ಅಡಿಗಡಿಗೂ ನೆನಪಾಗುವ ಅಡಿಗರ ಕೊನೆಯ ಭೆಟ್ಟಿ-ಕೊನೆಯ ಕವನ 

Date: 07-10-2020

Location: ಬೆಂಗಳೂರು


’ಅಡಿಗರ ಪ್ರಭಾವದಿಂದ ಹೊಸಗನ್ನಡ ಸಾಹಿತ್ಯ ತನ್ನ ನವೋದಯದ ದಾರೀಯಿಂದ ಅರಗಾಗಿ, ಒಂದ್ ರೀತಿ ಹೊಸಾ ಮಕಾ ಪಡಕೊಂತು. ಅವರ ಕಾವ್ಯದ ಮಾತುಗಳು ಓದವ್ರಿಗೆ, ವಿಮರ್ಶಕರಿಗೆ, ವಿದ್ಯಾರ್ಥಿಗಳಿಗೆ ಹೊಸಾವು ಅನಸಾಕ್ಹತ್ತಿದ್ವು’ಎನ್ನುವ ವಿಮರ್ಶಕ- ಲೇಖಕ ಡಾ. ಬಸವರಾಜ ಸಾದರ ಅವರು ಆಕಾಶವಾಣಿಗಾಗಿ ಅಡಿಗರ ಸಂದರ್ಶನ ಮಾಡುವುದಕ್ಕೆ ಕಂಡುಕೊಂಡ ’ಪ್ರತಿಜ್ಞಾವಿಧಿ ಧ್ವನಿ ಮುದ್ರಣ ತಂತ್ರ’ ಎಂಬ ವಿನೂತನ ಮಾದರಿಯ ಬಗ್ಗೆ ಬರೆದಿದ್ದಾರೆ. ಈ ತಂತ್ರದ ಮೂಲಕ ಕನ್ನಡದ ಪ್ರಮುಖ ಲೇಖಕರ ದನಿ ಉಳಿಸಿಕೊಳ್ಳಲು ಸಾಧ್ಯವಾದ ಬಗೆಯನ್ನು ವಿವರಿಸಿದ್ದಾರೆ.

ಹಾಡೂದು, ಮಾತಾಡೂದು, ಮಾತಾಡ್ಸಿದ್ದು, ನಕ್ಕಿದ್ದು, ನಟಿಸಿದ್ದು, ದನಿ ಮಾಡಿದ್ದು-ಎಲ್ಲಾ ಕೂಡ್ಸೇ ಗಾಳಿಯೊಳಗ ಗಾಳ್ಯಾಗಿ ಹಾರಿ ಹೋಗುವಂಥಾ ಆಕಾಶವಾಣಿಯೊಳಗ ಮೂರು ದಶಕಕ್ಕೂ ಹೆಚ್ಚು ಕಾಲ ನೌಕರಿ ಮಾಡಿದ ನನಗ, ಹಂಗ್ ಹಾರಿಹೋದ ಗಾಳಿಯೊಳಗೂ ಮತ್ತ್ ಮತ್ತ್ ಹೊಳ್ಳ್ಯೊಳ್ಳಿ ಬಂದು ಚಿಟಕುಮುಳ್ಳು ಆಡ್ಸಿ, ಕಾಡ್ಸೂವಂಥಾ ಒಂದಿಷ್ಟು ಮಾತು-ಮಕಗೋಳು, ಕೇಳಿಸ್ತಾ ಇರೂದು, ಕಾಣಸ್ತಾ ಇರೂದು ಮನಸ್ಸೀಗೆ ಉಮೇದು ಕೊಡೂವಂತಾ ಸಂಗತಿ. ಬಾಳ ಉದ್ದದ ಈ ಕಾಲದಾಗ, ಕರ್ನಾಟಕದ ಬ್ಯಾರೇ ಬ್ಯಾರೆ ಊರುಗಳೊಳಗ, ನಾನು ಯಾವತ್ತೂ ನೆನಸಬಹುದಾದಂಥಾ ದೊಡ್ಡ ಮನಸಿನ ಮಂದೀನ ನೋಡೇನಿ. ಅವರ್‍ನ ನೆನಿಯೂದಂದ್ರ ಹುಗ್ಗಿ-ಹೋಳ್ಗಿ ಉಂಡಂಗ. ನೆನಪಿನ ಈ ರೊಟ್ಟೀ ಗಂಟು ಬಿಚ್ಚಿದ್ಯಾಗೊಮ್ಮೆ ಅವ್ರೆಲ್ಲಾ ಒಬ್ಬೊಬ್ರs ಆಕಾಶವಾಣಿ ಸ್ಟುಡಿಯೋಕ್ಕ ಬಂದಂಗ, ರೆಕಾರ್‍ಡ್ ಮಾಡಿದೆಂಗ, ಪ್ರಸಾರಾ ಮಾಡಿದೆಂಗ, ಹೆಗಲ ಮ್ಯಾಲ ಕೈಹಾಕಿ 'ಆರಾಮಿರಪಾ' ತಮ್ಮಾ ಅಂದಂಗ, ಒಟ್ಟs ಮರೀಲಾರದ ನೆನಪು ಬಿತ್ತಿ ಹೋದಂಗ-ಹಿಂಗೇನೇನೋ ಹಳೇ ಹಳವಂಡ ಕಾಡ್ತಾವ. ಅವುನ್ನ ನೆನೆಸಿಕೊಳ್ಳೂದಂದ್ರ, ಆ ರೊಟ್ಟೀಗಂಟು ಬಿಚ್ಚಿ ಎಲ್ಲಾರ್‍ಗ್ಯೂ ಕೊಟ್ಟು, ನಾನೂ ಉಂಡಂಗನಸ್ತೈತಿ. ಈ ದಾರಿಯೊಳಗ ನಾನು 'ಅ' ಅಥವಾ 'ಕು' ಮನಶ್ಯಾರ್‍ನೂ ನೋಡಿಲ್ಲಂತಲ್ಲ; ಆದ್ರ, ಅಂಥವರ್‍ನ ಮರಿಯೂದs ಪಾಡನಸ್ತೈತಿ.

ಹಿಂತಾ ದಾರಿಯೊಳಗ ನನಗ 'ಮಾಯಾಮಂತ್ರಾ' ಮಾಡಿಹೋದ ಬಾಳ ಹಿರ್‍ಯಾರೊಳಗ ಒಬ್ಬ ದೊಡ್ಡ ಕವಿ+ಮನಶಾ ಅಂದ್ರ ಅಡಿಗರು.(ಪ್ರೊ. ಗೋಪಾಲಕೃಷ್ಣ ಅಡಿಗ ಅವರು) ಈಗ ಅವರ ನೆನಪು ಆಗಿದ್ದಕ್ಕ ಕಾರ್‍ಣ ಅಂದ್ರ, 2018ರ ಫೆಬ್ರುವರಿ 18ಕ್ಕ ಅವರು ಹುಟ್ಟಿ ಪೂರ ಒಂದು ನೂರು ವರ್ಷ ಆತು ಅನ್ನೂದು. (ಜನನ: 18-2-1918) ಇದು ಸೈತ ನನಗ ನೆನಪಾಗಿದ್ದು, ಪತ್ರಿಕೆಗಳೊಳಗ ಎರಡ ವರ್ಷದ ಹಿಂದ ಬಂದಂತಾ ಒಂದು ಸುದ್ದೀ ಓದಿದ್ಯಾಗ. ಅದೇನೋ ಮಂದಿ, ಬಳಗಾ ಯಾರೂ ಇರಲಾರದ ಕೇಂದ್ರ ಸಾಹಿತ್ಯ ಅಕಾಡಮಿ ಅನ್ನೂ ಒಂದು ಲಿಮಿಟೆಡ್ ಕಂಪನಿಯವರು ಜನವರಿ-2018ರೊಳಗ ಅಡಿಗರ ಬಗ್ಗೆ ಒಂದು ಸೆಮಿನಾರ್ ಮಾಡಿದ್ರಂತ. ಪಾಪ ಅದಕ್ಕ ಹೊರಗಿನ ಯಾವ ಮಂದೀನೂ (ಆಡಿಯನ್ಸೂ) ಬರಲಾರದ್ದಕ್ಕ, ಅಕಾಡೆಮಿಯ ನೌಕರುದಾರರಷ್ಟs ಕೂಡಿ ಮಾಡಿದ್ದನ್ನೆಲ್ಲಾ ಖರ್ಚ ಮಾಡಿದ್ರಂತ. ಹಿಂತಾ ಸುದ್ದಿ ಓದಿದ ಕೂಡ್ಲೇ ನನಗ ಕಸಿವಿಸಿ, ಮರಮರ ಅನಿಸಿ ನೆನಪಾದದ್ದಂದ್ರ, ಸಾಯೂ ಹಿಂದಿನ ದಿನಾ ನಾನು ಅಡಿಗರನ್ನ 'ಭೆಟ್ಟಿ'ಯಾದದ್ದು ಮತ್ತು ನನಗಾಗೇ ಅವರು ಬರೆದ 'ಕೊನೆಯ ಕವನ'. ಈ ನಾತೆ ಹಿಡದು, ಅಡಿಗಡಿಗೂ ನೆನಪಾಗೋ ಅಡಿಗರ್‍ನ ಕಂಡದ್ದು, ಅವರ ಜೊತೀಗೆ ಮಾತಾಡಿದ್ದು, ಅದನ್ನೆಲ್ಲಾ ರೆಕಾರ್ಡ್ ಮಾಡಿದ್ದು-ಇವೆಲ್ಲಾ ಮತ್ತೊಮ್ಮೆ ಕಣ್ಮುಂದ್ ಬರ್‍ತಾವ. ಆ ನೆನಪಿನ ಟೇಪ್ ಪ್ಲೇ ಮಾಡಿದ್ರ ನಾನು ನೋಡಿದ ಅಡಿಗರು ನಿಮಗೂ ಸ್ವಲ್ಪರs ಕಾಣಬೌದು ಅನಸ್ತೈತಿ.

ನಾವೆಲ್ಲಾ ಎಮ್ಮೇ ಓದೂವಾಗ ಈಗಿನೆಂಗ್ ಕಲಸವ್ರವs ಹಾಳು-ಮೂಳು ಟೆಕ್ಸ್ಟ್ ಇರ್‍ತಿರ್‍ಲಿಲ್ಲ. ಪಂಪ, ರನ್ನ ಕುಮಾರವ್ಯಾಸರಂಥ ಹಿಂದಿನ ಕವಿಗಳ ಕೂಡ, ಕುವೆಂಪು, ಬೇಂದ್ರೆ, ಕಾರಂತ, ಶ್ರೀರಂಗ, ಮಾಸ್ತಿ, ಅಡಿಗ, ಗೋಕಾಕ, ನಿಸಾರ್ ಅಹ್ಮದ್, ಅನಂತಮೂರ್ತಿ, ಕಟ್ಟೀಮನಿ, ತ.ರಾ.ಸು. ಲಂಕೇಶ್ ಹಿಂತವ್ರ ಟೆಕ್ಸ್ಟ್‌ಗಳೂ ಇರತಿದ್ವು. ಈ ರೀತಿಯ ಟೆಕ್ಸ್ಟ್‌ಗಳ್ನ ಓದೇ ನಾವು ಇವರ್‍ನೆಲ್ಲಾ ತಿಳಕೊಳ್ಳಾಕ ಪ್ರಯತ್ನಾ ಮಾಡಿದ್ದು, ಮತ್ತ ಅದರ ಕೂಡs ಸಮಕಾಲೀನ ಸಾಹಿತ್ಯದ ಬಗ್ಗೆ ಒಂದೀಟರ ಅರವು ಮೂಡಿಸಿಕೊಂಡದ್ದು. ನಮ್ಮ ವಾರಿಗೀಯವ್ರಿಗೆ ಅಡಿಗ್ರು ಸಿಕ್ಕದ್ದು ಅಲ್ಲೇ ಮೊದ್ಲು. ಆವಾಗ ಅಡಿಗರ ಹೊಸಾ ನಮೂನಿ (ನವ್ಯ) ಕಾವ್ಯ, ಇಡೇ ರಾಜ್ಯದ ತುಂಬs ಸುದ್ದೀ ಮಾಡಿತ್ತು. ಕನ್ನಡ ನವೋದಯ ಮತ್ತು ಪ್ರಗತಿಶೀಲ ಘಟ್ಟಗಳನ್ನ 'ಅದೆಂತಾ ಸಾಹಿತ್ಯ?' ಅಂತ್ಹೇಳಿ ಡೈರೆಕ್ಟಾಗಿ ವ್ಯಂಗ್ಯ ಮಾಡಿ, 'ನಾವು ನವ್ಯದ ಸೃಷ್ಟಿಕರ್ತರು, ಹೊಸಾ ಕ್ರಾಂತಿ ಮಾಡ್ತೇವಿ, ಬ್ಯಾರೇ ನಮೂನಿ ಸಾಹಿತ್ಯಾ ನಿರ್ಮಾಣಾ ಮಾಡ್ತೇವಿ ನೋಡ್ರಿ' ಅಂತ ಒಂದಷ್ಟು ಮಂದಿ ಅವಾಗ ಒಳೇ ಹುರುಪ್ಲೇ ಬರ್‍ಯಾಕ್ಹತ್ತಿದ್ರು. ಅವರ್‍ಗೆಲ್ಲಾ ಪಟ್ಟದ ಗುರುಗಳು ಅಂದ್ರ ಅಡಿಗರು. ಒಂದ್ನಮೂನಿ ಭಜನಾ ಸಂಘ ಸ್ಥಾಪಿಸ್ಕೊಂಡ ಗುಂಪೊಂದು ಅಡಿಗರನ್ನ "ಒಂದು ಜನಾಂಗದ ಕಣ್ಣು ತೆರೆಸಿದ ಕವಿ" ಅಂತ ಕರಕೊಂತs ಅವರ್‍ನ, ಅವರ ಕಾವ್ಯವನ್ನ ತೆಲೀಮ್ಯಾಲ ಹೊತ್ಗೊಂಡು ಓಡ್ಯಾಡತಿದ್ರು, ಬಗಲಿಗೆ ಒಂದು ಉದ್ದನ್ನ ಚೀಲಾ, ಕಟ್ ಮಾಡಿಸ್ಕೊಳ್ಲಾರದ ತೆಲಿ, ಬೋಳಸಲಾರದ ಗಡ್ಡ- ಇವೆಲ್ಲಾ ನವ್ಯ ಕವಿಗಳ ಸಿಂಬಲ್ ಆಗಿದ್ವು. ನೋಡಿದ್ರ ಮಾನಸಿಕ ಮಾಡ್ಕೊಂಡ ಮನಶ್ಯಾರ ಥರಾ ಕಾಣಸ್ತಿದ್ರು ಅವ್ರು. ದೂರದಿಂದs ನೋಡಿ ಅವರ್‍ನ ಗುರುತಿಸಬಹುದಾಗಿತ್ತು ನವ್ಯ ಕವಿಗಳ್ನ.

ಮನಶ್ಯಾನ ಬದುಕು ಭಾಳ ಸಂಕೀರ್ಣ ಆದದ್ದು, ಅವನ ಮನಸ್ಸು ನೂರಾರು ಎಳೆದಾಟದೊಳಗ ಸಿಕ್ಕು, ಸಿಕ್ಕಾಗಿ ಅತಂತ್ರ ಆಗೈತಿ, ಕಾಮ ಅನ್ನೂದು ಮನಶ್ಯಾರ್‍ನ ತೊಳಲಾಡ್ಸ್ತೈತಿ, ನಾವು ಆಕಾಶಾ, ಸಮುದ್ರಾ, ಸೌಂದರ್ಯಾ, ನಿಸರ್ಗ, ದೇವ್ರು-ದಿಂಡ್ರು, ಅನುಭಾವಾ, ಆಧ್ಯಾತ್ಮಾ, ಪ್ರೀತಿ-ಪ್ರೇಮಾ ಅನಕೊಂತs ಕುಂತ್ರ ಆ ಸಮಸ್ಯೆಗಳ ಬಗ್ಗೆ ಯಾರು ಚಿಂತೀ ಮಾಡವ್ರು? ಅಂತ ಈ ಹೊಸಾ ಕವಿಗೋಳು ಹಿಂದಿಂದೆಲ್ಲಾ ಮುರದು ಹಾಕಿ 'ಹರಕುಚಂದ' (ಮುಕ್ತಛಂದ)ದೊಳಗ ಹೊಸಾ ರೀತಿಯ ಕವನಾ ಬರ್‍ಯಾಕ್ಹತ್ತಿದ್ದರು, ಅಸಂಗತ (ಅಬ್ಸರ್‍ಡ್) ನಾಟ್ಕಾ ಬರ್‍ಯಾಕ ಸುರೂ ಮಾಡಿದ್ರು. ಅವು ಎಷ್ಟ್ ಮಂದೀಗೆ ತಿಳದ್ವೋ ಏನೋ ಗೊತ್ತಿಲ್ಲ: ಆದ್ರ, ಅಲ್ಲೀ ತನಕಾ ಬಂದಂಥಾ ಕಾವ್ಯಕ್ಕ, ನಾಟಕಕ್ಕ ಈ ನವ್ಯರನ್ನವ್ರು ಒಂದು ಟಾಂಗ್ ಕೊಟ್ಟದ್ದಂತೂ ಖರೆ. ಈ ಹೊತ್ತಿನ್ಯಾಗs ಅಡಿಗರು ಮತ್ತ ಅವರ ಕಾವ್ಯ ಹೊಸಾ ನಮೂನಿ ಅಭಿವ್ಯಕ್ತಿ ಆಗಿ ದನಿ ಮಾಡಾಕ್ಹತ್ತಿತು. ಅಡಿಗರು ಬಳಸಾಕ್ಹತ್ತಿದ ಸಂಕೇತ, ಪ್ರತಿಮೆ, ರೂಪಕಗಳ ಕಾರಣದಿಂದ ಕಾವ್ಯದ ಅಭಿವ್ಯಕ್ತಿ ಸ್ವರೂಪ ಮೊದಲಿದ್ದದ್ದಕ್ಕಿಂತ ಬ್ಯಾರೇ ರೀತೀದs ಆಯ್ತು. ಭಾಳ ಮುಖ್ಯಂತಂದ್ರ ನಮ್ಮ ಪರಂಪರಾ ಅಂತೇನೈತೆಲ್ಲಾ, ಅದನ್ನ ಅಗದು, ಬಗದು, ಸೋಸಿ ನೋಡೂವಂತಾ ಒಂದ್ ಬ್ಯಾರೇ ಮಾರ್ಗಾ ಅವಾಗ ತೆರಕೊಂತು. ಕಾವ್ಯ ಅಂಥಂದ್ರ ಹಾಡ್ಕೊಂತs ಹೋಗೂದಲ್ಲ; ಹಾಡೂದೂ ಅಲ್ಲ; ನಮ್ಮನ್ನ ನಾವು ಒಳಗೊಳಗs ನೋಡ್ಕೊಳ್ಳುವಂಥಾದ್ದು ಅನ್ನೂ ಹೊಸಾ ದಾರಿ ನಿರ್ಮಾಣ ಆತು. ಇದೆಲ್ಲಾ ಒಂದಕಡೆ ನಡೀತಿರೂವಾಗನs ಮತ್ತೊಂದ್ ಕಡೆ ಫಾರಿನ್ನಿಗೆ ಹೋಗಿ ಹೊಳ್ಳಿ ಬಂದಿದ್ದ ವಿ.ಕೃ. ಗೋಕಾಕರೂ ನವ್ಯದ ಹೊಸಾ ಚಾಲ ಹಿಡದು ಬರ್‍ಯಾಕ್ಹತ್ತಿದ್ರು. ಇನ್ನೊಂದು ಭಜನಿ ಮ್ಯಾಳ ಸುರೂವಾಗಿ, ಅವರ್‍ನ ಬೆನ್ನಹತ್ತಿ ಅವರೂ "ಒಂದು ಜನಾಂಗದ ಕಣ್ಣು ತೆರೆಸಿದ ಕವಿ" ಅಂತ ಹೇಳ್ಕೊಂತs ಹೊಂಟ್ತು. ಏನರs ಇರ್‍ಲಿ, ಅಕ್ಕಡೆ ಒಬ್ರು, ಇಕ್ಕಡೆ ಒಬ್ರು ಕೂಡ್ಕೊಂಡು ಎರಡೂ ಕಣ್ಣು ತೆರಸಿ ನವ್ಯ ಅನ್ನೂ ಭವ್ಯ ಪರಂಪರೆ ಚಾಲೂ ಮಾಡಿದ್ರು. ಇದೆಲ್ಲಾ ಕಥೀ ಏನಿದ್ರೂ, ಕನ್ನಡದೊಳಗ ನವ್ಯ ಅನ್ನೂ ಘಟ್ಟಕ್ಕ ಗಟ್ಟ್ಯನ ಪಟ್ಟಾ ಕಟ್ಟಿದ್ದು ಅಡಿಗರು ಅನ್ನೂದು ಮಾತ್ರ ವಾಜಿಮಿ ಮಾತು. ಒಟ್ಟs ಇದನ್ನ- 'ಅಡಿಗ್ರು ನವ್ಯಕ್ಕ ಅಡಿಗಲ್ಲಾದ್ರ, ಗೋಕಾಕ್ರು ಸಿಮೆಂಟ್ ಆದ್ರು' ಅಂತ ಹೇಳಿದ್ರೂ ತಪ್ಪಾಗೂದುಲ್ಲ.

ಹಿಂತಾ ಕಾಲದೊಳಗ "ಎಮ್ಮೇ" ಮಾಡ್ತಿದ್ದ ನಮಗ ಟೆಕ್ಸ್ಟ್‌ಹಚ್ಚಿದ್ರಿಂದ- ಅಡಿಗರ ಹೊಸಾ ಕಾವ್ಯವನ್ನ ಓದೂ ಅವಕಾಶಾ ಸಿಕ್ಕಿತು. "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು", "ರಾಯರು ಬಂದರು ಮಾವನ ಮನೆಗೆ", "ಜೋಗದ ಸಿರಿ ಬೆಳಕಿನಲ್ಲಿ, ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು", "ಬಾರಿಸು ಕನ್ನಡ ಡಿಂಡಿಮವ", "ಎದೆ ತುಂಬಿ ಹಾಡಿದೆನು ಅಂದು ನಾನು", "ವಿಶ್ವ ವಿನೂತನ, ವಿದ್ಯಾಚೇತನ"-ಬರೇ ಹಿಂತಾ ಹಾಡುಗೋಳs ಕಿಂವಿಮ್ಯಾಲ ಸುಳದಾಡ್ತಿದ್ದ ಆ ಜಮಾನಾದೊಳಗ, ಅಡಿಗರಂಥವರಿಂದ ಬಂದಂಥಾ ಹೊಸಾ ಕಾವ್ಯ, ಬ್ಯಾರೇದ್ದs ಚಾಲ ಹಿಡದು, ಖರೇವಂದ್ರೂ ಅಲ್ಲೀತನಕಾ ಇರಲಾರದ ಹೊಸಾ ಚಿಂತನಾಕ್ಕ ಹಚ್ಚಿದ್ವು. ಮೊದಮೊದಲ್ಗೆ, ಏನ್ ಬರದ್ರೂ ಕಾವ್ಯ ಅಕ್ಕೈತಿ, ಛಂದೋಶಿಸ್ತು ಇರಲಾರದ್ದೂ ಸೈತ ಕಾವ್ಯ ಆಗಬೌದು ಅನ್ನಿಸಿದ್ರೂ, ಬರಬರ್‍ತಾ ಅದು ಹಂಗಲ್ಲಾ, ಏನೋ ಒಂದ್ ನಮೂನಿ ಹೊಸತನದ ಹುಡುಕಾಟ ಮತ್ತ ಲಯ ಇದರೊಳಗ ಐತಿ ಅಂತ ಅನಸಾಕ್ಹತ್ತಿತು. ಅಡಿಗರು ಬರದಂಥಾ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಅನ್ನೂ ಮಾತು, ಇರಲಾರದ್ದನ್ನ ಹುಡುಕಾಕ ಹಚ್ಚಿತು. ಅವರ ಭೂಮಿಗೀತ, ಚಂಡೆಮದ್ದಳೆ, ಹಿಮಗಿರಿಯ ಕಂದರ, ಗೊಂದಲಪುರ-ಇಂಥಾ ಎಷ್ಟೋ ಕವನಗಳು ಆವಾಗಿನ ಕನ್ನಡ ಕವಿಗಳಿಗೆ ಬ್ಯಾರೇ ನಮೂನಿ ದನಿ ಆಗಿ, ಹೊಸಾ ದಾರೀ ತೋರ್‍ಸಿದ್ವು. ಕಾವ್ಯವನ್ನ ಭಾಳ ಸೀರೀಯಸ್ಸಾಗಿ ತೊಗೊಂಡಿದ್ದಂಥಾ ಮತ್ತು ಅದೊಂದನ್ನs ಧ್ಯಾನಿಸಿದಂಥಾ ಅಡಿಗರು "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಅಂಥ ಆ ಪುರುಷೋತ್ತಮನ ರೂಪರೇಖೆ ಅಂತ್ಹೇಳಿ", ಕಾವ್ಯ ನಿರ್ಮಾಣಕ್ಕ ಚಿತ್ತ ಹುತ್ತಗಟ್ಟುವ ಅವಶ್ಯಕತಾ ಐತಿ ಅನ್ನೂದನ್ನ ತೋರಿಸಿಕೊಟ್ರು. ಇದರ ಕೂಡನs ಕಾವ್ಯ ಅಂದ್ರ ನಾವು ತಿಳಕೊಂಡಷ್ಟು ಸರಳಲ್ಲ, ಸುಲಭಲ್ಲ, ಅದರ ನಿರ್ಮಾಣಕ್ಕ ಭಾಳ ಶ್ರಮ ಬೇಕು ಅಂತ ಅವ್ರು ಸಂಕೇತ ಮತ್ತು ರೂಪಕದ ಭಾಷೆಯೊಳಗ ಸೂಚನಾ ಕೊಟ್ರು. "ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು/ ಕೆಳಗೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ/ ಕಂಡೀತು ಗೆರೆಮಿರಿವ ಚಿನ್ನದದಿರು,/ ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ / ಇನ್ನಾದರೂ ಕೊಂಚ ಕಲಿಯಬೇಕು. ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ/ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು"- ಎಂದು ಅತ್ಯಂತ ಅರ್ಥಪೂರ್ಣ ಮಾತು ಹೇಳಿ, ಅದಿರು ಅಗಿದು, ಕಾಸಿ-ಸೋಸಿ, ಚಿನ್ನ ತೆಗೆದು, ಮೂರ್ತಿ ನಿರ್ಮಿಸುವ ಕ್ರಿಯೆಗೆ ಕಾವ್ಯನಿರ್ಮಾಣ ಕ್ರಿಯೆಯನ್ನ ಅವರು ಹೋಲಿಸಿದ್ದು ಒಂದ್ ರೀತಿ ಹೊಸಾ ದಾರಿ ತೋರಿಸಿದಂಗಾತು. ಈ ರೀತಿ ಭಿನ್ನವಾದಂಥಾ ನವ್ಯದ ದನಿಗೆ ತಮ್ಮ ದನಿ ಕೂಡ್ಸಿದ ಎಷ್ಟೋ ಜನಾ ಕವಿಗೋಳು ಅವಾಗ ಹೊಸಕಾವ್ಯದ ನಿರ್ಮಾಣಾ ಮಾಡಾಕ ಸುರೂ ಮಾಡಿದ್ರು. ಅವಾಗ ಬರೇ ಕವಿಗಳಷ್ಟs ಅಲ್ಲ; ಅವರ ಬೆನ್ನ ಹಿಡದು ಹೊಸಾ ವಿಮರ್ಶಕರೂ ಹುಟ್ಕೊಂಡ್ರು. ವಿಮರ್ಶಕರs ಕವಿಗಳನ್ನ ಸಾಯ್ಸೂದು, ಬದಕಿಸೂದು ಮಾಡಾಕ್ಹತ್ತಿದ್ರು. (ಇದು ಯಾವಾಗ್ಲೂ ಇದ್ದ್ದದ್ದs) ಬೇಕಾದವ್ರ್ನ ಎತ್ತೂದು, ಬ್ಯಾಡಾದವ್ರ್ನ ಕೆಡವೂದೂ ಸುರೂವಾಗಿದ್ದು ಆವಾಗಿಂದನs. ಒಟ್ಟs ನವ್ಯ ಅನ್ನೂದು ಕನ್ನಡದಾಗ ಒಂದ್ನಮೂನಿ ಹೊಸಾ "ಗದ್ಲಾ" ಸುರೂ ಮಾಡಿತು. ಅದರ ಕೂಡs, ಸಾಹಿತ್ಯದೊಳಗ ರಾಜಕೀಯಾನೂ ಚೊಲೋತಾಗೇ ಪ್ರವೇಶ ಮಾಡ್ತು. ಹಿಂತಾದ್ದೆಲ್ಲಾ ಏನs ಇದ್ರೂ ಅಂತೂ ಅವಾಗ ಹೊಸಾ ನೀರು ಹರ್‍ಯಾಕ್ಹತ್ತಿತು ಅನ್ನೂದs ಭಾಳ ಸಂತೋಷದ ವಿಷಯ; ಅದು ಸತ್ಯವಾದ ವಿಷಯ ಕೂಡ.

ಅಡಿಗರ ಪ್ರಭಾವದಿಂದ ಹೊಸಗನ್ನಡ ಸಾಹಿತ್ಯ ತನ್ನ ನವೋದಯದ ದಾರೀಯಿಂದ ಅರಗಾಗಿ, ಒಂದ್ ರೀತಿ ಹೊಸಾ ಮಕಾ ಪಡಕೊಂತು. ಅವರ ಕಾವ್ಯದ ಮಾತುಗಳು ಓದವ್ರಿಗೆ, ವಿಮರ್ಶಕರಿಗೆ, ವಿದ್ಯಾರ್ಥಿಗಳಿಗೆ ಹೊಸಾವು ಅನಸಾಕ್ಹತ್ತಿದ್ವು. "ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬ್ಯಾಡ....", "ಕಲ್ಲಾಗು ಕಲ್ಲಾಗು! ಬಾಳ ಬಿರುಗಾಳಿಯಲಿ, ಅಲ್ಲಾಡದೆಯೆ ನಿಲ್ಲು ನಿಲ್ಲು ಜೀವ", "ನಿನಗೆ ನೀನೇ ಗೆಳೆಯ ನಿನಗೆ ನೀನೆ.....", "ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು, ಕರಗೀತು ಮುಗಿಲ ಬಳಗ, ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ, ತೊಳೇದೀತು ಒಳಗು-ಹೊರಗು"-ಇಂಥಾ ಕವನ ಸಾಲುಗಳು ಅಲ್ಲೀತನಕಾ ಕೇಳಿರಲಾರದ ಅನುಭವಾ ಕೊಡಾಕ್ಹತ್ತಿದ್ವು. ಸಹಜವಾಗೆನs ಅವು ಭಾಳ ಮಂದೀಗೆ ಹಿಡಿಸಿದ್ವು. ಹಿಂತಾ ಸಂದರ್ಭದೊಳಗ ತಮ್ಮ ಜಗಾ ಇವರು ಹೊಡ್ಕೊಳ್ಳಾಕತ್ಯಾರಲ್ಲ!! ಅಂತ ನವೋದಯದ ಕವಿಗಣ, ಮತ್ತ ಮುಂದ ಬಂದಂಥಾ ಪ್ರಗತಿಶೀಲ ಕ್ರಾಂತಿಕಾರಿಗಳು ಹೊಟ್ಟೀ ಉರಸ್ಕೊಳ್ಳಾಕ ಹತ್ತಿದ್ದರು. ಮತ್ತ ಗದ್ಲಾ ಸುರುವಾತು. ಅವರ ಮ್ಯಾಲ ಇವ್ರು, ಇವ್ರ ಮ್ಯಾಲ ಅವ್ರು ಆರೋಪ, ಪ್ರತ್ಯಾರೋಪ, ಪ್ರಶ್ನೆ, ಪ್ರತಿಪ್ರಶ್ನೆಗಳ ತೂರ್‍ಯಾಟಾ ಚಾಲೂ ಮಾಡಿದ್ರು. ಹಿಂತಾದೆಲ್ಲಾ ಏನs ನಡದ್ರೂ ನವ್ಯರು ಕನ್ನಡ ಸಾಹಿತ್ಯಕ್ಕೆ ಬ್ಯಾರೇ ದಿಕ್ಕು ಕೊಟ್ಟದ್ದನ್ನ ಯಾರೂ ಅಲ್ಲಗಳ್ಯಾಕಾಗೂದುಲ್ಲ. ಹಿಂತಾ ಹೊಸತನಕ್ಕ ಕಾರ್‍ಣಾದವ್ರು ಅಡಿಗರs ಅನ್ನೂದು ಹೆಮ್ಮೆಯಿಂದ ಹೇಳಬೇಕಾದ ಮಾತು. ಇದರಾಗ ಎರಡ್ನೇ ಮಾತs ಇಲ್ಲ.

ಈ ಹೊಸತನದ ಕೂಡs ಅಡಿಗ್ರೂ ಆವಾಗ ಬರೆದ ಕೆಲವು ಅದ್ಭುತ ಭಾವಗೀತೆಗಳು ಆಕಾಶವಾಣಿಯ ಮೂಲಕ ಪ್ರಸಾರವಾಗಿ ಜನರ್‍ಗೆ ಹೊಸಾ ಗುಂಗ್ ಹಿಡಿಸಿದ್ವು. ಅವ್ರು ಕಾವ್ಯವನ್ನ ಹಾಡಬಾರ್‍ದೂ ಅಂಥಂದ್ರೂ, ಅವರ "ಯಾವ ಮೋಹನ ಮುರಲಿ ಕರೆಯಿತೊ ದೂರ ತೀರಕೆ ನಿನ್ನನು...." ಅನ್ನೂ ಹಾಡು, ನಾಡಿನ ತುಂಬs ಹರದಾಡ್ತಿತ್ತು. "ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು, ನಾವು ಮನುಜರು, ನಾವು ಮನುಜರು...." ಅನ್ನೂ ಹಾಡು ಜನರೊಳಗ ಹೊಸಾ ಹುರುಪು ತುಂಬಿತು. ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ, ನಾವು ಮನುಜರು, ನಾವು ಮನುಜರು... ಅಂತನ್ನೂ ಹಾಡು ಮನಸ್ಸಿನೊಳಗ ನಾವೆಲ್ಲಾ ಒಂದಪಾ ಅನ್ನೂ ಭಾವನಾ ಹುಟ್ಟಿಸ್ತು. ಹೀಂಗ್ ಅಡಿಗರು ನಾಡಿಗೆಲ್ಲ 'ಅರ್ಥ'ಪೂರ್ಣ ಕಾವ್ಯದ ಮೂಲಕ, ಹಾಡುಗಳ ಮೂಲಕ ಪರಿಚಯ ಆದ್ರು. ಅವಾಗ ಕ್ಯಾಸೆಟ್ ಕವಿಗಳ ಭಾವಪೂರ್ಣ ವ್ಯಾಪಾರನೂ ಹಗೂರ್‍ಕs ಸುರೂವಾಗಿತ್ತಾದ್ರೂ ಅವ್ರ ಹಾಡ್ಗೋಳು ಜೀವ್ನದ ತಳಾ ತೋರಿಸಲಿಲ್ಲ. ಮ್ಯಾಲ ಮ್ಯಾಲs ಕೈಯಾಡಿಸಿದೆಂಗ್ ಮಾಡಿ ಗೋಣು ಹಾಕಸ್ತಿದ್ವು ಅವು. ಅಡಿಗರು ಆಗ ಪ್ರೊಫೆಸರ್ ಆಗಿ ಸೈತ ಬಾಳ ಹೆಸರು ಮಾಡಿದ್ರಿಂದ ಅಲ್ಲಲ್ಲೇ ಭಾಷ್ಣಾ ಮಾಡಾಕ ಅವರ್‍ನ ಕರೀತಿದ್ರು. ನಡುವೆ ಇಲೆಕ್ಷನ್ಕ್ ನಿಂತೂನೂ ಅವ್ರು ಸುದ್ದಿ ಮಾಡಿದ್ರು. ಒಟ್ಟs ಆವಾಗ ಒಂದಿಷ್ಟು ದಿನಾ ಅಡಿಗರ್‍ದು ಹವಾನs ಹವಾ. ಅದು ಬರೇ ಹವಾ ಆಗಿರ್‍ಲಿಲ್ಲ; ಆಕ್ಷಿಜನ್ನೂ ಆಗಿತ್ತು, ಏದುಸುರ ಬೀಡ್ತಿದ್ದ ವಾತಾವರಣದಾಗ ಹೊಸಾ ಉಸಿರಾಟಕ್ಕ ಅವಕಾಶಾನೂ ಮಾಡ್ತು.

ಹಿಂತಾ ಅಡಿಗರಂದ್ರ ಸಹಜವಾಗೇ ಎಲ್ಲಾರ್‍ಗ್ಯೂ ಕುತೂಹಲ ಇದ್ದಂಗ ನನಗೂ ಇತ್ತು. ಭಾಳ ಖಡಕಿನ ಮನಶ್ಯಾ ಅಂತ ಬ್ಯಾರೆ ಎಲ್ಲಾರೂ ಹೇಳ್ತಿದ್ದದ್ದನ್ನ ಕೇಳಿ, ಇರಬೌದು ಬಿಡು ಅಂತ ಸುಮ್ಮನಿದ್ರೂ, ಅವರ್‍ನ ನೋಡಬೇಕನ್ನೂ ಆಶಾ ಮಾತ್ರ ಯಾವಾಗ್ಲೂ ನನ್ನ ಕಾಡ್ತಿತ್ತು. ಮಾಸ್ತರಾಗಿದ್ರ ಅದು ಸಾಧ್ಯ ಆಗ್ತಿತ್ತೋ ಏನೋ! ಆದ್ರ ಲಂಚಾ, ವಸೂಲಿ ಮತ್ತ ಇನ್ನೂ ಏನೇನೋ ಮಾಡೂ-ಕೋಡೂ ತಾಕತ್ತು ಇಲ್ಲದ್ದಕ್ಕ, ರ್‍ಯಾಂಕ್ ಮತ್ತ ಬಂಗಾರದ ಪದಕ ಕೊಳ್ಳಾಗಿದ್ರೂ ರಾಜ್ಯ ಸರಕಾರದಿಂದ ಮಾಸ್ತರಿಕಿ ಪಡಿಯೂದೂ ನನಗೆ ಸಾಧ್ಯ ಆಗ್ಲಿಲ್ಲ. ಈ ಹಲಕಾ ಮಂದೀ ಕೂಡ ಉಸಾಬರೀನs ಬ್ಯಾಡಂತ ನಾನು ಆವಾಗಿನ ಕೆ.ಪಿ.ಎಸ್.ಸಿ. ಚೇರ್‍ಮನ್ನಗ ದೊಡ್ಡ (ಬರೋಬ್ಬರಿ) ನಮಸ್ಕಾರಾ ಹೇಳಿ, ಕೇಂದ್ರ ಸರಕಾರದ ಯು.ಪಿ.ಎಸ್.ಸಿ. ಪರೀಕ್ಷೆ ತೊಗೊಂಡು ಮೆರಿಟ್ ಮ್ಯಾಲಿಂದನs ಆಕಾಶವಾಣಿಯೊಳಗ ನೌಕರಿ ಪಡದ ಮ್ಯಾಲ, ನನ್ನ ಲೈನs ಬದ್ಲಾಗಿ ಹೋತು. ಹಿಂತಾ ಸ್ಥಿತಿಯೊಳಗ ಅಡಿಗರು ಇನ್ನೆಲ್ಲಿ ಸಿಗಾಕ ಸಾಧ್ಯ ಅನ್ನೂದು ನನ್ನ ನೋವಾಗಿತ್ತು. ಅದು ಖರೇನೂ ಇತ್ತು.

ಹಿಂತಾ ನನ್ನ ತಿಳುವಳಿಕಿ ಸುಳ್ಳಾಗಿ, ಕಡೇಕ ಅಡಿಗರನ್ನ ಭೆಟ್ಟ್ಯಾಗೋ ಅವಕಾಶ ನನಗ ಆಕಾಶವಾಣಿಯಿಂದನs ಸಿಕ್ಕದ್ದು ಭಾಳ ಸಂತೋಷಕ್ಕ ಕಾರಣಾತು. ಆದ್ರ ಅಷ್ಟೊತ್ಗೇ ಭಾಳ ತಡಾ ಆಗಿತ್ತು. ನಾನು ನೋಡಬೇಕಾಗಿ ಬಂದದ್ದು ಕುಸಿದು ಕುಪ್ಪಡಿಗೆ ಆಗಿದ್ದ ಅಡಿಗರನ್ನ. ರಿಟೈಯರ್ ಆಗಿ ಬೆಂಗಳೂರಿಗೆ ಬಂದು ನಿಂತಮ್ಯಾಲ ಅಡಿಗರಿಗೆ ಪ್ಯಾರಲೆಸಿಸ್ ಆಗಿ ಹಾಸಿಗೆ ಹಿಡಿದಿದ್ರು. ಅವರ್‍ನ ಆ ಸ್ಥಿತಿಯೊಳಗ ನಾನು ಕಂಡದ್ದು 1991ರೊಳಗ. ನಾನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಗುಲ್ಬರ್ಗಾದಿಂದ ವರ್ಗ ಆಗಿ ಬಂದಾಗ ಅಡಿಗರು ಇಲ್ಲೇ ಇರೋದು ಗೊತ್ತಾಗಿ ಒಂದ್ಸರ್‍ತೆ ಭೆಟ್ಟ್ಯರ ಆಗಿ ಬರೂನು ಅನಿಸಿ ಅವ್ರ ಮನಿಗೆ ಹ್ವಾದ್ಯಾ. ಆದ್ರ, ನಾನು ಕಲ್ಪನಾ ಮಾಡ್ಕೊಂಡಿದ್ದ ಖಡಕ್ಕಿನ ಅಡಿಗರು ಅವರಾಗಿರ್‍ಲಿಲ್ಲ. ಏನೇ ಆದ್ರೂ ಅವರನ್ನ ಕಂಡದ್ದs ಖುಷಿ ಅನಿಸಿ, ಅವರ್‍ನ ಮಾತಾಡ್ಸಿ ಏನರs ಕಾರ್ಯಕ್ರಮಾ ಮಾಡಬೇಕು ಅಂತಂದು ಅವ್ರ ಒಪ್ಪಿಗೆ ಕೇಳ್ದ್ಯಾ. "ನೋಡಿ ಬಸವರಾಜ್ ನನ್ನ ಸ್ಥಿತಿ ಹೀಗಿದೆ, ಏನ್ ಮಾಡೋಕೆ ಸಾಧ್ಯ?" ಅಂತ ಅವ್ರು ತಮ್ಮ ನೋವನ್ನ ತೋಡ್ಕೊಂಡ್ರು.

ಅಷ್ಟರೊಳಗs ಕನ್ನಡ ಸಾಹಿತ್ಯ ಜಗತ್ತಿನೊಳಗ ಮತ್ತೊಂದು ಗದ್ಲಾ ಸುರೂವಾತು. ಕನ್ನಡ ಸಾಹಿತ್ಯ ಪರಿಷತ್ತು ಹುಬ್ಬಳ್ಳಿಯೊಳಗ ನಡಸಾಕ ತಯ್ಯಾರಿ ಮಾಡಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಮರ್ಥರಾದವರನ್ನು ಅಧ್ಯಕ್ಷರನ್ನಾಗಿ ಮಾಡೇತಿ ಅಂತ ಹೇಳಿ, ನಾಡಿನ ತುಂಬ ದೊಡ್ಡ ಗದ್ಲಾ (ಇದು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಕಾಲದ ರೋಗ) ಸುರೂವಾಗಿ, ಬೆಂಗಳೂರಿನ ಬಹುತೇಕ ಸಾಹಿತಿಗೋಳು ಇಲ್ಲೊಂದು ಪರ್ಯಾಯ ಸಮ್ಮೇಳನವನ್ನು ಮಾಡ್ತೇವಿ ಅಂತ ಕರೆ ಕೊಟ್ಟು, ಅದಕ್ಕ ಅಡಿಗರನ್ನೇ ಅಧ್ಯಕ್ಷರಂತ ಗೊತ್ತು ಮಾಡಿದ್ರು. ಅವಾಗ 'ಸಾಹಿತ್ಯದಲ್ಲಿ ಶ್ರೇಷ್ಠತೆ' ಅನ್ನೂ ವಿಷಯದ ಬಗ್ಗೆ ಒಳೇ ಜಟಾಪಟೀ ಸೈತ ನಡೀತು. ಏನಾದ್ರೂ, ಬೆರಕಿ ಬೆಂಗ್ಳೂರ ಮಂದೀ ಸೋಲಲಿಲ್ಲ; ಹಿಂದ್ ಸರೀಲಿಲ್ಲ. ರವೀಂದ್ರ ಕಲಾಕ್ಷೇತ್ರದ ಹಿಂದಿನ ಬಯಲು ಥೇಟರಿನ್ಯಾಗ ಪರ್ಯಾಯ ಸಮ್ಮೇಳನ ಮಾಡೇ ಬಿಟ್ರು. ಅದಕ್ಕ ಅಧ್ಯಕ್ಷರಾಗಿದ್ದ ಅಡಿಗರನ್ನ ಒಂದ್ ಬೆತ್ತದ ಖುರ್ಚೇದಾಗ ಕುಂಡರ್‍ಸಿ ಎತಗೊಂಡು ಬಂದು ಅವರಿಂದನs ಆ ಸಮ್ಮೇಳನದ ಅಧ್ಯಕ್ಷ ಭಾಷಣಾ ಮಾಡಿಸಿದ್ರು. ಆ ವ್ಯಾಳ್ಯಾಕ್ಕನs ಬಾಳ ಒತ್ತಾಯಾ ಮಾಡಿ (ಅಡಿಗರು ಬ್ಯಾಡಪಾ ಬಸವರಾಜ್ ಅಂತ ಅಂದ್ರೂ) ಆಕಾಶವಾಣೀಗೆ ನಾನು ಅವರ್‍ದೊಂದು ಸಂದರ್ಶನಾನ ಅವರ ಮನೀಗೇ ಹೋಗಿ ಮಾಡ್ದೆ. ಆದ್ರ ಅವರ ಮಾತು ಅಷ್ಟೊತ್ಗೇ ತಮ್ಮ ಕ್ಲ್ಯಾರಿಟೀನ (ಸ್ಪಷ್ಟತೇನ) ಕಳಕೊಂಡಿದ್ವು. ಹೆಂಗರ ಇರ್‍ಲಿ ಅಂತ, ಹಂಗs ರೆಕಾರ್ಡ ಮಾಡಿ, ಸಾಕಷ್ಟು ಎಡಿಟ್ ಮಾಡಿ ಆ ಸಂದರ್ಶನಾನ ಪ್ರಸಾರಾ ಮಾಡ್ದ್ಯಾ.

(ಈ ಲೇಖನದ ಜೊತೆಗೆ ಗೋಪಾಲಕೃಷ್ಣ ಅಡಿಗರ ಆ ಸಂದರ್ಶನದ ಧ್ವನಿಮುದ್ರಣವೂ ಇದೆ. ಆಸಕ್ತರು ಕೇಳಬಹುದು) ದೇಹ ನುಜ್ಜಗುಜ್ಜಾಗಿದ್ರೂ ವಿಚಾರ್‍ಗೋಳು ಗಟ್ಯಾಗೇ ಇದ್ದದ್ದಕ್ಕ ಅಡಿಗ್ರು ಪರ್ಯಾಯ ಅನ್ನೂ ಸಮ್ಮೇಳನಕ್ಕ ಖರೇ ಅರ್ಥಾ ತರೋ ಪರ್ಯಾಯದ ಮಾತುಗಳ್ನs ಆಡಿದ್ದು ನನಗ ಖುಷಿ ತಂತು. ಸಾಹಿತ್ಯದ ಶ್ರೇಷ್ಠತೆಯ ಬಗ್ಗೆ, ಮತ್ತ ಸಾಹಿತಿಯ ಪ್ರಾಮಾಣಿಕತೆಯ ಬಗ್ಗೆ ಆ ಸಂದರ್ಶನದೊಳಗ ಅವ್ರು ಭಾಳ ಅರ್ಥ ಇರೋ ಮಾತುಗಳನ್ನ ಹೇಳಿದ್ದು ಬಾಳ ಮುಖ್ಯ ಅನಸ್ತೈತಿ.
ಅದಾದ ಮ್ಯಾಲ ಮತ್ತ ಒಂದೇರ್‍ಡ ಸರ್‍ತೆ ಅವರ್‍ನ ನೋಡಾಕಂತ ಹೋದಾಗ ಅವ್ರ ಸ್ಥಿತಿ ಒಂದಿಷ್ಟು ಸುಧಾರ್‍ಸಿದ್ದು ಗೊತ್ತಾಗಿ ನನ್ನ ಗೆಳ್ಯಾ ವಿದ್ಯಾಶಂಕರ ಅವರ ಜೋಡಿ ಮನೀಗೆನs ರೆಕಾರ್ಡರ್ ಒಯ್ದು ಧ್ವನಿಮುದ್ರಣ ಮಾಡಿದೆ. ಅವರು ಬೇರೆಯವರಿಗೆ ಹೇಳಿ ಬರೆಸಿದ್ದನ್ನು ಅವರೇ ಓದುವ ಸ್ಥಿತಿಯಲ್ಲಿ ಇರಲಾರದ್ದಕ್ಕ, ಅವ್ರ ಮಾತು ರೆಕಾರ್‍ಡ್ ಮಾಡಾಕ ನಾನು ಒಂದು ಹೊಸಾ ತಂತ್ರಾನs ಕಂಡುಹಿಡೀಬೇಕಾತು. ಅದನ್ನ ನಾನು ಕರೆದದ್ದು “Oath taking recerding syatem-ಓಥ್ ಟೇಕಿಂಗ್ ರೆಕಾರ್ಡಿಂಗ್ ಸಿಸ್ಟಂ" (ಪ್ರತಿಜ್ಞಾವಿಧಿ ಧ್ವನಿ ಮುದ್ರಣ ತಂತ್ರ) ಅಂತ. ಅವ್ರು ಬರೆಸಿದ ಸ್ರಿಪ್ಟ್‌ನ್ನ ನಾನು ಮೊದಲು ಒಂದೊಂದs ವಾಕ್ಯಾ ಓದೂದು, ಅದಾದ ಮ್ಯಾಲ ಅವರು ಅದನ್ನ ಹಿಂದಿಂದs ಪುನಃ ಮತ್ತ ಹೇಳೂದು. (ಮಿನಿಸ್ಟರುಗಳು, ರಾಷ್ಟ್ರಪತಿಗಳು, ರಾಜ್ಯಪಾಲ್ರು ಪ್ರತಿಜ್ಞಾ ತೊಗೋತಾರಲ್ಲ, ಹಂಗಿತ್ತು ಆ ರೀತಿ) ಹಿಂಗ್ ಮಾಡಿ, ಹೊಸಾ ನಮೂನಿ ಧ್ವನಿಮುದ್ರಣದ ಪ್ರಕಾರವನ್ನ ಹೊಸದಾಗಿ ಕಂಡುಹಿಡದು, ಅವ್ರ ಮಾತುಗೋಳ್ನ ರೆಕಾರ್ಡ ಮಾಡಿ, ಎರಡ್ಮೂರು ಸರ್‍ತೆ ಪ್ರಸಾರಾ ಮಾಡಿದ್ಯಾ. ಮುಂದ ಇದs ತಂತ್ರಾ ಉಪಯೋಗಾ ಮಾಡಿ ಡಾ. ರಂ. ಶ್ರೀ. ಮುಗಳಿ, ಪ್ರೊ. ಮಳಗಿ, ಡಾ. ವಿ.ಕೃ.ಗೋಕಾಕ್ ಅವರ ಸಂದರ್ಶನಗಳ್ನೂ ರೆಕಾರ್ಡ ಮಾಡಿ ಪ್ರಸಾರಾ ಮಾಡಿದ್ದು, ಮತ್ತ ಅವನ್ನ ಪ್ರಿಸರ್ವ ಮಾಡಿದ್ದು ನನಗ ಖುಷಿ ಕೊಟ್ಟ ಸಂಗತಿಗೊಳು. ಹಿಂಗ್ ಮಾಡಿರ್‍ಲಿಲ್ಲಾ ಅಂತಂದ್ರ ಇವರೆಲ್ಲಾರ್‍ವೂ ದನೀ ಸೈತ ಸಿಗತಿರ್‍ಲಿಲ್ಲ ಅನಸ್ತೈತಿ. ಅಡಿಗರ ಸಲುವಾಗಿ ಆ ರೀತಿ ರೆಕಾರ್ಡ ಮಾಡೂದನ್ನ ನಾನು ಹೊಸದಾಗಿ ಕಂಡಹಿಡದೆ.

ನಿಮಗ ನೆನಪಿರಬೇಕು, ಹಿಂತಾ ಮನಶಾ, ಅಡಿಗರು ನನಗ "ಮಾಯಾಮಂತ್ರಾ" ಮಾಡಿ ಹೋದ್ರು ಅಂತ ಮದ್ಲs ಹೇಳಿದ್ದ್ಯಾ. ಏನದು ಅವ್ರು ಮಾಡಿದ ಮಾಯಾಮಂತ್ರಾ? ಅದನ್ನ ನೆನಿಸಿಕೊಂಡ್ರ ಖರೇವಂದ್ರೂ ಕಣ್ಣೀರು ಬರ್‍ತಾವ. ನಮ್ಮ ಕಳ್ಳುಗೊಳು ಎಲ್ಲೆಲ್ಲಿ, ಹೆಂಗೆಂಗ್ ತಳಕು ಹಾಕ್ಕೊಂಡಿರ್‍ತಾವು ಅನ್ನೋದಕ್ಕ ಈ ಘಟನಾ ಒಂದ್ ಸಾಕ್ಷಿ ಅಕ್ಕೈತಿ. ಮುಂದ ಕೇಳ್ರಿ.

ಆಕಾಶವಾಣಿ ಕಾರ್ಯಕ್ರಮಗಳೊಳಗೆ ಹೊಸ ಹೊಸ ಪ್ರಯೋಗ ಮಾಡೋ ನನ್ನ ಆಸೇ 1992ರ ನವಂಬರ್ 1ರ ರಾಜ್ಯೋತ್ಸವದ ದಿನಾ ಐದು ಜನ ಹಿರಿಯ ಕವಿಗಳಿಂದ ಒಂದೊಂದು ಹೊಚ್ಚ ಹೊಸಾ ಕವನಾ ಬರಸಿ ಓದಿಸಬೇಕು ಅಂತ ವಿಚಾರಾ ಮಾಡ್ತು. ಅವಾಗ ನಾನು ಡಾ. ಪು.ತಿ.ನ., ಡಾ.ಕೆ.ಎಸ್.ನರಸಿಂಹಸ್ವಾಮಿ, ಡಾ. ಜಿ.ಎಸ್. ಶಿವರುದ್ರಪ್ಪ, ಸು.ರಂ. ಎಕ್ಕುಂಡಿ ಮತ್ತ ಗೋಪಾಲಕೃಷ್ಣ ಅಡಿಗರು- ಈ ಐದೂ ಜನ ಹಿರಿಯ ಕವಿಗಳನ್ನ ವೈಯಕ್ತಿಕವಾಗಿ ಭೆಟ್ಟ್ಯಾಗಿ, ನನ್ನ ಯೋಚನಾನ ವಿವರವಾಗಿ ತಿಳಿಸಿ, ಈ ಕಾರ್ಯಕ್ರಮದ ಸಲುವಾಗಿ ನೀವೆಲ್ಲಾ (ಯಂಗ್ಸ್ಟರ್‍ಸ್) ಒಂದೊಂದು ಹೊಸಾ ಕವನಾ ಬರೀರಿ ಅಂತ ರಿಕ್ವೆಸ್ಟ್ ಮಾಡ್ಕೊಂಡೆ. ನನ್ನ ಮಾತಿಗೆ ಇಲ್ಲ ಅನ್ನದನs, ಆ ಐದೂ ಮಂದಿ ಹಿರೇ ಕವಿಗಳು ಹರೇದ ಹುಡುಗೂರಂಗ ಒಳೇ ಹುರುಪ್ಲೆ ಹೊಸಾ ಕವನಾ ಬರದದ್ದು ಒಂದ್ ರೆಕಾರ್ಡ್ಂತs ಹೇಳ್ಬೇಕು. ಅದು ನನಗ ಎಲ್ಲಿಲ್ಲದ ಖುಷಿ ಕೊಟ್ಟ ಸಂದರ್ಭ. 28-10-1992ನೇ ದಿನ (ಪು.ತಿ.ನ. ಮತ್ತು ಅಡಿಗರನ್ನು ಉಳಿದು) ಎಲ್ಲಾ ಕವಿಗಳ್ನೂ ಬೆಂಗಳೂರು ಆಕಾಶವಾಣಿ ಸ್ಟುಡೀಯೋಕ್ಕs ಕರದು ಪ್ರೀತೀಲೇ ರೆಕಾರ್ಡ ಮಾಡಿದೆ. ಅವತ್ತs ಸಂಜೀಮುಂದ ಅಡಿಗರು ಮತ್ತು ಪು.ತಿ.ನ ಅವರ ಮನೀಗೆ ಹೋಗಿ, ಅವರ ಮನಿಯೊಳಗs ರೆಕಾರ್ಡ್ ಮಾಡಬೇಕಂತ ರೆಡಿ ಆಗಿದ್ಯಾ. ಪು.ತಿ.ನ. ಅವರ್‍ದು ರೆಕಾರ್ಡ ಆದಮ್ಯಾಲ, "ಸರ್, ನೀವು ಒಪ್ಪಿಕೊಂಡ್ಹಂಗs ನಿಮ್ಮ ಮನೀಗೆ ರೆಕಾರ್ಡಿಂಗ್‌ಗೆ ಬರಾಕ್ಹತ್ತೇವಿ ಅಂತ ಅಡಿಗರಿಗೆ ಫೋನ್ ಮಾಡಿದೆ." ಯಾಕೋ ಅವರ ದನಿ ಸುಸ್ತಾದಂಗ ಕೇಳಿಸ್ತು. "ಬಸವರಾಜ್, ಇವತ್ತು ಬೇಡಪ್ಪಾ, ಹೊಸಾ ಕವನಾ ಬರೀತಾ ಇದ್ದೇನಿ, ಯಾಕೋ ಮುಂದೆ ಸಾಗ್ತಾ ಇಲ್ಲ. ಅಂತೂ ಇವತ್ತು (28-10-1992) ರಾತ್ರಿಯೊಳಗೆ ಮುಗಿಸಿಬಿಡ್ತೇನೆ, ನಾಳೆ ಮಧ್ಯಾಹ್ನ ರೆಕಾರ್ಡ ಮಾಡೋಣ" ಅಂದರು. ಆಯ್ತು ಸರ್ ಅಂತ ಪು.ತಿ.ನ. ಅವರ ಮನೀಲಿಂದನs ಹೊಳ್ಳಿ ಬಂದಿದ್ಯಾ ಅವತ್ತು.

29-10-1992ರಂದು ಮಧ್ಯಾಹ್ನ 12.30ರ ಸುಮಾರಿಗೆ ಅವರ ಮನೆಗೆ ಹೋದ್ವಿ. ಯಾವಾಗ ಹೋದ್ರೂ ಆತ್ಮೀಯವಾಗಿ ಸ್ವಾಗತಾ ಮಾಡ್ತಾ ಇದ್ದ ಅವರ ಶ್ರೀಮತಿಯವರು ಮನಿಯೊಳಗ ಇರಲಿಲ್ಲ. ಡಾ. ಲಕ್ಷ್ಮೀನಾರಾಯಣ ಭಟ್ಟರ ಮಗಳು ಮಾತ್ರ ಅಡಿಗರನ್ನು ನೋಡಿಕೊಳ್ತಿದ್ರು. ನಮಗೆಲ್ಲ ಕಾಫೀ ಕೊಡಿಸಿದ ಅಡಿಗರು, ತಾವೂ ಕುಡಕೋತs ತಮಗಾದ ಅತ್ಯಂತ ನೋವಿನ ಸಂಗತಿ ಒಂದನ್ನ ಹೇಳಿದ್ರು.. ಒಂದೆರ್‍ಡ್ ದಿನದ ಹಿಂದಷ್ಟs ಇದ್ದಕ್ಕಿದ್ದಂಗ ಅವರ ಶ್ರೀಮತಿಯವರಿಗೆ ಲಘುಪಾರ್ಶ್ವವಾಯು ಹೊಡದದ್ರಿಂದ ಅವರ್‍ನ ದವಾಖಾನೀಗೆ ಸೇರಿಸಿದ್ರು. ಮೊದಲs ಹಣ್ಣಾಗಿದ್ದ ಅಡಿಗರನ್ನು, ಅವರ ಶ್ರೀಮತಿಯವರಿಗೆ ಹಿಂಗಾದದ್ದು ಮಾನಸಿಕವಾಗಿ ಕುಗ್ಗಿಸಿತ್ತು. ಈ ಕಾರಣಕ್ಕನs ಕವನಾನ ಹೇಳಿದ ವ್ಯಾಳ್ಯಾಕ್ಕ ಬರಿಯೂದಕ್ಕ ಆಗ್ಲಿಲ್ಲಂತ ಅವರು ಮತ್ತೊಮ್ಮೆ ನೊಂದ್ಕೊಂಡು ಹೇಳಿದ್ರು.. ಅಂಥಾ ನೋವ ಸೈತ ನುಂಗಿಕೊಂಡು ಅವರು ಹೊಚ್ಚ ಹೊಸ ಕವನಾ ಬರೆದು ಮುಗಿಸಿದ್ರು. ಮತ್ತೊಂದ್ ಸರ್‍ತೆ ಅಡಿಗರನ್ನ ನನ್ನ 'ಓಥ್ ಟೇಕಿಂಗ್ ರೆಕಾರ್ಡಿಂಗ್ ಸಿಸ್ಟಂ' ರೀತೀಯೊಳಗs ರೆಕಾರ್ಡ ಮಾಡಿದೆ. ಖರೇವಂದ್ರೂ ಭಾಳ ಖುಷಿಕೊಟ್ಟ ಕವನ!! ಮನಶ್ಯಾನ ಆಸೆಗಳು, ಬಿಡಿಸಿಕೊಳ್ಳಲಾಗದ ಬಂಧನಗಳು ಹಾಗೂ ಸಾವನ್ನು ಕುರಿತಂಗ ಅದ್ಭುತ ಹಾಗೂ ಆನುಭಾವಿಕ ದೃಷ್ಟೀಲಿಂದ ಬರೆದಿದ್ದ ಆ ಕವನ ಅಡಿಗರ ಹೃದಯದ ಒಳಗಿನ, ಆ ವಯಸ್ಸಿನ ಸಮಗ್ರ ಅನುಭವದ್ರವ್ಯದನಿಯಾಗಿ ರೂಪಾ ಪಡದಿತ್ತು. ಧ್ವನಿಮುದ್ರಣ ಮುಗಿಸಿದೆ, ಆದ್ರ ಕಾರಣಾಂತರಗಳಿಂದ ಅವತ್ತು ಅವರಿಗೆ ಪೇಮೆಂಟಿನ ಚೆಕ್ ಕೊಡಾಕಾಗ್ಲಿಲ್ಲ. "ಬುಧವಾರ ನಾನs ಚೆಕ್ ತೊಗೊಂಡು ಬರ್‍ತೇನೆ ಸರ್," ಅಂದೆ. ಅವರು "ಯಾಕಪ್ಪಾ ಮತ್ತೆ ಬರೋ ತ್ರಾಸು ತೊಗೋತೀ? ಪೋಸ್ಟ್ ಮಾಡಿಬಿಡು ಸಾಕು" ಅಂದಾಗ, ನಾನು "ಸರ್, ಮತ್ತೊಮ್ಮೆ ನಿಮ್ಮ ಮನಿಯೊಳಗಿನ ಕಾಫಿ ಕುಡಿಯಬಹುದಲ್ವಾ" ಅಂತ ಲಹರಿಯ ಮಾತು ಹೇಳಿದ್ಯಾ. "ಆಯ್ತಪ್ಪಾ ಹಂಗಿದ್ರೆ ಇನ್ನೂ ಹತ್ತು ಸರ್‍ತೆ ಬಾ..." ಎಂದು ಮಲಗಿದ ಜಾಗಾದಿಂದನs ಕೈಮಾಡಿ ಕಳಿಸಿದ್ರು.

ನವಂಬರ್ 1, 1992ರಂದು ರಾತ್ರಿ 9.30ಕ್ಕ ಆ ಐದೂ ಜನ ಹಿರಿಯರು ಆ ವಯಸ್ಸಿನೊಳಗೂ ಆಕಾಶವಾಣಿಗಂತನs ಬರೆದಿದ್ದಂಥಾ ಐದು ವಿಶಿಷ್ಟ ಮತ್ತ ಅಪರೂಪದ್ವು ಅನ್ನೂ ಕವನಗಳನ್ನೊಳಗೊಂಡ ಹೊಸಾ ಕಾರ್ಯಕ್ರಮ ಪ್ರಸಾರಾಯ್ತು. ಇನ್ನೂ ಬ್ಯಾರೇ ಚಾನೆಲ್‌ಗಳ ಗದ್ಲ ಇರಲಾರದ ಆ ದಿನಗಳೊಳಗ ಹಿರಿಯ ಕವಿಗಳ ಹೊಸಾ ಕವನಗಳ ಆ ಕಾರ್ಯಕ್ರಮವನ್ನು ಬಾಳ ಮಂದಿ ಮಚ್ಚಿಕೊಂಡು ಪತ್ರಾ ಬರದ್ರು. ಆ ಕಾರ್ಯಕ್ರಮದ ಧ್ವನಿಮುದ್ರಣ ಆಕಾಶವಾಣಿಯ ಆರ್ಕೈವಲ್‌ದೊಳಗ ಇರೂದು ಒಂದ್ ದೊಡ್ಡ ಸಂಪತ್ತಿದ್ದಂಗನಸ್ತೈತಿ.
ಬುಧವಾರ, 4-11-1992ರಂದು ಸಂಜೀ 7.35ರ ಸಮಯ. ಪ್ರೊ.ಗೋಪಾಲಕೃಷ್ಣ ಅಡಿಗರ ಮನಿ ಕಾಲಿಂಗ್ ಬೆಲ್ ಬಾರ್‍ಸಿದೆ. "ಬನ್ನಿ ಬನ್ನಿ ಬಸವರಾಜ್, ಹೇಗಿದ್ದೀರಿ?" ಅಡಿಗರ ಎಂದಿನ ಕಕ್ಕುಲಾತಿಯ ಸ್ವಾಗತ-ಪ್ರೀತಿಯ ಮಾತು-ವಿಚಾರಣೆ. "ಕುಳಿತುಕೊಳ್ಳಿ"-ಖುರ್ಚಿ ತೋರ್‍ಸಿದ್ರು. ಅದಕ್ಕೂ ಮೊದ್ಲ, ಏಳು ಗಂಟೆಕ್ಕ ಬಂದಿದ್ದ ಡಾ.ಸುಮತೀಂದ್ರ ನಾಡಿಗ್ರು ಮತ್ತ ಅವರ ಸಂಬಂಧಿ ಶ್ರೀನಿವಾಸರಾವ್ ಅವರ ಕೂಡ ಅಡಿಗರು ಕಾವ್ಯದ ಬಗ್ಗೆ ಗಂಭೀರವಾದ ಚರ್ಚೆ ಮಾಡಿದ್ರಂತ. ಅವರಿವರಿಂದ ಗೌರವ ಪ್ರತಿಗಳಾಗಿ ಬಂದಿದ್ದ ರಾಶಿ ಪುಸ್ತಕಗಳ ನಡುವೆ ಕುಂತಗೊಂಡು ಅಡಿಗರು ಹೃದಯದೊಳಗಿನ ಪ್ರೀತಿಲಿಂದs ಮುಕ್ತವಾಗಿ ಮಾತಾಡಿದ್ರು. "ಜ್ಯೋತ್ಸ್ನಾ ಕಾಮತ್ ಹೇಗಿದ್ದಾರೆ?" (ಆಗ ಅವರು ನಿರ್ದೇಶಕಿ ಆಗಿದ್ರು) ಅಂತ ಕೇಳಿದ್ರು. ಚೆನ್ನಾಗಿದ್ದಾರೆ ಅಂತ ಹೇಳ್ಕೊಂತs ಆಕಾಶವಾಣಿಲಿಂದ ತಂದ ಚೆಕ್‌ನ ಅವರ ಕೈಗೆ ಕೊಟ್ಟು, "ಸರ್ ಬರ್‍ತೇನೆ ಅಂದ್ಯಾ. ಕೂಡಿ ಕೂಡಿ, ಕಾಫಿ ತೊಗೊಂಡು ಹೋಗಿ" ಅನ್ಕೊಂತ ಒಳಗಡೆ ಕಾಫಿಗಾಗಿ ಕೂಗಿದ್ರು. 'ಇದs ಈಗ ಪ್ರೊ. ಶೇಷಗಿರಿರಾವ್ ಅವರ ಮನಿಯೊಳಗ (ಅವರಿಗೂ ಒಂದು ಚೆಕ್ ಕೊಡೋದಿದ್ದ ಕಾರಣ, ಮೊದಲು ಅವರ ಮನೆಗೆ ಹೋಗಿದ್ದೆ) ಚಾ ಕುಡದs ಬಂದೇವ್ರಿ ಸರ್' ಅಂತ ನಾನು ಹೊಂಟು ನಿಂತ್ಯಾ. ನನ್ನ ಕಡೆ ನೋಡ್ಕೊಂತ "ಮತ್ತೆ ಬನ್ನಿ ಯಾವಾಗಲಾದ್ರೂ" ಅಂದ್ರು ಅಡಿಗರು. ಅದು ಆ ವಾರದೊಳಗs ಅಡಿಗರ್‍ನ ನಾನು ಭೆಟ್ಟ್ಯಾಗಿದ್ದು ಎರಡನೆಯ ಸರ್‍ತೆ ಆಗಿತ್ತು. ಅಲ್ಲಿಂದ ಸೀದ ಮನೀಗೆ ಹ್ವಾದ್ಯಾ. ಆಗ ವ್ಯಾಳಾ ರಾತ್ರಿ ಹತ್ತೂವರೆ. ಊಟ ಮಾಡಿ ಮಲ್ಕೊಂಡೆ. ರಾತ್ರಿ ಹನ್ನೊಂದೂವರೆ ಆಗಿತ್ತಾಗ.....

ಗುರುವಾರ, 5-11-1992ರ ಬೆಳಗ್ಗೆ ಎಂದಿನಂಗs ಪೇಪರ್ ಬಂದು ಬಿದ್ದಿತ್ತು ಮನೀ ಬಾಗಲದ ಮುಂದ್. ಎತ್ತಿಗೊಂಡು ನೋಡಿದ್ರ.....ಪೇಪರಿನ ಮುಖಪುಟದೊಳಗs ಅಡಿಗರ ನಗುಮುಖದ್ದು ಒಂದು ದೊಡ್ಡ ಫೋಟೋ!! ಓ, ಇದು ಪ್ರಶಸ್ತಿಗಳ ಕಾಲ, ಅಡಿಗರಿಗೆ ಜ್ಞಾನಪೀಠ ಅಥವಾ ಯಾವುದಾದರೂ ದೊಡ್ಡ ಪ್ರಶಸ್ತಿ ಬಂದಿರಬೇಕು ಅಂತ ಮುಂದೆ ಓದಿದ್ರ, ಒಂದು "ಜನಾಂಗದ ಕಣ್ಣು ತೆರೆಸಿದ ಕವಿ ಅಡಿಗರು ಇನ್ನಿಲ್ಲ"- ದೊಡ್ಡ ಅಕ್ಷರಗಳೊಳಗ ಹೆಡ್‌ಲೈನ್!! ಒಂದು ಕ್ಷಣ ನನ್ನ ಬಗ್ಗೆ ನನಗs ನಂಬಿಕಿ ಬರವಲ್ದು!! ರಾತ್ರಿ ಎಂಟು ಗಂಟೆಕ್ಕ ನೋಡಿ, ಮಾತಾಡ್ಸಿ ಬಂದೇನಿ; ಇಷ್ಟರೊಳಗ ಹಿಂಗಾಗಬೌದೆ? ದೊಡ್ಡ ಗಲಿಬಿಲಿಯೊಳಗ ಬಿದ್ದಾಂಗಾಯ್ತು ನನಗ. ಆ ಸುದ್ದಿ ಖರೇವಲ್ಲ ಅಂತ ತಿಳಕೊಳ್ಳಾಕ ಅವಾಗ ನನ್ನ ಮನ್ಯಾಗ ಫೋನು-ಗೀನು ಯಾವ್ದೂ ಇರ್‍ಲಿಲ್ಲ. ಆಫೀಸ್‌ಗೆ ಹೋದಮ್ಯಾಲ ಖರೇವಂದ್ರೂ ಆ ಸುದ್ದೀನ ನಂಬಲೇಬೇಕಾಗಿತ್ತು. ಅಡಿಗರ ಅವಧಿ ನಿಜಕ್ಕೂ ಮುಗಿದಿತ್ತು. ಓಂದು ಜನಾಂಗದ ಕಣ್ಣು ತೆರೆಸಿದ ಕವಿಯ ಕಣ್ಣು ಮುಚ್ಚಿದ್ವು. ಹೊಟ್ಟ್ಯಾಗ ಸಂಕ್ಟಾತು. ಯಾರ್‍ದೋ ಮೂಲಕ ವೈ.ಎನ್.ಕೆ. ಅವರಿಗೆ ಈ ಸುದ್ದಿ ಗೊತ್ತಾಗಿ, ಈಗ್ಲೇ ಒಂದ್ ಲೇಖನಾ ಬೇಕು, ಜರೂರು ಬರದು ಕೊಡ್ರಿ ಅಂತ ದುಂಬಾಲು ಬಿದ್ರು. ಆಫೀಸ್ನ್ಯಾಗs ಕುಂತಗೊಂಡು "ಅಡಿಗರ ಕೊನೆಯ ಭೆಟ್ಟಿ : ಕೊನೆಯ ಕವನ" ಎಂಬ ಹೆಸರಿನಲ್ಲಿ ಲೇಖನ ಬರೆದೆ. ಮರುದಿನ ಕನ್ನಡ ಫ್ರಭದ ಸಂಪಾದಕೀಯ ಪುಟದಲ್ಲಿ ಅದು ಪ್ರಕಟವಾಯ್ತು. ಅದನ್ನ ಆಧಾರ ಇಟಗೊಂಡ 'ಇಂಡಿಯನ್ ಎಕ್ಸಪ್ರೆಸ್' ಮತ್ತೊಂದು ಲೇಖನಾ ಪ್ರಕಟ ಮಾಡಿತು.

ಅರ್ಧಾಂಗವಾಯುವಿನಿಂದ ಹಣ್ಣಾಗಿದ್ರೂ ಅಡಿಗರು ಆಗ ನಡೆದಾಡುವುದೊಂದನ್ನ ಬಿಟ್ಟು ಇನ್ನೆಲ್ಲಾ ರೀತಿಯೊಳಗೂ ಆರಾಮಾಗೇ ಇದ್ರು.. ಅದಕ್ಕಾಗಿನs ಅವರ್‍ಗೆ "ನಾನು ಸರ್ ಮುಂದಿನ ಸರ್‍ತೆ ನೀವು ರೆಕಾರ್ಡಿಂಗ್‌ಗೆ ನಮ್ಮ ಸ್ಟುಡಿಯೋಕ್ಕs ಬರಬೇಕು" ಅಂದಿದ್ದೆ. ಅವರ "ಓಹೋ ಖಂಡಿತ ಬರ್‍ತೇನೆ.. " ಅಂದಿದ್ರು. ಆದ್ರ ಅವರು ಇನ್ನೆಂದೂ ಸ್ಟುಡಿಯೋಗೆ ಬರೂದುಲ್ಲ ಅನ್ನೂದನ್ನ ನೆನೆಸಿಕೊಂಡಾಗ ಮನಸ್ಸಿಗೆ ಭಾಳ ಹಳಹಳಿಯಾಯ್ತು. ಎಷ್ಟ್ ಕಂಟ್ರೋಲ್ ಮಾಡಿದ್ರೂ ಅವತ್ತು ಕಣ್ಣಾಗ ನೀರು ಹರಿಯೂದು ನಿಲ್ಲಲಿಲ್ಲ. ಎಲ್ಲೋ ಕೊಂಡಿಗೊಂಡಂತಾಗಿದ್ದ ನನ್ನ ಮತ್ತು ಅಡಿಗರ ನಡುವಿನ ಕರುಳ ಬಳ್ಳಿ ಕತ್ತರಿಸಿ ಹೋದಂತ ಭಾವನೆ ಉಕ್ಕಿ ಬಂದು ಮತ್ತೆ ಮತ್ತೆ ಅತ್ತಿದ್ದೆ. ಎಲ್ಲಿಯ ಅಡಿಗರು, ಎಲ್ಲಿಯ ನಾನು!! ಆದರೆ, ಎದೆಯಿಂದ ಎದೆಗೆ ಹರಿವ ಅಮೃತವಾಹಿನಿಗೆ ಆಣೆಕಟ್ಟು ಕಟ್ಟಲಾದೀತೆ?

5-11-1992ರಂದು ಮತ್ತೆ ಅವರ ಮನೀಗೆ ಹೋದೆ. ಮನೀ ತುಂಬ ಜನಾನೋ ಜನ!! ಒಳಗ, ಹೊರಗ ಸಾಹಿತಿಗಳ ದೊಡ್ಡ ಬಳಗನs ಕೂಡೈತಿ. ಎಲ್ಲಾರೂ 'ಅಡಿಗರು ನಿನ್ನೆ ಮೊನ್ನೆ ಚೊಲೋನs ಇದ್ರು, ಒಮ್ಮಿಂದೊಮ್ಮೀಕಿಲೇ ಹಿಂಗಾತಲ್ಲ?' ಅಂತ ನೊಂದಕೊಳ್ಳವ್ರ ನೊಂದಕೊಳ್ಳವ್ರು. ಹೌದು ಚೆನ್ನಾಗಿದ್ದ ಅಡಿಗರೇ ಈ ಜಗದ "ದ್ವಂದ್ವ ದಿಗ್ಭಂಧ" ಮೀರಿ ದೂರ ದೂರ ಹೋಗಿ ಬಿಟ್ಟಿದ್ರು. ಆಗ ನಾನು ನೋಡಿದ್ದು ಮೊನ್ನೆ, ಅಚ್ಚೀ ಮೊನ್ನೆ ನೋಡಿದ್ದ ಅಡಿಗರಾಗಿರಲಿಲ್ಲ. ಗೆಳೆಯ ನಾಗ್ತೀಹಳ್ಳಿ ಚಂದ್ರು ಅಮೇರಿಕಾ ಅಮೇರಿಕಾ ಚಿತ್ರದೊಳಗ ಅಳವಡಿಸಿದಂತಾ ಅಡಿಗರ ಹಾಡು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು,,,,,,,, " ಈಗ ನೆನಪಕ್ಕೈತಿ. ಹೌದು ಅಡಿಗರು ದೂರಂದ್ರ, ಭಾಳ ದೂರಕ್ಕ.....ಹೊಳ್ಳಿ ಬರಲಾರದ ತೀರಕ್ಕ, ಪಂಚಭೂತಗಳ ಆಚೆಯ ಆವಾರಕ್ಕ ನಡೆದುಬಿಟ್ಟಿದ್ರು. ಸಂಜೀಕ ಮಾತಾಡಿದ ಅಡಿಗ್ರು ಮುಂಜೇನೆ ಇಲ್ಲಂದ್ರ ನನ್ನ ಪಾಲೀಗೆ "ಮಾಯಾಮಂತ್ರ" ಅಲ್ದs ಇನ್ನೇನು? ಅಡಿಗರೊಂದಿಗಿನ ಈ "ಮಾಯಾಮಂತ್ರ"ದ ಸಂಬಂಧ ಸಾಧ್ಯ ಆಗಿದ್ದು ನನ್ನ ಆಕಾಶವಾಣಿಯ ನೌಕರಿಯಿಂದನs ಅಂತ ನೆನೆಸಿಕೊಂಡ್ರ, ಈ ಆಕಾಶವಾಣೀಗೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಆ ಋಣಾ ಮುಗೀಯೂದುಲ್ಲ. ಮಾಸ್ತರಾಗಿದ್ದರ ಇದು ಸಾಧ್ಯ ಆಕ್ಕಿತ್ತಾ?

ಸೋಜಿಗಾ ಪಡಬೇಕಾದ ಸತ್ಯ ಅಂದ್ರ, ಹಿಂದ್ ಅಡಿಗರು ಆಕಾಶವಾಣಿ ಸಲುವಾಗೇ ’ಭೂಮಿಗೀತ’ ಅನ್ನೂ ಅದ್ಭುತ ಕವನಾ ಬರದಿದ್ರು. ಅದು ಒಂದು ಐತಿಹಾಸಿಕ ಘಟನಾ. ಅವ್ರು ನವ್ಯ ಕವಿಯಾಗಿ ಜನಪ್ರಿಯತೆ ಪಡದದ್ದೂ ’ಭೂಮಿಗೀತ’ದಿಂದ. ಅವ್ರು ರಚಿಸಿರೋ ಕಟ್ಟಕಡೆಯ ಕವನ "ದ್ವಂದ್ವ ದಿಗ್ಬಂಧ" ಸೈತ ಆಕಾಶವಾಣಿಗಾಗೇ ಬರದದ್ದು. ಅದೂ ಮತ್ತೊಂದು ಐತಿಹಾಸಿಕ ಘಟನಾ. ಆರೋಗ್ಯ ಚೊಲೋ ಇರದಿದ್ರೂ, ಭಾಳ ಹೈರಾಣಾಗಿದ್ರೂ ಅದರೊಳಗs ಅವ್ರು ರಚನಾ ಮಾಡಿದ ಈ ಕೊನೆಯ ಕವನಾನೂ ಅಷ್ಟs ಅದ್ಭುತ ಐತಿ. ಅದು ಜಗತ್ತಿನ ಎಲ್ಲ ಬಗೆಯ ನೋವು, ಬ್ಯಾಸರಾ, ಹತಾಶೆ, ನಿರಾಶೆಯಂಥ ಖರೇ ಸತ್ಯಗಳನ್ನ ಆನುಭಾವಿಕ ನೆಲಿಯೊಳಗ ದರ್ಶನಾ ಮಾಡ್ಸೂವಂಗೈತಿ. ಸಾವನ್ನ ಮತ್ತು ಸಾವು ಸನೇ ಆಗೂ ಮೊದ್ಲಿನ ಕಾಲವನ್ನ ದ್ವಂದ್ವ ದಿಗ್ಭಂಧ ಅಂತ ಕರೆಯೋ ಅಡಿಗರು ಅದರ ಬಗ್ಗೇನs ತಮ್ಮ ಕಡೇ ಕವನಾ ಬರದಿದ್ದು ಖರೇವಂದ್ರೂ ಸೋಜಿಗ ಅನ್ನಿಸ್ತೈತಿ. ಅದು ಅವರ ಜೀವನದೊಳಗ ಬರದಂಥಾ ಕಡೇ ಕವನ. ಅವರ್‍ನ ಕಟ್ಟಕಡೇಕ ಭೆಟ್ಟ್ಯಾಗಿದ್ದು ನಾನು. ನನ್ನ ಆಕಾಶವಾಣಿ. ನನ್ನ ಗೆಳೆಯ ವಿದ್ಯಾಶಂಕರ್!! ಎಂಥಾ "ದ್ವಂದ್ವ ದಿಗ್ಭಂಧ"!! ಅಡಿಗರ ದನಿಯಲ್ಲೇ ಧ್ವನಿಮುದ್ರಣಗೊಂಡು, ಆಕಾಶವಾಣಿಯ ಧ್ವನಿಭಂಡಾರದಲ್ಲಿ ಸೇಪ್ ಆಗಿರೋ ಈ ಕವನಕ್ಕ ಒಂದು ಐತಿಹಾಸಿಕ ಮಹತ್ವ ಐತಿ. ನಂತರ ಈ ಕವನ ಅಡಿಗರ "ಸಮಗ್ರ ಕಾವ್ಯ"ದಲ್ಲಿ ಸೇರ್ಪಡೆ ಆಗಿದ್ರೂ, ಅದನ್ನ ಅವ್ರು ಬರದಿದ್ದು ಆಕಾಶವಾಣಿಗಾಗಿಯೇ ಅನ್ನೂದು ಒಂದು ಚಾರಿತ್ರಿಕ ಸತ್ಯ. ಪ್ರೊ. ಗೋಪಾಲಕೃಷ್ಣ ಅಡಿಗರ ಆ ಕೊನೆಯ ಕವನ ಇಲ್ಲಿದೆ.

ದ್ವಂದ್ವ ದಿಗ್ಬಂಧ

ಜೀವದ ವಿಕಾಸ ಪರಿಧಿಯ ಸುತ್ತ ಮೃತ್ಯುವಿನ
ದಿಗ್ಬಂಧ; ಗಮಗಮಿಪ ಹೂವಿನ ಸುತ್ತ
ಕೊಳೆತು ನಾರುವ ಬಿದ್ದ ಹೂಗಳ ದುರ್ಗಂಧ;
ಇಲ್ಲಿ ಪ್ರತಿಯೊಂದು ಕೂಡ ಪ್ರತ್ಯೇಕ ಪ್ರತ್ಯೇಕವಾಗಿಯೆ
ಅಪೂರ್ಣ. ಒಂದರ ವಿರುದ್ಧ ಇನ್ನೊಂದು;
ಅನಂತಮುಖಿ ಅಂತರಂಗದ ಅನಿರ್ಬದ್ಧ ಸಂಚಾರದ ವಿರುದ್ಧ
ಗಟ್ಟಿ ನಿಂತಿದೆ ನೆಲಕ್ಕಂಟಿ ಈ ಜಡ ಶರೀರ.
ಆಹಾರವನ್ನೇ ತ್ಯಜಿಸಿ ವಾಯುಭಕ್ಷಕನಾದ
ಒಗ್ಗಾಲ ಯೋಗಿಯ ನಾಲಗೆಯೂ ಕೂಡ
ಜೊಲ್ಲು ಸುರಿಸುತ್ತದೆ ಜಾಮೂನು ವಾಸನೆಗೆ
ಎಂದಾದರೊಂದು ಸಲ. ಎಲ್ಲವನ್ನೂ ಬಿಟ್ಟ
ಸನ್ಯಾಸಿಗೂ ಒಂದೊಂದು ಸಲ ಸಿಟ್ಟೇರಿ ನೆತ್ತಿಗೆ
ಶಾಪ ಹಾಕುತ್ತಾನೆ ಆತ ತಾಯಿಗೆ. ಕನಸಿನಲ್ಲಾದರೂ
ರಂಭೆಯೋ ಊರ್ವಶಿಯೋ ಬಂದು ಕುಣಿಯುತ್ತಾಳೆ
ಕಣ್ಣ ಮುಂದೆ.

ಬದುಕು ಸಾವುಗಳು, ಸುಖ ದುಃಖ ಪ್ರೀತಿ ದ್ವೇಷ,
ಒಂದಲ್ಲ; ಇನ್ನೊಂದು, ಅಲ್ಲೋ, ಇಲ್ಲೊ,
ತಕ್ಕಡಿಯ ಎರಡೂ ತಟ್ಟೆಯಲ್ಲಿ ಪರಸ್ಪರ ವಿರುದ್ಧ
ದ್ವಂದ್ವಗಳು ಸರ್ವದಾ ತೂಗುತ್ತವೆ-
ಒಂದು ಕೆಳಕೆಳಕ್ಕೆ ಇನ್ನೊಂದು ಮೇಲಕ್ಕೆ
ಸರ್ವದಾ ತುಯ್ಯುತ್ತವೆ.
ಎರಡಕ್ಕೂ ಸಮತೂಕ ಬಂದು, ಅಥವಾ ಶ್ರಮಿಸಿ
ತಂದು ಆಗಾಗ ಒಂದೇ ಮಟ್ಟ ಕಂಡೀತು. ಆಗಲೆ
ಮನಸ್ಸಿಗೆ ಸಮಾಧಾನ, ಶಾಂತಿ. ಇಲ್ಲವಾದರೆ ಸದಾ
ದ್ವಂದ್ವಗಳ ಈ ದುಷ್ಟ ದಿಗ್ಭಂಧದಲ್ಲಿ
ಎಲ್ಲಕ್ಕೂ ಹೊರತಾಗಿ ಅಲಖ್ಖಾಗಿ ಇರುವುದು ಅಸಾಧ್ಯ:
ಈ ಇಂಥ ದಿಗ್ಬಂಧದಲ್ಲಿ.

ನೆಲಮುಗಿಲು, ಹಗಲಿರುಳು,
ಒಡಲು ಅದರೊಳಗು ಗಾಡಾಂಧಕಾರ,
ಹೇಮಂತದಂತ್ಯದಲ್ಲೇ ಬಂದು ಚಿಗುರುವ ವಸಂತ;
ಗ್ರೀಷ್ಮದ ಮಹಾತಾಪವನ್ನೇ ನುಂಗಿ, ಹನಿಹನಿಯಾಗಿ
ಮಂದಯಿಸಿ ಭೋರ್ಗರೆವ ಸುರಿಮಳೆಯ ಧಾರೆ;
ಒಂದೊಂದೆ ಈ ರೀತಿ ಬಂದು ರಂಗಸ್ಥಳಕ್ಕೆ
ಕುಣಿವಂಥ ಈ ದ್ವಂದ್ವಗಳ ಈ ಜಗದ
ಮೂಲಸ್ವರೂಪ.

ಬೇವು ಬೇವೇ, ಬೆಲ್ಲ ಬೆಲ್ಲವೇ ಈ ಇಲ್ಲಿ,
ಒಂದು ಇನ್ನೊಂದಾಗದಿಲ್ಲಿ.
ಬೇವನ್ನೇ ತಿಂದು ಇದೆ ಬೆಲ್ಲ ಎನ್ನುವ ವಿರಾಗಿ
ಬೆಲ್ಲವನ್ನೇ ತಿಂದು ಊದಿಕೊಂಡ ವಾಚಾಳಿ
ಗೊದ್ದ, ಬೇವೇ ಬೆಲ್ಲ, ಅದ ತಿನ್ನಿರೆಂದು ನಮಗೆಲ್ಲ
ಉಪದೇಶ ಮಾಡಿದರೆ ನಗು ಬರುವುದಿಲ್ಲವೆ ಬರೀ
ಬೇವನ್ನೇ ತಿಂದು ಬಲ್ಲವಗೆ?
ಒಂದು ಗಾವುದ ಸುತ್ತಿ ಬರುವಷ್ಟರಲ್ಲಿಯೆ ಭಾರಿ
ಸುಸ್ತು ಶರೀರಕೆ; ನೂರಾರು ಕಲ್ಪನಾಲೋಕ
ಸುತ್ತಿ ಬರುವ ಮನಸ್ಸಿಗೂ ಬರುವುದಿಲ್ಲವೆ ಹೇಳಿ
ಭಾರಿ ಬೇಜಾರು? ಆರಂಭ ಅಂತ್ಯವೆರಡೂ ಇಲ್ಲಿ
ಜೊತೆ ಜೊತೆಗೆ, ನಮ್ಮೀ ತೊಗಲುಗಣ್ಣು
ಕಾಣುವ ಈ ದಿಗಂತ ಅಯ್ಯೊ ಅಲ್ಲಿ ಭಾರಿ ಹತ್ತಿರದಲ್ಲಿ
ಇನ್ನೊಂದು ಹೆಜ್ಜೆಯಾಚೆ. ಆದರೂ ಇನ್ನೊಂದು
ಹೆಜ್ಜೆ ಇಡುವುದಸಾಧ್ಯ. ಅಂತರಂಗದ ಕಣ್ಣು
ಕಾಣುವುದು ನೂರಾರು ಹೊಸ ದಿಗಂತ; ಆದರೂ
ಎತ್ತ ಹೋದರೂ ಅತ್ತ ದಿಗ್ಬಂಧವೇ,
ಕಂಡಿಲ್ಲದಿದ್ದರೂ ಕಂಡೆನೆನ್ನುವ ಹಾಗೆ
ಬದ್ಧನಾಗಿದ್ದರೂ ಅನಿರ್ಬದ್ಧ ಎನ್ನುವ ಹಾಗೆ
ಬಡಬಡಿಸುವಧ್ಯಾತ್ಮವಾದಿಗೂ ಗೊತ್ತುಂಟು
ನಮ್ಮೀ ಜಗತ್ತು ದ್ವಂದ್ವಾವಳಿಯ ಛಂದ;
ಸತ್ತ ಮೇಲೆ ಬಹುಶಃ ತೊಲಗುವುದೋ ಏನೊ
ಈ ದ್ವಂದ್ವ ನಿರ್ಬಂಧ.
ಸಾಯದೇ ತಿಳಿಯದದು. ಸತ್ತಮೇಲೆ
ಬಂದವರು ಯಾರೂ ಇಲ್ಲ, ಅವರ ಮಾತು
ಬದುಕಿರುವವರಿಗಂತೂ ಅಲ್ಲವೇ ಅಲ್ಲ.

* ಪ್ರೊ. ಎಂ. ಗೋಪಾಲಕೃಷ್ಣ ಅಡಿಗ
----- * -----
(ಅಡಿಗರ ಸಂದರ್ಶನ ಮತ್ತು ಕವನ ಆಕಾಶವಾಣಿ ಬೆಂಗಳೂರು ಕೇಂದ್ರದ ಕೃಪೆ)

*****

ಈ ಅಂಕಣದ ಹಿಂದಿನ ಬರೆಹಗಳು

ಕರಿದ ಮಿರ್ಚಿಯಾದ ಜೀವಂತ ಮನುಷ್ಯರು....

ಐವತ್ತು ಕಲ್ಲು ಒಗೆದು ಮಹಾದೇವರಾಯನ ಸಾವಿನ ಶಬ್ದ ಹಿಡಿದು…

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...