ಅಪ್ರತಿಮ ಗುರು ಅಲ್ಲಾದಿಯಾಖಾನ್

Date: 23-11-2020

Location: .


ಜೈಪುರ್ ಅತ್ರೌಲಿ ಘರಾಣೆಯ ಶ್ರೀಮಂತಿಕೆಯನ್ನು ಜಗತ್ತಿನಾದ್ಯಂತ ಪ್ರಸಾರಗೊಳಿಸಿದ ಕಲಾವಿದರ ಪೈಕಿ ಉಸ್ತಾದ್ ಅಲ್ಲಾದಿಯಾ ಖಾನ್ ರ ಹೆಸರು ಪ್ರಮುಖ. ಅವರ ಶಿಷ್ಯಂದಿರ ಸಂಗೀತ ಸಾಧನೆಯ ಎತ್ತರವನ್ನು ಪರಿಚಯಿಸುತ್ತಲೇ ಅಲ್ಲಾದಿಯಾ ಖಾನ್ ಅವರ ಅಪ್ರತಿಮ ಸಂಗೀತ ಪ್ರೇಮದ ವಿರಾಟ ಸ್ವರೂಪವನ್ನು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ತೋರಿದ್ದಾರೆ.

ಭಾರತದ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಕಿರಾಣ ಘರಾಣದ ಅಬ್ದುಲ್ ಕರೀಂ ಖಾನರನ್ನು ಹೊರತು ಪಡಿಸಿದರೆ, ಅತ್ಯಂತ ಮೇಧಾವಿ ಹಾಗೂ ಪ್ರತಿಭಾವಂತ ಶಿಷ್ಯ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಜೈಪುರ ಅತ್ರೌಲಿ ಘರಾಣೆಯ ಸ್ಥಾಪಕ ಉಸ್ತಾದ್ ಅಲ್ಲಾದಿಯಾ ಖಾನರದು. ವಿಶೇಷವೆಂದರೆ, ಈ ಇಬ್ಬರೂ ಮಹನೀಯರು ಉತ್ತರದಿಂದ ಬಂದು ಮಹಾರಾಷ್ಟ್ರದ ದಕ್ಷಿಣ ಭಾಗದ ಮೀರಜ್ ಮತ್ತು ಕೊಲ್ಲಾಪುರ ಪಟ್ಟಣಗಳನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಸಂಗೀತದಲ್ಲಿ ಉನ್ನತ ಸಾಧನೆಗೈಯ್ಯುತ್ತಾ ಅನೇಕ ಪ್ರತಿಭಾವಂತ ಶಿಷ್ಯರನ್ನು ತಯಾರು ಮಾಡಿದರು.
ಭಾರತದ ಬಹುಮುಖಿ ಸಮಾಜದಲ್ಲಿ ಜಾತಿ, ಧರ್ಮ, ಭಾಷೆಯನ್ನು ಮೀರುವುದರ ಜೊತೆಗೆ ಬಹುತ್ವಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಲೆ ಮತ್ತು ಸಂಗೀತಕ್ಕೆ ಜಾತಿ ಮತ್ತು ಧರ್ಮವಷ್ಟೇ ಅಲ್ಲ, ಲಿಂಗಭೇದವೂ ಇಲ್ಲ ಎಂಬುದನ್ನು ಸಂಗೀತ ಪ್ರತಿಪಾದಿಸಿಕೊಂಡು ಬಂದಿದೆ, ಇಂತಹವರಲ್ಲಿ ತಮ್ಮ ಜೀವಿತಾವಧಿಯಲ್ಲಿ ಸಾಧಿಸಿ ತೋರಿಸಿದ ಹಿಂದೂಸ್ತಾನಿ ಸಂಗೀತದ ಮಹಾನ್ ಕಲಾವಿದರಲ್ಲಿ ಅಲ್ಲಾದಿಯಾ ಖಾನ್, ಉಸ್ತಾದ್ ಅಬ್ದುಲ್ ಕರಿಂಖಾನ್, ಅನ್ನಪೂರ್ಣದೇವಿಯವರ ತಂದೆ ಬಾಬಾ ಅಲ್ಲಾವುದ್ದೀನ್ ಖಾನ್ (ಕಳೆದ ಲೇಖನದಲ್ಲಿ ಇವರ ಹೆಸರನ್ನು ಅಲ್ಲಾದಿಯಾ ಖಾನ್ ಎಂದು ತಪ್ಪಾಗಿ ನಮೂದಿಸಿದ್ದೆ) ಹಾಗೂ ಬಿಸ್ಮಿಲ್ಲಾ ಖಾನ್, ಬಡೆ ಗುಲಾಂ ಆಲಿ ಖಾನ್ ಹೀಗೆ ಅನೇಕ ಮಹನೀಯರನ್ನು ಹೆಸರಿಸಬಹುದು.
ಉಸ್ತಾದ್ ಅಲ್ಲಾದಿಯಾ ಖಾನ್ ಉಳಿದ ಮಹನೀಯರಿಗಿಂತ ಭಿನ್ನವಾಗಿ ನಿಲ್ಲುವುದು ಹಿಂದೂಸ್ತಾನಿ ಸಂಗೀತಕ್ಕೆ ಮೊಗುಬಾಯಿ ಕುರ್ಡಿಕರ್ ಮತ್ತು ಕೇಸರಿಬಾಯಿ ಕೇರ್ಕರ್ ಎಂಬ ಅಪ್ರತಿಮ ಗಾಯಕಿಯರನ್ನು ನೀಡಿದ ಮಹಾನ್ ಗುರು ಎಂಬ ಕಾರಣಕ್ಕಾಗಿ. ಗೋವಾ ಸಂಸ್ಥಾನದ ದೇವದಾಸಿ ಸಮುದಾಯದಿಂದ ಬಂದ ಈ ಇಬ್ಬರು ಮಹಿಳೆಯರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸಂಗೀತವನ್ನು ಧಾರೆಯೆರೆಯುವುದರ ಮೂಲಕ ಸಮಾಜದಲ್ಲಿ ತಲೆಯೆತ್ತಿ ಬಾಳುವುದಕ್ಕೆ ಅನುವು ಮಾಡಿಕೊಡುವುದರ ಜೊತೆಗೆ ಶ್ರೇಷ್ಠ ಸಂಗೀತದ ಗುರುಗಳಾಗಿ ರೂಪಿಸಿದ ಶ್ರೇಯಸ್ಸು ಅಲ್ಲಾದಿಯಾ ಖಾನ್ ಅವರಿಗೆ ಸಲ್ಲುತ್ತದೆ. ಕೇಸರಿಬಾಯಿಯವರು ಥೊಂಡು ತಾಯಿ ಕುಲಕರ್ಣಿ ಎಂಬ ಸಂಗೀತಗಾರ್ತಿಯನ್ನು ತಯಾರು ಮಾಡಿದರೆ, ಮೊಗುಬಾಯಿಯವರು ತಮ್ಮ ಪುತ್ರಿ ಕಿಶೋರಿ ಅಮೋನ್ಕರ್ ಅವರನ್ನು ಅದ್ಭುತ ಮೇರುಗಾಯಕಿಯಾಗಿ ರೂಪಿಸಿದರು. ಇಂತಹ ಪರಂಪರೆಯಿಂದಾಗಿ ಇಂದಿಗೂ ಸಹ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಕಿರಾನಾ ಘರಾಣ ಮತ್ತು ಜೈಪುರ್ ಅತ್ರೌಲಿ ಘರಾಣಗಳು ಅದಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿವೆ.

ಮೂಲತಃ ಉತ್ತರ ಪ್ರದೇಶದ ಅತ್ರೌಲಿಯವರಾದ ಅಲ್ಲಾದಿಯಾ ಖಾನ್ 1885ರ ಆಗಸ್ಟ್ ನಲ್ಲಿ ರಾಜಸ್ತಾನದ ಜೈಪುರ ಸಮೀಪದ ಲುನೈರಾ ಎಂಬಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸ್ಥಳಿಯ ಸಂಸ್ಥಾನವೊಂದರಲ್ಲಿ ಆಸ್ಥಾನ ಗಾಯಕರಾಗಿದ್ದರು. ಅಲ್ಲಾದಿಯಾ ಖಾನ್ ತಮ್ಮ ಐದನೆಯ ವಯಸ್ಸಿನಲ್ಲಿ ತಂದೆ ಅಹವದ್ ಖಾನರನ್ನು ಕಳೆದುಕೊಂಡ ನಂತರ ಚಿಕ್ಕಪ್ಪ ಜಹಂಗೀರ್ ಖಾನರ ಬಳಿ ಐದು ವರ್ಷ ದ್ರಪದ್ ಗಾಯನ ಮತ್ತು ಎಂಟು ವರ್ಷಗಳ ಕಾಲ ಖಯಾಲ್ ಗಾಯನದ ತರಬೇತಿ ಪಡೆದರು. ಆನಂತರ ತಮ್ಮ ಹದಿನೈದನೇ ವಯಸ್ಸಿನಿಂದ ಅಂದರೆ, 1870 ರಿಂದ 1944ರವರೆಗೆ ಸತತ ಐವತ್ತು ನಾಲ್ಕು ವರ್ಷಗಳ ಕಾಲ ಸಂಗೀತದಲ್ಲಿ ತೊಡಗಿಸಿಕೊಂಡು, ಗಾಯನದ ಜೊತೆಗೆ ಸಂಗೀತದಲ್ಲಿ ಅನೇಕ ಅವಿಷ್ಕಾರಗಳನ್ನು ಮಾಡುತ್ತಾ, ರಾಗಗಳ ಪುನರ್ ರಚನೆ, ರಾಗ ಸಂಯೋಜನೆಯಲ್ಲಿ ಹೊಸ ಪ್ರಯೋಗಗಳ ಅಳವಡಿಕೆ, ಹಾಡುವ ಶೈಲಿಯಲ್ಲಿ ಅನೇಕ ತಾಂತ್ರಿಕ ಬದಲಾವಣೆಗಳ ಜೊತೆಗೆ ಜೈಪುರ್ ಅತ್ರೌಲಿ ಘರಾಣೆಯ ಉದಯಕ್ಕೆ ಕಾರಣರಾದರು.
ಆ ಕಾಲಘಟ್ಟದಲ್ಲಿ ರಾಜಸ್ತಾನದ ಸಿರಿವಂತರ ಮನೆಗಳಾದ ಹವೇಲಿಗಳಲ್ಲಿ ಹಾಡುತ್ತಿದ್ದ ಅನೇಕ ಜನಪದೀಯ ಹಾಡುಗಳ ನಾಟಿ ರಾಗಗಳನ್ನು ಹಿಂದೂಸ್ತಾನಿ ಸಂಗೀತಕ್ಕೆ ಅಳವಡಿಸಿದ ಕೀರ್ತಿ ಅಲ್ಲಾದಿಯಾ ಖಾನರಿಗೆ ಸಲ್ಲುತ್ತದೆ. ಇವರು ಶೋಧಿಸಿದ ನಾಟ್ ಕಾನಡ, ಭೂಪ್ ನಾಟ್, ಕೌನ್ಸಿ ಕಾನಡ, ಸಂಪೂರ್ಣ ಮಲಕಹಂಸ್, ಬಸಂತಿ ಕೇದಾರ್, ಶುದ್ಧನಾಟ್. ಮಾಲವಿ, ಸವಾನಿ ಕಲ್ಯಾಣ್, ಧವಳಶ್ರೀ ಈ ರಾಗಗಳು ಜೈಪುರ್ ಅತ್ರೌಲಿಯ ಘರಾಣೆಯ ಗಾಯಕರಲ್ಲಿ ಇಂದಿಗೂ ಜನಪ್ರಿಯವಾಗಿವೆ. ಅಲ್ಲಾದಿಯಾಖಾನ್ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ದ್ರಪದ್ ಮತ್ತು ಖಯಾಲ್ ಪ್ರಕಾರಗಳು ಮುನ್ನಲೆಗೆ ಬಂದ ಕಾರಣದಿಂದಾಗ ಅಭಿವ್ಯಕ್ತಿ ಅಂದರೆ, ಹಾಡುಗಾರಿಕೆಯಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳಾದಾವು. ಗಾಯಕರು ‘ಬಂದಿಷ್’ ಎಂದು ಕರೆಯಲಾಗುವ ಸಂಗೀತ ಕೃತಿಗೆ ಮತ್ತು ರಾಗ ಲಕ್ಷಣಗಳ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ, 13ನೇ ಶತಮಾನದಲ್ಲಿ ಸಂಗೀತ ರತ್ನಾಕರ್ ತನ್ನ ಕೃತಿಯಲ್ಲಿ ಅಂದರೆ ಪ್ರಬಂಧದಲ್ಲಿ ಅಳವಡಿಸಿದ್ದ ನಿಯಮಾವಳಿಗಳನ್ನು ಪಾಲಿಸುತ್ತಿದ್ದರು. ಆದರೆ, 16ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ದ್ರುಪದ್ ಗಾಯನಕ್ಕೆ ಇಂತಹ ಯಾವುದೇ ನಿಯಮಾವಳಿಗಳು ಇಲ್ಲದ ಪ್ರಯುಕ್ತ ಸಂಗೀತಗಾರರು ತಮ್ಮ ಮನೊಧರ್ಮಕ್ಕೆ ಅನುಗುಣವಾಗಿ ಹಾಡತೊಡಗಿದರು. ಈ ಅಭಿರುಚಿ ಮುಂದಿನ ದಿನಗಳಲ್ಲಿ ಬಾನಿ ಅಥವಾ ಘರಾಣೆ ಹೆಸರಿನಲ್ಲಿ ಸಂಗೀತಗಾರರ ಇಲ್ಲವೆ ಅವರ ಊರುಗಳ ಮೂಲಕ ಜನಪ್ರಿಯವಾದವು.

ಪಟಿಯಾಲ ಘರಾಣೆ ಅಂಥವಾ ಸಂಗೀತ ಶಾಲೆಯಲ್ಲಿ ಕಲಿತ ಸಂಗೀತಗಾರರು ತಮ್ಮ ಹಾಡುಗಾರಿಕೆಯಲ್ಲಿ ಆಲಾಪನೆಗೆ ಹೆಚ್ಚು ಪ್ರಾಶಸ್ತ್ಯ ನೀಡದೆ, ನೇರವಾಗಿ ಕೃತಿಗಳನ್ನು ಹಾಡುವ ಪದ್ಧತಿಯಿದೆ. ಅದೇ ರೀತಿ ಜೈಪುರ್ ಅತ್ರೌಲಿ ಘರಾಣೆಯಲ್ಲಿ ವಿಳಂಬಿತ್ ಮತ್ತು ಮಧ್ಯಮ ಲಯದ ನಡುವಿನ ಸಾಮಾನ್ಯ ದ್ರುತ ಗತಿಯಲ್ಲಿ ಸಂಗೀತವನ್ನು ಪ್ರಸ್ತುತ ಪಡಿಸುವ ಪದ್ಧತಿಯಿದೆ. ಕೇವಲ ಹಾಡುಗಾರಿಕೆಯ ಶೈಲಿಯಿಂದ ಗಾಯಕ ಅಥವಾ ಗಾಯಕಿ ಯಾವ ಘರಾಣೆಗೆ ಅಥವಾ ಶಾಲೆಗೆ ಸೇರಿದವರೆಂದು ಗುರುತಿಸಬಹುದಾಗಿದೆ. ಅಲ್ಲಾದಿಯಾಖಾನ್ ಅವರು ತಮ್ಮ ಘರಾಣೆಯಲ್ಲಿ ನಾಟಿ ರಾಗಗಳನ್ನು ಪರಿಚಯಿಸುವುದರ ಜೊತೆಗೆ ಕೆಲವು ಸಂಗೀತ ಕೃತಿಗಳನ್ನು ಜೋಡ್ ರಾಗ್ ಎನ್ನುವ ಎರಡು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವ ಸಂಪ್ರದಾಯವನ್ನು ಪರಿಚಯಿಸಿದರು.
ಅತ್ಯುತ್ತಮ ಗಾಯಕರಾಗಿದ್ದ ಖಾನ್ ಸಾಹೇಬರು ತಮ್ಮ ತಾರುಣ್ಯದ ದಿನಗಳಲ್ಲಿ ರಾಜಸ್ತಾನದ ಸಂಸ್ಥಾನದ ದೊರೆಯೊಬ್ಬನ ಅಪ್ಪಣೆ ಮೇರೆಗೆ ಎರಡು ದಿನ ನಿರಂತರವಾಗಿ ಹಾಡಿ ತಮ್ಮ ಧ್ವನಿಯನ್ನು ಕಳೆದುಕೊಂಡು ಅತಂತ್ರರಾಗಿದ್ದರು. ನಂತರ ಎರಡು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿ ತಮ್ಮ ಶಾರೀರವನ್ನು ಮರಳಿ ಪಡೆದರು. ನಂತರ, ಪಾಟ್ನಾ, ಬರೋಡ, ಅಲಹಬಾದ್, ನೇಪಾಳ ಹೀಗೆ ಅನೇಕ ಸಂಸ್ಥಾನಗಳಲ್ಲಿ ಆಹ್ವಾನದ ಮೇರೆಗೆ ಸಂಗೀತ ಸೇವೆ ಸಲ್ಲಿಸುತ್ತಿದ್ದ ಅಲ್ಲಾದಿಯಾ ಖಾನರಿಗೆ 1885ರಲ್ಲಿ ಕೊಲ್ಲಾಪುರ ಸಂಸ್ಥಾನದ ದೊರೆ ಸಾಹು ಮಹಾರಾಜ್ ಅವರು ಆಸ್ಥಾನ ಗಾಯಕರಾಗಿ ನೇಮಕ ಮಾಡಿಕೊಂಡರು. ಸಾಹು ಮಹಾರಾಜ್ ನಿಧನರಾಗುವವರೆಗೆ ಅಂದರೆ 1922ರವರೆಗೆ ಕೊಲ್ಲಾಪುರದಲ್ಲಿದ್ದುಕೊಂಡು ಅಲ್ಲಿನ ಮಹಾಲಕ್ಷ್ಮಿ ದೇವಾಲಯದ ಬೆಳಗಿನ ಪ್ರಥಮ ಪೂಜೆಗೆ ಮತ್ತು ಅರಮನೆಯಲ್ಲಿ ಹಾಡುತ್ತಿದ್ದ ಖಾನರು ನಂತರ ಮುಂಬೈ ನಗರಕ್ಕೆ ತೆರಳಿದರು. ಮುಂಬೈನಗರದಲ್ಲಿದ್ದುಕೊಂಡು ಶ್ರೀಮಂತರ ಮೆಹಫಿಲ್ ಕಾರ್ಯಕ್ರಮಗಳಲ್ಲಿ ಹಾಡುತ್ತಾ, ಶಿಷ್ಯರನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದ ಅಲ್ಲಾದಿಯಾ ಖಾನರಿಗೆ ಬಾಲಗಂಧರ್ವರ ನಾಟ್ಯ ಸಂಗೀತದ ಹಾಡುಗಾರಿಕೆ ಎಂದರೆ, ಇನ್ನಿಲ್ಲದ ಪ್ರೀತಿಯಿತ್ತು. ಹಾಗಾಗಿ ಬಾಲಗಂಧರ್ವರ ಹೊಸ ನಾಟಕ ಪ್ರದರ್ಶನಗಳಿಗೆ ಮುಂಬೈ ನಗರದಿಂದ ಪುಣೆ ನಗರಕ್ಕೆ ತರಳಿ ಬಾಲಗಂಧರ್ವರ ಕಂಠಸಿರಿಯಲ್ಲಿ ನಾಟ್ಯ ಸಂಗೀತವನ್ನು ಕೇಳಿ ಸಂತೋಷ ಪಡುತ್ತಿದ್ದರು.

ತಾವು ಮೂಲತಃ ಹಿಂದುಗಳಾಗಿದ್ದು ಹದಿನೇಳನೇ ಶತಮಾನದ ಮೊಗಲ್ ಆಳ್ವಿಕೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ಹೇಳಿಕೊಳ್ಳುತ್ತಿದ್ದ ಖಾನರು, ಸ್ವಾಮಿ ಹರಿದಾಸ್ ಪಂಗಡಕ್ಕೆ ಸೇರಿದ ಶಾಂಡಿಲ್ಯ ಗೋತ್ರದ ಆದ್ಯ ಗೌಡ ಬ್ರಾಹ್ಮಣರೆಂದು ಹೇಳಿಕೊಂಡಿರುವುದು ವಿಶೇಷ. (ಮೈ ಲೈಫ್ ಎನ್ನುವ ಕೃತಿಯಲ್ಲಿ) ಈ ಕಾರಣಕ್ಕಾಗಿ ಏನೋ? ತಮ್ಮ ಕುಟುಂಬದ ಸದಸ್ಯರನ್ನು ಹೊರತು ಪಡಿಸಿದರೆ, ಅವರ ಬಹುತೇಕ ನೇರ ಶಿಷ್ಯರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ತಮ್ಮ ಸಹೋದರನ ಪುತ್ರ ಹೈದರ್ ಖಾನ್, ತಮ್ಮ ಇಬ್ಬರ ಪುತ್ರರಾದ ಮಂಜಿಖಾನ್, ಬುರ್ಜಿಖಾನ್ ಹಾಗೂ ಮೊಮ್ಮಗ ಅಜ್ರುದ್ದೀನ್ ಖಾನ್ ಹೊರತು ಪಡಿಸಿದರೆ, ಬಾಲಕೃಷ್ಣ ಬುವಾ ಬಾಕಲೆ, ಕೇಸರಿ ಬಾಯಿ ಕೇರ್ಕರ್, ಮೊಗುಬಾಯಿ ಕುರ್ಡಿಕರ್ ಹಾಗೂ ಪುತ್ರರು ಮತ್ತು ಶಿಷ್ಯರಿಂದ ತಯಾರಾದ ಥೊಂಡು ಬಾಯಿ ಕುಲಕರ್ಣಿ, ಮಲ್ಲಿಕಾರ್ಜುನ ಮನ್ಸೂರ್, ಜಸ್ದನ್ ವಾಲಾ, ಗೋವಿಂದರಾವ್ ತಾಂಬೆ, ಅಶ್ವಿನಿ ಭಿಡೆ, ಮಾಣಿಕ್ ಭಿಡೆ, ಕಿಶೋರಿ ಅಮೋನ್ಕರ್, ಶ್ರುತಿ ಶಿಡೋಲ್ಕರ್, ದೀಲಿಪ್ ಚಂದ್ರಬೇಡಿ, ಪದ್ಮಾ ತಲ್ ವಾರ್ಕರ್ ಹೀಗೆ ಬಹುತೇಕ ಮಂದಿ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು ಖಾನರ ಜೈಪುರ್ ಅತ್ರೌಲಿ ಘರಾಣೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದ್ದಾರೆ. ಅಲ್ಲಾದಿಯಾ ಖಾನರು 1946ರಲ್ಲಿ ತಮ್ಮ ತೊಂಬತ್ತದೊಂದನೇ ವಯಸ್ಸಿನಲ್ಲಿ ಮುಂಬೈ ನಗರದಲ್ಲಿ ನಿಧನರಾದರು.

 

ಇದನ್ನು ಓದಿ:

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...