ಆದಿ-ಅಂತ್ಯಗಳ ನಡುವಿನ ಹರಿವು

Date: 08-02-2022

Location: ಬೆಂಗಳೂರು


‘ಸೂಕ್ಷ್ಮವಾಗುತ್ತಾ ಹೋದಷ್ಟು ನೋಡುವ, ಗ್ರಹಿಸುವ, ಚಿಂತಿಸುವ ರೀತಿ ಭಿನ್ನವಾಗುತ್ತದೆ. ಅದಕ್ಕೆ ಪೂರಕವಾಗಿ ಮಾರ್ಪಾಟುಗಳೂ  ಗೋಚರಿಸುತ್ತವೆ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ‘ಅನಂತಯಾನ’ ಅಂಕಣದಲ್ಲಿ ವಿಶ್ವದ ಜೊತೆಗೆ ಬದುಕಿನ ಆದಿ-ಅಂತ್ಯಗಳ ನಡುವಿನ ಹರಿವುಗಳ ಕುರಿತು ವಿವರಿಸಿದ್ದಾರೆ. 

ವಿಶ್ವಕ್ಕೆ ಆದಿ ಮೂಲವಾದ ಶಕ್ತಿ ಯಾವುದೋ ಅದನ್ನು ದೇವರು ಎಂದೋ, ಪರಬ್ರಹ್ಮ ಎಂದೋ, ಪರಾತ್ಪರ ಶಕ್ತಿ ಎಂದೋ ಒಟ್ಟಿನಲ್ಲಿ ಅನೇಕ ಹೆಸರುಗಳಿಂದ ಕರೆಯುತ್ತೇವೆ. ಯಾರೂ ಯಾವುದನ್ನೂ ಕಣ್ಣಾರೆ ಕಂಡಿಲ್ಲವಾದರೂ ಪ್ರೀತಿಯಿಂದ, ನಿಷ್ಠೆಯಿಂದ ನಂಬಿರೋ ಅನಂತ ಶಕ್ತಿ ಸ್ವರೂಪಕ್ಕೆ ನಮನವನ್ನು ಮನಸಾರೆ ಸಲ್ಲಿಸುತ್ತೇವೆ. ಧರ್ಮ ಹಾಗೂ ಮೌಲ್ಯ ಎರಡನ್ನೂ ಗೌರವಿಸುವ ಈ ಮಣ್ಣಲ್ಲಿ ವಿಜ್ಞಾನ ಮತ್ತು ಧರ್ಮ ಎರಡೂ ಏಕಕಾಲಕ್ಕೆ ಬೆಳೆಯುತ್ತವೆ. ಅಚ್ಚರಿಯ ವಿಷಯವೆಂದರೆ ಇಲ್ಲಿನ ಬಹು ಸಂಸ್ಕೃತಿ ಮತ್ತು ಅಧ್ಯಾತ್ಮ. ಅಲೌಕಿಕ ಜಗತ್ತಿನ ಮೊದಲ ಹೆಜ್ಜೆಯಾದ ವೈರಾಗ್ಯವನ್ನು ಭೈರಾಗಿಯಲ್ಲಿ ಕಂಡುಕೊಳ್ಳುವ  ಶಕ್ತಿ ಈ ಮಣ್ಣಿನದ್ದು. ಯಾವ ಸಿದ್ಧಾಂತವು ಹೆಚ್ಚಿನ ವಿಷಯಗಳನ್ನು ವಿವರಿಸಬಲ್ಲದೋ ಮತ್ತು ಜಾರಿಯಲ್ಲಿರುವ ಇತರ ಸಿದ್ಧಾಂತ, ನಂಬಿಕೆಗಳನ್ನು ವಿರೋಧಿಸುವುದಿಲ್ಲವೋ ಅಂತಹದ್ದನ್ನು ಸ್ವೀಕರಿಸಬೇಕು. 

ಭಾವನೆ ಎಂಬ ಶಕ್ತಿ ದೇಹಕ್ಕೆ ಕಾರಣ. ಆಲೋಚನೆಗೆ ದೇಹ ಕಾರಣವಲ್ಲ ಎಂದು ಹೇಳುತ್ತೇವೆ. ಆಧುನಿಕ  ಮನಸ್ಸು ಭಾವನೆಯನ್ನು ದೇಹ ಎಂದು ಕರೆಯುತ್ತದೆ. ಅನಂತವಾದುದು ಅಧ್ಯಾತ್ಮ ಸ್ವಭಾವವುಳ್ಳದ್ದು. ಕಾಲ ಮನಸ್ಸಿನಿಂದ ತೊಡಗುವುದು. ದೇಹವೂ ಮನಸ್ಸಿನಲ್ಲೇ ಇರುವುದು. ಕಾರಣವಿಲ್ಲದೆ ಕಾರಣ ನಿಲ್ಲಲಾರದು. ಕಾಲ-ದೇಹದ ನಿಮಿತ್ತಗಳು ಮನಸ್ಸಿನಲ್ಲಿವೆ. ಆತ್ಮ ಮನಸ್ಸಿನ ಆಚೆ ಇರುವಂತದ್ದು. ದೇಹವೇ ನಿಜವಾದ ಮನುಷ್ಯನಲ್ಲ. ಮನಸ್ಸೂ ಮನುಷ್ಯನಲ್ಲ. ಏಕೆಂದರೆ ಮನಸ್ಸಿಗೆ ಏರಿಳಿತಗಳಿವೆ. ದೇಹ ಮನಸ್ಸುಗಳೆರಡೂ ಅನವರತವೂ ಬದಲಾಗುತ್ತಿರುತ್ತವೆ. ಕಣಗಳು ವಿಭಜನೆಗೊಳ್ಳುತ್ತಿರುವುದರಿಂದ  ಯಾರಿಗೂ ಕೆಲವು ಕ್ಷಣಗಳವರೆಗೆ ಒಂದೇ ದೇಹವಿರುವುದಿಲ್ಲ. ಆದರೂ ಅದುವೇ ದೇಹವೆಂದು ಭಾವಿಸುತ್ತೇವೆ.  ಆತ್ಮ ಮಾತ್ರ ಒಂದೇ ವ್ಯಕ್ತಿತ್ವ ಉಳ್ಳದ್ದು. ಅದುವೇ ನಿಜವಾದ ಮನುಷ್ಯನ ವ್ಯಕ್ತಿತ್ವ ಹಾಗೂ ನೈಜ ಸ್ವರೂಪ. ವಿಕಾಸ ಆತ್ಮಕ್ಕೆ ಸಂಬಂಧಿಸಿದ್ದಲ್ಲ. ಅದೇನಿದ್ದರೂ ದೇಹಕ್ಕೆ ಮಾತ್ರ.   

ಅಲೌಕಿಕ ಅನುಭವ, ಅಧ್ಯಾತ್ಮವು  ಕಲೆಯನ್ನೂ ಆವರಿಸಿಕೊಂಡಿದೆ. ನಮ್ಮಲ್ಲಿರುವಷ್ಟು ಕಲಾಪ್ರಕಾರಗಳು ಲೋಕದ ಬೇರೆಲ್ಲೂ ಕಾಣ ಸಿಗದು. ಅವುಗಳಲ್ಲಿ ಕಾಣಿಸುವ ದೈವಿಕ ಸ್ವರೂಪಗಳು ಇನ್ನೆಲ್ಲೂ ಕಾಣದು. ಆ ದೃಷ್ಟಿಯೊಳಗೆ ಕಲೆಯು ದೈವಿಕ ಸ್ವರೂಪವನ್ನು ಪಡೆದು ಸಾಗುವಾಗ  ಶಿವ-ನಟರಾಜನಾಗಿ ತಾಂಡವ ಕುಣಿಯುತ್ತಾನೆ.. ಕೃಷ್ಣ- ಕೊಳಲನ್ನೂದಿ ಹೃದಯ ಕದ್ದ ಚೋರನಾಗುತ್ತಾನೆ..ಸಪ್ತಸ್ವರವನ್ನು ವೀಣೆಯಲ್ಲಿ ಮೀಟಿ ಬದುಕಿಗೆ ಇಂಪು-ತಂಪೆರಡನ್ನೂ ಸರಸ್ವತಿ ನೀಡುತ್ತಾಳೆ. ಹಲವು ಭಾವ ಸಂವೇದನೆಯ ಈ ಮಣ್ಣಿನ ಸಂಪದಕ್ಕೆ  ಮತ್ತದರ ಸಂಭ್ರಮಕ್ಕೆ ಎಣೆಯಿಲ್ಲ.    

ಸುಪ್ತವಾಗಿ, ಗುಪ್ತವಾಗಿ ಅದುಮಿಡಲ್ಪಟ್ಟ ಭಾವಕೋಶಗಳು ಅರಿವಿಗೂ ನಿಲುಕದೆ, ಸಿಲುಕದೆ ಮೆಲ್ಲನೆ ಕನಸಿನ ಲೋಕವನ್ನು ಪ್ರವೇಶಿಸಿ ಆಕಾರ ತಾಳುತ್ತವೆ. ಕಾಣುವ ಕನಸುಗಳು ಆತ್ಮವು ನಮ್ಮಿಂದ ಬರೆಸುವ ಜೀವನದ ಕೆಲವು ಅಧ್ಯಾಯಗಳಾಗಿರುತ್ತವೆ. ಕಳಚಿಹೋದ ಯಾವುದರದ್ದೋ ಮುಂದುವರಿದ ಭಾಗದಂತೆ ಕನಸುಗಳು ಬದುಕನ್ನು ಕಟ್ಟಿ ಕೊಡುವುದೂ ಇದೆ. ಬೆರೆಯಬೇಕಾದದ್ದು, ಬೆಸೆಯಬೇಕಾದದ್ದರ ಜತೆ ಸೇರುವುದೂ.. ಜೊತೆಯಲ್ಲಿ ಇರಬೇಕಾದದ್ದು ಇರದೆ ಇನ್ಯಾವುದೋ ಇರುವ ಹೊತ್ತಲ್ಲಿ ಅವುಗಳು ಜೊತೆ ಸೇರುವಂತಹದ್ದು ಕೂಡ ಇಲ್ಲಿಯೇ. ಅನುಭವ ವೇದ್ಯವಾದ ಆತ್ಮ ಸಂಗಾತಗಳು ದೊರಕಿ, ಹೇಳಲಾಗದ್ದನ್ನು ಹೇಳಿ ಹಗುರವಾಗುವ ತಾಣವೂ ಇಲ್ಲೇ. ಸೂಕ್ಷ್ಮವಾಗುತ್ತಾ ಹೋದಷ್ಟು ಸ್ವಪ್ನ ಲೋಕದೊಳಗೆ ಅರ್ಥಗಳನ್ನು ಹುಡುಕಬಹುದು. ಸೂಕ್ಷ್ಮಗೊಳ್ಳುವುದು ಎಂದರೆ ತಿಳಿಯಾಗುವುದು. ಹಾಗೆ ತಿಳಿಗೊಂಡದ್ದೇ ರೂಪಾನುರೂಪಗಳ ಸ್ವರೂಪ ದರ್ಶನವು  ತಿಳಿಗೊಳದಲ್ಲಿ ಪ್ರಕಟಗೊಳ್ಳುತ್ತಲೇ ಹೋಗುತ್ತದೆ. ಸೂಕ್ಷ್ಮತೆಯು ಒಳಗಿನ ಸಾಧ್ಯತೆಗಳನ್ನು ವಿಸ್ತರಿಸುತ್ತದೆ. ಹಾದಿಯಲ್ಲಿ ಎದುರಾಗುವ ಮುಳ್ಳನ್ನು ಕಂಡು ಚುಚ್ಚಿಸಿಕೊಳ್ಳದೆ ಮುಂದಕ್ಕೆ ನಡೆಯುವಾಗ, ಹಿಂದೆ ಬರುವವರಿಗೂ ಆ ಮುಳ್ಳು ಚುಚ್ಚಬಾರದೆಂಬ ಸೂಕ್ಷ್ಮಭಾವವು ಮೂಡಿತೆಂದಾದರೆ ದಾರಿಯಲ್ಲಿ ಮಲಗಿದ ಮುಳ್ಳನ್ನು ಮೆತ್ತಗೆ ಬದಿಗೆ ಸರಿಸಿ ಮುಂದಕ್ಕೆ ಹೆಜ್ಜೆ ಹಾಕುತ್ತೇವೆ.  

ಸೂಕ್ಷ್ಮವಾಗುತ್ತಾ ಹೋದಷ್ಟು ನೋಡುವ, ಗ್ರಹಿಸುವ, ಚಿಂತಿಸುವ ರೀತಿ ಭಿನ್ನವಾಗುತ್ತದೆ. ಅದಕ್ಕೆ ಪೂರಕವಾಗಿ ಮಾರ್ಪಾಟುಗಳೂ  ಗೋಚರಿಸುತ್ತವೆ. ವಿಭಿನ್ನ ಜೀವ ಸ್ವಭಾವದ ಭೇದಗಳನ್ನು ಕಾಣುತ್ತೇವೆ. ಹೊರಗಣ್ಣು ಕಾಣದ್ದು ಒಳಗಣ್ಣು ಕಂಡದ್ದೇ ಸೌಂದರ್ಯವು ಉಕ್ಕಿ ಪರಿಮಳ ಚಿಮ್ಮಿ ಬಿಡುತ್ತದೆ. ಮುಂದುವರಿದು ಇರವೇ ಇಲ್ಲವೇನೋ ಅನ್ನಿಸುವಷ್ಟರವರೆಗೆ ಉಸಿರಾಟವೂ ಸದ್ದನ್ನು ಮಾಡುವುದಿಲ್ಲ. ಆ ಬಗೆಯಲ್ಲಿ ಉಸಿರಾಡುತ್ತಲಿರುತ್ತೇವೆ. ಅಲ್ಲಿ ಮಾತುಗಳಿಗೆ ಯಾವುದೇ ತೆರನಾದ ಭಾರವಿರುವುದಿಲ್ಲ.. ಯೋಚನೆಗಳಿಗೆ ಪೂರ್ವಾಗ್ರಹದ ವಾಸನೆ ತಟ್ಟುವುದಿಲ್ಲ.. ಆತಂಕಗಳು ಹತ್ತಿರವೂ ಸುಳಿಯುವುದಿಲ್ಲ.. ಕ್ಷಣ ಕ್ಷಣಕ್ಕೂ ಅಪಾರ್ಥ ಗ್ರಹಿಕೆಗಳು ಹುಟ್ಟಿ, ಕಟ್ಟಿ, ಮೆಟ್ಟಿ ನಿಲ್ಲುವುದಿಲ್ಲ.. ಸ್ಪಂದನಾಶಕ್ತಿ  ದ್ವಿಗುಣಗೊಳ್ಳುತ್ತದೆ.. ಗುಟುಕು ಜೀವ ಹಿಡಿದು ನೇಪಥ್ಯಕ್ಕೆ ಸರಿದ ಭಾವಕೋಶಗಳು ಜೀವ ಪಡೆದುಕೊಳ್ಳುತ್ತವೆ... ಇಲ್ಲವೆಂದರೆ ಇಲ್ಲವೆಂದೂ…ಇದೆಯೆಂದರೆ ಇದೆಯೆಂದೂ ತಿಳಿಯುವ ಘಟ್ಟಕ್ಕೆ ತಲುಪಿದುದರ ಸೂಚನೆಯದು. ತತ್ಪರಿಣಾಮ ಇನ್ನೊಬ್ಬರನ್ನು ಕಾಣದಂತೆ ವ್ಯಾಪಿಸಿರುವ ಕತ್ತಲು ನಿಧಾನಕ್ಕೆ ಬೆಳಕಿನತ್ತ ಜಾರಿ ಬಿಡುತ್ತದೆ.  

ಸ್ಥಿತಿ-ಗತಿಗಳು ಮನಸ್ಥಿತಿಯನ್ನು ಕಟ್ಟಿ ಕೊಡುತ್ತವೆ ಎನ್ನುವುದು ನಿಜ. ಕಲಹ, ವಿಕ್ಷಿಪ್ತತೆ, ಕುತ್ಸಿತ- ಕುತರ್ಕ - ಮಾತ್ಸರ್ಯಗಳಿಂದ ತುಂಬಿ ಸರಕ್ಕನೆ ಒಳಕ್ಕೆಳೆದು ಬಿಡುವ ಶಕ್ತಿ ಇರುವ ವಿಷ ವರ್ತುಲವದು. ಅಂತಹ ಮನಸುಗಳಿರುವ ಮನೆಯಲ್ಲಿ ಹೆಚ್ಚು ಹೊತ್ತು ಕೂರಲಾಗುವುದಿಲ್ಲ. ಆ ತರದ ಮನಸುಗಳ ಜೊತೆಗೆ ಬಲುಹೊತ್ತು ನಿಲ್ಲಲೂ ಸಾಧ್ಯವಾಗುವುದಿಲ್ಲ. ಕೆಲವು ನಿಮಿಷಗಳಷ್ಟು ಮಾತ್ರ ಅಂತಹ ಮನೆ-ಮನದ ಮನಸ್ಥಿತಿಯ ಜೊತೆಯಲ್ಲಿರಲು ಸಾಧ್ಯ. ಒಂದೊಮ್ಮೆ ಆಡಿ- ಪಾಡಿ-ನಟಿಸಿದ್ದೆಲ್ಲವೂ ಹುಚ್ಚೆದ್ದು ವಿಕ್ಷಿಪ್ತವಾಗಿ ಕುಣಿಯಲು ತೊಡಗುವ  ಹೊತ್ತಲ್ಲಿ ಮತಿ ನೆಟ್ಟಗೆ ಇರುವುದಿಲ್ಲ. ಮತಿಗೆಟ್ಟ ಕಾಲಕ್ಕೆ ಹರಿ ಕೊಟ್ಟರೂ ಪ್ರಾಣಿ ಉಣ್ಣುವುದಿಲ್ಲ. ಈ ಸ್ಥಿತಿಯಿಂದ ಹೊರ ಬರಬೇಕಾದರೆ ಸಂವೇದನಾಶೀಲರಾಗಬೇಕು. ಸಂವೇದನೆಗಳು ಹುಟ್ಟಿತೆಂದಾದರೆ ಹೊಸ ಅರ್ಥಗಳತ್ತ ತೆರೆದುಕೊಂಡೆವು ಎನ್ನುವುದರ ಸೂಚನೆ. ಈ ಬಗೆಯ ಅರಳುವಿಕೆಯು ಒಂದಷ್ಟು ದರ್ಶನಗಳನ್ನು ಕರುಣಿಸುತ್ತವೆ. 

ನಮ್ಮ ಒಳಗೆ ಹುಟ್ಟುವ ದೊಡ್ಡ ನೋವು ಹಲವು ಬದಲಾವಣೆಗಳಿಗೆ ನಾಂದಿ ಹಾಡುತ್ತದೆ. ಹೆಚ್ಚೆಚ್ಚು ಘಾಸಿಗೊಂಡಂತೆ ಹೆಚ್ಚೆಚ್ಚು ಬಲಿತು ಕೊಳ್ಳುತ್ತೇವೆ. ಆದ್ದರಿಂದ ಘಾಸಿಗೊಳ್ಳುತ್ತಲೇ ಇರಬೇಕು.. ನೋವು ಉಣ್ಣುತ್ತಲೇ ನಡೆಯಬೇಕು.. ಆಗಲೇ ಸರಿಯಾದ ನಿಜದ ಹಾದಿಯಲ್ಲಿ ಹೆಜ್ಜೆ ಇಡಲು  ಸಾಧ್ಯ. ಸ್ಮರಣೆಯೊಳಗೆ ಇಣುಕು ಹಾಕುವ ವಿಸ್ಮರಣೆ ಇರುವುದರಿಂದಲೇ ಅಲ್ಲವೇ ಸ್ಮರಣೆಗೆ ಮಹತ್ತು?  ಅಂತಹವುಗಳು ನಮ್ಮೊಳಗಿನ ನಮ್ಮನ್ನು ನೋಡುವ ಸ್ಥಿತಿಯತ್ತ ಕೊಂಡೊಯ್ಯಬೇಕು. ಆ ರೀತಿಯ  ಮನಸ್ಥಿತಿಗೆ ತಲಪುವುದು  ಬಹುಮುಖ್ಯ.  

ದೊಡ್ಡದನ್ನು ಸೇರಬೇಕಾದರೆ ಎಷ್ಟು ಬಾರಿ ಕೆಳಕ್ಕೆ ಬಿದ್ದರೂ ಕಡಿಮೆಯೇ. ಬೀಳುತ್ತಲಿರುವುದು ಬೆಳೆಯಲಿಕ್ಕಿರುವ ಹಾದಿಯನ್ನು ತುಳಿಯಲು ಎಂದೇ ತಿಳಿಯಬೇಕು. ಹಾಗಿರುವ ಸಮಯದಲ್ಲಿ ತೆರೆದ ಕಿಟಕಿಯ ಮೂಲಕ ತಿಳಿ ಬೆಳಕು ಚಾಚಿ ನಮ್ಮೊಳಕ್ಕೆ ಪ್ರವೇಶಿಸುತ್ತದೆ. ಅಂತಹ ಸಾಧ್ಯತೆಯ ನಡುವೆ ಕಿಟಕಿಯ ಸರಳುಗಳ ಎಡೆಯಲ್ಲಿ ಬಂಧಿಯಾಗುವ ಅಪಾಯವಂತೂ ತಪ್ಪಿದ್ದಲ್ಲ. ಬಂಧಿಯಾಗದೆ ಇರಬೇಕಾದರೆ ಕ್ಷಣ ಕ್ಷಣಕ್ಕೆ ತೀರಕ್ಕಪ್ಪಳಿಸಿ ಸಾಯುವ ತೆರೆಗಳಂತೆ ನಿತ್ಯ ಸತ್ತು-ಹುಟ್ಟಿ-ಸಾಯುತ್ತಿರಬೇಕು. ಕಡಲಿನ ಒಡಲು ದೊಡ್ಡದು. ಕಡಲೊಡಲಲ್ಲಿ ಹೇಳಿ ತೀರಲಾಗದ ಸಾಂತ್ವನವಿದೆ. ಒಂದಷ್ಟು ಬೊಗಸೆಯಲ್ಲಿ ಹಿಡಿದು ಸುರುವಿಕೊಂಡೆವೆಂದಾದರೆ ಸಾಂತ್ವನಗಳು ಕೂಡ  ಪ್ರೀತಿಯ ಒರತೆಗಳಾಗಿ ಬಿಡುತ್ತವೆ. ಪ್ರೀತಿ ತುಂಬಿದ ಒಂದು ಬೆರಳನ್ನು ಚಾಚಿದರೆ ಅದನ್ನಪ್ಪಿ ಹಿಡಿದುಕೊಳ್ಳಲು ನೂರಾರು ಹಸ್ತಗಳಿವೆ. ಬೆಳಕಿನ ಕತ್ತನ್ನು ಮುರಿಯುವ ಕೈಗಳು, ಕತ್ತಲು ತನ್ನ ಗರ್ಭದಲ್ಲಿ ಅವಿತಿಟ್ಟಿರುವ ಬೆಳಕನ್ನು ಹಿಡಿಯುವತ್ತ ಚಲಿಸಬೇಕು. ಪ್ರೀತಿಯ ಒಡಲು ತುಂಬಿಸಲು ಕರಗಳು ಹಾತೊರೆಯಬೇಕು. ಅಲೆಗಳು ಕಡಲ ಅಂದವನ್ನು ಹೆಚ್ಚಿಸುವಂತೆ, ಕಷ್ಟಗಳು ಬಾಳ ಪರಿಮಳವನ್ನು ಹೆಚ್ಚಿಸುತ್ತವೆ. 

ಪ್ರತಿಯೊಂದು ಚರಾಚರಗಳಿಗೂ ಕಾಯುವಿಕೆಯು ತಪ್ಪಿದ್ದಲ್ಲ. ಹರಿಯುವ ನದಿಗೆ ಸಮುದ್ರವನ್ನು ಸೇರಲಿರುವ ಕಾಯುವಿಕೆ.. ಬೆಂಕಿಯೊಳಗೆ ಯಾವಾಗ ಉರಿದು ಬೂದಿಯಾಗುತ್ತೇನೆಂಬ ಸೌದೆಯ  ಕಾಯುವಿಕೆ.. ಸುಂದರ ಶಿಲ್ಪ ಯಾವತ್ತಾದೇನೆಂಬ ಶಿಲೆಯ ಕಾಯುವಿಕೆ.. ಹೊತ್ತೊಯ್ಯಲು ಹೆಗಲಿಗಾಸರೆ ಆಗಲಿರುವ ಬಿದಿರಿನ ಕಾಯುವಿಕೆ... ಈ ಎಲ್ಲವೂ ನಿದ್ರಿಸದಿರುವ ಆತ್ಮದಂತೆ. ಸೇರುವಲ್ಲಿವರೆಗಿನ ಕಾಯುವಿಕೆಯ ಯಾನದಲ್ಲಿ ಕತ್ತಲಾವರಿಸಿದರೆ ಬೆಳಕಿಲ್ಲವೆಂದು ಹಳಿಯದೆ ಬೆಳಕಿಗಾಗಿ ಹಂಬಲಿಸುತ್ತಿರಬೇಕು. ಬೆಳಕಿನ ಹಂಬಲಕ್ಕೆ ಮನಸ್ಸು ಎಣ್ಣೆಯಾಗಿ, ಹೃದಯ ಬತ್ತಿಯಾಗಬೇಕು. ಕೊನೆಯಲ್ಲಿ ಚಿತೆಯೊಳಗೆ ಬೆಳಕಾಗಿ ನಮ್ಮ ಕತ್ತಲನ್ನು ಓಡಿಸುವರೂ ನಾವೇ ಅಲ್ಲವೇ? 

ಥಟ್ಟನೆ ಮೌನ ಮತ್ತು ಕತ್ತಲನ್ನು ಭೇದಿಸಿ ನಡು ರಾತ್ರಿಯ ಕಪ್ಪು ಕಂಬಳಿಯನ್ನು ಎಸೆದು ಊಳಿಡುವ ನರಿಯ ಕೂಗು ಸತ್ತವರ ಹೃದಯವನ್ನೂ ಬಡಿದೆಬ್ಬಿಸುತ್ತದೆ. ಅಲ್ಲಿಗೆ ಅಶಾಂತ ಮನಸ್ಸಿನ ಕಡಲೊಂದು ಹುಟ್ಟಿ ಸರ್ವವನ್ನು ಕೆಡವಲೆಂದೇ ಭೋರ್ಗರೆಯುತ್ತ ಕಾದಿರುತ್ತದೆ. ಆ ಗಳಿಗೆಯಲ್ಲಿ ಮೌನದ ಹುತ್ತದೊಳಕ್ಕೆ ಇಳಿದು ಮುಚ್ಚಿಕೊಂಡು ಬಿಡಬೇಕು. ವಲ್ಮೀಕದೊಳಗೆ ದೊರಕಿದ ಅರಿವನ್ನು ಹರಿತಗೊಳಿಸುತ್ತಿದ್ದರೆ ಮುಂದಿನ ನಡೆ ಸ್ಪಷ್ಟ. ದಾರಿ ನಿಖರ. ಹೃದಯ-ಮನ ತುಂಬಿ ತಲೆ ತಗ್ಗಿಸಿ ನಡೆಯುವಂತಹ ವಿನಯವನ್ನೂ ವಲ್ಮೀಕದ ಅರಿವು ನೀಡುತ್ತದೆ. ಕೇಳದಿದ್ದರೆ, ನೋಡದಿದ್ದರೆ, ಗ್ರಹಿಸದಿದ್ದರೆ ಅವು ಯಾವುದೂ ನಮ್ಮ ಪಾಲಿಗಿರುವುದಿಲ್ಲವಲ್ಲ. ಕೇಳಿ, ನೋಡಿ, ಗ್ರಹಿಸಿದರ ಮಟ್ಟಿಗೆ ಮಾತ್ರ ಅವೆಲ್ಲವೂ ನಮಗಾಗಿಯೇ ಇರುವಂತೆ ಇದ್ದು ಬಿಡುತ್ತವೆ. ಯಾವುದಕ್ಕೂ ಅಂಟಿಕೊಳ್ಳದೆ,ಅಂಟಿಸಿಕೊಂಡರೂ ಅಂಟಿಸಿಕೊಳ್ಳದಂತೆ ಇರಬೇಕು. ಜೊತೆಗೆ-“ಮೂಖನ ಮಾಡಯ್ಯ ತಂದೆ.. ಕಿವುಡನ ಮಾಡಯ್ಯ.. ಎನ್ನ ಕುರುಡನ ಮಾಡಯ್ಯ ತಂದೆ”-ಯಾಚಿಸುತ್ತಿರಬೇಕು. ಕ್ಷಣದ ಸಖ್ಯ ಸಾಕೆನಿಸುವಷ್ಟರ ತನಕವೂ ಮಳೆಬಿಲ್ಲಿನ ಬಣ್ಣಗಳೊಂದಿಗೆ ಅದ್ದಿಸಿಕೊಳ್ಳುತ್ತಲೇ ಇರಬೇಕು.  

ಅವಕಾಶಗಳು ಇದ್ದಲ್ಲಿ ಇಷ್ಟಗಳು ತನ್ನಿಂತಾನಾಗಿ ಹುಟ್ಟಿಕೊಳ್ಳುತ್ತವೆ. ಕನ್ನಡಿ ಯಾವತ್ತಿದ್ದರೂ ಸತ್ಯವನ್ನೇ ಹೇಳುವಂತೆ; ಉತ್ತಮ ಕ್ರಿಯೆಗಳು ಮನದ ಅಂಗಣದಲ್ಲಿ ನಿಶಾಗಂಧಿಯನ್ನು ಅರಳಿಸಿ ಬಿಡುತ್ತದೆ. ಮಂಜಿನ ಮುಸುಕಿನಂತೆ ಅಪ್ರತ್ಯಕ್ಷವಾಗುವ ಒಲುಮೆ ಎಂದಿಗೂ ಬೇಡವೆಂಬ ಯೋಚನೆ ಮೊಳೆತರೂ..ಗಿಡ ಬಳ್ಳಿಗಳೆಡೆಯಲ್ಲಿ ಮೊಗ್ಗಾಗಿ, ಹೂವಾಗಿ ಅದು ಅಡಗಿ  ಕುಳಿತಿರುತ್ತದೆ.  ನೆನಪಲ್ಲಿ ಇದ್ದಾಗ ಮಾತ್ರ ಎಲ್ಲವೂ ಸುಂದರವಾಗಿರುತ್ತದೆ. ಸೂರ್ಯ ನಡು ನೆತ್ತಿಗೆ ಬಂದಾಗ ಹೊತ್ತು ಸಾಗುವ ಪ್ರಶ್ನೆಗಳು ಬಿಡದೇ  ಕಾಡುವುದುಂಟು. ತಿಳುವಳಿಕೆಯನ್ನು ಬದಲಾಯಿಸುವ ಆಳವಾದ ನೋವು ಯಾವತ್ತಿಗೂ ಇರಬೇಕಾದದ್ದೇ. ಬದುಕಲ್ಲಿ ಬಲವಾದ ಕೊಂಡಿಗಳು ಇರಬೇಕಾದುದರ ಅಗತ್ಯ ಮತ್ತು ಅವುಗಳನ್ನು ಚದುರದಂತೆ ಜೋಪಾನವಾಗಿ ಕಾಪಿಡುವ ಜರೂರತ್ತು ಹೆಚ್ಚೇ ಇದೆ. 

ಕಣಗಳು ವಿಭಜನೆಗೊಳ್ಳುತ್ತಲೇ ಹೊಸಹೊಸ ದೇಹಗಳನ್ನು ಧರಿಸಿ ಸಾಗುವಾಗ ಇಂತಹದ್ದೇ ದೇಹವೆಂಬುದು ಇರುವುದಿಲ್ಲ. ಹಾಗಾಗಿ 'ನಾನು' ಎಂಬ ಪದಕ್ಕೆ ಅರ್ಥವೇ ಇಲ್ಲ. ಹಾಗಾದರೆ ಈ 'ನಾನು' ಎಂಬ ದೇಹ ಯಾವುದು? ನ್ಯಾಯ-ಅನ್ಯಾಯಗಳನ್ನು ತೋರಿಸಲಾಗದ ಕಾಲದಲ್ಲಿ, ಆದಿ-ಅಂತ್ಯಗಳ ನಡುವಿನ ವಾಸ್ತವದಲ್ಲಿ ಬದುಕುವ ಕಾಲಗಳ ಮೊತ್ತವೇ ಇತಿಹಾಸ. ಕಾಲಕ್ಕೆ ಪ್ರಭಾವಿಸುವ ಶಕ್ತಿ  ಇರುವುದರಿಂದಲೇ ರಹದಾರಿಯನ್ನು ಕಟ್ಟಿ ಕೊಡಲು ಸಾಧ್ಯವಾಗುವುದು. ಭೂತದ ಎಳೆಯಿಂದ ಕಟ್ಟುವ ವರ್ತಮಾನದಲ್ಲಿ ಭವಿಷ್ಯವಿದೆ. ಸಂಕಷ್ಟ ಯಾವತ್ತಿಗೂ ಅನಾಥ. ಆದರೆ ನಂಬಿಕೆ, ವಿಶ್ವಾಸದ ಹರಿವು ಬತ್ತಬಾರದು. ರಜನೀಶ ಚೆಲ್ಲುವ ಬೆಳಕಿನ ಮಾಯಾ ವಾಸ್ತವದಲ್ಲಿ ಬದುಕಲೂ ಗೊತ್ತಿರಬೇಕಷ್ಟೇ.
ಈ ಅಂಕಣದ ಹಿಂದಿನ ಬರೆಹಗಳು:
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...