ಅಮ್ಮನ ನೆನಪಿನಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಬೆಚ್ಚನೆಯ ಕೌದಿ ಗೌರವ

Date: 26-11-2020

Location: ಸೇಡಂ (ಕಲಬುರಗಿ ಜಿಲ್ಲೆ)


ಹೆತ್ತ ಅಮ್ಮನ ನೆನಪಿಗಾಗಿ ಅವರ ಹೆಸರಿನಲ್ಲಿ ಬೆಚ್ಚಗಿನ ಕೌದಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಮಾತೊಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು 6 ಜನ ಲೇಖಕ-ಕಲಾವಿದರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು, ಮಾತ್ರವಲ್ಲ; 5 ಸಾವಿರ ರೂ. ಗೌರವ ಧನದೊಂದಿಗೆ ತನ್ನ ನೆಲದಲ್ಲಿ ಬೆಳೆಯುವ ‘ಮುತ್ತು’ಗಳ ಸಮಾನವಾದ ತೊಗರಿ ಬೇಳೆಯನ್ನು (2 ಕೆ.ಜಿ.) ನೀಡಿ ಗೌರವಿಸಿತು.

ಸೇಡಂ ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಐತಿಹಾಸಿಕ ಮಹತ್ವದ ಹಾಗೂ ಸ್ಮರಣೀಯವಾದ ಸಾಂಸ್ಕೃತಿಕ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಪುರಸ್ಕೃತರಾದ ಏಳು ಜನರ ಪೈಕಿ ಓರ್ವದಾನಿ ಸೇರಿದಂತೆ ಸಾಹಿತಿಗಳನ್ನು ಸನ್ಮಾನಿಸಿದ ಪ್ರತಿಷ್ಠಾನದ ಸಂಭ್ರಮಕ್ಕೆ ಇಡೀ ಊರಿನ ಜನತೆ ಸಾಕ್ಷಿಯಾದರು.

ಮೂರು ತಿಂಗಳಿಂದ ಕೌದಿ ಹೊಲಿದಿದ್ದು....! ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರ ತಾಯಿ ನೆನಪಿನಲ್ಲಿ ಕಳೆದ 20 ವರ್ಷದ ಹಿಂದೆ ಅಮ್ಮ ಪ್ರಶಸ್ತಿ ನೀಡುವ ಸಾಂಸ್ಕೃತಿಕ ಪರಂಪರೆಯನ್ನು ಆರಂಭಿಸಿದ್ದು, ಇದೇ ವರ್ಷ ಮೊದಲ ಬಾರಿಗೆ ತಮ್ಮ ಅಮ್ಮನ ಹೆಸರಿನಲ್ಲಿ ‘ಅಮ್ಮ ಪ್ರಶಸ್ತಿ’ ಪುರಸ್ಕೃತರನ್ನು ಕೌದಿ ನೀಡುವ ವಿನೂತನ ಸಂಪ್ರದಾಯಕ್ಕೆ ಚಾಲನೆ ನೀಡಿದ್ದಾರೆ. ಈ ಕೌದಿಗಳನ್ನು ಕಳೆದ ಮೂರು ತಿಂಗಳ ಹಿಂದಿನಿಂದ 10 ಜನ ಗ್ರಾಮಸ್ಥ ಮಹಿಳೆಯರು ಹೊಲಿದಿದ್ದರು.

ಪುತ್ರನಿಗೆ ಕರುಳು ದಾನ: ಇಡೀ ಸಮಾರಂಭದ ಭಾವಪೂರ್ಣ ಅವಧಿಯ ಎಂದರೆ-ತಮ್ಮ ಪುತ್ರನ ಅನಾರೋಗ್ಯಕ್ಕೆ ಮಿಡಿದ ತಾಯಿ ರೇಖಾ ಅರಗಲ್ ಮನಿ ಅವರು ತಮ್ಮ ಕರುಳಿನ ಸ್ವಲ್ಪ ಭಾಗವನ್ನು ದಾನ ಮಾಡಿ ಪುತ್ರನಿಗೆ ಮರುಜನ್ಮ ನೀಡಿದ್ದಾಳೆ. ಒಬ್ಬ ತಾಯಿ ಪುತ್ರನಿಗೆ ಒಮ್ಮೆ ಜನ್ಮ ನೀಡುತ್ತಾಳೆ. ಆದರೆ, ಇಲ್ಲಿ ಆ ತಾಯಿ ತನ್ನ ಮಗನಿಗೆ ಎರಡು ಬಾರಿ ಬದುಕು ನೀಡಿ ‘ಮಾತೋಶ್ರೀ’ ಎಂಬ ಪದದ ಅರ್ಥ ವ್ಯಾಪ್ತಿಯನ್ನು ಹೆಚ್ಚಿಸಿ, ಭಾವ ಶ್ರೀಮಂತಿಕೆಯನ್ನು ತೋರಿದ್ದಾರೆ. ಮಾತೋಶ್ರೀ ನೆನಪಿನಲ್ಲಿ ಆಯೋಜಿಸಿದ್ದ ಈ ಸಮಾರಂಭವು ರೇಖಾ ಅರಗಲ್ ಮನಿ ಅವರನ್ನು ಗೌರವಿಸಿದ್ದು ಸಮಾರಂಭದ ಅರ್ಥವಂತಿಕೆಗೆ ಕಳೆ ಕಟ್ಟಿತ್ತು..

ಪ್ರಶಸ್ತಿ ಪುರಸ್ಕೃತರಿಗೆ ಗೌರವ: ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಕಲಬುರಗಿಯ ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ `ಹುಲಿಯ ನೆತ್ತಿಯ ನೆರಳು’ ಮತ್ತು ಡಾ. ಸತ್ಯಮಂಗಲ ಮಹಾದೇವ ಅವರ `ಪಂಚವರ್ಣದ ಹಂಸ’ (ಕವನ ಸಂಕಲನ) ಹಾಗೂ ಹಿರಿಯ ಪತ್ರಕರ್ತ ಪಿ.,ಎಂ. ಮಣೂರು ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಪ್ರತಿಷ್ಠಾನದ 20ನೇ ವರ್ಷದ ಅಮ್ಮ ಪ್ರಶಸ್ತಿ ನೀಡಿ ಗೌರವಿಸಿದರು.

ದೇಶಾಂಶರಿಗೆ ಶ್ರದ್ಧಾಂಜಲಿ: ದೇಶಾಂಶ ಹುಡಗಿ ಎಂದೇ ಖ್ಯಾತಿಯ ಶಾಂತಪ್ಪ ಶರಣಪ್ಪ ದೇವರಾಯ ಅವರನ್ನು ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತಾದರೂ ನಿನ್ನೆಯಷ್ಟೇ (ಬುಧವಾರ) ಅವರು ನಿಧನರಾದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನದ ಇಡೀ ಸಮಾರಂಭವು ಶ್ರದ್ಧಾಂಜಲಿ ಸಲ್ಲಿಸಿದ ನಂತರವೇ ಮುಂದುವರಿಯಿತು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು. ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮೀಜಿ, ಮಾಜಿ ಶಾಸಕ ಡಾ. ಶರಣಪ್ರಕಾಶ ಪಾಟೀಲ, ಪ್ರತಿಷ್ಠಾನದ ಮಹಿಪಾಲರೆಡ್ಡಿ ಮುನ್ನೂರು ಹಾಗೂ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ದಂಪತಿ ಹಾಗೂ ಗ್ರಾಮಸ್ಥ ಹಿರಿಯ ನಾಗಣ್ಣ ಅಲ್ಲೂರು ಸೇರಿದಂತೆ ಸಾಹಿತ್ಯಾಸಕ್ತರು ವೇದಿಕೆ ಮೇಲಿದ್ದರು.

MORE NEWS

ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇ...

20-01-2021 ಬೆಂಗಳೂರು

ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವ...

ಗುವಾಹತಿ ಸಾಹಿತ್ಯ ಮೇಳದಲ್ಲಿ  ಲಾರಿ...

20-01-2021 ಬೆಂಗಳೂರು

ಲಾರಿ ಚಾಲಕರೊಬ್ಬರು ತಮ್ಮ ವೃತ್ತಿ ಜೀವನದಲ್ಲಿಯ ಕೆಲ ಕುತೂಹಲಕಾರಿ ಪ್ರಸಂಗಗಳ ಕುರಿತು ಬರೆದ ಆತ್ಮಕಥನ ಮಾದರಿಯ ಕೃತಿಯು ಇತ...

ಸಿಂಗಾಪುರದ ಲೇಖಕರಾದ ಸಿಮ್, ಮೀಹಾನ್...

20-01-2021 ಬೆಂಗಳೂರು

ಪ್ರಕಟಣಾಪೂರ್ವ ಆಂಗ್ಲ ಭಾಷೆಯ ಕಾಲ್ಪನಿಕ ಕಾದಂಬರಿಗಳಿಗೆ ನೀಡಲಾಗುವ ‘ಎಪಿಗ್ರಾಮ್ ಬುಕ್ಸ್ ಪ್ರಶಸ್ತಿ’ಯನ್ನು...

Comments