ಅಂ-ಕಿತಾಬ್ ಜಿಂದಾಬಾದ್, ಅಣು, ಆಂಗ್ಲರ ನಾಡಿನಲ್ಲಿ ಅಲೆಮಾರಿ; ಅರ್ಥ ಸಾಧ್ಯತೆ ಹೆಚ್ಚಿಸುವ ಕೃತಿಗಳು: ಪ್ರಶಂಸೆ

Date: 01-08-2021

Location: ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ಹಾಗೂ ಯುಟ್ಯೂಬ್ ಚಾನಲ್


ಕವಿ ಎಚ್. ಡುಂಡಿರಾಜ್ ಅವರ ‘ಅಂ-ಕಿತಾಬ್ ಜಿಂದಾಬಾದ್ (ಲಘುಧಾಟಿಯ ಲೇಖನಗಳು), ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ‘ಅಣು’ (ಕಾದಂಬರಿ) ಹಾಗೂ ಸಾಹಿತಿ ಡಾ. ಎಸ್.ಪಿ ಪದ್ಮಪ್ರಸಾದ್ ಅವರ ಆಂಗ್ಲರ ನಾಡಿನಲ್ಲಿ ಅಲೆಮಾರಿ (ಪ್ರವಾಸ ಕಥನ)-ಈ ಮೂರು ಕೃತಿಗಳು ತಮ್ಮ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಪರಿಣಾಮಕತೆಯ ದೃಷ್ಟಿಯಿಂದ ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕವಿ ಡಾ. ಬಿ.ಆರ್. ಲಕ್ಷ್ಮಣರಾವ್ ಹಾಗೂ ವಿಮರ್ಶಕ ಡಾ. ಎಚ್. ದಂಡಪ್ಪ ಅಭಿಪ್ರಾಯಪಟ್ಟರು.

ಬುಕ್ ಬ್ರಹ್ಮ ಹಾಗೂ ಅಂಕಿತ ಪುಸ್ತಕ ಪ್ರಕಾಶನ ಸಂಯುಕ್ತವಾಗಿ ಆಯೋಜಿಸಿದ್ದ ವರ್ಚುವಲ್ ವೇದಿಕೆಯಡಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಾಷೆ ಮುರಿದು ಕಟ್ಟುವಿಕೆ: ಕವಿ ಡಾ. ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ ‘ಕವಿ ಎಚ್. ಡುಂಡಿರಾಜ್ ಅವರು ಕನ್ನಡ ಭಾಷೆಯನ್ನು ಮುರಿದು ಮತ್ತೇ ಕಟ್ಟುವ ಕ್ರಿಯೆಯೊಂದಿಗೆ ಓದುಗರು ಸಾಹಿತ್ಯಾನಂದವನ್ನು ಅನುಭವಿಸುವಂತೆ ಮಾಡುತ್ತಾರೆ. ವಿನೋದಪೂರ್ಣ ಶೈಲಿ, ಗಂಭೀರ ವಸ್ತುವಿಗೂ ಹಾಸ್ಯದ ಲೇಪನ, ಸಮಕಾಲೀನ ಬರಹಗಳ ಸ್ವಾರಸ್ಯಪೂರ್ಣ ನಿರೂಪಣೆ ಇರುತ್ತದೆ. ವಿಷಯವು ಪುನರಾವರ್ತನೆಯಾಗದಂತೆಯೂ ಎಚ್ಚರ ವಹಿಸುತ್ತಾರೆ. ನವಿರಾದ ಹಾಸ್ಯದ ಮೂಲಕ ವಿಚಾರಗಳ ಪ್ರಸ್ತುತಿ, ವೈವಿಧ್ಯತೆ ಇರುತ್ತದೆ. ಶಬ್ದದ ವ್ಯುತ್ಪತ್ತಿಯ ಕಲೆಯಿಂದ ಹೊಸ ಹೊಸ ಅರ್ಥಗಳನ್ನು ಸೃಷ್ಟಿಸುತ್ತಾರೆ- ಈ ಎಲ್ಲ ಅಂಶಗಳು ಡುಂಡಿರಾಜ್ ಅವರ ಸಾಹಿತ್ಯದ ಯಾವುದೇ ಪ್ರಕಾರಗಳಿಗೂ ಅನ್ವಯಿಸಬಹುದು. Begins in delight and ends in wisdom ಎಂಬಂತೆ ಅವರ ಸಾಹಿತ್ಯವು ಸಂತಸದಿಂದಲೇ ಆರಂಭವಾಗಿ ತುಂಬಾ ಕಲಾತ್ಮಕವಾಗಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

ಕೇಶವರೆಡ್ಡಿ ಹಂದ್ರಾಳ ಅವರ ‘ಅಣು’ ಕಾದಂಬರಿ ಕುರಿತು ಮಾತನಾಡಿದ ಅವರು ‘ ಬುದ್ದಿಜೀವಿಗಳು ಸಹ ಸಮಾಜದ ಶೋಷಣೆಯ ಭಾಗವಾಗಿರುವುದನ್ನು ಹಾಗೂ ಲೈಂಗಿಕತೆಯನ್ನು ಸಂಪೂರ್ಣ ವ್ಯಾಪಾರವಾಗಿಯೇ ಕಾಣುವ ಸಂಬಂಧಗಳ ಸ್ವಾರ್ಥಪರತೆಯನ್ನು ತುಂಬಾ ವಿಡಂಬನಾತ್ಮಕವಾಗಿ ಚಿತ್ರಿಸುವ ಪರಿಣಾಮಕಾರಿ ಕಾದಂಬರಿ ಎಂದು ಬಣ್ಣಿಸಿದರೆ, ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ‘ ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಪ್ರವಾಸ ಕಥನವು ಬ್ರಿಟಿಷ್ ನಾಡಿನಲ್ಲಿಯ ವಿಶೇಷವಾಗಿ ಮ್ಯೂಜಿಯಂಗಳ ಕುರಿತು ಸುದೀರ್ಘ ಮಾಹಿತಿ ನೀಡುವ ವಿವರಣೆ ಇದೆ ಎಂದು ಹೇಳಿದರು.

ವೇಶ್ಯಾವಾಟಿಕೆಯ ಪರಿಣಾಮಕಾರಿ ಚಿತ್ರಣ: ವಿಮರ್ಶಕ ಡಾ. ಎಚ್. ದಂಡಪ್ಪ ಅವರು ಮಾತನಾಡಿ ‘ಈವರೆಗೂ ಕಥೆಗಳನ್ನು ಬರೆದಿದ್ದ ಹಂದ್ರಾಳ ಅವರು ಈಗ ‘ಅಣು’ ಕಾದಂಬರಿಯಲ್ಲಿ ಬಡತನ, ಹಸಿವು, ಲೈಂಗಿಕತೆಯ ಶೊಷಣೆ ಇತ್ಯಾದಿ ವಸ್ತುವನ್ನು ಬಳಸಿ ಕಾದಂಬರಿ ಹೆಣೆದಿದ್ದಾರೆ. ಮುಂಬೈಯ ಕೆಲವು ವಿಶೇಷ ಪ್ರದೇಶಗಳಲ್ಲಿಯ ವೇಶ್ಯಾವಾಟಿಕೆಯ ಚಿತ್ರಗಳು, ಶೊಷಣೆಯ ವಿವಿಧ ಪರಿಗಳ ಪರಿಣಾಮಕಾರಿ ಚಿತ್ರಣ, ಲಕುಮಿಬಾಯಿ -ಹೆಣ್ಣನ್ನು ಕೇಂದ್ರೀಕರಿಸಿ ಕಾದಂಬರಿ ಮುಂದುವರಿದಿದೆ. ಉತ್ತಮ ನಿರೂಪಣಾ ಶೈಲಿ ಇದೆ. ಇಂತಹ ವಸ್ತುವುಳ್ಳ ಕಾದಂಬರಿಗಳನ್ನು ಅನಕೃ ಹಾಗೂ ಎಂ.ಎಸ್. ಪುಟ್ಟಣ್ಣಯ್ಯನವರು ಬರೆದ ಹಾದಿಯಲ್ಲಿ ‘ಅಣು’ ಕಾದಂಬರಿಯೂ ಇದೆ. ಶೈಲಿಯಲ್ಲಿ ಲಾಲಿತ್ಯವಿದೆ. ಮಾಧುರ್ಯವಿದೆ. ವಸ್ತು-ಆಕೃತಿಗೂ ಸಾವಯವ ಸಂಬಂಧವಿದೆ. ಪ್ರೇಮ-ಕಾಮ ಕುರಿತ ತಾತ್ವಿಕ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಅಭಿಪ್ರಾಯಪಟ್ಟು, ‘ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಕೃತಿಯು ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದರು.

.ಕೃತಿಕಾರರಾದ ಎಚ್. ಡುಂಡಿರಾಜ್, ಕೇಶವರೆಡ್ಡಿ ಹಂದ್ರಾಳ ಹಾಗೂ ಎಸ್.ಪಿ. ಪದ್ಮಪ್ರಸಾದ ಅವರು ಮಾತನಾಡಿ ತಮ್ಮ ಕೃತಿಗಳ ಉದ್ದೇಶಗಳನ್ನು ವಿವರಿಸಿದರು. ‘ಬುಕ್ ಬ್ರಹ್ಮ’ ಸಂಪಾದಕ ದೇವು ಪತ್ತಾರ ಸ್ವಾಗತಿಸಿದರು. ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಹಾಗೂ ಪ್ರಭಾ ಕಂಬತ್ತಳ್ಳಿ ಸೇರಿದಂತೆ ಸಾಹಿತ್ಯಾಸಕ್ತರಿದ್ದರು. ಈ ಸಮಾರಂಭವು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನಲ್ ನಲ್ಲಿ ನೇರವಾಗಿ ಪ್ರಸಾರಗೊಂಡಿತು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...