ಅನುಭವವೆನ್ನುವ ಆಸ್ವಾದವನ್ನು ಮೀರಿಸುವ ಅನುಭೂತಿ ‘ಅಪ್ಪ ಕಾಣೆಯಾಗಿದ್ದಾನೆ’ : ದಯಾ ಗಂಗನಘಟ್ಟ


''ಬಿಳೀ ಸುಣ್ಣದ ಗೋಡೆಯ ಮೇಲೆ ಬಿಸಿಲು ಕೋಲೊಂದು ನೆರಳನ್ನು ಚಿತ್ತಾರವಾಗಿ ಹರಡುವಂತೆ ಬೇಲೂರು ರಘುನಂದನ್ ರವರ ಕಥೆಗಳೂ ಸಹ ಅನೂಹ್ಯವಾದ ದರ್ಶನವೊಂದನ್ನು, ಮನನವೊಂದನ್ನು ಅಥವಾ ಏನಲ್ಲದಿದ್ದರೂ ಒಂದೊಳ್ಳೆ ಕಥಾಲೋಕದಲ್ಲಿ ವಿಹರಿಸಿದ ಚಂದ ಅನುಭವವನ್ನು ನೀಡುತ್ತವೆ'' ಎನ್ನುತ್ತಾರೆ ಲೇಖಕಿ ದಯಾ ಗಂಗನಘಟ್ಟ. ಅವರು ಲೇಖಕ ಬೇಲೂರು ರಘುನಂದನ್ ಅವರ ‘ಅಪ್ಪ ಕಾಣೆಯಾಗಿದ್ದಾನೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ...

ಇವೇನೂ ಜಸ್ಟ್-ಲ್ಯಾಂಡೆಡ್ ಕಥೆಗಳಲ್ಲ. ಬಯಸಿದೇಟಿಗೇ ಸುಂದರಿಯಾಗಿ ಬದಲಾದ ಹಿಡಂಬಿಯಂತೆ ತಕ್ಷಣಕ್ಕೆ ಹುಟ್ಟಿದ ಘಟನೆಗಳೂ ಅಲ್ಲ. ಅನುಭವವೆನ್ನುವ ಆಸ್ವಾದವನ್ನು ಮೀರಿಸುವ ಅನುಭೂತಿಯನ್ನು ಒಡಲಲ್ಲಿ ತುಂಬಿಕೊಂಡ, ಏನನ್ನೂ ಮುಚ್ಚಿಡದ ಬಿಚ್ಚುಮನಸ್ಸಿನ ಅಭಿವ್ಯಕ್ತಿಗಳು. ಹೌದು, ಬೇಲೂರು ರಘುನಂದನ್ ರವರ ಕಥೆಗಳನ್ನು ಓದಿದಾಗ ಎಕ್ಸಾಕ್ಟ್ಲೀ ಇದೇ ಅನಿಸಿದ್ದು ನನಗೆ.

ವರ್ತಮಾನದ ನಮ್ಮೆಲ್ಲರ ಬಲು ದೊಡ್ಡ ಸಂಕಟವನ್ನು ಎಗ್ಗಿಲ್ಲದೇ ಬಗ್ಗುಬಡಿದು ಕಥೆಯಾಗಿಸಿ ತೋಡಿಕೊಳ್ಳುತ್ತಾರೆ ರಘುನಂದನ್. ಅವರ ಪ್ರತೀ ಕಥೆಗಳಲ್ಲಿ ವಸ್ತುವಿನ ನಿರೂಪಣಾ ವಿಧಾನ, ತಂತ್ರ ರಚನೆ, ಪಾತ್ರ ಸೃಷ್ಟಿ. ವಿಚಾರ ಪ್ರತಿಪಾದನೆ ಇವನ್ನೆಲ್ಲ ಹೇಗೆ ಕಲಾತ್ಮಕವಾಗಿ ದುಡಿಸಿಕೊಳ್ಳಬಹುದು ಎಂಬುದರ ಮಾದರಿಯೊಂದು ದಕ್ಕುತ್ತದೆ. ಒಂದು ಕೃತಿಯಿಂದ ಓದುಗನಿಗೆ ಗ್ರಹೀತವಾಗುವ ಅಥವಾ ವ್ಯಕ್ತಿಯ ಒಳಗೆ ಇಳಿಯುವ ಅನುಭಾವದ ಕ್ರಮಗಳನ್ನು ನನ್ನ ನಿಲುಕಿಗೆ ಎಟಕಿದಂತೆ ತಂದಿಡುವುದಾದರೆ ಅವು ಒಂದು ಘಟನೆ, ಕೆಲವು ಪಾತ್ರಗಳು, ಒಂದಷ್ಟು ಕರುಣೆ, ಒಲವು ಮತ್ತು ತುಸು ಸಮಾಜೋದ್ಧಾರ ಚಿಂತನೆ ಈ ಚೌಕಟ್ಟಿನೊಳಗೆ ನಿಲ್ಲುತ್ತವೆ. ಸಾಕಷ್ಟಾಯ್ತಲ್ವಾ ಒಂದು ಕೃತಿಯು ಮನಸ್ಸಿಗೆ ಹಿಡಿಸಲು! ಬೇಲೂರು ರವರ ಕತೆಗಳನ್ನು ಓದುತ್ತಾ ಹೋದಂತೆ ಅಲ್ಲಿ ಗೋಚರವಾಗುವುದು, ನಮ್ಮವರದೇ ಬದುಕಿನ, ನಮ್ಮ ಕಣ್ಣಿಗೂ ಸದಾ ಬೀಳುವ ಸೆಲ್ಯುಲಾಯ್ಡ್ ತದ್ರೂಪ. ನೊಂದವನ ಗಟ್ಟಿತನದ ಕವಲು ಕತೆ ಮತ್ತು ಆ ಗಟ್ಟಿತನದಾಸರೆಯ ಅನುಸೃಷ್ಟಿ.

'ಅಪ್ಪ ಕಾಣೆಯಾಗಿದ್ದಾನೆ', 'ಭೇಟಿ', 'ಏಡಿ ಅಮ್ಮಯ್ಯ', 'ಮುಲ್ಲಾ ಮತ್ತು ಪಾಂಡುರಂಗ' ಮತ್ತು 'ಆಗಮನ' ಕಥೆಗಳು ಎರಡು ಬೆಟ್ಟಗಳ ನಡುವೆ ಮೆಲ್ಲಗೆ ಆದರೆ ಸುಡು ಸುಡು ಕೆಂಡದಂತೆ ಇಳಿವ ಸಂಜೆಯ ಸೂರ್ಯನಂತೆ ಮನದೊಳಗೆ ಇಳಿಯುತ್ತಾ ಹೋಗುತ್ತವೆ. ಅಚ್ಚರಿಯೆಂದರೆ ಆಗ ಇರುಳಿನ ಬದಲಿಗೆ ನಮ್ಮ ಚಿತ್ತಕ್ಕೆ ಬೆಳ್ಳನೆ ಬೆಳಕು ಸಿಗುವುದು. ಹಳ್ಳಿಯ ಜೀವನದ ಸೊಗಸನ್ನು ಹಳಹಳಿಸುತ್ತಲೇ ತಿನ್ನುವ ಅನ್ನವನ್ನೂ ರೈಸ್ ಎಂದು ಕರೆವ ತಿಕ್ಕಲು ಹತ್ತಿಸಿಕೊಂಡು, ಪ್ರತೀದಿನ ಸಂತೆಯತಾಗುವ ಸಿಟಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ನಗರದ ಜನರ ಅಂತರಂಗದ ತುಮುಲ, ಗೊಂದಲ, ಅಸಹಾಯಕತೆಯನ್ನು ಹೇಳುತ್ತಲೇ, ಅವರಲ್ಲಿ ತಾನೇ ತಾನಾಗಿ ಆಗಿಬಿಡುವ ಬದಲಾವಣೆಗಳನ್ನು ಒಂದು ತೆರನಾದ ದಿಗ್ಬ್ರಮೆಯ ಜೊತೆಗೆ ಒಪ್ಪಿಕೊಳ್ಳುತ್ತಲೇ, ಒಂದರ ಹಿಂದೊಂದರಂತೆ ಕತೆಯ ಆಧಾರದಲ್ಲಿ ಹಿಡಿದುಕೊಡುವ ಕಲೆ ಇವರಿಗೆ ಕರಗತವಾಗಿದೆ. ಕಲಾವಿದನ ಪ್ರಯೋಗಶೀಲತೆ ದುಡಿಯತೊಡಗುವುದು ಇಂಥ ಸಂಕೀರ್ಣತೆಗಳನ್ನು ಹೆಣೆಯುವಾಗಲೇ ಅಲ್ಲವೇ!

ಬಹುಮುಖ್ಯವಾಗಿ ನನ್ನ ಗಮನವನ್ನು ಸೆಳೆದದ್ದು ಇಲ್ಲಿನ ಸ್ರೀ ಪಾತ್ರಗಳು, ಹೆಗಲ ಮೇಲೆ ಅನಿವಾರ್ಯ ಕಷ್ಟಗಳ ಬೆಟ್ಟವನ್ನು ಹೊತ್ತುಕೊಂಡೇ ದಿಟ್ಟ ಹೆಜ್ಜೆಗಳನ್ನು ಕಿತ್ತಿಡುವ, ಅಂತಃಕರಣ ತುಂಬಿದ ಒಡಲಿನ, ಕಣ್ಣು ತೇವವಾಗಿಸಬಲ್ಲ ಭಾವುಕತೆಯ ಮತ್ತು ಅಷ್ಟೇ ಆಧುನಿಕ ವಿಚಾರಗಳಿರುವ 'ಜಯಮ್ಮ', 'ಅಮ್ಮಯ್ಯ', 'ರಂಗಿ', 'ಭಾರತಿ ರಕ್ಷಿತ್', 'ಶಾಂಭವಿ', 'ಸೀತಾ' ಪಾತ್ರಗಳಲ್ಲಿ ಜೀವಂತಿಕೆ ಹಾಗೂ ಕಲಾತ್ಮಕತೆ ಅದೆಷ್ಟು ತುಂಬಿದೆಯೆಂದರೆ, ಮೆದುಳು ನಿಮ್ಮನ್ನು ನೀವು ಒಮ್ಮೆ ಮುಟ್ಟಿಕೊಂಡು ನೋಡಿಕೊಳ್ಳಿ ಎನ್ನುತ್ತದೆ.

ಬಿಳೀ ಸುಣ್ಣದ ಗೋಡೆಯ ಮೇಲೆ ಬಿಸಿಲು ಕೋಲೊಂದು ನೆರಳನ್ನು ಚಿತ್ತಾರವಾಗಿ ಹರಡುವಂತೆ ಬೇಲೂರು ರಘುನಂದನ್ ರವರ ಕಥೆಗಳೂ ಸಹ ಅನೂಹ್ಯವಾದ ದರ್ಶನವೊಂದನ್ನು, ಮನನವೊಂದನ್ನು ಅಥವಾ ಏನಲ್ಲದಿದ್ದರೂ ಒಂದೊಳ್ಳೆ ಕಥಾಲೋಕದಲ್ಲಿ ವಿಹರಿಸಿದ ಚಂದ ಅನುಭವವನ್ನು ನೀಡುತ್ತವೆ. ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನದ ಜೊತೆ ಜೊತೆಗೇ ರಘುನಂದನ್ ತಮ್ಮೊಳಗೆ ಕಲೆಹಾಕಿಕೊಂಡಿರುವ ಎನರ್ಜಿಯಿದೆಯಲ್ಲ ಅದಕ್ಕೆ ಈ ಕಥೆಗಳೇ ಸಾಕ್ಷಿ.

- ದಯಾ ಗಂಗನಘಟ್ಟ

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...