ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು

Date: 17-04-2021

Location: ಬೆಂಗಳೂರು


ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನುತ್ತಲೇ ಸಂಗೀತ ಕ್ಷೇತ್ರದ ಮಹತ್ವದ ಗಾಯಕಿಯರ ಕುರಿತು ಲೇಖಕ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಧ್ವನಿಮುದ್ರಿಕೆ ಕಂಪನಿಗಳಿಂದ ದೊರೆತ ಪ್ರತಿಭಾವಂತ ಕಲಾವಿದೆಯರ ಬದುಕಿನ ಕುರಿತು ವಿಶ್ಲೇಷಿಸಿದ್ದಾರೆ.

ಭಾರತೀಯ ಸಂಗೀತ ಇತಿಹಾಸದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡೂ ಕ್ಷೇತ್ರಗಳಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಅಸ್ತಿತ್ವಕ್ಕೆ ಬಂದ ಗ್ರಾಮೊಫೋನ್ ಧ್ವನಿಮುದ್ರಿಕೆಗಳ ಮೂಲಕ ಸಂಗೀತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವುದರ ಜೊತೆಗೆ ಸಂಗೀತದ ಅಭಿರುಚಿ ಸೃಷ್ಟಿಸಿದವರಲ್ಲಿ ಮಹಿಳಾ ಗಾಯಕಿಯರ ಪಾತ್ರ ಅನನ್ಯವಾದುದು. ದುರಂತದ ಸಂಗತಿಯೆಂದರೆ, ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಕೆಲವು ಕಲಾವಿದೆಯರನ್ನು ಮಾತ್ರ ಹೊರತು ಪಡಿಸಿದರೆ, ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ.

ಧ್ವನಿಮುದ್ರಿಕೆಗಳ ಕಂಪನಿಗಳು ಪ್ರತಿಭಾವಂತ ಕಲಾವಿದೆಯರನ್ನು ಆಯ್ಕೆ ಮಾಡುವ ಮುನ್ನ ಸಂಗ್ರಹಿಸಿದ್ದ ಕೇವಲ ಒಂದು ಅಥವಾ ಎರಡು ಪುಟದ ಕಲಾವಿದೆಯರ ಮಾಹಿತಿಗಳು ಮಾತ್ರ ಲಭ್ಯವಾಗಿವೆ. 1902 ರಲ್ಲಿ ಪ್ರಥಮವಾಗಿ ಕೊಲ್ಕತ್ತ ನಗರದಲ್ಲಿ ಧ್ವನಿಮುದ್ರಿಕೆಗೆ ಹಾಡಿ, ಆ ಕಾಲಘಟ್ಟದಲ್ಲಿ ಅತ್ಯಂತ ದುಬಾರಿ ಸಂಭಾವನೆ ಎಂದು ಪರಿಗಣಿಸಿದ್ದ ಒಂದು ತಟ್ಟೆಗೆ ಅಂದರೆ, ತಲಾ ಮೂರು ನಿಮಿಷಗಳ ಎರಡು ಬದಿಯ ಹಾಡಿನ ಮುದ್ರಣಕ್ಕೆ ಮೂರು ಸಾವಿರ ರೂಪಾಯಿ ಪಡೆದ ಗೋಹರ್ ಜಾನ್ ಎಂಬ ಗಾಯಕಿಯ ಸಮಗ್ರ ಇತಿಹಾಸ ದೊರೆತಿದೆ. 1902 ರಿಂದ 1922 ಇಪ್ಪತ್ತು ವರ್ಷಗಳ ಅವಧಿಯಲ್ಲಿ ಆರನೂರಕ್ಕೂ ಹೆಚ್ಚು ಧ್ವನಿ ಮುದ್ರಿಕೆಗಳಲ್ಲಿ ಹಾಡಿದ್ದ ಗೋಹರ್ ಜಾನ್ ರಾಣಿಯಂತೆ ಬದುಕಿದವಳು. ಕೊಲ್ಕತ್ತ ನಗರದಲ್ಲಿ ಬೃಹತ್ ಬಂಗಲೆ ನಿರ್ಮಿಸಿಕೊಂಡು ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಓರ್ವ ಕಲಾವಿದೆ ಹೀಗೂ ಬದುಕಬಹುದೆ? ಎಂದು ಭಾರತದ ಸಂಗೀತ ಲೋಕದಲ್ಲಿ ಆಶ್ಚರ್ಯವನ್ನುಂಟು ಮಾಡಿದಳು.

ಸ್ಥಳಿಯ ಸಂಸ್ಥಾನಗಳ ಆಹ್ವಾನದ ಮೇರೆಗೆ ಅರಮನೆಗಳಲ್ಲಿ ಹಾಡಲು ಹೊರಡುವಾಗ ಗೋಹರ್ ಜಾನ್ ತಾನು ಸಾಕಿಕೊಂಡಿದ್ದ ನಾಯಿಗಳು, ಬೆಕ್ಕುಗಳು, ಗಿಳಿಗಳು, ಸೇವಕರು ಮತ್ತು ಸೇವಕಿಯರ ಜೊತೆ ರೈಲು ಮಾರ್ಗ ಇದ್ದ ಸಂಸ್ಥಾನಗಳಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆ ಕಾಲದಲ್ಲಿ ಕೊಲ್ಕತ್ತ ನಗರದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಗೆ ಮತ್ತು ಪೂರ್ವ ಭಾರತದ ರಾಜ ಮಹಾರಾಜರುಗಳ ಪಾಲಿಗೆ ಗೋಹರ್ ಜಾನ್ ಅತ್ಯಂತ ಬೇಡಿಕೆಯ ನೃತ್ಯಗಾತಿ ಹಾಗೂ ಗಾಯಕಿಯಾಗಿದ್ದಳು. ದುರಂತವೆಂದರೆ, ವಿಲಾಸದ ಬದುಕಿನ ಮುಖಾಂತರ ಕೊನೆಗಾಲದಲ್ಲಿ ಶ್ರೀಮಂತಿಕೆಯನ್ನು ಕಳೆದುಕೊಂಡು ಅನಾಥೆಯಾದಾಗ ಆಕೆಗೆ ಮೈಸೂರು ದೊರೆಗಳು ಆಶ್ರಯ ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಶ್ರಯದಲ್ಲಿ ಆಸ್ಥಾನ ಗಾಯಕಿಯಾಗಿ ಬದುಕುತ್ತಾ ಗೋಹರ್ ಜಾನ್ ತನ್ನ ಕೊನೆಯ ದಿನಗಳನ್ನು ಕಳೆದಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟಕ್ಕೆ ಹೊಗುವ ರಸ್ತೆಯಲ್ಲಿದ್ದ ವಿಶೇಷ ಅತಿಥಿಗೃಹವನ್ನು ಗೊಹರ್ ಜಾನ್ ಗಾಗಿ ಬಿಟ್ಟುಕೊಟ್ಟಿದ್ದರು. ದಸರಾ ಹಬ್ಬದ ಆಚರಣೆ ಹಾಗೂ ಮೈಸೂರು ಅರಮನೆಗೆ ವಿಶೇಷ ಅತಿಥಿಗಳು ಆಗಮಿಸಿದಾಗ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಗೋಹರ್ ಜಾನ್, 1930 ರ ಜನವರಿ ತಿಂಗಳಿನಲ್ಲಿ ನಿಧನಳಾದಾಗ, ನಾಲ್ವಡಿಯವರು ಇಸ್ಲಾಂ ಸಂಪ್ರದಾಯದಂತೆ ಆಕೆಯ ಅಂತ್ಯ ಸಂಸ್ಕಾರವನ್ನು ಮೈಸೂರು ನಗರದಲ್ಲಿ ನೆರವೇರಿಸಿದರು.

ಗೋಹರ್ ಜಾನಳ ರೀತಿಯಲ್ಲಿ ಪ್ರತಿಭಾವಂತೆಯರಾಗಿದ್ದು ಆಕೆಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಜಾನಕಿಬಾಯಿ ಅಲಹಾಬಾದ್, ಮಲಕಾ ಜಾನ್ ಆಗ್ರಾ, ಸುಂದರಬಾಯಿ ಪುಣೆಯಂತಹ ಕಲಾವಿದೆಯರೂ ಸಹ . ಸಂಗೀತ ಕಚೇರಿಗಳು ಮತ್ತು ಧ್ವನಿಮುದ್ರಿಕೆಗಳ ಮೂಲಕ ಪ್ರಸಿದ್ಧಿಯಾಗಿದ್ದರು. ಆದರೆ, ಇವರೆಲ್ಲರೂ ಇಂದಿಗೂ ಸಹ ಭಾರತೀಯ ಸಂಗೀತಲೋಕದಲ್ಲಿ ಒಂದು ರೀತಿ ಅನಾಮಿಕರಾಗಿ ಉಳಿದಿದ್ದಾರೆ.

ಇದು ಕೇವಲ ಹಿಂದೂಸ್ತಾನಿ ಸಂಗೀತದ ದುರಂತಗಾಥೆಯಲ್ಲ, ಕರ್ನಾಟಕ ಸಂಗೀತದಲ್ಲಿಯೂ ಸಹ ಅನೇಕ ಮಹಾನ್ ಗಾಯಕಿಯರು ಇಂದಿಗೂ ಅನಾಮಿಕರಾಗಿ ಉಳಿದುಹೋಗಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಕುರಿತಂತೆ ಮದ್ರಾಸ್ ಪಟ್ಟಣದಲ್ಲಿ 1904 ರಲ್ಲಿ ಪ್ರಥಮವಾಗಿ ಹಾಡಿದ ಗಾಯಕಿ ಸೇಲಂ ಗೋದಾವರಿ ಮುಖ್ಯ ಕಲಾವಿದೆ. ಈಕೆಯನ್ನು ಹೊರತು ಪಡಿಸಿದರೆ ನಮ್ಮ ಕನ್ನಡಿಗ ಹೆಣ್ಣುಮಗಳಾದ ಬೆಂಗಳೂರು ನಾಗರತ್ನಮ್ಮ ಪ್ರಮುಖರು. ನಾಗರತ್ನಮ್ಮನವರ ಇತಿಹಾಸ ಹೊರತುಪಡಿಸಿದರೆ, ದೇವದಾಸಿ ಸಮುದಾಯದಿಂದ ಬಂದು ಕರ್ನಾಟಕ ಸಂಗೀತದಲ್ಲಿ ಸಾಧನೆಗೈದಿದ್ದ ಪಳನಿಕುಂಜರ, ಬೆಂಗಳೂರು ತಾಯಿ, ಕೋಲಾರತಾಯಿ, ಕಾಂಚಿಪುರಂ ಸಹೋದರಿಯರು ಹೀಗೆ ಅನೇಕ ಮಹಾನ್ ಕಲಾವಿದೆಯರ ಮಾಹಿತಿ ಲಭ್ಯವಾಗಿಲ್ಲ.

ಇಂಗ್ಲೆಂಡಿನ ಗ್ರಾಮೊಪೋನ್ ಕಂಪನಿಯ ಅಧಿಕಾರಿಯೊಬ್ಬ ದಾಖಲಿಸಿರುವ ಒಂದು ಸಣ್ಣ ಟಿಪ್ಪಣಿಯಲ್ಲಿ ಸೇಲಂ ಗೋದಾವರಿ ಜಾರ್ಜ್‍ಟೌನ್ ಪ್ರದೇಶದ ತಂಬುಚೆಟ್ಟಿ ರಸ್ತೆಯಲ್ಲಿ ಆ ಕಾಲದಲ್ಲಿ ಒಂದುಲಕ್ಷ ಎಂಬತ್ತು ಸಾವಿರ ಖರ್ಚಿನಲ್ಲಿ ನಿರ್ಮಿಸಿದ್ದ ಶ್ವೇತವರ್ಣದ ಅಮೃತ ಶಿಲೆಯನ್ನು ಒಳಗೊಂಡಿದ್ದ ಬೃಹತ್ ನಿವಾಸದಲ್ಲಿ ಏಳು ಮಂದಿ ಸೇವಕಿಯರ ಜೊತೆ ವಾಸಿಸುತ್ತಿದ್ದಳಂತೆ. ನಮ್ಮ ಬೆಂಗಳೂರು ನಾಗರತ್ನಮ್ಮ ಕೂಡ ಎಂಟು ಕೊಠಡಿಗಳ ಮ್ಯಾನ್ಸನ್ ಹೌಸ್ ಎಂದು ಕರೆಯುತ್ತಿದ್ದ ಬೃಹತ್ ಬಂಗಲೆಯಲ್ಲಿ ವಾಸವಾಗಿದ್ದರು. ಬೆಂಗಳೂರು ಮೂಲದ ಇಂಗ್ಲೀಷ್ ಲೇಖಕ ವಿಕ್ರಮ್ ಸಂಪತ್ “ ಮೈ ನೇಮ್ ಇಸ್ ಗೋಹರ್ ಜಾನ್” ಹಾಗೂ ಚೆನ್ನೈ ನಗರದ ವಿ. ಶ್ರೀರಾಮ್ ಎಂಬ ಲೇಖಕ ನಾಗರತ್ನಮ್ಮ ಕುರಿತು “ ದೇವದಾಸಿ ಅಂಡ್ ದ ಸೈಂಟ್” ಎಂಬ ಕೃತಿಗಳನ್ನು ಹೊರತಂದಿದ್ದಾರೆ. ಸಂಶೋಧನೆ ಮತ್ತು ಅಧ್ಯಯನದ ಮೂಲಕ ದಕ್ಷಿಣ ಭಾರತದಲ್ಲಿ ದೇವದಾಸಿ ಹಾಗೂ ಉತ್ತರದಲ್ಲಿ ತವೈಪ್ ಎಂದು ಕರೆಸಿಕೊಳ್ಳುತ್ತಿದ್ದ ಸಂಗೀತ ಮತ್ತು ನೃತ್ಯವನ್ನು ಉಸಿರಾಡುತ್ತಾ ಶತಮಾನದಿಂದ ಶತಮಾನಕ್ಕೆ ಸಂಗೀತ ಮತ್ತು ನೃತ್ಯ ಕಲೆಗಳನ್ನು ದಾಟಿಸಿದ್ದ ಅನೇಕ ಮಹಾನ್ ಕಲಾವಿದೆಯರ ಬದುಕು ದಾಖಲಾಗಬೇಕಿದೆ. ಗೋಹರ್ ಜಾನ್, ನಾಗರತ್ನಮ್ಮರವರ ರೀತಿಯಲ್ಲಿ ಮಹಾನ್ ಕಲಾವಿದೆಯರ ಇತಿಹಾಸ ದಾಖಲಾಗಿಲ್ಲ. ಅಂತಹವರಲ್ಲಿ ಮುಖ್ಯರಾದವರ ವಿವರ ಈ ಕೆಳಗಿನಂತಿದೆ.

ಜಾನಕಿಬಾಯಿ ಅಲಹಾಬಾದಿ- ಜಾನಕಿಬಾಯಿ ಮೂಲತಃ ಹಿಂದು ಹೆಣ್ಣುಮಗಳು. ಹಿಂದೂ ಧರ್ಮದ ಪವಿತ್ರ ಕ್ಷೇತ್ರವೆನಿಸಿದ ಬನಾರಸ್ ಅಥವಾ ಕಾಶಿ ನಗರದಲ್ಲಿ 1880 ರಲ್ಲಿ ಜನಿಸಿದಳು. ಬಾಲ್ಯದಲ್ಲಿ ಆಕೆಯ ತಂದೆ ಜಾನಕಿಯನ್ನು ಹಾಗೂ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ ಪ್ರಯುಕ್ತ ಅಲಹಾಬಾದ್ ನಗರಕ್ಕೆ ಬಂದು ಸಂಗೀತವನ್ನು ಕಲಿತು ಬದುಕುವುದು ಅನಿವಾರ್ಯವಾಯಿತು. ಆ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಾಗೂ ತವೈಪ್ ಎಂದು ಕರೆಸಿಕೊಳ್ಳುತ್ತಿದ್ದ ಕಲಾವಿದೆಯರಿಗೆ ಮಾತ್ರ ಸೀಮಿತವಾಗಿದ್ದ ಸಂಗೀತಕ್ಕೆ ಜಾನಕಿಬಾಯಿ ತೆರೆದುಕೊಂಡಳು ಜೊತೆಗೆ ತವೈಪ್ ಸಮುದಾಯದೊಂದಿಗೆ ಗುರುತಿಸಿಕೊಂಡಳು. ಬ್ರಿಟೀಷ್ ಸರ್ಕಾರಕ್ಕೆ ವಾರ್ಷಿಕ ಶುಲ್ಕ ಪಾವತಿ ಮಾಡಿ ಕೋಟಿ ಅಥವಾ ಕೋಥಾ ಹೆಸರಿನಲ್ಲಿ ಕಲಾವಿದೆಯರು ತಮ್ಮ ಮನೆಗಳಲ್ಲಿ ರಸಿಕರಿಗೆ ಮನರಂಜನೆ ಒದಗಿಸುತ್ತಿದ್ದರು. ಜಾನಕಿಬಾಯಿ ಅಲಹಾಬಾದ್ ನಗರದಲ್ಲಿ ಲಕ್ನೋ ಮೂಲದ ಉಸ್ತಾದ್ ಹಸ್ಸುಖಾನ್ ಎಂಬಾತನಿಂದ ಸಂಗೀತದ ತರಬೇತಿ ಪಡೆದಳು. ಆಕೆಗೆ ಅಲಹಾಬಾದ್ ನಗರದಲ್ಲಿ ರೌಡಿಯೊಬ್ಬ 56 ಬಾರಿ ಚೂರಿಯಿಂದ ಇರಿದು ಘಾಸಿಗೊಳಿಸಿದ್ದ. ಅದೃಷ್ಟವಶಾತ್ ಆಕೆ ಬದುಕಿಕೊಂಡಳು. ಹಾಗಾಗಿ ಅಲಹಾಬಾದ್ ನಗರದಲ್ಲಿ ಜಾನಕಿಬಾಯಿಗೆ ಛಪ್ಪನ್ ಚೂರಿ ಎಂಬ ಅಡ್ಡ ಹೆಸರು ಸಹ ಬಳಕೆಯಲ್ಲಿತ್ತು. ಜಾನಕಿಬಾಯಿಯ ಕಂಠಸಿರಿ ಹಾಗೂ ಸೌಂದರ್ಯ ಇವುಗಳಿಂದಾಗಿ ಆಕೆ ಅಲಹಾಬಾದ್ ನಗರದಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯಾಗಿ ಬೆಳೆದಳು.

ಲಕ್ನೊ, ಅಲಹಾಬಾದ್, ಕೊಲ್ಕತ್ತ, ಬನಾರಸ್ ನಗರಗಳಲ್ಲಿ ಆ ಕಾಲದಲ್ಲಿ ಶ್ರೀಮಂತರ ನಿವಾಸಗಳಲ್ಲಿ ನಡೆಯುತ್ತಿದ್ದ ಮೆಹಫಿಲ್ ಎಂಬ ಸಂಗೀತ ಕಾರ್ಯಕ್ರಮಗಳಿಗೆ ಜಾನಕಿಬಾಯಿ ಪ್ರಸಿದ್ಧಿಯಾಗಿದ್ದಳು. ಇದರಿಂದಾಗಿ, ಕೊಲ್ಕತ್ತ ನಗರದಲ್ಲಿದ್ದ ಧ್ವನಿಮುದ್ರಿಕೆಯ ಕಂಪನಿಯು ಜಾನಕಿಬಾಯಿಯ ಅನೇಕ ಧ್ವನಿಮುದ್ರಿಕೆಗಳನ್ನು ಹೊರತಂದಿತು. 1911 ರಲ್ಲಿ ಭಾರತಕ್ಕೆ ಆಗಮಿಸಿದ್ದ ಬ್ರಿಟನ್ನಿನ ದೊರೆ ಐದನೆ ಫಿಲಿಪ್ಸ್ ದೊರೆಯ ಗೌರವಾರ್ಥ ದೆಹಲಿಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಬ್ರಿಟೀಷ್ ಸರ್ಕಾರದ ಆಹ್ವಾನದ ಮೇರೆಗೆ ಗೋಹರ್ ಜಾನಳ ಜೊತೆಯಲ್ಲಿ ಜಾನಕಿಬಾಯಿ ಸಂಗೀತ ಕಚೇರಿ ನಡೆಸಿಕೊಟ್ಟಳು. 1910 ರಿಂದ 1930 ರ ಅವಧಿಯಲ್ಲಿ ಹೆಚ್.ಎಂ.ವಿ. ( ಹಿಸ್ ಮಾಸ್ಟರ್ ವಾಯ್ಸ್) ಕಂಪನಿಯು ಜಾನಕಿಬಾಯಿ 250 ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡಿತ್ತು. ಆಕೆಯ ಧ್ವನಿ ಮುದ್ರಿಕೆಗಳಿಗೆ ಅಪಾರ ಬೇಡಿಕೆಯಿದ್ದ ಕಾರಣ, ಪ್ರತಿಯೊಂದು ಹಾಡಿನ ಧ್ವನಿಮುದ್ರಿಕೆಯ ಎರಡು ಸಾವಿರ ತಟ್ಟೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು. ತನ್ನ ಗಾಯನ ಪ್ರತಿಭೆಯಿಂದ ಅಪಾರ ಪ್ರಮಾಣದಲ್ಲಿ ಹಣವನ್ನು ಸಂಪಾದಿಸಿದ್ದ ಜಾನಕಿಬಾಯಿಯು ಹಣವನ್ನು ಅನಾವಶ್ಯಕವಾಗಿ ಖರ್ಚುಮಾಡದೆ ಬಡವರ ಏಳಿಗೆಗಾಗಿ ವಿನಿಯೋಗಿಸುತ್ತಿದ್ದಳು. 1934 ರಲ್ಲಿ ನಿಧನಳಾದಾಗ ಆಕೆಯ ಇಚ್ಚೆಯಂತೆ ಟ್ರಸ್ಟ್ ಒಂದನ್ನು ಆರಂಭಿಸಿ, ಬಡ ಹಿಂದೂ-ಮುಸ್ಲಿಂ ಕುಟುಂಬಗಳಿಗೆ ವಿವಾಹ ಅಥವಾ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿನಿಯೋಗಿಸಲಾಯಿತು. ಜಾನಕಿಬಾಯಿ ಜೀವನ ಕುರಿತಂತೆ ಉರ್ದು ಭಾಷೆಯಲ್ಲಿ ಕಾದಂಬರಿಯೊಂದು ‘ಛಪ್ಪನ್ ಚೂರಿ’ ಹೆಸರಿನಲ್ಲಿ ಪ್ರಕಟವಾಗಿದೆ. ಹಾಗೂ ಇಂಗ್ಲೀಷ್ ಕಾದಂಬರಿಯೂ ಸಹ ಪ್ರಕಟವಾಗಿದೆ. ಇದನ್ನು ಹೊರತು ಪಡಿಸಿದರೆ, ಆಕೆಯ ಕುರಿತಾಗಿ ಖಚಿತವಾದ ಸಂಶೋಧನೆ ಅಥವಾ ಅಧ್ಯಯನ ನಡೆದಿಲ್ಲ.

ಮಲಕಾ ಜಾನ್ ಆಗ್ರಾ- ಅತ್ಯಂತ ಸುಂದರಿಯಾಗಿದ್ದ ಮಲಕಾ ಜಾನ್ ಉತ್ತರಪ್ರದೇಶದ ಅಜಮ್ ಘರ್ ಎಂಬಲ್ಲಿ ಜನಿಸಿ, ನಂತರ ಆಗ್ರಾದ ಪ್ರಸಿದ್ಧ ಸಂಗೀತಗಾರರಲ್ಲಿ ತರಬೇತಿ ಪಡೆದು ಕಲಾವಿದೆಯಾಗಿ ಹೊರಹೊಮ್ಮಿದ ಪ್ರತಿಭಾವಂತೆ. ನಂತರ ಔಧ್ ಪ್ರಾಂತ್ಯವನ್ನು ಅಂದರೆ ಲಕ್ಮೋ ಸಂಸ್ಥಾನವನ್ನು ಬ್ರಿಟೀಷ್ ಸರ್ಕಾರಕ್ಕೆ ಒಪ್ಪಿಸಿ ವಾರ್ಷಿಕ ಹನ್ನೆರೆಡು ಲಕ್ಷ ರೂಪಾಯಿಗಳ ರಾಜಧನದಲ್ಲಿ ಕೊಲ್ಕತ್ತ ನಗರದಲ್ಲಿ ದೊರೆಯಂತೆ ಬದುಕಿದ ಹಾಗೂ ಖ್ಯಾತ ಕಥಕ್ ನೃತ್ಯಪಟುವಾಗಿದ್ದ ವಾಜಿದ್ ಆಲಿ ಷಾ ಬಳಿ ಆಸ್ಥಾನ ಗಾಯಕಿಯಾಗಿದ್ದ ಮಲಕಾ ಕೊಲ್ಕತ್ತಾ ನಗರದಲ್ಲಿ ಜೀವಿಸಿದ್ದಳು. ಭಾರತದಲ್ಲಿ ಪ್ರಥಮ ಬಾರಿಗೆ ಪಾಶ್ಚಿಮಾತ್ಯ ಜಗತ್ತಿನ ಚಿಂತನೆಗಳಿಗೆ, ಇಂಗ್ಲೀಷ್ ಭಾಷೆಗೆ, ನೃತ್ಯ ಮತ್ತು ಸಂಗೀತ, ಸಿನಿಮಾ ಹಾಗೂ ಪಾರ್ಸಿ ರಂಗಭೂಮಿ, ಹೀಗೆ ಹಲವಾರು ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಂಡ ನಗರಗಳಲ್ಲಿ ಕೊಲ್ಕತ್ತ ನಗರಕ್ಕೆ ಅಗ್ರಸ್ಥಾನವಿದೆ. ಸೇಠ್ ದುಲಿಕ್ ಚೆಂದ್ ಮತ್ತು ಶಮಲಕರ್ತಿ ಎಂಬ ಆಗರ್ಭ ಶ್ರೀಮಂತ ವ್ಯಾಪಾರಿಗಳು ಮತ್ತು ಅನೇಕ ಶ್ರೀಮಂತ ಸಂಗೀತ ಪ್ರೇಮಿಗಳ ನೆರವಿನಿಂದ ಕೊಲ್ಕತ್ತ ನಗರದಲ್ಲಿ ಖ್ಯಾತ ಸಂಗೀತಗಾರ್ತಿಯಾಗಿ ಬದುಕಿದ ಮಲಕಾ ಜಾನ್ ತನ್ನ ಸಮಕಾಲೀನ ಗಾಯಕಿ ಗೋಹರ್ ಜಾನ್ ಳಷ್ಟೇ ಪ್ರಸಿದ್ಧಿಯಾಗಿದ್ದಳು .ಠುಮ್ರಿ, ಖಯಾಲ್ ಹಾಗೂ ಪೂರ್ವ ಭಾರತದ ಲಘು ಸಂಗೀತ ಪ್ರಕಾರಗಳಾದ ಹೋರಿ, ಚೈತಿ, ಕಜ್ರಿ ಮತ್ತು ಗಜಲ್ ಗಾಯನಕ್ಕೆ ಹೆಸರಾಗಿದ್ದ ಮಲಕಾ ನೂರಕ್ಕೂ ಹೆಚ್ಚು ಧ್ವನಿಮುದ್ರಿಕೆಗಳಿಗೆ ಹಾಡಿದವಳು. ಧ್ವನಿಮುದ್ರಿಕೆಯ ಕೊನೆಯಲ್ಲಿ ಗೋಹರ್ ಜಾನ್ ಹೇಳುತ್ತಿದ್ದ “ ಮೈ ನೇಮ್ ಈಸ್ ಗೋಹರ್ ಜಾನ್’ ರೀತಿಯಲ್ಲಿ ಮಲಕಾ ಕೂಡ ಹಾಡಿನ ಕೊನೆಯಲ್ಲಿ “ ಮೈ ನೇಮ್ ಈಸ್ ಮಲಕಜಾನ್ ಆಗ್ರಾ” ಎಂದು ಘೋಷಿಸುತ್ತಿದ್ದಳು. ಅವಳಿಗೆ ಕೊಲ್ಕತ್ತ ನಗರದಲ್ಲಿ ಮೆಹಫಿಲ್ ರಾಣಿ ಎಂಬ ಹೆಸರಿತ್ತು.

ಜೋಹರ್ ಬಾಯಿ ಆಗ್ರೆವಾಲಿ- ಜೋಹರ್ ಬಾಯಿ ಅಗ್ರೆವಾಲಿ ಕೂಡ ಗೋಹರ್ ಜಾನ್ ಳ ಸಮಕಾಲೀನ ಕಲಾವಿದೆ. 1868 ರಲ್ಲಿ ಆಗ್ರಾ ಪಟ್ಟಣದಲ್ಲಿ ಜನಿಸಿದ ಈಕೆ ಆರಂಭದಲ್ಲಿ ತನ್ನ ತಂದೆ ಹಾಗೂ ಸಾರಂಗಿ ವಾದ್ಯದ ಕಲಾವಿದ ಅಹಮದ್ ಖಾನ್ ಬಳಿ ಅಭ್ಯಾಸ ಮಾಡಿ ನಂತರ ಮೆಹಬೂಬ್ ಖಾನ್ ಮತ್ತು ಖಾಲೆಖಾನ್ ಎಂಬ ಗುರುಗಳ ಬಳಿ ಆಗ್ರಾ ಘರಾಣದಲ್ಲಿ ತರಬೇತಿ ಪಡೆದು ಖ್ಯಾತ ಕಲಾವಿದೆಯಾಗಿ ಹೊರಹೊಮ್ಮಿದಳು. ಇಪ್ಪತ್ತನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಖ್ಯಾತ ಕಲಾವಿದರಾಗಿದ್ದ ಫಯಾಜ್ ಖಾನ್ ಮತ್ತು ಬಡೇ ಗುಲಾಂ ಆಲಿಖಾನರಷ್ಟೇ ಗಾಯನದಲ್ಲಿ ಜನಪ್ರಿಯತೆ ಪಡೆದ ಮಹಿಳಾ ಕಲಾವಿದೆಯರಲ್ಲಿ ಜೋಹರ್ ಬಾಯಿ ಅಗ್ರಗಣ್ಯಳು. ಆಕೆ ತನ್ನ ಸುಮಧುರವಾದ ಧ್ವನಿಯಲ್ಲಿ ಬಂಧೀಷ್ ಎನ್ನಲಾಗುವ ಸಂಗೀತ ಸಾಹಿತ್ಯಕ್ಕೆ ಮತ್ತು ಸ್ಪಷ್ಟ ಉಚ್ಚಾರಣೆಗೆ ಆದ್ಯತೆ ನೀಡುತ್ತಿದ್ದಳು. ಠುಮ್ರಿ, ದಾದ್ರ, ಗಜಲ್ ಗಳನ್ನು ಸಹ ಅತ್ಯಂತ ಭಾವುಕತೆಯಿಂದ ಹಾಡುತ್ತಿದ್ದಳು. 1908 ರಲ್ಲಿ ಕೊಲ್ಕತ್ತ ನಗರದ ಗ್ರಾಮೊಫೋನ್ ಕಂಪನಿಯೊಂದು ವರ್ಷಕ್ಕೆ ಇಪ್ಪತ್ತೈದು ಹಾಡುಗಳಿಗೆ ಎರಡೂವರೆ ಸಾವಿರ ಸಂಭಾವನೆ ನೀಡುವ ಕರಾರು ಮಾಡಿಕೊಂಡು ನೂರಕ್ಕೂ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿತು. 1911 ರವರೆಗೆ ಮೆಹಫಿಲ್ ಹಾಗೂ ಧ್ವನಿಮುದ್ರಿಕೆಯ ಮೂಲಕ ಹಾಡುತ್ತಾ ಬದುಕಿದ್ದ ಜೊಹರ್ ಬಾಯಿ 1913 ರಲ್ಲಿ ನಿಧನಳಾದಳು.

ಸುಂದರಬಾಯಿ ಪುಣೆ- ಮರಾಠಿ ಮಾತೃ ಭಾಷೆಯ ಸುಂದರಬಾಯಿ ವಿದ್ಯಾವಂತೆಯಲ್ಲದಿದ್ದರೂ ಭಜನೆ ಹಾಗೂ ಸಂಗೀತದಲ್ಲಿ ಹೆಸರುವಾಸಿಯಾಗಿದ್ದಳು. ಹೆಚ್ಚಾಗಿ ಹಿಂದೂ ಸೇವಾಲಯಗಳಲ್ಲಿ ಹಾಡುತ್ತಿದ್ದ ಸುಂದರಬಾಯಿ ಮರಾಠಿ ಭಜನೆಯಿಂದ ಹಿಂದೂಸ್ತಾನಿ ಸಂಗೀತಕ್ಕೆ ಹೊರಳಿ ಪ್ರಸಿದ್ಧ ಕಲಾವಿದೆಯಾದಳು. 1895 ರಲ್ಲಿ ಜನಿಸಿದ ಸುಂದರಬಾಯಿಯ ಕುಟುಂಬದ ವಿವರಗಳು ಲಭ್ಯವಾಗಿಲ್ಲ. ಮರಾಠಿಯಲ್ಲಿ ಓದುವುದು ಮತ್ತು ಬರೆಯುವುದನ್ನು ಅಭ್ಯಾಸ ಮಾಡಿದ ಸುಂದರಬಾಯಿಗೆ ಮುಂಬೈ ನಗರಕ್ಕೆ ಬರಲು ಆ ಕಾಲದ ಪ್ರಸಿದ್ಧ ಸಿನಿಮಾ ಕಂಪನಿಯ ಆಹ್ವಾನ ಮೂಲ ಕಾರಣವಾಯಿತು. ಪ್ರಭಾತ್ ಎಂಬ ಕಂಪನಿಯು ನಿರ್ಮಿಸಿದ ಮನುಷ್ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದರ ಜೊತೆಗೆ ಸ್ವತಃ ಹಾಡಿದ ಸುಂದರಬಾಯಿಯ ಹಾಡುಗಳು ಜನಪ್ರಿಯವಾದವು.

ನಂತರದ ದಿನಗಳಲ್ಲಿ ಸುಂದರಬಾಯಿಗೆ ದೆಹಲಿ, ಲಕ್ನೋ, ಬನಾರಸ್, ಕೊಲ್ಕತ್ತ ಸೇರಿದಂತೆ ಅನೇಕ ನಗರಗಳಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಹೆಚ್ಚಿನ ಬೇಡಿಕೆ ದೊರೆಯಿತು. ಈ ಕಾರಣಕ್ಕಾಗಿ, ಸುಂದರಬಾಯಿ ಹಿಂದಿ ಮತ್ತು ಉರ್ದು ಭಾಷೆಯನ್ನು ಕಲಿತಳು. ಹೈದರಾಬಾದಿನ ನಿಜಾಮನ ಆಹ್ವಾನದ ಮೇರೆಗೆ ಹೋಗಿ ಸಂಗೀತ ಕಾರ್ಯಕ್ರಮವನ್ನು ಸಹ ನೀಡಿದಳು. 1921 ರಲ್ಲಿ ಹೆಚ್.ಎಂ.ವಿ. ಕಂಪನಿಯು ಸುಂದರಬಾಯಿ ಜೊತೆ ಕರಾರು ಮಾಡಿಕೊಂಡು ಆಕೆಯ ಸಂಗೀತವನ್ನು ಮುದ್ರಿಸಿ ಮಾರಾಟ ಮಾಡಲು ಆರಂಭಿಸಿತು. ಮರಾಠಿ ಭಾಷೆಯ ಭಜನೆಗಳ ಧ್ವನಿಮುದ್ರಿಕೆಗಳಿಗೆ ಅಪಾರ ಬೇಡಿಕೆಯಿತ್ತು. 1928 ರಲ್ಲಿ ಕಂಪನಿಯು ಸುಂದರಬಾಯಿಯ ಹಾಡುಗಾರಿಕೆಗೆ ಇರುವ ಬೇಡಿಕೆಯನ್ನು ಗಮನಿಸಿ ಆಕೆಗೆ ಚಿನ್ನದ ಧ್ವನಿಮುದ್ರಿಕೆಯನ್ನು ಉಡುಗರೆಯಾಗಿ ನೀಡಿ ಗೌರವಿಸಿತ್ತು. ಸುಂದರಬಾಯಿ ಬಾಂಬೆಯ ಆಕಾಶವಾಣಿಯ ಮುಖ್ಯ ಕಲಾವಿದೆಯಾಗಿ ಮಾತ್ರ ಹಾಡುತ್ತಾ ಬದುಕು ದೂಡಿ 1945ರಲ್ಲಿ ನಿಧನಳಾದಳು.

ಈ ಅಂಕಣದ ಹಿಂದಿನ ಬರೆಹಗಳು:
ಖ್ಯಾಲ್ ಗಾಯನದ ಫಕೀರ ಮಲ್ಲಿಕಾರ್ಜುನ ಮನ್ಸೂರ್

ಸ್ವರ ಮಾಧುರ್ಯದ ರಾಣಿ: ಕೇಸರಿಬಾಯಿ ಕೇರ್‍ಕರ್

ಸ್ವರಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು

ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಘಮಲು ಹರಡಿದ ಸವಾಯಿ ಗಂಧರ್ವರು

ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

 

 

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...