ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ

Date: 31-10-2022

Location: ಬೆಂಗಳೂರು


ಇಷ್ಟಲಿಂಗ ಕುರಿತಂತೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದರೆ. ಇನ್ನೂ ನೂರಾರು ವಚನಗಳಲ್ಲಿ ಇಷ್ಟಲಿಂಗ-ಕರಸ್ಥಲಲಿಂಗಗಳ ಬಗೆಗೆ ವಿಷಯವಿದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ಅಷ್ಟಾವರಣಗಳಲ್ಲಿನ ಲಿಂಗ ವಿಚಾರವನ್ನು ಚರ್ಚಿಸಿದ್ದಾರೆ.

ಶೈವರ ಸ್ಥಾವರಲಿಂಗ ಪೂಜೆಯ ನಂತರ ಕಾಲಕ್ರಮೇಣ ಕೆಲವು ಬದಲಾವಣೆಗಳಾದವು. ತನ್ನ ದೇವರು ತನ್ನೊಂದಿಗೇ ಇರಬೇಕೆಂಬ ಭಾವನೆ ಬಂದ ನಂತರ ಕೆಲ ಭಕ್ತರು ಸ್ಥಾವರಲಿಂಗಗಳನ್ನು ಹೆಗಲ ಮೇಲೆ, ತಲೆಯ ಮೇಲೆ ಹೊತ್ತು ಕೊಂಡು ಹೋದರು, ಆಗ ಅವು ಚರಲಿಂಗಗಳಾದವು. ನಂತರದಲ್ಲಿ ಅವುಗಳ ಗಾತ್ರವನ್ನು ತಗ್ಗಿಸಿ, ಭುಜ, ತಲೆ, ಹೊಟ್ಟೆ ಮೊದಲಾದ ಅಂಗಗಳ ಮೇಲೆ ಬಟ್ಟೆಯಲ್ಲಿ ಸುತ್ತಿ ಕಟ್ಟಿಕೊಳ್ಳುವ ಪರಿಪಾಠ ನಡೆಯಿತು. ಇಂತಹ ಚರಲಿಂಗಗಳ ಉಲ್ಲೇಖವನ್ನು ಗಮನಿಸಿದ ಕೆಲವರು, ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗದ ಪೂಜಾವಿಧಾನ ಇತ್ತೆಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಇಷ್ಟಲಿಂಗದ ಪರಿಕಲ್ಪನೆ ಮಾತ್ರ ಬಸವಾದಿ ಶರಣರಿಂದಲೇ ಹುಟ್ಟಿಕೊಂಡಿತು.

“ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ
ಆ ಇಷ್ಟಲಿಂಗದಲ್ಲಿ ಭಾವ ಮನೋವೇದ್ಯವಾದಲ್ಲಿ ಸ್ವಾಯತಲಿಂಗ.
ಆ ಇಷ್ಟಲಿಂಗದ ಸುಖವು, ಅನುಪಮ ಪರಿಣಾಮ ಬೀರಿದಲ್ಲಿ ಸನ್ನಿಹಿತಲಿಂಗ
ಇಂತು, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳೆಂಬ ಲಿಂಗತ್ರಯಂಗಳು
ತನುತ್ರಯಗಳ ಮೇಲೆ ಆಯತ, ಸ್ವಾಯತ, ಸನ್ನಹಿತಂಗಳಾದ
ಶರಣನ ಪಂಚಭೂತಂಗಗಳಳಿದು ಲಿಂಗ ತತ್ವಂಗಳಾಗಿ
ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ
ಷಡಂಗಯೋಗವಾದುದು ಕಾಣಾ ಗುಹೇಶ್ವರಾ”

-ಅಲ್ಲಮಪ್ರಭು (ಸ.ವ.ಸಂ2, ವ:947)

ಅಲ್ಲಮಪ್ರಭು ಈ ವಚನದಲ್ಲಿ ಇಷ್ಟಲಿಂಗದ ಮೂಲಕ ಹುಟ್ಟಿಕೊಳ್ಳುವ ಆಯತಲಿಂಗ, ಸ್ವಾಯತಲಿಂಗ, ಸನ್ನಿಹಿತಲಿಂಗಗಳ ಬಗೆಗೆ ಹೇಳಿದ್ದಾರೆ. ಲಿಂಗತ್ರಯಗಳು ತನುತ್ರಯಗಳ ಮೇಲೆ ಆಯತ, ಸ್ವಾಯತ, ಸನ್ನಿಹಿತವಾದಾಗ ಪಂಚಭೂತಗಳಿಂದ ಲಿಂಗತತ್ವಗಳಾಗಿ ಪರಮಾತ್ಮನ ರೂಪದಲ್ಲಿ ಕಾಣ ಸಿಕೊಳ್ಳುತ್ತವೆಯೆಂದು ಹೇಳಿದ್ದಾರೆ. ಕೇವಲ ಇಷ್ಟಲಿಂಗ ಪೂಜೆಯಿಂದ ಮಾತ್ರ ಎಲ್ಲವೂ ಸಾಧ್ಯವಾಗುವುದಿಲ್ಲ, ಇಷ್ಟಲಿಂಗಕ್ಕೆ ಮನವನರ್ಪಿಸಿ ಭಾವಲಿಂಗದ ಮೂಲಕ ಜ್ಞಾನಲಿಂಗವನ್ನು ಕಂಡುಕೊಂಡಾಗ ಆತ್ಮ-ಪರಮಾತ್ಮನಾಗುವ ಬೆಳವಣೆಗೆ ಸಾಧ್ಯವಾಗುತ್ತದೆ. ಕೇವಲ ಪೂಜೆಯಿಂದೇನೂ ಆಗದೆಂದು ಅಲ್ಲಮಪ್ರಭು ಈ ಕೆಳಗಿನ ವಚನದಲ್ಲಿ ಹೇಳಿದ್ದಾರೆ.

“ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು,
ಬಹುಲಿಂಗವ ಪೂಜಿಸಿ ಭ್ರಮಿತರಾದರು
ಅನ್ಯಲಿಂಗವ ಪೂಜಿಸಿ ಭಿನ್ನರಾದರು
ಸ್ಥಾವರಲಿಂಗವ ಪೂಜಿಸಿ ಸಾವಿಂಗೊಳಗಾದರು
ಬಳ್ಳಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು
ಗುಹೇಶ್ವರನೆಂಬ ಲಿಂಗವ ಪೂಜಿಸಿ
ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ”

-ಅಲ್ಲಮಪ್ರಭು (ಸ.ವ.ಸಂ.2, ವ:969)

ಹೀಗೆ ಈ ವಚನದಲ್ಲಿ ಅಲ್ಲಮಪ್ರಭು ವಿವಿಧ ಬಗೆಯ ಲಿಂಗಪೂಜೆಗಳನ್ನು ಪ್ರಸ್ತಾಪಿಸಿ, ಅವುಗಳನ್ನು ಕೇವಲ ಪೂಜೆ ಮಾಡುವುದರಿಂದ ಫಲಸಿಗುವುದಿಲ್ಲ, ಎಲ್ಲವನ್ನೂ ಅರಿತು ಆಚರಿಸಬೇಕಾಗುತ್ತದೆಂದು ಹೇಳಿದ್ದಾರೆ. ಇಷ್ಟಲಿಂಗದ ಕೂಟವನ್ನು, ಪ್ರಾಣಲಿಂಗದ ಸಂಗವನ್ನು, ಭಾವಲಿಂಗದ ಸಮರಸವನ್ನು ತಿಳಿ ದುಕೊಳ್ಳಬೇಕಾದರೆ ಅನುಮಿಶ ಗುರುವಿನಿಂದ ಮಾತ್ರ ಸಾಧ್ಯವೆಂದು ಪ್ರಭು ಹೇಳಿದ್ದಾರೆ.

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕೆ ಬಂದು ಚುಳಿಕಾದಿರಯ್ಯಾ”

-ಬಸವಣ್ಣ (ಸ.ವ.ಸಂ.1, ವ:744)

ಈ ವಚನದಲ್ಲಿ ಲಿಂಗದ ವಿರಾಟ ಸ್ವರೂಪವನ್ನು ಕೂಡಲಸಂಗಮದೇವಯ್ಯನ ಮೂಲಕ ವಿವರಿಸಲಾಗಿದೆ. ಅಗಮ್ಯ-ಅಗೋಚರ-ಅಪ್ರತಿಮವಾದ ಲಿಂಗವು ಕೂಡಲಸಂಗಮನ ಮೂಲಕ ಕರಸ್ಥಲಕೆ ಬಂದು ಕೈತುಂಬಿ ಕೊಂಡದ್ದನ್ನು ಹೇಳಲಾಗಿದೆ.

ಹೃದಯದಲ್ಲಿದ್ದ ಶ್ರೇಷ್ಠ ಚಿದ್ಬೆಳಗು, ಹಸ್ತ-ಮಸ್ತಕ ಸಂಯೋಗದಿಂದ ಮಹಾಬೆಳಕಾಗುತ್ತದೆ. ಆ ಮಹಾಬೆಳಕನ್ನು ಭಾವದೊಳಗೆ ತುಂಬಿಕೊಂಡಾಗ ಅದು ಭಾವಲಿಂಗವಾಗುತ್ತದೆ. ಕಣ್ಣುಗಳಲ್ಲಿರುವ ಬೆಳಗನ್ನು ಕರಸ್ಥಲಕ್ಕೆ ತಂದಾಗ ಅದು ಇಷ್ಟಲಿಂಗದ ಮೂಲಕ, ಆತ್ಮನೊಳಗಿರುವ ಪರಮಾತ್ಮನ ದರ್ಶನವಾಗುತ್ತದೆಂದು ಬಸವಾದಿ ಶರಣರು ವಿವರಿಸಿದ್ದಾರೆ.

ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗವೆಂಬ ಭೇದ ಈ ಲಿಂಗಗಳಿಗಿಲ್ಲ. ಕರಸ್ಥಲದಲ್ಲಿ, ಮನಸ್ಥಲದಲ್ಲಿ, ಭಾವಸ್ಥಲದಲ್ಲಿ ವೇದ್ಯವಾದ ಬಳಿಕ ಸರ್ವಾಂಗಲಿಂಗವಾಗುತ್ತದೆಂದು ಬಸವಣ್ಣ ತನ್ನ ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ಸಾಕಾರದ ಮೂಲಕ ನಿರಾಕಾರವನ್ನು ಕಾಣುವ ಪ್ರಯತ್ನ ಇಲ್ಲಿದೆ. ನಿರಾಕಾರವಾದ ಆತ್ಮ, ಜೀವ, ಭಾವ ಮುಂತಾದವುಗಳನ್ನು ಇಷ್ಟಲಿಂಗದಲ್ಲಿಯೇ ಕಾಣುವುದು ಸೂಕ್ತವೆಂದು ಹೇಳಲಾಗಿದೆ. ಇಲ್ಲಿ ಪರಮಾತ್ಮನೇ ತನ್ನಕರಸ್ಥಲಕೆ ಬಂದು ಚುಳುಕಾದನೆಂದು ಹೇಳುವ ಮಾತು ಯಾವ ಧರ್ಮದಲ್ಲಿಯೂ ಸಿಗದು.

“ಕಾಯದ ಕರಸ್ಥಲಕೆ ಇಷ್ಟಲಿಂಗ ಸಾಯತವಿಲ್ಲದಿದ್ದಡೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು”
ಎಂದು ಹೇಳಿರುವ, ಚೆನ್ನಬಸವಣ್ಣ ತನ್ನ ಇನ್ನೊಂದು ವಚನದಲ್ಲಿ ಲಿಂಗ ಪೂಜೆಯ ವಿಧಾನವನ್ನು ತಿಳಿಸಿದ್ದಾರೆ.

“ಲಿಂಗವೆಂದು ಪೂಜಿಸಿದರೆ ಅಂಗದೊಡನೆ ಉಳಿಯಿತ್ತು
ಅಂಗದೊಡನೆ ಉಳಿದ ಲಿಂಗವ ಹಿಂಗಿ ಪೂಜಿಸಬೇಕು
ಹಿಂಗಿದ ಪೂಜಿಯನರಿದಡೆ ಪ್ರಾಣಲಿಂಗದ ಆಪ್ಯಾಯವನರಿಯಬೇಕು
ಪ್ರಾಣಲಿಂಗದಾಪ್ಯಾಯನವನರಿದಡೆ ಕೂಡಲಚೆನ್ನಸಂಗಯ್ಯಾನಲ್ಲಿ ಲಿಂಗೈಕ್ಯನಿಸುವ”

-ಚೆನ್ನಬಸವಣ್ಣ (ಸ.ವ.ಸಂ.3, ವ: 718)

ಈ ವಚನದಲ್ಲಿ ಚೆನ್ನಬಸವಣ್ಣನು ಅಂಗ-ಲಿಂಗ ಸಂಬಂಧವನ್ನು ಹೇಳಿದ್ದಾನೆ. ಅಂಗದೊಡನೆ ಉಳಿದ ಲಿಂಗವ ಹಿಂಗಿ ಪೂಜಿಸಬೇಕೆಂಬುದು ಮಹತ್ವದ ವಿಚಾರವಾಗಿದೆ. ಅಂಗವೇ ಲಿಂಗ, ಲಿಂಗವೇ ಅಂಗ ಎಂಬ ಮಾತು ಹುಸಿಯೆಂದು ಹೇಳಿರುವ ಚೆನ್ನಬಸವಣ್ಣ ಲಿಂಗವೆಂಬವಂಗೆ ಲಿಂಗವಿಲ್ಲ, ಜಂಗಮವೆಂಬವಂಗೆ ಜಂಗಮವಿಲ್ಲವೆಂದು ಹೇಳಿದ್ದಾರೆ. ಮತ್ತೆ ಮುಂದುವರಿದು ಲಿಂಗವೆನ್ನದವರಿಗೆ ಲಿಂಗವುಂಟು, ಜಂಗಮವೆನ್ನದವಂಗೆ ಜಂಗಮ ಉಂಟೆಂದು ತಿಳಿಸಿದ್ದಾರೆ.

“ಲಿಂಗ ಸಂಬಂಧ ಸೀಮೆ ನೋಡಾ, ಶರಣ ಸಂಬಂಧ ನಿಸ್ಸೀಮೆ ನೋಡಾ
ಲಿಂಗವು ಗಮ್ಯ, ಶರಣ ಅಗಮ್ಯ ನೋಡಾ
‘ಯದ್ಭಾವಂ ತದ್ಭವತಿ’ ಯೆಂಬುದಿಲ್ಲಾಗಿ
ಆದಿಲಿಂಗ, ಅನಾದಿಶರಣ ಕೂಡಲಚೆನ್ನಸಂಗಾ”

-ಚೆನ್ನಬಸವಣ್ಣ (ಸ.ವ.ಸಂ.3, ವ:537)

ಲಿಂಗಸಂಬಂಧಕ್ಕಿಂತ ಶರಣಸಂಬಂಧ ದೊಡ್ಡದೆಂದು ಚೆನ್ನಬಸವಣ್ಣ ಇಲ್ಲಿ ಹೇಳಿದ್ದಾರೆ. ಲಿಂಗ ಗಮ್ಯವಾದರೆ, ಶರಣ ಅಗಮ್ಯನಾಗಿದ್ದಾನೆಂದು ಹೇಳಿರುವ ಚೆನ್ನಬಸವಣ್ಣ ಲಿಂಗವೇ ಆದಿ, ಶರಣನೇ ಅನಾದಿಯೆಂದು ಸ್ಪಷ್ಟಪಡಿಸಿದ್ದಾರೆ. ಈ ಗುರು-ಲಿಂಗ-ಜಂಗಮದ ಮಹತ್ವವನ್ನು ಬಸವಣ್ಣ ಮಾತ್ರ ಬಲ್ಲನೆಂದು ಹೇಳಿದ್ದಾರೆ.

ಲಿಂಗಾಯತನಿಗೆ ಇಷ್ಟಲಿಂಗವೇ ಸರ್ವಸ್ವ ಇಂತಹ ಕಟ್ಟಿದ ಲಿಂಗವನ್ನು ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಮೆಟ್ಟು ತೆಗೆದುಕೊಂಡು ಹೊಡೆಯೆಂದು ಅಂಬಿಗರ ಚೌಡಯ್ಯ ಹೇಳಿದ್ದಾರೆ. ಇಷ್ಟಲಿಂಗವ ಬಿಟ್ಟು, ಸ್ಥಾವರಲಿಂಗವ ಪೂಜಿಸುವದೆಂದರೆ ಗಂಡನನ್ನು ಬಿಟ್ಟು, ಮಿಂಡನನ್ನು ಕೂಡಿದಂತೆಂದು ಶರಣರು ಇಷ್ಟಲಿಂಗದ ಮಹತ್ವವನ್ನು ಕಟುವಾಗಿಯೇ ತಿಳಿಸಿದ್ದಾರೆ.

“ಏನೆಂಬೆ ಏನೆಂಬೆ ಕೊಟ್ಟ ದೇವರಂದವ
ಮನದಲ್ಲಿ ಘನಲಿಂಗನಾಯಿತ್ತು, ಧ್ಯಾನದಲ್ಲಿ ಭಾವಲಿಂಗವಾಯಿತ್ತು
ನೇತ್ರದಲ್ಲಿ ಶಿವಲಿಂಗವಾಯಿತ್ತು, ಹೃದಯದಲ್ಲಿ ಮಹಾಲಿಂಗವಾಯಿತ್ತು
ಎನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅಳವಟ್ಟಿತ್ತು......”

-ಸಿದ್ಧರಾಮ (ಸ.ವ.ಸಂ.4, ವ:959)

ವಿವಿಧ ಲಿಂಗಗಳ ಪರಿಣಾಮವನ್ನು ಹೇಳಿರುವ ಶಿವಯೋಗಿ ಸಿದ್ಧರಾಮ ತನ್ನ ಕರಸ್ಥಲದಲ್ಲಿದ್ದ ಇಷ್ಟಲಿಂಗದ ಮಹತ್ವವನ್ನು ಕುರಿತು ವಿವಿಧ ರೀತಿಯಲ್ಲಿ ತಿಳಿಸಿದ್ದಾರೆ. ತನ್ನ ಗುರು ಚೆನ್ನಬಸವಣ್ಣನೆಂದು ಹೇಳಿಕೊಂಡಿರುವ ಸಿದ್ಧರಾಮ “ಲಿಂಗವ ಪೂಜಿಸಿ ಅಂಗವ ನಿರ್ವಯಲ ಮಾಡೆಹೆನೆಂಬವನ ಮುಖವ ನೋಡಲಾಗದೆಂದು” ಹೇಳಿದ್ದಾರೆ.

“ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು
ಇದಕ್ಕೆ ಗುರುವಿನ ಹಂಗೇಕೆ? ಲಿಂಗದ ಪೂಜೆ ಏಕೆ? ಸಮಯದ ಹಂಗೇಕೆ?
ತನ್ನ ತಾನರಿದವಂಗೆ ಏಣಾಂಕನ ಶರಣರ ಸಂಗವೇಕೆ?”

-ಅಮುಗೆ ರಾಯಮ್ಮ (ಸ.ವ.ಸಂ.5, ವ:621)

ಅಮುಗೆರಾಯಮ್ಮ ಈ ವಚನದಲ್ಲಿ ಇಷ್ಟಲಿಂಗದ ಮಹತ್ವವನ್ನು ಕುರಿತು ಬೇರೆ ರೀತಿಯಲ್ಲಿ ಹೇಳಿದ್ದಾರೆ. “ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು” ಎಂಬ ರೂಪಕ ಅದ್ಭುತವಾಗಿ ಬೆಳೆದುನಿಂತಿದೆ. ಕೈಯಿಲ್ಲದವನಿಗೆ, ಕಾಲಿಲ್ಲದವನಿಗೆ ಕುದುರೆ ಹೇಗೆ ನಿರುಪಯೋಗಿಯೋ ಹಾಗೆ ಭಕ್ತಿ-ಜ್ಞಾನ-ವೈರಾಗ್ಯವಿಲ್ಲದವನಿಗೆ ಇಷ್ಟಲಿಂಗವೇಕೆ? ಎಂದು ಅಮುಗೆರಾಯಮ್ಮ ಕೇಳಿದ್ದಾರೆ.

“ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ?”

-ಮೋಳಿಗೆಯ ಮಹಾದೇವಿ (ಸ.ವ.ಸಂ.5, ವ: 1145)

ಈ ವಚನದಲ್ಲಿ ಮೋಳಿಗೆಯ ಮಹಾದೇವಿ ಎಲ್ಲರಿಗೂ ತಿಳಿಯುವಂತಹ ಉದಾಹರಣೆಯ ಮೂಲಕ ಇಷ್ಟಲಿಂಗದ ಮಹತ್ವವನ್ನು ತಿಳಿಸಿದ್ದಾರೆ. ಯಾವುದೇ ಕುಸುಮವಿರಲಿ, ಆ ಕುಸುಮಕ್ಕೆ ವಾಸನೆ ಇರುತ್ತದೆಯೇ ಹೊರತು, ಆ ಗಿಡಕ್ಕೆ ವಾಸನೆ ಇರುವುದಿಲ್ಲ. ಅದೇರೀತಿ ಇಷ್ಟಲಿಂಗ-ಪ್ರಾಣಲಿಂಗಗಳ ಪರಿಕಲ್ಪನೆಯಾಗಿದೆಯೆಂದು ವಿವರಿಸಿದ್ದಾರೆ.

“ಹಾಲ ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?”

-ಆದಯ್ಯ (ಸ.ವ.ಸಂ.6, ವ: 1149)

ಆದಯ್ಯ ಈ ವಚನದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಲಿಂಗದ ಮಹತ್ವವನ್ನು ತಿಳಿಸಿದ್ದಾರೆ. ಹಾಲಿನಲ್ಲಿಯೇ ಬೆಣ್ಣೆ ಇದೆ; ಹೀಗಾಗಿ ಜಾಣರು ಹಾಲು ಕಾಸಿ ಬೆಣ್ಣೆ ಮಾಡಿಕೊಳ್ಳುತ್ತಾರೆ. ಆದರೆ ತಿಳುವಳಿಕೆಯಿಲ್ಲದವರು ಹಾಲ ಹಿಡಿದು ಬೆಣ್ಣೆಯ ಹುಡುಕುತ್ತ ಹೋಗುತ್ತಾರೆ. ಅದೇರೀತಿ ಇಷ್ಟಲಿಂಗವ ಧರಿಸಿದ ಬಳಿಕ ಪುಣ್ಯತೀರ್ಥಕ್ಕೆ ಹೋಗುವವರು ಮೂರ್ಖರು ಎಂದು ಹೇಳಿದ್ದಾರೆ.

“ಬಿತ್ತಿದ ಬೆಳೆಯ ಪೃಥ್ವಿನುಂಗಿದಾಗ
ಬಿತ್ತದ ವಟ್ಟ ಎಂತಪ್ಪುದೋ?
ಇಷ್ಟಲಿಂಗವ ಚಿತ್ತನುಂಗಿದಾಗ
ಭಕ್ತಿಯ ಹೊಲ ಎಂತಪ್ಪುದೋ?”

-ಗುಪ್ತಮಂಚಣ್ಣ (ಸ.ವ.ಸಂ.7, ವ:356)

ಈ ವಚನದಲ್ಲಿ ಗುಪ್ತಮಂಚಣ್ಣನವರು ಬಿತ್ತಿದ ಬೆಳೆಯನ್ನು ಪೃಥ್ವಿ ನುಂಗಿದರೇನು ಮಾಡಬೇಕು? ಎಂಬ ಪ್ರಶ್ನೆಯೊಂದಿಗೆ ಇಷ್ಟಲಿಂಗದ ಪ್ರಸ್ತಾಪ ಮಾಡಿದ್ದಾರೆ. ಇಷ್ಟಲಿಂಗವನ್ನು ಚಿತ್ತ ನುಂಗಬಾರದು, ಹಾಗಾದಾಗ ಭಕ್ತಿಯ ಹೊಲ ಬರುಡಾಗುತ್ತದೆ. ಈ ಕಾರಣಕ್ಕಾಗಿಯೇ ಶರಣರು ಲಿಂಗಕ್ಕೆ ಮನವನರ್ಪಿಸಬೇಕೆಂದು ಹೇಳಿದ್ದಾರೆ. ಇಲ್ಲದಿದ್ದರೆ ಇಷ್ಟಲಿಂಗವನ್ನೇ ಚಿತ್ತವೆಂಬ ಮನ ನುಂಗಿ ಬಿಡುತ್ತದೆಂದು ಎಚ್ಚರಿಸಿದ್ದಾರೆ. ಮಡಿವಾಳ ಮಾಚಿದೇವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ. “ನಮಗೆ ಲಿಂಗವುಂಟು, ನಾವು ಲಿಂಗವಂತರೆಂದು ನುಡಿವವರು” (ವ:641) ಮತ್ತೆ ಮರಳಿ ಭವಿಶೈವ ದೈವಗಳಿಗೆ ಎರಗುವವರನ್ನು ಮಂಗ ಮಾನವರೆಂದು ಕರೆದಿದ್ದಾರೆ.

“ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ
ಮಹಾಘನಲಿಂಗ ನಿಕ್ಷೇಪವಾಗಿದೆ!

ಈ ದಿವ್ಯ ನಿಕ್ಷೇಪವ ಸಾಧಿಸುವಡೆ
ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು.....”

-ಜೇಡರದಾಸಿಮಯ್ಯ (ಸ.ವ.ಸಂ.7 ವ:779)

2) “ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು
ಪೂಜೆ-ಪುಣ್ಯ ಮಹಾದೇವನ ಹಂಗು
ಎನ್ನ ದಾಸೋಹ ಆರ ಹಂಗೂ ಇಲ್ಲ
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ
ಕಣ್ಣಯ ಮಾಡಬಲ್ಲಡೆ ಬಾ, ಎನ್ನ ತಂದೆ”

-ನುಲಿಯ ಚಂದಯ್ಯ (ಸ.ವ.ಸಂ.7, ವ:1297)

ಈ ಎರಡು ವಚನಗಳು ಇಷ್ಟಲಿಂಗದ ಪ್ರಾಮುಖ್ಯತೆಯನ್ನು ಹೇಳುತ್ತವೆ. ಜೇಡರದಾಸಿಮಯ್ಯನವರಿಗೆ ಕರಸ್ಥಲವೇ ದಿವ್ಯಭೂಮಿಯಾಗಿದೆ. ಈ ದಿವ್ಯ ಭೂಮಿಯಲ್ಲಿ ಮಹಾಘನಲಿಂಗವೆಂಬ ನಿಕ್ಷೇಪವಿದೆ. ಅದನ್ನು ಸಾಧಿಸಿಬೇಕಾದರೆ, ಆ ನಿಕ್ಷೇಪವನ್ನು ಹೊರಗೆ ತೆಗೆಯಬೇಕಾದರೆ ವಿಭೂತಿಯೆಂಬ ದಿವ್ಯಾಂಜನವು ಬೇಕೆಂದು ಹೇಳುತ್ತಾರೆ. ಅಷ್ಟಾವರಣಗಳು, ಒಂದಕ್ಕೊಂದು ಪೂರಕವಾಗಿವೆ. ಇಲ್ಲಿ ಇಷ್ಟಲಿಂಗದಷ್ಟೇ ಪ್ರಾಮುಖ್ಯತೆಯನ್ನು ವಿಭೂತಿಗೆ ನೀಡಲಾಗಿದೆ.

ಇದೇ ರೀತಿ ಅಂಗ-ಲಿಂಗ-ಆತ್ಮ-ಅರಿವುಗಳಿಗಿರುವ ಸಂಬಂಧವನ್ನು ಬಿಬ್ಬಿಬಾಚಯ್ಯನವರು ಹೇಳಿದರೆ, ಡೋಹರ ಕಕ್ಕಯ್ಯ ಇಷ್ಟಲಿಂಗದ ಮೂಲಕ ತಾನು ಕಷ್ಟಕುಲದಿಂದ ಮೇಲೆದ್ದು ಪಾವನವಾದೆನೆಂದು ತಿಳಿಸಿದ್ದಾರೆ. ನೀಲಮ್ಮ ಲಿಂಗದಷ್ಟೇ ಅಂಗ ಮುಖ್ಯ, ಆಚರಣೆ ಮುಖ್ಯವೆಂದು ಹೇಳಿದ್ದಾರೆ. ಈ ಲಿಂಗಾಂಗ ಸಾಮರಸ್ಯದಲ್ಲಿ ಇಹ-ಪರದ ಸುಖಗಳಿವೆಯೆಂಬ ಮಹತ್ವದ ಮಾತನ್ನು ಹೇಳಿದ್ದಾರೆ. ನುಲಿಯ ಚೆಂದಯ್ಯನಿಗೆ ಇಷ್ಟಲಿಂಗವು ಗುರುವಿನ ಹಂಗಾಗಿ ಕಂಡಿದೆ. ಕಾಯಕವೇ ಪ್ರಮುಖವಾದದ್ದೆಂದು ನಂಬಿದ ಈ ಶರಣನಿಗೆ ಗುರು-ಲಿಂಗ-ಜಂಗಮದ ಹಂಗಿಲ್ಲ. ತನ್ನ ಕಣ್ಣಿಯ ಕಾಯಕದಲ್ಲೇ ಸರ್ವಸ್ವವನ್ನು ಕಂಡನುಲಿಯ ಚೆಂದಯ್ಯ ಎಲ್ಲ ಹಂಗುಗಳನ್ನು ಮೀರಿದ ಮುಗ್ಧ ಭಕ್ತರಾಗಿದ್ದಾರೆ. ಕಾಯಕವೇ ಚಂದಯ್ಯನವರಿಗೆ ಪೂಜೆಯಾಗಿ ಕಾಣಿಸಿದೆ, ದಾಸೋಹವೇ ಸಮಾನತೆಯ ಸಂಕೇತವಾಗಿದೆ.

ಹೀಗೆ ಇಷ್ಟಲಿಂಗ ಕುರಿತಂತೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದರೆ. ಇನ್ನೂ ನೂರಾರು ವಚನಗಳಲ್ಲಿ ಇಷ್ಟಲಿಂಗ-ಕರಸ್ಥಲಲಿಂಗಗಳ ಬಗೆಗೆ ವಿಷಯವಿದೆ. ಇಲ್ಲಿ ಕೆಲವು ವಚನಕಾರರ ವಚನಗಳನ್ನು ಮಾತ್ರ ಆಯ್ಕೆಮಾಡಿಕೊಂಡು ಇಷ್ಟಲಿಂಗದ ಮಹತ್ವವನ್ನು ಹೇಳಲಾಗಿದೆ. ಇಷ್ಟಲಿಂಗಕ್ಕೆ ಪ್ರಾರಂಭದಲ್ಲಿ ಅದು ನಿರ್ಜಿವ ವಸ್ತು ಎಂದೆನಿಸಿದರೂ ಅದು ಪ್ರಾಣಲಿಂಗವಾಗಿ ಬೆಳೆದಾಗ ಜೀವಕಳೆ ಬರುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...