ಅನೇಕಲವ್ಯ-2

Date: 23-10-2020

Location: ಬೆಂಗಳೂರು


ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ನಿತ್ಯಾನಂದ ಬಿ. ಶೆಟ್ಟಿ ಅವರು ಬರೆವ ಅಂಕಣ ಲೋಕೋಕ್ತಿ’. ಏಕಲವ್ಯನ ಕಥೆಯನ್ನು ನಮ್ಮ ಸಮಾಜದಲ್ಲಿ ಸಹಜ-ಸ್ವಾಭಾವಿಕವೆಂದು ಬಿಂಬಿಸಲ್ಪಟ್ಟ ಏರು-ಪೇರುಗಳ ಸಾಮಾಜಿಕತೆಯ ನಡುವೆ ಇಟ್ಟು ಅರ್ಥ ಮಾಡಿಕೊಂಡಾಗ, ಈ ಕಥೆ ಪಂಚತಂತ್ರದಂತಹ ಇನ್ನೊಂದು ಕಥೆ. ಒಂದು ಬಗೆಯ ನೀತಿಶಾಸ್ತ್ರವಾಗಿ ನಮ್ಮ ಮುಂದೆ ನಿರೂಪಿಸಲ್ಪಟ್ಟಿರುವ ಪಂಚತಂತ್ರದ ಕಥೆಯಲ್ಲಿ ಸಾಮಾಜಿಕತೆಯೂ ಇದೆ, ರಾಜಕೀಯ ಅರ್ಥವೂ ಇದೆ. ಆದರೆ ಏಕಕಾಲಕ್ಕೆ ನೀತಿಶಾಸ್ತ್ರವೂ, ಇತಿಹಾಸವೂ, ಆಧ್ಯಾತ್ಮಿಕ ದರ್ಶನವೂ, ರಾಜಕೀಯ ತತ್ತ್ವಜ್ಞಾನವೂ ಮತ್ತು ಇವೆಲ್ಲವನ್ನು ತನ್ನ ಗರ್ಭದಲ್ಲಿರಿಸಿಕೊಂಡಿರುವ ಮಹಾಕಾವ್ಯವೂ ಆಗಿರುವ ವ್ಯಾಸಭಾರತದಲ್ಲಿ; ಗಮನಸೆಳೆಯುವಂತೆ ನಿರೂಪಣೆಗೊಂಡಿರುವ ಏಕಲವ್ಯನ ಕಥೆಯನ್ನು ಒಂದು ಸ್ವತಂತ್ರ ಕಥೆ ಎಂದು ಓದಬಹುದೇ? ಎಂಬ ಜಿಜ್ಞಾಸೆ ಇಲ್ಲಿದೆ.

ಭಾರತದ ವಾಙ್ಮಯ ಪರಂಪರೆಯ ಲಿಖಿತ ಮತ್ತು ಮೌಖಿಕ ರೂಪಗಳಲ್ಲಿ ಬಹುಬಗೆಯ ಪಠ್ಯಗಳು ಮೈದೋರಿವೆ. ಇಂಥ ಪಠ್ಯಗಳನ್ನು ನಮ್ಮ ದೇಶ-ಕಾಲದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಪರಿಕಿಸಿ ನೋಡುವ ವಿಪುಲ ಪ್ರಯತ್ನಗಳನ್ನು ಭಾರತದ ಬೌದ್ಧಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಧೀಮಂತರು ಮಾಡಿದ್ದಾರೆ. ಇಂತಹ ಪ್ರಯತ್ನಗಳನ್ನು, ಸಾಂಸ್ಕೃತಿಕ ಸಂಕೀರ್ಣತೆಗಳಿಂದ ಇಡಿಕಿರಿದ ಭಾರತೀಯ ಉಪಖಂಡದಲ್ಲಿ ಅಪಾರ ಸೂಕ್ಷ್ಮತೆಯಿಂದ ಮತ್ತು ತಜ್ಞತೆಯಿಂದ ಮಾಡಬೇಕು. ಯಾಕೆಂದರೆ ನಮ್ಮ ಸಮಾಜ ಹಲವು ಸಾವಿರ ವರ್ಷಗಳ ದಟ್ಟ ಇತಿಹಾಸವನ್ನು ಹೊತ್ತುಕೊಂಡು ಬಂದಿದ್ದು ಇದರ ನಾರು-ಬೇರುಗಳು ಇನ್ನೂ ನಮಗೆ ಪೂರ್ಣವಾಗಿ ದಕ್ಕಿಲ್ಲ. ಈ ಅಗಾಧ ಹರಹು ಮತ್ತು ಇದರ ಅರಿವು ಪಠ್ಯ ವಿಶ್ಲೇಷಣೆಯ ಸಂದರ್ಭದಲ್ಲಿ ನಮ್ಮನ್ನು ವಿನೀತಗೊಳಿಸಬೇಕು. ವಿನಯ ಮತ್ತು ಬೆರಗಿನಿಂದಲೇ ಇದನ್ನು ಕಾಣುತ್ತ, ಅರ್ಥ ಮಾಡಿಕೊಳ್ಳುತ್ತ, ಅಧ್ಯಯನ ಮಾಡುತ್ತ ನಾವು ಒಳಗೆ ನಡೆಯಬೇಕು. ಪರಂತು ಯಾವುದೇ ಪಠ್ಯಗಳ ವಾಕ್ಯಾರ್ಥ ನಿರ್ಣಯವನ್ನು ’ಇದಮಿತ್ಥಂ’ ಎಂಬಂತೆ ಮಾಡುವುದು ಸೂಕ್ತವಲ್ಲ. ಈ ಮಾತು ನನ್ನ ಈ ಬರವಣಿಗೆಗೂ ಅನ್ವಯಿಸುತ್ತದೆ.

ನಮ್ಮ ಸದ್ಯದ ರಾಜಕಾರಣದ ಪರಿಭಾಷೆಗಳ ಮೂಲಕ ಮತ್ತು ಆಧುನಿಕ ಸಾಮಾಜಿಕ ಸಿದ್ಧಾಂತಗಳ ವೈಚಾರಿಕ ನೆಲೆಗಟ್ಟುಗಳಲ್ಲಿ ನಿಂತು ವ್ಯಾಸಭಾರತವನ್ನು ಓದುವ ಕ್ರಮಕ್ಕೂ, ಕಾವ್ಯದೊಳಗೇ ನಿಹಿತವಾಗಿರುವ ಸಂಸ್ಕೃತಿ-ವಿಚಾರವನ್ನು ಪಠ್ಯವಿಶ್ಲೇಷಣೆಯ ಮುಖೇನ ಅರ್ಥಮಾಡಿಕೊಳ್ಳುವುದಕ್ಕೂ ಮೂಲಭೂತವಾದ ವ್ಯತ್ಯಾಸಗಳಿವೆ. ಮಹಾಭಾರತವನ್ನು, ಮಾನವ ಸಮುದಾಯದ ಜನಾಂಗೀಯ ಸಂಕೀರ್ಣತೆ ಮತ್ತು ಸಂಘರ್ಷದ ಐತಿಹಾಸಿಕ ಕಥನವನ್ನಾಗಿಯಷ್ಟೇ ನೋಡಿದರೆ ಆಗ ಅದು ಎಸ್ ಎಲ್ ಭೈರಪ್ಪನವರು ಕಥಿಸಿದ ’ಪರ್ವ’ ಕಾದಂಬರಿಯಂತಾಗುತ್ತದೆ. ವಾಸ್ತವಿಕಗೊಳ್ಳುವ, ಸಪಾಟಾಗುವ ಮತ್ತು ಎಂದೋ ನಡೆದುಹೋದ ನಿರ್ದಿಷ್ಟ ಚಾರಿತ್ರಿಕ ಘಟನೆಯ ಮರುನಿರೂಪಣೆಗಷ್ಟೇ ಸೀಮಿತಗೊಳ್ಳುವ ಭೈರಪ್ಪನವರ ಮಹಾಭಾರತ ಅಂತಿಮವಾಗಿ ಸ್ಥಗಿತಗೊಳ್ಳುತ್ತದೆ. ಇದಕ್ಕೆ ಎದುರಾಗಿ ಆಧುನಿಕ ಸಾಮಾಜಿಕ ಚಿಂತನೆ ಮತ್ತು ಕಾಳಜಿಯಿಂದ ಮಹಾಭಾರತವನ್ನು ಓದಿದರೆ ಲಿಂಗೀಯ ಪ್ರಶ್ನೆಯನ್ನೂ ಒಳಗೊಂಡ ಈಗಿನ ಸಾಮಾಜಿಕ ನ್ಯಾಯದ ಹರಿತವಾದ ಪ್ರಶ್ನೆಗಳನ್ನು ಇದು ಎದುರಿಸುತ್ತಿಲ್ಲವಲ್ಲ ಎಂಬ ಮೂದಲಿಕೆಗೂ ಕಾವ್ಯ ಒಳಗಾಗಬೇಕಾಗುತ್ತದೆ.

ಸಾಮಾಜಿಕ ಕಳಕಳಿಯುಳ್ಳ ವಿಮರ್ಶಕರು/ಸಂಶೋಧಕರು ಅಧ್ಯಯನ ಮಾಡುವ ಪಠ್ಯದಲ್ಲಿ ಸಾಮಾಜಿಕ ಕಾಳಜಿಯ ರಾಜಕೀಯವನ್ನಷ್ಟೇ ಕಂಡರೆ ಪಠ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಹೊಸ ಸಮಸ್ಯೆಗಳು ಉದ್ಭವವಾಗುತ್ತವೆ. ಅಂದರೆ ಪಠ್ಯದಲ್ಲಿರುವ ರಾಜಕೀಯ ಸಂಕೀರ್ಣತೆಯನ್ನು ಅರಿಯದೆ ಮತ್ತು ಪಠ್ಯದಿಂದ ಏನನ್ನೂ ಕಲಿಯದೆ; ತನಗೆ ಮುಖ್ಯವಾಗುವ ಭಾಗದಲ್ಲಿ ಪಠ್ಯವನ್ನು ಹಿಚುಕಿ, ತನಗೆ ಬೇಕಾದ ಅರ್ಥವನ್ನು ಹೊರಡಿಸುವ ಯಾವುದೇ ಪ್ರಯತ್ನ ತಿಳಿವಳಿಕೆಯ ದೃಷ್ಟಿಯಿಂದ ವಿಧಾಯಕವಾದ ಮಾರ್ಗ ಅಲ್ಲ. ಪ್ರಚಲಿತ ತೀರ್ಮಾನಗಳಿಂದ ವಿಚಲಿತಗೊಳ್ಳದೆ ಸ್ವತಂತ್ರವಾಗಿ ಯೋಚನೆ ನಡೆಸುವುದು ಒಂದು ಬಗೆಯ ಬೌದ್ಧಿಕ ಸಾಹಸ. ಇಂಥ ಸಾಹಸವನ್ನು ನಮ್ಮ ಅನೇಕ ಪೂರ್ವಸೂರಿಗಳು ವಿನಯಪೂರ್ವಕವಾಗಿಯೇ ನಡೆಸಿದ್ದರಲ್ಲವೇ?.

ಏಕಲವ್ಯನ ಪ್ರಕರಣವನ್ನು ವೇದವ್ಯಾಸರ ಶ್ರೀ ಮನ್ಮಹಾಭಾರತದಿಂದ ಹೊರತಂದು ಸ್ವತಂತ್ರವಾದ ಕಥೆ ಎಂದು ಓದಿದಾಗ, ಈ ಕಥೆ ಮನುಷ್ಯ ಮಾತ್ರದವರಲ್ಲಿ ನೋವುಂಟು ಮಾಡುವುದು ಸಹಜವೇ ಆಗಿದೆ. ಇದಕ್ಕೆ ಸಾಮಾಜಿಕ ಆಯಾಮವೂ ಇದ್ದು, ಕಥೆಯ ದುರಂತ ಅಂತ್ಯಕ್ಕೆ ಈ ದೇಶದ ಸಾಮಾಜಿಕ ವ್ಯವಸ್ಥೆಯೇ ಕಾರಣ ಎಂಬುದನ್ನು ತಿಳಿದಾಗ ಓದುಗನ ನೋವು ಉತ್ಕಟವಾಗಿ, ಅವನಿಂದ ಭಾವಾವೇಶದ ಪ್ರತಿಕ್ರಿಯೆ ಬಂದರೆ ಅದರಲ್ಲಿ ಅಸಹಜವಾದುದೇನೂ ಇಲ್ಲ.

ಏಕಲವ್ಯನ ಕಥೆಯನ್ನು ನಮ್ಮ ಸಮಾಜದಲ್ಲಿ ಸಹಜ-ಸ್ವಾಭಾವಿಕವೆಂದು ಬಿಂಬಿಸಲ್ಪಟ್ಟ ಏರು-ಪೇರುಗಳ ಸಾಮಾಜಿಕತೆಯ ನಡುವೆ ಇಟ್ಟು ಅರ್ಥ ಮಾಡಿಕೊಂಡಾಗ, ಈ ಕಥೆ ಪಂಚತಂತ್ರದಂಥ ಇನ್ನೊಂದು ಕಥೆ. ಪಂಚತಂತ್ರದಲ್ಲಿ ಗಿಡುಗ V/s ಹಂಸ, ಸಿಂಹ V/s ಮೊಲಗಳ ಕಥೆ ಇರುವಂತೆಯೇ, ಇದು ದ್ರೋಣಾರ್ಜುನರೆಂಬ ಹುಲಿಗಳೂ, ಏಕಲವ್ಯನೆಂಬ ಹುಲ್ಲೆಯೂ ಇರುವಂಥ ಕಥೆ. ಸುದೀರ್ಘ ಯೋಚನೆಯ ನಂತರ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುವ ಸಂಚುಕೋರತನ ಮತ್ತು ಹಿಂದು-ಮುಂದು ಯೋಚಿಸದೆ ತಕ್ಷಣದಲ್ಲೇ ಹೆಬ್ಬೆರಳು ಕತ್ತರಿಸಿ ಕೊಡುವ ಭಾವುಕ ಹಾಗೂ ದಾಷ್ಟೀಕ ಗುಣವನ್ನು ಹೊಂದಿರುವ ಈ ಪ್ರಕರಣದ ರಾಜಕೀಯ ಸಾಂಕೇತಿಕತೆಯನ್ನು ಸಾಮಾಜಿಕವೆಂದು ಓದಿದ ತಕ್ಷಣ ಇಡೀ ಕಥನ “ಭಕ್ಷ್ಯ” ಮತ್ತು “ಭಕ್ಷಕ” (ಭೋಕ್ತೃ) ಎಂದಷ್ಟೇ ಆಗಿ ರೂಪಾಂತರಗೊಳ್ಳುತ್ತದೆ.

ಒಂದು ಬಗೆಯ ನೀತಿಶಾಸ್ತ್ರವಾಗಿ ನಮ್ಮ ಮುಂದೆ ನಿರೂಪಿಸಲ್ಪಟ್ಟಿರುವ ಪಂಚತಂತ್ರದ ಕಥೆಯಲ್ಲಿ ಸಾಮಾಜಿಕತೆಯೂ ಇದೆ, ರಾಜಕೀಯ ಅರ್ಥವೂ ಇದೆ. ಹಾಗಾದರೆ ಏಕಕಾಲಕ್ಕೆ ನೀತಿಶಾಸ್ತ್ರವೂ, ಇತಿಹಾಸವೂ, ಆಧ್ಯಾತ್ಮಿಕ ದರ್ಶನವೂ, ರಾಜಕೀಯ ತತ್ತ್ವಜ್ಞಾನವೂ ಮತ್ತು ಇವೆಲ್ಲವನ್ನು ತನ್ನ ಗರ್ಭದಲ್ಲಿರಿಸಿಕೊಂಡಿರುವ ಮಹಾಕಾವ್ಯವೂ ಆಗಿರುವ ವ್ಯಾಸಭಾರತದಲ್ಲಿ; ಗಮನಸೆಳೆಯುವಂತೆ ನಿರೂಪಣೆಗೊಂಡಿರುವ ಏಕಲವ್ಯನ ಕಥೆಯನ್ನು ಒಂದು ಸ್ವತಂತ್ರ ಕಥೆ ಎಂದು ಓದಬಹುದೇ?. ಎಷ್ಟೇ ಕಡಿಮೆ ಶ್ಲೋಕಗಳಲ್ಲಿ ಚಿತ್ರಿತಗೊಂಡಿದ್ದರೂ ಇದು ಮಹಾಭಾರತದ ಒಳಗಿರುವ ಪರಮಾದ್ಭುತವಾದ ಕಥೆ. ವ್ಯಾಸಭಾರತದಲ್ಲಿ ಕಿಕ್ಕಿರಿದಿರುವ ರೂಪಕಗಳ ನಡುಮಧ್ಯದಲ್ಲಿ ನಿಂತು ಈ ಕಥೆಯ ರಾಜಕೀಯ ಮಹತ್ವವನ್ನು ಮತ್ತು ಅರ್ಥವನ್ನು ಪರಿಶೀಲಿಸಬೇಕಿದೆ.

ಮಹಾಭಾರತದಲ್ಲಿ ಕಂಡು ಬರುವ ಸಮಾಜ ನಿಸ್ಸಂಶಯವಾಗಿ ಕ್ಷತ್ರಿಯ ಸಮಾಜ. ಕ್ಷತ್ರಿಯರಲ್ಲದ ಬೇರಾರನ್ನೂ ಅಲ್ಲಿ ಪ್ರಧಾನವಾಗಿ ಕಾಣಲಾರೆವು. ಈ ಕ್ಷತ್ರಿಯರಲ್ಲಿ ಕ್ಷಾತ್ರವರ್ಣೀಯರೂ ಇದ್ದಾರೆ. (ಕುರು, ಪಾಂಚಾಲರು) ಹಾಗೆಯೇ ಸ್ವಭಾವದಲ್ಲಿ ಕ್ಷತ್ರಿಯರಾಗಿರುವವರೂ ಇದ್ದಾರೆ. (ಪರಶುರಾಮ, ದ್ರೋಣ) ಇದನ್ನು ವಿವರವಾಗಿ ನೋಡೋಣ.

ದೇವನದಿಯಾದ ಗಂಗೆಯ ಜೊತೆಗಿನ ಸಂಸಾರದಲ್ಲಿ ವ್ಯತ್ಯಯವಾದ ಬಳಿಕ, ಹಸ್ತಿನಾವತಿಯ ಚಕ್ರವರ್ತಿಯಾದ ಶಂತನು ಮರುವಿವಾಹದ ಪ್ರಸ್ತಾವವನ್ನು ಮುಂದಿಡುವುದು ಓರ್ವ ಬೋಯಿತಿಯ ಮುಂದೆ. ಮತ್ಸ್ಯಗಂಧಿ, ಯೋಜನಗಂಧಿ ಮತ್ತು ಸತ್ಯವತಿ ಎಂಬ ಹೆಸರನ್ನು ಪಡೆದಿರುವ ಈ ಹೆಣ್ಣುಮಗಳು ಸಾಮಾನ್ಯಳಲ್ಲ. ಬೆಸ್ತ ಸಮುದಾಯದ ಒಡೆಯನ ಮಗಳು ಆಕೆ. ಆಕೆಯ ಅಪ್ಪ ದಾಶರಾಜ. ರಾಜ್ಯದ ಒಡೆಯನಾಗಲಿ, ಸ್ವತಂತ್ರ ಸಮುದಾಯವೊಂದರ ಒಡೆಯನಾಗಲಿ ನಾಯಕ ನಾಯಕನೇ. ದೊಡ್ಡ ಕಾಡಿನಲ್ಲಿ ದೊಡ್ಡ ಹುಲಿ ಇರುತ್ತದೆ, ಸಣ್ಣ ಕಾಡಿನಲ್ಲಿ ಹುಲಿ ಬೆಕ್ಕಿನಂತಿರುತ್ತದೆ ಎಂದು ಹೇಳಬಹುದೇ?. ಹುಲಿ ಹುಲಿಯೇ. ಕಾಡಿನ ವಿಸ್ತೀರ್ಣ ದೊಡ್ಡದಿರಲಿ, ಸಣ್ಣದಿರಲಿ. ಹಾಗೆಯೇ ದಾಶರಾಜನೂ.

ಬೇಟೆ ಮತ್ತು ದ್ಯೂತ ಬಹುತೇಕ ಎಲ್ಲ ಕ್ಷತ್ರಿಯರಿಗೂ, ಅರಸರಿಗೂ ಪ್ರಿಯವಾದ ವ್ಯಸನವಲ್ಲವೇ?. ಕ್ಷತ್ರಿಯರಿಗೆ ಬೇಟೆ ಎಂಬುದು ಕಾಲಕ್ಷೇಪದ ವ್ಯಸನವಾದರೆ ದಾಶರಾಜನಿಗೆ ಅದು ಪೂರ್ಣಪ್ರಮಾಣದ ವೃತ್ತಿ. ಮಂದಾಕಿನಿಯ ಮಂದ್ರ ಮತ್ತು ರೌರವ ಪ್ರವಾಹದ ನಡುವೆಯೂ ಮತ್ಸ್ಯಬೇಟೆಯನ್ನು ಆಡುವ ಸಾಹಸಿಗ ದಾಶರಾಜ ದ್ಯೂತವನ್ನೂ ಆಡಬಲ್ಲವನು. ಆದರೆ ಅವನು ದ್ಯೂತವನ್ನು ಆಡಿದ್ದು ಪಗಡೆ ಹಾಸಿನ ಮೇಲಲ್ಲ, ಕಾವ್ಯದ ಆದಿಬಿಂದುವಿನಲ್ಲಿ. ಮಹಾಭಾರತದ ಕಥಾವಸ್ತುವನ್ನು ಪಗಡೆಯಾಟದ ಬಹಳ ದೊಡ್ಡ ಹಾಸು ಎಂದು ಭಾವಿಸಿದರೆ ಆ ಹಾಸಿನಲ್ಲಿ ಮೊದಲ ಕಾಯಿಯನ್ನು ನಡೆಸಿದವನೇ ದಾಶರಾಜ. ಇವನು ಉರುಳಿಸಿದ ಆರಂಭದ ದಾಳದಲ್ಲೇ ಚಕ್ರವರ್ತಿ ಸಿಂಹಾಸನ ಬೆಸ್ತರ ಒಡೆಯನ ಮೊಮ್ಮಕ್ಕಳ ಪಾಲಾಯಿತು. ದಾಶರಾಜ ನಡೆಸಿದ ಪಗಡೆಯಾಟದಲ್ಲಿ ಪದಚ್ಯುತನಾದವನು ಭೀಷ್ಮ. ವಂಶಪಾರಂಪರ್ಯದಂತೆ ಭೀಷ್ಮನಿಗೆ ಬರಬೇಕಾದ ಸಿಂಹಾಸನವನ್ನು ನಡುದಾರಿಯಲ್ಲಿ ತಡೆದು ತನ್ನ ಮೊಮ್ಮಕ್ಕಳಿಗೆ ಕೊಡಿಸಿದ ದಾಶರಾಜನ ಕ್ಷಾತ್ರೋಚಿತವಾದ ಈ ಛಲ ಮತ್ತು ಮೋಹ ರಾಜಕೀಯದ ಮುಂದೆ ಪರಮವೈಭವದ ಹಿನ್ನೆಲೆಯಿರುವ ಚಂದ್ರವಂಶ ಕಳಾಹೀನಗೊಂಡಂತಿದೆ.

ಹಾಗೆಂದು ಈ ಸನ್ನಿವೇಶದಲ್ಲಿ ರಾಜಕೀಯವಷ್ಟೇ ಇದೆಯೇ?. ಇಲ್ಲ. ಸೂಕ್ಷ್ಮವಾಗಿ ನೋಡಿದರೆ ಆಧ್ಯಾತ್ಮಿಕ ಸ್ಪರ್ಶವೂ ಇದೆ. ದೇವಲೋಕದ ಅಷ್ಟವಸುಗಳಲ್ಲಿ ಒಬ್ಬನಾದ ಭೀಷ್ಮ, ಭುವಿಯ ಬಾಳನ್ನು ಬಾಳಬೇಕಾಗಿ ಬಂದರೂ ಅವನು ತನ್ನ ಕರ್ತವ್ಯ ಮುಗಿಸಿ ದೇವಲೋಕಕ್ಕೆ ಮರಳುವಾಗ ತನ್ನ ಯಾವ ಕುರುಹನ್ನೂ ಇಲ್ಲಿ ಮುಂದುವರಿಸುವಂತಿಲ್ಲ. ರಕ್ತವನ್ನೂ ಕೂಡ. ಸಂತಾನ ಅಂದರೆ ರಕ್ತದ ಮುಂದುವರಿಕೆಯೇ ಅಲ್ಲವೇ?. ಹಾಗಾಗಿ ಭೀಷ್ಮನಿಗೆ ಅನುಕೂಲವಾಗುವಂತೆ, ಅವನನ್ನು ಸಂಸಾರದಿಂದ ’ವಿ-ರಕ್ತ’ಗೊಳಿಸುವವನು ದಾಶರಾಜ. ಭೀಷ್ಮನ ಪಾಲಿಗಂತೂ ನಿಜವಾದ ಅರ್ಥದಲ್ಲಿ ಸಂಸಾರ ಸಾಗರವನ್ನು ದಾಟಿಸಿದ ಅಂಬಿಗನೆಂದರೆ ದಾಶರಾಜನೇ. ದ್ಯೂತವನ್ನು ಒಂದು ಬಗೆಯ ಛಾಯಾಸಮರ ಎಂದು ಭಾವಿಸುವುದಾದಲ್ಲಿ ಓರ್ವ ಕ್ಷತ್ರಿಯ ಇನ್ನೋರ್ವ ಕ್ಷತ್ರಿಯನನ್ನು ಘನತೆಯಿಂದ ಜೀವನ್ಮುಕ್ತಗೊಳಿಸಿದಂತಿದೆ ಈ ಪ್ರಕರಣ.

ಮುಂದಿನ ಘಟನೆಯನ್ನು ಗಮನಿಸೋಣ:

ನಿಷಾದರ ರಾಜನಾದ ಹಿರಣ್ಯಧನುವಿನ ಮಗನಾದ ಏಕಲವ್ಯನೂ ಅರಣ್ಯಸಮಾಜದಲ್ಲಿರುವ ಕ್ಷತ್ರಿಯನೇ. ಹಿರಣ್ಯಧನುವಿನ ಕಾಲಕ್ಕೆ ಮೃಗಬೇಟೆಗಷ್ಟೇ ಸೀಮಿತವಾದ ಬಿಲ್ವಿದ್ಯೆಯ ಇತಿ-ಮಿತಿ, ಏಕಲವ್ಯನ ಕಾಲಕ್ಕೆ ತನ್ನ ಗಡಿಯನ್ನು ದಾಟುತ್ತದೆ. ಗಡಿ ದಾಟ ಬಲ್ಲ ಅದಟು ಇರುವವನು ಕ್ಷತ್ರಿಯನೇ. ಸಮೂಹನಾಶಗೈಯಬಲ್ಲ ವಿನಾಶಕಾರೀ ಬಿಲ್ವಿದ್ಯೆಯ ಕಲಿಕೆಗಾಗಿ ಏಕಲವ್ಯ ಹಾತೊರೆಯುವುದು ಆತನ ಕ್ಷಾತ್ರಗುಣ ಸಂಪನ್ನತೆಯಿಂದ. ತನ್ನವರ ಹೊಟ್ಟೆಪಾಡಿಗೆ ಮತ್ತು ತನ್ನ ಸಮುದಾಯವನ್ನು ಪಾಲಿಸಲಿಕ್ಕೆ ಬೇಕಾಗುವಷ್ಟು ಬಿಲ್ವಿದ್ಯೆ ಏಕಲವ್ಯನಲ್ಲಿ ಇದ್ದರೂ ಆತನಿಗೆ ಕ್ಷತ್ರಿಯರ ವಿದ್ಯೆ ಯಾಕೆ ಬೇಕಾಯಿತು?. ಯಾಕೆಂದರೆ ಕ್ಷತ್ರಿಯರಂತೆ ತನ್ನನ್ನು ತಾನು ತೋರ್ಪಡಿಸಿಕೊಳ್ಳಬೇಕಾದ ವಿದ್ಯೆ ಆತನಲ್ಲಿ ಇರಲಿಲ್ಲ. ದಟ್ಟಾರಣ್ಯದಲ್ಲಿ ಬದುಕುವ ನಿಷಾದರಾಜನ ಮಗ, ನಾಡಿನ ಅರಸು ಮಕ್ಕಳಿಗೆ ಬೇಕಾದಂಥ ವಿದ್ಯೆಯನ್ನು ಕೈವಶ ಮಾಡಿಕೊಳ್ಳುವುದಕ್ಕೆ ಹಂಬಲಿಸುತ್ತಿರುವುದು ಪ್ರಾಯಃ ಬೇರಾವುದಕ್ಕೂ ಅಲ್ಲ. ಧುರವಿಕ್ರಮಿಗಳನ್ನು ಕೈಬೀಸಿ ಕರೆಯುತ್ತಿರುವ ಕುರುಕ್ಷೇತ್ರದ ಮಹಾಯುದ್ಧದ ರಣವೀಳ್ಯಕ್ಕಾಗಿ. ಹಾಗಾಗಿ ಇದು ಕಾಲದ ಕರೆ. ಇತಿಹಾಸದ ಆಹ್ವಾನ.

ಈಗ ಎತ್ತಿಕೊಳ್ಳಬೇಕಾದ ಪ್ರಶ್ನೆ, ಕ್ಷಾತ್ರದ ಅರ್ಥ ಯುದ್ಧದ ಉನ್ಮಾದದಲ್ಲಿದೆಯೋ? ಅಥವ ಯುದ್ಧದ ಕ್ರಿಯೆಯಲ್ಲಿದೆಯೋ?. ಪ್ರಾಯಃ, ಉನ್ಮಾದವಿರದೆ ಕ್ರಿಯೆಯಲ್ಲಿ ತೊಡಗುವುದಕ್ಕೆ ಬೇಕಾದ ಆವೇಶವನ್ನು ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಇವೆರಡು ಒಟ್ಟಾಗಿಯೇ ಇರುವುದರಲ್ಲಿ ಯುದ್ಧದ ತೀವ್ರತೆಯಿದೆ. ದೈವಾರಾಧನೆಯ ಸನ್ನಿವೇಶದಲ್ಲಿ ಹಿಮ್ಮೇಳದ ವಾದ್ಯಪರಿಕರಗಳ ವೀರೋಚಿತ ತ್ವರಿತ ಲಯದ ಬಡಿತವಿಲ್ಲದಿದ್ದರೆ ದೈವವು ಹೇಗೆ ಆವೇಶದಿಂದ ಮೈದುಂಬಿ ಬರಲಾರದೋ, ಹಾಗೆಯೇ ಯುದ್ದವೂ ಕೂಡ. ಅದು ರಣದೈವದ ನರ್ತನ. ಸಮರಭೇರಿ-ನಗಾರಿಗಳು ಬಾರಿಸದೆ, ಉನ್ಮಾದವುಕ್ಕುಕ್ಕಿ ಹರಿಯದೆ ಯಾವ ಸೈನಿಕನೂ ರಣರಂಗಕ್ಕೆ ಇಳಿಯಲಾರ. ಇಳಿದರೂ ಕಾದಲಾರ.

ಈ ಅರ್ಥದಲ್ಲಿ ಏಕಲವ್ಯ, ಕ್ಷಾತ್ರೋಚಿತವಾದ ವಿದ್ಯೆಯನ್ನು ಕಲಿಯುವುದು ಕೇವಲ ’ಕಲಿಕೆ’ಯ ಮೇಲಿನ ಆಸಕ್ತಿಯಿಂದಷ್ಟೇ ಅಲ್ಲ. ಕಲಿತಿರುವುದನ್ನು ಸಮರಸಮ್ಮುಖದಲ್ಲಿ ನಿಜಗೊಳಿಸಿ ತಾನೂ ’ಮಹಾಕಲಿ’ಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ. ನಟನೆಯನ್ನು ಕಲಿತ ನಟನೊಬ್ಬ ತನ್ನೊಳಗೆ ಕಲೆಯನ್ನು ಆವಾಹಿಸುತ್ತ, ರಂಗದ ಮೇಲೆ ಅಭಿನಯಿಸುತ್ತ ಹೇಗೆ ಸಾರ್ಥಕ್ಯದ ಭಾವವನ್ನು ಪಡೆಯುತ್ತಾನೋ ಹಾಗೆಯೇ ಯೋಧನೂ ಕೂಡ. ಕಲಿತ ಕ್ಷಾತ್ರಕೌಶಲವನ್ನು ಪ್ರದರ್ಶಿಸುವುದಕ್ಕಾಗಿ ಇರುವುದಲ್ಲವೇ ರಣರಂಗ. ಇದೂ ಕೂಡ ಒಂದು ಬಗೆಯ ರಂಗವೇ.

ಕ್ಷಾತ್ರ ಮತ್ತು ಯುದ್ಧದ ಬದುಕನ್ನು ಆಯ್ಕೆ ಮಾಡಿ ಬಾಳುವವರಿಗೆ ’ಮುಗ್ಧ’ ಎನ್ನುವ ಸವಲತ್ತನ್ನು ಕೊಡುವುದು ಅಥವ ವಿನಾಶವನ್ನೇ ಸಂಕಲ್ಪಿಸಿರುವ ಯುದ್ಧವನ್ನು ’ಧರ್ಮಯುದ್ಧ’ ಎಂದು ಭಾವಿಸುವುದು ಸಂಕೀರ್ಣವಾದ ಧರ್ಮಜಿಜ್ಞಾಸೆಯ ವಸ್ತು. ಇತ್ತಂಡಗಳಲ್ಲಿ ಯಾರು ಈ ಅಹವಾಲನ್ನು ಮುಂದಿಟ್ಟರೂ ಅದನ್ನು ಸಹಾನುಭೂತಿಯಿಂದ ನೋಡುವುದು ಕಾವ್ಯಕ್ಕೆ ಸಮಸ್ಯಾತ್ಮಕವಾದುದು. ಗೆದ್ದವರ ಚರಿತ್ರೆ ಬರೆಯುವ ’ಇತಿಹಾಸ’ ಎಂಬ ಆಧುನಿಕ ಜ್ಞಾನಶಿಸ್ತಿಗೆ ಇದು ಸುಲಭ. ಆದರೆ ಸೋತವರ-ಗೆದ್ದವರ ನಡುವೆ ಧರ್ಮಸಂಕಟದ ಪ್ರಶ್ನೆಗಳನ್ನು ಎತ್ತುವ ಕಾವ್ಯಕ್ಕೆ ಇದು ಕಷ್ಟ.

ಅಪ್ರತಿಮ ಯೋಧನಾಗಬೇಕೆಂಬ ಹೆಬ್ಬಯಕೆ ಅತ್ತ ಏಕಲವ್ಯನಂಥ ಕಾಡಬೇಡನನ್ನೂ ಬಿಡಲಿಲ್ಲ. ಇತ್ತ ದ್ರೋಣನಂಥ ಬಡ ಬ್ರಾಹ್ಮಣನನ್ನೂ ಬಿಡಲಿಲ್ಲ. ತನಗೆ ಎಷ್ಟು ಬೇಕೋ ಅಷ್ಟನ್ನು ಮಾಡಿಕೊಂಡಿರುವುದಕ್ಕೆ ಏಕಲವ್ಯನಿಗೆ ಎಲ್ಲ ಬಗೆಯ ಅನುಕೂಲವೂ ಇತ್ತು. ಆದರೆ ಅವನು ಅತೃಪ್ತನಾಗಿದ್ದ. ಬಿಲ್ವಿದ್ಯೆಯ ಶಾಸ್ತ್ರೀಯ ಕಲಿಕೆಯನ್ನು ಅಪೇಕ್ಷಿಸಿದ. ಮಂತ್ರಾಸ್ತ್ರಗಳ ಬಗ್ಗೆ ಮೋಹಿತನಾಗಿದ್ದ. ಹಾಗೆಯೇ ಕುಲಾಚಾರದ ಕೆಲಸಗಳನ್ನು ಮಾಡಿಕೊಂಡು ದ್ರೋಣನೂ ನೆಮ್ಮದಿಯಿಂದ ಇರಬಹುದಾಗಿತ್ತು. ಆದರೆ ಅವನೂ ಅತೃಪ್ತನಾಗಿದ್ದ. ದ್ರೋಣನ ಕ್ಷಾತ್ರದ ಹಸಿವು ಎಷ್ಟಿತ್ತೆಂದರೆ ಅಗ್ನಿವೇಶ್ಯ ಮಹರ್ಷಿಯಿಂದ ಕಲಿತ ಶಸ್ತ್ರಾಸ್ತ್ರಗಳ ತಿಳಿವಳಿಕೆಯಿಂದ ಆತ ಸಂತೃಪ್ತನಾಗದೆ ಪರಶುರಾಮರನ್ನು ಹುಡುಕಿಕೊಂಡು ಹೋಗಿ ಅವರಿಂದಲೂ ಮಂತ್ರಾಸ್ತ್ರ-ದಿವ್ಯಾಸ್ತ್ರಗಳನ್ನು ಪಡೆದ. ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ’ವರ್ಣ’ ಹುಟ್ಟಿನಿಂದ ಅಲ್ಲ ಅಥವಾ ಹುಟ್ಟಿನಿಂದ ಮಾತ್ರ ಅಲ್ಲ; ಅದು ಗುಣ-ಕರ್ಮಗಳ ಮೂಲಕವೂ ಬರುತ್ತದೆ ಎನ್ನುವುದಕ್ಕೆ ಜೀವಂತ ನಿದರ್ಶನಗಳಂತೆ ಇದ್ದವರು ದ್ರೋಣ-ಏಕಲವ್ಯರು.

ಯುದ್ಧದ ಕುರಿತ ಆಕರ್ಷಣೆ ಅಥವ ಆಕರ್ಷಕ ನಿರೂಪಣೆ ಆ ಕಾಲದ ಗಾಳಿಯಲ್ಲಿ ಪ್ರಬಲವಾಗಿಯೇ ಬೀಸುತ್ತಿತ್ತು. ಅದನ್ನು ನಾವು ಇಂದು ಆಧುನಿಕ ಭಾಷೆಯಲ್ಲಿ “ಡಿಸ್ಕೋರ್ಸ್” (ವಾಙ್ಮಯ) ಎಂದು ಪರಿಕಲ್ಪಿಸಿದ್ದೇವೆ. ಆದರೆ ಇದು ಇತಿಹಾಸದ ಉದ್ದಕ್ಕೂ ಇರುವ ಆಹ್ವಾನ. ತಮ್ಮ ಹೊಕ್ಕಳುವಿನ ಆಳದಲ್ಲಿ ಕ್ಷಾತ್ರದ ವರ್ಣತಂತುವನ್ನು ಹೊಂದಿದವರು ಈ ರಣವೀಳ್ಯವನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಮಹಾಭಾರತದ ಸಂದರ್ಭದಲ್ಲಿ ವರ್ಣತಂತು ಏನು ಎಂಬುದು ಮುಖ್ಯವೇ ಹೊರತು ವರ್ಣಾಶ್ರಮವಂತೂ ಅಲ್ಲ. ಕ್ಷಾತ್ರದ ವರ್ಣತಂತುವಿನ ಒಂದು ತುದಿಯಲ್ಲಿ ದ್ರೋಣ ಇದ್ದಾನೆ, ಇನ್ನೊಂದು ತುದಿಯಲ್ಲಿ ಏಕಲವ್ಯ ಇದ್ದಾನೆ. ಇವರ ನಡುವೆ ಕರ್ಣ-ಕೃಪ-ಅಶ್ವತ್ಥಾಮಾದಿಗಳೂ ಇದ್ದಾರೆ.

ಏಕಲವ್ಯನಿಗಿದ್ದ ಬಿಲ್ವಿದ್ಯೆಯ ಆಕರ್ಷಣೆ, ಆತನ ಅಪ್ರತಿಮ ಕಲಿಕಾ ಸಿದ್ಧಿ, ಶಬ್ದವೇಧಿ ವಿದ್ಯೆಯ ತಿಳಿವಳಿಕೆ ಮತ್ತು ದೋಣ ಆತನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುವ ಈ ವಿಲಕ್ಷಣ ಪ್ರಕರಣದ ಅರ್ಥ ಆ ಘಟನೆಯಲ್ಲಿ ಇಲ್ಲ. ಆ ಘಟನೆಯ ಹೊರಗೆ ಇರುವ ವಿದ್ಯಮಾನದಲ್ಲಿ ಇದೆ. ಆ ವಿದ್ಯಮಾನ ಕುರುಕ್ಷೇತ್ರ ಯುದ್ಧವೇ ಆಗಿದೆ.

ಈ ಪ್ರಮೇಯವನ್ನು ಗಟ್ಟಿಗೊಳಿಸುವ ಇನ್ನೂ ಕೆಲವು ನಿದರ್ಶನಗಳನ್ನು ಗಮನಿಸೋಣ. ಕರ್ಣನಿಗೆ ತಾನು ಕಲಿಸಿದ ವಿದ್ಯೆಗಳಿಗೆ ವಿಸ್ಮೃತಿಯ ಶಾಪ ಕೊಡುವ ಭಾರ್ಗವರಾಮ, ಕರ್ಣನಿಂದ ಕುಂತಿ ಪಡೆವ ವಾಗ್ದಾನ ಹಾಗೂ ಕರ್ಣನ ಸಹಜ ಕವಚ-ಕುಂಡಲಗಳನ್ನು ವಿಪ್ರನ ವೇಷದಲ್ಲಿ ಬಂದು ಇಂದ್ರ ಪಡೆಯುವ ಸನ್ನಿವೇಶಗಳಲ್ಲಿ ಕರ್ಣನನ್ನು ಊನಗೊಳಿಸಿರುವುದನ್ನು ಕಾಣಬಹುದು. ಹಾಗೆಂದು ಮಹಾಭಾರತದಲ್ಲಿ ಏಕಲವ್ಯ ಮತ್ತು ಕರ್ಣರನ್ನು ಮಾತ್ರ ಅವರ ಜಾತಿಯ ಕಾರಣಕ್ಕಾಗಿ ಊನಗೊಳಿಸಲಾಗಿದೆಯೇ ಎಂಬ ಪ್ರಶ್ನೆ ಕೇಳಿದರೆ ಹಾಗೇನೂ ಇಲ್ಲ. ಸ್ವತಃ ಗುರುಪುತ್ರ ಅಶ್ವತ್ಥಾಮನನ್ನೂ ವಿಕಲಗೊಳಿಸಲಾಗಿದೆ. ಈ ವೈಕಲ್ಯವನ್ನು ಇಟ್ಟವನು ಸ್ವತಃ ಆತನ ಅಪ್ಪ.

“ಅಸ್ತ್ರವಿದ್ಯಾಕಲಿಕೆಯ ಸಂದರ್ಭದಲ್ಲಿ ಅರ್ಜುನನಿಗೆ ವಿಶೇಷ ಗಮನವನ್ನು ಕೊಡುತ್ತಿರುವೆ, ಮಗನಾದ ನನಗಲ್ಲ” ಎಂಬ ಅಶ್ವತ್ಥಾಮನ ಆಗ್ರಹಕ್ಕೆ ಸೋತವನಂತೆ ನಟಿಸುವ ದ್ರೋಣ, ವೈರಿಕುಲವನ್ನು ಮೂಲೋತ್ಪಾಟನೆ ಮಾಡಬಲ್ಲಂಥ ಐಷೀಕಾಸ್ತ್ರವನ್ನು ಮಗನಿಗೆ ಉಪದೇಶಿಸಿಯೂ ಅದರ ಉಪಸಂಹಾರದ ವಿದ್ಯೆಯನ್ನು ಹೇಳಿಕೊಡುವುದಿಲ್ಲ. ಉಪಸಂಹಾರ ಗೊತ್ತಿಲ್ಲದಿದ್ದರೆ ಅಸ್ತ್ರವನ್ನು ಪ್ರಯೋಗಿಸುವಂತಿಲ್ಲ. ಇದು ಮೊದಲ ವೈಕಲ್ಯ. ಇದನ್ನು ಗಮನಿಸದ ದುಡುಕು ಸ್ವಭಾವದ ಅಶ್ವತ್ಥಾಮ ಅಪ್ಪನ ಎಚ್ಚರಿಕೆಯನ್ನೂ ಮೀರಿ ಯುದ್ಧದ ಕೊನೆಯಲ್ಲಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಅಂತಿಮ ಪರಿಣಾಮದಲ್ಲಿ ಎರಡನೇ ಬಾರಿ ಅಂಗವಿಕಲನಾಗುತ್ತಾನೆ.

ಇವುಗಳಿಗಿಂತ ಕೊಂಚ ಭಿನ್ನವಾಗಿದ್ದರೂ ಹೆಚ್ಚು-ಕಡಿಮೆ ಇದೇ ವಿನ್ಯಾಸವನ್ನು ಹೋಲುವ ಇನ್ನೊಂದು ಪ್ರಕರಣ ಅಭಿಮನ್ಯುವಿನದ್ದು. ಶಿಶುವಾಗಿರುವಾಗಲೇ ಚಕ್ರವ್ಯೂಹವನ್ನು ಪುಗುವ ವಿದ್ಯೆಯನ್ನು ಕೇಳಿ ಕಲಿತ ಅಭಿಮನ್ಯುವಿಗೆ ವ್ಯೂಹದಿಂದ ನಿರ್ಗಮಿಸುವ ದಾರಿಯನ್ನು ತಿಳಿಸಿಕೊಟ್ಟಿಲ್ಲ. ಈ ವೈಕಲ್ಯವನ್ನು ಉಂಟು ಮಾಡಿದವನು ಸ್ವತಃ ಸೋದರಮಾವ. ತನ್ನ ಸೋದರಮಾವನನ್ನೇ ಕೊಂದು ಕಳೆದ ಕೃಷ್ಣ.

ಸ್ವೀಕರಣೆ ಮತ್ತು ನಿರಾಕರಣೆ ಎಂಬ ಹೊರನೋಟಕ್ಕೆ ಬೇರೆಬೇರೆಯಾಗಿ ಕಾಣುವ ಈ ಎರಡೂ ಕ್ರಿಯೆಗಳ ಅಂತಿಮ ಉದ್ದೇಶ ಒಂದೇ ಆಗಿದೆ ಮತ್ತು ಅದು ರಾಜಕೀಯವೇ ಆಗಿದೆ. ಏಕಲವ್ಯನ ಹೆಬ್ಬೆರಳು, ಕರ್ಣನಿಗೆ ವಿಸ್ಮೃತಿಯ ಶಾಪ, ಅಶ್ವತ್ಥಾಮ ಮತ್ತು ಅಭಿಮನ್ಯುವಿಗೆ ಅರೆಬರೆಯ ತಿಳಿವಳಿಕೆ- ಇವೆಲ್ಲವೂ ಒಟ್ಟಂದದಲ್ಲಿ ಕಲಿಕೆಯ ನಿರಾಕರಣೆಯಂತೆ ಕಾಣುತ್ತವೆ. ಆದರೆ ಆಳದಲ್ಲಿ ಮಹಾಕಾವ್ಯದ ಕಥಾವಸ್ತುವಿನ ಅಖಂಡ ರಾಜಕೀಯ ಕ್ರಿಯಾಚರಣೆಯ ಅವಿಚ್ಚಿನ್ನ ಭಾಗವಾಗಿದೆ. ಒಂದು ವಿಶಿಷ್ಟವಾದ ಒಳನೋಟದಲ್ಲಿ ಈ ಎಲ್ಲ ಪ್ರಕರಣಗಳು ಕಲಿಕೆಗೆ ಸಂಬಂಧಿಸಿದ ಘಟನೆಗಳಂತೆ ಕಂಡುಬರುತ್ತವೆ. ಆದರೆ ಆಳದಲ್ಲಿ ಇವೆಲ್ಲವೂ ಕಲಿಕೆಯನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ, ಕಲಿತನದ ಕೈಗಳನ್ನು ಹಗ್ಗವಿಲ್ಲದೆಯೂ ಕಟ್ಟಿಹಾಕುವ ರಾಜಕಾರಣದ ಪಟ್ಟುಗಳು. ಅಪ್ಪ-ಅಮ್ಮ-ಮಾವ-ಗುರುಗಳೆಂಬವರು ರಾಜಕೀಯದ ಈ ಆಟದಲ್ಲಿ ಮೇಲುಗೈ ಸಾಧಿಸಿರುವ ಹಳೆಯ ಹುಲಿಗಳು. ವಿಚಾರಿಸಿ ನೋಡಿದರೆ ’ಮಾತೃ ದೇವೋಭವ’, ’ಪಿತೃ ದೇವೋಭವ’, ’ಆಚಾರ್ಯ ದೇವೋಭವ’ ಎಂಬ ಉದ್ಗಾರಗಳು ಅರಮನೆಯ ಪಡಸಾಲೆಯಲ್ಲಿ ರಾಜಕೀಯದ ವಾಸನೆ ಇಲ್ಲದ ಅಮಾಯಕ ಮಂತ್ರಗಳಲ್ಲ. ವ್ಯಾಸರ ಮಹಾಭಾರತ ಮನುಷ್ಯಲೋಕದ ಯಾವ ಸಂಬಂಧವನ್ನೂ ಪರಮಪವಿತ್ರವೆಂದೂ, ರಾಜಕೀಯ ಮುಕ್ತವೆಂದೂ ಭಾವಿಸಿದಂತಿಲ್ಲ.

ರಕ್ತ ಸಂಬಂಧಗಳ ಬೆಲೆಯನ್ನು ಅಪಮೌಲ್ಯಗೊಳಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ಹುಟ್ಟುವುದನ್ನು, ಸತ್ಯ-ಸುಳ್ಳುಗಳ ಸಂದಿಗ್ಧ ಮತ್ತು ಕೂಡು-ಕಳೆಗಳ ಲೆಕ್ಕಾಚಾರದಲ್ಲಿ ರಾಜಕೀಯ ಚಿಗುರುವುದನ್ನು ವ್ಯಾಸರು ನಿರೂಪಿಸಿರುವ ಬಗೆ ಅನ್ಯಾದೃಶವಾದುದು. ರಾಜಕಾರಣದಲ್ಲಿ ನೈತಿಕ ರಾಜಕೀಯ ಕುಸಿದು ತಂತ್ರಗಾರಿಕೆಯ ರಾಜಕೀಯ ಮೇಲುಗೈ ಪಡೆಯುವುದನ್ನೂ ವ್ಯಾಸರು ನಿರುಮ್ಮಳವಾಗಿ ಚಿತ್ರಿಸಿದ್ದಾರೆ. ಸತ್ಯವಾಕ್ ಆದ ಧರ್ಮರಾಜನ ನಾಲಗೆಯಿಂದ ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನ ಸಾವಿಗೆ ಸಂಬಂಧಿಸಿ ಸತ್ಯದಂತೆ ತೋರುವ ಸುಳ್ಳನ್ನು ಕೃಷ್ಣ ಹೇಳಿಸುವಲ್ಲಿ ಇದು ತನ್ನ ಪರಾಕಾಷ್ಠೆಯನ್ನು ತಲುಪುತ್ತದೆ. ರಾಜಕಾರಣದ ಈ ಕೆಸರುಗದ್ದೆಯ ಪಂದ್ಯದಲ್ಲಿ ಧರ್ಮರಾಜನೂ ಶುಭ್ರವಾಗಿರುವಂತಿಲ್ಲ, ಆತನ ಮಡಿಯನ್ನು ಕೆಡಿಸುವುದೂ ಆಟದ ನೀತಿ-ನಿಯಮಗಳ ವ್ಯಾಪ್ತಿಯಲ್ಲಿ ಬರುವಂಥದ್ದು. ಅದರಲ್ಲೇ ಆಟದ ಯಶಸ್ಸೂ ಅಡಗಿದಂತಿದೆ. ಅಲ್ಲಿಯವರೆಗೆ ನೆಲದ ಮೇಲಿಂದ ಒಂದಂಗುಲ ಎತ್ತರಕ್ಕೆ ಗಾಳಿಯಲ್ಲಿ ಹಗುರವಾಗಿ ಚಲಿಸುತ್ತಿದ್ದ ಧರ್ಮರಾಜನ ರಥ ಅಶ್ವತ್ಥಾಮನ ಮರಣದ ಕುರಿತು ಸುಳ್ಳು ಹೇಳಿದ ತತ್ ಕ್ಷಣದಲ್ಲಿ ತನ್ನ ಹಗುರತನವನ್ನು ಕಳೆದುಕೊಂಡು ನೆಲಕ್ಕೆ ಕುಸಿಯಿತು ಎನ್ನುವುದನ್ನು ರೂಪಕಾತ್ಮಕವಾಗಿ ಕಂಡರಿಸಿದ ಕವಿ ನಿಜಕ್ಕೂ ದೊಡ್ಡವನು.

ತನಗೆ ಅನುಕೂಲಕರವಾದ ಸತ್ಯ ಯಾವುದು ಹಾಗೂ ಸುಳ್ಳು ಯಾವುದು ಎಂಬುದನ್ನು ನಿರ್ಣಯಿಸುವ ನಡುವಿನ ಸೆಣಸಾಟದಲ್ಲಿ ಅಧಿಕಾರ ರಾಜಕಾರಣವೊಂದು ಹುಟ್ಟುವ ಬಗೆಯನ್ನು ವ್ಯಾಸರು ಚಿತ್ರಿಸುವುದನ್ನು ನಾವು ಚಣಹೊತ್ತು ನಿಂತು ನೋಡಬೇಕು. ಹಾಗೆಯೇ ಕಾಪಟ್ಯ ಮತ್ತು ಕುಬ್ಜಗೊಂಡ ನೈತಿಕತೆಯ ಸಮಕ್ಷಮದಲ್ಲಿ ವೃದ್ಧಿ-ಕ್ಷಯವನ್ನು ಸಂಕೇತಿಸುವ ಚಂದ್ರವಂಶದ ರಾಜಕಾರಣ ಹುಲುಸಾಗಿ ವೃದ್ಧಿಸುವುದನ್ನು ನಿರೂಪಿಸುವ ಬಗೆಯನ್ನೂ ಮನಗಾಣಬೇಕು. ಫಲಿತಾಂಶವನ್ನು ಮುಖ್ಯವಾಗಿಸಿ, ಪ್ರಕ್ರಿಯೆಯನ್ನು ಗೌಣವಾಗಿಸಿ, (ಗುರಿಯು ಮುಖ್ಯವಾಗಿ, ಮಾರ್ಗವು ಅಪ್ರಸ್ತುತವಾಗುವ) ಹೇಗಾದರೂ ಸರಿ ಅಧಿಕಾರವನ್ನು ಹಿಡಿಯಬೇಕೆಂಬ ತನ್ನವರ ವಾಂಛೆಯನ್ನು ಈಡೇರಿಸಲು ಧರ್ಮಸಂಕಟದ ನಡುವೆ ವಿಲವಿಲ ಒದ್ದಾಡುವವನು ಧರ್ಮರಾಜ. ಆತನಿಂದಲೇ ಅಡ್ಡದಾರಿಯನ್ನು ಆಯ್ಕೆ ಮಾಡಿಸುವ ಆ ಕಾಲ ನಿಜವಾಗಿಯೂ ಕಲಿ ಪ್ರವೇಶದ ಕೂಗಳತೆಯ ದೂರದ ಕಾಲ.

ಹಸ್ತಿನಾವತಿಯ ಅರಸೊತ್ತಿಗೆಯ ಏಳು-ಬೀಳುಗಳ ನಿರೂಪಣೆಯ ನಡುವೆ ಸ್ಪಷ್ಟವಾಗಿ ಎದ್ದು ಕಾಣುವಂತಿರುವುದು ಅಲ್ಲಿಯ ಕ್ಷಾತ್ರ ರಾಜಕಾರಣ. ಆ ಹಿನ್ನೆಲೆಯಲ್ಲಿ ಏಕಲವ್ಯನ ಪ್ರಕರಣವನ್ನು ಆರಿಸಿಕೊಂಡು ಚಿಂತನೆ ನಡೆಸುವ ಪ್ರಯತ್ನದ ಈ ಲೇಖನದಲ್ಲಿ ಕೆಲವು ಬಗೆಯ ಅರ್ಥನಿರೂಪಣೆಗಳನ್ನು ಮಾಡಲಾಗಿದೆ. ಸಾಹಿತ್ಯ ಕೃತಿಯ ವಿಶ್ಲೇಷಣೆಯಲ್ಲಿ ತೊಡಗುವಾಗ ಮಾಡುವ ವ್ಯಾಖ್ಯಾನಗಳು, ಕೊಡುವ ಒಳನೋಟಗಳು ಬರಿಗಣ್ಣಿಗೆ ಕಾಣಿಸದ ಅವೆಷ್ಟೋ ಸಂಗತಿಗಳನ್ನು ತೋರಿಸುತ್ತವೆ ಮತ್ತು ಘಟನೆಗಳನ್ನು ಪರಸ್ಪರ ಜೋಡಿಸುವ ಕೆಲಸವನ್ನೂ ಮಾಡುತ್ತವೆ. ವ್ಯಾಖ್ಯಾನವೊಂದು ಮಿಂಚಿನಂತೆ ಹೊಳೆದು ಏನೋ ಒಂದನ್ನು ಹೊಸದಾಗಿ ಕಾಣಿಸಬಹುದು. ಆದರೆ ಗಟ್ಟಿಯಾದ ಚಿಂತನೆ ನಡೆಸುವುದಕ್ಕೆ ವ್ಯಾಖ್ಯಾನ ಹೊರಸೂಸುವ ಬೆಳಕಷ್ಟೇ ಸಾಲದು.

ಸಾಹಿತ್ಯ ಅಧ್ಯಯನದಲ್ಲಿ ಪಠ್ಯದೊಳಗೆ ಅರ್ಥದೇವತೆ ಇದ್ದಾಳೆ, ಆಕೆಯನ್ನು ಹೊರತರುವುದಕ್ಕೆ ಸಿದ್ಧಾಂತ ಪುರುಷ ಬೇಕು ಎಂದು ಯೋಚಿಸಿ, ಸಿದ್ಧಾಂತಗಳ ತಿಳಿವಳಿಕೆಯ ಬೆಳಕಿನಲ್ಲಿ ಪಠ್ಯವನ್ನು ಓದುವ ಒಂದು ಕ್ರಮವೂ ಇದೆ. ಆದರೆ ಇಂಥ ಪ್ರಯತ್ನ ಮಾಡುವವರು ಸರಿಯಾದ ಪಠ್ಯವಿಶ್ಲೇಷಣೆ ನಡೆಸದಿದ್ದರೆ ಈ ಲೇಖನದ ಆರಂಭದಲ್ಲಿ ಹೇಳಿದಂತೆ ತಮಗೆ ಬೇಕಾದ ಸ್ವರವನ್ನಷ್ಟೇ ಅವರು ನುಡಿಸಬಲ್ಲರು. ಗಾಢವೂ, ಗಹನವೂ ಆದ ಸಾಹಿತ್ಯ ಕೃತಿಯೊಂದರ ವಿಶ್ವರೂಪವನ್ನು ಸಿದ್ಧಾಂತಗಳ ಹಗ್ಗದಿಂದ ಬಿಗಿದು ಕಟ್ಟುವುದಕ್ಕೆ ಪ್ರಯತ್ನಿಸುವುದೆಂದರೆ ಗಾಳಿಯನ್ನು ಮುಷ್ಟಿಯಲ್ಲಿ ಹಿಡಿದಂತೆಯೇ ಸರಿ. ನಿದರ್ಶನವನ್ನು ಕೊಡುವುದಾದರೆ ಧರ್ಮರಾಜನ ಧರ್ಮಸಂಕಟದ ತೊಳಲಾಟವನ್ನು ಇತಿಹಾಸವೆಂಬ ಜ್ಞಾನಶಿಸ್ತಿಗೆ ಹಿಡಿಯಲು ಅಸಾಧ್ಯವಾದಂತೆ. (ಬುದ್ಧ ಮತ್ತು ಆತನ ಕಾಲದ ನರ್ತಕಿಯ ಪ್ರಕರಣವೊಂದನ್ನು ಉಲ್ಲೇಖಿಸುವುದರ ಮೂಲಕ ಈ ಸೂಕ್ಷ್ಮವನ್ನು ರಾಮಮನೋಹರ ಲೋಹಿಯಾ ತಮ್ಮ ’ವ್ಹೀಲ್ ಆಫ್ ಹಿಸ್ಟರಿ’ಯಲ್ಲಿ(1955) ಪ್ರಸ್ತಾವಿಸಿದ್ದರು.)

ಅರ್ಥ, ಒಳನೋಟ ಮತ್ತು ವ್ಯಾಖ್ಯಾನವನ್ನು ಪಠ್ಯ ಉದ್ಭವಿಸಿದ ಚಾರಿತ್ರಿಕ ಹಿನ್ನೋಟದಲ್ಲಿ ನಮ್ಮ ಅನುಭವಕ್ಕೆ, ಅರಿವಿಗೆ ತಂದುಕೊಳ್ಳುವುದು ಹಾಗೂ ಅವೆಲ್ಲವುಗಳ ಸಮ್ಮುಖದಲ್ಲಿ ಅನುಸಂಧಾನ ನಡೆಸುವುದು ಸಾಹಿತ್ಯಾಧ್ಯಯನದ ಸೂಕ್ತವಾದ ಕ್ರಮ. ಹೀಗೆ ಮಥಿಸುತ್ತ ಪಠ್ಯ ವಿಶ್ಲೇಷಣೆಯನ್ನು ನಡೆಸುವಾಗ ಹುಟ್ಟುವ ಚಿಂತನೆಯಲ್ಲಿ ಲೋಕೋತ್ತರವಾದ ಕಾಣ್ಕೆಯೂ ಕಂಡು ಬರಬಹುದು. ಅದು ಸಾಹಿತ್ಯದ ಶಕ್ತಿ.

ಏಕಲವ್ಯನ ಪ್ರಕರಣವನ್ನು ನೆಪವಾಗಿರಿಸಿಕೊಂಡು ನಡೆಸುತ್ತಿರುವ ಈ ಸಾಹಿತ್ಯ ವಿಶ್ಲೇಷಣೆಯಲ್ಲಿ ಕಾವ್ಯದ ಆಳದಲ್ಲಿ ಹರಿಯುತ್ತಿರುವ ಆ ತತ್ವಜ್ಞಾನೀಯ ಕಾಣ್ಕೆ ಏನು ಎಂಬುದನ್ನು ಮುಂದಿನ ಭಾಗದಲ್ಲಿ ತಿಳಿಯುವ ಪ್ರಯತ್ನವನ್ನು ಮಾಡೋಣ.

ಇದನ್ನು ಓದಿ:

ಅನೇಕಲವ್ಯ

‘ಇಂದಿರಾಬಾಯಿ’ ಯ ರಾಜಕೀಯ ಓದು

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...