತೋಷವನ್ನು ಹಂಚಿಕೊಳ್ಳುತ್ತಿದ್ದ ಪರಿ, ದುಃಖಕ್ಕೆ ಸ್ಪಂದಿಸುವ ರೀತಿ, ಎಲ್ಲವೂ ಬಂಧಗಳಲ್ಲಿ ಆಪ್ತತೆಯನ್ನು ಮೂಡಿಸುತ್ತಿತ್ತು. ಸ್ವಾರ್ಥದ ಅಂಶ ಲವಲೇಶವೂ ಇರುತ್ತಿರಲಿಲ್ಲ. ಇದ್ದರೂ ಅದು ಸಮೂಹ ಸ್ವಾರ್ಥವಾಗಿ ಸರ್ವರಿಗೂ ಅನುಕೂಲವಾಗುವ ರೀತಿಯಲ್ಲಿ ಮಾತ್ರವಿರುತ್ತಿತ್ತು. ಪ್ರಾಯಶಃ 'ವಸುಧೈವ ಕುಟುಂಬಕಂ' ಎಂಬ ವಿಶಾಲ ಚಿಂತನೆಯನ್ನು ಜಗತ್ತಿಗೆ ಭಾರತ ಪರಿಚಯಿಸಿದ್ದು ಈ ನೆಲದ ಮಂದಿಯು ಬಾಳುವ ಕ್ರಮದಿಂದಲೇ ಇರಬೇಕು ಎಂದೆನಿಸುತ್ತದೆ. ನಮ್ಮಲ್ಲಿದ್ದ ಹಾಗೂ ಈಗ ಕೇವಲ ಕೆಲವೇ ಆಗಿರುವ ಅವಿಭಕ್ತ ಕುಟುಂಬಗಳೇ ಈ ಚಿಂತನೆಯ ಉಗಮಕ್ಕೆ ಪ್ರೇರಣೆಯೂ ಆಗಿರಬಹುದು. ಅಂತಹ ಪ್ರೇರಿತ ಮನೆಗಳು ಇಂದೆಲ್ಲಿವೆ?

ಜಾಗತೀಕರಣದ ಗಾಳಿಯು ಒಂದೆಡೆ ಹಳ್ಳಿ ಹಳ್ಳಿಗಳನ್ನೇ `ತ್ರಿಶಂಕು' ಸ್ಥಿತಿಗೆ ದೂಡಿದರೆ; ಇನ್ನೊಂದೆಡೆ ಅದು ಬದುಕಿಗೊಂದಿಷ್ಟು ಬೆಳಕನ್ನೂ ಚೆಲ್ಲಿದೆ ಎಂದರೆ ತಪ್ಪಾಗಲಾರದು. ಬದಲಾವಣೆ ಬೇಕು ನಿಜ. ಅದು ಅಗತ್ಯವೂ ಕೂಡ. ಆದರೆ ಎಷ್ಟರ ಮಟ್ಟಿಗಿನ ಬದಲಾವಣೆ ಆಗಬೇಕು ಎಂಬುದು ಗೌಣವಾಗದ ಪ್ರಶ್ನೆಯಾಗಬೇಕೇ ವಿನಃ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವಂತಹ ಜೀವನವೇ ಮುಖ್ಯವಾಗಬಾರದು. ನಾವು ಬದಲಾಗಬೇಕಾದದ್ದು ನಮ್ಮ ವಿಚಾರಗಳಲ್ಲಿಯೇ ಹೊರತು; ಹಳ್ಳಿಗೆ ಹಳ್ಳಿಗಳನ್ನೇ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಲ್ಲ. ಒಂದು ಹಳ್ಳಿಯು ಹಳ್ಳಿಯಾಗಿದ್ದುಕೊಂಡೇ ಇಂದಿನ ತಂತ್ರಜ್ಞಾನ ಯುಗದ ಎಲ್ಲಾ ಬಾಹು ಬಂಧನಗಳಿಂದ ಬೆಸೆಯಲ್ಪಡಬೇಕು. ಜತೆಗೆ ಸಂಬಂಧಗಳೂ ಉಳಿಯಬೇಕು. ಹೆಂಡತಿ ಬಂದಳೆಂದು ತಾಯಿಯನ್ನು ದೂರ ಮಾಡಲು ಸಾಧ್ಯವಿದೆಯೇ ?

ವಿಪರ್ಯಾಸವೆಂದರೆ, ಅಭಿವೃದ್ಧಿ ಎಂಬುದು ಈಗ ಜಾಗತೀಕರಣದ ಮೂಲ ಹೂರಣವಾಗಿ ಪರಿಣಮಿಸಿದೆ. ದುರಂತವೆಂದರೆ ಅಭಿವೃದ್ಧಿಯ ಪರಿಭಾಷೆಗೆ ಒಂದು ಆದರ್ಶವಾದರೂ ಇದೆ. ಆದರೆ ಈ ಜಾಗತೀಕರಣಕ್ಕೆ ಅಂತಹ ಯಾವ ಉದಾತ್ತೆಯೂ ಇಲ್ಲ. ಕದಡಿ ಹೋಗಿರುವ ಜಗತ್ತಿನಲ್ಲಿ ಇದ್ಯಾವುದರಿಂದಲೂ ನಾವು ಪಾಠವನ್ನು ಕಲಿತಂತೆ ಇಲ್ಲ. ಭೂಮಿಯಲ್ಲಿ ಇದ್ದುದೆಲ್ಲವನ್ನೂ ಗಳಿಸಬೇಕೆಂಬ ಅತೀ ಮೋಹವು ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ. ಇದರ ಮುಂದುವರಿದ ಭಾಗವಾಗಿ- ಮನೆ, ಮಠ, ಸಂಬಂಧ, ಭಾವನೆ ಎಲ್ಲವನ್ನೂ ತೊರೆದು ಕಳಚಿ ನಮ್ಮದೇ ಆದ ರೀತಿ, ರಿವಾಜು, ಕಟ್ಟಳೆಗಳನ್ನು ರೂಪಿಸಿ, ಹಾಕುವ ಹೆಜ್ಜೆಯನ್ನೇ ದಾರಿಯನ್ನಾಗಿಸಿ ಕೊಂಡಿರುವುದು ಅಪಾಯದ ಸಂಕೇತ. ತ್ವರಿತ ಗತಿಯಲ್ಲಿ ಎಲ್ಲವನ್ನೂ ಪಡೆಯಬಹುದು, ಹಣದಿಂದ ಏನು ಬೇಕಾದರೂ ಸಾಧಿಸಲು ಸಾಧ್ಯ ಎನ್ನುವ ಚಿಂತನೆಗಳು ಮುಗ್ಗರಿಸಿದಾಗಲೇ ಅಜ್ಞಾನಕ್ಕೆ ಚುರುಕು ಮುಟ್ಟುವುದು.

ಮುಂದಿನ ಹಿಂದಿನ ದಾರಿಯನ್ನು ಅವಲೋಕಿಸಿದಾಗ- ನಾವು ತಿಳಿದಷ್ಟು ಸುಲಭವೂ ಅಲ್ಲದ, ಅಂದುಕೊಂಡಷ್ಟು ಹೊಸತನದಿಂದ ಕೂಡಿರದ ಬೆರಕೆಯ ಹಾದಿ ಗೋಚರಿಸುತ್ತದೆ. ಹಾಗಿದ್ದೂ ಅದನ್ನೇ ಕಾಡಿನ ಮೂಲಕ ಆಗಸಕ್ಕೆ ಪಥವೆಂದುಕೊಂಡು ಆ ದಾರಿಯಲ್ಲಿ ಹೆಜ್ಜೆಗಳನ್ನಿಡುತೇವೆ. ಕೆಲವು ವಿಚಾರಗಳು ಭ್ರಮೆಯನ್ನು ಹುಟ್ಟು ಹಾಕುವುದಲ್ಲದೆ ಪ್ರಚಾರದ ಗೀಳನ್ನೂ ಹಬ್ಬಿಸಿ ಬಿಡುತ್ತದೆ. ಈ ತೆರನಾದ ಉಮೇದೆಲ್ಲವೂ ನಮ್ಮನ್ನಾವರಿಸಿಕೊಂಡು ಅಜ್ಞಾನವೆಂಬ ಅಂಧಕಾರದ ವರ್ತುಲಕ್ಕೆ ತಳ್ಳಿ ಬಿಡುತ್ತದೆ.

ಆದರೆ ಪರಿಪೂರ್ಣ ಜ್ಞಾನವು ಎಚ್ಚರಿಕೆಯ ಗಂಟೆಯಾಗಿ ವಾಸ್ತವಕ್ಕೆ ಸ್ಪಂದಿಸುವುದಲ್ಲದೆ ನಮ್ಮ ಹೃದಯ-ಮನಸ್ಸಿಗೂ ಚುರುಕು ಮುಟ್ಟಿಸುವಂತಹ ಕಾರ್ಯವನ್ನೂ ನಿರ್ವಹಿಸುತ್ತದೆ. ತುಡಿಯುವಲ್ಲಿ ತುಡಿಯದೆ, ಮಿಡಿಯುವಲ್ಲಿ ಮಿಡಿಯದೆ ಪ್ರಕೃತಿಗೆ ವಿರುದ್ಧವಾಗಿ ನಡೆಯುವ-ನುಡಿಯುವ ಪ್ರವೃತ್ತಿ ಇನ್ನಾದರೂ ಕಡಿಮೆಯಾಗಬೇಕು. ಉಸಿರಾಡಲು ಗಳಿಸುವತ್ತ ಮತ್ತು ಕಳೆದುಕೊಂಡದ್ದನ್ನು ಮರುಗಳಿಸುವತ್ತ ಹೆಜ್ಜೆಯಿಡಬೇಕು.

ವಯಸ್ಸು ಬೆಳೆಯುತ್ತಿದ್ದಂತೆಯೇ ಪರಿಚಯಸ್ಥರು ಬೆಳೆಯುತ್ತಾರೆ. ಸಂಬಂಧಗಳು ಬೆಳೆಯುತ್ತವೆ. ಯಾವ ಬಂಧುತ್ವವೂ ಇಲ್ಲದೆ ಕೆಲವೊಂದಿಷ್ಟು ಮಂದಿ ಆತ್ಮೀಯರಾಗಿ ಬಿಡುತ್ತಾರೆ. ಬಂಧುತ್ವವನ್ನು ಬೆಳೆಸಿಕೊಳ್ಳುವುದು, ಬಂಧ ಕಡಿದಾಗ ನೊಂದುಕೊಳ್ಳುವುದು ಮಾನವ ಸಹಜ ಗುಣ. ಆದರೆ ಬದುಕಿಗೆ ಬೇಕಾಗಿರುವ ಬೊಗಸೆಯಷ್ಟು ಪ್ರೀತಿ, ವಾತ್ಸಲ್ಯ ಅಭಿಮಾನಗಳ ಜತೆಗೆ ಬೇಕು-ಬೇಡಗಳನ್ನು ಆಲೋಚಿಸುವ ಮನಸ್ಸು ಕೂಡ ತುಂಬಾ ಮುಖ್ಯ ಎಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆಗಾಗ ಅನಿಸುವುದಿದೆ.

ನಿಸರ್ಗಕ್ಕೆ ತನ್ನದೇ ಆದ ಒಂದು ವಿಶ್ವ ನಿಯಮವಿದೆ. ಅದು ಸನಾತನವೂ, ಸಾರ್ವಕಾಲಿಕವೂ ಆದದ್ದು. ಉಳಿದ ಜೀವರಾಶಿಗಳಿಗಿಂತ ಮನುಷ್ಯ ಭಿನ್ನವಾಗಿರುವುದು ಅವನಲ್ಲಿರುವ ಚಿಂತನಾ ಶಕ್ತಿಯಿಂದ. ಹೀಗೆ ನಾವು ಗಳಿಸುವತ್ತ ದಾಪುಗಾಲು ಹಾಕುತ್ತಿರುವಂತೆ ನಾವು ಕಳೆದುಕೊಳ್ಳುತ್ತಿರುವುದು ಏನನ್ನು ಎಂಬುದರ ಬಗ್ಗೆಯೂ ಸ್ಪಲ್ಪ ಗಮನ ಹರಿಸಿದರೆ ಆಧುನಿಕ ತಂತ್ರಜ್ಞಾನ ಮತ್ತು ನಿಜದ ಬಾಳಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಅದಕ್ಕಾಗಿ ಉತ್ತಮ ಆಲೋಚನೆ, ಭಾವನಾತ್ಮಕ ಹೃದಯ ಮತ್ತು ಚಿಂತಿಸುವ ಕ್ರಮದಲ್ಲಿ ಆಗಲೇ ಬೇಕಾದ ಮಹತ್ವದ ಬದಲಾವಣೆಗಳೊಂದಿಷ್ಟು ಆಗಬೇಕಷ್ಟೇ.

ಈ ಅಂಕಣದ ಹಿಂದಿನ ಬರೆಹಗಳು:
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...