ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....

Date: 19-08-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗೀಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ಅವರು ಯೂರೋಪಿನ ಏರ್ಬಸ್ ಕಂಪನಿಯ A380 ಎಂಬ ಆಧುನಿಕ ವಿಮಾನ ಮತ್ತು ಬೋಯಿಂಗ್ ನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಿದ 787 ವಿಮಾನದ ಕುರಿತು ತಮ್ಮ ಏರೋ ಪುರಾಣ ಅಂಕಣದಲ್ಲಿ ವಿವರಿಸಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ನಾಗರಿಕ ವಿಮಾನಗಳ ಜೊತೆ ಸಂಬಂಧ ಇಟ್ಟುಕೊಂಡವರಿಗೆಲ್ಲ ಈ ಎರಡು ವಿಮಾನಗಳ ಒಡನಾಟ ಅಲ್ಲದಿದ್ದರೆ ಪರಿಚಯ ಖಂಡಿತ ಇರುತ್ತದೆ. ಅವರು ತಮ್ಮ ವೃತ್ತಿ ಜೀವನದ ಭಾಗವಾಗಿ ಇವೆರಡರಲ್ಲಿ ಯಾವುದೋ ಒಂದು ವಿಮಾನದ ಕಲ್ಪನೆ ವಿನ್ಯಾಸ ತಯಾರಿ ಪರೀಕ್ಷೆ ಅಥವಾ ಹಾರಾಟಗಳಲ್ಲಿ ತೊಡಗಿಸಿಕೊಂಡವರಿರಬಹುದು ಅಥವಾ ಈ ವಿಮಾನಗಳಲ್ಲಿ ಪ್ರಯಾಣಿಸಿದವರೋ ವಿಮಾನಲೋಕದ ಆಗುಹೋಗುಗಳನ್ನು ಕುತೂಹಲದಿಂದ ಗಮನಿಸುತ್ತಿದ್ದವರೋ ಇರಬಹುದು. ವಿಮಾನ ಲೋಕದ ಮಟ್ಟಿಗೆ ಇವತ್ತಿನ ಇಂದಿನ ಅಲ್ಲದಿದ್ದರೂ, ಇತ್ತೀಚಿನ ದೊಡ್ಡ ಮೈಲಿಗಲ್ಲಾಗಿ ಬೆಳವಣಿಗೆಯ ಉದಾಹರಣೆಯಾಗಿ ಇವೆರಡು ವಿಮಾನಗಳು ತಮ್ಮ ಹುಟ್ಟು- ಇರುವಿಕೆಗಳನ್ನು ದಾಖಲಿಸಿವೆ. ಹಾಗಂತ ಒಂದೇ ಆಕಾಶವನ್ನು ಹಂಚಿಕೊಂಡು ಹಾರಾಡುವ ಈ ಎರಡು ವಿಮಾನಗಳನ್ನು ತಯಾರಿಸಿದವರು ಮಾತ್ರ ವಿಮಾನಗಳ ವ್ಯವಹಾರದಲ್ಲಿ ಶುದ್ಧ ಬದ್ಧ ಪ್ರತಿಸ್ಪರ್ಧಿಗಳು.

ವಿಮಾನಗಳ ಪ್ರಕಾರ ಅಥವಾ ಮಾದರಿಗಳ ನಿಟ್ಟಿನಲ್ಲಿ ಈ ಎರಡು ವಿಮಾನಗಳು ಒಂದಕ್ಕೊಂದು ಹೋಲಿಕೆ ಅಲ್ಲದಿದ್ದರೂ ಒಂದಕ್ಕೊಂದು ಸ್ಪರ್ಧಿ ಅಲ್ಲದಿದ್ದರೂ ಕಳೆದ ಇಪ್ಪತ್ತು ವರ್ಷಗಳ ನಾಗರಿಕ ವಿಮಾನಯಾನದ ಬಗ್ಗೆ ಮಾತನಾಡುವಾಗ ಇವುಗಳ ಉಲ್ಲೇಖ ಮಾಡದೇ ಮುಂದುವರಿಯುವುದು ಸಾಧ್ಯವೇ ಇಲ್ಲ. ನನ್ನ ತಲೆಮಾರಿನ ವಿಮಾನ ಇಂಜಿನೀಯರರು ಅತ್ಯಂತ ಹೆಚ್ಚು ಚರ್ಚಿಸಿದ ವಿಮಾನಗಳು ಕೂಡ ಇವೆರಡರಲ್ಲಿ ಒಂದು ಇರಬಹುದು. ಇವುಗಳ ಹೆಸರು ಗುರುತು ಏರ್ಬಸ್ ತಯಾರಿಸಿದ A380 ಹಾಗೂ ಬೋಯಿಂಗ್ ನಿರ್ಮಿತ 787ಎನ್ನುವುದಾಗಿ. A380 ಯೂರೋಪಿನ ಏರ್ಬಸ್ ಕಂಪೆನಿಯ ಮಹತ್ವಾಕಾಂಕ್ಷೆಯ ಅತಿ ಹೆಚ್ಚು ಜನರನ್ನು ಸಾಗಿಸಬಲ್ಲ ಆಧುನಿಕ ವಿಮಾನ ಎನ್ನುವ ಹೆಗ್ಗಳಿಕೆಯದು . ಇನ್ನು ಬೋಯಿಂಗ್ ನ 787 ಅತ್ಯಾಧುನಿಕ ತಂತ್ರಜ್ಞಾನ ವಸ್ತುಗಳಿಂದ ನಿರ್ಮಿತವಾದ ಹಗುರವಾದ ಅತಿ ದೂರವನ್ನು ಕ್ರಮಿಸುವ ವಿಮಾನ ಎನ್ನುವ ಹಿರಿಮೆಯದು. ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಹಾರಾಡಿದ ಈಗಲೂ ಹಾರಾಡುತ್ತಿರುವ ಬಹುತೇಕ ನಾಗರಿಕ ವಿಮಾನಗಳ ನಿರ್ಮಾತರಾದ ಅಥವಾ ಜನರು ತಿರುಗಾಡುವ ವಿಮಾನಗಳ ವ್ಯಾಪಾರದ "ದ್ವಿಸ್ವಾಮ್ಯ"ವನ್ನು (Duopoly) ದೀರ್ಘಕಾಲದಿಂದ ಅನುಭವಿಸುತ್ತಿರುವ ಏರ್ಬಸ್ ಹಾಗೂ ಬೋಯಿಂಗ್ ಕಂಪೆನಿಗಳಲ್ಲಿ ಕಲ್ಪನೆ ವಿನ್ಯಾಸ ತಯಾರಿ ಜೋಡಣೆ ಪರೀಕ್ಷೆ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆ ಕುತೂಹಲ ಹುಟ್ಟಿಸಿದ ವಿಮಾನಗಳು ಇವು. ಮತ್ತೆ ಕಳೆದ ಎರಡು ದಶಕಗಳಲ್ಲಿ ವಿಮಾನ ಆಸಕ್ತರನ್ನು ತೀವ್ರವಾಗಿ ಆಕರ್ಷಿಸಿದ ವಿಮಾನ ಸಂತತಿಯ ಸದಸ್ಯರೂ ಹೌದು.

ಆಕಾಶದ ರಾಣಿ A380: ಪ್ರತಿ ಪ್ರಯಾಣದಲ್ಲಿ 500 ಕ್ಕೂ ಹೆಚ್ಚು ಜನರನ್ನು ಸಾಗಿಸುವ ಸಾಮರ್ಥ್ಯ ಅವಕಾಶ ಇರುವ, ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ A380 ಇದೀಗ ಹದಿನಾಲ್ಕು ವರ್ಷಗಳ ಸೇವೆಯನ್ನು ಪೂರೈಸಿದೆ. ಬ್ರಿಟನ್ ನಿಂದ ಅಥವಾ ದೂರ ದೇಶಗಳಿಂದ ಭಾರತವನ್ನು ಮಧ್ಯ ಪ್ರಾಚ್ಯ ದೇಶಗಳ ಮೂಲಕ ಎಮಿರೇಟ್ಸ್, ಕಟಾರ, ಏತಿಹಾದ್ ಕಂಪೆನಿಯ ವಿಮಾನಗಳಲ್ಲಿ ನೀವು ಈ ಕಳೆದ ಹದಿನಾಲ್ಕು ವರ್ಷಗಳಲ್ಲಿ ಪಯಣಿಸಿದ್ದರೆ ಡಬ್ಬಲ್ ಡೆಕ್ಕರ್ ಮಾದರಿಯ ಎ380ಯ ಭೇಟಿ ಆಗಿರಲೇಬೇಕು. ಒಮ್ಮೆ ನೋಡಿದವರು ಪ್ರಯಾಣಿಸಿದವರು ಈ ವಿಮಾನವನ್ನು ಮರೆಯುವುದು ಸಾಧ್ಯ ಇಲ್ಲ. ದೂರದ ಆಕಾಶದಲ್ಲಿ ಹೊಳೆಯುವ ಲೋಹದ ತುಂಡಿನಂತೆಯೋ , ನಾಲ್ಕು ಎಂಜಿನ್ ಇರುವ ಕಾರಣಕ್ಕೆ ಬಿಳಿ ಹೊಗೆಯ ನಾಲ್ಕು ಗೆರೆಗಳನ್ನು ಎಳೆಯುತ್ತ ಸಾಗುವ ಕಾರಣಕ್ಕೋ ಈ ವಿಮಾನ ಗಮನ ಸೆಳೆದಿದ್ದರೂ, ಅದು ಇಳಿಯುವ ಹಂತದಲ್ಲಿ ಅಥವಾ ಇಳಿದ ಮೇಲೆ ಹತ್ತಿರ ಹೋಗಿ ನೋಡಿದವರಿಗೆ ಎತ್ತರದ ದೈತ್ಯ ದೇಹ, ಸುವಿಶಾಲ ರೆಕ್ಕೆಗಳು, ಗಂಭೀರ ನಿಲುವು, ಓಟ ಹಾರಾಟಗಳಲ್ಲಿ ಸದ್ದಿಲ್ಲದೇ ಸಂಚರಿಸುವ ಸುಂದರಿಯಾಗಿ ಕಾಣಿಸುತ್ತದೆ. ಇಲ್ಲಿಯ ತನಕ 248 A380ಗಳು ನಿರ್ಮಾಣ ಆಗಿವೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಬದಲಾಗುತ್ತಿರುವ ವಿಮಾನಯಾನದಲ್ಲಿ ತೀರಾ ದೊಡ್ಡ ಗಾತ್ರದ, ನಾಲ್ಕು ಎಂಜಿನ್ ಗಳ A380 ಯಂತಹ ವಿಮಾನಗಳನ್ನು ಹಾರಿಸಿ ನಿಭಾಯಿಸುವುದು ಕಷ್ಟವಾದರೂ ಈ ವಿಮಾನ ಮಾದರಿ ಇನ್ನೂ ಹಲವು ವರ್ಷಗಳ ಕಾಲ ಸೇವೆಯಲ್ಲಿ ಉಳಿಯಲಿದೆ . A380 ವಿಮಾನದ ಬಗೆಗೆ ಕುತೂಹಲಕರ ರೋಚಕ ಎನ್ನಬಹುದಾದ ಹಲವು ವಿಚಾರಗಳು ಇವೆ, ಮತ್ತೆ ಈ ವಿಮಾನದ ಉಗಮದ ಹಿನ್ನೆಲೆಯಲ್ಲಿ ಯುರೋಪಿಯನ್ನರ ಅಮೆರಿಕನ್ನರ ಎಂದೂ ಮುಗಿಯದ ಸರಸ-ವಿರಸ ಕೆಲಸ ಮಾಡಿದೆ .ಪ್ರಮುಖ ವಿಮಾನ ತಯಾರಕರ ನಡುವೆ ವಿಮಾನ ತಯಾರಿಕೆಯ ಸ್ಪರ್ಧೆ ನಡೆದಾಗಲೆಲ್ಲ ಅಲ್ಲಿ ವೇಗ ಗಾತ್ರ ಇಂಧನ ಇಳುವರಿ ನಿರ್ವಹಣಾ ವೆಚ್ಚಗಳು ವಿಜ್ಞಾನ ತಂತ್ರಜ್ಞಾನಗಳ ಬಲದಲ್ಲಿ ಮುಖಾಮುಖಿಯಾಗಿ ಸೆಣಸಾಡುತ್ತವೆ. ಹಲವು ದಶಕಗಳ ಹಿಂದೆ ಇಂತಹದೇ ಸ್ಪರ್ಧೆ,ಯೂರೋಪಿನ ತಯಾರಕರಿಂದ ಶಬ್ದಾತೀತ ವೇಗದ ಕಾನ್ಕಾರ್ಡ್ ಅನ್ನೂ ಹಾಗೂ ಅಮೇರಿಕಾದ ಬೋಯಿಂಗ್ ನಿಂದ ದೊಡ್ಡ ಗಾತ್ರದ 747ನ್ನೂ ಹುಟ್ಟಿಸಿತ್ತು. ಸುಮಾರು ಅರ್ಧ ಶತಮಾನದ ಹಿಂದಿನ ಯುರೋಪ್ ಹಾಗೂ ಅಮೆರಿಕಗಳ ದ್ವಂದ್ವವನ್ನು ಸಮಕಾಲೀನ ಜಗತ್ತಿನಲ್ಲಿ A380 ಹಾಗೂ 787ಗಳು ನೆನಪಿಸುತ್ತವೆ .

2000ನೆಯ ಇಸವಿಯ ಆಸುಪಾಸಿಗೆ ಯುರೋಪಿಯನ್ ವಿಮಾನ ತಯಾರಕರಿಗೆ ಜಗತ್ತಿನ ಅತ್ಯಂತ ದೊಡ್ಡ ವಿಮಾನ ತಯಾರಿಸಬೇಕು ಎನ್ನುವ ಕನಸು ಶುರು ಆಯಿತು. ಆ ಕಾಲಕ್ಕೆ ಬೋಯಿಂಗ್ ಕಂಪೆನಿಯ '747 ವಿಮಾನವೇ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನವಾಗಿತ್ತು. ಯುರೋಪಿನ ಮಿತ್ರರ ಮಹತ್ವಾಕಾಂಕ್ಷೆಗೆ ಅಮೆರಿಕನ್ನರು ನಕ್ಕು, "ಈ ಯುರೋಪಿನನವರು ಬರೇ ಭಾವವೇಶದಲ್ಲೇ ಬದುಕುವವರು" ಎಂದು ನುಡಿದ್ದಿದೆ. ಆಗ ಚಾಲ್ತಿಯಲ್ಲಿದ್ದ ಬೋಯಿಂಗ್ ನ 747 ಸಾಗಿಸಬಲ್ಲ ಯಾತ್ರಿಗಳಿಗಿಂತ ನೂರಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಅಷ್ಟು ದೊಡ್ಡ ವಿಮಾನಕ್ಕೆ ಮಾರುಕಟ್ಟೆಯಲ್ಲಿ ಯಶಸ್ಸು ಸಿಕ್ಕೀತೆ ಇಲ್ಲವೇ, ವಿಮಾನದ ಕಲ್ಪನೆಯಿಂದ ತಯಾರಿಕೆಯ ತನಕ ಸುರಿಯಲಿರುವ ಬಿಲಿಯನ್ ಗಟ್ಟಲೆ ಯುರೋ ಹಣ ವಸೂಲಿ ಆದೀತೆ ಇಲ್ಲವೇ ಎನ್ನುವ ಪ್ರಶ್ನೆಗಳ ನಡುವೆಯೇ ಕನಸೊಂದರ ಹೃದಯದ ಬಡಿತವನ್ನು ಆಲಿಸಿ, A380ಯನ್ನು ನಿರ್ಮಿಸಲು ನಿರ್ಧರಿಸಲಾಯಿತು . ಹತ್ತಿಪ್ಪತ್ತು ಸಾವಿರ ಜನರಿಗೆ, ವಿಮಾನ ಬದುಕಿರುವವರೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷಗಳ ಕಾಲ ನಿರಂತರ ಉದ್ಯೋಗ ಒದಗಿಸಬಲ್ಲ ಮತ್ತು ಜಗತ್ತಿಗೆ ಅತಿ ದೊಡ್ಡ ವಿಮಾನವನ್ನು ನೀಡುವ ಮಹತ್ವಾಕಾಂಕ್ಷೆಯನ್ನೂ ತಣಿಸಬಲ್ಲ, ವಿಮಾನ ಮಾದರಿ ಇದು ಎಂದು ಬಗೆದ ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ಪೇನ್ ಸರಕಾರಗಳೂ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದವು, A380 ನಿರ್ಮಾಕ್ಕೆ ಚಾಲನೆ ನೀಡಿದವು. ಏರ್ಬಸ್ ಸಂಸ್ಥೆಯ ಎಲ್ಲ ವಿಮಾನಗಳ ಹೆಸರು 'A3xx’ ನಿಂದ ಆರಂಭ ಆಗುತ್ತದೆ. ವಿಮಾನದ ಮೂಗಿನಿಂದ ಬಾಲದ ವರೆಗೆ ಎಂಭತ್ತು ಮೀಟರು, ಎಡ ರೆಕ್ಕೆಯ ಈಚೆ ತುದಿಯಿಂದ ಬಲ ರೆಕ್ಕೆಯ ಆಚೆ ತುದಿಯ ವರೆಗೂ ಎಂಭತ್ತು ಮೀಟರು, ಹಾಗಾಗಿ ಈ ದೈತ್ಯ ವಿಮಾನ ಕೂಸಿಗೆ 'A380' ಎಂದು ನಾಮಕರಣ ಮಾಡಿದರು. ಅಲ್ಲಿಂದಾಚೆಗೆ ಯುರೋಪಿನ ಸುದ್ದಿ ಮಾಧ್ಯಮಗಳಲ್ಲಿ A380 ಸುದ್ದಿಗಳೇ ತುಂಬುತ್ತಿದ್ದವು. ಯುದ್ಧ ಹಾಗೂ ವಿಮಾನಗಳು ಎಂದರೆ ತೀವ್ರ ಕುತೂಹಲ ಇರುವ ಯುರೋಪಿನ ಜನರಿಗೆ ಈ ವಿಮಾನದ ಬೆಳವಣಿಗೆಯೇ ರೋಚಕ ಅನುಭವ ಆಯಿತು. ಹಲವು ಮೊದಲುಗಳನ್ನು ದಾಖಲಿಸಿದ, ಗಾತ್ರದ ವಿಚಾರದಲ್ಲಿ, ಸಂಕೀರ್ಣತೆಯ ವಿಷಯದಲ್ಲಿ ಹಿಂದೆ ತಯಾರಿಸಿದ ವಿಮಾನಗಳಿಗಿಂತ ಹೆಚ್ಚು ಸವಾಲನ್ನು ಒಡ್ಡಿದ ಈ ವಿಮಾನ, ತಯಾರಿಯ ಜೋಡಣೆಯ ಹಂತದಲ್ಲಿ ಕೆಲವು ಅಡಚಣೆಗಳನ್ನು ಎದುರಿಸಬೇಕಾಗಿ ಬಂದು, ವಿಮಾನ ಆಕಾಶಕ್ಕೆ ಏರುವುದು ಮುಂದೂಡಲ್ಪಟ್ಟಿತು. ಇಂತಹ ಅಡಚಣೆಗಳು, ಹೊಸ ತರದ ವಿಮಾನದ ತಯಾರಿಯಲ್ಲಿ ಸಾಮಾನ್ಯ. ತೀರ ಕ್ಷುಲ್ಲಕ ಎನ್ನುವ ಕಾರಣಗಳು, ಕಣ್ಣ ತಪ್ಪುಗಳು, ವಿಮಾನದ ಸಿದ್ಧವಾಗುವುದನ್ನು ಒಂದು ವರುಷದಷ್ಟು ತಡ ಮಾಡಬಲ್ಲದು, ಮುಂದೂಡಬಲ್ಲದು. ಯುರೋಪಿನ ಭಿನ್ನ ಭಿನ್ನ ಸಂಸ್ಕೃತಿಯ, ಭಾಷೆಯ ನಾಲ್ಕು ಪಾಲುದಾರ ದೇಶಗಳು ಕೆಲಸ ಹಂಚಿಕೊಂಡು ನಿರ್ವಹಿಸುವುದು, ಉಳಿದ ಕೆಲಸಗಳನ್ನು ಸ್ವೀಡನ್, ಜಪಾನ್, ಮಲೇಶಿಯ, ಭಾರತ ಇನ್ನಿತರೆಡೆಗಳಿಗೆ ಗುತ್ತಿಗೆ ನೀಡಿ, ಆಮೇಲೆ ಎಲ್ಲವನ್ನು ಒಂದು ಕಡೆ ಜೋಡಿಸಿ ವಿಮಾನ ಜೀವ ಪಡೆಯುವುದು, ಪ್ರಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು, ಹಾರುವ ಸರ್ಟಿಫಿಕೆಟ್ ಪಡೆಯುವುದು ಒಂದು ಸಾಹಸವೇ. ಹಳೆಯ ತಪ್ಪುಗಳ ಬಗ್ಗೆ ಚರ್ಚಿಸುತ್ತ, ಹೊಸ ಪಾಠಗಳನ್ನು ಕಲಿಯುತ್ತ, ಸುರಕ್ಷತೆಯನ್ನು ಅನುದಿನ ಅನುಕ್ಷಣ ಮೆಲುಕು ಹಾಕುತ್ತ ಎ 380ಕೂಡ ರೂಪ ಜೀವ ಪಡೆಯಿತು. 2005ರ ಹೊತ್ತಿಗೆ ಹಲವು ಸಂಕಟಗಳನ್ನು ದಾಟಿ ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಆಕಾಶಕ್ಕೆ ಹಾರಿತು, 2007ರಲ್ಲಿ ನಾಗರಿಕ ಸೇವೆ ಆರಂಭಿಸಿತು. ಜನಾಕರ್ಷಣೆ, ಪ್ರಸಿದ್ಧಿ, ಗಾತ್ರ, ತೂಕ, ಗಂಭೀರ ಚಲನೆಯಿಂದ ಆಕಾಶಕ್ಕೆ ಯಜಮಾನತಿಯಂತೆ ಓಡಾಡಿತು. ವಿಮಾನಗಳ ಗಾತ್ರದ ವಿಚಾರದಲ್ಲಿ ಮೈಲಿಗಲ್ಲು ಎನ್ನಬಹುದಾದ A380ಯಲ್ಲಿ ನಾಲ್ಕು ಎಂಜಿನ್ ಗಳು ಇರುವ ಕಾರಣಕ್ಕೆ ಅಧಿಕ ಇಂಧನ ವ್ಯಯವಾಗುವ, ಎಲ್ಲ ದಿನ ಎಲ್ಲ ಮಾರ್ಗಗಳಲ್ಲೂ ಸೀಟುಗಳನ್ನು ತುಂಬಿಸಿಕೊಳ್ಳುವಲ್ಲಿನ ಸಾಧ್ಯ ಇಲ್ಲದೇ ಇರುವ ಕಾರಣಗಳಿಗೆ, ವ್ಯಾವಹಾರಿಕವಾಗಿ ಯಶಸ್ಸು ಕಂಡಿಲ್ಲ. ಹಾಗಂತ ಗಾತ್ರ ಹಾಗೂ ತಂತ್ರಜ್ಞಾನಗಳ ಮಾನದಂಡದಲ್ಲಿ ಚಾರಿತ್ರಿಕ ವಿಮಾನ ಎನ್ನುವುದನ್ನು ಅಲ್ಲಗಳೆಯುವುದೂ ಸಾಧ್ಯ ಇಲ್ಲ .

ಕನಸಿನ ಹಕ್ಕಿ ಬೋಯಿಂಗ್ 787:

ಇಂದಿಗೆ ಹತ್ತು ವರ್ಷಗಳ ಹಿಂದೆ ಸೇವೆ ಆರಂಭಿಸಿದ ಬೋಯಿಂಗ್ ಕಂಪೆನಿಯ "787”, ತಂತ್ರಜ್ಞಾನದಲ್ಲಿ ಹೊಸ ಬಗೆಯ ಮೈಲಿಗಲ್ಲಾಗಿ ಭರವಸೆ, ಕುತೂಹಲವನ್ನು ಹುಟ್ಟಿಸಿದ ವಿಮಾನ. ವಿಮಾನಗಳಲ್ಲಿ ಮೊದಲ ಬಾರಿಗೆ ಶೇ. 50ಗಿಂತ ಹೆಚ್ಚು ಸಮ್ಮಿಶ್ರ ವಸ್ತುವನ್ನು (composite material) ಬಳಸಿದ್ದು 787 ನ ಮೂಲಭೂತ ಹೆಗ್ಗಳಿಕೆ. ವಿಮಾನ ತಯಾರಿಕೆಯ ಮೊದಮೊದಲ ದಿನಗಳಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು ಮರ ಹಾಗೂ ಬಟ್ಟೆ. ಮುಂದೆ ಅಲ್ಯೂಮಿನಿಯುಂ ಲೋಹ, ವಿಮಾನ ತಯಾರಿಕೆಯನ್ನು ವ್ಯಾಪಕವಾಗಿ ದೀರ್ಘ ಕಾಲದವರೆಗೆ ಆವರಿಸಿತು. ಗಾಳಿಯ ಒತ್ತಡವನ್ನು ಅನುಭವಿಸುವ ಅಥವಾ ತಮ್ಮ ಮೇಲೆ ಬಲ ಪ್ರಯೋಗವಾಗುವ ದಿಕ್ಕನ್ನು ಬಿಟ್ಟು ಉಳಿದ ದಿಕ್ಕುಗಳಲ್ಲಿ ತುಂಬಾ ಗಟ್ಟಿಯೇನೂ ಅಲ್ಲದ ಸಮ್ಮಿಶ್ರ ವಸ್ತುಗಳು ಮಾಮೂಲಿಯಾಗಿ ಬಳಕೆಯಾಗುವ ಅಲ್ಯೂಮಿನಿಯಂ ಲೋಹಕ್ಕಿಂತ ಹಗುರಾದವು. ಹಾಗಾಗಿ, ಸಮ್ಮಿಶ್ರ ವಸ್ತುಗಳ ಬಳಕೆ ವಿಮಾನದ ತೂಕವನ್ನು ತಗ್ಗಿಸುತ್ತದೆ, ಪ್ರಯಾಣವನ್ನು ಮುಗಿಸಲು ಕಡಿಮೆ ಇಂಧನ ಸಾಕಾಗುತ್ತದೆ. ಲಘುವಾಗಿರುವ ವಸ್ತುಗಳ ಬಳಕೆಯ ಕಾರಣದಿಂದ ಅಷ್ಟೇ ಸಾಮರ್ಥ್ಯದ ಇನ್ಯಾವುದೇ ಲೋಹದ ಹಕ್ಕಿಗಿಂತ 787 ವಿಮಾನ ಶೇ. 20 ರಷ್ಟು ಕಡಿಮೆ ಇಂಧನ ಖರ್ಚು ಮಾಡುತ್ತದೆ. ಈ ಫಲದಾಯಕತೆಗೆ (efficiency) 787 ಅಲ್ಲಿ ಬಳಸಲ್ಪಟ್ಟ ಆಧುನಿಕ ತಂತ್ರಜ್ಞಾನದ ಇಂಜಿನ್ ಕೂಡ ಸ್ವಲ್ಪ ಮಟ್ಟಿಗೆ ಕಾರಣ. ಅತ್ಯುತ್ತಮ ಫಲದಾಯಕತೆಯ ದೂರ ಪ್ರಯಾಣ ಮಾಡಬಲ್ಲ ಹಗುರ ನವನವೀನ ವಿಮಾನ ಎಂದು ಕರೆಸಿಕೊಂಡ 787 ಅನ್ನು ಬೋಯಿಂಗ್ “ಕನಸಿನ ವಿಮಾನ” ಎಂದು ಕರೆಯಿತು (Dreamliner). ಕಡಿಮೆ ಇಂಧನ ಬಳಸುವ ಹೊಸ ತಂತ್ರಜ್ಞಾನದ ಕನಸಿನ ಹಕ್ಕಿ , ವಿನ್ಯಾಸ ಮತ್ತು ತಯಾರಿಯ ಹಂತದಲ್ಲಿ ಇರುವಾಗಲೇ, ಅಂದರೆ ಆಗಸದಲ್ಲಿ ಸೇವೆ ಆರಂಭಿಸುವ ಮೊದಲೇ ಸುಮಾರು ಐದುನೂರು ವ್ಯಾಪಾರಾದೇಶಗಳನ್ನು (Order Booking) ಪಡೆದಿತ್ತು. ಅಂತಹ ಬೇಡಿಕೆಯ ಕಾರಣದಿಂದ 787, ವಿಮಾನಯುಗದ ಅತ್ಯಂತ ಯಶಸ್ವಿ ವಿಮಾನ ಎಂಬ ಹೆಸರನ್ನೂ ಪಡೆಯಿತು. ವಿಮಾನ ಕೆಲಸಗಳ ಹೊರಗುತ್ತಿಗೆಯ ವಿಷಯದಲ್ಲೂ 787 ಒಂದು ಮೈಲಿಗಲ್ಲು. ಸುಮಾರು ಶೇ. 70ರಷ್ಟು ಕೆಲಸಗಳನ್ನು ಹೊರಗುತ್ತಿಗೆ ನೀಡಲಾಯಿತು, ಮುಖ್ಯವಾಗಿ ಜಪಾನ್ ಮತ್ತು ಇಟಲಿಯ ಕಂಪೆನಿಗಳಿಗೆ. ಜಪಾನ್ ಬಹಳ ಮೊದಲಿನಿಂದಲೂ ವಿಮಾನಗಳ ಮಟ್ಟಿಗೆ ಅಮೆರಿಕದ ಜೋಡಿದಾರ ಪಾಲುದಾರ. ಅಮೆರಿಕ ವಿಮಾನದ ಕೆಲಸಗಳನ್ನು ಜಪಾನ್ ಗೆ ಧಾರಾಳವಾಗಿ ಹೊರಗುತ್ತಿಗೆ ನೀಡುತ್ತದೆ, ಜಪಾನ್ ವಿಮಾನಗಳನ್ನು ಕೊಳ್ಳುವ ಟೆಂಡರ್ ಗೆ ಬೇರೆ ಯಾವ ದೇಶದ ವಿಮಾನ ತಯಾರಕರನ್ನೂ ಕರೆಯದೆ ಅಮೆರಿಕದ ಬೋಯಿಂಗ್ ನಿಂದಲೇ ವಿಮಾನಗಳನ್ನು ಖರೀದಿಸುತ್ತದೆ. ವಿಮಾನ ನಿರ್ಮಾಣದಲ್ಲಿ ತುಂಬು ಅನುಭವ ಹೊಂದಿರುವ ಬೋಯಿಂಗ್ "ವಿನ್ಯಾಸಕ"; ಮತ್ತು "ತಯಾರಕ" (Design and Manufacturer) ಎನ್ನುವ ಟೈಟಲ್ ಅಳಿಸಿ ತನ್ನನ್ನು "ಸಂಘಟಕ/ಸಂಯೋಜಕ " (Integrator) ಎಂದು ಕರೆದುಕೊಳ್ಳಲು ಆರಂಭಿಸಿದ್ದು ಕೂಡ 787 ವಿಮಾನವನ್ನು ತಯಾರಿಸುವಾಗಲೇ. ಈ ವಿಮಾನದ ಹೆಚ್ಚಿನ ಭಾಗಗಳ ವಿನ್ಯಾಸ ತಯಾರಿಯನ್ನು ಹೊರಗುತ್ತಿಗೆ ನೀಡಿ, ಬರೀ ಮೇಲ್ವಿಚಾರಣೆ, ಕೊನೆಯ ಹಂತದ ಜೋಡಣೆ ಮತ್ತೆ ಸಮಗ್ರ ಸಂಯೋಜನೆಗಳಿಗೆ ತನ್ನ ಹೊಣೆಯನ್ನು ಬೋಯಿಂಗ್ ಕೇಂದ್ರೀಕರಿಸಿತು. ವಿಮಾನ ವ್ಯವಹಾರವನ್ನು ಈ ಬಗೆಯಲ್ಲಿ ನಿರ್ವಹಿಸುವ ನಿರ್ಧಾರವೇ 787ಗೆ ಹಲವು ತೊಂದರೆಗಳನ್ನು ತಂದಿದೆ.

ಯಾವ ಕೆಲಸಗಳನ್ನು ವಿಮಾನ ತಯಾರಕ ಹೊರಗೆ ನೀಡಬೇಕು ಎಷ್ಟನ್ನು ಒಳಗಡೆ ನಿಭಾಯಿಸಬೇಕು ಎನ್ನುವುದು ಎಲ್ಲ ವಿಮಾನ ಕಂಪೆನಿಗಳಲ್ಲೂ ನಿರಂತರ ಚರ್ಚೆಯಾಗುವ ಸಮತೋಲನ ಕಂಡುಕೊಳ್ಳುವಲ್ಲಿ ಹೆಣಗಾಡುವ ವಿಷಯವೇ. ನಾವೀನ್ಯತೆಗಳನ್ನು, ವೈಜ್ಞಾನಿಕ ಮುನ್ನಡೆಗಳನ್ನು ಹೊಂದಿದ 787 ಕೂಡ ಹಲವು ಸವಾಲುಗಳನ್ನು ಎದುರಿಸಿ ಅಂದಾಜಿಸಿದ ಸಮಯಕ್ಕಿಂತ ತಡವಾಗಿ ಸೇವೆ ಶುರು ಮಾಡಿತು. ಸೇವೆ ಆರಂಭಿಸಿದ ಎರಡು ವರ್ಷಗಳಲ್ಲಿ ತನ್ನ ವಿನ್ಯಾಸಕ್ಕೆ ಸಂಬಂಧಿಸಿ ಹೊಸ ತೊಂದರೆಗಳನ್ನೂ ಅನುಭವಿಸಿತು. ಆ ಎಲ್ಲ ಸವಾಲುಗಳ ನಡುವೆಯೂ ಸುಮಾರು 250 ಪ್ರಯಾಣಿಕರನ್ನು ಕೂರಿಸಿಕೊಂಡು ಹದಿಮೂರು ಸಾವಿರ ಕಿಲೋಮೀಟರು ಹಾರಬಲ್ಲ 787 ಇತ್ತೀಚಿನ ಕಾಲದ ಅತ್ಯಂತ ಯಶಸ್ವಿ ವಿಮಾನ.

ವ್ಯಾವಹಾರಿಕ ಯಶಸ್ಸಿನ ಮಾನದಂಡದಲ್ಲಿ ಏರ್ಬಸ್ ನ A380 ಹಾಗೂ ಬೋಯಿಂಗ್ ನ 787 ಗಳು ವಿರುದ್ಧ ದಿಕ್ಕಿನಲ್ಲಿ ಇವೆಯಾದರೂ ಅವು ಬಳಸಿಕೊಂಡ ತಂತ್ರಜ್ಞಾನ, ಎದುರಿಸಿ ನಿಭಾಯಿಸಿದ ಸವಾಲುಗಳು, ಮುಂದಿನ ಪೀಳಿಗೆಯ ವಿಮಾನಗಳ ಮೇಲೆ ಬೀರಿದ ಪ್ರಭಾವದ ಕಾರಣಗಳಿಗೆ, ಇತಿಹಾಸದಲ್ಲಿ ಖಾಯಂ ಹೆಜ್ಜೆಗುರುತುಗಳನ್ನು ಮೂಡಿಸಿದ ವಿಮಾನಗಳ ಸಾಲಿಗೆ ಸೇರುತ್ತವೆ. ಆಕಾಶದ ರಾಣಿಯಾಗಿ ಕನಸಿನ ಹಕ್ಕಿಯಾಗಿ ನೆನಪಿನಲ್ಲಿ ನಿಲ್ಲುತ್ತವೆ.

ಈ ಅಂಕಣದ ಹಿಂದಿನ ಬರಹಗಳು
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು

ವಿಮಾನ ನಿಲ್ದಾಣಕ್ಕೆ ಸ್ವಾಗತ

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

ಒಂದು ಆಕಾಶ ಹಲವು ಏಣಿಗಳು

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಗಗನಯಾನದ ದೈತ್ಯ ಹೆಜ್ಜೆಗಳು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...