ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ

Date: 21-04-2021

Location: ಬೆಂಗಳೂರು


‘ಅತ್ಯಂತ ಜೀವನೋತ್ಸಾಹವನ್ನು ಹೊಂದಿರುವ ಜಯಂತರು ತಮ್ಮ ‘ಬದುಕು’ ಎಂಬ ‘ಸುಂದರಿ’ಯನ್ನು ಮುಕ್ಕಾಗಿಸಲು ಮತ್ತು ಮುಪ್ಪಾಗಿಸಲು ಬಿಡದೆ ಹೃದಯದೊಳಗೆ ಬಲು ಜತನದಿಂದ ಕಾಯ್ದಿಟ್ಟುಕೊಳ್ಳುತ್ತಾರೆ’ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ತಮ್ಮ ‘ಅನಂತಯಾನ’ ಅಂಕಣದಲ್ಲಿ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ಅನಾರ್ಕಲಿಯ ಸೇಫ್ಟಿಪಿನ್’ ಕತಾಸಂಕಲನ ಹಾಗೂ ಕಾಯ್ಕಿಣಿ ಅವರ ಬರಹಗಳ ಕುರಿತು ವಿಶ್ಲೇಷಿಸಿದ್ದಾರೆ. 

ಎಲ್ಲರೂ ಬರೆಯುತ್ತಾರೆ ಆದರೆ ಕೆಲವರು ಮಾತ್ರ ಅನುಭವಿಸಿ ಬರೆಯುತ್ತಾರೆ. ಅಂತಹವರ ಸಾಲಲ್ಲಿ ಜಯಂತ್ ಕಾಯ್ಕಿಣಿ ಪ್ರಮುಖರು. ಬದುಕಿನ ಮೂಲೆ ಮುರುಕುಗಳನ್ನು ಬಿಡದೆ, ಸಂದಿ-ಗೊಂದಿಗಳಲೆಲ್ಲಾ ಓಡಾಡಿ, ಅಲ್ಲೆಲ್ಲ ಕಂಡುಂಡ ಅಷ್ಟನ್ನೂ ಯಕಃಶ್ಚಿತ ಕಣ್ಣೊಳಗಿಳಿಸಿಕೊಂಡದ್ದೇ - ಅವರೊಳಗೆ ಅವು ಬೆಳೆಯುತ್ತ ಹೋಗುತ್ತವೆ. ಅವರ ಪುಸ್ತಕದ ಪುಟಗಳಲ್ಲಿ ಅಕ್ಷರಗಳು ಬರಿದೇ ಬಂದು ಕೂರದೆ, ನಮ್ಮ ಜೊತೆ ಜೊತೆಗೆ ಅವುಗಳೂ ಉಸಿರಾಡುತ್ತಿರುತ್ತವೆ. ಈ ಅನುಭವ ಜಯಂತರ ಕತೆಗಳನ್ನು ಓದಿದ ಎಲ್ಲರದ್ದೂ ಎನ್ನುವುದು ನನ್ನ ಭಾವನೆ.  

ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಗ್ರಹಸಿ ಅನುಭವಿಸುವ ಗುಣ ಇರುವುದರಿಂದಲೇ ಜಯಂತರ ಕತೆಗಳು ಸಲೀಸಾಗಿ ನಮ್ಮೊಳಗೆ ಇಳಿದು ಬಿಡುತ್ತವೆ. ಕತಾ ಪಾತ್ರಗಳು ಎಲ್ಲೆಲ್ಲಿ ಓಡಾಡುತ್ತವೋ ಅಲ್ಲೆಲ್ಲಾ ನಾವೂ ಓಡಾಡುತ್ತಿರುತ್ತೇವೆ. ಅವುಗಳು ನಕ್ಕಂತೆ, ಅತ್ತಂತೆ, ಬಿಕ್ಕಳಿಸಿದಂತೆಲ್ಲ.. ನಾವೂ ಬಿಕ್ಕುತ್ತಾ, ಅಳುತ್ತಾ, ನಗುತ್ತಾ ಒಟ್ಟಿಗೆ ಸಾಗುತ್ತಿರುತ್ತೇವೆ. ಅತ್ಯಂತ ಜೀವನೋತ್ಸಾಹವನ್ನು ಹೊಂದಿರುವ ಜಯಂತರು ತಮ್ಮ ‘ಬದುಕು’ ಎಂಬ ‘ಸುಂದರಿ’ಯನ್ನು ಮುಕ್ಕಾಗಿಸಲು ಮತ್ತು ಮುಪ್ಪಾಗಿಸಲು ಬಿಡದೆ ಹೃದಯದೊಳಗೆ ಬಲು ಜತನದಿಂದ ಕಾಯ್ದಿಟ್ಟುಕೊಳ್ಳುತ್ತಾರೆ. ಆಗೊಮ್ಮೆ ಈಗೊಮ್ಮೆ ಆಕೆ ಅಂದಗೆಟ್ಟಳೆಂದಾದರೆ ಅವಳನ್ನು ಚಂದಗಾಣಿಸಲು ತಮ್ಮ ಬ್ಯೂಟಿ ಕಿಟ್ ಅನ್ನು ತೆರೆದು -'ಜೀವನ ಸುಂದರಿ'ಯನ್ನು ಕಳೆ ಗುಂದದಂತೆ ಮಾಡಿ ಬಿಡುವ ಬ್ಯೂಟೀಶಿಯನ್ ಕೂಡ ಆಗಿಬಿಡುತ್ತಾರೆ. ಮುಂದುವರಿದು, ತಮ್ಮ ಜಾದೂ ಪೆಟ್ಟಿಗೆಯ ಒಳಗಿಂದ - ‘ಅನ್ ಲಿಮಿಟೆಡ್ ಪ್ರೀತಿ’ಯನ್ನೂ  ಹರಿಸುತ್ತಲೇ ಹೋಗುತ್ತಾರೆ.  

ಕತೆಗಳಿಗೆ ಅದರದ್ದೇ ಆದ ಮೂಲ ಅರ್ಥವಿರುತ್ತದೆ. ಕತೆಯು ಗರ್ಭ ಕಟ್ಟಿದ ಬಗೆ ಕತೆಗಾರನಿಗೆ ಮಾತ್ರ ತಿಳಿದಿರುವ ಸಂಗತಿ. ಕತೆಯ ಕುರಿತಂತೆ ಕೇಳುವ-ಹೇಗೆ? ಯಾಕೆ? ಎಂಬಿತ್ಯಾದಿ ಪ್ರಶ್ನೆಗಳೇ ಅಸಂಗತವಾದುದು. ಓದುವ ಮನಸ್ಸುಗಳ ಮೇಲೆ ಭಿನ್ನ ನೆಲೆಗಳಲ್ಲಿ ಕತೆಗಳು ಸಂಚರಿಸುವುದುಂಟು. ಅಂತಹ ಕತೆಗಳ ಒಳಕ್ಕೆ ಇಳಿಯುತ್ತಾ ಹೋದಂತೆ ಹತ್ತು ಹಲವು ದಾರಿಗಳು ಗೋಚರಿಸುತ್ತವೆ. “ಹೀಗೂ ಇರಬಹುದಲ್ಲವೇ?”- ಎನ್ನುವ ಕೌತುಕದ ಪ್ರಶ್ನೆ ಮೂಡಿ-“ಹೌದಲ್ಲ!”- ಅಚ್ಚರಿಯನ್ನೂ ತಂದಿಕ್ಕುತ್ತದೆ. ಅಷ್ಟಕ್ಕೇ, ಪಾತ್ರಗಳು ಓಡಾಡಿದ ಜಾಗದಲ್ಲೆಲ್ಲ  ಮರು ಓಟಕ್ಕೆ  ತಯಾರಾಗಿ ಬಿಡುತ್ತೇವೆ.  

‘ಅನಾರ್ಕಲಿಯ ಸೇಫ್ಟಿಪಿನ್' ಕಥಾ ಸಂಕಲನದಲ್ಲಿ ಅಂತ್ರಗಳಿಗೆ ಚುರುಕು ಮುಟ್ಟಿಸುವಂತಹ  ಕತೆಗಳಿವೆ. ಇಲ್ಲಿಯ ಕತೆಗಳು, ವ್ಯತ್ಯಸ್ತ ನೆಲೆಯಲ್ಲಿ ರೂಪು ತಳೆದು ಮನಸ್ಸನ್ನು ತಟ್ಟಿ ಬಿಡುತ್ತವೆ. ರೂಪಕಗಳೇ ಕತೆಯನ್ನು ಹೊದ್ದು ಮಲಗಿದಂತಹ ಕತೆಗಳೂ ಇಲ್ಲಿವೆ. ಇವರು ಕಥೆ ಕಟ್ಟುತ್ತಾ ಹೋಗುವ ರೀತಿ ಬಲು ಚಂದ. ಕತೆಗಾರನೊಬ್ಬ  ಬಯಸುವ ಅಂತಹ ಯಶಸ್ಸು ಜಯಂತರನ್ನು  ಬಹು ಸಹಜವೆಂಬಂತೆ ತಬ್ಬಿಕೊಂಡಿದೆ.  

ಬದುಕಿನ ಅಷ್ಟೂ ರಮ್ಯತೆ-ಕುರೂಪಗಳನ್ನು ಮೈ ಮೇಲೆ ಸುರುವಿಕೊಂಡು ಬಟಾ ಬಯಲಿನಲ್ಲಿ ನಿಲ್ಲುವಂತೆ; ಶೆಹರಿನ ಅಸಂಖ್ಯ ವಾಹನಗಳ ಓಟದಲ್ಲಿ ಕಳೆದೇ ಹೋಗಿ ಬಿಡುವ ಆತಂಕ, 'ಮಾಶೇ ತಾಜಾ ಮಾಶೇ' ಎನ್ನುವ ವರ್ಸೋವಾ ಮೀನುಗಾರ್ತಿಯರ ಕೂಗು, ಪ್ಲಾಟ್ ಫಾರ್ಮಿನ ಮೇಲಿನ ಪೀಕ್ ಅವರ್ ಸಂದಣಿಯ ‘ಅವ್ಯಕ್ತ ಕೋರಸ್’,  ಅಘನಾಶಿನಿಯು ಬೀಸುವ ಮಾರುತದಲ್ಲಿ  ತೇಲಿ ಬರುವ ಮೀನಿನ ಘಮಲು, ಹಿತ್ತಲಿನ ಪಟ್ಲಕಾಯಿ ಚಪ್ಪರದಿಂದ ತೂರಿ ಬರುವ ಹಸಿ ವಾಸನೆ, ಲಾಂಚುಗಳು ಕರ್ರಗಿನ ಹೊಗೆಯನ್ನು ಚೆಲ್ಲಿ ಸೂಸುವ ಡೀಸಲಿನ ವಾಸನೆಯ ಪರಿಮಳ-ಕುಳಿತಲ್ಲಿಯೇ ನಾಸಿಕ ಅರಳಿಸಿ ಹೀರುವಂತೆ ಮಾಡುವ ಕಲೆಗಾರಿಕೆ ಇಲ್ಲಿನ ಕತೆಗಳಲ್ಲಿವೆ. ಕಳೆದು ಹೋದದ್ದನ್ನು ಮರಳಿ ಪಡೆಯುವ ಹಾದಿಯಲ್ಲಿರುವಾಗ ಮೂಗಿಗೆ ಬಡಿಯುವ ಎಲ್ಲಾ ವಾಸನೆ-ಸುವಾಸನೆಗಳು ನಿಜದ ಬದುಕಿನದ್ದೂ ಹೌದು. ಅದನ್ನರಿಯಲು ತೆರೆದ ಮನಸ್ಸು-ಹೃದಯ ಜೊತೆಯಲ್ಲಿರಬೇಕಷ್ಟೆ.   

ಅಭಿವೃದ್ಧಿಯ ಕೆಂಧೂಳು ಹಾರಿ ದೃಷ್ಟಿಯನ್ನೇ ಮಸುಕಾಗಿಸುವುದು, ನಗರದಲ್ಲಿ ಓಡಾಡುವ ವಾಹನಗಳು ಕಾರ್ಖಾನೆಯನ್ನೇ ರಸ್ತೆಗಿಳಿಸಿದಂತೆ - ಪ್ರಸಕ್ತ ಕಾಲದ ಬದುಕು ನಮ್ಮನ್ನು ಜೀವಂತ  ಖೈದಿಯನ್ನಾಗಿಸಿದೆ. ಸಹಜವಾದ ಬೆಳಕೇ ಕಾಣದಿರುವ ನಾಲಕ್ಕು ಗೋಡೆಗಳು. ಒಳಗೆ ಒಂದಷ್ಟು ತರೇವಾರಿ ಲೈಟುಗಳು- ಕೃತಕ ಬೆಳಕಿನಡಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುತ್ತೇವೆ. ಅಂತಹ ಬಾಳೊಂದನ್ನು ಸವೆಯುವ ಹೊತ್ತಲ್ಲಿ ಮನಸ್ಸು ನಿಜದ ಬೆಳಕಿಗಾಗಿ ಹಂಬಲಿಸುತ್ತದೆ. ನಾಲಕ್ಕು ಗೋಡೆಗಳನ್ನು ಸೀಳಿಕೊಂಡು ಬೆಳಕ ಕಿರಣವೊಂದು ಫಳಾರನೆ ಮಿಂಚಿ ಕಣ್ಮರೆಯಾದಾಗ ಒಸರುವ ಆಶಾಭಾವನೆಯಂತೆ ಜಯಂತರ ಕತೆಗಳು ಆಶಾದಾಯಕ ಎನಿಸಿಕೊಂಡು - ಬೆಳಕಿನತ್ತ ಬಾಗುವ ಸೂರ್ಯಕಾಂತಿಯ ನಾವಾಗಿ ಬಿಡುತ್ತೇವೆ.  

ಕಟ್ಟು ಕಟ್ಟುಗಳಷ್ಟು ಕನವರಿಕೆಗಳಿರುವ ಬಾಳನ್ನು ಬಿಸುಟಿ, ಮರೆತೇ ಬಿಟ್ಟಿರುತ್ತೇವಲ್ಲ.. ಒಂದೊಮ್ಮೆ ಕರುಳು ಚುರ್ ಗುಟ್ಟಿದ್ದೇ ನೀರನ್ನು ಹುಡುಕಿಕೊಂಡು ಹರಿಯುವ ಬಳ್ಳಿಯಂತೆ- ಆಶ್ರಯವನ್ನು ಯಾಚಿಸುತ್ತಾ, ಕಳೆದುಕೊಂಡದ್ದನ್ನು ಮರಳಿ ಪಡೆಯುವ ಯಾತ್ರೆಯು ಬೇರಿನ ಹುಡುಕಾಟದ್ದೇ ಆಗಿರುತ್ತದೆ. ಸಂತೆಯೊಳಗಿನ ಬದುಕಲ್ಲಿ -“ಇದಲ್ಲ...ಇದಲ್ಲ...” ಎನ್ನುತ್ತಾ..ಇನ್ಯಾವಾವುದನ್ನೋ ಹುಡುಕುವ ಮನಸ್ಸುಗಳಿಗೆ: ಇವರ ಕತೆಗಳಲ್ಲಿ ಬೇಕಾದದ್ದು ಸಿಕ್ಕಿ ಬಿಡುತ್ತವೆ. ಅಷ್ಟಕ್ಕೇ ಬದುಕು ಧನ್ಯವೆನಿಸಿ, ಇಲ್ಲಿರಲಾರದೆ ಅಲ್ಲಿಗೂ ಹೋಗಲಾರದೆ ಚಡಪಡಿಸುವ ಹೃದಯ-ಮನಸ್ಸುಗಳಿಗೆ ಜಯಂತರ ಕತೆಗಳು ಗುಳಿಗೆ-ಮುಲಾಮು-ಕಷಾಯಗಳಾಗಿ ಸಾಂತ್ವನವನ್ನು ನೀಡುತ್ತವೆ. ಇವರ ಕತೆಗಳು ಒಂದು ರೀತಿಯ ತಾಳಮದ್ದಳೆಯಂತೆ . ಕತೆಗಳನ್ನು ಓದುತ್ತ ಹೋದಂತೆ ಒಡ್ಡೋಲಗವು ತಾನಾಗಿಯೇ ಸೃಷ್ಟಿಯಾಗಿ, ಓದುವ  ಮನಸ್ಸುಗಳು ಒಂದೊಂದು ಪಾತ್ರಗಳಾಗಿ, ಅರ್ಥಗಳನ್ನು ಹುಡುಕುತ್ತಾ ಹೋಗುತ್ತವೆ.  ಪ್ರಸಂಗ ಯಾವುದೇ ಇರಲಿ ಅರ್ಥಗಾರಿಕೆಯಲ್ಲಿ ಇವರದ್ದು ಎತ್ತಿದ ಕೈ. 

ವರ್ಷಕ್ಕೊಂದರಂತೆ ಎಂಟು ಕತೆಗಳು. ಬೋನಸ್ ರೂಪದಲ್ಲಿ ಒಂದು ಹೆಚ್ಛೇ ಕತೆಯನ್ನು ನೀಡಿದ್ದಾರೆ. ಕತೆಯೊಳಗೆ ಇಳಿದ ನಂತರ ಅನಿಸಿದ್ದು- ಕಾಯುವಿಕೆಯ ತಪವು ಸಾರ್ಥಕವಾಯಿತು ಎಂದು. ದುಪ್ಪಡಿಯನ್ನಾಗಿಸಿಕೊಂಡ ರೂಪಕಗಳು ಕತೆಗಳ ಜೀವಾಳ. ಇಲ್ಲಿನ ಕತೆಗಳು ಬದುಕಿನ ಆಳ-ನೀಳ ಎರಡನ್ನೂ ಸಮವಾಗಿ ಹೊದ್ದುಕೊಂಡಿವೆ.  

ಸಾಧನಕೇರಿಯ ಬೇಂದ್ರೆ ಅಜ್ಜಾರ ಮನಿಯ  ತುಳಸೀಕಟ್ಟೆ, "ಸತ್ಯಭಾಮ ಬಾ.." ಎಂದು ಕರೆದಂತೆನಿಸಿದ - 'ಕೂತನಿ  ಕುಲಾವಿ'. ಮುನ್ನಾನ ಹಳೆಯ ಮನೆಯಲ್ಲಿ ಬೈದೂರಿನ ಪರಿವಾರವೊಂದು ಸಂಸಾರ ಹೂಡಿದ್ದು, ಖಾನಾವಳಿ, ಗಂಜಿ ಊಟದ ಹೊಟ್ಟೆ ಪೊರೆಯುವ ಕಾಯಕದಲ್ಲಿ- "ಊಟ ಮಾಡಿಕೊಂಡು  ಹೋಗಿ"- ಹೇಳುವಾಕೆಯ ಮಾತಲ್ಲಿನ ಆರ್ದ್ರತೆಯು 'ಬಬಣ್ಣ'ನನ್ನು- 'ಬೆಳಕಿನ ಬಿಡಾರ'ದಲ್ಲಿ ತೀವ್ರವಾಗಿ  ಹುಡುಕುವಂತೆ ಮಾಡಿತು. "ಬೂಟ್ ಹಾಕ್ಕೊಂಡು ಮೀನ್ ಪೇಟೆಗೆ ಹೋಗೋದೇ" ಎಂದು ಚಂದವಾಗಿ ನಗುವ ವಿಹಂಗಮನ ವೇಗವನ್ನು ಕಂಡು "ಚಾಪಾ...ಚಾಪಾ" ಎಂದು -'ವಾಯಾ ಚಿನ್ನದ ಕೇರಿ'-ಯಲ್ಲಿ ನಾನು ಕೂಗಿದ್ದೇ ಕೂಗಿದ್ದು.  

'ಎವರ್ ಗ್ರೀನ್'- ಶರತ್ ಚಂದ್ರ ತನ್ನ ಯೌವ್ವನ ಕಾಪಿಡುವುದನ್ನು ಕಂಡು ಯಯಾತಿ ಸುಳಿದು ಹೋದನೊಮ್ಮೆ. ಗಾಳಿಯಲ್ಲಿ ಮಾತುಗಳು ಅಂಥದೇನೂ ತುರ್ತಿಲ್ಲದೆ ದರ್ದಿಲ್ಲದೆ-'ಕಾಗದದ ಚೂರು' ಗಳಂತೆ ಹಾರಿ ಹೋಗುತ್ತಿರುವ ನೈಜ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಫರ್ಮಾಯಿಷ್ ಗಳ ಮೇಲೆ ಫರ್ಮಾಯಿಷ್ ಬರಲು ಹಳೆಯ ಬಾಲಿವುಡ್ ಹಾಡುಗಳ ಗುಚ್ಛವನ್ನು ಹಿಡಿದಿಟ್ಟ - 'ಹಲೋ... ಮೈಕ್ ಟೆಸ್ಟಿಂಗ್..'- "ಬಟಾಟ ವಡಾ ಇನ್ನೂ ಇದೆ ತಾನೇ ?" ಎಂದು ಮತ್ತೆ ಮತ್ತೆ ಕೇಳುವಂತಿದೆ.  

ಜೀವದ ಭಾವನೆಗಳನ್ನು ನಿಯಂತ್ರಿಸುವ ನೂರಾರು ಸೇಫ್ಟಿಪಿನ್ ಗಳು- ಬಾಳಿನುದ್ದಕ್ಕೂ ಹರಿದ ಭಾವ- ಬಂಧಗಳನ್ನು ಜೋಡಿಸಲು ಜೊತೆಯಲ್ಲೇ ಇರಬೇಕಾಗುತ್ತವೆ ಎಂದು ಹೇಳುವ- 'ಅನಾರ್ಕಲಿಯ ಸೇಫ್ಟಿಪಿನ್'.  'ಮೃಗನಯನ' - ಭಾವಿ ಜೀವದ ಆತಂಕಗಳಿಗೆ ಮೂರ್ತರೂಪ ಕೊಟ್ಟ ಭಾವುಕ ಮನಸ್ಸು- 'ಮೃಗನಯನ.. ರಸಿಕ ಮೋಹಿನಿ..' - ಹಾಡುತ್ತದೆ. ನಡೆದು ಬಂದ ಹಾದಿಯತ್ತ ತಿರು ತಿರುಗಿ ನೋಡುವ ಎಲ್ಲಾ ಮನಸ್ಸುಗಳಿಗೂ-ನೆನಹುಗಳ ಪರಿಮಳವನ್ನು ಹೊತ್ತು ತೇಲುತ ಬರುವ ಸೌಗಂಧಿಕೆಯಂತಿವೆ ಇಲ್ಲಿನ ಕತೆಗಳು.  

ಈ ಅಂಕಣದ ಹಿಂದಿನ ಬರೆಹಗಳು:

ಜೀವ ಜೀವಗಳ ಅಳು…

ಹನಿ ಹನಿಸಿದ ಚೊಕ್ಕಾಡಿ

ಶಾಂತ ಕಡಲೊಳು ಬೀಸಿದ ಬಿರುಗಾಳಿ

ರಂಗದ ಮೇಲಿನ ಬಣ್ಣದ ಭಾವಗಳು

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...