ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು

Date: 15-12-2021

Location: ಬೆಂಗಳೂರು


‘ಖ್ಯಾತ ನಗೆ ನಾಟಕಕಾರ ಎ.ಎಸ್ ಮೂರ್ತಿಯವರು ಒಮ್ಮೆ ನನ್ನನ್ನು ಕೇಳಿದ್ದರು ‘ನೀವು ಎಂದೂ ನಕ್ಕಿದ್ದೇ ಇಲ್ಲವೆ?’. ಮೂರ್ತಿಯವರು ಏಕೆ ಈ ಪ್ರಶ್ನೆ ಕೇಳಿದರೋ ಎಂದು ಮನದಲ್ಲೇ ನಗುತ್ತಾ "ಬದುಕು ಅದನ್ನು ನನಗೆ ಧಾರಾಳವಾಗಿ ಕೊಡಲಿಲ್ಲ" ಎಂದು ಉತ್ತರಿಸಿದ್ದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ತಮ್ಮ ವೃತ್ತಿಜೀವನದುದ್ದಕ್ಕೂ ಬಂದ ಆಪ್ತರ, ಅಭಿಮಾನಿಗಳ ಹಾಗೂ ಲೇಖಕರ ಪತ್ರಗಳ ಕುರಿತು ವಿಶ್ಲೇಷಿಸಿದ್ದಾರೆ.

ನಾನು ನನ್ನ ಸ್ವಭಾವದ ಬಗ್ಗೆ ಸ್ವಲ್ಪ ಹೇಳಬೇಕು. ನಾನು ಮಾತುಗಾರನಲ್ಲ, ಮಿತಭಾಷಿ. ಬಾಲ್ಯದಿಂದಲೂ ನಾನು ಏಕಾಂಗಿಯಾಗಿ ಬೆಳೆದವನು. ವಿದ್ಯಾರ್ಥಿ ದಿನಗಳಲ್ಲೂ ನಾನು ಯಾರ ಜೊತೆಯೂ ಬೆರೆತವನಲ್ಲ. ನನಗೆ ಹೆಚ್ಚು ಸ್ನೇಹಿತರಿರಲಿಲ್ಲ. ಸ್ನೇಹಿತರನ್ನು ಸಂಪಾದಿಸುವ ಉಮೇದೂ ನನಗಿರಲಿಲ್ಲ. ಬಹುಶ: ತಂದೆತಾಯಿ ನನ್ನನ್ನು ಬೆಳೆಸಿದ ರೀತಿಯೂ ಇದಕ್ಕೆ ಕಾರಣವಿದ್ದೀತು. ಶಾಲೆ, ಮನೆ ಇವೆರಡೇ ನನ್ನ ಪ್ರಪಂಚವಾಗಿತ್ತು. ಆಟೋಟಗಳಿಗೂ ತಂದೆಯವರು ನನ್ನನ್ನು ಹೊರಗಡೆಗೆ ಕಳುಹಿಸುತ್ತಿರಲಿಲ್ಲ. ಹೊರಗೆ ಹೋದರೆ ಪೋಲಿ ಹುಡುಗರ ಸಹವಾಸದಿಂದ ಕೆಟ್ಟು ಹೋಗುತ್ತೇನೆ ಎಂದೋ ತಂದೆ ತಾಯಿಯರು ನನ್ನನ್ನು ಬೆಳಿಗ್ಗೆ ಮಧ್ಯಾಹ್ನ ಸಂಜೆ ಮೂರು ಹೊತ್ತೂ ಮುಚ್ಚಟೆಯಿಂದ ಮನೆಯಲ್ಲಿ ಕಟ್ಟಿಹಾಕುತ್ತಿದ್ದರು. ಇನ್ನೊಂದು, ನಾನು ಬೆಳೆದ ಹಳ್ಳಿಯ ವಾತಾವರಣವೂ ಇದಕ್ಕೆ ಕಾರಣವಿದ್ದೀತು. ಹೈಸ್ಕೂಲ್ ವರೆಗೆ ನನ್ನ ಬಾಲ್ಯದ ಜೀವನ ಕಳೆದದ್ದು ಬೆಂಗಳೂರು ಜಿಲ್ಲೆಯ ಕುಗ್ರಾಮಗಳಲ್ಲಿ.

ಆಯುರ್ವೇದ ವೈದ್ಯರಾಗಿದ್ದ ತಂದೆಯವರಿಗೆ ವರುಷ ಎರಡು ವರುಷಗಳಿಗೆಲ್ಲ ವರ್ಗವಾಗುತ್ತಿತ್ತು. ಸ್ಥಳೀಯ ಸಂಸ್ಥೆಗಳು ನಡೆಸುತ್ತಿದ್ದ ಆಯುರ್ವೇದ ವೈದೈ ಶಾಲೆಗಳು ಕುಗ್ರಾಮಗಳಲ್ಲೇ ಇದ್ದುದರಿಂದ ನನ್ನ ಬಾಲ್ಯವೆಲ್ಲ ಹಳ್ಳಿಗಳಲ್ಲೇ ಕಳೆಯಿತು. ಎಷ್ಟೋ ಹಳ್ಳಿಗಳಲ್ಲಿ ಆ ದಿನಗಳಲ್ಲಿ ಪ್ರಾಥಮಿಕ/ಮಾಧ್ಯಮಿಕ ಶಾಲೆಗಳೇ ಇಲದಿದ್ದುದರಿಂದ ಒಂದೆರಡು ವರ್ಷ ನಾನು ಮನೆಯಲ್ಲೇ ಉಳಿಯಬೇಕಾಯಿತು. ಹಳ್ಳಿಗಳಲ್ಲಿ ನನ್ನ ವಯಸ್ಸಿನ ಹುಡುಗರೆಲ್ಲ ದನಕಾಯಲು, ಹೊಲದ ಕೆಲಸ ಮಾಡಲು ಹೋಗುತ್ತಿದ್ದುದರಿಂದ ಅಂಥ ಗ್ರಾಮೀಣ ಪರಿಸರದಸಲ್ಲಿ ಸ್ನೇಹವಂಚಿತನಾದೆ. ಹೀಗಾಗಿ ನಾನು ಏಕಾಂತ ಪ್ರಿಯನಾದೆ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಒಬ್ಬನೇ ಕುಳಿತು ಮನೆಯೆಂಬ ಜೈಲಿನಿಂದ ಪರಾರಿಯಾಗುವುದು ಹೇಗೆ ಎಂಬ ಆಲೋಚನೆಯಲ್ಲಿ ಮುಳುಗಿರುತ್ತಿದ್ದೆ. ಹೀಗೆ ಮೌನ, ಏಕಾಂತಗಳು ನನ್ನ ಜಾಯಮಾನವಾಯಿತು. ಮುಂದೆ ನನ್ನ ಒಡನಾಟದಲ್ಲಿ ಬಂದವರು ಇವನು ಮಾತಾಡುವ ಆಸಾಮಿ ಅಲ್ಲ ಎನ್ನುವ ನಿರ್ಧಾರಕ್ಕೆ ಬಂದರು. ಮಾತು ಬೇಡ, ನಗೆಯ ರೇಖೆಯೂ ಇವನ ಮುಖದಲ್ಲಿ ಸುಳಿಯುವುದಿಲಲ್ಲವಲ್ಲ ಎಂದು ಕೆಲವರು ಆಶ್ಚರ್ಯಪಟ್ಟಿದ್ದಿದೆ.

ಖ್ಯಾತ ನಗೆ ನಾಟಕಕಾರ ಎ.ಎಸ್ ಮೂರ್ತಿಯವರು ಒಮ್ಮೆ ನನ್ನನ್ನು ಕೇಳಿದ್ದರು ‘ನೀವು ಎಂದೂ ನಕ್ಕಿದ್ದೇ ಇಲ್ಲವೆ?’. ಮೂರ್ತಿಯವರು ಏಕೆ ಈ ಪ್ರಶ್ನೆ ಕೇಳಿದರೋ ಎಂದು ಮನದಲ್ಲೇ ನಗುತ್ತಾ "ಬದುಕು ಅದನ್ನು ನನಗೆ ಧಾರಾಳವಾಗಿ ಕೊಡಲಿಲ್ಲ" ಎಂದು ಉತ್ತರಿಸಿದ್ದೆ. ತಾಸುಗಟ್ಟಳೆ ನನ್ನೆದುರು ಕುಳಿತು ಮಾತನಾಡಿಸಲಾಗದೆ ವಾಪಸುಹೋದುದಾಗಿ ಪತ್ರಕರ್ತ ಮಿತ್ರರಾದ ವಿಶ್ವೇಶ್ವರ ಭಟ್ಟರು ಬರೆದಿದ್ದಾರೆ.

ಇದು ನನ್ನ ಜಾಯಮಾನವಾದರೂ ನನ್ನ ಬರವಣಿಗೆಯಲ್ಲಿ ನಗೆಮಿಂಚು, ವ್ಯಂಗ್ಯವಿಡಂಬನೆಗಳಿರುವ ಬಗ್ಗೆ ಸುಪ್ರಸಿದ್ಧ ಚಾಟು ಕವಿ ಡುಂಡಿರಾಜರು ಆಶ್ಚರ್ಯ ಪಟ್ಟಿರುವುದೂ ಉಂಟು. ಹಾಗೆ ನೋಡಿದರೆ ನಾನು ಬರವಣಿಗೆ ಶುರುಮಾಡಿದ್ದು ನಗೆ ಬರಹಗಳಿಂದಲೆ.

ನಗುವ ನಂದ. ವಿನೋದದ ಪತ್ರಿಕೆಗಳಿಗೆ ಅರವತ್ತರ ದಶಕದಲ್ಲಿ ಸಾಕಷ್ಟು ನಗೆಬರಹಗಳನ್ನು ಬರೆದು ಉದರಂಭರಣ ಮಾಡಿದ್ದುಂಟು. ಬಹುಶ: ಈ ಸೆನ್ಸ್ ಆಫ್ ಹ್ಯೂಮರ್ರೂ ಮುಖಗಂಟು ಹಾಕಿಕೊಂಡು ನನ್ನೊಳಗೆ ಸುಪ್ತವಾಗಿದ್ದುಕೊಂಡು ಆಗಾಗ್ಗೆ ಕಣ್ಣುಮುಚ್ಚಾಲೆ ಆಡುತ್ತಿತ್ತೇನೋ. ಇಂಥ ಜಾಯಮಾನದವನನ್ನು ದೂರದೂರಿನ ಹಾಗೂ ಹತ್ತಿರದ ಮಿತ್ರರು, ಹಿತೈಷಿಗಳು ಪತ್ರಮುಖೇನ ನನ್ನ ಬರಹಗಳನ್ನು ಕುರಿತು, ನನ್ನ ವೃತ್ತಿ ಸಂಬಂಧಿತ ರೀತಿನೀತಿಗಳನ್ನು ಕುರಿತು ಪತ್ರಮುಖೇನ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರುವುದು ಬದುಕು ನನಗೆ ತೋರುತ್ತಿರುವ ದೊಡ್ಡ ಔದಾರ್ಯವೆಂದೇ ನಾನು ಭಾವಿಸಿದ್ದೇನೆ. ಹೊರ ಪ್ರಪಂಚದ ಝಂಝವಾತಗಳಿಂದ ನನನ್ನು ರಕ್ಷಿಸುತ್ತಿರುವ ನನ್ನೀ ಜಾಯಮಾನಕ್ಕೆ ನಾನು ಕೃತಜ್ಞನಾಗಿರಲೇ ಬೇಕುಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿರುವ. ಅಂತೆಯೇ ಅದನ್ನು ಉಳಿಸಿಕೊಳ್ಳಲು ಸಹಕರಿಸುತ್ತಾ ನನ್ನ ಪತ್ರಮಿತ್ರರಿಗೂ.

ಮಲ್ಲಿಕಾರ್ಜುನ ಹಿರೇಮಠ
ಹುನಗುಂದ

13-11-98

ಶ್ರೀಯುತ ಜಿ.ಎನ್.ರಂಗನಾಥ ರಾವ್ ಅವರಿಗೆ,
ವಂದನೆಗಳು,

ಈಚೆಗೆ ‘ಪ್ರಜಾವಾಣಿ'ಯಲ್ಲಿ ಎಸ್.ದಿವಾಕರ್ ಅವರ ಕುರಿತ ನಿಮ್ಮ ಬರಹ ಓದಿ ಈ ಪತ್ರ. ಕನ್ನಡ ಕಥಾ ಪ್ರಪಂಚಕ್ಕೆ ಹೊಸ ದಿಗಂತಗಳನ್ನು ತೆರೆದ ಎಸ್.ದಿವಾಕರ್ ಅವರನ್ನು ಕುರಿತು ಆಪ್ತವಾಗಿ ಬರೆದಿದ್ದೀರಿ. ನಾನು ಅವರನ್ನು 1964-65ರಿಂದ ಬಲ್ಲೆ. ನಾನು ಧಾರವಾಡದಲ್ಲಿ ಬಿ.ಎ.ಓದುತ್ತಿದ್ದಾಗ ಅವರು ಆಗ ಎಕ್ಸ್ ಟರ್ನಲದ ಬಿ.ಎ.ಮಾಡಲು ಬಂದಾಗ ಪರಿಚಯ. ದಿವಾಕರ ಹೆಸರು ಅನ್ವರ್ಥ ಎಂಬ ಮಾತನ್ನು ಆಗ ನನ್ನ ಡೈರಿಯಲ್ಲಿ ಬರೆದದ್ದು ಇನ್ನೂ ನೆನಪಿದೆ. ಬೇಂದ್ರೆ, ಕಣವಿ ಅವರ ಕವಿತೆಗಳನ್ನು ಆಗ ನನಗೆ ಗುಂಗು ಹಿಡಿಸಿಬಿಟ್ಟಿದ್ದರು..ಹೀಗಿದ್ದರೂ ನಾವು ಭೇಟಿಯಾಗುತ್ತಿದ್ದುದು ಬಹಳ ಕಮ್ಮಿ…‘ಸುಧಾ’, ‘ಮಯೂರ'ಗಳಲ್ಲಿದ್ದಾಗ ಕಾಣಲು ಬಂದಿದ್ದೆ. ನಿಮ್ಮ ‘ಕಾಫ್ಕ ಕಥೆಗಳು’ ಕೆಲ ಪ್ರತಿಗಳನ್ನು ತರಿಸಿಕೊಂಡಿದ್ದೆ...ಕನ್ನಡದಲ್ಲಿ ಕಾಫ್ಕಾನನನ್ನು ಸಮರ್ಥವಾಗಿ ತಂದವರು.

ದಿವಾಕರ ಅವರ ಒಡನಾಟದಲ್ಲಿದ್ದ ನೀವು ಅವರ ವ್ಯಕ್ತಿತ್ವದ ಎಳೆಗಳನ್ನು ಚೆನ್ನಾಗಿ ಬಿಡಿಸಿದ್ದೀರಿ. ನಿಮ್ಮ ಎಲ್ಲ ಮಾತುಗಳಿಗೂ ನನ್ನನು ಮೋದನೆ ಇದೆಯೆಂದು ಸಂತೋಷದಿಂದ ಹೇಳುತ್ತೇನೆ.

ಗೌರವದಿಂದ
ನಿಮ್ಮ
ಮಲ್ಲಿಕಾರ್ಜುನ ಹಿರೇಮಠ
*********
ದೇಶಕುಲಕರ್ಣಿ

ಬೆಂಗಳೂರು

14-9-99
ಪ್ರಿಯ ಜಿ.ಎನ್.ಆರ್.

ನಿಮ್ಮ ಮಾಸ್ತಿಯವರ ನಾಟಕಗಳು ಪುಸ್ತಕ ಸುಮಾರು ಎರಡು ದಶಕ ಆದ ಮೇಲಾದರೂ ದ್ವಿತೀಯ ಮುದ್ರಣವನ್ನು ಕಂಡಿದ್ದು ಸಂತೋಷದ ಸಂಗತಿ. ಆ ಪುಸ್ತಕವನ್ನು ಮತ್ತೆ ಓದುವಂತಾಯಿತು. ವ್ಯಾಪಕವೂ ಅಧ್ಯಯನಶೀಲವೂ ಮತ್ತು ಆಟವೂ ಆದ (ಒಬ್ಬ ಲೇಖಕನೊಂದು ಪ್ರಕಾರದ)ಸಾಹಿತ್ಯವನ್ನು ಕುರಿತ ವಿವರಪೂರ್ಣ ನಿಬಂಧ ಇವತ್ತಿಗೂ ಇಲ್ಲಿಗೆ ಅಪರೂಪ ತಾನೆ. ಈಗಿನ ಕಾಲದಲ್ಲಿಯಂತೂ ಇದು ಇಲ್ಲವೇ ಇಲ್ಲ.ಬಹುಶ: ಈಗ ನೀವೂ ಬರೆಯಲಾರಿರೇನೋ.

ಚಿಲಿಪಿಲಿ ಪೂರ್ತಿ ಓದಿದೆ. ಮೂರನೆಯ ಸಂಪಾದಕೀಯವನು ಬರೆಯುವವನು ಬರೇ ಪತ್ರಕರ್ತನಾಗಿದ್ದರೆ ಸಾಲದು. ಸುತ್ತಮುತ್ತಲಿಗೆ ಸ್ಪಂದಿಸಬಲ್ಲವನೂ ಸಾಹಿತ್ಯವನ್ನರಿತ ಸಾಹಿತಿಯೂ ಆಗಿರಬೇಕು. ಹಾಗಿದ್ದಲ್ಲಿ ಮಾತ್ರ ಅದು ಸೃಷ್ಟಿಶೀಲವಾದೀತು. ಬ್ರಿಟನ್ನು ಮತ್ತು ಅಮೆರಿಕಗಳಲ್ಲಿ ಇಂಥ ಸಂಪುಟಗಳೇ ಬಂದಿವೆ. ಇಂಗ್ಲಿಷಿನಲ್ಲಿ ಶ್ಲೇಷೆ ಮತ್ತು ಲಾಲಿತ್ಯ ತುಂಬ ಸೂಕ್ಷ್ಮವಾಗಿ ಬರಬಲ್ಲದು.

ಚಿಲಿಪಿಲಿಯ ಎಲ ಬರಹಗಳೂ ಒಂದು ಮಟ್ಟವನ್ನು ಕಾಯ್ದುಕೊಂಡಿವೆ.ಎಲ್ಲೋ ಕೆಲವು ಮಾತ್ರ ಪುನರಾವರ್ತನೆಯಿಂದ ಸೊರಗಿವೆ.ವಿಶೇಷವಾಗಿ,ಮನೆಯೋ ಮೃಗಾಲಯವೋ,ಗುಬ್ಬಿಯ ಗಮ್ಮತ್ತು,ಪಾಪದ ಪವರಾಣಿ,ಕಂಡದ್ದೇ ಕೇಶಕ್ಕೆ ಕತ್ತರಿ,ಕತ್ತೆಗೊಂದು ಕಾ;ಲ,ಗುಂಡಿಗೊಂದು ಚುಂಬನ ಮುಂತಾದ ಆಮೇಲಿನ ಬರಹಗಳು ಮೊದಲಿನ ಬರಹಗಳಿಗಿಂತಲೂ ಲಕ್ಷಣವಾಗಿ,ಅಚ್ಚುಕಟ್ಟಾಗಿ ಬಂದಿವೆ.ಬರವಣಿಗೆ ತಾನೇ ಬೆಳೆದ ಕ್ರಮ ಇದು,ಅಲ್ಲವೆ?

ವಿಶ್ವಾಸದಿಂದ
ದೇ.ಕು.
*********
ಎಚ್.ಡುಂಡಿರಾಜ್
22-01-2000

ಬೆಳಗಾವಿ

ಪ್ರಿಯ ಶ್ರೀ ರಂಗನಾಥ ರಾವರ ಅವರಿಗೆ,
ವಂದನೆಗಳು,

ಬೆಂಗಳೂರಿಗೆ ಬಂದಿದ್ದಾಗ ನೀವು ನನಗೆ ಹೊಸ ಸಹಸ್ರಮಾನದ ಶುಭಾಶಯಗಳೊಂದಿಗೆ ನೀಡಿದ ನಿಮ್ಮ `ಚಿಲಿಪಿಲಿ' ಒಂದು
ಅಮೂಲ್ಯ ಉಡುಗೊರೆ.ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ.
ಇಲ್ಲಿರುವ ಎಲ್ಲ ಬರಹಗಳನ್ನೂ ನಾನು ಈ ಮೊದಲು ಓದಿದ್ದೆ. ಆದರೆ ನೀವು ಬರೆದದ್ದು ಅಂತ ಗೊತ್ತಿರಲಿಲ್ಲ. ನೀವೊಬ್ಬ ಗಂಭೀರ ಲೇಖಕರು, ವಿಮರ್ಶಕರು ಎಂದಷ್ಟೆ ತಿಳಿದಿದ್ದೆ. ನನಗೆ ನಿಮ್ಮ ಇನ್ನೊಂದು ಮುಖ ಅಂದರೆ ವಿನೋದ ಪ್ರಜ್ಞೆಯನ್ನು ಈ ಪುಸ್ತಕ ಪರಿಚಯಿಸಿತು.

ಬರಹಕ್ಕಾಗಿ ನೀವು ಆರಿಸಿಕೊಂಡ ವಿಷಯಗಳು ಬಹುಪಾಲು ಸ್ವಾರಸ್ಯಕರವಾಗಿರುವುದರಿಂದ ಅವು ಒಂದು ಮಿತಿ ಎಂದು ನನಗೆ ಅನ್ನಿಸುವುದಿಲ್ಲ. ಇವುಗಳನ್ನು ಸಾಮಯಿಕ ಎಂದು ಬಿಟ್ಟುಬಿಡುವಂತಿಲ್ಲ.ಬಹಳಷ್ಟು ಸುದ್ದಿಗಳು ವಿಚಿತ್ರವಾಗಿರುವುದರಿಂದ ಯಾವಾಗ ಓದಿದರೂ ಖುಷಿಕೊಡುತ್ತವೆ.ಜತೆಗೆ ಅವುಗಳನ್ನು ನಿರೂಪಿಸಲು ನೀವು ಬಳಸುವ ಭಾಷೆ ಶೈಲಿ ಹಾಗೂ ತರ್ಕ(ಕುತರ್ಕ!)ದಿಂದಾಗಿ ಇವುಗಳನ್ನು ಮತೆಮತ್ತೆ ಓದಿದರೂ ಖುಷಿಕೊಡುತ್ತವೆ.

ಪತ್ರಿಕೆಯಲ್ಲಿ ಪ್ರಕಟವಾಗಿ ಹಾಗೇ ಮರೆರಯಾಗಿ ಹೋಗುತ್ತಿದ್ದ ಈ ಅಮೂಲ್ಯ ಲಲಿತ ಬರಹಗಳನ್ನು ಸಂಗ್ರಹಿಸಿ ಓದುಗರಿಗೆ ನೀಡಿದ್ದಕ್ಕೆ ನಿಮಗೆ ಹಾಗೂ ಪ್ರಕಾಶಕರಿಗೆ ನನ್ನ ಅಭಿನಂದನೆಗಳು.

ನೀವು ಈ ತಿಂಗಳು ನಿವೃತ್ತರಾಗುತ್ತೀರಿ.ಆದರೆ ನೀವು ಖಂಡಿತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಭರವಸೆ ನನಗಿದೆ!ನಿವೃತ್ತಿಯ ನಂತರ ನಿಮ್ಮಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರತೈಸುತ್ತೇನೆ.ಪ್ರಜಾವಾಣೀ-ಸುಧಾ ಸಂಪಾದಕರಾಗಿ ನೀವು ನನಗೆ ನೀಡಿದ ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ.

ಇತಿ ನಿಮ್ಮ ವಿಶ್ವಾಸಿ,
ಎಚ್.ಡುಂಡಿರಾಜ್

(ಪಿ.ಎಸ್:ನನ್ನ ಹೊಸ ಸಂಕಲನ ‘ಏನಾಯಿತು' ತೆರೆದ ಅಂಚಿಯಲ್ಲಿ ಕಳಿಸುತ್ತಿದ್ದೇನೆ).

*******
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ
29-1-1999

ಪ್ರಿಯ ರಂಗನಾಥ,

ವಂದನೆಗಳು,
ನೀವು ಬರಿ ಎಂದಾಗ ಬರೆದೆ. ನಿಲ್ಲಿಸು ಎಂದಾಗ ನಿಲ್ಲಿಸಿದೆ. ನನಗೆ ಬರೆಯಲು ಹೇಳಿ ನನ್ನ ವ್ಯಕ್ತಿತ್ವಕ್ಕೆ ಹೊಸ ಆಯಾಮ, ಆಸರೆಗಳನ್ನು ದೊರಕಿಸಿಕೊಟ್ಟಿರಿ. ನಿಮಗೆ ಕೃತಜ್ಞತೆ ಎಷ್ಟು ಹೇಳಿದರೂ ಕಡಿಮೆ.
ನನ್ನನ್ನು ಮತ್ತೆ ನಿಮ್ಮೊಡನೆ ಹೀಗೆಯೇ ಬೆಳಸಿರಿ, ಪ್ರೀತಿಸಿರಿ,

ಎಂದು,
ಸಿದ್ಧಲಿಂಗ ಪಟ್ಟಣಶೆಟ್ಟಿ
*******
ಡಾ.ಕಮಲಾಹಂಪನಾ

24-8-1999

ಆತ್ಮೀಯರಾದ ಶ್ರೀ ಜಿ.ಎನ್.ರಂಗನಾಥರಾಯರಲ್ಲಿ ವಿಶ್ವಾಸ ಪೂರ್ವಕ ವಂದನೆಗಳು.
ಸಂಪಾದಕ ಹಾಗೂ ಅಂಕಣಕಾರರ ಮಧ್ಯೆ ಇಕ್ಕಟು-ಬಿಕ್ಕಟ್ಟುಗಳನ್ನು ಕುರಿತು ನೀವು ಪ್ರಾಮಾಣಿಕವಾಗಿ ಹಾಗೂ ವಸ್ತುನಿಷ್ಠವಾಗಿ ಆದರೆ ಅಷ್ಟೇ ಸಹಜವಾಗಿ ಮೈಸೂರಿನಲ್ಲಿ ಭಾಷಣ ಮಾಡಿದ ನಿಮ್ಮ ಮಾತುಗಳು ನನ್ನ ಕಿವಿಯಲ್ಲಿ ಇನ್ನೂ ಅನುರಣನಗೊಳ್ಳುತ್ತಲೇ ಇದೆ. ಕೆಲವರ ಕೆಲವು ಮಾತುಗಳು ಹೀಗೆ ದಟ್ಟವಾಗಿ ಹೃದಯತಟ್ಟಿ ನಿಲ್ಲಬಲ್ಲವು. ಆ ನಿಮ್ಮ ಮಾತುಗಳು ಅಂಥವು. ಅದಕ್ಕಾಗಿ ಮತ್ತೊಮ್ಮೆ ತಮ್ಮನ್ನು ಅಭಿನಂದಿಸುವೆ.

ನಾನು, ಡಾ.ಹಂಪನಾ ಕ್ಷೇಮ. ತಾವು ಹದುಳವೆಂದು ಭಾವಿಸುವೆ.
ನಮ್ಮ ಮಗಳು ಆರತಿಯ ಕವನವನ್ನು ಪ್ರಕಟಿಸಿ ಅವಳಿಗೆ ಪ್ರೋತ್ಸಾಹಿಸಿರುವಿರಿ. ನಾವು ತುಂಬ ಸಂತೋಷಪಟ್ಟೆವು.ತಮ್ಮ ಆಶೀರ್ವಾದ ಇದೇ ರೀತಿ ಮುಂದುವರಿಯಲೆಂದು ಆಶಿಸುವೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಕಮಲಾ ಹಂಪನಾ

********
ಮೂಡಬಿದಿರೆ
ಹಿರಿಯರಾದ ಶ್ರೀ ಜಿ.ಎನ್.ರಂಗನಾಥ ರಾಯರಲ್ಲಿ ವಿಜ್ಞಾಪನೆಗಳು,

ನೀವು ‘ಸುಧಾ'ವಾರಪತ್ರಿಕೆಯಿಂದ ನಿವೃತ್ತರಾಗಲಿದ್ದೀರಿ ಎಂದು ಬೆಂಗಳೂರಿನಿಂದ ಇಲ್ಲಿಗೆ ಬಂದಿರುವ ಆರ್,ಜಿ.ಹಳ್ಳಿ ನಾಗರಾಜ್‍ರವರು ತಿಳಿಸಿದರು. ನೀವು ‘ಸುಧಾ'ಸಂಪಾದಕರಾಗಿದ್ದಾಗ ನನ್ನ ‘ವಾಥ' ಎಂಬ ಕಾದಂಬರಿಯನ್ನು ಕಳುಹಿಸಿದ್ದೆ. ಮುಖತಃ ಭೇಟಿಮಾಡಿದಾಗ ನಿಮ್ಮ ನಿವೃತ್ತಿಯ ಮೊದಲು ಅದರ ಬಗ್ಗೆ ತೀರ್ಮಾನ ನೀಡಬೇಕೆಂದು ವಿನಂತಿಸಿದ್ದೆ. ಆದರೆ ಆ ಕಾದಂಬರಿಯ ಕುರಿತು ‘ಸುಧಾ' ಕಛೇರಿಯಿಂದ ಈ ತನಕ ಯಾವ ಪ್ರತಿಕ್ರಿಯಯೂ ಬಂದಿಲ್ಲ. ದಯವಿಟ್ಟು ಆ ಕಾದಂಬರಿ ಬಗ್ಗೆ ‘ಸುಧಾ'ನಿಲುವೇನು ಎಂಬುದನ್ನು ನೀವು ಸಂಬಂಧಪಟ್ಟವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸುವ ಕೃಪೆಮಾಡಬೇಕಾಗಿ ಪ್ರಾರ್ಥನೆ. ನೀವು ‘ಸುಧಾ' ಸಂಪಾದಕರಾಗಿದ್ದಾಗ ತುಂಬಾ ಪ್ರೊತ್ಸಾಹ ನೀಡಿದ್ದೀರಿ. ಅದನ್ನು ನಾನು ಮರೆಯಲಾರೆ.

ದಯವಿಟ್ಟು ಜೊತೆಗಿರಿಸಿರುವ ಕಾರ್ಡ್ ಉಪಯೋಗಿಸಿ.
ಆದರದ ವಂದನೆಗಳು
ನಾ.ಮೊಗಸಾಲೆ
10/2/2000.

ಬದುಕು ನನಗೆ ಏನನ್ನು ಕೊಡಲಿಲ್ಲ ಎಂದು, ನಾನು ಕೂಡಲಿಲ್ಲ ಎಂದು ಕೆಲವು ದಿನಗಳ ಕಾಲ ವ್ಯಗ್ರನಾಗಿದ್ದ ನನಗೆ ಕೊನೆಯ ದಿನಗಳಲ್ಲಿ ಸಿಕ್ಕ ಈ ಪತ್ರಗಳು.
ಮುಂದುವರಿದಿದೆ...
ಈ ಅಂಕಣದ ಹಿಂದಿನ ಬರಹಗಳು:
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...