'ಅರ್ಥ'ವಾಯಿತು 'ಅಪ್ಪಾ'

Date: 12-05-2022

Location: ಬೆಂಗಳೂರು


'ಬಾಲ್ಯ-ಯೌವ್ವನ-ಮುಪ್ಪು ಅನ್ನದೆ, ಉಪ್ಪು-ಹುಳಿ-ಖಾರ-ಸಿಹಿಯ ಹದವುಳ್ಳ ಪಾಕಗಳು ಜೀವಿತದುದ್ದಕ್ಕೂ ನಮ್ಮೊಂದಿಗೇ ಇರುತ್ತವೆ. ರುಚಿಗೆ ತಕ್ಕಷ್ಟನ್ನು ಬೆರೆಸಿ ಕುದಿಸಿ ಬೇಯಿಸಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆಯಾ ದೇಹ-ಮನಸ್ಸಿನದ್ದು' ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಬದುಕಿನ ಅರ್ಥಗಳ ಜೊತೆಗೆ ಬಾಲ್ಯದ ಪಯಣಗಳ ಕುರಿತು ವಿಶ್ಲೇಷಿಸಿದ್ದಾರೆ.

ತೇಲುತ್ತಾ, ಕುಣಿಯುತ್ತಾ ಕನಸುಗಳನ್ನು ಕಾಣುವ ಬಾಲ್ಯದ ಕಣ್ಣುಗಳಿಗೆ ಆಯಾಸವೆಂಬುದೇ ಇರುವುದಿಲ್ಲ. ಕಾಣುವುದೆಲ್ಲವುಗಳಲ್ಲೂ ಬೆರಗು. ನೋಡಲು ಬಯಸುವುದಷ್ಟೂ ವರ್ಣಮಯ ಹೂ-ಚಿಟ್ಟೆಗಳನ್ನೇ. ಅವೆಲ್ಲವೂ ಅರ್ಥವಾಗುವಂತಹುವುಗಳೋ? ಹಾಗಂತ ಕನಸನ್ನು ಕಾಣುವ ಕಣ್ಣುಗಳಿಗೂ ಗೊತ್ತಿರುವುದಿಲ್ಲ. ಆದರೆ 'ರಂಗ್ ಭೀ ರಂಗೇ ಚಾದರ'ಗಳು ಒಂದರ ಮೇಲೊಂದರಂತೆ ಹಾರಿಕೊಂಡು ಬರುತ್ತಲಿರುತ್ತವೆ. ಬಣ್ಣದ ಗಾಳಿಪಟ ಮೇಲಕ್ಕೇರಿ ಹಾರಾಡಿ, ಸರಕ್ಕನೆ ನೆಲಕ್ಕೊರಗಿಯೂ ಬಿಡುತ್ತದೆ. ದೇಹ-ಮನಸ್ಸುಗಳಿಗೆ ಹಾರುವುದಕ್ಕೆ ಯಾವ ಕೊರತೆಯೂ ಇರುವುದಿಲ್ಲ. ನಾವು ನೋಡುವ, ಚಿಂತಿಸುವ, ವ್ಯವಹರಿಸುವ, ಬೆಸೆಯುವ, ಹೆಣೆಯುವ, ನೂಲುವ, ಕೆಡಹುವ, ಕನವರಿಸುವ ಎಲ್ಲಾ ಕ್ರಿಯೆಗಳ ಮೊದಲ ಚಿತ್ರೀಕರಣ ನಡೆಯುವುದು ಮನಸ್ಸಿನಲ್ಲಿ. ವಿಷಯವನ್ನು ವಿಶುವಲೈಸ್ ಮಾಡುವ ಭಿನ್ನ ರೀತಿಗಳಿರುತ್ತವೆ. ಕನಸುಗಳು ವಿಶುವಲ್ ಸ್ಟ್ರೆಂಗ್ತ್ ಅನ್ನು ಹೆಚ್ಚಿಸುತ್ತವೆ. ವಿಭಿನ್ನ ಹಾದಿಗಳು ಹೊರಳುವುದು ಕೂಡ ಕನಸಿನ ಲೋಕದಲ್ಲೇ. ಬಾಲ್ಯ-ಯೌವ್ವನ-ಮುಪ್ಪು ಅನ್ನದೆ, ಉಪ್ಪು-ಹುಳಿ-ಖಾರ-ಸಿಹಿಯ ಹದವುಳ್ಳ ಪಾಕಗಳು ಜೀವಿತದುದ್ದಕ್ಕೂ ನಮ್ಮೊಂದಿಗೇ ಇರುತ್ತವೆ. ರುಚಿಗೆ ತಕ್ಕಷ್ಟನ್ನು ಬೆರೆಸಿ ಕುದಿಸಿ ಬೇಯಿಸಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆಯಾ ದೇಹ-ಮನಸ್ಸಿನದ್ದು.

ಬಣ್ಣಗಳನ್ನೇ ಕಾಣದ ಕಪ್ಪು-ಬಿಳುಪಿನ ಲೋಕದಲ್ಲಿ ಕನಸುಗಳ ವಿಚಾರವಾಗಿ ಆಯ್ಕೆಯ ಅಂಶವೇ ಇರುವುದಿಲ್ಲ. ಯಾವುದು ಸಹ್ಯ ಎನ್ನುವ ಸುಳಿವೂ ಕೂಡ ಸಿಗುವುದಿಲ್ಲ. ವರ್ಣ ತಂತುಗಳಿಲ್ಲದ ಕಪ್ಪು-ಬಿಳುಪಿಗೆ ನೆಲ ಮತ್ತು ಆಗಸದ ನಡುವಿನ ಅಂತರ. ನವಿರನ್ನು ಕಾಣುವ ಹಂಬಲ, ಸೊಬಗಿನ ಬೆರಗನ್ನು ಅನುಭವಿಸುವ ಕಾತರ ಬಾಲ್ಯದಲ್ಲಿ. ವ್ಯತ್ಯಸ್ತವೂ, ಭಿನ್ನವೂ ಆಗಿರುವ ಕಾಲ ಬಾಲ್ಯದ್ದು. ಕೆಲವರ ಬಾಲ್ಯವು ನೋವುಗಳನ್ನು ಹೊದ್ದು ಮಲಗಿರುತ್ತಿದ್ದರೆ; ಇನ್ನು ಕೆಲವರ ಬಾಲ್ಯವು ಮಕರಂದವನ್ನು ಚೆಲ್ಲುವಂತಿರುತ್ತಿತ್ತು. ಸಮಪ್ರಮಾಣದ ಬಾಲ್ಯವನ್ನು ನನ್ನ ಜಮಾನದವರು ಕಂಡವರಲ್ಲ. ಕೇಳಿದವರೂ ಅಲ್ಲ. ಆದರೆ ಕನಸು ಕಾಣುವ ಕಣ್ಣುಗಳು ರೆಪ್ಪೆ ಮುಚ್ಚಿದ್ದೇ ಇಲ್ಲ. ಜೀವ ಹಿಂಡುವ ನೋವಿದ್ದರೂ ಮನಸ್ಸು-ಹೃದಯಗಳಲ್ಲಿ ಮಡುಗಟ್ಟಿ ಕುಳಿತ ಆಸೆ-ಆಕಾಂಕ್ಷೆಗಳು ಕಾಮನೆಯ ಅರಳುವಿಕೆಯನ್ನು ಮಾತ್ರ ಕಮರಿಸುತ್ತಿರಲಿಲ್ಲ. ತೆರೆದ ಕಣ್ಣುಗಳಲ್ಲಿ ಭಿನ್ನ ರುಚಿ, ವಾಸನೆಗಳುಳ್ಳ ಕನಸಿನ ತೇರು ತೇಲಿ ಸಾಗುತ್ತಲೇ ಇತ್ತು.

ಹಾಗೆ ಕಂಡ, ಕಾಣುವ ಕನಸುಗಳಲ್ಲಿ ಅದೆಷ್ಟು ನನಸಾಗಿವೆ ಎಂದು ಕೇಳಿದರೆ ಸಿದ್ಧ ಉತ್ತರವಿಲ್ಲ. ಆದರೆ ಕಾಣುವ ಕನಸುಗಳಿಗೆ ನೀರೆರೆಯುವವರು ಜೊತೆಗಿದ್ದರು. ಜಾರಿ ಬೀಳಬಹುದು ಎಂಬ ಭಯದಿಂದ ಗಟ್ಟಿಯಾಗಿ ಕೈ ಹಿಡಿದುಕೊಂಡಿದ್ದರು. ರಕ್ತ ಬಸಿದು ಜೀವ ಬೆಚ್ಚಗಿರಲಿ ಎಂದು ಸೆರೆಗೊಳಗೆ ಸುತ್ತಿಕೊಂಡಿದ್ದರು. ವಕ್ರದೃಷ್ಟಿಗೆ ಬೀಳದಿರಲೆಂದು ತೆರೆದೆದೆಯ ದಟ್ಟ ಪೊದೆಯೊಳಗೆ ಬಚ್ಚಿಟ್ಟಿದ್ದರು. ಹೀಗೆ ಅವರವರ ಮುಷ್ಠಿಯೊಳಗೆ ಎಷ್ಟು ಹಿಡಿಯುತ್ತದೋ ಅಷ್ಟಷ್ಟನ್ನೇ ಭದ್ರವಾಗಿಸಿಕೊಂಡು ಜತನದಿಂದ ಕಾಪಿಟ್ಟರು. ತಮ್ಮ ಹೊಟ್ಟೆಗೆ ತಣ್ಣಿರ ಬಟ್ಟೆಯಾದರೂ ಸರಿಯೇ, ಹಸಿದ ಕಂದನ ಹೊಟ್ಟೆಗಂತೂ ಹಿಟ್ಟು ತಯಾರಾಗಿರುತ್ತಿತ್ತು. ಅಷ್ಟಕ್ಕೇ ಅರೆಹೊಟ್ಟೆ ಹೊತ್ತ ಹೆತ್ತೊಡಲಿಗೆ ತುಸು ಸಮಾಧಾನ. ಕಂದನು ಕಾಣುವ ಸಾವಿರ ಕನಸುಗಳಲ್ಲಿ ಒಂದನ್ನಾದರೂ ನನಸಾಗಿಸಿದೆವಲ್ಲ..ಕನಸು ಕಾಣುವುದಕ್ಕೆ ಇನ್ನಷ್ಟು ಶಕ್ತಿ ತುಂಬಿದೆವಲ್ಲ.. ಎಂಬ ತೃಪ್ತಭಾವ-ತಣ್ಣೀರ ಬಟ್ಟೆ ಕಟ್ಟಿಕೊಂಡ ಜೀವಗಳದ್ದು. ಸುಡು ಬಿಸಿಲಿನ ಬೇಗೆಗೆ, ಕೊರೆಯುವ ಚಳಿಗೆ, ಜಡಿ ಮಳೆಗೆಲ್ಲಾ ಪೊರೆಯುವ ಜೀವಗಳು ಲೆಕ್ಕಿಸಿದ್ದೇ ಇಲ್ಲ. ಏನಿದ್ದರೂ ಅರಳುತ್ತಿರುವ ಕಣ್ಣುಗಳು ಕಾಣುವ ಕನಸುಗಳಿಗೆ 'ಅರ್ಥ' ಬರೆಯಬೇಕು ಎಂಬುದೊಂದೇ ಹಠ-ಗುರಿ.

ನೆನಪುಗಳು ಎಂದೂ ಮುರಿಯದ ಕಾಮನಬಿಲ್ಲು. ಮತ್ತೆಮತ್ತೆ ಕಠಿಣವನ್ನು ಮೆದುವಾಗಿಸುವ, ನೋವನ್ನು ನಲಿವಾಗಿಸುವ, ದುಃಖವನ್ನು ಸಂತಸವಾಗಿಸುವ ಶಕ್ತಿ ನೆನವರಿಕೆಗಳದ್ದು. ಅಂದುಕೊಂಡಂತಹ ಬದುಕು ಯಾರಿಗೂ ದೊರಕುವುದಿಲ್ಲ. ದೊರಕಿಯೂ ಇಲ್ಲ. ಒಂದೊಮ್ಮೆ ದೊರಕಿದೆ ಎಂದಾದರೆ 'ಲಾಕೋ ಮೆ ಏಕ್' ಅನ್ನುವ ಭಾಗ್ಯದಂತೆ. ಬಹುತೇಕ ಜೀವಗಳು ತೋರಿಕೆಗೆ ಬದುಕನ್ನು ಕಟ್ಟಿ ಏಗುವವುಗಳೇ. ಮನಸ್ಸಮಾಧಾನಕ್ಕೆ, ಆತ್ಮಖುಷಿಗೆ ಆಡಿಕೊಳ್ಳುವ ಮಾತಾಗಿ- 'ನಾನಂದುಕೊಂಡ ರೀತಿಯ ಬಾಳು ನನ್ನದಾಗಿದೆ'ಎಂಬ ಸ್ವರ ಅಲ್ಲಲ್ಲಿ ಕೇಳುವುದಿದೆ. ಆದರೆ ಒಳಗಿನ ಸ್ವಗತದ ಧಾಟಿಯೇ ಬೇರೆ ರೀತಿಯದ್ದು. ಆತ್ಮನಿವೇದನೆಯ ಕ್ಷಣವದು. ಹೋರದೆ ಹೆರಲಾಗದು. ಹೆತ್ತ ಮೇಲೆ ಹೋರದಿರಲಾಗದು ಎಂಬಷ್ಟರಮಟ್ಟಿಗೆ ಒಂದಕ್ಕೊಂದು ಬೆಸೆದುಕೊಂಡಿರುವ ಬಾಳ 'ಅರ್ಥ' ಹೀಗೂ ಸಂಚರಿಸುವುದುಂಟು.

ನನಗಾಗ ಏಳು ವರ್ಷ. ಕಾಣುವ ಕನಸುಗಳಿಗೆ ಬೇಲಿ ಹಾಕುವವರೇ ಇರಲಿಲ್ಲ. ಬೆಳೆದ ಪರಿಸರ, ಹುಟ್ಟಿದ ಮನೆತನ, ಹಿನ್ನಲೆ, ಪರಂಪರೆ ಎಲ್ಲವೂ ಇರುವಂತೆ ಇರಲಾಗದಂತಿರಿಸಿದ ಹೊತ್ತು-ಅದು ಕಾಲನ ಕರಾಮತ್ತು. ಅದೊಂದು ತ್ರಿಶಂಕು ಸ್ಥಿತಿ. ಮತ್ತದು ಕಾಲದ ಗತಿಯೂ ಹೌದು. ಜೊತೆಗೆ ಮಿತಿಯನ್ನು ಅಳೆಯುವ ಸಂಧಿಕಾಲ ಬೇರೆ. ಅಂತಹ ಗಳಿಗೆಗೆ ಎದೆಯೊಡ್ಡಿ ನಿಲ್ಲುವವನೊಬ್ಬ ಇರಬೇಕಾಗುತ್ತದೆ. ಆದರೆ ಅದೆಲ್ಲರಿಗೂ ದಕ್ಕುವ ಯೋಗವಲ್ಲ. ಮತ್ತದನ್ನು ದಕ್ಕಿಸಿಕೊಳ್ಳುವ ತಾಕತ್ತೂ ಇರುವುದಿಲ್ಲ. ಈ ಎರಡೂ ಗತಿ-ಮಿತಿಯನ್ನು ಸ್ವೀಕರಿಸಿ ನಿಂತವರು-'ಅಪ್ಪ' ಪದವನ್ನು ಅರ್ಥಪೂರ್ಣವಾಗಿಸಿದ ನನ್ನ 'ಪಪ್ಪಾ'. ಒಳಗೆ ಬೇಯುವ ಸಂಕಟ, ಕುದಿಯುವ ಸಂತಸ, ಕಡಿಯುವ ಸಾಂತ್ವನಗಳಲೆಲ್ಲವನ್ನೂ ಬೆನ್ನಿಗೆ ಕಟ್ಟಿಕೊಂಡು, ತಾನು ತನ್ನದು ಎನ್ನದೆ ತನ್ನವರೆಲ್ಲರನ್ನೂ ಪೊರೆದವನೀತ. ಅಂತಹ ಕುದಿಯೊಳಗೆ ಆತ ಬೇಯುತ್ತಿರಬೇಕಾದರೆ ಕುಡಿಯೊಡೆದವನು ನಾನು.

ಮಡುಗಟ್ಟಿ ಹರಳುಗಟ್ಟಿದ ವೇದನೆಗಳು ಒಳಗೊಳಗೇ ಸಾಂತ್ವನವನ್ನು ಆಡಿಕೊಂಡರೆ;ಹೆರಲಾಗದ ಭಾವಗಳಿಗೆ ಅಕ್ಷರಗಳು ರೂಪುಕೊಟ್ಟವು. ಪರಿಣಾಮ 'ಅರ್ಥ' ಹೊಮ್ಮಿಯೇ ಬಿಟ್ಟಿತು. 'ತ್ರಿಯಂಬಕ'ನಾಗಿ ದೊಡ್ಡಪ್ಪ ಎ.ಈಶ್ವರಯ್ಯ ತಮ್ಮ ಮಸೂರದೊಳಗೆ ನನ್ನನ್ನು ಸೆರೆಹಿಡಿದರೆ; ಪಪ್ಪಾ,ತನ್ನ ಲೇಖನಿಯಲ್ಲಿ ತಮ್ಮ ಭಾವದೆಳೆಗಳನ್ನು ಕಡಿದಿಟ್ಟರು. 'ತುಷಾರ' ಮಾಸಪತ್ರಿಕೆಯಲ್ಲಿ ಪಪ್ಪನ 'ಅರ್ಥ' ಕವನ ಪ್ರಕಟಗೊಂಡಾಗ ಆ ಕಾಲದ ಬಹುತೇಕ ಒಡಲುಗಳ ಕಣ್ಣಂಚಿನಲ್ಲಿ ಪಸೆ ಒಡೆದಿತ್ತು. ಆ ಸಮಯ ಹಾಗಿತ್ತು. 'ಶ್ಯಾಮಲಾ ಮಾಧವ', ನನ್ನ ಪ್ರೀತಿಯ 'ಬೇಬಿ ಆಂಟಿ' ಅಂತೂ 'ಅರ್ಥ'ದ ಮಗು ಅಂತಲೇ ನನ್ನನ್ನು ಗುರುತಿಸುವುದು. ಪದರು ಪದರುಗಳ ನಡುವೆ ಅದೆಲ್ಲೋ ಆಳದಲ್ಲಿ ಹುದುಗಿದ್ದ ನೆನಪನ್ನು ಹುಡುಕಿ, ಹೆಕ್ಕಿ ತೆಗೆದದ್ದು ಬಂಧು 'ಡಾ.ತೇಜಸ್ವಿ ವ್ಯಾಸ್'-ಇಷ್ಟೆಲ್ಲಾ ಬರೆಯಲು ಕಾರಣಕರ್ತ ಆತನೇ.

ಅನಿವಾರ್ಯ ದಿಸೆಗಳಲ್ಲಿ ದಿಕ್ಕುಗಳನ್ನು ಹುಡುಕಿಕೊಂಡು 'ಅರ್ಥ' ಕಲ್ಪಿಸಿಕೊಳ್ಳುವ ಪ್ರಮೇಯ ಇಂದಿಲ್ಲ. ಕಾಲವನ್ನು ನೂಕಿ ಸಾಗುವ ಭಾವನೆಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳೂ ಇಲ್ಲ. ಆದರೆ ಕಣ್ಣಿನಳತೆಯ ಕನಸುಗಳ ಆಳ-ಅಗಲಗಳು ಇಂದಿಗೂ ಬೊಗಸೆ ಮೀರಿದ ಅಕ್ಕರೆಗಳೇ. ಕನಸುಗಳು ಯಥೇಚ್ಛವಾಗಿ ಹೆಣೆದುಕೊಂಡಿದ್ದ ಆ ದಿನಗಳಲ್ಲಿ ಭಾವಗಳ ಚಡಪಡಿಕೆ ತೀವ್ರವಾಗಿತ್ತು. ಇಂದು ಭಾವಗಳಿವೆ ಸಾಕಷ್ಟು. ಆದರೆ ಕನಸುಗಳನ್ನು ನನಸು ಮಾಡಿಕೊಳ್ಳುವ ಹಂತದಲ್ಲಿ ಅವುಗಳು 'ಅರ್ಥ' ಕಳಕೊಂಡು ಬಿಡುತ್ತವೆ. ಹಾಗೊಮ್ಮೆ ಅಭಿವ್ಯಕ್ತಗೊಂಡು ಬೆಳೆದ ಬಂಧಗಳು ಅಂತರಂಗದ ಸೆಲೆಯೆಂದು 'ಅರ್ಥ'ವಾಗುವುದು ಭಾವದಲೆಗಳು ಎಬ್ಬಿಸುವ ಸೆಳೆತದಲ್ಲಿ.

ಗತವನ್ನು ಕೆದಕಿ ಬೆದಕಿ, ನಿಂತ ನೀರನ್ನು ರಾಡಿಗೊಳಿಸುವ ಚಾಳಿ ನನಗಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಅದರ ಅಗತ್ಯವೂ ನನಗಿಲ್ಲ. ಹೆತ್ತೊಡಲು ಪೊರೆಯಿತಲ್ಲ...ಅದಕ್ಕಿಂತ ಮಿಗಿಲಾದುದು ಇನ್ನೇನಿದೆ? ನನಗಂತೂ ನಿಮ್ಮಗಳ ಪಾಡು-ಹಾಡು 'ಅರ್ಥ'ವಾಯಿತು, ಇಷ್ಟವೂ ಆಯಿತು. ಖೇದವಂತೂ ಖಂಡಿತಾ ಇಲ್ಲ. ಅಂತಹ ನೋವಿನಲ್ಲೂ 'ಸಂತೋಷ'ನಾಗಿ ನಿಮ್ಮಿಬ್ಬರ ಜೊತೆಗಿದ್ದೆನಲ್ಲ ಎಂಬ ವಿನೀತ ಭಾವ ನನ್ನದು. ಆದರೆ ನಿಮ್ಮಗಳ ಬದುಕನ್ನು ನಾನೆಷ್ಟು ಅರ್ಥಪೂರ್ಣವಾಗಿಸಿದ್ದೇನೆ ಎಂಬುದರ ಅರಿವಿಲ್ಲ.'ಅರ್ಥ-ಆದೀತು ತಾಳು' ಅಂದಿರಲ್ಲ,ಪಪ್ಪಾ..'ಅರ್ಥ'ವಾಯಿತು.

ಈ ಅಂಕಣದ ಹಿಂದಿನ ಬರೆಹಗಳು:
ಒಳಗಿನ ಅರಳುವಿಕೆ
ನಾವೇಕೆ ಏನನ್ನಾದರೂ ಅರಸುತ್ತಿರುತ್ತೇವೆ?
ನೋವು ಹಿಂದುರಿಗಿಸಲಾರದ ಸಾಲದಂತೆ…
ಸಾವಿರ ಭಾವಗಳ ಹೊತ್ತ ಹುಡುಗಿಯ ಕತೆಗಳು
ಪ್ರೇಮಲೋಕ’ದ ಪ್ರೇಮ ಗೀತೆಗಳು…
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ದಿಗಂಬರೆಯರ ಉಭಯ ಕುಶಲೋಪರಿ...

25-05-2022 ಬೆಂಗಳೂರು

'ಕ್ಯೂಬಿಸಂನ ಕೆಲವು ಕಲಾವಿದರಂತೆ ಜೀನ್ ಮೆಟ್ಜಿಂಜರ್ ಕೂಡಾ ಆರಂಭದಲ್ಲಿ Pointilism ನಲ್ಲಿಯೂ ಆನಂತರ Fauvismನಲ್ಲಿ...

ಕಾರಂತರ ಬೆಟ್ಟದ ಜೀವ: ಕೃತಿ ಮತ್ತು ...

23-05-2022 ಬೆಂಗಳೂರು

'ಶಿವರಾಮ ಕಾರಂತರು ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮಾನವ ಪ್ರಕೃತಿಯೊಂದಿಗೆ ನಡೆಸುವ ಹೋರಾಟದ ವಿಶಿಷ್ಟ ...

ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ...

23-05-2022 ಬೆಂಗಳೂರು

'ಆತ್ಮ-ಪರಮಾತ್ಮನಾಗುವದೆಂದರೆ, ಅದು ನದಿಯಲ್ಲಿ ನದಿಬೆರೆತಂತೆ ನೈಸರ್ಗಿಕವಾದುದಾಗಿದೆ. ಅಂತರಂಗ-ಬಹಿರಂಗವೆಂಬ ಭೇದಗಳನ್...