ಅರ್ಥಪೂರ್ಣ ಜಿಜ್ಞಾಸೆಗಳ ಮಕ್ಕಳ ಕವಿತೆಗಳು ‘ಆದಿಕಾವ್ಯ, 1-10ರವರೆಗಿನ ಸರಣಿ’


ಕವಿ ಕೆ.ವಿ. ತಿರುಮಲೇಶ ಅವರ ‘ಆದಿಕಾವ್ಯ’ ಸರಣಿಯಡಿ ಮಕ್ಕಳ ಒಟ್ಟು 10 ಕವನ ಸಂಕಲನಗಳು ಏಕಕಾಲಕ್ಕೆ ಕನ್ನಡ ಸಾಹಿತ್ಯ ಪ್ರವೇಶಿಸಿದ್ದು, ಮಕ್ಕಳ ಕವಿತೆಗಳ ಮಾದರಿ, ವ್ಯಕ್ತಿತ್ವದ ಛಾಪು ಇತ್ಯಾದಿ ಅಂಶಗಳತ್ತ ಅರ್ಥಪೂರ್ಣ ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತದೆ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿದ ಬರಹವಿದು;

ಸಾಹಿತಿ, ವಿಮರ್ಶಕ, ಚಿಂತಕ ಎಂದೇ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು-ಕೆ.ವಿ. ತಿರುಮಲೇಶ್. ಅವರ ಒಟ್ಟು ಸಾಹಿತ್ಯದ ಸ್ವರೂಪ-ಸ್ವಭಾವವೇ ಗಂಭೀರ ಚಿಂತನೆ. ಅದೇ ಜೀವಾಳವೂ ಹೌದು ಅವರು ಕನ್ನಡ ಸಾಹಿತ್ಯದ ಗಂಭೀರ ಓದುಗ-ಬರಹಗಾರ. ಆದರೆ, ಮಕ್ಕಳ ಸಾಹಿತ್ಯ ರಚನೆಯತ್ತ ವಾಲಿದ್ದು ವಿಶೇಷ. ಹಾಗೆ ನೋಡಿದರೆ, ಪಂಜೆ ಮಂಗೇಶರಾಯ, ಕುವೆಂಪು, ಅಂಬಿಕಾತನಯದತ್ತ, ಜಿ.ಪಿ. ರಾಜರತ್ನಂ ಮುಂತಾದವರು , ದೊಡ್ಡರಿಗಾಗಿ ಬರೆದಂತೆ ಮಕ್ಕಳಿಗಾಗಿಯೂ ಬರೆದಿದ್ದು ಕನ್ನಡ ಸಾಹಿತ್ಯದಲ್ಲಿ ಅಚ್ಚರಿಯಲ್ಲ. ಮಕ್ಕಳ ಸಾಹಿತ್ಯ ಎಂದರೆ ಹೇಗೆ ಬರೆದರೂ ಸಾಹಿತ್ಯವಾಗುತ್ತದೆ…, ಈ ಸಾಹಿತ್ಯಕ್ಕೆ ಮಾರುಕಟ್ಟೆ ಇಲ್ಲ…. ಮಕ್ಕಳಿಗಾಗಿ ಬರೆದರೆ ದೊಡ್ಡ ದೊಡ್ಡ ಸಾಹಿತಿಗಳ ಸಂಗ -ಚರ್ಚೆ ತಪ್ಪಿ…., ಸಿಗಬಹುದಾದ ಮಾನ್ಯತೆ-ಪ್ರಶಸ್ತಿ-ಗೌರವಗಳು ತಪ್ಪುತ್ತವೆ….ಹೀಗೆ ಚಿತ್ರ-ವಿಚಿತ್ರವಾದ ಭ್ರಮೆಗಳು ಇಂದಿಗೂ ಸಾಹಿತ್ಯ ವಲಯದಲ್ಲಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಆದರೂ, ಮಕ್ಕಳ ಸಾಹಿತ್ಯ ಕೃತಿಗಳ ಪ್ರಮಾಣ ಹೆಚ್ಚುತ್ತಿದೆ. ಇದು, ಸಮಾಧಾನಕರ ಸಂಗತಿ. ಆದರೆ, ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲೇಬೇಕು;

  1. ಮಕ್ಕಳ ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡಿ ರಚಿಸಿದ ಸಾಹಿತ್ಯ

  2. ಮಕ್ಕಳಿಗಾಗಿ ಬರೆದ ಸಾಹಿತ್ಯ

ಈ ಪೈಕಿ, ಯಾವುದೇ ಪ್ರಕಾರದ ಸಾಹಿತ್ಯ ರಚಿಸಿದರೂ, ಅದು, ಈ ಪ್ರಶ್ನೆಗಳಿಗೆ ಸೂಕ್ತ ಉತ್ತರವಾಗುವ ಮಾಪನ ಇಲ್ಲವೇ ಮಾನದಂಡವಾಗುವ ಸಾಧ್ಯತೆಗಳೆಷ್ಟು.. ? ಎಂಬುದು. ಮೊದಲನೆಯದ್ದು, ‘ಪರಕಾಯ ಪ್ರವೇಶ’ ತುಂಬಾ ಕಷ್ಟ. ಏಕೆಂದರೆ, ಕವಿಯ ಜೀವ ಇಲ್ಲಿ ಹಿಮ್ಮುಖವಾಗಿ ಹರಿಯಬೇಕಾಗುತ್ತದೆ. ಮಗುವಿನ ಮನಸ್ಸನ್ನು ಅಕ್ಷರಶಃ ಪ್ರತಿನಿಧಿಸಿ, ಅನುಭವಿಸಿ, ಅಭಿವ್ಯಕ್ತಿಸಬೇಕು. ಎರಡನೇಯದ್ದು; ಬದುಕಿನ ಅನುಭವ-ಅಧ್ಯಯನದ ಮೆರಗಿನಿಂದ ಮಗುವಿಗೆ ತಿಳಿಯುವ ಹಾಗೆ, ಅನುಭವಿಸಿ ಸಂಭ್ರಮಿಸುವ ಹಾಗೆ ಬರೆಯಬೇಕು. ಕವಿಯ ಅನುಭವವು, ಮಗುವಿಗೆ ಹೊಸ ಹೊಸ ಜ್ಞಾನದ ಬುಗ್ಗೆಗಳಾಗಿ ಕುತೂಃಹಲ ಮೂಡಿಸುವಂತಿರಬೇಕು. ಸಹಜವಾಗಿ ಅದು ದೊಡ್ಡವರಿಗೂ ಅನ್ವಯವಾಗಿ, ತಮ್ಮ ವಯಸ್ಸಿನ ಮಾಗಿದ ಸ್ಥಿತಿಯನ್ನು ಮರೆತು, ಮಗುವಿನ ಮೃದುತ್ವದೊಂದಿಗೆ ಬಾಗುವಂತೆ ಮಾಡುತ್ತದೆ. ಇದರ ಪರಿಣಾಮವೇ, ಕನ್ನಡದ ಕೆಲ ಹಿರಿಯ ಕವಿಗಳೂ ಸಹ ಮಕ್ಕಳ ಸಾಹಿತ್ಯ ರಚಿಸಿದರು ಎನ್ನುವುದು. ಉಳಿದವರಿಗೆ ಸಾಧ್ಯವಾಗಿಲ್ಲವೇಕೆ ಎಂಬುದು ಸಂಶೋಧನೆಗೆ ಬಿಟ್ಟ ವಿಚಾರ.(ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ, ಗಂಭೀರ ಸಾಹಿತ್ಯ ಎಂಬ ಭೇದವಿಲ್ಲ ಎಂಬ ವಾದವೂ ಇದೆ. ಆ ಮಾತು ಬೇರೆ.) ಆದರೆ, ವಿಮರ್ಶಕ-ಚಿಂತಕ ಕೆ.ವಿ. ತಿರುಮಲೇಶ್ ಅವರು ಮಕ್ಕಳಿಗಾಗಿಯೇ ಕವಿತೆಗಳನ್ನು ‘ ಬರೆದಿದ್ದು ಸ್ಪಷ್ಟ ಅದು; ‘ಆದಿಕಾವ್ಯ’ ಎಂಬ 10 ಸಂಕಲನಗಳ ಸರಣಿ.

ರೂಪು ಪಡೆದ ‘ಆದಿಕಾವ್ಯ’ : ‘ಆದಿಕಾವ್ಯ’ ಎಂಬ ಪ್ರಮುಖ ಸರಣಿಯಡಿ ಒಟ್ಟು 10 ಸಂಕಲನಗಳ ಶೀರ್ಷಿಕೆಯಡಿ ಅಂದರೆ, ಚಿಕ್ಕಣಿ ರಾಜ (46), ಓಡೋ ಪುಟ್ಟಾ ಓಡೋ (67), ಬೀಸಿದರೆ ಉದುರಬೇಕು ನನ್ಹತ್ರ ಹೂ-ಹಣ್ಣು ನಕ್ಷತ್ರ (100), ನಂಬಿ ಕೆಟ್ಟವರಿಲ್ಲ ಪುಟ್ಟನ (101), ನಾನಿದ್ದೀನಲ್ಲ ಅಂತಾನ್ ಪುಟ್ಟ (102) , ನೆನೆ ಪುಟ್ಟ ನೆನೆ (109), ಅಟ್ಟದಲ್ಲೇನಿದೆಯೋ ಪುಟ್ಟನಿಗೇ ಗೊತ್ತು..! (91), ಇಂತಪ್ಪಪುಟ್ಟ ಈಗೆಲ್ಲಿ ಪುಟ್ಟ..? (98),, ಮೆಟ್ರೋದಲ್ಲಿ ಇಲಿ (104), ಓ ಲಲ (106) ಹೆಚ್ಚು ಕಡಿಮೆ 650ಕ್ಕೂ ಅಧಿಕ ಕವನಗಳಿವೆ.

ಇಷ್ಟೊಂದು ಸಂಖ್ಯೆಯಲ್ಲಿ ರೂಪು ಪಡೆದ ಕವಿತೆಗಳಿಗೆ ಸುದೀರ್ಘ ಇತಿಹಾಸ ಇರುವುದು ಗಮನಾರ್ಹ. ಕವಿಯು ಅಮೆರಿಕದ ಆಯೋವಾ ವಿ.ವಿ.ಯಲ್ಲಿದ್ದಾಗ (2004-2006) ಅಲ್ಲಿಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಸಂದರ್ಭ. ಈ ವಿದ್ಯಾರ್ಥಿಗಳು ದೊಡ್ಡವರಿದ್ದರೂ ಭಾಷೆ ಕಲಿಕೆಯ ದೃಷ್ಟಿಯಿಂದ ಮಕ್ಕಳೇ. ಹೀಗಾಗಿ, ಮಕ್ಕಳ ಮಟ್ಟಕ್ಕೆ ಇಳಿದು ಕನ್ನಡ ಕಲಿಸುವಾಗಿನ ಮನಸ್ಥಿತಿಯು ಇಲ್ಲಿಯ ಕವನಗಳನ್ನು ಬರೆಯಿಸಿತು ಎಂಬುದು (ಮುನ್ನುಡಿ ಉಲ್ಲೇಖ). ಅಂದರೆ, ಮಕ್ಕಳ ಮನಸ್ಸಿನಲ್ಲಿ ಪರಕಾಯ ಪ್ರವೇಶ ಪಡೆಯುವ ಇಲ್ಲವೇ ಮಕ್ಕಳಿಗೆ ಕಲಿಸುವಾಗಿನ ಮನಸ್ಥಿತಿಯನ್ನು ಕವಿತೆಯ ಮನೋಧರ್ಮವಾಗಿಸುವ ಸೂಕ್ಷ್ಮ ಪರಿಗಳನ್ನು ಕವಿಗಳು ಕಂಡುಕೊಂಡಿದ್ದು. ಮಾತ್ರವಲ್ಲ; ಕನ್ನಡ ಭಾಷೆಯ ಸೊಗಸನ್ನುಕಂಡು ಮಕ್ಕಳಂತೆ ಸಂಭ್ರಮಿಸಿದ್ದು, ಅದನ್ನು ಪ್ರಯೋಗಶೀಲತೆಯ ಗುಣದಿಂದಾಗಿ ಅದರ ಪರಿಣಾಮಗಳನ್ನೂಅಧ್ಯಯನ ಮಾಡಿದ ಕವಿತೆಗಳಿವು. ಆ ಕಾರಣಕ್ಕೆ, ಮಕ್ಕಳಿಗಾಗಿ ಬರೆದ ಕವಿತೆಗಳು ಪರಿಣಾಮಕಾರಿಯಾಗಿವೆ.

‘ಮಿಣು ಮಿಣು ಮಿಂಚುವ ಮಿಂಚುಳದೊಳಗೆ/ ಬೆಳಕೆಲ್ಲಿಂದ ಹುಟ್ಟ/ ಕತ್ತಲ ಹೊತ್ತ ಆಲದ ಮರಕೇ ಗೊತ್ತು/ ಹೊದ್ದು ಮಲಗಿದ ನಿದ್ದೆಯೊಳಗೆ ಕನಸೆಲ್ಲಿಂದ ಪುಟ್ಟ/ ಮುಚ್ಚಿದ ಕಣ್ಣ ರೆಪ್ಪಗೇ ಗೊತ್ತು/ ಇಂತಹ ಸಾಲುಗಳ ಮೂಲಕ, ಮಿಂಚು, ಮಿಂಚುಳ, ಕನಸು, ಆಲದ ಮರ ಹೀಗೆ ಸಂಕೀರ್ಣ ಸ್ವಭಾವದ ಪರಿಕಲ್ಪನೆಗಳನ್ನು ಕವಿಯು ತಮ್ಮ ಅನುಭವದ ಮೂಲಕ ಸರಳವಾಗಿ ಅಭಿವ್ಯಕ್ತಿಸಿ , ‘ಆಲದ ಮರಕೇ ಗೊತ್ತು…ಮುಚ್ಚಿದ ಕಣ್ಣ ರೆಪ್ಪೆಗೇ ಗೊತ್ತು…’ ಎಂದು ಹೇಳಿ ಮಗುತನದ ಮುಗ್ದತೆಯನ್ನು, ಕುತೂಃಹಲವನ್ನು, ಅಚ್ಚರಿಯ ಪರಿಯನ್ನು ಕಟ್ಟಿಕೊಡಲು ಸಾಧ್ಯವಾಗಿದೆ. ಮತ್ತೊಂದು ಕವಿತೆ ನೋಡಿ; ದೇವರಿಗೇ ನಾಮಗಳು ಯಾಕೋ ಅಂದ್ರೆ/ ಕಾಯ್ಬೇಕಲ್ಲ ಊಟದವರೆ/ ಅದ್ಕೆ ಅಂತಾನ್ ಪುಟ್ಟ/ ದೇವರಿಗೆ ಅಸಂಖ್ಯ ನಾಮಗಳು. ಅವೆಲ್ಲ ನಾಮಾವಳಿ ಪಠಿಸಿದ ನಂತರವೇ ಊಟ. ದೇವರು ಒಂದೇ ಇದ್ದರೂ ಅಸಂಖ್ಯ ನಾಮಗಳಿರುವ ರಹಸ್ಯವನ್ನು ಅತ್ಯಂತವಾಗಿ, ಮನರಂಜನೀಯವಾಗಿ ಹಾಗೂ ಮಗುವಿನ ತುಂಟತನದೊಂದಿಗೆ ಮೇಳೈಸಿ, ಅಭಿವ್ಯಕ್ತಿಸಿದ್ದು ಈ ಸಾಲುಗಳ ವಿಶೇಷ. ಮಗದೊಂದು ಕವಿತೆ ನೋಡಿ ‘ಭೂಮಿ ಹಲ್ವದ ಹಾಗೆ ಚಪ್ಪಟ, ಅಜ್ಜಿಯ ವಾದ/ ಇಡ್ಡಿನ ಹಾಗೆ ದುಂಡಗೆ ಅಂತ ಅಮ್ಮನ ವಾದ/ ಪುಟ್ಟನ ವಾದ ತುಂಬಾ ಸರಳ/ ಹಲ್ವದ ಹಾಗೆ ಹಲವು ಸಲ, ಲಡ್ಡಿನ ಹಾಗೆ ಕೆಲವು ಸಲ/ ನಮಗೆರಡೂ ಬೇಕಲ್ಲ/ ಹೀಗೆ, ಮಕ್ಕಳ ಜಾಣತನವು ಚಾಣಾಕ್ಷತನವಾಗಿ, ತುಂಟತನದಲ್ಲಿ ವ್ಯಕ್ತವಾಗುವ ಪರಿ, ಕವಿತೆ ರಚನೆಯ ಕೌಶಲ.

ವೃದ್ಧರಲ್ಲಿ ಮಗು-ಮಾತು: ದೊಡ್ಡವರಿದ್ದೂ ಮಕ್ಕಳಿಗಾಗಿ ಕವಿತೆ ಬರೆಯುವ ಮೃದುತ್ವವನ್ನು ತಮ್ಮ ವ್ಯಕ್ತಿತ್ವದೊಳಗೆ ಪ್ರಜ್ಞಾಪೂರ್ವಕವಾಗಿ ತುಂಬಿಕೊಳ್ಳುವ ಕವಿ ಕೆ.ವಿ.ತಿರುಮಲೇಶರ ಮನೋಜಗತ್ತು, ಕೇವಲ ಸಂಕಲ್ಪದ ಪರಿಣಾಮವಲ್ಲ; ಬದಲಾಗಿ, ಅದು, ವಿದೇಶಿಗರಿಗೆ ಕನ್ನಡ ಕಲಿಸುವ ಅಗತ್ಯ ಹಾಗೂ ಅನಿವಾರ್ಯ ಸ್ಥಿತಿಯ ಪರಿಣಾಮ. ತಮಗೆ ಬಂದೊದಗಿದ ಇಂತಹ ಸಂದರ್ಭದ ಪ್ರಯೋಜನವನ್ನು ಭಾವಪರವಶವಾಗಿ ಸ್ವೀಕರಿಸಿ, ಅಲ್ಲಿಯ ಅನುಭವದ ಎಲ್ಲ ಬಗೆಯ ಬಣ್ಣಗಳನ್ನು ಎಚ್ಚರದ ಸ್ಥಿತಿಯಲ್ಲಿ ವ್ಯಾಖ್ಯಾನಿಸುವ ಸಾಮರ್ಥ್ಯ. ಮಕ್ಕಳ ಮನಸ್ಸಿನ ಭಾವ ಕೊಳದಲ್ಲಿ ಮುಳುಗುವುದು, ಸೂಕ್ಷ್ಮವಾಗಿ ಕಲ್ಪಿಸಿ, ಅನುಭವಿಸುವುದು, ಮೇಲೆದ್ದು ದಂಡೆಯ ಮೇಲೆ ಕುಳಿತು ಬರೆಯುವಾಗ, ಆ ಭಾವಕೊಳದಲ್ಲಿ ತಾನು ಅನುಭವಿಸಿದ ಭಾವಕೋಶದ ಸ್ವರೂಪ-ಸ್ವಭಾವದ ವಿಕೃತಿಯಾಗದಂತೆ ಅಕ್ಷರಕ್ಕಿಳಿಸುವ ಎಚ್ಚರ…ಮತ್ತೇ ಮುಳುಗುವುದು ಮತ್ತೇ ಎದ್ದು ಬರೆಯುವುದು…ಇಂತಹ ಶ್ರದ್ಧೆಯು ಉತ್ತಮ ಕಾವ್ಯದ ಮೂಲವಾಗುತ್ತದೆ. ಅನುಭವ, ಕಲ್ಪನಾ ಸಾಮರ್ಥ್ಯ, ಭೇದ ಗುರುತಿಸುವ ಸೂಕ್ಷ್ಮತೆ, ಭಾವಪರವಶತೆ, ತಲ್ಲೀನತೆ.. ಇಂತಹ ಧನಾತ್ಮಕ ಅಂಶಗಳನ್ನು ಎಷ್ಟೊಂದು ಪ್ರಭಾವಶಾಲಿ-ಪರಿಣಾಮಕಾರಿಯಾಗಿ ಈ ದೊಡ್ಡ ಕವಿಗಳು ಬಳಸಿಕೊಂಡು ಮಕ್ಕಳಿಗಾಗಿ ಕವಿತೆ ರಚಿಸಿದ್ದಾರೆಂಬುದರ ಸೂಚಕ. ಇಂತಹ ಮನೋಪ್ರಕ್ರಿಯೆಯನ್ನು ಕವಿ ತಿರುಮಲೇಶ್ ಅವರಲ್ಲಿ ಕೆಲಸ ಮಾಡಿದ್ದು, ಕವಿತೆಗಳ ಪರಿಣಾಮಕತೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂಬುದನ್ನು ಗಮನಿಸಬಹುದು.

ಬತ್ತಬಾರದು ಒರತೆ: ‘ಮಕ್ಕಳ ಕವಿತೆಗೆ ಕನ್ನಡ ಸಾಹಿತ್ಯದಲ್ಲಿ ಇಲ್ಲದಿದ್ದರೂ ಕೊರತೆ, ಬತ್ತಬಾರದು ಒರತೆ’ ಎಂದು ಕವಿ ತಿರುಮಲೇಶ್, ಮಕ್ಕಳಿಗಾಗಿ ಕವಿತೆಗಳನ್ನು ಬರೆಯುವ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಈ ಉದ್ದೇಶ, ಅವರ ಅಧ್ಯಯನ- ಅನುಭವ ಜನ್ಯವೋ ಹೇಳುವುದು ಕಷ್ಟ. ಆದರೆ, ಯಾವುದೇ ಉದ್ದೇಶ ಸಾಧನೆಗೆ ಬಹುತೇಕ ವೇಳೆ ಅಪ್ರಜ್ಞಾಪೂರ್ವಕ ಪ್ರೇರಣೆಯೊಂದಿರುತ್ತದೆ ಎಂಬುದು ಮನೋವಿಜ್ಞಾನ. ಕವಿ ತಿರುಮಲೇಶರೇ ಹೇಳುವಂತೆ ‘ಅಮೆರಿಕೆಯಲ್ಲಿರುವಾಗ ನನ್ನ ಅಸ್ಮಿತೆಯನ್ನು ಕಾಪಾಡಿದ್ದು ಕನ್ನಡ ಭಾಷೆ. ಕನ್ನಡ ಭಾಷೆಯ ಬಗ್ಗೆ ಯೋಚಿಸಿದ್ದು, ಚಿಂತಿಸಿದ್ದು, ಕನಸಿದ್ದು, ‘ಆದಿಕಾವ್ಯ’ವಾಗಿ ರೂಪುಗೊಂಡಿದೆ.’ ಎಂಬುದು. ಈ ಮಾತು ಗಂಭೀರ ಸಾಹಿತ್ಯ ಚಿಂತನೆಗೂ ಅನ್ವಯಿಸುತ್ತದೆ. ಆದರೆ, ಅವರ ಮನಸ್ಸು, ಮಕ್ಕಳ ಸಾಹಿತ್ಯ ಸೃಷ್ಟಿಯತ್ತ ವಾಲಿದ್ದು ಅಧ್ಯಯನ ಯೋಗ್ಯವೇ.‘ ಬಹುಶಃ, ಮಕ್ಕಳ ಸಾಹಿತ್ಯವು ಮಕ್ಕಳಿಗಾಗಿ ಮಾತ್ರವಲ್ಲ; ದೊಡ್ಡವರಿಗೂ ಮುದ ನೀಡುವಂತಹವು. ಈ ಕಾವ್ಯಗಳು ಬಹುಪಾಲು ಆಡುಮಾತಿನ ಸಹಜ ಲಯದಲ್ಲಿರುತ್ತವೆ’ ಎಂಬ ಅವರ ಅಭಿಪ್ರಾಯವೂ ‘ಸರಣಿ ರೂಪದಲ್ಲಿ ‘ಆದಿಕಾವ್ಯ’ವಾಗಿ ಧುಮುಕಲು ಪ್ರೇರೇಪಿಸಿರಬಹುದು.

ಮತ್ತೇ ಅವರೇ ಹೇಳುವಂತೆ ‘ಕಾವ್ಯವೆಂದರೆ, ಕಾಮನಬಿಲ್ಲಿನ ಹಾಗೆ, ಅಲ್ಲಿ ಯಾವ ಬಣ್ಣ ಹೆಚ್ಚು..?, ಯಾವುದು ಕಡಿಮೆ..? ಯಾರಿಗೆ ಖುಷಿ ಕೊಡುತ್ತದೆ…? ಯಾರಿಗೆ ನೋವು ಕೊಡುತ್ತದೆ…? ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ, ಕಾವ್ಯದಲ್ಲಿ ಇದು ಮಹಾಕಾವ್ಯ, ಇದು ಮಕ್ಕಳ ಕಾವ್ಯ, ಪ್ರತಿಭಟನೆಯ ಕಾವ್ಯ, ಭಕ್ತಿ ಕಾವ್ಯ, ಸಮಾಜಮುಖಿ ಕಾವ್ಯ ಎಂದು ಹೇಲಲು ಬರುವುದಿಲ್ಲ. ಆ ವಿಭಾಗೀಖರಣ ಕೇವಲ ಅಧ್ಯಯನಕ್ಕಾಗಿಯೇ ಹೊರತು ಅದರ ಸ್ವಭಾವ ಗುಣಗಳಿಂದಲ್ಲ’ ಎಂಬ ವಿಚಾರವೂ, ಮಕ್ಕಳಿಗಾಗಿ ಸಾಹಿತ್ಯ ರಚಿಸುವ ಪ್ರೇರಣೆಯೂ ಆಗಿರಬಹುದು. ಊಹೆಗಳು ಏನೇ ಇರಲಿ; ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ರಚನೆಯು ಅಭಿಮಾನ ಪಡುವಷ್ಟಲ್ಲದಿದ್ದರೂ ವೇಗ ಪಡೆಯುತ್ತಿರುವ ಸಂದರ್ಭದಲ್ಲಿ, ಉತ್ತಮ ಮಾದರಿಯಾಗಿ, ಅನುಕರಣೀಯವಾಗಿ, ಪ್ರಯೋಗಶೀಲ ಮನಸ್ಸಿಗೆ ಪ್ರೇರಣೆಯಾಗಿ ಕವಿ ತಿರುಮಲೇಶರ ‘ಆದಿಕಾವ್ಯ’ದ 10 ಸಂಕಲನದ ಈ ಕವಿತೆಗಳು ಓದುಗರನ್ನು ತಲುಪಿವೆ.

ಅರ್ಥಪೂರ್ಣ ಮುನ್ನುಡಿ: ‘ಆದಿಕಾವ್ಯ’ದ ಎಲ್ಲ 10 ಸರಣಿ ಸಂಕಲನಕ್ಕೆ ಮುನ್ನುಡಿ ಬರೆದ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲರು, ಇಲ್ಲಿಯ ಕವಿತೆಗಳನ್ನು ತಿಳಿಯಲು ಕೆ.ವಿ. ತಿರುಮಲೇಶರ ವ್ಯಕ್ತಿತ್ವ ವಿಶೇಷತೆಗಳಿಗೆ ಮೊರೆ ಹೋಗಿದ್ದು ಸಹಜವೇ ಆಗಿದೆ. ಅವರು ಹೇಳುವಂತೆ;

  1. ಚಿಕ್ಕ ಪುಟ್ಟ, ಯಕಶ್ಚಿತ್ ಸಂಗತಿಗಳಲ್ಲೂ ವಿಶೇಷತೆಯನ್ನು ಕಾಣುವ ಗುಣ.

  2. ತಿರುಮಲೇಶರ ಈವರೆಗಿನ ಕವಿತೆಗಳೊಂದಿಗೆ ‘ಆದಿಕಾವ್ಯ’ ಕವಿತೆಗಳನ್ನು ಹೋಲಿಸಬೇಕಿಲ್ಲ. ಅವನ್ನು ಕವಿ ವ್ಯಕ್ತಿತ್ವದ ಹಿನ್ನೆಲೆಯಲ್ಲೇ ನೋಡಬೇಕು.

  3. ಬೀಚಿ, ಡಿವಿಜಿ ಅವರಿಗೆ ಕ್ರಮವಾಗಿ ತಿಮ್ಮ, ಮಂಕುತಿಮ್ಮ ಸಿಕ್ಕಹಾಗೆ ತಿರುಮಲೇಶರಿಗೆ ‘ಪುಟ್ಟ’ ಸಿಕ್ಕಿದ್ದು,ಮಕ್ಕಳಿಗೆ ಅಂತ ಅಂದೊಕೊಳ್ಳಬಹುದಾದರೂ ಇಲ್ಲಿಯ ಕವಿತೆಗಳು ದೊಡ್ಡವರಿಗಾಗಿಯೂ ಇವೆ.

  4. ಮಕ್ಕಳಿಗೆ ಮುದ ನೀಡುವ ಹಾಸ್ಯ. ಮನರಂಜನೆ, ವ್ಯಂಗ್ಯ, ವಿಡಂಬನೆಯ ಹಾಸಿನಲ್ಲಿ ಹಾಗೂ ತೋಂಡೀ ಪರಂಪರೆಯಲ್ಲಿಯ ಜನಪದ ಮಾದರಿಯ ಕವಿತೆಗಳಿವೆ.

  5. ಬದಲಾಗುತ್ತಿರುವ ಹೊಸ ಸಂವೇದನೆಗಳಿಗೆ ಜನಪದ ಮಾದರಿಯ ಕವಿತೆಗಳು ಎಷ್ಟೊಂದು ಒಗ್ಗಿಕೊಳ್ಳುತ್ತವೆ ಮತ್ತು ನವೋದಯ ಕವಿಗಳು ನೀಡಿದ ಮಾದರಿಗಳಿಂದಲೂ ಬೇರೆ ಸಾಧ್ಯತೆಗಳ ಅಗತ್ಯ ಕಂಡರೆ ಸಹಜ.

ಹೀಗೆ… ‘ಆದಿಕಾವ್ಯ’ ಕವಿತೆಗಳ ಸ್ವರೂಪ-ಸ್ವಭಾವಗಳ ಹಿನ್ನೆಲೆಯಲ್ಲಿ, ಮಕ್ಕಳ ಸಾಹಿತ್ಯ ರಚನೆಯ ವಿವಿಧ ಮಾದರಿ-ಸಾಧ್ಯತೆಗಳ ಕುರಿತು ಈ ಮುನ್ನುಡಿಯ ಮಾತುಗಳು ಅರ್ಥಪೂರ್ಣ ಜಿಜ್ಞಾಸೆಯನ್ನೂ ಹುಟ್ಟುಹಾಕುತ್ತವೆ.

(ಮುದ್ರಣ: 2022, ಅಭಿನವ ಪ್ರಕಾಶನ, ಬೆಂಗಳೂರು)

ಪುಸ್ತಕಗಳ ಕಿರುಪರಿಚಯಕ್ಕೆ ಇಲ್ಲಿ ಕ್ಲಿಕ್ಕಿಸಿ:

1.ಚಿಕಣಿ ರಾಜ, ಆದಿಕಾವ್ಯ-1
2. ಓಡೋ ಪುಟ್ಟಾ ಓಡೋ, ಆದಿಕಾವ್ಯ-2
3 ಬೀಸಿದರೆ ಉದುರಬೇಕು ನನ್ನತ್ರ ಹೂ ಹಣ್ಣು ನಕ್ಷತ್ರ!, ಆದಿಕಾವ್ಯ-3

4 ನಂಬಿ ಕೆಟ್ಟವರಿಲ್ಲ ಪುಟ್ಟನ, ಆದಿಕಾವ್ಯ-4
5 ನಾನೀದ್ದೀನಲ್ಲ ಅಂತಾನ್ ಪುಟ್ಟಾ, ಆದಿಕಾವ್ಯ-5
6 ನೆನೆ ಪಟ್ಟ ನೆನೆ, ಆದಿಕಾವ್ಯ-6
7 ಅಟ್ಟದಲ್ಲೇನಿದೆಯೊ ಪುಟ್ಟನಿಗೇ ಗೊತ್ತು!, ಆದಿಕಾವ್ಯ-7
8 ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ?, ಆದಿಕಾವ್ಯ-8
9 ಮೆಟ್ರೋದಲ್ಲಿ ಇಲಿ, ಆದಿಕಾವ್ಯ-9
10 ಓ ಲಲ (ಮಕ್ಕಳ ಕವನ ಸಂಕಲನ), ಆದಿಕಾವ್ಯ-10

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...