‘ಆಧುನಿಕತೆಯನ್ನು ಅಪ್ಪಿಕೊಂಡು ಶರವೇಗದಿಂದ ಓಡುತ್ತಿರುವ ಹೆಣ್ಣು ಮಕ್ಕಳು’: ಧಾರಿಣಿ ಮಾಯಾ


“ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು ತನ್ನ ಜೀವನ ನಡೆಸುವ ಪರಿಯನ್ನು ಇಲ್ಲಿ ಅನಾವರಣಗೊಳಿಸಿದ್ದೇನೆ. ಪುರುಷನಿಂದ ಮಾನಸಿಕ ಹಾಗು ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಬದುಕಿನ ಕರಾಳತೆಗೆ ಕನ್ನಡಿ ಹಿಡಿವ ಪ್ರಯತ್ನ ಮಾಡಿದ್ದೇನೆ” ಎನ್ನುತ್ತಾರೆ ಲೇಖಕಿ ಧಾರಿಣಿ ಮಾಯಾ. ಅವರು ತಮ್ಮ ‘ಮೌನದ ಚಿಪ್ಪಿನೊಳಗೆ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ...

ಕಾಲ ಬದಲಾಗುತ್ತಲೇ ಇದೆ. ಇಪ್ಪತ್ತೊಂದನೇ ಶತಮಾನದ ಹೆಣ್ಣು ಮಕ್ಕಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಆಧುನಿಕತೆಯನ್ನು ಅಪ್ಪಿಕೊಂಡು ಶರವೇಗದಿಂದ ಓಡುತ್ತಿರುವ ಹೆಣ್ಣು ಮಕ್ಕಳು ತಮ್ಮ ಆಚಾರ-ವಿಚಾರಗಳಲ್ಲಿ ಅವರಿಗೆ ಅನುಕೂಲವಾಗುವಂತ ಪರಿವರ್ತನೆಗಳನ್ನು ಮಾಡಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಇದು ಖಂಡಿತ ಸಂತೋಷದ ವಿಚಾರವೇ.

ಆದರೂ, ಇಂದಿಗೂ ಅವಳು ದೈಹಿಕ, ಮಾನಸಿಕ, ಲೈಂಗಿಕ, ಆರ್ಥಿಕ ಶೋಷಣೆ/ದೌರ್ಜನ್ಯದಿಂದ ಮುಕ್ತಳಾಗಿಲ್ಲ. ಒಂದಿಲ್ಲೊಂದರಿಂದ ನರಳುತ್ತಳೇ ಇದ್ದಾಳೆ. ನಮ್ಮ ಸಮಾಜದ ಮಧ್ಯೆ ಸಾಕಷ್ಟು ಹೆಣ್ಣುಮಕ್ಕಳ ನೋವಿನ ಆರ್ತನಾದ ಅವರದೇ ಸೂರಿನ ನಾಲ್ಕು ಗೋಡೆಗಳೊಳಗೆ ಕರಗಿ ಹೋಗುತ್ತಿದೆ. ಮನೆಮರ್ಯಾದೆಯ ಹೆಸರಿನಲ್ಲಿ ಮುಚ್ಚಿಹೋಗುತ್ತಿದೆ. ಇವರೆಲ್ಲರ ಅಳಲನ್ನು ನನ್ನ ಈ ಚೊಚ್ಚಲ ಕೃತಿ ’ಮೌನದ ಚಿಪ್ಪಿನೊಳಗೆ’ ಮನದ ಕಣಿವೆಗೆ ಆಶಾಕಿರಣ… ಪ್ರತಿಬಿಂಬಿಸುತ್ತದೆ. ಈ ಪುಸ್ತಕದಲ್ಲಿ ನೀವು ಓದುವ ಸಾಕಷ್ಟು ಅಧ್ಯಾಯಗಳಲ್ಲಿ ಹೆಣ್ಣಿನ ಅಂತರ್ಗತದ ಕೂಗು ಪ್ರತಿಧ್ವನಿಸುವುದನ್ನು ಕಾಣಬಹುದು. ಹೆಣ್ಣು ಪ್ರತಿನಿಮಿಷವೂ ತನ್ನ ಮನೆ-ಸಂಸಾರದ ಬಗ್ಗೆಯೇ ಕಾಳಜಿ ತೋರುತ್ತಾ ತ್ಯಾಗಮಯಿ, ಕ್ಷಮಯಾಧರಿತ್ರಿ ಎಂಬ ಪಟ್ಟ ಹೊತ್ತಿರುತ್ತಾಳೆ. ಈ ವರ್ತುಲದಿಂದಾಚೆಯೂ ತನಗೊಂದು ಬದುಕಿದೆ ಎಂಬುದನ್ನರಿತು ಪ್ರತಿಯೊಬ್ಬ ಸ್ತ್ರೀ, ತನಗೆಂದೇ ಸ್ವಲ್ಪ ಸಮಯವನ್ನು (me time) ಮೀಸಲಿಟ್ಟು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.

ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು ತನ್ನ ಜೀವನ ನಡೆಸುವ ಪರಿಯನ್ನು ಇಲ್ಲಿ ಅನಾವರಣಗೊಳಿಸಿದ್ದೇನೆ. ಪುರುಷನಿಂದ ಮಾನಸಿಕ ಹಾಗು ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಬದುಕಿನ ಕರಾಳತೆಗೆ ಕನ್ನಡಿ ಹಿಡಿವ ಪ್ರಯತ್ನ ಮಾಡಿದ್ದೇನೆ. ಹೆಣ್ಣುಮಕ್ಕಳು ತಮ್ಮ ಛಲ, ಶ್ರಮ, ನಿಷ್ಠೆ, ಆತ್ಮಸ್ಥೈರ್ಯದಿಂದ ಹೇಗೆ ಸಾಧಕಿಯಾಗಿದ್ದಾರೆ ಎಂಬುದರ ವಿಶ್ಲೇಷಣೆಯನ್ನೂ ನನ್ನ ಬರಹಗಳು ಸಾರುತ್ತವೆ. ಸಂತೋಷ ಹಾಗು ನೆಮ್ಮದಿಯ ಜೀವನಕ್ಕೆ ಪುರುಷ ಹಾಗು ಸ್ತ್ರೀ ಇಬ್ಬರದೂ ಸಮಪಾಲಿದೆ ಎಂಬ ಸಿದ್ಧಾಂತವನ್ನು ಒಂದು ಅಧ್ಯಾಯ ಒತ್ತಿ ಹೇಳುತ್ತದೆ.

ನಾವೆಲ್ಲ ಪ್ರತಿನಿತ್ಯ ಸಾಕಷ್ಟು ಹೆಣ್ಣು ಮಕ್ಕಳ ನೋವಿನ ಜೀವನವನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ ಹಾಗು ಸಾಕ್ಷಿಯಾಗಿದ್ದೇವೆ. ಆದರೆ ಅವರೆಲ್ಲ ಸೊಲ್ಲೆತ್ತದೆ ಮೌನವಾಗಿ ರೋದಿಸುವುದು ಪ್ರಪಂಚದ ಕಣ್ಣಿಗೆ ಕಾಣದು. ಕಂಡರೂ ಬಹುತೇಕ ಬಾರಿ ಬಾಯಿಮಾತಿನ ಸಹಾನುಭೂತಿಗೇ ಸೀಮಿತವಾಗುವುದು. ಹೆಣ್ಣು ಧೈರ್ಯ ಮಾಡಿ ತನ್ನ ದುಸ್ತರ ಪರಿಸ್ಥಿತಿಯ ಸಲುವಾಗಿ ಮಹಿಳಾ ಸಂಘಟನೆಗಳ ಮೊರೆ ಹೊಕ್ಕರೂ, ನ್ಯಾಯಾಲಯದ ಕದ ತಟ್ಟಿದರೂ ಎಷ್ಟರ ಮಟ್ಟಿಗೆ ನ್ಯಾಯ ದೊರೆಯುವುದು ಎಂಬುದು ಇನ್ನೂ ಪ್ರಶ್ನಾತೀತವಾಗಿಯೇ ಉಳಿದಿದೆ. ಆಗ ಅವಳ ರೋದನ ನಾಲ್ಕು ಗೋಡೆಗಳೊಳಗೇ ಕಮರಿ ಹೋಗುವುದು. ಒಂದು ಕಡೆ ಹೆಣ್ಣುಮಕ್ಕಳು ಮುದುಡಿದ ತಾವರೆಯಾಗಿದ್ದರೆ, ಮತ್ತೊಂದು ಕಡೆ ಫೀನಿಕ್ಸ್‌ಗಳಾಗಿ ಗಗನದೆತ್ತರಕ್ಕೆ ಹಾರಿ ತಮ್ಮ ಛಾಪನ್ನು ಎಲ್ಲೆಡೆ ಪಸರಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ.

ಕೆಲವು ವರ್ಗದ ಪುರುಷರು ನನ್ನ ಪುಸ್ತಕದ ಕೆಲವು ಪುಟಗಳನ್ನು ತಿರುವಿದಾಗ, ನಾನು ಪುರುಷ ವಿರೋಧಿ ಎಂದು ಟೀಕಿಸಬಹುದು. ನಾನು ಹೆಣ್ಣು ಮಕ್ಕಳ ಪರ ಮಾತ್ರ ಎಂದು ಅಕಸ್ಮಾತ್ ನೀವು ಯೋಚಿಸುತ್ತಿದ್ದರೆ, ಅದು ನಿಮ್ಮ ತಪ್ಪು ಗ್ರಹಿಕೆ. ನಾನು ಬರಿ ಸ್ತೀವಾದಿಯಲ್ಲ. ಇಲ್ಲಿ ಪುರುಷರ ಬಗ್ಗೆಯೂ ಕಾಳಜಿವಹಿಸಿರುವಂತಹ ಅವರ ನೋವಿನ ಕಥನವೂ ಒಳಗೊಂಡಿದೆ. ಹಾಗೆಯೇ ಇನ್ನೂ ಸಂಪೂರ್ಣವಾಗಿ ಅರಳದ ಹೂಮನಸ್ಸಿನ ಮಕ್ಕಳ ಹಾಗು ಯುವಪೀಳಿಗೆಯ ಮನೋಸ್ಥಿತಿಯ ಸೂಕ್ಷ್ಮತೆಗಳನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ಈ ಕೃತಿಯಲ್ಲಿ ವಿಶದಪಡಿಸಿರುವ ದೃಷ್ಟಾಂತಗಳು, ಘಟನೆಗಳು, ನಮ್ಮ ನಿಮ್ಮ ನಡುವೆಯೇ ನಡೆಯುವಂತಹದ್ದು. ಇಂಥ ಕುಟುಂಬಗಳು ಈ ಎಲ್ಲಾ ತವಕ, ತಲ್ಲಣ, ಬೇಗುದಿಯನ್ನು ಅನುಭವಿಸುತ್ತಲೇ ಬಂದಿವೆ. ಬರೆಯುತ್ತಾ ಹೋದರೆ ಅದು ಕೊನೆ ಇರದ ಆಗಸದಂತೆ. ನನ್ನ ಪುಸ್ತಕದ ಕಿರು ಪರಿಚಯವನ್ನು ಇಲ್ಲಿಗೆ ನಿಲ್ಲಿಸುವೆ. ಮುಂದಿನದೆಲ್ಲವೂ ನಿಮಗೇ ಸಮರ್ಪಣೆ.

- ಧಾರಿಣಿ ಮಾಯಾ

 

 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...