ಅಗೆದಷ್ಟೂ ಆಳ ಅಳೆದಷ್ಟೂ ನೀಳ

Date: 25-11-2020


ಕೊರತೆ ಇಲ್ಲದ ಬಾಳು ಉಂಟೇ? ಬದುಕಿನ ಹಾದಿಯಲ್ಲಿ ಸಿಗುವ ಓರೆ -ಕೋರೆಗಳನ್ನು ತಿದ್ದಿ ತೀಡುವುದೇ ನಿಜವಾದ ಬದುಕು ಎಂಬುದನ್ನು ಲೇಖಕ ಸಂತೋಷ ಅನಂತಪುರ ಅವರು ತಮ್ಬಮ ಲೇಖನ ಸರಣಿ ‘ಅನಂತ ಯಾನ’ ದಲ್ಲಿ ತುಂಬಾ ಸರಳವಾಗಿ ವಿವರಿಸಿದ್ದು ಹೀಗೆ;

ಎಲ್ಲವೂ ಸರಿಯಾಗಿರುವುದನ್ನು ಬದುಕು ಎನ್ನಲಾದೀತೇ? ಓರೆ ಕೋರೆಗಳನ್ನು ತಿದ್ದಿ ತೀಡುವುದೇ ನಿಜವಾದ ಬದುಕು. ಅಗೆದಷ್ಟೂ ಆಳಕ್ಕಿಳಿಯುತ್ತಲೇ ಹೊಸ ಹೊಳಹನ್ನು ಬದುಕು ನೀಡುತ್ತಿರುತ್ತದೆ. ಹಾಗಾಗಿ ಅದನ್ನು ಹೀಗೇ ಎಂದು ಷರಾ ಬರೆಯುವುದು ತುಸು ಕಷ್ಟ. ಹರಿಯುವ ಬದುಕಿಗೆ ನಿಂತು ಗೊತ್ತಿರುವುದಿಲ್ಲ. ಚಲನೆಯೇ ಅದರ ಮೂಲದ್ರವ್ಯ. ಹಾಗೆ ಚಲಿಸುತ್ತಿರುವಾಗ ಕಾಣುವ, ಅರಿಯುವ, ಗ್ರಹಿಸುವ ಬಹಳಷ್ಟನ್ನು ಅದು ನಮಗೆ ಕೊಡುತ್ತಿರುತ್ತದೆ. ಹಾಗೆ ಕೊಟ್ಟಿದ್ದನ್ನು ಬೊಗಸೆಯಲ್ಲಿ ತುಂಬಿಸಿಕೊಂಡು ನಾವು ನಡೆಯುತ್ತಿರುತ್ತೇವೆ.

ಹಾಗೆ ನೋಡ ಹೋದರೆ ಬಹುಪಾಲು ದು:ಖಗಳನ್ನು ಹೊತ್ತ ಬದುಕಿನಲ್ಲಿ ಖುಷಿಯ ಕ್ಷಣಗಳಿರುವುದು ಕೆಲವಷ್ಟೇ. ಆದರೂ ಬದುಕು ಸಂತಸವಾಗಿರುವುದನ್ನು ಕಂಡಾಗ ನೋವುಗಳುಳ್ಳ ಬದುಕೇನಾ ಇದು? ಎಂದನ್ನಿಸದಿರದು. ಭಾವಾರ್ಥ, ಉದ್ದೇಶಗಳು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಿರುತ್ತವೆ ಎನ್ನುವುದು ನಿಜ. ನೋವುಗಳೇ ತುಂಬಿದ ಬಾಳು ಸದಾನಂದವನ್ನೇ ಬಯಸಿದರೆ, ಖುಷಿಯ ಬಾಳಲ್ಲಿ ದುಃಖ ನೋವುಗಳನ್ನೇ ಅರಸುವ ಮಂದಿಗೇನೂ ಕಡಿಮೆಯಿಲ್ಲ.

ಸಂಕೀರ್ಣತೆಗಳೊಂದಿಗೆ ಹೆಜ್ಜೆ ಹಾಕುವ ಯೋಗ ಅವರವರದ್ದು. ಸಂತಾಪಕ್ಕೆ ಕಾರಣವೆಂದು ಹೇಳಿಕೊಳ್ಳುವವುಗಳಿಂದ ಕಳಚಿಕೊಳ್ಳಬೇಕು. ಅರಿತು ಬರುವ, ಅರಿಯದೆ ಏರುವ ಭಾರಗಳನ್ನು ಆಗಿಂದಾಗಲೇ ಇಳಿಸಿಬಿಡಬೇಕು. ಬೆನ್ನಿಗೇರಿದ ಅವುಗಳನ್ನು ತಕ್ಷಣಕ್ಕೆ ಇಳಿಸದಿದ್ದಲ್ಲಿ ಗಂಟು ಕಟ್ಟಿಕೊಂಡು ಬಿಡುತ್ತವೆ. ಬೆನ್ನಿಗಂಟಿಕೊಳ್ಳುವ ಗಂಟುಗಳನ್ನು ನಾಜೂಕಾಗಿ ಬಿಡಿಸದಿದ್ದರೆ ಹೊರೆಯೇರಿಸಿಕೊಂಡ ಬೆನ್ನಿಗೆ ಅಪಾಯ ತಪ್ಪಿದ್ದಲ್ಲ.

ಅರ್ಥವಿಲ್ಲದ್ದೆಂದು ಏನನ್ನು ಕಾಣುತ್ತೆವೆಯೋ ಅದರಲ್ಲಿಯೇ ಗಾಢವಾದ ಅರ್ಥ ತುಂಬಿಕೊಂಡಿರುತ್ತದೆ ಎನ್ನುವುದು ಬದುಕಿನ ಕೊನೆಯಲ್ಲಿ ತಿಳಿದು ಬರುತ್ತದೆ. ಆವಾಗ ಜೊತೆಗೊಂದಿಷ್ಟು ಬುದ್ದಿಯೂ ಕಾಣಿಸಿಕೊಳ್ಳುವುದುಂಟು. ಅದು ಇನ್ನೊಬ್ಬರೆಡವಿದ್ದನ್ನು ನೋಡಿಯಲ್ಲ ಬದಲಿಗೆ ತಾನೇ ಏಟು ತಿನ್ನುವುದರ ಮೂಲಕ ಎನ್ನುವುದನ್ನು ಗಮನಿಸಬೇಕು. ಬಾಳಿನುದ್ದಕ್ಕೂ ಹೇಳಬಹುದಾದದ್ದು ಮತ್ತು ಹೇಳಲಾಗದ್ದು ಕೆಲವೊಂದಿಷ್ಟು ವಿಚಾರಗಳಿರುತ್ತವೆ. ಮಾತಿಗಿಂತ ಸ್ಪರ್ಶ ಹೆಚ್ಚಿನದ್ದನ್ನು ಹೇಳಬಲ್ಲುದಾದರೂ ಅದು ನಮ್ಮ ಅಂತರಂಗವನ್ನು ತಟ್ಟಲಾರದು. ಮುಳ್ಳಿನ ಜೊತೆಗೇ ಬೆಳೆಯುವ ಹೂವು ತನ್ನ ಕತೆಯನ್ನು ಹೇಳಿಕೊಳ್ಳುವುದಿಲ್ಲವಷ್ಟೇ.

***

ಕೊರತೆ ಇಲ್ಲದ ಬಾಳು ಉಂಟೇ? ಎಂತೆಂತಹ ಮಹಾಪುರುಷರಲ್ಲೂ ಏನೆಲ್ಲಾ ಕೊರತೆಗಳಿದ್ದವು. ಹಾಗಿದ್ದೂ ಅವರು ಬದುಕಿ ಮಹಾಪುರುಷರೆನಿಸಿಕೊಳ್ಳಲಿಲ್ಲವೇ? ಬೆಳದಿಂಗಳ ಚೆಲ್ಲುವ ಚಂದಿರನಲ್ಲೂ ಒಂದು ಕೊರತೆಯಿದೆ. ಹಾಗಂತ ರಜನೀಶನ ರಮ್ಯತೆಗೇನೂ ತೊಡಕಾಗಲಿಲ್ಲ. ಮುಂದುವರಿದು ಅವನು ಚೆಲ್ಲುವ ತಂಪಗಿನ ಬೆಳದಿಂಗಳನ್ನು ಮನಸ್ಸು-ಹೃದಯಗಳಲ್ಲಿ ಹಿಡಿದಿಟ್ಟು ಹೀರಿ ಹಿಗ್ಗುತ್ತೇವೆ. ಕೊರತೆಗಳನ್ನು ಇಟ್ಟುಕೊಂಡು ಜೀವಿಸುವುದೇ ನಿಜವಾದ ಬದುಕು. ಎಲ್ಲವೂ ಸರಿ ಇದ್ದು ಬಾಳುವುದರಲ್ಲಿ ದೊಡ್ಡ ವಿಶೇಷವೇನಿಲ್ಲ. ಕೊರತೆಗಳ ನಡುವೆಯೂ ಸಿಹಿಯೊರತೆ ಹರಿಸುವುದಕ್ಕೆ ಜೀವಿಸುವುದು ಎನ್ನುತ್ತೇವೆ.

ಯಶಸ್ಸನ್ನು ಹೇಗೆ ಪಡೆಯಬೇಕೆಂಬ ಕಾರ್ಯಸೂಚಿಯ ತಯಾರಿಯಲ್ಲಿ ಮನಸ್ಸಿಗೆ ಸೋಲನ್ನು ಹೇಗೆ ನಿಭಾಯಿಸಬೇಕೆಂದು ದೌಡಾಯಿಸುವ ಬಾಳಲ್ಲಿ ಕಲಿತಿರುವುದಿಲ್ಲ. ಅಷ್ಟಕ್ಕೇ ಬಹಳಷ್ಟು ಅವಾಂತರಗಳು, ಗಂಡಾಂತರಗಳು ನಡೆದು ಬಿಟ್ಟಿರುತ್ತವೆ.ಮುಂದೆ ಉದ್ಭವಿಸಲಿರುವ ವ್ಯತಿರಿಕ್ತ ಫಲಶ್ರುತಿಯ ಬಗ್ಗೆ ಯೋಚಿಸದೆ ಕೊರತೆಗಳಿರದ ಬಾಳು ವಯಸ್ಸಿಗೂ ಮೀರಿದ ವೈರಾಗ್ಯಗಳನ್ನು ಆಹ್ವಾನಿಸಿಕೊಳ್ಳುವುದಿದೆ. ಮನಸ್ಸನ್ನು ಪಳಗಿಸಿಕೊಳ್ಳಬೇಕಾಗಿರುವುದು ಕಾಲದ ತುರ್ತೂ ಹೌದು.

ಆಯಾ ವಯಸ್ಸಲ್ಲಿ ಏನು ನಡೆಯಬೇಕೋ ಅದು ನಡೆಯಲೇಬೇಕು. ಅದು ಬಿಟ್ಟು ನಲ್ವತ್ತಕ್ಕೆ ಅರುವತ್ತರ ವೈರಾಗ್ಯವನ್ನು ಬಲವಂತವಾಗಿ ತೊಡಿಸುವುದು ಆಯಾ ಹರೆಯಕ್ಕೇ ಎಸಗುವ ಅಪಚಾರ. ಅಷ್ಟಕ್ಕೂ ಬದುಕು ಅರಳುವುದೇ ನಲ್ವತ್ತರಲ್ಲಿ. ಬದುಕಿಗೆ ಮತ್ತದಕ್ಕೆ ಹೊದ್ದು ಬರುವ ಹರೆಯಕ್ಕೆ ತನ್ನದೇ ಆದ ಆಕರ್ಷಣೆ, ಚಂದ, ಅನುಕೂಲತೆಗಳಿದ್ದಾಗಲೂ ಅದ್ಯಾವುದನ್ನೂ ಅನುಭವಿಸದೆ ನಮಗೆ ನಾವೇ ದುಃಸ್ಥಿತಿಯ ಬೇಲಿಯನ್ನು ಹಾಕಿಕೊಳ್ಳುವ ಮನಸ್ಥಿಗೆ ಏನನ್ನೋಣ ?

***

ಅರಳುತ್ತಿರುವ ಬದುಕಲ್ಲಿ ಸುಪ್ತಭಾವಗಳು ಸ್ವಾಭಿಮಾನ-ಅಹಂಕಾರಗಳಾಗಿ ಕೆಲವೊಮ್ಮೆ ಎದ್ದು ಬರುವುದಿದೆ. ಸ್ವಾಭಿಮಾನವೇ ಅಹಂಕಾರವಾಗಿ, ಅಹಂಕಾರವೇ ಸ್ವಾಭಿಮಾನವಾಗುವುದೂ ಇದೆ. ಇವೆರಡರ ನಡುವಿನ ತೆಳು ಗೆರೆಯನ್ನು ಗಮನಿಸಿ ನಡೆದದ್ದೇ ಆದಲ್ಲಿ ಅಹಂಕಾರವಿಲ್ಲದ ಸ್ವಾಭಿಮಾನವು ನಮ್ಮದಾಗಿ ಬಿಡುತ್ತದೆ. ಅಹಂಕಾರವನ್ನೇ ಸ್ವಾಭಿಮಾನವನ್ನಾಗಿಸುತ್ತ ಹೀಗೂ ಕೊರತೆಯನ್ನು ಮುಚ್ಚಿಕೊಳ್ಳುವುದಿದೆ! ಕಲ್ಲು ಬಿದ್ದ ಸರೋವರದಲ್ಲೂ ತಣ್ಣನೆಯ ಗಾಳಿಯು ಎಬ್ಬಿಸುವ ಅಂದದ ಅಲೆಯಂತೆ, ಆ ಅಲೆಯು ಹೊತ್ತು ತರುವ ಸುಗಂಧದಂತೆ, ಆ ಗಂಧವು ಸೂಸುವ ನವಿರಿನಂತೆ, ನವಿರು ಉದ್ದೀಪಿಸುವ ಬಗೆಗೆಲ್ಲ ಸೋತೇ ಹೋಗಿಬಿಡುವಂತೆ ಸ್ವಾಭಿಮಾನವಿರಬೇಕು. ಹರಿವ ನದಿಯ ಬಳಿ ಶಾಂತವಾಗಿ ತನ್ನ ಪಾಡಿಗೆ ತಾನಿರುವ ಕಲ್ಲಿನಂತಹ ಸ್ವಾಭಿಮಾನದ ಬದುಕು ನಮ್ಮದಾಗಬೇಕು.

ಮಸೂರದೊಳಗೆ ಒಂದೊಳ್ಳೆಯ ಪಟವಾಗಲು ಕೆಲವೊಂದು ನಿರ್ಣಾಯಕ ಸಂಗತಿಗಳ ಅಗತ್ಯಗಳಲ್ಲಿ ಮುಖ್ಯವಾದುದು ಬೆಳಕು. ಅಂತೆಯೇ ಬಾಳ ಮಸೂರದೊಳಗೆ ಚಂದದ ಪಟವಾಗಲು ಬೇಕಾಗಿಬರುವ ನಿರ್ಣಾಯಕ ಸಂಗತಿಗಳಲ್ಲಿ ನಮ್ಮೊಳಗಣ ಬೆಳಕೂ ಒಂದು. ಅದರ ಸಂಗಮಕ್ಕೆ ಕಾಯುತ್ತಿರಬೇಕಷ್ಟೆ. ಕ್ಷಣಕ್ಷಣಕ್ಕೂ ಅಂತಹ ಘಟ್ಟಗಳನ್ನು ಹಾದು ಹೋಗುತ್ತಲಿದ್ದರೂ ಅದನ್ನು ನಾವು ಗಮನಿಸುವುದಿಲ್ಲವಷ್ಟೇ. ನಮ್ಮನ್ನು ನಾವು ಸರಿದು ಹೋಗಲು ಬಿಡುವುದರ ಜೊತೆ ಜೊತೆಗೆ ನಿರ್ಧಾರಕ ಸಮಯದೊಳಗೂ ನಾವಿರುವಂತೆ ನೋಡಿಕೊಳ್ಳುತ್ತಿರಬೇಕಾದ ಅಗತ್ಯವಿದೆ. ಅಂತಹ ಕ್ಷಣಗಳನ್ನು ಬಾಳಿನ ಲಂಬ ರೇಖೆಯಲ್ಲಿ ಪದೇಪದೆ ಸಂಧಿಸುತ್ತಿರಬೇಕು. ಸೂರ್ಯೋದಯವು ಎರೆಯುವ ಬಣ್ಣಕ್ಕೆ ಮೈ-ಕಾಯಿಸಿಕೊಂಡು, ಅಸ್ತಮಿಸುವ ರವಿಯು ಚೆಲ್ಲುವ ರಂಗಿಗೆ ಮೈ-ಬೆಳಗಿಸಿಕೊಂಡು ಅಂದದ ಚೌಕಟ್ಟಿನೊಳಗೆ ಸೆರೆಯಾಗಿ ಬಿಡಬೇಕು. ರವಿಯದ್ದಿಸುವ ಬಣ್ಣಗಳನ್ನೇ ಹೊದ್ದುಕೊಳ್ಳಬೇಕು.

***

ಸಾವು ನೋವುಗಳೇ ಕೆಲವರಿಗೆ ಮಹತ್ತಾದ ವಿಚಾರವಾಗುವುದಿದೆ. ಅಲ್ಲಿಯವರೆಗೆ ಮುದುಡಿ ಕುಳಿತಿರುವ ಅಂತಹವರು ಅಂತಹದ್ದೊಂದು ದುರಂತವು ಸಂಭವಿಸಿತೆಂದರೆ ಸಾಕು ಕೊಡವಿ ಎದ್ದು ಬಿಡುತ್ತಾರೆ. ಅವರನ್ನವರೇ ಅಲ್ಲಿ ಕಂಡುಕೊಳ್ಳುವ ರೀತಿ, ತಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಬಗೆ, ಘಟನೆಗೆ ಸಂಬಂಧಿಸಿದಂತೆ ನೀಡುವ ಕ್ರಿಯೆ-ಪ್ರತಿಕ್ರಿಯೆಗಳೆಲ್ಲವೂ ಬೇನೆಯನ್ನು ವ್ಯಕ್ತಪಡಿಸುವ ಕನಿಕರದ ಭಾವವಾಗಿರುತ್ತದೆ. ಅಂತಹ ನಿಜದ ಜೊತೆಗೆ ಈ ರೀತಿಯಾಗಿ ಅಭಿವ್ಯಕ್ತಿಸುತ್ತಲೇ ಒಳಗೊಳಗೇ ಸಂತಸವನ್ನು ಅನುಭವಿಸುವ, ನೆಮ್ಮದಿಯನ್ನು ಪಡೆಯುವ ಸಂಕಟ ಮನಸ್ಥಿತಿಯ ಬಗ್ಗೆ ಮರುಗದಿರಲು ಸಾಧ್ಯವೇ ?

ಅನ್ಯರ ನೋವುಗಳಲ್ಲಿ ಸಂತಸ ಕಾಣುವ ಮಂದಿಯ ಮಾನಸಿಕಾವಸ್ಥೆಯ ಬಗ್ಗೆ ಏನೆಂದು ಹೇಳುವುದು? ನಂಬಿದ ನಮ್ಮವರಿಗೇ ನಮ್ಮ ನೋವುಗಳು ಸಂತಸವನ್ನು ತರುವುದಿದ್ದರೆ ಅದಕ್ಕಿಂತ ಮಿಗಿಲಾದ ಭಾಗ್ಯವುಂಟೇ ಶ್ರೀಹರಿ? ಎಂದವನಿಗೆ ಮೊರೆ ಹೋಗಬೇಕು. ಅದು ಬಿಟ್ಟು ಅವರಿಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರಾಗಬಾರದು. ಕರ್ಮ ಯಾರನ್ನೂ ಬಿಟ್ಟಿಲ್ಲ ಎಂದು ಹೇಳುವ ಮಂದಿಗೂ ಕರ್ಮದೋಷ ತಪ್ಪಿದ್ದಲ್ಲವಲ್ಲ! ಅವರವರ ಉವಾಚಗಳು, ಪ್ರತಿಕ್ರಿಯಿಸಿದ ರೀತಿ-ನೀತಿಗಳನ್ನು ಬಲ್ಲವರೇ ಎಲ್ಲರು. ಹಾಗಿದ್ದೂ ನಂಬಿಕೊಂಡು, ಒಪ್ಪಿ-ಅಪ್ಪಿಕೊಂಡು ಬಂದಂತಹ ಬಂಧಗಳು ಉಸಿರುಗಟ್ಟಿ ಸಾಯಬಾರದೆಂಬ ಏಕೈಕ ಉದ್ದೇಶವು ಘಟನೆಗಳು ವಿಕೋಪಕ್ಕೆ ಹೋಗದಂತೆ ಮನಸ್ಸು ಹೃದಯ ಮಿಳಿತಗೊಂಡು ನಮ್ಮನ್ನು ತಡೆಯುತ್ತದೆ. ಅಂದಹಾಗೆ ಮಾನಸಿಕವಾಗಿ ಸಂಸಾರದೊಳಗಿದ್ದೂ ಒಂಟಿಯಾಗಿ ಜೀವಿಸುವುದು ಲೌಖಿಕದಲ್ಲಿ ನಷ್ಟದ ಮಾತಾದರೆ ಅಲೌಖಿಕ ದೃಷ್ಟಿಯಲ್ಲದು ಲಾಭದ ಮಾತೇ.

ಹುಚ್ಚು ನಾಟಕದ ಹೆಚ್ಚುವರಿ ಪಾತ್ರಗಳಾಗದೆ ನಮ್ಮಷ್ಟಕ್ಕೇ ನಾವಿರುವುದು ಒಂದು ರೀತಿಯಾದರೆ, ಅದೆಂತಹದ್ದೇ ಪಾತ್ರವನ್ನಾದರೂ ಸರಿ ನಟಿಸಲೇಬೇಕೆನ್ನುವ ಚಾಳಿ ಇನ್ನೊಂದು ತೆರನಾದದ್ದು. ಈ ರೀತಿ-ನೀತಿಗಳ ಪಾಡು ಹೇಳತೀರದ್ದು. ಕೆಲವೊಂದು ಬಂಧಗಳು ನಮಗೆ ಸಹ್ಯವೆನಿಸಿ ಬರುವುದಿಲ್ಲ.ಅದಕ್ಕೆ ಕಾರಣಗಳನೇಕ. ಆದರೆ ಆಪ್ತೇಷ್ಟರೆನಿಸಿಕೊಂಡ ನಮ್ಮವರಿಗೆ ಆ ಬಂಧಗಳು ಬಲು ಸಹ್ಯವೂ, ಅಕ್ಕರೆ- ಸಕ್ಕರೆಯ ಬಂಧವೂ ಆಗಿ ಹೊರ ಹೊಮ್ಮುವುದು ಬೇರೇನಕ್ಕೂ ಅಲ್ಲ; ಅವರಿಗದು ನಮ್ಮನ್ನು ಇರಿದು ಉರಿಸಲಿಕ್ಕಿರುವ ಒಂದು ಅಸ್ತ್ರವಷ್ಟೇ. ಹಿಂಸಾರಸಿಕ ಮನಸ್ಥಿತಿಯ ಒಂದು ಭಾಗವದು. ಪೀಡನಾ ಸುಖವನ್ನು ಸೊ ಕಾಲ್ಡ್ ನಮ್ಮವರೆಂದೇ ಹೇಳಿಕೊಂಡು ತಿರುಗುವ ಮಂದಿ ಹೀಗೂ ಅನುಭವಿಸಿ ಖುಷಿಪಡುವುದಿದೆ.

ಜೀವಿತದುದ್ದಕ್ಕೂ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸವನ್ನು ತೋರುವವರು ಸಿದ್ಧಾಂತ, ವೈಚಾರಿಕತೆ ಎಂದು ಪುಂಗಿ ಊದಿ ಜೀವ ಮೋಹದಿಂದ ನಾಟಕದೊಳಗಿನ ಪಾತ್ರವಾಗುವುದೂ ಇದೆ. ಮನಸ್ಸು ತನ್ನ ಸ್ತೀಮಿತ ಕಳಕೊಂಡಿತೆಂದರೆ, ಬುದ್ದಿ ವಕ್ರವಾಯಿತೆಂದರೆ ಇಂತಹವುಗಳೆಲ್ಲ ಸರ್ವೇ ಸಾಮಾನ್ಯ. ಅಂತಹ ಮನಸ್ಸುಗಳು ಈ ರೀತಿ ಕದ್ದು ಮುಚ್ಚಿ ಮನಸ್ಸು ಸಮಾಧಾನವನ್ನು ಪಟ್ಟುಕೊಂಡರೆ ಅದು ಯಾರಿಗೂ ಅರಿಯದೆಂದು ಭಾವಿಸಿ ಒಳಗೊಳಗೇ ಖುಷಿಪಡುವುದಿದೆ. ಹುಳಿಯನ್ನೇ ತಿನ್ನುವ ಮಂದಿಗೆ ಸಿಹಿಯೂ ಹುಳಿಯಾಗಿಯೇ ರುಚಿಸುವುದು ಸಹಜವಷ್ಟೇ. ಕಾಲ ಹೀಗೆ ಇರುವುದಿಲ್ಲ ಎನ್ನುವ ಸತ್ಯದ ನಂಬಿಕೆಯೊಂದಿಗೆ, ಅಂತಹ ಕ್ಷಣಗಳಲ್ಲಿ ನಮ್ಮೊಳಗಿನ ಮಾತುಗಳು ಮೌನಾಭರಣವನ್ನು ತೊಟ್ಟುಕೊಳ್ಳಬೇಕು.

***

ನಮ್ಮವರಿಗೆ ನಾವು ನಿಷ್ಪ್ರಯೋಜಕರಾಗಿರುವಾಗಲೇ ಇತರರಿಗೆ ನಾವು ಅಮೂಲ್ಯರಾಗಿ ಬಿಡುವುದನ್ನು ಬದುಕಿನ ಕುಚೋದ್ಯವೆನ್ನೋಣವೇ? ಕೇವಲ ಧನೋಪಯೋಗಿ ವಸ್ತುವಾಗಿಬಿಡುವ ನಾವವರಿಗೆ ಕೇವಲವಾಗಿರುತ್ತೇವಷ್ಟೆ. ಅವರಿಗೇನಿದ್ದರೂ ಅನ್ಯರೇ ಶ್ರೇಷ್ಠವಾಗಿ ಕಾಣುತ್ತಾರೆ. ಕಣ್ಣಿಗೆ ಕವಿದ ಮಂಜು ಸರಿಯಲು ಅದೆಷ್ಟು ಹೊತ್ತು? ಷಡ್ ವೈರಿಗಳು, ವೈರಾಗ್ಯಗಳು ಅಂಗೈಯಲ್ಲಿರುವ ಬೆಣ್ಣೆಯನ್ನೇ ಮೆಲ್ಲದಂತೆ ಮಾಡಿ ಬಿಡುವುದು ಸುಳ್ಳಲ್ಲ. ಉಮ್ಮಳಿಸಿ ಒತ್ತರಿಸಿಕೊಂಡು ಬರುವ ದುಃಖಕ್ಕೆ ಆಸರೆಯಾಗಲು ಜೊತೆಯಲ್ಲೊಂದು ಹೆಗಲೊದಗುವುದು ಎಲ್ಲರಿಗೂ ದಕ್ಕಿ ಬರುವ ಯೋಗವಲ್ಲವಲ್ಲ.ಒಳಗೊಳಗೇ ಬಿಕ್ಕಳಿಸುತ್ತಾ ಏಗಿ ಹಗುರಾಗುವುದು ಕೆಲವೊಂದು ಜೀವಕ್ಕೆ ಮಾತ್ರವಿರುವ ದೌರ್ಭಾಗ್ಯ. ಇವೆಲ್ಲವೂ ಪಡಕೊಂಡು ಬಂದಿರುವವುಗಳು.

ಸೃಷ್ಟಿಯು ಸಂಭವಿಸುವುದು ಸಂಕಲ್ಪದಿಂದ. ಸಮಸ್ತ ಜೀವಜಾಲಗಳ ಉಗಮವೂ ಸಂಕಲ್ಪದಿಂದಲೇ ಹುಟ್ಟಿಕೊಂಡದ್ದು. ಹಾಗಾಗಿ ನಮ್ಮ ಮಾನಸಿಕಾವಸ್ಥೆಯು ಕೂಡ ನಿಂತಿರುವುದು ಸಂಕಲ್ಪ ಬಲದಿಂದಲೇ. ಹೀಗಿರಬೇಕೆಂದರೆ ಹಾಗೆಯೇ ಇರುವಂತೆ. ಕನಸುಗಳನ್ನು ಕಾಣೋದು ಯಾರಿಗಿಷ್ಟವಿಲ್ಲ ಹೇಳಿ? ಅದು ನನಸಾಗುವುದನ್ನೇ ಕಾಯುತ್ತಿರುತ್ತೇವೆ. ಅದರಲ್ಲೂ ಕಂಡ ಕನಸುಗಳು ನಮ್ಮ ಜೊತೆಗೇ ಇದ್ದರಂತೂ ಕೇಳಲೇಬೇಡಿ. ಹಾಗಿದ್ದೂ ನಮ್ಮ ಕನಸು ನನಸಾಗದೆ ಅದು ಪರರಲ್ಲಿ ಮೂಡಿಬಂದು, ಆ ಕನಸನ್ನು ಅವರು ಜೀವಿಸುತ್ತಿದ್ದಾರೆಂದರೆ ಅದೊಂದು ದೊಡ್ಡ ಖುಷಿಯ ವಿಚಾರ.ಹಾಗಂತ ನಾವು ಆ ಧಾಟಿಯಲ್ಲಿ ಯೋಚಿಸುವುದಿಲ್ಲ. ನಮ್ಮ ಕನಸನ್ನು ಇನ್ನೊಬ್ಬರು ಬದುಕಿ ಜೀವಿಸುವ ಕ್ಷಣವನ್ನು ನಾವು ಅನುಭವಿಸುವುದೂ ಇಲ್ಲ. ಜೊತೆಗಿರುವ ಕನಸು ನನಸಾಗಬೇಕಾದರೆ ಅಲ್ಲೊಂದಿಷ್ಟು ಒಲವು-ಒಲುಮೆಗಳು, ಮಮತೆ-ವಾತ್ಸಲ್ಯಗಳು ಹನಿಯುತ್ತಿರಬೇಕು. ಹನಿಯದೆ ಯಾವುದೂ ಮಣಿಯದು. ಆದರೆ ಕನಸುಗಳೇ ನೋವುಗಳಾಗಿ ಹೆಣಭಾರವಾಗಿ ಎದೆಯಲ್ಲಿ ಕುಳಿತಾಗ ಜೀವಕ್ಕೆ ಉಸಿರೇ ಭಾರವಾಗಿ ಬಿಡುವುದುಂಟು.

***

ಜೀವನದ ಮೋಜಡಗಿರುವುದೇ ಚರಿತ್ರೆಯು ತಂದೊಡ್ಡುವ ಹೊಣೆಗಾರಿಕೆಯಲ್ಲಿ ಎಂದರೆ ತಪ್ಪಾಗಲಾರದು. ನಾವು ಇತಿಹಾಸದ ಭಾಗವೆಂದೂ, ಇತಿಹಾಸವು ನಮಗೆ ಗುರುವಾಗಬೇಕೆಂದೂ ನಮಗೆ ನಾವೇ ಹೇಳುತ್ತಿರುತ್ತೇವೆ. ಹಾಗಿದ್ದೂ ಇತಿಹಾಸದಿಂದ ಪಾಠ ಕಲಿತವರಲ್ಲವಲ್ಲ ನಾವು! ಬಾಳಿರುವುದೇ ಸಂಭ್ರಮಿಸುವುದಕ್ಕೆನ್ನುವ ಸತ್ಯದ ಅರಿವಿರುವ ಬಲು ಅಪರೂಪದ ಜೀವಗಳು ಬದುಕನ್ನು ಯಕಃಶ್ಚಿತ್ ಸಂಭ್ರಮಿಸುತ್ತಿರುತ್ತವೆ. ಬದುಕೇ ಒಂದು ಸಂಭ್ರಮ. ಸಂಭ್ರಮ ಸಡಗರವೇ ಬದುಕು ಅನ್ನುವಷ್ಟರ ಮಟ್ಟಿಗೆ ಕಾರಣಗಳಿಗೆ ಕಾಯದೆ ಸಂಭ್ರಮಿಸುತ್ತಿರಬೇಕು ಮತ್ತು ಸಂಭ್ರಮಿಸುವ ಬಗೆಯನ್ನೂ ಹುಡುಕುತ್ತಿರಬೇಕು.

ನಮ್ಮೊಳಗಿನ ನಿಜವನ್ನು ತಿಳಿದಾಗ ಲೋಕದ ನಿಜವೂ ತಿಳಿದು ಬರುತ್ತದೆ. ನಮ್ಮ ನಿಜವು ತಿಳಿಯದವರೆಗೆ ಲೋಕದ ನಿಜವೂ ತಿಳಿದು ಬರುವುದಿಲ್ಲ. ನಮ್ಮನ್ನು ನಾವು ಪ್ರೀತಿಸುವುದೇ ಲೋಕದ ನಿಜವೂ ಆಗಿ ಬರಬೇಕು. ಅದು ಸ್ವಾರ್ಥವೆನಿಸಿಕೊಳ್ಳುವುದಿಲ್ಲ. ನಾವಿದ್ದಂತೆ ನಮ್ಮನ್ನು ನಾವು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತ, ಸ್ವೀಕರಿಸಬೇಕು. ಅದು ಅಹಂಕಾರದ ಸ್ವರೂಪವನ್ನು ಪಡೆಯಬಾರದಷ್ಟೆ. ಆವಾಗಲೇ ಸಂತೋಷಕ್ಕೆ ದಾರಿ ಎಂಬುದಿಲ್ಲ. ಸಂತೋಷವೇ ದಾರಿ ಎನ್ನುವುದರ ಅರಿವಾಗುವುದು.

ಭವದ ಹಂಗನ್ನು ಭವದಲ್ಲೇ ಇಂಗಿಸಿಕೊಂಡು, ಬೆಂದು-ನೊಂದು ಮುಳಗೆದ್ದು ಬೆಳಗಲಿಕ್ಕಿರುವ ಅವಕಾಶಕ್ಕೆ ಕಾಯುವ ಕಾಯಕದೊಳಗೆ ನಾವಿರಬೇಕು. ಗತವನ್ನು ತಿರುಗಿ ನೋಡುವಾಗ ನಮ್ಮನ್ನಲ್ಲಿ ನಾವು ಕಾಣುತ್ತಿರಬೇಕು. ಇನ್ನೊಬ್ಬರ ಇಳಿಗಾಲದಲ್ಲಿ ನಮ್ಮ ಯೌವ್ವನವನ್ನು ಕೊಡುವಂತಹ ಮನಸ್ಥಿತಿಯು ನಮಗೊದಗಿ ಬರಬೇಕು.ಬಹುಕಾಲ ಧೇನಿಸಿ ದೇವ ಗಾಂಧಾರದಲ್ಲಿ ಧ್ವನಿಸಿದ ನಾದವು ಹೊಮ್ಮಿಸುವ ಅನಿರ್ವಚನೀಯ ಕಂಪನಗಳು, ಮತ್ತವುಗಳೆಬ್ಬಿಸುವ ತರಂಗಗಳಿಗೆ ಭಾವಗಳು ಜೋಲಿ ಹೊಡೆದು ಬಿಡುವುದಿದೆ. ಆ ಒಂದೇ ಗಳಿಗೆಯ ಅನುಭವದ ಬಗೆ ಮಾತ್ರ ಹಲವು. ಬದುಕೂ ಅಷ್ಟೇ, ಅಳೆದಷ್ಟೂ ನೀಳವಾಗುತ್ತಾ ಹೋಗುವ ಹಾಗೆ.

(ಕಲಾಕೃತಿ: ರವಿ ಎಸ್. ಕೋಟಗದ್ದೆ)

ಈ ಸರಣಿಯ ಹಿಂದಿನ ಬರೆಹಗಳು

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

18-03-2024 ಬೆಂಗಳೂರು

""ಅನ್ವೇಷಣೆ" ಯಂತಹ ಸಾಹಿತ್ಯಕ್ಕೆ ಮೀಸಲಾದ ನಿಯತ ಕಾಲಿಕೆಯಲ್ಲಿ ಕವಿತೆಗಳನ್ನು ಪ್ರಕಟಿಸಿರುವ ಭಾಗ್ಯ ಭರ...

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?

16-03-2024 ಬೆಂಗಳೂರು

"ಒಂದು ಕಾಲಗಟ್ಟದಲ್ಲಿ ಒಂದು ಸಮಾಜ ಇನ್ನೊಂದು ಸಮಾಜದೊಂದಿಗೆ ಎಂತದೆ ಸಂಬಂದವನ್ನು ಬೆಳೆಸಿಕೊಂಡಾಗಲೂ ಅದರಲ್ಲಿ ಸಕಾರಾ...

ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

11-03-2024 ಬೆಂಗಳೂರು

"ಜಗತ್ತಿನಲ್ಲಿ ಯಾವುದಾದರೂ ಬಾಶೆ ಇನ್ನೊಂದು ಬಾಶೆಯ ಇಲ್ಲವೆ ಬಾಶೆಗಳ ನಂಟು ಇಲ್ಲದೆ ಬದುಕಬಹುದೆ? ಹೀಗೊಂದು ಪ್ರಶ್ನೆ...