ಆಕಾಶಯಾನವನ್ನು ಬದಲಿಸಿದ ಅಪಘಾತಗಳು

Date: 10-04-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ವಿಮಾನಯಾನದ ಉಗಮ, ಸ್ವರೂಪ, ಪರಿಶೀಲನೆ-ತಪಾಸಣೆ ಹೀಗೆ ವಿವಿಧ ಪ್ರಕ್ರಿಯೆಯಲ್ಲಿ ಪಡೆದ ಅನುಭವಗಳನ್ನು ತಮ್ಮ ‘ಏರೋ ಪುರಾಣ’ ಅಂಕಣದಲ್ಲಿ ವಿವರಿಸುವ ಅವರು ಈ ಬಾರಿ ವಿಮಾನ ಅಪಘಾತಗಳ ಕುರಿತು ವಿಶ್ಲೇಷಿಸಿದ್ದಾರೆ.

ವಿಮಾನಯಾನ ಸಾಗಿದ ಪಥವನ್ನು ಹಿಂಬಾಲಿಸಿದರೆ ನವೀನ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳಿಗೆ ಸ್ಪಂದನೆ ಪ್ರತಿಕ್ರಿಯೆಗಳನ್ನು ಗುರುತಿಸುತ್ತ ಮೈಲಿಗಲ್ಲುಗಳನ್ನು ನೆಡುತ್ತ ಹೋಗಬಹುದು. ಹಾರುವ ವೇಗ, ಎತ್ತರ, ಸಾಗುವ ದೂರ, ಹೊರುವ ಭಾರ, ತಯಾರಿಕೆಯಲ್ಲಿ ಬಳಸಲ್ಪಡುವ ವಸ್ತುಗಳು, ವ್ಯಯಿಸುವ ಇಂಧನ, ಪ್ರಯಾಣಿಕರು ಕೂರುವ ಆಸನ, ನೋಡುವ ಮನರಂಜನಾ ಸೌಕರ್ಯಗಳು, ವಿಮಾನದ ಆಯ ಆಕಾರ ಮೈಗೆ ಹಚ್ಚುವ ಬಣ್ಣ ಇತ್ಯಾದಿ ಮತ್ತೆ ಇವೆಲ್ಲಕ್ಕಿಂತ ಅತ್ಯಂತ ಮಹತ್ವದ್ದಾದ ವಿಮಾನದ ಹಾಗೂ ಅದರ ಪ್ರಯಾಣಿಕರ ಸುರಕ್ಷತೆ ಆಯಾಕಾಲದ ತಂತ್ರಜ್ಞಾನಗಳನ್ನು ಮುಕ್ತವಾಗಿ ಸ್ವೀಕರಿಸಿ ತಮಗೆ ಹೊಂದುವಂತೆ ಅಳವಡಿಸಿಕೊಂಡು ಸುಪುಷ್ಟ ಸದೃಢಗೊಂಡಿವೆ. ಕಾಲ ಪರಿಸರ ಪರಿಸ್ಥಿತಿಗಳ ತಿಕ್ಕಾಟದಲ್ಲಿ ಜೀವಿಗಳು ವಿಕಾಸಗೊಂಡಂತೆ ವಿಮಾನಗಳು ಆಯಾ ಕಾಲದ ವಿಜ್ಞಾನ ಸಂಶೋಧನೆ ಪ್ರಯೋಗಗಳ ಕುಲುಮೆಯಲ್ಲಿ ಪರಿವರ್ತನೆಗಳನ್ನು ಕಂಡಿವೆ, ಮತ್ತೆ ಅಂತಹ ಎಲ್ಲ ಪರಿವರ್ತನೆಗಳ ಫಲಶ್ರುತಿಯಾಗಿ ವಿಮಾನ ಪ್ರಯಾಣ ಹಿಂದಿಗಿಂತ ಹೆಚ್ಚು ಸುವಿಹಾರಿಯೂ ಸುರಕ್ಷಿತವೂ ಆಗಿ ಮಾರ್ಪಟ್ಟಿದೆ. ಇನ್ನು ವಿಮಾನ ಲೋಕದ ಒಳಗೆ ವಿಮಾನಗಳಿಗಾಗಿಯೇ ನಡೆದ ಸಂಶೋಧನೆಗಳು ಯಶಸ್ಸುಗಳು, ಸಾಗಾಟದ ಇತರ ಮಾಧ್ಯಮಗಳನ್ನೂ ಪ್ರೇರೇಪಿಸಿ ಪ್ರಭಾವಿಸಿವೆ. ವಿಮಾನ ವಿನ್ಯಾಸದಿಂದ ಅದರ ದೈನಂದಿನ ಹಾರಾಟ, ನಿರ್ವಹಣೆಗಳವರೆಗೆ ಎಲ್ಲ ಮಗ್ಗುಲುಗಳಲ್ಲೂ ಪ್ರಯಾಣಿಕರಿಗೆ ಅನುಕೂಲಗಳನ್ನು ಭದ್ರತೆಯನ್ನು ಹೆಚ್ಚಿಸುವ , ವಿಮಾನವನ್ನು ಖರೀದಿಸಿ ನಿಭಾಯಿಸುವ ಯಜಮಾನರಿಗೆ ಖರ್ಚು ವೆಚ್ಚ ತಗ್ಗಿಸುವ ಬದಲಾವಣೆಗಳು ಆಗುತ್ತಲೇ ಇವೆ. ವಿಮಾನಗಳ ಬಗೆಗೆ ಉತ್ಸಾಹ ಉಲ್ಲಾಸ ಪ್ರೀತಿ ಕಾಳಜಿ ಇರುವ ಸಂಶೋಧಕರು ವಿಜ್ಞಾನಿಗಳು ತಂತ್ರಜ್ಞರು ಅನೇಕಾನೇಕ ಹೊಸ ಕೊಡುಗೆಗಳನ್ನು ವಿಮಾನ ಲೋಕಕ್ಕೆ ಒದಗಿಸುತ್ತಲೇ ಇದ್ದಾರೆ. ಮತ್ತೆ ಆಗಷ್ಟೇ ಪದವಿ ಶಿಕ್ಷಣ ಮುಗಿಸಿ ವಿಮಾನ ಕಂಪೆನಿಯನ್ನು ಸೇರಿದ ಎಳೆಯ ಇಂಜಿನಿಯರುಗಳೂ ತಾಜಾ ಐಡಿಯಾವನ್ನು ಕೊಟ್ಟು ಅವು ಹೊಸತನಗಳಾಗಿ ವಿಮಾನಗಳಲ್ಲಿ ಅನುಷ್ಠಾನಕ್ಕೆ ಬಂದ ಉದಾಹರಣೆಗಳೂ ಇವೆ. ಹಾಗಂತ ಕಳೆದ ಹಲವು ದಶಕಗಳ ವಿಮಾನ ಪ್ರಯಾಣದಲ್ಲಿನ ಪ್ರಮುಖ ಬದಲಾವಣೆಗಳೆಲ್ಲವೂ ಉದ್ದೇಶ ಇಟ್ಟು ಮಾಡಿದ ಸಂಶೋಧನೆ ,ಲಕ್ಷ್ಯ ಇಟ್ಟು ಹೂಡಿದ ಪ್ರಯೋಗ ಪರೀಕ್ಷೆಗಳಿಂದಲೇ ಆದವಲ್ಲ. ಯಾವ ವಿಮಾನ ಪ್ರಯಾಣಿಕನೂ ನೆನಪು ಮಾಡಿಕೊಳ್ಳಬಯಸದ, ವಿಮಾನ ಉದ್ಯೋಗಿಗಳ ಮಟ್ಟಿಗೆ ಎದೆಯೊಡೆಯುವ ಅನುಭವ ನೀಡುವ ಈ ಹಿಂದಿನ ವಿಮಾನ ಅಪಘಾತಗಳೂ ವಿಮಾನ ಲೋಕಕ್ಕೆ ಕಲಿಕೆಗಳನ್ನು ನೀಡಿವೆ. ಅವಘಡಗಳು ನಡೆಯುವುದು ವಿಮಾನಗಳಲ್ಲಿ ತೀರ ಸಾಮಾನ್ಯ ಅಲ್ಲದಿದ್ದರೂ, ಒಂದು ವೇಳೆ ಅಪಘಾತಗಳು ನಡೆದುದೇ ಆದರೆ ಅತ್ಯಂತ ಮಾರಕ ಪರಿಣಾಮಗಳನ್ನು ಬೀರುವಂತಹವು ಆದರೂ, ಅವೇ ಅಪಘಾತಗಳೇ ಮುಂಬರುವ ವಿಮಾನಗಳ ಸುರಕ್ಷತೆಯನ್ನು ಹೆಚ್ಚಿಸುವ ಅಮೂಲ್ಯ ಪಾಠ ಒದಗಿಸುವುದು ವಿಮಾನ ಲೋಕದ ಒಳಗಿನ ದೊಡ್ಡ ವೈರುಧ್ಯ ಇರಬಹುದು. ನಿತ್ಯ ಪ್ರಯಾಣಿಸುವ ಬಸ್ಸು ಕಾರು ರೈಲುಗಳಲ್ಲಿನ ಅಪಘಾತಗಳು ಗಂಭೀರವಾಗಿ ಪರಿಗಣನೆಗೊಂಡು ಆಯಾ ವಾಹನದ ವಿನ್ಯಾಸ ನಿರ್ವಹಣೆಯ ರೀತಿಯನ್ನು ಬದಲಿಸಿದ ಘಟನೆಗಳು ಎಷ್ಟಿವೆಯೋ ಗೊತ್ತಿಲ್ಲ ಆದರೆ ವಿಮಾನಗಳ ಮಟ್ಟಿಗೆ ಪ್ರತಿ ಅಪಘಾತವೂ ಅತ್ಯಂತ ಗಂಭೀರವಾದ ಘಟನೆ ಮತ್ತು ಸೂಕ್ಷ್ಮ ತನಿಖೆಗೆ ಒಳಪಡುವಂತಹದ್ದು.

ಪಘಾತವೊಂದು ಯಾಕೆ ಹೇಗೆ ಸಂಭವಿಸಿತು ಎಂದು ತಿಳಿಯಲು ವಿಮಾನಯಾನ ನಿರ್ವಹಿಸುವ ಸಂಸ್ಥೆ, ತಯಾರಿಸಿದ ಕಂಪೆನಿ ಮತ್ತು ವಿಮಾನ ಸುರಕ್ಷತೆ ನಿರ್ವಹಣೆಗಳ ನಿರ್ದೇಶನ ನೀಡುವ ಸಂಸ್ಥೆಗಳು ಕಳವಳ ಕುತೂಹಲಗಳಿಂದ ಕಾಯುತ್ತಿರುತ್ತವೆ. ಒಂದು ವೇಳೆ ಅಪಘಾತದ ಹಿಂದೆ ವಿಮಾನ ಉತ್ಪಾದಕರ ಪರಿಧಿಯೊಳಗೆ ಬರುವ ಕಾರಣ ಇದೆ ಎಂದು ಗೊತ್ತಾದರೆ ಮುಂದೆ ಬರುವ ವಿಮಾನಗಳ ವಿನ್ಯಾಸದಲ್ಲಿ ತುರ್ತಾಗಿ ಬದಲಾವಣೆ ಮತ್ತೆ ಈಗಾಗಲೆ ಹಾರುತ್ತಿರುವ ವಿಮಾನಗಳಲ್ಲಿ ಅಗತ್ಯವಾದ ಮಾರ್ಪಾಟು ಮಾಡಲಾಗುತ್ತದೆ. ಅಥವಾ ಅಂತಹ ಸಂದರ್ಭದಲ್ಲಿ ಈಗಾಗಲೇ ಇರುವ ನಿಯಂತ್ರಣಗಳನ್ನು ಹೇಗೆ ಬಳಸಬೇಕು ಎನ್ನುವ ಬಗೆಗೆ ನಿರ್ದೇಶನ ಎಚ್ಚರ ನೀಡಲಾಗುತ್ತದೆ. ಮುಂದೆ ಅದೇ ಕಾರಣಕ್ಕೆ ಆಗಬಹುದಾದ ಹಾನಿಯನ್ನು ತಪ್ಪಿಸುವ ಪ್ರಯತ್ನ ಮಾಡಲಾಗುತ್ತದೆ .

ವಿಮಾನಗಳು ಅವಿರತವಾಗಿ ಜಗತ್ತಿನ ಮೂಲೆಮೂಲೆಗೆ ಪ್ರಯಾಣ ಮಾಡುವುದು ಆರಂಭವಾದ ಕಳೆದ 60-70 ವರ್ಷಗಳ ಇತಿಹಾಸದಲ್ಲಿ ಇಂದಿನ ವಿಮಾನಯಾನವನ್ನು ಬದಲಿಸಿದ ಹತ್ತು ಅಪಘಾತಗಳ ಪಟ್ಟಿ ಮಾಡಲು ಹೇಳಿದರೆ, ಅಮೆರಿಕದವರು ಯುರೋಪಿನವರು ಬ್ರಿಟನ್ನಿನವರು ಪೂರ್ತಿ ಅಲ್ಲದಿದ್ದರೂ ತುಸು ಬೇರೆಬೇರೆ ಅಪಘಾತಗಳ ಹೆಸರು ಇರುವ ಸಾಧ್ಯತೆ ಇದೆ . ಹಾಗಂತ ಆ ಪಟ್ಟಿಯಲ್ಲಿ ಎಲ್ಲರೂ ಉಲ್ಲೇಖಿಸುವ ಕೆಲವು ಸಾಮಾನ್ಯ ಅಪಘಾತಗಳೂ ಇವೆ.

ಜಗತ್ತಿನಲ್ಲಿ ಯಾರೇ ವಿಮಾನ ಅಪಘಾತಗಳ ಬಗ್ಗೆ ವಿಮಾನ ಸಂತತಿಯ ಮೇಲೆ ಅಪಘಾತಗಳ ಪ್ರಭಾವದ ಬಗ್ಗೆ ಹೇಳಲು ಶುರು ಮಾಡಿದರೆ ಕಾಮೆಟ್ ಎನ್ನುವ ವಿಮಾನದ ಹೆಸರು ಅಲ್ಲಿ ಖಂಡಿತ ಉಲ್ಲೇಖವಾಗಲೇ ಬೇಕು. ಬ್ರಿಟನ್ನಿನ "ಡಿ ಹ್ಯಾವಿಲೆಂಡ್" ಕಂಪೆನಿ ತಯಾರಿಸಿದ ಕಾಮೆಟ್ ಎನ್ನುವ ಹೆಸರಿನ ವಿಮಾನವನ್ನು ಜಗತ್ತಿನ ಮೊಟ್ಟಮೊದಲ ಜೆಟ್ ಎಂಜಿನ್ ಚಾಲಿತ ನಾಗರಿಕ ವಿಮಾನ ಎಂದು ಕರೆಯುತ್ತಾರೆ. ಜೆಟ್ ಎಂಜಿನ್ ಬಳಕೆ ವಿಮಾನಗಳಿಗೆ ಹೆಚ್ಚಿನ ವೇಗ, ಸುರಕ್ಷತೆ, ಇಂಧನ ಇಳುವರಿ ನೀಡಿದೆ. 1952ರಲ್ಲಿ ಮಹತ್ವಾಕಾಂಕ್ಷೆ ನಿರೀಕ್ಷೆಗಳೊಂದಿಗೆ ಸೇವೆ ಆರಂಭಿಸಿದ ಈ ವಿಮಾನ ಸಂತತಿಯ ಮೂರು ಕಾಮೆಟ್ ಗಳು, ಹನ್ನೆರಡು ತಿಂಗಳುಗಳ ಅವಧಿಯಲ್ಲಿ ನಡು ಆಕಾಶದಲ್ಲಿ ಭಾಗವಾಗಿ ಭೂಮಿಗೆ ಬಿದ್ದವು. ವಿಮಾನದೊಟ್ಟಿಗೆ ಸಂಬಂಧ ಆಸಕ್ತಿ ಇಟ್ಟುಕೊಂಡವರೆಲ್ಲ ಆತಂಕ ವಿಹ್ವಲತೆಯಿಂದ ಗಮನಿಸಿದ ಸರಣಿ ದುರಂತ ಅದಾಗಿತ್ತು. ಜಗತ್ತಿನಾದ್ಯಂತ ತೀವ್ರ ಚರ್ಚೆ ಸಂಶಯ ಭಯಗಳಿಗೆ ಕಾರಣವಾದ ಕಾಮೆಟ್ ಸರಣಿ ಅಪಘಾತಗಳು ಆ ಕಾಲಕ್ಕೆ ವಿನ್ಯಾಸ ಹಂತದಲ್ಲಿ ಪರಿಗಣನೆಯಲ್ಲಿ ಇಲ್ಲದ ಒಂದು ವಿಚಾರವನ್ನು ಅನಾವರಣಗೊಳಿಸಿದವು. ವಿಮಾನಗಳ ದೇಹ ರೆಕ್ಕೆಗಳ ಬಹುಭಾಗ ಆಗ ಲೋಹದಿಂದಲೇ ಮಾಡಲಾಗುತ್ತಿತ್ತು. ಲೋಹಗಳು ಒಂದೇ ಬಗೆಯ ಬಲವನ್ನು ಒತ್ತಡವನ್ನು ಮತ್ತೆ ಮತ್ತೆ ಅನುಭವಿಸುವಾಗ ಸುಸ್ತನ್ನು ಅನುಭವಿಸುತ್ತವೆ (Fatigue) ಮತ್ತೆ ಅವು ಸಾಮಾನ್ಯವಾಗಿ ಎಷ್ಟು ಬಲ ಪ್ರಯೋಗದಿಂದ ಮುರಿಯಬೇಕೋ ಅದಕ್ಕಿಂತ ಮೊದಲೇ ಬಿರುಕು (Crack) ಬಿಟ್ಟು ತುಂಡಾಗುತ್ತವೆ. ನಿತ್ಯ ಏರಿ ಹಾರಿ ಇಳಿಯುವಾಗ ಅದೇ ಅದೆ ಒತ್ತಡವನ್ನು ಕಾಣುವ ವಿಮಾನದ ಮೈಯಲ್ಲಿ ತುಂಬಿಕೊಂಡಿರುವ ಲೋಹದ ಭಾಗಗಳು ಸುಸ್ತನ್ನು ಅನುಭವಿಸುತ್ತವೆ. "ಲೋಹದ ಸುಸ್ತು" (Metallic Fatigue) ಎನ್ನುವ ವಿಜ್ಞಾನದ ವಿಭಾಗ, ವಿಮಾನ ವಿನ್ಯಾಸದಲ್ಲಿ ಅಪರಿಚಿತವಾಗಿದ್ದ ಕಾಲದಲ್ಲಿ ನಡೆದ ಈ ಅಪಘಾತಗಳು ವಿಮಾನ ವಿನ್ಯಾಸದ ರೂಪುರೇಷೆಗಳನ್ನು ಮಾನದಂಡಗಳನ್ನು ಬದಲಿಸಿದವು. ವಿಮಾನ ವಿನ್ಯಾಸದ ಮಹತ್ವಪೂರ್ಣ ಶಾಖೆಯಾಗಿ "ಲೋಹದ ಸುಸ್ತು" ಪರಿಗಣಿಸಲ್ಪಡುವಂತೆ ಮಾಡಿದವು. ಎಷ್ಟೇ ಗಟ್ಟಿಯಾದ ದಪ್ಪದ ಲೋಹವನ್ನು ವಿಮಾನಗಳಲ್ಲಿ ಬಳಸಿದರೂ ಅವು ಸ್ಥಾಯಿ ಬಳಕೆಯಲ್ಲಿ ಯಾವಾಗ ವೈಫಲ್ಯ ಕಾಣುತ್ತವೋ (Static Failure ) ಅದಕ್ಕಿಂತ ಮೊದಲೇ ಸುಸ್ತಿನ ಕಾರಣಕ್ಕೆ ಬಿರುಕುಬಿಟ್ಟು ವೈಫಲ್ಯ ಅನುಭವಿಸುತ್ತವೆ ಎಂದು ತಿಳಿಸಿದವು.

ಇನ್ನು ಸಿಲಿಂಡರ್ ಆಕಾರದ ವಿಮಾನ ದೇಹದ ಮೇಲಿನ ಛಾವಣಿ ಹಾರಿ ಹೋಗಿ ಪ್ರಯಾಣಿಕರ ತಲೆಯ ಮೇಲೆ ಮಾಡು ಇಲ್ಲದ ‘ಓಪನ್ ಟಾಪ್’ ಬಸ್ಸಿನಂತಹ ವಿಮಾನದಲ್ಲಿ ನಿಲ್ದಾಣ ತಲುಪಿದ ಚಿತ್ರವನ್ನು ನೀವು ನೋಡಿರಬಹುದು. 1988ರಲ್ಲಿ ನಡೆದ ಆ ಘಟನೆ ಅಲೋಹ ಏರ್ಲೈನ್ಸ್ ನಡೆಸುತ್ತಿದ್ದ ಬೋಯಿಂಗ್ ತಯಾರಿಯ 737 ವಿಮಾನದ್ದು . 24000 ಅಡಿ ಎತ್ತರದಲ್ಲಿ ಹಾರುತ್ತ ಹವಾಯಿ ದ್ವೀಪ ಸಮೂಹದ ಸಣ್ಣ ದೂರ ಕ್ರಮಿಸಬೇಕಿದ್ದು ಅಲೋಹ ವಿಮಾನದ ದೇಹದ ಮೇಲ್ಭಾಗ ಒಡೆದು ತುಂಡಾಗಿ ಹಾರಿಹೋಗಿತ್ತು. ಹೊರ ವಾತಾವರಣಕ್ಕೆ ತೆರೆದುಕೊಂಡೇ ಆ ವಿಮಾನ ಪವಾಡ ಸದೃಶ ರೀತಿಯಲ್ಲಿ ಕೆಳಗಿಳಿದು ,ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದರು. ಹತೋಟಿ ತಪ್ಪಿದ ಸ್ಥಿತಿಯಲ್ಲಿ ವಿಮಾನವನ್ನು ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಮುಟ್ಟಿಸಿದ್ದಕ್ಕೆ ಚಾಲಕ ಪ್ರಶಂಸೆಗೆ ಪಾತ್ರನಾದ. ಅವನ ಸಹೋದ್ಯೋಗಿಯಾದ ಪರಿಚಾರಿಕೆ ಒಬ್ಬಳು ಛಾವಣಿ ಹಾರಿಹೋಗುವ ಸಮಯದಲ್ಲಿ ಸೀಟು ಪಟ್ಟಿ ಹಾಕಿ ಕೂತಿರದೇ , ಯಾತ್ರಿಗಳ ಸೇವೆಗಾಗಿ ನಡೆದಾಡುತ್ತಿದ್ದಳು. ಅಕಸ್ಮಾತ್ ಆಗಿ ತೆರೆದ ಮಾಡಿನ ಮೂಲಕ, ಕಡಿಮೆ ಒತ್ತಡ ಇರುವ ಹೊರ ವಾತಾವರಣಕ್ಕೆ ಸೆಳೆದುಹೋಗಿ ಮೃತಳಾದಳು. ವಿಮಾನದ ದೇಹದ ಒಳಗೆ ಮನುಷ್ಯರ ಇರುವಿಕೆಗೆ ಬೇಕಾಗುವ ಗಾಳಿಯ ಒತ್ತಡ ಇರಿಸುತ್ತಾರೆ. ಎತ್ತರದ ವಾತಾವರಣದಲ್ಲಿನ ಹೊರಗಿನ ಗಾಳಿಯ ಒತ್ತಡ ತೀರ ಕಡಿಮೆ ಇರುತ್ತದೆ. ಇನ್ನು ವಿಮಾನ ಹಾರಾಟ ಮುಗಿಸಿ ಕೆಳಗೆ ಬಂದ ಮೇಲೆ ನೆಲಮಟ್ಟದ ಹೊರ ವಾತಾವರಣದ ಏರು ಒತ್ತಡವನ್ನು ಅನುಭವಿಸುತ್ತದೆ. ವಿಮಾನದ ಬಾಗಿಲು ತೆಗೆಯುವುದರಿಂದ ವಿಮಾನದ ಒಳಗಿನ ಒತ್ತಡವೂ ಹೊರ ವಾತಾವರಣದ ಒತ್ತಡವೂ ಒಂದೇ ಆಗುತ್ತದೆ. ಹೀಗೆ ವಿಮಾನ ದೇಹ ಎತ್ತರದಲ್ಲಿ ಹಾಗೂ ನೆಲದಲ್ಲಿ ನಿರಂತರ ಬೇರೆ ಬೇರೆ ಒತ್ತಡಗಳನ್ನು ಅನುಭವಿಸುತ್ತದೆ. ಒಂದು ಬಗೆಯಲ್ಲಿ ನಮ್ಮ ಎದೆಯ ಗೂಡಿನಂತೆ ಗಾಳಿ ಒಳ ತುಂಬಿಸಿಕೊಳ್ಳುವುದು ಹೊರಬಿಡುವುದು ನಡೆಯುತ್ತದೆ. ಪ್ರತಿ ಹಾರಾಟ ಇಳಿಯುವಿಕೆಯಲ್ಲೂ ಒತ್ತಡಗಳು ನಿರಂತರವಾಗಿ ಹೆಚ್ಚು ಕಡಿಮೆ ಆಗುವಾಗ ಹಲವು ಲೊಹದ ಹಾಳೆಗಳಿಂದ ತಯಾರಿಸಿದ ವಿಮಾನದ ದೇಹದಲ್ಲಿ, ಜೋಡಣೆಗೆಂದು ಮಾಡಿದ ತೂತುಗಳಲ್ಲಿ ಬಿರುಕು ಕಾಣಿಸಲಾರಂಭಿಸುತ್ತದೆ. ಇದು ಕೂಡ ಲೋಹದ ಸುಸ್ತಿನ ಪರಿಣಾಮವೇ. ಆದರೆ ಕಾಮೆಟ್ ಅಲ್ಲಿ ಕಲಿತ ಪಾಠದಿಂದ ಲೋಹದ ಸುಸ್ತಿನಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಗಮನ ಹರಿಸುತ್ತಿದ್ದಿದ್ದರೂ, ಒಂದೇ ತರಹದ ಒತ್ತಡವನ್ನು ಅನುಭವಿಸುವ ಭಾಗಗಗಲ್ಲಿ ಇರುವ ಏಕರೂಪದ ಜೊಡಣೆಯ ಎಲ್ಲ ತೂತುಗಳಿಂದ ಏಕಕಾಲಕ್ಕೆ ಹಲವು ಬಿರುಕುಗಳು ಉಂಟಾಗಬಹುದು ಎನ್ನುವುದು ಗಣನೆಯಲ್ಲಿ ಇರದ ಒಂದು ಹೊಸ ವಿಚಾರ ಆಗಿತ್ತು . ಹೀಗೆ ಆಸುಪಾಸಿನ ಹಲವು ಏಕರೂಪಿ ಬಿರುಕುಗಳು ಒಂದಕ್ಕೊಂದು ಕೂಡಿಕೊಂಡು ಹಠಾತ್ ಆಗಿ ದೊಡ್ಡ ಭಾಗವನ್ನೇ ತುಂಡಾಗಿ ಕಳಚಿ ಹೋಗುವಂತೆ ಮಾಡಿದುದೇ ಅಲೋಹ ವಿಮಾನದ ಅಪಘಾತಕ್ಕೆ ಕಾರಣವಾಗಿತ್ತು. ಲೋಹದ ಸುಸ್ತು ವಿಷಯದ ಒಳಗಿನ ಒಂದು ಅಂಗವಾದ "ವ್ಯಾಪಕ ಸುಸ್ತು " (Widespread Fatigue ") ಈ ಅಪಘಾತದಿಂದ ಬೆಳಕಿಗೆ ಬಂತು, ಹಾಗೂ ಮುಂದೆ ವಿಮಾನ ವಿನ್ಯಾಸದಲ್ಲಿ ನಿರ್ವಹಣೆಯಲ್ಲಿ ಪರಿಗಣಿಸಲ್ಪಡುವ ಅಂಶವಾಯಿತು.

ಈ ಎರಡು ಬಗೆಯ ವಿಮಾನಗಳ ಅಪಘಾತಗಳು ಮೂವತ್ತು ವರ್ಷಗಳ ಅಂತರದಲ್ಲಿ ನಡೆದರೂ, ಅವು ಒಂದೇ ಜ್ಞಾನಶಾಖೆಯ ಒಳಗಿನ ಬೇರೆ ಬೇರೆ ಕವಲುಗಳಾಗಿವೆ. ಲೋಹದ ಸುಸ್ತು ಹಾಗೂ ಬಿರುಕುಗಳ ಆರಂಭ ಬೆಳವಣಿಗೆ (Fatigue and Crack Propagation) ಎನ್ನುವ ವಿಶಿಷ್ಟ ಕುತೂಹಲಕಾರಿ ವಿಭಾಗವನ್ನು ಕಲಿಯುವಂತೆ ಮಾಡಿವೆ. ವಿಮಾನಗಳ ವಿನ್ಯಾಸದ ಹಂತದಲ್ಲಿ ಬಳಸಿದ ಲೋಹದ ಭಾಗಗಳಲ್ಲಿ ಬಿರುಕುಗಳು ತಡವಾಗಿ ಮೂಡುವಂತಹ ಪರಿಗಣನೆಗಳು ಮತ್ತೆ ವಿಮಾನ ಸೇವೆ ಆರಂಭಿಸಿದ ನಂತರದ ನಿರಂತರ ನಿರ್ವಹಣೆಯ ಭಾಗವಾಗಿ ಬಿರುಕುಗಳನ್ನು ಹುಡುಕಲು ಸೂಕ್ಷ್ಮ ತಪಾಸಣೆ, ಕಂಡುಬಂದರೆ ಕೂಡಲೇ ದುರಸ್ತಿ ನಡೆಯುತ್ತಲೇ ಇರುವುದರಿಂದ ಕಳೆದ ಮೂವತ್ತು ವರ್ಷಗಳಲ್ಲಿ ಲೋಹದ ಸುಸ್ತಿನ ಕಾರಣಕ್ಕೆ ಅಪಘಾತವಾದ ಸಂದರ್ಭ ಇಲ್ಲ, ಬಹುಷಃ ಮುಂದೆಯೂ ಆಗಲಿಕ್ಕಿಲ್ಲ.

ಇನ್ನು 1985ರಲ್ಲಿ ಇಂಗ್ಲಂಡ್ ನ ಮಾಂಚೆಸ್ಟರ್ ನಿಲ್ದಾಣದಲ್ಲಿ ಆಕಾಶಕ್ಕೆ ಏರುವ ಮೊದಲು ಒಂದು ಎಂಜಿನ್ ವಿಫಲಗೊಂಡು ವಿಮಾನಕ್ಕೆ ಬೆಂಕಿ ಹಿಡಿದ ದುರ್ಘಟನೆ ನಡೆಯಿತು. ಆ ಘಟನೆಯ ನಂತರ ವಿಮಾನಗಳಲ್ಲಿ ಅಗ್ನಿ ಅವಘಡಗಳನ್ನು ಎದುರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಯಿತು. ಸುಲಭದಲ್ಲಿ ಬೆಂಕಿ ಹೊತ್ತಿಸಿಕೊಳ್ಳದ ವಸ್ತುವಿನಿಂದ ಸೀಟುಗಳನ್ನು, ವಿಮಾನ ದೇಹದ ಒಳಗೋಡೆಗಳನ್ನು ತಯಾರಿಸುವುದು, ತುರ್ತು ನಿರ್ಗಮನ ದ್ವಾರಗಳ ಹತ್ತಿರ ಸೀಟುಗಳ ಅಳವಡಿಕೆ ಬದಲಾಯಿಸಿದ್ದು, ಹೆಚ್ಚು ಅಗ್ನಿ ಉಪಶಮನಕಾರಕಗಳು ಲಭ್ಯ ಇರುವಂತೆ ಮಾಡುವುದು ಇತ್ಯಾದಿ ಬದಲಾವಣೆಗಳು ಆದವು. ತುರ್ತು ನಿರ್ಗಮನಕ್ಕೆ ವಿಶೇಷ ನಿರ್ದೇಶನಗಳು ಕಾಯ್ದೆಗಳು ಅನುಷ್ಠಾನಕ್ಕೆ ಬಂದವು. ವಿಮಾನ ಅಪಘಾತಗಳ ಇತಿಹಾಸದಲ್ಲಿ , ಎರಡು ವಿಮಾನಗಳು ಮಧ್ಯ ಆಕಾಶದಲ್ಲಿ ಢಿಕ್ಕಿಯಾದ ದುರಂತಗಳೂ ಇವೆ .

1986ರಲ್ಲಿ ಅಮೆರಿಕದ ಲಾಸ್ ಎಂಜಲಿಸ್ ಅಲ್ಲಿ ಎರಡು ವಿಮಾನಗಳು ಒಂದಕ್ಕೊಂದು ಹೊಡೆದು ಉರುಳಿದಾಗ ಅಮೆರಿಕದ ಆಕಾಶದಲ್ಲಿ ಹಾರುವ ಎಲ್ಲ ವಿಮಾನದಲ್ಲಿ ಒಂದಕ್ಕೊಂದು ಅಪ್ಪಳಿಸುವುದನ್ನು ತಪ್ಪಿಸಬಹುದಾದ (Collision Avoidance System ) ವ್ಯವಸ್ಥೆಗಳನ್ನು ಅಳವಡಿಸಲೇ ಬೇಕೆಂಬ ಆದೇಶ ತರಲಾಯಿತು. ಹತ್ತಿರದಲ್ಲಿ ಪ್ರಯಾಣಿಸುತ್ತಿರುವ ಎರಡು ವಿಮಾನಗಳ ನಡುವಿನ ಅಂತರ ತೀರ ಕಡಿಮೆ. ಆದರೆ ಚಾಲಕರಿಗೆ ಎಚ್ಚರಿಕೆ ನೀಡುವ ಸ್ವಯಂಚಾಲಿತ ವ್ಯವಸ್ಥೆ ಅದಾಗಿತ್ತು. ಮುಂದೆ 1996ರಲ್ಲಿ ದೆಹಲಿಯ ಮೇಲಿನ ಆಕಾಶದಲ್ಲಿ ಎರಡು ವಿಮಾನಗಳು ಒಂದಕ್ಕೊಂದು ಹೊಡೆದು ಉರುಳಿ ಬಿದ್ದ ನಂತರ ಜಗತ್ತಿನ ಎಲ್ಲ ವಿಮಾನಗಳಲ್ಲೂ Collision Avoidance System ಅಳವಡಿಸುವುದು ಕಡ್ಡಾಯ ಮಾಡಲಾಯಿತು. ಅಪಘಾತಗಳ ಇತ್ತೀಚಿನ ಘಟನೆಗಳಲ್ಲಿ ಚಾಲಕರ ಸಹಾಯ ಇಲ್ಲದೇ ವಿಮಾನವನ್ನು ಹಾರಿಸಿ ಇಳಿಸಬಲ್ಲ , ಕಂಪ್ಯೂಟರ್ ಆಧಾರಿತ ನಿಯಂತ್ರಣ ವ್ಯವಸ್ಥೆಯ ಮುಖ್ಯ ಪಾತ್ರ ಇದೆ. ಮಾನವ ಹಸ್ತಕ್ಷೇಪ ನಿಯಂತ್ರಣ ಇಲ್ಲದೇ ಸ್ವಯಂ ನಿರ್ಧಾರ ಮಾಡಬಲ್ಲ ಗಣಕಯಂತ್ರ ವ್ಯವಸ್ಥೆ ಹಲವು ಸಂದರ್ಭಗಳಲ್ಲಿ ವಿಮಾನ ನಡೆಸಲು ಅನುಕೂಲ ಹೌದಾದರೂ ಕೆಲವು ಸಂದರ್ಭಗಳಲ್ಲಿ ಮಾರಕವಾಗಿ ಪರಿಣಮಿಸಿ, ವಿಮಾನಗಳ ಅಪಘಾತಕ್ಕೆ ಕಾರಣವಾದ ಉದಾಹರಣೆಗಳಿವೆ. ಮತ್ತೆ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಗೇ ಒಗ್ಗಿಕೊಂಡ ಚಾಲಕರಿಗೆ ತುರ್ತು ಸಂದರ್ಭದಲ್ಲಿ ತಮ್ಮ ಹತೋಟಿಗೆ ವಿಮಾನವನ್ನು ತಂದುಕೊಂಡು ನಡೆಸುವುದು ಕಷ್ಟವಾದ ಘಟನೆಗಳೂ ಇವೆ. ವಿಮಾನಗಳ ನಿಯಂತ್ರಣ ಎಷ್ಟರ ಮಟ್ಟಿಗೆ ಮಾನವ ಚಾಲಕರ ಕೈಯಲ್ಲಿರಬೇಕು ಎಷ್ಟು ಸಾಫ್ಟ್ ವೇರ್ ನಿರ್ಧರಿತ ಇರಬೇಕು ಎನ್ನುವುದು ಈಗಲೂ ಮುಂದುವರಿಯುತ್ತಿರುವ ಚರ್ಚೆ. ವಿಮಾನಗಳನ್ನು ಹೆಚ್ಚು ಹೆಚ್ಚು ಸುರಕ್ಷಿತವಾಗಿಸಬೇಕು ಎಂದೇ ಪ್ರವರ್ತರಾಗುವ ವಿನ್ಯಾಸಕಾರರು ಈ ಚರ್ಚೆಗೊಂದು ಸಮರ್ಪಕ ತೀರ್ಮಾನ ನಿರ್ದೇಶನ ನೀಡುತ್ತಾರೆ ಎಂದು ಊಹಿಸೋಣ.

1959ರಿಂದ 2019ರ ವರೆಗಿನ ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ವಿಮಾನಗಳ ಹಾರಾಟ ಹೆಚ್ಚುತ್ತಿದೆ, ಗಂಭೀರ ಅಪಘಾತಗಳ ಸಂಖ್ಯೆ ಇಳಿಯುತ್ತಿದೆ ಎಂದು ತಿಳಿಸುತ್ತವೆ . 2019ರಲ್ಲಿ 3.6 ಕೋಟಿ ವಿಮಾನಗಳು ಆಕಾಶವನ್ನು ಏರಿವೆ,ಇಡೀ ಜಗತ್ತಿನಲ್ಲಿ ನಾಲ್ಕು ಗಂಭೀರ ಅಪಘಾತಗಳು ಸಂಭವಿಸಿವೆ. ಹಾರುವ ವಿಮಾನಗಳ ಸಂಖ್ಯೆಗಳಿಗೆ , ಆಕಾಶಯಾನವನ್ನು ಬಳಸುವ ಪ್ರಯಾಣಿಕರ ಸಂಖ್ಯೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಗಂಭೀರ ಅಪಘಾತಗಳು ಆಗಿರುವುದು ವಿಮಾನಯಾನದ ಸುರಕ್ಷತೆಯನ್ನು ರುಜುವಾತು ಪಡಿಸುತ್ತದೆ .ನೆಲದಿಂದ ಮೂವತ್ತು ನಲವತ್ತು ಸಾವಿರ ಅಡಿಗಳ ಎತ್ತರದಲ್ಲಿ , ಗಂಟೆಗೆ ಸಾವಿರ ಕಿಲೋಮೀಟರ್ ವೇಗದಲ್ಲಿ,ಗಾಳಿಯ ಮೇಲೆ ರೆಕ್ಕೆ ಊರಿ ಹಾರುವ ವಿಮಾನಗಳಲ್ಲಿ ಕುಳಿತುಕೊಳ್ಳುವ ಅನುಭವ ಕೆಲವೊಮ್ಮೆ ಅಥವಾ ಕೆಲವರಿಗೆ ಭಯಾನಕ ಅನಿಸಿದರೂ ಅನಾಹುತದ ಸಾಧ್ಯತೆ ತೀರ ಕಡಿಮೆ ಇರುವ ಅತಿ ಸುರಕ್ಷಿತ ಪ್ರಯಾಣ ಮಾಧ್ಯಮ. ವಿಮಾನಯಾನವನ್ನು ಸುರಕ್ಷಿತವಾಗಿಸುವಲ್ಲಿ ಬದಲಿಸುವಲ್ಲಿ ಹೊಸ ಹೊಸ ಸಂಶೋಧನೆ ತಂತ್ರಜ್ಞಾನಗಳ ಜೊತೆಗೆ ಅಪಘಾತಗಳಿಂದ ದೊರೆತ ಕಲಿಕೆಗಳೂ ಮಹತ್ವದ ಪಾತ್ರವಹಿಸಿವೆ.

ಈ ಅಂಕಣದ ಹಿಂದಿನ ಬರೆಹಗಳು:
ಬಾನಬಂಡಿಯ ರೆಕ್ಕೆ ಕಟ್ಟುವ ಊರು

ಗಗನಯಾನದ ದೈತ್ಯ ಹೆಜ್ಜೆಗಳು

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಒಂದು ಆಕಾಶ ಹಲವು ಏಣಿಗಳು

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...