ಅಹಂಕಾರ ನಿರಸನ

Date: 26-01-2023

Location: ಬೆಂಗಳೂರು


''ಷಡ್‍ವೈರಿಗಳುಳ್ಳವಂಗೆ, ಮಹಾಜ್ಞಾನಿಗಳ ಮಾತೇಕೊ? ಎಂದು ಅಮುಗೆ ರಾಯಮ್ಮ ಪ್ರಶ್ನಿಸಿದ್ದಾಳೆ. ಕಾಮವಿಲ್ಲದ ಮೇಲೆ ಕಳವಳವಿರಬಾರದು, ಕ್ರೋಧವಿಲ್ಲದ ಮೇಲೆ ರೋಷವಿರಬಾರದು. ಲೋಭವಿಲ್ಲದ ಮೇಲೆ ಆಸೆಯಿರಬಾರದು, ಮೋಹವಿಲ್ಲದ ಮೇಲೆ ಪಾಶವಿರಬಾರದು, ಮದವಿಲ್ಲದ ಮೇಲೆ ತಾಮಸಗುಣವಿರಬಾರದು, ಮತ್ಸರವಿಲ್ಲದವನ ಮನ ಮತ್ತೊಂದು ನೆನೆಯಬಾರದೆಂದು ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ವಿವರಿಸಿದ್ದಾಳೆ'' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಅಹಂಕಾರ ನಿರಸನ’ದ ಕುರಿತು ತಿಳಿಸಿದ್ದಾರೆ.

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಷಡ್‍ವೈರಿಗಳಲ್ಲಿ ಮದ ಅಥವಾ ಅಹಂಕಾರ ಹೆಚ್ಚು ಅಪಾಯಕಾರಿಯಾದುದಾಗಿದೆ. ಅಂತೆಯೇ ಶರಣರು ಇವುಗಳನ್ನು ಷಡ್‍ವೈರಿಗಳೆಂದು ಕರೆದಿದ್ದಾರೆ. ಈ ಆರೂ ವೈರಿಗಳು ಮನುಷ್ಯನ ಒಳಗಡೆಯೇ ಇವೆ. ಆದರೆ ಮನುಷ್ಯ ತನ್ನೊಳಗಿರುವ ಈ ವೈರಿಗಳ ಕಡೆಗೆ ಗಮನ ಕೊಡದೆ, ಹೊರಗಿನ ವೈರಿಗಳ ಬಗೆಗೆ ಚಿಂತಿಸುತ್ತಿರುತ್ತಾನೆ. ಒಳಗಿನ ವೈರಿಗಳನ್ನು ಕಳೆದುಕೊಂಡರೆ, ಮನುಷ್ಯನಿಗೆ ಹೊರಗಿನ ವೈರಿಗಳು ಹುಟ್ಟುವುದೇ ಇಲ್ಲ. ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳೂ ಕೂಡ ಅಹಂಕಾರ ಹೇಗೆ ಮನುಷ್ಯರ ಅವನಿತಗೆ ಕಾರಣವಾಗುತ್ತದೆಂಬುದನ್ನೇ ಹೇಳಿವೆ. "ರಾಮಾಯಣ" ಮಹಾಕಾವ್ಯದಲ್ಲಿ ರಾವಣ ಮತ್ತು "ಮಹಾಭಾರತ" ಮಹಾಕಾವ್ಯದಲ್ಲಿ ದುರ್ಯೋಧನ ಈ ಎರಡೂ

ಪಾತ್ರಗಳು ಅಹಂಕಾರಕ್ಕೆ ಹೆಸರಾದವುಗಳು. ರಾವಣ ಮಹಾಶಿವಭಕ್ತ, ದುರ್ಯೋಧನ ಮಹಾಶೂರ, ಆದರೆ ಇವರು ತಮ್ಮ ಅಹಂಕಾರದಿಂದ ತಾವು ಸಾಯದೆ, ಅನೇಕರನ್ನು ಯುದ್ಧಗಳ ಹೆಸರಿನಲ್ಲಿ ಬಲಿತೆಗೆದುಕೊಂಡರು. ಒಬ್ಬ ಮನುಷ್ಯನಲ್ಲಿ ಅಹಂಕಾರ ಅತಿಯಾಗಿದ್ದರೆ ಅದು ಅವನೊಬ್ಬನನ್ನೇ ಸುಡುವುದಿಲ್ಲ. ಸುತ್ತಲಿದ್ದವರನ್ನೂ ಸುಟ್ಟು ಭಸ್ಮ ಮಾಡುತ್ತದೆ.

ಶಿವಶರಣೆಯರು ತಮ್ಮ ವಚನಗಳಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಷಡ್‍ವೈರಿಗಳನ್ನು ಕುರಿತು ಗಂಭೀರವಾಗಿ ಚಿಂತಿಸಿದ್ದಾರೆ. ಮದಗಳಲ್ಲಿ ಅಷ್ಟಮದಗಳನ್ನು ಕುರಿತು ಹೇಳಿದ್ದಾರೆ. ಮನುಷ್ಯನಲ್ಲಿರುವ ಈ ಒಂದೊಂದು ಮದವು ಒಂದೊಂದು ಕೇಡಿಗೆ ಕಾರಣವಾಗಿದೆ. ಮದ ಅಥವಾ ಅಹಂಕಾರವೆಂಬುದು ಮನುಷ್ಯನನ್ನು ನಿತ್ಯ ಸುಡುವ ಬೆಂಕಿಯಾಗಿದೆ. ಆದರೂ ಮನುಷ್ಯ ಅಹಂಕಾರದಿಂದ ಮೆರೆಯುತ್ತಲೇ ಇರುತ್ತಾನೆ. ತಾನು ನಾಶವಾದರೂ ಅವನು ಅಹಂಕಾರವನ್ನು ಬಿಡುವುದಿಲ್ಲ. ಇಂತಹ ಮೂರ್ಖರನ್ನು ಕುರಿತು, ಅವರ ಅಹಂಕಾರದ ಪರಿಗಳನ್ನು ಕುರಿತು ವಚನಕಾರ್ತಿಯರು ತಮ್ಮ ವಚನಗಳಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

"ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳುಳ್ಳವಂಗೆ ಮಹಾಜ್ಞಾನಿಗಳ ಮಾತೇಕೊ?"
- ಅಮುಗೆ ರಾಯಮ್ಮ (ಸ.ವ.ಸಂ.5, ವ-620)

ಕಾಮವಿಲ್ಲದವಂಗೆ ಕಳವಳವುಂಟೆ? ಕ್ರೋಧವಿಲ್ಲದವಂಗೆ ರೋಷವುಂಟೆ?
ಲೋಭವಿಲ್ಲದವಂಗೆ ಆಸೆವುಂಟೆ? ಮೋಹವಿಲ್ಲದವಂಗೆ ಪಾಶವುಂಟೆ? ಮದವಿಲ್ಲದವಂಗೆ ತಾಮಸವುಂಟೆ? ಮತ್ಸರವಿಲ್ಲದವನು ಮನದಲಿ ಮತ್ತೊಂದ ನೆನವನೆ?
- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ. ಸಂ. 5, ವ-1327)

ಈ ಇಬ್ಬರು ವಚನಕಾರ್ತಿಯರು ಅರಿಷಡ್‍ವರ್ಗಗಳ ಬಗೆಗೆ ಮಾತನಾಡಿದ್ದಾರೆ. ಷಡ್‍ವೈರಿಗಳುಳ್ಳವಂಗೆ, ಮಹಾಜ್ಞಾನಿಗಳ ಮಾತೇಕೊ? ಎಂದು ಅಮುಗೆ ರಾಯಮ್ಮ ಪ್ರಶ್ನಿಸಿದ್ದಾಳೆ. ಕಾಮವಿಲ್ಲದ ಮೇಲೆ ಕಳವಳವಿರಬಾರದು, ಕ್ರೋಧವಿಲ್ಲದ ಮೇಲೆ ರೋಷವಿರಬಾರದು. ಲೋಭವಿಲ್ಲದ ಮೇಲೆ ಆಸೆಯಿರಬಾರದು, ಮೋಹವಿಲ್ಲದ ಮೇಲೆ ಪಾಶವಿರಬಾರದು, ಮದವಿಲ್ಲದ ಮೇಲೆ ತಾಮಸಗುಣವಿರಬಾರದು, ಮತ್ಸರವಿಲ್ಲದವನ ಮನ ಮತ್ತೊಂದು ನೆನೆಯಬಾರದೆಂದು ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ವಿವರಿಸಿದ್ದಾಳೆ.

ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳಿಲ್ಲದ ಮನುಷ್ಯನಿಲ್ಲ. ಆದರೆ ಈ ದುಷ್ಟ ಗುಣಗಳನ್ನು ಬೆಳೆಸುತ್ತಾ ಹೋದರೆ ಆತ ಮೃಗವಾಗುತ್ತಾನೆ. ತಿಳುವಳಿಕೆಯುಳ್ಳವನಾಗಿ ಒಂದೊಂದನ್ನೇ ಕಳೆದುಕೊಳ್ಳುತ್ತಾ ಹೋದರೆ ಆತ ಮಾನವನಾಗುತ್ತಾನೆ, ಮಹಾಮಾನವನಾಗುತ್ತಾನೆ. ಈ ದೃಷ್ಟಗುಣಗಳಿಗೆ ತಾನು ಸೋಲುವುದು, ಮತ್ತು ಈ ಗುಣಗಳನ್ನು ತಾನೇ ಸೋಲಿಸುವುದು ಇವೆರಡೂ ಮನುಷ್ಯನ ಕೈಯಲ್ಲಿಯೇ ಇವೆ. ಇವುಗಳಿಗೆ ಬಲಿಯಾಗದೆ, ಇವುಗಳನ್ನು ಜಯಿಸಿ ಬರಲು ಅರಿವನ್ನು ಜಾಗೃತಗೊಳಿಸಿಕೊಳ್ಳಬೇಕು, ಮರೆವನ್ನು ಬಿಡಬೇಕು, ಶರಣಸಿದ್ಧಾಂತಗಳ ಮೂಲಕ ಸಂಸ್ಕಾರ ಹೊಂದಬೇಕೆಂದು ವಚನಕಾರ್ತಿಯರು ತಿಳಿಸಿದ್ದಾರೆ.

"ಕುಲಮದವೆಂಬುದಿಲ್ಲ ಅಯೋನಿ ಸಂಭವನಾಗಿ ಛಲಮದವೆಂಬುದಿಲ್ಲ ಪ್ರತಿದೋರನಾಗಿ
ಧನಮದವೆಂಬುದಿಲ್ಲ ತ್ರಿಕರಣ ಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದನಾಗಿ..."
- ಅಕ್ಕಮಹಾದೇವಿ (ಸ.ವ.ಸಂ.5, ವ-176)

ಅಕ್ಕಮಹಾದೇವಿ ಈ ವಚನದಲ್ಲಿ ನಾಲ್ಕು ರೀತಿಯ ಮದಗಳ ಬಗೆಗೆ ಪ್ರಸ್ತಾಪಿಸಿದ್ದಾಳೆ. ಮನುಷ್ಯ ಯಾವುದಾದರೂ ಒಂದು ಕುಲದಲ್ಲಿ ಹುಟ್ಟುತ್ತಾನೆ. ಅದು ಅವನ ಕೈಯಲ್ಲಿರುವುದಿಲ್ಲ. ಆದರೆ ಕೆಲವರು ಉಚ್ಛ ಕುಲದಲ್ಲಿ ಹುಟ್ಟಿದಾಗ, ಹುಟ್ಟಿದಾಕ್ಷಣವೇ ತಾವು ಶ್ರೇಷ್ಠವೆಂದು ತಿಳಿದುಕೊಳ್ಳುತ್ತಾರೆ. ಇನ್ನು ಕೆಲವರು ನೀಚ ಕುಲದಲ್ಲಿ ಹುಟ್ಟಿದಾಗ ಕೀಳರಿಮೆಯಿಂದ ಪರಿತಪಿಸುತ್ತಾರೆ. ಕುಲದಲ್ಲಿ ಉಚ್ಛ-ನೀಚ ಎಂಬ ಭೇದಭಾವ ಸಲ್ಲದೆಂದು ಹೇಳಿರುವ ಅಕ್ಕಮಹಾದೇವಿ ಹಾಗೆ ಈ ಕುಲಮದ ತೊರೆಯಬೇಕಾದರೆ ಅಯೋನಿ ಸಂಭವನಾಗಬೇಕಾಗುತ್ತದೆಂದು ಉದಾಹರಿಸುತ್ತ ಕುಲಮದವನ್ನು ತಿರಸ್ಕರಿಸಿದ್ದಾಳೆ. ಇನ್ನು ಛಲಮದ, ಧನಮದ, ವಿದ್ಯಾಮದ ಇವುಗಳು ನಂತರದಲ್ಲಿ ಬರುವಂತವುಗಳಾಗಿವೆ. ಇವುಗಳನ್ನು ಗೆಲ್ಲಬೇಕಾದರೆ ತ್ರಿಕರಣಶುದ್ಧನಾಗಬೇಕೆಂದು ಅಕ್ಕ ತಿಳಿಸಿದ್ದಾಳೆ. ಚಾತುರ್ವರ್ಣ ವ್ಯವಸ್ಥೆಯಿಂದ ಕುಲಮದ ಹುಟ್ಟಿದೆ, ಆ ಕಾರಣಕ್ಕಾಗಿ ಶರಣರು ಚಾತುರ್ವರ್ಣ ವ್ಯವಸ್ಥೆಯನ್ನು ನೇರವಾಗಿ ವಿರೋಧಿಸಿದ್ದಾರೆ.

"ಹೋತಿನ ಗಡ್ಡದಂತೆ ಗಡ್ಡದ ಹಿರಿಯರು ನೋಡಾ
ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ ಆಚಾರವಂ ಬಿಟ್ಟು, ಅನಾಚಾರವಂ ಸಂಗ್ರಹಿಸಿ
ಭಕ್ತರೊಳು ಕ್ರೋಧ, ಭಷ್ಟರೊಳು ಮೇಳ ಇವರು ನರಕಕ್ಕೆ ಯೋಗ್ಯರು. "
- ಅಕ್ಕಮ್ಮ (ಸ.ವ. ಸಂ. 5, ವ-588)

ಈ ವಚನದಲ್ಲಿ ಅಕ್ಕಮ್ಮನೆಂಬ ವಚನಕಾರ್ತಿ ಗಡ್ಡದ ಹಿರಿಯರನ್ನು ಕುರಿತು ವಿಡಂಬನೆ ಮಾಡಿದ್ದಾಳೆ. ಅನೇಕರು ಬೇರೆ ಬೇರೆ ಕಾರಣಗಳಿಂದ ಅಹಂಕಾರಿಗಳಾಗುತ್ತಾರೆ. ಪಾಂಡಿತ್ಯದ ಮದವಿರುವಂತೆ, ಹಿರಿಯತನದ ಮದವೂ ಇದೆ. ಪಾಮರನೊಬ್ಬ ಪಂಡಿತನಾದಾಗ ತಾನೇ ಶ್ರೇಷ್ಠನೆಂಬ ನಂಬಿಕೆ ಹುಟ್ಟಿಕೊಳ್ಳುತ್ತದೆ. ಆಗ ಅವನಲ್ಲಿ ಪಾಂಡಿತ್ಯದ ಮದ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ವಯಸ್ಸಾಗಿ ಹಿರಿಯರೆನಿಸಕೊಂಡಾಕ್ಷಣ ತಾನು ಇತರರಿಗಿಂತ ಹಿರಿಯ, ತಾನು ಶ್ರೇಷ್ಠ ಎನ್ನುವ ಅಹಂಭಾವ ಹುಟ್ಟಿಕೊಳ್ಳುತ್ತದೆ. ಇದನ್ನು ಅಕ್ಕಮ್ಮ ಈ ವಚನದಲ್ಲಿ ಸೊಗಸಾಗಿ ಹೇಳಿದ್ದಾಳೆ. ಇಂತಹ ಹಿರಿಯರನ್ನು ಹೋತಿನ ಗಡ್ಡದ ಹಿರಿಯರೆಂದು ಆಕೆ ಕರೆದಿದ್ದಾಳೆ. ತಮ್ಮ ಹಿರಿಯತನಕ್ಕೆ ಅಹಂಕಾರ ಪಡುವ ಇವರನ್ನು ಅನಾಚಾರಿಗಳೆಂದು ಕರೆದಿದ್ದಾಳೆ. ಇಂತವರು ಭಕ್ತರನ್ನು ಕಂಡಾಕ್ಷಣ ಕ್ರೋಧಗೊಳ್ಳುತ್ತಾರೆ. ಸಣ್ಣವಯಸ್ಸಿನವರನ್ನು ಕಂಡಾಕ್ಷಣ ನಿರ್ಲಕ್ಷಿಸುತ್ತಾರೆ, ಇಂತವರೇ ನಿಜವಾದ ಭ್ರಷ್ಟರೆಂದು ಹೇಳಿರುವ ಅಕ್ಕಮ್ಮ ಹಿರಿಯತನದ ಅಹಂಕಾರ ಅಪಾಯಕಾರಿಯಾದುದೆಂದು ತಿಳಿಸಿದ್ದಾಳೆ.

"ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ
ಮುಖವ ನೋಡಲಾಗದು
ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ,
ಅಂಗದಲ್ಲಿ ಅಹಂಕಾರಿಯಾಗಿಪ್ಪವರ ಅನುಭಾವಿಗಳೆಂಬೆನೆ?

- ಅಮುಗೆ ರಾಯಮ್ಮ (ಸ.ವ. ಸಂ.5, ವ-593)

ಇಲ್ಲಿ ಅಮುಗೆ ರಾಯಮ್ಮ ನಿಜವಾದ ಅನುಭಾವಿಗಳ್ಯಾರೆಂಬುದನ್ನು ಹೇಳಿದ್ದಾಳೆ. ಅಹಂಕಾರಿಗಳಾದವರೆಂದಿಗೂ ಅನುಭಾವಿಗಳಾಗಲು ಸಾಧ್ಯವಿಲ್ಲವೆಂದು ತಿಳಿಸಿದ್ದಾಳೆ. ಅನುಭಾವ ಮತ್ತು ಅಹಂಕಾರ ಒಂದಕ್ಕೊಂದು ವಿರುದ್ಧವಾದವುಗಳಾಗಿವೆ. ಅನುಭಾವಿಯಲ್ಲಿ ಅಹಂಕಾರದ ಶಬ್ಧವೇ ಇರುವುದಿಲ್ಲ. ಅಹಂಕಾರಿಯಲ್ಲಿ ಅನುಭಾವವೆಂಬುದು ಲವಲೇಶವೂ ಇರುವುದಿಲ್ಲ. ತಮ್ಮಷ್ಟಕ್ಕೆ ತಾವು ಅನುಭಾವಿಗಳೆಂದು ಬೀಗುವವರ ಮುಖವ ನೋಡಲಾಗದೆಂದು ರಾಯಮ್ಮ ಹೇಳಿದ್ದಾಳೆ. ಕಣ್ಣಲ್ಲಿ ಸದಾ ಕಾಮವನ್ನು ತುಂಬಿಕೊಂಡು, ಮನಸ್ಸಿನಲ್ಲಿ ದುರಾಸೆಯನ್ನು ಹೊಂದಿ ಅಹಂಕಾರಿಯಾಗಿರುವವರ ಅಂಗವೆಲ್ಲ ವಿಷವಾಗಿರುತ್ತದೆ. ಅಂತವರೆಂದಿಗೂ ಅನುಭಾವಿಗಳಾಗಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.

``ಮದಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು ಇವ ಮೂರನು ಬಿಡದೆ ನಡೆಸುವನ್ನಕ್ಕ ಘನವ ಕಾಣಬಾರದು.
ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು, ಮನದ ಕನಲನೆ ನಿಲ್ಲಿಸಿ, ಒಡಲಗುಣ ಹಿಂಗಿ
ತಾ ಮೃಡ ರೂಪಾದಲ್ಲದೆ ಘನವ ಕಾಣಬಾರದೆಂದರು.
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ''

- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ. ಸಂ.5, ವ-1248)

ಈ ವಚನದಲ್ಲಿ ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ ಮದ-ಮತ್ಸರ ಕುರಿತು ತುಂಬ ನೇರವಾಗಿ ಸರಳವಾಗಿ ಮಾತನಾಡಿದ್ದಾಳೆ. ಮನದ ಕನಲು ನಿಲ್ಲದೆ ಮದಮತ್ಸರ ಬಿಡದೆಂದು ಪ್ರಾರಂಭದಲ್ಲಿಯೇ ಆಕೆ ಸ್ಪಷ್ಟಪಡಿಸಿದ್ದಾಳೆ. ಕನಲು ಎಂದರೆ ಮಾಲಿನ್ಯ, ಮನಸ್ಸಿನಲ್ಲಿರುವ ಮಾಲಿನ್ಯ ಹೋಗದ ಹೊರತು ಮದ-ಮತ್ಸರಗಳಿಂದ ಮುಕ್ತಿಯಿಲ್ಲ. ಅಂದರೆ ಅಹಂಕಾರ ಮತ್ತು ಹೊಟ್ಟೆಕಿಚ್ಚಿಗೆ ಈ ಚಂಚಲ ಮನಸ್ಸೇ ಕಾರಣವಾಗಿದೆ. ಈ ಮನದೊಳಗೆ ಮಾಲಿನ್ಯವನ್ನಿಟ್ಟುಕೊಂಡು ಘನವ ಕಾಣಲು ಸಾಧ್ಯವಿಲ್ಲ. ಘನವ ಕಾಣಬೇಕಾದರೆ ಮನದ ಮಾಲಿನ್ಯವನ್ನು ಕಳೆದುಕೊಳ್ಳಬೇಕು. ಆಗ ತಾನೇ ಶಿವರೂಪ ಹೊಂದಲು ಸಾಧ್ಯವಾಗುತ್ತದೆಂದು ಲಿಂಗಮ್ಮ ಹೇಳಿದ್ದಾಳೆ. ಅಂದರೆ ಮೃಡರೂಪವಾಗದ ಹೊರತು ಘನವು ಕಾಣುವುದಿಲ್ಲವೆಂದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಹೇಳಿದರೆಂದು ತಿಳಿಸಿದ್ದಾಳೆ.

ಇಲ್ಲಿ ಒಂದು ವಿಷಯವನ್ನು ಲಿಂಗಮ್ಮ ಸ್ಪಷ್ಟಪಡಿಸಿದ್ದಾಳೆ. ಮನುಷ್ಯನ ಎಲ್ಲ ಆಗು-ಹೋಗುಗಳಿಗೆ ಮನಸ್ಸೇ ಕಾರಣವಾಗಿದೆ. ಆದುದರಿಂದ ಮನಸ್ಸಿಗೆ ಮಹತ್ವ ನೀಡಬೇಕಾಗುತ್ತದೆ. ಮೈಮೇಲೆ ನಿತ್ಯ ಮಾಲಿನ್ಯ ಅಂಟಿಕೊಳ್ಳುವ ರೀತಿಯಲ್ಲಿ ಮನದಲ್ಲಿ ಮದ-ಮತ್ಸರಗಳ ಮಾಲಿನ್ಯ ಕಾಣಿಸಿಕೊಳ್ಳುತ್ತದೆ. ಆಗ ಆ ಮಾಲಿನ್ಯವನ್ನು ತೆಗೆದರೆ, ಮನುಷ್ಯ ಅಹಂಕಾರದಿಂದ ದೂರವಿರಲು ಸಾಧ್ಯವಾಗುತ್ತದೆ. ಅಹಂಕಾರ ನಿರಸನ ಹೇಗೆ ಸಾಧ್ಯವೆಂಬುದನ್ನು ಲಿಂಗಮ್ಮ ಇಲ್ಲಿ ವಿವರಿಸಿದ್ದಾಳೆ.

"ಆಸೆಯುಳ್ಳನ್ನಕ್ಕ ರೋಷಬಿಡದು ಕಾಮವುಳ್ಳನ್ನಕ್ಕ ಕಳವಳ ಬಿಡದು ಕಾಯಗುಣವುಳ್ಳನ್ನಕ್ಕ ಜೀವನಬುದ್ದಿ ಬಿಡದು
ಭಾವವುಳ್ಳನ್ನ ಬಯಕೆ ಸವೆಯದು
ನಡೆಯುಳ್ಳನ್ನಕ್ಕ ನುಡಿಗೆಡೆದು..."
- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ. ಸಂ.5, ವ-1278)

ಲಿಂಗಮ್ಮ ಈ ವಚನದಲ್ಲಿ ಇದೇ ವಿಷಯವನ್ನು ಮುಂದುವರಿಸಿದ್ದಾಳೆ. ಆಸೆಗೂ- ರೋಷಕ್ಕೂ, ಕಾಮಕ್ಕೂ-ಕಳವಳಕ್ಕೂ ಭಾವನೆಗಳಿಗೂ-ಬಯಕೆಗೂ, ನಡೆಗೂ-ನುಡಿಗೂ ಸಂಬಂಧವಿದೆಯೆಂಬ ಸತ್ಯವನ್ನು ಈ ವಚನ ತಿಳಿಸುತ್ತದೆ. ಈ ಷಡ್‍ವೈರಿಗಳಿಂದ ಮುಕ್ತರಾಗಬೇಕಾದರೆ ನಮ್ಮ ಶರಣರು ಏನು ಮಾಡಿದರೆಂಬುದನ್ನು ಆಕೆ ವಚನದ ಉತ್ತರಾರ್ಧದಲ್ಲಿ ಹೇಳಿದ್ದಾಳೆ. ನಮ್ಮ ಶರಣರು ಆಸೆಯನಳಿದರು, ರೋಷವ ಹಿಂಗಿದರು, ಕಾಮನ ಸುಟ್ಟರು. ಕಳವಳವ ಹಿಂಗಿದರು, ಕಾಯಗುಣವಳಿದರು, ಜೀವನಬುದ್ಧಿಯ ಹಿಂಗಿದರು, ಭಾವವ ಬಯಲು ಮಾಡಿದರು, ಬಯಕೆಯ ಸವೆದರು, ಹಿಂದನರಿದು ಮುಂದೆ ಬದುಕಿದರೆಂದು ವಿವರಿಸಿದ್ದಾಳೆ. ಇನ್ನೊಂದು ವಚನದಲ್ಲಿ ಲಿಂಗಮ್ಮ ಅಷ್ಟಮದಗಳನ್ನು ಕುರಿತು ವಿವರಿಸಿದ್ದಾಳೆ

(ವ-1265). ಅಹಂಕಾರದಲ್ಲಿ ಎಂಟು ರೀತಿಯ ಅಹಂಕಾರಗಳಿದ್ದು ಅವು ಮನುಷ್ಯನನ್ನು ಹೇಗೆ ಹಿಂಡಿಹಿಪ್ಪಿ ಮಾಡಿಬಿಡುತ್ತವೆಂಬುದನ್ನು ಈ ವಚನದಲ್ಲಿ ವಿವರಿಸಿದ್ದಾಳೆ. ಅಷ್ಟಮದ, ದಶವಾಯು, ಸಪ್ತವ್ಯಸನ, ಷಡ್‍ವರ್ಗ ಇವೆಲ್ಲ ಮನುಷ್ಯನನ್ನು ಮುತ್ತಿಕೊಂಡಾಗ ಏನು ಮಾಡಬೇಕೆಂಬುದನ್ನು ಲಿಂಗಮ್ಮ ಈ ವಚನದಲ್ಲಿ ವಿವರಿಸಿದ್ದಾಳೆ. ಹಾದಿಯ ಹತ್ತಿ ಹೋಗಿ ಕಾಲಕಾಮಾದಿಗಳ ಕಡಿದು ಖಂಡಿಸಬೇಕು. ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ದಿಸಬೇಕೆಂದು ವಿವರಿಸಿದ್ದಾಳೆ. ಅನೇಕ ವಚನಕಾರ್ತಿಯರು ಈ ಅಹಂಕಾರ ನಿರಸನ ಕುರಿತು ತಮ್ಮ ವಚನಗಳಲ್ಲಿ ತುಂಬ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಅಷ್ಟಮದಗಳಲ್ಲಿ, ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದಗಳನ್ನು ಉಲ್ಲೇಖಿಸಲಾಗಿದೆ. ಕುಲಮದದ ಬಗೆಗೆ ಅನೇಕ ಶರಣರು ಶರಣೆಯರು ವಿವರವಾಗಿಯೇ ಹೇಳಿದ್ದಾರೆ. ಕುಲಮದವನ್ನು ಪುರೋಹಿತಶಾಹಿ ವ್ಯವಸ್ಥೆ ಬೆಳೆಸಿದೆ. ಬ್ರಾಹ್ಮಣ ಹುಟ್ಟುತ್ತಲೇ ಶ್ರೇಷ್ಠನಾಗುತ್ತಾನೆ. ಶೂದ್ರ ಹುಟ್ಟುತ್ತಲೇ ಕನಿಷ್ಠನಾಗುತ್ತನೆ. ಇನ್ನು ಪಂಚಮನಿಗೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಸ್ಥಾನವೇ ಇಲ್ಲ. ಉಚ್ಛ ಕುಲದಲ್ಲಿ ಹುಟ್ಟಿದ್ದೇವೆಂಬ ಭ್ರಮೆಯುಳ್ಳವರಿಗೆ ನೀಚಕುಲದಲ್ಲಿ ಹುಟ್ಟಿದವರು ಕಾಣಿಸುವುದೇ ಇಲ್ಲ. ಕುಲದ ಮೂಲಕ ಮನುಷ್ಯ ಅಹಂಕಾರಿಯಾಗಿ ಬೆಳೆಯಲು ಚಾತುರ್ವರ್ಣ ವ್ಯವಸ್ಥೆ ಮತ್ತು ಪುರೋಹಿತಶಾಹಿ ಮುಖ್ಯ ಕಾರಣವಾಗಿವೆಯೆಂದು ಶರಣೆಯರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಛಲಮದವು ಮನುಷ್ಯನೊಳಗಡೆಯಿಂದಲೇ ಬೆಳೆದು ನಿಲ್ಲುತ್ತದೆ. ಶರಣರು ಯಾವುದಕ್ಕೆ ಛಲವಿರಬೇಕು, ಯಾವುದಕ್ಕೆ ಛಲವಿರಬಾರದೆಂದು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೊಬ್ಬರ ಕೇಡಿಗಾಗಿ ಛಲಹೊಂದದೆ, ತನ್ನ ಬೆಳವಣಿಗೆಗಾಗಿ ಛಲವಿರಬೇಕೆಂದು ಹೇಳಿದ್ದಾರೆ. ಪರಸತಿ, ಪರಧನ, ಪರವಸ್ತುವನ್ನು ಬಯಸುವುದಿಲ್ಲವೆಂಬ ಛಲವಿರಬೇಕೆಂದು ತಿಳಿಸಿದ್ದಾರೆ. ತನ್ನ ವಂಶದ ಒಳಿತಿಗಾಗಿ ತಾನು ಮದುವೆಯಾಗುವುದಿಲ್ಲವೆಂದು ಛಲತೊಟ್ಟ ಭೀಷ್ಮನ ಛಲ ಬೇರೆ, ಪಾಂಡವರನ್ನು ಮುಗಿಸಿಬಿಡಬೇಕೆಂದು ಛಲತೊಟ್ಟ ದುರ್ಯೋಧನನ ಛಲ ಬೇರೆ. ದುರ್ಯೋಧನ ಕೊನೆಗೆ ತನ್ನ ಛಲದಿಂದಾಗಿಯೇ ಮೃತನಾದ. ಛಲಮದದ ಬಗೆಗೆ ಶರಣೆಯರು ತಮ್ಮ ವಚನಗಳಲ್ಲಿ ಸೊಗಸಾಗಿ ಹೇಳಿದ್ದಾರೆ. ಛಲಮದದಿಂದ ಹಿಂದಿನ ಆಳರಸರು ಹೇಗೆ ನಾಶವಾಗಿ ಹೋದರೆಂಬುದಕ್ಕೆ ನಮ್ಮ ಇತಿಹಾಸವೇ ಸಾಕ್ಷಿಯಾಗಿದೆ. ಇದನ್ನರಿತ ಶರಣೆಯರು ಛಲಮದದ ಬಗೆಗೆ ತಿಳಿಹೇಳಿದ್ದಾರೆ. ಧನಮದವೆಂಬುದು ಶರಣರಲ್ಲಿ ಸುಳಿಯುವುದೇ ಇಲ್ಲ. ಅವರು ಅಂದಂದಿನ ಕಾಯಕದ ಧನವನ್ನು ಅಂದಂದಿನ ದಾಸೋಹಕ್ಕೆ ನೀಡುತ್ತಿದ್ದರು. ಹೀಗಾಗಿ ಅವರಲ್ಲಿ ಹಣ ಸಂಗ್ರಹವಾಗುತ್ತಿರಲಿಲ್ಲ. ಹಣ ಸಂಗ್ರಹವಾದಾಗ, ಮನುಷ್ಯ ಶ್ರೀಮಂತನಾದಾಗ ಧನಮದ ಕಾಣಿಸಿಕೊಳ್ಳುತ್ತದೆ. ದಾಸೋಹ ತತ್ವದಿಂದ ಶರಣರು ಧನಮದದಿಂದ ದೂರವಾದರು. ರೂಪಮದ ಶರಣರಲ್ಲಿ ಕಾಣಿಸಲೇ ಇಲ್ಲ. ಅವರು ಹೊರಗಿನ ರೂಪಕ್ಕೆ ಮಹತ್ವವನ್ನೇ ಕೊಡಲಿಲ್ಲ. ಬೊಂತಾದೇವಿ, ಅಕ್ಕಮಹಾದೇವಿಯಂತಹ ಶರಣೆಯರ ಚರಿತ್ರೆಯನ್ನು ತಿಳಿದುಕೊಂಡಾಗ ಈ ವಿಷಯ ಸ್ಪಷ್ಟವಾಗುತ್ತದೆ. ಹೊರಗಿನ ಸೌಂದರ್ಯಕ್ಕೆ ಶರಣೆಯರು ಎಂದೂ ಮಾರುಹೋಗಲಿಲ್ಲ, ಹೀಗಾಗಿ ಅವರಲ್ಲಿ ರೂಪಮದ ಕಾಣಿಸಿಕೊಳ್ಳಲಿಲ್ಲ. ಯೌವನ ಮದದಬಗೆಗೆ ಶರಣೆಯರು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ರೂಪ ಯೌವನ ಶಾಶ್ವತಗಳಲ್ಲವೆಂದು ಶರಣೆಯರು ಸ್ಪಷ್ಟವಾಗಿ ತಿಳಿದುಕೊಂಡಿದ್ದರು. ಯೌವನದ ಶಕ್ತಿಯನ್ನು ಅವರು ಕಾಯಕದಲ್ಲಿ ಉಪಯೋಗಿಸುತ್ತಿದ್ದರು. ಹೀಗಾಗಿ ಕಾಯಕತತ್ವವು ಅವರಲ್ಲಿ ಯೌವನ ಮದ ಬಾರದಂತೆ ತಡೆಯಿತು. ವಿದ್ಯಾಮದ ಶರಣರಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಓದುವ ವಿದ್ಯೆಗಿಂತ, ಆತ್ಮವಿದ್ಯೆಗೆ ಪ್ರಾಮುಖ್ಯತೆ ನೀಡಿದರು. ವೇದವೆಂಬುದು ಓದಿನ ಮಾತೆಂದು ಸ್ಪಷ್ಟಪಡಿಸಿದರು. ವೇದಶಾಸ್ತ್ರ-ಪುರಾಣಗಳನ್ನೋದಿದ ಪಂಡಿತರನ್ನು ಅವರು ನೇರವಾಗಿಯೇ ಖಂಡಿಸಿದರು. ವಿದ್ಯೆಯ ಬಗೆಗೆ ಓದಿನ ಬಗೆಗೆ, ಪಾಂಡಿತ್ಯದ ಬಗೆಗೆ ಶರಣೆಯರ ನಿಲುವುಗಳು ಬೇರೆಯೇ ಆಗಿದ್ದವು ಹೀಗಾಗಿ ಅವರನ್ನು ವಿದ್ಯಾಮದ ಕಾಡಲಿಲ್ಲ. ಇನ್ನು ರಾಜಮದ ಮತ್ತು ತಪೋಮದ ಹುಟ್ಟಲಿಕ್ಕೆ ಶರಣ ಸಂಸ್ಕøತಿಯಲ್ಲಿ ಅವಕಾಶವೇ ಇರಲಿಲ್ಲ.

"ಊರಮುಂದೆ ಹಾಲಹಳ್ಳ ಹರಿಯುತ್ತಿರಲು ಆನೀ ಬಿಜ್ಜಳಂಗಂಜುವನೆ?" ಎನ್ನುವ ಬಸವಣ್ಣನ ನುಡಿ ರಾಜಸತ್ತೆಯ ವಿರುದ್ಧವಾದುದೇ ಆಗಿತ್ತು. ಅಕ್ಕಮಹಾದೇವಿಯಂತೂ ಪತಿ-ಪ್ರಭು ಎರಡೂ ಆಗಿದ್ದ ಕೌಶಿಕನನ್ನು ತಿರಸ್ಕರಿಸಿ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಸಾರಿದಳು. ಇನ್ನು ಶರಣರು ತಪಸ್ಸು ಮಾಡಲಿಲ್ಲ, ಕಾಡಿಗೆ ಹೋಗಲಿಲ್ಲ. ನಿತ್ಯದ ಕಾಯಕವೇ ಅವರಿಗೆ ತಪಸ್ಸಾಗಿತ್ತು. ಹೀಗಾಗಿ ತಪೋಮದವೆಂಬುದು ಅವರಲ್ಲಿ ಸುಳಿಯಲಿಲ್ಲ. ಅಹಂಕಾರದಿಂದ ಹೇಗೆ ದೂರವಿರಬೇಕೆಂಬುದನ್ನು ಶರಣೆಯರು ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.

ಈ ಅಂಕಣದ ಹಿಂದಿನ ಬರೆಹಗಳು:
ಸತಿ-ಪತಿ ಭಾವ
ಕಾಯಕ ನಿಷ್ಠೆ
ಅರಿವು-ಆಚಾರ
ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...