ಅರಿವಿನ ನಿರಿಗೆಯಲ್ಲಿ ‘ಭಕ್ತಿ ಸಾರ್ವಭೌಮತ್ವ: ಮುಮ್ಮಡಿ ಕೃಷ್ಣರಾಜ ಒಡೆಯರ ಅಲೌಕಿಕ ಸಾಮ್ರಾಜ್ಯ’ ವೆಬಿನಾರ್‌

Date: 03-08-2020

Location: ವೆಬಿನಾರ್‌


ಇತಿಹಾಸ ದರ್ಪಣ, ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ಹಾಗೂ ಋತುಮಾನ.ಕಾಮ್ ಸಹಯೋಗದಲ್ಲಿ ಆಯೋಜಿಸಿದ್ದ ಅರಿವಿನ ನಿರಿಗೆ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮದಲ್ಲಿ ಅಮೆರಿಕಾದ ಅರಿಝೊನಾ ವಿಶ್ವವಿದ್ಯಾಲಯದ ರಿಲಿಜನ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕ್ಯಾಲೆಬ್ ಸಿಮನ್ಸ್ ಅವರು ‘ಭಕ್ತಿ ಸಾರ್ವಭೌಮತ್ವ- ಮುಮ್ಮಡಿ ಕೃಷ್ಣರಾಜ ಒಡೆಯರ ಅವರ ಅಲೌಕಿಕ ಸಾಮ್ರಾಜ್ಯ’ ಕುರಿತು ಮಾತನಾಡಿದರು.

“ಕ್ರಿ.ಶ. 1572ರಲ್ಲಿ ಸ್ಥಾಪನೆಯಾದ ಮೈಸೂರು ಒಡೆಯರ ರಾಜ್ಯ ಹಲವು ಸವಾಲುಗಳನ್ನು ಎದುರಿಸಿ ರಾಜಕೀಯ ಮತ್ತು ಸಾಂಸ್ಕೃತಿಕ ಏಕತೆಯನ್ನು ಈ ನಾಡಿಗೆ ನೀಡಿದೆ. ಕ್ರಿ.ಶ. 1799ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರವು ಟಿಪ್ಪು ಸುಲ್ತಾನನ್ನು 4ನೇ ಮೈಸೂರು ಯುದ್ಧದಲ್ಲಿ ಸೋಲಿಸಿ ಒಡೆಯರ ಮನೆತನದ ಆಳ್ವಿಕೆಯನ್ನು ಪುನರ್ ಸ್ಥಾಪಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಮೈಸೂರು ರಾಜ್ಯದ ಮಹಾರಾಜರನ್ನಾಗಿ ಮಾಡಿದರು. ಮುಮ್ಮಡಿಯವರ ಆಳ್ವಿಕೆಯು ಬಹಳ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಬ್ರಿಟಿಷರ ಕಣ್ಗಾವಲಿನಲ್ಲಿ ರಾಜ್ಯದ ಆಳ್ವಿಕೆಯು ಸವಾಲಿನ ಪ್ರಶ್ನೆಯಾಗಿತ್ತು. 1831ರಲ್ಲಿ ನಡೆದ ‘ನಗರ ದಂಗೆ’ಯಿಂದಾಗಿ ಮೈಸೂರು ರಾಜ್ಯವು ಬ್ರಿಟಿಷರ ಆಡಳಿತಕ್ಕೆ ಒಳಪಡಿಸಬೇಕಾಗಿ ಬಂದಿತು. ಮುಮ್ಮಡಿಯವರ ಆರು ದಶಕಗಳ ಅಧಿಕಾರಾವಧಿಯು ಸಾಂಸ್ಕೃತಿಕವಾಗಿ ಸಮೃದ್ಧಿಯಾಗಿ ಕಂಡುಬಂದರೂ ರಾಜಕೀಯವಾಗಿ ಅಲೌಕಿಕವಾಗಿತ್ತು ಎಂಬುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟರು. 

ಒಡೆಯರ್ ಮನೆತನಕ್ಕೆ ಮೈಸೂರು ರಾಜ್ಯವು ದೈವದತ್ತವಾಗಿ ಬಂದಿದ್ದೆಂಬುದನ್ನು ಬಿಂಬಿಸುವುದಕ್ಕಾಗಿ ಧಾರ್ಮಿಕ ಆಚರಣೆಗಳು ಮತ್ತು ಗ್ರಂಥಗಳನ್ನು ರಚಿಸುವುದನ್ನು ಈ ಕಾಲದಲ್ಲಿ ಕಾಣುತ್ತೇವೆ. ಮುಮ್ಮಡಿಯವರು ರಚಿಸಿದ ಮೈಸೂರು ಸಂಸ್ಥಾನದ ಮಹಾರಾಜರ ವಂಶಾವಳಿ ಕೃತಿಯಲ್ಲಿ ಸಂಸ್ಥಾನದ ಮೂಲ ಪುರುಷ ಯದುರಾಯ ಮತ್ತು ಆತನ ಸಹೋದರ ಕೃಷ್ಣರಾಜ ಅವರು ಆದಿ ದೇವತೆಯಾದ ಚಾಮುಂಡಿಯ ಮತ್ತು ನಂಜುಂಡೆಶ್ವರ ದೇವರ ಅನುಗ್ರಹದಿಂದ ರಾಜ್ಯ ಸ್ಥಾಪನೆ ಮಾಡಿದರೆಂದು ಬಿಂಬಿಸಿದ್ದಾರೆ. ಅಲ್ಲದೇ, ಸ್ಥಳೀಯ ಜಾನಪದ ಕಥೆಗಳಲ್ಲಿ ಚಾಮುಂಡಿಯು ಶಿವನಾದ ನಂಜುಂಡೇಶ್ವರ ಪಾರ್ವತಿಯ ಅವತಾರವೆಂದು ಗುರುತಿಸುತ್ತಾರೆ. ಇನ್ನೊಂದೆಡೆ, ಮೇಲುಕೋಟೆಯ ಚೆಲುವನಾರಾಯಣ ದೇವರಿಗೂ ಪರಮ ಭಕ್ತರಾಗಿದ್ದ ಮುಮ್ಮಡಿಯವರು ಸಂಸ್ಥಾನವನ್ನು ಆಳುವ ದೊರೆಯಾಗಿದ್ದು, ಈ ದೇವತೆಯ ಪ್ರತಿನಿಧಿಯಾಗಿ ಆಳುವ ಅರಸನೆಂಬುದನ್ನು ಬಿಂಬಿಸಲಾಗಿದೆ” ಎಂದು ವಿವರಿಸಿದರು. 

ವಿದ್ವಾಂಸರಾದ ಡಾ. ವಾಗೇಶ್ವರಿ, ಡಾ.ಬಸವರಾಜ ಕಲ್ಗುಡಿ, ಡಾ. ಎಸ್.ಕೆ. ಅರುಣಿ, ನಾಗೇಂದ್ರರಾವ್, ಪ್ರವೀಣ ಕುಮಾರ್, ಸುಂಕಂ ಗೋವರ್ಧನ್, ಎ.ಬಿ. ವಗ್ಗರ್, ಮನು ದೇವದೇವನ್, ಎಂ.ಪ್ರಕಾಶಮೂರ್ತಿ, ಪುರುಷೋತ್ತಮ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸ ಸರಣಿಯ ಸಂಯೋಜಕ ಪ್ರದೀಪ ಕ್ಯಂಚ್ನೂರ್ ಸ್ವಾಗತಿಸಿದರು.  ಋತುಮಾನ.ಕಾಮ್ ಸಂಸ್ಥೆಯ ನಿತೀಶ್ ಕುಂಟಾಡಿ ನಿರ್ವಹಿಸಿದರು.

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...