ಆಳವಾಗಿ ಕದಲಿಸುವ ‘ಬೀಜ’ಪ್ರಶ್ನೆಗಳು

Date: 06-06-2022

Location: ಬೆಂಗಳೂರು


'ಗ್ರಾಮ ನಗರಗಳ ಮಧ್ಯೆ ಹೊಯ್ದಾಡುವ, ತಮ್ಮ ನಿಜವಾದ ಜೀವನದರ್ಶನ ಯಾವುದೆಂದು ಭಾವನಾತ್ಮಕವಾಗಿ ತುಮುಲಕ್ಕೊಳಗಾದ ಹೊಸ ಜನಾಂಗವೊಂದರ ಬಿಕ್ಕಟ್ಟು, ಸುಶಿಕ್ಷಿತ ಭಾರತೀಯ ಸಮಾಜದ ತಳಮಳ ಇದೆಲ್ಲವನ್ನೂ ಶೋದಿಸುವ ಕೃತಿಯೆಂದು ಶಾಂತಿನಾಥ ದೇಸಾಯರ ‘ಬೀಜ’ ಕಾದಂಬರಿಯ ಬಗ್ಗೆ ಒಳನೋಟಗಳನ್ನು ಕೊಡುವ ಲೇಖಕಿ ಡಾ.ಗೀತಾ ವಸಂತ, ಅದನ್ನೊಂದು ರಾಜಕೀಯ ಮೀಮಾಂಸೆಯೂ ಹೌದು ಎನ್ನುತ್ತಾರೆ ಅವರ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಬೀಜ ಕಾದಂಬರಿ ಕುರಿತ ಅರ್ಥಪೂರ್ಣ ವಿಶ್ಲೇಷಣೆ ನಿಮ್ಮ ಓದಿಗಾಗಿ.

ಶಾಂತಿನಾಥ ದೇಸಾಯರ ‘ಬೀಜ’ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ತಾತ್ವಿಕ ತುಮುಲಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಾದಂಬರಿ. ಸದಾ ಪರಂಪರೆಯೊಡನೆ ಸೆಣಸುವ ವ್ಯಕ್ತಿಪ್ರಜ್ಞೆಯ ತುಮುಲಗಳನ್ನೂ ಅದು ಒಳಗಿಳಿದು ಕಾಣಿಸುತ್ತದೆ. ಪರಂಪರೆಯ ಬೀಜಗಳು ನಮ್ಮೊಳಗೆ ಅಪ್ರಜ್ಞಾಪೂರ್ವಕವಾಗಿ ಇರುತ್ತವೆ. ಕಾಲದ ಓಟದಲ್ಲಿ ಅವು ಕಾಣದಂತೆ ಸುಪ್ತವಾಗಿರುತ್ತವೆ. ಹೇಗೆ ನಾವು ಜೈವಿಕವಾಗಿ ನಮ್ಮ ಪೂರ್ವಜರ ಮುಂದುವರಿಕೆಯೆಂಬ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲವೋ ಹಾಗೆಯೇ ನಮ್ಮ ಇತಿಹಾಸದ ಸ್ಮೃತಿಗಳಿಂದ ಬಿಡಿಸಿಕೊಳ್ಳಲಾಗದಂತೆ ಆವೃತರು ನಾವು. ನಮ್ಮ ಸುತ್ತಲಿನ ಸಾಮಾಜಿಕ ರಚನೆಗಳು, ಸಾಂಸ್ಕೃತಿಕ ಬಂಧಗಳು, ರಾಜಕೀಯ ಸತ್ಯಗಳನ್ನು ಮೀರಲಾರದವರು ನಾವು. ವ್ಯಕ್ತಿ ಪ್ರಜ್ಞೆಯೊಂದು ಇದೆಲ್ಲವನ್ನು ಝಾಡಿಸಿಕೊಂಡು ಹೊರಟುಹೋಗುವುದು ನಿಜಕ್ಕೂ ಕಷ್ಟ. ಬದುಕಿನ ಈ ಎಲ್ಲ ಸಂಕೀರ್ಣ ಹೆಣಿಗೆಯೊಳಗಿದ್ದುಕೊಂಡೇ ಬದುಕನ್ನು ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಹಸಕ್ಕೆಳಸುತ್ತೇವೆ. ಆದರೆ ಬದುಕು ಇದೆಲ್ಲವನ್ನು ಮೀರಿ ಹರಿವ ನದಿ. ಅದು ನಮ್ಮೆಲ್ಲ ತಾರ್ಕಿಕ ಲೆಕ್ಕಾಚಾರಗಳನ್ನು ಮೀರಿ ಸಂಭವಿಸುತ್ತದೆ. ಕಾಲದ ಹರಿವಿನಲ್ಲಿ ನಾವು ನಮ್ಮ ಕೃತಿಯೊಂದನ್ನು ಕಟ್ಟಬಯಸುತ್ತೇವೆ. ಆ ಮೂಲಕ ನಮ್ಮ ಅಸ್ತಿತ್ವವನ್ನು ಸ್ಥಾಪಿಸಬಯಸುತ್ತೇವೆ. ಇದೊಂದು ಬಗೆಯ ಅನಿವಾರ್ಯ ಹೋರಾಟ. ಸ್ವಶೋಧದ ಮಹತ್ವಾಕಾಂಕ್ಷೆಯು ಭಾರತೀಯ ತತ್ವಜ್ಞಾನದ ತಿರುಳೂ ಹೌದು. ಅದು ಕೊನೆಯಲ್ಲಿ ಮಹತ್ತಿನಲ್ಲಿ ಕರಗಿ ಅಸ್ತಿತ್ವವನ್ನು ನಿರಚಿಸಿಕೊಳ್ಳುವುದರೆಡೆಗೆ ಸಾಗಿದರೆ, ಪಶ್ಚಿಮದ ಅಸ್ತಿತ್ವವಾದೀ ಚಿಂತನೆಗಳು ಸ್ವಂತಿಕೆಯೊಂದನ್ನು ಢಾಳಾಗಿ ಸ್ಥಾಪಿಸಿಕೊಳ್ಳುವ ಸಾಹಸಕ್ಕೆ ಇಂಬುಕೊಡುತ್ತವೆ. ರಸೆಲ್, ‌‌ಕಾರ್ಲ್‌ಮಾರ್ಕ್ಸ್‌, ಫ್ರಾಯ್ಡ್, ಮುಂತಾದವರ ಚಿಂತನೆಗಳನ್ನು ಭಾರತೀಯ ಚಿಂತನಾ ಆಕೃತಿಗಳೊಡನೆ ಕಾದಂಬರಿ ಅಲ್ಲಲ್ಲಿ ಮುಖಾಮುಖಿಯಾಗಿಸುತ್ತದೆ. ಯಾವ ಸೈದ್ಧಾಂತಿಕ ತಿಳಿವುಗಳೂ ಆಳವಾದ ಧಾರ್ಮಿಕ ಶ್ರದ್ಧೆಯನ್ನು ಕದಲಿಸಲಾರವು. ಬೌದ್ಧಿಕತೆಯ ಮೂಲಕ ಕಟ್ಟಿಕೊಂಡ ಬಾಹ್ಯ ವ್ಯಕ್ತಿತ್ವವು ಪೊರೆ ಕಳಚಿದಂತೆ ಕಳಚಿದಾಗ ಮೂಲಪ್ರವೃತ್ತಿಗಳ ನಿಗೂಢತೆ ಬೆರಗು ಮೂಡಿಸುತ್ತದೆ. ಅಸ್ತಿತ್ವದ ಹುಡುಕಾಟ ಹಾಗೂ ಅದರ ನಿಗೂಢ ಒಳಸತ್ವವನ್ನು ಕಾದಂಬರಿ ಶೋಧಿಸುತ್ತ ಹೋಗುತ್ತದೆ.

ಕಾದಂಬರಿಯ ಕೇಂದ್ರಪ್ರಜ್ಞೆಯಾದ ಶ್ರೇಯಾಂಸ ಆರಂಭದಲ್ಲಿ ನವ್ಯದ ನಾಯಕರಂತೆ ದ್ವಂದ್ವಗಳಲ್ಲಿ ತಲ್ಲಣಿಸಿದರೂ ಕೊನೆಯಲ್ಲಿ ತನ್ನ ದೃಢವಾದ ಜೀವನಶ್ರದ್ಧೆಯನ್ನು ಕಂಡುಕೊಳ್ಳುತ್ತಾನೆ. ಯೌವ್ವನದಲ್ಲಿ ಅಪ್ಪನೊಡನೆಯೂ ಅವನ ವ್ಯಕ್ತಿತ್ವದೊಡನೆಯೂ ಯುದ್ಧ ಹೂಡಿ ಊರು ತೊರೆದು ಮುಂಬೈ ಸೇರಿದ ಶ್ರೇಯಾಂಸ, ಅವನ ಸಾವಿನ ನಂತರ ತನ್ನ ಮೂಲದ ಕಡೆಗೆ ಸೆಳೆಯಲ್ಪಡುತ್ತಾನೆ. ಹೊಕ್ಕಳಬಳ್ಳಿ ಹರಿದುಕೊಂಡೇ ಸ್ವತಂತ್ರವಾಗುವ ಮಗುವಿನಂತೆ ತನ್ನ ಮೂಲವನ್ನು ಕಳಚಿಕೊಂಡಾಗಲೇ ಸ್ವಯಂ ಅಸ್ತಿತ್ವ ರೂಪುಗೊಳ್ಳುವುದು ಪ್ರಾಕೃತಿಕ ಸತ್ಯ. ತಾಯಿ ಮಗುವಿನ ಈ ಬೇರ್ಪಡುವಿಕೆಯಲ್ಲಿ ಸಂಘರ್ಷವಿಲ್ಲ. ಆದರೆ ಅಪ್ಪ ಮಗನ ಸಂಘರ್ಷ ವೈಚಾರಿಕವಾದುದು. ಆದ್ದರಿಂದಲೇ ಸಂಘರ್ಷದಿಂದ ಕೂಡಿದ್ದು. ಅಲ್ಲಿ ಆಸ್ತಿ ಅಧಿಕಾರ ವಂಶಪಾರಂಪರ್ಯದ ಪ್ರಶ್ನೆಗಳು ಪ್ರಮುಖವಾಗುತ್ತವೆ. ತಂದೆಯನ್ನು ವಿರೋಧಿಸಿಯೇ ತನ್ನ ಭಿನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದು ಬಹುಶಃ ಎಲ್ಲ ತಲೆಮಾರುಗಳ ವಿಧಿ. ಅದರಲ್ಲೂ ಸ್ವಾತಂತ್ರ್ಯದ ನಂತರದ ದಿನಗಳ ಭಾರತೀಯ ಬದುಕು ಕಂಡ ಮೌಲ್ಯಗಳ ಸಂಘರ್ಷ ಹೆಚ್ಚು ಸಂಕೀರ್ಣವಾದುದು. ಆಧುನಿಕ ಶಿಕ್ಷಣ ಕೊಟ್ಟ ಹೊಸ ಚಿಂತನಕ್ರಮಗಳು, ನಗರೀಕರಣ, ಬಂಡವಾಳಶಾಹೀ ಶಕ್ತಿಗಳ ಹಿಡಿತ, ವಿಷಮ ರಾಜಕಾರಣ ಇವೆಲ್ಲವೂ ಗ್ರಾಮೀಣ ಬದುಕಿನ ಕ್ರಮವನ್ನು ಕದಲಿಸಿದವು. ತಲೆಮಾರುಗಳ ಅಂತರ ಸಂಬಂಧಗಳನ್ನು ಭಗ್ನಗೊಳಿಸತೊಡಗಿದವು.

ಸ್ವಾತಂತ್ರ್ಯ ಎಲ್ಲಿದೆ? ಗತದಿಂದ ಬಿಡಿಸಿಕೊಳ್ಳುವಲ್ಲಿಯೇ? ಎಬ ಪ್ರಶ್ನೆಯನ್ನು ಕಾದಂಬರಿ ಮೂಡಿಸುತ್ತದೆ. ಅಪ್ಪನ ವ್ಯಕ್ತಿತ್ವದ ವಿರೋಧದಲ್ಲಿಯೇ ತನ್ನ ವ್ಯಕ್ತಿತ್ವ ಕಟ್ಟಿಕೊಂಡ ಶ್ರೇಯಾಂಸ ಮತ್ತೆ ತನ್ನ ಬೇರುಗಳಿಗೆ ಮರಳಿ ತನ್ನ ನಿಜವನ್ನು ಕಾಣಲೆಳೆಸುವ ಪಯಣವಿದು. ಇದು ಏಕಕಾಲಕ್ಕೆ ಅಂತರಂಗದ ಪಯಣವೂ ಬಹಿರಂಗದ ಹೋರಾಟವೂ ಹೌದು. ಕೃಷ್ಣಾಪುರ ಹಾಗೂ ಮುಂಬೈಗಳ ನಡುವಿನ ಕರ್ಷಣೆ ಶೇಯಾಂಸನಿಗೆ ಎರಡು ಜೀವನಕ್ರಮಗಳ, ಎರಡು ತಾತ್ವಿಕತೆಗಳ, ಎರಡು ಜೀವನದರ್ಶನಗಳ ನಡುವಿನ ತಾಕಲಾಟ. ತನ್ನ ಮೂಲದ್ರವ್ಯವೇನು? ಎಂಬ ಅರಿವಿಲ್ಲದೇ ತಾನು ಬೆಳೆಯಲಾರೆ, ಏನನ್ನೂ ಬೆಳೆಸಲಾರೆ ಎಂಬ ಅರಿವು ಅವನನ್ನು ಕೃಷ್ಣಾಪುರವನ್ನೂ ಆ ಮೂಲಕ ತನ್ನ ಬದುಕಿನ ನೆಲೆಯನ್ನು ಆಯ್ದುಕೊಳ್ಳುವಂತೆಮಾಡುತ್ತದೆ. ಗ್ರಾಮೀಣ ಜಗತ್ತಿನ ಜಾತೀಯತೆ, ಎಳೆವಯಸ್ಸಿನಲ್ಲಿ ರೇವತಿಯೊಂದಿಗಿನ ಶ್ರೇಯಾಂಸನ ಪ್ರೇಮವನ್ನು ಭಗ್ನಗೊಳಿಸುತ್ತದೆ. ಯಾವ ಸ್ವಾರ್ಥವೂ ಸೋಂಕದ ಅಪ್ಪಟ ನಂಟೊಂದು ಮುರುಟುತ್ತದೆ. ಅಪ್ಪನನ್ನು ಎದುರು ಹಾಕಿಕೊಳ್ಳಲು ಅದೇ ಕಾರಣವಾಗುತ್ತದೆ. ಮುಂದೆ ಮುಂಬೈ ಮಹಾನಗರಿ ಸೇರುವ ಶ್ರೇಯಾಂಸ ಕ್ರಿಶ್ಚಿಯನ್ನಳಾದ ಲಿಝಿಯನ್ನು ಮದುವೆಯಾಗುವುದು ಅಪ್ಪನನ್ನು ವಿರೋಧಿಸುವ ಒಂದು ಮಾರ್ಗ. ಪ್ರೊ. ಪಾಲ್‍ರ ರಸೆಲ್ ಕ್ಲಬ್, ನಾಸ್ತಿಕತೆಯ ಬೋಧ, ಯಾವುದಕ್ಕೂ ಅಂಟಿಕೊಳ್ಳದ ರ್‍ಯಾಶನಲ್ ಥಿಂಕಿಂಗ್, ಅವನಲ್ಲಿ ಒಂದು ಬಗೆಯ ಬಿಡುಗಡೆಯ ಭಾವವನ್ನು ನೀಡುತ್ತವೆ. ಮಹಾನಗರಿಯು ಕೊಡುವ ಈ ಬಿಡುಗಡೆ, ಕಾಯಕದ ಅನಿವಾರ್ಯತೆ ಉಂಟುಮಾಡುವ ಚಲನೆ, ಬಂಡವಾಳಶಾಹೀ ಜಗತ್ತು ಕಲ್ಪಿಸುವ ಸುಖಸೌಲಭ್ಯಗಳು ಮೂಡಿಸುವ ಭ್ರಮೆ, ನೆಲ ಸೋಕದೇ ಗಾಳಿಯಲ್ಲೇ ಇರುವ ಬಹುಮಹಡೀ ಕಟ್ಟಡ ಫ್ಲಾಟ್ ನಂಥದ್ದು. ಯಾವಾಗ ಬೇಕಾದರೂ ನಾಶವಾಗಬಲ್ಲದ್ದು. ಅಲ್ಲಿ ಬದುಕುವ ಯಾರಿಗೂ ಇತಿಹಾಸವಿಲ್ಲ. ಬೇರು ಬೀಜಗಳ ತಪನೆಯಿಲ್ಲ. ಆ ಕ್ಷಣದ ಬದುಕಷ್ಟೇ ಅಲ್ಲಿ ಸತ್ಯ. ಅಲ್ಲಿ ಸುಖಿಯಾಗಿದ್ದೇನೆಂದುಕೊಂಡ ಶ್ರೇಯಾಂಸ ತಂದೆಯ ಸಾವಿನ ಸಂದರ್ಭದಲ್ಲಿ ಊರಿಗೆ ಮರಳುವ ಮೂಲಕ ಕ್ಷೋಭೆಗೊಳಗಾಗುತ್ತಾನೆ. ಅಸ್ತಿತ್ವದ ಹುಡುಕಾಟಕ್ಕಿಳಿಯುತ್ತಾನೆ. ಅಸ್ತಿತ್ವದ ಹುಡುಕಾಟಕ್ಕೆ ಅರ್ಥವಿದೆಯೇ? ಎಂಬ ಸಂದಿಗ್ಧಕ್ಕೆ ಕಾದಂಬರಿ ಎಲ್ಲೂ ಉತ್ತರ ಕೊಡದೇ ಹಾಗೇ ಆ ತಳಮಳವನ್ನು ಹಿಡಿದಿಡುತ್ತದೆ. ಉತ್ತರ ನಮ್ಮೊಳಗೇ ಬೆಳೆಯಲು ಬಿಡುತ್ತದೆ.

ಕಾದಂಬರಿಯ ಒಂದು ಬದಿ ಕೃಷ್ಣಾಪುರದ ಅಪ್ಪಾಸಾಹೇಬನ ಮಗ ಶ್ರೇಯಾಂಸನಾದರೆ, ಇನ್ನೊಂದು ತುದಿ ಅವನ ಮಗಳು ಮುಂಬೈ ಸಂವೇದನೆಯ ಕಲ್ಪನಾ. ಶ್ರೇಯಾಂಸನಿಗೆ ಸದಾ ಮಗಳೆಂದರೆ ಬೆರಗು ಮತ್ತು ಮೆಚ್ಚುಗೆ. ಕಲ್ಪನಾಳಲ್ಲಿ ಒಂದು ಮುಕ್ತಪ್ರಜ್ಞೆಯ ಚೆಲುವಿದೆ. ಸದಾ ಹೊಸ ಅನುಭವಗಳಿಗಾಗಿ ನೋವುಗಳಿಗಾಗಿ ತುಡಿಯುವ ಅವಳಿಗೆ ಪೂರ್ವಗ್ರಹಗಳಿಲ್ಲ. ಆದ್ದರಿಂದ ಅವಳು ಕೃಷ್ಣಾಪುರವನ್ನು ಭಾವನಾತ್ಮಕ ಸಿಕ್ಕುಗಳಿಂದ ಹೊರತಾಗಿ ಕಾಣಬಲ್ಲಳು. ಹಾಗಾಗಿಯೇ ಆ ನೆಲವನ್ನೂ ಅಲ್ಲಿನ ಜನರನ್ನೂ ಅಕಾರಣ ಪ್ರೀತಿಸಬಲ್ಲಳು. ಅಲ್ಲಿನ ನಿಸರ್ಗ, ಆ ಜನರ ಚಹರೆಗಳು ಎಲ್ಲವೂ ಅವಳಿಗೆ ಅಪ್ಯಾಯಮಾನ. ಅವಳಿಗೂ ಮೂಲದ ಸೆಳೆತವಿದೆ. ಆದರೆ ಮೌಲ್ಯಗಳ ಹಂಗಿಲ್ಲ. ಸಂಬಂಧಗಳನ್ನು ಭಾರವಾಗದಂತೆ ಹಗುರಾಗಿ ಸ್ವೀಕರಿಸುವ ಈ ಸಹಜತೆ ಅವಳ ತಲೆಮಾರಿಗೆ ಸಹಜವಾಗಿ ಸಿದ್ದಿಸಿದೆ. ಸದಾ ಹರಿಯುವ ನೀರಿಗೆ ಪಾವಿತ್ರ್ಯದ ಹಂಗಿಲ್ಲ. ತನ್ನ ವಿಕಾಸಕ್ಕೆ ಮಿತಿಯೊಡ್ಡುವ ಎಲ್ಲ ಸಂಬಂಧಗಳನ್ನೂ ದಾಟಿ ಹರಿಯಬಲ್ಲ ಚೈತನ್ಯ ಆಕೆ. ಹಾಗಂತ ಅವಳಿಗೆ ತನ್ನದೇ ಆದ ಸ್ವತಂತ್ರ ಲೋಕದೃಷ್ಟಿಯಿದೆ. ಅದು ಪೇಂಟಿಂಗ್ ಕಲಿಸಿದ ಲೋಕದೃಷ್ಟಿ. “ಒಂದು ವಸ್ತುವನ್ನು, ಒಂದು ಸಂಗತಿಯನ್ನು, ಘಟನೆಯನ್ನು ನೋಡುವ ಕ್ರಮದಲ್ಲಿಯೇ ಅದರ ಅಸ್ತಿತ್ವವಿದೆ. ಅದರ ಸತ್ಯವೂ ಇದೆ”: ಈ ಮಾತುಗಳೇ ಓಪನ್ ಎಂಡೆಡ್ ಆದ ಸತ್ಯವನ್ನು ತೋರಿಸುತ್ತವೆ. ಎಲ್ಲವೂ ನಮ್ಮನಮ್ಮ ಪಾಲಿನ ಸತ್ಯಗಳಷ್ಟೇ. ಅವಳ ತಾಯಿ ಲಿಝಿಯ ಸತ್ಯ, ತಂದೆ ಶ್ರೇಯಾಂಸನ ಸತ್ಯಗಳು ಬೇರೆಯೇ. ಆದ್ದರಿಂದ ಅವರು ಗಂಡಹೆಂಡಿರಾಗಿ ಸಮಾನಾಂತರ ರೇಖೆಗಳಂತೆ ಉಳಿದುಬಿಡುತ್ತಾರೆ. ಇವರಿಬ್ಬರ ಒಳತೋಟಿಗಳನ್ನೂ ಉದ್ವಿಗ್ನತೆಯಿಲ್ಲದೆ ಅರಿಯುವುದು ಮಗಳಿಗೆ ಶಕ್ಯವಿದೆ.

ಶ್ರೇಯಾಂಸನ ಮುಂಬೈ ಬದುಕು ಆರಂಭವಾಗಿದ್ದು ಅಪ್ಪನಿಗೆ ಪ್ರತಿಯಾಗಿ ಪರ್ಯಾಯ ಬದುಕೊಂದನ್ನು ಕಟ್ಟಿಕೊಳ್ಳುವ ಛಲದಿಂದ. ಅಪ್ಪನೇ ತೀರಿಕೊಂಡ ಮೇಲೆ ಆ ಹೋರಾಟವಿಲ್ಲದ ಬದುಕು ಸ್ಥಗಿತವೆನಿಸತೊಡಗುತ್ತದೆ. ತನ್ನ ಹುಟ್ಟೂರಿನ ಬದುಕನ್ನು ಕಟ್ಟುವ ಸವಾಲನ್ನು ಸ್ವೀಕರಿಸುವಲ್ಲೇ ಜೀವಂತಿಕೆಯದೆಯೆಂದು ಅವನಿಗನಿಸುತ್ತದೆ. ಇದು ಬೌದ್ಧಿಕ ಸವಾಲೂ ಹೌದು, ಕರ್ತೃತ್ವಶಕ್ತಿಯ ಸವಾಲೂ ಹೌದು. ಬದುಕೆಂದರೆ ಕೃತಿ, ಕಟ್ಟುತ್ತಹೋಗುವುದು ಎಂಬ ಸೃಜನಶೀಲ ತಿಳಿವು ಅವನೊಳಗಿನ ಬೀಜಕಲ್ಪನೆ. ಅಸ್ತಿತ್ವವಾದ, ಮಾಯಾವಾದ, ಶೂನ್ಯವಾದ ಎಲ್ಲವನ್ನೂ ಮೀರಿ ವಾಸ್ತವದಲ್ಲಿ ನಿಂತು ಕಟ್ಟಿಕೊಳ್ಳುತ್ತಹೋಗುವಲ್ಲಿಯೇ ಬದುಕಿನ ಅಸ್ತಿತ್ವವಿದೆಯೆಂದು ಅವನಿಗನಿಸುತ್ತದೆ. ಹಾಗೂ ಕಟ್ಟಿಕೊಳ್ಳುವ ಕ್ರಿಯೆಗಿಳಿಸುತ್ತದೆ. ಅಪ್ಪನ ಸಾವಿನ ನಂತರ ತನ್ನ ಆಸ್ತಿಯ ನಿರ್ವಹಣೆಯನ್ನು ಚಿಕ್ಕಪ್ಪನಿಗೊಪ್ಪಿಸಿ ಮುಂಬೈಗೆ ಹೋಗಿಬಿಡುವ ಅವನ ನಿರ್ಧಾರ ದಿನೇದಿನೇ ತೆಳುವಾಗುತ್ತ ಕೊನೆಗೆ ಬದಲಾಗುತ್ತದೆ. “ಆಸ್ತೀ ಅಂದರ ಅದಕ್ಕೆ ಬೇರು ಇರತಾವು ಬೇರು” ಎಂಬ ಅಪ್ಪನ ಒಡನಾಡಿಯಾದ ಕಲ್ಯಾಣ ಶೆಟ್ಟರ ಮಾತು ಅವನನ್ನು ಗಾಢವಾಗಿ ಕಲಕುತ್ತದೆ. ಗ್ರಾಮ್ಯ ಬದುಕು ಗಾಢವಾಗಿ ನಂಬಿಕೊಂಡ ಇಂಥ ಮೌಲ್ಯಗಳ ಜಗತ್ತು ಅವನನ್ನು ಮುಂಬೈಗೆ ಹೋಗದಂತೆ ತಡೆಯುತ್ತದೆ. ಊರಿನಲ್ಲಿ ಸಾಮಾಜಿಕ ಬದಲಾವಣೆಗೆಳಸುವ ಶ್ರೇಯಾಂಸನ ಪ್ರಯತ್ನಗಳು ಅವನನ್ನು ಅಪಾಯಕ್ಕೆ ದೂಡುತ್ತವೆ. ಕೊನೆಯಲ್ಲಿ ಶ್ರೇಯಾಂಸನೂ ಕತ್ತಲಲ್ಲಿ ಮುಖಹೀನ ವ್ಯಕ್ತಿಗಳಿಂದ ಥಳಿಸಲ್ಪಡುತ್ತಾನೆ. ಅವನನ್ನು ಮುಂಬೈಗೆ ಓಡಿಹೋಗುವಂತೆ ಭೀತಗೊಳಿಸುವ ಹುನ್ನಾರಗಳು ತೆರೆಮರೆಯಲ್ಲಿ ರೂಪುಗೊಳ್ಳುತ್ತಲೇ ಇರುತ್ತವೆ. ಹಗಲಲ್ಲಿ ಕಾಣುವ ಆಪ್ತ ಸಂಬಂಧಗಳ ಒಡಲಲ್ಲೇ ಇಂಥ ಕೇಡಿನ ಕತ್ತಲಮುಖಗಳೂ ಅಡಗಿವೆ. ತನ್ನ ನೆಲದಲ್ಲೇ ಇರುವ ಕೇಡಿನೊಂದಿಗೆ ಹೋರಾಡಲು ಶ್ರೇಯಾಂಸ ಕೊನೆಗೂ ಸಿದ್ದನಾಗುತ್ತಾನೆ.

ಕಾದಂಬರಿಯು ಸಂಬಂಧಗಳ ಸಂಕೀರ್ಣತೆಯನ್ನು ಕಥನದ ಭಿತ್ತಿಯಲ್ಲಿ ತೆರೆದಿಡುತ್ತಹೋಗಿದೆ. ಸಂಬಂಧಗಳ ಸಿಕ್ಕುಗಳಲ್ಲಿ ಬಂಧಿಯಾದ ನಮ್ಮ ಅಸ್ತಿತ್ವವು ಅದರಿಂದ ಹೊರಬಂದು ನೋಡುವುದನ್ನು ಕಲಿತಾಗಲೇ ಸ್ವತಂತ್ರಗೊಳ್ಳುವುದೆಂಬ ಅರಿವು ಉದ್ದಕ್ಕೂ ಹರಿದಿದೆ. ಸಂಬಂಧಗಳು ನಮ್ಮನ್ನು ಜೀವಂತವಾಗಿಡುತ್ತವೆ. ಪ್ರೀತಿ ದ್ವೇಷ ಎರಡೂ!. ಕೆಲವೊಮ್ಮೆ ಒಂದರೊಳಗೊಂದು ಬೆರೆತಿರುತ್ತವೆ. ಸಹಜಸ್ಪೂರ್ತವಾದ ಭಾವನೆಗಳಿಗೆ ಸ್ಪಂದಿಸುವ ತೀವ್ರ ಮನುಷ್ಯತ್ವ ಹಾಗೂ ಸಹಾನುಭೂತಿಯಿಂದ ಅರಿಯುವ ವಿವೇಚನೆ ಎರಡೂ ಬದುಕಲ್ಲಿ ಎದುರಾಗುತ್ತಲೇ ಇರುತ್ತದೆ. ಅದರಿಂದಲೇ ಲೋಕದಲ್ಲಿ ಪ್ರತಿಯೊಬ್ಬರೂ ಸಂಬಂಧಗಳನ್ನು ಗ್ರಹಿಸುವ ವಿನ್ಯಾಸವು ಬದಲಾಗುತ್ತಹೋಗುತ್ತದೆ. ಮುಂಬೈ ಬದುಕು ಶ್ರೇಯಾಂಸನಿಗೆ ಸಂಬಂಧಗಳನ್ನು ಗ್ರಹಿಸುವ ಹೊಸ ಕಣ್ಣನ್ನು ನೀಡಿದೆ. ನೈತಿಕ ಮಾನದಂಡಗಳ ಹೊರೆಯಿಂದ ಬಿಡಿಸಿಕೊಂಡು ಸಹಜವಾಗಿ ಕಾಣಬಲ್ಲ ಕಣ್ಣು ಅದು. ನೀತಿ ಅನೀತಿಯ ಜಟಿಲತೆಯನ್ನೂ ನೋಟದ ನದಲಾವಣೆ ಮಾತ್ರದಿಂದ ನಿರಾಳಗೊಳಿಸಬಹುದು. ಅದನ್ನು ಸಾಧಿಸಲು ಪೂರ್ವಗ್ರಹ ಕಳಚಬೇಕು. ಅಂಥ ಫಿಲಾಸಫಿಕಲ್ ಒಳನೋಟಗಳ ಶೋಧವೂ ಕಾದಂಬರಿಯಲ್ಲಿದೆ. ಅಂಬುಜಾಬಾಯಿ ಹಾಗೂ ಅವಳ ನಂತರದ ತಲೆಮಾರಿನ ಎಳೆಯಳಾದ ಸೋನೂಬಾಯಿಯರನ್ನು ಅವರ ನೈತಿಕ ಹಿನ್ನೆಲೆಯಿಂದ(ಕಲಾವಂತಿಣಿಯರು) ಮುಕ್ತಗೊಳಿಸಿ ಅವರು ವಿವಾಹಬಾಹಿರ ಸಂಬಂಧಗಳಿಗೇ ಅರ್ಹರು, ದೈಹಿಕ ವಾಂಛೆಗಳಿಗೆ ಸುಲಭಲಭ್ಯರು ಎಂಬ ನೋಟವನ್ನು ಬದಲಿಸುತ್ತಾನೆ. ಅವರೊಳಗೇ ಬೇರೂರಿದ್ದ ಈ ಪರಂಪರಾಗತ ಭಾವವನ್ನೂ ಬದಲಿಸಿ ತಮ್ಮನ್ನು ತಾವು ಮುಕ್ತವಾಗಿ ಕಟ್ಟಿಕೊಳ್ಳಬಲ್ಲ ಸಾಧ್ಯತೆಯನ್ನು ತೆರೆದಿಡುತ್ತಾನೆ. ಅವನ ಬಾಲ್ಯದ ಪ್ರೇಯಸಿ ವಿಧವೆ ರೇವತಿ ಮತ್ತೆ ತನಗೆ ಸಿಗುವಳೇನೋ ಎಂಬ ಹಂಬಲ ಅವನದಾಗಿದ್ದರೂ, ಅವಳ ಸ್ವತಂತ್ರ ವ್ಯಕ್ತಿತ್ವದ ವಿಕಾಸವನ್ನು ಅವನು ಹಾರ್ದಿಕವಾಗಿ ಸ್ವಾಗತಿಸುತ್ತಾನೆ.

ಶ್ರೇಯಾಂಸನಿಗೆ ರೇವತಿ ಒಂದು ಜಗತ್ತಾದರೆ ಪತ್ನಿ ಲಿಝಿ ಇನ್ನೊಂದು ಜಗತ್ತು. ರೇವತಿ ತಣ್ಣಗೆ ಉರಿಯುವ ಒಂದು ಮರದಂತೆ. ಅವಳು ಶ್ರೇಯಾಂಸನ್ನು ಕಟ್ಟಿಹಾಕಬಲ್ಲ ವ್ಯವಹಾರಿಕಳಲ್ಲ. ಅದೊಂದು ಅನೂಹ್ಯ ಅಪೂರ್ಣ ಪ್ರೇಮವಾಗಿಯೇ ಉಳಿಯುತ್ತದೆ. ಆದರೆ ಲಿಝಿ ಶ್ರೇಯಾಂಸನನ್ನು ರೂಪಿಸಬಯಸುತ್ತಾಳೆ. ತನ್ನ ನಿರೀಕ್ಷೆಗಳಲ್ಲಿ ಬಂಧಿಸುತ್ತಾಳೆ. ಅವಳ ಜೊತೆಯಿದ್ದಾಗ ವ್ಯಕ್ತವಾಗುವ ಶ್ರೇಯಾಂಸನ ವ್ಯಕ್ತಿತ್ವ ತೋರಿಕೆಯದು. ಅದರೊಳಗಿನ ರಹಸ್ಯಮಯ ಆಳ ಅವಳಿಗೆ ನಿಲುಕುವುದಿಲ್ಲ. ಪತಿ ಪತ್ನಿಯರ ಸಂಬಂಧ ತನ್ನ ಸಾಮಾಜಿಕ ಮುದ್ರೆಯಿಂದಾಗಿ ಅದೊಂದು ಒಪ್ಪಂದದಂತೆ ಬಾಳುತ್ತದೆ. ಆದರೆ ಒಬ್ಬರನ್ನೊಬ್ಬರು ಅರಿಯುವುದು ಎಂಬುದು ಮಿಥ್ಯೆ. “ ಸರ್ ಅವಳಿಗೆ ನನ್ನ ವ್ಯಕ್ತಿತ್ವದ ಒಂದು ಗೂಢವಾದ ಭಾಗದ ದರ್ಶನವಾಗಿರಬೇಕು. ಅದರಿಂದ ಅವಳು ಅಪ್ಸೆಟ್ ಆಗಿರಬೇಕು. ನಮಗೊಂದು ಹಳ್ಳಿಯ ವ್ಯಕ್ತಿತ್ವದ ಅಂಗವಿದೆ. ಒಂದು ಭಾರತೀಯ ವ್ಯಕ್ತಿತ್ವದ ಅಂಗವಿದೆ. ನನಗೊಂದು ಇತಿಹಾಸವಿದೆ ಇತ್ಯಾದಿ..” (ಪು195) ಬುದ್ದಿಯ ಪಾತಳಿಯಲ್ಲಿ ಇದೆಲ್ಲ ಗೊತ್ತಿದ್ದರೂ ಭಾವನೆಯ ಪಾತಳಿಯಲ್ಲಿ ಇದೆಲ್ಲ ಅನುಭವವಾದಾಗ ಭಿನ್ನತ್ವ ಗೋಚರಿಸುತ್ತದೆ. ಸಂಬಂಧಗಳು ಅದ್ವೈತಗೊಳ್ಳುವುದು ಒಂದು ಸುಂದರ ಭ್ರಮೆಯಷ್ಟೇ ಎಂಬ ದರ್ಶನವೂ ಇಲ್ಲಿದೆ. ಪತ್ನಿ ಲಿಝಿಯ ಸ್ವತಂತ್ರ ವ್ಯಕ್ತಿತ್ವವನ್ನು ಗೌರವಿಸುವ ಆತ, ತನ್ನ ವ್ಯಕ್ತಿತ್ವವನ್ನೂ ಅವಳಿಂದ ಬಿಡುಗಡೆಗೊಳಿಸಿಕೊಳ್ಳುತ್ತಾನೆ. ಪತಿಪತ್ನಿಯರಲ್ಲೂ ಅಧಿಕಾರದ ಹೇರುವಿಕೆ ನಿಂತಾಗಲೇ ನಿಜವಾದ ಪ್ರೇಮ ವಿಕಸಿಸುವುದು ಸಾಧ್ಯವಾಗುತ್ತದೆ. ಲಿಝಿಯ ನಗರಕೇಂದ್ರಿತ ಸೀಮಿತ ವ್ಯಕ್ತಿತ್ವ ಹಾಗೂ ಕ್ರಿಶ್ಚಿಯನ್ ಶ್ರದ್ಧೆಗಳನ್ನು ಆತ ವಿರೋಧಿಸುವುದಿಲ್ಲ. ತನ್ನ ಗ್ರಾಮ್ಯ ವ್ಯಕ್ತಿತ್ವದ ಅಂಶಗಳನ್ನು, ತನ್ನ ನೆಲದ ಬಗೆಗಿನ ಸಂಬಂಧವನ್ನೂ ಉಳಿಸಿಕೊಳ್ಳುತ್ತಾನೆ. ತಾವಿಬ್ಬರೂ ಭಿನ್ನವೆಂಬ ಸತ್ಯವನ್ನು ಶ್ರೇಯಾಂಸ ಹಾಗೂ ಲಿಝಿ ಇಬ್ಬರೂ ಒಪ್ಪಿಕೊಂಡು ಮುನ್ನಡೆಯುವಲ್ಲಿ ಅವರಿಬ್ಬರ ಬಿಡುಗಡೆಯೂ ತೋರುತ್ತದೆ. ಸಂಬಂಧಗಳ ಬಗೆಗಿನ ಇಂಥ ಹೊಸನೋಟವೊಂದನ್ನು ಶಾಂತಿನಾಥರು ಎಪ್ಪತ್ತರ ದಶಕದಲ್ಲಿಯೇ ಸುಸ್ಪಷ್ಟವಾಗಿ ನೀಡಿದ್ದಾರೆ. ಪ್ರೀತಿಯೆಂಬುದು ಸ್ವಾತಂತ್ರ್ಯದಲ್ಲಿದೆ ಎಂಬ ಅರಿವು ಕಾದಂಬರಿಯದು. ಶ್ರೇಯಾಂಸ ರೇವತಿ ಲಿಝಿ ಈ ಮೂರೂ ಬಿಂದುಗಳು ಪರಸ್ಪರರಿಂದ ಸ್ವತಂತ್ರರಾಗಿ ಉಳಿದೇ ತಮ್ಮ ಸತ್ಯಗಳನ್ನು ಶೋಧಿಸಿಕೊಳ್ಳುತ್ತವೆ.

ಲಿಝಿಯ ಪ್ರಕಾರ ಸಂಬಂಧ ಅಂದರೆ ಬರಿಯ ರಕ್ತಸಂಬಂಧವಲ್ಲ. ರಕ್ತಸಂಬಂಧ ಬರಿಯ ಪ್ರಾಣ ಜೀವನದ ಪಾತಳಿಯದು. ಸಂಬಂಧ ಅಂದರೆ ಪ್ರೀತಿ ಸಹಾನುಭೂತಿ ಇತ್ಯಾದಿ ಸ್ಪಿರಿಚ್ಯುಅಲ್ ಹೊಂದಾಣಿಕೆ ಇರಬೇಕು. ಕೃಷ್ಣಾಪುರದ ತನ್ನ ಮನೆಯ, ಮನೆಯವರ ಜೊತೆ ಅಂಥ ಸಂಬಂಧ ಹೊಂದಿರದ ಶ್ರೇಯಾಂಸ ತನ್ನ ತಂದೆ ಸತ್ತಾಗ ಬರಿಯ ತನ್ನ ಹಿಂದು ರಿಚುಯಲ್ಸ್ ಪೂರೈಸಲೆಂದು ಮಾತ್ರ ಅಲ್ಲಿದ್ದಾನೆ, ಮುಗಿದ ಕ್ಷಣವೇ ವಾಪಸಾಗುತ್ತಾನೆಂಬ ನಂಬಿಕೆ ಅವಳದು. ಸಂಬಂಧಗಳ ಬಗೆಗೆ ತೀರ್ಮಾನಗಳನ್ನು ತಳೆಯುವಾಗ ವಸ್ತುನಿಷ್ಠತೆಯ ಬೇಸಿಸ್ ಇರಬೇಕೆಂಬುದು ಪ್ರೊ.ಪಾಲ್ ಅವರ ಅಭಿಪ್ರಾಯ. ಆಗಮಾತ್ರ ಬುದ್ದಿಜನ್ಯವಾದ ಒಡಂಬಡಿಕೆ ಮಾಡಿಕೊಳ್ಳುವುದು ಸಾಧ್ಯ. ಪಶ್ಚಿಮದ ರ್‍ಯಾಶನಾಲಿಟಿಯನ್ನು ಮನೋಧರ್ಮವಾಗಿಸಿಕೊಂಡ ರಸೆಲ್‍ವಾದಿ ಪಾಲ್ ಅವರನ್ನು ಗುರುವಾಗಿ ಒಪ್ಪಿಕೊಂಡಿದ್ದ ಶ್ರೇಯಾಂಸ ನಿಧಾನವಾಗಿ ಭಾರತೀಯ ಮನೋಧರ್ಮದಲ್ಲಿ ಕಂಡುಬರುವ ಅತಾರ್ಕಿಕ ನಿಗೂಢತೆ, ಬಾಂಧವ್ಯದ ಭಿನ್ನ ಪರಿಭಾವಿಸುವಿಕೆಯ ಕಡೆ ಒಲಿಯುತ್ತಾನೆ. ಪಶ್ಚಿಮದ ವಿಚಾರವಾದ ಹಾಗೂ ಪೂರ್ವದ ಭಾವಕೇಂದ್ರಗಳ ಮುಖಾಮುಖಿ ಕಾದಂಬರಿಯುದ್ದಕ್ಕೂ ಇದೆ. ಪ್ರೊ. ಪಾಲ್ ಹಾಗೂ ಲಿಝಿಯ ಪ್ರಭಾವದಿಂದ ಹೊರಬರುತ್ತಿದ್ದಂತೇ ತನಗೇ ಅರಿವಿಲ್ಲದಂತೆ, ನೆರಳಿನಂತೆ ಅಸ್ತಿತ್ವದ ಭಾಗವಾಗಿರುವ ಅನೇಕ ಅನೂಹ್ಯ ಸಾಧ್ಯತೆಗಳು ಅವನಲ್ಲಿ ಗರಿಬಿಚ್ಚತೊಡಗುತ್ತವೆ. ಅದನ್ನು ತನ್ನ ಬದುಕಿನ ಉತ್ತರಾರ್ಧದಲ್ಲಿ ಶ್ರೇಯಾಂಸ ಶೋಧಿಸಹೊರಡುತ್ತಾನೆ.

ಶ್ರೇಯಾಂಸನ ಅಸ್ತಿತ್ವದ ಹುಡುಕಾಟಕ್ಕೆ ಕನ್ನಡಿ ಹಿಡಿಯುವಂಥ ಪಾತ್ರವೊಂದು ಕಾದಂಬರಿಯಲ್ಲಿದೆ. ಅದು ಮುಂಬೈಯ ಸ್ನೇಹಿತ ಸುರೇಶ ಅಬೆಂಕ್ಯನದು. ತನ್ನ ಹುಡುಕಾಟಗಳು ಸೂಕ್ಷ್ಮ ಹಾಗೂ ತೀವ್ರ ಎಂಬ ಶ್ರೇಯಾಂಸನ ನಂಬಿಕೆಗಳ ಬೇರನ್ನೇ ಅವನು ಅಲ್ಲಾಡಿಸುತ್ತಾನೆ. ಮೂಲವನ್ನರಸುವ, ಇತಿಹಾಸವನ್ನು ಬಗೆಯುವ ಬುದ್ದಿಜನ್ಯ ತಲ್ಲಣಗಳನ್ನು ನಿರಾಕರಿಸುತ್ತಾನೆ. ಪೂರ್ವಜರ ಬೇರುಗಳು ಯಾಕಾದರೂ ಬೇಕು? ಎಂಬುದು ಅವನ ಪ್ರಶ್ನೆ. ಇನ್ನು ನೆಲ ಹೊಲ ಎಂಬುದೆಲ್ಲ ಭೌಗೋಳಿಕ ಸತ್ಯಗಳು. ಅದನ್ನು ಭಾವನಾತ್ಮಕ ಸಂಕಟಗಳನ್ನಾಗಿ ಪರಿವರ್ತಿಸುವುದು ಮೂರ್ಖತನವಲ್ಲವೇ ಎಂದು ಆತ ಪ್ರಶ್ನಿಸುತ್ತಾನೆ. “ಇಲ್ಲಿ ನೋಡು, ನನ್ನ ಪೂರ್ವಜರೆಲ್ಲ ಇಲ್ಲಿಯವರೇ. ಸಾಲಾ, ನನ್ನ ಬೀಜ, ಬೇರು, ಬಳ್ಳಿ, ಗಿಡ, ಮರ ಎಲ್ಲಾ ಇಲ್ಲೇ ಇವೆ. ಅದರದೇನು ಉಪಯೋಗ ಹೇಳು. ಸಾಲಾ ಯಾರೋ ಒಬ್ಬ ಪಂಜಾಬಿ ಬರ್ತಾನ, ಒಬ್ಬ ಸಿಂಧೀ ಬರ್ತಾನ, ನಮ್ಮ ನೆಲ ಕೊಂಡು ತಗೊಂಡು ಬಿಡ್ತಾನ. ಮತ್ತ ಎತ್ತರವಾದಂಥ, ಅರ್ಧ ಗಾಳಿಯಲ್ಲೇ ಇದ್ದಂಥ ಮುಗಿಲು ಕೊರೆಯುವ ಮನೆಗಳನ್ನು ಕಟ್ಟಿದ. ಅದರಾಗ ಎಲ್ಲಿಂದಲೋ ಮದರಾಸಿಗಳು, ಮಲೆಯಾಳಿಗಳು, ಭಯ್ಯಾಗಳು, ಬಂಗಾಲಿಗಳು ಇತ್ಯಾದಿಗಳು ಬಂದು ಹೂಳ ತುಂಬಿದಂತೆ ತುಂಬಿಕೊಂಡಿಬಿಡ್ತಾವ. ಎಲ್ಲಿದೆ ನಮ್ಮ ನೆಲ, ಹ್ಯಾಂಗ ಉಳೀತದೆ ನಮ್ಮ ನೆಲ.. ಅದೆಲ್ಲಾ ಒಂದು ಅಂಧಶ್ರದ್ಧೆ, ತಮ್ಮಾ ಒಂದು ಮಾಯೆ..” ನಾವು ನಮ್ಮವರೆಂದುಕೊಂಡವರೆಲ್ಲ ಶಾಸ್ವತರಲ್ಲ. ಒಬ್ಬರ ಹಿಂದೊಬ್ಬರು ಸಾಯುತ್ತಲೇ ಹೋಗುತ್ತಾರೆ. ಮುಂದೇನು?. ಇರುವಲ್ಲಿ ಇರುವಷ್ಟು ದಿನ ಮಾತ್ರವಲ್ಲವೇ ನಮ್ಮ ಅಸ್ತಿತ್ವ? ಎಂಬ ಮಾರ್ಮಿಕ ಪ್ರಶ್ನೆ ಮುಂದಿಡುತ್ತಾನೆ. ಮಹಾನಗರಗಳ ಬದುಕು ಕಲಿಸಿದ ಫಿಲಾಸಫಿಯಿದು. ಇಲ್ಲಿ ಚರಿತ್ರೆಯೂ ಇಲ್ಲ ಭವಿಷ್ಯವೂ ಇಲ್ಲ. ಸಧ್ಯದ ಅಸ್ತಿತ್ವ ಮಾತ್ರವಿದೆ. ಅರ್ಧಗಾಳಿಯಲ್ಲೇ ತೂಗುವ ಅಪಾರ್ಟಮೆಂಟುಗಳಂತೆ. ಇದು ಕ್ಯಾಪಟಲಿಸ್ಟರು ಕಟ್ಟಿದ ತ್ರಿಶಂಕು ಸ್ವರ್ಗ. ಆದರೆ ಇಲ್ಲಿಯೇ ದ್ವಂದ್ವಗಳಿಲ್ಲದೇ ತನ್ನ ಮೋಕ್ಷ ಕಾಣಬಲ್ಲವನು ಸುರೇಶ. ಕೃಷ್ಣಾಪುರದ ಸಮಾಜವನ್ನು ಪರಿವರ್ತನೆ ಮಾಡುವ ಶ್ರೇಯಾಂಸನ ಕನಸೇ ಅವನಿಗೆ ಅಸಂಗತವಾಗಿ ತೋರುತ್ತದೆ. ಕ್ರಾಂತಿಯೆಂಬುದೂ ಹುಸಿಯೆಂದೇ ಅವನ ವಾದ. ಅವನ ಪ್ರಕಾರ ಕ್ರಾಂತಿಗಳೆಲ್ಲ ಮಹಾನಗರಗಳಲ್ಲಿಯೇ ಸಂಭವಿಸುತ್ತವೆ. ಮತ್ತೆ ಅಲ್ಲಿಂದ ದೇಶದ ತುಂಬ ಹಬ್ಬುತ್ತವೆ. ಪ್ರವಾಹದೊಡನೆ ಸಾಗದೇ ತನ್ನನ್ನು ಪುನರ್ರಚಿಸಿಕೊಳ್ಳುವ ಶ್ರೇಯಾಂಸನ ತಳಮಳವೇ ಅವನಿಗೆ ಹಾಸ್ಯಾಸ್ಪದವೆನಿಸುತ್ತದೆ.

ಕೃಷ್ಣಾಪುರಕ್ಕೆ ಹೋದನಂತರ ಶ್ರೇಯಾಂಸನ ಮೂಲಜಗತ್ತು ಅವನ ಮುಂದೆ ವಿಧವಿಧವಾಗಿ ತೆರೆದುಕೊಳ್ಳುತ್ತಹೋಗುತ್ತದೆ. ಮನುಷ್ಯ ಸಂಬಂಧದ ಒಳ ಸುಳಿಗಳು ಬಿಚ್ಚಿಕೊಳ್ಳುತ್ತಹೋಗುತ್ತವೆ. ಆಸ್ತಿ ಅಧಿಕಾರದ ಹಂಬಲಗಳು ಒಳಗೊಳಗೇ ಮಸೆಯುತ್ತಾ ವಿರೂಪ ತಳೆಯುತ್ತಹೋಗುವುದನ್ನು ಆತ ಗಮನಿಸುತ್ತಾನೆ. ತೋರುವುದೂ ಇರುವುದೂ ಬೇರೇಯೇ ಎಂಬ ಸತ್ಯ ಬಯಲಾಗುತ್ತಹೋದಂತೆ ಗ್ರಾಮ್ಯ ಸಮಾಜದ ರಾಜಕೀಯ ವರಸೆಗಳು ಅರಿವಾಗುತ್ತದೆ. ಸ್ವಾತಂತ್ರ್ಯಾನಂತರದ ಮೌಲ್ಯಗಳ ವಿಘಟನೆ, ಆಧುನಿಕತೆಯನ್ನು ಅರಗಿಸಿಕೊಳ್ಳುವಲ್ಲಿ ಉಂಟಾದ ದಿಗ್ಭ್ರಮೆಗಳು, ನಗರೀಕರಣ ಹಾಗೂ ಬಂಡವಾಳಶಾಹಿಯ ಹಿಡಿತ, ಸಾಮಾಜಿಕ ವೈಷಮ್ಯಗಳು, ಶಿಕ್ಷಿತ ಸಮುದಾಯವು ಮುಖ್ಯವಾಗಿ ಎದುರಿಸಿದ ತಾತ್ವಿಕ ಹಾಗೂ ಸೈದ್ಧಾಂತಿಕ ಬಿಕ್ಕಟ್ಟುಗಳು, ಸಾಮೂಹಿಕ ಬದುಕಿನ ವಿಕಾಸಕ್ಕೆ ಬೇಕಾದ ಸೂಕ್ತ ರಾಜಕೀಯ ನಿಲುವಿನ ಕೊರತೆ ಇವೆಲ್ಲವೂ ಶ್ರೇಯಾಂಸನ ಪ್ರಜ್ಞೆಯ ಮೂಲಕ ಅರಿವಿಗೆ ಬರುತ್ತಹೋಗುತ್ತವೆ. ಇದು ಶ್ರೇಯಾಂಸನೆಂಬ ನಾಯಕನ ತೊಳಲಾಟ ಮಾತ್ರವಾಗಿ ಕಾಣದೆ ಗ್ರಾಮ ನಗರಗಳ ಮಧ್ಯೆ ಹೊಯ್ದಾಡುವ, ತಮ್ಮ ನಿಜವಾದ ಜೀವನದರ್ಶನ ಯಾವುದೆಂದು ಭಾವನಾತ್ಮಕವಾಗಿ ತುಮುಲಕ್ಕೊಳಗಾದ ಹೊಸ ಜನಾಂಗವೊಂದರ ಬಿಕ್ಕಟ್ಟಾಗಿಯೂ ತೋರುತ್ತದೆ.

ಕ್ರಾಂತಿಯ ಬೀಜಗಳನ್ನು ಒಡಲುಗೊಂಡು ತಪಿಸುವ ಶ್ರೇಯಾಂಸನಲ್ಲಿ ಅನೇಕ ವಿಚಾರಗಳು ಮಥಿಸುತ್ತಲೇ ಇರುತ್ತವೆ. ಆರಂಭದಲ್ಲಿ ಮುಂಬೈನಲ್ಲಿ ಪ್ರೊ.ಪಾಲ್‍ರ ಮೂಲಕ ಒದಗಿದ ರಸೆಲ್ ಚಿಂತನೆಗಳಿಂದ ಪ್ರಭಾವಿತನಾಗುತ್ತಾನೆ. ಮಾರ್ಕ್ಸ್ ಚಿಂತನೆಯೂ ಅವನನ್ನು ಪ್ರಭಾವಿಸುತ್ತದೆ. ಹೊಸ ವಿಚಾರವಾದದಿಂದ ತನ್ನೊಳಗಿನ ಭಾವಸಾಂದ್ರತೆಯನ್ನು ಕಳಚಿಕೊಂಡುಬಿಡಬಹುದೆಂದು ಅವನಿಗನಿಸುತ್ತದೆ. ಆದರೆ ಒಳಚಲನೆ ವಿರುದ್ದವಾಗಿರುತ್ತ ಚಕಿತಗೊಳಿಸುತ್ತದೆ. ತನ್ನೂರಿನಲ್ಲಿ ಕ್ರಾಂತಿಯಾಗಬೇಕೆಂದು ಬಯಸುವ ಅವನ ಆಧುನಿಕ ಮನಸ್ಸು ಅಲ್ಲಿನ ಸ್ಥ್ಥಾಪಿತ ಶಕ್ತಿಗಳ ಜೊತೆ ಹೋರಾಡುವ ಸವಾಲನ್ನು ಎದುರಿಸಬೇಕಾಗುತ್ತದೆ. ಕ್ರಾಂತಿಯೆಂದರೇನು? ಎಂಬ ತಾತ್ವಿಕ ಜಿಜ್ಞಾಸೆ ಅವನಲ್ಲಿ ಹೊರಳುತ್ತದೆ. ಆದರೆ ಅಲ್ಲಿ ಯಾರಿಗೂ ಆಮೂಲಾಗ್ರ ಬದಲಾವಣೆ ಬೇಕಿಲ್ಲ. ಸುಧಾರಣೆ ಬೇಕು ಅಷ್ಟೇ. ಅನುಕೂಲಸಿಂಧು ಬದಲಾವಣೆ. ತಾತ್ವಿಕ ಜಿಜ್ಞಾಸೆಗಿಳಿಯದೇ ಬದುಕಿನ ಓಘಕ್ಕೆ ಒಡ್ಡಿಕೊಂಡು ವಸಂತ, ಕಲ್ಯಾಣ ಶೆಟ್ಟರಂಥವರು ಹಾಯಾಗಿದ್ದಾರೆನಿಸುತ್ತದೆ. ಹಾಗೆಯೇ ಮುಂಬೈನಲ್ಲಿ ಬಂಡವಾಳಶಾಹಿಯು ಒದಗಿಸಿದ ಸೀಮಿತ ಚೌಕಟ್ಟಿನ ನೆಮ್ಮದಿಯಲ್ಲಿ ಸುರೇಶನಂಥವರಿದ್ದಾರೆ. ಇಡೀ ವ್ಯಕ್ತಿತ್ವವನ್ನು ಪರಿವರ್ತಿಸುವ ಕ್ರಾಂತಿಗಾಗಿ ಚಡಪಡಿಸುವ ಶ್ರೇಯಾಂಸ ತಾತ್ವಿಕ ಸಂಘರ್ಷದಲ್ಲಿ ತೊಳಲುತ್ತಾನೆ. “ಈ ಊರಿನ ಮಟ್ಟಿಗೆ ಕ್ರಾಂತಿಕಾರಿಯೆನಿಸುವ ಶ್ರೇಯಾಂಸ ಮುಂಬಯಿಯ ಬಂಡವಾಳಶಾಹಿಯ ಸೇವಕನಲ್ಲವೇ!” ಎಂದು ಆತ್ಮನಿರೀಕ್ಷಣೆಗಿಳಿಯುವ ಆತ ಗ್ರಾಮೀಣ ಆರ್ಥಿಕತೆಯನ್ನು ಸಬಲಗೊಳಿಸುವ ಮೂಲಕ ಬಂಡವಾಳಶಾಹಿ ಶಕ್ತಿಗಳಿಂದ ಪಾರಾಗುವ ದಾರಿಗಳನ್ನು ಚಿಂತಿಸುತ್ತಾನೆ. ಕೊನೆಗೂ ಆಗಬೇಕಾದದ್ದು ರಾಜಕೀಯ ಕ್ರಾಂತಿ ಎಂದು ಆತನಿಗನಿಸುತ್ತದೆ. ಎಲ್ಲವನ್ನೂ ನಿರ್ವಚಿಸುವ ಹಾಗೂ ನಿರ್ವಹಿಸುವ ರಾಜಕೀಯ ಪ್ರಜ್ಞೆಯೊಂದು ಕೃಷ್ಣಾಪುರಕ್ಕೆ ಬೇಕಾಗಿದೆಯೆಂದು ಅವನಿಗಾದ ಸಾಕ್ಷಾತ್ಕಾರ.

ಬಂಡವಾಳಶಾಹಿಗಳ ಕಂಪನಿಯಲ್ಲಿ ದುಡಿದು ಅವರನ್ನು ಬೆಳೆಸುವ ಶ್ರೇಯಾಂಸನಂಥ ಬುದ್ದಿವಂತರು ಕೃಷ್ಣಾಪುರದಂಥ ಹಳ್ಳಿಯನ್ನು ಬೆಳೆಸುವುದು ಹೆಚ್ಚು ಅರ್ಥಪೂರ್ಣ ಎಂದು ಯೋಚಿಸುವ ಕಲ್ಯಾಣಶೆಟ್ಟರಂಥ ಹಿರಿಯರು ಊರಲ್ಲಿದ್ದಾರೆ. ಹಾಗೆಯೇ ಆ ಊರಿನಲ್ಲಿಯೇ ಹುಟ್ಟಿಬೆಳೆದು ಮಾರ್ಕ್ಸ್, ಎಂಗೆಲ್ಸ್ ರಂಥವರನ್ನು ಆಮೂಲಾಗ್ರವಾಗಿ ಓದಿಕೊಂಡು ಸಾಮಾಜಿಕ ಕ್ರಾಂತಿಗಾಗಿ ತುಡಿವ ಹಣಮಂತನಂಥವರೂ ಊರಿನಲ್ಲಿ ಉದಿಸಿದ್ದಾರೆ. ಶ್ರೇಯಾಂಸ ಹುಟ್ಟೂರಿನಲ್ಲಿ ಆರಂಭಿಸಿದ ರಸೆಲ್ ಕ್ಲಬ್ಬಿನಲ್ಲಿ ಬೌದ್ಧಿಕ ಚರ್ಚೆಗೆ ಹೊಸ ತಲೆಮಾರು ಸೇರತೊಡಗಿದೆ. ಪ್ರಜಾಪ್ರಭುತ್ವದ ತಳಹದಿಯಲ್ಲಿ ಸೆಕ್ಯುಲರ್ ಆದ ಹೊಸ ದೇಶವನ್ನು ಕಟ್ಟುವ ಕನಸುಗಳು ಕಣ್ಣೊಡೆದಿವೆ. ಶ್ರೇಯಾಂಸನ ತಂದೆ ಅಪ್ಪಾಸಾಹೇಬನಿಗೂ ಕೃಷ್ಣಾಪುರದಲ್ಲಿ ಜನನಾಯಕನ ಸ್ಪಷ್ಟ ರೂಹುಇತ್ತು. ಆದರೆ ಬೇರೆಯವರ ಅಭಿಪ್ರಾಯಗಳನ್ನು ಅಷ್ಟಾಗಿ ಮಾನಿಸದ ಹಳೆಯ ಪ್ರಭುತ್ವದ ಚಾಳಿಯಿಲ್ಲದಿದ್ದರೆ ಅವನೂ ಮಂತ್ರಿಯಾಗಬಹುದಿತ್ತೆಂದು ಅವನ ಗೆಳೆಯ ಕಲ್ಯಾಣಶೆಟ್ಟರು ಹೇಳುತ್ತಾರೆ. ಅಪ್ಪನನ್ನು ವಿರೋಧಿಸುತ್ತಿದ್ದ ಮಗನಲ್ಲಿಯೂ ಅಂಥ ಸಮೂಹ ಚಿಂತನೆಯ ಬೀಜಗಳಿವೆ. ಜೊತೆಯಲ್ಲಿ ತನ್ನೂರಿನ ವಿದ್ಯಮಾನಗಳನ್ನು ಸದೂರದಿಂದ ನೋಡಿ ಅರಿಯುವ ಪ್ರಬುದ್ಧ ಒಳನೋಟಗಳಿವೆ. ಶ್ರೇಯಾಂಸನಲ್ಲಿ ಬೌದ್ಧಿಕ ಸ್ಪಷ್ಟತೆಯ ಜೊತೆ ಭಾವದ್ರವ್ಯವೂ ಇದೆ. ನಿಧಾನವಾಗಿ ತನ್ನ ತೊಳಲಾಟಗಳಿಂದ ಹೊರಬಂದ ಆತ ತನ್ನ ಜೀವನದ ‘ಕೃತಿ’ ಹೇಗಿರಬೇಕು ಎಂಬುದನ್ನು ನಿಶ್ಚಯಿಸುತ್ತಾನೆ.

ಬೀಜವು ಒಂದು ರಾಜಕೀಯ ಮೀಮಾಂಸೆಯೂ ಹೌದು. ಸಂವಾದದ ಮೂಲಕ ಅದನ್ನು ಕಟ್ಟುವ ತಂತ್ರವನ್ನು ಶಾಂತಿನಾಥರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಭಿನ್ನ ಪ್ರಜ್ಞಾಪಾತಳಿಯ ಪಾತ್ರಗಳ ತಾತ್ವಿಕ ಸಂವಾದಗಳಿಂದ ಇದು ಸಾಧ್ಯವಾಗಿದೆ. ಶ್ರೇಯಾಂಸ ಹಾಗೂ ಡಾ.ಪಾಲ್, ಶ್ರೇಯಾಂಸ ಹಾಗೂ ಸುರೇಶ ಅಭ್ಯಂಕ, ಶ್ರೇಯಾಂಸ ಹಾಗೂ ಹಣಮಂತ, ಶ್ರೇಯಾಂಸ ಹಾಗೂ ಕಲ್ಯಾಣ ಶೆಟ್ಟರು, ಶ್ರೇಯಾಂಸ ಲಿಝಿ ಹಾಗೂ ರೇವತಿ, ಶ್ರೇಯಾಂಸ ಹಾಗೂ ಮಗಳು ಕಲ್ಪನಾ ಹೀಗೆ ಅನೇಕ ವ್ಯಕ್ತಿತ್ವ ಹಾಗೂ ಫಿಲಾಸಫಿಗಳ ಜತೆ ಮುಖಾಮುಖಿಯು ಕಾದಂಬರಿಯಲ್ಲಿ ಅನೇಕ ದೃಷ್ಟಿಕೋನಗಳನ್ನು ತೆರೆದಿಡುತ್ತಹೋಗುತ್ತದೆ. ವ್ಯಕ್ತಿಯ ವೈಯಕ್ತಿಕತೆಗೂ ಹಾಗೂ ಸಾಂಪ್ರದಾಯಿಕ ಸಮಾಜಕ್ಕೂ ಇರುವ ಸಂಬಂಧಗಳನ್ನು ಇದು ಶೋಧಿಸುತ್ತಾ ಸುಶಿಕ್ಷಿತ ಭಾರತೀಯ ಸಮಾಜದ ತಳಮಳಗಳಿಗೆ ಕನ್ನಡಿಹಿಡಿದಿದೆ. “ಹಣಮಂತಾ ನೀ ಅನ್ನೋದು ಖರೆ, ಬರೇ ಸಾಮಾಜಿಕ ಸಾಂಸ್ಕøತಿಕ ಕೃತಿ ಈ ದೇಶದಲ್ಲಿ ಶಕ್ಯವೇ ಇಲ್ಲ- ರಾಜಕೀಯ ಕೃತಿಯೇ ನಿಜವಾಗಿ ಜೀವನವನ್ನು ಪರಿವರ್ತಿಸುವ ಕೃತಿ” ಎಂದು ಶ್ರೇಯಾಂಸ ಹೇಳುವುದೂ ಕೃತಿಯ ಕೇಂದ್ರ ಆಶಯಗಳಲ್ಲೊಂದಾಗಿ ಕಾಣುತ್ತದೆ. ಅದರರ್ಥ ರಾಜಕೀಯವೇ ಗುರಿಯಲ್ಲದಿದ್ದರೂ, ಗುರಿಮುಟ್ಟಲು ಅದು ದಾರಿ. ಕೊನೆಯಲ್ಲಿ ಸ್ವಾತಂತ್ರ್ಯದ ಅರ್ಥವೆಂದರೆ ಸಂಸ್ಕೃತಿ, ಸಹಾನುಭೂತಿ, ಪ್ರೀತಿಯ ವಿಕಾಸ ಎಂಬುದು ಬೀಜವಾಕ್ಯವಾಗಿ ತೋರುತ್ತದೆ. ಕಲ್ಪನಾಳಲ್ಲಿ ಅಂಥ ವಿಕಾಸದ ಬೀಜಗಳಿವೆ. ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ಸಾಮೂಹಿಕ ವಿಕಾಸದ ವಿವಿಧ ಮಜಲುಗಳನ್ನು ಶೋಧಿಸುವ ಸೃಜನಶೀಲತೆ ಹಾಗೂ ತಾತ್ವಿಕತೆಯಿಂದಾಗಿ “ಬೀಜ” ಕನ್ನಡದ ಬಹುಮುಖ್ಯ ಕಾದಂಬರಿಗಳಲ್ಲೊಂದಾಗಿ ಆಪ್ತವಾಗುತ್ತದೆ.

-ಡಾ. ಗೀತಾ ವಸಂತ

ಈ ಅಂಕಣದ ಹಿಂದಿನ ಬರೆಹಗಳು:
ಸ್ತ್ರೀಲೋಕ
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...