ಆನೆ ಕಂಡ ಅಂಧರು ಮತ್ತು ಮನೋವಿಜ್ಞಾನ


ಅಂಧರು ಆನೆಯನ್ನು ವರ್ಣಿಸುವ ರೀತಿ ಬೇರೆ. ಕಣ್ಣಿದ್ದವರೂ ಆನೆ ಕುರಿತ ವರ್ಣನೆಯೂ ಬೇರೆ ಬೇರೆಯಾಗಿರುತ್ತದೆ. ಕೇವಲ ದೃಷ್ಟಿ ಇರುವುದಷ್ಟೇ ಮುಖ್ಯವಲ್ಲ; ಅವರವರ ದೃಷ್ಟಿಕೋನವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ. ಆದ್ದರಿಂದ, ಕಣ್ಣಿದ್ದವರೂ ಆನೆಯನ್ನುವಿಧ ವಿಧವಾಗಿ ವರ್ಣಿಸುತ್ತಾರೆ. ‘ಆನೆ ಕಂಡ ಅಂಧರು’ ಕಥೆಯನ್ನು ಬಳಸಿಕೊಂಡು ಪತ್ರಕರ್ತ ವೆಂಕಟೇಶ ಮಾನು ಅವರು ಮನೋವೈಜ್ಞಾನಿಕವಾಗಿ ವಿವರಿಸಿದ ಬರಹವಿದು.

ದೇವರು ಹೀಗಿರಬಹುದು..ಹೇಗಿರಬಹುದು.. ಎಂಬ ಅನುಯಾಯಿಗಳ ಸಂಶಯಗಳಿಗೆ ಬುದ್ದ ಹೇಳಿದ ಕಥೆ; ಆನೆ ಕಂಡ ಕುರುಡರು. ಒಬ್ಬಾತ; ಕಿವಿ ಮುಟ್ಟಿ ಚಿಂದಿ ಬಟ್ಟೆಯಂತೆ, ಇನ್ನೊಬ್ಬ; ಕಾಲು ಮುಟ್ಟಿ ಕಂಬದಂತೆ, ಮತ್ತೊಬ್ಬ; ಸೊಂಡಿಲು ಮುಟ್ಟಿ ಹಾವಿನಂತೆ, ಮಗದೊಬ್ಬ; ಹೊಟ್ಟೆ ಮೇಲೆ ಕೈಯಾಡಿಸಿ ‘ಗೋಡೆಯಂತೆ ಎಂದು ತಮಗೆ ತಿಳಿದ ಹಾಗೆ, ಸ್ಪರ್ಶಿಸಿ ಅನುಭವದ ಮೂಲಕ ಹೇಳಿದರೂ ನೈಜ ಆನೆಯ ಸ್ವರೂಪವನ್ನು ಹೇಳಲಾರರು. ಅವರು ಅಂಧರು. ಆದರೆ….!

ಆದರೆ, ಕಣ್ಣಿದ್ದವರೂ ಒಂದು ವಸ್ತುವನ್ನು ಇದ್ದ ಹಾಗೆ ಗ್ರಹಿಸುವುದಿಲ್ಲ. ಗ್ರಹಿಸಿದ್ದರೂ ಬೇರೆ ಬೇರೆ ನೆಲೆಯಲ್ಲಿ, ಅರ್ಥ ವ್ಯತ್ಯಾಸದೊಂದಿಗೆ ‘ತಾವು ಹೇಳಿದ್ದು ಸರಿ’ ಎಂದು ಸಮರ್ಥಿಸಿಕೊಳ್ಳುತ್ತಾರೆ. ಅದು ವಸ್ತುವಿನ ನೈಜ ಸ್ವರೂಪ-ಸ್ವಭಾವವನ್ನು ಖಚಿತವಾಗಿ ಹೇಳಲು ಬಹುತೇಕರು ವಿಫಲರಾಗುತ್ತಾರೆ. ಇವರು ಕಣ್ಣಿದ್ದೂ ಕುರುಡರಂತೆ ವರ್ತಿಸುವುದೇಕೆ?

ಒಂದು ಕಥೆ, ಇನ್ನೊಂದು ವಾಸ್ತವ; ಈ ಎರಡರ ಮಧ್ಯೆ ಮನೋವಿಜ್ಞಾನ ತನ್ನದೇ ಆದ ಅರಿವು, ಜ್ಞಾನ, ಸಿದ್ಧಾಂತವನ್ನು ಒಳಗೊಂಡಿದೆ. ‘ದೃಷ್ಟಿಯಂತೆ ಸೃಷ್ಟಿ’ಯಂತೆ ಎಂಬ ಮಾತಿನಲ್ಲಿ ಸೃಷ್ಟಿಯ ಒಟ್ಟು ಸ್ವರೂಪದ ಚಿತ್ರಣವು ಅವರವರ ದೃಷ್ಟಿಯನ್ನು ಅವಲಂಬಿಸಿರುತ್ತದೆ ಎಂಬ ಅರ್ಥವಿದೆ. ಆದರೆ, ಈ ದೃಷ್ಟಿಯು ಕೇವಲ ಕಣ್ಣಿನ ನೇರ ನೋಟವಲ್ಲ; ಮೇಲ್ನೋಟಕ್ಕೆ ಕಾಣುವುದನ್ನು ಬಣ್ಣಿಸಲು ಮಾತ್ರ ಇರುವ ಅಂಗವಲ್ಲ. ಈ ಕಣ್ಣುಗಳು ಸಹ ಪರಾವಲಂಬಿಗಳಂತೆ ಕೆಲಸ ಮಾಡುತ್ತವೆ. ವ್ಯಕ್ತಿಯ ವಂಶವಾಹಿನಿ, ಬೆಳೆದ ಸಾಮಾಜಿಕ, ಶೈಕ್ಷಣಿಕ ಪರಿಸರ, ಈ ಮಧ್ಯೆ ಪಡೆದ ಅನುಭವಗಳು, ಈ ಅನುಭವಗಳನ್ನು ಗ್ರಹಿಸುವ ರೀತಿಯೂ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಹೀಗಾಗಿ, ಅಭಿವ್ಯಕ್ತಿಯಲ್ಲೂ ವೈವಿಧ್ಯತೆಯನ್ನುಕಾಣುತ್ತೇವೆ. ಆದ್ದರಿಂದ, ದೃಷ್ಟಿಕೋನವು ಅಷ್ಟು ಸುಲಭ ಹಾಗೂ ಸರಳವಾಗಿಲ್ಲ. ಅದು ಸಂಕೀರ್ಣ ರಚನೆಯನ್ನು ಒಳಗೊಂಡಿದೆ. ದೃಷ್ಟಿಕೋನದ ಕಾರ್ಯವೈಖರಿಯು ಕೇವಲ ಕಣ್ಣಿನದಲ್ಲ. ಅದು; ವ್ಯಕ್ತಿ-ಅನುಭವ-ಪರಿಸರ ಹೀಗೆ ವ್ಯತ್ಯಾಸಗಳೊಂದಿಗೆ ವಿಶೇಷತೆ ಮಾತ್ರವಲ್ಲ ಪ್ರತ್ಯೇಕತೆಯನ್ನು ಹೊಂದಿರುತ್ತವೆ.

ಆನೆ ಕಂಡ ಕುರುಡರು- ಒಂದು ಕಥೆಯಾಗಿ ನೋಡಿದರೆ, ಆನೆಯನ್ನು ಬಟ್ಟೆ, ಕಂಬ, ಗೋಡೆ, ಹಾವು ಎಂದು ಹೋಲಿಸುತ್ತಾರೆ. ಹೀಗೆ ಹೇಳಲು ಅವರು (ಆಂಧರು) ಹಾವು, ಗೋಡೆ, ಕಂಬ ನೋಡಿಲ್ಲ. ಸ್ಪರ್ಶಿಸಿ ಕಲ್ಪಿಸಿಕೊಡಿದ್ದಾರೆಷ್ಟೇ! ಈ ಕಲ್ಪನಾ ಸಾಮರ್ಥ್ಯವು, ಅವರಿವರು ಹೇಳಿದ್ದು-ಕೇಳಿದ್ದರಿಂದ ಬಂದಿದ್ದು. ಅಂದರೆ, ಮೇಲ್ನೋಟಕ್ಕೆ ಕಾಣುವ ಕಣ್ಣುಗಳಿಂದ ಹಾವು, ಗೋಡೆ, ಕಂಬದಂತಹ ಗ್ರಹಿಕೆ ಅಸಾಧ್ಯ. ಬೇರೊಂದು ಇಂದ್ರಿಯ (ಕಣ್ಣಿನ ಕೆಲಸ ಮಾಡುವ) ಮೂಲಕ ಅವರ ಗ್ರಹಿಕೆ ಸಾಧ್ಯವಾಗಿದೆ ಎಂದರ್ಥ. ಹೀಗೆ ಸಾಧ್ಯವೆ ಎಂಬುದರ ಅಧ್ಯಯನಕ್ಕೆ ಮನೋವಿಜ್ಞಾನದಲ್ಲಿ ಬೇರೆ ಬೇರೆ ಜ್ಞಾನಶಾಖೆಗಳಿವೆ; ಆ ಮಾತು ಬೇರೆ. ವಿಚಾರ-ಭಾವ--ವರ್ತನೆಗಳ ಹಿನ್ನೆಲೆಯಲ್ಲಿ ಈ ಕಥೆಯನ್ನುವಿಶ್ಲೇಷಿಸಿದರೆ, ಕಣ್ಣಿದ್ದೂ ಕುರುಡರಂತೆ ವರ್ತಿಸುವ ಜ್ಞಾನದ ರಹಸ್ಯ ಅರಿವಿಗೆ ಬರುತ್ತದೆ. ಈ ಕಥೆಯಲ್ಲಿ ಪ್ರಧಾನವಾಗಿರುವ ಪರಿಕಲ್ಪನೆಗಳು, ಸಿದ್ಧಾಂತಗಳ ಅನ್ವಯಿಕ ಮೌಲ್ಯಗಳನ್ನು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬಹುದು.

ಭ್ರಮೆ-ಭ್ರಾಂತಿ-ಸಂವೇದನೆ-ಗ್ರಹಿಕೆ

ಮನೋವಿಜ್ಞಾನದನ್ವಯ, ಇದ್ದದ್ದನ್ನು ತಪ್ಪಾಗಿ ಗ್ರಹಿಸುವುದು ಭ್ರಮೆ(Illusion) (ಕತ್ತಲಲ್ಲಿ ಬಟ್ಟೆಯನ್ನು ತುಳಿದು ಹಾವು ಎಂದು ಗಾಬರಿಗೊಳ್ಳುವುದು) ಇಲ್ಲದ್ದನ್ನು ಇದೆ ಎಂದು ತಿಳಿದು ಭೀತಿಗೊಳಗಾಗುವುದು ಭ್ರಾಂತಿ (Hallucination). (ದೊಡ್ಡ ಮನೆಯಲ್ಲಿ ಒಬ್ಬರೇ ಇರುವಾಗ ಯಾವುದೋ ಕಣ್ಣು ತಮ್ಮನ್ನು ನೋಡುತ್ತಿದೆ. ಅದು ದೆವ್ವ ಇರಬಹುದು ಎಂಬ ಭೀತಿ) ಇಂದ್ರಿಯಗಳ ಮೂಲಕ ಪಡೆಯುವ ಜ್ಞಾನವು ಸಂವೇದನೆ(Sensation) (ವಸ್ತುವಿನ ಆಕಾರ, ಮೃದುತ್ವ-ಕಾಠಿನ್ಯತೆ- ಬಣ್ಣ ಇತ್ಯಾದಿ). ಆದರೆ, ಗ್ರಹಿಕೆಯ ದೃಷ್ಟಿಕೋನ (Perception) ಎಂದರೆ-ಒಂದು ವಸ್ತುವನ್ನು, ಅದರ ಸ್ವರೂಪ ಮಾತ್ರವಲ್ಲ, ಅದರ ಸ್ವಭಾವವನ್ನು ಗ್ರಹಿಸುವುದು. ಇಲ್ಲಿ, ವ್ಯಕ್ತಿ ಯಿಂದ ವ್ಯಕ್ತಿಗೆ ಅಭಿವ್ಯಕ್ತಿಯಲ್ಲಿ ಭಿನ್ನತೆಗಳು ಕಾಣಿಸಿಕೊಳ್ಳುತ್ತವೆ. ಏಕೆಂದರೆ, ವ್ಯಕ್ತಿಗಳು ಬೆಳೆದ ಪರಿಸರ. ಪಡೆದ ಶಿಕ್ಷಣ, ಆಲೋಚನಾ ರೀತಿಗಳು, ಅನುಭವಿಸುವ ಭಾವಗಳು, ಆಸಕ್ತಿಗಳು, ಈ ಹಿಂದಿನ ಅನುಭವಗಳು, ಭವಿಷ್ಯದಲ್ಲಿ ಅವರ ನಿರೀಕ್ಷೆಗಳ ಸ್ವರೂಪ ಎಲ್ಲವೂ ಬೇರೆ ಬೇರೆ ಯಾಗಿರುತ್ತದೆ. ಈ ಎಲ್ಲವುಗಳ ಮೊತ್ತವಾಗಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯ ಮನೋಜಗತ್ತು ಮತ್ತೊಬ್ಬನಿಂದ ಬೇರೆಯೇ ಆಗಿರುತ್ತದೆ.

ಕಣ್ಣಿದ್ದವರೂ ಕಂಡಂತೆ ಆನೆ….!

ಕುರುಡರನ್ನು ಹೊರತುಪಡಿಸಿ ನೋಡುವ ಸಂವೇದನೆಯಲ್ಲಿ ಎಲ್ಲರೂ ಸಮಾನರು. ಆದರೆ, ಗ್ರಹಿಕೆಯ ದೃಷ್ಟಿಕೋನದಲ್ಲಿ ಪ್ರತಿಯೊಬ್ಬರು ವಿಶಿಷ್ಟ ಮತ್ತು ಪ್ರತ್ಯೇಕತೆಯನ್ನು ಹೊಂದಿದವರು. ಇಂದ್ರಿಯಗಳ ಸಂವೇದನೆ ಮೂಲಕವೇ ಗ್ರಹಿಕೆ (ದೃಷ್ಟಿಕೋನ) ಸಾಧ್ಯ. ಆದರೆ, ಸಂವೇದನೆಯಿಂದ ಪಡೆದ ಜ್ಞಾನವನ್ನು ದೃಷ್ಟಿಕೋನದಿಂದ ಗ್ರಹಿಸಿದ ಜ್ಞಾನಕ್ಕೆ ಹೋಲಿಸಲಾಗದು. ದೃಷ್ಟಿಕೋನದಿಂದ ಪಡೆದ ಜ್ಞಾನವು ಗುಣಮಟ್ಟದಿಂದ ಬೇರೆಯೇ ಆಗಿರುತ್ತದೆ. ಆದ್ದರಿಂದ, ವಸ್ತುವನ್ನು ‘ನೋಡು’ವುದಕ್ಕೂ, ಅದರ ಒಳ-ಹೊರಗನ್ನು ತಮ್ಮದೇ ನೆಲೆಯಲ್ಲಿ ‘ಕಾಣು’ವುದಕ್ಕೂ ವ್ಯತ್ಯಾಸವಿರುತ್ತದೆ. ‘ಅವರವರ ಭಾವಕ್ಕೆ, ಅವರವರ ಭಕುತಿಗೆ ಇರುತಿಹನು ಶಿವನು’ ಎಂಬ ನಿಜಗುಣ ಶಿವಯೋಗಿ ಅವರ ಮಾತು ‘ದೃಷ್ಟಿಯಂತೆ ಸೃಷ್ಟಿ’ ಅನ್ನುವುದನ್ನೇ ಹೇಳುತ್ತದೆ. ಧಾರ್ಮಿಕ ವ್ಯಕ್ತಿಗೆ ಈ ಆನೆಯು ಗಣೇಶ, ಆಹಾರ ತಜ್ಞರಿಗೆ ಇದು ಸಸ್ಯಾಹಾರಿ, ದಂತಚೋರರಿಗೆ ಹಣ, ಅರಣ್ಯವಾಸಿಗಳ- ನಗರವಾಸಿಗಳ ಗ್ರಹಿಕೆಗಳು ಬೇರೆ ಬೇರೆ. ಮಾವುತನಿಗೆ ಆನೆ ಸಾಕು ಪ್ರಾಣಿ, ಸಾಮಾನ್ಯನಿಗೆ ಅಪಾಯಕಾರಿ.

ಇಂಗ್ಲಿಷಿನಲ್ಲಿ `6’ ಸಂಖ್ಯೆಯನ್ನು ದೊಡ್ಡದಾಗಿ ಮೇಜಿನ ಮೇಲೆ ಬರೆದು ನೀವು ಮಧ್ಯೆ ನಿಲ್ಲಿ. ನಿಮ್ಮ ಎಡಕ್ಕೆ ಒಬ್ಬ ಮತ್ತು ಬಲಕ್ಕೆ ಒಬ್ಬ ಗೆಳೆಯನನ್ನು ನಿಲ್ಲಿಸಿ. ಮೇಜಿನ ಮೇಲೆ ಬರೆದ ಸಂಖ್ಯೆಯು ಯಾವುದು ಎಂದು ಕೇಳಿ. ಒಬ್ಬರು 6 ಎಂದರೆ ಮತ್ತೊಬ್ಬರು 9 ಎನ್ನುತ್ತಾರೆ. ತಮಗೆ ಕಂಡಿದ್ದನ್ನು ಅವರು ಹೇಳಿದ್ದರೂ ‘ತಾವು ಹೇಳಿದ್ದ ಸಂಖ್ಯೆಯೇ ಸರಿ’ ಎಂದು ವಾದಿಸುತ್ತಾರಲ್ಲವೆ? ಯಾವ ಕಡೆಯಿಂದ ನಿಂತು ಸಂಖ್ಯೆಯನ್ನು ನೋಡುತ್ತಾರೋ, ಅದು ಸಂಖ್ಯೆಯ ಮೌಲ್ಯವನ್ನು ನಿರ್ಧರಿಸುತ್ತದೆ ವಿನಃ ಅವರು ತಪ್ಪು ಇಲ್ಲವೇ ಸರಿ ಹೇಳುತ್ತಾರೆ ಎಂಬುದು ಇಲ್ಲಿ ಮುಖ್ಯವಾಗದು. ಇದೇ ರೀತಿ, ಕಣ್ಣಿದ್ದರೂ ಆನೆಯ ರೂಪವನ್ನು ಬೇರೆ ಬೇರೆಯಾಗಿಯೇ ಬಣ್ಣಿಸಲು ಸಾಧ್ಯವಿದೆ.

ಅಂಧರ ವರ್ಣನೆಯು ಆನೆಯ ದೇಹವನ್ನು ಅವಲಂಬಿಸಿದೆ. ದೇಹ ನೋಡಲು ಅಗತ್ಯವಿದ್ದ ದೃಷ್ಟಿ ಅವರಲ್ಲಿ ಇರದು. ಆದರೆ, ಕಣ್ಣಿದ್ದವರು ಆನೆಯನ್ನು ತಮ್ಮ ದೃಷ್ಟಿಕೋನದಿಂದ ಅರ್ಥೈಸುತ್ತಾರೆ. ಸೂಕ್ತ ಹಾಗೂ ಸೂಕ್ಷ್ಮ ದೃಷ್ಟಿಕೋನವೊಂದಿರದಿದ್ದರೆ ಕಣ್ಣಿದ್ದೂ ಕುರುಡರು. ಇಬ್ಬರದೂ ಒಂದೇ ದೃಷ್ಟಿಕೋನ ಇರಬೇಕೆಂದರೆ, (Put yourself in someone's shoes) ಅವರ ದೃಷ್ಟಿಯ ಮೂಲಕ ನೋಡಬೇಕು ಎನ್ನುತ್ತದೆ ಮನೋವಿಜ್ಞಾನ. ಆಗ, ಬುದ್ಧ, ಬಸವ, ಏಸು, ಮುಹಮ್ಮದ್, ಗಾಂಧೀಜಿ, ಅಂಬೇಡ್ಕರ್..ಹೀಗೆ ಇವರೆಲ್ಲರಿಗೆ ಒಂದೇ ದೇವರು. ಉಳಿದವರಿಗೆ ಅಸಂಖ್ಯರು. ಇವರಿಗೆ ಕಾಣುವ ಆನೆ ಒಂದೇ ರೀತಿಯದ್ದು. ಉಳಿದವರಿಗೆ ಹಾವು, ಗೋಡೆ, ಕಂಬ, ಬಟ್ಟೆ. ಮಹಾಪುರುಷರ ಗ್ರಹಿಕೆಯ ಮಟ್ಟವೇ ಬೇರೆ, ಸಾಮಾನ್ಯರದ್ದೇ ಬೇರೆ.

ಇದಕ್ಕೆ, ಪೂರಕವಾಗಿ, ಆಸಕ್ತಿಕರವಾದ ಒಂದು ಉದಾಹರಣೆ ನೋಡಿ; ಮಜ್ನು ಒಬ್ಬ ರಾಜಕುಮಾರ. ಲೈಲಾ ಅರಮನೆಯ ದಾಸಿ. ಒಬ್ಬ ರಾಜಕುಮಾರನು ದಾಸಿಯನ್ನು ಪ್ರೀತಿಸಬಹುದೆ? ಇದು ರಾಜ ಮನೆತನಕ್ಕೆ ಅಪಮಾನ. ಬಿಟ್ಟುಬಿಡು ಅವಳನ್ನು. ಇಂತಹ ನೂರು ದಾಸಿಯನ್ನು ನೀನು ಪಡೆಯಬಹುದು ಎಂದು ತಂದೆ ಹೇಳುತ್ತಾನೆ. ಮಜ್ನು ಉತ್ತರ ಹೀಗಿತ್ತು; ‘ಅಪ್ಪಾ, ನೀನು ನಿನ್ನ ಕಣ್ಣುಗಳ ಮೂಲಕ ಲೈಲಾಳನ್ನು ನೋಡುತ್ತಿದ್ದಿ. ಅವಳು ದಾಸಿಯ ಹಾಗೆಯೇ ಕಾಣುತ್ತಾಳೆ. ಕುರೂಪಿಯಾಗಿಯೂ ಕಾಣುತ್ತಾಳೆ. ಆದರೆ, ನೀನು ನನ್ನ ಕಣ್ಣುಗಳ ಮೂಲಕ ನೋಡು; ಅವಳಷ್ಟು ಸುಂದರ ಹೆಣ್ಣು ಈ ಜಗತ್ತಿನಲ್ಲೇ ಇಲ್ಲ’.

MORE FEATURES

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...