ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ

Date: 15-03-2023

Location: ಬೆಂಗಳೂರು


‘ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣರ ಧಾರ್ಮಿಕ ಸಿದ್ಧಾಂತಗಳು’ ಅಂಕಣದಲ್ಲಿ ಅಷ್ಟಾವರಗಳಲ್ಲಿ ಪ್ರಮುಖವಾದ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವದ ಕುರಿತು ವಿವರಿಸಿದ್ದಾರೆ.

ಪಾದ ಮತ್ತು ಉದಕ ಈ ಎರಡೂ ಪದಗಳು ಸಂಯೋಜನೆಗೊಂಡು ಪಾದೋದಕವಾಗಿದೆ. ಅತ್ಯಂತ ಪ್ರಾಚೀನವಾದ ಶೈವಧರ್ಮದಲ್ಲಿಯೂ ಪಾದೋದಕದ ಪ್ರಸ್ತಾಪವಿದೆ. ಆದರೆ ಬಸವಾದಿ ಶರಣರು ಪಾದೋದಕವನ್ನು ಕಂಡುಕೊಂಡ ರೀತಿ ತುಂಬ ವಿಶಿಷ್ಟವಾದುದಾಗಿದೆ. ಗುರುವಿನ ಪಾದವ ತೊಳೆದು ಕುಡಿಯುವ ಉದಕಕ್ಕೆ ಪಾದೋದಕವೆಂದು ಹಾಗೂ ಸ್ಥಾವರಲಿಂಗ ಪೂಜಿಸುವಾಗ ಆ ಲಿಂಗದ ಮೇಲೆ ಉದಕವನೆರೆದು, ಅದರ ಬುಡದಲ್ಲಿ ಹರಿದುಬರುವ ಉದಕವೇ ಪಾದೋದಕವೆಂದು ಹಲವಾರು ವಿದ್ವಾಂಸರು, ಗುರು ಪರಂಪರೆಯವರು ಹೇಳಿದ್ದಾರೆ. ಆದರೆ ಲಿಂಗಾಯತ ಧರ್ಮದಲ್ಲಿ ಪಾದೋದಕವೆಂದರೆ ವಿಶಿಷ್ಟ ಅರ್ಥವಿದೆ.

ನೀರಿಗೆ ಸಂಸ್ಕಾರ ನೀಡಿದಾಗ ಅದು ಪಾದೋದಕವಾಗುತ್ತದೆ. ನೀರು ಶುದ್ಧೀಕರಣಗೊಂಡಾಗ, ಸ್ವಚ್ಛವಾದಾಗ ಪಾದೋದಕವಾಗುತ್ತದೆ. ಸ್ಥಾವರಲಿಂಗವನ್ನು ತೊಳೆದ ನೀರಾಗಲಿ, ಗುರುವಿನ ಪಾದವನ್ನು ತೊಳೆದ ನೀರಾಗಲಿ ಪಾದೋದಕವಾಗುವುದಿಲ್ಲ. ಇದಕ್ಕೆ ಬಸವಣ್ಣನವರ ಒಂದು ವಚನವನ್ನಿಲ್ಲಿ ಉದಾಹರಿಸಬಹುದು.

“ತ್ರಿವಿಧೋದಕದ ವಿವರವೆಂತೆಂದಂಡೆ;
ಲಿಂಗೋದಕ, ಪಾದೋದಕ, ಪ್ರಸಾದೋದಕ-
ಲಿಂಗೋದಕವೆಂಬುದು ಶಿವಮಂತ್ರ ಸಂಸ್ಕಾರದಿಂದಾದುದು
ಪಾದೋದಕವೆಂಬುದು ಲಿಂಗಕ್ಕೆ ಆರೋಗಣೆಯ ಮಾಡಿಸಿದುದು...”
-ಬಸವಣ್ಣ (ಸ.ವ.ಸಂ.1, ವ:1221)

ಬಸವಣ್ಣ ಇಲ್ಲಿ ಮೂರು ರೀತಿ ಉದಕಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಲಿಂಗೋದಕವೆಂಬುದು ಶಿವಮಂತ್ರ ಸಂಸ್ಕಾರದಿಂದಾದರೆ, ಪಾದೋದಕವೆಂಬುದು ತನ್ನ ಇಷ್ಟಲಿಂಗಕ್ಕೆ ಮಜ್ಜನವೆರೆದುದೇ ಆಗಿದೆ. ಪ್ರಸಾದೋದಕವೆಂಬುದು ಲಿಂಗಕ್ಕೆ ಆರೋಗಣೆಯನ್ನು ಮಾಡಿಸಿರುವುದಾಗಿದೆ. ಇಷ್ಟಲಿಂಗದ ಮೂಲಕ ಸಂಸ್ಕಾರಗೊಂಡ ಉದಕವೇ ಪಾದೋದಕವಾಗಿದೆ. ಬ್ರಹ್ಮನ ನುಡಿಯಲ್ಲಿ ಪರುಷವಿದ್ದರೆ, ವಿಷ್ಣುವಿನ ನಯನದಲ್ಲಿ ಪರುಷಗುಣವಿದೆ. ಅದೇ ರೀತಿ ರುದ್ರನ ಹಸ್ತ ಪರುಷವಾದರೆ, ಕೂಡಲಸಂಗನ ಶರಣರ ಪಾದವೇ ಪುರುಷವಾಗಿದೆಯೆಂದು ಬಸವಣ್ಣ ಇನ್ನೊಂದು ವಚನದಲ್ಲಿ ಹೇಳಿದ್ದಾರೆ. (ನೋಡಿ: ವ: 876). ಶರಣರ ಪಾದವೇ ಪರುಷವಾಗುವದೆಂದರೆ. ಶರಣರ ಎಲ್ಲ ಅಂಗಾಂಗಳಲ್ಲಿಯೂ ಪರುಷ ಗುಣವಿದೆಯೆಂದು ಅರ್ಥವಾಗುತ್ತದೆ. ಈ ದೇಹವೆಂಬ ದೇವಾಲಯ ನಿಂತಿರುವುದೇ ಪಾದದ ಮೇಲೆ, ಇಂತಹ ಪಾದದಲ್ಲಿ ಪರುಷಗುಣವಿದೆಯೆಂದರೆ, ಅದು ಇಡೀ ದೇಹದಲ್ಲಿಯೇ ಪರುಷಗುಣವಿದೆಯೆಂದು ಅರ್ಥವಾಗುತ್ತದೆ. ಬ್ರಹ್ಮ-ವಿಷ್ಣು-ರುದ್ರರಿಗೆ ಒಂದೊಂದು, ಅಂಗದಲ್ಲಿ ಪರುಷ ಗುಣವಿದ್ದರೆ, ಶರಣರ ಪ್ರತಿಯೊಂದು ಅಂಗವೂ ಪರುಷಗುಣದಿಂದ ಕೂಡಿದೆ. ಹೀಗೆ ಇಡೀ ದೇಹವೇ ಪರುಷವಾದಾಗ ಅದು ದೇವಾಲಯವಾಗುತ್ತದೆ. ಶರಣರು ಪ್ರತಿಪಾದಿಸಿದ ಇಂತಹ ತತ್ವಗಳು ತುಂಬ ವೈಜ್ಞಾನಿಕವಾಗಿವೆ.

“ಸೂಳೆ ಮುತ್ತು ಗೊರವಿತಿಯಾದಂತೆ, ಬಂಟೆ ಮುತ್ತು ಬಾಗಿಲಕಾಯ್ದಂತೆ,
ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ!
ಎಲ್ಲ ದೇವರಿಗೆ ಮಸ್ತಕ ಪೂಜೆ, ಜಂಗಮ ದೇವರಿಗೆ ಪಾದಪೂಜೆ
ಪಾದೋದಕ ಪ್ರಸಾದವ ಕೊಡುವ ಜಂಗಮ ದೇವರು,
ಕಂಠಪವಾಡ, ಧೂಳಪವಾಡ, ಸರ್ವಾಂಗಪವಾಡ ಶೀಲಸಂಬಂಧವೆಂದಡೆ
ಕೇಸರಿ ಶುಕನಾದಂತೆ ಕಾಣಾ ಗುಹೇಶ್ವರಾ..”
-ಅಲ್ಲಮಪ್ರಭು (ಸ.ವ.ಸಂ.2, ವ:1359)

ಈ ವಚನದಲ್ಲಿ ಅಲ್ಲಮಪ್ರಭು ಪಾದೋದಕ-ಪ್ರಸಾದಗಳ ಬಗೆಗೆ ಮಹತ್ವದ ಮಾತನ್ನು ಹೇಳಿದ್ದಾರೆ. ಎಲ್ಲ ದೇವರುಗಳಿಗೆ ಮಸ್ತಕಪೂಜೆ, ಜಂಗಮದೇವರಿಗೆ ಪಾದಪೂಜೆಯೆಂಬುದು ಬಹುಮಹತ್ವದ ನುಡಿಯಾಗಿದೆ. ಜಂಗಮದೇವರೆದುರು ಯಾವ ದೇವರೂ ಇಲ್ಲ. ಹಾಗೊಂದು ವೇಳೆ ನಂಬಿದರೆ, ಅದು ಕೇಸರಿ (ಸಿಂಹ), ಶುನಕವಾದಂತೆ (ನಾಯಿ) ಎಂದು ತಿಳಿಸಿದ್ದಾರೆ. ಇಲ್ಲಿ ಬಳಸಿರುವ ಜಂಗಮ ಪದದ ಅರ್ಥ ಅನುಭಾವವಾಗಿದೆ, ಚಲನಶೀಲ ಶಕ್ತಿಯಾಗಿದೆ. ಇದೇ ನಿಜವಾದ ದೇವರು, ಇಂತಹ ಬೆಳಕನ್ನು-ಜ್ಞಾನವನ್ನು ದೇವರೆಂದು ಪೂಜಿಸುವ ಶರಣರು ಪಾದೋದಕ-ಪ್ರಸಾದಗಳ ಬಗೆಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.

“ಕರುಣ ಜಲವೆ ಗುರುಪಾದೋದಕ,
ವಿನಯ ಜಲವೆ ಲಿಂಗಪಾದೋದಕ,
ಸಮತಾಜಲವೆ ಜಂಗಮಪಾದೋದಕ,
-ಚೆನ್ನಬಸವಣ್ಣ (ಸ.ವ.ಸಂ.3, ವ:1128)

ಈ ವಚನದಲ್ಲಿ ಚೆನ್ನಬಸವಣ್ಣನವರು ಮಹತ್ವದ ವಿಚಾರವನ್ನು ತಿಳಿಸಿದ್ದಾರೆ. ಗುರುಪಾದೋದಕವೆಂದರೆ ಗುರುವಿನ ಪಾದ ತೊಳೆದ ನೀರೆಂದು ಇತರ ಧರ್ಮಗಳು ಹೇಳಿದರೆ, ಗುರುವಿನ ಕರುಣೆಯೇ ಗುರುಪಾದೋದಕವೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಅದೇ ರೀತಿ ವಿನಯ, ಲಿಂಗಪಾದೋದಕ ಮತ್ತು ಸಮತಾಜಲವೇ ಜಂಗಮ ಪಾದೋದಕವಾಗಿದೆ. ಇವೆಲ್ಲಾ ಲಿಂಗಾಯತ ಧರ್ಮದ ಮಹತ್ವವನ್ನು ಹೆಚ್ಚಿಸಿವೆ. ಕರುಣೆ, ವಿನಯ, ಸಮಾನತೆಗಳೇ ಕ್ರಮವಾಗಿ ಗುರು, ಲಿಂಗ, ಜಂಗಮಗಳಾಗುವವೆಂದು ಹೇಳಿರುವ ಮಾತು ಅತ್ಯಂತ ಪ್ರಮುಖವಾದದ್ದಾಗಿದೆ. ಈ ತ್ರಿವಿಧೋದಕವು ಕೇವಲ ಧಾರ್ಮಿಕ ಪರಿಭಾಷೆಯಾಗಿರದೆ, ಇದು ಶರಣರ ಸಾಮಾಜಿಕ ಸಿದ್ಧಾಂತವಾಗಿದೆ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕವೆಂಬ ವಿಂಗಡೆಯಿಲ್ಲ. ಇಲ್ಲಿ ಧಾರ್ಮಿಕವೇ ಸಾಮಾಜಿಕವಾಗಿದೆ, ಇಹವೇ ಪರವಾಗಿದೆ. ಇಲ್ಲಿಯದೇ ಅಲ್ಲಿಯದಾಗಿದೆ. ಹೀಗೆ ಧಾರ್ಮಿಕ-ಸಾಮಾಜಿಕಗಳಲ್ಲಿ ಸಮಾನ್ವಯ ಸಾಧಿಸಿದ ಏಕೈಕ ಧರ್ಮ ಲಿಂಗಾಯತ ಧರ್ಮವಾಗಿದೆ.

“ಪಾದೋದಕವು ಲಿಂಗದ ಮೇಲೆ ಎಂದಲ್ಲಿ ಜಂಗಮ ಘನವಾಯಿತ್ತು
ಆ ಲಿಂಗೋದಕ ಸ್ವೀಕರಿಸಿದಲ್ಲಿ ಜಂಗಮಕ್ಕೆ ಲಿಂಗ ಘನವಾಯಿತ್ತು
ಲಿಂಗದ ಕಳೆಯೇ ಜಂಗಮ, ಜಂಗಮದ ಕಳೆಯೇ ಲಿಂಗ
ಆವುದು ಘನವೆಂಬೆ? ಆವುದು ಕಿರಿದೆಂಬೆ?
ಲಿಂಗ-ಜಂಗಮ ನೇತ್ರದಲ್ಲಿಯ ಪ್ರಕಾಶದಂತೆ ತಿಳಿದೆ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನಾ”
-ಸಿದ್ಧರಾಮ (ಸ.ವ.ಸಂ.4, ವ:569)

ಈ ವಚನದಲ್ಲಿ ಶಿವಯೋಗಿ ಸಿದ್ಧರಾಮನು ಲಿಂಗದ ಕಳೆಯೇ ಜಂಗಮ, ಜಂಗಮದ ಕಳೆಯೇ ಲಿಂಗವೆಂದು ಹೇಳುತ್ತ, ಲಿಂಗ-ಜಂಗಮಗಳು ನೋಡಲು ಎರಡಾಗಿವೆಯೇ ಹೊರತು ತಿಳಿದು ನೋಡಿದಾಗ ಅವು ಒಂದೇಯಾಗಿವೆಯೆಂಬ ಸತ್ಯವನ್ನು ಈ ವಚನದಲ್ಲಿ ಹೇಳಿದ್ದಾರೆ. ಪಾದೋದಕವೆಂಬುದು ಪರಮಾತ್ಮನ ಚಿದ್ರೂಪು ಆಗಿದೆ. ಅದೇ ಮೋಕ್ಷದ ಮಾರ್ಗವಾಗಿದೆ, ಎಲ್ಲ ಪಾಪದ ಕೇಡುಗಳನ್ನು ಅದು ದೂರಮಾಡುತ್ತದೆಯೆಂದು ಇನ್ನೊಂದು ವಚನದಲ್ಲಿ ಹೇಳಿರುವ (ವ:570) ಅವರು, ಪಾದೋದಕವೆಂಬುದು, ತೊಳೆದು ಕುಡಿಯುವ ಉದಕವಾಗಿರದೆ ಅದು ದೇವರ ಮಹಿಮೆಯೇ ಆಗಿದೆಯೆಂದು ತಿಳಿಸಿದ್ದಾರೆ.

“ಪಾದದಲ್ಲಿ ಪಾದೋದಕ
ಆ ಪಾದತೀರ್ಥವನು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬ
ಇಚ್ಛೆ ಹುಟ್ಟಿದಲ್ಲಿ ಲಿಂಗೋದಕ
ಮಜ್ಜನದಲ್ಲಿ ಮಜ್ಜನೋದಕ......”
-ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ (ಸ.ವ.ಸಂ.5, ವ:784)

ಈ ವಚನದಲ್ಲಿ ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನು, ದಶವಿಧದ ಪಾದೋದಕಗಳನ್ನು ಹೆಸರಿಸಿದ್ದಾರೆ ಆದರೆ ಈ ಎಲ್ಲ ಪಾದೋದಕಗಳು ತನ್ನಂತರಂಗದಲ್ಲಿಯೇ ಇವೆಯೆಂದು ಹೇಳಿದ್ದಾರೆ. ಹೀಗೆ ಶರಣರು ಅರ್ಥೈಸಿದ ಪಾದೋದಕ ವಿಶಿಷ್ಟವಾದುದಾಗಿದೆ.

ಪ್ರಸಾದ

“ಪ್ರಸಾದ” ಪದವು ಅನೇಕ ಧಾರ್ಮಿಕಾಚರಣೆಗಳಲ್ಲಿ ಬಳಕೆಯಲ್ಲಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಪ್ರಸಾದದ ಪರಿಕಲ್ಪನೆ ತುಂಬ ಉದಾತ್ತವಾದುದಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ಮಾಡಿ ಪಡೆಯುವ ಹಣ್ಣು-ಹಾಲು-ಆಹಾರ ಇವುಗಳನ್ನು ಪ್ರಸಾದವೆಂದು ಉಳಿದ ಧರ್ಮದ ಭಕ್ತರು ನಂಬಿದರೆ, ಶರಣರು ಹೇಳಿರುವ ಪ್ರಸಾದದ ಪರಿಕಲ್ಪನೆಗಳು ವಿನೂತನವಾದವುಗಳಾಗಿದೆ.

ಶರಣರ ಪರಿಕಲ್ಪನೆಯಲ್ಲಿ ಪ್ರಸಾದವೆಂದರೆ ಸುಜ್ಞಾನವಾಗಿದೆ. ಆತ್ಮದ ಮೂಲಕ ಹುಟ್ಟಿಕೊಂಡ ಅಂತರಂಗದ ಅರಿವಾಗಿದೆ. ಜಂಗಮ ಪ್ರಸಾದವೇ ಇಲ್ಲಿ ಪ್ರಾಣವಾಗಿದೆ. ಗುರು-ಲಿಂಗ-ಜಂಗಮಗಳ ಮೂಲಕ, ಅರಿವು-ಆಚಾರ-ಸುಜ್ಞಾನಗಳು ಅನುಷ್ಠಾನಗೊಂಡು ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಗಳಾಗಿ ವೆಯೆಂದು ಶರಣರು ಹೇಳಿದ್ದಾರೆ. ಅಂಗ ಗುಣವನ್ನಳಿದು, ಲಿಂಗಗುಣ ಪಡೆಯುವದೇ ಪ್ರಸಾದವಾಗಿದೆ. ಕಾಮ-ಕ್ರೋಧಗಳನ್ನು ತೊರೆದು ದಯೆ-ಅಂತಃಕರಣಗಳನ್ನು ಪಡೆದುಕೊಳ್ಳುವದೇ ನಿಜವಾದ ಪ್ರಸಾದದ ಪರಿಕಲ್ಪನೆಯಾಗಿದೆ.

ದಿನನಿತ್ಯಮಾಡುವ ಅಡುಗೆ ಪದಾರ್ಥವಾದರೆ, ಅದನ್ನು ದೇವರಿಗೆ ಅರ್ಪಿಸಿ, ನೈವೇದ್ಯ ಮಾಡಿದ ನಂತರ ಸ್ವೀಕರಿಸುವುದು ಪ್ರಸಾದವೆಂದು ಇತರ ಧಾರ್ಮಿಕಾಚರಣೆಗಳಲ್ಲಿ ಕಾಣಬಹುದಾಗಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಬರುವ ಪ್ರಸಾದದ ಪರಿಕಲ್ಪನೆ ತುಂಬ ಭಿನ್ನವಾದುದಾಗಿದೆ.

“ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
ಕುಲವುಂಟೆ ಜಂಗಮವಿದ್ದೆಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?”
-ಬಸವಣ್ಣ (ಸ.ವ.ಸಂ.1, ವ:770)

ಈ ವಚನದಲ್ಲಿ ಬಸವಣ್ಣ ಪ್ರಸಾದದ ಮಹತ್ವವನ್ನು ತಿಳಿಸಿದ್ದಾರೆ. ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಎಂದು ಕೇಳಿದ್ದಾರೆ. ಬಸವಣ್ಣನವರ ಪ್ರಕಾರ ಲಿಂಗವು ಹೊಲೆಯನ್ನು ಹೋಗಲಾಡಿಸುತ್ತದೆ, ಜಂಗಮನು ಕುಲಭೇದವನ್ನು ಅಳಿಸಿ ಹಾಕುತ್ತಾರೆ. ಅದೇರೀತಿ ಪ್ರಸಾದವು ಎಂಜಲವಾಗದೆ ಪವಿತ್ರವಾಗುತ್ತದೆ. ಹೀಗಾಗಿ ಈ ಲಿಂಗ-ಜಂಗಮ-ಪ್ರಸಾದಗಳು ಕೇವಲ ಅಲಂಕಾರಿಕವಾಗಿರದೆ, ಹೊಲೆಯನ್ನೋಡಿಸಲು, ಕುಲಭೇಧವನ್ನಳಿಸಿಹಾಕಲು, ಸಹಾಯಕವಾಗಿವೆ. ಇನ್ನೊಂದು ವಚನದಲ್ಲಿ ಪ್ರಾಣಲಿಂಗವು ಪ್ರಸಾದದಲ್ಲಿ ಸನ್ನಿಹಿತವಾಯಿತೆಂದು ಬಸವಣ್ಣ ತಿಳಿಸಿದ್ದಾರೆ.

“ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ

ಧನಮುಟ್ಟಿ ಕೊಂಡುದು ಪ್ರಸಾದವಲ್ಲ...
ಇಕ್ಕುವವ ಶಿವದ್ರೋಹಿ; ಕೊಂಬವ ಗುರುದ್ರೋಹಿ.
ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ...”
-ಚೆನ್ನಬಸವಣ್ಣ (ಸ.ವ.ಸಂ.3, ವ:242)

ಚೆನ್ನಬಸವಣ್ಣ ಈ ವಚನದಲ್ಲಿ ಪ್ರಸಾದ ಎಲ್ಲಕ್ಕಿಂತಲೂ ಘನವಾದುದೆಂದು ಹೇಳಿದ್ದಾರೆ. ತನು-ಮನ-ಧನಗಳನ್ನು ಮೀರಿ ನಿಂತುದೇ ಪ್ರಸಾದವೆಂದು ತಿಳಿಸಿದ್ದಾರೆ. ಪ್ರಸಾದವಾವುದು ಓಗರವಾವುದು? ಎಂಬುದನ್ನು ತಿಳಿಯದ ಮೂಢರನ್ನು ಕಂಡು ವಿಡಂಬಿಸಿದ್ದಾರೆ. ಪ್ರಸಾದಕ್ಕೂ-ಅನ್ನಕ್ಕೂ ವ್ಯತ್ಯಾಸವಿದೆಯೆಂದು ಇಲ್ಲಿ ತಿಳಿಸಲಾಗಿದೆ.

“ಗುರು ಮುಟ್ಟಿಬಂದ ಶುದ್ಧ ಪ್ರಸಾದಿಯಾದಡೆ,
ವಾತ ಪಿತ್ತ ಶ್ಲೇಷ್ಮವಳಿದಿರಬೇಕು,
ಲಿಂಗ ಮುಟ್ಟಿಬಂದ ಸಿದ್ಧ ಪ್ರಸಾದಿಯಾದಡೆ
ಆದಿ ವ್ಯಾದಿಗಳಿಲ್ಲದಿರಬೇಕು.
ಮೂರರ ಅರುಹುಗಟ್ಟಿಗೊಳ್ಳುವ ಮಹಾ ಪ್ರಸಾದಿಯಾದಡೆ
ಮರಣವಿಲ್ಲದಿರಬೇಕು.
-ಸಿದ್ಧರಾಮ (ಸ.ವ.ಸಂ.4, ವ:1280)

ಗುರು ಮುಟ್ಟಿಬಂದುದು ಶುದ್ಧಪ್ರಸಾದವಾದಡೆ, ಲಿಂಗ ಮುಟ್ಟಿಬಂದುದು ಸಿದ್ಧಪ್ರಸಾದವಾಗಿದೆ ಮತ್ತು ಜಂಗಮ ಮುಟ್ಟಿಬಂದುದು ಪ್ರಸಿದ್ಧ ಪ್ರಸಾದವಾಗಿದೆ. ಇಂತಹ ತ್ರಿವಿಧ ಪ್ರಸಾದವ ಸೇವಿಸಿದ ನಂತರ ಮಲತ್ರಯಕ್ಕೊಳಗಾಗಬಾರದೆಂದು ಈ ವಚನದಲ್ಲಿ ಸಿದ್ಧರಾಮ ಸ್ಪಷ್ಟಪಡಿಸಿದ್ದಾರೆ. ಅಂದರೆ ಪ್ರಸಾದವೆಂದರೆ ಇಲ್ಲಿ ಓಗರವಲ್ಲ, ನಿಜವಾದ ಪ್ರಸಾದ ಮಲತ್ರಯಕ್ಕೊಳಗಾಗುವುದಿಲ್ಲವೆಂದು ಹೇಳಲಾಗಿದೆ. ಅಡಿಗೆಮಾಡಿ ಉಣ್ಣುವುದು ಭೂತ, ಹಾಗೆ ಮಾಡದೆ ಬದುಕಿನ ಗುರಿಯನರಿಯಬಲ್ಲಡೆ ಅದೇ ಮಹಾಪ್ರಸಾದವೆಂದು ಸಿದ್ಧರಾಮ ತಮ್ಮ ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಪ್ರಸಾದಕಾಯನಾದ ಬಳಿಕ ರಸೌಷಧಿಯ ಅವಶ್ಯಕತೆಯಿರುವುದಿಲ್ಲ, ಮನದಿಚ್ಛೆ ಪೂರ್ಣವಾದ ಬಳಿಕ ಮಂತ್ರದ ಹಂಗಿರುವುದಿಲ್ಲ, ಆತ್ಮವೇ ಪರಮಾತ್ಮನಾದ ಬಳಿಕ ಪರ್ವತದ ಹಂಗಿರುವುದಿಲ್ಲವೆಂದು ತಿಳಿಸಿದ್ದಾರೆ.

“ಪ್ರಾಣ ಲಿಂಗವೆಂದರಿದ ಬಳಿಕ
ಪ್ರಾಣ ಪ್ರಸಾದವಾಯಿತ್ತು
ಲಿಂಗ ಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು.”
-ಅಕ್ಕಮಹಾದೇವಿ (ಸ.ವ.ಸಂ.5, ವ:284)

“ಬಸವಣ್ಣನ ಪ್ರಸಾದವಕೊಂಡು ಎನ್ನಕಾಯ ಶುದ್ಧವಾಯಿತ್ತಯ್ಯಾ
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನಜೀವ ಶುದ್ಧವಾಯಿತ್ತಯ್ಯಾ
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನಭಾವ ಶುದ್ಧವಾಯಿತ್ತಯ್ಯಾ”
-ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5,ವ:721)

“ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?
ಪರಿಪೂರ್ಣದ ನೆಲೆಯ ತಿಳಿದು
ಪರಂಜ್ಯೋತಿಯ ಅನುಭಾವವನರಿಯದನ್ನಕ್ಕ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?”
-ನೀಲಮ್ಮ (ಸ.ವ.ಸಂ.5, ವ:998)

ಈ ಮೂರೂ ವಚನಗಳಲ್ಲಿ ಪ್ರಸಾದಕ್ಕೆ ಸಂಬಂಧಿಸಿದ ವಿವಿಧ ಅಭಿವ್ಯಕ್ತಿಗಳನ್ನು ನೋಡಬಹುದಾಗಿದೆ. ಪ್ರಾಣವೇ ಲಿಂಗವಾದಾಗ ಪ್ರಾಣಪ್ರಸಾದವಾಯಿತೆಂದು ಹೇಳಿರುವ ಅಕ್ಕಮಹಾದೇವಿ ಇಲ್ಲಿ ಪ್ರಸಾದವೆಂದರೆ ಆಹಾರವಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರ ಪ್ರಸಾದವಕೊಂಡು, ತನ್ನ ಕಾಯ-ಜೀವ-ಭಾವ ಶುದ್ಧವಾಯಿತೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದರೆ, ಪ್ರಸಾದಿಗಳಾಬೇಕಾದರೆ, ಪರಿಪೂರ್ಣದ ನೆಲೆಯನರಿತು ಪರಂಜ್ಯೋತಿಯ ಅನುಭಾವವನರಿಯಬೇಕೆಂದು ನೀಲಮ್ಮ ಹೇಳಿದ್ದಾರೆ.

“ಗುರುವಿಲ್ಲದವಂಗೆ ಲಿಂಗವಲ್ಲ
ಲಿಂಗವಿಲ್ಲದವಂಗೆ ಜಂಗಮವಿಲ್ಲ
ಜಂಗಮವಿಲ್ಲದವಂಗೆ ಪ್ರಸಾದವಿಲ್ಲ
ಪ್ರಸಾದವಿಲ್ಲದವಂಗೆ ನಿರ್ವಾಣವಿಲ್ಲ”
-ಆದಯ್ಯ (ಸ.ವ.ಸಂ.6, ವ:1129)

“ಪಾದೋದಕದಿಂದ ಪದಂ ನಾಸ್ತಿಯಾಗಿರಬೇಕು
ಲಿಂಗೋದಕದಿಂದ ಅಂಗ ಮಂಗಳಮಯವಾಗಬೇಕು
ಪ್ರಸಾದೋದಕದಿಂದ ಆತ್ಮಭಾವಕ್ಕೆ ಬೀಜವಿಲ್ಲದಿರಬೇಕು.”
-ಮೋಳಿಗೆ ಮಾರಯ್ಯ (ಸ.ವ.ಸಂ.8, ವ:1894)

ಗುರು-ಲಿಂಗ-ಜಂಗಮವಿಲ್ಲದವರಿಗೆ ಪ್ರಸಾದವಿಲ್ಲವೆಂದು ಆದಯ್ಯ ಹೇಳಿದರೆ, ಪಾದೋದಕದಿಂದ ಪದಂ ನಾಸ್ತಿಯಾಗಿರಬೇಕೆಂದು ಮೋಳಿಗೆ ಮಾರಯ್ಯ ಹೇಳಿದ್ದಾರೆ. ಹೀಗೆ ಶರಣರು ಪ್ರಸಾದದ ಬಗೆಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಅಷ್ಟಾವರಣಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ಅವು ಕೇವಲ ಹೊರಾವರಣಗಳಾಗದೆ, ಒಳಗೆ ಬೆಳೆಯಬಹುದಾದ ಶಕ್ತಿ ಸಂಕೇತಗಳಾಗಿವೆ. ಅಷ್ಟಾವರಣಗಳ ಬಗೆಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ.

ವಿಭೂತಿ
ಶೈವಾಗಮಗಳಲ್ಲಿ ವಿಭೂತಿ-ರುದ್ರಾಕ್ಷಿ-ಮಂತ್ರಗಳ ಪ್ರಸ್ತಾಪವಿದೆ. ಆದರೆ ಈ ವಿಷಯದಲ್ಲಿ ಆಗಮಗಳಲ್ಲಿ ಹೇಳಿದ ವಿಚಾರಗಳಿಗೂ, ಶರಣರು ಹೇಳಿದ ವಿಚಾರಗಳಿಗೂ ತುಂಬ ವ್ಯತ್ಯಾಸವಿದೆ. “ವಿಭೂತಿ” ಪದಕ್ಕೆ ಸಂಬಂಧಿಸಿದಂತೆ ಅನೇಕ ವ್ಯಾಖ್ಯೆಗಳಿವೆ. ವಿಭೂತಿಯೆಂದರೆ ಭಸ್ಮವೆಂದು ಎಲ್ಲರೂ ಹೇಳುತ್ತಾರೆ. ಆಕಳ ಸೆಗಣಿಯ ಕುಳ್ಳನ್ನು ಸುಟ್ಟು ಭಸ್ಮ ಮಾಡುತ್ತಾರೆ. ಸುಡುವ, ಶುದ್ಧೀಕರಿಸುವ ಕ್ರಿಯೆ ಇಲ್ಲಿ ಮುಖ್ಯವಾಗುತ್ತದೆ.

ಭೂತಿಯೆಂದರೆ ಹುಟ್ಟು-ಜನನ ಎಂದರ್ಥವಿದೆ. ಹುಟ್ಟಿದ ಮನುಷ್ಯ ಕಾಮ-ಕ್ರೋಧ ಮೊದಲಾದ ಷಡ್‍ವೈರಿಗಳೊಂದಿಗೆ ಬೆಳೆಯುತ್ತಾನೆ. ಇಂತಹ ಭೂತಿಯ ವಿಕಾರಗಳನ್ನು ಸುಟ್ಟು ಆತನನ್ನು ವಿಶೇಷವಾಗಿ ಬೆಳೆಸುವುದೇ ವಿಭೂತಿಯ ವೈಶಿಷ್ಟ್ಯತೆಯಾಗಿದೆ. ಇಂತಹ ಪುರುಷನಿಗೆ ವಿಭೂತಿ ಪುರುಷನೆಂದು ಕರೆಯುತ್ತಾರೆ. ವಿಭೂತಿ ಪುರುಷನೆಂದರೆ ಮಹಾಪುರುಷ ಎಂಬರ್ಥವಿದೆ. ಹೀಗೆ ವಿಭೂತಿ ಹಣೆಗೆ ಧರಿಸುವ ಭಸ್ಮವಾಗುವದರ ಜತೆಗೆ ಸಾಮಾನ್ಯ ವ್ಯಕ್ತಿಯನ್ನು ಮಹಾಪುರುಷನನ್ನಾಗಿ ಮಾಡುವ ಸಾಧನವಾಗಿದೆ. ಭವಪಾಶವನ್ನು ಹರಿಯುವದೇ ವಿಭೂತಿಯ ಉದ್ದೇಶವಾಗಿದೆ.

ಬಸವಾದಿ ಶರಣರು ವಿಭೂತಿಯ ಬಗೆಗೆ ಎರಡು ರೀತಿಯ ವ್ಯಾಖ್ಯೆಗಳನ್ನು ಮಾಡಿದ್ದಾರೆ. ಹಣೆಗೆ ಧರಿಸುವ ವಿಭೂತಿ ಒಂದಾದರೆ ಪುರುಷ-ವಿಭೂತಿಪುರುಷನಾಗಿ ಬೆಳೆಯುವುದು ಮತ್ತೊಂದಾಗಿದೆ. ಹೊರಗೆ ಕಾಣುವ ನೊಸಲ ವಿಭೂತಿಯ ಜತೆಗೆ, ಒಳಗಿನ ಕಾಮ-ಕ್ರೋಧ ವಿಕಾರಗಳನ್ನು ಸುಟ್ಟು ಹಾಕುವುದು ನಿಜವಾದ ವಿಭೂತಿಯಾಗಿದೆ. ಈ ಎರಡು ರೀತಿಯ ವಿಭೂತಿಗಳ ಬಗೆಗೆ ಶರಣರು ತಿಳಿಸಿದ್ದಾರೆ. ಅರಿಶಿಣ-ಕುಂಕುಮ ಮಾಂತ್ರಿಕ ದೇವತೆಗಳ ಆರಾಧನೆಯ ಪರಿಕರಗಳಾಗಿರುವುದರಿಂದ ಶರಣರು ಅವುಗಳನ್ನು ಧರಿಸದೆ, ವಿಭೂತಿಯನ್ನು ಧರಿಸಬೇಕೆಂದು ಹೇಳಿದ್ದಾರೆ. ಶರಣರು ಮಾಟ-ಮಂತ್ರಗಳನ್ನು ನಂಬುವವರಲ್ಲ, ಅಷ್ಟಾವರಣಗಳಲ್ಲಿ ಅವರು ಹೇಳಿದ ಮಂತ್ರದ ವ್ಯಾಖ್ಯೆ ವಿನೂತನವಾಗಿದೆ.

“ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ.”
-ಬಸವಣ್ಣ (ಸ.ವ.ಸಂ.1, ವ:74)

“ಶ್ರೀ ವಿಭೂತಿಯ ಹೂಸದವರ, ಶ್ರೀ ರುದ್ರಾಕ್ಷಿಯ ಧರಿಸದವರ
ನಿತ್ಯ ಲಿಂಗಾರ್ಚನೆಯ ಮಾಡದವರ, ಜಂಗಮವೇ ಲಿಂಗವೆಂದರಿಯದವರ
ತೋರದಿರು ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.
-ಬಸವಣ್ಣ (ಸ.ವ.ಸಂ.1, ವ:455)

ಈ ಎರಡು ವಚನಗಳಲ್ಲಿ ಬವಸಣ್ಣ ಹೊರಗಿನ ವಿಭೂತಿಯ ಬಗ್ಗೆ ಹೇಳಿದ್ದಾರೆ. ಮೊದಲಿನ ವಚನದಲ್ಲಿ ಅಲಂಕಾರಿಕ ಉದಾಹರಣೆಗಳಿವೆ. ನೀರಿಗೆ-ನೈದಿಲೆ, ಸಮುದ್ರಕ್ಕೆ-ತೆರೆ, ನಾರಿಗೆ-ಗುಣ, ಗಗನಕ್ಕೆ-ಚಂದ್ರಮ ಶೃಂಗಾರವಾಗಿರುವಂತೆ ಶರಣರಿಗೆ-ನೊಸಲ ವಿಭೂತಿಯೇ ಶೃಂಗಾರವಾಗಿದೆಯೆಂದು ಹೇಳಲಾಗಿದೆ. ಎರಡನೇ ವಚನದಲ್ಲಿ ವಿಭೂತಿಧರಿಸದವರ ಮುಖವ ನೋಡಲಾಗದು, ಅಂತವರನ್ನು ತೋರದಿರೆಂದು ಕೂಡಲಸಂಗಯ್ಯನಲ್ಲಿ ಬೇಡಿಕೊಂಡಿದ್ದಾರೆ.

“ಸಕಲಕ್ರಿಯೆಗಳಿಗಿದು ಕವಚ, ಸಕಲವಶ್ಯಕ್ಕಿದು ಶುಭ ತಿಲಕ” ವೆಂದು ಮತ್ತೊಂದು ವಚನದಲ್ಲಿ ಹೇಳಿದ್ದಾರೆ.
“ವಿಭೂತಿ, ಆವ ಭೂಷಣದೊಳಗು?
ಪುಲಿಯ ಚರ್ಮ ಆವ ವಸ್ತ್ರದೊಳಗು?
ಖಟ್ಟಾಂಗ ಆವ ಆಯುಧದೊಳಗು?...”
-ಅಲ್ಲಮಪ್ರಭು (ಸ.ವ.ಸಂ.2, ವ:1532)

“ವಿಭೂತಿ ವಿಭೂತಿಯೆಂಬ ಮಾತಿಗಂಜಲೇಕೊ,
ಅದು ವಿಭೂತಿ ಅಹುದೊ, ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ?
ಶ್ರೇಷ್ಠಾಚಾರವಿಡಿದು ಆಚರಿಸುವುದು ವಿಭೂತಿ......”
-ಚೆನ್ನಬಸವಣ್ಣ (ಸ.ವ.ಸಂ.3, ವ:1625)

“ಕೊಂಬನೂದುವ ಹೊಲೆಯಂಗೆ
ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?....”
-ಮಡಿವಾಳ ಮಾಚಿದೇವಿ (ಸ.ವ.ಸಂ.8, ವ:573)

ಈ ಮೂರು ವಚನಗಳಲ್ಲಿ ನೊಸಲ ಮೇಲೆ ಧರಿಸುವ ಹೊರಗಿನ ವಿಭೂತಿ ಬಗೆಗೆ ಹೇಳಲಾಗಿದೆ. ಮೊದಲಿನ ವಚನದಲ್ಲಿ ಅಲ್ಲಮಪ್ರಭು ಮೂರು ಪ್ರಶ್ನೆಗಳನ್ನು ಕೇಳುತ್ತಲೇ, ನಂತರದ ಸಾಲುಗಳಲ್ಲಿ ವಿಭೂತಿಯ ಮಹತ್ವವನ್ನು ತಿಳಿಸಿದ್ದಾರೆ. ವಸ್ತ್ರಗಳಲ್ಲಿ ಹುಲಿಯಚರ್ಮ, ಆಯುಧಗಳಲ್ಲಿ ಖಟ್ಟಾಂಗ (ಗದೆ) ಶ್ರೇಷ್ಠವಾಗಿರುವಂತೆ, ಭೂಷಣಗಳಲ್ಲಿ ವಿಭೂತಿಯೇ ಶ್ರೇಷ್ಠವಾಗಿದೆಯೆಂದು ಹೇಳಲಾಗಿದೆ. ಚೆನ್ನಬಸವಣ್ಣ ಹೊರಗಿನ ವಿಭೂತಿಯ ಪ್ರಸ್ತಾಪ ಮಾಡುತ್ತಲೇ ಒಳಗಿನ ವಿಭೂತಿಯನ್ನು ಹೇಳುತ್ತಾರೆ. ಶರಣತತ್ವಗಳ ಆಚರಣೆಯೇ ವಿಭೂತಿಯೆಂದು ವಿವರಿಸುತ್ತಾರೆ. ಮಡಿವಾಳ ಮಾಚಿದೇವರು ಹಣೆಗೆ ವಿಭೂತಿ ಭೂಷಣವೇ ಹೊರತು ಕುಂಕುಮವಲ್ಲವೆಂದು ತಿಳಿಸಿದ್ದಾರೆ. ಒಮ್ಮೆ ಶರಣಧರ್ಮ ಸ್ವೀಕರಿಸಿ ಹಣೆಗೆ ವಿಭೂತಿ ಧರಿಸಿದ ನಂತರ, ಗುರುನಿಂದಕನಾಗಿ ಹಣೆಯಲ್ಲಿ ಕುಂಕುಮ ಹಚ್ಚಿಕೊಂಡರೆ ಕೊಂಬಿನ ಹೊಲೆಯನಿಗಿಂತಲೂ ಕನಿಷ್ಠವೆಂದು ಹೇಳಿದ್ದಾರೆ.

“ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು
ಗುರುವಾಗಬಹುದೆ ಅಯ್ಯಾ?
ಬೀಜವಿಲ್ಲದೆ ಅಂಕುರವಾಗಬಲ್ಲುದೆ?
-ಅರಿವಿನ ಮಾರತಂದೆ (ಸ.ವ.ಸಂ.6, ವ:387)

ಅರಿವಿನ ಮಾರಿತಂದೆ ಈ ವಚನದಲ್ಲಿ ಒಳಗೆ ಧರಿಸಿಬೇಕಾದ ವಿಭೂತಿಯ ಬಗೆಗೆ ಹೇಳಿದ್ದಾರೆ. ಹೊರತೆಯೆಂದರೆ ಬಾಹ್ಯ ಎಂದರ್ಥವಿದೆ. ಹೊರಗೆ ಲಿಂಗಕಟ್ಟಿ ವಿಭೂತಿ ರುದ್ರಾಕ್ಷಿ ಧರಿಸಿದಾಕ್ಷಣ ಗುರುವೆನಬಹುದೆ? ಎಂದು ಇಲ್ಲಿ ಪ್ರಶ್ನಿಸಲಾಗಿದೆ. ಬೀಜವಿಲ್ಲದೆ ಸಸಿ ಹುಟ್ಟುವುದಿಲ್ಲ. ಒಳಗಡೆ ಅರಿವು-ಆಚಾರ-ಆನುಭಾವ ಜಾಗ್ರತವಾದರೆ ಮಾತ್ರ ಸಾಧ್ಯವೆಂದು ಈ ವಚನಕಾರ ತಿಳಿಸಿದ್ದಾನೆ. ಹೀಗೆ ಇನ್ನೂ ಅನೇಕ ವಚನಕಾರರು ವಿಭೂತಿಯ ಮಹತ್ವವನ್ನು ಕುರಿತು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ವಿಭೂತಿ ಕೇವಲ ಹೊರಗೆ ಕಾಣ ಸುವುದಾಗಿರದೆ, ಒಳಗಿನ ಕಾಮಾದಿಗುಣಗಳನ್ನು ಕಳೆದುಕೊಂಡಿರಬೇಕೆಂದು ಇಲ್ಲಿ ತಿಳಿಸಲಾಗಿದೆ.

ರುದ್ರಾಕ್ಷಿ
ಅಷ್ಟಾವರಣಗಳಲ್ಲಿ ರುದ್ರಾಕ್ಷಿಯೂ ಒಂದು. ಅಕ್ಷಿಯೆಂದರೆ ಕಣ್ಣು, ರುದ್ರಾಕ್ಷಿ-ರುದ್ರನಕಣ್ಣು ಎಂದರೆ ಅದನ್ನಿಲ್ಲಿ ಅರಿವಿನ ಕಣ್ಣು ಎಂದರ್ಥೈಸಬೇಕಾಗುತ್ತದೆ. ರುದ್ರಾಕ್ಷಿಧಾರಣೆ ಶೈವ ಧರ್ಮಗಳಲ್ಲಿಯೇ ಕಾಣಿಸಿಕೊಂಡಿದೆ. ಶಿವನ ಮೂರನೇ ಕಣ್ಣಿನಿಂದ ಉದುರಿದ ಜಲವೇ ರುದ್ರಾಕ್ಷಿಯಾಯಿತೆಂದು. ಶೈವ ಪುರಾಣಗಳು ಹೇಳಿದರೆ, ಲಿಂಗಾಯತ ಧರ್ಮದಲ್ಲಿ ಅದು ಕೇವಲ ಹೊರಗಿನ ಧಾರಣೆಮಾತೃವಾಗಿರದೆ. ಒಳಗಿನ ಅರಿವಿನ ಧಾರಣೆಯಾಗಿದೆ. ಇದನ್ನೇ ಅನೇಕ ವಚನಗಳಲ್ಲಿ ಶರಣರು ವಿವರಿಸಿ ಹೇಳಿದ್ದಾರೆ. ಇನ್ನು ರುದ್ರಾಕ್ಷಿಯು ವನದ ಔಷಧಿಯಾಗಿದ್ದು ರುದ್ರಾಕ್ಷಿ ಧರಿಸುವದರಿಂದ ಅನೇಕ ರೋಗಗಳು ನಿವಾಹರಣೆಯಾಗುತ್ತವೆಂಬ ವೈದ್ಯಕೀಯ ನಂಬಿಕೆಯೂ ಇದೆ.

“ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು....”
-ಬಸವಣ್ಣ (ಸ.ವ.ಸಂ.1, ವ:985)

ಈ ವಚನದಲ್ಲಿ ರುದ್ರಾಕ್ಷಿಯ ಮಹತ್ವವನ್ನು ಬಸವಣ್ಣ ವಿವರಿಸಿದ್ದಾರೆ. ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ...ಎಂಬ ಸಾಲು ಐದು ಸಲ ಬಂದಿದೆ. ಮುಂದಿನ ಪದಗಳಲ್ಲಿ ಪಾವನ, ಕಾರಣ, ಸಾಧನ, ಸಿದ್ಧಿ, ಪಾಪಕ್ಷಯ ಸೇರಿಕೊಂಡಿವೆ. ರುದ್ರಾಕ್ಷಿಯಿಂದ ಅನೇಕ ಪ್ರಯೋಜನಗಳಿವೆ. ಅದು ಸಾಧಕನ ದೈಹಿಕ ಶುದ್ಧತೆಯ ಜತೆಗೆ, ಅರಿವಿನ ಕಣ್ಣು ತೆರೆಯುತ್ತ ಒಳಗೆ ಜ್ಞಾನೋತ್ವವನ್ನುಂಟು ಮಾಡುತ್ತದೆ. ಅಂತೆಯೇ ರುದ್ರಾಕ್ಷಿ ಕೇವಲ ಹೊರಗೆ ಧರಿಸುವ ಸರಮಾತ್ರವಲ್ಲ, ಒಳಗಿನ ಅಜ್ಞಾನವನ್ನು ಕಳೆಯುವ ಬೆಳಕಾಗಿದೆಯೆಂದು ಶರಣರು ಹೇಳಿದ್ದಾರೆ.

ಬಸವಣ್ಣ ತಮ್ಮ ಇನ್ನೊಂದು ವಚನದಲ್ಲಿ ರುದ್ರಾಕ್ಷಿಯ ಮಹತ್ವವನ್ನು ಮನಮುಟ್ಟುವಂತೆ ಹೇಳಿದ್ದಾರೆ. ರುದ್ರಾಕ್ಷಿಯಿಂದ ಭವಪಾಶಂಗಳು ಹರಿಯುತ್ತವೆ, ರುದ್ರಾಕ್ಷಿಯಿಂದ ತನುವಿಗಂಟಿರುವ ಕಾಮ-ಕ್ರೋಧದ ಅವಗುಣಗಳು ಇಲ್ಲವಾಗುತ್ತವೆ, ರುದ್ರಾಕ್ಷಿಯಿಂದ ಪಂಚಮಹಾಪಾತಕಗಳು ದೂರವಾಗುತ್ತವೆಯೆಂದು ಹೇಳಿದ್ದಾರೆ. ಇಂತಹ ಪವಿತ್ರವಾದ ರುದ್ರಾಕ್ಷಿಯನ್ನು ಧರಿಸದವರ ಮುಖವ ನೋಡಲಾಗದೆಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ರುದ್ರಾಕ್ಷಿಯಿಂದ ಎಲ್ಲ ಸಮಸ್ಯೆಗಳು ದೂರವಾಗುತ್ತವೆಯೆಂದು ಹೇಳಿರುವ ನುಡಿಗಳನ್ನು ಗಮನಿಸಿದಾಗ ಇಲ್ಲಿ ರುದ್ರಾಕ್ಷಿಯೆಂದರೆ ಅರಿವಿನಕಣ್ಣು ಎಂದೇ ಅರ್ಥವಾಗುತ್ತದೆ. ಅರಿವುಳ್ಳವನಿಗೆ ಯಾವುದೇ ಸಮಸ್ಯಗಳಿರುವುದಿಲ್ಲ. ಆದುದರಿಂದ ರುದ್ರಾಕ್ಷಿಯೆಂಬ ಅರಿವಿನ ಕಣ್ಣು ಇರಬೇಕೆಂದು ತಿಳಿಸಿದ್ದಾರೆ.

“..ಇಂತಪ್ಪ ಋಷಿ ಜನಂಗಳೆಲ್ಲ ಶ್ರೀ ಗುರುವಿನ ಕಾರುಣ್ಯವಂ ಪಡೆದು
ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ
ಪಾದತೀರ್ಥ ಪ್ರಸಾದವಂ ಕೊಂಡು
ಉತ್ತಮ ವರ್ಣಶ್ರೇಷ್ಠರಾದರು ಕಾಣ ರೇ...”
-ಚೆನ್ನಬಸವಣ್ಣ (ಸ.ವ.ಸಂ.3, ವ:1706)

ಈ ವಚನದಲ್ಲಿ ಚೆನ್ನಬಸವಣ್ಣ ಋಷಿಗಳು ಶ್ರೇಷ್ಠರೆನಿಸಿಕೊಳ್ಳಲು ರುದ್ರಾಕ್ಷಿಯೇ ಕಾರಣವೆಂದು ಹೇಳಿದ್ದಾರೆ. ಋಷಿಗಳು ರುದ್ರಾಕ್ಷಿ ಧರಿಸಿಕೊಂಡು, ವಿಭೂತಿ ಹಚ್ಚಿಕೊಂಡು ತಪಸ್ಸು ಮಾಡುವದು ಅದು ಕೇವಲ ಹೊರಗೆ ಕಾಣುವ ಅರ್ಥ ಮಾತ್ರವಾಗಿರದೆ, ಅದು ನಿಜವಾಗಿ ಒಳಗಿನ ಅರ್ಥವನ್ನು ಪ್ರಕಟಿಸುತ್ತದೆ. ಅರಿವಿನ ಕಣ್ಣು ತೆರೆದು ಸಾಧನೆ ಮಾಡಿದಾಗ ಸಾಧಕ ಜ್ಞಾನಿಯಾಗುತ್ತಾನೆ, ಆಗ ಎಲ್ಲವನ್ನೂ ಗೆಲ್ಲಬಹುದಾಗಿದೆ. ಇದನ್ನೇ ಚೆನ್ನಬಸವಣ್ಣ ತನ್ನ ವಚನಗಳಲ್ಲಿ ವಿವರಿಸಿ ಹೇಳಿದ್ದಾರೆ.

“ಅಯ್ಯಗಳು ರುದ್ರಾಕ್ಷಿಯ ಕೊಟ್ಟಲ್ಲಿ ಫಲವಲ್ಲದೆ
ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ
ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ
ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ...”
-ಸಿದ್ಧರಾಮ (ಸ.ವ.ಸಂ.4, ವ:1556)

ರುದ್ರಾಕ್ಷಿಗಳನ್ನು ಅನೇಕರು ಧರಿಸುತ್ತಾರೆ. ಸರಮಾಡಿ ಕೊರಳಲ್ಲಿ ಹಾಕಿಕೊಳ್ಳುತ್ತಾರೆ. ಹೀಗೆ ಸುಮ್ಮನೆ ರುದ್ರಾಕ್ಷಿ ಧರಿಸುವದರಿಂದ ಯಾವುದೇ ಫಲವಿಲ್ಲವೆಂದು ಸಿದ್ಧರಾಮ ಹೇಳಿದ್ದಾರೆ. ಸುಮ್ಮನೆ ರುದ್ರಾಕ್ಷಿಸರ ತೆಗೆದುಕೊಂಡು ಕೊರಳಲ್ಲಿ ಹಾಕಿಕೊಳ್ಳುವದಕ್ಕಿಂತ ಅದೊಂದು ಸಾಧನೆಯ ಮಾರ್ಗವೆಂದು ತಿಳಿದು ಪೂಜ್ಯರಾದವರಿಂದ ಅದನ್ನು ಪಡೆದು ಧರಿಸುವದರಿಂದ, ಒಳಗಡೆ ಅರಿವು ಜಾಗೃತವಾಗಲು ಸಾಧ್ಯವಾಗುತ್ತದೆ. ಇಲ್ಲಿ ರುದ್ರಾಕ್ಷಿ ಅರಿವಿನ ಸಂಕೇತವಾಗಿದೆ. ತನ್ನ ಅರಿವನ್ನು ತಾನು ಜಾಗೃತಗೊಳಿಸಿಕೊಳ್ಳಬೇಕಲ್ಲದೆ, ಇತರರು ಅದನ್ನು ಜಾಗೃತಿಗೊಳಿಸಲಾರರು ಎಂದು ಅನೇಕ ವಚನಕಾರರು ಹೇಳಿದ್ದಾರೆ.

ರುದ್ರಾಕ್ಷಿ ಧಾರಣೆಯಿಂದ ಹುಟ್ಟು-ಸಾವುಗಳನ್ನು ಗೆಲ್ಲಬಹುದೆಂದು ಕೆಲವು ವಚನಕಾರರು ಹೇಳಿದ್ದಾರೆ. ರುದ್ರಾಕ್ಷಿ ಧಾರಣೆಯಿಂದ ದೇಹದ ದುರ್ಗುಣವಳಿಯುತ್ತದೆಂದು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಹೀಗೆ ರುದ್ರಾಕ್ಷಿಯು ಲಿಂಗಾಯತ ಧರ್ಮದಲ್ಲಿ ಅರಿವಿನ ಕಣ್ಣಾಗಿ ಜ್ಞಾನಸಾಧನೆಯ ಸಂಕೇತವಾಗಿ ಕಾಣಿಸಿಕೊಂಡಿದೆ.

ಮಂತ್ರ

ಅಷ್ಟಾವರಣಗಳಲ್ಲಿ ಮಂತ್ರಕ್ಕೆ ಮಹತ್ವದ ಸ್ಥಾನವಿದೆ. ಆದರೆ ಭಾರತೀಯ ಆಧ್ಯಾತ್ಮ ಕ್ಷೇತ್ರದಲ್ಲಿ ಮತ್ತು ಶಕ್ತಿದೇವತೆಗಳ ಅನುಷ್ಠಾನ ಕಾರ್ಯದಲ್ಲಿ ಮಾಟ-ಮಂತ್ರದಂತಹ ಪದಗಳು ಹೆಚ್ಚು ಜನಪ್ರಿಯವಾಗಿವೆ. ನಾದ-ಬಿಂದು-ಕಲೆಗಳ ಸಂಕೇತವಾಗಿ ಅ,ಉ,ಮ ಅಕ್ಷರಗಳಿಂದ ಹುಟ್ಟಿದ ಓಂಕಾರವು ಪ್ರಾರಂಭದ ಬಹುಮಹತ್ವದ ಮಂತ್ರವಾಗಿದೆ. ಈ ಮಂತ್ರದ ಪ್ರಸ್ತಾಪ ಭಾರತದ ಎಲ್ಲ ಧರ್ಮಗಳಲ್ಲಿಯೂ ಇದೆ. ಹೀಗೆ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದ ಓಂಕಾರದ ಮಂತ್ರವನ್ನು ಬಸವಾದಿ ಶರಣರು “ಓಂ ನಮಃ ಶಿವಾಯ” ಎಂಬ

ಷಡಕ್ಷರ ಮಂತ್ರವನ್ನಾಗಿ ಸ್ವೀಕರಿಸಿದರು. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ಮೇಲೆ ಅವರ ಅನುಯಾಯಿಗಳು, ಭಕ್ತರು “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ದ್ವಾದಶ ಅಕ್ಷರಗಳ ಮಂತ್ರವನ್ನು ಬಳಕೆಯಲ್ಲಿ ತಂದರು. “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ದ್ವಾದಶಾಕ್ಷರಗಳ ಮಂತ್ರವೇ ಲಿಂಗಾಯತ ಧರ್ಮದ ಪ್ರಮುಖ ಮಂತ್ರವಾಗಿದೆ.

ಆದರೆ ಶರಣರ ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ, ಇಂತಹ ಅಕ್ಷರಗಳ ಮಂತ್ರಗಳಿಗಿಂತ, ಅಂತರಂಗದ ಶುದ್ಧೀಕರಣವೇ ಮುಖ್ಯವೆನಿಸುತ್ತದೆ. ಮಂತ್ರದ ಮೂಲ ಉದ್ದೇಶ ಮನಶುದ್ಧಿಯಾಗಿದೆ. ಮನಸ್ಸನ್ನು ಶುದ್ಧೀಕರಿಸಿಕೊಳ್ಳದೆ, ಯಾವುದೇ ಮಂತ್ರವನ್ನು, ಎಷ್ಟೇ ಸಲ ಸ್ತುತಿಸಿದರೂ ಪ್ರಯೋಜನವಾಗಲಾರದು. ಮನಸ್ಸು ಅತ್ಯಂತ ಚಂಚಲವಾದುದಾಗಿದೆ. ಈ ಚಂಚಲ ಮನಸ್ಸನ್ನು ಕ್ಷಣಕ್ಷಣಕ್ಕೂ ಶುದ್ಧೀಕರಿಸಬೇಕಾಗುತ್ತದೆ. ಇಂತಹ ಶುದ್ಧೀಕರಣದ ಪ್ರಕ್ರಿಯೆಯೇ ಮಂತ್ರವಾಗಿದೆ. ಮಂತ್ರದ ಈ ಮಹದುದ್ದೇಶವನ್ನು ಲಿಂಗಾಯತ ಧರ್ಮದಲ್ಲಿ ಮಾತ್ರ ನೋಡಬಹುದಾಗಿದೆ. ಉಳಿದ ಧರ್ಮಗಳಲ್ಲಿ ಮಂತ್ರ ಎಂಬ ಪದ ಬೇರೆಬೇರೆ ಕಾರಣಗಳಿಗಾಗಿ ಹುಟ್ಟಿಕೊಂಡಿದೆ.

ಬಸವಣ್ಣನಿಗೆ “ಓಂ ನಮಃ ಶಿವಾಯ” ಎಂಬುದೇ ಮಂತ್ರವಾಗಿದೆ ಮತ್ತು ತಂತ್ರವಾಗಿದೆ. ಬಸವಣ್ಣನವರ ದೃಷ್ಟಿಯಲ್ಲಿ ಮಂತ್ರವೆಂದರೆ ಅದು “ಸರ್ವಜನವಶ್ಯ” ವಾಗಿದೆ. ಸರ್ವಜನರನ್ನು ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಮನಶುದ್ಧೀಕರಣ ಬಹಳ ಮುಖ್ಯ. ಮಂತ್ರ ಇಂತಹ ಮನಶುದ್ಧೀಕರಣವನ್ನು ಮಾಡುವದರಿಂದ ಅಷ್ಟಾವರಣಗಳಲ್ಲಿ ಅದಕ್ಕೆ ಮಹತ್ವದ ಸ್ಥಾನವಿದೆ.

“ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ,
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮರೆದಡೆ,
ಜಾತಿಭೇದವ ಮಾಡಲಮ್ಮವು”
-ಬಸವಣ್ಣ (ಸ.ವ.ಸಂ.1, ವ:81)

ಬಸವಣ್ಣನವರ ಈ ವಚನದಲ್ಲಿ “ಓಂ ನಮಃ ಶಿವಾಯ” ಎಂಬ ಷಡಕ್ಷರ ಮಂತ್ರವು ಮೂರು ಸಲ ಬಂದಿದೆ. ವೇದ-ಶಾಸ್ತ್ರ-ತರ್ಕಗಳು ಈ ಮಂತ್ರದ ಮಹಿಮೆಯನ್ನು ಅರಿಯದೇ ಹೋದವು. ಹೀಗಾಗಿ ಅವು ಅಲ್ಲಿಯೇ ತಟಸ್ಥವಾದವು ಎಂದು ಮೊದಲರ್ಧದ ವಚನದಲ್ಲಿ ಹೇಳಿದರೆ, ವಚನದ ಉತ್ತರಾರ್ಧದಲ್ಲಿ ಬಹುಮಹತ್ವದ ವಿಷಯವನ್ನು ಬಸವಣ್ಣ ಪ್ರಸ್ತಾಪಿಸಿದ್ದಾರೆ. ಶಿವನ ಮೂಲನೆಲೆಯನರಿಯದೆ ಮಂತ್ರ-ತಂತ್ರಗಳು ವ್ಯರ್ಥವಾದಾಗ ಇಡೀ ಲೋಕವೇ ಇದಕ್ಕಾಗಿ ಚಿಂತಿಸುತ್ತಿದ್ದಾಗ, ಬಸವಣ್ಣ ಕೊನೆಯಲ್ಲಿ ಇದಕ್ಕೆ ಪರಿಹಾರ ಸೂಚಿಸಿದ್ದಾರೆ.

“ಕೂಡಲಸಂಗಮದೇವ ಶ್ವಪಚನ ಮರೆದಡೆ...” ಎನ್ನುವ ನುಡಿ ತುಂಬ ಮುಖ್ಯವಾಗಿದೆ. ಅಂದರೆ ಇಲ್ಲಿ ಬಸವಣ್ಣ ಹೇಳುವ ಮಂತ್ರ-ತಂತ್ರಗಳೆಲ್ಲ ಶ್ವಪಚ (ಶೂದ್ರ)ನೊಂದಿಗೆ ತಳುಕು ಹಾಕಿಕೊಂಡಿವೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಕೊನೆಯ ಸ್ಥಾನದಲ್ಲಿರುವ ಶ್ವಪಚನನ್ನು ಮರೆತರೆ ನಿಮ್ಮ ಮಂತ್ರ-ತಂತ್ರಗಳಿಗೆ ಬೆಲೆಯಿಲ್ಲವೆಂದು ಬಸವಣ್ಣ ತಿಳಿಸಿದ್ದಾರೆ. ಹೀಗಾಗಿ ಇಲ್ಲಿ ಮಂತ್ರದ ವ್ಯಾಖ್ಯೆಗೂ-ಶ್ವಪಚನಿಗೂ-ಚಾತುರ್ವರ್ಣ ವ್ಯವಸ್ಥೆಗೂ ನೇರವಾದ ಸಂಬಂಧವನ್ನು ಕಲ್ಪಿಸಿದ್ದಾರೆ. ಮನಶುದ್ಧೀಕರಿಸಿಕೊಂಡು ಶ್ವಪಚÀನೊಂದಿಗೆ ಸೌಹಾರ್ದಯುತವಾಗಿ ಬಾಳುವುದೇ ಇಲ್ಲಿ ನಿಜವಾದ ಮಂತ್ರದ ವ್ಯಾಖ್ಯೆಯಾಗಿದೆ.

“ಕರಿಯಂಜೂದು ಅಂಕುಶಕ್ಕಯ್ಯಾ,
ಗಿರಿಯಂಜೂದು ಕುಲಿಶಕ್ಕಯ್ಯಾ,
ತಮಂಧವಂಜೂದು ಜ್ಯೋತಿಗಯ್ಯಾ,
ಕಾನನವಂಜೂದು ಬೇಗೆಗಯ್ಯಾ,
ಪಂಚಮಹಾಪಾತಕವಂಜೂದು
ಕೂಡಲಸಂಗನ ನಾಮಕ್ಕಯ್ಯಾ.”
-ಬಸವಣ್ಣ (ಸ.ವ.ಸಂ.1, ವ:75)

ಇದು ಬಸವಣ್ಣನವರ ಜನಪ್ರಿಯ ವಚನವಾಗಿದೆ. ಆನೆ-ಅಂಕುಶಕ್ಕಂಜುತ್ತದೆ, ಪರ್ವತ-ಸಿಡಿಲಿಗಂಜುತ್ತದೆ, ಕತ್ತಲು-ಬೆಳಕಿಗಂಜುತ್ತದೆ, ಕಾನನ-ಬೆಂಕಿಗಂಜುತ್ತದೆ. ಅದೇರೀತಿ ಪಂಚಮಹಾ ಪಾತಕಗಳು ಕೂಡಲಸಂಗನ ನಾಮಕ್ಕಂಜುತ್ತವೆಂದು ಇಲ್ಲಿ ಹೇಳಲಾಗಿದೆ. ಕೂಡಲಸಂಗನ ನಾಮವೇ ನಿಜವಾದ ಮಂತ್ರವಾಗಿದೆ. ಇಲ್ಲಿಯ ಕೂಡಲಸಂಗ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮ ಮಾತ್ರವಾಗಿರದೆ, ತನು-ಮನ ಕೂಡಿಕೊಳ್ಳುವ, ಆತ್ಮ-ಪರಮಾತ್ಮ ಒಂದಾಗುವ, ವ್ಯಕ್ತಿ-ಸಮುದಾಯ ಬೆರೆತು ಬೇರಾಗದಂತಹ ಸಂಗಮವಾಗಿದೆ. ಬಸವಣ್ಣನವರ ಪ್ರಕಾರ ಇಂತಹ ಕೂಡಲಸಂಗನ ನಾಮವೇ ನಿಜವಾದ ಮಂತ್ರವಾಗಿದೆ. ಈ ಮಂತ್ರ ಕೇವಲ ಉಚ್ಛಾರದ ಮಂತ್ರವಾಗಿರದೆ ಪರಸ್ಪರ ಕೂಡಿಕೊಳ್ಳುವ ಸಂಗಮಗೊಳ್ಳುವ ಮಂತ್ರವಾಗಿದೆ.

“ ‘ಓಂ ನಮಃ ಶಿವಾಯ’ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ,
ಶರೀರ ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಶಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ...”
-ಅಲ್ಲಮಪ್ರಭು (ಸ.ವ.ಸಂ.2, ವ:1008)

ಅಲ್ಲಮಪ್ರಭು ಈ ವಚನದಲ್ಲಿ “ಓ ನಮಃ ಶಿವಾಯ” ಎಂಬ ಮಂತ್ರವನ್ನು ದೇವನೆಂದು ಕರೆದಿದ್ದಾರೆ. “ಮಾಯಾ ಬಲೆಗೆ ಸಿಕ್ಕು ಮಹಾಘನವನರಿಯದೆ ಹೋದಿರಾ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮಾಯದ ಬಲೆಯಿಂದ ಪಾರಾಗಬೆಕಾದರೆ ಮನಶುದ್ಧೀಕರಣದ ಅಗತ್ಯವಿದೆಯೆಂದು ತಿಳಿಸದ್ದಾರೆ.

“ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆನಾದವೇ ಕಿರೀಟ
‘ಅ’ಕಾರ ‘ಉ’ಕಾರವೆ ಬಿಂದುವಕ್ತ್ರ,
ಪರಶಿವ ಸ್ವರೂಪವಾದ ‘ಹ್ರ’ ಕಾರವೆ ದೇಹ
‘ಹ್ರೀಂ’ ಕಾರವೆ ಶಕ್ತಿ, ಹಂಸದ್ಬಯಾ ಶೃಂಗವೇ ಭುಜ,
‘ವ’ಕಾರವೆ-ಕಳಾಸ್ವರೂಪವಾದ ಅವನಿಯೆ ಪಾದಾದ್ಬಯ
ಇಂತೀ ಮಂತ್ರ ಮೂರ್ತಿಯಾದ ಪರಶಿವನು
ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೂಡುವ ದೇವ
ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ”
-ಚೆನ್ನಬಸವಣ್ಣ (ಸ.ವ.ಸಂ.3, ವ:1502)

ಈ ವಚನದಲ್ಲಿ ಚೆನ್ನಬಸವಣ್ಣನವರು ಮಂತ್ರಗಳೇ ಪರಶಿವನ ಅವಯವಗಳಾಗಿವೆಯೆಂದು ಹೇಳಿದ್ದಾರೆ. ಆ ಪರಶಿವ ಬೇರಾರೂ ಆಗಿರದೆ ಕೂಡಲಚೆನ್ನಸಂಗಯ್ಯನೇ ಆಗಿದ್ದಾನೆಂದು ಹೇಳಿರುವಲ್ಲಿ ಆತ್ಮ-ಪರಮಾತ್ಮಗಳನ್ನು ಕೂಡಿಸುವ ಶಕ್ತಿ ಮಂತ್ರಕ್ಕಿದೆಯೆಂಬುದು ಸ್ಪಷ್ಟವಾಗುತ್ತದೆ.

“ಮಂತ್ರಪ ಜಪಿಸಿ ಫಲವೇನಯ್ಯಾ, ಮಂತ್ರಮೂರ್ತಿ ಕಾಣದನ್ನಕ್ಕ?
ಸುಂತ್ರ ಧರಿಸಿ ಫಲವೇನಯ್ಯಾ ಅಂತರ ರೋಗ ಪರಿಹಾರವಾಗದನ್ನಕ್ಕ?
ತಂತ್ರವನೋದಿ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ?.....”
-ಸಿದ್ಧರಾಮ (ಸ.ವ.ಸಂ4, ವ:1388)

ಈ ವಚನದಲ್ಲಿ ಸಿದ್ಧರಾಮನು ಜಪ-ತಪ ಮಾಡುವವರನ್ನು ವಿಡಂಬಿಸಿದ್ದಾರೆ. ಜಪ-ತಪ ಮಾಡಿ ಮಂತ್ರ ಪಠಣ ಮಾಡುವುದು ಬೇರೆ ಧರ್ಮಗಳಲ್ಲಿರುವ ಆಚರಣೆಯಾದರೆ, ಮಂತ್ರ ಮೂರ್ತಿಯಾದ ಪರಮಾತ್ಮನನ್ನು ಆತ್ಮನ ಮೂಲಕವೇ ಕಂಡುಕೊಳ್ಳುವುದು ಲಿಂಗಾಯತ ಧರ್ಮದ ಮೂಲ ತತ್ವವಾಗಿದೆ. ಹೀಗೆ ಆತ್ಮ ಪರಮಾತ್ಮನಾಗಲಿಕ್ಕೆ ಈ ಅಷ್ಟಾವರಣಗಳ ಅಗತ್ಯವಿದೆಯೆಂದು ಶರಣರು ಹೇಳಿದ್ದಾರೆ. ಲಿಂಗ-ಜಂಗಮಗಳನ್ನು ಸರಿಯಾಗಿ ತಿಳಿದುಕೊಳ್ಳದವ ಶರಣನಾಗಲಾರನೆಂದು ಸಿದ್ಧರಾಮ ಇದೇ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಂತ್ರವು ಮನಸ್ಸನ್ನು ಒಂದು ಮಾಡುವ ಶಕ್ತಿಯನ್ನು ಹೊಂದಿದೆಯೆಂದು ಅವರು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ.

“ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ-ತಂತ್ರ ನೇಮವಲ್ಲ;
ದೂಪ ದೀಪಾರತಿ ನೇಮವಲ್ಲ.....”
-ಸತ್ಯಕ್ಕ (ಸ.ವ.ಸಂ.5, ವ:1207)

ಮಂತ್ರ-ತಂತ್ರ ನೇಮವಲ್ಲವೆಂಬುದನ್ನು ಹೇಳಿರುವ ಸತ್ಯಕ್ಕ ಅರ್ಚನೆ-ಪೂಜೆ-ದೂಪ-ದೀಪಾರತಿಗಳಿಂದ ದೇವರು ಒಲಿಯಲಾರನೆಂದು ಸ್ಪಷ್ಟಪಡಿಸಿದ್ದಾರೆ. ಪರಧನ ಪರಸ್ತ್ರೀ ಪರದೈವ ಗಳಿಗೆರಗದಿಪ್ಪುದೇ ನೇಮವೆಂದು ತಿಳಿಸಿ ಹೇಳಿದ್ದಾರೆ. ಅನೇಕ ವಚನಕಾರರು ಮಂತ್ರದ ಒಳ ಅರ್ಥಗಳನ್ನು ತಮ್ಮ ವಚನಗಳಲ್ಲಿ ಬಿಡಿಸಿಟ್ಟಿದ್ದಾರೆ. ಹೀಗಾಗಿ ಉಳಿದ ಧರ್ಮಗಳಲ್ಲಿ ಬಳಕೆಯಾಗಿರುವ “ಮಂತ್ರ” ಪದಕ್ಕೂ, ಲಿಂಗಾಯತ ಧರ್ಮದಲ್ಲಿ ಬರುವ “ಮಂತ್ರ” ಪದಕ್ಕೂ ಬಹಳ ವ್ಯತ್ಯಾಸವಿದೆ.

ಮುಂದುವರೆಯುತ್ತದೆ....

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣರ ದೇವಾಲಯಗಳು
ಪ್ರಾಣಲಿಂಗಿಸ್ಥಲ
ಶರಣಸ್ಥಲ
ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು


MORE NEWS

ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ

27-03-2023 ಬೆಂಗಳೂರು

'ಪಂಚಾಚಾರ ಶುದ್ಧವಾದ ಸದ್ಭಕ್ತನಿಗೆ ಮಾತ್ರ ಕಾಯಕ ಒಲಿಯುತ್ತದೆ. ಆದುದರಿಂದ ಕಾಯಕವೆಂದರೆ ಕೇವಲ ವೃತ್ತಿಯಲ್ಲ, ದುಡಿಮೆ...

ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.

26-03-2023 ಬೆಂಗಳೂರು

''ನಾನು ಓದಿಲ್ಲವಾದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಗೊತ್ತಿಲ್ಲ. ಯಾರನ್ನಾದರೂ ಕೇಳಿಕೊಂಡು ಮಾಡಿ...

ತೋರುಗವೆಂಬ ಮಾಯಕ

25-03-2023 ಬೆಂಗಳೂರು

''ಸಾಮಾನ್ಯವಾಗಿ ಇವುಗಳನ್ನು ದೂರ ಎಂಬ ಪರಿಕಲ್ಪನೆಯ ಮೇಲೆ ಕನ್ನಡದಲ್ಲಿ, ದ್ರಾವಿಡದಲ್ಲಿ ರೂಪಿಸಿಕೊಂಡಿದೆ. ಸಮೀಪ...