ಐತಿಹಾಸಿಕ  ನಗರ  ಕಲಬುರ್ಗಿ : ನಗರ ರಚನೆಯ ವಿನ್ಯಾಸ ಮತ್ತು ಅದರ ಚಾರಿತ್ರಿಕ ಮಹತ್ವ

Date: 10-06-2021

Location: ಬೆಂಗಳೂರು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ಈ ಸರಣಿಯಲ್ಲಿಕಲಬುರಗಿ ನಗರದ ಬಗ್ಗೆ ಬರೆದಿದ್ದಾರೆ. ವಿಜಯನಗರದ ಹಂಪೆ ಮತ್ತು ಬಹಮನಿಯವರ ಕಲಬುರ್ಗಿ ರಾಜಧಾನಿ ನಗರಗಳಾಗಿ ಏಕಕಾಲದಲ್ಲಯೇ ಉಗಮಗೊಂಡ ನಗರಗಳು. ಹಾಗೆಯೇ ಇವುಗಳ ಚರಿತ್ರೆಯಲ್ಲಿಯೂ ಸಾಮ್ಯತೆಗಳಿವೆ. ರಾಜಕೀಯ ಕಾರಣಗಳಿಗಾಗಿ ರಾಜಧಾನಿ ನಗರಗಳನ್ನು ತೊರೆದು ಬೇರೆ ನಗರಗಳಿಗೆ ರಾಜಧಾನಿಗಳು ಸ್ಥಳಾಂತರವಾದವು. ಹಂಪೆ ತನ್ನ ಭವ್ಯವಾದ ಸ್ಮಾರಕಗಳಿಂದ ಇಂದಿಗೂ ಮಧ್ಯಕಾಲೀನ ಐತಿಹಾಸಿಕ ನಗರವೆಂದು ಬಿಂಬಿಸಲ್ಪಡುತ್ತದೆ. ಕಲಬುರ್ಗಿಯು ಇತರ ಐತಿಹಾಸಿಕ ಸ್ಥಳವೆಂಬಂತೆ ನೋಡಲಾಗುತ್ತದೆ. ಇದು ಬಹಮನಿ ರಾಜ್ಯದ ರಾಜಧಾನಿಯಾಗಿ ಮತ್ತು ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿತ್ತು ಎಂಬುದು ವಿದ್ವತ್ತು ಬಳಗ ಒರತುಪಡಿಸಿ ಸಾಮಾನ್ಯ ಓದುಗರಿಗೆ ಪರಿಚಯವಿಲ್ಲ. ಪ್ರಾಚೀನ ವಣಿಕ ಪಟ್ಟಣ ಕಲಂಬುರಗಿ ನಂತರ ರಾಜಧಾನಿ ಪಟ್ಟಣವಾಗಿ, ತದನಂತರ ಸೇನಾನೆಲೆಯಾಗಿ ಕಲಬುರ್ಗಿಯು ನಿರ್ವಹಿಸಿದ ಪಾತ್ರಗಳನ್ನು ಇಲ್ಲಿ ಲೇಖಕರು ಚರ್ಚಿಸಿದ್ದಾರೆ.

ಕಲಬುರ್ಗಿಯನ್ನು ಐತಿಹಾಸಿಕ ನಗರವಾಗಿ ಗುರುತಿಸುವುದಕ್ಕಿಂತ ಒಂದು ವಾಣಿಜ್ಯ ನಗರ ಹಾಗೂ ಸೂಫಿ ಸಂತ ಬಂದೇ ನವಾಜ್ ಅವರ ಮತ್ತು ಶರಣಬಸವೇಶ್ವರ ಸಂತರ ಪವಿತ್ರ ಸ್ಥಳವಾಗಿ ಗುರುತಿಸಲ್ಪಡುತ್ತದೆ. ವಿಜಯನಗರದ ರಾಜಧಾನಿ ಹಂಪಿಯಂತೆಯೇ ಇದು ಕೂಡ ಮಧ್ಯಕಾಲೀನ ರಾಜಧಾನಿ ನಗರವಾಗಿತ್ತು ಎಂಬುದು ಗಮನಿಸುವ ಅಂಶ. ಅಲ್ಲದೇ ವಿಜಯಪುರ (ಬಿಜಾಪುರ), ಬೀದರ, ಗೊಲ್ಕೊಂಡಾ, ಹೈದರಾಬಾದ ನಗರಗಳಿಗಿಂತಲೂ ಹಳೆಯ ನಗರವಾಗಿತ್ತು ಎಂಬುದು ಗಮನಿಸಬೇಕಾದದ್ದು. ಮಧ್ಯಕಾಲೀನ ನಗರಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಮಧ್ಯಕಾಲೀನ ನಗರದ ರಚನೆಯ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದ ಅಧ್ಯಯನಗಳು ನಡೆದಿರುವುದು ತೀರ ವಿರಳ. ಇಲ್ಲಿಯ ಕೋಟೆಯ-ಜುಮ್ಮಾ ಮಸೀದಿ, ಬಂದೇ ನವಾಜ ದರ್ಗಾ ಮತ್ತು ಕೋಟೆಗಳನ್ನು ಮಾತ್ರ ಐತಿಹಾಸಿಕ ಸ್ಥಳಗಳಾಗಿ ಗುರುತಿಸಲಾಗುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ ಪ್ರಪ್ರಥಮ ಸ್ವತಂತ್ರ ಮಹ್ಮದೀಯ ರಾಜ್ಯವಾದ ಬಹಮನಿ ಸುಲ್ತಾನ ರಾಜ್ಯವು ಸುಮಾರು ಮುಕ್ಕಾಲು ಶತಮಾನ ಕಾಲ ಕಲಬುರ್ಗಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ರಾಜ್ಯವನ್ನು ಆಳಿದರು ಎಂಬುದು ಇಲ್ಲಿ ಗಮನಿಸುವಂತದ್ದು. ಭೌಗಳೀಕವಾಗಿಯೂ ಕಲಬುರ್ಗಿಯು ಬಹಳ ಆಯಕಟ್ಟಿನ ಸ್ಥಳವಾಗಿದೆ. ಮೂರು ನದಿಗಳ ನಡುವಿನ ಭೂ-ಪ್ರದೇಶದಲ್ಲಿದೆ. ನಗರದ ದಕ್ಷಿಣಕ್ಕೆ ಭೀಮಾ ನದಿ, ಉತ್ತರದಲ್ಲಿ ಬೆಣ್ಣೆತೊರೆ ಮತ್ತು ಪೂರ್ವದಲ್ಲಿ ಕಾಗೀಣಾ ನದಿಗಳಿದ್ದು ಇವು ನೈಸರ್ಗಿಕ ರಕ್ಷಣೆಗಳನ್ನು ನೀಡುತ್ತವೆ. ಕ್ರಿ.ಶ. 1347ರಲ್ಲಿ ಸ್ಥಾಪನೆಯಾದ ಬಹಮನಿ ರಾಜ್ಯದ ಸಂಸ್ಥಾಪಕ ಅಲ್ಲಾವುದ್ಧೀನ್ ಹಸನ್ ಗಂಗು ಆಯಕಟ್ಟಿನ ಸ್ಥಳವಾಗಿದ್ದ ಕಲಬುರ್ಗಿಯನ್ನು ತನ್ನ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಉದ್ದೇಶವೇ ಇದರ ಆಯಕಟ್ಟಿನ ಸ್ಥಳದ ಹಿನ್ನೆಲೆ. ದೇವಗಿರಿಯಲ್ಲಿದ್ದ ಬಹಮನಿ ರಾಜ್ಯದ ಆಡಳಿತ ಕೇಂದ್ರವನ್ನು ಕ್ರಿ.ಶ. 1350ರಲ್ಲಿ ಕಲಬುರ್ಗಿಗೆ ಸ್ಥಳಾಂತರಿಸಿದನು. ಇದು ಸುಮಾರು 75 ವರ್ಷಗಳ ಕಾಲ ಬಹಮನಿ ರಾಜ್ಯದ ರಾಜಧಾನಿಯಗಿತ್ತು. ನಂತರ ರಾಜಕೀಯ ಕಾರಣಗಳಿಗಾಗಿ ಕಲಬುರ್ಗಿಯಿಂದ ಬೀದರಗೆ ರಾಜಧಾನಿಯನ್ನು ಕ್ರಿ.ಶ.1429ರ ವೇಳೆಯಲ್ಲಿ ವರ್ಗಾಯಿಸಲಾಯಿತು. ಇದರೊಂದಿಗೆ ಕಲಬುರ್ಗಿ ನಗರವು ತನ್ನ ವೈಭವತೆಯನ್ನು ಕಳೆದುಕೊಂಡರೂ ತನ್ನ ಆಯಕಟ್ಟಿನ ಸ್ಥಳದಿಂದಾಗಿ ಇದು ಒಂದು ಸೇನಾ-ನೆಲೆಯಾಗಿ ಪರಿವರ್ತನೆಯಾಯಿತು. ದಕ್ಷಿಣ ಭಾರತದಲ್ಲಿಯೇ ಬಹು ಸಂಖ್ಯೆಯ ಅನುಯಾಯಿಗಳನ್ನು ಪಡೆದ ಸೂಫಿ ಸಂತ ಹಜರತ್ ಬಂದೇ ನವಾಜ್ ಮತ್ತು ಮತ್ತೊಬ್ಬ ಸೂಫಿ ಸಂತ ಜುನೈದಿ ಅವರ ದರ್ಗಾಗಳು ಮತ್ತು ನಂತರ ನೆಲೆನಿಂತ ಶರಣಬಸವೇಶ್ವರ ಸನ್ನಿಧಿಗಳು ಈ ನಗರವನ್ನು ಒಂದು ಪವಿತ್ರ ಕ್ಷೇತ್ರವಾಗಿಸಿತು. ಸುದೀರ್ಘ ಇತಿಹಾಸ ಹೊಂದಿದ ಈ ನಗರದ ರಚನೆಯ ಕ್ರಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಕೆಳಗಿನಂತೆ ನಾಲ್ಕು ಮುಖ್ಯ ಹಂತಗಳನ್ನು ಗುರುತಿಸಬಹುದು.

ಬಹಮನಿ-ಪೂರ್ವ ಕಲಂಬುರಗಿ ವಣಿಕ ಪಟ್ಟಣ

ಬಹಮನಿಯವರ ರಾಜಧಾನಿಯಾಗಿ ಕಲಬುರ್ಗಿ

ಆದಿಲ ಶಾಹಿಗಳ ಸೇನಾ-ನೆಲೆಯಾಗಿ ಕಲಬುರ್ಗಿ ಮತ್ತು

ನಿಜಾಮ ರಾಜ್ಯದ ಔದ್ಯೋಗಿಕ ಕೇಂದ್ರವಾಗಿ ಕಲಬುರ್ಗಿ.

ಪ್ರಸ್ತುತ ಲೇಖನ ಮಧ್ಯಕಾಲೀನ ನಗರೀಕರಣ ಪ್ರಕಿಯೆಯನ್ನು ಗುರುತಿಸುವುದು. ರಾಜ್ಯದ ರಾಜಧಾನಿಯಾಗಿದ್ದ ಕಲಬುರ್ಗಿ ನಗರ ರಚನೆಯ ವೈಶಿಷ್ಟ್ಯ ಮತ್ತು ಅದರ ಐತಿಹಾಸಿಕ ಮಹತ್ವ ಗುರುತಿಸುವ ಪ್ರಯತ್ನ ಇಲ್ಲಿದೆ.

ವಣಿಕ ಪಟ್ಟಣದಿಂದ ರಾಜಧಾನಿ ನಗರವಾದ ಕಲಬುರ್ಗಿ

ಈ ಮೇಲೆ ಹೇಳಿದಂತೆ ಮೂರು ನದಿಗಳ ನಡುವಿನ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿ ಕಲಬುರ್ಗಿಯು ಪ್ರಾಚೀನ ಕಾಲದಿಂದಲೂ ಬೆಳೆದುಬಂದ ಒಂದು ವಾಣಿಜ್ಯ ಪಟ್ಟಣವಾಗಿದೆ. ಕಲ್ಯಾಣ ಚಾಲುಕ್ಯರ ಕ್ರಿ.ಶ.1110ರ ಅವಧಿಯ ಸರಡಗಿ ಕನ್ನಡ ಶಿಲಾಶಾಸನದಲ್ಲಿ ಕಲಂಬುರಗಿ ಎಂದು ಕರೆಯಲಾಗಿದೆ. ಶಿವತತ್ವ ಚಿಂತಾಮಣಿ ಕೃತಿಯಲ್ಲಿಯೂ ಕಲಬುರ್ಗಿಯ ಉಲ್ಲೇಖವಿದ್ದು ಇಲ್ಲಿ ಸೆಟ್ಟಿಗರು ಅಥವಾ ವಣಿಕರು ನೆಲೆಸಿದ್ದ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಾಚೀನದಿಂದಲೂ ವಾಣಿಜ್ಯ ಮಾರ್ಗಗಳು ಕಲಬುರ್ಗಿಯನ್ನು ಸಂಪರ್ಕಿಸುತ್ತಿದ್ದವು. ಉತ್ತರದ ಗೋದಾವರಿ ನದಿಯ ಸೀಮೆಯಿಂದ ರಾಯಚೂರು ಹಾಗೂ ಗೊಲ್ಕೊಂಡಾ ಪ್ರದೇಶಗಳಿಗೆ ಸಂಚರಿಸುವ ವಾಣಿಜ್ಯ ಮಾರ್ಗಗಳು ಕಲಬುರ್ಗಿಯನ್ನು ಸಂಪರ್ಕಿಸುತ್ತಿದ್ದವು. ಕಲಬುರ್ಗಿಯ ದಕ್ಷಿಣ ಪ್ರದೇಶವು ಭೀಮಾ ಬೇಸಿನ್ ಎಂದು ಭೌಗೋಳಿಕವಾಗಿ ಕರೆಯಲ್ಪಡುವ ಭೀಮಾ ನದಿಯ ಕಣಿವೆಯ ಅಂಚಿನ ಪ್ರದೇಶವಾಗಿದೆ. ಆದ್ದರಿಂದ ನೈಸರ್ಗಿಕವಾದ ನೀರಿನ ಸೆಲೆಗಳು ಕಲಬುರ್ಗಿ ನಗರದ ಪೂರ್ವದ ಮತ್ತು ದಕ್ಷಿಣದ ಪ್ರದೇಶಗಳಲ್ಲಿ ಕಂಡುಬರುತ್ತವೆ. ನಿರಂತರವಾದ ನೀರಿನ ಆಸರೆ ಹಾಗೂ ಸೂತ್ತಲೂ ಫಲವತ್ತಾದ ಭೂಮಿ ಈ ಊರಿಗೆ ಇರುವುದರಿಂದ ಇದೊಂದು ಪ್ರಮುಖ ಪಟ್ಟಣವಾಗಿ ಬೆಳೆಯಲು ಸಹಕಾರಿಯಾಯಿತು. ಮುಖ್ಯವಾಗಿ ಮಧ್ಯಕಾಲೀನ ಸಂದರ್ಭದಲ್ಲಿ ಈ ಸ್ಥಳವು ನೈಸರ್ಗಿಕ ರಕ್ಷಣೆಯುಕ್ತ ಸ್ಥಳವಾಗಿತ್ತು. ಆದ್ದರಿಂದ ಅನೇಕ ವಣಿಕರು, ಕೃಷಿಕರು ನೆಲೆಗೊಂಡು ಆಯಕಟ್ಟಿನ ವಣಿಕ ಪಟ್ಟಣವಾಗಿ ಬೆಳೆಯಿತು. ಇಂದಿನ ಶಹಾ-ಬಜಾರ ಪ್ರದೇಶದಲ್ಲಿ ಪ್ರಾಚೀನ ವಣಿಕ ಪಟ್ಟಣ ನೆಲೆಗೊಂಡಿರುವ ಸಾಧ್ಯತೆ ಕಾಣುತ್ತೇವೆ.

ಬಹಮನಿ ರಾಜಧಾನಿಯಾಗಿ : 14ನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಗೆ ಅನುಗುಣವಾಗಿ ಸ್ವತಂತ್ರ ಬಹಮನಿ ರಾಜ್ಯ ಉದಯವಾಯಿತು. ಇದು ತನ್ನ ನೂತನ ರಾಜಧಾನಿಗಾಗಿ ಕಲಬುರ್ಗಿಯನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ನಗರದ ಇತಿಹಾಸಕ್ಕೆ ಹೊಸ ಪಲ್ಲಟ ದೊರೆಯಿತು. ಸುಮಾರು ಮುಕ್ಕಾಲು ವರ್ಷಗಳ ಕಾಲ ಬಹಮನಿ ರಾಜ್ಯದ ರಾಜಧಾನಿ ನಗರವಾಗಿದ್ದ ಕಲಬುರ್ಗಿಯು ಆಡಳಿತ ಕೇಂದ್ರಸ್ಥಾನವಾಗಿ ಬೆಳೆಯಿತು. ಮಹ್ಮದೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಹಮನಿ ಸುಲ್ತಾನರು ಕಲಬುರ್ಗಿಯನ್ನು ಮೂಲ ಸ್ಥಳೀಯ ಸಂಪ್ರದಾಯಗಳ ಜೊತೆಗೆ ಮಧ್ಯಕಾಲೀನ ಸಂಪ್ರದಾಯಗಳು ಮತ್ತು ಸುರಕ್ಷತೆಗೆ ಆಧ್ಯತೆಗಳನ್ನು ಒಳಗೊಂಡ ಅತ್ಯಂತ ವಿಶಿಷ್ಟ ನಗರವಾಗಿ ಬೆಳೆಸಿದರು. ಈ ನಗರದ ರಚನೆಯಲ್ಲಿ ಸೂಫಿ ಸಂತರ ದರ್ಗಾಗಳ ಕೇಂದ್ರಿಕರಿಸಿದ ಎರಡು ಪ್ರಧಾನ ನಗರಗಳು ಮತ್ತು ಕೋಟೆ ಎಂದು ಗುರುತಿಸಬಹುದು. ನಗರದಿಂದ ಬೇರ್ಪಡಿಸಿ ನಿರ್ಮಿಸಿದ ಕೋಟೆಯು ಸುಲ್ತಾನರಿಗಾಗಿ ಮೀಸಲಿರಿಸಿದ ಸ್ಥಳವಾಗಿತ್ತು. ಕೋಟೆಯ ಉತ್ತರಕ್ಕೆ ಮತ್ತು ಪೂರ್ವಕ್ಕೆ ಎರಡು ಪ್ರತ್ಯೇಕ ಊರುಗಳು ಅಥವಾ ನಗರಗಳು ನಿರ್ಮಿಸಲಾಗಿತ್ತು. ಒಟ್ಟಾರೆ ಕಲಬುರ್ಗಿ ಐತಿಹಾಸಿಕ ನಗರವನ್ನು ನಾಲ್ಕು ಮುಖ್ಯ ಅಂಗಗಳಾಗಿ ನೋಡಬಹುದು.

ಸುಲ್ತಾನರ ಕೋಟೆ

ಗಣ್ಯರ ವಾಸದ ನೆಲೆ ಶಹಾ-ಬಜಾರ ನಗರ [ಸೂಫಿ ಸಂತ ಜುನೈದಿ ದರ್ಗಾ ಕೇಂದ್ರಿತ]

ಫಿರೋಜ ಶಹಾ ನಿರ್ಮಿಸಿದ ಪೂರ್ವದ ಪಟ್ಟಣ [ಸೂಫಿ ಸಂತ ಬಂದೇ ನವಾಜ ದರ್ಗಾ ಕೇಂದ್ರಿತ]

ಸುಲ್ತಾನಾಪುರ ಮತ್ತು ಹೀರಾಪುರ ಉಪನಗರಗಳು

ಸುಲ್ತಾನರ ಕೋಟೆ :

ಕಲಬುರ್ಗಿಯ ಕೋಟೆಯು ಬಹು ವಿಶಿಷ್ಟವಾದ ಕೋಟೆ. ಎರಡು ಸುತ್ತಿನ ಕೋಟೆ ಇದಾಗಿದ್ದು; ಸಮನಾಂತರದ ಎರಡು ಸುತ್ತಿನ ಕೋಟೆ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ಕೋಟೆಯು ಸುಮಾರು 20 ಎಕರೆ ಭೂಪ್ರದೇಶವನ್ನು ಒಳಗೊಂಡಿದೆ. ಇಲ್ಲಿಯ ಕೋಟೆಯು ವಿಸ್ತಾರದಲ್ಲಿ ಚಿಕ್ಕದಾಗಿದ್ದರೂ ಬಹಳ ವಿಶಿಷ್ಟವಾಗಿ ರಚನೆಯಾಗಿದೆ. ಇದು ಬದಾಮಿಯಾಕಾರದ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಉತ್ತರದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದು, ಈ ಎರಡು ಸುತ್ತಿನ ಗೋಡೆಗಳ ಒಟ್ಟು ಉದ್ದ ಸು. 3 ಕಿ.ಮಿ.ಗಳಷ್ಟು. ಈ ಕೋಟೆಯಲ್ಲಿ ಸುಮಾರು 76ಕ್ಕೂ ಹೆಚ್ಚು ಬುರುಜು ಮತ್ತು 26 ಫಿರಂಗಿಗಳಿವೆ. ಈ ಎರಡು ಸುತ್ತಿನ ಗೋಡೆಗಳನ್ನು ಸಮನಾಂತರವಾಗಿ ನಿರ್ಮಿಸಲಾಗಿದ್ದು, ಮೊದಲ ಸುತ್ತಿನ ಗೋಡೆಯನ್ನು ಹೊರಸುತ್ತಿನ ಗೋಡೆಯೆಂದು ಮತ್ತು ಎರಡನೆಯ ಸುತ್ತಿನ ಗೋಡೆಯನ್ನು ಒಳಸುತ್ತಿನ ಗೋಡೆಯೆಂದು ಕರೆಯಬಹುದು. ಒಳಸುತ್ತಿನ ಗೋಡೆಯ ರಚನಾ ಶೈಲಿಯು ಹೊರಸುತ್ತಿನ ಗೋಡೆಗಿಂತಲೂ ಭಿನ್ನವಾಗಿದೆ. ಹೊರಸುತ್ತಿನ ಗೋಡೆಯು ಗಾತ್ರದಲ್ಲಿ ಒಳಸುತ್ತಿನ ಗೋಡೆಗಿಂತಲೂ ಚಿಕ್ಕದಾಗಿದೆ. ದಕ್ಷಿಣ ಭಾಗದಲ್ಲಿ ಗಾತ್ರ ಕಿರುದಾಗುತ್ತಾ ಬರುತ್ತದೆ. ಕೋಟೆಯ ಪಶ್ಚಿಮದ ಗೋಡೆಯನ್ನು ಅತ್ಯಂತ ವಿಶೇಷವಾಗಿ ನಿರ್ಮಿಸಿದಂತಿದೆ. ಇಲ್ಲಿಯ ಕೋಟೆಯ ಗೋಡೆಗಳು ಸಮನಾಂತರವಾಗಿ ಸಾಗಿ ಬೇರ್ಪಡುತ್ತವೆ. ಒಳಸುತ್ತಿನ ಗೋಡೆಯು ನೇರವಾಗಿ ಉತ್ತರ ದಿಕ್ಕಿಗೆ ಸಾಗುತ್ತದೆ. ಆದರೆ ಈ ಗೋಡೆಯನ್ನು ಗಾತ್ರವನ್ನು ವಿಸ್ತರಿಸಲಾಗಿದೆ, ಅಲ್ಲದೇ ಇದನ್ನು ಎರಡು ಸ್ಥರಗಳಾಗಿ ನಿರ್ಮಿಸಿ ಕೋಟೆಯ ಗೋಡೆಯನ್ನು ವೈರಿಗಳ ಆಕ್ರಮಣಗಳನ್ನು ಎದುರಿಸಲು ವೃತ್ತಾಕಾರದ ಬುರುಜುಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಮುಖ್ಯವಾದ ಬುರುಜು ಎಂದರೆ 29ಅಡಿ ಉದ್ದನೇಯ ಫಿರಂಗಿಯ ಬುರುಜು. ಅದರಂತೆ ಹೊರಸುತ್ತಿನ ಕೋಟೆ ಗೋಡೆಯು ಮುಂಚಾಚಿಕೊಂಡು ಪಶ್ಚಿಮ ದಿಕ್ಕಿಗೆ ತಿರುವು ಪಡೆದು ಒಳಸುತ್ತಿನ ಗೋಡೆಗೆ ಕಂದಕವನ್ನು ಸೃಷ್ಟಿಸುತ್ತದೆ. ಮುಂದುವರೆದು ವಾಯುವ್ಯ ಮೂಲೆಯಲ್ಲಿ ಮುಂಚಾಚಿಕೊಂಡು ಪೂರ್ವ ದಿಕ್ಕಿಗೆ ತಿರುವು ಪಡೆದು ಹಾಥಿ-ದರವಾಜಾಕ್ಕೆ ಬಂದು ಸೇರುತ್ತದೆ. ಈ ಮೂಲೆಯಲ್ಲಿಯೇ ನವರಸ-ಬುರುಜ್, ದೈಲತ್-ಬುರುಜ್, ಘರಯಾಲ್ಚಿ-ಬುರುಜ್ ಮತ್ತು ಕಾಲಾ-ಪಹಡ್ ಬುರುಜ್ ಇತ್ಯಾದಿಗಳನ್ನು ಆದಿಲ ಶಾಹಿ ಕಾಲದಲ್ಲಿ ನಿರ್ಮಾಣವಾದಂತೆ ತೋರುತ್ತದೆ. ಇಲ್ಲಿಯ ಕೋಟೆಯ ನಿರ್ಮಾಣದ ಕಾಲ, ರಚನೆಯ ಸ್ವರೂಪ, ಬಳಕೆ ಮತ್ತು ಮರು ನಿರ್ಮಾಣಗಳ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆಗಳಿವೆ. ಕೋಟೆಯ ವಿವಿಧ ಗೋಡೆಗಳಲ್ಲಿ, ಬುರುಜುಗಳಲ್ಲಿ ಮತ್ತು ಒಳಾಂಗಣದ ಸ್ಮಾರಕಗಳಲ್ಲಿ ಬಹಮನಿ, ಆದಿಲ ಶಾಹಿ, ಮೊಘಲರ, ನಿಜಾಮರ ಕಾಲದ ಹಲವಾರು ಶಾಸನಗಳಿವೆ. ಶಾಸನಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಆಧರಿಸಿ ಕೋಟೆಯ ನಿರ್ಮಾಣದ ಕಾಲ, ಬಳಕೆ, ಇತ್ಯಾದಿ ವಿಷಯಗಳನ್ನು ತಿಳಿಯಬಹುದಾಗಿದೆ. ದೊರೆತ ಶಾಸನಗಳು ಮತ್ತು ಇತರ ದಾಖಲೆಗಳ ಆಧಾರವಾಗಿ ಕೋಟೆಯ ನಿರ್ಮಾಣವನ್ನು ಸ್ಥೂಲವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಬಹುದಾಗಿದೆ.

ಬಹಮನಿ-ಪೂರ್ವ ಕಾಲ

ಬಹಮನಿ ಸುಲ್ತಾನರ ಕಾಲ

ಆದಿಲ ಶಾಹಿ ಸುಲ್ತಾನರ ಕಾಲ ಮತ್ತು

ಮೊಘಲರ ಮತ್ತು ನಿಜಾಮರ ಕಾಲ.

ಬಹಮನಿ-ಪೂರ್ವ ಕಾಲ : ಈ ಮೇಲೆ ಹೇಳಿದಂತೆ ಕಲಬುರ್ಗಿ ಪ್ರದೇಶವು ಪ್ರಾಚೀನ ಕಾಲದಿಂದಲೂ ಆಯಕಟ್ಟಿನ ಸ್ಥಳವಾಗಿದೆ. ಆಳಂದೆ-ಸಾಸಿರ, ಸಗರನಾಡು ಇತ್ಯಾದಿ ಪ್ರಾಚೀನ ಆಡಳಿತ ವಿಭಾಗಗಳು ಈ ಪ್ರದೇಶವನ್ನು ಒಳಗೊಂಡಿದ್ದವು. ಕಲ್ಯಾಣದ ಚಾಲುಕ್ಯರ ನಂತರ ಕ್ರಿ.ಶ. 12ನೇ ಮತ್ತು 13ನೇ ಶತಮಾನಗಳಲ್ಲಿ ಆಳ್ವಿಕೆಗೆ ಬಂದ ವಾರಂಗಲ್ಲಿನ ಕಾಕತೀಯರು ಕಲಬುರ್ಗಿಯನ್ನು ಒಳಗೊಂಡಂತೆ ರಾಯಚೂರು ಪ್ರದೇಶವನ್ನು ತಮ್ಮ ಆಡಳಿತದ ವ್ಯಾಪ್ತಿಗೆ ಒಳಪಡಿಸಿಕೊಂಡರು. ಈ ಅವಧಿಯಲ್ಲಿ ದೆಹಲಿ ಸುಲ್ತಾನರ ವಿರುದ್ಧ ಹೋರಾಟದ ಅಂಗವಾಗಿ ತಮ್ಮ ರಾಜ್ಯದ ಆಯಕಟ್ಟಿನ ಸ್ಥಳಗಳಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಪ್ರಕ್ರಿಯೆ ಪ್ರಾರಂಭ ಮಾಡಿದರು. ಈ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ನೆಲದುರ್ಗದ ಕೋಟೆಯೊಂದನ್ನು ನಿರ್ಮಿಸಿದ ಸಾಧ್ಯತೆಯನ್ನು ವಿದ್ವಾಂಸರು ವಿವರಿಸಿದ್ದಾರೆ. ಮಧ್ಯಕಾಲೀನ ಇತಿಹಾಸಕಾರರಾದ ಫೆರಿಸ್ತಾ ಮತ್ತಿತರರು ಬಹಮನಿ ಸುಲ್ತಾನ ರಾಜ್ಯದ ಸಂಸ್ಥಾಪಕ ಅಲ್ಲಾವುದ್ಧೀನ್ ಹಸನ್ ಶಹಾನು ದೆಹಲಿ ಸುಲ್ತಾನರಾದ ತುಘಲಕ್‌ರ ವಿರುದ್ಧ ದಂಗೆ ಎದ್ದು ಸುರಕ್ಷಿತ ಸ್ಥಳದ ಅನ್ವೇಷಣೆ ಮಾಡುವ ಸಂದರ್ಭದಲ್ಲಿ ಕಲಬುರ್ಗಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿಯ ಹಳೆಯ ಪಟ್ಟಣಕ್ಕೆ ಹೊಂದಿಕೊಂಡಂತೆ ಮಣ್ಣಿನ ಕೋಟೆ ಇರುವುದನ್ನು ಉಲ್ಲೇಖಿಸಿದ್ದಾರೆ. ಕಾಕತೀಯರ ಕಾಲದ ಮಣ್ಣಿನ ಕೋಟೆಯು ನೆಲದುರ್ಗದ ಸ್ವರೂಪದಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ. ಅದು ಈಗೀನ ಕೋಟೆಯ ಪ್ರದೇಶದಲ್ಲಿಯೇ ನಿರ್ಮಾಣವಾಗಿತ್ತು. ಮಣ್ಣಿನಲ್ಲಿ ನಿರ್ಮಿಸಿದ ಚೌಕಾಕಾರ ವಿನ್ಯಾಸದ ಸರಳವಾದ ಕೋಟೆಯಾಗಿತ್ತು. ವಾರಂಗಲ್ಲಿನ ಕೋಟೆಯಂತೆ ಚೌಕಾಕಾರದ ಕೊತ್ತಳಗಳು, ಇಲ್ಲಿಯೂ ನಿರ್ಮಿಸಲಾಗಿತ್ತು. ಇಂದಿಗೂ ಈ ಕೋಟೆಯ ಪೂರ್ವದ ದ್ವಾರದ ಇಕ್ಕೆಲೆಗಳಲ್ಲಿ ಚೌಕಾಕಾರದ ಕೊತ್ತಳಗಳಿರುವುದನ್ನು ಗಮನಿಸಬಹುದು. ಕಾಲಾನಂತರ 16-17ನೇ ಶತಮಾನಗಳಲ್ಲಿ ಅಮೂಲಾಗ್ರವಾಗಿ ಕೋಟೆಯನ್ನು ಜಿರ್ಣೋದ್ಧಾರ ಮಾಡಿದ ಸಂದರ್ಭದಲ್ಲಿ ಕಾಕತೀಯರ ಕಾಲದಲ್ಲಿ ನಿರ್ಮಾಣವಾಗಿದ್ದ ಕೋಟೆಯು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿತು. ಪಳೆಯುಳಿಕೆ ರೂಪದಲ್ಲಿ ಅಲ್ಲಲ್ಲಿ ಗುರುತಿಸಬಹುದಾಗಿದೆ.

ಬಹಮನಿ ಸುಲ್ತಾನರ ಕಾಲದ ಕೋಟೆ : ಕ್ರಿ.ಶ. 1350 ಅವಧಿಯಲ್ಲಿ ದೇವಗಿರಿಯಿಂದ ಕಲಬುರ್ಗಿಗೆ ಬಹಮನಿಯವರು ತಮ್ಮ ರಾಜಧಾನಿಯನ್ನು ಸ್ಥಳಾಂತರಿಸಿದ ನಂತರ ಮೊದಲಿಗೆ ಇಲ್ಲಿಯ ಕೋಟೆಯನ್ನು ತಮ್ಮ ಸ್ವಾದೀನಕ್ಕೆ ತೆಗೆದುಕೊಂಡು ಅದನ್ನು ಆ ಕಾಲದ ತಂತ್ರಗಳಿಗೆ ಪೂರಕವಾಗುವಂತೆ ಕೋಟೆಯನ್ನು ಪುನರ್ ರೂಪಿಸಿದರು. ಕೋಟೆಯ ಒಳಾಂಗಣದಲ್ಲಿ ದೊರೆತ ಬಹಮನಿ ಕಾಲದ ಪರ್ಶಿಯನ್ ಶಾಸನಗಳು ಪ್ರಧಾನ ಆಕರಗಳಾಗಿದ್ದು ಜೊತೆಗೆ ವಾಸ್ತು ರಚನೆಯ ಶೈಲಿಗಳನ್ನು ಆಧಾರವಾಗಿಸಿ ಬಹಮನಿ ಸುಲ್ತಾನರ ಕಾಲದ ನಿರ್ಮಿತವಾದ ಇಲ್ಲಿಯ ಕೋಟೆಯ ಸ್ವರೂಪವನ್ನು ಗುರುತಿಸಬಹುದಾಗಿದೆ. ಕೋಟೆಯ ಒಳಾಂಗಣದಲ್ಲಿರುವ ಜುಮ್ಮಾ ಮಸೀದಿಯಲ್ಲಿಯ ಕ್ರಿ.ಶ. 1367ರ ಶಾಸನ ಮತ್ತು ಬಜಾರ ಬೀದಿಯ ಬಳಿಯ ಚಿಕ್ಕ ಮಸೀದಿಯಲ್ಲಿಯ ಕ್ರಿ.ಶ. 1394ರ ಶಾಸನಗಳು ಮಾತ್ರ ಬಹಮನಿಯವರ ಆಳ್ವಿಕೆಯ ಕೋಟೆಯಲ್ಲಿಯ ಆಕರಗಳಾಗಿವೆ. ಉಳಿದಂತೆ ಮಧ್ಯಕಾಲೀನ ಪರ್ಶಿಯನ್ ಕೃತಿಗಳಲ್ಲಿ ಉಲ್ಲೇಖಗಳನ್ನು ಹಾಗೂ ಇಲ್ಲಿಯ ವಾಸ್ತು-ಶಿಲ್ಪಕಲಾ ಶೈಲಿಗಳನ್ನು ಆಧರಿಸಿ ಬಹಮನಿ ಕಾಲದಲ್ಲಿ ನಿರ್ಮಿಸಿದ ಕೋಟೆಯ ಕಾಲವನ್ನು ಮತ್ತು ವಿನ್ಯಾಸವನ್ನು ಗುರುತಿಸಬಹುದಾಗಿದೆ.

ಕೋಟೆ ಎರಡು ಸುತ್ತಿನ ಕೋಟೆ-ಗೋಡೆಗಳಿಂದ ಕೂಡಿದ್ದು ಇವುಗಳನ್ನು ಒಳಸುತ್ತಿನ ಗೋಡೆ ಮತ್ತು ಹೊರಸುತ್ತಿನ ಗೋಡೆಗಳೆಂದು ಕರೆಯಬಹುದು. ಇವೆರಡು ಸಮನಾಂತರವಾದ ಗೋಡೆಗಳಾಗಿದ್ದರೂ ರಚನೆಯಲ್ಲಿ ಮತ್ತು ಕಟ್ಟುವ ತಂತ್ರಗಳಲ್ಲಿ ಬಿನ್ನತೆಗಳಿವೆ. ಒಳಸುತ್ತಿನ ಕೋಟೆ-ಗೋಡೆಯ ನಿರ್ಮಾಣ ಹೊರ ಸುತ್ತಿನ ಗೋಡೆಗಿಂತಲೂ ಹಳೆಯದಂತೆ ತೋರುತ್ತದೆ. ಸ್ಥಳೀಯವಾಗಿ ದೊರೆಯುವ ಕಪ್ಪುಶಿಲೆಗಳನ್ನು ಬಳಸಿಕೊಂಡು ನಿರ್ಮಿಸಿದ ಈ ಗೋಡೆಯು ಸುಮಾರು ಸುಮಾರು 20 ಎಕರೆ ಪ್ರದೇಶವನ್ನು ಸುತ್ತುವರೆದಿದೆ. ದಪ್ಪವಾದ ಗೋಡೆಯ ಚೌಕಾಕಾರದ ಮತ್ತು ಅರ್ಧ-ವತೃಲಾಕಾರದ ಕೊತ್ತಳಗಳನ್ನು ಅಲ್ಲಲ್ಲಿ ನಿರ್ಮಿಸಲಾಗಿದೆ. ಕೆಲವು ಚೌಕಾಕಾರದ ಕೊತ್ತಳಗಳನ್ನು ನಂತರ ಕಾಲದಲ್ಲಿ ವೃತ್ತಾಕಾರಕ್ಕೆ ಪರಿವರ್ತಿಸಿದ ಕ್ರಿಯೆಯನ್ನು ಇಲ್ಲಿ ಕಾಣುತ್ತೇವೆ. ಸಾಮಾನ್ಯವಾಗಿ ಕೋಟೆಗಳು ವೈರಿಗಳಿಂದ ರಕ್ಷಣೆ ಪಡೆಯಲು ಹಲವಾರು ತಂತ್ರಗಳನ್ನು ಬಳಸಿ ಬದ್ರವಾದ ಗೋಡೆಯನ್ನು ಕಟ್ಟಲಾಗುತ್ತಿತ್ತು. ವೈರಿಗಳ ಚಲನವಲನ ಗ್ರಹಿಸಲು ಎತ್ತರವಾದ ಕೊತ್ತಳಗಳನ್ನು, ಆಯಕಟ್ಟಿನ ಸ್ಥಳಗಳಲ್ಲಿ ದ್ವಾರಗಳನ್ನು ನಿರ್ಮಿಸುವುದು ಸಾಮಾನ್ಯವಾಗಿತ್ತು. ಇಲ್ಲಿಯ ಒಳಸುತ್ತಿನ ಕೋಟೆ-ಗೋಡೆಯಲ್ಲಿ ಕೊತ್ತಳಗಳ ಸಂಖ್ಯೆ ಹೊರ ಸುತ್ತಿನ ಗೋಡೆಗಿಂತಲೂ ಕಡಿಮೆ ಇದ್ದು ಇವು ಚೌಕಕಾರದ ವಿನ್ಯಾಸದಲ್ಲಿವೆ. ಬಹಮನಿ-ಪೂರ್ವ ಕಾಲದಲ್ಲಿ ಕೋಟೆಗಳನ್ನು ನಿರ್ಮಿಸುವಲ್ಲಿ ಚೌಕಾಕಾರದ ಕೊತ್ತಳಗಳನ್ನು ರಚಿಸುವ ಸಂಪ್ರದಾಯ ಸಾಮಾನ್ಯವಾಗಿತ್ತು. ವಾರಂಗಲ್‌ನ ಕಾಕತೀಯರ ಕೋಟೆ ಇದಕ್ಕೆ ಉತ್ತಮ ಉದಾಹರಣೆ. ಪ್ರಾಯಶಃ ಕಲಬುರ್ಗಿಯ ಕೋಟೆಯ ಒಳಸುತ್ತಿನ ಗೋಡೆಯಲ್ಲಿ ಈ ಮೊದಲು ಇದ್ದ ಚೌಕಕಾರದ ಮಣ್ಣಿನ ಕೊತ್ತಳಗಳನ್ನು ಬಹಮನಿ ಕಾಲದಲ್ಲಿ ಕಲ್ಲಿನಲ್ಲಿ ಮಾರ್ಪಡಿಸಿದಂತೆ ತೋರುತ್ತದೆ. ಒಳಸುತ್ತಿನ ಕೋಟೆ ಗೋಡೆಯಲ್ಲಿ ಅಲ್ಲಲ್ಲಿ ಎತ್ತರವಾದ ಸಮನಾಂತರವಾದ ಗೋಡೆಗಳನ್ನು ಕಟ್ಟಲಾಗಿದ್ದು ಇವು ವೈರಿಗಳ ಮೇಲೆ ಪ್ರತಿ ಆಕ್ರಮಣ ಮಾಡಲು ನಿರ್ಮಿಸಲಾಗಿವೆ. ಇವು ಮೂಲತಃ ದೊಡ್ಡ ಗಾತ್ರದ ಒಲೆಗಳು. ಇವುಗಳ ಮೇಲೆ ದೊಡ್ಡ ಬಾಣಲೆಗಳಲ್ಲಿ ಎಣ್ಣೆ ಅಥವಾ ನೀರನ್ನು ಕಾಯಿಸಿ ಕೋಟೆಯ ಮೇಲಿನಿಂದ ಆಕ್ರಮಣ ಮಾಡುವ ವೈರಿಗಳ ಮೇಲೆ ಎರಚಿ ಘಾಸಿಗೊಳಿಸುತ್ತಿದ್ದರು. ಇವು ಅಪರೂಪದ ರಚನೆಯಾಗಿದ್ದು ಕಲಬುರ್ಗಿಯ ಕೋಟೆಯಲ್ಲಿ ಕಂಡುಬಂದಿರುವುದು ವಿಶೇಷ. 14ನೇ ಶತಮಾನ ಅಥವಾ ಅದಕ್ಕೂ ಹಿಂದಿನ ಶತಮಾನದ ನಿರ್ಮಿಸಿದ ಕೋಟೆಗಳಲ್ಲಿ ಈ ಮಾದರಿಯ ರಚನೆ ಕಂಡುಬರುತ್ತವೆ.

ಒಟ್ಟಿನಲ್ಲಿ ಒಳಸುತ್ತಿನ ಕೋಟೆಯ ರಚನೆಯು ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾಗಿದ್ದನ್ನು ಈ ಮೇಲೆ ವಿವರಿಸಿದ ರಚನಾ-ಶೈಲಿಗಳ ಆಧಾರಗಳಿಂದ ಗುರುತಿಸಬಹುದು. ಹೊರ ಸುತ್ತಿನ ಕೋಟೆಯ ಗೋಡೆಯನ್ನು ನಂತರ ಕಾಲದಲ್ಲಿ ಅಂದರೆ ಬಿಜಾಪುರದ ಆದಿಲ ಶಾಹಿ ಸುಲ್ತಾನರ ಕಾಲದಲ್ಲಿ ಕೋಟೆಯನ್ನು ಮತ್ತಷ್ಟು ಬದ್ರ ಪಡಿಸಿದರು. ಒಳಸುತ್ತಿನ ಗೋಡೆಯಲ್ಲಿ ನಿರ್ಮಿಸಿದ್ದ ಕೆಲವು ದ್ವಾರಗಳು ಕೋಟೆಯನ್ನು ಮಾರ್ಪಡಿಸುವ ಸಂದರ್ಭದಲ್ಲಿ ಮುಚ್ಚಲ್ಪಟ್ಟಿವೆ. ಅದೇರೀತಿ ಒಳಸುತ್ತಿನ ಗೋಡೆಯ ನಿರ್ಮಾಣದಲ್ಲಿ ಹಲವು ವ್ಯತ್ಯಾಸಗಳನ್ನು ಗುರುತಿಸಬಹುದು. ಇದು ಹೊರಸುತ್ತಿನ ಗೋಡೆಗಿಂತಲೂ ಎತ್ತರವಾಗಿಯೂ, ದಪ್ಪವಾಗಿಯೂ ಇದೆ. ಹೊರಸುತ್ತಿನ ಗೋಡೆಯಲ್ಲಿ ಮತ್ತು ಕೆಲವು ಬುರುಜುಗಳ ಮೇಲೆ ಬಿಜಾಪುರದ ಆದಿಲ್ ಶಾಹಿಗಳ ಕಾಲದ ಶಾಸನಗಳಿವೆ. ಹೊರಸುತ್ತಿನ ಗೋಡೆಯ ಪಶ್ಚಿಮ ಭಾಗದಲ್ಲಿರುವ ಸಿಕಂದರ್ ಬುರುಜಿನ ಮೇಲೆ ಸಿಂಹ ಮತ್ತಿತ್ತರ ಶಿಲ್ಪಗಳ ಕೆತ್ತನೆಗಳಿವೆ. ಇವುಗಳ ರಚನಾ ಶೈಲಿಯು ಬಿಜಾಪುರ ಕೋಟೆಯ ಇದೇ ಮಾದರಿಯ ಶಿಲ್ಪಶೈಲಿಯನ್ನು ಹೋಲುತ್ತದೆ.

ಕಂದಕ: ಕಲಬುರ್ಗಿಯ ಕೋಟೆಯ ಮತ್ತೊಂದು ವಿಶೇಷತೆ ಎಂದರೆ ಕೋಟೆಯ ಸುತ್ತಲು ಇರುವ ಆಳವಾದ ಕಂದಕ. ಇದು ಸುಮಾರು 30ಅಡಿ ಆಳ ಹಾಗೂ 28ಅಡಿ ಅಗಲವಾಗಿದೆ. ಕೋಟೆಯ ವಾಯುವ್ಯ ಮತ್ತು ಪಶ್ಚಿಮದ ಅಂಚಿನಲ್ಲಿ ನೇರವಾಗಿ ಹಾಸುಬಂಡೆಗಳನ್ನು ಕೊರೆದು ಕಂದಕವನ್ನು ರಚಿಸಲಾಗಿದೆ. ಕೋಟೆಯ ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಬಳಸಿಕೊಂಡು ಕಂದಕವನ್ನು ನಿರ್ಮಿಸಲಾಗಿದೆ. ಈ ಕಂದಕಕ್ಕೆ ನೀರನ್ನು ಕೋಟೆಯ ನೈರುತ್ಯ ದಿಕ್ಕಿನಲ್ಲಿ ಹರಿಯುವ ಚಿಕ್ಕ ತೊರೆಯಿಂದ ಕಾಲುವೆ ಮೂಲಕ ಸರಬುರಾಜು ಮಾಡಲಾಗುತ್ತಿತ್ತು. ಆಳವಾದ ಕಂದಕದಲ್ಲಿ ಸದಾ ನೀರಿನ ಶೇಖರಣೆ ಇರುತ್ತಿತ್ತು. ಕಂದಕದ ರಚನೆಯ ವಿನ್ಯಾಸ ಮತ್ತು ಸ್ವರೂಪವು ಬಿಜಾಪುರದ ಆನಂದ ಮಹಲ್ ಬಳಿಯಿರುವ ಕೋಟೆಯ ಕಂದಕದ ಮಾದರಿಯಲ್ಲಿದೆ. ಪ್ರಾಯಶಃ ಕಲಬುರ್ಗಿ ಕೋಟೆಯ ಕಂದಕವು ಕೂಡ ಬಿಜಾಪುರ ಆದಿಲ ಶಾಹಿಗಳ ಕಾಲದಲ್ಲಿ ನಿರ್ಮಿಸಿರುವ ಸಾಧ್ಯತೆಯನ್ನು ಇಲ್ಲಿ ಗುರುತಿಸಬಹುದು.

ದ್ವಾರಗಳು: ಇಲ್ಲಿಯ ಕೋಟೆಯ ದ್ವಾರಗಳಲ್ಲಿಯೂ ವಿಶೇಷತೆಗಳಿವೆ. ಕೋಟೆಯ ಪೂರ್ವ ಮತ್ತು ವಾಯುವ್ಯ ದಿಕ್ಕಿನಲ್ಲಿ ದ್ವಾರಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಪೂರ್ವದ ದ್ವಾರವು ಸರಳವಾಗಿದೆ. ಆದರೆ ವಾಯುವ್ಯದ ದ್ವಾರವನ್ನು ಹಾಥಿ-ದರವಾಜಾ ಎಂದು ಕರೆಯುವ ದ್ವಾರವು ಹಲವು ತಿರುವುಗಳು ಮತ್ತು ಎರಡು ಪ್ರವೇಶ-ಬಾಗಿಲುಗಳಿಂದ ನಿರ್ಮಿಸಲಾಗಿದೆ. ಈ ದ್ವಾರವು ಒಳಸುತ್ತಿನ ಮತ್ತು ಹೊರಸುತ್ತಿನ ಗೋಡೆಗಳನ್ನು ಬಳಸಿಕೊಂಡು ನಿರ್ಮಿಸಿದ್ದರಿಂದ ತಿರುವುಗಳನ್ನು ಇಲ್ಲಿ ಕಾಣುತ್ತೇವೆ. ಆನೆಯ ಸೊಂಡಿಲು ರೂಪದಲ್ಲಿ ಲಂಬವವಾಗಿದ್ದರಿAದ ಹಾಥಿ-ದರವಾಜಾ ಎಂದು ಕರೆಯಲಾಗಿದೆ. ಶಹಾ-ಬಜಾರಗೆ ಮುಖ ಮಾಡಿದ ಈ ದರವಾಜಾ ಎತ್ತರದ ಕೊಳವೆ ಆಕಾರದ ಎರಡು ಬುರುಜುಗಳಿಂದ ಕೂಡಿದೆ. ಈ ದ್ವಾರದ ರಚನೆಯು 17ನೇ ಶತಮಾನದ ಶೈಲಿಯಲ್ಲಿದೆ. ಕ್ರಿ.ಶ. 1655ರ ಆದಿಲ ಶಾಹಿ ಸುಲ್ತಾನ ಮುಹ್ಮದ ಶಾಹನ ಕಾಲದ ಪರ್ಶಿಯನ್ ಶಾಸನ ದೊರಕಿದೆ. ನುರುಲ್ಲಾ ಎಂಬ ಸೇನಾಧಿಕಾರಿಯು ಸುಲ್ತಾನನ ಆಜ್ಞೆಯ ಮೇರೆಗೆ ಕೋಟೆಯ ವಿವಿಧ ಬುರುಜುಗಳನ್ನು ಮತ್ತು ದ್ವಾರಗಳನ್ನು ನಿರ್ಮಿಸಿ ಬದ್ರಪಡಿಸಿದನು ಎಂದು ಉಲ್ಲೇಖಿಸುತ್ತದೆ. ಪ್ರಾಯಶಃ ಈ ಅವಧಿಯಲ್ಲಿಯೇ ಈ ದ್ವಾರವನ್ನು ಕಟ್ಟಿದಂತೆ ತೋರುತ್ತದೆ. ಈ ಹಾಥಿ-ದರವಾಜಾದಿಂದ ಒಳ ನಡೆದಂತೆ ಮತ್ತೊಂದು ದ್ವಾರವಿದೆ. ಅದನ್ನು ಜಂಜಿರಾ ದರವಾಜಾ ಎಂದು ಕರೆಯುತ್ತಾರೆ. ಇದು ಒಳಸುತ್ತಿನ ಕೋಟೆ-ಗೋಡೆಗೆ ಕಟ್ಟಲಾಗಿದೆ. ಈ ದ್ವಾರಕ್ಕೆ ಅಳವಡಿಸಿದ ಮರದ ಬಾಗಿಲುಗಳ ಮೇಲೆ ಕಬ್ಬಿಣದ ಚೂಪಾದ ಮೊಳೆಗಳನ್ನು ಜೋಡಿಸಲಾಗಿದೆ. ಅದಕ್ಕಾಗಿ ಇದನ್ನು ಜಂಜಿರಾ-ದರವಾಜಾ ಎಂದು ಕರೆದಿರಬಹುದು. ಈ ದ್ವಾರವು ಇದರ ರಚನೆಯ ವಿನ್ಯಾಸ ಮತ್ತು ಶೈಲಿಯನ್ನು ಅವಲೋಕಿಸಿದರೆ ಇದು ಬಹಮನಿ ಕಾಲದ ದ್ವಾರವೆಂದು ತೋರುತ್ತದೆ. ಈ ದ್ವಾರಕ್ಕೆ ಹೊಂದಿಕೊಂಡಂತೆ ಕೋಟೆಯ ಒಳಭಾಗದಲ್ಲಿ ಸಾಲಾಗಿ ಪಿರಾಮಿಡ ಆಕಾರದ ಚಿಕ್ಕ ಚಿಕ್ಕ ಕೋಣೆಗಳಿರುವ ಬಜಾರ-ಬೀದಿ ಇದೆ. ಈ ಮಾದರಿಯ ಬಜಾರ ಬೀದಿಗಳನ್ನು ಬಹಮನಿ ಕಾಲದ ನಗರಗಳಲ್ಲಿ ನಿರ್ಮಿಸಿರುವ ಉದಾಹರಣೆಗಳಿವೆ. ಕ್ರಿ.ಶ.1406ರಲ್ಲಿ ಬಹಮನಿ ದೊರೆ ಫಿರೋಜ್ ಶಹಾ ನಿರ್ಮಿಸಿದ ಫಿರೋಜಾಬಾದ ಕೋಟೆಯಲ್ಲಿಯೂ ಇದೇ ವಿನ್ಯಾಸದ ಬಜಾರ-ಬೀದಿಯನ್ನು ಕಾಣಬಹುದು.

ಪೂರ್ವದ ದ್ವಾರ: ಕೋಟೆಯ ಪೂರ್ವದ ದ್ವಾರವು ಈಗೀನ ಎಲ್.ಐ.ಸಿ. ಕಛೇರಿಯ ಮುಂಭಾಗದಲ್ಲಿದೆ. ಇದೂ ಕೂಡ ಒಳಸುತ್ತಿನ ಗೋಡೆಯಲ್ಲಿ ನಿರ್ಮಿಸಲಾಗಿದೆ. ಈ ದ್ವಾರವು ಜಂಜಿರಾ-ದರವಾಜಾಗಿಂತಲೂ ಭಿನ್ನವಾಗಿ ಕಟ್ಟಲಾಗಿದೆ. ಇದು ಪೂರ್ವಾಭಿಮುಖವಾಗಿದ್ದು ಎತ್ತರದ ಕಮಾನಿನ ವಿನ್ಯಾಸದಿಂದ ಕೂಡಿದ ಪ್ರವೇಶ ದ್ವಾರವಿದೆ. ಇದರ ಇಕ್ಕೆಡೆಗಳಲ್ಲಿ ಚೌಕಕಾರದ ಕೊತ್ತಳ ಅಥವಾ ಬುರುಜುಗಳಿವೆ. ಈ ದ್ವಾರವನ್ನು ಒಳ ಪ್ರವೇಶಿಸುತ್ತಿದ್ದಂತೆ ಇಕ್ಕೆಡೆಗಳಲ್ಲಿ ಒಂಬತ್ತು ಅಂಕಣಗಳ ಜಗುಲಿಗಳಿವೆ. ಇತ್ತೀಚಿಗೆ ಇವು ಬಿದ್ದಿವೆ. ಆದರೂ ಇವುಗಳ ರಚನೆಯ ಸ್ವರೂಪವನ್ನು ಗುರುತಿಸಬಹುದಾಗಿದೆ. ಇವು ಎರಡು ಅಂತಸ್ಥುಗಳಿಂದ ಕೂಡಿದ್ದವು. ಕಮಾನು ವಿನ್ಯಾಸಗಳ ನಿರ್ಮಿಸಲಾಗಿದ್ದ ಇಲ್ಲಿಯ ಪ್ರತಿ ಅಂಕಣವು ಗಾರೆಯ ಕುಸುರಿ ಕೆತ್ತನೆಗಳಿಂದ ಕೂಡಿದ್ದವು. ಮೇಲಂತಸ್ಥಿನ ಅಂಕಣಗಳು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುತ್ತಿತ್ತು. ಮುಖ್ಯವಾಗಿ ಗಣ್ಯರು ಅಥವಾ ಯುದ್ಧಗಳಲ್ಲಿ ವಿಜಯ ಸಾಧಿಸಿ ಬಂದ ಸುಲ್ತಾನರಿಗೆ ಮೇಲಸ್ಥಿನಲ್ಲಿ ನಗಾರಿ, ವಿವಿಧ ವಾಧ್ಯಗಳೊಂದಿಗೆ ಸಂಗೀತಕಾರರು ಸ್ವಾಗತಿಸುತ್ತಿದ್ದರು. ಅದಕ್ಕಾಗಿಯೇ ದ್ವಾರದ ಒಳಭಾಗದಲ್ಲಿ ಅಂಗಳದಂತಹ ವಿಶಾಲವಾದ ಪ್ರದೇಶವಿದೆ. ಇದೇ ಮಾದರಿಯ ದ್ವಾರವನ್ನು ದೆಹಲಿಯ ಫಿರೋಜ್ ಶಹಾ ಕೊಟ್ಲಾ ಎಂದು ಕರೆಯುವ ತುಘಲಕ್ ಸುಲ್ತಾನರ ಕೋಟೆಯಲ್ಲಿ ಕಾಣಬಹುದು. ಬಹಮನಿಯವರ ಆರಂಭಿಕ ವಾಸ್ತು ರಚನೆಗಳು ತುಘಲಕ್‌ರ ಶೈಲಿಯಲ್ಲಿ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದಕ್ಷಿಣ ದ್ವಾರ: ಈ ಕೋಟೆಗೆ ದಕ್ಷಿಣದ ಅಂಚಿನಲ್ಲಿ ದ್ವಾರವಿತ್ತು. ಇದು ಅಪ್ಪನ ಕೆರೆಗೆ ಮುSಮಾಡಿ ಕಟ್ಟಲಾಗಿತ್ತು. ಆದರೆ ಇದನ್ನು ಈಗ ಶಾಶ್ವತವಾಗಿ ಮುಚ್ಚಲಾಗಿದೆ. 1914ರಲ್ಲಿ ಹೈದರಾಬಾದ ರಾಜ್ಯದ ನಿರ್ದೇಶಕರಾಗಿದ್ದ ಯಾಜ್ದಾನಿ ಅವರು ಮೊದಲ ಬಾರಿಗೆ ಈ ದ್ವಾರವನ್ನು ಗುರುತಿಸಿದ್ದರು. ಕಮಾನು ಆಕಾರದ ಈ ದ್ವಾರವು ಕೋಟೆಗೆ ದಕ್ಷಿಣದಿಂದ ಪ್ರವೇಶ ಅವಕಾಶ ಮಾಡಿಕೊಡುತ್ತಿತ್ತು. ಇದನ್ನು 16ನೇ ಶತಮಾನದಲ್ಲಿ ಆದಿಲ ಶಾಹಿ ಸುಲ್ತಾನರು ಕೋಟೆಯನ್ನು ಅಮೂಲಾಗ್ರವಾಗಿ ಮರು ನಿರ್ಮಿಸುವ ಸಂದರ್ಭದಲ್ಲಿ ಮೊದಲಿದ್ದ ಈ ದಕ್ಷಿಣದ ದ್ವಾರವನ್ನು ಶಾಶ್ವತವಾಗಿ ಮುಚ್ಚಿ ಅದರ ಮುಂಭಾಗದಲ್ಲಿ ಎತ್ತರವಾದ ಒಂದು ಬುರುಜನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಈ ದ್ವಾರವನ್ನು ಗುರುತಿಸಲು ಸಾಧ್ಯವಾಗದಂತಾಗಿದೆ. ಮೂಲತಃ ಈ ದ್ವಾರವೂ ಕೂಡ ಪಶ್ಚಿಮದ ದ್ವಾರದಂತೆ ಹಳೆಯ ದೇಗುಲದ ಕಂಬ/ಬೋದಿಗೆಗಳನ್ನು ಬಳಸಿಕೊಂಡು ಜಗುಲಿಗಳನ್ನು ಕಟ್ಟಲಾಗಿತ್ತು. ಅನೇಕರು ಇದನ್ನು ಹಳೆಯ ದೇಗುಲದ ಅವಶೇಷವೆಂದು ಗುರುತಿಸುತ್ತಾರೆ. ಆದರೆ ಬಹಮನಿ ಕಾಲದ ದ್ವಾರವೆಂದು ಇದರ ರಚನೆಯ ವಿನ್ಯಾಸ ಮತ್ತು ಅವಶೇಷಗಳ ಆಧಾರಗಳಿಂದ ಗುರುತಿಸಿದ್ದಾರೆ.

ಆದಿಲ ಶಾಹಿ ಸುಲ್ತಾನರಿಂದ ಕೋಟೆಯ ಮರು ನಿರ್ಮಾಣ : ಬಹಮನಿ ಸುಲ್ತಾನರು ಕಲಬುರ್ಗಿಯಿಂದ ಬೀದರಕ್ಕೆ ರಾಜಧಾನಿಯನ್ನು ಸ್ಥಳಾಂತರಿಸಿದ ನಂತರ ಕೋಟೆಯು ಆ ರಾಜ್ಯದ ಒಂದು ಸೇನಾ ನೆಲೆಯಾಗಿ ಬಳಕೆಯಾಯಿತು. ಆದರೆ ಯುದ್ಧಗಳಲ್ಲಿ ಹೊಸ ಹೊಸ ತಂತ್ರಗಳ ಬಳಕೆಗೆ ಬಂದವು ಮುಖ್ಯವಾಗಿ ಕೋಟೆಗಳು ಕೇವಲ ತೋರಿಕೆಯ ಕಟ್ಟಡಗಳಾಗದೆ ಅವುಗಳನ್ನು ವೈರಿಗಳ ಆಕ್ರಮಣಗಳಿಂದ ರಕ್ಷಿಸುವುದು ಅವಶ್ಯವಾಗಿತ್ತು. ಯುದ್ಧ ಅಥವಾ ಆಕ್ರಮಣಗಳಲ್ಲಿ ಫಿರಂಗಿಗಳು ಮತ್ತು ಮದ್ದು-ಗುಂಡುಗಳ ಬಳಕೆ ಸಾಮಾನ್ಯವಾಗುತ್ತಿದ್ದಂತೆಯೇ ಕೋಟೆಗಳ ರಚನೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಯಿತು. ಮೋಘಲರ ದಾಳಿಗಳಿಂದ ರಕ್ಷಿಸಿಕೊಳ್ಳಲು ಮುಖ್ಯವಾಗಿ ಕೋಟೆಗೆ ನುಗ್ಗುವ ವೈರಿಗಳನ್ನು ತಡೆಯುವುದಕ್ಕಾಗಿ ಸುಸಜ್ಜಿತ ಮತ್ತು ಬಲಾಡ್ಯವಾದ ಕೊತ್ತಳಗಳು ಅಥವಾ ಬುರುಜುಗಳನ್ನು ಅಳವಡಿಸುವುದು ಅಗತ್ಯವಾಗಿತ್ತು. ಹೊಸದಾಗಿ ನಿರ್ಮಿಸುವ ಕೋಟೆಗಳಲ್ಲದೆ, ಈಗಾಗಲೇ ಇದ್ದ ಹಳೆಯ ಕೋಟೆಗಳನ್ನು ಹೊಸದಾಗಿ ಬುರುಜುಗಳನ್ನು ಮತ್ತು ಹೊಸದಾಗಿ ಹೆಚ್ಚುವರಿ ಕೋಟೆ-ಗೋಡೆಗಳನ್ನು ನಿರ್ಮಿಸಿ ಮರು-ನಿರ್ಮಾಣ ಮಾಡುವ ಪ್ರಕ್ರಿಯೆ ಆದಿಲ ಶಾಹಿ ಸುಲ್ತಾನರ ಕಾಲದಲ್ಲಿ ಯುದ್ಧೋಪಾದಿಯಾಗಿ ನಡೆಯಿತು. ಬಿಜಾಪುರ ಕೋಟೆಯಲ್ಲದೆ, ನಳದುರ್ಗ, ರಾಯಚೂರು, ಮುದಗಲ್ಲು, ಶಹಾಪುರ, ಸೋಲಾಪುರ, ಆದೋನಿ, ಬೆಳಗಾವಿ, ಕೊಪ್ಪಳ, ಕಲ್ಯಾಣ, ಮಲ್ಲೆಯಾಬಾದ, ಕಲಬುರ್ಗಿ, ಇತ್ಯಾದಿ ಕೋಟೆಗಳನ್ನು ಬದ್ರವಾದ ದ್ವಾರಗಳಿಂದ, ಕೊತ್ತಳಗಳಿಂದ, ಬಲಶಾಲಿ ಫಿರಂಗಿಗಳಿಂದ ಹಾಗೂ ವಿವಿಧ ತಂತ್ರಗಳನ್ನು ಅಳವಡಿಸಿಕೊಂಡು ಸುಸಜ್ಜಿತಗೊಳಿಸಿದರು. ಕಲಬುರ್ಗಿಯ ಕೋಟೆಯ ಅಮೂಲಾಗ್ರವಾಗಿ ಬದಲಾಯಿಸಿದ್ದನ್ನು ಕೋಟೆಯಲ್ಲಿ ದೊರೆತ ಆದಿಲ ಶಾಹಿಗಳ ಅನೇಕ ಪರ್ಶಿಯನ್ ಮತ್ತು ಅರೆಬಿಕ ಶಾಸನಗಳಿಂದ ತಿಳಿದುಬರುತ್ತದೆ. ಈ ಕೋಟೆಯಲ್ಲಿ ಆದಿಲ ಶಾಹಿಗಳ 20ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಅವುಗಳಲ್ಲಿ ಹೆಚ್ಚಿನವು ಇಮ್ಮಡಿ ಆಲಿ ಆದಿಲ ಶಾಹಿ ಸುಲ್ತಾನ, ಇಮ್ಮಡಿ ಇಬ್ರಾಹಿಂ ಸುಲ್ತಾನ ಮತ್ತು ಮುಹ್ಮದ ಆದಿಲ ಶಾಹಿ ಸುಲ್ತಾನರ ಆಳ್ವಿಕೆಗೆ ಸೇರಿದವು. ಇವು ಕೋಟೆಯ ಹೊರ ಸುತ್ತಿನ ಕೋಟೆ-ಗೋಡೆಯ ಬುರುಜು, ದ್ವಾರ ಮತ್ತು ಫಿರಂಗಿಗಳ ಮೇಲೆ ದೊರಕಿವೆ. ಆದಿಲ ಶಾಹಿಗಳು ಕಲಬುರ್ಗಿಯ ಕೋಟೆಯನ್ನು ತಮ್ಮ ಸ್ವಾದೀನಕ್ಕೆ ತೆಗೆದು ಕೊಳ್ಳುವಷ್ಟರಲ್ಲಿ ಇದೊಂದು ಮಿಲಿಟರಿ-ಕ್ಯಾಂಪ್ ಅಥವಾ ಸೇನಾ-ನೆಲೆಯ ಕೇಂದ್ರವಾಗಿತ್ತು. ಮೊಘಲರು ಬೀದರ, ಬಸವಕಲ್ಯಾಣದ ಮೂಲಕ ಕಲಬುರ್ಗಿಯನ್ನು ಆಕ್ರಮಿಸುವ ಸಾಧ್ಯತೆಯನ್ನು ಮನಗಂಡು ಆದಿಲ ಶಾಹಿಗಳು ಈ ಕೋಟೆಯನ್ನು ಬದ್ರಗೊಳಿಸುವತ್ತ ಯೋಜನೆ ರೂಪಿಸಿದರು. ಇಲ್ಲಿಯ ಚಿಕ್ಕ ಕೋಟೆಯನ್ನು ವಿಸ್ತರಿಸುವದಕ್ಕಾಗಿ ಇಲ್ಲಿಯ ಒಂದು ಸುತ್ತಿನ ಕೋಟೆ-ಗೋಡೆಗೆ ಹೊಂದಿಕೊಂಡಂತೆ ಹೊರಸುತ್ತಿನ ಕೋಟೆ-ಗೋಡೆಯನ್ನು ಹಲವಾರು ಬಲಾಡ್ಯ ಬುರುಜುಗಳಿಂದ ಮತ್ತು ಸುಗಮವಾಗಿ ಪ್ರವೇಶಿಸಲು ಸಾಧ್ಯವಾಗದಂತಹ ದರವಾಜಾಗಳನ್ನು ನಿರ್ಮಿಸಿದರು. ಆದಿಲ ಶಾಹಿಗಳ ಕಾಲದಲ್ಲಿ ಕೋಟೆಯ ವಾಯುವ್ಯ ಮೂಲೆಯಲ್ಲಿದ್ದ ಹಳೆಯ ದ್ವಾರಕ್ಕೆ ಮತ್ತಷ್ಟು ಬದ್ರಮಾಡಲು ಹಲವು ತಿರುವುಗಳುಳ್ಳ ದ್ವಾರವೊಂದನ್ನು ಅಳವಡಿಸಿ ವೈರಿಗಳು ಸುಲಭವಾಗಿ ವಶಪಡಿಸಿಕೊಳ್ಳದಂತೆ ನೋಡಿಕೊಂಡರು. ಇವರ ಕಾಲದಲ್ಲಿ ನಿರ್ಮಿಸಿದ ಹೊಸದಾದ ದ್ವಾರವನ್ನು ಹಾಥಿ ದರವಾಜಾ ಮತ್ತು ಜಂಜಿರಾ ದರವಾಜಾ ಎಂದು ಕರೆಯಲಾಗುತ್ತದೆ. ಕ್ರಿ.ಶ.1557; 1564; 1575; 1586; 1587; 1604; 1610; 1624; 1648; 1655; ಮತ್ತು 1674 ಅವಧಿಯಲ್ಲಿ ಅನೇಕ ಹೊಸ ಬುರುಜುಗಳನ್ನು ಕೋಟೆಗೆ ಅಳವಡಿಸಲಾಗಿವೆ ಎಂದು ಇಲ್ಲಿಯ ಶಾಸನಗಳು ಉಲ್ಲೇಖಿಸುತ್ತವೆ. ಪುತ್ಲಿ-ಬುರುಜು, ಬುರಜ್-ಇ-ದೌಲ್; ನವರಸ-ಬುರುಜು, ಕಾಲಾ-ಪಹಡ್ ಬುರುಜು, ಫತೇ-ಬುರುಜು; ಮುಂತಾದ ಬುರುಜುಗಳು ಇವರ ಕಾಲದಲ್ಲಿ ನಿರ್ಮಾಣಗೊಂಡಿವೆ. ಇವುಗಳನ್ನು ನಿರ್ಮಿಸುವುದಕ್ಕಾಗಿ ಆದಿಲ ಶಾಹಿ ಸುಲ್ತಾನರು ನುರಿತ ತಂತ್ರಜ್ಞರನ್ನು ನೇಮಕ ಮಾಡಿದ್ದರು ಎಂದು ಇಲ್ಲಿಯ ಶಾಸನಗಳಿಂದ ಉಲ್ಲೇಖಸುತ್ತವೆ. ಆರಬ್-ಖಾನ್; ಹಾಜಿ ಇಮಾದ್-ಖಾನ್; ಬರಾ-ಮಲಿಕ್; ನುರುಲ್ಲಾ÷್ಹ; ಮಲಿಕ್ ಯಾಖುತ್; ಮತ್ತು ಸಿದ್ದಿ ಸುಮ್ಬುಲ್ ಮುಂತಾದವರು ಇಲ್ಲಿಯ ಕೋಟೆಯ ನಿರ್ಮಾಣ ಮಾಡಿದ ತಂತ್ರಜ್ಞರು ಮತ್ತು ಮೇಲ್ವಿಚಾರಕರು. ಇವರು ಕ್ರಿ.ಶ.1557 ರಿಂದ 1674 ವರೆಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಕೋಟೆಯನ್ನು ಜಿರ್ಣೋದ್ದಾರ ಕೈಕೊಂಡ ತಂತ್ರಜ್ಞರು. ಇವರಲ್ಲಿ ಕೆಲವರು ಹೆಸರಾಂತ ವಾಸ್ತು ಶಿಲ್ಪಿಗಳಾಗಿದ್ದರು ಎಂಬುದು ಗಮನಿಸುವ ಆಂಶ. ಬಿಜಾಪುರದ ತಾಜ್-ಬಾವಡಿ ಮತ್ತು ಇಬ್ರಾಹಿಮ್-ರೌಜಾ ಭವ್ಯ ಸ್ಮಾರಕಗಳನ್ನು ಕಟ್ಟಿದ ಮಲ್ಲಿಕ್ ಸಂದಿಲ್‌ನ ಮಗನಾದ ಬರಾ-ಮಲಿಕ್ ಇಲ್ಲಿಯ ಕೋಟೆಯ 12 ಘಜ ಉದ್ದನೇಯ ಫಿರಂಗಿಯ ಬುರುಜನ್ನು ನಿರ್ಮಿಸಿದ ವಾಸ್ತು-ಶಿಲ್ಪಿ ಎಂಬುದು ಇಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಇಲ್ಲಿಯ ಬುರುಜಿನಲ್ಲಿರುವ ಬಾರಾ-ಘಜ-ತೋಪ್ ಎಂದು ಕರೆಯಲ್ಪಡುವ ಕಬ್ಬಿಣದ ಫಿರಂಗಿಯು ಅತ್ಯಂತ ಉದ್ದನೇಯ ಫಿರಂಗಿ ಎಂದು ಗುರುತಿಸಲಾಗುತ್ತದೆ. ಇದು 29ಅಡಿ ಉದ್ದ, ಮತ್ತು 7.5 ಅಡಿ ದಪ್ಪವಾದ ಈ ಫಿರಂಗಿಯು ಆದಿಲ ಶಾಹಿಗಳ ಕಾಲದಲ್ಲಿ ಇಲ್ಲಿ ಅಳವಡಿಸಲಾಗಿದೆ. ಇಮ್ಮಡಿ ಇಬ್ರಾಹಿಮ್ ಆದಿಲ ಶಾಹ ಸುಲ್ತಾನನು ಕ್ರಿ.ಶ. 1603ರಲ್ಲಿ ಇಲ್ಲಿಯ ಕೋಟೆಯಲ್ಲಿ ನವರಸ-ಬುರುಜನ್ನು ಕಟ್ಟಿಸಿದ ಬಗ್ಗೆ ಉಲ್ಲೇಖಿಸುತ್ತದೆ. ಇದೇ ಸುಲ್ತಾನನು ಬಿಜಾಪುರದಲ್ಲಿ ನವರಸಪುರ ಎಂಬ ಹೊಸ ಸಾಂಸ್ಕೃತಿಕ ಹೊಸ ಉಪನಗರವನ್ನು ಕಟ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನವರಸಪುರದದಲ್ಲಿ ಸಂಗೀತ ಗೋಷ್ಠಿಗಳನ್ನು ಏರ್ಪಡಿಸಲಗುತ್ತಿತ್ತು. ಕಲಬುರ್ಗಿ ಕೋಟೆಯಲ್ಲಿಯೂ ನವರಸ ಹೆಸರಿನ ಬುರುಜು ಇರುವುದು ವಿಶೇಷವಾಗಿದೆ.

ಬಾಳ-ಹಿಸ್ಸಾರ : ಕೋಟೆಯ ಒಳಾಂಗಣದಲ್ಲಿ ಪೂರ್ವದ ದ್ವಾರದ ಹತ್ತಿರ ಬಾಳ-ಹಿಸ್ಸಾರ [ರಣಮಂಡಲ] ಎಂದು ಕರೆಯುವ ಗೋಪುರ ಮಾದರಿಯ ದೊಡ್ಡ ಕಟ್ಟಡವಿದೆ. ಇದು ಎತ್ತರವಾದ ಆಯತಾಕಾರದ ಅಧಿಷ್ಠಾನ ಅಥವಾ ಬುನಾದಿ ಕಟ್ಟೆಯ ಮೇಲೆ ನಿರ್ಮಿಸಲಾಗಿದ್ದು 70 ಅಡಿ ಉದ್ದ ಹಾಗೂ 55 ಅಡಿ ಅಗಲವಾಗಿದೆ. ಇದರ ಮೇಲ್ಭಾಗದಲ್ಲಿ ದೊಡ್ಡ ಫಿರಂಗಿ ಇದೆ. ಕೋಟೆಯ ಒಳಾಂಗಣದ ಮಧ್ಯ ಭಾಗದಲ್ಲಿರುವ ಫಿರಂಗಿ ಸಮೇತ ಇದು ಒಂದು ಉಪ್ಪಲಿ-ಬುರುಜಿನಂತೆ ಕಾರ್ಯ ನಿರ್ವಹಿಸುತ್ತದೆ. ಕೋಟೆಯ ಮಧ್ಯಭಾಗದಲ್ಲಿ ಇರುವ ಈ ಕಟ್ಟಡವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಮೊದಲನೆಯದಾಗಿ ಸ್ಥಳದ ಆಯ್ಕೆ. ಕೋಟೆಯ ಒಳಾಂಗಣದ ಕೇಂದ್ರಸ್ಥಳವೆಂದು ಗುರುತಿಸಲ್ಪಡುವ ಸ್ಥಳದಲ್ಲಿ ಈ ಬತೇರಿಯನ್ನು ನಿರ್ಮಿಸಿ ಫಿರಂಗಿಯನ್ನು ಅಳವಡಿಸಿರುವುದು ಒಂದು ಅವೈಜ್ಞಾನಿಕ ಎನಿಸುತ್ತದೆ. ಸುಲ್ತಾನರು ಮತ್ತು ಅವರ ಪರಿವಾರದವರು ನೆಲೆಸಿರುವ ಸ್ಥಳದಲ್ಲಿಯೇ ಇದನ್ನು ನಿರ್ಮಿಸಿ ಅದರಿಂದ ಹೊರಡುವ ಫಿರಂಗಿಯ ಸಿಡಿಮದ್ದಿನ ಕರ್ಕಶ ಶಬ್ಧ ಮತ್ತು ಹೊರಹೊಮ್ಮುವ ಜ್ವಾಲೆ ಹತ್ತಿರದಲ್ಲಿ ನೆಲೆಸಿದ ಜನರಿಗೆ ತೊಂದರೆಯಾಗುತ್ತದೆ. ಅಲ್ಲದೇ ಕುತುಹಲದ ವಿಷಯವೆಂದರೆ, ಇದರ ಗೋಡೆ 22 ಅಡಿಗಳಷ್ಟು ದಪ್ಪವಾಗಿದೆ. ಈ ಮೊದಲಿದ್ದ ಕಟ್ಟಡಕ್ಕೆ ಹೊರಗಿನಿಂದ ಮತ್ತೊಂದು ಗೋಡೆಯನ್ನು ನಿರ್ಮಿಸಿದಂತಿದೆ. ಪ್ರಾಯಶಃ ಬಹಮನಿ ಕಾಲದ ಎರಡು ಅಂತಸ್ತಿನ ಕಟ್ಟಡಕ್ಕೆ ನಂತರ ಹೊಸದಾಗಿ ಮತ್ತೊಂದು ಗೋಡೆಯನ್ನು ನಿರ್ಮಿಸಿ ಬತೇರಿಯನ್ನಾಗಿ ಪರಿವರ್ತಿಸಿದಂತಿದೆ. ಬಹಮನಿ ಸುಲ್ತಾನ ಪರಿವಾರದವರು ಕೋಟೆಯನ್ನು ತೊರೆದ ನಂತರ ಇದೊಂದು ಸೇನಾ-ನೆಲೆಯನ್ನಾಗಿ ಮಾಡಿದ್ದರಿಂದ ಕೋಟೆಯ ರಕ್ಷಣೆಗಾಗಿ ಪಳು ಬಿದ್ದಿದ್ದ ದಿವಾನ್-ಇ-ಆಮ್ ಅಥವಾ ಸಂಭಾAಗಣವನ್ನು ಎತ್ತರದ ಭತೇರಿಯನ್ನಾಗಿ ಮಾಡಿರುವ ಸಾಧ್ಯತೆಯನ್ನು ಇದರ ರಚನೆಯ ಆಧಾರದ ಮೇಲೆ ಹೇಳಬಹುದಾಗಿದೆ. ಇದಕ್ಕೆ ಪ್ರವೇಶವು ಉತ್ತರದ ದಿಕ್ಕಿನ ಮೂಲೆಯಲ್ಲಿದೆ. ಅಗಲವಾದ ಬಹಮನಿ ಶೈಲಿಯ ಕಮಾನು ವಿನ್ಯಾಸ ಒಳಭಾಗದಲ್ಲಿ ಕಾಣುತ್ತೇವೆ. ಮೆಟ್ಟಲುಗಳನ್ನು ಒಳಗಿನ ಗೋಡೆಯಲ್ಲಿ ಮಾಡಲಾಗಿದೆ. ದೊಡ್ಡ ಗಾತ್ರದ ಫಿರಂಗಿಯು ಇದರ ಮೇಲ್ಭಾಗದಲ್ಲಿದೆ. ಆದಿಲ ಶಾಹಿಗಳ ಈ ಉದ್ದನೇಯ ಫಿರಂಗಿಯ ಮೇಲೆ ಒಂದು ಸಾಲಿನಲ್ಲಿ ಆದಿಲ-ಶಾಹಿ ರಾಜ್ಯದ ನಾಲ್ಕು ಮಣ ಎಂದು ಪರ್ಶಿಯನ್ ಭಾಷೆಯಲ್ಲಿ ಕೊರೆಯಲಾಗಿದೆ. ಸ್ಥಳೀಯವಾಗಿ ಇದನ್ನು ಬಾಳ-ಹಿಸ್ಸಾರ್ [ರಣಮಂಡಲ] ಎಂದು ಕರೆಯುತ್ತಿದ್ದು ಇದು ಅರಮನೆಯ ಸ್ಥಳವೆಂದು ಸೂಚಿಸುತ್ತದೆ. ಬಹಮನಿ ಕಾಲದ ಸಭಾಂಗಣವು ಆದಿಲ ಶಾಹಿಗಳ ಕಾಲದಲ್ಲಿ ದೊಡ್ಡ ಭತೇರಿಯಾಗಿ ಪರಿವರ್ತಿಸಲಾಗಿದೆ. ಇದರ ಹತ್ತಿರದ ಕಾಲಾ-ಪಹಡ್ ಎಂಬ ಕೋಟೆಯ ಬುರುಜಿನ ಮೇಲೆ ಕ್ರಿ.ಶ. 1648ರ ಅವಧಿಯ ಆದಿಲ ಶಾಹಿಗಳ ಶಾಸನವಿದ್ದು ಅದು ಆಸ್ಥಾನದ ಸೇನಾಧಿಕಾರಿ ಮುಹ್ಮದ್ ಆಖಾನ ಮಗ ಅಲಿ ರಿಧಾ ಎಂಬವನು ಅರಮನೆಯಂತಹ ಭವ್ಯವಾದ ಇಮಾರತ್‌ನ್ನು ನಿರ್ಮಿಸಿದನು ಎಂದು ಉಲ್ಲೇಖಿಸುತ್ತದೆ. ಪ್ರಾಯಶಃ ಶಾಸನದಲ್ಲಿ ಉಲ್ಲೇಖಿಸಿದ ಇಮಾರತ್ ಇದೇ ಆಗಿರುವ ಸಾಧ್ಯತೆ ಇದೆ.

ಮೊಘಲರ ಮತ್ತು ನಿಜಾಮರ ಕಾಲದ ಕೋಟೆ : ಆದಿಲ ಶಾಹಿಗಳ ನಂತರ ಕಲಬುರ್ಗಿ ಕೋಟೆಯು ಮೊಘಲರ ವಶವಾಯಿತು. ಇದು ಕೆಲವು ಕಾಲ ಮೊಘಲರು ರಚಿಸಿದ ಬಿಜಾಪುರ-ಸುಭಾ ಪ್ರಾಂತ್ಯಕ್ಕೆ ಒಳಪಟ್ಟತ್ತು. ಔವರಂಗಜೇಬನ ನಂತರ ಅಧಿಕಾರಕ್ಕೆ ಬಂದ ಹೈದರಾಬಾದದ ನಿಜಾಮರು ಕಲಬುರ್ಗಿ ಒಳಗೊಂಡಂತೆ ಮರಾಠವಾಡ ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ನಿಜಾಮನ ಕಾಲದ ಒಂದು ಶಾಸನವು ಫಿರಂಗಿಯ ಮೇಲೆ ದೊರಕಿದೆ. ಇದು ಕ್ರಿ.ಶ. 1769ರ ಕಾಲದ ಶಾಸನವಾಗಿದ್ದು ನಿಜಾಮ ಆಳ್ವಿಕೆಯ ನವಾಬ ಜೈನುದ್ ದೌಲ್ ಬಹದ್ದೂರ ಸಹೋದರರ ಉಲ್ಲೇಖಿಸುತ್ತದೆ. ಅದರಂತೆ ಕ್ರಿ.ಶ. 1805 ಅವಧಿಯ ಮತ್ತೊಂದು ಶಾಸನ ಕೋಟೆಯ ಪಶ್ಚಿಮದ ದ್ವಾರದ ಗೋಡೆಯ ಮೇಲಿದೆ. ನುರುಲ್-ಉಲ್-ಮುಲ್ಕ್ ಎಂಬ ಅಧಿಕಾರಿಯನ್ನು ಕೋಟೆಯ ಉಸ್ತುವಾರಿಗೆ ನಿಜಾಮ ಸರ್ಕಾರ ನೇಮಕ ಮಾಡಿದ್ದನ್ನು ಇದು ಉಲ್ಲೇಖಿಸುತ್ತದೆ. ಈ ಅಧಿಕಾರಿಯು ಅಕ್ರಮ್ ಅಲಿ ಎಂಬ ತಂತ್ರಜ್ಞನಿAದ ಕೋಟೆಯನ್ನು ದುರಸ್ತಿ ಮಾಡಿದನು ಎಂದು ಇದು ತಿಳಿಸುತ್ತದೆ.

ಕೋಟೆ ಒಳಾಂಗಣ: ಅರ್ಧ ಅಂಡಾಕಾರದಲ್ಲಿರುವ ಈ ಕೋಟೆಯು ಸುಮಾರು 20 ಎಕರೆ ವಿಸ್ತಿರ್ಣದಿಂದ ಕೂಡಿದೆ. ಬಹಮನಿಯವರ ಕಾಲದಲ್ಲಿ ಒಳಾಂಗಣವು ಸುಲ್ತಾನರ ವಾಸದ ನೆಲೆಯಾಗಿದ್ದು, ಅರಮನೆಗಳು, ಒಡ್ಡೋಲಗಗಳು, ಸಭಾಂಗಣಗಳು, ಉದ್ಯಾನಗಳು, ಬಜಾರ, ಲಾಯಗಳು ಮತ್ತು ಮಸೀದಿಗಳು ಇಲ್ಲಿದ್ದವು. ರಾಜಧಾನಿಯನ್ನು ಬೀದರಿಗೆ ಸ್ಥಳಾಂತರಿಸಿದ ನಚಿತರ ಈ ಕೋಟೆಯನ್ನು ಕೇವಲ ಸೇನಾ ನೆಲೆಗಳನ್ನಾಗಿ ಮಾಡಿಕೊಂಡಿದ್ದರಿಂದ ಬಹಮನಿ ಕಾಲದ ಅರಮನೆ, ಉದ್ಯಾನಗಳು ಮತ್ತಿತರ ಕಟ್ಟಡಗಳನ್ನು ಸೈನ್ಯದ ಉಪಯೋಗಕ್ಕಾಗಿ ಮಾರ್ಪಡಿಸಲಾಗಿದೆ. ಆದ್ದರಿಂದ ಅವುಗಳ ಮೂಲ ಸ್ವರೂಪದ ಕಟ್ಟಡಗಳು ಇಲ್ಲಿ ಕಾಣುವುದಿಲ್ಲ. ಸೂಕ್ಷ್ಮವಾಗಿ ಇವುಗಳನ್ನು ಅವಲೋಕಿಸಿದರೆ ಬಹಮನಿ ಕಾಲದಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳನ್ನು ಗುರುತಿಸಬಹುದು. ದಾಖಲೆಗಳ ಪ್ರಕಾರ ಈ ಕೋಟೆಯಲ್ಲಿ ಸುಲ್ತಾನರು ಹಾಗೂ ರಾಜಪರಿವಾರದವರು ಇಲ್ಲಿ ನೆಲೆಸಿದ್ದರೆಂದು ತಿಳಿದುಬರುತ್ತದೆ. ಆಳ್ವಿಕೆ ರಾಜಕೀಯ ಮೇಲಾಟಗಳಿಗೆ ಈ ಕೋಟೆ ಸಾಕ್ಷಿಯಾಗಿತ್ತು.

ಜುಮ್ಮಾ ಮಸೀದಿ : ಕಲಬುರ್ಗಿಯ ಐತಿಹಾಸಿಕ ವಿಸ್ಮಯ ಸ್ಮಾರಕವೆಂದರೆ ಕೋಟೆಯ ಒಳಗಡೆ ಇರುವ ಜುಮ್ಮಾ ಮಸೀದಿ. ಜಗತ್ತಿನಲ್ಲಿಯೇ ದ್ವಿತೀಯ ಉದಾಹರಣೆಯೆಂತಲೂ ಹಾಗೂ ದೇಶದಲ್ಲಿಯೇ ಏಕೈಕ ಉದಾಹರಣೆಯೆಂತಲೂ ಈ ಜುಮ್ಮಾ ಮಸೀದಿಯನ್ನು ಗುರುತಿಸುತ್ತಾರೆ. ಇಸ್ಲಾಂ ಧರ್ಮದ ಸಾಂಪ್ರದಾಯಿಕ ವಿನ್ಯಾಸವಾದ ಮಸೀದಿಯ ಒಳಾಂಗಣದಲ್ಲಿ ತೆರೆದ-ಅಂಗಳ ಹಾಗೂ ಪ್ರಾರ್ಥನೆ ಪೂರ್ವದಲ್ಲಿ ಒಜು ಕೈಕೊಳ್ಳಲು ಬೇಕಾಗುವ ನೀರಿನ ತೊಟ್ಟಿ ಈ ಮಸೀದಿಯಲ್ಲಿಲ್ಲ. ಅಲ್ಲದೇ, ಮಸೀದಿಯ ನಾಲ್ಕು ಕಡೆಗಳು ಗೋಡೆಗಳಿಂದ ಆವೃತ್ತವಾಗಿದೆ. ಆದ್ದರಿಂದ ಸ್ಪೇನ್ ದೇಶದ ಕಾರ್ಡೊವಾ ಊರಿನಲ್ಲಿರುವ ಬೃಹತ್ ಮಸೀದಿಯ ಅನುಕರಣೆಯೆಂದು ವಿದ್ವಾಂಸರು ಗುರುತಿಸಿದ್ದಾರೆ. ಕಲಬುರ್ಗಿ ನಗರದ ಒಂದು ಹೆಮ್ಮೆಯ ಐತಿಹಾಸಿಕ ಸ್ಮಾರಕವೆಂಬ ಖ್ಯಾತಿಯನ್ನು ಇದು ಗಳಿಸಿದೆ. ಆಯುತಾಕಾರದ ಈ ಮಸೀದಿಯನ್ನು ಕಿಲ್ಲಾ ಜುಮ್ಮಾ ಮಸೀದಿ ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಇದು 216 ಅಡಿ ಉದ್ದ ಹಾಗೂ 176 ಅಡಿ ಅಗಲ ವಿಸ್ತಾರವುಳ್ಳ ಮಸೀದಿಯಾಗಿದೆ. ಒಟ್ಟು 140 ಕಂಬಗಳನ್ನು ಬಳಸಿ 250 ಕಮಾನುಗಳಿಂದ ನಿರ್ಮಿಸಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿ ಪ್ರವೇಶಕ್ಕೆ ದಕ್ಷಿಣ ಮತ್ತು ಉತ್ತರ ದಿಕ್ಕಿನ ಗೋಡೆಗಳಲ್ಲಿ ದ್ವಾರಗಳನ್ನು ಆಳವಡಿಸಲಾಗಿದೆ. ಇವುಗಳಲ್ಲಿ ಉತ್ತರ ಗೋಡೆಯ ದ್ವಾರವು ಅತ್ಯಂತ ಸುಂದರ ಹಾಗೂ ಎತ್ತರವಾದ ಕಮಾನಿನಿಂದ ಕೂಡಿದೆ. ಮಸೀದಿಯ ಹೊರಗೋಡೆಗಳನ್ನು ಗಾರೆಯಿಂದ ನಯಗೊಳಿಸಲಾಗಿದೆ. ಮಸೀದಿಯ ಒಳಾಂಗಣದ ಕಮಾನುಗಳು ಎರಡು ವಿಧವಾಗಿವೆ. ಅಗಲ ಹಾಗೂ ಎತ್ತರ ಶೈಲಿಯ ಕಮಾನುಗಳ ಬಳಕೆ ಇಲ್ಲಿದೆ. ಪ್ರಾರ್ಥನೆ ಮಾಡುವ ಮರ‍್ಹಾಬ್ ಸುಂದರವಾದ ವಿನ್ಯಾಸಗಳಿಂದ ಕೂಡಿದ ಕಮಾನು ಹಾಗೂ ವಿವಿಧ ಅಲಂಕಾರಗಳಿAದ ಕೂಡಿದೆ. ಆದರೆ ಮರ‍್ಹಾಬ್ ಗೋಡೆಗಳು ಮಸೀದಿಯ ಖಿಬ್ಲಾ ಗೋಡೆಯಲ್ಲಿ ವಿಲೀನವಾಗಿದ್ದು ಹೊರಗಡೆ ಮುಂಚಾಚಿಕೊಂಡಿಲ್ಲ. ಇದು ಒಂದು ವಿಶಿಷ್ಟ ಲಕ್ಷಣವೆಂದು ಗುರುತಿಸಲ್ಪಡುತ್ತದೆ. ಸಾಮಾನ್ಯವಾಗಿ ಮಸೀದಿಯ ಮರ‍್ಹಾಬ್ ಗೋಡೆಗಳು ಖಿಬ್ಲಾ’ಗೋಡೆಗಳಿಂದ ಮುಂಚಾಚಿಕೊಂಡಂತೆ ನಿರ್ಮಿಸುವ ಸಂಪ್ರದಾಯವನ್ನು ಕಾಣುತ್ತೇವೆ. ಆದರೆ ಇಲ್ಲಿ ಅದರ ಅನುಪಸ್ಥಿತಿಯನ್ನು ಕಾಣುತ್ತೇವೆ. ಜುಮ್ಮಾ ಮಸೀದಿಗಳಲ್ಲಿ ಇಮಾಮ್‌ರು ನಿಲ್ಲುವುದಕ್ಕೆ ಮಿನ್ಬಾರ್ (ಅಟ್ಟಣಿಗೆ) ನಿರ್ಮಿಸುವುದು ಸರ್ವೇಸಾಮಾನ್ಯ. ಆದರೆ ಅದರ ಅನುಪಸ್ಥಿತಿ ಇಲ್ಲಿ ಕಾಣುತ್ತೇವೆ. ಮಸೀದಿಯ ಮೇಲ್ಛಾವಣಿಯು ಸಮತ್ತಾಗಿರದೆ ಚಿಕ್ಕ ಮತ್ತು ದೊಡ್ಡ ಗಾತ್ರಗಳ ಗುಮ್ಮಟಗಳಿಂದ ನಿರ್ಮಿಸಲಾಗಿದೆ. ಇವು ಮಸೀದಿಯ ಮಧ್ಯದ ಪ್ರತಿ ಅಂಕಣಕ್ಕೆ ನಿರ್ಮಿಸಲಾಗಿದ್ದು ಒಟ್ಟು 63 ಗುಮ್ಮಟಗಳನ್ನು ಸಾಲಾಗಿ ನಿರ್ಮಿಸಲಾಗಿದೆ. ಪ್ರಾರ್ಥನಾ ಅಂಕಣವು ದೊಡ್ಡದಾಗಿದ್ದು ಅದಕ್ಕೆ ಪರ್ಶಿಯನ್ ಗುಮ್ಮಟಗಳ ಶೈಲಿಯ ದೊಡ್ಡ ಗುಮ್ಮಟವಿದೆ. ಈ ಗುಮ್ಮಟವು ಸುಮಾರು 63 ಅಡಿಗಳಷ್ಟು ಸುತ್ತಳತೆಯಿಂದ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಈ ಮಸೀದಿಯು ಹಲವು ಹೊಸ ಶೈಲಿಗಳನ್ನು ಮತ್ತು ವಿಸ್ಮಯಗಳನ್ನು ಪರಿಚಯಿಸಿದೆ. ದಖ್ಖನ್‌ದ ವiಹ್ಮದೀಯ ವಾಸ್ತುಶಿಲ್ಪ ಅಧ್ಯಯನಕ್ಕೆ ಅಪರೂಪದ ಮತ್ತು ಉಲ್ಲೇಖನಾರ್ಹವಾದ ವಾಸ್ತುಶಿಲ್ಪದ ಸ್ಮಾರಕ ಇದಾಗಿದೆ. ಇದರ ನಿರ್ಮಾಣ ಕಾಲದ ಬಗ್ಗೆಯು ಹಲವು ಚರ್ಚೆಗಳು ನಡೆದಿವೆ. ಟರ್ಕಿ ದೇಶದ ಖ಼ಜ್ವೀನಿ ಪ್ರಾಂತ್ಯದ ಮಂಘೂರ್ ಅಲ ಎಂಬ ಮಗನಾದ ರಫಿ ಎಂಬ ವಾಸ್ತುಶಿಲ್ಪಿಯು ಕಟ್ಟಿದನು ಎಂದು ಇಲ್ಲಿಯ ಮುಖ್ಯ ದ್ವಾರದ ಎಡಬದಿಯ ಗೋಡೆಯ ಮೇಲಿನ ಕ್ರಿ.ಶ. 1367ರ ಅವಧಿಯ ಅರೆಬಿಕ್ ಶಾಸನವನ್ನು ಉಲ್ಲೇಖಿಸುತ್ತದೆ. ಆದರೆ ದೊರೆತ ಆಧಾರಗಳಿಂದ ತಿಳಿದುಬರುವ ಮಾಹಿತಿ ಎಂದರೆ ಈ ಶಾಸನವು ಮೂಲತಃ ಈ ಜುಮ್ಮಾ ಮಸೀದಿಗೆ ಸೇರಿದ ಶಾಸನವಲ್ಲ, ಹತ್ತಿರದಲ್ಲಿ ದೊರೆತ ಶಾಸನದ ಶಿಲಾಫಲಕವನ್ನು ಮಸೀದಿಯ ಜಿರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಮಸೀದಿಯ ಮುಖ್ಯದ್ವಾರದ ಗೋಡಯಲ್ಲಿ ಸೇರಿಸಿ ಕಟ್ಟಿದ್ದಾರೆ ಎಂದು ವಿದ್ವಾಂಸರ ಅಭಿಪ್ರಾಯ. ಇದಕ್ಕೆ ಪೂರಕವೆಂಬಂತೆ ವಿದ್ವಾಂಸರಾದ ಜೆಡ್.ಎ. ದೇಸಾಯಿ ಅವರು ಪರ್ಶಿಯಾ ಶೈಲಿಯ ಪ್ರಭಾವ ಗುರುತಿಸುತ್ತಾ, ಇದರ ನಿರ್ಮಾಣವು ತಾಜುದ್ಧೀನ್ ಫಿರೋಜ್ ಶಹಾ ಆಳ್ವಿಕೆಯ ಸು.1400ರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇತ್ತೀಚಿನ ವಿದ್ವಾಂಸರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಜಾರಗಳು: ಬಹಮನಿ ಕೋಟೆಯ ವಿಶೇಷತೆಯೆಂದರೆ ಬಜಾರಗಳು. ಕೋಟೆಯ ಒಳಸುತ್ತಿನ ಗೋಡೆಯಲ್ಲಿರುವ ಪಶ್ಚಿಮ ದ್ವಾರಕ್ಕೆ ಹೊಂದಿಕೊಂಡಂತೆ ಎರಡು ಸಾಲುಗಳಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ. 570 ಅಡಿ ಉದ್ದ ಹಾಗೂ 60ಅಡಿ ಅಗಲವಾದ ಈ ಬಜಾರ್ ಬೀದಿ. ಒಟ್ಟು 90 ಮಳಿಗೆಗಳನ್ನು ಈ ಎರಡೂ ಸಾಲುಗಳ ಬಜಾರಿನಲ್ಲಿ ನಿರ್ಮಿಸಲಾಗಿದೆ. ಪ್ರತಿ ಮಳಿಗೆಗಳೂ ಕಮಾನಿಕಾರದ ದ್ವಾರ ಮತ್ತು ಪಿರಾಮಿಡ್ ವಿನ್ಯಾಸದ ಮೇಲ್ಛಾವಣಿಗಳಿಂದ ಕೂಡಿವೆ. ಇವುಗಳ ರಚನೆಯ ಶೈಲಿಯನ್ನು ಬಹಮನಿ ಕಾಲದ ವಾಸ್ತು ಶೈಲಿಯೆಂದು ಗುರುತಿಸಬಹುದು. ಬಜಾರದ ಬಲಬದಿಯ ಸಾಲಿನ ಪಕ್ಕದಲ್ಲಿ ಚಿಕ್ಕ ಮಸೀದಿಯನ್ನು ನಿರ್ಮಿಸಲಾಗಿದೆ. ಬಜಾರದ ವರ್ತಕರ ಪ್ರಾರ್ಥನೆಗೆ ಅನುಕೂಲವಾಗಲೆಂದು ಈ ಮಸೀದಿಯನ್ನು ನಿರ್ಮಿಸಲಾಗಿತ್ತು. ದ್ವಾರಕ್ಕೆ ಹೊಂದಿಕೊಂಡಂತೆ ಕೋಟೆಯ ಒಳಾಂಗಣಕ್ಕೆ ಪ್ರವೇಶಿಸುವಂತೆ ನಿರ್ಮಿಸಲಾದ ಈ ಬಜಾರವು ಪ್ರಾಯಶಃ ದಖ್ಖನ್ ಪ್ರದೇಶದಲ್ಲಿಯೇ ಪ್ರಥಮ ಸುಸಜ್ಜಿತ ಬಜಾರ ಆಗಿತ್ತು ಎಂದು ಹೇಳಲಾಗುತ್ತದೆ. ಈ ಬಜಾರವು ಕೋಟೆಯ ಒಳಗೆ ನೆಲೆಸಿದ್ದ ಸುಲ್ತಾನರು ಮತ್ತು ಅವರ ಪರಿವಾರದವರಿಗೆ ಮತ್ತು ಆಡಳಿತಾಧಿಕಾರಿಗಳಿಗೆ, ಸೇನೆಗಳ ಮತ್ತು ಪರಿಚಾರಕರಿಗೆ ಮೀಸಲಾಗಿತ್ತು ಎಂದು ತೋರುತ್ತದೆ. ಕೋಟೆಯ ನಿವಾಸಿಗಳಿಗೆ ಅನುಗುಣವಾಗಿ ಆಭರಣಗಳು, ಬೆಲೆಬಾಳುವ ವಸ್ತುಗಳು, ಸುಗಂಧ ದ್ರವ್ಯಗಳು, ಟರ್ಕಿಸ್ಥಾನ, ಪರ್ಶಿಯಾ ದೇಶಗಳ ಉಡುಪುಗಳು, ಆಯುಧಗಳು, ಇತ್ಯಾದಿಗಳನ್ನು ಈ ಬಜಾರದಲ್ಲಿ ಮಾರಲಾಗುತ್ತಿತ್ತು. ಬಹಮನಿಯವರ ಇನ್ನೊಂದು ನಗರವಾದ ಫಿರೋಜಾಬಾದಿನ ಬಜಾರಗಳನ್ನು ಇದು ಹೋಲುತ್ತಿದ್ದು, ಬಹಮನಿಯರ ನಿರ್ಮಾಣವೆಂದು ಗುರುತಿಸಬಹುದು.

ಎರಡು ಪ್ರತ್ಯೇಕ ವಲಯಗಳ ನಗರ :

ಬಹಮನಿ ಕಾಲದಲ್ಲಿ ಬೆಳೆದ ಕಲಬುರ್ಗಿ ನಗರವು ಹಲವು ವೈಶಿಷ್ಟ್ಯತೆಗಳಿಂದ ಕೂಡಿತ್ತು. ಸುಲ್ತಾನರಿಗಾಗಿ ಕೋಟೆ ನಿರ್ಮಿಸಲಾಗಿತ್ತಾದರೂ ನಾಗರಿಕರಿಗೆ ಕೋಟೆಯ ಹೊರಭಾಗದ ಮೈದಾನದಂತಹ ಪ್ರದೇಶದಲ್ಲಿ ನಗರವನ್ನು ನೆಲೆಗೊಳಿಸಲಾಗಿತ್ತು. ಈ ನಗರವು ಎರಡು ಭಾಗಗಳಾಗಿ ಕೋಟೆಯ ಉತ್ತರ [ಶಹಾ-ಬಜಾರ ಪಟ್ಟಣ] ಮತ್ತು ಪೂರ್ವ ದಿಕ್ಕುಗಳಲ್ಲಿ [ಫಿರೋಜ ಶಹಾ ರೂಪಿಸಿದ ಪಟ್ಟಣ] ಪ್ರತ್ಯೇಕವಾಗಿ ನಿರ್ಮಾಣಗೊಂಡಿದ್ದವು. ಈ ಎರಡು ಪ್ರತ್ಯೇಕ ಭಾಗಗಳು ಸೂಫಿ ಸಂತರಾದ ಜುನೈದಿ ಮತ್ತು ಬಂದೇ ನವಾಜ್ ದರ್ಗಾಗಳನ್ನು ಕೇಂದ್ರಕೃತವಾಗಿ ರಚನೆಯಾಗಿದ್ದವು. ಈ ಎರಡು ಪ್ರತ್ಯೇಕವಾದ ವಲಯಗಳಾಗಿದ್ದರೂ ನಗರದ ಅವಿಭಾಜ್ಯ ಅಂಗಗಳಾಗಿದ್ದವು.

 

 

ಗಣ್ಯರ ವಾಸದ ನೆಲೆ ಶಹಾ-ಬಜಾರ ಪಟ್ಟಣ [ಸೂಫಿ ಸಂತ ಜುನೈದಿ ದರ್ಗಾ ಕೇಂದ್ರಿತ] : ಬಹಮನಿ ರಾಜ್ಯ ಸ್ಥಾಪನೆಗೆ ಮುಂಚೆ ಇದ್ದ ಕಲಂಬುರಗೆ ಪಟ್ಟಣವು ಈಗಿನ ಆಳಂದ ನಾಕಾದಿಂದ ಶಹಾ-ಬಜಾರದ ಮಲಂಗ್ ಹೋಟೆಲ್ ವರೆಗೆ ಹರಡಿಕೊಂಡಿತ್ತು. ಹಳೆಯ ಈ ಪಟ್ಟಣವು ಕೋಟೆಯ ಉತ್ತರದ ದಿಕ್ಕಿಗೆ ಇದ್ದ ಹಳೆಯ ಪಟ್ಟಣವಾಗಿತ್ತು ಹಾಗೂ ಅತಿ ಹತ್ತಿರದ ಪಟ್ಟಣವೆನಿಸಿತ್ತು. ಬಹಮನಿ ಸುಲ್ತಾನರು ಈ ಪಟ್ಟಣವನ್ನು ವಿಸ್ತರಿಸಿ ದೊಡ್ಡ ಪಟ್ಟಣವನ್ನಾಗಿ ಮಾಡಿದರು. ಶಹಾ-ಬಜಾರ ಎಂದು ಕರೆಯುವ ಪ್ರದೇಶವು ಬಹಮನಿ ಸುಲ್ತಾನರು ನಿರ್ಮಿಸಿದ ಪಟ್ಟಣವಾಗಿತ್ತು. ಇದು ಆಯತಾಕಾರದ ವಿನ್ಯಾಸವನ್ನು ಹೊಂದಿತ್ತು. ಸುಮಾರು 1360ರ ಅವಧಿಯಲ್ಲಿ ಬಹಮನಿಯರು ಇಲ್ಲಿಯ ಹಳೆಯ ಊರನ್ನು ಒಂದು ವಿಸ್ತಾರವಾದ (ಶಹಾ-ಬಜಾರ) ಪಟ್ಟಣವನ್ನಾಗಿ ವಿಸ್ತರಿಸಲು ಆರಂಭಿಸಿದರು. ಶಹಾ-ಬಜಾರದ ಉತ್ತರದ ಅಂಚಿನಲ್ಲಿ 1360ರ ಅವಧಿಯಲ್ಲಿ ನಿರ್ಮಿಸಿದ ಜುಮ್ಮಾ ಮಸೀದಿ ಇದ್ದು ಇಲ್ಲಿ ವಾಸಿಸುತ್ತಿದ್ದ ನಾಗರಿಕರಿಗಾಗಿ ನಿರ್ಮಿಸಲಾಗಿತ್ತು. ಶಹಾ-ಬಜಾರ ಪಟ್ಟಣವು ಆಸ್ಥಾನದ ಮತ್ತು ಸುಲ್ತಾನರ ಆಡಳಿತದಲ್ಲಿದ್ದ ಉನ್ನತ ವರ್ಗದ ಅಧಿಕಾರಿಗಳಿಗೆ ಮತ್ತು ಸುಲ್ತಾನರ ಆಪ್ತರಿಗೆ ವಾಸಿಸುವ ವಿಶೇಷ ಪಟ್ಟಣವಾಗಿತ್ತು ಎಂದು ತೋರುತ್ತದೆ. ಇವರಿಗಾಗಿ ಪ್ರತ್ಯೇಕವಾದ ಜುಮ್ಮಾ ಮಸೀದಿಯನ್ನು ಕೂಡ ನಿರ್ಮಿಸಲಾಗಿತ್ತು. ಶಹಾ ಬಜಾರದ ಮೂಲಕವೇ ಸುಲ್ತಾನರು ತಾಜ್-ಸುಲ್ತಾನಾಪುರ ಉಪನಗರಕ್ಕೆ ಅಥವಾ ಬೀದರ ನಗರಕ್ಕೆ ಪ್ರಯಾಣಿಸುತ್ತಿದ್ದರು. ಶಹಾ-ಬಜಾರ ಹೆಸರೇ ಸೂಚಿಸುವಂತೆ ಇದು ಸುಲ್ತಾನ(ಶಾಹಿ)ರ ಆಪ್ತ ವಲಯವಾಗಿತ್ತು. ಇದು ಇಂದಿನ ಆಳಂದ-ನಾಕಾದಿಂದ ಪ್ರಾರಂಭಗೊಂಡು ಮಲಂಗ್-ಹೋಟೆಲ್ ಒಳಗೊಂಡು ಉತ್ತರದ ಅಂಚಿನಲ್ಲಿರುವ ಜುಮ್ಮಾ-ಮಸೀದಿಯವರೆಗೆ ಹರಡಿಕೊಂಡಿತ್ತು. ಇದಕ್ಕೆ ಪೂರಕವೆಂಬಂತೆ ಬಹಮನಿ ಆಳ್ವ್ವಿಕೆಯ ಆರಂಭದ ದಶಕಗಳಲ್ಲಿಯೇ ನಗರದಲ್ಲಿ ನೆಲೆ ನಿಂತ ಸೂಫಿ ಸಂತ ಸಿರಾಜುದ್ಧೀನ್ ಜುನೈದಿಯ ಸ್ಥಳವು ಕೂಡ ಶಹಾ-ಬಜಾರ ಬೆಳೆಯಲು ಕಾರಣವಾಯಿತು.

ಜುನೈದಿ ದರ್ಗಾ : ಬಹಮನಿ ಸಂಸ್ಥಾಪಕ ಅಲ್ಲಾವುದ್ದೀನ್ ಹಸನ್ ಶಹಾ ಸುಲ್ತಾನನ ಧಾರ್ಮಿಕ ಗುರು ಆಗಿದ್ದ ಸೂಫಿ ಸಂತ ಸಿರಾಜುದ್ದೀನ್ ಜುನೈದಿ ದೇವಗಿರಿಯಲ್ಲಿ ನೆಲೆಸಿದ್ದನು. ಅಲ್ಲಿಂದ ಕೆಲ ಕಾಲ ಮೀರಜ್ ನಗರದಲ್ಲಿ ನೆಲೆಸಿದ್ದನೆಂದು ತಿಳಿದುಬರುತ್ತದೆ. ಬಹಮನಿ ಸುಲ್ತಾನ ಮೊದಲ ಮುಹ್ಮದ ಶಹಾ ಹೊಸದಾಗಿ ನಿರ್ಮಿಸಿದ ರಾಜ್ಯದ ರಾಜಧಾನಿಗೆ ಬಂದು ನೆಲೆಸುವಂತೆ ಜುನೈದಿಗೆ ಆಹ್ವಾನವನ್ನು ನೀಡುತ್ತಾನೆ. 1368ರಲ್ಲಿ ಸಿರಾಜುದ್ದೀನ್ ಜುನೈದಿ ತನ್ನ ಅಪಾರ ಅನುಯಾಯಿಗಳೊಂದಿಗೆ ಕಲಬುರ್ಗಿಗೆ ಆಗಮಿಸುತ್ತಾನೆ. ಬಹಮನಿ ಸುಲ್ತಾನ ಮುಹ್ಮದ ಶಹಾ ಸ್ವತಃ ನಗರದ ಪ್ರವೇಶ ದ್ವಾರದಲ್ಲಿ ಬಹಳ ಸಂಭ್ರಮದಿಂದ ಸಂತನನ್ನು ಸ್ವಾಗತಿಸಿದನೆಂದು ಫೆರಿಸ್ತಾ ಉಲ್ಲೇಖಿಸಿದ್ದಾನೆ. ಇದಕ್ಕೂ ಮೊದಲು ಸಂತನು ನೆಲೆಸುವ ಸ್ಥಳವನ್ನು ಗುರುತುಮಾಡಿ ಅಲ್ಲೊಂದು ಬಾವಿಯನ್ನು ನಿರ್ಮಿಸಿದನೆಂದು ಈ ದರ್ಗಾದ ಬಳಿಯ ಬಾವಿಯ ಗೋಡೆಯಲ್ಲಿರುವ 1367ರ ಪರ್ಶಿಯನ್ ಶಾಸನದಿಂದ ತಿಳಿದುಬರುತ್ತದೆ. ಸಂತನು ನೆಲೆಸಿದ ಸ್ಥಳವು ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವಾಗಿತ್ತು. ಸುಲ್ತಾನರಲ್ಲದೆ, ಊರಿನ ಗಣ್ಯರು ಮತ್ತು ನೆರೆಯ ರಾಜ್ಯಗಳ ಪ್ರಜೆಗಳು ಈ ಸೂಫಿ ಸಂತರ ಅನುಯಾಯಿಗಳಾಗಿದ್ದರು. ಈ ದರ್ಗಾದ ಹತ್ತಿರದಲ್ಲಿಯೇ ಅನೇಕ ಗಣ್ಯರ ಗೋರಿಗಳು ನಿರ್ಮಾಣವಾಗಿರುವುದನ್ನು ಇಂದಿಗೂ ಕಾಣಬಹುದು. ಈ ದರ್ಗಾದ ದಕ್ಷಿಣಕ್ಕೆ ಹಾಗೂ ಕೋಟೆಯ ಪಶ್ಚಿಮಕ್ಕೆ ಬಹಮನಿ ಸಂಸ್ಥಾಪಕ ಅಲ್ಲಾವುದ್ದೀನ್ ಶಹಾ ಮತ್ತು ಆರಂಭಿಕ ಸುಲ್ತಾನರ ಗೋರಿಗಳಿವೆ. ಇವುಗಳಿಗೆ ಹತ್ತಿರದಲ್ಲಿಯೇ ಹಳೆಯ ಈದ್ಗಾ ಮಸೀದಿ ಇತ್ತು. ಇದಕ್ಕೆ ಹೊಂದಿಕೊಂಡಂತೆ ಬೃಹತ್ ಗುಮ್ಮಟದ ಗೋರಿ ಇರುವುದು. ಇದನ್ನು ಚೋರ್-ಗುಂಬಜ್ ಎಂದು ಕರೆಯುತ್ತಾರೆ.

ಫಿರೋಜ ಶಹಾ ನಿರ್ಮಿಸಿದ ಪೂರ್ವದ ಪಟ್ಟಣ [ಸೂಫಿ ಸಂತ ಬಂದೇ ನವಾಜ ದರ್ಗಾ ಕೇಂದ್ರಿತ]: ದಕ್ಷಿಣ ಭಾರತದಲ್ಲಿ ಮೊದಲ ಮಹ್ಮದೀಯ ಸುಲ್ತಾನ ರಾಜ್ಯವಾಗಿದ್ದ ಬಹಮನಿ ರಾಜ್ಯವು ಬಹು ಬೇಗನೆ ವಿಸ್ತಾರಗೊಂಡಿತು. ಅಲ್ಲದೇ, ನೆರಯ ವಿಜಯನಗರ ಅರಸರೊಂದಿಗೆ ಪೈಪೋಟಿಗೆ ತೊಡಗಿದಂತೆ ರಾಜ್ಯದ ರಾಜಧಾನಿಯಾದ ಕಲಬುರ್ಗಿಯು 15ನೇ ಶತಮಾನದ ಆರಂಭದಲ್ಲಿ ತಿವ್ರಗತಿಯಲ್ಲಿ ಬೆಳೆಯಲಾರಂಭಿಸಿತು. ಮುಖ್ಯವಾಗಿ ಸುಲ್ತಾನ ತಾಜುದ್ಧೀನ್ ಫಿರೋಜ ಶಹಾನ ಕಾಲದಲ್ಲಿ ಕಲಬುರ್ಗಿ ನಗರವು ಮತ್ತುಷ್ಟು ವಿಸ್ತಾರ ಪಡೆಯಿತು. ಕೋಟೆಯ ಪೂರ್ವ ದಿಕ್ಕಿನ ಪ್ರದೇಶವನ್ನು ಬೆಳೆಸಲಾಯಿತು. ಪ್ರಕಾಶ-ಟಾಕೀಜ್‌ನಿಂದ ಪ್ರಾರಂಭಗೊಂಡು ಸಾತ್-ಗುಂಬಜ್ ಪ್ರದೇಶದವರೆಗೂ ವಿಶಾಲವಾದ ನಗರವನ್ನು ನೆಲೆಗೊಳಿಸಲಾಯಿತು. 15ನೇ ಶತಮಾನದ ಆರಂಭಿಕ ದಶಕದಲ್ಲಿ ನೆಲೆಗೊಳಿಸಿದ ಈ ನಗರವು ಈ ಮೊದಲಿನ ಶಹಾ-ಬಜಾರ ಪ್ರದೇಶದ ನಗರಗಿಂತಲೂ ಬಿನ್ನವಾಗಿತ್ತು. ಶಹಾ-ಬಜಾರ ನಗರವು ಸುಲ್ತಾನರ ಆಪ್ತರಿಗೆ ಮತ್ತು ಊರಿನ ಅತಿಗಣ್ಯ ವರ್ಗದವರನ್ನು ಉಳಿದ ನಗರ ನಿವಾಸಿಗರಿಂದ ಪ್ರತ್ಯೇಕಿಸುವಂತೆ ಹೊಸದಾದ ಪೂರ್ವದ ನಗರವನ್ನು ನಿರ್ಮಿಸಿ ಸಮಾಜದ ಇತರ ವರ್ಗದವನ್ನು ನೆಲೆಗೊಳಿಸಿದರೆಂದು ಕಾಣುತ್ತದೆ. ಸೂಫಿ ಸಂತರಾದ ಬಂದೇ ನವಾಜ್ ದರ್ಗಾ ಮತ್ತು ಮುಜಾಹಿದ ದರ್ಗಾಗಳು ಈ ವಲಯದಲ್ಲಿರುವ ಪ್ರಮುಖ ಪವಿತ್ರ ಸ್ಥಳಗಳಾಗಿದ್ದವು. ಈ ವಲಯದ ಪಟ್ಟಣವನ್ನು ನಾಲ್ಕು ವಿಭಾಗಗಳನ್ನಾಗಿ ನಾಲ್ಕು ಮುಖ್ಯ ರಸ್ತೆಗಳಿಂದ ವಿಂಗಡಿಸಲಾಗಿತ್ತು. ಈ ನಾಲ್ಕು ರಸ್ತೆಗಳು ನಗರದ ಮಧ್ಯಭಾಗವೆಸಿದ ಈಗಿನ ಗೀತಾ ಚೌಕ್ ಬಳಿ ಬಂದು ಸೇರುತ್ತಿದ್ದವು. ಗೀತಾ ಚೌಕನ್ನು ಈ ಹಿಂದೆ ಗುಲ್ಜಾರ್ ಹೌಝ್ ಎಂದು ಕರೆಯಲಾಗುತ್ತಿತ್ತು. ಈಗಿನ ಕಿರಾಣಾ ಬಜಾರ್, ಫೋರ್ಟ್ ರೋಡ್ ಮತ್ತು ಬಾಂಡೆ ಬಜಾರ್ ರಸ್ತೆಗಳು ಈ ಚೌಕದಲ್ಲಿ ಸೇರುತ್ತವೆ. ಬಹಮನಿ ಕಾಲದಲ್ಲಿಯೂ ಈ ರಸ್ತೆಗಳ ಎರಡು ಬದಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿತ್ತೆಂದು ಫಿಲೋನ್ ಅವರ ಅಭಿಪ್ರಾಯ. ಗೀತಾ ಚೌಕ್ ಎಂದು ಕರೆಯುವ ಈ ವೃತ್ತವು ಬಹಮನಿಯವರ ಕಾಲದಲ್ಲಿ ನಗರದ ಚೌಬಾರಾ ಅಥವಾ ನಾಲ್ಕು ರಸ್ತೆಗಳು ಸಂಧಿಸುವ ಸ್ಥಳವಾಗಿತ್ತು. ಈ ಸ್ಥಳದಲ್ಲಿ ಎರಡು ಅಂತಸ್ತಿನ ಕಮಾನುಗಳಿಂದ ಕೂಡದ ಕಟ್ಟಡವಿತ್ತು. ಇದು ಕೋಟೆಯ ಆಚೆಗೆ ಮತ್ತು ನಗರದ ಮಧ್ಯಭಾಗದಲ್ಲಿರುವ ನಾಲ್ಕು ದಿಕ್ಕುಗಳಲ್ಲಿ ಗೋಚರಿಸುವ ಬೃಹತ್ ಕಟ್ಟಡವಾಗಿತ್ತು. ಇದು ಬಹಮನಿಯರ ನಂತರ ಆಡಳಿತ ಮಾಡಿದ ಕುತುಬ್ ಶಾಹಿಗಳು ನಿರ್ಮಿಸಿದ ಹೈದರಾಬಾದ್ ನಗರದ ಚಾರ್‌ಮಿನಾರ್ ನಿರ್ಮಾಣಕ್ಕೆ ಮಾದರಿಯಾಗಿತ್ತು ಎಂದು ಫಿಲೋನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಪೂರ್ವದ ಪಟ್ಟಣವು ಭೀಮಾ ನದಿ ಕಣಿವೆಗೆ ಒಳಪಡುತ್ತಿದ್ದರಿಂದ ನೀರಿನ ಸೆಲೆಗಳು ಹೇರಳವಾಗಿ ದೊರೆಯುತ್ತವೆ. ಅಲ್ಲದೆ ಚಿಕ್ಕ ಕೆರೆಗಳು ಈ ವಲಯದಲ್ಲಿವೆ. ಹಪ್ತ ಗುಂಬಜ್ ಮತ್ತು ಬಂದೇ ನವಾಜ್ ದರ್ಗಾದ ನಡುವೆ ಒಂದು ದೊಡ್ಡ ಕೆರೆ ಇತ್ತು. ಈ ಭಾಗದಲ್ಲಿ ರೌಜಾ ಎಂದು ಕರೆಯುವ ಚಿಕ್ಕ ಕೈತೋಟಗಳಿಂದ ಕೂಡಿದ ಗೋರಿಗಳು ಇಲ್ಲಿವೆ. ಒಟ್ಟಿನಲ್ಲಿ ಪೂರ್ವ ವಲಯದ ಪಟ್ಟಣದಲ್ಲಿ ನೀರಿನ ಸೌಕರ್ಯ ದೊರೆಯುತ್ತಿದ್ದರಿಂದ ಪಟ್ಟಣವು ವಿಶಾಲವಾಗಿ ಬೆಳೆಯಲು ಸಾಧ್ಯವಾಯಿತು. ಬಹಮನಿ ರಾಜ್ಯದ ಪ್ರಮುಖ ದೊರೆಗಳ ಸಮಾಧಿಗಳು ಹಪ್ತ ಗುಂಬಜ್ [ಸಾತ್ ಗುಂಬಜ್] ಎಂದು ಕರೆಯುವ ವಿಶೇಷ ವೇದಿಕೆಯಲ್ಲಿ ನಿರ್ಮಿಸಿದ ಗೋರಿಗಳಾಗಿದ್ದವು. ಇಲ್ಲಿ ಸುಲ್ತಾನರಾದ ಅಲ್ಲಾವುದ್ದೀನ್ ಮುಜಾಹೀದ್ (1375-1378), ಘೀಯಾಸುದ್ದೀನ್ (1397), ಇಮ್ಮಡಿ ದಾವುದ್ ಶಹಾ (1397), ಯುವರಾಜ ಸಂಜಾರ್ ಹಾಗೂ ಹೆಸರಾಂತ ಸುಲ್ತಾನ ಫಿರೋಜ್ ಶಹಾ (1397-1422) ಅವರ ಗೋರಿಗಳಿವೆ.

ಉಪನಗರಗಳು : ದೇ ಅವಧಿಯಲ್ಲಿ ಉಪನಗರದ ಕಲ್ಪನೆಯು ಕಲಬುರ್ಗಿ ನಗರದ ರಚನೆಯಲ್ಲಿ ಕಂಡುಬರುತ್ತದೆ. ನಗರದ ಹೊರವಲಯಲ್ಲಿರುವ ಸುಲ್ತಾನಾಪುರ ಸ್ಥಳವು ಬಹಮನಿ ಸುಲ್ತಾನ ಫಿರೋಜ್ ಶಹಾನ ಕಾಲದಲ್ಲಿ ನಿರ್ಮಾಣವಾದ ಉಪನಗರ. ಬಹಮನಿ ಸುಲ್ತಾನರ ಆಳ್ವಕೆಯಲ್ಲಿ ಕಲಬುರ್ಗಿಯು ನಗರವಾಸಿಗರಿಗಾಗಿ ಎರಡು ನಗರಗಳು, ಸುಲ್ತಾನರಿಗೆ ಕೋಟೆ ಆವರಣ, ಸೂಫಿ ಸಂತರ ದರ್ಗಾಗಳು ಮತ್ತು ಉಪನಗರದಿಂದ ಕೂಡಿದ ವಿಶಿಷ್ಟವಾದ ನಗರವಾಗಿ ರೂಪಗೊಂಡಿತು. ಆದಿಲ ಶಾಹಿ ಸುಲ್ತಾನರು ಕೂಡ ಮುಖ್ಯವಾಗಿ ಇಮ್ಮಡಿ ಇಬ್ರಾಹಿಮ್ ಸುಲ್ತಾನರ ಕಾಲದಲ್ಲಿ ಕೋಟೆಯ ಪಶ್ಚಿಮಕ್ಕೆ ಹೀರಾಪುರ ಉಪನಗರನ್ನು ನಿರ್ಮಿಸಲಾಯಿತು. ಇಲ್ಲಿಯ ಕ್ರಿ.ಶ.1585ರ ಪರ್ಶಿಯನ್ ಶಾಸನವು ಇಬ್ರಾಹಿಮ್ ಆದಿಲ ಶಾಹ ಕಲಬುರ್ಗಿಯ ಬಂದೇ ನವಾಜ್ ಅವರ ದರ್ಗಾಕ್ಕೆ ಬೇಟಿ ನೀಡಿದ ಬಗ್ಗೆ ಮಾಹಿತಿ ನೀಡುತ್ತದೆ ಅಲ್ಲದೇ ಅದೇ ಸಮಯದಲ್ಲಿ ಹೀರಾಪುರವನ್ನು ನಿರ್ಮಿಸಿ ಅಲ್ಲಿ ದೊಡ್ಡದಾದ ಭಾವಿಯನ್ನು ಕಟ್ಟಿಸಿದನು ಎಂದು ಉಲ್ಲೇಖಿಸುತ್ತದೆ.

ಆದಿಲ ಶಾಹಿಗಳ ಸೇನಾ-ನೆಲೆ : ಬಹಮನಿ ಸುಲ್ತಾನರು ಅವನತಿ ಹೊಂದಿದ ನಂತರ ಬಿಜಾಪುರದ ಆದಿಲ ಶಾಹಿ ಸುಲ್ತಾನರ ಆದೀನಕ್ಕೆ ಒಳಪಟ್ಟ ನಂತರ ಕಲಬುರ್ಗಿಯು ಆ ರಾಜ್ಯದ ಸೇನಾ-ನೆಲೆಯ ಊರಾಗಿ ಬೆಳೆಸಲಾಯಿತು. ಅತ್ಯಂತ ಪ್ರಭಾವಿ ಸೂಫಿ ಸಂತರಾದ ಬಂದೇ ನವಾಜ್ ಮತ್ತು ಜುನೈದಿ ಅವರ ಪವಿತ್ರ ದರ್ಗಾಗಳು ಈ ನಗರದಲ್ಲಿದ್ದರಿಂದ ಸುಲ್ತಾನರು ಮತ್ತು ಅವರ ಪರಿವಾರದವರು ಅನುಯಾಯಿಗಳಾಗಿದ್ದರು. ಸುಲ್ತಾನರು ಮತ್ತು ಗಣ್ಯರು ಈ ದರ್ಗಾಗಳಿಗೆ ಕಾಣಿಕೆಗಳನ್ನು ನೀಡುವುದರ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಬೆಳೆಸಲಾರಂಭಿಸಿದರು. ಆದಿಲ ಶಾಹಿಗಳ ಕಾಲದಲ್ಲಿ ಮುಖ್ಯವಾಗಿ ಇಲ್ಲಿಯ ಕೋಟೆಯನ್ನು ಹಲವು ಹೊಸ ಬುರುಜುಗಳು, ಕೋಟೆ-ಗೋಡೆಗಳು ಮತ್ತು ದ್ವಾರಗಳನ್ನು ನಿರ್ಮಿಸಿ ಬದ್ರಪಡಿಸಿದರು. ಕ್ರಿ.ಶ. 1585ರ ಮೊಹರಮ್ ಹಬ್ಬದ ದಿನಗಳಲ್ಲಿ ಇಬ್ರಾಹಿಮ್ ಆದಿಲ ಶಹಾ ಸುಲ್ತಾನನು ಇಲ್ಲಿಯ ಬಂದೇ ನವಾಜ್ ಸಂತರ ದರ್ಗಾಕ್ಕೆ ಬೇಟಿ ನೀಡಿದ್ದರೆಂದು ಹೀರಾಪುರದಲ್ಲಿರುವ ಶಾಸನವು ಉಲ್ಲೇಖಿಸುತ್ತದೆ. ಸುಲ್ತಾನನ ತಾಯಿ ಹೀರಾಪುರದಲ್ಲಿ ಸುಂದರವಾದ ಭಾವಿಯನ್ನು ನಿರ್ಮಿಸಿದ ಬಗ್ಗೆಯು ಈ ಶಾಸನ ಉಲ್ಲೇಖಿಸುತ್ತದೆ. ಕಲಬುರ್ಗಿಯ ನಗರಕ್ಕೆ ಆದಿಲ ಶಾಹಿ ಸುಲ್ತಾನರ ಕಾಲದಲ್ಲಿ ಮತ್ತೊಂದು ಉಪನಗರವಾದ ಹೀರಾಪುರ ಹೊಸದಾಗಿ ಸೇರ್ಪಡೆಗೊಂಡಿತು. ಕ್ರಿ.ಶ.1656ರ ಆದಿಲ ಶಾಹಿ ಸುಲ್ತಾನ ಮುಹ್ಮದ ಶಹಾನ ಪರ್ಶಿಯನ್ ಶಾಸನ ಆದಿಲ ಶಾಹಿಗಳ ಕೈಕೊಂಡ ವಿವಿಧ ಕಾರ್ಯಗಳನ್ನು ದಾಖಲಿಸುತ್ತದೆ. ಸುಲ್ತಾನ ಮುಹ್ಮದ ಶಹಾನು ನುರುಲ್ಲಾ ಎಂಬ ಅಧಿಕಾರಿಯನ್ನು ಕಲಬುರ್ಗಿ ಪ್ರಾಂತ್ಯದ ಸರ್ಕಿಲ್ (ವಲಯ-ಸೂಪರಿಂಟೆಂಡೆಂಟು) ಆಗಿ ನೇಮಕ ಮಾಡಲಾಯಿತು. ಸುಲ್ತಾನನ ಆಜ್ಞೆಯ ಮೇರೆಗೆ ಅಹಸನಾಬಾದ ಎಂದು ಕರೆಯಲಾಗುತ್ತಿದ್ದ ಕಲಬುರ್ಗಿಯನ್ನು ವಿವಿಧ ಕಾಮಗಾರಿಗಳಿಂದ ಸುಂದರಗೊಳಿಸಿದನು ಎಂದು ಈ ಶಾಸನ ಉಲ್ಲೇಖಿಸುತ್ತದೆ. ಪ್ರಾಯಶಃ ಸುಲ್ತಾನ ಮುಹ್ಮದ ಶಹಾನ ಕಾಲದಲ್ಲಿ ಕೋಟೆ ಹಾಗೂ ನಗರದ ವಿವಿಧ ಪ್ರದೇಶಗಳನ್ನು ಬದ್ರಪಡಿಸುವುದರ ಜೊತೆಗೆ ನಗರದ ಬೆಳವಣಿಗೆಯನ್ನು ಕೈಕೊಳ್ಳಲಾಯಿತು ಎಂದು ಹೇಳಬಹುದು. ಈ ಮಧ್ಯೆ ಕಲಬುರ್ಗಿಯನ್ನು ಒಳಗೊಂಡ ಸಗರನಾಡನ್ನು ಸುರಪುರ ಸಂಸ್ಥಾನದ ಅರಸರಿಗೆ ಜಾಗೀರನ್ನಾಗಿ ಆದಿಲ ಶಾಹಿಗಳು ನೀಡಿದ್ದರು. ಸುರಪುರ ಅರಸರ ಆಳ್ವಿಕೆಗೆ ಕೆಲ ಕಾಲ ಒಳಪಟ್ಟಿತ್ತು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ.

ಅಸಫ್-ಜಾ/ನಿಜಾಮರ ಆಡಳಿತ ಕೇಂದ್ರ : ನಂತರ ಮೊಘಲ ಸುಲ್ತಾನರು ಔರಂಗಜೇಬನ ನೇತೃತ್ವದಲ್ಲಿ ದಖ್ಖನ್ ಪ್ರದೇಶ ಒಳಗೊಂಡಂತೆ ದಕ್ಷಿಣ ಭಾರತವನ್ನು ತಮ್ಮ ವಶಪಡಿಸಿಕೊಂಡರು. ಕ್ರಿ.ಶ.1726ರಲ್ಲಿ ಮೊಘಲರ ಆಡಳಿತದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯ ಸ್ಥಾಪಿಸಿದ ಅಸಫ್-ಜಾ ರಾಜ್ಯ ಅಥವಾ ಹೈದರಾಬಾದ ನಿಜಾಮ ರಾಜ್ಯವು ಕಲಬುರ್ಗಿ ಪ್ರದೇಶವನ್ನು ನಿಜಾಮ ರಾಜ್ಯಕ್ಕೆ ಒಳಪಟ್ಟಿತು. ರಾಜ್ಯದ ಆಡಳಿತ ಅನುಕೂಲಕ್ಕಾಗಿ ಕಲಬುರ್ಗಿಯನ್ನು ಒಂದು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಪ್ರಸಿದ್ಧ ಸೂಫಿ ಸಂತರ ನೆಲೆಯಾಗಿದ್ದ ಕಲಬುರ್ಗಿಯು ಅನೇಕರಿಗೆ ಆಕರ್ಷಣೆಯ ಕೇಂದ್ರವಾಗಿ ಮುಂದುವರೆಯಿತು. ಜೊತೆಗೆ ಅನೇಕ ಗಣ್ಯರು ದರ್ಗಾಗಳ ಪರಿಸರದಲ್ಲಿ ಹಲವಾರು ಭಾವಿಗಳನ್ನು ಕಟ್ಟಿಸಿದ್ದಾರೆ. ನಿಜಾಮ ಆಳ್ವಿಕೆಯ ಅನೇಕ ಶಾಸನಗಳು ಹಲವು ಬಾವಿಗಳನ್ನು ನಿರ್ಮಿಸಿದ ಉಲ್ಲೇಖಿಸುತ್ತವೆ. ಕೋಟೆಯ ಪಶ್ಚಿಮದ ದ್ವಾರದ ಗೋಡೆಯಲ್ಲಿರುವ ಕ್ರಿ.ಶ. 1805ರ ಪರ್ಶಿಯನ್ ಶಾಸನವು ನಿಜಾಮ ಕಾಲದಲ್ಲಿ ಕೈಕೊಂಡ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುತ್ತದೆ. ನುರುಲ್ಲಾ-ಇ-ಮುಲ್ಕ್ ಎಂಬ ಅಧಿಕಾರಿಯನ್ನು ಕಲಬುರ್ಗಿಯ ಆಡಳಿತಕ್ಕೆ ನೇಮಕ ಮಾಡಲಾಗಿತ್ತು. ಅಖ್ರಮ್ ಅಲಿ ಎಂಬ ವಾಸ್ತುಶಿಲ್ಪಿಯ ನೆರವಿನೊಂದಿಗೆ ಕೋಟೆಯನ್ನು ಬದ್ರಗೊಳಸಿದನು ಎಂಬ ಮಾಹಿತಿ ನೀಡುತ್ತದೆ. 19ನೇ ಶತಮಾನದಲ್ಲಿ ನಡೆದ ಔದ್ಯೋಗಿಕರಣ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ನಿಜಾಮ ರಾಜ್ಯವು ಕಾರ್ಖಾನೆಗಳನ್ನು ಸ್ಥಾಪಿಸುವುದರೊಂದಿಗೆ ಆಧುನಿಕ ನಗರಕ್ಕೆ ಕಲಬುರ್ಗಿಯು ತೆರೆದು ಕೊಂಡಿತು.

ಬಹಮನಿ ಆಳ್ವಿಕೆಯ ನಗರೀಕರಣ ವಿಧಾನ :

ಬಹಮನಿ ಸುಲ್ತಾನರ ಆಳ್ವಿಕೆಯೊಂದಿಗೆ ದಖ್ಖನ್ನಿನ ಮಧ್ಯಕಾಲೀನ ನಗರೀಕರಣ ಪ್ರಕ್ರಿಯೆಯಲ್ಲಿ ಹೊಸ ಮಜಲು ಆರಂಭಗೊಂಡಿತು. ಮಹ್ಮದೀಯ ಸಮಾಜವು ನಗರ ಕೇಂದ್ರಿತವಾಗಿತ್ತು. ಕೃಷಿಯೇತರ ಜೀವನ ಶೈಲಿ ಈ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿತ್ತು. ಸುಲ್ತಾನರು, ಸೇನಾಧಿಕಾರಿಗಳು, ವಿವಿಧ ಹುದ್ದೆಯ ಆಡಳಿತಾಧಿಕಾರಿಗಳು, ಸೈನಿಕರು, ಪರಿಚಾರಕರು, ವರ್ತಕರು, ಇತ್ಯಾದಿಗಳಿಂದ ಕೂಡಿದ ಸಮಾಜ ಅದಾಗಿತ್ತು. ಮಧ್ಯಕಾಲೀನ ಮಹ್ಮದೀಯ ಸಂಸ್ಕೃತಿಗಳ ಹಿನ್ನೆಲೆಯ ನಗರಗಳಾಗಿದ್ದ ಬಹಮನಿ ನಗರಗಳು ಕೆಲವು ಮುಖ್ಯ ಲಕ್ಷಣಗಳಿಂದ ಕೂಡಿದ್ದವು. ಅವುಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

• ಮಧ್ಯ ಏಶಿಯಾ ಮೂಲದ ಬಹಮನಿ ಸುಲ್ತಾನರು ನಗರಗಳನ್ನು ನಿರ್ಮಿಸಲು ಮೈದಾನದಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವ ಹಿನ್ನಲೆಯಾಗಿತ್ತು. ರಕ್ಷಣೆಗೆ ಆಧ್ಯತೆ ಇದ್ದರೂ ಹಲವು ನಾಗರಿಕ ಸೌಲಭ್ಯಗಳನ್ನು ಒದಗಿಸುವ ನಗರಗಳನ್ನು ನಿರ್ಮಿಸುವ ಸಂಪ್ರದಾಯವನ್ನು ಬಹಮನಿ ಕಾಲದ ನಗರಗಳ ನಿರ್ಮಾಣಗಳಲ್ಲಿ ಕಾಣುತ್ತೇವೆ. ಇವು ವಿಶಾಲವಾಗಿ ಹರಡಿಕೊಂಡಿದ್ದವು. ನಗರವನ್ನು ಮುಖ್ಯ ಮತ್ತು ಅಡ್ಡ ರಸ್ತೆಗಳಿಂದ ವಿಭಜಿಸಲಾಗುತ್ತಿತ್ತು. ಸಮಾಜದ ವಿವಿಧ ವರ್ಗದ ಸಮುದಾಯಗಳು ಇಲ್ಲಿ ನೆಲೆಯೂರಲು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಕಲಬುರ್ಗಿ ನಗರವು ಇದಕ್ಕೆ ಉತ್ತಮ ಉದಾಹರಣೆ.

• ಸಾಮಾನ್ಯವಾಗಿ ಇವರ ನಗರಗಳು ಭದ್ರವಾದ ಕೋಟೆಗಳಿಂದ ಕೂಡಿರುತ್ತಿದ್ದವು. ಆಳುವ ವರ್ಗದ ಸುಲ್ತಾನರು ಮತ್ತು ನೆಲೆಸಿದ ನಿವಾಸಿಗಳ ನಡುವಿನ ಸಂಬAಧಗಳನ್ನು ಆಧರಿಸಿ ನಗರಗಳನ್ನು ಯೋಜಿಸಲಾಗುತ್ತಿತ್ತು. ಸುಲ್ತಾನರ ರಕ್ಷಣೆಗಾಗಿ ಪ್ರತ್ಯೇಕ ಕೋಟೆ ನಿರ್ಮಿಸುವದು ಅಥವಾ ಸುಲ್ತಾನರು ಮತ್ತು ಅಧಿಕಾರಿ ವರ್ಗ ಹಾಗೂ ನಾಗರಿಕರು ಒಟ್ಟಿಗೆ ಒಂದೇ ಕೋಟೆಯೊಳಗೆ ವಾಸಿಸುವ ಸಂಪ್ರದಾಯ ಇದ್ದವು. ಕಲಬುರ್ಗಿ ಮತ್ತು ಬೀದರ್ ನಗರಗಳಲ್ಲಿ ಸುಲ್ತಾನರಿಗೆ ಪ್ರತ್ಯೇಕ ಕೋಟೆಯನ್ನು ನಿರ್ಮಿಸಿದ್ದರೆ; ಫಿರೋಜಾಬಾದ್, ಸಗರ, ಬಿಜಾಪುರ ನಗರಗಳು ಕೋಟೆಯುಕ್ತ ನಗರಗಳಾಗಿದ್ದವು.

• ನಗರದ ಕೇಂದ್ರ ಸ್ಥಾನದಲ್ಲಿದ್ದ ಜುಮ್ಮಾ ಮಸೀದಿಯು ಬಹುಮುಖ್ಯ ಲಕ್ಷಣವಾಗಿತ್ತು. ಬಡವ ಮತ್ತು ಬಲ್ಲಿದರೆಲ್ಲರೂ ಸರಿಸಮಾನವಾಗಿ ಒಟ್ಟಿಗೆ ಸೇರಿ ಪ್ರಾರ್ಥನೆ ಮಾಡುವುದು ಧರ್ಮದ ಕರ್ತವ್ಯವಾಗಿತ್ತು. ಪ್ರತಿ ಶುಕ್ರವಾರದ ಪ್ರಾರ್ಥನೆಗೆ ಸುಲ್ತಾನರು ಅಥವಾ ಗಣ್ಯರು ಕೂಡ ನಗರವಾಸಿಗಳೊಂದಿಗೆ ಒಟ್ಟಿಗೆ ಪಾಲ್ಗೊಳ್ಳುವುದು ಸಂಪ್ರದಾಯವಾಗಿತ್ತು.

• ಜುಮ್ಮಾ ಮಸೀದಿಗಳಲ್ಲದೆ ದಿನನಿತ್ಯದ ಪ್ರಾರ್ಥನೆಗಳಿಗೆ ಪ್ರತಿ ಬಡಾವಣೆಯಲ್ಲಿಯೂ ಪ್ರತ್ಯೇಕವಾದ ಮಸೀದಿಗಳನ್ನೂ ನಿರ್ಮಿಸಲಾಗುತ್ತಿತ್ತು. ಇವುಗಳ ವಿಸ್ತಾರಗಳು ಆಯಾ ಬಡಾವಣೆಯ ವಿಸ್ತಾರಕ್ಕೆ ಅನುಗುಣವಾಗಿರುತ್ತಿದ್ದವು.

• ಮಸೀದಿಯ ಮುಂಭಾಗ ಅಥವಾ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಎರಡು ಸಾಲುಗಳ ಮಳಿಗೆಗಳಿಂದ ಕೂಡಿದ ಬಜಾರ ನಿರ್ಮಿಸಲಾಗುತ್ತಿತ್ತು. ಮಹ್ಮದೀಯ ನಗರಗಳು ಮೂಲತಃ ವಾಣಿಜ್ಯ ನಗರಗಳಾಗಿರುತ್ತಿದ್ದವು. ದೇಶ ವಿದೇಶಗಳ ವಸ್ತುಗಳು, ಆಭರಣಗಳು, ಸುಗಂಧ ದ್ರವ್ಯಗಳು, ಹಾಸುಗಂಬಳಿಗಳು, ಕಲಾ ಸಾಮಗ್ರಿಗಳು, ಲೋಹದ ಆಯುಧಗಳು, ಇತ್ಯಾದಿಗಳು ಈ ಬಜಾರದಲ್ಲಿ ಮಾರಾಟವಾಗುತ್ತಿದ್ದವು.

• ಹಮಾಮ್‌ಗಳು ಅಥವಾ ಹಬೆ ಸ್ನಾನಗೃಹಗಳು ಮಹ್ಮದೀಯ ನಗರಗಳ ನಿರ್ಮಾಣಗಳಲ್ಲಿ ಕಂಡು ಬರುವ ಮತ್ತೊಂದು ಪ್ರಮುಖ ಲಕ್ಷಣ. ಫಿರೋಜಾಬಾದ್ ನಗರದಲ್ಲಿ ಹಮಾಮ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಇದು ಕಲಬುರ್ಗಿಯ ಕೋಟೆಯಲ್ಲಿ ದೊರೆತಿರುವ ಮಾಹಿತಿ ಇಲ್ಲ.

• ಮಹ್ಮದೀಯರ ನಗರಗಳ ನಿರ್ಮಾಣಗಳಲ್ಲಿ ಧಾರ್ಮಿಕ ಮುಖಂಡರು ಅಥವಾ ಸೂಫಿ ಸಂತರ ಗಾಢ ಪ್ರಭಾವವನ್ನು ಕಾಣುತ್ತೇವೆ. ಪವಿತ್ರ ಕ್ಷೇತ್ರಗಳೆಂದು ದರ್ಗಾಗಳನ್ನು ಪರಿಗಣಿಸಲಾಗುತ್ತಿತ್ತು. ದರ್ಗಾಗಳನ್ನು ಕೇಂದ್ರವಾಗಿ ಮಾಡಿಕೊಂಡು ನಗರಗಳು ನಿರ್ಮಾಣವಾಗುತ್ತಿದ್ದವು. ಸೂಫಿ ಸಂತರ ದರ್ಗಾಗಳ ಪರಿಧಿಯಲ್ಲಿ ಅವರ ಅನುಯಾಯಿಗಳ ಗೋರಿಗಳನ್ನು ನಿರ್ಮಿಸುವುದು ಸಂಪ್ರದಾಯವಾಗಿತ್ತು. ಕಲಬುರ್ಗಿ ನಗರದ ರಚನೆಯಲ್ಲಿ ಸೂಫಿ ಸಂತರ ಪಾತ್ರ ಮತ್ತು ಅವರ ಪ್ರಭಾವವನ್ನು ಗುರುತಿಸಬಹುದು. ಅಸಂಖ್ಯಾತ ಗೋರಿಗಳನ್ನು ಊರಿನೆಲ್ಲೆಡೆ ಕಾಣಬಹುದು.

ವಿಜಯನಗರದ ಮೇಲೆ ಕಲಬುರ್ಗಿ ಕಲಾಶೈಲಿಯ ಪ್ರಭಾವ:

ದೇವಗಿರಿಯಿಂದ ಕಲಬುರ್ಗಿಗೆ ಬಹಮನಿಯರು ತಮ್ಮ ರಾಜಧಾನಿಯನ್ನು ವರ್ಗಾಯಿಸಿದ ಸಂದರ್ಭದಲ್ಲಿ ಕಲಬುರ್ಗಿಯು ಚಿಕ್ಕ ಪಟ್ಟಣವಾಗಿತ್ತು. ಇದನ್ನು ವಿಸ್ತರಿಸಿ ಬೃಹತ್ ನಗರವನ್ನಾಗಿ ಬೆಳೆಸಿದರು. ಮಣ್ಣಿನ ಕೋಟೆಯನ್ನು ಕಲ್ಲಿನಿಂದ ಭದ್ರಪಡಿಸಿದರು. ದೆಹಲಿ ಸುಲ್ತಾನರು, ಟರ್ಕಿಸ್ಥಾನ ಮತ್ತು ಪರ್ಶಿಯಾ ದೇಶಗಳ ಕಲೆಗಳ ಪ್ರಭಾವದೊಂದಿಗೆ ಬೆಳೆದ ಬಹಮನಿಯರ ಕಲೆ ಮತ್ತು ವಾಸ್ತುಶಿಲ್ಪವು ಕಲಬುರ್ಗಿಯಲ್ಲಿಯೇ ಒಂದು ಸ್ವತಂತ್ರ ಕಲೆಯಾಗಿ ಉದಯಗೊಂಡಿತು. ಬಹಮನಿ ಸುಲ್ತಾನರ ಕಾಲದಲ್ಲಿ ಬೆಳೆದ ಕಲೆಯು ದಖ್ಖನಿ ಕಲೆ ಎಂದು ನಾಡಿನ ಕಲಾ ಶೈಲಿಗಳಲ್ಲಿ ಗುರುತಿಸಿಕೊಂಡಿತು. ಈ ದಖ್ಖನಿ ಕಲೆಯು ದೆಹಲಿಯ ಸಾಮ್ರಾಜ್ಯಶಾಹಿ ಕಲೆಗಿಂತ ಭಿನ್ನವಾಗಿ ರೂಪಗೊಂಡಿತು. ಇವರ ಆಳ್ವಿಕೆಯೊಂದಿಗೆ ದಖ್ಖನ್ ಪ್ರದೇಶ ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಕಲೆ-ವಾಸ್ತುಶಿಲ್ಪ ಮುಂತಾದ ರಂಗಗಳಲ್ಲಿ ಹೊಸ ಆಯಾಮಳು ತೆರೆದೊಕೊಂಡವು. ಮುಖ್ಯವಾಗಿ ನಗರೀಕರಣ ಪ್ರಕ್ರಿಯೆಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಇವರು ಪರಿಚಯಿಸಿದರು. ಆಯಕಟ್ಟಿನ ಸ್ಥಳಗಳಲ್ಲಿ ವಾಣಿಜ್ಯ ಕೇಂದ್ರಗಳನ್ನು ಮತ್ತು ರಕ್ಷಣೆಗಾಗಿ ಕೋಟೆಯುಕ್ತ ಪಟ್ಟಣಗಳನ್ನು ನಿಯೋಜಿಸುವುದರೊಂದಿಗೆ ರಾಜ್ಯದ ರಕ್ಷಣೆ ಮತ್ತು ವಾಣಿಜ್ಯ ಸಂಪರ್ಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿದರು. ಕಲಬುರ್ಗಿ ಮತ್ತು ಫಿರೋಜಾಬಾದಗಳಲ್ಲಿ ಮೂಡಿಬಂದ ಬಹಮನಿಯವರ ವಾಸ್ತುಶಿಲ್ಪ ರಚನೆ ಮತ್ತು ಕಲಾಶೈಲಿಗಳು ಮಧ್ಯಕಾಲೀನ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಆಳಿದ ವಿಜಯನಗರ ಮತ್ತು ನಂತರದ ನಾಯಕ ಮನೆತನಗಳ ವಿವಿಧ ಅರಮನೆ, ರಕ್ಷಣಾ ವಾಸ್ತು ಇತ್ಯಾದಿಗಳ ಮೇಲೆ ಪ್ರಭಾವ ಬೀರಿದ್ದನ್ನು ಕಾಣುತ್ತೇವೆ. ಮುಖ್ಯವಾಗಿ ವಿಜಯನಗರದಲ್ಲಿ ರಚನೆಯಾದ ಅರಮನೆ ಆವರಣದ ಕಮಲ-ಮಹಲ್, ಗಜಶಾಲೆ, ರಾಣಿ-ಸ್ನಾನಗೃಹ, ಪಾನ್-ಸುಪಾರಿಯ ಕಮಾನಿನ ದ್ವಾರ, ತಲವಾರ್-ಗೇಟ್, ಇತ್ಯಾದಿಗಳ ರಚನೆಯಲ್ಲಿ ಕಮಾನುಗಳು, ಗುಮ್ಮಟಗಳು, ಗಾರೆಯಲ್ಲಿ ಮಾಡಿದ ವಿವಿಧ ವಿನ್ಯಾಸಗಳು ಬಹಮನಿ ಕಲಾಶೈಲಿಯ ಪ್ರಭಾವಗಳನ್ನು ಗುರುತಿಸಬಹುದಾಗಿದೆ.

ಕೊನೆಯ ಮಾತು : ಮುಕ್ಕಾಲು ಶತಮಾನ ಕಾಲ ಬಹಮನಿ ರಾಜ್ಯದ ರಾಜಧಾನಿ ನಗರವಾಗಿದ್ದ ಕಲಬುರ್ಗಿ ನಗರ ಸುಲ್ತಾನರ ಆಶಯದಂತೆ ಬೆಳೆದ ಮಧ್ಯಕಾಲೀನ ನಗರವಾಗಿತ್ತು. ಕೋಟೆ, ದರ್ಗಾಗಳು ಮತ್ತು ಎರಡು ಪ್ರತ್ಯೇಕ ವಲಯಗಳಾಗಿ ಪಟ್ಟಣಗಳು, ಬಜಾರಗಳು ಮತ್ತು ಉಪ-ನಗರ ಇಲ್ಲಿಯ ಮಧ್ಯಕಾಲೀನ ನಗರದ ಪ್ರಮುಖ ಅಂಗಗಳಾಗಿದ್ದವು. ಮೂರು ನದಿಗಳ ನಡುವಿನ ಆಯಕಟ್ಟಿನ ಸ್ಥಳವಾಗಿದ್ದ ಕಲಬುರ್ಗಿಯು ಬಹಮನಿ ಕಾಲದಲ್ಲಿ ರಾಜಕೀಯ, ವಾಣಿಜ್ಯ ಮತ್ತು ಧಾರ್ಮಿಕ ನಗರವಾಗಿ ಬೆಳೆಯಿತು. ದೇಶ ಮತ್ತು ವಿದೇಶಗಳ ಸೂಫಿ ಸಂತರು ಈ ನಗರವನ್ನು ಅರಸುತ್ತಾ ಬಂದರು. ಅವರೊಂದಿಗೆ ಬಹು ದೊಡ್ಡ ಪ್ರಮಾಣದ ಅವರ ಅನುಯಾಯಿಗಳು ಕೂಡ ಕಲಬುರ್ಗಿಗೆ ಬಂದು ನೆಲೆಸಿದರು. ಇದರಿಂದ ಕಲಬುರ್ಗಿ ದಕ್ಷಿಣ ಏಶಿಯಾದ ಪ್ರಮುಖ ನಗರವಾಗಿ ಗುರುತಿಸಲ್ಪಟ್ಟಿತ್ತು.

ಬಹಮನಿ ಸುಲ್ತಾನರು ದೇವಗಿರಿಯಲ್ಲಿ ಆಡಳಿತ ಪ್ರಾರಂಭಿಸಿದರೂ ದೇವಗಿರಿಯಂತಹ ಗಿರಿದುರ್ಗವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಳಲಿಲ್ಲ. ಆಯಕಟ್ಟಿನ ಪುರಾತನ ಪಟ್ಟಣವನ್ನು ಆಯ್ಕೆ ಮಾಡಿಕೊಂಡು ಅದನ್ನು ಒಂದು ಬೃಹತ್ ನಗರವನ್ನಾಗಿ ಮಾಡಿದರು. ಕೋಟೆಯ ಹೊರಭಾಗದಲ್ಲಿ ಎರಡು ಪ್ರತ್ಯೇಕ ಪಟ್ಟಣಗಳನ್ನು ನೆಲೆಗೊಳಿಸಿ ನಗರ ಪ್ರಕ್ರಿಯೆಯಲ್ಲಿ ಹೊಸ ಸಂಪ್ರದಾಯವನ್ನು ಸೃಷ್ಟಿ ಮಾಡಿದರು. ಕೋಟೆಯ ಉತ್ತರ ದಿಕ್ಕಿನಲ್ಲಿ ಈಗಾಗಲೇ ಇದ್ದ ಪ್ರಾಚೀನ ಪಟ್ಟಣವನ್ನು ಶಹಾಬಜಾರ ಪಟ್ಟಣವನ್ನಾಗಿ ವಿಸ್ತರಿಸಿ ಅಲ್ಲಿ ಜುಮ್ಮಾ ಮಸೀದಿ, ಸೂಫಿ ಸಂತರ ದರ್ಗಾಗಳನ್ನು ನಿರ್ಮಿಸಿ ಊರಿನಲ್ಲಿ ರಾಜ್ಯದ ಗಣ್ಯವರ್ಗದವರನ್ನು ನೆಲೆಗೊಳಿಸಿ ಅದನ್ನು ಸುಲ್ತಾನರ ಆಪ್ತ ವಲಯವನ್ನಾಗಿ ಮಾಡಿದರು. ಅದರಂತೆ ಕೋಟೆಯ ಪೂರ್ವ ದಿಕ್ಕಿನಲ್ಲಿ ಪ್ರತ್ಯೇಕ ಪಟ್ಟಣವನ್ನು ಯೋಜಿಸಿ, ಅಲ್ಲಿ ವಿವಿಧ ವರ್ಗದ ಜನರನ್ನು ನೆಲೆಗೊಳಿಸಿದರು. ಈ ಪಟ್ಟಣವನ್ನು ನಾಲ್ಕು ಮುಖ್ಯ ರಸ್ತೆಗಳಿಂದ ವಿಭಾಗಿಸಿ ಮಧ್ಯಭಾಗದಲ್ಲಿ (ಈಗೀನ ಗೀತಾ ಸರ್ಕಲ್‌ದಲ್ಲಿ) ನಾಲ್ಕು ದಿಕ್ಕುಗಳಿಗೂ ಕಾಣುವ ಕಮಾನುಗಳ ಎತ್ತರದ ಚೌಬಾರಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ಈ ಹೊಸ ಮಾದರಿಯು ಕುತುಬ್‌ಶಾಹಿ ಸುಲ್ತಾನರು ನಿರ್ಮಿಸಿದ ಹೈದರಾಬಾದಿನ ಚಾರ್‌ಮಿನಾರ್ ಕಟ್ಟಡಕ್ಕೆ ಮಾದರಿಯಾಯಿತು. ಅದರಂತೆ ರಾಜಧಾನಿಯ ಪಕ್ಕದಲ್ಲಿ ಅರಮನೆ ಮತ್ತು ಸೇನಾ ವ್ಯವಸ್ಥೆಗಳಿಂದ ಕೂಡಿದ ಉಪ-ನಗರ ನಿರ್ಮಾಣ ಬಹಮನಿಯರ ಹೊಸ ಸಂಪ್ರದಾಯವಾಗಿದೆ. ಕಲಬುರ್ಗಿ ನಗರದ ಉಪನಗರವಾಗಿ ತಾಜ್ ಸುಲ್ತಾನಾಪುರ ನಿರ್ಮಾಣ ಬಹಮನಿ ಸುಲ್ತಾನರ ಮಧ್ಯಕಾಲೀನ ನಗರ ವ್ಯವಸ್ಥೆಗೆ ನೀಡಿದ ಹೊಸ ಆಯಾಮವೆಂದು ಗುರುತಿಸಬಹುದು. ಇದು ಆದಿಲ್‌ಶಾಹಿ ಸುಲ್ತಾನರು ನಿರ್ಮಿಸಿದ ಬಿಜಾಪುರ ನಗರದ ನಿರ್ಮಾಣಕ್ಕೆ ಮಾದರಿಯಾಯಿತು ಎಂದು ಹೇಳಬಹುದು. ಬಿಜಾಪುರ ನಗರಕ್ಕೆ ಹೊಂದಿಕೊಂಡು ನಿರ್ಮಾಣವಾದ ನವರಸಪುರ ಉಪ-ನಗರಕ್ಕೆ ತಾಜ್-ಸುಲ್ತಾನಾಪುರ ಮಾದರಿಯಾಗಿತ್ತು ಎಂದು ಗುರುತಿಸಬಹುದು. ಇದು ಸುಲ್ತಾನರ ವಿಶ್ರಾಂತಿ ಧಾಮವಾಗಿತ್ತು. ಬಿಜಾಪುರದ ಆದಿಲ ಶಾಹಿಗಳ ಕಾಲದಲ್ಲಿ ನಗರದ ಕೋಟೆಯನ್ನು ಭದ್ರಪಡಿಸಲು ಹೆಚಿನ ಒತ್ತು ನೀಡಲಾಯಿತು. ಇವರ ಕಾಲದಲ್ಲಿ ಮತ್ತೊಂದು ಉಪನಗರ ಹೀರಾಪುರ ನೆಲೆಗೊಳಿಸಲಾಯಿತಾದರೂ ಊರಲ್ಲಿನ ದರ್ಗಾಗಳ ಬೆಳವಣಿಗೆಗಳಿಗೆ ಆಧ್ಯತೆ ನೀಡಿದಂತೆ ಕಾಣುತ್ತದೆ. ಅದರಂತ ಹೈದರಾಬಾದ ನಿಜಾಮನ ಆಳ್ವಿಕೆಯಲ್ಲಿಯೂ ನಗರದ ಬೆಳವಣಿಗೆಗೆ ಪ್ರಶಸ್ತö್ಯ ನೀಡಲಾಗಿಯಿತು. 20ನೇ ಶತಮಾನದ ಔಧ್ಯೋಗಿಕರಣದಿಂದಾಗಿ ಇದು ಆಧುನಿಕ ನಗರವಾಗಿ ಬೆಳೆಯಿತು.

 

ಪರಾಮರ್ಶಿತ ಗ್ರಂಥಗಳು :

ಬೋಡೆ, ರಿಯಾಜ್ ಅಹ್ಮದ್ ತಿಮ್ಮಾಪುರ 2018. ಪ್ರೇಮ, ಸೂಫಿ ಬಂದೇ ನವಾಜ್. ಬೆಂಗಳೂರು: ನ್ಯೂಸ್ ಪಸ್ಟ್ ಕಮ್ಯುನಿಕೇಷನ್ಸ್.

ದೇವು ಪತ್ತಾರ 2015. ಬಹಮನಿ ಸಾಮ್ರಾಜ್ಯ-ಪರ್ಷಿಯಾದ ಪ್ರಭಾವ ಪ್ರೇರಣೆ. ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಪಾಟೀಲ; ಚೆನ್ನಬಸಪ್ಪ 2000. ಕರ್ನಾಟಕ ಕೋಟೆಗಳು ಸಂಪುಟ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪಾಟೀಲ, ಎಂ. ಬಿ. (ಮುಖ್ಯ ಸಂಪಾದಕರು), 1997. ಕರ್ನಾಟಕದ ರಾಜ್ಯ ಗೆಜೆಟಿಯರ್- ಗುಲಬರ್ಗಾ ಜಿಲ್ಲೆ (ಕಲಬುರಗಿ ಜಿಲ್ಲೆ) [ಪರಿಷ್ಕೃತ ಆವೃತ್ತಿ]. ಬೆಂಗಳೂರು: ಕರ್ನಾಟಕ ಸರಕಾರ.

ಹನುಮಾಕ್ಷಿ ಗೋಗಿ (ಸಂ.) 1996. ಕಲಬುರ್ಗಿ ಜಿಲ್ಲೆಯ ಶಾಸನಗಳು. ಹುಬ್ಬಳ್ಳಿ: ಶಿವಚಂದ್ರ ಪ್ರಕಾಶನ.

Cole, H.H. 1881-82. “Note on Kalburgah Dated 25th June 1881 [Report on Monuments in the Territory of H.H. Nizam of Haiderabad, together with a Note on Works undertaken]” First Report of the Curator of Ancient Monuments in India for the Year 1881-82. Shimla: Government Central Branch Press. Pp. ccxiii-ccxv.

Cousens, H. 1900. Lists of Antiquarian Remains in His Highness the Nizam 's Territories, Calcutta : Archaeological Survey of India: 29-38,

Desai, Z.A. 1959-60. “Inscriptions from the State Museum Hyderabad” Epigraphia Indica- Arabic and Persian Suppliment. Pp.27-37.

Desai, Z.A. 1974. “Architecture- (i)The Bahamanis” in Sherwani, H.K. & P.M. Joshi (Eds.) Medieval History of Deccan (1295-1724). Vol.2. Hyderabad: Govt. of Andhra Pradesh. Pp. 229-252.

Epigraphia Indo-Moslemica (EIM) for the year 1982-83.

Fergusson, James 1910. History of Indian and Eastern Architecture Vol-1. Reprint:1997. Delhi: Low Price Publications.

Haig, T.W. 1907-12. “Inscriptions in Gulbarga” Epigrapgia Indo-Moslemica 1907-12. Pp. 1-10.

Howes, Jennifer 2010. Illustrating India- The Early Colonial Investigantions of Colin Mackenzie (1784-1821). New York: Oxford University Press.

Joshi, S.K. 1985. Defence Architecture in Early Karnataka. Delhi: Sandeep Prakashana.

Kadiri, A.A. 1964. “Inscriptions of the Bahamanis of Deccan” Epigraphia Indica- Arabic and Persian Suppliment. Pp.21-44.

King, J. S. 1899. `History of the Bahmani Dynasty. (Founded on the Burhän-I Ma, äsir )'. The Indian Antiquary, XXVIII. Pp.119-38; 141-155; 180-192; 209-219; 235-247; 277-292 & 305-323.

Klaus, Rotzer 2011; “Fortifications and Gunpoweder in the Deccan 1368 1687” in Sultans of South- Arts of India’s Deccan Courts, 1323-1687 (Eds. Navina Najat Haidar & Marika Sardar); [The Metropolitian Museum of Art Symposia], New York: Metropolitian Museum of Art. Pp. 204-217.

Merklinger, E.S. 1981. Indian Islamic Architecture- The Deccan 1347-1686. New Delhi: Oxford University Press.

Merklinger, E.S. 1986. 'Gulbarga' MARG Vol. XXXVII No.3. Islamic Heritage of Deccan.[Ed. by George Michell], Pp. 26-41.

Michell, George and Eaton Richard 1992. Firuzabad- Palace City of the Deccan. New Delhi: Oxford University Press.

Philon, Helen 2005. ‘‘Religious and Royal Architecture of the Early Bahamani Period (1347-1423).’’ Un-Published Ph.D. Thesis, School of Oriental and African Studies, Lond University.

Philon,Helen 2011. Gulabarga, Bidar and Bijapur. Deccan Heritage Foundation, Hyderabad.

Sri Sathyan; B.N. (Ch.Ed.) 1966. Mysore State Gazetteer – Gulbarga District. Bangalore: Govt. Press,

Sherwani, H.K. & P.M. Joshi (Eds.) 1973-74. Medieval History of Deccan (1295-1724). 2 Vols. Hyderabad: Govt. of Andra Pradesh.

Taylor Meadows. 1877. A Students’s Manual of the History of India. London.

Toy, Sidney 1965. The Fortified Cities of India. London.

Vani Shambulinga 1990. ‘‘Gulbarga-City and Its Monuments’’ (Unpublished Mphil. thesis) Gulbarga University.

Yazdani, G. 1928. “The Great Mosque of Gulbarga” Islamic Culture Vol.2. Pp. 14-21.

Yazdani, G. 1925 to 1938. Annual Report of the Archaeological Department of His Exalted Highnesss the Nizam’s Dominions. Volumes. Hyderabad.

 

ಈ ಅಂಕಣದ ಹಿಂದಿನ ಲೇಖನಗಳು

ಕರ್ನಾಟಕದ ಫತೇಪುರ್ ಸಿಕ್ರಿ- ಫಿರೋಜಾಬಾದ- ಬಹಮನಿ ಸುಲ್ತಾನರ ಅರಮನೆಗಳ ನಗರ

ಬಿಜಾಪುರ: ಮಧ್ಯಕಾಲೀನ ರಾಜಧಾನಿ ನಗರ

ಕರ್ನಾಟಕದಲ್ಲಿ ಮೌರ್ಯ ಚಕ್ರಚರ್ತಿ ಅಶೋಕನ ಆಳ್ವಿಕೆಯ ನಗರಗಳು

ಮಯೂರ ವರ್ಮನ ತಟಾಕದ ನಗರ ಚಂದ್ರವಳ್ಳಿ

 

------

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...