ಅಷ್ಟಾವರಣಗಳಲ್ಲಿ ಜಂಗಮ

Date: 07-11-2022

Location: ಬೆಂಗಳೂರು


ಬಸವಣ್ಣನ ಲಿಂಗವಾವುದು, ಬಸವಣ್ಣನ ಜಂಗಮವಾವುದೆಂದು ಅಲ್ಲಮಪ್ರಭು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಒಳಗಿನಿಂದ ಬರುವ ಪವಿತ್ರವಾದ ಆಚಾರವೇ ಲಿಂಗ, ಮನದಲ್ಲಿ ಬೆಳಗುತ್ತಿರುವ ಅರಿವೇ ಜಂಗಮ, ದಾಸೋಹವೇ ಲಿಂಗ-ಜಂಗಮವೆಂದು ಬಸವಣ್ಣನ ನಿಲವಾಗಿತ್ತೆಂದು ಈ ವಚನದಲ್ಲಿ ಪ್ರಭು ಸ್ಪಷ್ಟಪಡಿಸಿದ್ದಾರೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ಅಷ್ಟಾವರಣಗಳಲ್ಲಿನ ‘ಜಂಗಮ’ ವಿಚಾರವನ್ನು ಚರ್ಚಿಸಿದ್ದಾರೆ.

3.ಜಂಗಮ

ಅಷ್ಟಾವರಣಗಳಲ್ಲಿ ಮೂರನೆಯದಾದ “ಜಂಗಮ” ಪದ ಮೊದಲಿನಿಂದಲೂ ಚರ್ಚೆಗೆ ಗ್ರಾಸವಾಗಿದೆ. ಆಗಮಗಳಲ್ಲಿ “ಜಂಗಮ”ದ ಪ್ರಸ್ತಾಸವಿದೆ. ಜಂಗಮ ಪದದ ಮೂರಕ್ಷರಗಳಿಗೆ ವಿಶೇಷಾರ್ಥಗಳನ್ನು ವೀರಾಗಮದಲ್ಲಿ ಹೇಳಲಾಗಿದೆ.

“ಜಕಾರಾಜ್ಜನನಂ ದೂರಂ ಗಕಾರಾತ್ ಗತಿನಾಶನಮ್
ಮಕಾರಾನ್ಮರಣಂ ನಷ್ಟಂ ಜಂಗಮಸ್ತ್ರ್ಯಕ್ಷರಾತ್ಮಕಃ”

-ವೀರಾಗಮ.

“ದೀಕ್ಞಾ ಮಾರ್ತಿರ್ಗುರುರ್ದೇವೋ ಪೂಜಾ ಮೂರ್ತಿ ಸದಾಶಿವಃ
ದೀಕ್ಞಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ”

-ವಾತುಲಾಗಮ.

ಜನನ-ಮರಣಗಳಿಂದ ದೂರವಿರುವ, ಮುಕ್ತಿಪಥವ ತೋರಿಸುವವನೇ ಜಂಗಮನೆಂದು ವೀರಾಗಮ ಹೇಳಿದರೆ, ಜಂಗಮ ತ್ರಿಮೂರ್ತಿಯಾಗಿದ್ದಾನೆಂದು ವಾತುಲಾಗಮ ಹೇಳಿದೆ. ದೀಕ್ಷಾಗುರು ಲಿಂಗದೀಕ್ಷೆ ನೀಡಿದರೆ, ಶಿಕ್ಷಾಗುರು ಶಿಕ್ಷಣ ನೀಡುತ್ತಾನೆ. ಆದರೆ ಜಂಗಮನು ದೀಕ್ಷಾ ಶಿಕ್ಷಣದ ಜತೆಗೆ ಮೋಕ್ಷ ಮಾರ್ಗವನ್ನೂ ತೋರಿಸುವದರಿಂದ ಆತ ತ್ರಿಮೂರ್ತಿಯಾಗಿದ್ದಾನೆ, ಕೈವಲ್ಯಪ್ರದಾಯಕನಾಗಿದ್ದಾನೆ, ಶಿವಸ್ವರೂಪಿಯಾಗಿದ್ದಾನೆಂದು ಆಗಮಗಳಲ್ಲಿ ಹೇಳಲಾಗಿದೆ.

ಜಂಗಮದಲ್ಲಿ ಬ್ರಹ್ಮಚಾರಿ, ಗೃಹಸ್ಥ, ನಿರಾಭಾರಿ ಎಂಬ ಮೂರು ರೀತಿಯ ವರ್ಗೀಕರಣವಿದೆ. ಆಗಮಗಳಲ್ಲಿ ಜಂಗಮನಿಗಿರಬೇಕಾದ ಅರ್ಹತೆಗಳನ್ನು ಮತ್ತು ಕರ್ತವ್ಯಗಳನ್ನು ಕುರಿತು ಹೇಳಲಾಗಿದೆ. ಜಪ, ತಪ, ಪೂಜೆ, ಶಿವಸಾಕ್ಷಾತ್ಕಾರ ಇವು ಜಂಗಮನ ಮುಖ್ಯ ಲಕ್ಷಣಗಳೆಂದು ಹೇಳಲಾಗಿದೆ. ಪಾರಮೇಶ್ವರರಾಗಮದಲ್ಲಿ ಜಂಗಮನಿಗೆ ಎಂಟು ರೀತಿಯ ಲಕ್ಷಣಗಳನ್ನು ಕುರಿತು ತಿಳಿಸಲಾಗಿದೆ. ಜಂಗಮನಾದವನು ಷಟ್‍ಸ್ಥಲ ಜ್ಞಾನಿಯಾಗಿರಬೇಕೆಂದು ಆಗಮಗಳಲ್ಲಿ ಹೇಳಲಾಗಿದೆ. ಹೀಗೆ ಬಸವಾದಿ ಶರಣರು ಬರುವದಕ್ಕಿಂತ ಮೊದಲೇ ಈ ನೆಲದಲ್ಲಿ ಗುರು-ಲಿಂಗ-ಜಂಗಮಗಳ ಬಗೆಗ ಚರ್ಚೆ ನಡೆದಿದೆ.

“ಜಂಗಮ” ಪರಿಕಲ್ಪನೆ ಶೈವಾಗಮಗಳಲ್ಲಿದೆಯೇ ಹೊರತು, ವೈಷ್ಣವಧರ್ಮದಲ್ಲಿಲ್ಲ. ಕನ್ನಡನಾಡಿನಲ್ಲಿ 15ನೇ ಶತಮಾನದ ಕಾಲಕ್ಕೆ ಈ ಪದಕ್ಕೆ ಬಹಳ ಮಹತ್ವ ಬಂದಂತಿದೆ ನೂರೊಂದುವಿರಕ್ತರು ಹುಟ್ಟಿಕೊಂಡ ಈ ಸಂದರ್ಭದಲ್ಲಿ ಜಂಗಮಸ್ಥಾನಕ್ಕೆ ಗೌರವ ಬಂದಿದೆ. ಶೈವ-ವೀರಶೈವ ಧರ್ಮಗಳಲ್ಲಿ ಬರುವ ಜಂಗಮರು ಜಾತಿಜಂಗಮರಾಗಿದ್ದಾರೆ. ಜಾತಿಯಲ್ಲಿ ಜಂಗಮರಾಗಿ ಹುಟ್ಟದವರು ಪೀಠಾಧಿಪತಿಗಳಾಗಲು ಜಂಗಮ ಮೂರ್ತಿಗಳಾಗಲು ಅರ್ಹರಲ್ಲವೆಂಬ ಕಟ್ಟಾಜ್ಞೆಯಿದೆ. ಅಂತಯೇ 15ನೇ ಶತಮಾನದ ನೂರೊಂದು ವಿರಕ್ತರ ಮಠಗಳಲ್ಲಿ ಜಾತಿಜಂಗಮರೇ ಜಂಗಮಮೂರ್ತಿಗಳಾಗಿ, ಪಟ್ಟಾಧ್ಯಕ್ಷರಾಗಿದ್ದಾರೆ. ಜಂಗಮರಲ್ಲಿ ಸ್ವಯಜಂಗಮ, ಚರಜಂಗಮ, ಪರಜಂಗಮ ಎಂಬ ಮೂರು ಹಂತಗಳನ್ನು ಆಗಮಗಳಲ್ಲಿ ಹೇಳಲಾಗಿದೆ.

ಶೈವ-ವೀರಶೈವ ಧರ್ಮಗಳಲ್ಲಿ ಬಂದಿರುವ ಜಂಗಮನಿಗೂ, ಲಿಂಗಾಯತ ಧರ್ಮದ ಜಂಗಮನಿಗೂ ತುಂಬ ವ್ಯತ್ಯಾಸವಿದೆ. ಬಸವಾದಿ ಶರಣರು ಸ್ಥಾಪಿಸಿದ ಈ ಧರ್ಮದಲ್ಲಿ ಎರಡು ರೀತಿಯ ಜಂಗಮರಿದ್ದಾರೆ. ಒಬ್ಬ ಹೊರಗೆ ಕಾಣುವ ಜಂಗಮ, ಮತ್ತೊಬ್ಬ ಒಳಗೆ ಕಾಣುವ ಜಂಗಮ. ಹೊರಗೆ ಕಾಣುವ ಜಂಗಮ ಇಹದಲ್ಲಿ-ಪರವನ್ನು ಹೇಗೆ ಕಾಣಬೇಕೆಂದು ತಿಳಿಸಿದರೆ, ಒಳಗೆ ಇರುವ ಜಂಗಮ ಅನುಭಾವ ತತ್ವದ ಪ್ರತೀಕವಾಗಿದ್ದಾನೆ. ಅರಿವು-ಗುರುವಾಗಿ, ಆಚಾರ-ಲಿಂಗವಾಗಿ, ಅನುಭಾವ-ಜಂಗಮವಾಗಿ ಒಳಗಡೆ ಕಾಣ ಸಿಕೊಳ್ಳುತ್ತದೆ. ಲಿಂಗಾಯತ ಧರ್ಮದಲ್ಲಿ ಜಂಗಮನ ಪ್ರಸ್ತಾಪ ಬರುತ್ತದಾದರೂ, ಅದು ಹೆಚ್ಚು ಒತ್ತು ನೀಡಿರುವುದು ಒಳಗಿನ ಜಂಗಮನಾಗಿರುವ ಅನುಭಾವಿಗೆ. ಲಿಂಗಾಯತ ಧರ್ಮದಲ್ಲಿ ಹೊರಗಿನ ಜಂಗಮಮೂರ್ತಿಗೆ ಜಾತಿಯ ಹಂಗಿಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ, ಲಿಂಗದೀಕ್ಞೆ ಪಡೆದು, ಸಂಸ್ಕಾರ ಹೊಂದಿ ಅರ್ಹತೆ ಗಳಿಸಿಕೊಂಡವರು ಜಂಗಮರಾಗಬಹುದಾಗಿದೆ.

“ಜಂಗಮ” ಪದವು ಅಲ್ಲಮಪ್ರಭುವಿನ ವಚನಗಳಲ್ಲಿ ಹೆಚ್ಚು ಬಳಕೆಯಾಗಿದೆ. 51 ವಚನಗಳಲ್ಲಿ ಜಂಗಮ ಪದ ಬರುತ್ತದೆ.
“ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
ಮೂಡಿಸಿಕೊಂಡು ಕಿರಿದಾಯಿತ್ತು.........”

-ಅಲ್ಲಮಪ್ರಭು (ಸ.ವ.ಸಂ.2, ವ:480)

ಈ ವಚನದಲ್ಲಿ ಅಲ್ಲಮಪ್ರಭು ಹೊರಗಿನ ಮನುಷ್ಯರೂಪದ ಜಂಗಮ ಮತ್ತು ಸ್ಥಾವರ ರೂಪದ ಲಿಂಗವನ್ನು ನಿರಾಕರಿಸಿದ್ದಾರೆ. ಭಕ್ತರನ್ನು ಬೇಡಿತಿನ್ನುವ ಬೇಡಜಂಗಮರ ಬಗ್ಗೆ ಅಲ್ಲಮಪ್ರಭು ವಿಡಂಬನೆ ಮಾಡಿದ್ದಾರೆ. ಅದೇರೀತಿ ಸ್ಥಾವರಲಿಂಗವು ಕಲುಕುಟಿಗನಿಂದ ಸಿದ್ಧವಾಗಿದೆ. ಹೀಗಾಗಿ ಇವೆರಡನ್ನೂ ಪ್ರಭು, ಘನವೆಂದು ಒಪ್ಪುವುದಿಲ್ಲ. ಅಲ್ಲಮಪ್ರಭುವಿನ ಇನ್ನೊಂದು ವಚನದಲ್ಲಿ (ವ:96) ಗುರು. ಲಿಂಗ, ಜಂಗಮ ಇವು ಬೇರೆ ಬೇರೆಯಾದವುಗಳಲ್ಲವೆಂದು ಹೇಳಲಾಗಿದೆ. ಇವು ಬೇರೆ ಬೇರೆಯೆಂಬುದು ಅಜ್ಞಾನವೆಂದು ಪ್ರಭು ಹೇಳಿದ್ದಾರೆ.

“ಅಂಗದಲ್ಲಿ ಅಳವಟ್ಟಪ್ಪ ಆಚಾರವೆ ಲಿಂಗವೆಂದರಿದನು
ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು
ಈ ಎರಡರ ಸಂಗವೆ ತಾನೆಂದರಿದನು
ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು

ನಮ್ಮ ಗುಹೇಶ್ವರಲಿಂಗದಲ್ಲಿ
ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ”

-ಅಲ್ಲಮಪ್ರಭು (ಸ.ವ.ಸಂ.2, ವ:708)

ಬಸವಣ್ಣನ ಲಿಂಗವಾವುದು, ಬಸವಣ್ಣನ ಜಂಗಮವಾವುದೆಂದು ಅಲ್ಲಮಪ್ರಭು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಒಳಗಿನಿಂದ ಬರುವ ಪವಿತ್ರವಾದ ಆಚಾರವೇ ಲಿಂಗ, ಮನದಲ್ಲಿ ಬೆಳಗುತ್ತಿರುವ ಅರಿವೇ ಜಂಗಮ, ದಾಸೋಹವೇ ಲಿಂಗ-ಜಂಗಮವೆಂದು ಬಸವಣ್ಣನ ನಿಲವಾಗಿತ್ತೆಂದು ಈ ವಚನದಲ್ಲಿ ಪ್ರಭು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಗುರು-ಜಂಗಮ ಹೊರಗಿಲ್ಲ ಒಳಗಿವೆ. ಅದೇರೀತಿ ಲಿಂಗ ಕೂಡ ಆಚಾರಲಿಂಗವಾಗಿ ಪ್ರಾಣಲಿಂಗವಾಗಿ ಒಳಗಡೆಯೇ ಇದೆಯೆಂದು ತಿಳಿಸಿ ಹೇಳಿದ್ದಾರೆ.

“ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗಿರಬಾರದಯ್ಯ,
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ?

-ಬಸವಣ್ಣ (ಸ.ವ.ಸಂ.1, ವ:825)

ಈ ವಚನದಲ್ಲಿ ಬರುವ ಜಂಗಮ, ಮೂರ್ತಿರೂಪನಾಗಿ ಕಾಣ ಸಿಕೊಂಡಿದ್ದಾನೆ. ಅದಕ್ಕೆ ಎರಡು ಉದಾಹರಣೆಗಳಿವೆ. ಅರಸು ಮನಿದಡೆ ನಾಡೊಳಗಿರಬಾರದು ಮತ್ತು ಗಂಡ ಮುನಿದಡೆ ಮನೆಯೊಳಗಿರಬಾರದು ಎಂಬ ಈ ಹೇಳಿಕೆಗಳನ್ನು ಗಮನಿಸಿದಾಗ ಜಂಗಮನೆಂದರೆ ಹೊರಗಿನ ಜಂಗಮನೇ ಎನಿಸುತ್ತದೆ. ಇಂತಹ ಜಂಗಮ ಮುನಿದೊಡೆ ತಾನು ಬದುಕಲು ಸಾಧ್ಯವಿಲ್ಲವೆಂಬವದು. ಮುಂದಿನ ವಚನವನ್ನು ಗಮನಿಸಿದಾಗ, ಇವು ಮೂರೂ, ಹೊರಗಿನವುಗಳಲ್ಲವೆಂದೆನಿಸುತ್ತದೆ.

“ಲಿಂಗಜಂಗಮ, ಜಂಗಮ ಲಿಂಗವೆಂಬುದ
ಎನಗೆ ತೋರಿದವರಾರಯ್ಯ?
ಲಿಂಗವ ಪೂಜಿಸಿದಡೆ ಭವ ಹರಿಯದೆಂದು
ಜಂಗಮಮುಖ ಲಿಂಗವಾಗಿ ಒಂದು ಶಿಕ್ಷಿಸಿ, ರಕ್ಷಿಸಿ

ಎನ್ನ ಆದಿ ಅನಾದಿಯತೋರಿ,
ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷ್ಠಿಸಿ ತೋರಿದಿರಾಗಿ
ಕೂಡಲಸಂಗಮದೇವಾ
ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ”

-ಬಸವಣ್ಣ (ಸ.ವ.ಸಂ.1, ವ:1343)

ಲಿಂಗ-ಜಂಗಮಗಳ ಗಾಢ ಸಂಬಂಧವನ್ನು ಇಲ್ಲಿ ಬಸವಣ್ಣ ಹೇಳಿದ್ದಾರೆ. ಇಲ್ಲಿ ಬಳಸಿರುವ ಪ್ರಾಣಲಿಂಗ ಒಳಗಿನದು, ಈ ಪ್ರಾಣಲಿಂಗವೇ ಜಂಗಮವೆಂದು ನನಗೆ ಪ್ರಭು ತೋರಿಸಿದರೆಂದು ಬಸವಣ್ಣ ತಿಳಿಸಿದ್ದಾರೆ. ಅಲ್ಲಮಪ್ರಭು ಮತ್ತು ಬಸವಣ್ಣ ಈ ಇಬ್ಬರ ಈ ವಚನಗಳಲ್ಲಿ ಸಾಮ್ಯತೆಯಿದೆ. ಇಬ್ಬರೂ ಒಳಗಿನ ಜಂಗಮನನ್ನು ಕುರಿತೇ ಮಾತನಾಡಿದ್ದಾರೆ. ಇಲ್ಲಿ ಇವರಿಬ್ಬರೂ ಕಟ್ಟಿಕೊಟ್ಟಿರುವ ಜಂಗಮದ ಪರಿಕಲ್ಪನೆ ವಿನೂತನವಾದುದಾಗಿದೆ.

“ಆಚಾರವಿಡಿದು ಲಿಂಗ, ಅನುಭಾವವಿಡಿದು ಜಂಗಮ
ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಲಿಂಗವನೂ ಜಂಗಮವನೂ ಬೇರರಸಲಿಲ್ಲ.”
-ಚೆನ್ನಬಸವಣ್ಣ (ಸ.ವ.ಸಂ.3, ವ:109)


ಈ ವಚನದಲ್ಲಿ ಚೆನ್ನಬಸವಣ್ಣನೂ ಕೂಡ ಲಿಂಗ-ಜಂಗಮ ಬೇರೆಬೇರೆಯಲ್ಲವೆಂದೇ ಹೇಳಿದ್ದಾರೆ. ಹೊರಗಿನ ಇಷ್ಟಲಿಂಗವು ಸಾಧನೆಯ ಮಾರ್ಗದಲ್ಲಿ ಮುನ್ನಡೆದಾಗ, ಒಳಗಿನ ಆಚಾರ ಲಿಂಗವಾಗುತ್ತದೆ. ಅದೇರೀತಿ ಹೊರಗಿನ ಮೂರ್ತರೂಪದ ಜಂಗಮನು, ಒಳಗೆ ಅನುಭಾವದ ಮೂಲಕ ಕಾಣ ಸಿಕೊಳ್ಳುತ್ತಾನೆ. ಕಾಯ-ಜೀವ ಇರುವಂತೆ ಲಿಂಗ-ಜಂಗಮಗಳಿವೆಯೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಅದೇರೀತಿ ಜಂಗಮಕ್ಕೆ ಜಾತಿಯಿಲ್ಲವೆಂದು ತನ್ನ ಇನ್ನೊಂದು, ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ನಿರ್ದೇಹಿಯೇ ಜಂಗಮ, ನಿತೈಕ್ಯವೇ ಜಂಗಮನೆಂದು ತಿಳಿಸಿದ್ದಾರೆ.

“ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘತವ ತೆಗೆಯಬಹುದೆ?
ಭೂಮಿಯ ಬಿಟ್ಟು ಜಗವ ಮಾಡಬಹುದೆ?
ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ
ಜಂಗಮವಿಲ್ಲ ಕೇಳಾ, ಕಪಿಲಸಿದ್ಧ ಮಲ್ಲಿಕಾರ್ಜುನಾ”

-ಸಿದ್ಧರಾಮ (ಸ.ವ.ಸಂ.4, ವ: 767)

ಅಲ್ಲಮಪ್ರಭು-ಬಸವಣ್ಣ-ಚೆನ್ನಬಸವಣ್ಣ ಇವರೆಲ್ಲ ಹೇಳಿರುವಂತೆ ಸಿದ್ಧರಾಮನೂ ಕೂಡ “ಜಂಗಮವಿರಹಿತ ಲಿಂಗವಿಲ್ಲ ಲಿಂಗವಿರಹಿತ ಜಂಗಮವಿಲ್ಲ” ವೆಂದು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಸಕ್ಕರೆ ಬಿಟ್ಟರೆ ಸಿಹಿ ಇರುವದಿಲ್ಲ, ಬೆಣ್ಣೆ ಬಿಟ್ಟರೆ ತುಪ್ಪವಿರುವದಿಲ್ಲ, ಭೂಮಿಯ ಬಿಟ್ಟರೆ ಜಗವಿರುವುದಿಲ್ಲ ಅದೇರೀತಿ ಲಿಂಗಬಿಟ್ಟು-ಜಂಗಮವಿಲ್ಲ, ಜಂಗಮ ಬಿಟ್ಟು ಲಿಂಗವಿಲ್ಲವೆಂದು ಈ ವಚನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಅಂದರೆ ಶರಣರ ಪ್ರಕಾರ ಗುರು-ಲಿಂಗ-ಜಂಗಮ ಪ್ರಾರಂಭದಲ್ಲಿ ಹೊರಗೆ ಕಂಡರೂ ಅವು ನಿಜವಾಗಿ ಬೆಳೆದು ನಿಲ್ಲುವದು ಭಕ್ತನ ಒಳಗಡೆಯೆಂದು ತಿಳಿಸಿಹೇಳಿದ್ದಾರೆ.

“ಕಂಥೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ.....”

-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:90)

2. “ದಾಸಿ ವೇಶಿ ಮದ್ದು ಮಾಂಸ ಸುರೆಭಂಗಿ ಹೊಗೆ
ಅನ್ಯದೈವ ಭವಿಸಂಗ-ಉಳ್ಳನ್ನಕ್ಕ ಅವ
ಭಕ್ತನಲ್ಲ-ಜಂಗಮನಲ್ಲ”
-ಜೇಡರ ದಾಸಿಮಯ್ಯ (ಸ.ವ.ಸಂ.7, ವ:813)

ಈ ವಚನಗಳಲ್ಲಿ ಹೊರಗಿನ ಜಂಗಮನ ಅವಗುಣಗಳನ್ನು ತಿರಸ್ಕರಿಸಲಾಗದೆ. ಕಾವಿ ಉಟ್ಟಾಕ್ಷಣ ಜಂಗಮನಾಗಲಾರನೆಂದು ಚೌಡಯ್ಯ ಹೇಳಿದ್ದಾರೆ. ದಾಸಿ-ವೇಶಿಯರ ಸಂಗಮಾಡುವ ಭಕ್ತ-ಜಂಗಮರ ಮೇಳ ಹೇಗಿರುತ್ತದೆಂದರೆ, ಹಂದಿಗಳೆರಡು ಹಡಿಕೆಯ ತಿಂದು ಒಂದರ ಮುಖ ಒಂದು ಮೂಸಿ ನೋಡಿದಂತಿರುತ್ತದೆಂದು ದಾಸಿಮಯ್ಯ ಕಟುವಾಗಿ ವಿಡಂಬಿಸಿದ್ದಾರೆ.

“ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು
ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು......”
-ಅರಿವಿನ ಮಾರಿತಂದೆ(ಸ.ವ.ಸಂ.6, ವ:397)

2. “ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ
ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವರಿಗೆ ಲಿಂಗವಿಲ್ಲ.
ಲಿಂಗವಿಲ್ಲದವಂಗೆ ಜಂಗಮವಿಲ್ಲ.......”
-ಉರಿಲಿಂಗಪೆದ್ದಿ(ಸ.ವ.ಸಂ.6, ವ:1298)

ಮೊದಲಿನ ಎರಡು ವಚನಗಳಲ್ಲಿ ಲಿಂಗ-ಜಂಗಮ ಬೇರೆ ಬೇರೆಯಲ್ಲವೆಂದು ಮಾರಿತಂದೆ ಮತ್ತು ಉರಿಲಿಂಗಪೆದ್ದಿ ಹೇಳಿದ್ದಾರೆ. ಲಿಂಗವಿಲ್ಲದವಂಗೆ ಜಂಗಮವೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಶಿವಲೆಂಕ ಮಂಚಣ್ಣನು ನಪುಂಸಕಲಿಂಗ ನಾಸ್ತಿಯಾದಾಗ ಜಂಗಮದರಿವು ಬರುತ್ತದೆಂದು ತಿಳಿಸಿದ್ದಾರೆ. ಪುಲ್ಲಿಂಗವು ಅಹಂಭಾವದ ಸಂಕೇತವಾಗಿ, ಸ್ತ್ರೀಲಿಂಗವು ಮೌಢ್ಯತೆಯ ಸಂಕೇತವಾಗಿ, ನಪುಂಸಕಲಿಂಗವು ವೈರುಧ್ಯದ ಸಂಕೇತವಾಗಿ ಇಲ್ಲಿ ಬಳಕೆಯಾಗಿವೆ. ಹೀಗಾಗಿ ಅಹಂಭಾವ, ಮೌಢ್ಯತೆ, ವೈರುಧ್ಯಗಳನ್ನು ತೊರೆದಾಗ ಗುರು-ಲಿಂಗ-ಜಂಗಮ ಕಾಣ ಸಿಕೊಳ್ಳುತ್ತವೆಂದು ಶಿವಲೆಂಕ ಮಂಚಣ್ಣ ಹೇಳಿದ್ದಾರೆ.

“ಅಂಗದಲ್ಲಿ ಆಚಾರವ ತೋರಿದ, ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ, ಆ ಅರಿವೇ ಜಂಗಮವೆಂದು ತೋರಿದ.....”
-ಅಕ್ಕಮಹಾದೇವಿ (ಸ.ವ.ಸಂ.5, ವ:2)

ಅಕ್ಕಮಹಾದೇವಿಯೂ ಕೂಡ ತನ್ನೊಳಗಡೆಯೇ ಜಂಗಮನಿದ್ದಾನೆಂದು ಹೇಳಿದ್ದಾರೆ. ಪ್ರಾಣದಲ್ಲಿ ನೆಲೆಗೊಂಡ ಅರಿವೇ ಜಂಗಮವೆಂದು ತಿಳಿಸಿದ್ದಾರೆ. “ಎನ್ನ ಪ್ರಾಣವೇ ಜಂಗಮ, ಎನ್ನ ಜೀವವೇ ಜಂಗಮ” ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ.

“ವ್ರತವಿಲ್ಲದ ಗುರವ ಪೂಜಿಸಲಾಗದು
ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು
ವ್ರತವಿಲ್ಲದವರ ಅಂಗಳ ಮೆಟ್ಟಲಾಗದು......”
-ಅಕ್ಕಮ್ಮ (ಸ.ವ.ಸಂ.5, ವ:579)

ಅಕ್ಕಮ್ಮ ಈ ವಚನದಲ್ಲಿ ವ್ರತದ ಬಗ್ಗೆ ಪ್ರಾಮುಖ್ಯತೆ ನೀಡಿದ್ದಾರೆ. ವ್ರತವೆಂದರೆ ಇಲ್ಲಿ ನಿಷ್ಠೆ-ಬದ್ಧತೆ ಎಂದರ್ಥವಾಗುತ್ತದೆ. ಶರಣಸಿದ್ಧಾಂತದ ಬಗೆಗೆ ನಿಷ್ಠೆ ತಾಳುವುದನ್ನೇ ವ್ರತವೆಂದು ಹೇಳಲಾಗಿದೆ. ಅಕ್ಕಮ್ಮ ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದೆಂದು ಹೇಳಿದ್ದಾರೆ.

“ಹೊನ್ನ ಹಿಡಿದವರು ಗುರುದ್ರೋಹಿಗಳು
ಹೆಣ್ಣ ಹಿಡಿದವರು ಲಿಂಗ ದ್ರೋಹಿಗಳು
ಮಣ್ಣ ಹಿಡಿದವರು ಜಂಗಮದ್ರೋಹಿಗಳು......”
-ಅಮುಗೆ ರಾಯಮ್ಮ (ಸ.ವ.ಸಂ.5, ವ:663)

 

2) “ಶ್ರಿಗುರು ಕಾರುಣ್ಯವುಳ್ಳ ಸದ್ಭಕ್ತರಿಗೆ
ಜಂಗಮಲಿಂಗವಾಗಿ ತೋರುವುದಯ್ಯಾ
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ
ಮಾನವನಾಗಿ ತೋರುವುದಯ್ಯಾ.......”
-ಕಾಳವ್ವೆ (ಸ.ವ.ಸಂ.5, ವ:291)

ಈ ಇಬ್ಬರು ವಚನಕಾರ್ತಿಯರು ಇಲ್ಲಿ ನಿರ್ಭಿಡೆಯಿಂದ ಮಾತನಾಡಿದ್ದಾರೆ. ಹೊನ್ನು-ಹೆಣ್ಣು-ಮಣ ್ಣಗಾಗಿ ಪರಿತಪಿಸುವವರು ಗುರು-ಲಿಂಗ-ಜಂಗಮ ದ್ರೋಹಿಗಳಾಗಿದ್ದಾರೆಂದು ಅಮುಗೆರಾಯಮ್ಮ ಸ್ಪಷ್ಟಪಡಿಸಿದ್ದಾರೆ. ಕಾಳವ್ವೆ ತನ್ನ ವಚನದಲ್ಲಿ ಬಹುಮಹತ್ವದ ವಿಚಾರ ತಿಳಿಸಿದ್ದಾರೆ. ನಿಜವಾದ ಸದ್ಭಕ್ತನಿಗೆ ಜಂಗಮ, ಲಿಂಗರೂಪದಲ್ಲಿ ಕಾಣ ಸುತ್ತದೆ. ಪಾಪಿಷ್ಠರಿಗೆ ಅದು ಮಾನವನ ರೂಪದಲ್ಲಿ ಕಾಣ ಸಿಕೊಳ್ಳುತ್ತದೆ. ಹೀಗೆ ನಿಷ್ಠುರ ಸತ್ಯಗಳನ್ನಿವರು ಹೇಳಿದ್ದಾರೆ.

“ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ?
ಹಡೆದ ಮಕ್ಕಳಕೊಂದು ಜಂಗಮಕ್ಕೆ ಉಣಲಿಕ್ಕಿದವರುಂಟೆ?
-ಸತ್ಯಕ್ಕ (ಸ.ವ.ಸಂ.5, ವ:1222)

ಜಂಗಮ ವೇಷದಲ್ಲಿ ಬಂದು ಮಡದಿ-ಮಕ್ಕಳ ಕೇಳಿದವರನ್ನು ಸತ್ಯಕ್ಕ ವಿರೋಧಿಸಿದ್ದಾರೆ. ಜಂಗಮ ಹೊರಗಿಲ್ಲ, ಒಳಗಿದ್ದಾನೆಂದು ತಿಳಿಹೇಳಿದ್ದಾರೆ. ಕಳ್ಳ ವೇಷದ ಜಂಗಮರನ್ನು ವಿಡಂಬಿಸಿದ್ದಾಳೆ. ಹೀಗೆ ಶರಣರ ಅನೇಕ ವಚನಗಳಲ್ಲಿ “ಜಂಗಮ” ಪದ ಬಳಕೆಯಾಗಿದೆ. ಹೆಚ್ಚಿನ ವಚನಕಾರರರೆಲ್ಲ ಕಾವಿಧಾರಿ ಜಂಗಮನನ್ನು ತಿರಸ್ಕರಿಸಿ, ಅಂತರಂಗದಲ್ಲಿರುವ ಅನುಭಾವಿಯನ್ನೇ ಜಂಗಮನೆಂದು ತಿಳಿದುಕೊಂಡಿದ್ದಾರೆ. ಇದು ಲಿಂಗಾಯತ ಧರ್ಮದ ವಿಶಿಷ್ಟತೆಯಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...