ಅವಶೇಷಗಳ ಅನ್ವೇಷಣೆ Rain or Shine

Date: 12-05-2022

Location: ಬೆಂಗಳೂರು


'ಇದೊಂದು ಸಾವು-ನೋವುಗಳ ಸರಣಿ. ಇಲ್ಲಿನ ಎಲ್ಲ ಪಾತ್ರಗಳಲ್ಲೂ ನೋವು ಜೀವಂತವಾಗಿದೆ. ಹಿಂದೆಂದೋ ಘಟಿಸಿದ ಅನಾಹುತವೊಂದರ ನೋವು ಸರದಿಯಲ್ಲಿ ಅವರೆಲ್ಲರನ್ನೂ ಬಂಧಿಸಿಟ್ಟಿದೆ. ಯಾರಿಗೂ ಆ ಬಂಧನದಿಂದ ಬಿಡುಗಡೆಯೆನ್ನುವುದು ಸಾಧ್ಯವಾಗಿಲ್ಲ' ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ Rain or Shine ಎಂಬ ಸೌತ್ ಕೊರಿಯನ್ ವೆಬ್ ಸೀರಿಸ್ ಕುರಿತು ಬರೆದಿದ್ದಾರೆ.

ನೆನಪುಗಳ ಜೀವಿತಾವಧಿ ಎಷ್ಟು! ಮಧುರವಾದ ನೆನಪುಗಳೊಂದಿಗೆ ಬದುಕನ್ನು ನಿಭಾಯಿಸಲು ಹೊರಡುವ ಮನುಷ್ಯನಿಗೆ ಕಹಿನೆನಪು ಕೂಡಾ ತನ್ನದೆಂದು ಒಪ್ಪಿಕೊಳ್ಳುವ ಸಾಮರ್ಥ್ಯವನ್ನು ಪ್ರಕೃತಿ ನೀಡಿದೆಯೇ! ಕಷ್ಟಪಟ್ಟು ಒಗ್ಗೂಡಿಸಿಕೊಂಡ ಎಲ್ಲ ಚೈತನ್ಯಗಳನ್ನೂ ಕಸಿದುಕೊಳ್ಳಬಲ್ಲಂತಹ ಒಂದೇ ಒಂದು ಕಹಿನೆನಪು ಸಾಕು ಕನಸುಗಳನ್ನು ನಾಶಗೊಳಿಸಲು. ಹಾಗೆ ನಶಿಸಿಹೋದ ಕನಸುಗಳು ಮತ್ತೆ ಕೈಹಿಡಿಯುವಂಥ ಅದ್ಭುತಗಳು ಎಲ್ಲರ ಬದುಕಿನಲ್ಲಿಯೂ ಸಂಭವಿಸಲು ಸಾಧ್ಯವಿದೆಯೇ; ಹಾಗೊಮ್ಮೆ ಘಟಿಸಿದರೂ ಕೆಟ್ಟ ನೆನಪುಗಳೆಲ್ಲವನ್ನೂ ತೊಡೆದುಹಾಕಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವು ನೆರವಾಗುತ್ತವೆಯೇ ಅಥವಾ ಅವುಗಳ ನೆರವಿನಿಂದ ಎಲ್ಲ ಬಗೆಯ ನೆನಪುಗಳನ್ನೂ ಸಹಿಸಿಕೊಳ್ಳಲು ಪ್ರಯತ್ನಿಸುವುದು ಬದುಕಿನ ಅನಿವಾರ್ಯತೆಯೇ! ಕಹಿ ಘಟನೆಗಳನ್ನು ತಮ್ಮದಾಗಿಸಿಕೊಂಡು, ಅವುಗಳ ನೆನಪಿನಿಂದ ಹೊರಬರಲಾಗದೇ ಪ್ರತಿನಿತ್ಯ ನೋವನ್ನು ಅನುಭವಿಸುತ್ತಿರುವವರಿಗಷ್ಟೇ ಅದರ ತೀವ್ರತೆಯೂ ಅನುಭವಕ್ಕೆ ಬಂದಿರಲು ಸಾಧ್ಯ. ಅದರಿಂದ ಹೊರಗೆ ನಿಂತು ನೋಡುವವರಿಗೆ ಅದೊಂದು ಸಾಧಾರಣ ನೋವಷ್ಟೇ. ಹಾಗೊಂದು ತೀವ್ರವಾದ ನೋವನ್ನು ತಮ್ಮದಾಗಿಸಿಕೊಂಡು, ತಮ್ಮನ್ನೂ ತಾವು ಪ್ರೀತಿಸಿಕೊಳ್ಳಲಾಗದೇ ಚಡಪಡಿಸುವವರ ಕಥಾಸರಣಿ Rain or Shine.

ಇದೊಂದು ಸಾವು-ನೋವುಗಳ ಸರಣಿ. ಇಲ್ಲಿನ ಎಲ್ಲ ಪಾತ್ರಗಳಲ್ಲೂ ನೋವು ಜೀವಂತವಾಗಿದೆ. ಹಿಂದೆಂದೋ ಘಟಿಸಿದ ಅನಾಹುತವೊಂದರ ನೋವು ಸರದಿಯಲ್ಲಿ ಅವರೆಲ್ಲರನ್ನೂ ಬಂಧಿಸಿಟ್ಟಿದೆ. ಯಾರಿಗೂ ಆ ಬಂಧನದಿಂದ ಬಿಡುಗಡೆಯೆನ್ನುವುದು ಸಾಧ್ಯವಾಗಿಲ್ಲ. ಬಿಡುಗಡೆ ಹೊಂದಲು ಪ್ರಯತ್ನಪಟ್ಟವರಿಗೂ ನೋವಿನಿಂದ ದೂರವಾಗುವ ದಾರಿಯೊಂದು ಕಾಣಿಸುತ್ತಿಲ್ಲ. ಕೈಕೋಳಗಳಿಲ್ಲದ ನೋವಿನ ಬಂದೀಖಾನೆಯಲ್ಲಿ ಎಲ್ಲರೂ ತಮಗರಿವಿಲ್ಲದೆಯೇ ಬಂಧಿಗಳಾಗಿದ್ದಾರೆ. ಹೊರಬರಲಾಗದ ಅನಿವಾರ್ಯತೆಯಲ್ಲಿ ನಿರ್ಲಿಪ್ತತೆಯ ಮುಖವಾಡ ತೊಟ್ಟು ನೋವಿನ ನೆನಪುಗಳೊಂದಿಗೆ, ನೆನಪುಗಳು ಮುಖಾಮುಖಿಯಾಗಿಸುವ ನೋವಿನೊಂದಿಗೆ ಬದುಕಿನ ಸಾಕಷ್ಟು ವರ್ಷಗಳನ್ನು ಕಳೆದಿದ್ದಾರೆ. ಹಾಗೆ ಬಂಧಿಯಾಗಿರುವ ಕೆಲವರ ಆಕ್ರಂದನ ದೂರದೂರಕ್ಕೂ ಕೇಳಿಸುವಷ್ಟು ಎತ್ತರದ ಸ್ವರದಲ್ಲಿದ್ದರೆ, ಇನ್ನು ಕೆಲವರ ನೋವಿಗೆ ಧ್ವನಿಯಿಲ್ಲ. ನೋವಿನಲ್ಲಿರುವವರೆಲ್ಲರೂ ಜೋರಾಗಿ ಅಳುವುದರ ಮೂಲಕ ತಮ್ಮ ನೋವನ್ನು ತೋರಿಸಿಕೊಳ್ಳುವಂತಿದ್ದರೆ, ಅಬ್ಬರದ ಅಳುವೊಂದು ಆ ಕ್ಷಣದ ನೋವಿಗಾದರೂ ಸಮಾಧಾನ ಕೊಡುವಂತಿದ್ದರೆ ಎಲ್ಲರ ದುಃಖಗಳಿಗೂ ತಾತ್ಕಾಲಿಕ ಪರಿಹಾರವನ್ನಾದರೂ ಹುಡುಕಲು ಸಾಧ್ಯವಾಗುತ್ತಿತ್ತೇನೋ!

ಕೇವಲ ನೋವುಗಳದ್ದೇ ರಾಶಿ ಬಿದ್ದಿದ್ದರೆ, ಅವುಗಳಲ್ಲಿಯೇ ಯಾವುದೋ ಒಂದನ್ನು ಆಯ್ದುಕೊಂಡು ಬದುಕುವ ಅನಿವಾರ್ಯತೆ ಉಂಟಾದರೆ, ಕಡಿಮೆ ದರ್ಜೆಯ ನೋವು ಯಾವುದೆಂದು ಹುಡುಕಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಬಹುದೇ! ಕಡಿಮೆ ನೋವುಗಳದ್ದೊಂದು, ಜಾಸ್ತಿ ನೋವುಗಳದ್ದು ಇನ್ನೊಂದು ಹೀಗೇ ಬೇರೆಬೇರೆ ಗುಂಪುಗಳಾಗಿ ವಿಂಗಡಿಸಿ ಗುರುತುಪಟ್ಟಿ ಅಂಟಿಸಲಾಗಬಹುದೇ! ಪ್ರತಿನಿತ್ಯ ಬೆಳಗಾದರೆ ಬದುಕೆನ್ನುವುದು ಕಣ್ಣೆದುರಿಗೆ ನಿಂತು "ಈ ದಿನ ಕೂಡಾ ನಾನು ನಿನಗೆ ನೀಡಲು ಸಾಧ್ಯವಾಗುವುದು ನೋವನ್ನು ಮಾತ್ರ" ಎನ್ನುವಂತಹ ಪರಿಸ್ಥಿತಿ ಎದುರಾದರೆ, ಆ ಬದುಕನ್ನು ತಮ್ಮದಾಗಿಸಿಕೊಳ್ಳುವ ಧೈರ್ಯ ಎಷ್ಟು ಜನರಿಗಿದ್ದೀತು! ನಾಳೆ ಬೆಳಗಾದಾಗಲೂ ತನ್ನೆದುರಿಗೆ ನಿಂತ ಬದುಕು ಇದೇ ಮಾತನ್ನು ಹೇಳಲಿದೆ ಎನ್ನುವ ಕಲ್ಪನೆಯೊಂದಿಗೇ ಇವತ್ತಿನ ಜೀವಂತಿಕೆಯನ್ನು ಉಳಿಸಿಕೊಳ್ಳುವ ತಾಳ್ಮೆಯನ್ನೂ ಅದೇ ಬದುಕು ಅವರಿಗೆ ನೀಡಿದ್ದಿರಬಹುದೇ! ಹುಟ್ಟಿನಿಂದ ಪ್ರೀತಿಸಿದವರಿಗೆ, ಹೃದಯಕ್ಕೆ ಹತ್ತಿರವಾದವರಿಗೆ ವಿದಾಯ ಹೇಳುವುದನ್ನು ಕಲಿಯುತ್ತ, ಒಪ್ಪಿಕೊಳ್ಳುತ್ತ ಹೋಗುವುದೇ ಬದುಕಿನ ರೀತಿಯಾದರೆ ಮುಂಚಿತವಾಗಿಯೇ ಮಾನಸಿಕವಾಗಿ ತಯಾರಿ ನಡೆಸುವ ಕೆಲಸವನ್ನು ಮಾಡಲು ಯಾರಿಂದಲಾದರೂ ಸಾಧ್ಯವಾದೀತೇ!

ಆ ಕಟ್ಟಡದ ಕುಸಿತ ಸಂಭವಿಸಿದಾಗ ಹದಿಹರೆಯದಲ್ಲಿದ್ದ ಅವರಿಬ್ಬರೂ ಐದಾರು ದಿನಗಳ ಹೋರಾಟ ನಡೆಸಿ ಪಾರಾಗಿ ಬಂದಿದ್ದಾರೆ. ಮತ್ತೆ ಅದೇ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕೆಲಸಕ್ಕಾಗಿ ಇಬ್ಬರೂ ಎದುರುಬದುರಾಗಿದ್ದಾರೆ. ಹಳೆಯ ಕಟ್ಟಡ ಕುಸಿದಾಗ ಪಾರಾಗಲು ನಡೆಸಿದ ಹೋರಾಟದಲ್ಲಿ ಅವಳು ತನ್ನೊಂದಿಗೆ ದಿನಗಳನ್ನು ಕಳೆದಿದ್ದು ಅವನ ನೆನಪಿನಲ್ಲಿ ಉಳಿದುಕೊಂಡಿದೆ. ಅವಳ ನೆನಪಿನಲ್ಲಿ ಅವನು ಅಸ್ಪಷ್ಟ. ಆ ಅನಾಹುತದಲ್ಲಿ ಅವನು ತಂದೆಯನ್ನು ಕಳೆದುಕೊಂಡಿದ್ದರೆ, ಅವಳು ತಂಗಿ ಮತ್ತು ಪ್ರೇಮಿಯನ್ನು ಕಳೆದುಕೊಂಡಿದ್ದಾಳೆ. ತಂಗಿಯೊಡನೆ ಇರಬೇಕಾಗಿದ್ದ ತಾನು ಪ್ರೀತಿಸಿದ ಹುಡುಗನನ್ನು ಭೇಟಿಯಾಗಲು ಅದೇ ಕಟ್ಟಡಕ್ಕೆ ಕರೆಸಿಕೊಂಡ ಕಾರಣಕ್ಕಾಗಿ ಇಬ್ಬರನ್ನೂ ಒಟ್ಟಿಗೇ ಕಳೆದುಕೊಳ್ಳಬೇಕಾಗಿ ಬಂತೆನ್ನುವ ನೋವು ಅವಳನ್ನು ಬಾಧಿಸುತ್ತಿದೆ. ಇಬ್ಬರ ಸಾವಿಗೂ ತಾನೇ ಕಾರಣಳೆಂಬ ಅಪರಾಧ ಪ್ರಜ್ಞೆಯಲ್ಲಿಯೇ ಅವಳು ಹನ್ನೆರಡು ವರ್ಷಗಳನ್ನು ಕಳೆದಿದ್ದಾಳೆ. ಪುಟ್ಟ ಮಕ್ಕಳಿಬ್ಬರನ್ನೇ ಬಿಟ್ಟು ತಮ್ಮತಮ್ಮ ಕೆಲಸಗಳಿಗೆ ತೆರಳಿದ್ದಕ್ಕಾಗಿ ಅವಳ ತಂದೆ-ತಾಯಿಯರಿಗೂ ಪಶ್ಚಾತ್ತಾಪವಿದೆ. ಆ ನೋವು ಅವರಿಬ್ಬರ ಮಧ್ಯೆ ಎಷ್ಟು ಅಂತರವನ್ನು ಸೃಷ್ಟಿ ಮಾಡಿದೆಯೆಂದರೆ, ಅವರಿಬ್ಬರ ಸಂಬಂಧ ವಿಚ್ಛೇದನದ ಹಂತಕ್ಕೆ ಬಂದು ತಲುಪಿದೆ. ಕುಡಿತದ ಚಟಕ್ಕೆ ಬಿದ್ದ ಅಮ್ಮ, ಯಾರದೋ ಮೇಲಿರುವ ಕೋಪವನ್ನು ತನ್ನ ಮೇಲೆಯೇ ತೀರಿಸಿಕೊಳ್ಳುತ್ತಿರುವವನಂತೆ ಒಂಟಿಯಾಗಿ ಬದುಕುತ್ತಿರುವ ಅಪ್ಪನ ನಡುವೆ ತನ್ನದೇ ಆದ ಹೋರಾಟಗಳೊಂದಿಗೆ ಅವಳು, ಹೀಗೇ ಮೂವರ ಬದುಕಿನಿಂದಲೂ ನೆಮ್ಮದಿ ದೂರವಾಗಿ ವರುಷಗಳೇ ಕಳೆದಿವೆ.

ಅವನು ಕುಸಿದ ಕಟ್ಟಡದ ಅಡಿಯಲ್ಲಿ ತನ್ನೊಂದಿಗೆ ಸಿಕ್ಕಿಹಾಕಿಕೊಂಡಿದ್ದ ಅವಳು ಪಾರಾಗಲು ನೆರವಾಗಿದ್ದಾನಾದರೂ, ತನ್ನ ಕಣ್ಣೆದುರಿಗೇ ಕೊನೆಯುಸಿರೆಳೆದ ತನ್ನದೇ ವಯಸ್ಸಿನ ಮತ್ತೊಬ್ಬ ಹುಡುಗನನ್ನು ಉಳಿಸಿಕೊಳ್ಳಲಿಲ್ಲವೆನ್ನುವ ಸಂಕಟವನ್ನು ಅನುಭವಿಸುತ್ತಿರುವವನು. ಹಾಗೆ ಸತ್ತುಹೋದ ಹುಡುಗನ ಧ್ವನಿ ಅವನ ಬೆನ್ನುಹತ್ತಿದೆ. ಆ ಹುಡುಗ ಬೇರೆ ಯಾರೂ ಆಗಿರದೇ, ಅವಳು ಭೇಟಿಯಾಗಲು ಬಯಸಿದ್ದ ಹಾಗೂ ಕಳೆದುಕೊಂಡ ಮೊದಲಪ್ರೇಮ ಎನ್ನುವುದು ತಿಳಿದ ಕ್ಷಣದಿಂದ ಪಾಪಪ್ರಜ್ಞೆಯೂ ಅವನ ಬೆನ್ನುಹತ್ತಿದೆ. ತನಗೇ ಸ್ಥಿರವಾದ ಆಸ್ತಿಯಾಗಲೀ, ಕೆಲಸವಾಗಲೀ ಇಲ್ಲದಿದ್ದರೂ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿರುವ ಅವನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಷ್ಟಾಗಿಯೂ ತನ್ನ ಸುತ್ತ ಇರುವವರನ್ನು ಕಿಂಚಿತ್ತು ಸ್ವಾರ್ಥವೂ ಇಲ್ಲದೇ ಪ್ರೀತಿಸುವ, ಪ್ರೀತಿಸುವವರ ಒಳಿತಿಗಾಗಿ ತನ್ನನ್ನು ತಾನು ಅಪಾಯಕ್ಕೆ ಒಡ್ಡಿಕೊಳ್ಳಲೂ ತಯಾರಿರುವ ಅವನ ಪ್ರತಿದಿನದ ಬದುಕೂ ಒಂದು ಹೋರಾಟವೇ. ಅವನ ಬದುಕಿನ ಸುಖ-ಸಂತೋಷಗಳೆಲ್ಲವೂ ಕುಸಿದ ಕಟ್ಟಡದ ಅವಶೇಷಗಳಾಗಿ ಅಲ್ಲಿಯೇ ಉಳಿದುಹೋಗಿವೆ.

ಈ ಎಲ್ಲ ಸಾವು-ನೋವುಗಳ ನಡುವೆಯೇ ಇಲ್ಲೊಂದು ಮುಗ್ದವಾದ ಪ್ರೀತಿಯಿದೆ; ಆಸ್ಪತ್ರೆಯಲ್ಲಿ ಆರಂಭವಾದ ಸುಂದರವಾದ ಸ್ನೇಹವಿದೆ; ಎಲ್ಲ ಹಣಕಾಸಿನ ವ್ಯವಹಾರಗಳಿಂದ ಅತೀತವಾದ ಸಂಬಂಧಗಳಿವೆ; ನೋವ ನುಂಗಲು ಮಾತ್ರೆ ನೀಡುವ ಅಜ್ಜಿಯೂ ಇದ್ದಾಳೆ. ಈ ಅಜ್ಜಿಯ ಪ್ರೀತಿಯ ಪರಿಯೇ ವಿಶಿಷ್ಟ. ಅವಳಾಡುವ ಒಂದೊಂದು ಮಾತುಗಳೂ ನೋವನ್ನು ಮರೆಸುವ ಮಾತ್ರೆಗಳೇ. ಅವಳ ಬೈಗುಳದಲ್ಲೂ ಮಮತೆ-ಮಮಕಾರಗಳನ್ನುಳಿದು ಇನ್ನೇನೂ ಕಾಣಿಸದು. ಅನಿವಾರ್ಯವಾಗಿ ಸುತ್ತ ಇರುವ ನೋವು-ದುಃಖಗಳನ್ನು ನಮ್ಮದಾಗಿಸಿಕೊಳ್ಳುವ ಬಗ್ಗೆ, ಅವುಗಳನ್ನು ಸಾಧ್ಯವಾದಷ್ಟು ಮುಂದೂಡುತ್ತ ಕ್ರಮೇಣ ಮರೆಯುತ್ತ ಹೋಗುವ ಬಗ್ಗೆ ಅವಳಾಡುವ ಮಾತುಗಳನ್ನು ಕೇಳಿಸಿಕೊಂಡಾಗ ನೋವು-ಸಂಕಟಗಳೂ ಯಾವುದೋ ಒಂದು ಉದ್ದೇಶಕ್ಕಾಗಿಯೇ ಎಲ್ಲರ ಬದುಕಿನಲ್ಲಿಯೂ ಅಸ್ತಿತ್ವ ಕಂಡುಕೊಂಡಿರಬಹುದೆನ್ನುವ ಸಮಾಧಾನವೊಂದು ಕ್ಷಣಕಾಲವಾದರೂ ಆವರಿಸಿಕೊಳ್ಳುತ್ತದೆ. "ಬದುಕೆನ್ನುವುದು ವಿಷಾದ ಮತ್ತು ವೈಫಲ್ಯಗಳ ಪುನರಾವರ್ತನೆಯಷ್ಟೇ. ಅವುಗಳನ್ನೇ ಅದ್ಭುತಗಳನ್ನಾಗಿಸಿ ಅನುಭವಿಸುವ ಪ್ರಯತ್ನ ನಾವು ಮಾಡಬೇಕಾಗಿರುವುದು" ಎನ್ನುವ ಅಜ್ಜಿಯ ಮಾತುಗಳಲ್ಲಿ ಸಂಕಟದಲ್ಲಿಯೂ ಚೈತನ್ಯವನ್ನು ಹುಡುಕುವ ಸಂಭ್ರಮವಿದೆ. ವಯಸ್ಸು, ದೇಶ, ಕಾಲ ಎಲ್ಲವನ್ನೂ ಮೀರಿ ಅವ್ಯಾಹತವಾಗಿ ಆವರಿಸಿಕೊಳ್ಳುವ ನೋವನ್ನು ಪ್ರೀತಿ-ವಿಶ್ವಾಸಗಳು ಮಾತ್ರವೇ ಶಮನ ಮಾಡಬಲ್ಲವು ಎನ್ನುವ ನಂಬಿಕೆಯಲ್ಲಿಯೇ ಸಾವನ್ನು ತನ್ನದಾಗಿಸಿಕೊಳ್ಳುವ ಆ ಅಜ್ಜಿಯ ಬದುಕೇ ಬೇರೆಬೇರೆ ಪಾತ್ರಗಳಾಗಿ ಕವಲೊಡೆದಂತೆ ಭಾಸವಾಗುತ್ತದೆ.

ದುರದೃಷ್ಟವೆನ್ನುವುದು ಯಾವ ಮುನ್ಸೂಚನೆಯನ್ನೂ ನೀಡದೇ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಿದರೆ, ಎಲ್ಲ ಭರವಸೆಗಳನ್ನೂ ಕಳೆದುಕೊಂಡ ಕ್ಷಣದಲ್ಲಿ ಅನಿರೀಕ್ಷಿತವಾಗಿ ಪವಾಡಗಳೂ ಸಂಭವಿಸಬಹುದು ಎನ್ನುವ ಹಾರೈಕೆ-ಆಶಯಗಳೊಂದಿಗೆ ಈ ನೋವಿನ ಸರಣಿ ಮುಕ್ತಾಯವಾಗುತ್ತದೆ. ಅವನ ಅನಾರೋಗ್ಯಕ್ಕೊಂದು ಪರಿಹಾರವೇನೋ ದೊರಕುತ್ತದೆಯಾದರೂ, ಆ ಅದ್ಭುತ ಘಟಿಸಲು ಇನ್ಯಾವುದೋ ದುರ್ಘಟನೆಯೇ ಕಾರಣವಾಗಬೇಕಾಗುತ್ತದೆಯೆನ್ನುವುದು ವಿಪರ್ಯಾಸ. "ನಾವು ಈ ಕ್ಷಣ ಜೀವಂತವಾಗಿದ್ದೇವೆ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟೂ ಸಂತೋಷಗಳನ್ನು ನಮ್ಮದಾಗಿಸಿಕೊಳ್ಳಲು ಅಗತ್ಯವಿರುವುದನ್ನೆಲ್ಲ ಮಾಡಲು ಸಮರ್ಥರಾಗಿದ್ದೇವೆ ಎನ್ನುವ ಕಾರಣಗಳೇ ಸಾಕು ಬದುಕಿನೆಡೆಗೊಂದು ಕೃತಜ್ಞತಾ ಭಾವವನ್ನು ಬೆಳೆಸಿಕೊಳ್ಳಲು" ಎನ್ನುವ ಅವಳ ಮಾತು ಅಜ್ಜಿಯ ಮಾತ್ರೆಯಂತೆಯೇ ಎಲ್ಲ ನೋವುಗಳನ್ನೂ ಮರೆಸುವ ಕೆಲಸ ಮಾಡುತ್ತದೆ. ಮಾತ್ರೆ ಕೊಡುವ ಅಜ್ಜಿ ಎಲ್ಲರಿಗೂ ಲಭ್ಯವಿಲ್ಲದೇ ಇರಬಹುದು. ಆದರೆ ಅಂತಹ ಜೀವಗಳು ಎಲ್ಲೆಲ್ಲಿಯೂ ಇವೆ. ಅನ್ವೇಷಣೆಯ ಕೆಲಸ ಜಾರಿಯಲ್ಲಿರಬೇಕಷ್ಟೇ.

ಈ ಅಂಕಣದ ಹಿಂದಿನ ಬರಹಗಳು:
ಗೆಲುವಿನ ಹಂಬಲದ ನೋವಿನ ಹಗರಣ SCAM 1992
ಅಂತ್ಯವಿಲ್ಲದ ಸಂಘರ್ಷಗಳ ಪೂರ್ವಚರಿತ್ರೆ ROCKET BOYS
ಏಕಾಂತದೊಂದಿಗೆ ಸರಳ ಸಂಭಾಷಣೆ STORIES BY RABINDRANATH TAGORE
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ದಿಗಂಬರೆಯರ ಉಭಯ ಕುಶಲೋಪರಿ...

25-05-2022 ಬೆಂಗಳೂರು

'ಕ್ಯೂಬಿಸಂನ ಕೆಲವು ಕಲಾವಿದರಂತೆ ಜೀನ್ ಮೆಟ್ಜಿಂಜರ್ ಕೂಡಾ ಆರಂಭದಲ್ಲಿ Pointilism ನಲ್ಲಿಯೂ ಆನಂತರ Fauvismನಲ್ಲಿ...

ಕಾರಂತರ ಬೆಟ್ಟದ ಜೀವ: ಕೃತಿ ಮತ್ತು ...

23-05-2022 ಬೆಂಗಳೂರು

'ಶಿವರಾಮ ಕಾರಂತರು ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮಾನವ ಪ್ರಕೃತಿಯೊಂದಿಗೆ ನಡೆಸುವ ಹೋರಾಟದ ವಿಶಿಷ್ಟ ...

ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ...

23-05-2022 ಬೆಂಗಳೂರು

'ಆತ್ಮ-ಪರಮಾತ್ಮನಾಗುವದೆಂದರೆ, ಅದು ನದಿಯಲ್ಲಿ ನದಿಬೆರೆತಂತೆ ನೈಸರ್ಗಿಕವಾದುದಾಗಿದೆ. ಅಂತರಂಗ-ಬಹಿರಂಗವೆಂಬ ಭೇದಗಳನ್...