ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು

Date: 10-07-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ವಿಮಾನಯಾನದ ಉಗಮ, ಸ್ವರೂಪ, ಪರಿಶೀಲನೆ, ತಪಾಸಣೆ ಹೀಗೆ ವಿವಿಧ ಪ್ರಕ್ರಿಯೆಯಲ್ಲಿ ಪಡೆದ ಅನುಭವಗಳನ್ನು ತಮ್ಮ ‘ಏರೋ ಪುರಾಣ’ ಅಂಕಣದಲ್ಲಿ ವಿವರಿಸಿದ್ದಾರೆ.

ವಿಮಾನ ಕಚೇರಿಯ ವೃತ್ತಿಜೀವನದಲ್ಲಿ, ನಾನು ಕೂರುವ ಡೆಸ್ಕ್ ನ ಪಕ್ಕದಲ್ಲಿ ಕಿಟಕಿಯೊಂದು ಇದ್ದ ಕೆಲವು ಕಾಲ ಸಂದರ್ಭ ಇದೆ. ವಿಮಾನ ಕಚೇರಿಯಲ್ಲಿ ಎಂದರೇನು ಯಾವುದೇ ಆಫೀಸು ಅಥವಾ ಮನೆ, ಶಾಲೆ, ಬಸ್ಸು, ರೈಲು, ಅಂಗಡಿ ಹೀಗೆ ಎಲ್ಲೇ ದಿನದ ಬಹುಭಾಗವನ್ನು ಕಳೆಯುವವರಿಗಾದರೂ ಕಿಟಕಿಯೊಂದು ಸಮೀಪದಲ್ಲಿ ಇದ್ದರೆ ಒಳಗಿನ ನಿರೀಕ್ಷಿತ ದೈನಿಕದ ಜೊತೆಗೆ ಹೊರಗಿನ ಗಾಳಿ ಬೆಳಕು ಮತ್ತೆ ಅನಿರೀಕ್ಷಿತ ಕುತೂಹಲಕರ ನೋಟಗಳು ದೊರೆಯಬಹುದು. ಇನ್ನು ವಿಮಾನ ಸಂಬಂಧಿ ವೃತ್ತಿಯಲ್ಲಿರುವವರು ಕೂರುವಲ್ಲಿರುವ ಕಿಟಕಿಯ ಹೊರಗೆ ವಿಮಾನಗಳು ಹತ್ತಿಳಿಯುವ ದೃಶ್ಯವೂ ಕಾಣಿಸುವಂತಿದ್ದರೆ, ಅಂದರೆ "ರನ್ವೇ" (ಏರುವ ಇಳಿಯುವ ಪಥ) ಮತ್ತು ನಿಲ್ದಾಣಗಳೂ ಅಲ್ಲೇ ಸಮೀಪದಲ್ಲಿ ಇದ್ದರೆ ಅದು ಕಚೇರಿಯ ಒಳಗಿನ ಅನುಭವಗಳನ್ನು ವಿಶಿಷ್ಟವಾಗಿಸುತ್ತದೆ. ಡೆಸ್ಕಿನ ಮೇಲಿರುವ ಕಂಪ್ಯೂಟರ್ ಪರದೆಯ ಮೇಲೆ ವಿಮಾನದ ಅವಯವಗಳು ಚೈತನ್ಯ ಪಡೆಯುವಾಗ ಕಿಟಕಿಯ ಹೊರಗೆ ಇಡೀ ವಿಮಾನ ಜೀವತುಂಬಿಕೊಂಡು ಓಡಿ ಹತ್ತಿ ಹಾರಿ ಇಳಿಯುವುದನ್ನು ನೋಡುವುದು ಈ ವಿಮಾನ ಸಂತತಿಯ ಬಗೆಗೆ ವಿಚಿತ್ರ ವಿಶೇಷ ಸಂವೇದನೆಗಳನ್ನು ಹುಟ್ಟಿಸುತ್ತದೆ. ಹಾಗಂತ ನಮ್ಮ ಕಚೇರಿಯ ಕಿಟಕಿಯಲ್ಲಿ ಜಗತ್ತಿನ ಇತರ ಕಿಟಕಿಗಳಂತೆಯೇ ನೆಲ ಮುಗಿಲು ಮೋಡ ಮಳೆಗಳೂ ಕಾಣಿಸುತ್ತವೆ. ಆದರೆ ವಿಮಾನಗಳು ತುಸು ಹೆಚ್ಚೇ ಗೋಚರಿಸುತ್ತವೆ. ಎಷ್ಟು ಹೆಚ್ಚು ಅಂದರೆ ಬಾನಿನಲ್ಲಿ ಹಾರಿಕೊಂಡಿರುವ ಹಕ್ಕಿಗಳಿಗಿಂತ ಜಾಸ್ತಿ ವಿಮಾನಗಳೇ ಕಣ್ಣಿಗೆ ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲ.

ಕಿಟಕಿಯ ಮೂಲಕ ಚಿತ್ರಗಳಾಗಿ ಕಣ್ಣುಗಳನ್ನು ತಲುಪುವ ಸದ್ದುಗಳಾಗಿ ಕಿವಿಗಳನ್ನು ಮುಟ್ಟುವ ವಿಮಾನಗಳು ಕಚೇರಿಯ ಆವರಣದೊಳಗಿನ ವಿಮಾನ ಪಥದಿಂದ (ರನ್ವೇ) ಆಕಾಶವನ್ನು ಸರಸರನೆ ಹತ್ತಿ ಇಳಿಯುತ್ತಿರುತ್ತವೆ. ಈ ವಿಮಾನಗಳು ಸರಾಗವಾಗಿ ಹತ್ತಿ ಇಳಿಯುವುದನ್ನು ಹೇಗೆ ಕಲಿತಿರಬಹುದು ಎಂದು ಕೆಲವೊಮ್ಮೆ ಯೋಚನೆಗೆ ಹಚ್ಚಿಸುವುದಿದೆ. ಸ್ಪಷ್ಟವಾಗಿ ಕಾಣುವ ಬಹಳವೇನೂ ಎತ್ತರದ್ದಲ್ಲದ ಎಷ್ಟು ಭಾರದ ಹೆಜ್ಜೆಗೂ ಜಗ್ಗದ ಕಬ್ಬಿಣದ ಏಣಿಯ ಮೆಟ್ಟಿಲುಗಳನ್ನು ಹತ್ತಿಳಿಯುವಾಗ ಎಡವುವುದು ಸಾಮಾನ್ಯವಾಗಿರುವಾಗ, ಗಾಳಿಯ ಕಾಣದ ಮೆಟ್ಟಿಲುಗಳ ಮೇಲೆ ಅತ್ಯಂತ ಪರಿಣಿತರಂತೆ ಸರಸರ ಹತ್ತಿಳಿಯುವ ವಿಮಾನಗಳ ಕೌಶಲವನ್ನು ಅವಕ್ಕಾಗಿ ನೋಡುತ್ತೇವೆ. ವಿನ್ಯಾಸ ತಯಾರಿ ದುರಸ್ತಿಯಲ್ಲಿ ತೊಡಗಿಕೊಂಡು ನಾವೆಲ್ಲಾ ಭಾಗವಾಗಿರುವ ಈ ವಿಮಾನ ಸಂತತಿಯ ಮರಿಗಳು ಹೀಗೆ ಕಣ್ಣೆದುರು ಓಡಾಡುವಾಗ ಮನೆಮಕ್ಕಳ ಬಗೆಗೆ ಉಕ್ಕಿಬರುವ ಮುದ್ದು ಕೊಂಗಾಟಗಳಂತೆಯೇ ಈ ಯೋಚನೆಗಳು ಇರಬಹುದು. ನಮ್ಮ ಕಂಪೆನಿಯ ಶಾಖೆಗಳು ಫ್ರಾನ್ಸ್, ಜರ್ಮನಿ ಸ್ಪೇನ್ ಗಳಲ್ಲಿ ಇರುವುದರಿಂದ, ಅಲ್ಲಿಂದ ಇಲ್ಲಿ ಬರುವುದು ಇಲ್ಲಿನವರು ಅಲ್ಲಿ ಹೋಗುವುದು ವಿಮಾನಗಳ ಮೂಲಕ ಇದೇ ರನ್ವೇ ಅಲ್ಲಿ ನಿತ್ಯವಿಧಿಯಂತೆ ನಡೆಯುತ್ತದೆ. ಆಸುಪಾಸಿನ ಕೆಲವು ಹವ್ಯಾಸಿ ವಿಮಾನ ಚಾಲಕರು ಪಾತಿದೋಣಿಯಂತಹ (ಸಣ್ಣ ದೋಣಿ) ಪುಟ್ಟ ವಿಮಾನ ತೆಗೆದುಕೊಂಡು ನಮ್ಮ ರನ್ವೇ ಬಳಸಿ ಮೇಲೆ ನೆಗೆಯುತ್ತಾರೆ. ನಮ್ಮೂರಿನ ಪೊಲೀಸರು ಮೇಲಿನಿಂದ ಹದ್ದಿನ ಕಣ್ಣಿಡಲು ಬಳಸುವ ಹೆಲಿಕಾಪ್ಟರ್ ಗೆ ಕೂಡ ನಮ್ಮ ಕಚೇರಿಯ ಆವರಣವೇ ನಿಲ್ದಾಣ. ಮತ್ತೆ ಅಪಘಾತ ತುರ್ತು ಚಿಕಿತ್ಸೆಗೆಂದು (air ambulance) ಬ್ರಿಸ್ಟಲ್ ನ ನಗರಸಭೆ ಬಳಸುವ ಹೆಲಿಕಾಪ್ಟರ್ ದಿನಕ್ಕೊಂದು ಬಾರಿಯಾದರೂ ಗಾಳಿಯನ್ನು ಕತ್ತರಿಸುತ್ತ ಇಲ್ಲೇ ಸುತ್ತುತ್ತಿರುತ್ತದೆ. ರನ್ವೇ ಸುತ್ತಲಿನ ವಿಶಾಲ ಬಯಲಿನ ಒಂದು ಮೂಲೆಯಲ್ಲಿರುವ ಸಂಗ್ರಹಾಲಯದಲ್ಲಿ ಹದಿನೆಂಟು ವರ್ಷಗಳ ಹಿಂದೆ (2003ರಲ್ಲಿ ) ಕೊನೆಯ ಹಾರಾಟ ಮುಗಿಸಿ ನಿವೃತ್ತಿಯ ನಿಟ್ಟುಸಿರು ಬಿಟ್ಟು "ಕಾಂಕರ್ಡ್" ಚಕ್ರಗಳನ್ನು ನೆಲದಲ್ಲಿ ಖಾಯಂ ಆಗಿ ಹೂತು ಒರಗಿದೆ, ಬಾಣದ ಮಂಚದ ಮೇಲೆ ಮಲಗಿದ ಇಚ್ಚಾಮರಣಿಯಂತೆ "ಕಾಂಕರ್ಡ್" ವಿಮಾನ ನೋಡಲೆಂದೇ ಬಸ್ಸು ವ್ಯಾನ್ ಗಳಲ್ಲಿ ಇಲ್ಲಿಗೆ ಪ್ರವಾಸ ಬರುವವರೂ ಇದ್ದಾರೆ. ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಹಾರುತ್ತಿದ್ದ "ಕಾಂಕರ್ಡ್"ಗೆ ನಮ್ಮ ಕಚೇರಿಯಿಂದ ಹಾರಿ ಇಳಿಯುವ ಪುಟ್ಟ ವಿಮಾನಗಳ ನಡಿಗೆ ಓಟ ವೇಗ ನೋಡಿ ಕೆನ್ನೆಯ ಚರ್ಮದ ಸುಕ್ಕಿನ ಒಳಗಿನಿಂದ ನಗೆ ಹರಿಯಬಹುದು. ರನ್ವೇ ಗೆ ಅತಿ ಹತ್ತಿರದ ಕಟ್ಟಡದ ಒಂದರಲ್ಲಿ ಕುಳಿತಿರುವ ನನಗೆ ವಿಮಾನಗಳ ಹೆಲಿಕಾಪ್ಟರ್ ಗಳ ರೆಕ್ಕೆಯ ಪಟಪಟ ಸದ್ದು ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಇಲ್ಲಿ ನಾನು ಕೆಲಸ ಮಾಡಲು ಶುರು ಮಾಡಿದ ದಿನಗಳಲ್ಲಿ ಪ್ರತಿ ವಿಮಾನ ಏರಿ ಇಳಿಯುವಾಗ ಮಾಡುವ ಸದ್ದಿಗೆ ಇದೇನು ನಮ್ಮ ಕಟ್ಟಡದ ಮೇಲೆ ಎರಗಿತೋ ಎಂದು ಹೆದರಿ ವಿಮಾನ ಇಳಿಯುವವರೆಗೂ ಕಣ್ಣು ಕಿವಿಗಳಲ್ಲೇ ಹಿಂಬಾಲಿಸುತ್ತಿದ್ದುದು ಇದೆ. ನೂರಾರು ಎಕರೆಗಳಷ್ಟಿರುವ ಕಚೇರಿಯ ಮೇಲಿನ ಬಾನಿನಲ್ಲಿ ಹಾರಾಡಿಕೊಂಡು ಬದುಕಿರುವ ಹಕ್ಕಿಗಳ ಗುಂಪಿಗೆ ಇಲ್ಲೇ ತೇಲಾಡಿಕೊಂಡಿರುವ ವಿಮಾನ ಹೆಲಿಕಾಪ್ಟರ್ಗಳೆನ್ನುವ ‘ಪಕ್ಷಿ’ ಗಳನ್ನೂ ನಾವು ಸೇರಿಸಿದ್ದೇವೆ. ಹಕ್ಕಿಗಳನ್ನು ದೂರದಿಂದ ನೋಡಿ ಕೇಳಿ ಗುರುತು ಹಿಡಿಯಬಲ್ಲ ಪಕ್ಷಿ ಶಾಸ್ತ್ರಜ್ಞರಂತೆಯೇ ವಿಮಾನಗಳ ಸದ್ದು ದೂರದ ನೋಟದಿಂದಲೇ ಇದು ಇಂತಹದ್ದು ಎಂದು ಹೇಳಬಲ್ಲವರಾಗಿದ್ದೇವೆ. ಮೊಂಡು ಮೂಗಿನವು, ಉದ್ದ ರೆಕ್ಕೆಯವು, ಡೊಳ್ಳು ಹೊಟ್ಟೆಯವು, ಅಗಲ ಬಾಲದವು ಹೀಗೆ ತರ ತರಹದ ವಿಮಾನ ಹಕ್ಕಿಗಳು! ವಿಧ ವಿಧದ ಹಕ್ಕಿಗಳ ವಿಶಿಷ್ಟ ಕೂಗಿನಂತೆ ಬೇರೆ ಬೇರೆ ತರದ ವಿಮಾನಗಳು ತಮ್ಮದೇ ಸದ್ದು ಕೇಕೆಗಳಿಂದ ಹತ್ತಿ ಇಳಿಯುತ್ತವೆ. ಹೊತ್ತಲ್ಲದ ಹೊತ್ತಿನಲ್ಲಿ ಇಳಿಯುವ, ಕಿವಿ ಹಿಡಿಯದಷ್ಟು ಸದ್ದು ಮಾಡುತ್ತಾ ಹಾರುವ ವಿಮಾನ, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹೊರಟ ವಿಮಾನ ಎನ್ನುವುದನೆಲ್ಲ ನೋಡಿ ಶುಭ ಅಶುಭಗಳ ಶಕುನ ಹೇಳುವವರೂ ನಮ್ಮಲ್ಲಿ ತಯಾರಾಗಿದ್ದಾರೆ . ಬಿಡಿ, ನಮ್ಮ ಕಲ್ಪನೆ ಏನೇ ಇದ್ದರೂ ಹಕ್ಕಿಗಳೂ ವಿಮಾನಗಳೂ ಸರಿ ಸುಮಾರಿಗೆ ಒಂದೇ ಸಂತತಿಯವು ಆಗಿ ಕಂಡರೂ ಹಕ್ಕಿಗಳಂತೂ ವಿಮಾನಗಳನ್ನು ತಮ್ಮ ಗುಂಪಿಗೆ ಎಂದೂ ಸೇರಿಸಿಕೊಳ್ಳಲಿಕ್ಕಿಲ್ಲ. ಅಥವಾ ವಿಮಾನಗಳು ಹಕ್ಕಿಗಳನ್ನು ತಮ್ಮ ಹಾರಾಟದ ಪರಮಗುರು ಎಂದೂ ಸ್ವೀಕರಿಸಲಿಕ್ಕಿಲ್ಲ .

ಮನುಷ್ಯನಿಗೆ ಹಾರಲು ಕಲಿಸಿದ್ದೇ ಹಕ್ಕಿಗಳು ಅಲ್ಲವೇ ? ಹೌದೋ ಅಲ್ಲವೋ ಎಂದು ಹುಲುಮನುಜರಾದ ನಾವು ಉನ್ನತ ಮಟ್ಟದ ಜಿಜ್ಞಾಸೆ ಮಾಡಬಹುದು, ಒಂದು ವೇಳೆ ಅಲ್ಲ ಎಂದು ತೀರ್ಮಾನಿಸಿದರೆ ಹಕ್ಕಿಗಳಂತೂ ನಂಬಲಿಕ್ಕಿಲ್ಲ. ಶತಮಾನದ ಹಿಂದೆ ಮೊತ್ತಮೊದಲ ಬಾರಿಗೆ ಆಕಾಶಕ್ಕೆ ಹಾರಲು ಯತ್ನಿಸಿದ ಸಾಹಸಿಗಳು ಕನಸುಗಾರರು, ದೊಡ್ಡ ರೆಕ್ಕೆಗಳನ್ನು ತಮ್ಮ ಎಡ ಬಲಗಳಿಗೆ ಕಟ್ಟಿಕೊಂಡು ನೆಗೆಯಲು ಯತ್ನಿಸಿದ್ದರು. ಅಂತಹವರಲ್ಲಿ ಹೆಚ್ಚಿನವರು ಹಾರಲು ಸಾಧ್ಯ ಆಗದೆ ಬಿದ್ದರು, ಮತ್ತೆ ಕೆಲವರು ತುಸು ದೂರ ನೆಗೆದು ತೇಲಿದರು. ಕೆಲವು ಕಾಲದವರೆಗೆ ಈ ಪ್ರಯತ್ನ ಮುಂದುವರಿಯಿತು ಕೂಡ. ಇವು ರೈಟ್ ಸಹೋದರರ ಯಂತ್ರಚಾಲಿತ ವಿಮಾನ ಆಕಾಶವನ್ನು ಏರುವುದಕ್ಕಿಂತಲೂ ಮೊದಲಿನ ಪ್ರಯೋಗ ಪ್ರಸಂಗಗಳು. ಒಂದು ನೈಸರ್ಗಿಕ ಸೃಷ್ಟಿಯಿಂದ ಸ್ಫೂರ್ತಿ ಪಡೆದ ಮನುಷ್ಯ ಕಷ್ಟಪಟ್ಟು ಹೊಡೆದ ನಕಲು- ವಿಮಾನ . ಎಷ್ಟು ಚಂದದ ನಕಲೇ ಆದರೂ ಅಸಲಿ ಆಗುವುದಿಲ್ಲವಲ್ಲ .ಹಾಗಾಗಿಯೇ ವಿಮಾನಗಳು ನಕಲಿ ಹಕ್ಕಿಗಳಾಗಿಯೂ , ಹಕ್ಕಿಗಳು ಅಸಲಿ ವಿಮಾನಗಳಾಗಿಯೂ ಯಾರಿಗೋ ಕಂಡರೆ ಆಶ್ಚರ್ಯ ಇಲ್ಲ. ವಿಮಾನಗಳು ಎಷ್ಟು ಬೆಳವಣಿಗೆ ಕಂಡರೂ ಸುಧಾರಣೆ ಆದರೂ ಹಕ್ಕಿಗಳ ಸುಲಲಿತ , ಸರಳ , ಪರಿಸರಸ್ನೇಹಿ ಹಾರಾಟ ವಿಮಾನಗಳಿಗೆ ಎಂದೂ ದಕ್ಕಲಿಕ್ಕಿಲ್ಲ . ಜೊತೆಗೆ ವಿಮಾನಗಳು ಇದ್ದಷ್ಟು ದಿನವೂ ಅದರ ಆಘಾತ ,ಸದ್ದು , ಮಾಲಿನ್ಯಗಳಿಗೆ ಅಂಜುತ್ತ ಹಕ್ಕಿಗಳು ಬದುಕಬೇಕಾಗಿರುವುದೂ ಅನಿವಾರ್ಯ . ಮತ್ತೆ ಹಕ್ಕಿಗಳಿಂದಾಗಿ ವಿಮಾನಗಳ ಬದುಕೂ ಸುಭದ್ರ ಆಗಿ ಉಳಿದಿಲ್ಲ . ಹಕ್ಕಿಗಳು ಹಾರುವಷ್ಟು ದಿನವೂ ವಿಮಾನಗಳು ಭಯ ಸಂಶಯ ಕಟ್ಟೆಚ್ಚರದಲ್ಲಿಯೇ ನಿಲ್ದಾಣಗಳಲ್ಲಿ ಏರಿ ಇಳಿಯುತ್ತವೆ . ಹಕ್ಕಿಗಳ ಆಘಾತ (bird strike) ವಿಮಾನಗಳಿಗೆ ಅತ್ಯಂತ ಮಾರಕವಾದದ್ದು . ಒಂದೋ ಎರಡೋ ಕೆಜಿ ತೂಕದ ಮೃದು ರೆಕ್ಕೆಯ ಮಾಂಸದ ಮುದ್ದೆ ಘಂಟೆಗೆ ನೂರೈವತ್ತು ಇನ್ನೂರು ಮೈಲಿ ವೇಗದಲ್ಲಿ ಬಂದು ಗಟ್ಟಿಯಾದ ಲೋಹಕ್ಕೆ ಬಡಿದರೆ ಹಕ್ಕಿ ಸಾಯುವುದರ ಜೊತೆಗೆ ಲೋಹವೂ ತೀವ್ರವಾಗಿ ಘಾಸಿಗೊಳ್ಳುತ್ತದೆ . ಹಕ್ಕಿಗಳು ವಿಮಾನದತ್ತ ಮುನ್ನುಗ್ಗಿ ಬರದೇ ಆಕಾಶದಲ್ಲೇ ನಿಂತು ಬರೇ ರೆಕ್ಕೆ ಬಡಿಯುತ್ತಿದ್ದರೂ ವೇಗವಾಗಿ ಬರುವ ವಿಮಾನದ ಘಾತ ಹಕ್ಕಿಗೂ ವಿಮಾನಕ್ಕೂ ಎರಡಕ್ಕೂ ಆಪತ್ಕಾರಿಯೇ. ಹೀಗೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ ಅಥವಾ ಅವುಗಳ ಗುಂಪು ಛಿದ್ರವಾಗುವುದರ ಜೊತೆಗೆ ವಿಮಾನಕ್ಕೆ ಬಡಿದ ಜಾಗದಲ್ಲಿ ಹಾನಿಯಾಗಿರುತ್ತದೆ .

ವಿಮಾನಶಾಸ್ತ್ರದಲ್ಲಿ ಹಕ್ಕಿಗಳ ಆಘಾತದ ಅಧ್ಯಯನವೂ ಒಂದು ವಿಭಾಗ . ಹಕ್ಕಿಗಳ ಸಮೂಹ, ಆಕಾಶಕ್ಕೆ ಏರುತ್ತಿರುವ ಅಥವಾ ನೆಲಕ್ಕೆ ಇಳಿಯುತ್ತಿರುವ ಘಟ್ಟದಲ್ಲಿ ವಿಮಾನದ ರೆಕ್ಕೆಗೆ, ಎಂಜಿನ್ ಗೆ, ಮೂತಿಗೆ ಬಡಿದು ಅಪಘಾತ ಅನುಭವಿಸಿದ ವಿಮಾನಗಳ ಹಲವು ಉದಾಹರಣೆಗಳು ಇವೆ. ವಿಮಾನ ನಿಲ್ದಾಣ ಯಾವ ದೇಶ ಊರು ಪ್ರದೇಶದಲ್ಲಿ ಇದೆ ಎನ್ನುವುದರ ಮೇಲೆ ಅಲ್ಲಿ ಎಷ್ಟು ಯಾವ ಬಗೆಯ ಹಕ್ಕಿಗಳಿವೆ, ವಿಮಾನಗಳ ಏರಿಳಿಕೆಗೆ ಇಂತಹ ಆಪತ್ತು ಕಾದಿದೆ ಎಂದು ತಿಳಿಯಬಹುದು. ಹಕ್ಕಿಯ ಆಘಾತದಿಂದ ವಿಮಾನ ಅಪಘಾತ ಆದ ಮೊಟ್ಟ ಮೊದಲ ದಾಖಲಾತಿ 1912ರಲ್ಲಿ ಎಂದು ವಿಮಾನ ಇತಿಹಾಸಕಾರರು ಹೇಳುತ್ತಾರೆ. ಅಮೆರಿಕದ ಒಂದು ಸಮುದ್ರ ತೀರದಿಂದ ಇನ್ನೊಂದು ತೀರಕ್ಕೆ ಹಾರುವಾಗ ಸಂಭವಿಸಿದ ಈ ಅಪಘಾತದಲ್ಲಿ ವಿಮಾನ ಚಾಲಕ ಮೃತ ಪಟ್ಟಿದ್ದ. ಅಂದಿನಿಂದ ಈಗಿನ ತನಕ ಏರುವ ಇಳಿಯುವ ವಿಮಾನಗಳು ಹಕ್ಕಿಗಳಿಂದ ಹೇಗೆ ದೂರ ಇರಬಹುದು ಅಥವಾ ಆಘಾತವಾದರೆ ಸುರಕ್ಷಿತವಾಗಿ ಹೇಗೆ ಎಲ್ಲಿ ಕೆಳಗಿಳಯಬಹುದು ಎನ್ನುವ ಬಗೆಗೆ ವಿಮಾನ ಹಾರಾಟ ಪ್ರಕ್ರಿಯೆ, ವಿನ್ಯಾಸ, ರಚನೆ, ನಿರ್ದೇಶನ ಇತ್ಯಾದಿ ವಿಷಯಗಳಲ್ಲಿ ಬದಲಾವಣೆ ಬೆಳವಣಿಗೆಗಳು ಆಗಿವೆ. ಮತ್ತೆ ಈ ಎಲ್ಲ ಎಚ್ಚರಿಕೆ ನಿರ್ದೇಶನಗಳ ನಡುವೆಯೂ ವಿಮಾನಕ್ಕೆ ಹಾನಿಯನ್ನು ಉಂಟು ಮಾಡಿದ ಅಪಘಾತಗಳೂ ಹಲವು ಇವೆ. 2009ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಸಮೀಪ ನಡೆದ ಅಪಘಾತ ಹಕ್ಕಿಗಳ ಆಘಾತದ ಚರ್ಚೆ ಬಂದಾಗೆಲ್ಲ ಉಲ್ಲೇಖಿಸಲ್ಪಡುತ್ತದೆ. ಆಗಷ್ಟೇ ನಿಲ್ದಾಣದಿಂದ ಹಾರಲು ಶುರು ಮಾಡಿದ್ದ ವಿಮಾನದ ಎರಡು ಎಂಜಿನ್ ಗಳಿಗೆ ಎರಡು ಹಕ್ಕಿಗಳ ಎರಗುವಿಕೆಯಿಂದ ಹಾನಿಯಾಗಿ ಎಂಜಿನ್ ಗಳು ಕೆಲಸ ನಿಲ್ಲಿಸಿದ್ದವು. ಎಂಜಿನ್ ಗಳು ನಡು ಆಕಾಶದಲ್ಲಿ ಸ್ಥಗಿತಗೊಂಡವೆಂದರೆ ವಿಮಾನಗಳನ್ನು ಗಾಳಿಯಲ್ಲಿ ತೇಲಿಸಲು ಅಗತ್ಯವಾದ ವೇಗವನ್ನು ನೀಡುವ ನೂಕುವ ಶಕ್ತಿ ಇಲ್ಲ ಎಂದರ್ಥ. ಆಗ ವಿಮಾನ ಅದರ ರೆಕ್ಕೆ ಮತ್ತು ರೆಕ್ಕೆಯಿಂದ ಹೊರಚಾಚಿಕೊಳ್ಳುವ ನಿಯಂತ್ರಕ ಮೇಲ್ಮೈ ಗಳ ಸಹಾಯದಲ್ಲಿ ಗಾಳಿಯಲ್ಲಿ ತೇಲುತ್ತ ಕೆಳಗೆ ಬಂದು ಹೆಚ್ಚು ಅಡೆತಡೆಗಳಿಲ್ಲದ ಬಯಲಲ್ಲೋ ನೀರಿನ ಮೇಲೋ ಇಳಿದು ತನ್ನ ದೇಹದ ಕೆಳಭಾಗವನ್ನು ನೆಲಕ್ಕೆ ಉಜ್ಜುತ್ತಾ ಸಾಗಿ ನಿಲ್ಲಬೇಕು. ಇದಕ್ಕೆ ಹೊಟ್ಟೆಯ ಮೇಲಿನ ಇಳಿತ ಅಥವಾ "ಬೆಲ್ಲಿ ಲ್ಯಾಂಡಿಂಗ್" ಅಂತಲೂ ಕರೆಯುತ್ತಾರೆ. ಅಂದು ಎಂಜಿನ್ ಗಳು ಕೆಲಸ ನಿಲ್ಲಿಸಿದ ಮೇಲೆ ವಿಮಾನ ತೇಲುತ್ತ ಕೆಳಗಿಳಿದು ಬಂದು ನಗರದ ಮಧ್ಯ ಇರುವ ಹಡ್ಸನ್ ನದಿಯ ನೀರಿನ ಮೇಲೆ ಇಳಿಯಿತು. ಸರಿಯಾದ ನಿಯಂತ್ರಣ ಇಲ್ಲದೆ ನೀರನ್ನು ಸ್ಪರ್ಶಿಸುವ ಇಳಿತ ಅದಾದುದರಿಂದ ಹಲವು ಪ್ರಯಾಣಿಕರಿಗೆ ಗಾಯಗಳಾದರೂ ಯಾವುದೇ ಜೀವಹಾನಿ ಆಗಲಿಲ್ಲ. ನೂರೈವತ್ತು ಪ್ರಯಾಣಿಕರು ಹಾಗು ಐದು ಜನ ಸಿಬ್ಬಂದಿಗಳಲ್ಲಿ ಯಾರಿಗೂ ಪ್ರಾಣಾಪಾಯ ಆಗಲಿಲ್ಲ. ಈ ಘಟನೆ ಹಕ್ಕಿಗಳ ಆಘಾತದಿಂದ ವಿಮಾನಕ್ಕೆ ಒದಗಬಹುದಾದ ಆಪತ್ತಿನ ಬಗೆಗೂ, ವಿಮಾನವೊಂದು ತೀವ್ರ ಬಿಕ್ಕಟ್ಟಿನಲ್ಲಿರುವಾಗಲೂ ಸುರಕ್ಷಿತವಾಗಿ ಇಳಿದು ನಿಲ್ಲುವ ಸಾಧ್ಯತೆಗೂ, ವಿಮಾನಯಾನದ ಆಶಾವಾದಕ್ಕೂ ಚಾರಿತ್ರಿಕ ದೃಷ್ಟಾಂತವಾಗಿ ಉಳಿಯುತ್ತದೆ.

ವಿಮಾನಗಳ ವಿನ್ಯಾಸದಲ್ಲಿ ಹಕ್ಕಿಗಳ ಗಾತ್ರ ತೂಕ ಬಗೆಯನ್ನು ಕಲ್ಪಿಸಿ ಲೆಕ್ಕಾಚಾರ ಮಾಡಿ ಒಂದು ವೇಳೆ ಹಾಗೊಂದು ಆಘಾತ ಆದರೆ ವಿಮಾನ ಎಷ್ಟು ತುರ್ತಾಗಿ ಸುರಕ್ಷಿತವಾಗಿ ನಿಲ್ದಾಣವನ್ನು ಸೇರಬಹುದು ಎನ್ನುವ ಪರಿಗಣನೆ ಇರುತ್ತದೆ. ನಿಜವಾದ ಅಥವಾ ಕೃತಕವಾದ ಹಕ್ಕಿಯನ್ನು ವಿಮಾನದ ಬೇರೆಬೇರೆ ಭಾಗಗಳಿಗೆ, ಎಂಜಿನ್ ಗೆ ಬಡಿದು ಪರೀಕ್ಷೆ ಮಾಡುತ್ತಾರೆ, ಫಲಿತಾಂಶದ ಆಧಾರದ ಮೇಲೆ ವಿಮಾನದ ಆ ಭಾಗಗಳ ವಿನ್ಯಾಸವನ್ನು ಪ್ರಮಾಣೀಕರಿಸುತ್ತಾರೆ. ಬೇರೆ ಬೇರೆ ಪ್ರದೇಶಗಳಲ್ಲಿ ಕಂಡುಬರುವ ಹಕ್ಕಿಗಳು ಬೇರೆ ಬೇರೆ ಬಗೆಯದಾಗಿರುವುದರಿಂದ ಪರೀಕ್ಷೆಯ ಮಾನದಂಡಗಳೂ ಭಿನ್ನವಾಗಿರುವ ಸಾಧ್ಯತೆ ಇದೆ. ಅಮೆರಿಕ ಹಾಗು ಯುರೋಪುಗಳಲ್ಲಿ ಪರೀಕ್ಷೆಗೆ ಬಳಸುವ ಹಕ್ಕಿಗಳ ತೂಕವೂ ಬೇರೆಯದ್ದಾಗಿದೆ. ಅಮೆರಿಕದ ವಿಮಾನ ನಿರ್ದೇಶನಾಲಯದ ಸುಪರ್ದಿಯಲ್ಲಿ ವಿನ್ಯಾಸಗೊಂಡು ಪ್ರಮಾಣಪತ್ರ ಪಡೆಯುವ ವಿಮಾನಗಳು 3.8 ಕಿಲೋ (ಎಂಟು ಪೌಂಡ್) ತೂಕದ ಹಕ್ಕಿಯ ಆಘಾತದಿಂದ ಬಡಿಸಿಕೊಂಡು ಪರೀಕ್ಷೆಗೊಳಪಟ್ಟರೆ , ಯುರೋಪಿನಲ್ಲಿ 1.8 ಕೆ.ಜಿ (ನಾಲ್ಕು ಪೌಂಡ್) ತೂಕದ ಹಕ್ಕಿಯೊಡನೆ ಆಘಾತ ಮಾಡಿಸಿ ನೋಡುತ್ತಾರೆ .ಹಕ್ಕಿಗಳನ್ನು ಅತ್ಯಂತ ವೇಗದಲ್ಲಿ ವಿಮಾನ ಭಾಗಗಳಿಗೆ ಚಿಮ್ಮಿಸುವ ಯಂತ್ರಗಳನ್ನು ಈ ಪರೀಕ್ಷೆಯಲ್ಲಿ ಬಳಸುತ್ತಾರೆ. ಈ ಯಂತ್ರಕ್ಕೆ "ಚಿಕನ್ ಗನ್" ಎನ್ನುವ ಹೆಸರೂ ಇದೆ. ಮುನ್ನೂರೈವತ್ತರಿಂದ ನಾಲ್ಕುನೂರು ಮೈಲು ವೇಗದಲ್ಲಿ ಹಕ್ಕಿಯನ್ನು ವಿಮಾನದ ಭಾಗಗಳ ಮೇಲೆ ಹೊಡೆಸಿ ಈ ಪರೀಕ್ಷೆ ನಡೆಸಲಾಗುತ್ತದೆ, ವಿಮಾನದ ಮೂತಿ,ರೆಕ್ಕೆ ,ಎಂಜಿನ್ ಗಳು ಗಟ್ಟಿಯಾಗಿವೆಯೋ ನೋಡಲಾಗುತ್ತದೆ. ಎಂಜಿನ್ ಒಳಗೆ ಹಕ್ಕಿಯೊಂದು ಸಿಕ್ಕಿಕೊಂಡು ಆ ಎಂಜಿನ್ ಕೆಲಸ ಮಾಡುವುದು ನಿಲ್ಲಿಸಿದರೆ ,ಆಗ ವಿಮಾನ ಒಂದೆರಡು ಘಂಟೆಗಳಲ್ಲಿ ತೇಲುತ್ತ ನೆಲ ತಲುಪುವಾಗ ಅನುಭವಿಸುವ ಹೆಚ್ಚುವರಿ ಬಲ ಒತ್ತಡಗಳನ್ನು ಊಹಿಸಿ ವಿನ್ಯಾಸದ ಒಂದು ಮಾನದಂಡವಾಗಿ ಬಳಸಲಾಗುತ್ತದೆ. ಹೀಗೆ ವಿಮಾನಲೋಕ ಹಕ್ಕಿಗಳ ಬಗೆಗೆ ಗಹನವಾಗಿ ಯೋಚಿಸಿ ತನ್ನನ್ನು ಅಣಿಗೊಳಿಸಿಕೊಳ್ಳುವಾಗ ವಿಮಾನವೊಂದು ತನ್ನ ಹತ್ತಿರ ಬಂದರೆ ಅದಕ್ಕೆ ಡಿಕ್ಕಿ ಹೊಡೆಯದೆ ತಾನು ಹೇಗೆ ಬಚಾವಾಗುವುದು ಎನ್ನುವುದನ್ನು ಹಕ್ಕಿಗಳು ಇನ್ನೂ ಕಲಿತಿಲ್ಲ.

ವಿಮಾನಗಳು ಆಕಾಶಕ್ಕೆ ಲಗ್ಗೆ ಇಟ್ಟ ಲಾಗಾಯ್ತಿನಿಂದ ವಿಮಾನದ ಆಘಾತಕ್ಕೋ , ಶಬ್ದಕ್ಕೋ ಅಥವಾ ವಿಮಾನ ಉಗುಳುವ ಹೊಗೆಗೋ ಬಲಿಯಾಗಿ ಉರುಳಿದ ಹಕ್ಕಿಗಳ ಲೆಕ್ಕ ಇಟ್ಟವರೂ ಇಲ್ಲ .ಅಥವಾ ಹಕ್ಕಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರೂ ಇರಲಿಕ್ಕಿಲ್ಲ . ಹಾರುವ ವಸ್ತು ವಿಷಯಗಳಲ್ಲೇ ಪರಿಪೂರ್ಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದ ಹಕ್ಕಿಯೊಂದು ಹುಟ್ಟಲು ಮರದ ರೆಂಬೆಯ ಮೇಲೆ ಕುಳಿತು ಕಣ್ಣು ಮಿಟುಕಿಸಿ ಮಾತಾಡುವ ಒಂದು ಗಂಡು ಇನ್ನೊಂದು ಹೆಣ್ಣು ಹಕ್ಕಿಗಳ ನಡುವಿನ ಪ್ರೀತಿ ಮಿಲನ ಸಾಕು.ಮತ್ತೆ ಅವುಗಳ ಸಹಜ ಸುಂದರ ಹಾರಾಟ ಶುರು ಆಗಲು ಬಲಿತ ರೆಕ್ಕೆಗಳು ಅವುಗಳ ಸಹಜ ಸುಲಲಿತ ಚಲನೆ ಅಷ್ಟೇ ಬೇಕು. ಹಕ್ಕಿಯೊಂದರ ಸಾಹಸಗಳನ್ನು ತಾನೂ ಮಾಡಬಲ್ಲೆ ಎಂದು ತೋರಿಸುವ ವಿಮಾನವೊಂದು ತಯಾರಾಗಲು ಕೆಲವು ವರ್ಷಗಳ ಸಮಯ , ದುಡಿತ ,ಪರಿಶ್ರಮ ಬೇಕು. ಮತ್ತೆ ಆ ವಿಮಾನಗಳು ನೆಗೆಯಲು ತೇಲಲು ಜ್ಞಾನ ವಿಜ್ಞಾನ ಪರೀಕ್ಷೆ ಲೆಕ್ಕಾಚಾರಗಳೂ ಒಂದಾಗಬೇಕು. ಒಂದೇ ಮನೆತನದಲ್ಲಿ ಹುಟ್ಟಿದ ಹಕ್ಕಿಗಳು ಮತ್ತು ವಿಮಾನಗಳ ನಡುವೆ ಎಷ್ಟು ಹೋಲಿಕೆಗಳು ಹಾಗು ಎಷ್ಟು ವಿರೋಧಗಳು . ತಾವು ಹಾರುವುದನ್ನು ನೋಡುತ್ತಾ ತಮ್ಮಂತೆ ಹಾರುವ ಯಂತ್ರವನ್ನು ಮನುಷ್ಯರು ನಿರ್ಮಿಸುತ್ತಿದ್ದಾಗ ಹಕ್ಕಿಗಳಿಗೆ ಮುಂದೆ ತಮ್ಮ ಸಂಕುಲಕ್ಕೆ ಆ ಯಂತ್ರಗಳಿಂದ ಬರಬಹುದಾದ ಆಪತ್ತು ತಿಳಿದಿರಲಿಲ್ಲ. ವಿಮಾನವನ್ನು ಅಂದು ನಿರ್ಮಿಸಿದವರು ತಾವು ಅನುಕರಿಸಿದ ಹಕ್ಕಿಗಳೇ ಮುಂದೆ ತಮ್ಮನ್ನು ಆಕಾಶದಲ್ಲಿ ಹೀಗೆ ಕಾಡಬಹುದು ಅಂದುಕೊಂಡಿರಲೂ ಇಲ್ಲ .

ಈ ಅಂಕಣದ ಹಿಂದಿನ ಬರಹಗಳು

ವಿಮಾನ ನಿಲ್ದಾಣಕ್ಕೆ ಸ್ವಾಗತ

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

ಒಂದು ಆಕಾಶ ಹಲವು ಏಣಿಗಳು

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...